ಟೋನ್ಲೆ ಸಾಪ್‌ನಿಂದ ಹೊರಡುವಾಗ ಸಂಜೆ ಗಂಟೆ ಏಳಾಗಿರಲಿಲ್ಲ. ಸುಮ್ಮನೆ ಸುತ್ತಾಡಿ ಕಾಲ ಕಳೆಯುವ ಬದಲು ಸಾಂಸ್ಕೃತಿಕ ಕಾರ್ಯಕ್ರಮವೇನಾದರೂ ಇದೆಯೇ ಎಂದು ʼರಾʼ ನೊಡನೆ ವಿಚಾರಿಸಿದೆವು.
ಸಾಮಾನ್ಯವಾಗಿ ಪ್ರತಿಯೊಂದು ಊರಿನಲ್ಲೂ ಅಲ್ಲಿಯದೇ ಹಾಡು,ನೃತ್ಯ ಪರಂಪರೆ ಇರುತ್ತದೆ. ಕೆಲವೊಮ್ಮೆ ನಮ್ಮ ಸಮಯಕ್ಕೆ ಅವು ದೊರಕುವುದಿಲ್ಲ. ತಿರುವನಂತಪುರದಲ್ಲಿ ಕಥಕ್ಕಳಿಯನ್ನು ನೋಡಬೇಕೆಂಬಾಸೆ ಇದ್ದರೂ ಅಲ್ಲಿಗೆ ಹೋದಾಗ ಪ್ರದರ್ಶನವಿರಲಿಲ್ಲ.ಕಾಂಬೋಡಿಯಾದಲ್ಲಿ ʼಅಪ್ಸರಾ ನೃತ್ಯʼ ಬಹಳ ಚೆನ್ನಾಗಿರುತ್ತದೆ ಎನ್ನುವುದನ್ನು ಕೇಳಿದ್ದೆ.
ರಾ, ಸಿಯಾಮ್‌ರೀಪಲ್ಲಿ ಪ್ರತಿದಿನ ಒಂದಲ್ಲೊಂದು ಕಡೆ ಅಪ್ಸರಾ ನೃತ್ಯ ಪ್ರದರ್ಶನಗಳು ಇರುತ್ತಿತ್ತು, ಕೋವಿಡ್ ನಂತರದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾದ್ದರಿಂದ ನಿಂತು ಹೋಗಿದೆ ಎಂದು ಹೇಳಿದ. ಇತ್ತೀಚೆಗೆ ಒಂದೆರಡು ಸ್ಟಾರ್ ಹೊಟೇಲುಗಳಲ್ಲಿ ಪ್ರಾರಂಭಗೊಂಡಿವೆ, ಅದರಲ್ಲಿ ಅಮೆಜಾನ್ ಆಂಗೋರ್ ರೆಸ್ಟೋರೆಂಟಿನ ಕಾರ್ಯಕ್ರಮ ಚೆನ್ನಾಗಿದೆ ಎಂದಿದ್ದರಿಂದ ಸೀಟುಗಳನ್ನು ಮುಂಗಡವಾಗಿ ಆನ್ ಲೈನಲ್ಲಿ ಕಾದಿರಿಸಿದೆವು.
ಅಮೆಜಾನ್ ಅಂಗೋರ್ ರೆಸ್ಟೋರೆಂಟ್-ಥಿಯೇಟರ್ ಬಹುರಾಷ್ಟ್ರೀಯ ಕಂಪೆನಿಗೆ ಸೇರಿದ ಭವ್ಯ ಹೋಟೆಲ್. ಪ್ರಧಾನಿ ಹುನ್ ಸೆನ್ ಸರಕಾರ, ಬಡ ರಾಷ್ಟ್ರವಾದ ಕಾಂಬೋಡಿಯಾದಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳಿಗೆ ರತ್ನ ಕಂಬಳಿ ಹಾಸಿದೆ. ಅದರ ಫಲಶ್ರುತಿಯಾಗಿ, ಬೆರಳು ತೋರಿದರೆ ಹಸ್ತವನ್ನೂ ನುಂಗುವ ಬಹುರಾಷ್ಟ್ರೀಯ ಕಂಪೆನಿಗಳು ಪ್ರವಾಸೋದ್ಯಮವನ್ನೂ ತೆಕ್ಕೆಗೆ ತೆಗೆದುಕೊಂಡು, ಕಲೆ, ಸಂಸ್ಕೃತಿಯನ್ನು ಆಕರ್ಷಕ ಪ್ಯಾಕೇಜುಗಳ ಮೂಲಕ ಮಾರಾಟದ ಸರಕನ್ನಾಗಿಸಿವೆ. ಪ್ರವಾಸಿಗರು ಇದಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯವಾದರೆ, ಕಲಾವಿದರು, ಉದ್ಯೋಗಿಗಳು ಅನ್ನ, ಬಟ್ಟೆಗಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.
ಅಮೆಜಾನ್ ಅಂಗೋರ್ ರೆಸ್ಟೋರೆಂಟ್-ಥಿಯೇಟರ್ನ ವಿಶಾಲವಾದ ಸುಸಜ್ಜಿತ ಸಭಾಂಗಣದಲ್ಲಿ ಮುನ್ನೂರು ಜನರು ಸುಖಾಸೀನರಾಗಿ ಕಲೆ, ಆಹಾರವನ್ನು ಒಟ್ಟೊಟ್ಟಿಗೆ ಸವಿಯಬಹುದು. ಪ್ರದರ್ಶನದ ಟಿಕೇಟಿನ ದರದಲ್ಲಿ ಬಫೆಯೂ ಸೇರಿದೆ. ಇಷ್ಟವಾದ್ದನ್ನು ಬಡಿಸಿಕೊಳ್ಳಬಹುದು. ಆದರೆ ನಿಗದಿ ಪಡಿಸಿದ ಜಾಗದಲ್ಲೆ ಕೂರಬೇಕು. ಮೈಮರೆಯಲು ಮಾದಕ ಪಾನೀಯವೂ ಸಿಗುತ್ತದೆ. ಬೆಲೆ ಮಾತ್ರಾ ದುಬಾರಿ. ಮಜಾ ಮಾಡಲು ಬರುವ ಪ್ರವಾಸಿಗರು ದುಡ್ಡಿಗೆ ಲೆಕ್ಕ ಹಾಕಲಾರರೆಂದು ಗೊತ್ತಿರುವುದರಿಂದ, ಚೆನ್ನಾಗಿ ಸುಲಿಯುತ್ತಾರೆ.
ಪ್ರತಿಯೊಬ್ಬನ ದೃಷ್ಟಿಗೆ ನಿಲುಕುವಂತೆ ಎತ್ತರದಲ್ಲಿದ್ದ ರಂಗಮಂಚ ಸುಂದರವಾಗಿ ಅಲಂಕೃತಗೊಂಡಿತ್ತು. ರಂಗಮಂದಿರದ ಬಲಭಾಗದಲ್ಲಿ ವಾದ್ಯ ಪರಿಕರಗಳನ್ನು ಸಜ್ಜಾಗಿಟ್ಟಿದ್ದರು. ಪ್ರದರ್ಶನ ಅರಂಭಗೊಳ್ಳುವ ಹತ್ತು ನಿಮಿಷದ ಮೊದಲೇ ವಾದಕರು, ಗಾಯಕರು ಆಗಮಿಸಿ ವಾದ್ಯಗಳನ್ನು ನುಡಿಸ ತೊಡಗಿದರು. ಮುನ್ನಲೆಯಲ್ಲಿದ್ದ ಅರ್ಧ ಚಂದ್ರಾಕೃತಿಯ ವಾದ್ಯ ಮಧುರ ಕಂಪನಗಳನ್ನು ಹೊರಡಿಸಿತು. ಡ್ರಮ್ಗಳನ್ನು ಹೋಲುವ ತಾಮ್ರದ ಡೋಲುಗಳು, ಮದ್ದಳೆಯಂತೆ ಎರಡು ಬದಿಯಲ್ಲೂ ನುಡಿಸುವ ಚರ್ಮವಾದ್ಯ, ಕ್ಲಾರಿಯಾನೆಟ್ಟನ್ನು ಹೋಲುವ ಊದುವ ವಾದ್ಯಗಳನ್ನು ಒಂದರ ನಂತರ ಒಂದರಂತೆ ಶ್ರುತಿ ಮಾಡಲಾಯಿತು.
ಪ್ರದರ್ಶನದ ಆರಂಭಕ್ಕೆ ಮುನ್ನ ಇಂಗ್ಲಿಷಲ್ಲಿ ವಿವರಣೆ ಕೊಡುತ್ತಾರೆ. ಅಗತ್ಯವಾದರೆ ಹೋಟೆಲಿನ ಗೈಡ್ಗಳ ಮೂಲಕ ನೃತ್ಯ ಮತ್ತು ವಾದ್ಯ ಪರಿಕರಗಳ ಬಗ್ಗೆ ತಿಳಿದುಕೊಳ್ಳಬಹುದು.
ಕಾಂಬೋಡಿಯಾದ ನೃತ್ಯಗಳಲ್ಲಿ ಭಾರತೀಯ ನಾಟ್ಯ ಶಾಸ್ತ್ರದ ಪ್ರಭಾವವಿದೆ. ಬೌದ್ಧ ಧರ್ಮ ಮತ್ತು ಸ್ವಲ್ಪ ಮಟ್ಟಿಗೆ ಥಾಯ್,ವಿಯಟ್ನಾಂ ಮತ್ತು ಚೀನಾ ಸಂಸ್ಕೃತಿಗಳ ಪ್ರಭಾವವೂ ಇದೆ. ಏಳನೇ ಶತಮಾನದ ಬಳಿಕ ಸುಮಾರು ಏಳು ನೂರು ವರ್ಷಗಳ ವರೆಗೆ ಕಾಂಬೋಡಿಯಾವನ್ನು ಆಳಿದ ರಾಜ ಮನೆತನಗಳು ಖ್ಮೇರ್ ಸಂಸ್ಕೃತಿಗೆ ಪ್ರಾಶಸ್ತ್ಯ ನೀಡಿದ್ದವು. ಆದ್ದರಿಂದ ಕಾಂಬೋಡಿಯಾದ ನೃತ್ಯ ಪರಂಪರೆಯನ್ನು ಖ್ಮೇರ್ ಸಂಸ್ಕೃತಿಯೊಂದಿಗೆ ತಳಕು ಹಾಕಲಾಗುತ್ತಿದೆ.
ಕೋಮಲಾಂಗಿಯೊಬ್ಬಳು ಹಂಸ ನಡಿಗೆಯಲ್ಲಿ ರಂಗ ಪ್ರವೇಶಿಸುವುದರೊಂದಿಗೆ ನೃತ್ಯ ಕಾರ್ಯಕ್ರಮ ಪ್ರಾರಂಭಗೊಂಡಿತು.
ಟೆಪ್ ಮೊನೊರಮ್ ಡಾನ್ಸ್
ದೇವಲೋಕದ ದೇವ,ದೇವತೆಯರು ಭೂಲೋಕದ ಜನರ ಸುಖ,ಸಂಪತ್ತಿಗೆ ಹಾರೈಸುವ ನಯನ ಮನೋಹರ ನೃತ್ಯವಿದು.ಭಾಗವಹಿಸುವವರೆಲ್ಲ ಹೆಣ್ಣು ಮಕ್ಕಳೇ.ವೀರ ಕಚ್ಚೆ ಹಾಕಿ, ಭುಜಕೀರ್ತಿ ಉಳ್ಳ, ತುಂಬುತೋಳಿನ ವಸನ ಧರಿಸಿದವರು ಪುರುಷರೆಂದೂ, ಸೀರೆಯುಟ್ಟು, ಸೆರಗು ಹೊದ್ದು, ಕುಪ್ಪಸ ತೊಟ್ಟವರನ್ನು ಹೆಣ್ಣೆಂದೂ ಗುರುತಿಸಿಬಹುದು. ವಿಶೇಷವೆಂದರೆ ನೃತ್ಯದಲ್ಲಿ ಗಂಡು ಯಾವಾಗಲೂ ಹೆಣ್ಣಿನ ಎಡಭಾಗದಲ್ಲಿರುತ್ತಾನೆ. ಇದು ಖ್ಮೇರ್ ಸಂಸ್ಕೃತಿಯಲ್ಲಿ ಮಹಿಳೆಗಿರುವ ಪ್ರಾಧಾನ್ಯತೆಯ ದ್ಯೋತಕವೆಂದು ತಿಳಿಯುತ್ತಾರೆ.
ಮೂರು ಗಂಡು-ಹೆಣ್ಣು ಜೋಡಿಗಳಲ್ಲಿ ಚಿನ್ನದ ಬಣ್ಣದ ತೊಡುಗೆ ತೊಟ್ಟ ಜೋಡಿಗೆ ಹೆಚ್ಚು ಮಹತ್ವವಿದ್ದು, ಮತ್ತೆರಡು ಜೋಡಿಗಳು ಪೂರಕವಾಗಿದ್ದವು.ಮಂದ್ರ ಸ್ಥಾಯಿಯಲ್ಲೆ ಹಾಡುತ್ತಿದ್ದ ಖ್ಮೇರ್ ಭಾಷೆಯ ಹಾಡು ನಮಗೆ ಅರ್ಥವಾಗುತ್ತಿರಲಿಲ್ಲ. ಪಾದ, ಹಸ್ತ ಮತ್ತು ತೋಳುಗಳ ಚಲನೆಯ ಮೂಲಕ ಭಾವವನ್ನು ಗ್ರಹಿಸಲು ಸಾಧ್ಯವಿತ್ತು. ಇದರಿಂದ ಸಂಗೀತ ಮತ್ತು ನೃತ್ಯವನ್ನು ಆಸ್ವಾದಿಸಲು ಭಾಷೆ ಎಂದೂ ಅಡ್ಡಿಯಾಗದೆನ್ನುವುದು ಖಚಿತವಾಗುತ್ತದೆ.
ನೃತ್ಯ ಮುಗಿಯುವ ಹೊತ್ತಿಗೆ ತಟ್ಟೆಗೆ ಹಾಕಿಕೊಂಡು ಖಾದ್ಯಗಳು ಖಾಲಿಯಾಗಿದ್ದವು. ರುಚಿ ನೋಡೋಣವೆಂದು ಕೆಲವು ಐಟಂಗಳನ್ನು ಕೊಂಚವೇ ಹಾಕಿಕೊಂಡಿದ್ದೆವು. ಮೀನಿನ ಖಾದ್ಯ ತುಂಬಾ ರುಚಿಯಾತ್ತು. ಟೋನ್ಲೆ ಸಾಪಿನ ಮೀನು ಬಹಳ ರುಚಿ. ಸಮುದ್ರದ ಮೀನಿಗೂ ಅದಕ್ಕೂ ಫರಾಕಿತ್ತು. ಎರಡನೇ ಸಲ ಹಾಕಿಕೊಳ್ಳಲು ಹೋದಾಗ ಖಾಲಿಯಾಗಿತ್ತು. ಅದಿಲ್ಲವೆಂದ ಪರಿಚಾರಕಿ, ಇದ್ದುದರಲ್ಲೆ ಸುಧಾರಿಸಿಕೊಳ್ಳಲು ಹೇಳಿದಳು.ನಾವು ಒಪ್ಪಲಿಲ್ಲ.ಎಷ್ಟು ಬೇಕಾದರೂ ತಿನ್ನಬಹುದೆಂದಿದ್ದಾಗ, ಮುಗಿಯಿತೆಂದರೇನು? ತರಿಸಿ ಕೊಡಿ ಎಂದೆವು. ಆಕೆ ನಿರುಪಾಯಳಾಗಿ, ವಿಚಾರಿಸಿ ನೋಡುತ್ತೇನೆಂದಳು.
ಕೋಕನೆಟ್ ಡಾನ್ಸ್
ಕಾಂಬೋಡಿಯಾದ ಜಾನಪದ ನೃತ್ಯಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆಯಿದೆ. ಶಾಸ್ತ್ರೀಯ ನೃತ್ಯದಷ್ಟೇ ಖ್ಮೇರ್ಜಾನಪದ ನೃತ್ಯಗಳೂ ಹೆಸರು ಮಾಡಿವೆ.
ದಕ್ಷಿಣ ಏಷ್ಯಾದ ಭಾಗವಾದ ಕಾಂಬೋಡಿಯಾದಲ್ಲಿ ತೆಂಗು ವಾಣಿಜ್ಯ ಬೆಳೆ. ಪುಷ್ಟಳ ಫಸಲು ಬಂದಾಗ ರೈತಾಪಿ ವರ್ಗ ಹಾಡಿ,ಕುಣಿದು ಸಂಭ್ರಮಿಸುವುದು ಸಹಜವೇ.
ಕೃಷಿಕರ ದಿರಿಸು ತೊಟ್ಟ ಗಂಡು,ಹೆಣ್ಣು ಜೋಡಿಗಳು ಕೋಕನೆಟ್ ಶೆಲ್ ಡಾನ್ಸ್ ಅಥವಾ ತೆಂಗಿನಕಾಯಿ ಚಿಪ್ಪಿನ ಗ್ರೂಪ್ ಡಾನ್ಸಲ್ಲಿ ಭಾಗವಹಿಸುತ್ತಾರೆ. ತೆಂಗಿನ ಚಿಪ್ಪನ್ನು ತಾಕಿಸುತ್ತಾ, ಕೇಕೆ ಹಾಕುತ್ತಾ, ಹಿಂದೆ ಮುಂದೆ, ನಿಂತು ಕುಳಿತು, ತಿರುತಿರುಗಿ ಕುಣಿಯುವ ನೃತ್ಯದ ಚಲನೆಗೆ ಕೋಲಾಟದ ಸಾಮ್ಯತೆಯಿದೆ. ನೃತ್ಯ ಸಾಗಿದಂತೆ ಚಲನೆಯ ವೇಗ ಹೆಚ್ಚುತ್ತದೆ. ಕೃಷಿಕರ ನೃತ್ಯವಾದ ಕೋಕನೆಟ್ ಡಾನ್ಸನ್ನು ಈಗ ಮದುವೆ ಮತ್ತು ಸಂತೋಷ ಕೂಟಗಳಲ್ಲೂ ಏರ್ಪಡಿಸುತ್ತಾರಂತೆ.
ತೆಂಗಿನ ಚಿಪ್ಪಿನ ಶಬ್ದ ಕಿವಿಯಲ್ಲಿ ಮೊರೆಯುತ್ತಿದ್ದಾಗ ಸ್ಟಿವರ್ಟ್, ಪರಿಚಾರಕಿಯೊಂದಿಗೆ ಬಂದು, ನೀವು ಕೇಳಿದ ಐಟಂ ಮುಗಿದಿದೆ ಎಂದ. ಕಡಿಮೆ ಸಂಖ್ಯೆಯ ಪ್ರೇಕ್ಷಕರಿರುವುದರಿಂದ ಹೆಚ್ಚು ಮಾಡಿಲ್ಲ ಎನ್ನುವುದು ಅವನ ಸಬೂಬು.ಅವನ ಮಾತನ್ನು ಕೇಳುವ ಸ್ಥಿತಿಯಲ್ಲಿ ನಾವಿರಲಿಲ್ಲ.
“ಮುಗಿದಿದ್ದರೆ ಮಾಡಿಸಿ ಕೊಡಿ,ಇಲ್ಲವೇ ಕಂಪ್ಲೈಂಟ್ ಮಾಡುತ್ತೇವೆ” ಮೂವರೂ ಏಕ ಕಂಠದಲ್ಲಿ ಹೇಳಿದೆವು.
ರಂಗಮಂದಿರಕ್ಕೆ ರಾಕ್ಷಸನ ಆಗಮನದ ಹೊತ್ತಾಗಿತ್ತು. ಬೆದರಿದ ಸ್ಟಿವರ್ಡ್ ಮ್ಯಾನೇಜರ್ ಹತ್ತಿರ ವಿಚಾರಿಸುತ್ತೇನೆಂದು ಹೇಳಿ ಹೋದ.
ಮೇಖಲಾ ಡಾನ್ಸ್
ಗಾಢ ನೀಲಿಯ ಸೀರೆ ಉಟ್ಟ, ಚಿನ್ನದ ಬಣ್ಣದ ಸೆರಗು ಹೊದ್ದ ರೂಪಸಿ, ನೀರಲ್ಲಿ ನಡೆವಂತೆ ಪದಚಲನೆ ಮಾಡುತ್ತಾ ರಂಗಕ್ಕೆ ಬಂದಳು. ಅವಳ ಬೆನ್ನಟ್ಟಿ, ಕಡು ಕೆಂಪು ದಿರಿಸು ತೊಟ್ಟ, ಕ್ರೂರ ಮುಖವರ್ಣಿಕೆಯ ಅಸುರನೂ ಬಂದ.
ರೂಪಸಿಯಾದ ಜಲದೇವತೆ ಮುನಿ ಮೇಖಲಾ ಬಳಿ ಸ್ಪಟಿಕದ ಅಸ್ತ್ರವಿದೆ, ತನಗದು ಬೇಕು ಎಂದು ಅಸುರ ಆಗ್ರಹಿಸುತ್ತಾನೆ. ತನ್ನಲ್ಲಿಲ್ಲವೆಂದು ಅವಳು ಸೋಗು ಹಾಕುತ್ತಾಳೆ. ಅಸುರ ಕೆರಳುತ್ತಾನೆ. ಈಟಿಯಿಂದ ಇರಿಯಲು ನೋಡುತ್ತಾನೆ. ಮುನಿ ಮೇಖಲಾ ಬಸವಳಿಯುತ್ತಾಳೆ. ಕಟ್ಟಕಡೆಗೆ ಸ್ಟಟಿಕಾಸ್ತ್ರ ಹೊರ ತೆಗೆದು ಅಸುರನನ್ನು ನಿಗ್ರಹಿಸುತ್ತಾಳೆ.
ಮಳೆ ದೇವತೆ ಮುನಿ ಮೇಖಲೆಯನ್ನು ಜಲದೇವಿಯೆಂದು ತಿಳಿದು, ಆಕೆಯ ಸ್ಪಟಿಕಾಸ್ತ್ರವನ್ನು ಸಿಡಿಲೆಂದೂ, ಆಕೆಯ ಬೆನ್ನು ಹತ್ತುವ ಅಸುರನ ಈಟಿಯನ್ನು ಗುಡುಗೆಂದೂ ಕಾಂಬೋಡಿಯಾದ ಜನಪದರು ನಂಬುತ್ತಾರೆ.ಒಳಿತು ಕೆಡುಕಿನ ಸಮರದಲ್ಲಿ ಒಳಿತಿಗೇ ಜಯವಾಗುವುದು ಎಂದವರ ನಂಬಿಕೆ.
ಹೊಟ್ಟೆ ತಾಳ ಹಾಕುತ್ತಿತ್ತು. ಖಾಲಿ ತಟ್ಟೆ ಕುಟ್ಟುತ್ತಿರುವಾಗ ಮ್ಯಾನೇಜರ್ ಬಂದ. ಕ್ಷಮಾಪಣೆ ಕೇಳಿ, ಎರಡು ಪ್ಲೇಟ್ ಮಾಡಿಸಿಕೊಡುತ್ತೇನೆ ಸುಧಾರಿಸಿಕೊಳ್ಳಿ ಎಂದು ವಿನಂತಿಸಿದ. ಖಾಲಿ ಹೊಟ್ಟೆಯಲ್ಲಿ ಕಾದಾಡುವ ಪರಿಸ್ಥಿಯಲ್ಲಿ ನಾವಿರಲಿಲ್ಲ. ಆತ ಹೇಳಿದ್ದಕ್ಕೆ ಸಮ್ಮತಿಸಿದೆವು. ದಿನದ ಮಟ್ಟಿಗಾದರೂ ಬಹುರಾಷ್ಟ್ರೀಯ ಅಸುರನನ್ನು ಸೋಲಿಸಿದ ತೃಪ್ತಿ ನಮ್ಮದಾಯಿತು.
ಬೆಸ್ತರ ನೃತ್ಯ.
ಗೋವಾಕ್ಕೆ ಹೋದವರೆಲ್ಲ ಫಿಶರ್ ಮೆನ್ಸ್ ಡಾನ್ಸ್ ನೋಡಿರುತ್ತಾರೆ. ರಾಜಕಪೂರ್ ʼಬಾಬ್ಬಿʼ ಸಿನಿಮಾದಲ್ಲಿ ಗೋವಾದ ಫಿಶರ್ ಮೆನ್ ಡ್ಯಾನ್ಸ್ ತೋರಿಸಿದ ಮೇಲೆ ಅದಕ್ಕೆ ಇನ್ನಿಲ್ಲದ ಖ್ಯಾತಿ ಬಂತು.ಈಗದನ್ನು ಗೋವಾದ ಕ್ರೂಸ್ಗಳಲ್ಲಿ, ಸಾಂಸ್ಕೃತಿಕ ಸಂದರ್ಭಗಳಲ್ಲಿ ನೋಡಬಹುದು. ಕಾಂಬೋಡಿಯಾದ ಫಿಶರ್ ಮೆನ್ಸ್ ಡಾನ್ಸ್ ಅದೇ ರೀತಿ ಎಂದುಕೊಂಡಿದ್ದೆವು.
ರಂಗವನ್ನು ನಾಲ್ಕು ಜೋಡಿ ಬೆಸ್ತರು, ಕುವೆಂಪು ಕಾದಂಬರಿಯಲ್ಲಿ ವರ್ಣಿತವಾದಂತಹ ಬುಟ್ಟಿ ಹಿಡಿದಿಕೊಂಡು ಪ್ರವೇಶಿಸಿದರು. ಗಂಡುಹೆಣ್ಣು ಜೊತೆಗೂಡಿ, ರಂಗವನ್ನು ಕಡಲು ಮಾಡಿ, ಬಗೆಬಗೆಯಲ್ಲಿ ಮೀನು ಬೇಟೆಗೆ ಯತ್ನಿಸುತ್ತಾರೆ. ಮೀನು ಸಿಕ್ಕುತ್ತದೆ, ಸಿಕ್ಕಿದ್ದು ಜಾರಿಕೊಳ್ಳುತ್ತದೆ. ಇವರು ಬಿಡಲೊಲ್ಲರು .ಮತ್ತೆ ಮತ್ತೆ ಬೇಟೆಯಾಡುತ್ತಾರೆ.
ಅವರಲ್ಲೊಬ್ಬನಿಗೆ ಚೆಲುವೆಯೊಬ್ಬಳ ಮೇಲೆ ಮನಸು. ಆಕೆಗೂ ಆತನದೇ ಕನಸು. ಆದರೆ ಹುಸಿ ಮುನಿಸು. ಆಕೆಯನ್ನು ಒಲಿಸಲು ದೊಡ್ಡ ಮೀನೊಂದರ ಬೆನ್ನಟ್ಟುತ್ತಾನೆ. ಕಷ್ಟಪಟ್ಟು ಹಿಡಿಯುತ್ತಾನೆ. ಚೆಲುವೆಯೂ ಬುಟ್ಟಿಗೆ ಬೀಳುತ್ತಾಳೆ. ಆನಂದದಿಂದ ಎಲ್ಲರೂ ಕುಣಿದು ಕುಪ್ಪಳಿಸುತ್ತಾರೆ.
ನಾವೂ ಮೀನು ತಿನ್ನುತ್ತಾ, ಖುಷಿಯಲ್ಲಿ ಬಾಯಿ ಚಪ್ಪರಿಸುತ್ತಿರುವಾಗ ಅಪ್ಸರೆಯರು ಬಂದೇ ಬಿಟ್ಟರು!
ಅಪ್ಸರಾ ಬ್ಯಾಲೆ
ಕರ್ನಾಟಕದ ಯಕ್ಷಗಾನದಂತೆ, ತಮಿಳುನಾಡಿನ ಭರತನಾಟ್ಯದಂತೆ, ಕೇರಳದ ಕಥಕ್ಕಳಿಯಂತೆ, ಕಾಂಬೋಡಿಯಾದ ಪಾರಂಪರಿಕ ಅಪ್ಸರಾ ನೃತ್ಯ ಹೆಸರುವಾಸಿ. ಅಂಗೋರವಾಟ್ ದೇವಾಲಯದಲ್ಲೆ ಸುಮಾರು 2000 ಅಪ್ಸರೆಯರ ಶಿಲ್ಪಗಳಿವೆಯಂತೆ. ಖ್ಮೇರ್ ಸಂಸ್ಕೃತಿಯನ್ನು ಪ್ರತಿನಿಧಿಸುವ ಅಪ್ಸರಾ ನೃತ್ಯ ಅಥವಾ ಬ್ಯಾಲೆಯಲ್ಲಿ ಭಾರತೀಯ ಮತ್ತು ಬೌದ್ಧ ಸಂಸ್ಕೃತಿಗಳ ಕೊಡುಗೆಯೂ ಇದೆ.
ಅಪ್ಸರಾ ನೃತ್ಯವನ್ನು ಅಭಿನಯಿಸುವ ನರ್ತಕಿಯರೆಲ್ಲ ಸಮಪ್ರಮಾಣದ,ಬಳುಕುವ ಶರೀರವುಳ್ಳವರು. ನಾವು ಕಂಡ ನೃತ್ಯದಲ್ಲಿ ಪ್ರಧಾನ ನರ್ತಕಿಗೆ ಆಕರ್ಷಕವಾದ ಉಡುಗೆ, ತೊಡುಗೆಗಳಿದ್ದು, ಚಿನ್ನದ ಬಣ್ಣದ ಮಿರುಗುವ ಕಿರೀಟವಿತ್ತು. ಸಹ ನರ್ತಕಿಯರ ವೇಷಭೂಷಣಗಳಲ್ಲಿ ಭಿನ್ನತೆಯಿದ್ದು, ಕಿರೀಟದಲ್ಲಿ ಚೂಪಾದ ಮೂರು ಮೊನೆಗಳಿತ್ತು. ಮೇಲುಡುಗೆ ಬಿಗಿಯಾಗಿದ್ದು, ನಿರಿಗೆಯಿರುವ ಕಚ್ಚೆಯಾಕಾರದ ಉಡುಪು ತೊಟ್ಟು, ಹಸ್ತ ಮತ್ತು ತೋಳಿನ ಚಲನೆಗೆ ಅನುಕೂಲವಾಗುವಂತೆ ತೋಳುಬಂದಿ, ಒಡ್ಯಾಣ ಮತ್ತು ಕಂಠಾಭರಣಗಳನ್ನು ಧರಿಸಿದ್ದರು.
ದೇವಲೋಕದಿಂದ ಬಂದ ಅಪ್ಸರೆಯರು ದೇವತೆಗಳನ್ನು ಮತ್ತು ರಾಜರನ್ನು ಸಂತೋಷ ಪಡಿಸಲು ನಾಟ್ಯವಾಡುತ್ತಾರೆನ್ನುವುದು ಪ್ರತೀತಿ. ಪ್ರಧಾನ ನರ್ತಕಿ ʼಮೆರಾʼ ಮತ್ತು ಆಕೆಯ ಸಂಗಾತಿಯರು ಬಂಗಾರದ ಹೂವನ್ನು ಹಿಡಿದುಕೊಂಡಿರುತ್ತಾರೆ.ಇದು ಸಮೃದ್ಧಿ,ಸಂಪತ್ತಿನ ದ್ಯೋತಕವೆಂದು ಹೇಳಲಾಗುತ್ತದೆ.
ಅಪ್ಸರಾ ನೃತ್ಯ ನಿಧಾನ ಗತಿಯಲ್ಲಿ,ಯಾವುದೇ ಅವಸರ,ಆತುರಕ್ಕೆ ಅವಕಾಶವಿಲ್ಲದೆ ವಿಳಂಬಿತ ಲಯದಲ್ಲಿ ಸಾಗುತ್ತದೆ. ಪಾದ, ತೋಳು ಮತ್ತು ಹಸ್ತ ಚಲನೆಗೆ ಪ್ರಾಧಾನ್ಯ. ಪ್ರತಿಯೊಂದು ಅಂಗದ ಪ್ರತಿ ಚಲನೆಯೂ ಅರ್ಥಪೂರ್ಣ. ನೋವು- ಕಷ್ಟಗಳನ್ನು, ಒಳಿತು- ಕೆಡುಕನ್ನು, ಸುಖ- ಸಂತೋಷಗಳನ್ನು ಬಗೆಬಗೆಯ ಭಂಗಿಗಳ ಮೂಲಕ ವ್ಯಕ್ತ ಪಡಿಸಲಾಗುತ್ತದೆ. ಭರತ ನಾಟ್ಯದ ಮುದ್ರೆಗಳೂ ಇವೆ.
ಧ್ಯಾನದಂತೆ ಭಾಸವಾಗುವ ಅಪ್ಸರಾ ನೃತ್ಯದಿಂದ ನೃತ್ಯದಿಂದ ಸುಖ ಸಮೃದ್ಧಿ ಉಂಟಾಗುತ್ತದೆ ಎನ್ನುವ ನಂಬಿಕೆ. ಅದೆಂತೋ ಇರಲಿ, ಆತುರ, ಆವೇಗ, ಉದ್ವೇಗಗಳನ್ನು ಮರೆಸಿ, ಚಿತ್ತವನ್ನು ಶಾಂತತೆಯತ್ತ ತಿರುಗಿಸುವ ಗುಣವಂತೂ ಇದೆ. ಈ ಪಾರಂಪರಿಕ ನೃತ್ಯವನ್ನು ಗುರುತಿಸಿ ಯುನೆಸ್ಕೋ 2003 ರಲ್ಲಿ ಅಂತಾರಾಷ್ಟ್ರೀಯ ಮನ್ನಣೆ ನೀಡಿದೆ.
ನೃತ್ಯವನ್ನು ಆಸ್ವಾದಿಸುವುದರಲ್ಲಿ ಮಗ್ನರಾದ ನಮಗೆ ತಟ್ಟೆ ಖಾಲಿಯಾಗಿದ್ದೇ ಗೊತ್ತಾಗಲಿಲ್ಲ.ತಿಂದಿದ್ದಕ್ಕೆ ಸಾಕ್ಷಿಯಾಗಿ ಖಾಲಿ ತಟ್ಟೆಗಳಿದ್ದವು. ನೃತ್ಯದಲ್ಲಿ ಮಗ್ನರಾದಾಗ ಬೇರೇನೂ ಬೇಕೆನಿಸುವುದಿಲ್ಲ. ಹೋಟೇಲಿನವರಿಗೆ ಈ ಸೂಕ್ಷ್ಮ ಗೊತ್ತು. ಅದಕ್ಕೆ ಮೊದಲಷ್ಟು ಬಡಿಸಿ, ಆ ಮೇಲೆ ಇಲ್ಲ ಎಂದು ಬಿಡುತ್ತಾರೆ.
ನೃತ್ಯ ತಂಡದಲ್ಲಿ ನಲ್ವತ್ತು ಕಲಾವಿದರಿದ್ದಾರೆ ಎಂದು ಬ್ರೋಷರಿನಲ್ಲಿತ್ತು. ನಾವು ಗಮನಿಸಿದಂತೆ, ಕೆಲವು ಕಲಾವಿದರನ್ನು ಬೇರೆ ಬೇರೆ ನೃತ್ಯಗಳಲ್ಲಿ ಬಳಸಿಕೊಳ್ಳಲಾಗಿದ್ದು, ಗ್ರೂಪ್ ಡಾನ್ಸ್ಗಳಲ್ಲಿ ಮಾತ್ರಾ ಎಂಟತ್ತು ನರ್ತಕ-ನರ್ತಕಿಯರಿದ್ದರು. ನೃತ್ಯ ಮುಕ್ತಾಯಗೊಂಡ ಬಳಿಕ ಹತ್ತು ಕಲಾವಿದರು ವೇದಿಕೆಗೆ ಬಂದರು. ಖ್ಮೇರ್ ಸಂಸ್ಕೃತಿಯಂತೆ ಸೊಂಟ ಬಾಗಿಸಿ ಪ್ರೇಕ್ಷಕರಿಗೆ ನಮಿಸಿದರು.
ಆ ಕ್ಷಣದಲ್ಲಿ, ನಾವು ತಬ್ಬಿಬ್ಬಾಗಿ ನೋಡುತ್ತಿರುವಂತೆ, ಕೆಲವರು ವೇದಿಕೆಗೆ ನುಗ್ಗಿ ಕಲಾವಿದರ ಪಕ್ಕ ನಿಂತುಕೊಂಡು ಸೆಲ್ಫಿ, ಫೋಟೋಗಳನ್ನು ತೆಗೆದುಕೊಳ್ಳತೊಡಗಿದರು. ಸುರಸುಂದರಿ ಅಪ್ಸರೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನೂಕು ನುಗ್ಗಲು. ನಾವೇನೂ ಆಸ್ಥೆ ತೋರಲಿಲ್ಲ. ನಾನಂತೂ ಮಲೆನಾಡ ಹೆಣ್ಣು ಮನೆಯಲ್ಲಿರುವಾಗ ದೇವಲೋಕದ ಅಪ್ಸರೆಯ ಗೊಡವೆ ಏಕೆಂದು ಸುಮ್ಮನಾದೆ.
ರಾ ನಮ್ಮನ್ನು ಕಾಯುತ್ತಿದ್ದ. ನಾವು ಉಳಿದುಕೊಂಡಿದ್ದ ಹೋಟೆಲಿಗೆ ಹೋಗುತ್ತಾ, ಬೆಂಗಳೂರಿನ ರಾಜಭವನಕ್ಕಿಂತಲೂ ದೊಡ್ಡದಾದ ಮಹಲು ಕಣ್ಣಗೆ ಬಿತ್ತು. ಅದು ಕಾಂಬೋಡಿಯಾದ ಅಧ್ಯಕ್ಷ ನರೋದಮ್ ಸಿಹಮೊನಿ ತಂಗುವ ಅರಮನೆ ಎಂದು ತಿಳಿಯಿತು. ವಿದ್ಯುದ್ದೀಪಗಳಿಂದ ಜಗಮಗಿಸುತ್ತಿದ್ದ ಮನುಷ್ಯರಿಲ್ಲದ ಬಂಗಲೆಗೆ ಬಲವಾದ ಪಹರೆಯಿತ್ತು. ಅಗಲವಾದ ರಸ್ತೆ ಅಪ್ಸರೆಯರ ಕೆನ್ನೆಯಂತಿತ್ತು.
ಕಾಂಬೋಡಿಯಾದ ಜನರಿಗೆ ರಾಜ ಸಂತಾನದವರಲ್ಲಿ ಆರಾಧನಾ ಭಾವವಿದೆ. ರಾಷ್ಟ್ರಾಧ್ಯಕ್ಷ ಪದವಿ ಅಲಂಕಾರಿಕ ಹುದ್ದೆಯಾದರೂ ರಾಜ ವಂಶದವರೇ ರಾಷ್ಟ್ರದ ಅಧ್ಯಕ್ಷರು. ಅಧ್ಯಕ್ಷರಿಗೆ ರಾಜಧಾನಿ ನೋಮ್ ಪೆನ್ನಲ್ಲಿ ಅರಮನೆಯಿದ್ದರೂ ವಿರಾಮದ ದಿನಗಳನ್ನು ಸಿಯಾಮ್ ರೀಪ್ನ ಅರಮನೆಯಲ್ಲಿ ಕಳೆಯುತ್ತಾರೆ. ಕಾರ್ಯಕಾರಿ ಹುದ್ದೆಯಿಲ್ಲದಿದ್ದರೂ ಬಡದೇಶದ ಜನರ ದುಡಿಮೆಯ ಹಣದಿಂದ ಸುಖ,ಭೋಗಗಳನ್ನು ಪಡೆಯುತ್ತಾರೆ. ಇಂದಿರಾ ಗಾಂಧಿ ರಾಜರುಗಳ ರಾಯಧನ, ಸವಲತ್ತುಗಳನ್ನು ದಿಟ್ಟತನದಿಂದ ರದ್ದು ಮಾಡಿರದಿದ್ದರೆ, ಅವರೂ ಸುಖ ಭೋಗಗಳನ್ನು ಅನುಭವಿಸುತ್ತಾ ಹಾಯಾಗಿರುತ್ತಿದ್ದರೇನೋ!
ರಾ ಸರಿಯಾದ ರೀತಿಯಲ್ಲಿ ನಮಗೆ ಮಾರ್ಗದರ್ಶನ ಮಾಡಿದ್ದ. ಅವನನ್ನೇ ಮುಂದುವರಿಸೋಣವೆಂದು ಮಾರನೇ ದಿನವೂ ಬರ ಹೇಳಿದೆವು. ನೀವು ಹೋಟೆಲಲ್ಲಿ ಕಾಂಪ್ಲಿಮೆಂಟರಿ ಬ್ರೇಕ್ ಫಾಸ್ಟ್ ಮುಗಿಸಿ, ಒಂಬತ್ತಕ್ಕೆ ಬಂದು ಬಿಡುತ್ತೇನೆಂದು ಸೂಸಡೈ ಹೇಳಿ ಹೊರಟ.
(ಮುಂದುವರೆಯುವುದು….)
-ಎಂ ನಾಗರಾಜ ಶೆಟ್ಟಿ
[…] ಇಲ್ಲಿಯವರೆಗೆ […]