ತೇಲುವ ಗ್ರಾಮಗಳ ಮುಳುಗುವ ಬದುಕು: ಎಂ ನಾಗರಾಜ ಶೆಟ್ಟಿ

ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಸ್ವಲ್ಪವೇ ಚಿಕ್ಕದಾದ ದಕ್ಷಿಣ ಏಷ್ಯಾದ ಪುಟ್ಟ ರಾಷ್ಟ್ರ ಕಾಂಬೋಡಿಯಾ. ಕಾಂಬೋಡಿಯಾದ ಜನಸಂಖ್ಯೆ ಒಂದು ಕೋಟಿ ಎಂಬತ್ತು ಲಕ್ಷ. ಅದರಲ್ಲಿ ಸುಮಾರು ಒಂದು ಲಕ್ಷ ಜನರು ತೇಲುವ ಗ್ರಾಮಗಳಲ್ಲಿ ವಾಸಿಸುತ್ತಾರೆ. ಕಾಂಬೋಡಿಯಾದಲ್ಲಿ ಏಳುನೂರು ತೇಲುವ ಗ್ರಾಮಗಳಿವೆಯೆಂದು ಹೇಳಲಾಗುತ್ತಿದೆ. ಕಾಂಬೋಡಿಯಾಕ್ಕೆ ಬರುವ ಪ್ರಯಾಣಿಕರಿಗೆ ವಿಶ್ವದ ಅತಿ ಹೆಚ್ಚು ವಿಸ್ತೀರ್ಣದ ಅಂಗೋರವಾಟ್ ದೇವಾಲಯ ಹೇಗೋ, ಹಾಗೆಯೇ ತೇಲುವ ಗ್ರಾಮಗಳು ಕೂಡಾ ಆಕರ್ಷಣೆಯ ಕೇಂದ್ರಗಳು. ಲಕ್ಷಾಂತರ ಜನರನ್ನು ಬಲಿ ಪಡೆದ ಪೋಲ್‌ಪಾಟ್‌ರಂತಹ ಸರ್ವಾಧಿಕಾರಿಯನ್ನು ಕಂಡ ಕಾಂಬೋಡಿಯವನ್ನು ನೋಡಬೇಕೆಂದು ಬಹಳ ವರ್ಷಗಳಿಂದ ಮನಸ್ಸಲ್ಲಿತ್ತು. ಕಾಂಬೋಡಿಯಾದ ರಾಜಧಾನಿ ನೋಮ್‌ಪೆನ್‌ ಆದರೂ ಪ್ರವಾಸಿ ಕೇಂದ್ರ ಸಿಯಾಮ್‌ ರೀಪ್‌. ಸಿಯಾಮ್‌ ರೀಪ್‌ಗೆ ಕಾಂಬೋಡಿಯಾದ ರಾಜಧಾನಿ ನೋಮ್‌ಪೆನ್‌ಗಿಂತಲೂ ಹೆಚ್ಚು ವಿಮಾನ ಸಂಪರ್ಕವಿದೆ. ವಿಮಾನ ನಿಲ್ದಾಣಕ್ಕೆ ಕೇವಲ ಆರು ಕಿಲೋಮೀಟರ್‌ ದೂರದಲ್ಲಿ ವಿಶ್ವ ಪ್ರಸಿದ್ಧ ಅಂಗೋರ್‌ವಾಟ್‌ ದೇವಾಲಯವಿದ್ದರೆ, ಇಪ್ಪತ್ತು ಕಿಲೋಮೀಟರ್‌ ದೂರದಲ್ಲಿ ತೇಲುವ ಗ್ರಾಮಗಳಿವೆ..

ನಾವು ಸಿಯಾಮ್‌ ರೀಪ್‌ಗೆ ಹೋದಾಗ ಮಳೆಗಾಲ. ಹೆಚ್ಚು ರನ್‌ವೇಗಳಿಲ್ಲದ ಒಂದೇ ಅಂತಸ್ತಿನ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ ಹನ್ನೊಂದಕ್ಕೆ ಇಳಿದಾಗ ಭಾರಿ ಸ್ವಾಗತ ಕಾದಿತ್ತು. ಸ್ಥಳೀಯ ತಂಡ ಜೋರಾಗಿ ವಾದ್ಯಗಳನ್ನು ನುಡಿಸಿದರೆ, ಜೋಕರ್‌ ಕ್ಯಾಪ್‌ ಹಾಕಿದ ವ್ಯಕ್ತಿಯೊಬ್ಬ ಒಂದಾದ ನಂತರ ಒಂದು ಬಾಟಲನ್ನು ಎತ್ತರಕ್ಕೆ ಚಿಮ್ಮಿ, ಕ್ಯಾಚ್‌ ಹಿಡಿಯುತ್ತಾ ಮುಗುಳ್ನಗೆ ಬೀರುತ್ತಿದ್ದ. ನಮಗೂ ಅಂತಾರಾಷ್ಟ್ರೀಯ ಮಟ್ಟದ ಸ್ಥಾನಮಾನ ದೊರಕಿತೆಂದು ಬೀಗುವಾಗ, ತಳ್ಳು ಪರದೆ ನೂಕಿ ಹೊರಬರುವ ಎಂಕ, ಸೀನ, ನಾಣಿಗೂ ಇದೇ ರೀತಿಯ ಸ್ವಾಗತ ದೊರಕುವುದನ್ನು ಕಂಡೆವು. ನಾವೂ ಎಲ್ಲರಂತವರೇ ಎನ್ನುವ ಜ್ಞಾನೋದಯವಾಯಿತು. ಪ್ರಯಾಣಿಕರು ಹೊರ ಬರುವುದನ್ನೆ ಕಾದು, ಸಂಭ್ರಮದಿಂದ ಎದುರುಗೊಳ್ಳುವ ಕಲಾವಿದರು, ಪ್ರಯಾಣಿಕರಿಲ್ಲದ ವೇಳೆಯಲ್ಲಿ ಬೆವರೊರೆಸಿಕೊಂಡು ಅಲ್ಲಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದರು. ನಮ್ಮ ಜಾನಪದ ಕಲಾವಿದರನ್ನೂ ಇದೇ ರೀತಿಯಲ್ಲಿ. ಪ್ರದರ್ಶನ ಗೊಂಬೆಗಳಂತೆ ಬಳಸಿಕೊಳ್ಳುತ್ತಿರುವುದು ನೆನಪಿಗೆ ಬಂತು. ವಿಮಾನ ನಿಲ್ದಾಣದಲ್ಲಿ ಹೆಚ್ಚು ಪ್ರಯಾಣಿಕರಿರಲಿಲ್ಲ. ನಿಲ್ದಾಣದ ಹೊರಬಾಗಿಲ ಎದುರಲ್ಲೇ ವಿನಿಮಯ ಕೇಂದ್ರಗಳ ಜಾಹೀರಾತುಗಳಿದ್ದವು. ಕಾಂಬೋಡಿಯಾದಲ್ಲಿ ಅಮೇರಿಕನ್‌ ಡಾಲರ್‌ ಚಲಾವಣೆಯಲ್ಲಿದ್ದರೂ ಅಗತ್ಯಕ್ಕಿರಲಿ ಎಂದು ಸಣ್ಣ ಮೊತ್ತವನ್ನು ಕಾಂಬೋಡಿಯಾದ ಕರೆನ್ಸಿ (ರಿಯಲ್)ಗೆ ಬದಲಾಯಿಸಿದೆವು. ಮೊತ್ತ ಮೊದಲ ಬಾರಿಗೆ ಜೇಬು ನೋಟಿನಿಂದ ತುಂಬಿಕೊಂಡಿತು.

ಕಾಂಬೋಡಿಯಾದಲ್ಲಿ ಒಂದು ಡಾಲರ್‌ಗೆ 4000 ರಿಯಲ್‌ ಸಿಗುತ್ತದೆ. ದೇಶ ಪ್ರೇಮವನ್ನು ಸಾಬೀತು ಮಾಡಲು ರುಪಾಯಿಯನ್ನು ರಿಯಲ್‌ಗೆ ಬದಲಾಯಿಸಲು ಪ್ರಯತ್ನಿಸಿದೆ. ನೂರು ರೂಪಾಯಿಗಳಿಗೆ 4940 ಕಾಂಬೋಡಿಯಾ ರಿಯಲ್‌ ದೊರಕುವುದೆಂದು ತಿಳಿದಾಗ ಹಣವಂತನಾಗುವ ಬಯಕೆ ಗರಿಗೆದರಿತು. ಆದರೆ ದುರಾದೃಷ್ಟ, ರೂಪಾಯಿಯನ್ನು ಕೊಳ್ಳುವವರು ಅಲ್ಲಿರಲಿಲ್ಲ. ಕಾಂಬೋಡಿಯಾದ ಅಧಿಕೃತ ಭಾಷೆ ಖ್ಮೇರ್. ಪ್ರವಾಸಿ ತಾಣವಾದ್ದರಿಂದ ಇಂಗ್ಲಿಷ್‌ ಬಳಕೆಯಿದೆ. ಸಂದರ್ಶಿಸಿಬೇಕಾದ ಸ್ಥಳಗಳನ್ನು ನಾವು ಗುರುತು ಮಾಡಿಕೊಂಡಿದ್ದರೂ, ಸ್ಥಳೀಯರ ನೆರವು ಬೇಕಿತ್ತು. ಮೋಸ ಮಾಡುತ್ತಾರೆ, ದಾರಿ ತಪ್ಪಿಸುತ್ತಾರೆ, ಒಂದಕ್ಕೆರಡು ಹಣ ವಸೂಲು ಮಾಡುತ್ತಾರೆ ಎಂದೆಲ್ಲ ನಮ್ಮನ್ನು ಹೆದರಿಸಿದ್ದರು. ನಿಲ್ದಾಣದ ಹೊರಗೆ ನಿಂತಿದ್ದ ಟ್ಯಾಕ್ಸಿಗಳ ಕಡೆಗೊಮ್ಮೆ ಕಣ್ಣು ಹಾಯಿಸಿದೆವು. ಒಬ್ಬಿಬ್ಬರು ಹತ್ತಿರ ಬಂದರು. ಅಂಗೋರವಾಟ್‌, ಪ್ಲೋಟಿಂಗ್‌ ವಿಲೇಜ್‌ ಮತ್ತಿತರ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತೇವೆಂದರು. ಅವರ ಮಾತಿನ ರೀತಿ ಸಮಾಧಾನ ತರಲಿಲ್ಲ. ಮಗ್ಗುಲಲ್ಲಿ, ಕ್ಯಾಪ್‌ಹಾಕಿದ್ದ, ಕೆಂಬಣ್ಣದ ಜರ್ಕಿನ್‌ ತೊಟ್ಟಿದ್ದ ವ್ಯಕ್ತಿಯೊಬ್ಬ, ಟ್ಯಾಕ್ಸಿಗೆ ಒರಗಿ ನಿಂತು ನಮ್ಮನ್ನೇ ಗಮನಿಸುತ್ತಿದ್ದ. ನಮ್ಮನ್ನು ಸುತ್ತುವರಿದವರು ಹೊರಟು ಹೋದ ಬಳಿಕ ಸಮೀಪಕ್ಕೆ ಬಂದ. ಮೊದಲ ಸಲ ನಾವು ಕಾಂಬೋಡಿಯಾಕ್ಕೆ ಬರುತ್ತಿರುವುದೆಂದು ಅವನಿಗೆ ಮನದಟ್ಟಾಗಿತ್ತು. ಉಳಿದುಕೊಳ್ಳಲು ವ್ಯವಸ್ಥೆಯಾಗಿದೆಯೇ ಎಂದು ವಿಚಾರಿಸಿದ. ಹೋಟೆಲ್‌ ಅಡ್ರೆಸ್‌ ಕೊಟ್ಟೆವು. ಕರೆದುಕೊಂಡು ಹೋಗುತ್ತೇನೆಂದು ಹೇಳಿದ.

ಪ್ರಯಾಣಿಕರ ಬೇಕು, ಬೇಡಗಳನ್ನು ಅರಿತು, ವ್ಯವಹರಿಸುವಷ್ಟು ಇಂಗ್ಲಿಷ್‌ ಅವನಿಗೆ ತಿಳಿದಿತ್ತು. ನಮ್ಮ ಮಾತುಗಳನ್ನು ಕೇಳಿಸಿಕೊಂಡು, ನಾವೆಲ್ಲಿಂದ ಬಂದೆವೆನ್ನುವುದನ್ನು ವಿಚಾರಿಸಿದ. ಬೆಂಗಳೂರೆಂದು ಹೇಳಿದ ಕೂಡಲೇ ಒಂದೆರಡು ಕನ್ನಡ ಶಬ್ದಗಳನ್ನು ಉದುರಿಸಿದ. ನಮ್ಮನ್ನು ಬಲೆಗೆ ಬೀಳಿಸಲು ಅಷ್ಟೇ ಸಾಕಿತ್ತು. ಪ್ರೀತಿ ಉಕ್ಕಿ ಬಂದು, ಅವನ ಹೆಸರು, ಊರು ವಿಚಾರಿಸಿದೆವು. ಪಕ್ಕದ ಹಳ್ಳಿಯವನಾದ ಆತ ಹೆಂಡತಿ, ಮಗಳೊಂದಿಗೆ ಸಿಯಾಮ್‌ ರೀಪಲ್ಲೇ ನೆಲಸಿದ್ದ. ಹೆಸರು ಮಕರಾ. ನನಗೆ ನಗು ಬಂತು. ತುಳುವಿನಲ್ಲಿ ಮಕ್ಕರಾ ಎಂದರೆ ತಮಾಷೆ. ಅವನ ಹೆಸರು ನಿಜವೋ ಸುಳ್ಳೋ ಎಂದು ಹೋಚಿಸುವಷ್ಟರಲ್ಲಿ ʼರಾʼ ಎಂದಷ್ಟೇ ಕರೆಯಿರಿ ಸಾಕು, ಎಂದು ಬಿಟ್ಟ. ʼರಾʼ ಕರ್ನಾಟಕ, ಇಂಡಿಯಾ ನೋಡಿದವನಲ್ಲ. ಪ್ರಯಾಣಿಕರೊಂದಿಗೆ ಒಡನಾಡಿ ಕನ್ನಡ ಶಬ್ದಗಳನ್ನು ಕಲಿತಿದ್ದ. ನಮ್ಮ ಕಾರ್ಯಕ್ರಮದ ಬಗ್ಗೆ ತಿಳಿಸಿದೆವು. ಅವನ ಹತ್ತಿರ ಸಿಯಾಮ್‌ ರೀಪ್‌ನ ಮ್ಯಾಪುಗಳಿದ್ದವು. ಅವುಗಳನ್ನು ತೋರಿಸಿ, ಇವೆಲ್ಲವನ್ನು ನೋಡಲೇಬೇಕು ಎಂದ.

ಮೂರು ದಿನಗಳಲ್ಲಿ ನೋಡಲೇಬೇಕಾದ ಜಾಗಗಳನ್ನು ಗುರುತಿಸಿಲು ಹೇಳಿ, ಟ್ಯಾಕ್ಸಿ ಬಾಡಿಗೆ ವಿಚಾರಿಸಿದೆವು. ʼರಾʼ ಹೇಳಿದ ಬಾಡಿಗೆ ಹೆಚ್ಚಲ್ಲ ಅನ್ನಿಸಿದರೂ, ಅವಸರ ಬೇಡವೆಂದು, ಈ ದಿನ ನೋಡಬಹುದಾದ ಜಾಗಗಳನ್ನು ತಿಳಿಸು ಎಂದೆವು. ಸಮಯವನ್ನು ವ್ಯರ್ಥ ಮಾಡದೆ, ಆದಷ್ಟು ಸ್ಥಳಗಳನ್ನು ಸಂದರ್ಶಿಸುವುದು ನಮ್ಮ ಇಚ್ಚೆಯಾಗಿತ್ತು. “ಮಳೆ ಇದ್ದರೆ ತೇಲುವ ಗ್ರಾಮಗಳನ್ನು ನೋಡಲಾಗುವುದಿಲ್ಲ, ಇಂದು ವಾತಾವರಣ ಚೆನ್ನಾಗಿದೆ. ನೀವು ಬೇಗ ಸಿದ್ಧರಾದರೆ ಹೋಗಿ ಬರಬಹುದು” ಎಂದ ರಾ. ಮೊದಲೇ ಗೊತ್ತು ಪಡಿಸಿದ ಹೋಟೇಲಿನಲ್ಲಿ, ಪದ್ಮಾಸನದ ಮಂದಸ್ಮಿತ ಬುದ್ಧನೂ, ಮುಖ ತುಂಬಾ ನಗುವರಳಿಸಿದ ಸ್ವಾಗತಕಾರಿಣಿಯೂ ಬರಮಾಡಿಕೊಂಡರು. ನಮಗಾಗಿ ಸಿದ್ಧ ಪಡಿಸಿದ್ದ ಕೊಟಡಿಯಲ್ಲಿ ಲಗೇಜನ್ನಿಟ್ಟು ತಯಾರಾದೆವು.

ಮಧ್ಯಾಹ್ನದ ಸಮಯ. ಮುಂಜಾವದಲ್ಲೆ ತಿಂಡಿ ತಿಂದುದರಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ನಾವಿರುವ ಹೋಟೆಲಲ್ಲಿ ಊಟದ ವ್ಯವಸ್ಥೆ ಇತ್ತು. ಆದರೆ ಹೋಗುವ ದಾರಿಯಲ್ಲೆ ತಿನ್ನೋಣವೆಂದು, ʼರಾʼಗೆ ಒಳ್ಳೆಯ ಊಟದ ಹೋಟೆಲಿಗೆ ಕರೆದುಕೊಂಡು ಹೋಗಲು ತಿಳಿಸಿದೆವು. ಮೀನು, ಮಾಂಸ ಏನಾದರೂ ಇಲ್ಲಿಯ ಖಾದ್ಯವೇ ಆಗಿರಬೇಕು, ಕಾಂಟಿನೆಂಟಲ್‌ಹೊಟೇಲುಗಳು ಬೇಡವೇ, ಬೇಡ, ಸಾಮಾನ್ಯ ದರ್ಜೆಯ ಹೋಟೆಲನ್ನು ತೋರಿಸು ಎಂದಿದ್ದು ʼರಾʼ ಗೂ ಇಷ್ಟವಾಯಿತು. ಒಳ್ಳೆಯ, ನದಿ ಪಕ್ಕದ ಹೋಟೆಲಿಗೆ ಕರದುಕೊಂಡು ಹೋಗುತ್ತೇನೆ, ನಿಮಗೆ ಖಂಡಿತಾ ಇಷ್ಟವಾಗುತ್ತದೆ ಎಂದ ರಾ. ಹೋಗುತ್ತಾ ದಾರಿಯ ಇಕ್ಕೆಲದಲ್ಲಿ ಡಾಬಾ ರೀತಿಯ ಹಲವು ಹೋಟೆಲುಗಳನ್ನು ಕಂಡೆವು. ಕೆಲವು ಹೋಟೆಲುಗಳು ನೀರಲ್ಲಿ ಅರ್ಧ ಮುಳುಗಿದ್ದು, ಟೇಬಲ್‌, ಕುರ್ಚಿಗಳನ್ನು ಎತ್ತಿಟ್ಟಿದ್ದು ಕಾಣುತ್ತಿತ್ತು”. ಈ ಸಲ ಮಳೆ ಹೆಚ್ಚು, ನದಿ ನೀರು ನುಗ್ಗಿ ಹೋಟೇಲುಗಳು ಮುಚ್ಚಿವೆ” ಎಂದ ರಾ. ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಕಾಂಬೋಡಿಯಾದಲ್ಲಿ ಮಳೆಗಾಲ. ರಾ ಕರೆದುಕೊಂಡು ಹೋದ ಹೋಟೆಲ್‌ನದಿ ಸಮೀಪವೇ ಇದ್ದು, ಬಿದಿರಿನ ಗಳುಗಳಿಂದ ನಾಲ್ಕಡಿ ಎತ್ತರಿಸಿ ಕಟ್ಟಲಾಗಿತ್ತು. ಚಾವಣಿಗೆ ಹುಲ್ಲನ್ನು ಹೊದಿಸಿದ್ದರು. ಎರಚಲನ್ನು ತಡೆಯಲು ತೂಗು ಪರದೆಗಳಿದ್ದವು.

ಊಟಕ್ಕೆ ಜಪಾನ್‌ ಮಾದರಿಯಲ್ಲಿ ಒಂದಡಿ ಎತ್ತರದ ಹಾಸನ್ನಿಟ್ಟು, ಸುತ್ತ ಕೂರಲು ಮೆತ್ತೆಗಳನ್ನಿಟ್ಟಿದ್ದರು. ನೆಲದಲ್ಲಿ ಕೂತುಣ್ಣುವ ಅಭ್ಯಾಸವಿಲ್ಲದವರಿಗೆ ಪ್ರತ್ಯೇಕ ಟೇಬಲ್‌, ಕುರ್ಚಿ ವ್ಯವಸ್ಥೆಯೂ ಇತ್ತು. ರಾ ಬುತ್ತಿ ತಂದಿದ್ದೇನೆ ಎಂದು ನಮ್ಮೊಂದಿಗೆ ಊಟಕ್ಕೆ ಕೂರಲೊಪ್ಪಲಿಲ್ಲ. ಮೆನು ತಂದಿಟ್ಟ ಹಸನ್ಮುಖಿಗೆ ಲೋಕಲ್‌ ಸ್ಪೆಷಲ್‌ ಏನೆಂದು ಕೇಳಿದೆವು. ಆಕೆ, ಕಾಂಬೋಡಿಯಾದಲ್ಲಿ ʼಅಮೋಕ್‌ʼ ಬಹಳ ಪ್ರಸಿದ್ಧವಾದ ಖಾದ್ಯ, ಮೀನು, ಚಿಕನ್‌, ಮಟನ್‌ ಮೂರರಲ್ಲೂ ಸಿಗುತ್ತದೆ ಎಂದಳು. ನಾವು ಚಿಕನ್‌ ಅಮೋಕ್‌ ಆರ್ಡರ್‌ ಮಾಡಿ, ಸರ್ಪೆಂಟ್‌ಫಿಶ್ ಪ್ರೈ ತರಲು ಹೇಳಿದೆವು. ಹೋಟೆಲಲ್ಲಿ ಡ್ರಾಟ್‌ ಬಿಯರ್‌, ಬಾಟಲ್‌ ಬಿಯರ್‌‌ಎರಡೂ ಸಿಗುತ್ತಿತ್ತು. ಮೀನು ಪ್ರೈ ಜೊತೆಯಲ್ಲಿ ಕಾಂಬೋಡಿಯಾದ ಪ್ರಸಿದ್ಧ ʼಹನುಮಾನ್‌ʼ ಬಿಯರ್‌ ಆರ್ಡರ್‌ ಮಾಡಿದೆವು. ಆರ್ಡರ್‌ ತಂದಿಟ್ಟ ಹುಡುಗನಿಗೆ ಇಂಗ್ಲಿಷ್‌ ಗೊತ್ತಿರಲಿಲ್ಲ. ಹಳ್ಳಿಯಿಂದ ಬಂದಿದ್ದ ಆತ ಬಿಯರ್‌ ಗ್ಲಾಸಿಗೆ ಬಗ್ಗಿಸುವುದು, ಅಮೋಕನ್ನು ಹಂಚುವುದನ್ನು ಕಲಿತಿದ್ದ. ಆತನ ಒದ್ದಾಟ ನೋಡಲಾಗದೆ, ನಮಗೆ ನಾವೇ ಬಡಿಸಿಕೊಂಡೆವು. ನದಿ ನೀರಿನ ಸರ್ಪೆಂಟ್‌ ಫಿಶ್‌ ನಮ್ಮ ರಾವುಸ್‌ನಂತಿತ್ತು. ಸ್ಕಿನ್‌ ದಪ್ಪ, ಮುಳ್ಳು ಕಡಿಮೆ. ಕಡಿಮೆ ಮಸಾಲೆ ಹಾಕಿ ಚೆನ್ನಾಗಿ ಹುರಿದಿದ್ದುದರಿಂದ ರುಚಿಕರವಾಗಿತ್ತು. ಅನ್ನದಲ್ಲಿ ಚಿಕನ್‌ಬೆರೆಸಿ, ಸ್ವಲ್ಪ ಮಸಾಲೆ ಹಾಕಿ, ಹಬೆಯಲ್ಲಿ ಬೇಯಿಸಿದಂತಿದ್ದ ಅಮೋಕ್‌ಗೆ ವಿಶಿಷ್ಟ ರುಚಿಯಿತ್ತು. ಕಾಂಬೋಡಿಯಾ ಭತ್ತ ಬೆಳೆಯುವ ಪ್ರದೇಶವಾದ್ದರಿಂದ ಅನ್ನ ಪುಷ್ಕಳವಾಗಿ ಸಿಗುತ್ತಿತ್ತು. ಆದರೆ ಅಮೋಕ್‌ನಲ್ಲಿ ಅನ್ನ, ಮಸಾಲೆ ಕಡಿಮೆ ಇದ್ದು ತರಕಾರಿ ಹೆಚ್ಚಿತ್ತು. ನಮ್ಮ ಹೊಟೇಲುಗಳಿಗೆ ಹೋಲಿಸಿದರೆ ಬೆಲೆ ಕಡಿಮೆ. ಹೋಟೆಲಿನ ಸಿಬ್ಬಂದಿ ವರ್ತನೆ ಇಷ್ಟವಾಗಿತ್ತು. ಒಳ್ಳೆಯ ಹೋಟೆಲಿಗೆ ಕರೆದುಕೊಂಡು ಬಂದ ರಾಗೆ ಕೃತಜ್ಞತೆಗಳನ್ನು ಹೇಳಿದೆವು.

ರಾ ನದಿಯ ಪಕ್ಕದಲ್ಲೇ ಕಾರು ಚಲಾಯಿಸಿ, ಜೆಟ್ಟಿಯ ಪಕ್ಕದಲ್ಲಿ ನಮ್ಮನ್ನು ಇಳಿಸಿದ. ನದಿ ತೀರದಲ್ಲಿ ಹಲವು ಚಿಕ್ಕ, ದೊಡ್ಡ ಬೋಟುಗಳು ಲಂಗರು ಹಾಕಿದ್ದವು. ಎಲ್ಲ ಬೋಟುಗಳಿಗೂ ಮೋಟಾರು ಅಳವಡಿಸಿತ್ತು. ರಾ ಕಾರು ಪಾರ್ಕ್‌ಮಾಡಿ, ಅವನಿಗೂ ಸೇರಿಸಿ ಟಿಕೆಟ್‌ಕೌಂಟರಲ್ಲಿ ನಾಲ್ಕು ಟಿಕೇಟುಗಳನ್ನು ಕೊಂಡ. ಟಿಕೆಟ್‌ ಕೊಳ್ಳುವಾಗ ಮಿಣಿಮಿಣಿ ಕಣ್ಣಿನ ಯುವತಿಯೊಬ್ಬಳು ಪೋಟೋ ತೆಗೆಯುತ್ತಿದ್ದಳು. ನಮ್ಮನ್ನು ಕೇಳದೆ ಪೋಟೋ ಹಿಡಿಯುತ್ತಿರುವ ಬಗ್ಗೆ ಆಶ್ಚರ್ಯವಾಯಿತು. ನಮ್ಮ ಚಂದಕ್ಕೆ ಮಾರು ಹೋಗಿದ್ದಾಳೆಂದು ನಗುತ್ತಾ ಪೋಸ್ ಕೊಟ್ಟೆವು. ಜೆಟ್ಟಿಯಿಂದ ಬೋಟಿಗೆ ಹತ್ತುವ ಜಾಗದಲ್ಲಿ ಚಿತ್ರಗಳನ್ನು ಹರಡಿ ಕುಳಿತಿದ್ದ ಕಲಾವಿದನೊಬ್ಬ ಗಮನ ಸೆಳೆದ. ಕುತೂಹಲದಿಂದ ಚಿತ್ರಗಳನ್ನು ವೀಕ್ಷಿಸಿದೆವು. ರಾಮ, ಸೀತೆ, ಹನುಮಂತ, ಬುದ್ಧನ ಚಿತ್ರಗಳಲ್ಲದೆ ಗಿಡ ಮರಗಳ ಚಿತ್ರಗಳೂ ಇದ್ದವು. ಇವೆಲ್ಲ ಬಫೆಲ್ಲೋ ಸ್ಕಿನ್ನಿನ ಚಿತ್ರಗಳು, ಕಾಂಬೋಡಿಯಾದಲ್ಲಿ ಬಫೆಲ್ಲೋ, ಕ್ರೊಕಡೈಲ್‌ ಸ್ಕಿನ್ನಿಂದ ಮಾಡಿದ ಮಾಡಿದ ಕಲಾಕೃತಿಗಳು ಸಿಗುತ್ತವೆ ಎಂದ ರಾ.

ಜೆಟ್ಟಿಯಲ್ಲಿ ಇಬ್ಬರು ಮೂವರು ಕೂರುವ ದೋಣಿಗಳಲ್ಲದೆ, ಇಪ್ಪತ್ತು, ಮೂವತ್ತು ಪ್ರಯಾಣಿಕರು ಸಂಚರಿಸಬಹುದಾದ ದೊಡ್ಡ ಅಂತಸ್ತಿರುವ ದೊಡ್ಡ ಬೋಟುಗಳೂ ಇದ್ದವು. ಕೆಲವೇ ಪ್ರಯಾಣಿಕರಿದ್ದರು. ತಂಡಗಳಂತೂ ಇಲ್ಲವೇ ಇಲ್ಲ. ಬೋಟುಗಳೆಲ್ಲ ಖಾಲಿ ನಿಂತಿವೆಯಲ್ಲಾ, ರಜಾ ದಿನವೇ, ರಾಗೆ ಕೇಳಿದೆವು. ʼಮೊದಲೆಲ್ಲ ಬೋಟುಗಳಿಗೆ ಪುರುಸೊತ್ತೇ ಇರಲಿಲ್ಲ. ಕೋವಿಡ್‌ನಿಂದ ಎಲ್ಲಾ ಹಾಳಾಗಿದೆ. ಶೇಕಡಾ ಎಂಬತ್ತೈದರಷ್ಟು ಪ್ರವಾಸಿಗರು ಕಮ್ಮಿಯಾಗಿದ್ದಾರೆʼ ನಿಡುಸುಯ್ದ ರಾ. ರಾನನ್ನೂ ಸೇರಿಸಿ ಹತ್ತು ಸೀಟರಿನ ಯಾಂತ್ರಿಕ ಬೋಟಿನಲ್ಲಿ ನಾವು ನಾಲ್ಕು ಮಂದಿ. ರಾಗೆ ಬೋಟು ಚಾಲಕನ ಪರಿಚಯ ಇದ್ದಂತಿತ್ತು. ಪಕ್ಕದಲ್ಲಿ ಕೂತು ಖ್ಮೇರ್‌ ಬಾಷೆಯಲ್ಲಿ ಹರಟುತ್ತಿದ್ದ. ಬೋಟು ಟೋನ್ಲೆ ಸಾಪ್‌(ಶುಭ್ರ ನದಿ) ನದಿಯಲ್ಲಿ ಸಾಗುತ್ತಿತ್ತು. ಇಕ್ಕೆಲದಲ್ಲೂ ವಸತಿಗಳು ಕಾಣುತ್ತಿದ್ದವು. ನದಿ ನೀರಿನ ಮೇಲ್ಗಡೆ, ಹತ್ತು, ಹದಿನೈದು ಮೀಟರ್‌ ಎತ್ತರದಲ್ಲಿ ಮರ ಮತ್ತು ಬಿದಿರಿನ ಕಂಬಗಳನ್ನಾಧರಿಸಿ ಹಲಗೆಗಳಿಂದ ಮನೆಗಳನ್ನು ಕಟ್ಟಲಾಗಿತ್ತು. ದೋಣಿಯಿಂದ ಮನೆಗೆ ಹತ್ತಲು ಮರದ ಪಾವಟಿಕೆಗಳಿದ್ದವು. ಮನೆಯ ಹಜಾರ, ಕಿಟಿಕಿಗಳಿಗೆ ಅಲಂಕಾರಿಕ ವಸ್ತುಗಳನ್ನು ತೂಗು ಹಾಕಿರುವುದು ಕಾಣಿಸುತ್ತಿತ್ತು. ತುಂಬಿ ಹರಿಯುತ್ತಿದ್ದ ನದಿಯ ಹರವನ್ನು ನೋಡಿ, ನದಿಯ ಆಳವೆಷ್ಟಿರಬಹುದೆಂದು ರಾಗೆ ಕೇಳಿದೆ. ಆತ ಬೋಟು ಚಾಲಕನ ಹತ್ತಿರ ವಿಚಾರಿಸಿ, ಈಗ ಹದಿನೈದು ಅಡಿಗಳಿವೆಯಂತೆ, ಇಪ್ಪತ್ತಕ್ಕೂ ಏರುತ್ತದೆ ಎಂದ. ಮಳೆ ಹೆಚ್ಚಾಗಿ ನೀರಿನ ಮಟ್ಟ ಏರಿದರೆ ಕೆಳ ಮಟ್ಟದ ಮನೆಗಳಲ್ಲಿ ವಾಸಿಸುವವರನ್ನು ತಾತ್ಕಾಲಿಕವಾಗಿ ಎತ್ತರದ ಮನೆಗಳಿಗೆ ಕಳಿಸುತ್ತಾರೆಂದು ತಿಳಿಸಿದ.

ಬೋಟು ಮುಂದೆ ಹೋಗುತ್ತಿದ್ದಂತೆ, ಮನೆಗಳಿಗಿಂತ ದೊಡ್ಡದಾದ ಕಟ್ಟಡದ ಮುಂದೆ ʼಪೋಲಿಸ್‌ ಸ್ಟೇಷನ್ʼ ಎಂದು ಇಂಗ್ಲಿಷ್‌ನಲ್ಲಿ ಬರೆದಿದ್ದನ್ನು ಓದಿದೆ. “ತೇಲುವ ಸ್ಟೇಷನ್ನೂ ಇದೆಯಾ” ಆಶ್ಚರ್ಯದಿಂದ ಉದ್ಗರಿಸಿದೆ. ರಾ ಕೇಳಿಯೂ ಕೇಳಿಸದಂತೆ ಸುಮ್ಮನಿದ್ದ. ನದಿಯ ಎರಡೂ ಕಡೆ ಎವೆಯಿಕ್ಕದೆ ನೋಡುತ್ತಿದ್ದೆವು. ಚಿಕ್ಕ, ದೊಡ್ಡ ಕಟ್ಟಡಗಳು ಕಂಡು ಬರುತ್ತಿದ್ದವು. ಅವುಗಳಲ್ಲಿ ಜನರ ಚಲನವಲನವೂ ಕಂಡು ಬರುತ್ತಿತ್ತು. ಒಂದು ಕಡೆ ಬೊಟ್ಟು ಮಾಡಿ ”ನೋಡಿ, ಇದು ಆಸ್ಪತ್ರೆ, ಇಲ್ಲಿ ಶಾಲೆ ಕಾಣುತ್ತದೆ, ಇದು ಸೂಪರ್‌ಬಜಾರ್‌, ಇಲ್ಲಿ ದಿನ ಬಳಕೆ ಎಲ್ಲಾ ಸಾಮಾನುಗಳು ಸಿಗುತ್ತವೆ” ಎಂದ ರಾ, ಪೋಲಿಸ್‌ಸ್ಟೇಷನ್‌, ವಿಲೇಜ್‌ಆಫೀಸ್‌ ಎಲ್ಲವೂ ಇವೆ ಎಂದು ಮೌನ ಮುರಿದ. ಈ ಗ್ರಾಮದ ಹೆಸರು ಚಾಂಗ್‌ನೀಸ್‌, ಇಂತಹ ನೂರಾರು ತೇಲುವ ಗ್ರಾಮಗಳು ಟೋನ್ಲೆ ಸಾಪ್‌ ನದಿಯ ಮೇಲಿವೆ ಎಂದಾತ ವಿವರಿಸಿದ. ನಾವು ನೋಡಿದ ಚಾಂಗ್‌ನೀಸ್‌ನಲ್ಲಿ ಸಿನಿಮಾ ಸೆಟ್‌ನಂತೆ, ಒತ್ತೊತ್ತಾಗಿ ನೂರಾರು ತೇಲುವ ಮನೆಗಳಿದ್ದವು. ತೇಲು ಗ್ರಾಮ ನಿವಾಸಿಗಳಿಗೆ ಮೀನು ಮುಖ್ಯ ಆಹಾರ. ತೇಲುವ ತೋಟದಲ್ಲಿ ಅಷ್ಟಿಷ್ಟು ತರಕಾರಿ ಬೆಳೆಯುತ್ತಾರೆ, ಹಂದಿ, ಕೋಳಿ ಸಾಕುತ್ತಾರೆ. ಆದರೆ ಸರಿಯಾದ ಪೌಷ್ಟಿಕಾಂಶ ದೊರಕದೆ, ಸರಾಸರಿ ಆಯುಷ್ಯ ಕೇವಲ ಐವತ್ತೈದು ವರ್ಷ. ತೇಲುವ ಗ್ರಾಮಗಳ ನಿವಾಸಿಗಳಿಗೆ ನೆಲದ ಮೇಲಿನವರು ಅನ್ಯ ಜೀವಿಗಳು. ಕಾಂಬೋಡಿಯಾದ ಹಸಿವು ನೀಗುವುದು ತೇಲುವ ಗ್ರಾಮದವರು ಹಿಡಿದು, ಮಾರಾಟ ಮಾಡುವ ಮೀನಿನಿಂದ. ಆದರೆ ಅವರನ್ನು ಸಹಜೀವಿಗಳು ಎಂದವರು ಪರಿಗಣಿಸುವುದಿಲ್ಲ.

19 ಮತ್ತು 20ನೇ ಶತಮಾನದಲ್ಲಿ ಕಾಂಬೋಡಿಯಾ ಫ್ರೆಂಚರ ಆಡಳಿತಕ್ಕೊಳಪಟ್ಟಿದ್ದಾಗ, ವಿಯಟ್ನಾಮಿನ ಜನರು ಕಾಂಬೋಡಿಯಾದಲ್ಲಿ ನೆಲಸಿದ್ದರು. 70ರ ದಶಕದಲ್ಲಿ ಕಾಂಬೋಡಿಯಾ ನಿರಂಕುಶ ಅಧಿಕಾರಕ್ಕೆ ಒಳಪಟ್ಟು ಜನಾಂಗೀಯ ಹತ್ಯೆಗಳು ಎಗ್ಗಿಲ್ಲದಂತೆ ನಡೆದವು. ಲಕ್ಷಾಂತರ ವಿಯಟ್ನಾಮಿಯರು ಪ್ರಾಣ ಕಳೆದುಕೊಂಡರು. ಕಾಂಬೋಡಿಯಾ, ವಿಯಟ್ನಾಮ್‌ ಎರಡೂ ದೇಶಗಳವರೂ ತಮ್ಮವರೆಂದು ಅವರನ್ನು ಪರಿಗಣಿಸಲಿಲ್ಲ. ನೆಲದ ಮೇಲೆ ಬದುಕುವ ಹಕ್ಕಿಲ್ಲದವರಿಗೆ ನೀರೇ ಆಶ್ರಯವಾಯಿತು, ಮೀನು ಆಹಾರವಾಯಿತು. ಕಾಲಕ್ರಮದಲ್ಲಿ ನೀರಿನ ಮೇಲೆ ಗ್ರಾಮಗಳು ಹುಟ್ಟಿಕೊಂಡವು. ರಾ “ನಮಗಿಂತ ಅವರೇ ವಾಸಿ” ಎಂದು ಹೇಳಿದ. ಕಾಂಬೋಡಿಯಾ ನಾಗರಿಕನಾದ ರಾ, ಸರಕಾರ ನಾಗರಿಕರೆಂದು ಮಾನ್ಯ ಮಾಡದೆ, ತೇಲುವ ಗ್ರಾಮಗಳ ನಿವಾಸಿಗಳು ಅನುಭವಿಸುತ್ತಿರುವ ಕಷ್ಟಗಳ ಅರಿವಿದ್ದೂ, ಹೀಗೇಕೆ ಹೇಳುತ್ತಿದ್ದಾನೆಂದು ತಿಳಿಯಲಿಲ್ಲ. “ಏಕೆ” ಎನ್ನುವಂತೆ ನೋಡಿದೆ. ಕಾಂಬೋಡಿಯಾದಲ್ಲಿ ಕಡು ಬಡತನವಿದೆ. ಕೋವಿಡ್‌ ನಂತರ ಪ್ರವಾಸಿಗರೂ ಇಲ್ಲದೆ ಜನ ತುಂಬಾ ಕಷ್ಟ ಪಡುತ್ತಿದ್ದಾರೆ, ಇಲ್ಲಿ ತಿನ್ನಲು ಮೀನಾದರೂ ಇದೆ ಎಂದು ಬೇಸರದಿಂದ ಹೇಳಿ, ತೇಲುವ ಗ್ರಾಮಗಳಿಗೆ ಕೋವಿಡ್‌ ಬಾಧಿಸಿರಲಿಲ್ಲ ಎಂದು ನಮ್ಮನ್ನು ಅಚ್ಚರಿಗೊಳಿಸಿದ. ವಯಸ್ಸಾಗುವ ಮುಂಚೆಯೇ ಸ್ವಾಭಾವಿಕ ಕಾರಣಗಳಿಂದ ಸಾವನ್ನಪ್ಪುವ ಅವರ ಗೊಡವೆಗೆ ಕೋವಿಡ್‌ಹೋಗಿರಲಿಕ್ಕಿಲ್ಲ.

ನಮ್ಮ ಬೋಟ್‌ ʼರೆಸ್ಟೋರೆಂಟ್‌ʼ ಎಂದು ಬೋರ್ಡ್‌ ಹಾಕಿದ, ನೀರ ನಡುವಿನ ಕಟ್ಟಡಕ್ಕೆ ಒರಗಿ ನಿಂತಿತು. ರಾ ಎಚ್ಚರದಿಂದ ಮೆಟ್ಟಲು ಹತ್ತಿಸಿ, ”ಇಲ್ಲಿ ಕುಡಿಯಲು, ತಿನ್ನಲು ಎಲ್ಲವೂ ಸಿಗುತ್ತದೆ” ಎಂದ. ಇಂಥಾ ರೆಸ್ಟೋರೆಂಟ್‌ಗಳಲ್ಲಿ ವಿಯಟ್ನಾಂ ಖಾದ್ಯ ಬಹಳ ಚೆನ್ನಾಗಿರುತ್ತದೆಯಂತೆ. ಮಧ್ಯಾಹ್ನ ಹೊಟ್ಟೆ ತುಂಬಾ ತಿಂದ ನಮಗೆ ಹಸಿವಿರಲಿಲ್ಲ. ಭಾರಿ ಗಾತ್ರದ ಎಳನೀರುಗಳಿದ್ದವು. ಅದನ್ನು ಕುಡಿದು ಬಾಯಾರಿಕೆ ತಣಿಸಿದೆವು. ರೆಸ್ಟೋರೆಂಟಿನ ಮಹಡಿಯ ಮೆಟ್ಟಿಲುಗಳನ್ನು ಹತ್ತಿದರೆ ವಿಶಾಲವಾದ ಸರೋವರ ಕಾಣಿಸಿತು. ಅದುವೇ ಟೋನ್ಲೆ ಸಾಪ್‌ ಲೇಕ್‌, ಸೌತ್‌ ಈಸ್ಟ್‌ ಏಷ್ಯಾದ ಅತಿ ದೊಡ್ಡ ಸಿಹಿನೀರಿನ ಸರೋವರ. ʼಸರೋವರಕ್ಕೆ ಹೋಗುವುದಿಲ್ಲವೇʼ ಕುತೂಹಲ ತಡೆಯಲಾರದೆ ಕೇಳಿದೆ. ಬನ್ನಿ, ಬನ್ನಿ ಇನ್ನೂ ನೋಡುವುದಿದೆ ಎಂದು ರಾ ಕೆಳಗಿಳಿಸಿದ. ನಮ್ಮನ್ನು ನೇರವಾಗಿ ʼಮಕರʼಗಳ ಬಾವಿಗೆ ಇಳಿಸಿಬಿಟ್ಟ. ಏಳೆಂಟು ಮೊಸಳೆಗಳು ಬಾಯ್ದೆರೆದು ನುಂಗಲು ಅಣಿಯಾಗಿದ್ದವು. ಬೆರಗಿನಿಂದ “ಇದೇನೆಂದು?” ಕೇಳಿದೆವು. ಮೊಸಳೆಯ ಚರ್ಮಕ್ಕೆ, ಮಾಂಸಕ್ಕೆ ಬಹಳ ಬೇಡಿಕೆಯಂತೆ. ಬಾವಿಯಂತೆ ಕಟ್ಟೆ ಕಟ್ಟಿ, ಮೊಸಳೆಗಳನ್ನು ಸಾಕಿ ಮಾರಾಟ ಮಾಡುತ್ತಾರೆ ಎಂದಾತ ಹೇಳಿದಾಗ ಅವುಗಳ ಉಗ್ರ ಕೋಪಕ್ಕೆ ಕಾರಣ ಹೊಳೆಯಿತು. ರೆಸ್ಟೋರೆಂಟಿನ ಒಂದು ಪಾರ್ಶ್ವದಲ್ಲಿ ಹತ್ತಿಪ್ಪತ್ತು ನಾಡ ದೋಣಿಗಳನ್ನು ನಿಲ್ಲಿಸಲಾಗಿತ್ತು.

ಎಲ್ಲಾ ದೋಣಿಗಳಲ್ಲೂ ಮಹಿಳೆಯರಿದ್ದರು. ಎಲ್ಲರ ಕಣ್ಣುಗಳು ನಮ್ಮ ಮೇಲೆ ನೆಟ್ಟಿತ್ತು. ತೇಲುವ ಗ್ರಾಮಗಳ ನಡುವೆ ಕಾಂಡ್ಲಾ (ಮ್ಯಾಂಗ್ರೋವ್) ಕಾಡುಗಳಿದ್ದವು. ದೊಡ್ಡ ಬೋಟುಗಳು ಕಾಂಡ್ಲಾ ಕಾಡುಗಳೊಳಗೆ ಸಂಚರಿಸಲಾರವು. ಇಬ್ಬರು, ಮೂವರು ಪ್ರಯಾಣಿಕರನ್ನು ದೋಣಿಗಳಲ್ಲಿ ಸುತ್ತಿಸುತ್ತಾರೆ. ಗಂಡಸರು ಮೀನು ಹಿಡಿಯಲು ಹೋಗುವುದರಿಂದ ದೋಣಿಗಳನ್ನು ನಡೆಸುವ ಕೆಲಸ ಮಹಿಳೆಯರದ್ದೇ. ಪ್ರಯಾಣಿಕರಿಲ್ಲದೆ ಅವರೆಲ್ಲ ಕಂಗಾಲಾಗಿದ್ದರು. ಬನ್ನಿ ಎಂದು ಕರೆಯುತ್ತಿರಲಿಲ್ಲ. ಬಹುಶಃ ಭಾಷೆಯ ಸಮಸ್ಯೆ ಇರಬಹುದು. ಮಳೆ ಬರುವ ಸೂಚನೆಗಳಿದ್ದುದರಿಂದ ನಾವು ದೋಣಿಗಳಲ್ಲಿ ಕೂರುವ ಸಾಹಸ ಮಾಡಲಿಲ್ಲ. ಸರೋವರವನ್ನು ತಲಪುವ ಸಮಯಕ್ಕೆ ಮೋಡಗಳು ದಟ್ಟೈಸುತ್ತಿದ್ದವು. ಅಸ್ತಮಾನಕ್ಕೆ ಸಮಯವಿದ್ದುದರಿಂದ ಬೆಳಕಿತ್ತು. ಎತ್ತ ನೋಡಿದರೂ ನೀರು. ಕೆಲವಾರು ದಿನಗಳಿಂದ ವಿಪರೀತ ಮಳೆಯಾಗಿದ್ದರಿಂದ ಅಲೆಗಳ ಅಬ್ಬರ ಹೆಚ್ಚಿತ್ತು. ಕಡಲಿನ ನಡುವಿನಲ್ಲಿದ್ದ ಅನುಭವ. ”ವರ್ಷ ಪೂರ್ತಿ ಲೇಕ್‌ಹೀಗೇ ಇರುತ್ತದೆಯೇ?” ಅಪಾರವಾದ ಜಲರಾಶಿಯನ್ನು ನೋಡುತ್ತಾ ವಿಸ್ಮಯದಿಂದ ಕೇಳಿದೆ.

ಮಳೆಗಾಲದಲ್ಲಿ ಪರ್ವತಗಳಿಂದ ಹರಿದು ಬರುವ ನೀರು ಟೋನ್ಲೆ ಸಾಪ್‌ಲೇಕನ್ನು ಸೇರುತ್ತದೆ. ಗರಿಷ್ಟ ಮಟ್ಟ ತಲಪಿದ ನಂತರ ಟೋನ್ಲೆ ಸಾಪ್‌ ಲೇಕಿನ ನೀರು, ಟೋನ್ಲೆ ಸಾಪ್‌ನದಿಯ ಮೂಲಕ ಏಷ್ಯಾದ ಮೂರನೇ ಅತಿ ದೊಡ್ಡ ನದಿಯಾದ ಮೆಕಾಂಗ್‌ ನದಿಯನ್ನು ಸೇರುತ್ತದೆ. ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆಯಾಗಿ ನೀರಿನ ಮಟ್ಟ ತಗ್ಗಿದಾಗ ಟೋನ್ಲೆ ಸಾಪ್ ನದಿ ಹಿಮ್ಮುಖವಾಗಿ ಹರಿಯುತ್ತದೆ. ಆ ಮೂಲಕ ಮೆಕಾಂಗ್‌ ನದಿ ಬೇಸಿಗೆಯಲ್ಲೂ ಸರೋವರಕ್ಕೆ ನೀರುಣಿಸುತ್ತದೆ. ಇದು ಬ್ಯಾಂಕಲ್ಲಿ ಹಣವಿಟ್ಟು, ಖರ್ಚಿಗೆ ಬೇಕಾದಾಗ ಹಿಂದೆ ಪಡೆಯುವ ರೀತಿಯಲ್ಲಿದೆ ಎಂದನ್ನಿಸಿತು. ಬ್ಯಾಂಕ್‌ ಉದ್ಯೋಗಿಯಾದ ನಾನಿದನ್ನು ಹೇಳಿದಾಗ, ಹೋದಲ್ಲೂ ಲೆಕ್ಕಾಚಾರ ಬಿಡುವುದಿಲ್ಲ ಎಂದು ಎಲ್ಲರೂ ನಕ್ಕರು. ಅದೇನೇ ಇರಲಿ, ಹರಿದ ದಾರಿಯಲ್ಲೆ ಹಿಂದೆ ಹರಿಯುವ ನದಿಯೂ ಇದೆ ಎಂದು ತಿಳಿಯಿತು. ವಿಸ್ಮಯಗಳಿಗೆ ಈ ಜಗತ್ತಿನಲ್ಲಿ ಕೊನೆಯಿದೆಯೇ? ಹವಾಮಾನ ಬದಲಾವಣೆಯಿಂದಾಗಿ ಈಗೀಗ ಟೋನ್ಲೆ ಸಾಪ್‌ ನದಿಯ ಹರಿವಿನ ಪ್ರಮಾಣದಲ್ಲಿ ಇಳಿಮುಖವಾಗಿದೆ, ಟೋನ್ಲೆ ಸಾಪ್‌ ಸರೋವರದಲ್ಲಿಯೂ ನೀರಿನ ಮಟ್ಟ ತಗ್ಗುತ್ತಿದ್ದು, ಹಿಂದಿನಷ್ಟು ಮೀನು ದೊರಕುತ್ತಿಲ್ಲವೆಂದು ತಿಳಿದು ಬೇಸರವಾಯಿತು. ಸರೋವರದಲ್ಲಿ ಯಾಂತ್ರೀಕೃತ ಬೋಟು ಸುತ್ತು ಹೊಡೆಯುತ್ತಿತ್ತು. “ಧೈರ್ಯವಿದ್ದವರು ಬೋಟ್‌ ಓಡಿಸಿ” ಎಂದು ಸವಾಲು ಹಾಕಿದ ರಾ. ಮಗರಾಯ ಹಾರಿ ಹೋಗಿ ಸ್ಟೇರಿಂಗ್‌ ಹಿಡಿದ. ಬಳಿಕ ಅಳಿಯನೂ ಒಂದೆರಡು ಸುತ್ತು ಬೋಟು ಓಡಿಸಿದ. ಪುಕ್ಕಲ ಎಂದುಕೊಳ್ಳಬಾರದೆಂದು “ಬೆಂಗಳೂರಿನ ಟ್ರಾಫಿಕ್‌ಲ್ಲಿ ಕಾರು ಬಿಟ್ಟವನಿಗೆ, ನೀರಲ್ಲಿ ಬಿಡುವುದರಲ್ಲಿ ಮಜಾ ಇಲ್ಲ” ಎಂದು ಹೇಳಿ ಮರ್ಯಾದೆ ಕಾಪಾಡಿಕೊಂಡೆ. ದಪ್ಪ ದಪ್ಪ ಮಳೆ ಹನಿಗಳು ಬೀಳುತ್ತಿದ್ದವು. ಮಳೆ ಜೋರಾದರೆ ತೊಂದರೆ ಎಂದು ಎಚ್ಚರಿಸಿ, ಬೋಟು ಚಾಲಕ ನಮ್ಮ ಸಾಹಸಕ್ಕೆ ಕೊನೆ ಹೇಳಿದ. ಸರೋವರದಿಂದ ವಾಪಾಸು ಬರುವಾಗ ಮನೆಗಳ ಹಜಾರಗಳಲ್ಲಿ, ಮೆಟ್ಟಿಲುಗಳಲ್ಲಿ ಸಣ್ಣ, ಸಣ್ಣ ಮಕ್ಕಳು ಆಟವಾಡುತ್ತಿರುವುದನ್ನು ಕಂಡೆವು. ದೊಡ್ಡವರು ಇದ್ದಂತಿರಲಿಲ್ಲ. ”ಅವರೆಲ್ಲ ಮೀನು ಹಿಡಿಯಲು ಹೋಗಿರುತ್ತಾರೆ, ವಾಪಾಸು ಬರುವುದು ಕೆಲವೊಮ್ಮೆ ವಾರದ ಮೇಲಾಗುತ್ತದೆ”ಎಂದ ರಾ, ಮಕ್ಕಳಿಗೆ ಶಿಶುವಿಹಾರಗಳು, ಶಾಲೆಗಳು ಇವೆ. ಮಕ್ಕಳು ತಾವೇ ದೋಣಿ ನಡೆಸಿಕೊಂಡು ಶಾಲೆಗೆ ಹೋಗುತ್ತಾರೆ ಎಂದ.

ಬೋಟಿನ ಚಾಲಕ, ಐದು ವರ್ಷದೊಳಗೆ ಸಾಯುವ ಮಕ್ಕಳ ಸಂಖ್ಯೆ ಜಾಸ್ತಿ, ಈಜು, ದೋಣಿ ನಡೆಸಲು ಕಲಿತರೆ ಹೇಗೋ ಬದುಕಿಕೊಳ್ಳುತ್ತಾರೆ. ಮೀನು ಹಿಡಿಯಲು ಹೋದವರು ವಾಪಾಸಾಗದೆ, ನೀರು ಪಾಲಾಗುವುದೂ ಇದೆ. ಅಂತವರ ಮಕ್ಕಳಿಗೆ ಅನಾಥಾಶ್ರಮವೂ ಇದೆಯೆಂದು ತಿಳಿಸಿದ. ಕತ್ತಲಾವರಿಸುತ್ತಿತ್ತು. ಮೀನು ಹಿಡಿಯಲು ಹೋದ ದೋಣಿಗಳು ಹಿಂದಿರುಗುತ್ತಿದ್ದವು. ಮೀನುಗಳನ್ನು ತೇಲುವ ಮಾರ್ಕೇಟಲ್ಲಿ ಸುರಿಯುತ್ತಿದ್ದರು. ಇಲ್ಲಿ ದೊರಕುವ ಇನ್ನೂರಕ್ಕೆ ಹೆಚ್ಚು ಬಗೆಯ ಮೀನುಗಳಿಗೆ ಅಪಾರ ಬೇಡಿಕೆಯಿದೆ. ಟೋನ್ಲೆ ಸಾಪ್‌ ಸರೋವರ ವರ್ಷಕ್ಕೆ ನಾಲ್ಕು ಲಕ್ಷ ಟನ್‌ ಮೀನು ಪೂರೈಸಿ, ಕಾಂಬೋಡಿಯಾದ ಹಸಿವನ್ನು ಸಾಕಷ್ಟು ನೀಗಿಸುತ್ತದೆ. ಗೋಪುರದಂತಹ ಎತ್ತರದ ಕಟ್ಟಡಗಳನ್ನು ತೋರಿಸಿ ಬೌದ್ಧ ಮಾನೆಸ್ಟ್ರಿ ಎಂದ ರಾ. ಚರ್ಚನ್ನೂ ತೋರಿಸಿದ. ಅಕ್ಕ ಪಕ್ಕದ ದೇಶದವರಿಗೆ ಬೇಡವಾದವರು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೂ, ಮೀನು ತಿನ್ನಿಸುವ ದೇವನಿಗೆ ನೀರಲ್ಲಿ ನೆಲೆ ಇತ್ತು. ಕ್ಷೀರಸಾಗರವಾಸಿಯಂತೆ, ಟೋನ್ಲೆ ಸಾಪ್‌ವಾಸಿ ದೇವರು. ಮಿಣಿ, ಮಿಣಿ ಕಣ್ಣಿನ ಯುವತಿ ದಡದಲ್ಲಿ ನಮ್ಮ ಪೋಟೋಗಳನ್ನು ಹಿಡಿದು ನಿಂತಿದ್ದಳು. ನಮ್ಮನ್ನು ಕೇಳದೆ ಪೋಟೋ ತೆಗೆದು, ಮಾರಾಟ ಮಾಡುತ್ತಿರುವ ದಾರ್ಷ್ಟಕ್ಕೆ ಸಿಟ್ಟು ಬಂದರೂ ಚೆಲುವೆಯನ್ನು ನೋಯಿಸಲಿಚ್ಚಿಸದೆ ಒಂದನ್ನು ಕೊಂಡೆವು. ಮಳೆ ಬಿರುಸಾಗಿತ್ತು. ನಾವೂ ಒದ್ದೆಯಾಗಿದ್ದೆವು. ಊರ ಹಸಿವನ್ನು ಹಿಂಗಿಸುವ, ಹಸಿದುಣ್ಣುವ ತೇಲುವ ಗ್ರಾಮವಾಸಿಗಳಿಗೆ ಕೃತಜ್ಞತೆ ಹೇಳುವಂತೆ ಕಣ್ಣುಗಳು ತೊಯ್ದಿದ್ದವು. ನದಿ ದಾಟಿಸಿದ ಅಂಬಿಗನಿಗೆ ಖ್ಮೇರ್‌ನಲ್ಲಿ ಸೂಸೆಡೈ (ಧನ್ಯವಾದ) ಹೇಳಿದೆವು.

-ಎಂ ನಾಗರಾಜ ಶೆಟ್ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Gopala Krishna Baliga
Gopala Krishna Baliga
1 year ago

ಚೆನ್ನಾಗಿದೆ ನಾಗರಾಜ ಶೆಟ್ರೇ. “ತೇಲುವ” ಹಳ್ಳಿಗಳ ಬಗ್ಗೆ ಚೆನ್ನಾಗಿ ವಿವರಿಸಿ ಬರೆದಿದ್ದೀರಿ.

2
0
Would love your thoughts, please comment.x
()
x