ಡಾ.ಜಿ.ಎನ್.ಉಪಾಧ್ಯರ ಸಮೀಕ್ಷೆಯಲ್ಲರಳಿದ ಡಾ.ಜನಾರ್ದನ ಭಟ್ ಅವರ “ವಾಙ್ಞಯ ವಿವೇಕ”: ಅನುಸೂಯ ಯತೀಶ್

ಡಾ. ಜನಾರ್ದನ ಭಟ್ ನಮ್ಮೊಳಗಿನ ಸಂವೇದನಾಶೀಲ ಲೇಖಕರು. ಇವರು ಯಾವುದೇ ಸಾಹಿತ್ಯ ಪ್ರಕಾರಗಳಿಗೆ ಅಂಟಿಕೊಳ್ಳದೆ ಸೃಜನ ಮತ್ತು ಸೃಜನೇತರ ಎರಡು ಪ್ರಕಾರಗಳಲ್ಲೂ ತಮ್ಮನ್ನು ಅವಿರತ ತೊಡಗಿಸಿಕೊಂಡು ಧಣಿವರಿಯದೆ ಸಾಹಿತ್ಯಾರಾಧನೆಯಲ್ಲಿ ತೊಡಗಿರುವ ಬಹುಶ್ರುತ ವಿದ್ವಾಂಸರು. ಬಹುಭಾಷಾ ಪ್ರವೀಣರಾದ ಇವರು ಕಥೆ, ಕಾದಂಬರಿ, ವೈಚಾರಿಕ ಕೃತಿಗಳು, ಅಂಕಣಗಳು, ವಿಮರ್ಶೆ, ಮಕ್ಕಳ ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ ರಚನೆಯ ಜೊತೆಗೆ ಹಲವಾರು ಕೃತಿಗಳ ಸಂಪಾದನೆ ಕೂಡ ಮಾಡಿ ಆಡು ಮುಟ್ಟದ ಸೊಪ್ಪಿಲ್ಲ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಸಾಹಿತ್ಯದ ಮೇರು ಪ್ರಕಾರಗಳಲ್ಲಿ ಕೃಷಿ ಮಾಡುತ್ತಾ ಈಗಾಗಲೇ 87 ಸಾರಯುಕ್ತವಾದ ಆಕರ ಗ್ರಂಥಗಳಂತಹ ಕೃತಿಗಳನ್ನು ರಚಿಸಿ ಜನಮನ್ನಣೆ ಪಡೆದಿದ್ದಾರೆ.

ಇಂತಹ ಅದ್ಭುತ ಸಾಹಿತ್ಯ ಸಾಧಕರ ಸಮಗ್ರ ಸಾಹಿತ್ಯವನ್ನು ಕುರಿತು ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆದ ಡಾ. ಜಿ ಎನ್ ಉಪಾಧ್ಯರವರು ಸಮೀಕ್ಷೆ ನಡೆಸಿರುವುದು ಸ್ತುತ್ಯಾರ್ಹ ಸಂಗತಿ. ಒಂದೆ ಜಿಲ್ಲೆಯವರಾದ ಇವರಿಬ್ಬರ ಒಡನಾಟ ಸಾಹಿತ್ಯದ ಮುಖಾಮುಖಿ ಎಲ್ಲವೂ ಜನಾರ್ದನ ಭಟ್ ಅವರ ಸಾಹಿತ್ಯದ ಆಳ ವಿಸ್ತಾರವನ್ನ ಸುಲಭವಾಗಿ ಗ್ರಹಿಸಲು ನೆರವಾಗಿದೆ. ಡಾ. ಜಿ ಎನ್ ಉಪಾಧ್ಯರವರು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಪುಸ್ತಕ ಅವಲೋಕನದ ವಿಮರ್ಶಕರಾಗಿ ಅನುಭವ ಪಡೆದವರು. ತಮ್ಮ ವಿಶಿಷ್ಟ ವಿಮರ್ಶಾ ಶೈಲಿಯ ಮೂಲಕ ಜನಾರ್ದನ ಭಟ್ ರವರಿಂದ ಕನ್ನಡ ವಾಙ್ಞಯಕ್ಕೆ ದೊರೆತ ಕೊಡುಗೆಯನ್ನು ವಿಶ್ಲೇಷಿಸಿದ್ದಾರೆ. ಉಪಾಧ್ಯ ಅವರು ಎಂ.ಎ ಪದವಿಯಲ್ಲಿ ಮೊದಲ ರ್ಯಾಂಕ್ ನೊಂದಿಗೆ ವರದರಾಜ ಆದ್ಯ ಬಂಗಾರದ ಪದಕ ಗಳಿಸಿದ ಪ್ರತಿಭಾಶಾಲಿ. ಸಾಹಿತ್ಯದ ವಿದ್ಯಾರ್ಥಿಯಾಗಿ, ಕನ್ನಡ ಸಾಹಿತ್ಯ ಸಾಗರದಲ್ಲಿ ಸುಲಭವಾಗಿ ಈಜುವ ಕಲೆಯನ್ನು ಕರಗತ ಮಾಡಿಕೊಂಡವರು. ಇವರು ಈಗಾಗಲೇ 70 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದು ಇವರ ಅನುಭವ ಮತ್ತು ಸಾಹಿತ್ಯದರಿವು ಜನಾರ್ದನ ಭಟ್ ರವರ ಬರಹ, ಶೈಲಿ, ವಸ್ತು, ನಿರೂಪಣೆ, ಅಭಿವ್ಯಕ್ತಿ, ಬದುಕು, ಬರಹದ ಶೈಲಿ ಕುರಿತಾದ ಚಿತ್ರಣವನ್ನು ವಸ್ತುನಿಷ್ಠವಾಗಿ ತೆರೆದಿಡಲು ಸಾಧ್ಯವಾಗಿದೆ.

ಜನಾರ್ದನ ಭಟ್ ಅವರ ಜೀವನ ಮತ್ತು ಸಾಧನೆಯ ಮಜಲುಗಳನ್ನ, ಲೇಖಕರ ಮನದಾಳದ ಮಾತನ್ನ ಹೆಕ್ಕಿ ತೆಗೆಯುವ ಸಂವಾದ ನಡೆಸಿ ಕಾದಂಬರಿಕಾರರಾಗಿ ಭಟ್ ಅವರು ಸೈ ಎನಿಸಿಕೊಂಡ ಬಗೆ, ಕನ್ನಡ ವಿಮರ್ಶೆಗೆ ಬಟ್ ಅವರ ಕೊಡುಗೆ, ಭಿನ್ನಪರಿಯ ಕಥೆಗಾರರಾಗಿ ಬೆಳೆದ ಪರಿ, ಭಾಷಾಂತರಕಾರರಾಗಿ ಮಿಂಚಿದ ಬಗೆ, ಮಾದರಿ ಕೃತಿ ಸಂಪಾದನಾ ಕಾರ್ಯಗಳ ಸಮಗ್ರ ಸಾಹಿತ್ಯವನ್ನು ವಿಮರ್ಶಿಸುತ್ತಾ ಡಾ.ಜನಾರ್ದನ ಭಟ್ ಅವರ ಜ್ಞಾನ, ತಿಳುವಳಿಕೆ, ಸೃಜನಶೀಲತೆ, ವೈಚಾರಿಕತೆ, ಅಧ್ಯಯನಶೀಲತೆ, ಕ್ರಿಯಾಶೀಲತೆಗಳನ್ನು ಕುಲಂಕುಶವಾಗಿ ಚರ್ಚಿಸುತ್ತಾ ಕನ್ನಡ ಸಾಹಿತ್ಯ ಜಗತ್ತು ಮತ್ತು ಸಾಂಸ್ಕೃತಿಕ ಲೋಕಕ್ಕೆ ಇವರ ಕೊಡುಗೆಗಳನ್ನು ಪರಿಚಯಿಸುತ್ತಾ ಸಾಗಿದ್ದಾರೆ.

ಡಾ. ಜಿ ಎನ್ ಉಪಾಧ್ಯರವರು ರಾಚನಿಕ ಚೌಕಟ್ಟಿನ ಅಡಿಯಲ್ಲಿ ಈ “ವಾಙ್ಞಯ ವಿವೇಕ” ಕೃತಿಯನ್ನು ರಚಿಸಿದ್ದು ಒಟ್ಟು ಎಂಟು ಅಧ್ಯಾಯಗಳು ಮತ್ತು ಎರಡು ಅನುಬಂಧಗಳನ್ನು ಒಳಗೊಂಡಿವೆ. ಭಟ್ ರವರ ಈ ವಾಙ್ಞಯ ವಿವೇಕ ಕೃತಿ ಅಧ್ಯಯನ ಯೋಗ್ಯ ಸಂಶೋಧನಾ ಗ್ರಂಥವಾಗಿದೆ. ನಾಲ್ಕು ದಶಕಗಳ ಕಾಲದಲ್ಲಿನ ಸಾಹಿತ್ಯದ ಸ್ಥಿತ್ಯಂತರ ಬದಲಾವಣೆಗಳನ್ನ ಇದು ಸಮಗ್ರವಾಗಿ ಕಟ್ಟಿಕೊಡುತ್ತದೆ. ಅವರ ಬಾಲ್ಯ, ಬದುಕು, ಬರಹದ ಶಕ್ತಿಯನ್ನ ಸವಿವರವಾಗಿ ಸಾಹಿತ್ಯದ ಆವರಣಕ್ಕೆ ತಂದು ಓದುಗರಿಗೆ ಮುಟ್ಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಕಾಣುತ್ತದೆ. ಹೆಸರು, ಕೀರ್ತಿ, ಪ್ರತಿಷ್ಠೆ, ಬಹುಮಾನ, ಪ್ರಶಸ್ತಿಗಳ ಹಿಂದೆ ಓಡದೆ ಸರಳ ಸಜ್ಜನಿಕೆಯ ನಡೆಯನ್ನ ರೂಢಿಸಿಕೊಂಡು ಗಟ್ಟಿತನದ ಬರಹದ ಮೂಲಕ ಸದ್ದು ಗದ್ದಲವಿಲ್ಲದೆ ಸಾಹಿತ್ಯದೆತ್ತರಕ್ಕೆ ಬೆಳೆದು ಮನೆ ಮನ ಮುಟ್ಟಿದ ಸಾಂಪ್ರತ ಕನ್ನಡದ ಬರಹಗಾರರೆಂದರೆ ಡಾ. ಜನಾರ್ದನ ಭಟ್ ಅವರು.

ಜಿ.ಎನ್. ಉಪಾಧ್ಯರವರು ಈ ಕೃತಿ ರಚನೆಗೆ ಮಾಡಿರುವ ಸಿದ್ಧತೆ ಅನನ್ಯವಾದದು. ಜನಾರ್ದನ ಭಟ್ ಅವರ ಎಲ್ಲಾ ಕೃತಿಗಳನ್ನು ಓದುತ್ತಾ, ಅದರೊಳಗಿನ ಸತ್ವವನ್ನು ಹೀರಿಕೊಂಡು ತಮ್ಮ ಮನೋಜ್ಞ ನಿರೂಪಣೆ ಮೂಲಕ ಅವರ ಸಮಗ್ರ ಸಾಹಿತ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಒಬ್ಬರ ಸಾಹಿತ್ಯವನ್ನು ಅದೇ ನೆಲೆಯಲ್ಲಿ ನಿಲ್ಲಬಹುದಾದ ಮತ್ತೊಬ್ಬ ಸಾಹಿತಿ ಅವಲೋಕಿಸುವುದು ಸುಲಭದ ಮಾತಲ್ಲ. ಅಲ್ಲಿ ಅವರ ಬದ್ಧತೆ, ನಿಷ್ಠೆ ಮುಖ್ಯ ಪಾತ್ರ ವಹಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಉಪಾಧ್ಯ ಅವರು ಅಭಿನಂದನಾರ್ಹರು. ಭಟ್ ಅವರ ಅಷ್ಟು ಕೃತಿಗಳ ಅಧ್ಯಯನ ನಡೆಸಿ ಅದರ ವಿಶಿಷ್ಟತೆಗಳನ್ನು ತೆರೆದಿಡುವುದು ಒಂದು ದೊಡ್ಡ ಸವಾಲೇ ಸರಿ. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ಪರಿ ಈ ಕೃತಿಯಲ್ಲಿ ವ್ಯಕ್ತವಾಗಿದೆ.

ಈ ವಾಙ್ಞಯ ವಿವೇಕ ಕೃತಿಯನ್ನ ಓದುತ್ತಾ ಹೋದಂತೆ ಡಾ. ಜನಾರ್ದನ ಭಟ್ ಅವರ ಸಾಹಿತ್ಯ ಸಾಧನೆಯು ಓದುಗರನ್ನ ಬೆರಗಿನೊಂದಿಗೆ ಬೆಸೆದು, ಸೊಬಗಿನಲ್ಲಿ ಬಂಧಿಸಿ ಹೊಸ ಮತ್ತು ಒಳಾಂತರ ಬಗೆದಿಡುವ ಪ್ರಬಲವಾದ ಕೃತಿ ಎನಿಸುತ್ತದೆ. ಮನಸೆಳೆವ ಅದ್ಬುತ ಪದ ಭಾವಗಳಲ್ಲಿ ಸುಂದರವಾದ ಸುಲಲಿತವಾದ ನಿರೂಪಣೆಯಲ್ಲಿ ಅಭಿವ್ಯಕ್ತ ಪಡಿಸಿರುವ ಇವರ ಬರಹಗಳು ನಿಲುಗಡೆಗೆ ಅವಕಾಶ ನೀಡದಂತೆ ಓದಿಸಿಕೊಂಡು ಓದಿನ ತೃಪ್ತಿಯನ್ನು ಧರಿಸಿಕೊಳ್ಳುವುದರಲ್ಲಿ ತನ್ನದೇ ಆದ ಹಿರಿಮೆ ಮತ್ತು ಪ್ರಬುದ್ಧತೆಯನ್ನು ಮೆರೆಯುತ್ತವೆ ಎಂಬ ಅಂಶಗಳ ಮೇಲೆ ಸಮೀಕ್ಷೆ ಬೆಳಕು‌ ಚೆಲ್ಲುತ್ತದೆ.

ಡಾ. ಜನಾರ್ದನ್ ಭಟ್ ಅವರ ಒಂದೊಂದು ಕೃತಿಯು ಸಾಹಿತ್ಯ ಅಭ್ಯಾಸಿಗಳಿಗೆ ಮಾರ್ಗದರ್ಶಿ ಹೊತ್ತಿಗೆಗಳಂತೆ ಇದ್ದು, ಆಳವಾದ ವಿಸ್ತಾರವಾದ ಅರ್ಥಗಳನ್ನು, ಚಿಂತನೆಗಳನ್ನು, ಆಲೋಚನೆಗಳನ್ನು ಬಿತ್ತುತ್ತಾ ವಾಸ್ತವಿಕ ನೆಲೆಯಲ್ಲಿ ಸಾಹಿತ್ಯದ ಪಾತ್ರವನ್ನು, ಅಗತ್ಯತೆಯನ್ನು ಎತ್ತಿ ಹಿಡಿಯುತ್ತವೆ. ನಮ್ಮ ಕನ್ನಡ ಸಾಹಿತ್ಯದ ಕವಿಗಳು, ಲೇಖಕರು ಮತ್ತು ಅವರ ಕೃತಿಗಳ ಕುರಿತ ಇವರ ವಿಮರ್ಶಾ ಲೇಖನಗಳು ನಮ್ಮ ನಾಡಿನ ಸಾಹಿತ್ಯ ಪರಂಪರೆಯನ್ನ, ಪ್ರಸಕ್ತ ನಡೆಯುತ್ತಿರುವ ವಿದ್ಯಮಾನಗಳನ್ನ, ಭವಿಷ್ಯದಲ್ಲಿ ಬರಮಾಡಿಕೊಳ್ಳಬೇಕಾದ ಕನಸುಗಳನ್ನ, ತುಂಬಿಕೊಳ್ಳಬೇಕಾದ ಬರವಸೆಗಳನ್ನ, ಈಡೇರಿಸಿಕೊಳ್ಳಬೇಕಾದ ನಿರೀಕ್ಷೆಗಳನ್ನ, ತಲುಪಬೇಕಾದ ಗುರಿಗಳನ್ನ ಬಗೆದಿಡುತ್ತಾ ಬಂದಿರುವ ಅನನ್ಯ ವ್ಯಕ್ತಿತ್ವ ಜನಾರ್ಧನ್ ಭಟ್ ಅವರದು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದ್ರುವ ತಾರೆಯಂತೆ ಕಾಣುವ ಡಾ. ಜನಾರ್ದನ ಭಟ್ ಅವರು ಅಲ್ಲಿ ಕಾಣುವ ಇತಿಮಿತಿಗಳನ್ನು ಕುರಿತು ಚರ್ಚಿಸುತ್ತಾ, ದೋಷಗಳ ನಿವಾರಣೆಗೆ ಪ್ರಯತ್ನಿಸಲು ಆಗ್ರಹಿಸುತ್ತಾರೆ. ಇದಕ್ಕೆ ಪುಷ್ಟಿ ತುಂಬುವಂತೆ, ಡಾ. ಜಿ. ಎನ್. ಉಪಾಧ್ಯರವರು ಕಥನಗಳ ಕುರಿತಾದ ತಮ್ಮ ವಿಶ್ಲೇಷಣೆಯಲ್ಲಿ ಡಾ. ಜನಾರ್ದನ ಭಟ್ ಅವರ ಮಾತೊಂದನ್ನು ಹೀಗೆ ಉಲ್ಲೇಖಿಸಿದ್ದಾರೆ “ವರ್ತಮಾನದಲ್ಲಿ ಆದರ್ಶ ಕಥನಗಳ ಕೊರತೆ ಕಾಣುತ್ತಿದೆ ಹಾಗೂ ಒಂದರ ಹಿಂದೆ ಒಂದು ಸೃಷ್ಟಿಯಾಗುತ್ತಿರುವ ವಾಸ್ತವ ಕಥನಗಳಲ್ಲಿ ಸತ್ಯನಿಷ್ಠೆ ಕಾಣಿಸುತ್ತಿಲ್ಲ. ಜಾತಿ ದ್ವೇಷವು ಇಂದಿನ ವಾಸ್ತವ ಕಥನಗಳಲ್ಲಿ ಕಾಣಿಸುತ್ತಿರುವುದು ಮುಖ್ಯ ದೋಷವಾಗಿದೆ”. ಅಂತಹ ಭಟ್ ರ ಚಿಂತನೆಗಳು ಸಕಾರಾತ್ಮಕ ಸಾಹಿತ್ಯ ರಚನೆಗೆ, ಸಮ ಸಮಾಜದ ಸೃಷ್ಟಿಗೆ ಜನರನ್ನು ಸಿದ್ಧಗೊಳಿಸುವಂತಹ ಬೆಳವಣಿಗೆಗೆ ಬೆಂಬಲಿಸುತ್ತವೆ.

ಪ್ರಯೋಗಶೀಲತೆ ಎಂಬುದು ಡಾ. ಜನಾರ್ದನ್ ಭಟ್ ಅವರ ಸಾಹಿತ್ಯದ ವಾಹಕವೆಂಬುದನ್ನು ಬಿಂಬಿಸುತ್ತಾ ಅಂತಹ ವಿಶೇಷತೆಗಳನ್ನು ತಮ್ಮ ಬರಹಗಳಲ್ಲಿ ಜೀವಂತವಾಗಿರಿಸಿರುವ ಭಟ್ ರ ಪ್ರಜ್ಞಾವಂತಿಕೆಯನ್ನು, ವಿವೇಕ ಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಸಾಹಿತ್ಯ ಸಾರ್ವಕಾಲಿಕವಾದ ಮತ್ತು ಸಾರ್ವತ್ರಿಕವಾದ ಪ್ರಸ್ತುತತೆಯನ್ನ ಪಡೆಯಲೆಬೇಕಾದರೆ ಬರಹಗಾರನ ಲೇಖನಿ ಸಮಾಜದ ಸಂವೇದನೆಗಳಿಗೆ ಸ್ಪಂದಿಸುವ ಅಕ್ಷರ ಖಡ್ಗವಾಗಬೇಕು. ಅದರಿಂದ ಮಾತ್ರ ಜನಪ್ರಿಯ ಸಾಹಿತ್ಯದ ಹಾಯಿದೋಣಿ ಏರಿ ನಿರಾಯಾಸವಾಗಿ ಸಾಹಿತ್ಯದ ಕಡಲಲ್ಲಿ ಈಜಬಲ್ಲರು. ಭಟ್ ರ ಬರಹದಲ್ಲಿನ ಇಂತಹ ಹತ್ತು ಹಲವು ವಿಶೇಷತೆಗಳನ್ನು ಉಪಾಧ್ಯರವರು ತಮ್ಮ ಸೂಕ್ಷ್ಮಗ್ರಾಹಿ‌ ಓದಿನ ಮೂಲಕ ಹೊರ ತೆಗೆದಿದ್ದಾರೆ.

ಒಬ್ಬ ಲೇಖಕ ಎಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ ಎನ್ನುವುದಕ್ಕಿಂತ ಓದುಗರು ಅದನ್ನು ಎಷ್ಟರಮಟ್ಟಿಗೆ ಧಕ್ಕಿಸಿಕೊಂಡಿದ್ದಾರೆ, ಅನುಭೂತಿಸಿದ್ದಾರೆ ಎಂಬುದನ್ನ ಪರಾಮರ್ಶಿಸಬೇಕು. ಈ ನಿಟ್ಟಿನಲ್ಲಿ ಡಾ. ಜನಾರ್ದನ ಭಟ್ ಅವರನ್ನು ಜನಪ್ರಿಯ ಮತ್ತು ಓದುಗ ಸ್ನೇಹಿ ಬರಹಗಾರರಾಗಿ ಈ ನಾಡು ಕಂಡಿದೆ.

“ಡಾ. ಜನಾರ್ದನ ಭಟ್ ಸ್ವಯಂ ನಿರ್ಮಿತವಾದ ವ್ಯಕ್ತಿತ್ವ. ಅವರು ತಮ್ಮನ್ನು ತಾವು ರೂಪಿಸಿಕೊಂಡವರು. ಅವರ ದೃಷ್ಟಿ ವ್ಯಕ್ತಿತ್ವ ಸದಾ ಹಸನ್ಮುಖಿ, ಸಣ್ಣತನ ಬಳಿ ಸುಳಿಯದ ಹಿರಿಮೆ. ಔದಾರ್ಯ, ಸೃಷ್ಟಿ, ವಿಚಾರ, ಮುಕ್ತ ಮನಸ್ಸು ಇಂತಹ ಅಪರೂಪದ ಸರಳ ಸಜ್ಜನಿಕೆಗಳಿಂದಲೇ ಅಪಾರ ಬಂಧು ಮಿತ್ರರ ಸ್ನೇಹಾದರಗಳಿಗೆ ಪಾತ್ರರಾಗಿದ್ದಾರೆ. ಶಿಸ್ತು, ಸಂಯಮ, ಕ್ರಿಯಾಶೀಲತೆ, ಪ್ರಾಮಾಣಿಕತೆ, ದಕ್ಷತೆಗಳ ಮೂಲಕ ಹೊಸ ತಲೆಮಾರಿಗೆ ಮಾದರಿಯಾಗಿದ್ದಾರೆ. ಲೋಕ ಜೀವನದ ನಿಷ್ಟುರಗಳನ್ನು ಉಂಡು ಅನುಭವಿಸುವ ಗ್ರಾಮೀಣ ಪರಿಸರದಲ್ಲಿ ಜನಸಾಮಾನ್ಯರೊಂದಿಗೆ ಅತಿ ಸಮೀಪದಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಾ ಬಂದಿದ್ದರಿಂದ ಅವರ ಬರಹಗಳಲ್ಲಿ ಗಟ್ಟಿತನ ಎದ್ದು ಕಾಣುತ್ತದೆ. ಚಿಕ್ಕವರು ದೊಡ್ಡವರು ಎನ್ನದೆ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಾ ಬಂದ ಬಿಂಕ ಬಿನ್ನಾಣಗಳಿಲ್ಲದ ಸಾಹಿತಿ ಎಂದರೆ ಅದು ಡಾ. ಜನಾರ್ಧನ್ ಭಟ್” ಎನ್ನುವ ಡಾ. ಜಿ ಎನ್ ಉಪಾಧ್ಯರವರ ನುಡಿಗಳು ಜನಾರ್ದನ ಭಟ್ ಅವರ ಸಮಗ್ರ ವ್ಯಕ್ತಿತ್ವವನ್ನು ಓದುಗರಿಗೆ ಪರಿಚಯಿಸುತ್ತವೆ. ಒಬ್ಬ ಬರಹಗಾರನ ಬದುಕು ವೈಯಕ್ತಿಕ ಹಿನ್ನೆಲೆ ಅವರ ಬರಹದ ಮೇಲೆ ಛಾಯೆ ಬೀರುತ್ತದೆ. ಸಾಹಿತ್ಯವಿದ್ದು ಧೀಮಂತ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ. ಉಡುಪಿಯ ಬೆಳ್ಮಣ್ಣುವಿನಲ್ಲಿ ಜನಿಸಿದ ಇವರು ಜ್ಞಾನಪೀಠ ಪುರಸ್ಕೃತರಾದ ಯು. ಆರ್. ಅನಂತಮೂರ್ತಿಯವರ ಶಿಷ್ಯರು. ಇವರು ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದರೂ ತಮ್ಮ ಭಾವನೆಗಳನ್ನು, ವಿಚಾರಗಳನ್ನು ವ್ಯಕ್ತಪಡಿಸಲು ಕನ್ನಡವನ್ನು ಸಾಹಿತ್ಯದ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಇವರು ನೀಡುವ ಕಾರಣ ಇವರ ಪ್ರಾಧ್ಯಾಪಕರೆಲ್ಲರು ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಸಾಹಿತಿಗಳಾಗಿದ್ದು ಅದು ನನ್ನ ಮೇಲೆ ಪ್ರಭಾವ ಬೀರಿದೆ ಎನ್ನುತ್ತಾರೆ. ಹಾಗಾಗಿ ಇವರು ಕನ್ನಡದಲ್ಲಿ ತಮ್ಮ ಬರವಣಿಗೆಯ ಯಾನವನ್ನು ನಡೆಸಿದ್ದಾರೆ. ಅದರಲ್ಲಿ‌ ಭಟ್ ಅವರು ಜನಪ್ರಿಯನ್ನು ಕೂಡ ಕಂಡಿದ್ದಾರೆ.
ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮತ್ತು ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನದ ಸಮ್ಮೇಳನ ಅಧ್ಯಕ್ಷತೆಗೆ ಭಾಜನರಾದುದು ಡಾ.ಜನಾರ್ದನ ಭಟ್ ಅವರ ಸಾಹಿತ್ಯ ಸಾಧನೆ ಮತ್ತು ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಾಗಿದೆ.

ವಿಶ್ವ ಸಾಹಿತ್ಯವನ್ನು ಓದಿಕೊಂಡಿರುವುದರಿಂದ ಜನಾರ್ದನ ಭಟ್ ರವರ ಜ್ಞಾನ ಕ್ಷಿತಿಜ ಬಹು ವಿಸ್ತಾರವಾಗಿ ಚಾಚಿಕೊಂಡು ಅದರ ಸದುಪಯೋಗವನ್ನು ಕನ್ನಡ ಸಾಹಿತ್ಯಕ್ಕೆ ದಾರೆ ಎರೆದಿದ್ದಾರೆ. “ಸಾಹಿತ್ಯ ವಿಮರ್ಶಕರು ಬಹು ಶ್ರುತರು ಆದ ಜನಾರ್ದನ ಭಟ್ಟವರು ಕನ್ನಡ ಓದುಗರಿಗೆ ವಿಶ್ವ ಸಾಹಿತ್ಯವನ್ನು ಪರಿಚಯಿಸಿದ್ದಾರೆ” ಎಂಬ ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಬಾಡಿ ಅವರ ಹೇಳಿಕೆಗೆ ಪುಷ್ಠಿ ತುಂಬುವಂತೆ ಅವರ ಕನ್ನಡ ಅನುವಾದಗಳು ಇಂಗ್ಲಿಷ್ ಸಾಹಿತ್ಯ ರಚನೆಯ ಕೃತಿಗಳು ನಮಗೆ ಎದುರಾಗುತ್ತವೆ. ಜಗತ್ತಿನ ಶ್ರೇಷ್ಠ ಕೃತಿಗಳ ಮತ್ತು ಕೃತಿಕಾರರ ಕುರಿತು 800 ಕ್ಕೂ ಹೆಚ್ಚು ಲೇಖನಗಳನ್ನು ವಿಶ್ವ ಸಾಹಿತ್ಯದ ಅಂಕಣದಲ್ಲಿ ಬರೆದು ಅದರಲ್ಲಿ ಗೆಲುವು ಕಂಡ ಮಹತ್ವದ ಅಂಶಗಳನ್ನು ಉಪಾಧ್ಯರವರು
ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಶಿಷ್ಟ ವಿಶಿಷ್ಟ, ವಿಶ್ವ ಸಾಹಿತ್ಯ, ಕೃತಿ ವಿಶ್ವ, ವಿಶ್ವ ಸಾಹಿತ್ಯ ಕಥಾ ಕಣಜ, ಕರಾವಳಿಯ ಕವಿರಾಜಮಾರ್ಗ ಎಂಬ ಅಂಕಣ ಬರಹಗಳು ಬಹಳ ಜನಪ್ರಿಯವಾಗಿವೆ.

ಡಾ. ಜನಾರ್ದನ್ ಭಟ್ ರವರು ಬಹುಪ್ರಕಾರ, ಬಹುಭಾಷಾ ಪರಿಣಿತರು. ಇವರ ಒಲುಮೆಯ ಕ್ಷೇತ್ರ ಕನ್ನಡದ ಕಾದಂಬರಿ ಮತ್ತು ವಿಮರ್ಶೆಯಾಗಿದೆ.ಇವರ ಕಾದಂಬರಿಗಳು ಗದ್ಯಸಾಹಿತ್ಯ ಪ್ರಕಾರದಲ್ಲಿ ವಿಶಿಷ್ಟ ಚಾಪು ಮೂಡಿಸಿವೆ. ಇವರ ಕಾದಂಬರಿಗಳ ವಿಶೇಷತೆಯನ್ನು ವಿಮರ್ಶಕರಾದ ಜಿಎನ್ ಉಪಾಧ್ಯ ರವರು ಹೀಗೆ ಗುರುತಿಸುತ್ತಾರೆ. “ವ್ಯಕ್ತಿ ಕುಟುಂಬ ಹಾಗೂ ಸಮಾಜ ಇವುಗಳಲ್ಲಿ ಆದ ಮಾರ್ಪಾಡು ಸ್ಥಿತ್ಯಂತರ ಪರಸ್ಪರ ಬದಲಾವಣೆಗಳನ್ನ ಸೂಕ್ಷ್ಮವಾಗಿ ಗಮನಿಸಿ ತಾಳೆ ಹಾಕಿ ನೋಡುವುದು ಜನಾರ್ದನ ಭಟ್ಟ ಅವರ ಕಾದಂಬರಿಗಳ ಅನನ್ಯತೆಯು ಆಗಿದೆ. ಒಂದು ಕಾಲಘಟ್ಟದ ಬದುಕನ್ನು ಅದರ ಎಲ್ಲಾ ಸಂಕೀರ್ಣತೆಗಳೊಂದಿಗೆ ತಮ್ಮ ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಪರಂಪರೆಯ ಬಗ್ಗೆ ಬಲವಾದ ಶ್ರದ್ಧೆ ಹಾಗೂ ಭವಿಷ್ಯದ ಬಗೆಗಿನ ದರ್ಶನ ಇವೆರಡೂ ಇವರ ಕಾದಂಬರಿಗಳಲ್ಲಿ ಅಭಿವ್ಯಕ್ತಿಗೊಂಡ ಬಗೆ ಮನೋಜ್ಞವಾಗಿದೆ.
ಉತ್ತರಾಧಿಕಾರ, ಹಸ್ತಾಂತರ, ಅನಿಕೇತನ, ಸ್ಥಿತ್ಯಂತರ, ಮೂರು ಹೆಜ್ಜೆ ಭೂಮಿ, ಕಲ್ಲು ಕಂಬವೇರಿದ ಹುಂಬ, ಬೂಬರಾಜ ಸಾಮ್ರಾಜ್ಯ, ಗಮ್ಯ ಕಾದಂಬರಿಗಳು ಕಾದಂಬರಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ಎನ್ನಬಹುದು.

ಡಾ. ಜನಾರ್ದನ ಭಟ್ ಅವರ ಈ ದೀರ್ಘ ಸಾಹಿತ್ಯ ಕೃಷಿಯಲ್ಲಿ ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳು, ಸನ್ಮಾನಗಳು, ಅಸಂಖ್ಯಾತ. ಇವರ ಉತ್ತರಾಧಿಕಾರ ಕಾದಂಬರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ, ಮೂರು ಹೆಜ್ಜೆ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇವರ ಭಾರತೀಸುತಾ ಪ್ರಶಸ್ತಿ, ಕಲ್ಲು ಕಂಬವೇರಿದ ಹುಂಬ ಮಿನಿ ಕಾದಂಬರಿಗೆ ತರಂಗ ಪತ್ರಿಕೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಬೂಬರಾಜ ಸಾಮ್ರಾಜ್ಯ ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇವರ ಮುರುಗಾರಾಧ್ಯ ಪ್ರಶಸ್ತಿ ಸೇರಿದಂತೆ ಇವರು ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರೂ ನಾನೆಂಬ ಅಹಂಯಿರದ ವಿನಯಶೀಲ ಸರಳತ್ವ. ಸಿಂಪಲ್ ಲೀವಿಂಗ್ ಹೈ ಥಿಂಕಿಂಗ್ ವ್ಯಕ್ತಿಯೆಂಬುದನ್ನು ಪ್ರತಿನಿಧಿಸುತ್ತವೆ.

ವಿಮರ್ಶಾ ಸಾಹಿತ್ಯದಲ್ಲಿ ಜನಾರ್ದನ ಭಟ್ಟವರ ಕೃಷಿ ಅಪರಿಮಿತವಾದದ್ದು.
ಪಾಶ್ಚತ್ಯ ಸಾಹಿತ್ಯ ವಿಮರ್ಶೆ ಮತ್ತು ಕನ್ನಡ ಕಾವ್ಯ ಮೀಮಾಂಸೆ ಎರಡರ ಆಳವಾದ ಅಧ್ಯಯನ ಮಾಡಿದ್ದಾರೆ.
ಸಾಹಿತ್ಯವೆಂಬುದು ಅಗಾಧವಾದ ಸಾಗರವಾಗಿದ್ದು ಇದರಲ್ಲಿ ಪ್ರತಿನಿತ್ಯ ಸೇರುವ ಸಾಹಿತ್ಯದ ಹನಿಬಿಂದುಗಳು ಅಸಂಖ್ಯ. ಅವೆಲ್ಲವನ್ನು ಓದಿ ಸ್ಪಂದಿಸುವ, ಪ್ರೋತ್ಸಾಹಿಸುವ ಅಭಿರುಚಿ ಕಣ್ಮರೆಯಾಗುತ್ತಿರುವ ಇಂದಿನ ಕಾಲಮಾನದಲ್ಲಿ ಜನಾರ್ಧನ್ ಭಟ್ ಅವರು ವಿಮರ್ಶ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ಜೊತೆಗೆ ಅನುಭವಿ ಬರಹಗಾರರ ಸಾಹಿತ್ಯದ ಸಾರವನ್ನು ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಜಾಗತೀಕರಣದ ಪ್ರಭಾವಕ್ಕೆ ಸಿಲುಕಿ ಓದುವವರ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಅತ್ಯಂತ ಕಾಳಜಿ ಮತ್ತು ಶ್ರದ್ಧೆಯಿಂದ ಸತ್ವಪೂರ್ಣ ಬರಹವನ್ನು ನೀಡುತ್ತಾ, ಜನರಲ್ಲಿ ಓದುವ ಹಂಬಲ ಸೃಷ್ಟಿಸುವ ಹೆಜ್ಜೆ ಇಟ್ಟಿದ್ದಾರೆ. ಅಲಕ್ಷಿತ ವಿಚಾರಗಳನ್ನು ಹೆಕ್ಕಿ ತೆಗೆದು ಜನರ ಲಕ್ಷ್ಯವನ್ನು ಸೆಳೆದು ತಮ್ಮ ವಿಶಿಷ್ಟ ಭಾಷಾ ಸೊಗಡಿನ ಮೂಲಕ ಅಕ್ಷರಮಾಲೆಯಾಗಿಸಿ ಸಾರಸ್ವತ ಲೋಕವನ್ನು ಮತ್ತಷ್ಟು ಮೆರಗು ತುಂಬಿ ಅಲಂಕರಿಸಿದ್ದಾರೆ.

ಡಾ. ಜನಾರ್ದನ ಭಟ್ ರವರ ವಿಶ್ವ ಸಾಹಿತ್ಯದ ವಿರಾಟ ದರ್ಶನ ಮಾಡಿಸಿರುವ ಡಾ. ಜಿ ಉಪಾಧ್ಯಾರವರು ಇವರ ‘ವಿಶ್ವ ಸಾಹಿತ್ಯ ಕೋಶ’, ‘ನುಡಿವ ಯೋಗ’ ‘ಶಿಷ್ಟ ವಿಶಿಷ್ಟ’, ‘ದಿಗಂತದಾಚೆಗೆ ನೋಟ’ ‘ನಾಲ್ಕು ಪ್ರಸ್ತಾವನೆಗಳು’ ‘ರೂಪಕ ನಿರೂಪಕ’ ‘ಸಾಹಿತ್ಯ ವಿಮರ್ಶೆ’ ‘ತೋರುಗಂಬ’ ಸೇರಿದಂತೆ ಸುಮಾರು 30 ವಿಮರ್ಶಾ ಕೃತಿಗಳ ವಿಶ್ಲೇಷಣೆ ಮೂಲಕ ಭಟ್ಟರ ವಿಮರ್ಶನ ಪ್ರಜ್ಞೆಯನ್ನು ಅವರ ಸಾಹಿತ್ಯ ವಿಮರ್ಶೆಯ ಮಾನದಂಡಗಳನ್ನು ಬಿಡಿಸುವ ಮೂಲಕ ಹೊಸದಾಗಿ ವಿಮರ್ಶೆಯಲ್ಲಿ ತೊಡಗುವ ಉದಯೋನ್ಮುಖ ವಿಮರ್ಶಕರಿಗೆ ಕಲಿಯಲು ಮಾರ್ಗದರ್ಶಕ ದೀವಿಗೆಯನ್ನ ಒದಗಿಸಿದ್ದಾರೆ.

ಡಾ. ನಾ ಮೊಗಸಾಲೆ ಅವರು ಬೆನ್ನುಡಿಯಲ್ಲಿ “ಡಾ. ಜನಾರ್ದನ್ ಭಟ್ ಅವರು ತಮ್ಮ ಕಾದಂಬರಿಗಳು ಮತ್ತು ಕಥೆಗಳಲ್ಲಿ ಕಳೆದು ಹೋದ ದಿನಗಳನ್ನು ವರ್ತಮಾನದ ಕಣ್ಣಲ್ಲಿ ಚಿತ್ರಿಸುತ್ತಾ, ವಸಾಹತುಶಾಹಿ ಮತ್ತು ನೀವು ವಸಾಹತುಶಾಹಿಯು ನಮ್ಮ ವರ್ತಮಾನವನ್ನು ಅದರಲ್ಲೂ ಮುಖ್ಯವಾಗಿ ಕರಾವಳಿ ಭಾಗವನ್ನು ಹೇಗೆ ತಲ್ಲಣದತ್ತ ಕರೆದೊಯ್ಯುತ್ತಿದೆ” ಎಂದು ಗುಣಗಾನ ಮಾಡಿದ್ದಾರೆ.

“ಡಾ ಜಿ ಎನ್ ಉಪಾಧ್ಯಾರವರು ವಿದ್ವತ್ತು ಮತ್ತು ಅಧ್ಯಯನ ಶೀಲತೆಗೆ ಹೆಸರಾದವರು. ಕ್ಷೇತ್ರ ಕಾರ್ಯ, ಆಳವಾದ ಸಂಶೋಧನೆ ಹಾಗೂ ಅಧ್ಯಯನಗಳನ್ನು ನಡೆಸಿ ಹೊಸ ಹೊಸ ವಿಚಾರಗಳನ್ನು ಮುಂದಿಡುತ್ತಾ ಇರುವ ಇವರು ಮಹಾರಾಷ್ಟ್ರದಲ್ಲಿ ಕನ್ನಡ ರಾಯಭಾರಿಯಾಗಿ ಕನ್ನಡ ಸಾಹಿತ್ಯದ ಮುಂಬೈ ಕೇಂದ್ರದ ಅಘೋಷಿತ ನಾಯಕರಾಗಿದ್ದಾರೆ” ಎಂದು ಬೆನ್ನುಡಿಯಲ್ಲಿ ಡಾ. ನಾ ಮೊಗಸಾಲೆಯವರು‌ ದಾಖಲಿಸುತ್ತಾರೆ.

ಡಾ. ಜಿ ಎನ್ ಉಪಾಧ್ಯಾರವರು
ಸೂಕ್ಷ್ಮಮತಿಯಾಗಿ ತೌಲನಿಕ ದೃಷ್ಟಿಕೋನ, ಕೃತಿಯ ವೈಶಿಷ್ಟ್ಯತೆ, ವ್ಯಾಖ್ಯಾನ, ವಿವರಣೆ ಮುಂತಾದ ವಿಶಿಷ್ಟ ಗುಣಗಳನ್ನು ಸೂಕ್ಷ್ಮ ಗ್ರಾಹಿಯಾಗಿ ಸ್ವೀಕರಿಸಿ ಒಳನೋಟ ಒಳಹುಗಳನ್ನ ಬಿತ್ತರಿಸಿದ್ದಾರೆ. ಕೃತಿಯ ಸಾಹಿತ್ಯವನ್ನಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿ ಕೂಡ ಚರ್ಚಿಸುತ್ತಾ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಏನೆಂಬುದನ್ನು ಕೂಡ ಹೊರತೆಗೆದು, ಬರಹದ ತುಡಿತವಿರುವ ಹೊಸ ಬರಹಗಾರರಿಗೆ ಉತ್ತೇಜನ ತುಂಬಿದ್ದಾರೆ. ಶ್ರೀ ಬನ್ನಂಜೆ ಅವರ ಪ್ರೋತ್ಸಾಹದಿಂದ ಉದಯವಾಣಿ ಪತ್ರಿಕೆಯಲ್ಲಿ ಪುಸ್ತಕವನ್ನು ಪ್ರಾರಂಭಿಸಿದ ಜನಾರ್ದನ ಭಟ್ ಅವರು ಸುಮಾರು 10 ವರ್ಷಗಳ ಕಾಲ ವಿಮರ್ಶಕರಾಗಿ ಐದು ವರ್ಷಗಳ ಕಾಲ ಅಂಕಣಕಾರರಾಗಿ ಸಾಹಿತ್ಯದೊಲವು, ಬರಹದ ನಿಷ್ಠೆಯನ್ನು ತೋರಿದ್ದು ಅಸಾಧಾರಣ ಹಾಗೂ ಅಭಿನಂದನಾರ್ಹ ಸಾಧನೆ.

ಹೈಸ್ಕೂಲ್ ಓದುವಾಗಲೇ ಸುಧಾ ಪತ್ರಿಕೆಯಲ್ಲಿ ಕತೆಯೆಂದನ್ನು ಪ್ರಕಟಿಸಿದ್ದ ಭಟ್ ಅವರು ಸಣ್ಣ ಕಥೆಗಳ ರಚನೆಯಲ್ಲಿ ಒಲವು ಹೊಂದಿದ್ದು ಸುಮಾರು ಆರು ಕಥಾ ಸಂಕಲನಗಳನ್ನು ಪ್ರಕಟಿಸಿರುವುದು ಮಾತ್ರವಲ್ಲದೆ ನೂರಾರು ಇತರ ಭಾಷಾ ಕಥೆಗಳನ್ನು ಅನುವಾದಿಸಿದ್ದಾರೆ. ಭಟ್ ಅವರೆ ಹೇಳುವ ಪ್ರಕಾರ ಅವರ ಕಥೆಗಳು ಸಮಾಜ ವಿಮರ್ಶೆ ಕಥೆಗಳು, ಫ್ಯಾಂಟಸಿ ಮಾದರಿಯ ಕಥೆಗಳು, ಚಾರಿತ್ರಿಕ ವಿದ್ಯಮಾನಗಳ ಕಥೆಗಳು ಎಂಬ ಮೂರು ಭಾಗಗಳಿದ್ದರೂ ಎಲ್ಲಾ ಕೃತಿಗಳಲ್ಲೂ ಸಾಮಾಜಿಕ ವಿಮರ್ಶೆ ಪ್ರಧಾನವಾಗಿರುವುದು ಗಮನಾರ್ಹ ಸಂಗತಿ.
ಮೊದಲನೆಯ ಇಲಿ, ಪುಂಡಗೋಳಿಯ ಕ್ರಾಂತಿ, ಲೋಕ ಸಂಚಾರ ಮತ್ತಿತರ ಈರಾರು ಕಥೆಗಳು, ಲಾಫಿಂಗ್ ಕ್ಲಬ್, ಎಚ್ಕೆ ಹೋಮೋ: ನೋಡಿ ಈ ಮನುಷ್ಯನನ್ನು, ಮತ್ತೆ ನಾವು ಹಿಂದಿನಂತೆ ಇವು ಭಟ್ ಅವರ ಕಥಾ ಸಂಕಲನಗಳಾಗಿವೆ.
ರಾಜ್ಯಮಟ್ಟದ ಸಣ್ಣ ಕಥೆಗಳ ಸ್ಪರ್ಧೆಗಳಲ್ಲಿ ಒಂಬತ್ತು ಬಾರಿ ಬಹುಮಾನವನ್ನು ಪಡೆದ ಹೆಗ್ಗಳಿಕೆ ಇವರ ಕಥೆಗಳದು.

ಡಾ. ಜನಾರ್ದನ್ ಭಟ್ ಅವರು ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ಪತ್ರಿಕೆಗಳಿಗೆ ಗೌರವ ಸಂಪಾದಕರಾಗಿ, ಮಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದ ಬೋಧಕರಾಗಿ ಸೇವೆ ಸಲ್ಲಿಸಿದ ಬಹುಮುಖ ಪ್ರತಿಭೆ ಇವರದು. ಇವರ ಸಾಹಿತ್ಯವನ್ನು ಪ್ರತಿ ಹಂತದಲ್ಲೂ ಇತರ ಕೃತಿಗಳ ನಡುವೆ ಇಟ್ಟು ತುಲನಾತ್ಮಕವಾದ ಅಧ್ಯಯನವನ್ನು ನಡೆಸಿರುವ ಜಿ.ಎನ್. ಉಪಾಧ್ಯಾಯರವರ ವಿಮರ್ಶನ ಪ್ರಜ್ಞೆ ಅವರ ಸಾಹಿತ್ಯ ಅವಲೋಕನದ ಚಾಣಾಕ್ಷತನ ಮೆಚ್ಚುವಂಥದ್ದು. ಇಲ್ಲಿ ಡಾ. ಉಪಾಧ್ಯಾರವರ ಮತ್ತೊಂದು ಮಹತ್ವದ ಸಂಗತಿ ಎಂದರೆ ಕಾಲ ಗರ್ಭದಲ್ಲಿ ಭೂಗತವಾಗುತ್ತಿದ್ದ ಕೃತಿಗಳನ್ನು ಸಂರಕ್ಷಿಸಿ ಸಂಪಾದನೆ ಕಾರ್ಯ ಮಾಡಿರುವುದು. ಆ ಮೂಲಕ ಹೊಸ ತಲೆಮಾರಿಗೆ ಹಳದನ್ನು ಒದಗಿಸಿದ ಕೀರ್ತಿ ಭಟ್ ಅವರದಾಗಿದೆ‌

ಡಾ. ಜನಾರ್ದನ ಭಟ್ ರವರ ಸಾಹಿತ್ಯದಲ್ಲಿ ಶಬ್ದ ಸಾಕ್ಷಿ ಎಲ್ಲೂ ನುಸುಳದಂತೆ ಬಹುತೇಕ ಬರಹಗಳು ಅನುಭವ ಜನ್ಯವಾಗಿ ಮೂಡಿಬಂದಿದ್ದರೆ, ಉಳಿದಂತೆ ವಿಶ್ಲೇಷಣೆ, ಸಮೀಕ್ಷೆ, ಚಿಂತನೆ, ಅಭಿವ್ಯಕ್ತಿಗಳಿಂದ ರಚಿತವಾಗಿವೆ. ಪುರೋಹಿತರು, ಜ್ಯೋತಿಷಿಗಳು ಹಾಗೂ ಸಂಸ್ಕೃತ ವಿದ್ವಾಂಸರು ಆಗಿದ್ದರೂ ಕೂಡ ಇವರ ಬರಹಗಳು ಜಾತಿ, ಮತ, ಕುಲ, ಧರ್ಮಗಳೆಂಬ ಸಾಮಾಜಿಕ ಜಾಡ್ಯಗಳನ್ನು ಮೀರಿ ನಿಂತು ಸಮ ಸಮಾಜದ ಆರೋಗ್ಯಕರ ಚಿಂತನೆಗಳನ್ನು, ಆಶಯಗಳನ್ನು ಪಲ್ಲವಿಸುತ್ತವೆ.
ಭ್ರಮೆ ಮತ್ತು ಕಲ್ಪನೆಗಳಿಂದುಸಿದ ಸಾಹಿತ್ಯ ತುಂಬಾ ವಿರಳವೆನ್ನಬಹುದು. ಇವರ ಬರಹಗಳಲ್ಲಿ ವಾಸ್ತವಿಕತೆ ಯಥೇಚ್ಛವಾಗಿ ಸ್ಥಾನ ಗಿಟ್ಟಿಸಿದೆ.
ಕನ್ನಡ ಅನುವಾದದ ಮೂಲಕ ಇಂಗ್ಲೀಷಿನಿಂದ ಕನ್ನಡಕ್ಕೆ ಅನುಸಂಧಾನಿಸಿ ಹೊಸ ಹೊಸ ವಿಚಾರಗಳನ್ನು ತಾರ್ಕಿಕ ಚಿಂತನೆಗಳನ್ನು ವೈವಿಧ್ಯಮಯ ಒಳನೋಟಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನ ಇವರದು.
ಜೊತೆಗೆ ನವ್ಯೋತ್ತರ ಕವಿತೆಗಳನ್ನು ಪರಾಮರ್ಶಿಸುವ ವಿಮರ್ಶಕರು ಕವಿತೆ ಒಂದು ವಿಶಿಷ್ಟ ಮನೋಭಾವವನ್ನು, ಗ್ರಹಿಕೆಯ ಕ್ರಮವನ್ನು, ಓದುಗನ ಜೊತೆಗೆ ಹಂಚಿಕೊಳ್ಳುವ ಕವಿತೆಗಳು ಪುರಾಣಗಳನ್ನು ಬಳಸಿಕೊಂಡು ವಾಸ್ತವಿಕ ಸ್ಥಿತಿಗತಿಗಳನ್ನು ಚರ್ಚಿಸುತ್ತವೆ.

ಸಂಕೀರ್ಣವಾದ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿನ ಸನಾತನ ಕಟ್ಟು ಕಟ್ಟಳೆಗಳು, ಮೌಢ್ಯಗಳು, ಅಂಧಾನುಕರಣೆಯನ್ನು ವಿರೋಧಿಸುತ್ತಾ ಬರೆದ ಇವರ ಬರಹಗಳಲ್ಲಿ ವೈಚಾರಿಕ ಮತ್ತು ಮಾನವೀಯ ನೆಲೆಯಲ್ಲಿ ಮನುಜರನ್ನು ನಡೆಸಿಕೊಳ್ಳಬೇಕೆಂಬ ಅಭಿಲಾಷೆ ಕಾಣುತ್ತದೆ.
ಮೂರನೆಯ ಕಣ್ಣು, ದ್ವಾರವಿಲ್ಲದ ದ್ವಾರ, ನಾಲ್ಕನೆಯ ಆಯಾಮ ಎಂಬ ವೈಚಾರಿಕ ಕೃತಿಗಳನ್ನು ನೀಡುವುದರೊಂದಿಗೆ ಬರಹಗಾರರ ಸಾಮಾಜಿಕ ಜವಾಬ್ದಾರಿಯಾದ ಸಾಮಾಜಿಕ ಅರಿವನ್ನು ಮೂಡಿಸುವ ದೃಢಸಂಕಲ್ಪ ಎದ್ದು ಕಾಣುತ್ತದೆ.

ಜನಾರ್ದನ್ ಭಟ್ ಅವರು ಮಕ್ಕಳ ಸಾಹಿತ್ಯದ ಬಗ್ಗೆ ಅಪಾರ ಒಲವನ್ನು ಹೊಂದಿದ್ದು, ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದಂತಹ ಲೇಖಕರು.
ಡಾ. ಜನಾರ್ದನ ಭಟ್ ಅವರು ಮಕ್ಕಳ ಸಾಹಿತ್ಯವನ್ನು ಕುರಿತು ನಾಲ್ಕು ಆಯಾಮಗಳಲ್ಲಿ ವಿಂಗಡಿಸುತ್ತಾರೆ. ಮಕ್ಕಳೇ ಬರೆದ ಸಾಹಿತ್ಯ, ಮಕ್ಕಳಿಗಾಗಿ ದೊಡ್ಡವರು ಬರೆಯುವ ಸಾಹಿತ್ಯ, ಮಕ್ಕಳಿಗಾಗಿ ಹಿರಿಯರು ಆರಿಸುವ ಸಾಹಿತ್ಯ, ಮಕ್ಕಳು ಆರಿಸುವ ಸಾಹಿತ್ಯ ಎಂದು. ಮಕ್ಕಳಿಗಾಗಿ ಅಸಂಖ್ಯಾತ ಸಾಹಿತ್ಯ ಕೃಷಿ ಮಾಡಿದ ಹೆಗ್ಗಳಿಕೆ ಇವರದು.
ಟಾಲ್ಸ್ ಟಾಯ್ ಹೇಳಿದ ಕಥೆಗಳು, ಲಘು ಪ್ರಸಂಗಗಳು, ಸಿಂಡ್ರೆಲ್ಲಾ, ಬಾತುಕೋಳಿ ಕಾಯುವಾಕೆ, ಕ್ಯಾಂಟರ್ ಬರಿ ಕಥೆಗಳು, ಜಗತ್ಪ್ರಸಿದ್ಧ ಮಕ್ಕಳ ಕಥೆಗಳು, ಒಲವೇ ವಿಸ್ಮಯ, ಜಗತ್ಪ್ರಸಿದ್ಧ ಸಣ್ಣ ಕಥೆಗಳು, ದೈತ್ಯನಿಂದಾಚೆ, ಹೃದಯಸ್ಪರ್ಶದ ಭಾವಕತೆಗಳು, ಅನ್ಯ ದೇಶದ ಅನನ್ಯ ಕಥೆಗಳು, ಪೀಟರ್ ಫ್ಯಾನ್ ಸಾಹಸಗಳು ಮುಂತಾದವುಗಳು ಮಕ್ಕಳ ಸಾಹಿತ್ಯದ ಅನುವಾದಗಳಾಗಿವೆ‌.

ಡಾ. ಜಿ.ಎನ್ ಉಪಾಧ್ಯಾರವರ ವಿಮರ್ಶೆಯಲ್ಲಿ ಜನಾರ್ದನ ಭಟ್ ಅವರ ಬರಹಗಳು ಅರ್ಥ, ಭಾವ, ಶಬ್ದ ಅನುಭವಗಳನ್ನು ಜೊತೆಯಾಗಿಸಿ ಅವುಗಳ ನಡುವೆ ಅನನ್ಯತೆಯ ಬಂಧವನ್ನ ಬೆಸೆಯುತ್ತಾ ಸಾಗಿದ್ದಾರೆ. ಡಾಕ್ಟರ್ ಉಪಾಧ್ಯರವರ ಈ ವಿಮರ್ಶನ ಕೃತಿ ಓದಿದಾಗ ಅವರಿಗೆ ಭಾರತೀಯ ಮತ್ತು ಪಾಶ್ಚಿಮಾತ್ಯ ವಿಮರ್ಶಗಳ ಆಳವಾದ ಅರಿವಿದೆ ಎಂದು ತಿಳಿಯುತ್ತದೆ. ಅದನ್ನು ತಮ್ಮ ಸಾಹಿತ್ಯದಲ್ಲೂ ಬಿತ್ತರಿಸುತ್ತಾ ಚಲಿಸಿದ್ದಾರೆ.

ಜನಾರ್ಧನ್ ಭಟ್ಟರ ಸಾಹಿತ್ಯ ಭೂತದೊಂದಿಗೆ ವರ್ತಮಾನವನ್ನು ಗರ್ಭಿಕರಿಸಿಕೊಂಡು ಸಮಕಾಲೀನತೆ ಸಾಧಿಸಿ ಭವಿಷ್ಯಕ್ಕೂ ವರ್ಗಾಯಿಸಲ್ಪಡುತ್ತದೆ. ಪ್ರಸಕ್ತ ವಿದ್ಯಮಾನಗಳು ಹಾಗೂ ಪಾರಂಪರಿಕವಾದ ಸಾಂಸ್ಕೃತಿಕ ನೆಲೆಗಟ್ಟನ್ನು ಸಮೀಕರಿಸಿ ಅದರಲ್ಲಿರುವ ವೈಚಾರಿಕತೆ ಮತ್ತು ಸೊಗಸನ್ನ ಅಮೂಲಾಗ್ರವಾಗಿ ವಿಶ್ಲೇಷಿಸುವ ಮೂಲಕ ಕನ್ನಡಕ್ಕೆ ಹೊಸತನ್ನು ತಂದು ಕೊಡುವ ಅನನ್ಯ ಹಂಬಲ ಬಟ್‌ ಅವರದು.ಕನ್ನಡವನ್ನು ತಮ್ಮೆದೆಯ ಭಾಷೆಯಾಗಿಸಿಕೊಂಡು, ಜಾಗತಿಕ ಭಾಷೆಯನ್ನು ಅಧ್ಯಯನ ಮಾಡಿ, ಕನ್ನಡದಲ್ಲಿ ನಾವಿನ್ಯತೆ ಬರಹಕ್ಕೆ ಪ್ರಾಧಾನ್ಯತೆ ನೀಡುತ್ತಾ ಬೇರೆಡೆ ಕಂಡುಕೊಂಡ ವೈಶಿಷ್ಟ್ಯತೆಗಳನ್ನು ಕೂಡ ಅಳವಡಿಸಿಕೊಂಡು ತಮ್ಮ ಭಾಷೆಗೆ ಒಗ್ಗುವಂತೆ ಬರೆದ ಕೀರ್ತಿ ಇವರದು. ಬದುಕಿಗೆ ನಿಷ್ಠರಾಗಿ, ಬರಹಕ್ಕೆ ಬದ್ಧರಾಗಿ, ಸಾಹಿತ್ಯ ಆರಾಧನೆಯ ಕೈಂಕರ್ಯ ತೊಟ್ಟವರು, ಅದರಂತೆ ನಡೆದವರು. ಪ್ರಜ್ಞಾವಂತಕೆ ಮತ್ತು ಸಂವೇದನಾಶೀಲತೆ‌ ಇವರ ಬರಹದ ಪ್ರಮುಖ ಹೈಲೈಟ್ ಆಗಿದೆ.

ಡಾ. ಜನಾರ್ದನ ಭಟ್ ಅವರು ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ಪತ್ರಿಕೆಗಳಿಗೆ ಗೌರವ ಸಂಪಾದಕರಾಗಿ ಮಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದ ಬೋಧಕರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು. ಇವರ ಸಾಹಿತ್ಯವನ್ನು ಪ್ರತಿ ಹಂತದಲ್ಲೂ ಇತರ ಕೃತಿಗಳ ನಡುವೆ ಇಟ್ಟು ತುಲನಾತ್ಮಕವಾದ ಅಧ್ಯಯನವನ್ನು ನಡೆಸಿರುವ ಡಾ. ಜಿ.ಎನ್. ಉಪಾಧ್ಯಾಯರವರ ಪ್ರಜ್ಞೆ ಅವರ ಸಾಹಿತ್ಯ ಶಕ್ತಿ ಮೆಚ್ಚುವಂಥದ್ದು.
ಡಾ. ಉಪಾಧ್ಯರವರು ಈವರೆಗೆ 70 ಮಂದಿ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮತ್ತು ಪಿಎಚ್ಡಿ ಪದವಿಯ ಮಾರ್ಗದರ್ಶಕ ಮಾಡಿ ತಮ್ಮ ಅಮೂಲ್ಯ ಜ್ಞಾನವನ್ನು ಅವರಿಗೆ ಧಾರೆ ಎರೆದಿದ್ದಾರೆ.

ಡಾ. ಜನಾರ್ದನ ಭಟ್ ಅವರ ಎಲ್ಲಾ ರೀತಿಯ ಬರಹಗಳ ಒಳಹೊಕ್ಕು ನೋಡಿದಾಗ ಇವರಿಗೆ ಕನ್ನಡ ಸಾಹಿತ್ಯ ಪರಂಪರೆಯ ಸಂಪೂರ್ಣ ಅರಿವಿದ್ದು ಅದನ್ನು ತುಂಬಾ ಆಸ್ಥೆಯಿಂದ ಅಧ್ಯಯನ ನಡೆಸಿ ಬರಹದ ಒಳನೋಟಗಳನ್ನು, ಅಂತ ಸತ್ವಗಳನ್ನು ಪ್ರಭುತ್ವ ಮಟ್ಟದಲ್ಲಿ ದಕ್ಕಿಸಿಕೊಂಡು ತಮ್ಮ ಸಾಹಿತ್ಯ ಕೃಷಿ ಮಾಡಿದ್ದಾರೆ. ಬಾಲ್ಯದಿಂದಲೇ ಸಿದ್ಧಿಸಿದ ಸಾಹಿತ್ಯ ನಾಲ್ಕು ದಶಕಗಳ ಕಾಲ ಇವರ ಕೈ ಹಿಡಿದು ಮುನ್ನಡೆಸಿದೆ. ಇವರು ಸಮಾಜಮುಖಿಯಾಗಿ ಬದುಕಿದ್ದರ ಫಲಶ್ರುತಿಯಾಗಿ ಇವರ ಸಾಹಿತ್ಯ ಸಾಮಾಜಿಕ ಪ್ರತಿಬಿಂಬವಾಗಿ ಸಮಾಜದ ಸಂವೇದನೆಗಳನ್ನು ಪ್ರತಿಫಲಿಸುತ್ತದೆ. ಯಾವುದೇ ಸೈದ್ಧಾಂತಿಕ ಗುಂಪುಗಳಲ್ಲಿ ಗುರುತಿಸಿಕೊಳ್ಳದ ಭಟ್ ಎಲ್ಲರಿಗೂ ಆಪ್ತರಾದ ಸಾಹಿತ್ಯವನ್ನು ಬರೆದು ಯಾವುದೇ ಸಂಘರ್ಷಗಳಿಗೆ ಉತ್ತೇಜಿಸದೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಗುಣವನ್ನು ಕಾಯ್ದುಕೊಂಡಿದ್ದಾರೆ.

ಒಟ್ಟಿನಲ್ಲಿ ಸಾಹಿತ್ಯವನ್ನು ಮೋಜು ಮನೋರಂಜನೆಗೆ ಸೀಮಿತಗೊಳಿಸಿಕೊಳ್ಳದೆ, ಸಾಮಾಜಿಕ ವಿವೇಕ ಪ್ರಜ್ಞೆಯಡಿಯಲ್ಲಿ ಗಂಭೀರವಾಗಿ ಪರಿಗಣಿಸಿ, ಸಾಮಾಜಿಕ ವೈರುಧ್ಯಗಳನ್ನು ತೆರೆದಿಟ್ಟು, ಆರೋಗ್ಯಕರವಾದ ಸಾಮಾಜಿಕ ಪರಿಸರವನ್ನು ನಿರ್ಮಿಸುವಂತಹ ಸಾಹಿತ್ಯ ಸೃಷ್ಟಿಯ ಮೂಲಕ ಸಂಕಲನದಿಂದ ಸಂಕಲನಕ್ಕೆ ಮಾಗುತ್ತಾ, ಪರಿಪಕ್ವತೆಯ ಬರಹ ನೀಡುತ್ತಾ ಸಾಗುತ್ತಿರುವುದು ಇವರ ಅನುಭವ ಕಲಾತ್ಮಕತೆಯ ನಿದರ್ಶನವಾಗಿದೆ. ಇವರು ಸಾಂಸ್ಕೃತಿಕ ಅಧ್ಯಯನದ ಅನನ್ಯ ಚಿಂತಕರಾಗಿದ್ದಾರೆ. ವಿವಿಧ ಕಾಲಘಟ್ಟದ ಬದುಕಿನ ಚಿತ್ರಣಗಳನ್ನು ಪರಿಚಯಿಸುವಲ್ಲಿ ಡಾ. ಜನಾರ್ದನ್ ಭಟ್ ಅವರು ಮುಂಚೂಣಿಯಲ್ಲಿ ನಿಲ್ಲುವ ನಿಪುಣ ಲೇಖಕರು.

ಒಟ್ಟಾರೆ ಡಾ. ಜನಾರ್ಧನ್ ಭಟ್ ಅವರ ಸಮಗ್ರ ಸಾಹಿತ್ಯ ಸಮೀಕ್ಷೆ ಡಾ. ಜಿ.ಎನ್. ಉಪಾಧ್ಯಾರವರ ವಿದ್ವತ್ತು ಮತ್ತು ಜ್ಞಾನಕ್ಷತಿಜದ ಜೊತೆ ಸುಂದರವಾಗಿ ಅರಳಿ ಜನಾರ್ಧನ‌ ಭಟ್‌ರ ಸಾಹಿತ್ಯದ ಘಮಲು ವಾಙ್ಞಯ ವಿವೇಕದ ಮೂಲಕ ಸಾಹಿತ್ಯಾಸಕ್ತರಿಗೆ, ಬರಹಗಾರರಿಗೆ, ಓದುಗರಿಗೆ ತಲುಪಿಸಿದ್ದಾರೆ. ಅದರ ಸಾರವನ್ನು ಸತ್ವಯುತವಾದ ಸಾಹಿತ್ಯವನ್ನು ನಾವು ಓದಿ ಅರಗಿಸಿಕೊಳ್ಳುವ ಪ್ರಯತ್ನ ಮಾಡಿದರೆ ನಮ್ಮ ಜ್ಞಾನ ಭಂಡಾರವು ತುಂಬುವುದು.ಇಂತಹ ಅದ್ಭುತ ಸಾಹಿತ್ಯದ ಮೇರು ಪ್ರತಿಭೆಯನ್ನು ತಮ್ಮ ಸಾಹಿತ್ಯ ಸಮೀಕ್ಷೆಯ ಮೂಲಕ ನಾಡಿಗೆ ಪರಿಚಯಿಸಿದ ವಿಮರ್ಶಕರಾದ ಡಾ. ಜಿ.ಎನ್. ಉಪಾದ್ಯರವರಿಗೂ, ಸಾಧಕರಾದ ಡಾ. ಜನಾರ್ದನ ಭಟ್‌ ಅವರಿಗೂ ಅಭಿನಂದನೆಗಳನ್ನು ಸಲ್ಲಿಸುವೆ.

ಅನುಸೂಯ ಯತೀಶ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x