ಸಂವಿಧಾನದ ಮಹತ್ವವನ್ನು ಸಾರುವ ಮನೋಜ್ಞ ಸಿನಿಮಾ – 19.20.21: ಚಂದ್ರಪ್ರಭ ಕಠಾರಿ

ಹರಿವು, ನಾತಿಚರಾಮಿ, ಆಕ್ಟ್ 1978 ಸಿನಿಮಾಗಳಿಂದ ಸಂವೇದನಾಶೀಲ ನಿರ್ದೇಶಕರೆಂದು ಗುರುತಿಸಲ್ಪಟ್ಟಿರುವ  ಮಂಸೋರೆಯವರ ಹೊಸ ಸಿನಿಮಾ-19.20.21. ಟೈಟಲ್ ಸೇರಿದಂತೆ ಹಲವು ಕುತೂಹಲಗಳೊಂದಿಗೆ ಅವರು ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಹಾಗೆ ತರುವಾಗ ಹಲವು ಸವಾಲುಗಳನ್ನು ತಮ್ಮ ಸಿನಿಮಾ ತಯಾರಿಕೆಯ ಅನುಭವದಿಂದ, ಪ್ರತಿಭಾವಂತಿಕೆಯಿಂದ ನಿಭಾಯಿಸಿದ್ದಾರೆ.  

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಲ್ಲಿರುವ ಕುತ್ಲೂರು ಗ್ರಾಮದಲ್ಲಿ ಶತಮಾನಗಳಿಂದ ಬದುಕಿರುವ ಆದಿವಾಸಿ ಬುಡಕಟ್ಟು ಜನಾಂಗವಾದ ಮಲೆಕುಡಿಯರನ್ನು, ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಜಾರಿ ಮಾಡಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ, ಆಳುವ ಪ್ರಭುತ್ವದಿಂದ ನಡೆದ ದೌರ್ಜನ್ಯಗಳ ಸರಮಾಲೆಯ ನೈಜ ಘಟನೆಗಳ ಹಿನ್ನೆಲೆ ಇರುವ ಸಿನಿಮಾ, ಅದರ ತಯಾರಿಕೆಯೇ ನಿಜಕ್ಕು ಸವಾಲಿನ ವಿಷಯ. ಅದನ್ನು ಮಂಸೋರೆ ಬಹಳ ಧೈರ್ಯದಿಂದ ವಿರೇಂದ್ರ ಮಲ್ಲಣ್ಣ ಅವರೊಂದಿಗೆ ಚಿತ್ರಕತೆಯನ್ನು ಕಟ್ಟಿ ಸಿನಿಮಾವಾಗಿಸಿದ್ದಾರೆ. 

ಹಾಗೆ, ನೈಜ ಘಟನೆಗಳನ್ನು ಆಧರಿಸಿದ ಕತೆಯನ್ನು ಹೆಣೆದು ಸಿನಿಮಾ ಮಾಡುವಾಗ ಡಾಕ್ಯುಮೆಂಟರಿಯಾಗುವ ಅಪಾಯವನ್ನು ಜಾಣ್ಮೆಯಿಂದ ತಪ್ಪಿಸಿ ದೃಶ್ಯಗಳನ್ನು ನಾನ್ ಲಿನಿಯರ್ ತಂತ್ರದಲ್ಲಿ ಹೆಣೆದು ಒಂದು ಅತ್ಯುತ್ತಮ ಫಿಚರ್ ಫಿಲಂ ಆಗಿಸಿದ್ದಾರೆ.

ಕಾಡಿನಲ್ಲೇ ಹುಟ್ಟಿ ಬೆಳೆದ ಮಲೆಕುಡಿಯರು ಕಾಡುತ್ಪನ್ನಗಳನ್ನು ಸಂಗ್ರಹಿಸಿ ಅದನ್ನು ಮಾರಿ ಬದುಕನ್ನು ಕಟ್ಟಿಕೊಂಡಿರುವವರು. ಅವರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿ ಕಾಡುತ್ಪನ್ನಗಳನ್ನು ಸಂಗ್ರಹಿಸಿದಂತೆ ಸರ್ಕಾರ ನಿರ್ಬಂಧ ಹಾಕುತ್ತದೆ. ಅದರ ಪರಿಶೀಲನೆಯ ನೆಪದಲ್ಲಿ ಹೊತ್ತುಗೊತ್ತಿಲ್ಲದೆ ಪೊಲೀಸರು ( ಆಂಟಿ ನಕ್ಸಲ್ ಫೋರ್ಸ್) ಬಡವರ ಮನೆ ಮೇಲೆ, ಹೋಗಿ ಬರುವ ಹಾದಿಯಲ್ಲಿ ಅಡ್ಡ ಹಾಕಿ ಮನಸೋ ಇಚ್ಚೆ ಥಳಿಸಿ ದಬ್ಬಾಳಿಕೆ ನಡೆಸುತ್ತಾರೆ. ಮನೆಗೆ ದಿನನಿತ್ಯ ಬೇಕಾದ ದವಸಧಾನ್ಯದ ಸಂಗ್ರಹಣೆಯೂ ಇಂತಿಷ್ಟೇ ಇರಬೇಕೆಂದು ತಾಕೀತು ಮಾಡುತ್ತಾರೆ. ಇಷ್ಟು ಸಾಲದೆಂಬಂತೆ ಕಾಡಿನಲ್ಲಿ ನಕ್ಸಲರ ಹಾವಳಿಯ ನೆಪವೊಡ್ಡಿ ಮನೆಗೆ ಬಂಧುಬಳಗದವರು ಬೇರೆ ಊರಿಂದ ಬರದಂತೆ ನಿಷೇಧ ಒಡ್ಡುತ್ತಾರೆ. ಮನೆಮಂದಿಯಷ್ಟೇ ಮನೆಯಲ್ಲಿ ಇರಬೇಕು. ಹೊರಗಡೆಯಿಂದ ಪರಿಚಿತರು ಬರುವುದಾದರೆ ಅದಕ್ಕೆ ಪೊಲೀಸ್ ಅನುಮತಿ ಪಡದೇ ಬರಬೇಕೆಂಬ ನಿರ್ಬಂಧ ಹಾಕುತ್ತಾರೆ. ಹೀಗೆ ಉಸಿರಾಡಲು ಆಗದಂತೆ ಕಾಡುಮಕ್ಕಳ ಬದುಕು ಕಾನೂನಿನ ಅಡಿಯಲ್ಲೇ ಹೈರಾಣಾಗಿ ಅರಣ್ಯರೋದನವಾಗುವುದನ್ನು ನಿರ್ದೇಶಕರು ಹಲವು ದೃಶ್ಯಕಟ್ಟುಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಶೋಷಣೆಯ ಹಲವು ಮುಖಗಳನ್ನು ಪರಿಚಯಿಸುವಾಗ, ದೃಶ್ಯಗಳನ್ನು ವೈಭವೀಕರಿಸದೆ, ನೋಡುಗರ ಅನುಕಂಪ ಉಕ್ಕುವ ಬದಲಿಗೆ ಅವರನ್ನು ಚಿಂತನೆಗೆ ಹಚ್ಚುವಂತೆ ಸಿನಿಮಾ ಚಿತ್ರಿಸಲಾಗಿದೆ.

ನಿರ್ದೇಶಕರಿಗೆ ಮಲೆಕುಡಿಯರ ಶೋಷಣೆಯ ಹಿನ್ನೆಲೆಯಲ್ಲಿ ಅದರೊಟ್ಟಿಗೆ ಮುಖ್ಯವಾಗಿ ನಮ್ಮ ಸಂವಿಧಾನದ ಮಹತ್ವದ ಬಗ್ಗೆ ಹೇಳಬೇಕಿದೆ. ಆ ನಿಟ್ಟಿನಲ್ಲಿ ಸಿನಿಮಾವನ್ನು, ಅಲ್ಲಿನ ಆದಿವಾಸಿ ಜನಾಂಗದಲ್ಲೇ ಕಾಲೇಜು ಮೆಟ್ಟಲನ್ನು ಹತ್ತಿದ ಮೊದಲ ವ್ಯಕ್ತಿಯಾಗಿ ಮಂಜುವಿನ ಪಾತ್ರದ ಮೂಲಕ ಸಿನಿಮಾವನ್ನು ಅನಾವರಣಗೊಳಿಸುತ್ತಾರೆ. ತನ್ನ ಸಮುದಾಯದ ಮೂಲಸೌಲಭ್ಯಕ್ಕಾಗಿ ದನಿಎತ್ತಿದ ಎಂಬ ಕಾರಣಕ್ಕಾಗಿ ನಕ್ಸಲನೆಂಬ ಪಟ್ಟಕಟ್ಟಿ ಮಂಜು ಮತ್ತು ಅವರ ತಂದೆಯನ್ನು ಪೊಲೀಸರು ಬಂಧಿಸಿ ಅವರ ಮೇಲೆ UAPA ಅಡಿಯಲ್ಲಿ ದೇಶದ್ರೋಹದಂತ ಘನಘೋರ ಸುಳ್ಳು ಆಪಾದನೆಯನ್ನು ಮಾಡುವುದು. ಅದನ್ನು ಸಾಬೀತು ಮಾಡಲು ನಾನಾ ತರದ ದೈಹಿಕ ಹಿಂಸೆಯನ್ನು ಕೊಟ್ಟು ಅವನನ್ನು ಒಪ್ಪುವಂತೆ ಶಿಕ್ಷಿಸುವುದು. ಅದರಲ್ಲೂ ದಿನಗಟ್ಟಲೆ ನಿದ್ದೆ ಮಾಡಲು ಬಿಡದೆ ಅವನನ್ನು ಎಚ್ಚರದಲ್ಲಿರುವಂತೆ ಮಾಡುವ ದೃಶ್ಯಗಳು ಎದೆ ನಡುಗಿಸುವಂತಿವೆ.

ಅಕ್ಷರದ ಗಂಧಗಾಳಿಯಲ್ಲಿಯೇ ಇಲ್ಲದ ಸಮಾಜದಲ್ಲಿ ಹುಟ್ಟಿ ಬೆಳೆದು, ಪೊಲೀಸರಿಂದ ಬಂಧಿಯಾಗಿ ಜೈಲಿನಲ್ಲೇ ಅಭ್ಯಾಸ ಮಾಡುತ್ತ,  ಕೋರ್ಟಿನಿಂದ ಕೋರ್ಟಿಗೆ ಅಲೆಯುತ್ತ, ಕಾಲೇಜು ಮುಗಿಸಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಮಂಜು ಪಡುವ ಸಂಕಷ್ಟಗಳು, ಆದರೂ ಕಲಿಯುವ ಬದ್ಧತೆಯಿಂದ ತೋರುವ ಆತ್ಮಸ್ಥೈರ್ಯ ಗಮನ ಸೆಳೆಯುತ್ತದೆ. ಅದರಲ್ಲೂ ಕೈಗೆ ಕೋಳ ತೊಡಿಸಿಕೊಂಡೇ ಮಂಜು ಪರೀಕ್ಷೆ ಬರೆಯುವ ದೃಶ್ಯವಂತೂ ಪ್ರಜಾಪ್ರಭುತ್ವವನ್ನು ಅಣಕ ಮಾಡುವಂತಿದೆ.    

ದಶಕಗಳಷ್ಟು ಸುದೀರ್ಘವಾಗಿ ನಡೆಯುವ ನ್ಯಾಯಾಲಯಗಳ ವಿಚಾರಣೆಗಳಿಂದ ಮಂಜು ಮತ್ತು ಅವನ ತಂದೆ ಆರೋಪಮುಕ್ತರಾಗಿ ಸಹಜ ಜೀವನಕ್ಕೆ ಮರುಳಲು ಸಾಧ್ಯವಾಗುವುದೇ? ಸಂವಿಧಾನ ಆ ಅಮಾಯಕನನ್ನು ರಕ್ಷಿಸುವುದೇ?    ಎಂಬುದು ಇಡೀ ಸಿನಿಮಾದ ತಿರುಳು. 

ಸಿನಿಮಾ ಬರುವ ಎಲ್ಲಾ ಪಾತ್ರಗಳನ್ನು ನಟವರ್ಗ ಚೆನ್ನಾಗಿ ನಿಭಾಯಿಸಿದೆ. ಅದರಲ್ಲೂ ಮಂಜುನ ಮುಖ್ಯಪಾತ್ರಧಾರಿಯಾಗಿ ಶೃಂಗ, ತಂದೆಯಾಗಿ ಮಹದೇವ್ ಹಡಪದ್, ತಾಯಿಯಾಗಿ ಎಂ.ಡಿ. ಪಲ್ಲವಿ, ಲಾಯರ್ ಆಗಿ ಬಾಲಾಜಿ ಮನೋಹರ್, ಪತ್ರಕರ್ತ ವಿಜಯ್ ಆಗಿ ವೆಂಕಟೇಶ ಪ್ರಸಾದ್, ಸಾಮಾಜಿಕ ಕಾರ್ಯಕರ್ತ ರಫಿ ಆಗಿ ರಾಜೇಶ್ ನಟರಂಗ, ಇನ್ಸ್ ಪೆಕ್ಟರ್ ಆಗಿ ಕೃಷ್ಣ ಹೆಬ್ಬಾಳೆ ಅವರನ್ನು ಉಲ್ಲೇಖಿಸಬಹುದು. ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಶಿವ ಬಿಕೆ ಕುಮಾರರ ಅದ್ಭುತ ಛಾಯಾಗ್ರಹಣ, ವಿರೇಂದ್ರ ಮಲ್ಲಣ್ಣರ ನಾಜೂಕಾಗಿ ಹೆಣೆದ ಚಿತ್ರಕತೆ ಮತ್ತು ಸುರೇಶ್ ಅರ್ಮುಗಮ್ ಅವರ ಸಂಕಲನ.

ಒಟ್ಟಿನಲ್ಲಿ – ಈ ನೆಲದಲ್ಲಿ ಎಲ್ಲರ ರಕ್ಷಣೆಗಾಗಿ ಸಂವಿಧಾನವಿದೆ. ಆದರೂ, ಸಮಾಜದಿಂದ ಆಚೆಗೆ ಉಳಿದ ಅಥವಾ ತಳಲ್ಪಟ್ಟ  ಜನಸಮುದಾಯಗಳನ್ನು ಸಕಲ ಸೌಲಭ್ಯ ಹೊಂದಿದ ನಾಗರೀಕ ಸಮಾಜ ವಿನಾಕಾರಣ ಅಪರಾಧಿಗಳಂತೆ ಕಡೆಗಣ್ಣಿಂದಲೇ ನೋಡುತ್ತದೆ. ಅದರಲ್ಲೂ, ಕಾನೂನನ್ನು ರೂಪಿಸುವ ಶಾಸಕಾಂಗ ಅದನ್ನು ಅನುಷ್ಠಾನ ತರುವ ಕಾರ್ಯಾಂಗ ಕೂಡ ಅಂಥ ಸಮುದಾಯಗಳನ್ನು ಕಡೆಗಣಿಸುತ್ತಲೇ ಬಂದಿದೆ. ಗೌರವದಿಂದ ಬದುಕಲು ಬೇಕಾದ ಕನಿಷ್ಟ ಸೌಲಭ್ಯಗಳನ್ನು ಒದಗಿಸುವುದು ಒತ್ತಟ್ಟಿಗಿರಲಿ, ಅವರ ಪಾಡಿಗೆ ಅವರು ಜೀವಿಸಲು ಬಿಡದೆ ಕಾನೂನುಗಳು ರೂಪಿತವಾಗುತ್ತವೆ. ಕಾನೂನು ಪಾಲನೆ ಹೊಣೆ ಹೊತ್ತ ಪೊಲೀಸ್ ವಿಭಾಗ ತನ್ನಚ್ಚಿಯಂತೆ ಅಥವಾ ಆಳುವ ಪ್ರಭುತ್ವದ ಅಣತಿಯಂತೆ ಇಂಥ ತಳಸಮುದಾಯಗಳ ಮೇಲೆ ಮುಗಿ ಬಿದ್ದು ಅವರ ಅಸ್ತಿತ್ವವನ್ನೇ ಪ್ರಶ್ನಿಸುತ್ತದೆ. ಆಧಾರ್ ಕಾರ್ಡ್, ಓಟಿನ ಕಾರ್ಡ್, ರೇಷನ್ ಕಾರ್ಡ್ ಇತ್ಯಾದಿ ಕಾಗದದ ಚೂರುಗಳಲ್ಲೇ ಮನುಷ್ಯನ ಇರುವಿಕೆಯನ್ನು ಗುರುತಿಸುವಂತಾಗಿರುವ ವ್ಯವಸ್ಥೆಯಲ್ಲಿ ಮಾನವೀಯ ಸ್ಪಂದನೆಗಳು ಮರೆಯಾಗುತ್ತಿವೆ. ಇವೆಲ್ಲವನ್ನು ಮಂಸೋರೆ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಸಿನಿಮಾವನ್ನು ಕಲೆಯಾಗಿ ಕಟ್ಟಿದ್ದಾರೆ ಆ ಮೂಲಕ ಸಂವಿಧಾನದ ಮಹತ್ವವನ್ನು ಹೇಳಿದ್ದಾರೆ.

ಸಿನಿಮಾ – ನಾಗರೀಕತೆಯ ಮುಖವಾಡ ಹೊತ್ತ ಶಿಷ್ಟ ಸಮಾಜ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುತ್ತದೆ. ಕಾಡಿನ ಮಕ್ಕಳ ಪ್ರಭುತ್ವದ ಹಿಂಸೆಯಲ್ಲಿ ತಮ್ಮ ಪಾಲೆಷ್ಟು ಎಂದು ಚಿಂತಿಸುವಂತಾಗುತ್ತದೆ. ಜೊತೆಗೆ ಇಂಥ ವಸ್ತುವನ್ನು ಆಯ್ದುಕೊಂಡು ಸಿನಿಮಾ ಮಾಡುವ ಧೀಮಂತಿಕೆ ತೋರಿದ ನಿರ್ದೇಶಕ ಮಂಸೋರೆ ಮತ್ತು ಬಂಡವಾಳ ಹಾಕಿದ ದೇವರಾಜ್ ಆರ್ ಅವರ ಬಗ್ಗೆ ಅಭಿಮಾನ, ಹೆಮ್ಮೆ ಹುಟ್ಟುತ್ತದೆ. 

ಅಲ್ಲದೆ, ಈ ಕಾಲಘಟ್ಟದಲ್ಲಿ ಕೂಡ ಆಳುವವರನ್ನು ಪ್ರಶ್ನಿಸಿದರೆ ಸಾಕು ಅಂಥವರನ್ನು UAPA ಕಾಯ್ದೆ ಅಡಿಯಲ್ಲಿ ದೇಶದ್ರೋಹ ಆರೋಪ ಹೊರಿಸಿ, ಸುಳ್ಳು ಸಾಕ್ಷಗಳನ್ನು ಸೃಷ್ಟಿಸಿ, ಬಂಧಿಸಿ ವರ್ಷಾನುಗಟ್ಟಲೆ ವಿಚಾರಣೆಗಳು ಮುಗಿಯದೆ, ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತಿರುವ ಇಂದಿನ ಭಾರತದ ರಾಜಕೀಯ ಸಂದರ್ಭದಲ್ಲಿ ಈ ಸಿನಿಮಾ ಹೆಚ್ಚು ಪ್ರಸ್ತುತವಾಗಿದೆ. ಕರಾಳ ಕಾಯ್ದೆ UAPAಯ ಅಗತ್ಯತೆಯ ಬಗ್ಗೆ ನಾಗರೀಕರು ಪ್ರಶ್ನಿಸಲೇ ಬೇಕಾದ ಕಾಲ ಬಂದಿದೆ.

ಚಂದ್ರಪ್ರಭ ಕಠಾರಿ (cpkatari@yahoo.com)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x