ಮಿನಿ ಕತೆಗಳು: ಅರವಿಂದ. ಜಿ. ಜೋಷಿ.

“ಹರಿದ ಜೇಬು”

ಸಂಜೆ, ಶಾಲೆಯಿಂದ ಮನೆಗೆ ಬಂದ ಹತ್ತರ ಪೋರ, ಗೋಪಿ ತನ್ನ ಏಳೆಂಟು ಗೆಳೆಯರೊಂದಿಗೆ ಸೇರಿ, ಮನೆಯ ಎದುರಿನ ರಸ್ತೆಮೇಲೆ ಲಗೋರಿ ಆಡುತ್ತಿದ್ದ. ಆಗ, ಆತನ ಪಕ್ಕದ ಮನೆ ಯಲ್ಲಿ ವಾಸವಾಗಿದ್ದ  ನಡುವಯಸ್ಸಿನ ಭಾಗ್ಯ (ಆಂಟಿ) ಮನೆಯಿದಾಚೆಗೆ ಬಂದು, ಜಗುಲಿ ಮೇಲೆ ನಿಂತು, “ಗೋಪೀ. . ಗೋಪೀ. . “ಎಂದು ಕೂಗಿ ಕರೆದು ಆತನ ಕೈಗೆ ಇನ್ನೂರು ರೂಪಾಯಿ ನೋಟು ಕೊಡುತ್ತ, “ಲೋ. . ಗೋಪೀ. ಇಲ್ಲೇ ಹಿಂದ್ಗಡೆ ಶೇಟ್ರ ಅಂಗ್ಡಿಗೆ ಹೋಗಿ ಒಂದ್ ಪ್ಯಾಕೆಟ್ ಎಣ್ಣೆ, ಒಂದು ಕೆ. ಜಿ. ಬೆಲ್ಲಾ ತಂದ್ಕೊಡೋ, ನನಗ್ಯಾಕೋ ಕಾಲು ತುಂಬಾ ನೋಯ್ತಾ ಇದೆ”ಎಂದು ಕೇಳಿಕೊಂಡಳು.

ಲಗೋರಿ ಆಟ , ತುಂಬ ಮಜವಾಗಿ ನಡೆಯುತ್ತಿರುವ ಸಮಯದಲ್ಲಿ ಈ ಆಂಟಿ ತನ್ನನ್ನು ಕೂಗಿದ್ದಕ್ಕೆ ಗೋಪಿ ಗೆ ತುಂಬ ಕೋಪ

ಬೇಸರ ಬಂದಿತ್ತಾದರೂ, “ಪಾಪದ ಆಂಟಿ ಕಾಲು ನೋವು ಅಂತಿದ್ದಾರೆ, ಒಂದು ನಿಮಿಷ ಹೋಗಿ ತಂದು ಕೊಟ್ಟರಾಯ್ತು” ಎಂದು ಅಂದು ಕೊಂಡವ , ಅವಳಿಂದ ಹಣ, ಬ್ಯಾಗು ಪಡೆದು ಓಡಿ ಹೋಗಿ ಶೆಟ್ಟರ ಅಂಗಡಿಯಲ್ಲಿ ಅವರು ಹೇಳಿದಂತೆ, ಒಂದು ಪ್ಯಾಕೆಟ್ ಎಣ್ಣೆ, ಒಂದು ಕೆ. ಜಿ. ಬೆಲ್ಲ ಖರೀದಿಸಿ ಇನ್ನೂರರ ನೋಟು ಕೊಟ್ಟು, ಅಂಗಡಿಯಾತ ನೀಡಿದ ಉಳಿಕೆ ಇಪ್ಪತ್ತು ರೂಪಾಯಿಯ ನೋಟು ಪಡೆದು, ತನ್ನ ಷರ್ಟಿನ ಜೇಬೊಳಗೆ ತುರುಕಿ ಕೊಂಡು ಮತ್ತೆ ಮನೆಯತ್ತ ಓಡಿ ಬಂದ. ಪಾಪದ ಗೋಪಿಗೆ ತನ್ನ ಶರ್ಟಿನ ಜೇಬು ಹರಿದಿರುವುದು, ಆತ ಅದರೊಳಗೆ ತುರುಕಿದ ಇಪ್ಪತ್ತರ ನೋಟು, ಅಲ್ಲೇ ನೆಲದ ಮೇಲೆ ಬಿದ್ದಿರುವುದು ಗೊತ್ತೇ ಇರಲಿಲ್ಲ. ಆತನ ತಲೆಯಲ್ಲಿ ಬರೀ ಆಟದ ಜ್ಞಾನ ತುಂಬಿತ್ತು.

 ಜಗುಲಿಯ ಮೇಲೆ ಕುಳಿತು ಕಾಯುತ್ತಿದ್ದ, ಭಾಗ್ಯ ಆಂಟಿಗೆ ಗೋಪಿ ಸಾಮಗ್ರಿ ಕೊಟ್ಟ ನಂತರ ಅವಳು”ಉಳಿಕೆ ಹಣ”? ಎಂದು ಪ್ರಶ್ನಿಸಿದಳು. “ಹಾಂ. . ಕೊಟ್ಟೆ ಆಂಟಿ “ಎನ್ನುತ್ತ ಗೋಪಿ ತನ್ನ ಶರ್ಟಿನ ಜೇಬೊಳಗೆ ಕೈ ಇಳಿಬಿಟ್ಟ.

ಹರಿದ ಜೇಬಿನಿಂದ ಆತನ ಕೈ ಬೆರಳು ಈಚೆಗೆ ಬಂದವು. ಆತಂಕಕ್ಕೊಳಗಾದ ಗೋಪಿ , ಮತ್ತೆ ಮತ್ತೆ ಕೈ ಹಾಕಿ ನೋಡಿದ. ತೂತು ಬಿಟ್ಟರೆ ಅಲ್ಲಿನ್ನೇನೂ ಇಲ್ಲ. . ! ಹಣೆಯಲ್ಲಿ ಬೆವರು ಮೂಡಲಾರಂಭಿಸಿತು. ತಡವರಿಸುತ್ತ “ಅದು ಆಂಟಿ ಅಂಗ್ಡಿಯವರು ಉಳಿಕೆ ಹಣ ಇಪ್ಪತ್ತು ರೂಪಾಯಿಯ ನೋಟು ಕೊಟ್ರು. . ಅದನ್ನು ಇದೇ ಜೇಬಿನಲ್ಲಿ ಹಾಕ್ಕೊಂಡು. . . . . ಎಂದು ಹೇಳುತ್ತಿದ್ದವನ  ಮಾತು , ಪೂರ್ತಿ ಆಲಿಸದೇ ಆ ಭಾಗ್ಯ ಆಂಟಿ ಈ ಬಾಲಕ ತನಗೆ ಸಮಯಕ್ಕೆ ಸಹಾಯ ಮಾಡಿದ್ದಾನೆಂಬುವುದನ್ನೂ  ಮರೆತು, ದೊಡ್ಡ ಗಂಟಲು ತೆಗೆದು ಒಂದು ಸೀನ್ ಕ್ರಿಯೇಟ್ ಮಾಡುವುದರ ಜೊತೆಗೆ”ತಾಳು. . ನಿಮ್ಮಪ್ಪನಿಗೆ ಹೇಳ್ತೆನೆ”ಎಂದು ಕೂಗಾಡಲು ಆರಂಭಿಸಿದಳು. “ಛೇ. . . ತಾನೇನೂ ತಪ್ಪು ಮಾಡದಿದ್ದರೂ ಅನ್ಯಥಾ ನಿಂದನೆಯ ಮಾತುಕೇಳುವಂತಾಯ್ತಲ್ಲ ಎಂದು ಗೋಪಿ ತನ್ನನ್ನು ತಾನೇ ಹಳಹಳಿಸುತ್ತ, ಭಯ ಪಟ್ಟು, ಏನೂ ತೋಚದವನಂತಾಗಿ, ಆಟಕ್ಕೂ ಹೋಗದೇ ಜಗುಲಿಯ ಕಂಬಕ್ಕೊರಗಿ ಕುಳಿತು ಬಿಟ್ಟ.

ಎರಡೂ ಕಣ್ಣುಗಳಿಂದ ನೀರು ಒಸರತೊಡಗಿತು. ಅಷ್ಟರಲ್ಲಿ ಆ ಅಂಗಡಿಯಾತನ ಎಂಟು ವರ್ಷದ ಮಗಳು, “ಗೋಪೀ. . ಏ. ಗೋಪೀ. . “ಎಂದು ಓಡುತ್ತಾ ಬಂದು”ತಗೊಳ್ಳೋ ಇದನ್ನಾ, ನಮ್ಮ ಅಂಗ್ಡಿ ಮುಂದೆ ಬೀಳಸ್ಕೊಂಡು ಹೋಗಿದ್ದೀ. . ನಾನೇ ನೋಡಿ ಅದನ್ನ ಎತ್ಕೊಂಡು, ಎರಡು ಮೂರು ಸಲಾ ಕೂಗ್ತಿದ್ದರೂ ಏನೂ ಕೇಳ್ದವನ ರೀತಿ ಓಡಿ ಬಂದೆಲ್ಲಾ. . ತಗೋ ಇದನ್ನ”ಎನ್ನುತ್ತ ಅವನ ಕೈ ಗೆ ಇಪ್ಪತ್ತರ ನೋಟು ಕೊಟ್ಟಾಗ ಕಳೆಗುಂದಿದ ಗೋಪಿ ಮುಖದಲ್ಲಿ ಮತ್ತೆ ಹರುಷ ಉಕ್ಕಿ ಬಂದಿತು. ಕೂಡಲೇ ಆತ ಆ ಹಣವನ್ನು ಭಾಗ್ಯ ಆಂಟಿಗೆ  ಕೊಟ್ಟು, ಆಟಕ್ಕೆ ಹೊರಡಲು ಮುಂದಾದ. ಇದೆಲ್ಲವನ್ನೂ ಬಾಗಿಲಲ್ಲೇ ನಿಂತು ನೋಡುತ್ತಿದ್ದ ಗೋಪಿಯ , ತಾಯಿ ಆತನನ್ನು ಕೂಗಿ” ಗೋಪೀ. . ಬಾ ಇಲ್ಲಿ, ಎಲ್ಲಿ ನಿನ್ನ ಷರ್ಟ ಬಿಚ್ಚಿಕೊಡು, ಹರಿದ ಜೇಬು  ಸರಿಮಾಡ್ತೇನೆ” ಎಂದು ಹೇಳಿದಾಗ, ಅಮ್ಮನ ಮಮತೆಗೆ ಮಾರು ಹೋದ ಗೋಪಿ ಓಡಿಬಂದು ಅವಳನ್ನು ತಬ್ಬಿಕೊಂಡ.

***

“ಕಪಾಳ ಮೋಕ್ಷ”

ಸುರಿಯುತ್ತಿದ್ದ ಮಳೆಹನಿಗಳು ಜೋರಾದಾಗ, ಸ್ಕೂಟೀ ಮೇಲೆ ಹೊರಟಿದ್ದ ಶಾಲಿನಿ, ಲಗುಬಗೆಯಿಂದ ಹತ್ತಿರದ ಬಸ್ ಸ್ಟಾಪ್ ಬಳಿ ಅದನ್ನು ನಿಲ್ಲಿಸಿ, ಹೆಲ್ಮೆಟ್ ತೆಗೆಯುತ್ತ ಖಾಲಿ ಇದ್ದ ಸೀಟಿನ ಮೇಲೆ ಬಂದು ಕುಳಿತು, ತನ್ನ ಹೆಗಲು ಮೇಲಿದ್ದ ಉದ್ದನೆ ಬ್ಯಾಗ್ ನಿಂದ ಪುಟ್ಟ ಟವಲ್ ತೆಗೆದು  ಕೈ, ಕತ್ತು, ಮುಖ ಒರೆಸಿಕೊಳ್ಳುತ್ತಿದ್ದಾಗ ಅವಳ ದೃಷ್ಟಿ, ಅದೇ ಬಸ್ ಸ್ಟಾಪ್ ನ ಎದುರು ಬದಿ ಗೋಡೆಯ ಕೆಳಗೆ ಭಿಕ್ಷುಕಿಯೊರ್ವಳು ತನ್ನ ಪುಟ್ಟ ಕಂದಮ್ಮ ನೊಂದಿಗೆ ಮಲಗಿರುವುದರತ್ತ ಬೀಳುತ್ತದೆ. ಟವಲ್ ನ್ನು ಬ್ಯಾಗಿನೊಳಗೆ ಇಟ್ಟು, ಅದರೊಳಗಿದ್ದ ರೈಟಿಂಗ್ ಪ್ಯಾಡ್ ಗೆ ಒಂದು ಡ್ರಾಯಿಂಗ್ ಹಾಳೆ ಸಿಕ್ಕಿಸಿ, ಪೆನ್ಸಿಲ್ ನಿಂದ ತಾನು ಕಾಣುತ್ತಿದ್ದ ದೃಶ್ಯ ಬಿಡಿಸಲಾರಂಭಿಸುತ್ತಾಳೆ. ಈ ನಡುವೆ ಠಾಕು ಠೀಕಾಗಿ ಡ್ರೆಸ್ ಮಾಡಿಕೊಂಡ ಸುಮಾರು ನಲವತ್ತರ ಪ್ರಾಯದ ವ್ಯಕ್ತಿ, ತನ್ನ ಸ್ಕೂಟರ್ ನ್ನು ಬಸ್ ಸ್ಟಾಪ್ ಬಳಿ ನಿಲ್ಲಿಸಿ, ಜೇಬಿನಿಂದ ಕರ್ಚೀಫ್ ತೆಗೆದು ಒರೆಸಿಕೊಳ್ಳುತ್ತ ಶಾಲಿನಿ ಕುಳಿತ ಸ್ವಲ್ಪ ಅಂತರದಲ್ಲಿ ಬಂದು  ಕುಳಿತುಕೊಳ್ಳುತ್ತಾನೆ. ಆತನ ಬರುವಿಕೆ, ಆತ ಧರಿಸಿದ ತಿಳಿ ಹಸಿರು ಬಣ್ಣದ ಕೂಲಿಂಗ್ ಗ್ಲಾಸ್ ನೊಳಗಿಂದ ತನ್ನನ್ನೇ ವಿಚಿತ್ರ ವಾಗಿ ನೋಡುತ್ತಿರುವಿಕೆ ಎಲ್ಲವನ್ನೂ ಶಾಲಿನಿ ಓರೆ ಕಣ್ಣಿನಿಂದ ಆತನಿಗೆ ಗೊತ್ತಾಗದ ರೀತಿ ನೋಡುತ್ತಲೇ ಇದ್ದಳು.

ಚಿತ್ರ ಬರೆದು ಮುಗಿಸಿ ಅದಕ್ಕೆ ದಿನಾಂಕ ನಮೂದಿಸುತ್ತಿರುವಾಗ, ಅಲ್ಲಿ ಬಂದು ಕುಳಿತ ವ್ಯಕ್ತಿ” ವಾವ್. . ಟ್ರೆಮೆಂಡಸ್, ತುಂಬಾ ಚೆನ್ನಾಗಿ ಬಿಡಿಸಿದ್ದೀರಿ, ಗುಡ್” ಎನ್ನುತ್ತ ಉದ್ಘಾರ ತೆಗೆದು ಮೆಚ್ಚಿಗೆ ಸೂಚಿಸಿದ. ಆತನತ್ತ ತಿರುಗಿಯೂ ನೋಡದೆ”ಥ್ಯಾಂಕ್ಸ್” ಹೇಳುತ್ತ ಶಾಲಿನಿ ತನ್ನ  ರೈಟಿಂಗ್ ಪ್ಯಾಡ್ ನ್ನು ಪುನಃ ಬ್ಯಾಗ್ ನೊಳಗೆ ಇಡಲು ಮುಂದಾದಾಗ, ಆತ “Madam, . . if you don’t mind. . ನನ್ನದೊಂದು ಚಿತ್ರ. . “ಎಂದು ಹಲ್ಲು ಗಿಂಜಿದ. ಶಾಲಿನಿ ಒಮ್ಮೆ ಬಸ್ ಸ್ಟಾಪ್ ನಿಂದ ಆಚೆ ನೋಡಿದಳು. ಮಳೆ ಇನ್ನೂ  ಸುರಿಯುತ್ತಲೇ ಇತ್ತು. ಇಂತಹ ಮಳೆಯಲ್ಲಿ ತಾನು ಹೋಗುವುದಾದರೂ ಹೇಗೆ?-ಎಂದು ಯೋಚಿಸಿ, ರೈಟಿಂಗ್ ಪ್ಯಾಡ್ ಗೆ ಮತ್ತೊಂದು ಡ್ರಾಯಿಂಗ್ ಹಾಳೆ ಜೋಡಿಸತೊಡಗಿದಳು. ಅಷ್ಟರಲ್ಲಿ ಆ ಬಸ್ ಸ್ಟಾಪ್ ಗೆ ಮೂರು ಮಹಿಳೆಯರು ಸೇರಿದಂತೆ ಐದಾರು ಜನ ಒಳಗೆ ಬಂದು ನಿಂತರು. ಪಳಗಿದ ಕೈ ಯಿಂದ ಶಾಲಿನಿ ಆ ವ್ಯಕ್ತಿಯ ಚಿತ್ರವನ್ನು ಹತ್ತಾರು ನಿಮಿಷಗಳಲ್ಲೆಲ್ಲ ಬಿಡಿಸಿ ಆತನಿಗೆ ವಿನೀತನಾಗಿ”ನೋಡಿ ಸಾರ್”ಎಂದಳು.

ಆತ ಕುಳಿತಲ್ಲಿಂದ ಎದ್ದು ಅವಳ ಮುಂದೆ ನಿಂತು” ವೈರಿ ವೈರಿ ನೈಸ್. . . “ಎನ್ನಲು ಆರಂಭಿಸಿದ. ಆತನ ಬಾಯಿ ಮಾತ್ರ ಈ ಶಬ್ದ ಹೇಳುತ್ತಿತ್ತೇ ವಿನಃ ಕಣ್ಣುಗಳು ಶಾಲಿನಿಯ ಅಂಗಾಂಗಳ ಮೇಲೆ ಓಡುತ್ತಿದ್ದವು . ಆತನ ಈ ಕುತ್ಸೀತ ಮನೋಭಾವನೆ ಅರಿಯಲು ಸೂಕ್ಷ್ಮ ಮನಸ್ಸಿನ ಶಾಲಿನಿ ಗೆ ಬಹಳ ಸಮಯ ಬೇಕಾಗಲಿಲ್ಲ. ಆತ ಹಾಗೇ ನೋಡುತ್ತಿದ್ದವ ತನ್ನ ಜೇಬಿನಿಂದ ಐನೂರರ ನೋಟು ತೆಗೆದು ಶಾಲಿನಿಯ ಎಡ ಕೈಯಲ್ಲಿ ಬಲವಂತವಾಗಿ ಇಡುತ್ತ “ಇಟ್ಕೊಳ್ಳಿ  ಮೇಡಂ ಇದನ್ನ. . . . “ಎನ್ನಲು ಶುರು ಮಾಡಿದ. ಆತನ ಮಾತು, ಹಾವ ಭಾವ, ವರ್ತನೆ ಇರುಸುಮುರುಸು ತಂದಂತಾಗಿ ಶಾಲಿನಿ, ರೊಚ್ಚಿಗೆದ್ದವಳಂತೆ  ಅಲ್ಲಿರುವ  ಎಲ್ಲರಿಗೂ ಕೇಳುವ ರೀತಿ” ರ್ರೀ. . ಮಿಸ್ಟರ್, ನಾನು ಹಣಕ್ಕೊಸ್ಕರ ಇದೆಲ್ಲ ಮಾಡ್ತಿಲ್ಲ, it is my hobby ಮೊದ್ಲು ಇನ್ನೊಬ್ಬ ಹೆಣ್ಣುಮಕ್ಕಳ ಜೊತೆ ಹೇಗೆ ವರ್ತಿಸಬೇಕು ಎನ್ನೋದು ಕಲೀರಿ. . “ಎನ್ನುತ್ತ ತಾನು ಬರೆದ ಆತನ ಚಿತ್ರವನ್ನು ಪರ-ಪರನೇ ಹರಿದು ಆತನ ಬೂಟಿನ ಮೇಲೆ ಎಸೆದು, ಹೆಲ್ಮೆಟ್ ಎತ್ತಿ ಕೊಂಡು ಹೊರಟು ನಿಂತಾಗ, ಆ ವ್ಯಕ್ತಿ ಗೆ ಅಲ್ಲಿರುವವರ ಎದುರು  ತಾನು  ಕಪಾಳ ಮೋಕ್ಷ ಮಾಡಿಸಿಕೊಂಡಂತೆ ಎನ್ನಿಸದೇ ಇರಲಿಲ್ಲ.

-ಅರವಿಂದ. ಜಿ. ಜೋಷಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x