ಡಾ. ಶಾಂತಲಕ್ಷ್ಮಿಯವರ ಕಾವ್ಯ ಚಿಂತನೆ: ಸಂತೋಷ್ ಟಿ

ಅಭಿಜಾತ ಕನ್ನಡ ಲಲಿತಾಕಲಾ ಲೋಕದ ಕಾವ್ಯನ್ವೇಷಣೆಯಲ್ಲಿ ಹೊಸಚಿಂತನೆಗಳ ಬೆರಗು ಮೂಡಿಸಿದ ಕವಯತ್ರಿ ಡಾ. ಶಾಂತಲಕ್ಷ್ಮಿ. ಭಾವನೂಭೂತಿಯ ಅಭೀಪ್ಸೆಯ ಉತ್ಸುಕತೆಯಿಂದ ಸ್ರಜನಶೀಲ ಅಭಿವ್ಯಕ್ತಿ ಮಾಧ್ಯಮ ಕಾವ್ಯದಲ್ಲಿ ತಮ್ಮ ಧ್ವನಿಯನ್ನು ಅನುಸಂಧಾನ ಮಾಡುತ್ತಿರುವ ಮಹಿಳಾ ಸಾಧಕರಲ್ಲಿ ಈ ಕವಯತ್ರಿಯ ಕಾವ್ಯ ನವಿರಾದ ಭಾವಗಳಿಂದ ಜೀವತುಂಬಿ ಹರಿಯುವಂತದ್ದು. ವಾಸ್ತವದ ಬದುಕಿನ ನುಂಟು ಉಂಟು ಮಾಡಿದ ಸಹನೀಯತೆˌ ಕರುಳು ಮಿಡಿಯುವ ಭಾವಧಾರೆˌಪ್ರಕ್ರತಿಯ ಜೀವ ವೈವಿಧ್ಯ ದ್ರವ್ಯˌಬದುಕಿನ ಮೌಲ್ಯಗಳುˌ ಜಾಗತಿಕವಾಗಿ ಬದಲಾದ ಸನ್ನಿವೇಶಗಳುˌ ಕೃತಕತೆಯ ಮೋಡಿ ನಿಯೋನ್ ಸನ್ನೆಗಳು, ಸ್ವಾರ್ಥ ಪರಿಸ್ಥಿತಿಯ ಬಿಕ್ಕಟುಗಳ ಲಾಲಸೆಗಳು ಎಲ್ಲವೂ ಕವಯತ್ರಿಗೆ ವಸ್ತುವೇ ಆಗಿದೆ. ಬಹುಶಿಸ್ತಿನ ನೆಲೆಯ ಆಯಾಮಗಳಲ್ಲಿ ಆಧುನಿಕ ವಿದ್ಯಾಮಾನಗಳ ತವಕ ತಲ್ಲಣ ತಂದ ಆತಂಕದ ಸಂಗತಿಗಳು ಸಂಕೀರ್ಣ ಸ್ವರೂಪದಲ್ಲಿ ಕವಿತೆಯ ಮೈವೇತ್ತು ಯಾವ ಚಳುವಳಿˌಪಂಥˌಸಿದ್ದಾಂತ ರಾದ್ಧಾಂತಗಳ ಪರಧಿಗೆ ನಿಲ್ಲದೆ ಮುಕ್ತ ಮನಸ್ಸಿನಿಂದ ಬದುಕಿನ ವಾಸ್ತವ ಕೇಂದ್ರಿತ ಅನುಭವ ಗ್ರಹಿಕೆಗಳನ್ನು ಮನಗಾಣುವ ಪರಿ ಕಾವ್ಯ ಪ್ರಪಂಚದ ಮುಖ್ಯ ಅನುಸಂಧಾನವಾಗಿದೆ. ಇದು ಅವರು ಕಾವ್ಯವನ್ನು ಕಟ್ಟಿದ ರೀತಿ ಮತ್ತು ಹಾರೈಕೆ.

“ಯೇಷಾಂ ಕಾವ್ಯನುಶೀಲನವಶಾತ್
ವಿಶದೀಭೂತೇ ಮನೋಮುಕುರೇ
ವರ್ಣನೀಯ ತನ್ಮಯೀಭವನ ಯೋಗ್ಯತಾ
ತೇ ಹ್ರದಯ ಸಂವಾದಭಾಜಃ ಸಹ್ರದಯಾಃ”

ಅಭಿನವಗುಪ್ತನ ಭಾರತೀಯ ಕಾವ್ಯಮೀಮಾಂಸೆಯ ಈ ಸಾಲುಗಳು ಕಾವ್ಯಗಳನ್ನು ಪರಿಶೀಲಿಸಿˌ ಮನಸ್ಸೆಂಬ ಕನ್ನಡಿ ನಿರ್ಮಲವಾಗಿರುವುದರಿಂದˌ ವರ್ಣಿತ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗುಂಟೋ ಅವರೇ ಸಹ್ರದಯರು ಕವಿಯೊಂದಿಗೆ ಹ್ರದಯ ಹೊಂದಿಕೆಯುಳ್ಳವರು ಎಂಬುದು ಇಲ್ಲಿ ವೇದ್ಯವಾಗುವ ಸಂಗತಿ.

“ಮೌನದ ನೆಲೆಯಲ್ಲಿ ಗಾಳಿನೀರಿನ ಜೊತೆ
ಸೂರ್ಯ-ಚಂದ್ರ-ನಕ್ಷತ್ರಗಳು;
ಅಂತ್ಯವಿಲ್ಲದ ಭಾವಸಂವಹನದ
ಸಮ್ರದ್ಧ ಅಕ್ಷಯ ಪಾತ್ರೆ ನೀನು!
ನಿಸ್ವಾರ್ಥದ ಬೇರಿನ ಬುಡಗಳ ನಡುವೆ
ಒಲುಮೆಯ ಹೊನಲಲ್ಲಿ ನಿನ್ನ ಅಣೆಕಟ್ಟುಗಳು ಸುಭದ್ರ !
ಬದುಕಿಗೊಂದು ನೆಲೆ ಬೆಲೆ ಕಲ್ಪಿಸುವ ನೆಪ !” (ಪ್ರೀತಿ)

ಸಂವೇದನಾಶೀಲ ಮನಸ್ಥಿತಿಯ ಕವಯತ್ರಿಯ ಮನದ ಪ್ರೀತಿಯ ಆರ್ತತೆ ಇದು.

“ಏಕಾಂತದಲಿ
ಗಟ್ಟಿಯಾಗುವ
ಹೆಣ್ಣು
ಪ್ರೀತಿಯ
ಹಣತೆ ಹಚ್ಚುತ್ತಾ
ಕತ್ತಲೆಯಲಿ
ಬೆಳಕು
ಚೆಲ್ಲುವ
ಸಂಕೇತ. ” (ಸಂಕೇತ ಕವಿತೆ)

ಇದು ತಪ್ತ ಪರಿಸರದ ಬದುಕಿನ ಗೊಡವೆಗಳಲ್ಲಿ ನೊಂದ ಮಹಿಳೆಯರಿಗೆ ಆತ್ಮಸಾಕ್ಷಿಯಾದ ಹಣತೆ ಮತ್ತು ಅದರಿಂದ ಹೊಮ್ಮುವ ಬೆಳಕು ಸ್ರಜನಶೀಲವಾದ ಆಶಯ.

“ಆತ್ಮ ವಿಶ್ವಾಸದ
ಎಣ್ಣೆಬತ್ತಿಯಲ್ಲಿ
ಸ್ವಲ್ವವಾದರೂ
ಕತ್ತಲೆ ಸರಿಸಿ
ಬೆಳಕು ನೀಡುವೆ ನೀನು!” (ಹಣತೆ)

ಹೀಗೆ ಸ್ವಲ್ಪವಾದರೂ ಕಾವ್ಯ ಪ್ರತಿಭೆಯನ್ನು ಆಪ್ತವಾದ ನೆಲೆಯಲ್ಲಿ ಅಂತರಂಗದಲ್ಲಿ ತುಂಬಿಕೊಂಡು ಆತ್ಮವಿಶ್ವಾಸದ ಕಾವ್ಯದ ಬೆಳಕು ಹೊತ್ತಿಸಿದ ಕವಯತ್ರಿಯ ಕಾವ್ಯ ಚಿಂತನೆ. ಪ್ರಸ್ತುತ ಜಾಯಾಮಾನದಲ್ಲಿ ಕನ್ನಡ ಕಾವ್ಯ ಸ್ವಷ್ಟವಾದ ˌನೇರವಾದ ದಾರಿಯಲ್ಲಿ ಸಾಗುತ್ತಿದೆ ಎಂದು ಸಾಬೀತು ಮಾಡಲು ನಮ್ಮಗೆ ಸಾಧ್ಯವಿಲ್ಲ; ಆದರೂ ಹೊಸಪೀಳಿಗೆ ತಮ್ಮ ಅಭಿವ್ಯಕ್ತಿಯ ಓತ್ತಾಸೆಗಳನ್ನು ಅನುಭವಗಳನ್ನು ಅನೇಕ ಸಾಧ್ಯಸಾಧ್ಯತೆಗಳಿಂದ ಕಂಡುಕೊಂಡು ತಮ್ಮ ಅಭಿವ್ಯಕ್ತಿಯ ಕ್ರಮದಲ್ಲಿ ಕಾವ್ಯಧಾರಣೆ ಮಾಡುತ್ತಿದ್ದಾರೆ.

ನಮ್ಮ ಸಾಹಿತ್ಯ ಮತ್ತು ಸಂಸ್ಕ್ರತಿಯ ಪರಂಪರೆಯ ಚಹರೆಯ ಮೂಲಕ ಕವಿತೆ ಬರೆಯುತ್ತಿದ್ದಾರೆ ಎಂಬುದು ಸ್ವಾಗತರ್ಹ. ಮುಖ್ಯವಾಗಿ ಕವಿಯು ಯಾವುದೇ ಒಂದು ಸಾಹಿತ್ಯಕ ಚಳುವಳಿಯ ಹಣ್ಣೆಪಟ್ಟಿಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು ಹಿಡನ್ ಅಜೆಂಡಾಗಳನ್ನು ಸ್ರಜಿಸದೇˌಪ್ಯಾಸಿಷ್ಟ್ ಆಗದೇˌ ವಿಶಾಲವಾದ ಮನೋಭಾವದಿಂದ ಕಾವ್ಯ ಬರೆಯುತ್ತಿರುವುದು ಅನಿಯತಿಯ ಬದಲಾವಣೆಯ ಹೊಸ ಅರಿವಿನ ಸ್ರಷ್ಟಿಗೆ ಕಾರಣವಾಗಿದೆ ಎನ್ನಬಹುದು. ಬಂಡಾಯೋತ್ತರˌನವ್ಯೋತ್ತರ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯ ದಲ್ಲಿ ಎಲ್ಲಿಲ್ಲದಷ್ಟು ಯುವಕರು ತಮ್ಮಗೆ ಅನ್ನಿಸಿದ್ದನ್ನು ಸಮರ್ಥಿಸಿ ಬರೆಯಲು ಶಕ್ಯವಿರುವುದು ಕಂಡು ಬರುವ ವಿಚಾರ. ಮುಕ್ತ ಛಂದಸ್ಸಿನ ಆಧುನಿಕ ಲಯದಲ್ಲಿ ಆಯಾ ಕಾಲಮಾನದ ಅವಂತರಗಳಿಗೆ ಸ್ಪಂದಿಸುವ ಕ್ರಿಯೆಯ ಮಾಧ್ಯಮ ಭಾಷಿಕ ಅಭಿವ್ಯಕ್ತಿ ಕಾಣಬಹುದು.

ವಿಶಾಲವಾದ ಭಾವಲೋಕದಲ್ಲಿ ಕಾವ್ಯ ಪರಿಕರಗಳನ್ನು ಹುಡುಕದೇ ಆಧುನಿಕ ಮನಸ್ಥಿತಿಯ ಅಭಿವ್ಯಕ್ತಿಕ್ರಮವಾಗಿ ಯಾವುದೇ ಸೈದ್ದಾಂತಿಕ ಕಟ್ಟುಪಾಡುಗಳಿಗೆ ಒಳಗಾಗದೇ ಒಳಿತನ್ನು ಶಾಂತಿ ಸೌಹರ್ದತೆ ಸಹೋದರತೆಯ ಹಿನ್ನೆಲೆಯಿಂದ ಬರವಣೆಗೆ ಕ್ರಮ ರೂಪುಗೊಳ್ಳುತಿದೆ. ಅದಕ್ಕೆ ಈ ಕವಯತ್ರಿ ಹೊರತಲ್ಲ. ಸಂಕುಚಿತ ಮನೋಧರ್ಮದಿಂದ ಬಿಡುಗಡೆ ಪಡೆದು ವಿಶಾಲಭಾವಪಥದತ್ತ ಮುನ್ನುಗ್ಗುತ್ತಿರುವ ಟ್ರೆಂಡ್ನಲ್ಲಿ ಕಾವ್ಯವು ಒಳಿತನ್ನು ಸ್ವೀಕರಿಸುವ ಗುಣಲಕ್ಷಣಗಳನ್ನು ಹೊಂದಿದೆ. ಬದಲಾದ ಜಾಗತಿಕ ಪರಿಸರದಲ್ಲಿ ತೀವ್ರ ಬಂಡಾಯ ಮಾಡಬೇಕುˌಸರಿಯಾದ ಯಾವುದಾದರೂ ಹೋರಾಟದಲ್ಲಿ ಭಾಗವಹಿಸಬೇಕು. ಅದು ನೈತಿಕ ಗುಣಮಟ್ಟದ ನ್ಯಾಯಪರವಾದ ನೇತ್ಯಾತ್ಮಕ ನೆಲೆಯಲ್ಲಿ ಇರಬೇಕು ಎಂಬ ಸಂವಿಧಾನವೇ ಇಂದು ಕಾವ್ಯ ಚಳುವಳಿ ಅಥವಾ ಕನ್ನಡದಲ್ಲಿ ಬರೆಯುವುದೇ ಬಂಡಾಯವೆಂಬ ಧೋರಣೆ ರೂಪುಗೊಂಡಿದೆ.

ಸಿದ್ದ ಮಾದರಿಗಳ ಕಾವ್ಯ ಚಳುವಳಿಗಳನ್ನು ಗ್ರಹಿಸುತ್ತಲೇ ಹೊಸಹೊಸ ಪ್ರಯೋಗಗಳ ಭಗೀರಥ ಪ್ರಯತ್ನ ಮಾಡುತ್ತಿರುವುದು ಗಮನಾರ್ಹ ಸಂಗತಿ. ಅಂತರಂಗದ ತುಮುಲಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಜೊತೆಗೆ ನೈತಿಕ ಮಾನವ ಸಮಾಜದ ಅಭ್ಯುದಯದ ಪರಿಕಲ್ಪನೆ ಕಾಣಬಹುದು. ಸುಂದರವಾದ ಪ್ರಕ್ರತಿಯೆ ಒಂದು ಕಾವ್ಯ. ಅದರಲ್ಲಿ ಕಾಣುವಂತದ್ದು ಕರುಣೆˌ ಮುಗ್ದತೆˌ ಪ್ರೇಮˌ ಸೌಂದರ್ಯˌ ತನ್ಮಯತೆˌ ಪರಿತಾಪˌ ಆದರ್ಶದ ಹಂಬಲಗಳುˌ ನೈತಿಕ ಕಾಳಜಿ. ಇವು ಪ್ರಕ್ರತಿಯಿಂದ ದತ್ತವಾದ ಪ್ರತಿಮೆಗಳೇ ವಿನಾ ಬೇರಲ್ಲ. ಪ್ರಕ್ರತಿˌ ಅದರ ರುತುಮಾನಗಳುˌ ವರ್ಷˌ ಗ್ರೀಷ್ಮˌಹೇಮಂತˌ ವಸಂತˌ ಚೈತ್ರˌಶಿಶಿರˌ ಆವರ್ತನೆಯಲ್ಲಿ ಕಾವ್ಯವೆಂಬುದು ಝೆನ್ ಧ್ಯಾನ. ಕವಿ ಉಲ್ಲಾಸದಿಂದ ತನ್ಮಯನಾಗಿ ಬರೆಯುತ್ತಾನೆ. ಕಲ್ಪನೆ Imagination, ಕಾವ್ಯೋಚಿತ ಪದ ಪುಂಜ Poetic Diction, ಧ್ವೈವಿಧ್ಯ Duality ಇವು ಕವಿಯನ್ನು ಕಾಡುವ ಪರಿಕರಗಳ ಹುಡುಕಾಟ.

ನವಿರಾದ ಭಾವನೆಗಳುˌ ನವಿರಾದ ಭಾಷೆˌ ನವಿರಾದ ಲಯ ಆರ್ಭಟವಿಲ್ಲದ ಶಾಂತಸಾಗರದಲ್ಲಿ ದೋಣಿಯಲ್ಲಿ ಸಾಗುವ ಹಣತೆಯಂತೆ ಕಾವ್ಯ. ಕಾವ್ಯ ಆಲಿಸುವವ ಅಥವಾ ಓದುವವ ಸಹ್ರದಯ ಅಥವಾ ವಿಮರ್ಶಕ ಇತಂಹ ಪರಂಪರೆ ಕಾವ್ಯದ ಮುಖ್ಯ ಲಕ್ಷಣವಾಗಿದೆ. ಆಧುನಿಕ ಎಂಬುದೇ ಆಧುನಾˌಈಗˌಇವೊತ್ತು ˌಬದಲಾಗುವಂತಹುದು ಎಂಬ ಅರ್ಥವಿದೆ. ‘ತಿಳಿಯುವ ಇಚ್ಛೆಯಿಂದ ಪ್ರಚೋದಿತವಾದ ವಿಚಾರ ಸರಣಿ ‘ಎನ್ನುವುದೇ ಜಿಜ್ಞಾಸೆ. ಕಾವ್ಯ ಜಿಜ್ಞಾಸೆ ಎಂಬುದುದನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಿದರೆ ಕವಿತೆ ಬರೆಯುವ ಕವಿಯೇ ಜಿಜ್ಞಾಸು ಎನ್ನುವುದು ವೇದ್ಯವಾಗುತ್ತದೆ.

“ಕಾಮನಬಿಲ್ಲಿನ
ಒಂದೊಂದೇ ಬಣ್ಣಗಳು ಮೂಡಿರಲು
ಅರಿವಿಲ್ಲದೆ ಒಳಗೊಳಗೇ ಹರಿವ
ಗುಪ್ತಗಾಮಿನಿ ಈ ಅಂತರಗಂಗೆ !
ಶ್ರಾವಣದ ಮಳೆಯಲ್ಲಿ
ಮೌನದ ಸ್ವಾತಿಮುತ್ತುಗಳು
ಚಿಪ್ಪೊಡೆದು ಹೊರಬಂದಾಗˌ
ಅಂತರಂಗದಿ ಮೂಡಿದ ಭಾವಗಳಲ್ಲಿ
ಪಲ್ಲವಿಗಳ ಅನುರಣನ ! “(ಒಲವು)

ಇಂತಹ ಅಂತರಂಗದ ಭಾವಗಳ ಪಲ್ಲವಿಗಳ ಅನುರಣನ ಕಾವ್ಯˌ

“ವಸಂತದ ಮರಗಿಡಗಳು
ಚಿಗುರಿ ಹೂ ಹಣ್ಣಾಗಿ
ನಳನಳಿಸುತ್ತಿರಲುˌ
ತುಂಬಿ ತುಳುಕುವ ಸಮ್ರದ್ಧತೆ !”
(ರುತುನಿಯಮ)

ಪ್ರಕ್ರತಿಯ ಕಲ್ಪನೆಯಲ್ಲಿ ಪ್ರಾಥಮಿಕವಾಗಿ ಕಾಣುವ ಪ್ರತಿಭೆ ಅಕ್ಷರಗಳ ಲೋಕದಲ್ಲಿ ದ್ವೀತಿಯ ಪ್ರತಿಭೆಯ ಕಲ್ಪನೆಯಾಗಿ ಮೂಡುತ್ತದೆ.

“ಎರಡು ಜೀವಂತ ದಂಡೆಗಳ
ನಡುವಿನ ಹರವು ಮಾತ್ರ ವಿಷಾದದ್ದು;
ಭ್ರಮೆಯೆಲ್ಲಾ ಬಯಲಾಗೋ ಬಣ್ಣದ ಲೋಕದ್ದು !
ಭಾವ ತುಮುಲದ ಚಕ್ರತೀರ್ಥದ ಸುಳಿಯಲ್ಲಿ
ಗಿರಗಟ್ಟಲೆಯ ಸ್ಥಿತಿ-ಗತಿ.
ಪ್ರೀತಿಯ ಷಾಕ್ ನಲ್ಲಿ ಮಾತು ಕಳೆದುಕೊಂಡ
ವಿಕ್ಷಿಪ್ತ ಮನಸ್ಸಿನ ವಿಭಿನ್ನ ಆಯಾಮಗಳಲ್ಲಿ
ರಮ್ಯಾದ್ಭುತ ಭೀಕರ ಲೋಕ !”

“ಕಟು ವಾಸ್ತವಗಳಿಗೆ ಅಂಜಿ
ದಮನಿಸಿದ ಭಾವಗಳು;
ಬತ್ತಿದೆದೆಯಲ್ಲಿ ಮತ್ತೆ ಕಾಣಿಸದ
ಪ್ರೇಮದ ಕುಡಿ-ತೈಲಗಳು !
ಅಂತರಂಗವ ಸಿಂಗರಿಸಲಾಗದೆ
ಒಂದರ ಮೇಲೊಂದು ಪೇರಿಸಿದ
ನಿರ್ಜೀವ ಕೊಲಾಜ್ಹ್ ಗಳು!”
(ಕೊಲಾಜ್ಹ್ ಗಳು)

ಬದುಕಿನ ಅವಸ್ಥೆಯಲ್ಲಿ ನೋವುನಲಿವು ಸುಖದುಃಖಗಳ ಆವರಣದಲ್ಲಿ ಮೂಡಿದ ಸಂವೇದನೆಗಳು ಕಟುವಸ್ತಾವದಲ್ಲಿ ಮುಖಾಮುಖಿಯಾಗುವ ದಾವಂತ ಸಹಜ ಅನುಭವಗಳು ಕೊನೆಗೆ ಕೊಲ್ಹಾಜ್ಹನ ರೀತಿ ಪೇರಿಸುವ ನೀರ್ಜಿವ ಚಿತ್ರವಾದರೂ ಕಲೆಯ ಮೂಸೆಯಲ್ಲಿ ಅದೊಂದು ಚಿತ್ರಣವನ್ನು ಮೂಡಿಸುತ್ತದೆ.

“ನೆನಪುಗಳೆಂದರೆ ಸುಡು ಬೇಸಿಗೆಯಲ್ಲೂ
ಮಲ್ಲಿಗೆಯ ಪರಿಮಳದ ಮಂದಾನಿಲಗಳು.
ಲಕ್ಷೋಪಲಕ್ಷ ನಕ್ಷತ್ರಗಳ ನಡುವಣ ಒಂದು ಶುಕ್ರತಾರೆˌ
ಮೂಡಿಸುವ ನೆಳಲು-ಬೆಳಕುಗಳ
ಚಿತ್ರ ವಿಚಿತ್ರ ವಿನ್ಯಾಸಗಳು. “
(ನೆನಪುಗಳುˌಸಂಕೇತ ಸಂಕಲನ)

ಕವಯತ್ರಿಯ ಸ್ರಜನಶೀಲ ಅಂತಕರಣ ನಿಸರ್ಗದ ರಮಣೀಯ ಸದ್ರಶ್ಯ ಪರಿಸರದಲ್ಲಿ ಜೀವನದ ಪ್ರತಿಬಿಂಬದಲ್ಲಿ ಕಾಣುವಂತ ಮಲ್ಲಿಗೆಯ ಪರಿಮಳದ ಮಂದಾನಿಲಗಳು. ಲಕ್ಷೋಪಲಕ್ಷ ನಕ್ಷತ್ರಗಳ ನಡುವೆ ಒಂದು ಶುಕ್ರತಾರೆ ಇರುವ ಜೀವಂತ ಕಾವ್ಯ ವಿನ್ಯಾಸ ಇದು.
ಬದುಕು ಬರೀ ಭ್ರಮಾಹೀನ ಜಗತ್ತಲ್ಲ ಅದರ ನುಡುವೆಯು ಶುಕ್ರದೆಸೆಯ ತಾರೆಯುಂಟು ಎಂಬುದು ಅನುಭವದ ಜಿಜ್ಞಾಸೆ.

“ಆಳದಲ್ಲಿ ಹುಟ್ಟಿ ಹೊರಬಿದ್ದು ತೆರೆತೆರೆಯಾಗಿˌ
ಅರ್ಥವಾಗದ ಹಂಬಲವಾಗಿರಲು
ಕಣ್ಣಾಮುಚ್ಚಾಲೆಯಾಡುವ ಪದಗಳು
ಆಚೆ ನಿಂತು
ಅಲ್ಲೊಮ್ಮೆ ಇಲ್ಲೊಮ್ಮೆ ಸೂಕ್ಷ್ಮ ನೇಯ್ಗೆ. “
(ಹಿಗೊಂದು ಕವನˌಸಂಕೇತ ಸಂಕಲನ)

ಮಾತಿನಾಚೆಗಿನ ಹಲವು ಅನುಭವ ಸಮಯ ಸ್ಫೂರ್ತಿಗಳ ಕಾಣ್ಕೆ ಕಟ್ಟುವ ಪ್ರೌಢಿಮೆಯ ಅಭಿವ್ಯಕ್ತಿಯ ಮಾಧ್ಯಮವಾದ ಭಾಷೆಯ ಪ್ರತಿಮೆ ರೂಪಕಗಳು ಒಂದಿಲ್ಲೊಂದು ತೆರದಲ್ಲಿ ಕಾವ್ಯ ಕರ್ತುತ್ವರನ್ನು ಕಣ್ಣಾಮುಚ್ಚಾಲೆ ಆಡಿಸುತ್ತ ಅಭಿವ್ಯಕ್ತಿಗೆ ತಕ್ಕ ಪದಗಳ ಮಿದಿಯುವ ತವಕದಲ್ಲಿ ಆಳದಲ್ಲಿ ಹೆಪ್ಪು ಗಟ್ಟಿದರೂ ಪದರೂಪ ಧಾರಣೆ ಮಾಡುವಾಗ ಆಚೆ ನಿಂತ ಸೂಕ್ಷ್ಮ ನೇಯ್ಗೆಯಾಗಿಬಿಡುತ್ತದೆ. ಪ್ರತಿಭಾ ಸಮಾಧಿಯಲ್ಲಿ ಮೈನೇರದ ಭಾವಗಳ ಸಂಭವನೀಯತೆ ಅವೌಚಿತ್ಯದ ಮೂಲಕ ಮನಸ್ಸಿನ ಬಿಡುಗಡೆಗೆ ಸ್ಪಂದಿಸುತ್ತದೆ. ಉತ್ಕಟವಾದ ಭಾವತೀವ್ರತೆಯಲ್ಲಿ ಬರೆಯುತ್ತೇನೆ ಎಂಬ ಹಂಬಲದಿಂದ ಹೊರಟ ಕವಿತೆ-

“ಮನುಷ್ಯ ಸಂಬಂಧಗಳ ತೀವ್ರ ಶೋಧನೆಯಲಿ
ಸವಿನೆನೆಪುಗಳ ಒರತೆಯಿಂದ
ಬುಗ್ಗೆ ಬುಗ್ಗೆಯಾಗಿ ಹೊರಬಂದುದನ್ನು
ಕರಗಿಸುತ್ತಾ ಸಾಗುವಲ್ಲಿ
ಬಹುತೇಕ ಮೌನ. “(ಅದೇ ಕವಿತೆ)

ಹೊಸಗನ್ನಡದಲ್ಲಿ ಮೌನಕ್ಕೂ ಒಂದು ಅರ್ಥಉಂಟು.

“ಅರ್ಥ ಹುಡುಕುತ್ತಾ
ಸಕ್ಕರೆಯ ಕನಸೆಂದು ಹೊರಟರೆ
ಹುಳಿ ದ್ರಾಕ್ಷಿಯಾಗಿ
ಚೂರಾದ ಭ್ರಮೆಗಳು”
(ಸಂಬಂಧಗಳು)

ನವ್ಯದ ಬೀಸು ಸ್ಪಷ್ಟವಾದ ಕುರುಹು ಇದು. ಬದುಕಿನ ಸಿನಿಕಥನದಂತೆ ಭಗ್ನವಾದ ಭ್ರಮೆಗಳು ಚೂರಾದ ಅನುಭವ ಮಾನವ ಸಂಬಂಧಗಳ
ಅಂತರಾತ್ಮದ ಪರಿಶೋಧವನ್ನು ತೆರೆದಿಡುತ್ತದೆ. ಕವಿತೆಯ ವಸ್ತುವು ಜಡವು ಅಲ್ಲ ಸಕ್ರಿಯವು ಅಲ್ಲ. ಅದೊಂದು ಮಾನಸಿಕ ಕ್ರಿಯೆ. ಅದರಲ್ಲಿ ಅರ್ಥ ಇರಲೇಬೇಕೆಂಬ ಹುಂಬತನ ಕವಯಿತ್ರಿಯಲ್ಲಿ ಇಲ್ಲ.
ಅದೊಂದು ಮಿಂಚಿನ ಸಂಚಲನವಷ್ಟೇ ಆಗಿ ಉಳಿಯುತ್ತದೆ.

“ಬದುಕೇ ಹೀಗೆ;
ಕಾಯಬೇಕು.
ವಿಷವರ್ತುಲಗಳ ನಡುವೆ
ಕಪ್ಪಾದ ಮೋಡಗಳ ಕಟ್ಟಿ
ಮಳೆ ಸುರಿಸುವವರೆಗೆ
ಕಾಯಬೇಕು. “(ಕಾಯಬೇಕು)

ಸದಭಿರುಚಿಯ ಹಿನ್ನೆಲೆಯಲ್ಲಿ ಕವಿತೆಗಾಗಿ ಕಾಯುವುದು ಅಹಿತ ಪರಿಸ್ಥಿತಿ ಸಂದಿಗ್ಧತೆಯ ವಿಷವರ್ತುಲದಲ್ಲಿ ಕಪ್ಪಾದ ದಟ್ಟ ಮೋಡಗಳ ಮಳೆಗಾಗಿ ಕಾತರಿಸುವ ಇಳೆಯಂತೆ ಕವಿತೆಯ ಗಟ್ಟಿ ಅನುಭವಕ್ಕೆ ಕಾಯಬೇಕು.

“ಅಂತಸ್ತುಗಳ ಮೆಟ್ಟಿಲುಗಳ ಮೇಲೆರುವ ಆತುರದಲ್ಲಿ
ಮಣ್ಣ ರುಣ ತೀರಿಸಿಲ್ಲ.
ಹೆಜ್ಜೆಗಳು ಭಾರವಾಗಿವೆ; ಬೆಳಕು ಬಲು ದೂರದಲ್ಲಿದೆ
ಈ ಬಿಸಿ ಹಬೆಯ ಬದುಕಲ್ಲಿ
ಒಂದಿಷ್ಟು ತಿನ್ನುವˌ ಉಡುವˌ ತೊಡುವ ಆತುರ-ಕಾತರ !
ಕರಿ ನೆರಳ ಹಾಲಹಲದ ಮಡಿಲಲ್ಲಿ
ಗಾರುಗಾರಾದ ಮಣ್ಣ ಬಿರುಕಲ್ಲೂ
ಹೊಸ ಚಿಗುರು – ಹೂ- ಹಣ್ಣುಗಳ ಹಂಬಲ !” (ಹಂಬಲˌ ಅಗ್ನಿಕುಂಡ ಸಂಕಲನ)

ಸಾಧನೆಯ ಸುಪರ್ದಿಗೆಯ ಮೆಟ್ಟಿಲುಗಳ ಏರುವ ಪ್ರತಿಜೀವಗಳ ತುಡಿತ ಮಿಡಿತಗಳ ಅವಸರದ ಕಾಲುಕಿತ್ತ ದಾವಂತದಲ್ಲೂ ಮಣ್ಣಿನ ರುಣ ಮೀರದ ಆತ್ಮೀಯತೆ ಗೋಚರಿಸುತ್ತದೆ. ಭಾರವಾದ ಬದುಕಿನ ಅಸ್ಮಿತೆಯ ಹೋರಾಟದ ಕರಿನೆರಳ ಪರಿಸರದಲ್ಲೂ ಒಂದಿಷ್ಟು ಸುಖ, ಹೊಸ ಚಿಗುರು, ಹೂ ಹಣ್ಣುಗಳ ಹಂಬಲ ಜೀವನದಲ್ಲಿ ಸಹಜವಾಗಿ ಹಾತೊರೆವ ಮತ್ತು ಇರಬೇಕಾದ ಮೂಲಭೂತ ತಾತ್ವಿಕ ಹಕ್ಕು ಎಂಬುದು ಕವಿತೆಯಲ್ಲಿನ ವಸ್ತುವಾಗದೆ.

“ಭೂಮ್ಯಾಕಾಶಗಳ ಬಂದಕ್ಕೆ ಸದಾ ಸಡಗರ;
ಬಂಧಾನುಬಂಧಗಳ ಹಗ್ಗ ಹೊಸೆದು
ಅಲುಗಾಡದ ಹಾಗೆ ಭದ್ರಗಂಟು ಹಾಕಿˌ
ಉಸಿರುಗಟ್ಟಿಸುವುದು ಪ್ರೀತಿಯೇ ?!”
(ಬಂಧ, ಅಗ್ನಿಕುಂಡ ಸಂಕಲನ)

ಬದುಕಿನ ಅಸಹನೀಯ ಪ್ರೀತಿಯ ಕ್ರತಕಜಾಲದ ವಿಷಾದ ಛಾಯೆ ಇಲ್ಲಿನ ವಿಚಿಕಿತ್ಸಕ ಪ್ರಶ್ನೆ. ಇದೊಂದು ಆಧುನಿಕ ಜೀವನದ ಗಂಡು ಹೆಣ್ಣುಗಳ ವಿಕ್ಷಿಪ್ತ ಮನಸ್ಥಿತಿಯ ಖಿನ್ನತೆ ಅಥವಾ ಒಂದು ರೀತಿ ತಮ್ಮಗೆ ತಾವೇ ಮಾಡಿಕೊಂಡ ಪರಮಾವಧಿ ಅನ್ಯಾಯ. ಇಂತಹ ಬಿಕ್ಕಟ್ಟುಗಳಿಂದ ಪಾರಾದರೆ ಬದುಕು ಸುಂದರ.

“ತೆರೆದ ಬಾಗಿಲು ದಾಟಿ ನಡೆದಲ್ಲಿ ಮಾತ್ರ
ಖುಷಿ ಕೊಡುವ ಗುಪ್ತಗಾಮಿನಿ ಪ್ರೀತಿ !”
ಉಸಿರುಗಟ್ಟಿಸುವ ಬಂಧಗಳ ಬಂಧನದಿಂದ ಮುಕ್ತವಾದಲ್ಲಿ ಮಾತ್ರ ಪ್ರೀತಿಯ ನಿಜವಾದ ನೆಲೆ ಕಾಣಬಹುದು.

“ಪ್ರ್ರತಿವರ್ಷವೂ ಮತ್ತೆ ಮತ್ತೆ ಹೊಸ ಹೊಸ ಕನಸುˌಸಂಕಲ್ಪಗಳು;
ಬೊಗಸೆ ತುಂಬಾ ಆಸೆ – ಆಮಿಷಗಳು!”
(ಹೊಸ ವರ್ಷಕ್ಕೆ ಆಹ್ವಾನˌಅಗ್ನಿಕುಂಡ ಸಂಕಲನ)

ಪ್ರಕ್ರತಿಯ ವಿಪರ್ಯಾಸ ರುತುಮಾನಗಳ ಚಲನೆಯಲ್ಲಿ ಪ್ರತಿವರ್ಷವು ಮತ್ತೆ ಹೊಸ ಕನಸುಗಳು ಹೊಸ ಸಂಕಲ್ಪದಿಂದ ಕಾಯುವ ಮಾನವರ ಬದುಕಿನ ಶ್ರೇಯಸ್ಸು ಆಸೆ ಆಮಿಷಗಳ ಭರವಸೆಗಳಲ್ಲಿ ಹೊಸತನದ ಹುರುಪುಗಳಲ್ಲಿ ಜೀವನವನ್ನು ಕಾಪಿಡಬೇಕಾದ ಜೀವಂತ ಆಶಯ ಕವಯಿತ್ರಿಯ ಕಾವ್ಯದಲ್ಲಿ ಮೈದೇಳೆದಿದೆ. ಎಲ್ಲರಿಗೂ ಒಳಿತನ್ನೂ ಚಿರಜೀವಿತ್ವವನ್ನು ಉಂಟಾಮಾಡುವುದೇ ಕಾವ್ಯದ ನಿಜವಾದ ಶ್ರೇಯಸ್ಸು. ಭಾರತೀಯ ಕಾವ್ಯ ಮೀಮಾಂಸೆಯ ಮುಖ್ಯ ಉದ್ದೇಶ ಪ್ರಯೋಜನವೇ ಮಾನವರ ಅಭ್ಯುದಯ ಕಲ್ಯಾಣವಾಗಿದೆ.

ಡಾ. ಶಾಂತಲಕ್ಷ್ಮಿ ಯವರು ಒಬ್ಬ ಸ್ರಜನಶೀಲ ಸಾಹಿತ್ಯ ದ ಕವಯತ್ರಿ ಲೇಖಕಿಯಾಗಿ, ಸಂಶೋಧಕರಾಗಿ ತಮ್ಮನ್ನು ಗುರ್ತಿಸಿಕೊಂಡಿರುವರು. ನಾಡಿನ ಹಲವು ಪತ್ರಿಕೆಗಳಲ್ಲಿ ಇವರ ಕವಿತೆˌ ಲೇಖನಗಳು ಪ್ರಕಟವಾಗಿವೆ. ಕನ್ನಡ ಸಾಹಿತ್ಯದ ಅಧ್ಯಾಪಕರು ˌ ಪ್ರವಾಚಕರುˌ ಪ್ರಾಧ್ಯಾಪಕರು, ಮುಖ್ಯಸ್ಥರುˌಪ್ರಾಚಾರ್ಯರು ಆಗಿ ದುಡಿದು ˌಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರು ಆಗಿ ಸರ್ಕಾರದ ಸೇವೆಯಲ್ಲಿ ಶ್ರಮಿಸಿ, ಸದ್ಯ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಬೆಂಗಳೂರು ಕಲಾ ಕಾಲೇಜುˌ ಕೋಲಾರ ಸರ್ಕಾರಿ ಕಾಲೇಜುˌ ಮಹಾರಾಣಿ ಕಲಾ ಕಾಲೇಜುˌ ಮಹಾರಾಣಿ ವಿಜ್ಞಾನ ಕಾಲೇಜುˌ ಹೆಸರಘಟ್ಟ ಸರ್ಕಾರಿ ಕಾಲೇಜುಗಳಲ್ಲಿ ವ್ರತ್ತಿ ಅನುಭವದಿಂದˌ ಪಾಂಡಿತ್ಯ ಪ್ರೌಢಿಮೆಗಳಿಂದˌ ಬೆಳೆದು ಬಂದವರು ಇವರು.

ಇವರ ಸಂಕೇತˌ ಚೈತ್ರˌ ಜೇನ್ಗೂಡˌ ಸುವರ್ಣ ಸಂಭ್ರಮˌ ಮಾವು-ಬೇವುˌ ಅಗ್ಮಿಕುಂಡ ಕವನ ಸಂಕಲನಗಳು ಪ್ರಕಟವಾಗಿವೆ. ಡಾ. ಕಮಲಾ ಹಂಪನಾ ಅವರ ಮಾರ್ಗದರ್ಶನದಲ್ಲಿ ಆಧುನಿಕ ಕನ್ನಡ ಕವಿಗಳ ಕಾವ್ಯ ಜಿಜ್ಞಾಸೆ -ಒಂದು ಅಧ್ಯಯನ ಎಂಬ ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿ. ಎಚ್. ಡಿ ಡಾಕ್ಟರೇಟ್ ಪದವಿ ಪಡೆದಿರುವರು. ಈ ಗ್ರಂಥ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಪ್ರಕಟಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ರತ್ನ ಕೋರ್ಸಿಗೆ ಆಧುನಿಕ ಕನ್ನಡ ಕವನಗಳು ಪಠ್ಯ ಸಂಪಾದನೆ ಮಾಡಿರುವರು. ಡಾ ಕಮಲಾಹಂಪನಾ ಹೆಜ್ಜೆ ಗುರುತುಗಳುˌ ಹೆಜ್ಜೆ 80 ಎಂಬ ಜೀವನ ಚರಿತ್ರೆ ˌಸ್ಮರಣೆ ಗ್ರಂಥಗಳನ್ನು ರಚಿಸಿರುವರು. ಇವರ ಸಾಹಿತ್ಯ ಸೇವೆಯನ್ನು ಮನಗಂಡು ಅನೇಕ ಪ್ರತಿಷ್ಠಿತ ಸಂಸ್ಥೆಗಳು ಸೆಮಿನಾರುˌಸಿಂಪೋಜಿಯಂˌಉಪನ್ಯಾಸಗೋಷ್ಠಿˌಕವಿಗೋಷ್ಠಿಗಳಲ್ಲಿ ಸನ್ಮಾಸಿರುವರು. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿˌಕುವೆಂಪುಶ್ರೀ ಪ್ರಶಸ್ತಿˌಕುವೆಂಪು ಕವಿ ರತ್ನ ಪ್ರಶಸ್ತಿˌ ಸಮಾಜ ಮತ್ತು ಸಾಹಿತ್ಯ ಸೇವಾರತ್ನ ಪ್ರಶಸ್ತಿˌ ಕನ್ನಡ ಕವಿ ಸಾರ್ವಭೌಮ ಪ್ರಶಸ್ತಿˌ ಸುವರ್ಣ ಕನ್ನಡ ಕವಯಿತ್ರಿ ಪ್ರಶಸ್ತಿˌ ಸಂಕ್ರಮಣ ಮತ್ತು ತುಷಾರ ಕಾವ್ಯ ಪ್ರಶಸ್ತಿ ಶ್ರೀಯುತರನ್ನು ಹರಸಿ ಬಂದಿವೆ. ಸವ್ಯಸಾಚಿಯಾದ ಡಾ. ಶಾಂತಲಕ್ಷ್ಮಿಯವರ ಸಾಹಿತ್ಯಕ ಚಟುವಟಿಕೆ ಸದಾ ಹೊಸತನದ ಲವಲವಿಕೆಯಿಂದ ಕೂಡಿದೆ.

-ಸಂತೋಷ್ ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x