ಶಿವಕುಮಾರ್ ದಂಡಿನ ಅವರು ಸಾಮಾಜಿಕ ಕಳಕಳಿಯುಳ್ಳ ಅಭೂತಪೂರ್ವ ಯುವ ಸಾಹಿತ್ಯ ಪ್ರತಿಭೆ. ಇವರು ಬರೆದದ್ದು ನಲವತ್ತೆಂದು ಕವಿತೆಗಳ “ಮೋಹದ ಪಥವೋ ಇಹಲೋಕದ ರಿಣವೋ” ಎಂಬ ಒಂದು ಕವನ ಸಂಕಲನ. ಅವರ ಎಲ್ಲ ಕವಿತೆಗಳಲ್ಲಿ ಸಾಮಾಜಿಕ ಕಳಕಳಿ ಕಂಡು ಬಂದರೂ ಕೆಲವು ಕವಿತೆಗಳು ಪ್ರಕೃತಿ ಪರವಾಗಿ ಹೆಚ್ಚಾಗಿ ಚಿಂತಿಸಿವೆ. ಅವರ ಪ್ರಕೃತಿಯ ಮುನಿಸು, ಹನಿ, ಪ್ರಕೃತಿಯ ಒಡಲೂ ಸಮಾನತೆಯ ಪಾಠವೂ ಎಂಬ ಕವಿತೆಗಳು ನಿಸರ್ಗತತ್ತ್ವವನ್ನು ಹೇಳುತ್ತವೆ.
ಮನುಷ್ಯರು ಮೂಲತಃ ಅರಣ್ಯವಾಸಿಗಳು ಎಂಬುದು ನಮಗೆಲ್ಲ ತಿಳಿದಿರುವ ವಿಚಾರ. ಅವರಿಗೆ ಆರಂಭದಲ್ಲಿ ಇದ್ದದ್ದು ಪ್ರಕೃತಿ ಸಹಜವಾದ ಮೂರು ಮೂಲಭೂತ ಆಸೆ ಅಥವಾ ಅನಿವಾರ್ಯತೆಗಳು. ಅವುಗಳೆಂದರೆ, ಹಸಿವು ನೀಗಿಸಿಕೊಳ್ಳುವುದು, ನಿದ್ರೆ ಮೂಲಕ ಆಯಾಸದಿಂದ ಮುಕ್ತವಾಗುವುದು, ಕಾಮದ ಮೂಲಕ ಸಂತಾನೋತ್ಪತ್ತಿ ಬೆಳೆಸುವುದು. ಅಂದರೆ ಹಸಿವು, ನಿದ್ರೆ ಮತ್ತು ಕಾಮ ಇವುಗಳು ನಿಸರ್ಗವೇ ಮನುಷ್ಯರಿಗೆ ನೀಡಿರುವ ಮೂಲಭೂತವಾದ ಹಕ್ಕುಗಳು ಎನ್ನಬಹುದು. ಇವುಗಳ ಈಡೇರಿಕೆಯಿಂದ ಪ್ರಕೃತಿಗೆ ಯಾವುದೇ ನಷ್ಟವೂ ಆಗುವುದಿಲ್ಲ. ಎಲ್ಲಿಯವರೆಗೆ ಮನುಷ್ಯರಿಗೆ ಕೂಡಿಡುವ ಪ್ರವೃತ್ತಿ ಬೆಳೆಯುವುದಿಲ್ಲವೋ ಅಲ್ಲಿಯವರೆಗೂ ಮನುಷ್ಯರು ಪ್ರಕೃತಿಯ ಒಂದು ಭಾಗವಾಗಿಯೇ ಉಳಿದಿದ್ದರು. ಯಾವಾಗ ಅವರಿಗೆ ಸಂಗ್ರಹ ಪ್ರವೃತ್ತಿ ಬೆಳೆಯಿತೊ ಅಂದಿನಿಂದ ಮನುಷ್ಯರೇ ಬೇರೆ ಪ್ರಕೃತಿಯೇ ಬೇರೆಯಾಯಿತು. ಮನುಷ್ಯರು ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಪ್ರಕೃತಿಯನ್ನು ನಿಯಂತ್ರಿಸುವ ಎಲ್ಲ ಬಗೆಯ ತಂತ್ರಗಳನ್ನು ರೂಪಿಸತೊಡಗಿದರು.
ಮನುಷ್ಯರು ಆಧುನಿಕವಾಗುತ್ತ ಹೋದಂತೆ ಪ್ರಕೃತಿಯಿಂದ ಬಹುದೂರ ಸಾಗಿ ಬಂದಿದ್ದಾರೆ. ತಮ್ಮ ಆಸೆ ಆಕಾಂಕ್ಷೆಗಳಿಗಾಗಿ ಪ್ರಕೃತಿಯನ್ನು ವಸ್ತುವಿನ ರೀತಿ ಉಪಯೋಗಿಸಿ ಕೊಳ್ಳತೊಡಗಿದ್ದಾರೆ. ಆದರೆ ಪ್ರಕೃತಿಗೂ ಜೀವವಿದೆ ಎಂಬುದನ್ನು ಮರೆಯಬಾರದು. ಮನುಷ್ಯರು ಕೇವಲ ಪ್ರಾಣಿಗಳಲ್ಲಿ ಒಂದು ಪ್ರಭೇದವಷ್ಟೇ. ಮನುಷ್ಯರಂತೆ ಅದೆಷ್ಟೋ ಪ್ರಾಣಿ ಪ್ರಭೇದಗಳನ್ನು, ಸರಿಸೃಪಗಳನ್ನು, ಪಕ್ಷಿಗಳನ್ನು, ಜಲಚರಗಳನ್ನು ಪ್ರಕೃತಿ ತನ್ನ ಒಡಲಿನಲ್ಲಿ ಸಲಹುತ್ತಿದೆ ಎಂಬುದನ್ನು ಮರೆಯ ಬಾರದು. ಇಲ್ಲಿ ಗಮನಿಸಬೇಕಾದ ಬಹುಮುಖ್ಯವಾದ ಅಂಶವೆಂದರೆ, ಮನುಷ್ಯರು ತಮ್ಮ ಬುದ್ಧಿವಂತಿಕೆಯ ಕಾರಣದಿಂದಾಗಿ ಉಳಿದೆಲ್ಲ ಜೀವರಾಶಿಗಳಿಗೆ ಅಗ್ರಸ್ಥಾನದಲ್ಲಿ ನಿಂತಿದ್ದಾರೆ. ತಾವು ಮಾಡುವ ಒಳಿತು ಕೆಡುಕುಗಳು ಉಳಿದ ಜೀವರಾಶಿಗಳ ಮೇಲೂ ಪರಿಣಾಮ ಬೀರುತ್ತವೆ. ಮನುಷ್ಯರ ದುಷ್ಕೃತ್ಯಗಳಿಗೆ ಕೆಲವೊಮ್ಮೆ ಭೂಮಿಯೂ ಬಲಿಪಶುವಾಗುತ್ತದೆ.
ಮನುಷ್ಯರು ತಮ್ಮ ಬೆಳವಣಿಗೆಗಾಗಿ ಅಥವಾ ಲಾಬಿಗಾಗಿ ಪರಿಸರ ನಾಶಕ್ಕೆ ಮುಂದಾಗುತ್ತಾರೆ. ಇದರ ಪರಿಣಾಮದಿಂದಾಗಿ ಭೂಮಂಡಲದಲ್ಲಿ ಹಸಿರು ಮನೆ ಪರಿಣಾಮ ಉಂಟಾಗುತ್ತದೆ. ವಾತಾವರಣದಲ್ಲಿ ತಾಪಮಾನ ಹೆಚ್ಚಾಗುತ್ತದೆ. ಇದರಿಂದ ಇಡೀ ನಿಸರ್ಗದತ್ತವಾದ ಋತುಮಾನಗಳು ಬದಲಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಚಳಿಗಾಲದಲ್ಲಿ ಮಳೆಗಾಲ, ಮಳೆಗಾಲದಲ್ಲಿ ಬರಗಾಲ(ಬೇಸಿಗೆ), ಉಂಟಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಗ್ರಹಿಸುವ ಪರಿಸರ ಪ್ರೇಮಿಯಾದ ಕವಿ ‘ಪ್ರಕೃತಿಯ ಮುನಿಸು’ ಎಂಬ ಕವಿತೆಯಲ್ಲಿ,
“ಬಂಜೆಯ ಪಟ್ಟ ಹೊತ್ತ ವಸುಧೆ
ತನ್ನದಲ್ಲದ ತಪ್ಪಿಗೆ ಮರುಗುತ್ತಿತ್ತು”
ಎಂದು ನಿಸರ್ಗದ ಬಗೆಗಿನ ಕನಿಕರದ ಭಾವವನ್ನು ವ್ಯಕ್ತಪಡಿಸುತ್ತಾರೆ. ಸರಿಯಾದ ಕಾಲಕ್ಕೆ ಮಳೆ ಬರದೆ ಭೂಮಿಯಲ್ಲಿ ಯಾವ ಜೀವಜಂತುಗಳು ಕೂಡ ಸೃಷ್ಟಿಯಾಗುವುದಿಲ್ಲ. ಬಹುಮುಖ್ಯವಾಗಿ ಸಸ್ಯ ಸಂಕುಲವೆಲ್ಲವೂ ಮಳೆಯನ್ನು ಅವಲಂಬಿಸಿರುತ್ತದೆ. ಮಳೆ ಬಾರದಿದ್ದರೆ ಭೂಮಿಯಲ್ಲಿರುವ ಜಲರಾಶಿ ಬತ್ತಿ ಹೋಗುತ್ತದೆ. ಇದಕ್ಕೆ ಮಾನವರೇ ನೇರ ಹೊಣೆಗಾರರಾಗುತ್ತಾರೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಮಾರಣ ಹೋಮ ಮಾಡುವ ಮಾನವರ ದುಷ್ಕೃತ್ಯದ ಪರಿಣಾಮವಾಗಿ, ಮಳೆಯೂ ತನ್ನ ಕಾಲವನ್ನು ಮುಂದೂಡಿ ಬಿಡುತ್ತದೆ. ಇದರಿಂದ ಮಳೆಯನ್ನು ನಂಬಿ ಬದುಕಿರುವ ಭೂಮಿ, ಬಿಸಿಲ ಬೇಗೆಗೆ ತತ್ತರಿಸಿ ಹೋಗುತ್ತದೆ. ಅದನ್ನೇ ಕವಿ,
“ತನ್ನ ವಿಸ್ತಾರ ಹೆಚ್ಚಿಸಿಕೊಂಡಂತೆ
ಸೌರವ್ಯೂಹ ಗಹಗಹಿಸಿ ನಗುತ್ತಿತ್ತು”
ಎಂದು ಹೇಳುವ ಮೂಲಕ, ಇಡೀ ಪೃಥ್ವಿಯೇ ಸೂರ್ಯನ ಕಪಿಮುಷ್ಟಿಯಲ್ಲಿ ಸಿಲುಕಿ ನರಳುತ್ತಿರುವುದನ್ನು ಗುರುತಿಸುತ್ತಾರೆ. ನಿಸರ್ಗದಲ್ಲಿ ಸೂರ್ಯನ ಪಾತ್ರ ಬಹುಮುಖ್ಯವಾದುದು. ಆದರೆ ಅದು ಅತಿಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಮಳೆ, ಗಾಳಿ, ಬೆಂಕಿ ಇವುಗಳು ಕೂಡ ಹಿತಮಿತವಾಗಿರಬೇಕು. ಅತಿಯಾದರೆ ಈ ಯಾವ ವಸ್ತುವಿನಿಂದಲಾದರೂ ಭೂಮಿಯ ಜೀವಸಂಕುಲಗಳು ನಾಶವಾಗುವುದು ಖಂಡಿತ. ಇದಕ್ಕೆ ಎಡೆ ಮಾಡಿಕೊಡದ ರೀತಿ ಎಚ್ಚರಿಕೆಯಿಂದ ಬದುಕಬೇಕಾದದ್ದು ಮನುಷ್ಯರ ಮೂಲಭೂತ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಮರೆತರೆ ಏನಾಗುವುದೆಂಬ ಮುನ್ನೆಚ್ಚರಿಕೆಯನ್ನು ಕವಿ ಸೂಚಿಸುತ್ತಾ,
“ದಿಕ್ಕೆಟ್ಟ ಜನರೆಲ್ಲಾ ಗುಂಪು ಗುಂಪಾಗಿ
ಗಂಟು ಮೂಟೆಯೊಂದಿಗೆ
ಹವೆಯಲ್ಲಿ ಕರಗಿ ಹೋಗುತ್ತಿದ್ದರು”
ಎನ್ನುತ್ತಾರೆ. ಅಂದರೆ ಮನುಷ್ಯರು ತಮ್ಮ ತಪ್ಪಿನ ಫಲವನ್ನು ತಾವೇ ಹೇಗೆ ಅನುಭವಿಸುತ್ತಾರೆ ಎಂಬ ಸಂಗತಿಯನ್ನು ಈ ಕವಿತೆಯ ಸಾಲುಗಳು ಧ್ವನಿಸುತ್ತವೆ.
ಕವಿ ಬರಗಾಲದಲ್ಲಿ ಮಳೆಯ ಮಹತ್ವವನ್ನು ಹೇಳುವುದರ ಜೊತೆಗೆ, ಮನುಷ್ಯನ ಬದುಕಿಗೂ ನಿಸರ್ಗದ ದತ್ತವಾದ ಮಳೆಗೂ ಇರುವ ಅಂತರ್ಸಂಬಂಧವನ್ನು ಗುರುತಿಸುವ ನಿಟ್ಟಿನಲ್ಲಿ ‘ಹನಿ’ ಎಂಬ ಕವಿತೆ ರಚಿಸಿದ್ದಾರೆ. ಆ ಮೂಲಕ ಮಳೆಯ ಹನಿಯು ಕೂಡ ಕವಿಯನ್ನು ಕಾಡಿ ಕವಿತೆಯಾಗುತ್ತದೆ. ಮಳೆಯೆಂದರೆ ಒಬ್ಬೊಬ್ಬರಲ್ಲೂ ಒಂದೊಂದು ವಿಧದ ಭಾವ ಮೂಡುತ್ತದೆ. ಕೆಲವರಿಗೆ ಸಂಭ್ರಮ, ಕೆಲವರಿಗೆ ದುಃಖ, ಮತ್ತೆ ಕೆಲವರಿಗೆ ಎರಡೂ ಭಾವನೆಗಳಿರುತ್ತವೆ. ವೈಜ್ಞಾನಿಕವಾಗಿ ಹೇಳುವುದಾದರೆ ಭೂಮಿಯ ಮೇಲಿನ ನೀರು ಆವಿಯಾಗಿ ನಂತರ ಮೋಡವಾಗಿ ಪುನಃ ಮಳೆಯ ರೂಪದಲ್ಲಿ ಭೂಮಿಯನ್ನು ಸೇರುತ್ತದೆ. ಕವಿಗೆ ಮಳೆಯೂ ಮೋಡದ ಅಳಿವಿನ ರೀತಿ ಕಾಣುತ್ತದೆ. ಮನುಷ್ಯರು ತಮ್ಮಲ್ಲಿರುವ ದುಃಖವನ್ನು ಅಳುವುದರ ಮೂಲಕ ವ್ಯಕ್ತಪಡಿಸುತ್ತಾರೆ. ಕವಿಯು ಮನುಷ್ಯರ ಕಂಬನಿಯನ್ನು ಮಳೆಯ ಹನಿಗೆ ಸಮೀಕರಿಸುವ ಪರಿ ವಿಶೇಷವಾದುದು.
“ಮಳೆ ಹನಿ ನಿಂತರೂ
ಕಣ್ಣಾಲಿಗಳಲ್ಲಿ ನಿಲ್ಲದ ಹನಿ”
ಎಂಬಲ್ಲಿ, ಮೋಡಕ್ಕೆ ಮಳೆ ಸುರಿದರೆ ಮುಕ್ತಿ. ಆದರೆ ಮನುಷ್ಯರಿಗೆ ಅಳುವಿನಿಂದ ಸಂಪೂರ್ಣ ನೋವು ನಿವಾರಣೆ ಸಾಧ್ಯವಾಗುವುದಿಲ್ಲ. ನಿಸರ್ಗವು ಸುಲಭವಾಗಿ ತನ್ನ ನೋವಿನ ಭಾರವನ್ನು ನಿವಾರಿಸಿಕೊಳ್ಳುವಂತೆ, ಮನುಷ್ಯರು ನಿವಾರಿಸಿಕೊಳ್ಳಲಾರರು ಎಂಬ ಸತ್ಯವನ್ನು ಕವಿ ಗುರುತಿಸಿರುವುದು ಅವರ ಕಾರಯಿತ್ರಿ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ.
ಮನುಷ್ಯರು ಜಾತಿ, ಧರ್ಮ, ಲಿಂಗ, ಅಂತಸ್ತು, ಭಾಷೆ ಹೀಗೆ ಅನೇಕ ರೀತಿಯಲ್ಲಿ ಪ್ರತ್ಯೇಕತೆಯನ್ನು ಗುರುತಿಸಿ ಕೊಂಡಿರುವುದನ್ನು ಗಮನಿಸಬಹುದು. ಆದರೆ ಪ್ರಕೃತಿಯ ಮುಂದೆ ಮನುಷ್ಯರು ಮಾತ್ರ ಮುಖ್ಯವಾಗುತ್ತಾರೆಯೇ ಹೊರತು ಅವರ ಜಾತಿ, ಧರ್ಮ, ಲಿಂಗ, ಅಂತಸ್ತು, ಭಾಷೆ ಮುಖ್ಯವಾಗುವುದಿಲ್ಲ. ಪ್ರಕೃತಿ ವಿಕೋಪದ ಮುಂದೆ,
“ದುರಾಸೆ ಅಹಂಕಾರ ನಾನು ತಾನೆಂಬ
ಭಾವ ಭಾಷೆಗಳು ಕೊಚ್ಚಿ ಹೋದವು
ಅಲೆಗಳ ಹೊಡೆತಕ್ಕೆ”
‘ಪ್ರಕೃತಿಯ ಒಡಲೂ ಸಮಾನತೆಯ ಪಾಠವೂ’ ಕವಿತೆಯ ಈ ಮಾತು ಓದುಗರನ್ನು ಆತ್ಮವಿಮರ್ಶೆಗೆ ಒಡ್ಡುತ್ತದೆ. ನಾನು ಎಂಬುದು ಮನುಷ್ಯರ ಅಹಂಕಾರದ ಪ್ರತಿರೂಪ. ಆರ್ಥಿಕವಾಗಿ, ಸಾಮಾಜಿಕವಾಗಿ ಹೀಗೆ ಅನೇಕ ರಂಗಗಳಲ್ಲಿ ಮನುಷ್ಯ ಪ್ರಾಬಲ್ಯ ಸಾಧಿಸುತ್ತಾ ಹೋದಂತೆ ನಾನು ಎಂಬ ಪ್ರತ್ಯೇಕ ಭಾವ ಬೆಳೆಯುತ್ತದೆ. ಪ್ರಕೃತಿ ಮಾತ್ರ ಮನುಷ್ಯರನ್ನು ಅಸಹಾಯಕರನ್ನಾಗಿ ಮಾಡಲು ಸಮರ್ಥವಾಗಿದೆ ಎಂಬ ಸತ್ಯವನ್ನು ಕವಿಯ ಮಾತುಗಳಲ್ಲಿ ತಿಳಿಯಬಹುದು. ಜಲ ಪ್ರಳಯದ ಸುಳಿಗೆ ಸಿಲುಕಿ ಮಸೀದಿ, ಮಂದಿರ, ಚರ್ಚುಗಳೆಲ್ಲ ತತ್ತರಿಸಿ ಮೂಕ ಸಾಕ್ಷಿಗಳಾಗಿ ನಿಲ್ಲುತ್ತವೆ.
“ಧರ್ಮ ಗುರುಗಳೆಲ್ಲಾ ಬೀದಿಗೆ ಬಿದ್ದು
ಮಡಿ ಮೈಲಿಗೆ ಮರೆತು ತುತ್ತು ತುತ್ತಿಗೂ
ಕೈಚಾಚಿ ನಿಂತರು ನಡು ನೀರಿನಲ್ಲಿ”
ಎಂದು ಮನುಷ್ಯರ ಮಿತಿಯನ್ನು ಕವಿ ಮಾರ್ಮಿಕವಾಗಿ ಗುರುತಿಸುತ್ತಾರೆ. ಮನುಷ್ಯರು ಎಷ್ಟೇ ಆಧುನಿಕವಾಗಿ ಮುಂದುವರಿದರೂ ಪ್ರಕೃತಿಯ ಮುಂದೆ ಅಸಹಾಯಕರಾಗಿ ನಿಲ್ಲಲೇಬೇಕಾದ ಸತ್ಯ ಸಂಗತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ
“ಚರ ಸ್ಥಿರ ಕೋಟಿ ಕೋಟಿಗಳು
ಕಾಪಾಡಲಿಲ್ಲ ಕಾಪಾಡಿಕೊಳ್ಳಲಾಗಲಿಲ್ಲ”
ಎಂದು ಹೇಳುವ ಮೂಲಕ ಅವುಗಳ ನಿಷ್ಪçಯೋಜಕತೆಯನ್ನು ಸಹ ಗುರುತಿಸುತ್ತಾರೆ. ಹಸಿದಾಗ ಅನ್ನ, ದಣಿದಾಗ ನೀರು, ಸತ್ತಾಗ ಹೊರಲು ನಾಲ್ಕು ಜನರ ಅವಶ್ಯಕತೆ ಇದೆಯೆ ಹೊರತು, ಯಾವ ಹಣ, ಆಸ್ತಿಯು ಕೂಡ ಮನುಷ್ಯನ ಬದುಕನ್ನು ಪರಿಪೂರ್ಣಗೊಳಿಸಲಾರವು ಎಂಬ ವಾಸ್ತವ ಸಂಗತಿಯನ್ನು ಕವಿ ಮನವರಿಕೆ ಮಾಡಿಕೊಟ್ಟಿದ್ದಾರೆ. ೨೦೧೯ರಲ್ಲಿ ಎಂದೂ ಕಂಡರಿಯದ ಜಲಪ್ರಳಯ ಸಂಭವಿಸಿ, ಬಡವ, ಶ್ರೀಮಂತ, ಜಾತಿಧರ್ಮವೆನ್ನದೆ ಎಲ್ಲರನ್ನು ಪ್ರಕೃತಿ ಅಸಹಾಯಕರನ್ನಾಗಿ ಮಾಡಿತು. ಇದು ಕವಿಯ ಮಾತಿನ ಸಾರ್ವಕಾಲಿಕತೆಗೆ ಸಾಕ್ಷಿ ಪ್ರಜ್ಞೆಯಾಗಿ ನಿಲ್ಲುತ್ತದೆ. ಕವಿಯ ಈ ಮಾತುಗಳು ಕೇವಲ ಜಲಪ್ರಳಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಎಲ್ಲಾ ರೀತಿಯ ಪ್ರಕೃತಿ ವಿಕೋಪಗಳಿಗೂ ಅನ್ವಯವಾಗುತ್ತದೆ.
ಮನುಷ್ಯ ಪ್ರಕೃತಿಗೆ ಎದುರಾಗಿ ನಿಲ್ಲಲು ಎಷ್ಟೇ ಪ್ರಯತ್ನಿಸಿದರೂ ಅಂತಿಮವಾಗಿ ಗೆಲ್ಲುವುದು ಪ್ರಕೃತಿಯೇ ಆಗಿರುತ್ತದೆ. ಜನವರಿ ೨೦೨೦ರಲ್ಲಿ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ್ದ ಕಾಡ್ಗಿಚ್ಚನ್ನು ಮಾನವ ತಕ್ಷಣಕ್ಕೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ೨೦೧೯ ಡಿಸೆಂಬರ್ ವೇಳೆಗೆ ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡ ಕರೋನಾದಂತಹ ಮಾರಣಾಂತಿಕ ವೈರಸ್ಸನ್ನು ಕೂಡ ಮನುಷ್ಯ ತನ್ನ ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಇದೆಲ್ಲವೂ ಪ್ರಕೃತಿಗೆ ಮನುಷ್ಯ ಮಾಡುತ್ತಿರುವ ಕೇಡಿನ ಪ್ರತಿಫಲಗಳೇ ಆಗಿವೆ. ಅದನ್ನು ಆತ ಅನುಭವಿಸಲೇ ಬೇಕು. ಇಲ್ಲಿ ಕೇಡು ಮಾಡಿದವರು ಯಾರು? ಏಕೆ? ಎಂಬುದು ಮುಖ್ಯವಾಗುವುದಿಲ್ಲ. ಏಕೆಂದರೆ ಕವಿ ಹೇಳುವಂತೆ,
“ಆಗೊಮ್ಮೆ ಈಗೊಮ್ಮೆ
ಪ್ರಕೃತಿಯೇ ಸಾರಿ ಸಾರಿ ಹೇಳುತ್ತದೆ
ಸಮಾನತೆಯತತ್ವ.”
ಈ ಪದ್ಯದ ಸಾಲುಗಳು ಸಾರ್ವಕಾಲಿಕ ನಿಸರ್ಗತತ್ತ÷್ವವನ್ನು ಪ್ರತಿಪಾದಿಸುತ್ತವೆ. ಮನುಷ್ಯರಲ್ಲಿ ಮಾತ್ರ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಕಾನೂನು ಕಟ್ಟಳೆಗಳಿವೆ. ಆದರೆ ಪ್ರಕೃತಿಗೆ ಈ ಬಗೆಯ ಏಕಮೇವ ಆಲೋಚನಾ ದೃಷ್ಟಿಕೋನವಿಲ್ಲ. ಹಾಗಾಗಿ ಮನುಷ್ಯ ಒಟ್ಟಾಗಿ ಅದರ ಪ್ರತಿಫಲವನ್ನು ಅನುಭವಿಸ ಬೇಕಾಗುತ್ತದೆ. ಮನುಷ್ಯರಲ್ಲಿರುವುದು ಪ್ರತ್ಯೇಕತಾ ತತ್ತ÷್ವವಾದರೆ ಪ್ರಕೃತಿ ಅಥವಾ ನಿಸರ್ಗದಲ್ಲಿರುವುದು ಏಕತಾತತ್ತ್ವ ಎಂಬುದನ್ನು ಕವಿ ತಮ್ಮ ಕವಿತೆಯಲ್ಲಿ ಪ್ರತಿಪಾದಿಸಿದ್ದಾರೆ
ಒಟ್ಟಿನಲ್ಲಿ ಕವಿ ಪ್ರಕೃತಿಯೊಂದಿಗೆ ತುಂಬಾ ಆಪ್ತ ಭಾವದಿಂದ ಬದುಕಿದ ಪ್ರತಿಫಲವಾಗಿ ಸಾರ್ವಕಾಲಿಕ ನಿಸರ್ಗತತ್ತ÷್ವವಾದ ಸಮಾನತೆಯನ್ನು ಗುರುತಿಸಲು ಸಾಧ್ಯವಾಗಿದೆ. ಪ್ರಕೃತಿಯ ಅತಿವೃಷ್ಟಿ, ಅನಾವೃಷ್ಟಿ ಮೊದಲಾದ ವಿಕೋಪಗಳ ತೀವ್ರತೆ ಮನುಷ್ಯನ ಬದುಕಿನ ಕ್ರಮವನ್ನು ಅವಲಂಬಿಸಿರುತ್ತದೆ ಎಂಬ ಸತ್ಯಾನ್ವೇಷಣೆ ಕವಿತೆಗಳ ಮೂಲಕ ಸಾಕಾರಗೊಂಡಿದೆ. ಎಲ್ಲ ಕವಿತೆಗಳು ಕೂಡ ಕಲ್ಪನಾ ಲೋಕದಲ್ಲಿ ಸೃಷ್ಟಿಯಾಗದೆ, ವಾಸ್ತವ ಹಾಗೂ ಅನುಭವಾತ್ಮಕವಾಗಿ ರೂಪುಗೊಂಡ ಕವಿತೆಗಳಾಗಿವೆ. ಪ್ರಕೃತಿಯನ್ನು ವಿಕೃತವಾಗಿ ಕಾಣುವ ಮನಸ್ಸುಗಳಿಗೆ ದಂಡಿನ ಅವರ ಕವಿತೆಗಳ ಓದು ಪರಿವರ್ತನಾ ಸ್ವರೂಪಿಯಾಗಿವೆ. ಜೊತೆಗೆ ಪ್ರಕೃತಿಯನ್ನು ಮೀರಿದಂದೇ ಮಾನವನ ವಿನಾಶ ಎಂಬ ವಾಸ್ತವ ಪ್ರಜ್ಞೆಯನ್ನು ನಮ್ಮಲ್ಲಿ ಜಾಗೃತಗೊಳಿಸುತ್ತವೆ.
-ಡಾ. ಶಿವಕುಮಾರ್ ಆರ್.
ಕೃತಿ: ಮೋಹದ ಪಥವೋ ಇಹಲೋಕದ ರಿಣವೋ
ಲೇಖಕರು: ಶಿವಕುಮಾರ ದಂಡಿನ
ಬೆಲೆ: ರೂ.೫೦/-
ಪ್ರಕಾಶನ: ಸಿಂಚನ ಪ್ರಕಾಶನ, ಬೆಂಗಳೂರು
ಪ್ರತಿಗಳಿಗಾಗಿ ಸಂಪರ್ಕಿಸಿ: 8105133637