ತವಕ ತಲ್ಲಣಗಳ ತಾಜಾಭಿವ್ಯಕ್ತಿ ; ಮೊಗೆದ ಬಾನಿಯ ತುಂಬ ತಿಳಿನೀರ ಬಿಂಬ: ಡಾ. ಹೆಚ್ ಎನ್ ಮಂಜುರಾಜ್

ಛದ್ಮವೇಷ- ಕವನ ಸಂಕಲನ
ಕವಯಿತ್ರಿ- ಎಂ ಕುಸುಮ, ಹಾಸನ
ಪ್ರಕಾಶಕರು: ರಚನ ಪ್ರಕಾಶನ, ಮೈಸೂರು
ಮೊದಲ ಮುದ್ರಣ: 2012
ಬೆಲೆ: 80 ರೂಗಳು, ಒಟ್ಟು ಪುಟ: 128

ಈ ಕವನ ಸಂಕಲನವನ್ನು ಕವಯಿತ್ರಿಯಾದ ಶ್ರೀಮತಿ ಎಂ ಕುಸುಮ ಅವರು ಹೃದಯ ಶ್ರೀಮಂತಿಕೆಯುಳ್ಳ ಎಲ್ಲ ಮನುಜರಿಗೆ ಅರ್ಪಿಸಿದ್ದಾರೆ. ಶುದ್ಧ ಮಾನವತಾವಾದದಲ್ಲಿ ನಂಬುಗೆಯಿಟ್ಟ ಇವರ ಧ್ಯೇಯ ಮತ್ತು ಧೋರಣೆಗಳು ಇದರಿಂದಲೇ ಮನವರಿಕೆಯಾಗುತ್ತವೆ. ಇದು ಇವರ ಎರಡನೆಯ ಕವನ ಸಂಕಲನ. ಮೂಲತಃ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡದಲ್ಲಿ ತಮ್ಮ ಸೃಜನಾತ್ಮಕವನ್ನು ಕಂಡು ಕೊಂಡು ಕಾಣಿಸಿ ಕೊಟ್ಟಿರುವುದು ಹೆಮ್ಮೆ ಮತ್ತು ಅಭಿಮಾನ ಮೂಡಿಸುವ ಸಂಗತಿ. ಕೃತಿಯ ಯಾವ ಭಾಗದಲ್ಲೂ ಇವರು ತಾನು ಇಂಗ್ಲಿಷ್ ಭಾಷಾ ಸಾಹಿತ್ಯಗಳ ಪಂಡಿತೆ ಎಂಬುದನ್ನು ಕಾಣಿಸಲು ಇಷ್ಟಪಟ್ಟಿಲ್ಲ. ಆ ಮಟ್ಟಿಗೆ ಇವರ ಕನ್ನಡ ಸಾಹಿತ್ಯ ಮತ್ತು ಭಾಷಾ ಪ್ರೇಮ ಸುಲಲಿತವಾಗಿದೆ ಮತ್ತು ಸುಭಗವಾಗಿದೆ.

ಇಂಗ್ಲಿಷ್ ಭಾಷಾ ಸಾಹಿತ್ಯದ ಪ್ರಾಧ್ಯಾಪಕರೂ ವಿದ್ವಾಂಸರೂ ಕನ್ನಡ ಸಾಹಿತಿಗಳೂ ಆದ ಡಾ. ರಾಜಶೇಖರ ಮಠಪತಿಯವರು ಈ ಕವನ ಸಂಕಲನಕ್ಕೆ ಮುನ್ನುಡಿಸಿದ್ದಾರೆ. ‘ಉಡಿಯಲ್ಲಿ ಕಾವ್ಯದ ಕಿಡಿ’ ಎಂದೇ ಆರಂಭಿಸಿ, ಮಧುರ ಭಕ್ತಿಯ ರಸಾವೇಶದಲ್ಲಿ ತಮ್ಮನ್ನು ಭಗವಂತನಿಗೆ ಅರ್ಪಿಸಿಕೊಂಡ ಕವಿಗಳ ಕಾವ್ಯದಲ್ಲಿ ಇದನ್ನಿಟ್ಟು ನೋಡಲು ಇಷ್ಟಪಟ್ಟಿದ್ದಾರೆ. ಖಲೀಲ್ ಗಿಬ್ರಾನ್, ಹಫೀಜ್, ರೂಮಿ, ಮಿರ್ಜಾ ಗಾಲಿಬ್, ಉಮರ್ ಖಯ್ಯಾಮ್, ಅಲ್ಲಮ, ಅಕ್ಕಮಹಾದೇವಿ, ಮಧುರಚೆನ್ನ ಮೊದಲಾದವರ ಪರಂಪರೆಯು ‘ಕಾವ್ಯವನ್ನು ಹೀಗೂ ನೋಡಬಹುದು’ ಎಂಬುದನ್ನು ಸಾಬೀತು ಮಾಡಿದ ಹಿನ್ನೆಲೆಯನ್ನು ಪ್ರಸ್ತಾವಿಸಿ, ಕುಸುಮರ ಕಾವ್ಯವು ಇದರ ಮುಂದುವರಿಕೆ ಎಂದಿದ್ದಾರೆ. ಸುಡುವಾಸ್ತವದ ಲೌಕಿಕದಲ್ಲೇ ಕಾಣಿಸುವ ಅಲೌಕಿಕ ತುಡಿತ ಮತ್ತು ಮಿಡಿತಗಳನ್ನು ಔಚಿತ್ಯಪೂರ್ಣವಾಗಿ, ಹಿತಮಿತವಾಗಿ ಕಂಡರಿಸಿದ್ದಾರೆಂದು ಪ್ರಶಂಸಿಸಿದ್ದಾರೆ. ಕುಸುಮ ಅವರು ಬಳಸಿದ ಲೋಕವ್ಯವಹಾರದ ಭಾಷೆಯಲ್ಲೇ ಲೋಕೋತ್ತರದ ವಿದ್ಯಮಾನಗಳನ್ನು ಹುಡುಕಿದ ಅವರ ವಿಮರ್ಶಾ ದರ್ಶನ ನಮ್ಮನ್ನು ಬೆರಗುಗೊಳಿಸುತ್ತದೆ. ‘ಕಿಡಿ ಹಾರಿ, ಅಲ್ಲಲ್ಲಿ ಜಾಳು-ಜಾಳು, ಹನ್ನೆರಡು ವರುಷದ ಸೀರೆ’ ಎಂಬ ಸಾಲುಗಳಲ್ಲಿ ಅವರು ಚೆನ್ನಮಲ್ಲನೊಂದಿಗೆ ಮದುವೆಯಾಗಲು ತುದಿಗಾಲಲ್ಲಿ ನಿಂತ ಅಕ್ಕನ ಪ್ರತಿಮೆಯನ್ನು ನೆನಪಿಸಿದ್ದಾರೆ. ವಸ್ತ್ರವಿನ್ಯಾಸಕ್ಕೆ ಬರೆದ ಹೊಸ ಭಾಷ್ಯ ಎಂದು ಗುರುತಿಸಿ ಕೊಡುತ್ತಾರೆ. ಇಂಥ ಇನ್ನೂ ಅನೇಕ ಸುಂದರ ಕವಿತೆಗಳು ಇಲ್ಲಿವೆ ಎಂದು ಹೇಳುವುದರ ಮೂಲಕ ಸಹೃದಯನನ್ನು ಕವಿತೆಯ ಓದಿಗೆ ಹದಗೊಳಿಸುತ್ತಾರೆ. ಇವರ ಮುನ್ನುಡಿಯೇ ಸಂಕಲನಕ್ಕೊಂದು ಘನತೆಯನ್ನು ತಂದು ಕೊಟ್ಟಿದೆ.

ಎಣಿಸಿಟ್ಟಂತೆ ಒಟ್ಟು ಎಪ್ಪತ್ತೈದು ಕವಿತೆಗಳು ಇಲ್ಲಿ ಸಂಕಲಿತಗೊಂಡಿವೆ. ಕವನದ ಶೀರ್ಷಿಕೆಗಳು ಸಹ ಸಹಜವಾಗಿ ಮತ್ತು ಸಂತುಲಿತವಾಗಿ ಬಂದಿವೆ. ಅನಾದಿ-ನಾದ, ಚಿತ್ರಮಾಲೆ, ಮಾಯಾದೀಪ, ಮಾನಸಲೋಕ, ನವನೀತ-ಸುನೀತ, ಕನ್ನಡ ನಾಡು ಡಾಟ್ ಕಾಮ್, ಖೈದಿಯೊಬ್ಬನ ಕೊನೆಗಳಿಗೆ, ಆಗ-ಮನ, ಒಂದು ನಗುವಿನ ಸುತ್ತ………..ಹೀಗೆ ಕವಿತೆಯ ಶೀರ್ಷಿಕೆಗಳು ವಿಶೇಷವಾಗಿವೆ. ಒಂದು ಬಗೆಯ ವಿಷಣ್ಣತೆಯನ್ನು ಅಭಿವ್ಯಕ್ತಿಸಿಯೂ ತನ್ನಂತರಂಗದಲ್ಲಿ ಜೀವಪ್ರೇಮವನ್ನೂ ಮನುಷ್ಯ ಸಂಬಂಧಗಳ ಕಡುಶ್ರದ್ಧೆಯನ್ನೂ ಪ್ರತಿಪಾದಿಸುತ್ತವೆ. ಇದೇ ಕವಿತೆಯ ಯಶೋಭೂಷಣ. ವ್ಯಂಗ್ಯ, ವಿಡಂಬನೆ ಮತ್ತು ಕುತ್ಸಿತ ಭರ್ತ್ಸನೆಗಳೇ ಕವಿತೆಯಂತೆ ವಿಜೃಂಭಿಸಿ, ಸಿನಿಕತನವನ್ನು ಹರಡುವ ರೋಗಾಣುಗಳಾಗಿ ಇಂದು ಬಹಳಷ್ಟು ಸ್ಖಲನಗಳು ಪ್ರಿಂಟಾಗುವಾಗ ಇಂಥ ಆರೋಗ್ಯವಂತ ಮತ್ತು ಹೃದಯವಂತ ಮನಸ್ಥಿತಿ ಅವಶ್ಯವಾಗಿ ಬೇಕಾಗಿದೆ. ಕುಸುಮ ಅವರ ಕಾವ್ಯ ಇದನ್ನು ಸದ್ದಿಲ್ಲದೇ ‌ ಸಾಧಿಸಿದೆ.

ಕವಿತೆಯು ಪದಗಳಲ್ಲಿ ಅವಿತ ಸಂವೇದನೆಗಳ ಮೂಲಕ ನಮ್ಮನ್ನು ತಟ್ಟಬಲ್ಲದು. ಯೋಚನೆಯು ಆಲೋಚನೆಯಾದಾಗ, ವೇದನೆಯು ಸಂವೇದನೆಯಾದಾಗ, ಚಿಂತೆಯು ಚಿಂತನೆಯಾದಾಗ, ವ್ಯಕ್ತಿಗತ ಭಾವವೊಂದು ಸಾರ್ವತ್ರಿಕವಾದಾಗ ರಸಾನುಭವ ಉಂಟಾಗುತ್ತದೆ. ಪ್ರಾಸಬದ್ಧ ಸಾಲುಗಳ, ವರದಿಸುವ ಗದ್ಯದ ತುಂಡು ತುಣುಕುಗಳ ಆಚೆಗೆ ಇದರ ಹರಹು; ಪದಗಳ-ವಾಕ್ಯಗಳ ಒಳಗೇ ಧ್ವನಿಯೊಂದು ವಾಹಕವಾಗಿ ಸಹೃದಯವಂತರನ್ನು ಆವರಿಸಿ ಆಲೋಚಿಸುವಂತೆ ಮಾಡುವಲ್ಲಿ ಇದರ ಯಶಸ್ಸು. ಈ ಜಗತ್ತಿನಲ್ಲಿ ಎಲ್ಲರೂ ಕವಿಗಳೇ; ಆದರೆ ಕವಿತೆಯಾಗಿಸಿ ರಸಾಭಿವ್ಯಕ್ತಿಯ ಮುಖೇನ ಸೃಜಿಸುವ ಸಾಮರ್ಥ್ಯ ಕೆಲವರಿಗೆ ಮಾತ್ರ ದಕ್ಕಿರುವ ದೈವಿಕ ಪವಾಡ. ನೋವು, ದುಗುಡ, ಪ್ರೇಮ, ಹರ್ಷ, ಹಾಸ್ಯ ಇವೇ ಮೊದಲಾದ ಭಾವದೋಕುಳಿಯ ಸಂದರ್ಭದಲ್ಲಿ ನಮಗೇ ಗೊತ್ತಿಲ್ಲದೇ ನಾವು ಕವಿಗಳಾಗಿರುತ್ತೇವೆ. ಅಥವಾ ಹಾಗೆ ಕಾವ್ಯಾತ್ಮಕವಾಗಿ ಮಾತಾಡಿರುತ್ತೇವೆ.

ಪ್ರೇಮವಂತೂ ನಲ್ಲ ನಲ್ಲೆಯರನ್ನು ಕವಿಗಳಾಗಿಸದೇ ಬಿಡುವುದೇ ಇಲ್ಲ. ಅಂಥ ಶಕ್ತಿ ಸಾಹಿತ್ಯದ್ದು ಮತ್ತು ವಿಶೇಷವಾಗಿ ಅದರ ಶ್ರೇಷ್ಠ ಪ್ರಕಾರವಾಗಿರುವ ಕಾವ್ಯದ್ದು. ಹೀಗಾಗಿ ಇಂಗ್ಲಿಷ್ ಭಾಷಾ ಸಾಹಿತ್ಯಗಳನ್ನು ಆಳವಾಗಿ ಅಭ್ಯಸಿಸಿರುವ ಶ್ರೀಮತಿ ಕುಸುಮ ಮೇಡಂ ಅವರು ಕನ್ನಡದ ಕಸುವನ್ನು ಚೆನ್ನಾಗಿಯೇ ಅರಿತು, ತಮ್ಮ ಕವಿತೆಗಳಲ್ಲಿ ಅವನ್ನು ಸಮರ್ಥವಾಗಿ ಸಂವಹನಿಸಿದ್ದಾರೆ. ಹಾಗೆ ನೋಡಿದರೆ ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ಇಂಗ್ಲಿಷ್ ಭಾಷಾ ಸಾಹಿತ್ಯದ ಅಧ್ಯಾಪಕರು ಅಭೂತಪೂರ್ವವೆಂಬಂತೆ ತಮ್ಮ ಅಮೂಲ್ಯವಾದ ಸೃಜನಾತ್ಮಕ ಕೊಡುಗೆಗಳನ್ನು ನೀಡಿದ್ದಾರೆ. ನವೋದಯ ಕವಿಗಳಂತೂ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷಾ ಸಾಹಿತ್ಯಗಳಲ್ಲಿ ಆಳವಾದ ಪಾಂಡಿತ್ಯ ಮತ್ತು ಪ್ರಭುತ್ವವನ್ನು ಹೊಂದಿದ್ದವರು. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಬಿಎಂಶ್ರೀಯವರ ‘ಇಂಗ್ಲಿಷ್ ಗೀತಗಳು’ ಮೂಲಕವೇ ಹೊಸಗನ್ನಡದ ಹೆದ್ದಾರಿ ತನ್ನ ಆಹ್ಲಾದಕರ ಪ್ರಯಾಣಕ್ಕೆ ಸಜ್ಜುಗೊಂಡಿತು. ಮುಂದೆ ಬಂದ ಪ್ರಗತಿಶೀಲ ಸಾಹಿತಿಗಳು ಕೂಡ ಅಕಡೆಮಿಕ್ ಶಿಕ್ಷಣವನ್ನು ಹೊಂದದಿದ್ದರೂ ಅಸಾಂಪ್ರದಾಯಿಕವಾಗಿ ಇಂಗ್ಲಿಷ್ ಮೂಲಕ ಜಗತ್ತನ್ನೂ ಕಮ್ಯುನಿಸಮ್ಮನ್ನೂ ತಿಳಿದವರಾಗಿದ್ದರು. ತಾವು ಪ್ರತಿಪಾದಿಸಿದ ಸಿದ್ಧಾಂತಗಳ ಮೂಲವನ್ನು ಇಂಗ್ಲಿಷ್, ರಷ್ಯನ್ ಮತ್ತು ಜರ್ಮನ್ ಭಾಷೆಗಳಲ್ಲಿ ಹುಡುಕಾಡಿದ್ದವರು.

ಆನಂತರ ಕಾಣಿಸಿಕೊಂಡ ನವ್ಯ ಸಾಹಿತ್ಯವಂತೂ ಇಂಗ್ಲಿಷ್ ಮೇಷ್ಟ್ರುಗಳು ಬೆಳೆಸಿದ ಪ್ರಬುದ್ಧ ಶಿಶು. ಇಂಗ್ಲಿಷಿನ ಮಾಡರ್ನ್ ಪೊಯಿಟ್ರಿ ಕನ್ನಡದ ಸಂದರ್ಭದಲ್ಲಿ ನವ್ಯಕಾವ್ಯವಾಗಿ ಆವಿರ್ಭವಿಸಿತು. ಕೇವಲ ಕಾವ್ಯ ಮಾತ್ರವಲ್ಲದೇ ಕತೆ, ಕಾದಂಬರಿ ಮತ್ತು ನಾಟಕ ಪ್ರಕಾರಕ್ಕೂ ಇದು ಹರಡಿ, ಒಟ್ಟಾರೆ ನವ್ಯ ಸಾಹಿತ್ಯ ಜಗತ್ತಿನ ನಾನಾ ಮೂಲೆಗಳ ಕಾಣ್ಕೆಗಳನ್ನು ಕನ್ನಡಕ್ಕೆ ಕಂಡರಿಸಿ ಕೊಟ್ಟಿತು. ನವ್ಯ ಸಾಹಿತ್ಯವನ್ನು ಬೆಳೆಸಿದವರೇ ಇಂಗ್ಲಿಷ್ ಬಲ್ಲ ವಿದ್ವಾಂಸರು ಮತ್ತು ಅಧ್ಯಾಪಕರು. ಪ್ರಾಚೀನ ಕಾಲದಲ್ಲಿ ಸಂಸ್ಕೃತವು ಕನ್ನಡವನ್ನು ಬದುಕಿಸಿ, ಬೆಳೆಸಿದ ರೀತಿಯಲ್ಲೇ ಆಧುನಿಕ ಕಾಲದಲ್ಲಿ ಇಂಗ್ಲಿಷ್ ಭಾಷಾ ಸಾಹಿತ್ಯವು ಕನ್ನಡವನ್ನು ಪೋಷಿಸಿತು ಮತ್ತು ಸೃಷ್ಟಿಶೀಲತೆಯ ನಾನಾ ಮಜಲುಗಳನ್ನು ಕಾಣಿಸಲು ನೆರವಾಯಿತು.

ಈ ಎಲ್ಲ ಹಿನ್ನೆಲೆಯಲ್ಲಿ ನಾನು ಕುಸುಮ ಅವರ ಕಾವ್ಯವನ್ನಿಟ್ಟು ನೋಡಲು ಬಯಸುತ್ತೇನೆ. ಆದರೆ ಕವಯಿತ್ರಿ ಮಾತ್ರ ತಮ್ಮ ಸಾಹಿತ್ಯದ ರೀತಿ ನೀತಿಗಳನ್ನಾಗಲೀ, ಸಿದ್ಧಾಂತ ರಾದ್ಧಾಂತಗಳನ್ನಾಗಲೀ ಎಲ್ಲಿಯೂ ತರುವ ಪ್ರಯತ್ನ ಮಾಡದೇ ಶುದ್ಧ ಸೃಜನಶೀಲ ರಚನೆಗಳನ್ನು ಅಭಿವ್ಯಕ್ತಿಸುವಲ್ಲಿ ಯಶಸ್ಸು ಪಡೆದಿದ್ದಾರೆ. ಏಕೆಂದರೆ ಅವರಿಗೆ ಕಾವ್ಯದ ಅಂತರಂಗದ ಧ್ವನಿಬನಿಗಳು ಚೆನ್ನಾಗಿ ಗೊತ್ತಿದೆ. ಯಾವುದು ಕಾವ್ಯ ; ಯಾವುದು ಅಕಾವ್ಯ ಎಂಬುದನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದಾರೆ. ಪಾಠ ಮಾಡುವ ಅಧ್ಯಾಪಕರಾಗಿ ಸೃಜನೆಯನ್ನೂ ಅದರ ವಿಮರ್ಶೆಯನ್ನೂ ಅರಿತವರಾಗಿದ್ದಾರೆ. ತಮ್ಮ ಸುಪ್ತ ಮನದ ಭಾವನೆಗಳಿಗೆ ಚೆಂದದ ಉಡುಗೆ ತೊಡುಗೆಯನ್ನಾಗಿಸಲು ಅವರು ಕಾವ್ಯಮಾರ್ಗವನ್ನು ಆಯ್ದುಕೊಂಡಿದ್ದಾರೆ. ಕಾರಣವಿಷ್ಟೇ: ತನ್ನೊಳಗೇ ಹೇಳಿಕೊಳ್ಳುವ ಮತ್ತು ಕೇಳಿಕೊಳ್ಳುವ ಮಾರ್ಗವಾಗಿ ಕವಿತೆ ರೂಪುಗೊಳ್ಳುತ್ತದೆ. ಕವಿತೆಯೇ ಹಾಗೆ; ತನ್ನನೇ ವಿಚಾರಿಸಿಕೊಳ್ಳುವ ಹಾಗೆ. ಅದು ಏಕಕಾಲಕೆ ಸ್ವಂತದ್ದೂ ಹೌದು; ಸಾರ್ವಜನಿಕವೂ ಹೌದು. ಇದು ನೀಡುವ ಖಾಸಗೀ ಜಾಗದ ಅನುಕೂಲಕ್ಕಾಗಿ ಬರೆಹಗಾರರು ಕವಿಗಳಾಗಲು ಹೊಯ್ದಾಡುವರು. ಎಲ್ಲವನೂ ಹೇಳಿಯೂ ಏನನೂ ಹೇಳದ ಅಥವಾ ಹೇಳಲಾಗದ ವಿಚಿತ್ರ ಸಂಕಟ ಮತ್ತು ಸಮಾಧಾನಗಳು ಕೇವಲ ಕವಿತೆಯಿಂದ ಮಾತ್ರ ದೊರಕುವ ಸಚಿತ್ರ ಶಾಂತಿ. ಯಾವುದೇ ತೀರ್ಮಾನ ಅಥವಾ ನಿರ್ಧಾರಗಳನ್ನು ಕವಿ ಮಾಡಲಾರ. ಯಾವುದೋ ತತ್ತ್ವ, ಸಿದ್ಧಾಂತಗಳ ಮೂಸೆಯಲ್ಲಿ ಅವನು ತನ್ನ ಬದುಕನ್ನು ಬಗೆಯುವ ಸಾಹಸಗೈಯಲಾರ. ಹಾಗೆ ಆದರೆ ಅದರಂಥ ಕೆಟ್ಟ ಕಾವ್ಯ ಇನ್ನೊಂದಿಲ್ಲ. ಸಂವಾದ ಮತ್ತು ವಾಗ್ವಾದಗಳಿಗೆ ಕವಿತೆ ಕಾರಣವಾಗಬಹುದು; ಆದರೆ ವಾದ ಮತ್ತು ವಾಗ್ವಾದಗಳನ್ನೇ ಕವಿತೆಯಾಗಿಸುವ ಹುಚ್ಚಾಟವನ್ನು ಕವಿ ಮಾಡಬಾರದು. ಹಾಗೆ ಮಾಡಿದರೆ ಅದು ಕವಿತೆಯಲ್ಲ; ಪ್ರಣಾಳಿಕೆಯಾಗುತ್ತದಷ್ಟೇ!

ಕಾವ್ಯಧರ್ಮ ಅಂತ ಒಂದಿದೆ. ಅದನ್ನು ಸಾಧಿಸಲು ಕವಿ ನಿರಂತರ ಪ್ರಯತ್ನಿಸುತ್ತಿರುತ್ತಾನೆ. ಧರ್ಮ ಅಂತಲೂ ಒಂದಿದೆ. ಅದು ಜನರ ಜೀವನವಿಧಾನವನ್ನು ನಿರ್ದೇಶಿಸುತ್ತಿರುತ್ತದೆ. ಒಳಿತನ್ನೂ ಸಹಿಷ್ಣುತೆಯನ್ನೂ ವೈಶಾಲ್ಯವನ್ನೂ ಬೋಧಿಸುವುದು ಧರ್ಮದ ಕೆಲಸ. ಹಾಗೆ ಅದು ಮಾಡದಿದ್ದರೆ ಅದು ಧರ್ಮವೇ ಅಲ್ಲ ಅಷ್ಟೇ. ಇದೇ ರೀತಿಯಲ್ಲಿ ಕಾವ್ಯಧರ್ಮವನ್ನು ಸಹ ನೋಡಬೇಕು. ಕಾವ್ಯಧರ್ಮವನ್ನು ಸಾಧಿಸುವುದೇ ಕವಿಯ ಆಶಯವಾಗಿರುತ್ತದೆ. ತನ್ನ ಒಲವು ನಿಲವುಗಳನ್ನು ಆತ ಬಾಯಿ ಬಿಟ್ಟು ಹೇಳದೆಯೇ ಹೇಳುವವನಾಗುತ್ತಾನೆ. ದುಃಖ, ದುಗುಡ ಮತ್ತು ಸಂತಸಗಳನ್ನು ಪದಗಳಲ್ಲಿ ಹೇಳದೆಯೇ ಆ ಭಾವಗಳನ್ನು ಅರ್ಥ ಮಾಡಿಸುವ ಸಾಹಸವೇ ಕಾವ್ಯ. ತಾನು ಬಳಸುವ ಉಪಮೆ, ರೂಪಕ, ಪ್ರತಿಮೆ, ಸಂಕೇತಗಳು ಅಂಥ ಕೆಲಸವನ್ನು ನಿಶ್ಶಬ್ದವಾಗಿ ಮಾಡುತ್ತವೆ. ಎಲ್ಲವನು ಹೇಳಿಯೂ ಏನನೂ ಹೇಳದ ಮೌನ ಅಲ್ಲಿ ಮನೆ ಮಾಡಿರುತ್ತದೆ.

ತನ್ನ ದ್ವಂದ್ವಗಳಿಗೆ, ಭಾವೋದ್ದೀಪನೆಗೆ, ತುಮುಲ ತೊಡಕುಗಳಿಗೆ ಬಲವಾಗಿ ಅನ್ನಿಸುವಿಕೆಗಳಿಗೆ ಆತ ಅಥವಾ ಆಕೆ ತನ್ನತನದ ಅರಿವಿನ ಬೆಳಕಿನಲ್ಲಿ ಭಾಷೆಯ ಮೂಲಕ ಚೆಂದದ ಚಾದರ ಹೆಣೆದು, ಸುಂದರ ಚಿತ್ರವನ್ನಾಗಿಸಿರುತ್ತಾರೆ. ಇದಷ್ಟೇ ಸತ್ಯವಲ್ಲ; ಸಾವಿರಾರು ಉಳಿ ಪೆಟ್ಟು ತಿಂದು ಸುಂದರ ವಿಗ್ರಹವಾದ ಮೇಲೆ ನಮ್ಮ ಕಣ್ಣಿಗೆ ಕಾಣುವುದು ಅದರ ಸೌಂದರ್ಯವೊಂದೇ! ಅದರ ಅಂತರಾಳದಲಿ ತಿಂದ ಉಳಿಪೆಟ್ಟನ್ನೂ ಸಹೃದಯ ಹುಡುಕಿ ಅರ್ಥವಿಸಿಕೊಂಡಾಗ ಮಾತ್ರ ಅದು ಸಂಪೂರ್ಣಗೊಳ್ಳುವುದು. ಕವಿಯಾದವನು ಪಕ್ಷಿಯೊಂದರ ಹಸಿವಿನ ಸಂಕಟವನ್ನೂ ವಿಲ ವಿಲ ಒದ್ದಾಡುತ್ತಾ ಪ್ರಾಣ ತ್ಯಜಿಸುತ್ತಿರುವ ಹುಳದ ಯಾತನೆಯನ್ನೂ ಏಕಕಾಲಕೆ ಗ್ರಹಿಸಬೇಕು. ಯಾವುದೇ ನಿರ್ಣಯಗಳಿಗೆ ಬರದೇ ಲೋಕದಾ ವಿದ್ಯಮಾನವನ್ನು ಅದಿರುವ ರೀತಿಯಲ್ಲಿ ಕಂಡರಿಸಿ, ಕಲ್ಪಿಸಿ, ಕಾಣಿಸಬೇಕು. ಅದಕೆಂದೇ ಕವಿಯ ಹೃದಯಕ್ಕೆ ಸಮಾನವಾದ ಹೃದಯವುಳ್ಳವನು ಸಹೃದಯ ಎಂದು ನಮ್ಮ ಭಾರತೀಯ ಕಾವ್ಯ ಮೀಮಾಂಸೆ ಸಾರಿ ಹೇಳುತ್ತದೆ.

ಕುಸುಮ ಅವರ ಕವಿತೆಗಳಲ್ಲಿ ಹಲವು ಇಂಥ ತಾದಾತ್ಮ್ಯವನ್ನು ಸಾಧಿಸಿವೆ. ಒಂದು ಸಂಗತಿಯ ಸುತ್ತ ಹರಡಿಕೊಳ್ಳುವ ಇವರ ಶೈಲಿಯು ಬಹು ಬೇಗ ಅದರ ಪರಿಣಾಮವನ್ನೂ ಸಾರ್ಥಕ್ಯವನ್ನೂ ಶೋಧಿಸುವುದರತ್ತ ಮಗ್ನವಾಗುತ್ತದೆ. ಯಾರನ್ನೂ ಪ್ರಶ್ನಿಸದೇ ತನ್ನನ್ನೇ ಪ್ರಶ್ನಿಸಿಕೊಳ್ಳುವ ಮತ್ತು ತಾನು ಕಂಡುಕೊಂಡ ಪ್ರಾಮಾಣಿಕ ಉತ್ತರವನ್ನು ಅದು ಕೊನೆಯಲ್ಲಿ ನಮಗುಳಿಸಿ ವಿಶ್ರಮಿಸುತ್ತದೆ. ಕವಯಿತ್ರಿ ಕೇಳುವ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲವೆಂದಲ್ಲ; ಓದುವ ಸಹೃದಯ ಅದನ್ನು ತಾನೇ ಕಂಡುಕೊಳ್ಳಲಿ ಎಂಬ ಆಶಯ. ಇದುವೆ ಕಾವ್ಯದ ಸತ್ಕರ್ಮ; ಸರಿದಾರಿ ಮತ್ತು ಸಮತೂಕ.

ಹದವಾಗಿ ಶ್ರುತಿ ಮಾಡಿಟ್ಟ ಎರಡು ವೀಣೆಗಳಲ್ಲಿ ಒಂದನ್ನು ನುಡಿಸಿದರೆ ಇನ್ನೊಂದು ತಾನಾಗಿಯೇ ನುಡಿಯುವುದಂತೆ! ಹಾಗೆ ಕಾವ್ಯವನ್ನು ಪ್ರೀತಿಸುವ ಸಹೃದಯಿ. ಕವಿಯ ಅಂತರಾಳವೇ ಕವಿತೆಯ ಆಳ ಅಗಲವಾಗಿ ಹರಡಿಕೊಂಡ ಹತ್ತು ಹಲವು ದಿಕ್ಕು ದೆಸೆಗಳನ್ನು ಓದುಗನಾದವ ತಾನೂ ಕಂಡುಕೊಳ್ಳಬೇಕು. ಏಕೆಂದರೆ ಕವಿತೆಗೆ ಒಂದೇ ಅರ್ಥವಿರುವುದಿಲ್ಲ! ಓದುಗನ ಮನೋಧರ್ಮ ಮತ್ತು ಆತ ಇಷ್ಟಪಡುವ ಕಾವ್ಯಧರ್ಮಗಳ ಆಧಾರದ ಮೇಲೆಯೇ ಕವಿತೆ ತನ್ನನ್ನು ವಿಚಾರಿಸಿಕೊಳ್ಳುತ್ತದೆ; ತನ್ನರ್ಥವನ್ನು ಬಿಟ್ಟು ಕೊಡುತ್ತಾ ಹೋಗುತ್ತದೆ. ಉತ್ತಮ ಮತ್ತು ಶ್ರೇಷ್ಠ ಕವಿತೆಯು ಹೀಗೆ ಅವರವರ ಭಾವಕ್ಕೆ ಮತ್ತು ವಿಚಾರಶೀಲತೆಗೆ ಸ್ಪಂದಿಸುತ್ತಾ ಸಾಗುತ್ತದೆ. ಜೊತೆಗೆ ಕಾಲಕಾಲಕ್ಕೆ ನಡೆಯುವ ಪ್ರಪಂಚದ ವಿದ್ಯಮಾನಗಳಿಗೆ ಅನುಗುಣವಾಗಿ ತಾನು ಸಹ ಸಮಕಾಲೀನಗೊಳ್ಳುತ್ತದೆ. ಸಂಸ್ಕೃತದ ವಾಲ್ಮೀಕಿ ಮತ್ತು ವ್ಯಾಸರೇ ಆಗಲಿ, ಇಂಗ್ಲಿಷಿನ ಷೇಕ್ಸ್‍ಪಿಯರ್, ವರ್ಡ್ಸ್‍ವರ್ತ್ ಮತ್ತು ಟಿ ಎಸ್ ಎಲಿಯಟ್ ಆಗಲಿ, ಕನ್ನಡದ ಪಂಪ, ಕುಮಾರವ್ಯಾಸ, ಕುವೆಂಪು, ಬೇಂದ್ರೆಯವರೇ ಆಗಲಿ ಈ ಕಾಲಕ್ಕೂ ಸಲ್ಲುವಂಥವರು. ಇಂಥ ಸಮಕಾಲೀನ ಮತ್ತು ಸಾರ್ವಕಾಲೀನ ಗುಣವುಳ್ಳದ್ದೇ ಉತ್ತಮ ಕವಿತೆ. ಅದಲ್ಲದ್ದು ಕೇವಲ ಪಾದಪೂರಣ, ಸಾರ್ಥಕವಲ್ಲದ ಸ್ಖಲನ ಅಷ್ಟೇ! ಅಂಥವನ್ನು ಮಂದಿ ಮರೆತು ಮುಂದಕೆ ಹೋಗುತ್ತಿರುತ್ತಾರೆ.

ಕುಸುಮರ ಕಾವ್ಯಭಾಷೆ ಇಲ್ಲಿ ಪಲ್ಲವಿಸಿದೆ; ಹೂ ಕಾಯಿ ಹಣ್ಣುಗಳನು ಪ್ರಚೋದಿಸಿದೆ. ಹೇಮಂತ ಕಾಲದಲಿ ತನ್ನೆಲ್ಲವನು ಕಳೆದುಕೊಂಡು ಬೋಳಾದ ಗಿಡಮರಗಳ ತೆರದಲ್ಲಿ ಈ ನಶ್ವರವಾದ ಬಾಳನ್ನು ಬಗೆಬಗೆಯಾಗಿ ಬಣ್ಣಿಸಲು ಅದೇ ಬೋಳು ಬಯಲು ವಸಂತಕಾಲದಲಿ ಚಿಗುರೊಡೆದು ನಳನಳಿಸುವಂಥ ವಿಧಾನವನ್ನು ಬಳಸಿದೆ! ಬೋಳಾದದ್ದೂ ಅದೇ; ಚಿಗುರೊಡೆದು ಪಲ್ಲವಿಸಿದ್ದೂ ಅದೇ! ಏನೆಂಥ ವಿಸ್ಮಯ ಮತ್ತು ಸಖೇದಾಶ್ಚರ್ಯ !! ಅದಕೆ ಕೇವಲ ಕಾಯಬೇಕು; ಕಾಲ ಪಕ್ವಗೊಳ್ಳಬೇಕು; ಕಾಯುತಿದ್ದರೆ ಬದುಕು; ಕಾಯದೇ ಹೋದರೆ ಬರೀ ಮಮ್ಮಲ ಮುಲುಕು. ಇದನ್ನೇ ಇವರ ಬಹಳಷ್ಟು ಕವನಗಳು ತಿಳಿ ಹೇಳುವ ಧಾಟಿಯಲ್ಲಿ ರಚಿತವಾಗಿವೆ. ನಿಧ ನಿಧಾನವಾಗಿ ಆವರಿಸುತ್ತಾ ಆದರಿಸುತ್ತಾ ಬ್ರಹ್ಮಾಂಡದಲಿ ಅವಿತ ಸತ್ಯಗಳನ್ನು ಇವರ ಸಾಲುಗಳು ದರ್ಶಿಸಿ ಕೊಡುತ್ತವೆ. ಸರಳವಾಗಿ ಮತ್ತು ಸಹಜವಾಗಿ ಬದುಕಲು ಆಗದ ಮನುಷ್ಯ ಏನೆಲ್ಲ ಚಿತ್ರ ವಿಚಿತ್ರ ಕಸರತ್ತುಗಳನ್ನು ಮಾಡಿ ವಿವೇಕಿಗಳ ಮುಂದೆ ಬರಿ ಬತ್ತಲಾಗಿ ತನ್ನತನವನ್ನು ಕಳೆದುಕೊಂಡು ಪರಾಧೀನಗೊಳ್ಳುವ ಪರಿಯನ್ನು ಪರಿಪರಿಯಾಗಿ ಚಿತ್ರಿಸುತ್ತವೆ. ‘ಬಟಾ ಬಯಲಾಗಿ ನಿಂತಿತವನ ಆಷಾಢಭೂತಿ ತಿಕ್ಕಲುತನ…….’ ‘ಉರಿವ ಒಲೆಯ ಹಂಡೆಯಂತೆ ಕಾದು ಬಿಸಿಯಾಯ್ತು ನೆರೆದವರ ಪಾಪದ ಮಂಡೆ!’ ‘ದಿಗ್ವಿಜಯಕೆ ಮತ್ತೆ ಹೊರಟ ಅಲೆಕ್ಸಾಂಡರ್; ಅದೇನು ಪ್ರೀತಿಯೋ ಮೋಹವೋ ತನ್ನ ಪೌರುಷದ ಮೇಲೆ!’ ‘ಕನಸುಗಳ ಮಾರದಿರಿ ಇನ್ನು ನಮಗೆ……’ ‘ಬಾಳಸಿಪ್ಪೆ ಸುಲಿದೇ ನಾವು ಕದಳಿ ಫಲವ ಸವಿಯುವ’ ‘ಇದ್ದು ಬಿಡುವೆ ಹೀಗೇ, ಮೌನಯೋಗಿಯ ಹಾಗೆ’ ‘ಪರಂಪರೆಯೆಂದರೆ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸುವ ಚೆಂಡು…..’ ಬದುಕೆಂದರೆ ಅದೇ ಹಾವು-ಏಣಿಯಾಟ; ತುತ್ತತುದಿಯೇರಿದವಗೆ ಮಾತ್ರವೇ ಕಾಣುವುದು ಪರದೆಯಾಚೆಗಿನ ಲೋಕ’ ‘ಕೂತ ಭಂಗಿಯಲ್ಲೇ ಲಹರಿಯೆಡೆಗೆ ಜಾರಿದಳವಳು; ಮನಸಿನಲೆಗಳ ಮೇಲೆಲ್ಲಾ ಚದುರಿವೆ ಅವನದೇ ಬಿಂಬ’ ‘ನನಗೂ ದಾಹವಿದೆ, ನಿನ್ನದೇ ಛಾತಿಯನ್ನು ಮೈಗೂಡಿಸಿಕೊಳ್ಳಬೇಕೆಂದು. ಆದರೇನು ಈ ದೇಹ-ಮನಸ್ಸು ತೀರಾ ನಿನ್ನದಕ್ಕಿಂತ ಭಿನ್ನವಲ್ಲವೇನು?’ ‘ನನ್ನ’ನು ಇನ್ನು ಎಲ್ಲಿ ಹುಡುಕಲಿ ಈ ಮಾಯಾಲೋಕದಲಿ?’ ‘ಭೂತಾಯಿ ಕಂದನ ಬರಸೆಳೆದಳು: ಆಡಿಕೋ ಹೋಗು ಎನ್ನ ಕಣ್ಣೆದುರಲ್ಲಿ!’ ‘ಚದುರಿದ ಬಿಡಿ ಹೂಗಳ ಆಯುವಾಗ ನಾವು ಮರಗಿಡಗಳ ಸ್ವಾರ್ಥ ಮೀರಿದ ಬದುಕ, ಮರೆತೇ ಬಿಡುತ್ತೇವೆ’ ‘ಸೀಮೆ ಮೀರಿದ ಅಗಾಧತೆಗೆ ನೀಲ ಮುಗಿಲೇ ಸಾಕ್ಷಿ, ಹೊಂಬಿಸಿಲ ಬಣ್ಣದಂತೆ ಪ್ರೀತಿ’‘ಒಲೆ ಎದುರು ಜೀವ ತೇದ ಒಡಲಾಳ ನನ್ನೆದೆಯಲ್ಲಿಂದು ಬತ್ತಲಾಗುತಿಹುದು; ಹೇಗೆ ಕಲ್ಲಾಗಿರಬಹುದು ನೀನು?’ ‘ಮೌನದಲೂ ಮಾತು ಹುಡುಕಿ ಅಂತರದಲೇ ತಂತು ನಿಲುಕಿ, ಉಬ್ಬರವೇ ಭರತವಾಕ್ಯ’ ‘ನೀನು ಮೊಗೆವ ಬಾನಿಯಾಗದೆ, ಕೇವಲ ಕೇರುವ ಮೊರವಾದೆ’ ಹೀಗೆ ಕುಸುಮರ ಬಹಳಷ್ಟು ಕವಿತೆಗಳ ಸಾಲು ನನ್ನನ್ನು ಕಲಕಿವೆ; ಸಂಭಾವಗಳ ತುಳುಕಿಸಿವೆ; ಕರುಳ ತಂತಿಯ ಮಾಡಿ ಪಲುಕಿಸಿವೆ!

ಇಲ್ಲಿಯ ಎಲ್ಲವೂ ಅಲ್ಲ; ಕೆಲವೊಂದು ಕವನಗಳು ತನ್ನ ನಿಜಾರ್ಥದಲಿ ಸಾರ್ಥಕವಾಗಿವೆ. ಬರೆಯಬೇಕೆಂಬ ತೀವ್ರ ತುಡಿತವಿದ್ದಾಗ ಮಾತ್ರ ಇವರು ಪೆನ್ನಿಡುವವರು ಎಂಬುದನು ನಾನು ಇವರ ಪದ್ಯಗಳ ಓದಿನಿಂದಲೇ ಗ್ರಹಿಸಿದ್ದೇನೆ. ಇದೇ ಸರಿ. ಬೇರೆ ಏನನ್ನಾದರೂ ಬರೆಯಬಹುದು; ಆದರೆ ಪದ್ಯವನ್ನಲ್ಲ! ಆ ಮಟ್ಟಿಗೆ ಕವಿತೆ ಈ ಹೊತ್ತಿಗೂ ನಿಗೂಢ ಮತ್ತು ಸ್ವತಃ ಬರೆದವರಿಗೂ ಅದರ ಆಳ ಅಗಲಗಳು ಕಾಡುತ್ತವೆ ಗಾಢ!!

‘ಕೊಳಲೂದಲು ಕೇವಲ ತುಟಿಗಳಾಚೆಗೆ ಹೊರಹೊಮ್ಮುವ ಉಸಿರು ಸಾಕೆ? ಬೇಕು ಎದೆಯ ಕಿಚ್ಚು ಮತ್ತು ಕರುಳ ಕೆಂಡವ ಮಾಡುವ ರೊಚ್ಚು’ಎನ್ನುತ್ತಾನೆ ನನ್ನಿಷ್ಟದ ಸೂಫಿ ಸಂತ, ಮಧುರ ಭಕ್ತಿಯನು ವೈವಿಧ್ಯಮಯವಾಗಿ ಹಾಡಿದ ಪರ್ಷಿಯಾದ ಕವಿ ಜಲಾಲುದ್ದೀನ್ ರೂಮಿ. ‘ಹಾಡಾಗದೆ ರಾಧೆಯಿಲ್ಲ; ಹಾಡಿಲ್ಲದೆ ಕೃಷ್ಣನಿಲ್ಲʼ ಎನ್ನುತ್ತಾರೆ ಮತ್ತೋರ್ವ ಕವಿವರ್ಯರು. ‘ಬಂದ ಬಾಗಿಲು ಮಣ್ಣು; ಬಿಡುವ ಬಾಗಿಲು ಮಣ್ಣು; ನಡುವೆ ಕಾಪಾಡುವುದು ತಾಯಕಣ್ಣು’ಎನ್ನುತ್ತಾರೆ ಒಲುಮೆಯ ಕವಿ ಕೆಎಸ್‍ನ. ‘ಹಣತೆ ಹಚ್ಚುತ್ತೇನೆ ನಾನೂ; ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು, ನೋಡಬಹುದೆಂಬ ಒಂದೇ ಒಂದು ಆಸೆಯಿಂದ’ಎಂದು ಬರೆಯುತ್ತಾರೆ ಬೆಳಕಿನ ಕವಿ ಜಿಎಸ್‍ಎಸ್. ಇವರೆಲ್ಲರ ಒಟ್ಟೂ ಮಾತಿನ ತಾತ್ಪರ್ಯವನ್ನು ಕುಸುಮರ ಕಾವ್ಯ ಒಳಗೊಂಡಿದೆಯೇನೋ ಎಂಬಂತೆ ತಾಳ್ಮೆಗೆಡದೆ ಪ್ರಾಮಾಣಿಕವಾಗಿ ಅಷ್ಟೇ ಉಮೇದಿನಿಂದ ತಮ್ಮೆಲ್ಲ ಸೃಷ್ಟಿಶೀಲ ಪ್ರತಿಭಾಮೂಸೆಯಲದ್ದಿ ಚಿತ್ರಿಸಿದ್ದಾರೆ. ಇವರಿಂದ ಇನ್ನಷ್ಟು ಇಂಥ ಕೊಡುಗೆಗಳು ಕನ್ನಡಕ್ಕೆ ಲಭಿಸಲಿ; ಇವರ ಹೆಸರು ಮತ್ತು ಕೀರ್ತಿ ಹರಡಲಿ ಎಂದು ನಾನು ಆಶಿಸುವೆ. ಪುಸ್ತಕವನು ಕೈಗಿತ್ತು ತಮ್ಮ ಸಂತಸವನೂ ಗೌರವವನೂ ವ್ಯಕ್ತಪಡಿಸಿದ ಕವಯಿತ್ರಿಗೆ ವಂದನೆ ಮತ್ತು ಅಭಿನಂದನೆ.
-ಡಾ. ಹೆಚ್ ಎನ್ ಮಂಜುರಾಜ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x