- ನಾರಿ
ಅಂದದ ನಾರಿಗೆ ಚೆಂದದ ಸೀರೆಯು
ಸುಂದರವಾಗಿ ಕಾಣುತಿದೆ
ಬಿಂದಿಯು ಹಣೆಯಲಿ ತಂದಿದೆ ಚೆಲುವನು
ಬಂಧಿತನಾದೆ ಪ್ರೀತಿಯಲಿ
ಕೆಂದನೆ ತುಟಿಯಲಿ ಕುಂದದ ಸೊಬಗಿದೆ
ಅಂದುಗೆ ಸದ್ದು ಮಾಡುತಿವೆ
ಚೆಂದಿರ ವದನೆಯ ಚೆಂದದ ಚೆಲುವೆಗೆ
ಮುಂದಣ ಕೈಯ ಹಿಡಿಯುವೆನು
ತಂದಳು ಹರುಷವ ಕುಂದದ ಚೆಲುವಲಿ
ಬಂಧುವೆ ಆಗಿ ನಿಂತಿಹಳು
ಬಂದಳು ಹೃದಯಕೆ ಬಂಧಿಸಿ ನನ್ನನು
ನಂದಿನಿ ಧೇನು ಸೊಬಗಿವಳು
ವಂದಿಸಿ ಹೊಸಿಲಿಗೆ ಗಂಧವ ಹಚ್ಚುತ
ತಂದಳು ಸಿರಿಯ ನನ್ನವಳು
- ಚಂದಿರ
ಹಾಲಿನ ರೂಪದಿ
ನೀಲಿಯ ಬಾನಲಿ
ಬಾಲಕ ಚಂದಿರ ನಗುತಿಹನು
ತೇಲುತಲಿರುವನು
ಗಾಳಿಯು ಬೀಸಲು
ಸೀಳುತ ಮೋಡವ ಮೂಡುವನು
ಇಳೆಯನು ಸುತ್ತುತ
ಹೊಳೆಯುತಲಿರುವನು
ಬೆಳಕನು ನೀಡುತಲಿರುಳೆಲ್ಲ
ಸೆಳೆಯುತ ಮಕ್ಕಳ
ತಿಳಿ ಬೆಳಕಿಳಿಸುತ
ಹೊಳೆಯೊಳು ಬಿಂಬವನಿಳಿಸುತ್ತ
ಧರೆಗಿವ ಗೆಳೆಯುನು
ಮರೆಯದೆ ಬರುವನು
ತೊರೆಯುತಲೊಂದಿನ ಕಾಣಿಸನು
ಹರುಷದಿ ಬೆಳೆವನು
ಹುರುಪಲಿ ಬೆರೆವನು
ಕರಗಿರೆ ದಿನದಿನ ಮರುಗುವನು
ಒಲವಿನ ಗೀತೆಗೆ
ನಿಲುಕುವ ಸುಂದರ
ಚೆಲುವಿನ ಸೊಬಗನು ಪಡೆದಿಹನು
ಚೆಲುವೆಯ ಕವಿತೆಗೆ
ಬಲವನು ತುಂಬುತ
ನಲಿವನು ಬಾನಲಿ ಚಂದಿರನು.
- ಮೂಡಣ ರವಿ
ಮೂಡಣದಂಚಲಿ
ಮೂಡುತಲಿರುವನು
ನೋಡಲು ಸುಂದರ ದಿನಕರನು
ಕೂಡುತಲಿಳೆಯೊಳು
ನೀಡುತಲೆಲ್ಲವ
ನಾಡಿಗೆ ಬೆಳಕನ್ನೆರೆಯುವನು
ತರುಲತೆಯೊಳಗಡೆ
ತರತರಬಣ್ಣವ
ತರಿಸುತ ಮೋಡಿಯ ಮಾಡುವನು
ಧರೆಯೊಳಗಾಡುತ
ಧರಿಸುತಲೆಲ್ಲವ
ಮೆರುಗಿಸಿ ಜಗವನು ನೋಡುವನು
ಇಬ್ಬನಿಯೊಳಗಡೆ
ದಬ್ಬುತ ಕಿರಣವ
ನಿಬ್ಬೆರಗಾಗುವ ಹೊಳಪಿಳಿಸಿ
ಉಬ್ಬರಿಸುತ್ತಲಿ
ಹಬ್ಬುತಲೆಲ್ಲೆಡೆ
ತಬ್ಬುತಲಿಳೆಯನು ಬೆಳಕಿಳಿಸಿ.
- ಪದಗಳು
ಎದೆಯಾಳದೊಳಗೊಂದು
ಪದಭಾವ ಮಿಡಿದಿಹುದು
ಮೆದುವಾಗಿ ಹಾಳೆಯಲಿ ಮೂಡುತಿಹುದು
ಸುಧೆಯಂತೆ ಸವಿಯಾಗಿ
ನದಿಯಂತೆ ಹರಿದಿಹುದು
ಮುದನೀಡುತಲ್ಲಿಯೇ ಕಾವ್ಯವಾಗಿ
ಗೇಯತೆಯ ಚೆಲುವಿಳಿಸಿ
ಗಾಯನಕು ಲಯವಾಗಿ
ತಾಯ ಮಡಿಲಲಿ ಮಗುವ ನಗುವಿನಂತೆ
ಕಾಯಕವ ಮಾಡುತಿರೆ
ಕಾಯಿಸದೆ ಬರುತಿಹವು
ಛಾಯೆಯನು ಮೂಡಿಸುತ ಹೃದಯದೊಳಗೆ
ಅವಿತಿಹುದು ಚಿತ್ತದೊಳು
ಕವಿಮನಸನರಸುತಲಿ
ಸವಿ ಸಮಯ ಕಾಣುತಲೆ ಬರಹವಾಗಿ
ನವತನವ ಹೊಸೆದು ವೈ
ಭವದಿ ಹೊಮ್ಮುತ ಜಿಗಿದು
ನವನೀತ ಮೆದ್ದಂತೆ ಸಿಹಿಯನುಣಿಸಿ.
-ಚನ್ನಕೇಶವ ಜಿ ಲಾಳನಕಟ್ಟೆ.