ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರತರೇನೂ ಅರಿತೆವೇನು ನಾವು ನಮ್ಮ ಅಂತರಾಳವಾ? ಅನ್ನುವ ಹಾಡನ್ನು ಅದೆಷ್ಟು ಬಾರಿ ಕೇಳಿದ್ದೇನೋ ಕೇಳುತ್ತೇನೋ ಗೊತ್ತಿಲ್ಲ. ಆದರೆ ಇಡೀ ಹಾಡಿನ ಸಾಲುಗಳು ಮಾತ್ರ ನನ್ನನ್ನು ತುಂಬಾ ಕಾಡಿವೆ, ಕಾಡುತ್ತವೆ. ಸುಮಾರು ಒಂಭತ್ತು ತಿಂಗಳ ಕಾಲ ನಾನಿದ್ದ ಪರಿಸ್ಥಿತಿ ಆರ್ಥಿಕವಾಗೇನೂ ಕಷ್ಟಕರವಾಗಿದ್ದಿಲ್ಲ. ಆದರೆ, ನನ್ನತನವನ್ನು ನಾನು ಎಷ್ಟೇ ಪ್ರಯತ್ನಪಟ್ಟರೂ ಕಾಪಿಟ್ಟುಕೊಳ್ಳುವಲ್ಲಿ ಸೋಲುತ್ತಲೇ ತಾತ್ಕಾಲಿಕವಾಗಿ ಗೆದ್ದ ದಿನದ ಸಂಜೆಗೆ ನನ್ನಲ್ಲಿದ್ದ ಒಟ್ಟು ಅಭಿಪ್ರಾಯ ಕಕ್ಕಿಬಿಟ್ಟೆ. ನನ್ನದಲ್ಲದ ತಪ್ಪಿಗೆ ಬೇರೆಯವರ ಮಸಲತ್ತಿಗೆ ನನ್ನ ಸ್ಥಾನಪಲ್ಲಟವಾಗಿದ್ದ ದಿನ ಯಾವಾಗ ಇದ್ದಲ್ಲಿಂದ ನನ್ನನ್ನು ಹೊರಗೆ ಹಾಕುವೆವೋ ಎಂದು ತುದಿಗಾಲಲ್ಲಿ ನಿಂತವರನ್ನು ನೋಡುತ್ತಿದ್ದರೆ ನೇರ ಕಣ್ಣಿಟ್ಟು ಮಾತಾಡದ ಅವರ ಮುಖಗಳಲ್ಲಿ ಸೇರು ನೀರು ಸುರುವಿದರೂ ಪಾವು ನೀರು ತಿರುಗದ ಸ್ಥಿತಿ.
ಮುಂದೆ ಮಾತಾಡದ ಹಿಂದೆ ರೂಪರೇಷೆ ತಯಾರಿಸುವ ವಾಸನೆ ಹಿಡಿದೇ ಒಂದಿನ ಮಧ್ಯಾಹ್ನ ಊಟಕ್ಕೆ ಕುಳಿತಾಗ ಒಬ್ಬ ಕವಿಯ ಸಾಲುಗಳನ್ನು ಉಚ್ಚೃರಿಸಿದ್ದೆ. “ಜಮೀ ಮೆಹಫಿಲ್ ಮೆ ಬಾತ್ ಹೋ ರಹೀ ಥಿ ಮೇರೆ ಖತಲ್ ಕರ್ನೆ ಕೀ, ಜಬ್ ಮೈ ವಹಾ ಪಹೂಂಚಾ ತೋ ಸಭೀ ಬೋಲೇ ‘ಲಂಬೀ ಉಮರ್ ಹೈ ತೇರಿ’ “. ಅಂತ. ಇಷ್ಟಾದರೂ ನಾನು ಒಬ್ಬರನ್ನು ಕೇಳದೇ ಕೈ ಕಾಲು ಹಿಡಿಯದೇ ಕೇವಲ ಇದ್ದ ವಾಸ್ತವವನ್ನು ಮಾತ್ರ ಗಮನಕ್ಕೆ ತರಬಯಸಿದ್ದೆ. ಕೇಳುವ ವ್ಯವಧಾನ ಆ ದಿನಕ್ಕೆ ಒಬ್ಬರಿಗೂ ಇದ್ದಿಲ್ಲ. ಬಹುಶ: ಈ ದಿನಕ್ಕೆ ಇರುವ ಸಂಭವ ನಂಬಬಹುದು. ಆದರೆ, ಬಣ್ಣಕ್ಕೆ ಬಹುಕಾಲದ ಆಯುಷ್ಯವಿರುವುದಿಲ್ಲ, ಸುಳ್ಳಿಗೂ ಕೂಡ.
ಬದಲಾವಣೆಯ ಜಾಗದಲ್ಲಿ ಕೂಡ ನನ್ನ ಬಗ್ಗೆ ಪುಂಖಾನುಪುಂಖವಾಗಿ ಹರಡಿದ್ದ ಭ್ರಮೆಗಳನ್ನು ಕಳಚುವ ಜರೂರತ್ತಿತ್ತು ನನಗೆ. ನೋಡುವ ಕಣ್ಣಲ್ಲಿ ಧೂಳಿರದಿದ್ದರೆ ಕನ್ನಡಿಯಲ್ಲಿನ ತಮ್ಮ ನೈಜ ಮುಖ ಕಾಣುತ್ತದೆ. ಕಣ್ಣಲ್ಲೇ ಧೂಳಿಟ್ಟುಕೊಂಡು ಕನ್ನಡಿಯನ್ನು ದೂಷಿಸುವ ಮುಖಗಳು ಮಾತ್ರ ಆ ಜಾಗದಲ್ಲಿದ್ದಿಲ್ಲ ಅನ್ನೋದೇ ಖುಷಿಯ ವಿಚಾರ. ಆ ದಿನಕ್ಕೆ ಬರೋಬ್ಬರಿ ಒಂಭತ್ತು ತಿಂಗಳಾಗಿತ್ತು. ನಾನು ಆ ಜಾಗ ತೊರೆಯುವ ಸಂಧರ್ಭ. ಕಳೆದ ಇಪ್ಪತ್ತಾರು ವರ್ಷದಲ್ಲಿ ನನ್ನ ವರ್ಗಾವಣೆ, ನಿಯೋಜನೆಗೇ ಆಗಲಿ, ಬೀಳ್ಕೊಡುಗೆ ಎನ್ನುವ ಫಾರ್ಮಾಲಿಟಿ ನನಗೆ ಒಗ್ಗದ ಸಂಗತಿ. ಆದರೆ ಅದೂ ಒತ್ತಾಯಕ್ಕೆ ಒಂದೆರಡು ಬಾರಿ ಹಾರಕ್ಕೆ ಕೊರಳಾಗಿದ್ದೆ.. ಮೊನ್ನೆ ಕೂಡ ಅಷ್ಟೇ.
ಅನಂತನಾಗ್ ಅಭಿನಯದ ಒಂದು ಸಿನಿಮಾದಲ್ಲಿ ಮರೆವಿನ ರೋಗ ಇರುವ ಅವರು ಒಂದು ಚೆಂದದ ಕತೆ ಹೇಳುತ್ತಾರೆ. ಪ್ರತಿಯೊಬ್ಬರಲ್ಲೂ ಎರಡು ಬಗೆಯ ಗುಣಗಳಿರುತ್ತವೆ. ಒಂದು ಕೆಟ್ಟದ್ದು, ಇನ್ನೊಂದು ಒಳ್ಳೆಯದು. ಅವೆರಡನ್ನೂ ಎರಡು ನಾಯಿಗಳಿಗೆ ಹೋಲಿಸುತ್ತಾರೆ. ಒಂದು ಕರಿ ನಾಯಿ, ಇನ್ನೊಂದು ಬಿಳಿ ನಾಯಿ. ಕರಿ ನಾಯಿ ಕೆಟ್ಟದ್ದನ್ನು ಬಿಂಬಿಸಿದರೆ, ಬಿಳಿ ನಾಯಿ ಒಳ್ಳೆಯದಕ್ಕೆ. ನಾವು ಯಾವ ನಾಯಿಗೆ ಹೆಚ್ಚು ಬಿಸ್ಕತ್ತು ಹಾಕುತ್ತೇವೋ ಆ ಗುಣ ನಮ್ಮನ್ನು ಆಳುತ್ತದೆ, ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು.
ಅದೇ ಕತೆಯನ್ನು ಆ ದಿನ ಹೇಳಿದೆ. ಕೊನೆಗೆ “ನಾನು ನನ್ನೊಳಗಿನ ಯಾವ ನಾಯಿಗೆ ಬಿಸ್ಕತ್ತು ಹಾಕಿದ್ದೆ ಎನ್ನುವುದಕ್ಕೆ ನೀವು ನೀಡುತ್ತಿರುವ ಈ ಆತ್ಮೀಯ ಬೀಳ್ಕೊಡುಗೆ” ಅಂದೆ. ನನ್ನ ಬಗ್ಗೆ ಎಲ್ಲಾ ಭ್ರಮೆಗಳನ್ನು ಕಳಚಿಕೊಂಡು ನನ್ನ ಬಗ್ಗೆ ಅತ್ಯಂತ ಒಳ್ಳೆಯ ಮಾತನ್ನಾಡಿದರು ನನ್ನ ಮೇಲಾಧಿಕಾರಿ.
ಒಬ್ಬರ ಒಳ್ಳೇತನ, ವ್ಯಕ್ತಿತ್ವ ಅವರ ಅನುಪಸ್ಥಿತಿಯಲ್ಲಿ ಕಾಡಿದರೆ ಮಾತ್ರ ಆ ವ್ಯಕ್ತಿ ಉಳಿದವರೊಂದಿಗೆ ಹೇಗೆ ಬದುಕಿದ್ದ ಅನ್ನುವುದು ಅರ್ಥವಾಗುತ್ತದೆ. ಅಂಥವೇ ಮಾತುಗಳು ನನ್ನ ಬಗ್ಗೆ ಯಾರೋ ಹೇಳಿದ್ದನ್ನು ಕೇಳಿ ತುಸು ಹಿಗ್ಗಾದರೆ, ಹೆಚ್ಚು ಮುಜುಗರ. ಹಾಗಂತ ನನ್ನ ಅತೀವ ನಂಬಿಕಸ್ಥರಂತೆ ಇರುವ ಭ್ರಮೆಗಳು ನನ್ನ ಸುತ್ತ ಇಲ್ಲ ಅನ್ನುವಂತಿಲ್ಲ. ಎಲ್ಲಾ ಇಲ್ಲಗಳ ನಡುವೆ ಏನೋ ಒಂದಿನವಾದರೂ ಇದೆ. ಅದು ನನ್ನ ಪಾಲಿನ ಸುದಿನವೂ ಹೌದು.
ಬಹುಪರಾಕ್ ಹೇಳುವ ಗುಂಪಿನ ಕೆಲವರ ಸಣ್ಣತನದಿಂದಾಗಿ ಒಬ್ಬಂಟಿಯಾಗುವುದರ ಬದಲು ನಾನು ಏಕಾಂತವನ್ನಾಗಿ ಸೃಷ್ಟಿಸಿಕೊಳ್ಳುವ ಗುಣವನ್ನು ರೂಢಿಸಿತು. ಸದ್ಯ ಬಿಟ್ಟು ಬಂದ ಇನ್ನೊಂದು ಗುಂಪಿನ ಜನರ ನಡುವೆ “ನಾನೊಬ್ಬನಿಲ್ಲ” ಎನ್ನುವ ಫೀಲ್ ಮಾಡುವಂತೆ ಇದ್ದು ಬಂದುದಿದೆಯೆಲ್ಲಾ? ಅದು ನಿಜವಾಗಿ ನಾನು ನನ್ನೊಳಗಿನ ಬಿಳಿನಾಯಿಗೆ ಬಿಸ್ಕತ್ತು ಹಾಕಿದ ಗುಣ.
-ಪಿ.ಎಸ್.ಅಮರದೀಪ್