ಕಥಾಲೋಕ

ಮಾಯೆ: ಸಾವಿತ್ರಿ ಹಟ್ಟಿ

ಛೇ ಏನಿದು ಮದುವೆಯಾಗಿ ಮಕ್ಕಳು ಮರಿಯಾಗಿ ಬದುಕು ಅರ್ಧ ಮುಗಿದು ಹೋಯ್ತಲ್ಲ ! ಮತ್ಯಾಕೆ ಹಳೆಯ ನೆನಪುಗಳು ಎಂದುಕೊಂಡು ಮಗುವಿನ ಕೈಯನ್ನು ತೆಗೆದು ಹಗೂರಕ್ಕೆ ಕೆಳಗಿರಿಸಿದಳು. ಹಾಲುಂಡ ಮಗುವಿನ ಕಟವಾಯಿಯಲ್ಲಿ ಇಳಿದಿದ್ದ ಹಾಲನ್ನು ಸೆರಗಿನಿಂದ ಒರೆಸಿದಳು. ಮಗುವಿಗೆ ಹೊದಿಕೆ ಹೊದಿಸಿ ಅದರ ಗುಂಗುರುಗೂದಲಿನ ತಲೆಯನ್ನು ಮೃದುವಾಗಿ ನೇವರಿಸಿದಳು. ಮಗು ಜಗತ್ತಿನ ಯಾವುದೇ ಗೊಡವೆಯಿಲ್ಲದೇ ನಿದ್ರಿಸತೊಡಗಿತ್ತು.

ಅಷ್ಟು ದೂರದಲ್ಲಿ ಸಿಂಗಲ್ ಕಾಟ್ ಮೇಲೆ ಗಂಡ ಎಂಬ ಪ್ರಾಣಿ ಗೊರಕೆ ಹೊಡೆಯುತ್ತ ಮಲಗಿತ್ತು. ಸಿಟ್ಟು, ಅಸಹ್ಯ, ಅನುಕಂಪ ಯಾವ ಭಾವನೆಯೂ ಬರಲಾರದು ಆತನ ಮೇಲೆ. ದುಡಿದು ತಂದು ಹಾಕಿದರೆ ತನ್ನ ಕೆಲಸ ಮುಗೀತು ಎಂಬಂತಿದ್ದವನು. ರಾತ್ರಿಯ ಯಾವುದೋ ಸಮಯದಲ್ಲಿ ಬಂದು ದೈಹಿಕ ಕಾಮನೆಗಳನ್ನು ತೀರಿಸಿಕೊಂಡರೆ ಆಯಿತು ಎಂಬಂತಿದ್ದ ಅವನಲ್ಲಿ ಯಾವ ಭಾವುಕತೆಯನ್ನು ಹುಡುಕಬೇಕು ಎಂದುಕೊಂಡಳು.. ಮನುಷ್ಯನಿಗೆ ಊಟ, ಉಡುಗೆ, ಲೈಂಗಿಕತೆಯ ಆಚೆಗೂ ಒಂದು ಬದುಕಿದೆ ಎಂದು ಯಾವತ್ತೂ ಯೋಚಿಸದಿರುವ ಅವನಲ್ಲಿ ಭಾವನೆಗಳನ್ನು ತುಂಬುವುದಾದರೂ ಹೇಗೆ! ಎಂದುಕೊಂಡಳು.

ಮದುವೆಗಿಂತ ಮೊದಲಿನ ದಿನಗಳು ಎಂತಹ ಸುಂದರ! ಮದುವೆಯಾಗಿಲ್ಲ ಎನ್ನುವ ಚಿಂತೆ ಇತ್ತಾದರೂ ಬದುಕು ಕ್ಲಿಸ್ಟವಾಗಿರಲಿಲ್ಲ. ತಂದೆ ತಾಯಿಗೂ ಹಲವಾರು ಸಮಸ್ಯೆಗಳಿದ್ದರೂ ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನಂತೂ ತಂದಿರಲಿಲ್ಲ. ನೆನಪಾದಾಗೆಲ್ಲಾ ಗೆಳತಿಯರ ಮನೆಗೆ ಹೋಗಿ ಬರುವ ಸ್ವಾತಂತ್ರ್ಯ ಇತ್ತು. ಗೆಳತಿಯರು ಬಂದರೆ ತಾಸುಗಟ್ಟಲೆ ಹರಟೆ ಹೊಡೆಯುತ್ತ ಕೂಡ್ರಲು ಯಾರ ಅಭ್ಯಂತರವೂ ಇರಲಿಲ್ಲ. ಪತ್ರ ಬರೆಯುವ ದಿನಗಳು ಸರಿದು ಹೋಗಿ ಆಗಷ್ಟೇ ಕೀ ಪ್ಯಾಡ್ ಮೊಬೈಲುಗಳು ಬಂದು ಜನಪ್ರಿಯವಾಗಿದ್ದವು. ತನ್ನ ಕೈಗೂ ಅಂತಹ ಒಂದು ಫೋನನ್ನು ತಂದು ಅಣ್ಣ ಕೈಗಿಟ್ಟ ಆ ದಿನ ತಾನು ಆಕಾಶದಲ್ಲೇ ತೇಲಿದ ಅನುಭವ. ದಿನಗಳು ಸರಿದದ್ದೇ ಗೊತ್ತಾಗಲಿಲ್ಲ.

ಅದೊಂದು ದಿನ ಹಾಯ್ ಹೆಂಗಿದ್ದೀಯೊ ಅಂತ ಮೆಸ್ಸೇಜ್ ಒಂದು ಬಂದಾಗ “ಯಾರು, ಎಲ್ಲಿಂದ,” ವಿಚಾರಿಸಿದಾಗ ಅದು ಯಾರಿಂದಲೋ ಕೈ ತಪ್ಪಿ ಬಂದ ಮೆಸ್ಸೇಜ್ ಅಂತ ಗೊತ್ತಾಗಿ ಮರೆತೇ ಬಿಟ್ಟಿದ್ದಳು. ಮತ್ತೆ ಕೆಲವು ದಿನಗಳ ನಂತರ ಅದೇ ಸಂಖ್ಯೆಯಿಂದ ಮೆಸ್ಸೇಜ್ ಬಂದಾಗ ಈ ಸಲ ಕೈ ತಪ್ಪಿ ಏನೂ ಬಂದಿರಲಿಕ್ಕಿಲ್ಲ ಅಂತ ಯೋಚಿಸಿಯೇ ಕೇಳಿದ್ದಳು ಯಾರು ಅಂತ. “ಆನಂದ ನಾನು. ಕಳೆದ ತಿಂಗಳು ಕೈ ತಪ್ಪಿನಿಂದ ಮೆಸ್ಸೇಜ್ ಕಳಿಸಿದ್ದೆನಲ್ಲ, “ “ಸರಿ ಏನು ವಿಷಯ? “ “ ಏನೂ ಇಲ್ಲರೀ ಮೇಡಮ್ ಸುಮ್ನೇ ನೆನಪಾದ್ರಿ ಅದ್ಕೆ. ಆರಾಮಿದ್ದೀರಾ” ಅಂತ ಅತ್ತಲಿಂದ ಉತ್ತರ ಬಂದಾಗ ಹುಡುಗಿ ನೀಲಿ ಬಾನಿನಲ್ಲಿ ತೇಲಿ ಹೋಗಿದ್ದಳು. “ಇವನಿಗೆ ನಾನ್ಯಾಕ ನೆನಪಾಗಬೇಕು? ಕೂಡಿ ಓದಿದವರಲ್ಲ, ಕೂಡಿ ಆಡಿ ಬೆಳೆದವರಲ್ಲ. ಸುಮ್ಮನೇ ನೆನಪಾಗುವುದಂದರೇನು” ಎಂದು ಯೋಚಿಸುತ್ತ ಕುಳಿತವಳಿಗೆ ಬೀಪ್ ಅಂತ ಸದ್ದು ಮಾಡಿಕೊಂಡು ಇನ್ನೊಂದು ಮೆಸ್ಸೇಜ್ ಬಂದಾಗಲೇ ಯೋಚನೆಯಿಂದ ಹೊರಬಂದಳು. “ಚೆನ್ನಾಗಿದ್ದೀರಾ ಮೇಡಮ್” ಅಂತ. “ಹೌದು. ಆರಾಮಿದ್ದೀನಿ. ನೀವು” ಅಂತ ಕೇಳಿದ್ದಳು.

ಹೀಗೆ ಶುರುವಾಗಿದ್ದ ಸ್ನೇಹ ಪ್ರೇಮವೆನ್ನಲೂ ಆಗದ ಅಲ್ಲವೆನ್ನಲೂ ಆಗದ ಬಂಧವಾಗಿ ಬೆಳೆದಿತ್ತು. ಇವಳು ಯಾವುದೋ ಕಾರಣಕ್ಕೆ ಬೇಸರಗೊಂಡು ಕುಳಿತಾಗ ತಕ್ಷಣವೇ “ಹಾಯ್ ಡಿಯರ್, ಹೆಂಗಿದ್ದೀಯಾ…” ಹೀಗೆ ಮನಸಿಗೆ ಮುದವಾಗುವಂತೆ ಯೋಗ ಕ್ಷೇಮವನ್ನು ವಿಚಾರಿಸುತ್ತಿದ್ದ ಅವನು ತನ್ನವನೇ ಅನ್ನಿಸಿಬಿಡುತ್ತಿತ್ತು. ಕೈ ತಪ್ಪಿನಿಂದಲೋ ಕಣ್ತಪ್ಪಿನಿಂದಲೋ ಉಂಟಾಗಿದ್ದ ಸಂಪರ್ಕ ಸ್ನೇಹವಾಗಿ ಮಧುರ ಪ್ರೇಮವಾಗಿ ಬೆಳೆಯುತ್ತಲೇ ಇತ್ತು. ತಿಂಗಳುಗಳು ಕಳೆದು ವರುಷಗಳು ಸರಿದರೂ ಅವನ ಮುಖ ಭೇಟಿಯಿಲ್ಲದೇ ಅದೊಂದು ಸ್ನೇಹ ಪವಿತ್ರ ಗಂಗೆಯಂತೆ ಸಾಗುತ್ತಲೇ ಇತ್ತು. ತನ್ನ ಎಲ್ಲಾ ಕಷ್ಟ ಸುಖದ ಕ್ಷಣಗಳನ್ನು ಅವನು ಹಂಚಿಕೊಳ್ಳುತ್ತಿದ್ದ. ಇವಳು ಯಾವುದೋ ಕಾರಣಕ್ಕೆ ಸಪ್ಪಗಾಗಿ ಕುಳಿತರೆ ಅದು ಹೇಗೆ ಅವನಿಗೆ ಗೊತ್ತಾಗುತ್ತಿತ್ತೊ! ತಕ್ಷಣ ಕಾಲ್ ಮಾಡಿಯೊ ಮೆಸ್ಸೇಜ್ ಮಾಡಿಯೊ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ. ಅಷ್ಟು ದೂರವಿದ್ದರೂ ತನ್ನ ಮನಸಿನ ದುಗುಡ ದುಮ್ಮಾನಗಳನ್ನು ತಿಳಿದವನಂತೆ ಸಮಾಧಾನ ಹೇಳಲು ಧಾವಿಸುವ ಅವನೇ ತನ್ನ ಬಾಳಿನಲ್ಲಿ ಜೊತೆಯಾಗಿ ಬರಬೇಕು ಎಂದು ಕನಸು ಕಾಣುತ್ತಿದ್ದಳು.

ಈ ವಿಷಯವಾಗಿ ಅನೇಕ ಸಲ ನಿನ್ನನ್ನೇ ಮದುವೆ ಮಾಡ್ಕೊಂತೀನಿ ಅಂತ ಅವಳು ಛೇಡಿಸಿದರೆ ನಾನು ಮಾಯಾನ್ನ ಪ್ರೀತಿಸಿದ್ದೀನಿ. ಅವಳನ್ನು ಎಂದಿಗೂ ಮದುವೆಯಾಗಲ್ಲ ಎನ್ನುತ್ತಿದ್ದ. “ಸರಿ ಅವಳನ್ನ ಮದುವೆಯಾಗು ಅಂತ ಯಾರು ಹೇಳ್ತಾರ ನಿನಗ, ನನ್ನನ್ನೇ ಕಟ್ಟಿಕೊ “ಅಂತ ಇವಳು ಕಾಲೆಳೆದರೆ “ ಮೊದಲು ಇಷ್ಟು ಮಾತಾಡೊ ಹುಡುಗಿ ಅಂತ ಗೊತ್ತಿರಲಿಲ್ಲ. ಗೊತ್ತಿದ್ದಿದ್ರೆ ನಿನ್ನ ಸಹವಾಸನೇ ಮಾಡ್ತಿರಲಿಲ್ಲ” ಎಂದು ನಗುತ್ತಿದ್ದ. “ಪಾಪ ಹುಡುಗ” ಎಂದರೆ “ನಾನಲ್ಲ ಪಾಪ ನೀನು. ನೀನು ಅಳುಮುಂಜಿ ಅಳ್ತಾ ಕುಂತಾಗ ಸಮಾಧಾನ ಹೇಳೋಣ ಅಂತಷ್ಟೇ ನಿನ್ನ ಮಾತಾಡ್ಸೋದು” ಅಂತಿದ್ದ. ಅವನು; ಹಂಗಂದಾಗ ಅವಳಿಗೆ ಅಚ್ಚರಿಯಾಗುತ್ತಿತ್ತು.

ಭೇಟಿಯಾಗಲು ನಿರಾಕರಿಸುವ ಅವನಿಗೆ ತಾನು ದುಃಖದಲ್ಲಿ ಚಿಂತೆಯಲ್ಲಿದ್ದುದು ಅದು ಹೇಗೆ ತಿಳಿಯುತ್ತಿತ್ತೊ! ವರುಷಗಳ ಸ್ನೇಹವೆಲ್ಲಾ ಸಾಗಿದ್ದು ಮೊಬೈಲ್ ಎಂಬ ಅದ್ಭುತ ಯಂತ್ರದ ಮೂಲಕ.
ಕೊನೆಗೆ ಅವಳ ಮದುವೆ ನಿಶ್ಚಯವಾದ ದಿನ “ಮಿರ್ಚಿ ಮೆಣಸಿನಕಾಯಿ ಮಿಸ್ ಯೂ ಕಣೆ. ಸುಖವಾಗಿರು” ಅಂತ ಹೇಳಿದವನು ಫೋನ್ ಇಟ್ಟಿದ್ದ. ಮದುವೆಗೆ ಬಾ ಅಂತ ತಾನು ಕರೆದರೂ ಅವನು ಬಂದಿರಲಿಲ್ಲ ಎಂಬುದೇ ಅವಳ ಭಾವನೆ. ಆದರೆ ಅವನು ಮೊಟ್ಟ ಮೊದಲ ಸಲ ಅವಳನ್ನು ಅವಳ ಮದುವೆಯ ವರನೊಂದಿಗೆ ನೋಡಿ ಅಕ್ಷತೆ ಹಾಕಿ ಹೋಗಿದ್ದ. ಬಂದು ಹಾರೈಸಿದ ಬಂಧುಗಳು ಸ್ನೇಹಿತರಲ್ಲಿ ಆ ಅಪರಿಚಿತ ಮುಖದ ಶಾಂತಮೂರ್ತಿ ಅವಳನ್ನು ಕಾಡುತ್ತಲೇ ಇತ್ತು ತೀರ ಆತ್ಮಕ್ಕೆ ಹತ್ತಿರದ ಮುಖವದು ಅಂತ ಆಗಾಗ್ಗೆ ಅನ್ನಿಸುತ್ತಲೇ ಇತ್ತು.

ನಂತರದ ದಿನಗಳಲ್ಲಿ ಅವನಿಂದ ಫೋನ್ ಕರೆಗಳು, ಮೆಸ್ಸೇಜ್ ನಿಂತು ಹೋದವು. ಒಂದೆರಡು ಸಲ ಇವಳೇ ಮಾತಾಡಿಸಿದಾಗ ಸಂಕ್ಷಿಪ್ತವಾಗಿ ಮಾತಾಡಿದ್ದನು. ಮತ್ತೊಮ್ಮೆ “ ನೀನೀಗ ಮದುವೆಯಾದ ಹೆಂಗಸು. ನಿನ್ನೊಂದಿಗೆ ನಾನು ಎಷ್ಟೇ ಪವಿತ್ರ ಸ್ನೇಹ ಇರಿಸಿಕೊಂಡವನಿದ್ರೂ ನಿನ್ನ ಗಂಡನಿಗೆ ಅನುಮಾನವಾಗಬಾರದು. ಇಂತಹ ಕಾರಣಗಳಿಂದಲೇ ಎಷ್ಟೊ ಜನರ ಮದುವೆಗಳು ಮುರಿದು ಬಿದ್ದಿವೆ. ನಿನ್ನದು ಹಾಗಾಗಬಾರದು. ನೀನು ಸದಾ ಖುಷಿಯಾಗಿರಬೇಕೆಂಬುದೇ ನನ್ನಾಸೆ. ಕಾಳಜಿಯಿಂದ ಇರು ನಿನ್ನ ಖಾಸಗಿ ಬದುಕಿನ ಬಗ್ಗೆ” ಎಂದಿದ್ದನು. ಅದೇ ಕೊನೆ. ಅವನು ಮತ್ತೆಂದೂ ಅವಳನ್ನು ಸಂಪರ್ಕಿಸಲಿಲ್ಲ. ತಾನು ಪವಿತ್ರ ಸ್ನೇಹವನ್ನು ಹೊಂದಿದ್ದರೆ ಅವನ್ಯಾಕೆ ಹೆದರಬೇಕಿತ್ತು, ಪುಕ್ಕಲು ಮುಂಡೇದು ಎಂದುಕೊಂಡು ಸುಮ್ಮನಾಗಿದ್ದಳು. ಗಂಡಸರೆಲ್ಲಾ ಸ್ವಾರ್ಥಿಗಳು ಎಂದುಕೊಂಡಳು. ಅರೇ ಅವನೆಲ್ಲಿ ಸ್ವಾರ್ಥಿ? ಅವನು ಯಾವಾಗ ಮಾತಾಡಿಸಿದ್ದರೂ ಅದು ನನ್ನನ್ನು ಸಮಾಧಾನಿಸಲು ಖುಷಿ ಪಡಿಸಲು ಮಾತ್ರ. ತನ್ನ ಸ್ವಂತದ ಯಾವುದೇ ಕಷ್ಟ ನಷ್ಟಗಳಿಗೆ ತನ್ನನ್ನು ಯಾವತ್ತೂ ಗುರಿ ಮಾಡಲಿಲ್ಲ. ಅಂತಹ ಸಭ್ಯಹುಡುಗ ವಿವಾಹಿತ ಗೆಳತಿಯೊಂದಿಗೆ ಸಂಪರ್ಕದಲ್ಲಿರಲು ಹೆದರಿದ್ದಾದರೂ ಏಕೆ ಎಂದುಕೊಂಡು ಉತ್ತರ ಸಿಗದೇ ಸುಮ್ಮನಾಗುವಳು.

ಛೇ ಭಾವನೆಗಳು ಹೆಣ್ಣುಮಕ್ಕಳಿಗೆ ಮಾತ್ರ ಯಾಕೆ ಕಾಡಬೇಕು! ಕಟ್ಟಿಕೊಂಡ ಗಂಡನಿಗೂ ಭಾವನೆಗಳಿಲ್ಲ. ಚಿಂತಾಮಗ್ನಳಾಗಿದ್ದಾಗೆಲ್ಲಾ ಧಾವಿಸಿ ಸಮಾಧಾನ ಹೇಳುತ್ತಿದ್ದ ಗೆಳೆಯನೂ ಭಾವನೆಗಳಿಲ್ಲವೆಂಬಂತೆ ದೂರವಾದ. ತಕ್ಷಣ ಅವನು ಆಗಾಗ್ಗೆ ಹೇಳುತ್ತಿದ್ದ ಮಾತು ನೆನಪಾಯ್ತು. ನಾನು ಮಾಯೆಯನ್ನು ಪ್ರೀತಿಸ್ತಿದ್ದೀನಿ. ಆದ್ರೆ ಅವಳನ್ನ ಎಂದೂ ಮದುವೆ ಆಗಲ್ಲ” ಅವನ ಆ ಮಾಯೆ ಯಾರೊ ಏನೊ! ತಾನೇ ಆಗಿದ್ದರೂ ಅಚ್ಚರಿ ಇಲ್ಲ. ಆದರೆ ತನ್ನ ಬದುಕಂತೂ ಬರೀ ಮಾಯೆಯಿಂದ ಕೂಡಿದೆ ಎಂದುಕೊಂಡು ಮಗ್ಗುಲಾದಳು. ತಾಯಿಯ ಮೊಲೆಗಾಗಿ ಹುಡುಕುತ್ತಿದ್ದ ಮಗುವನ್ನು ತನ್ನೆಡೆಗೆ ಎಳೆದುಕೊಂಡಳು…

ಅತ್ತ ಕಡೆ ಅವನು ಮಧ್ಯೆ ರಾತ್ರಿ ದಿಗ್ಗನೆದ್ದು ಕುಳಿತನು. ಮದುವೆಯ ನಂತರ ಎಂದೂ ಕನಸಿನಲ್ಲಿ ಬರದಿದ್ದ ಮಾಯೆ ಇಂದು ಬಂದಿದ್ಯಾಕೆ! ಅವಳು ಸುಖವಾಗಿರಲಿಕ್ಕಿಲ್ಲವೇ! ತನ್ನ ಮನಸಿನ ಸುಪ್ತ ಯೋಚನೆಗಳೇ ಕನಸಾಗಿ ಕಾಡುತ್ತಿವೆಯೇ! ಅವಳೆಂದರೆ ಮುಗ್ಧ ಮಗುವಿದ್ದಂತೆ. ಅವಳಿಗೆ ಯಾವ ದುಃಖವೂ ಬಾರದಿರಲಿ. ಅವಳ ನಂಬರ್ ಈಗಲೂ ತನ್ನ ಕಡೆಗಿದೆ. ಈಗಂತೂ ವಿಡಿಯೋ ಕಾಲ್ ಮಾಡಿದರೆ ಕ್ಷಣದಲ್ಲಿ ಆ ಕಡೆಗಿನ ವ್ಯಕ್ತಿಗಳ ಮುಖ ನೋಡಿ ಮಾತಾಡಬಹುದು. ಕಾಲ್ ಮಾಡಿ ಬಿಡಲೇ ಎಂದುಕೊಂಡನು. ಅರ್ಧ ರಾತ್ರಿಯಲ್ಲಿ ಪರಸ್ತ್ರೀಯೊಬ್ಬಳಿಗೆ ಕಾಲ್ ಮಾಡುವುದು ಯಾವ ನ್ಯಾಯ ಎಂದುಕೊಂಡು ಸುಮ್ಮನಾದನು. ಅವಳ ನಂಬರ್ ಹುಡುಕಿ ಸೇವ್ ಮಾಡಿಕೊಂಡು ಡಿಪಿಯನ್ನಾದರೂ ನೋಡಬೇಕು ಎಂದುಕೊಂಡು ಫೋನ್ ಎತ್ತಿಕೊಂಡನು. ನೋಡಿದರೆ ಡಿಪಿಯಲ್ಲಿ ಒಂದು ದೇವರನ್ನು ಹಿಡಿದು ಕೂಡ್ರಿಸಿದ್ದಳು ಮಹಾರಾಯ್ತಿ….

-ಸಾವಿತ್ರಿ ಹಟ್ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *