ಶಂಕರ್ ಸಿಹಿಮೊಗ್ಗೆ ಅವರ ಕವಿತೆ, ಲೇಖನ, ಕಥೆ ಸೇರಿದಂತೆ ಯಾವುದೇ ಪ್ರಕಾರಗಳನ್ನು ಓದಿದರೂ ನಮಗೆ ವೈಚಾರಿಕತೆಯ ವಿಚಾರಗಳು, ಚಿಂತನಾಶೀಲ ಅಭಿವ್ಯಕ್ತಿ ಹಾಗೂ ವೈಜ್ಞಾನಿಕ ತಳಹದಿ ಬಹುವಾಗಿ ಗೋಚರಿಸುತ್ತವೆ. ಬಹುಶಃ ಇವರು ವಿಜ್ಞಾನ ವಿದ್ಯಾರ್ಥಿಯಾಗಿದ್ದರ ಫಲಶೃತಿಯಿರಬಹುದು. ಅಂತಹುದೇ ಒಂದು ನೆಲೆಗಟ್ಟಿನಲ್ಲಿ ಸೃಷ್ಟಿಯಾದ ಕಥೆ ಶಂಕರ್ ಸಿಹಿಮೊಗ್ಗೆ ಅವರ ಈ ‘ದೇವರ ಕಾಡು’. ಇದು ಮಾನವನ ದುರಾಸೆಯ ಫಲಿತವಾಗಿ ಪರಿಸರ ವಿನಾಶದ ಅಂಚಿಗೆ ತಲುಪುತ್ತಿರುವ ಆಘಾತಕಾರಿ ಸಂಗತಿಯನ್ನು ತಮ್ಮ ಪರಿಸರ ಪ್ರೀತಿ ಮತ್ತು ವೈಚಾರಿಕ ಪ್ರಜ್ಞೆಯಡಿಯಲ್ಲಿ ಕಥಾನಕವಾಗಿಸಿದ್ದಾರೆ. ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಅದ್ಭುತ ಪದ ಪುಂಜಗಳ ನಿರೂಪಣೆಯಲ್ಲಿ, ವಿಭಿನ್ನ ಶೈಲಿಯಲ್ಲಿ ಮೂಡಿ ಬಂದಿರುವ ಕಥೆ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಈ ಕಥೆ ಗ್ರಾಮೀಣ ಭಾಷೆಯಲ್ಲಿದ್ದರೂ ಸಂವಹನಕ್ಕೆ ತೊಡಕಾಗದಂತೆ ಸರಳಿಕರಿಸಿದ್ದಾರೆ.
ಇದು ಸ್ವಾರ್ಥ ತುಂಬಿದ ಇಂದಿನ ದಿನಮಾನಕ್ಕೆ ಕನ್ನಡಿ ಹಿಡಿದ ಸಕಾಲಿಕ ಬರಹವೆನ್ನಬಹುದು. ಸಮಕಾಲೀನ ಕಥಾ ದ್ರವ್ಯವಾದರೂ ಪ್ರತಿ ಕಾಲಘಟ್ಟದಲ್ಲೂ ಅದು ಮನುಜನ ಪ್ರಥಮ ಆದ್ಯತೆಯಾದ ಪ್ರಕೃತಿ ಸಂರಕ್ಷಣೆಯ ಅಗತ್ಯತೆಯನ್ನು ಹೊತ್ತು ತಂದಿದೆ. ಪಾತ್ರಗಳ ಆಯ್ಕೆ, ಹೊಂದಾಣಿಕೆ, ಸಂದರ್ಭಗಳ ಸೃಷ್ಟಿ ಮತ್ತು ಅಭಿವ್ಯಕ್ತಿಯ ತಾಜಾತನದಿಂದ ಇದು ಓದುಗರನ್ನು ವಿಶಿಷ್ಟವಾದ ರೀತಿಯಲ್ಲಿ ಎದುರುಗೊಳ್ಳುತ್ತದೆ.
ಈ ದೇವರ ಕಾಡು ಕಥೆಯು ವಿಶಿಷ್ಟವಾದ ಸಂಭಾಷಣೆಯ ಕಾರಣದಿಂದ ಓದುಗರ ಮನವನಾವರಿಸುತ್ತದೆ. ದೈನಿಕ ಬದುಕನ್ನ ಯತಾವತ್ತಾಗಿ ಚಿತ್ರಿಸುವ ಮೂಲಕ ನಮ್ಮರಿವಿಗೆ ಬಾರದೆ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳು ನಮ್ಮನ್ನು ಹೇಗೆ ಮೂರ್ಖರನ್ನಾಗಿಸುತ್ತವೆ ಎಂಬ ನಿದರ್ಶನ ನೀಡುತ್ತದೆ. ಜನತೆ ತನ್ನ ಹೊರಗಿನ ಸಂವೇದನೆಗಳಿಗೆ ಸೂಕ್ಷ್ಮಗ್ರಾಹಿಯಾಗಿ ಸ್ಪಂದಿಸುತ್ತಾ ಅದರೊಳಗೆ ಅಂತರ್ಗತವಾಗಿರುವ ಸತ್ಯವನ್ನು ಹೆಕ್ಕಿ ತೆಗೆಯುವ ಜಾಣ್ಮೆ ತೋರಬೇಕೆಂಬ ಸಂದೇಶವನ್ನು ನೀಡುತ್ತದೆ. ಮೋಸ ವಂಚನೆಗಳ ಅನಾವರಣ ಮಾಡುತ್ತದೆ. ನಾವು ಯಾರನ್ನು ಸಹ ಕುರುಡಾಗಿ ನಂಬಬಾರದು, ತೀಕ್ಷ್ಣವಾದ ಗ್ರಹಿಕೆ ಮತ್ತು ವೀಕ್ಷಣೆ ನಮ್ಮದಾದಾಗ ಒಳಿತು ಕೆಡುಕುಗಳ ಗುರುತಿಸುವಿಕೆಯು ಸಮರ್ಪಕವಾಗಿರುತ್ತದೆ ಎಂಬ ಅರಿವಿನ ಪಾಠ ಮಾಡುತ್ತದೆ.
ಇಲ್ಲಿ ಶಂಕರ್ ಸಿಹಿಮೊಗೆ ಅವರು ಪರಿಚಿತ ವಿಷಯವನ್ನು ತುಂಬಾ ಕಲಾತ್ಮಕವಾಗಿ ಚಿತ್ರಿಸುವ ಮೂಲಕ ಕಥೆಗೆ ಹೊಸತನ ತುಂಬಿದ್ದಾರೆ. ಕಥೆ ಓದುತ್ತ ಚಲಿಸಿದಂತೆ ಓದುಗನ ಮೆದುಳೊಳಗೆ ಅನೇಕ ಮಹತ್ವಪೂರ್ಣವಾದ ಘಟನಾವಳಿಗಳು ವಿಶ್ಲೇಷಿಸಲ್ಪಡುತ್ತವೆ. ಕಥೆ ಚಿಕ್ಕದಾದರೂ ಮನುಜನ ಸ್ವಭಾವದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಬಯಸುವಷ್ಟು ಅರ್ಥವನ್ನು ತುಂಬಿಸಿಕೊಂಡಿದೆ.
“ದೇವರ ಕಾಡಿನ ಜೀವ ಏದುಸಿರು ಬಿಡುತೈತೆ
ನರ ಮನುಷ್ಯರ ಜೀವಕ್ಕೆ ಮುಂದೆ ಕೇಡು ಕಾದೈತೆ”
ಎಂಬ ತಿಮ್ಮಜ್ಜನ ಪದದೊಂದಿಗೆ ಪಟ್ಟದಹಳ್ಳಿಯ ಕಥೆ ಪ್ರಾರಂಭವಾಗುತ್ತದೆ. ಜನರು ಕಾಡನ್ನು ನಾಶ ಮಾಡುತ್ತಿದ್ದ ಕಾರಣದಿಂದ ‘ಕಾಡು ಮಾರವ್ವ’ ಮುನಿದು ಊರಿನ ಮೇಲೆ ವಕ್ರ ದೃಷ್ಟಿ ಬೀರಿ ಊರಿಗೆ ಆಪತ್ತು ಒದಗಿದ ನಿದರ್ಶನ ಹಳ್ಳಿಯ ಮನೆ ಮಾತಾಗಿತ್ತು. ತಿಮ್ಮಜ್ಜ ಈ ಹಿಂದೆ ನುಡಿದಿದ್ದ ಪದ ನಿಜವಾಗಿತ್ತು. ಈಗ ಮತ್ತೊಮ್ಮೆ ತಿಮ್ಮಜ್ಜನ ಪದದಿಂದ ಆತಂಕಗೊಂಡ ಊರಿನ ಮುಖಂಡ ಯಾಲಕ್ಕಿಗೌಡ ಊರಿನ ರಕ್ಷಣೆಗಾಗಿ ರಾಮಜೋಯಿಸರ ಮೊರೆ ಹೋಗುತ್ತಾನೆ. ಹಿಂದೆ ತಿಮ್ಮಜ್ಜ ಹೇಳಿದ ಪದದಿಂದ ತನ್ನಿಬ್ಬರು ಮಕ್ಕಳು ಸಾವಿಗೀಡಾಗಿದ್ದು ಯಾಲಕ್ಕಿಗೌಡನ ಭಯವನ್ನು ನೂರ್ಮಡಿಗೊಳಿಸಿತ್ತು.
“ನರ ಮನುಷ್ಯರೇ ಕೇಳಿ
ನರ ಮನುಷ್ಯರೇ ಕೇಳಿ
ಕಾಡು ಮುನಿದೈತೆ
ಹಾರುವ ಹಾವುಗಳು ಕೆಂಗಣ್ಣ ಬೀರೈತೆ
ಜೋಡಿ ಮಕ್ಕಳ ಸಾವು
ಪಟ್ಟದ ಹಳ್ಳಿಯ ಒಳಗೆ
ಕಣ್ಣೀರು ಕರಿತೈತೆ”
ಎಂಬ ಪದದಂತೆ ಗೌಡನ ಇಬ್ಬರು ಮಕ್ಕಳು ಕರಿನಾಗರ ಕಚ್ಚಿ ಸಾವಿಗೀಡಾಗಿದ್ದರು.
ಹಳ್ಳಿಯಲ್ಲಿ ಸೃಷ್ಟಿಯಾಗುವ ಅಂತೆ ಕಂತೆಗಳೆಂಬ ದಂತ ಕಥೆಗಳು ಕ್ಷಣಮಾತ್ರದಲ್ಲಿ ಊರೆಲ್ಲಾ ಹರಡಿ ಜನರನ್ನ ಭೀತಿಗೊಳಿಸುವ ಪರಿಯನ್ನ ಕಥೆಗಾರರು ತುಂಬಾ ನಾಜೂಕಾಗಿ ಹೆಣೆದಿದ್ದಾರೆ. ಕಥೆಯನ್ನು ಓದುತ್ತಿದ್ದಂತೆ ಆ ಎಲ್ಲಾ ಘಟನೆಗಳು ದೃಶ್ಯಕಾವ್ಯ ರೂಪದಲ್ಲಿ ಮನದ ಬಿತ್ತಿಯ ಮೇಲೆ ಸರಿದು ಹೋಗುತ್ತವೆ. ಈ ಕಥೆ ಹಳ್ಳಿಗೆ ಸಂಬಂಧಿಸಿದ್ದು, ಇವರು ರಾಮಜೋಯಿಸರನ್ನು ಕಾಣಲು ಹೊರಟಾಗ ಪ್ರಕೃತಿಯಲ್ಲಾದಂತಹ ರಮಣೀಯ ದೃಶ್ಯಗಳು, ಗೋಧೂಳಿಯ ಸಮಯದ ವರ್ಣನೆ ಅಮೋಘವಾಗಿ ಚಿತ್ರಿತವಾಗಿದೆ.
ಜೋಯಿಸರ ಬಳಿಗೆ ವರ್ಗಾವಣೆಗೊಂಡ ಕಥೆ ಹೊಸ ತಿರುವನ್ನು ತೆಗೆದುಕೊಂಡು ಅಚ್ಚರಿಯ ಸಂಗತಿಯನ್ನು ತೆರೆದಿಡುತ್ತದೆ. ಕಾಡಿನ ನಾಶಕ್ಕೆ ಯಾಲಕ್ಕಿಗೌಡನ ತಮ್ಮ ವೆಂಕಯ್ಯ ಗೌಡನ ದುರಾಸೆಯೆ ಕಾರಣವೆಂಬ ವಿಷಯ ಬೆಳಕಿಗೆ ಬರುತ್ತದೆ. ದೇವರ ಹೆಸರಿನಲ್ಲಿ ರಕ್ಷಿತವಾಗಿದ್ದ ಕಾಡನ್ನು ‘ಕೂಗು ಮಾರಿ’ಯ ಕಥೆ ಕಟ್ಟಿ, ಜನರನ್ನು ಹೆದರಿಸಿ ಹೊರಗೆ ಬರದಂತೆ ತಡೆದು ರಾತ್ರೋರಾತ್ರಿ ಕಾಡಿನ ಸಂಪತ್ತನ್ನು ಕೊಳ್ಳೆ ಹೊಡೆದ ಪ್ರಯುಕ್ತ ಕಾಡು ಬರಿದಾಗಿ ಕಾಡು ಪ್ರಾಣಿಗಳು ಮುನಿದಿರುವ ವಿಚಾರಗಳು ಚರ್ಚಿಸಲ್ಪಡುತ್ತವೆ.
ಈ ಕಥೆಯಲ್ಲಿ ಮಲೆನಾಡು ಪ್ರದೇಶದಲ್ಲಿ ಕಂಡು ಬರುವ ವಿಶಿಷ್ಟ ಬಗೆಯ ಹಾರುವ ಹಾವುಗಳನ್ನು ಕಥೆಗಾರರು ಬಳಸಿಕೊಂಡಿರುವುದು ಪ್ರಾಣಿ ಪ್ರಪಂಚದ ವಿಸ್ಮಯಗಳ ಬಗ್ಗೆ ಒಂದಿಷ್ಟು ಕುತೂಹಲವನ್ನು ಮೂಡಿಸುತ್ತದೆ. ಲೇಖಕರು ಬಳಸಿಕೊಂಡಿರುವ
“ಕೂಗೈತೆ ಕೂಗೈತೆ ಕಾಡು ಬೆಕ್ಕು ಕೂಗೈತೆ
ಹಾರೈತೆ ಹಾರೈತೆ ಕಾಡುಪಕ್ಷಿ ಹಾರೈತೆ
ನರ ಮನುಷ್ಯರ ಅಕ್ಷಿಗೆ ಇನ್ನು ಕೇಡು ಕಾದೈತೆ”
ಇಂತಹ ಪದಗಳು ಹೇಳಬೇಕಾದ ವಿಷಯಕ್ಕೆ ಹೆಚ್ಚಿನ ಗಟ್ಟಿತನವನ್ನು ತುಂಬುತ್ತವೆ.
ಜೋಯಿಸರು ನೀಡುವ ಸಮಜಾಯಿಷಿ ಜನರ ಕಣ್ಣನ್ನು ತೆರೆಸುತ್ತದೆ. ‘ಮಾಡಿದ್ದುಣ್ಣೋ ಮಹಾರಾಯ’ ಎಂಬತೆ ಕಾಡಿನ ವಿನಾಶ ಮಾಡಿದ್ದರ ಪರಿಣಾಮವನ್ನು ಎದುರಿಸಲೆಬೇಕೆಂಬ ಗಾದೆಯೊಂದಿಗೆ ಕಥೆ ನಿಸರ್ಗ ಸಂಪತ್ತಿನ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ. “ನೀವು ಪ್ರಕೃತಿಯ ವಿರುದ್ಧ ದಿಕ್ಕಿನಲ್ಲಿ ಚಲಿಸಿದ್ದೀರಿ ಪ್ರಕೃತಿ ಮುನಿದರೆ ನಾನಲ್ಲ, ಯಾವ ದೈವ ಬಂದರೂ ಪೊರೆಯಲು ಸಾಧ್ಯವಿಲ್ಲ” ಎಂಬ ರಾಮಜೋಯಿಸರ ಮಾತು ಇಡಿ ಕಥೆಯ ಸಾರವನ್ನು ಬಿತ್ತರಿಸುತ್ತದೆ.
ದೇವರ ಹೆಸರಿನಲ್ಲಿ ತೆರೆಮರೆಯಲ್ಲಿ ಏನೆಲ್ಲ ವ್ಯವಹಾರಗಳು ನಡೆಯುತ್ತವೆ. ಕತ್ತಲ ಲೋಕದ ಕರಾಳ ಸಂಗತಿಗಳ ಅರಿವನ್ನು ಮೂಡಿಸುವ ಜೊತೆಗೆ ಜನರು ಇಂದಿಗೂ ಮೌಢ್ಯದ ನೆರಳಿನಲ್ಲಿ ಮೋಸ ಹೋಗುತ್ತಿದ್ದಾರೆ ಎಂಬ ವಿಷಾದ ಭಾವವು ವ್ಯಕ್ತವಾಗಿದೆ. ಅಮಾಯಕ ಜನರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಸಮಾಜವನ್ನು ವಂಚಿಸುವ ಗೋಮುಖ ವ್ಯಾಘ್ರಗಳ ಮುಖವಾಡ ಕಳಚುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಕಥೆ ಗೆದ್ದಿದೆ. ಮಾನವ ಕುಲದ ಅಳಿವು ಉಳಿವಿನ ಆತಂಕದಲ್ಲಿ ಬದುಕುತ್ತಿರುವ ನಾವು ನಿಸರ್ಗವನ್ನು ರಕ್ಷಿಸಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಇದು ಸಾರುತ್ತದೆ. ಆಲೋಚನಾಯುಕ್ತ ಜೀವ ಪರ ಕಾಳಜಿಯನ್ನ ಆಶಿಸುತ್ತದೆ.
ಒಮ್ಮೆ ಯೋಚಿಸಿ ನಾವು ಇದುವರೆಗೂ ಏನೆಲ್ಲಾ ಪ್ರಕೃತಿ ವಿಕೋಪಗಳನ್ನು ಎದುರಿಸಿದ್ದೇವೆಯೋ ಅವುಗಳಿಗೆ ನೇರ ಹೊಣೆಗಾರರು ನಾವೇ ಅಲ್ಲವೇ? ನಾವು ಬದುಕುಳಿಯಲು ನಿಸರ್ಗ ವಿಫುಲವಾದ ಸಂಪತ್ತನ್ನು, ಅವಕಾಶಗಳನ್ನು ನೀಡಿದಾಗ್ಯೂ ನಾವು ಅವುಗಳನ್ನೆಲ್ಲಾ ಕಾಲಿನಿಂದ ಒದ್ದು ನಮ್ಮ ಅಂತ್ಯದ ದಾರಿಗೆ ನಾವೇ ಮುನ್ನುಡಿ ಬರೆದುಕೊಳ್ಳುತ್ತಿದ್ದೇವೆ. ಈಗಲಾದರೂ ಮನುಕುಲ ಎಚ್ಚೆತ್ತುಕೊಂಡು ಪರಿಸರ ಸುರಕ್ಷಣೆಗೆ ಕಂಕಣಬದ್ಧರಾಗಿ ಪರಿಸರದ ಪರಮ ಸ್ನೇಹ ಕೂಸುಗಳಾಗಿ ಬದುಕಿದರೆ ಮಾತ್ರ ನಮ್ಮ ಉಳಿವು ಸಾಧ್ಯ. ಆಗ ಮಾತ್ರ ಧರೆಯಲ್ಲಿ ನಮ್ಮ ಅಸ್ತಿತ್ವ ಇರುತ್ತದೆ. ಎಂಬ ಸಂದೇಶವನ್ನ ಒಳಗೊಂಡ ಈ ಕಥೆ ತುಂಬಾ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ಇಂತಹ ಉಪಯುಕ್ತ ಕಥೆಯೊಂದನ್ನು ರಚಿಸಿದ ಕಥೆಗಾರರಾದ ಶಂಕರ್ ಸಿಹಿಮೊಗ್ಗೆ ಅವರಿಗೆ ಅಭಿನಂದನೆಗಳು.
-ಅನುಸೂಯ ಯತೀಶ್