ತೋತಾಪುರಿ ಮೂವಿಯ ನಂಜಮ್ಮನ ಕಥೆ ವ್ಯಥೆ: ಕಿರಣ್ ಕುಮಾರ್ ಡಿ

ತೋತಾಪುರಿ ೨೦೨೨ ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಲನಚಿತ್ರವನ್ನು ವಿಜಯ ಪ್ರಸಾದ್ ಅವರು ನಿರ್ದೇಶಿಸಿದ್ದರೆ, ಕೆ ಎ ಸುರೇಶ್ ರವರು ನಿರ್ಮಾಪಕರಾಗಿರುತ್ತಾರೆ. ಈ ಚಲನಚಿತ್ರದಲ್ಲಿ ಜಗ್ಗೇಶ್, ಡಾಲಿ ಧನಂಜಯ, ಸುಮನ್ ರಂಗನಾಥನ್, ಅದಿತಿ ಪ್ರಭುದೇವ ಮತ್ತು ಮುಂತಾದವರು ನಟನೆ ಮಾಡಿರುತ್ತಾರೆ. ಈ ಚಲನಚಿತ್ರದಲ್ಲಿ ಸ್ವತಃ ವಿಜಯ ಪ್ರಸಾದ್ ರವರು ತಮ್ಮ ಬಾಲ್ಯದಿಂದ ಅರಿವು ಬರುವವರೆಗೂ ನೋಡಿದ ಜಾತಿ ಸಂಘರ್ಷಗಳನ್ನು ಮತ್ತು ಅರಿವು ಬಂದ ಮೇಲೆ ಆದ, ಅದೇ ಜಾತಿ ಸಂಘರ್ಷಗಳ ಅನುಭವವನ್ನ ದೃಶ್ಯರೂಪಕ್ಕೆ ಅಳವಡಿಸಿ ಕೊಟ್ಟಿದ್ದಾರೆ. ಈ ಚಲನಚಿತ್ರದಲ್ಲಿ ನಿರ್ದೇಶಕರು ನಂಜಮ್ಮ ಎಂಬ ಪಾತ್ರದ ಮೂಲಕ ಕೆಳ ಜಾತಿಯ ಹೆಂಗಸರು ಹೇಗೆ ಈ ಜಾತಿ ಸಂಘರ್ಷಕ್ಕೆ ಸಿಲುಕಿಕೊಂಡಿದ್ದಾರೆ ಎಂಬುದನ್ನು ವಿಭಿನ್ನವಾಗಿ ತೋರಿಸಿದ್ದಾರೆ.

ತೋತಾಪುರಿ ಸಿನಿಮಾದ ಪಾತ್ರ ನಂಜಮ್ಮ ಶ್ರೀರಂಗಪಟ್ಟಣದ ಪಾಲಹಳ್ಳಿ ಗ್ರಾಮದವಳು. ಅಪ್ಪ ಅಮ್ಮ ಕೂಲಿ ಕೆಲಸ ಮಾಡುತ್ತಿರುತ್ತಾರೆ. ನಂಜಮ್ಮ ಎಸ್.ಎಸ್.ಎಲ್.ಸಿ ಯಲ್ಲಿ ಅನುತ್ತೀರ್ಣ ಆಗಿ, ಈರೇಗೌಡನ ಅಂಗಡಿಯಲ್ಲಿ ಟೈಲರ್ ಕೆಲಸ ಮಾಡುತ್ತಿರುತ್ತಾಳೆ. ಮೊದಲು ನಂಜಮ್ಮ ಬೇರೆಯವರ ಮನೆಗೆಲಸ ಮಾಡುತ್ತಿದ್ದಳು. ಪ್ರತಿದಿನ ಬೆಳಿಗ್ಗೆ ೭:೩೦ ಗೆ ಮನೆ ಬಿಟ್ಟರೆ ಮಧ್ಯಾಹ್ನ ೩ ಗಂಟೆಯವರೆಗೆ ೬ ಮನೆಯ ಮನೆಗೆಲಸವನ್ನು ಮಾಡುತ್ತಿದ್ದಳು. ಈಕೆ “ಕೈ-ಬಾಯಿಯ ವಿಚಾರದಲ್ಲಿ ಅಚ್ಚುಕಟ್ಟು, ಕೆಲಸದ ವಿಚಾರದಲ್ಲಿ ಅಣೆಕಟ್ಟು” ಎಂಬ ಸಂಭಾಷಣೆಯನ್ನು ಚಲನಚಿತ್ರದಲ್ಲಿ ನಾವು ಕೇಳಬಹುದು. ನಂಜಮ್ಮ ಮೂರು ಬಾರಿ ಅವಮಾನ ಅಥವಾ ಅಗೌರವಕ್ಕೆ ಒಳಗಾಗುತ್ತಾಳೆ. ಮೊದಲನೆಯದು ಊಟದ ವಿಚಾರವಾಗಿ, ಎರಡನೆಯದು ಋತುಸಾವ್ರದ ವಿಚಾರವಾಗಿ ಮತ್ತು ಮೂರನೆಯದಾಗಿ ಕುಂಕುಮ ತೆಗೆದುಕೊಳ್ಳುವ ವಿಚಾರವಾಗಿ ಅವಮಾನಕ್ಕೆ ಅಥವಾ ಅಗೌರವಕ್ಕೆ ಒಳಗಾಗುತ್ತಳೆ.

ನಿರ್ದೇಶಕರು ನಮ್ಮಗೆ ಮನೆಗೆಲಸಕ್ಕೆ ಹೋಗುವ ಕೆಳಜಾತಿಯ ಹೆಂಗಸರು ಹೇಗೆಲ್ಲಾ ಅವಮಾನಕ್ಕೆ ಒಳಾಗಾಗುತ್ತಾರೆ ಎಂಬುದನ್ನು ಮೂರು ದೃಶ್ಯಗಳ ಮೂಲಕ ನಮ್ಮಗೆ ತೋರಿಸಿದ್ದಾರೆ. ಈ ಮೂರು ದೃಶ್ಯಗಳ ಬಗ್ಗೆ ವಿಸ್ತಾರವಾಗಿ ತಿಳಿಯೋಣ ಬನ್ನಿ.

೧. ಮನೆಯ ಮಾಲಕಿಯಿಂದ ನಂಜಮ್ಮನಿಗೆ ಊಟ ಕೊಡುವ ವಿಚಾರದಲ್ಲಿ ಆದ ಅವಮಾನ :-

ನಿರ್ದೇಶಕರು ನಂಜಮ್ಮನ ಪರಿಚಯ ಮಾಡಿಕೊಟ್ಟು, ಆಕೆ ಮೊದಲು ಎಲ್ಲಿ ಕೆಲಸ ಮಾಡುತ್ತಿದ್ದಳು ಎಂಬುದನ್ನ ತೋರಿಸುತ್ತ ಹೋಗುತ್ತಾರೆ. ಮೊದಲು ಆಕೆ ಒಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ನಂಜಮ್ಮ ಕೆಲಸದ ವಿಚಾರದಲ್ಲಿ ಶ್ರಮ ಜೀವಿ ಮತ್ತು ಯಾವತ್ತು ಕೆಲಸ ಮಾಡುವ ಮನೆಯಲ್ಲಿ ಕಳ್ಳತನ ಮಾಡಿಲ್ಲ. ನಂಜಮ್ಮ ಬಟ್ಟೆ ಒಗೆಯುವಾಗ ಮನೆಯ ಮಾಲೀಕರ ಜೇಬಿನಿಂದ ದುಡ್ಡು ತೆಗೆದು ಮನೆಯ ಮಾಲಕಿಗೆ ನೀಡುವ ದೃಶ್ಯ, ಆಕೆಯ ಒಳ್ಳೆತನ ಮತ್ತು ನಿಷ್ಠೆಯನ್ನು ತೋರಿಸುತ್ತದೆ. ಹೀಗೆ ಒಂದು ಮನೆಯಲ್ಲಿ ಕೆಲಸ ಮಾಡುವಾಗ ಅ ಮನೆಯ ಮಾಲಕಿ ತನ್ನ ಮಗಳಿಗೆ ಊಟದ ತಟ್ಟೆ ನೀಡಿ, ಇದ್ದನ್ನು ನಂಜಮ್ಮನಿಗೆ ಕೊಡು ಆದರೆ ಅವಳಿಂದ ಮುಟ್ಟಿಸಿಕೊಳ್ಳಬೇಡ ಎಂದು ತಾಯಿ ತನ್ನ ಮಗಳಿಗೆ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ನಂಜಮ್ಮ ಮನೆಯ ಹೊರಗೆ ಹೋಗಿ ಬೇಜಾರಿನಿಂದ ಕುಳಿತುಕೊಂಡಿರುತ್ತಾಳೆ. ಮಗಳು ತನ್ನ ಅಮ್ಮನಿಗೆ ಕೇಳುತ್ತಾಳೆ ಯಾಕೆ ಮುಟ್ಟಿಸಿಕೊಳ್ಳಬಾರದೆಂದು, ಅದಕ್ಕೆ ಅಮ್ಮ ಹೇಳಿದಷ್ಟು ಕೇಳು ಎಂದು ಗದರುತ್ತಾಳೆ. ಅ ಪುಟ್ಟ ಹುಡುಗಿ ಆ ತಟ್ಟೆಯನ್ನು ನಂಜಮ್ಮನ ಬಳಿ ಇಟ್ಟು ಕೇಳುತ್ತಾಳೆ, ಈ ಬೇರೆಯವಳು ಅಂದರೆ ಯಾರು ಎಂದು?. ನಂಜಮ್ಮ ಅದಕ್ಕೆ ಸಾಕು ನಾಯಿ ಬೇರೆ ಬೀದಿ ನಾಯಿ ಬೇರೆ ಎಂದು ಉತ್ತರ ನೀಡುತ್ತಾಳೆ. ನಿರ್ದೇಶಕರು ನಮ್ಮಗೆ ಆ ಹೆಂಗಸು ಇವರ ಮನೆಯ ಪಾತ್ರೆ, ನೆಲ ಮತ್ತು ಬಟ್ಟೆಯನ್ನು ಕೈಯಿಂದ ಮುಟ್ಟಿ ತೋಳೆಯಬಹುದು, ಆದರೆ ಅದೆ ಕೈ ಇವರನ್ನು ಮುಟ್ಟಿದರೆ ಮೈಲಿಗೆಯೆ ಎಂದು ಕೇಳುತ್ತಾರೆ.

೨. ನಂಜಮ್ಮನ ಮುಟ್ಟನ್ನು ಅವಮಾನಿಸಿದ ಮಾಲಕಿ :-

ನಂಜಮ್ಮ ಹೊಸದಾಗಿ ಒಂದು ಮನೆಗೆ ಕೆಲಸಕ್ಕೆ ಸೇರಿರುತ್ತಾಳೆ. ಒಂದು ದಿನ ಆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ, ಆಕೆಗೆ ತನ್ನ ಋತುಸ್ರಾವ ಎರಡು ದಿನಗಳು ಇರುವಂತೆ ಮುಂಚೆಯೇ ಆಗಿ ಬಿಡುತ್ತದೆ. ಬಹಳ ಸಂಕೋಚದಿಂದ ಮನೆಯ ಒಳಗೆ ಬಂದು ಮನೆಯ ಮಾಲಕಿಯನ್ನು ಕರೆಯುತ್ತಾಳೆ. ಒಳಗಡೆ ಮನೆಯ ಮಾಲಕಿಯ ತಂದೆ ಇದ್ದಿದರಿಂದ ಆಕೆಯನ್ನು ಆಚೆ ಬರುವಂತೆ ನಂಜಮ್ಮ ಕೇಳುತ್ತಾಳೆ. ನಂಜಮ್ಮ ಆಕೆಗೆ ಒಂದು ಪ್ಯಾಡ್ ಕೊಡಿ ಎಂದು ಕೇಳುತ್ತಾಳೆ, ಅದಕ್ಕೆ ಆಕೆ ಇದನ್ನೆಲ್ಲಾ ಮನೆಯಲ್ಲಿಯೆ ನೋಡಿಕೊಳ್ಳಬೇಕು ತಾನೆ ಎಂದು ಹೇಳುತ್ತಾಳೆ. ನಂಜಮ್ಮ ಏಕೋ ಎರಡು ದಿನ ಇರುವಾಗಲೇ ಆಗಿ ಬಿಟ್ಟೆ ಅಕ್ಕ ಎಂದು ಹೇಳುತ್ತಾಳೆ. ಮನೆಯ ಮಾಲಕಿ ಇರು ತಂದು ಕೊಡುತ್ತೇನೆ ಎಂದು, ಎಲ್ಲಿ ಧರಿಸುತ್ತಿಯಾ ಎಂದು ಕೇಳುತ್ತಾಳೆ. ನಂಜಮ್ಮ ಮನೆಯ ಹಿಂಬದಿ ಇರುವ ಶೌಚಾಲಯದಲ್ಲಿ ಎಂದು ಹೇಳುತ್ತಾಳೆ. ಮನೆಯ ಮಾಲಕಿ ಬೇಡ ಬೇರೆ ಕಡೆ ಹೋಗಿ ಬದಲಯಿಸಿಕೊಂಡು ಬಾ ಎಂದು ಹೇಳಿ, ಮುಟ್ಟಾದಾಗ ಮನೆಗೆಲಸಕ್ಕೆ ಬರಬೇಡ ಮೈಲಿಗೆ ಆಗುತ್ತದೆ ಎಂದು ಹೇಳುತ್ತಾಳೆ. ಇದರಿಂದ ನೊಂದ ನಂಜಮ್ಮ ಅಕೆಗೆ ಪ್ಯಾಡ್ ಅನ್ನು ಬೇಡ ಅಂದು, ಮನಸ್ಸು ಹೊಲಸಗಬಾರದು ಎಂದು ಹೇಳುತ್ತಾ ಅಲ್ಲಿಂದ ಹೊರಡುತ್ತಾಳೆ.

ಅಲ್ಲಿಂದ ಹೋದ ನಂಜಮ್ಮ ಅಲ್ಲಿಯೇ ಹತ್ತಿರವಿದ್ದ ಗಂಡಸರ ಶೌಚಾಲಯದ ಬಳಿ ತನ್ನ ಸೈಕಲ್ ಅನ್ನು ನಿಲಿಸಿ, ಅಲ್ಲಿದ ಕೆಲಸಗಾರನಿಗೆ ೧೦ ರೂಪಾಯಿ ನೀಡಿ ನಾನು ಪ್ಯಾಡ್ ಬದಲಾಯಿಸಬೇಕು ಹತ್ತು ನಿಮಿಷ ಯಾರನ್ನು ಒಳಗೆ ಬಿಡಬೇಡಿ ಎಂದು ಅವನಲ್ಲಿ ಕೇಳಿಕೊಳ್ಳುತ್ತಾಳೆ. ಅ ಕೆಲಸಗಾರ ನಂಜಮ್ಮನಿಗೆ ೧೦ ರೂಪಾಯಿಯನ್ನು ಹಿಂತಿರುಗಿಸಿ, ನನಗೆ ಹೆಣ್ಣು ಮಕ್ಕಳು ಇಲ್ಲ ಆದರೆ ತನ್ನ ಮಡದಿಯು ಹೆಣ್ಣು, ನಾವು ಉಪವಾಸ ಇದ್ದರೂ ಪರವಾಗಿಲ್ಲ ಇಂತಹ ದುಡ್ಡು ನನಗೆ ಬೇಡ ಅನ್ನುತ್ತಾನೆ. ಅ ವ್ಯಕ್ತಿಯ ಒಳ್ಳೆಯ ಮನಸ್ಸು ನೋಡಿ ನಂಜಮ್ಮ ಆತನನ್ನು ಅಪ್ಪಿಕೊಳ್ಳುತ್ತಾಳೆ. ನಿರ್ದೇಶಕರು ನಮಗೆ ಈಗಲೂ ಮುಟ್ಟನ್ನು ಕೀಳು ಎಂದು ನೋಡುವ ಜನರಿದ್ದಾರೆ ಎಂಬುದನ್ನು ಹೇಳುತ್ತಾರೆ. ಮನೆಯ ಮಾಲಕಿ ತಾನು ಕೂಡ ಹೆಣ್ಣು ಎಂಬುದನ್ನು ಮರೆತು ತನ್ನ ಮನೆ ಮೈಲಿಗೆ ಆಯಿತಲ್ಲ ಎಂಬುದನ್ನು ಮಾತ್ರ ಯೋಚನೆ ಮಾಡುತ್ತಾಳೆಯೆ ವಿನಹ, ನಂಜಮ್ಮನ ಸಹಜ ಕಷ್ಟಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ನೀಡುವುದಿಲ್ಲ.

೩. ಗೌರಿ ಹಬ್ಬದಂದು ಆದ ಅವಮಾನ :-

ನಂಜಮ್ಮ ಹೀಗೆ ಇನ್ನೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಅದು ಗೌರಿ ಹಬ್ಬದ ದಿನ, ನಂಜಮ್ಮ ತನ್ನ ಕೆಲಸ ಮುಗಿಸಿ ತನ್ನ ಮಾಲಕಿಗೆ ತಿಳಿಸಿ ಮನೆಗೆ ಹೋಗುವಾಗ ಆಕೆ ಕುಂಕುಮ ತೆಗೆದುಕೊಂಡು ಹೋಗು ಬಾ ಎಂದಳು. ಮನೆಯ ಮಾಲಕಿ ಕುಂಕುಮವನ್ನು ಕೈಯಿಗೆ ಕೊಡದೆ ನೆಲಕ್ಕೆ ಇಡುತ್ತಾಳೆ. ನಂಜಮ್ಮ ಬೇಜಾರಿನಿಂದ ಅಲ್ಲಿಂದ ಹೋರಬರುತ್ತಾಳೆ ಮತ್ತು ಮತ್ತೇಂದು ಮನೆಗೆಲಸಕ್ಕೆ ಹೋಗುವುದಿಲ್ಲ. ಟೈಲರ್ ತರಬೇತಿ ಪಡೆದು ಈರೇಗೌಡನ ಹತ್ತಿರ ಕೆಲಸಕ್ಕೆ ಸೇರುತ್ತಾಳೆ. ನಿರ್ದೇಶಕರು ಇಲ್ಲಿ ನಮಗೆ ದೇವರಿಗೆ ಇಲ್ಲದ ಮೈಲಿಗೆ ಮನುಷ್ಯನಿಗೆ ಇದೆ ಎಂಬುದನ್ನು ತೋರಿಸಿದ್ದಾರೆ.

ನಿರ್ದೇಶಕರು ನಂಜಮ್ಮನ ಮೂಲಕ ಸಮಾಜದಲ್ಲಿ ಹೆಣ್ಣು ಹೇಗೆಲ್ಲಾ ಕಷ್ಟ ಪಡುತ್ತಿದ್ದಾಳೆ ಎಂಬುದನ್ನು ನಮಗೆ ತೋರಿಸಿರುತ್ತಾರೆ. ಇಲ್ಲಿ ನಂಜಮ್ಮ ಪಡುವ ಕಷ್ಟವನ್ನು ಪ್ರತಿಯೊಬ್ಬ ಹೆಣ್ಣು ಒಂದಲ್ಲಾ ಒಂದು ರೀತಿ ಅನುಭವಿಸಿರುತ್ತಾಳೆ. ಈಗಲೂ ಹೆಣ್ಣು ಮಕ್ಕಳು ತಮ್ಮ ಕಷ್ಟಗಳನ್ನು ಗಂಡಸರ ಬಳಿ ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ. ನಿರ್ದೇಶಕರ ಈ ಪ್ರಯತ್ನ ಎಷ್ಟೋ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ತುಂಬಬಹುದು.

-ಕಿರಣ್ ಕುಮಾರ್ ಡಿಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x