ಡಾ.ಎಸ್.ವಿ.ಪ್ರಭಾವತಿಯವರ ಕಾವ್ಯ: ಸಂತೋಷ್ ಟಿ

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾದಂಬರಿ, ಸಂಶೋಧನೆ, ಕಾವ್ಯ , ಪ್ರಬಂಧ, ವಿಮರ್ಶೆಗಳಿಂದ ಕ್ರಿಯಾಶೀಲ ಲೇಖಕಿಯಾದ ಡಾ.ಎಸ್.ವಿ.ಪ್ರಭಾವತಿಯವರ ಕಾವ್ಯ ಚಿಂತನೆಗಳು ವಾಸ್ತವಿಕ ನೆಲೆಗಟ್ಟಿನ ಮೇಲೆ ಆಕ್ರತಿ ಪಡೆಯುವಂತಹದ್ದು. ಕಾವ್ಯ ಜಿಜ್ಞಾಸೆಯು ಎಂದಿಗೂ ನಿಂತ ನೀರಲ್ಲ, ಅದು ಸದಾ ಹರಿಯುತ್ತಲೇ ತನ್ನ ಸುತ್ತ ಹಸಿರನ್ನು ಕಾಣುತ್ತದೆ. ಹಾಗಾಗಿಯೇ ಇವರ ಕವಿತೆಗಳಿಗೆ ಸಾಂಕೇತಿಕವಾದ ಚಲನಶೀಲತೆ ಒದಗಿಬರುತ್ತದೆ. ಮಳೆ, ಮರ,ಆಕಾಶ ಮತ್ತು ಭೂಮಿಗಳನ್ನು ಬಳಸಿಬಂದ ಕವಯತ್ರಿ ಎಲ್ಲಿಯೂ ನಿಲ್ಲುವುದಿಲ್ಲ. ಪ್ರಕ್ರತಿಯೇ ಅವರಿಗೆ ಮೆಟಾಫರ್. “ನದಿ ಹರಿಯುತಿರಲಿ” ಸಮಗ್ರ ಕಾವ್ಯ ಸಂಪುಟ ಇವರದಾಗಿದೆ.

ಸೇತುವೆಗಳಿರುವುದೇ ದಾಟುವುದಕ್ಕೆ
ಅದನ್ನೇಕೆ ಕೆಡಹುವಿರಿ ಬಿಡಿ
ಪ್ರವಾಹ ಬಂದರೆ ಅದೇ ಬೀಳುತ್ತದೆ
ಮತ್ತೆ ಕಟ್ಟಿದರಾಯಿತು
ಕಟ್ಟುವುದಕ್ಕೆ ಅಲ್ಲವೇ ಬೀಳುವುದು.

ಒಂದು ಸಹಸ್ರಮಾನ ವರ್ಷಗಳಿಂದಲೂ ಹರಿದು ಬಂದಿರುವ ಈ ಕನ್ನಡ ಕಾವ್ಯ ವಾರಿಧಿಯ ಭೋರ್ಗರೆತಕ್ಕೆ ಸೇತುವೆ ಕಟ್ಟುವುದು, ದಾಟುವುದು, ಕೆಡಹುವುದು ಹೊಸತೇನಲ್ಲ. ಆದರೂ ಎಷ್ಟು ಖಚಿತವೆಂದರೆ ಪ್ರಾಚೀನ ಕಾಲದಿಂದ ಅರ್ವಾಚೀನ ಕಾಲದವರೆಗೂ ಸಾಹಿತ್ಯದಲ್ಲಿ ಸ್ತ್ರೀ ಚಿಂತನೆಗಳು ಮೂಡುತ್ತಿರುವುದು ಗಾರ್ಗಿ ಮೈತ್ರೇಯಿಯರ ವೇದಕಾಲದಿಂದ ಅಲ್ಲೊಬ್ಬಳು ಇಲ್ಲೊಬ್ಬಳು ಆಂಡಳ್, ಕರಿಕಾಲಮ್ಮೆ, ಕಂತಿ ,ವಿಜ್ಜಿಕೆ , ಅಕ್ಕಮಹಾದೇವಿ ಮತ್ತು ಅವಳ ಸಮಕಾಲೀನ ವಚನಕಾರ್ತಿಯರು , ಗಲಗಲಿ ಅವ್ವ, ಹೆಳವನಕಟ್ಟೆ ಗಿರಿಯಮ್ಮ, ಮೀರಾಬಾಯಿ, ಸಂಚಿಯ ಹೊನ್ನಮ್ಮನ ವರೆಗೂ ಒಂದು ಘಟ್ಟವಾದರೆ ಆಧುನಿಕ ಕನ್ನಡದಲ್ಲಿ ಹಲವು ಮಹಿಳಾಧ್ವನಿಗಳ ಸಂವೇದನೆಯ ಮೊತ್ತವಾಗಿ ಮಹಿಳಾಸಾಹಿತ್ಯ ವಾರಿಧಿಯನ್ನು ಗ್ರಹಿಸಬಹುದು. ಕನ್ನಡ ಕಾವ್ಯ ಸಂದರ್ಭದಲ್ಲಿ ಹೊಸಗನ್ನಡದ ನವೋದಯ, ನವ್ಯ , ಬಂಡಾಯ – ದಲಿತˌ ಬಂಡಾಯೋತ್ತರದ ದೇಸಿ ಮತ್ತು ಮುಸ್ಲಿಂ ಸಂವೇದನೆ ಸಾಹಿತ್ಯ ಘಟ್ಟಗಳ ದ್ಯೋತಕವಾಗಿ ಮೇಲಿನ ಕವಿತೆ ಮಾತಾಡುತ್ತದೆ.

ಬದುಕೆಂದರೆ ಯಾವಾಗಲೂ ಸಂಘರ್ಷಮಯವಾಗಿರುತ್ತದೆ . ಒಂದಲ್ಲಾ ಒಂದು ತಾಪತ್ರಯ ಅವುಗಳನ್ನು ದಿಟ್ಟ ಹೋರಾಟಗಳಿಂದ ಎದುರಿಸಬೇಕಾಗುತ್ತದೆ. ತಮ್ಮ ಅಸ್ಥಿತ್ವವನ್ನು ಕಾದುಕೊಳ್ಳಲು ಮುನ್ನುಗ್ಗಬೇಕಾಗುತ್ತದೆ. “ಮುಖ್ಯವಾಗಿ ಬದುಕಿನ ಅಲೆಗಳ ಹೊಡೆತಕ್ಕೆ ಯಾವುದು ಹೊರದಾರಿ ಎಂದು ತವಕಿಸುತ್ತಿದ್ದ ಹ್ರದಯಕ್ಕೆ ದುಃಖವನ್ನು ದುಗುಡವಾಗಿಸದೆ ಕಾವ್ಯವಾಗಿಸುವ ಒಳ ದಾರಿ ತೋರಿದ ಕಾವ್ಯ ಜಗತ್ತಿಗೆ ಕ್ರತಜ್ಞತೆಗಳು .” ಎಂದು ತಮ್ಮ ‘ಮಳೆ ನಿಂತ ಮೇಲಿನ ಮರ ‘ ಸಂಕಲನದಲ್ಲಿ ಷಾರಾ ಬರೆದರು. ಕಣ್ಣೀರಿನ ಧಾರೆ ಹರಿಯುವ ಕಡೆ ಕಾವ್ಯ ಧಾರೆ ಹರಿಸಿದ್ದಾರೆ. ತಮ್ಮೊಳಗಿನ ಕವಯತ್ರಿಯನ್ನು ಜಾಗ್ರತವಾಗಿಸಿ ಅಂತರಂಗದ ಆಲಾಪಗಳಿಗೆ ಬಾಯಿ ಕೊಟ್ಟಿದ್ದಾರೆ. ಹೆಣ್ಣನ್ನು ಹಿಗ್ಗಾ -ಮುಗ್ಗಾ ಝಾಡಿಸಿ ಜರಿಯುವ ಸಮಾಜಕ್ಕೆ ವಿಚಿಕಿತ್ಸಕ ಪ್ರಶ್ನೆಗಳನ್ನು ಕೇಳಿದ್ದಾರೆ. ದ್ರೌಪದಿ , ಕುಂತಿ, ಅಹಲ್ಯಾ , ಗಾರ್ಗಿ , ಯಶೋಧರಾ , ಶಾಕುಂತಲಾ,ದೇವಕಿ ಮೊದಲಾದ ಪೌರಾಣಿಕ ಪ್ರತಿಮೆಗಳ ಮೂಲಕ sign, signifier and signified ಆಗಿ ಕಾದಂಬರಿ ಬರೆದರು. ಮೂಲತಃ ಭಾವುಕ ಪ್ರವ್ರತ್ತಿಯ ಮನೋಭಾವದವರಾದ ಇವರು ಆರಿಸಿಕೊಂಡ ವಸ್ತು ಸ್ತ್ರೀವಾದಿ ಚಿಂತನೆ.ಜ್ಯೂಲಿ ಕ್ರಿಸ್ಟಿವಾ, ಹೇಲೆನ್ ಸಿಕ್ಸೋಸ್ ಮತ್ತು ಬಟ್ಲರ್ ಸ್ತ್ರೀವಾದಿ ಚಿಂತಕರು ನಿರೂಪಿಸಿದ ಕ್ರಮ female intellect Symbolic Order of Surface Gender Identity ಪರಿಕಲ್ಪನೆ ಇವರ ಸಾಹಿತ್ಯದ ಐಡಿಯಾಲಜಿ ವಸ್ತುಗಳಲ್ಲಿ ನಿರೂಪಣೆಯಾಗಿದೆ. ಬಹುಪತಿತ್ವ ಅಥವಾ ಪಂಚಪತಿತ್ವ, ಪಾತಿವ್ರತ್ಯದ ಸೋಗಿನಲ್ಲಿ ನರಳಿದ ಪೌರಾಣಿಕ ಪಾತ್ರಗಳ ಪ್ರಶ್ನೆ ಯಜಯಾನ ಸಂಸ್ಕ್ರತಿಯ (Master culture) ಸಂದರ್ಭದ ಶೋಷಣೆಯ ಸಂದರ್ಭದಲ್ಲಿ ಬಹುಮುಖ್ಯವಾದ ಇರಾದೆಯಾಗಿ ಕಂಡಿತು. ಬದುಕಿನ ನೈಜತೆಯಿಂದ ದೂರಾದ ಮೌಲ್ಯಗಳನ್ನು ತುಂಡರಿಸುತ್ತಲೇ ಹೊಸ ಸಂವೇದನೆಗಳಿಗೆ ಕೈಚಾಚುವ ವ್ಯಕ್ತಿತ್ವ ಇವರದು. ಸಮಕಾಲೀನ ಸಮಬದುಕಿಗೆ ಹಾತೊರೆದು ವಾಸ್ತವಕ್ಕೆ ಸ್ಪಂದಿಸುತ್ತಲೇ ಲೇಖನಿಯನ್ನು ಮೈಗೂಡಿಸಿಕೊಂಡ ಪ್ರತಿಭೆ ಇವರು.

“ದ್ರೌಪದಿ ಸ್ವಗತ
ಸೀತೆಯ ಸ್ವಗತ
ಅಹಲ್ಯೆಯ ಸ್ವಗತ
ಅಮ್ರತಮತಿಯ ಸ್ವಗತ
ಹೀಗೆ ಅವರಿವರ ಸ್ವಗತವನ್ನೇ ಹಾಡುತ್ತಾ
ಅವರೊಳಗೆ ತಮ್ಮನ್ನು ಕಾಣುತ್ತಾ ” ಬಂದ ಎಸ್.ವಿ.ಪ್ರಭಾವತಿಯವರು ಇತಿಹಾಸದೊಳಗೆ ಇತಿಹಾಸವಾಗಬಹುದಾದ ಮಹಿಳೆಯರನ್ನು ಎದುರುಗೊಂಡ ಬಗೆ ಇಡೀ ಪುರುಷ ಸಮಾಜಕ್ಕೆ ಸಾವಲೊಡ್ಡುತ್ತದೆ. ಹೆಣ್ಣಿನ ಹ್ರದಯಾಂತರಾಳದ ತವಕ ತಲ್ಲಣಗಳು ಧುತ್ತೆಂದು ನಿಲ್ಲುತ್ತವೆ. ಎಲ್ಲಾ ಪಾತ್ರಗಳು ಹೊಸತನದೊಂದಿಗೆ ಇಪ್ಪತ್ತೊಂದನೇ ಶತಮಾನದಲ್ಲಿ ಹೇಗೆ ಮಾತಾಡಬಹುದಿತ್ತೋ ಹಾಗೆ ಮಾತಾಡುತ್ತಾರೆ.

ಕವನ ಹುಟ್ಟುವುದಕ್ಕಿಲ್ಲ
ಹುಟ್ಟಿತೇ ಹುಟ್ಟಿತೇ ಎಂದು
ಕೇಳುವ ಈ ಮಂದಿ
ಹುಟ್ಟುವ ಮೊದಲು ತಡಿಕೆ
ಮರೆಯಲ್ಲಿ ಕುಳಿತೇಕೆ ಕಾಯುವುದಿಲ್ಲವೋ

ಸಂಪ್ರದಾಯಕ ಸಮಾಜವು ಮಹಿಳೆಗೆ ವಿಧಿಸಿದ ಶಿಕ್ಷಣ ನಿರ್ಬಂಧವನ್ನು ಪ್ರಶ್ನಿಸುವ ಪರಿಯಲ್ಲೇ ಕವಿ ಕಾವ್ಯ ನಿಷ್ಪತ್ತಿಯ ಸಮಯ ಸ್ಪೂರ್ತಿಯ ಕಾವ್ಯ ಕುತೂಹಲದ ಇಂಗಿತವನ್ನು ಅಭಿವ್ಯಕ್ತಿಸುತ್ತದೆ. ಕವಿತೆ ಬರೆಯುವ ಕವಿಯ ಪಾಡು ಕವಿಗೆ ಗೊತ್ತು ವಿಮರ್ಶಕರಿಗೆ ಅದರ ಎತ್ತರಭಿತ್ತರದ ಕಾಯುವಿಕೆಯ ವ್ಯವಧನದ ಪರಿಪಾಠ.
ಸಾಹಿತ್ಯದಲ್ಲಿ ಒಂದು ಫಾರ್ಮ ಆಗಿ ಸಂವೇದನೆಗಳನ್ನು ಮಿಡಿಯುವ ಚೌಕಟ್ಟು ಕವಿತೆ ಕಾದಂಬರಿ ಕತೆಯಾದರೂ ಅವುಗಳ ವಸ್ತು ಮುಖ್ಯವಾಗಿ ಸ್ತ್ರೀ ಪ್ರತಿನಿಧೀಕರಣ. ” ಸಾಹಿತ್ಯ ಕ್ರತಿಗಳಲ್ಲಿ ಹೆಂಗಸನ್ನು ಹೇಗೆ ಪ್ರತಿನಿಧಿಸಲಾಗುತ್ತದೆ ಎಂಬುದನ್ನು ಅಧ್ಯಯನ ಮಾಡುವುದರಿಂದ ಸಾಮಾಜಿಕ ನೆಲೆಯಲ್ಲಿ ಹೆಂಗಸನ್ನು, ಆಕೆಯ ಸ್ಥಿತಿಯನ್ನು ಗ್ರಹಿಸುತ್ತಿರುವ ಬಗೆಗಳು ನಮ್ಮ ಅರಿವಿಗೆ ಬರುತ್ತವೆ.” (ಹೆಣ್ಣು -ಕನ್ನಡ ಸಾಹಿತ್ಯದ ಗ್ರಹಿಕೆ ಕೆಲವು ಟಿಪ್ಪಣಿಗಳು, ದ ಸೆಕೆಂಡ್ ಸೆಕ್ಸ್ ಒಂದು ಕನ್ನಡದ ಓದು ಡಾ ಎಚ್.ಎಸ್.ಶ್ರೀಮತಿ ಪುಟ 809) ಈ ಸಂವೇದನೆಗಳಿಂದಲೇ ಇಲ್ಲಿನ ಸ್ತ್ರೀ ಜಗತ್ತು ಆಧುನಿಕ ಮನೋಭಾವದೊಂದಿಗೆ ಅನಾವರಣಗೊಳ್ಳುತ್ತದೆ. ಮೀರುವಿಕೆ ಮತ್ತು ಆಗುವಿಕೆಗಳತ್ತ ಪ್ರಶ್ನೆಗಳನ್ನು ಕೇಳುವಾಗಲೇ ಅವಳು ಆಗಬೇಕಾಗಿರುವುದರ ಕಡೆಗೆ ಸಾಗುತ್ತಿದ್ದಾಳೆ ಎಂಬ ಆಶಯಗಳೊಂದಿಗೆ ಆಧುನಿಕ ಕಾಲದ ವಾಸ್ತಾವಕ್ಕೆ ಮುಖಾಮುಖಿಯಾಗುವ ಕವಯತ್ರಿಯ ತಾತ್ವಿಕ ನಿಲುವು ಮತ್ತು ಸಂಭಾಷಣೆಯ ಮಾತುಗಾರಿಕೆ ಸಮಾಜದ ಎದುರು ಯಕ್ಷವಾಗಿ ಪರಿಣಮಿಸುತ್ತದೆ.

1975ರ ನಂತರ ಕನ್ನಡ ಸಾಹಿತ್ಯದಲ್ಲಿ ನವ್ಯ ಚಳುವಳಿಯ ಏರಿಳಿತಗಳ ಕಾಲದಲ್ಲಿ ದಂಡಿಯಾಗಿ ಆರಂಭವಾದ ಮಹಿಳಾ ಅಸ್ಮಿತೆಯ ಅನನ್ಯತೆಯ ಕಾವ್ಯ ಮಹಿಳಾ ಸಂವೇದನೆ ಅಂತಲೇ ಗುರ್ತಿಸಿಕೊಂಡಿದೆ. ನವೋದಯ ಲೇಖಕಿಯರ ಸಂಪ್ರಾದಾಯ ಶೈಲಿಯನ್ನು ಜೀರ್ಣಿಸಿಕೊಳ್ಳುವ ಹೊತ್ತಿಗೆ ಪ್ರಗತಿಪರ ತದನಂತರದ ನವ್ಯದಲ್ಲಿ ಸ್ತ್ರೀ ಸಾಹಿತ್ಯವೇ ಒಂದು ಅಸಾಧಾರಣ ಭಾಷೆಯಲ್ಲಿ ರೂಪುಗೊಂಡಿದೆ. ಮಹಿಳೆಯರ ಖಾಸಗಿ ಬದುಕು ಸಾಹಿತ್ಯವಾಗುವ ಗಳಿಗೆ ಬರವುದಿದೆ ಎಂಬ ನಿಸಾರ್ ಮಾತು ಸರಿಯಾದದ್ದು. ನಿರ್ಬಂದದ ಅಡುಗೆಕೋಣೆಯಲ್ಲಿ ಮಹಿಳೆಯರು ಕೊತಕೊತ ಕುದಿದು ಪಾಕವಾದ ಹದವಾದ ಶೈಲಿಯಲ್ಲಿ ಮಾತಾಡಲಾರಂಭಿಸಿದರು. ಕರಿಯ ಇದ್ದಲಿನಿಂದ ಗೋಡೆಗಳ ಮೇಲೆ ಬರೆಯುತ್ತಿದ್ದ ಸ್ತ್ರೀಯರು, ಎಂಬತ್ತನೇ ವಯಸ್ಸಿಗೆ ವೇದಿಕೆ ಏರಿ ಕವಿತೆ ಓದಿದ ಸ್ತ್ರೀಯರು ಇರುವ ಉದಾಹರಣೆಯ ನೋವಿನ ಸಂಗತಿಗಳಲ್ಲೇ ಬಂಡಾಯದ ಆರಂಭಿಕ ನೆಲೆಗಟ್ಟು ತುಡಿದರೂ ಬಂಡಾಯ ದಲಿತ ಸಾಹಿತ್ಯದ ಅರಿವು ಮೂಡುವ ತನಕ ಗುರ್ತಿಸಿಕೊಳ್ಳಲು ಆಗಲಿಲ್ಲ ಎಂಬುದು ಮಹಿಳಾಸಾಹಿತ್ಯ ಚರಿತ್ರೆಯ ವಿಷಾದ. ಬಂಡಾಯ ಸಿದ್ಧ ಮಾದರಿಗಳ ಪುಂಕಾನೂಪುಂಕ ಸಿದ್ಧ ಮಾದರಿಗಳ ತ್ಯಜಿಸಿ ವಿಭಿನ್ನತೆ ಮಾರ್ಗದಲ್ಲಿ ಸ್ತ್ರೀ ಭಾಷೆ ರೂಪುಗೊಂಡಿದೆ. ಹದಿಬದೆಯ ಧರ್ಮ ಸಾಂಗತ್ಯದ ಪತಿವ್ರತೆ ಧರ್ಮದ ಉಪದೇಶ ಪಡೆದು ಬರೆದ ಲೇಖಕಿಯರ ಅರಿವಿಗಿಂತ ಆಧುನಿಕ ಲೇಖಕಿಯರ ಮನೋಭಾವ ತಾಜಾ ಅನುಭವ ದ್ರವ್ಯ ಮತ್ತು ಸ್ತ್ರೀ ಪರ ಕಾಳಜಿಯ ಮಾನವ ಸಂಬಂಧಗಳ ಲಿಂಗಭೇದ ನೀತಿಯ ಸಂಕೀರ್ಣ ಗ್ರಹಿಕೆಗಳು ಪ್ರಾತಿಪಾದಿತವಾದ ಆಧುನಿಕ ಆಶಯ ವರ್ಗಗಳೇ ಸರಿ.

ಸ್ತ್ರೀಪರವಾದ ಸಾಮಾಜಿಕ ನ್ಯಾಯದ ಜಿಜ್ಞಾಸೆಯನ್ನು ಪುರಾಣಕಾಲದಿಂದ ವರ್ತಮಾನದ ಕಡೆಗೆ ನಿಲ್ಲಿಸಿ ಪುನರ್ ವ್ಯಾಖ್ಯಾನಿಸುವ ಪ್ರಮುಖ ಪ್ರಶ್ನೆಗಳು ಉಲ್ಭಣಿಸಿ ಸ್ತ್ರೀ ಸಂಕಥನಗಳನ್ನು ಪ್ರತಿಮಾ ಮತ್ತು ರೂಪಕಗಳ ಧಾಟಿಯಲ್ಲಿ ಇಲ್ಲಿನ ಕವಯತ್ರಿ ಅಥವಾ ಇತರ ಲೇಖಕಕಿಯರು ಅನುಸಾಂಧಾನ ಮಾಡಿದ್ದಾರೆ. ನವ್ಯಂಶಾದ ಏಕಾಕಿತನದ ಬಿಡುಗಡೆ ಮತ್ತು ವರ್ತಮಾನದ ಬಂಡಾಯದ ಅಂಶಗಳ ಧಾತುಗಳು ಕೂಡಿಯೇ ಕಾವ್ಯ ಮೂಡಿರುವುದು ಕಂಡುಬರುತ್ತದೆ. ರೂಪಕದ ಪ್ರತಿಮೆಗಳ ಪ್ರತೀಕಗಳ ಪಲ್ಲವಿಅನುಪಲ್ಲವಿಯಂತೆ ಕೇಳಿಸಿದರೆ ಅದು ಸ್ತ್ರೀ ಮಾತಾಡುವ ರೀತಿಯೆಂದೆ ಲೇಖಕಿಯರ ಸಾಹಿತ್ಯವಿದು ಎಂದು ಅರಿತುಬಿಡಬಹುದು. ಅಷ್ಟರ ಮಟ್ಟಿಗೆ ಸ್ವಂತಿಕೆ ಸ್ವಾನುಭಾವ ಕವಯತ್ರಿಯರಿಗೆ ಇದೆ. ಎಸ್.ವಿ.ಪ್ರಭಾವತಿಯವರ ಕವಿತೆಯ ಶೈಲಿ ಭಾಷಣ ಕಲೆಯನ್ನು ಮೀರಿಸುವ ಕವಿತೆ ಪದ್ಯಗಪದ್ಯ ಲಯನಾದಗುಣ ವಿಶಿಷ್ಟ ಲಕ್ಷಣ ಸಮನ್ವತೆ ಎದ್ದು ಕಾಣುತ್ತದೆ. ಇದರ ಜೊತೆಗೆ ಮಹಿಳಾ ಹೋರಾಟದ ಕ್ರಿಯಾವಾದವು ಬೆರೆತು ಸಾಮಾಜಿಕ ಆಯಾಮದ ಸಾಂಸ್ಕ್ರತಿಕ ಪ್ರತಿಭೆಯಾಗಿ ಕವಯಿತ್ರಿ ಬೆಳೆದು ಬಂದ ಪರಿ ಅಚ್ಚರಿಪಡುವಂತದ್ದು. ಅವರ ಸ್ತ್ರೀ ಪಾತ್ರಗಳು ಕಾಲದೇಶ ಅಂತರವನ್ನು ಮೀರಿ ಭವಿಷ್ಯತ್ ಕಾಲಕ್ಕೂ ಮುಂಚಿನ ಪ್ರಶ್ನೆ ಇರಿಸಿಕೊಂಡತವುಗಳು. ಗೊಡ್ಡು ಧರ್ಮದ ಮೂಸೆಯಿಂದ ಹೊರಬಂದ ಅಗ್ನಿದಿವ್ಯದ ಜೊತೆಗೆ ಪುರುಷರನ್ನು ಇಳಿಸುವ ಮಾದರಿಗಳು.

ಅಲ್ಲೊಮ್ಮೆ ಇಲ್ಲೊಮ್ಮೆ ಒಂದು
ಪದವೋ ವಾಕ್ಯವೋ ಕೈ ಹಿಡಿದರೆ ಮಾತು
ಬೆಳಕಾದರೆ ಒಂದು ಕವಿತೆ
ಈ ಬದುಕೋ ಕ್ಷಣ ಬಿಡದಂತೆ
ಕೈ ಹಾಡಿದು ದರದವ ಎಳೆದು
ಆಕಾಶಕ್ಕೊ ಪಾತಾಳಕ್ಕೊ ಎಸೆದು ನಿರ್ಲಿಪ್ತ
ವಾಗಿ ಮುಂದೆ ನಡೆದು ಇನ್ಯಾರದೋ
ಕೈ ಹಿಡಿದೆಳೆಯುತ್ತಿರುವದನ್ನು
ಕಂಡೂ ಬದುಕುವುದಿದೆಯಲ್ಲಾ
ಇದರ ಮುಂದೆ ಕಾವ್ಯ ಏನು ಮಹಾ.

ಕಾವ್ಯಕ್ಕಿಂತ ಬದುಕು ದೊಡ್ಡದು. ಬದುಕೇ ಕಾವ್ಯವಾದರೂ ಅಡ್ಡಿಯಿಲ್ಲ. ಅಂಥ ವಿಸ್ಮಯ ತಲ್ಲಣಗಳಲ್ಲೇ ಕಾವ್ಯ ಇದೆ. ಅದರ ಭಾಷೆ ಶಬ್ಧಾತೀತಾ ಕಾಲತೀತಾ ಇತ್ಯಾತ್ಮಕ ನೆಲೆಯಲ್ಲಿ ಇರುತ್ತದೆ. ವರ್ಜಿನಿಯಾ ವೂಲ್ಫಾಳ ಪ್ರಕಾರ” Life is not series of gig lamps symmetrically arranged… but a luminous halo.” ಜೀವನವೆಂದರೆ ದಾರಿ ಹಾದಿಯ ಉದ್ದಕ್ಕೂ ಎಡಬಲಗಳಲ್ಲಿ ಕಾಣುವ ನೇರವಾದ ದೀಪಗಳಲ್ಲ ಅದು ದುಂಡಾದ ಪ್ರಜ್ಞೆಯ ಪ್ರಕಾಶಮಾನವಾದ ಬೆಳಕಿನ ದೀವಿಗೆ. ದ್ರೌಪದಿಯ ಮಾನಸಿಕ ವಾದ ಇದು.

ಡಾ.ಎಸ್.ವಿ ಪ್ರಭಾವತಿಯವರು ಮಂಡ್ಯಜಿಲ್ಲೆ ಕ್ರಷ್ಣರಾಜಪೇಟೆ ಹೊಸಹೊಳಲು ಗ್ರಾಮದವರು. ಚರಿತ್ರೆಯಲ್ಲಿ ವಜ್ರಬೈಸಣಿಗೆ ಶಾಸನ ಹೊಂದಿದ, ಶ್ರೀ ಲಕ್ಷ್ಮೀನಾರಾಯಣ ದೇಗುಲದ ಪ್ರಸಿದ್ಧ ಸ್ಥಳವದು. ಅವರ ತಂದೆ ತಾಯಿಯರು ನಾಗರಾಜ ಮತ್ತು ಪಾರ್ವತಮ್ಮ ದಂಪತಿಗಳು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಮಂಡ್ಯ ,ಮೈಸೂರುಗಳಲ್ಲಿ ಉನ್ನತ ಶಿಕ್ಷಣ ಪಡೆದು ಮೂರುದಶಕಗಳಿಗೂ ಮಿಕ್ಕ ವರ್ಷಗಳು ಭಾರತೀಯ ಸಂಸ್ಕ್ರತಿ ವಿದ್ಯಾಪೀಠ ಮಹಿಳೆಯರ ಕಾಲೇಜಿನಲ್ಲಿ ಕನ್ನಡ ಬೋಧಕರಾಗಿ ಪ್ರಧ್ಯಾಪಕರಾಗಿ ಸೇವೆ ಮಾಡಿ ನಿವ್ರತ್ತಿಯ ಹಂತದಲ್ಲಿ ವಿಜಯ ಕಾಲೇಜಿನಲ್ಲಿ ಕಾರ್ಯ ನಿರ್ವಹಣೆ ಮಾಡಿˌಶೇಷಾದ್ರಿಪುರಪುರಂ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಕೇಂದ್ರದಲ್ಲಿ ಸಂದರ್ಶಕ ಪ್ರಧ್ಯಾಪಕರು ಆಗಿದ್ದರು. ಡಾ.ಎಂ.ವಿ.ಸೀತಾರಾಮಯ್ಯನವರ ಮಾರ್ಗದರ್ಶನದಲ್ಲಿ ಇವರ “ಕನ್ನಡ ಸಾಹಿತ್ಯದಲ್ಲಿ ದ್ರೌಪದಿ” ಎಂಬ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯ ಪಿ ಎಚ್ ಡಿ ಡಾಕ್ಟರೇಟ್ ಪದವಿ ನೀಡಿದೆ. ಇವರ ಮಾರ್ಗದರ್ಶನದಲ್ಲಿ ಹದಿನೈದು ಸಂಶೋಧನಾ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಡಾಕ್ಟರೇಟ್ ಪಿ ಎಚ್ ಡಿ ಪದವಿ ಪಡೆದು ಉಪನ್ಯಾಸಕ, ಪ್ರಧ್ಯಾಪಕ, ರಂಗಭೂಮಿ ಕಲಾವಿದರು ಆಗಿರುವರು.

ಇವರ ಕ್ರತಿಗಳು

ಸಂಶೋಧನೆ : ಕನ್ನಡ ಸಾಹಿತ್ಯದಲ್ಲಿ ದ್ರೌಪದಿ , ರಾಮಾಯಣ ಪರಂಪರೆಯಲ್ಲಿ ಕನ್ನಡ ರಾಮಾಯಣಗಳು -ಒಂದು ತೌಲನಿಕ ಅಧ್ಯಯನ
ಕಾದಂಬರಿ : ದ್ರೌಪದಿ, ಕುಂತಿ,ಅಹಲ್ಯಾ,ಯಶೋಧರಾ, ಸೀತಾ, ಶಾಕುಂತಲಾ , ಗಾರ್ಗಿ , ದೇವಕಿ ,ಅನುದಿನದ ಅಂತರಗಂಗೆ (ಸಮಗ್ರ ಕಾದಂಬರಿ)
ಪ್ರಬಂಧ: ಸ್ತ್ರೀವಾದದ ಪ್ರಸ್ತುತತೆ, ಹೊರಳು ನೋಟ, ಜಾಗತೀಕರಣ ಮತ್ತು ಮಹಿಳೆ
ವಿಮರ್ಶೆ: ಸಮನ್ವಯ, ಚಿತ್ತಭಿತ್ತಿ (ಭೈರಪ್ಪ ನವರ ಸಾಹಿತ್ಯ ವಿಮರ್ಶೆ),
ಕನ್ನಡ ಮಹಿಳಾ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಸಮದರ್ಶಿ
ಕವನಸಂಕಲನ: ಮಳೆ ನಿಂತ ಮೇಲಿನ ಮರ, ಉಳಿದದ್ದು ಆಕಾಶ, ಭೂಮಿ,ಹರಿಯುತಿರಲಿ ಬಿಡು ˌಇತ್ತಿಚೀನ ಕವಿತೆಗಳು (ಸಮಗ್ರ ನದಿ ಹರಿಯುತಿರಲಿ )
ನಾಟಕ: ಪಾಂಚಲಿಯ ಸ್ವಗತ ಮತ್ತು ಇತರ ನಾಟಕಗಳು
ಸಂಪಾದನೆ: ಅವಲೋಕನ ( ಎಚ್ ಎಲ್ ಪುಷ್ಪ ಸಹ ಸಂಪಾದಕಿ), ಕನ್ನಡ ಜನ ಪ್ರೀತಿ (ಎಲ್.ಎಸ್.ಎಸ್ ಕುರಿತು , ಪ್ರತಿಭಾ ನಂದಕುಮಾರ್ ಸಹ ಸಂಪಾದಕಿ) ಕನ್ನಡ ಮಹಿಳಾ ಕಾವ್ಯ (ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ. ಬಿಜಾಪುರ. ಮಹಿಳಾ ಸಾಹಿತ್ಯ ಚರಿತ್ರೆಯ ಒಂದು ಸಂಪುಟ ಸಹಸಂಪಾದಕಿ ಡಾ ವಿಜಯಶ್ರೀ ಸಬರದ)
ಮಹಾಕಾವ್ಯ : ಪ್ರಥಾ
ಆತ್ಮಕಥನ : ಎನ್ನ ಪಾಡೇನಗಿರಲಿ
ಚರಿತ್ರೆ : ಕನ್ನಡ ಸಾಹಿತ್ಯ ಚರಿತ್ರೆ
ಅಂಕಣ : ಕನ್ನಡದ ಮನೆಯಿಂದ
ಬಿಡಿಬಿಡಿ ವ್ಯಕ್ತಿ ಪರಿಚಯದ ಪುಸ್ತಿಕೆಗಳು ರಚಿಸಿರುವುರು.
ಇವರು ಕರ್ನಾಟಕ ರಾಜ್ಯದಾದ್ಯಂತ ತಮ್ಮ ಉಪನ್ಯಾಸ ಭಾಷಣಗಳನ್ನು ಮಾಡಿರುವರು ಅನೇಕ ಸಂಘಸಂಸ್ಥೆಗಳನ್ನು ಇವರನ್ನು ಗೌರವಿಸಿದೆ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಅವರ ಸಾಹಿತ್ಯ ಪಠ್ಯವಾಗಿದೆ ಅಧ್ಯಯನ ಶಿಸ್ತಾಗಿದೆ. ಅವರಿಗೆ ಬಂದಿರುವ ಪ್ರಶಸ್ತಿ ಪುರಸ್ಕಾರಗಳು : ಕಾವ್ಯಾನಂದ ಪ್ರಶಸ್ತಿ, ಮುದ್ದಣ ಕವಿ ಪ್ರಶಸ್ತಿ, ಗೋಕಾಕ್ ಪ್ರಶಸ್ತಿ, ಸಾವಿತ್ರಮ್ಮ ಪುರಸ್ಕಾರ, ಗೀತಾ ದೇಸಾಯಿ ಪುರಸ್ಕಾರ, ಅತ್ತಿಮಬ್ಬೆ ಪುರಸ್ಕಾರ, ಸ್ನೇಹಸೇತು ಪುರಸ್ಕಾರ, ಕನ್ನಡ ಸಾಹಿತ್ಯ ಸಮ್ಮೇಳನ ಪುರಸ್ಕಾರ ಬೆಂಗಳೂರು, ರಾಮನಗರ ಮಹಿಳಾ ಸಾಹಿತ್ಯ ಸಮಾವೇಶದ ಅಧ್ಯಕ್ಷತೆ ಇವುಗಳಾಗಿವೆ.

ಎಸ್.ವಿ.ಪ್ರಭಾವತಿಯವರ ಕಾವ್ಯವೆಂದರೆ
1

ಮಳೆನಿಂತ ಮೇಲಿನ ಮರ ಕವನ
ಕವನ ಹುಟ್ಟುವ ಹೊತ್ತು ಕಾವ್ಯ
ಒಂದು ಕವನದ ಜಾತಕ ಬಯಲು
ಈ ಮರ ದೂರ ಸರಿಯುತ್ತವೆ
ಸಾವೂ ಒಂದು ಸಾವು ಎರಡು
ಚಕ್ರವರ್ಷ ಕಾಯುತ್ತಿರು ನಾಲ್ಕು ಚಿತ್ರಗಳು
ದಿಗಂತದಲ್ಲೊಂದು ಅದ್ಭುತ ಏಕೆ ?

ಹರಿವನೀರು ತೀರ ಅಕ್ಕ ! ಅಭಿನವ ಅಕ್ಕ !
ಪ್ರಶ್ನೆ ಅನಿಸಿಕೆ ನನ್ನೊಡನಿದ್ದೂ ನನ್ನಂತಾಗದೆ ಹಂಬಲ
ಪರೀಕ್ಷೆ ಹಾಲಿನಲ್ಲಿ ನರಸತ್ತವರು
ಸಂಬಂಧಗಳು
ಆಸೆ ಯಾನ ಮ್ರತ್ಯು ನದಿ
ನೀವಲ್ಲವೆ ಕನವರಿಕೆಗಳು
ಬೀಳ್ಕೊಡುಗೆ ಜಂಬೂಫಲ
ಒಲವು ಮಲ್ಲಿಗೆ ಬಂಡಾಯ.

2
ಹೀಗೊಂದು ಸ್ವಗತ ಬದುಕು ಅನಿಸಿಕೆ
ಮಳೆ ಮರಳಿ ನಿನ್ನ ತೆಕ್ಕೆಗೆ
ಪದ್ಯ ಪ್ರಗತಿ ಕಾಲ ಹಾಳೆ ನಾಳೆ
ದೀಪಾವಳಿಯ ನೆನಪು ಕಾವ್ಯ- ಚಿತ್ರ !
ಅಲ್ಲೊಂದು ಲೋಕ ಚಂದ್ರ ಕವಿತೆಗಳು
ತೊಂಭತ್ನಾಲ್ಕರ ಹೊಸ್ತಿಲಲ್ಲಿ ಒಂದು ಪುಸ್ತಕ ಮೊರೆ
ಸ್ನಾನ ಪ್ರಸ್ತುತ ಉಳಿದದ್ದು ಆಕಾಶ.

3
ಸಮುದ್ರ – ನದಿ ಭೂಮಿ -ಸೂರ್ಯಬಳೆ
ಅಸ್ಥಿತ್ವ ಕನಸುಗಳು ಪಂಚರಂಗದ ಸೌಂದರ್ಯ ಆಲಾಪ
ಏಳುಸುತ್ತಿನ ಕೋಟೆ ಕನ್ನಡ ರಾಜ್ಯೋತ್ಸವ ನಿರೀಕ್ಷೆ ಪರ್ವ
ಸುವರ್ಣ ಸ್ವಾತಂತ್ಯ್ರ ಭೂಮಿ ಕಾಯುವುದಿಲ್ಲ
ಮಾರುಕಟ್ಟೆಯ ಮಂದಿ ಕಾಯುತ್ತಿರು
ಭೂಮಿ ಮಳೆಯ ಹಾಡು
ತಾಯಿ – ಭೂಮಿ ಧಾರಿಣಿ
ಇಳೆ -ಬೆಳೆ ನಾನು – ನೀನು
ನಾವು ಮೋಹಿಸುತ್ತೇವೆ
ಭೂಮಿ ನಾನು
ವ್ರಷಭಾವತಿ ಬೊನ್ಸಾಯಿ ಗಿಡಗಳು.

4
ಇರು ಬಿಡು
ಕೇಳು ಬೆಳೆಯಲಿ
ಕನಸಾಗುತ್ತದೆ ಕಾಯುತ್ತಿರು
ಕಾಲ ನಿಲ್ಲುತ್ತದೆ ಹಳಸಿವೆ
ತಿದ್ದು ಆಗಾಗ
ಯೌವನ ಇನ್ನೂ ಕೇಳಿರದ ಹಾಡು
ಪಾಠ ಬಿಗಿಯಾದ ಬಳೆ
ಒಡೆದ ಕನಸು ಚಂಬುಕಗಾಳಿ
ಈ ಮರ ನನ್ನ ಹುಡುಗ ಬಸವ
ಊರ್ಧ್ವರೇತಸ್ !
ಟಿಕೇಟು ಹಚ್ಚು ಸುಳ್ಳು ದೇವಕಿ
ನೀರು ಅಚ್ಚರಿ ಅರಮನೆ ವಿಸ್ಮಯ
ಕಾವ್ಯ ಬದುಕು ಕವಿತೆಯ ಸಾಲುಗಳು
ಸೇತುವೆ ಬೇಡ
ಮೆಟ್ಟಿಲುಗಳು ತಲಪುವುದಿಲ್ಲ ಕವಿತೆ
ಇವರು ಬರೆ ಮಿಗಿಲು
ಹೂ ಚಿಂತೆ ತಂಪು ಇದು
ಶ್ರದ್ಧಾಂಜಲಿ ಸಾಹಿತ್ಯ ಮತ್ತು ಧರ್ಮ
ವಿಷಕನ್ಯೆ ಕಷ್ಟ ಹಾವು.

5
ಬಾಗಿಲು ಕತ್ತಲು ಅವರು ಇವನು
ಬುದ್ಧನಾಗುವುದೆಂದರೆ ಮಾತಾಡು
ಯಾರವರು ಬಿಡುವುದಿಲ್ಲ ಮಳೆಯಾಗುತಿದೆ
ಕೊಡು ಬಿಡು ಹಸುಗೂಸು
ಯುದ್ಧ ಕವಿತೆ ಕರೆಬೇಕು
ಬಳ್ಳಿ ಜ್ವಾಲಾಮುಖಿ
ಅವರು ಇನ್ನಾದರೂ ಪಂಜರ
ಬುದ್ಧನಾಗುವ ದಾರಿಯಲ್ಲಿ ಭಯ
ತಾವರೆ ಕಿಶೋರಿ
ಪರ್ಯಾಯ ಬದಲಾಗಿದೆ
ಹೊಸರೈಲು ಹಾದಿ
ಹಾದಿ ಮೀರಬೇಕು ಭೂತ
ಅನೂಹ್ಯಲೋಕ ಮಳೆ ನಿಲ್ಲುವವರೆಗೆ
ಎಸ್ಸೆಮ್ಮೆಸ್ ಕವಿತೆ ಇವು
ಬರುತ್ತಾನೆ, ಬೇಕಿತ್ತು ಅರಿವು.

6
ದ್ರೌಪದಿ ! ಸೀತಾ ! ಮೀರಾಬಾಯಿ ಹಾಡುತ್ತಾಳೆ
ಕಮಲಾದಾಸರ ಕವಿತೆಗಳು
ಸತ್ತು ಹೋದ ಮಗುವಿಗೊಂದು ಪಿಸುಮಾತು
ನಾವು ಕಡುಪಾಪಿ ಹೆಣ್ಣುಗಳು
ಈ ಹುಲ್ಲು ನನ್ನಂತೆಯೇ ಗಡಿಯಾರ
ಹಿಂದಕ್ಕೆ ತಿರುಗಿದಂತೆ ನನಗೆ ನಾನೇ ಹೇಳಿಕೊಂಡೆ.

7
ಮುಕ್ತಿ ಕ್ರತ್ತಿಕಾ ಮೆಟ್ಟಿಲುಗಳು
ಅಕ್ಕನ ಚನ್ನಮಲ್ಲಿಕಾರ್ಜುನ ಅಲ್ಪಾಯು ಬಸವ
ಕಿಂಡಿಯೊಳಗೊಂದು ಸತ್ಯ ನಿನ್ನನ್ನೆ ಕುರಿತು
ಗಾಂಧಿ ಎಂದರೆ ಎಕ್ಕುಂಡಿಯವರ ನೆನಪಿಗೆ
ಪ್ರೀತಿ ಇಲ್ಲದ ಮೇಲೆ
ಕಮಲಾ ಮೇಡಂಗೆ ಮಂದಾರದ ಮಾಲತಿಗೆ.

8
ಒಡೆದ ಹಡಗಿನಿಂದ ಒಂದು ಪ್ರಾರ್ಥನೆ
ಹರಿದ ನೋಟು ಕಟ್ಟು -ಕೆಡವು
ಮೂರನೇ ಆಯಾಮ ಕಾದಿರುವೆ ಬಾ
ವಿಕ್ರಮನಿಗೊಂದು ಪಿಸುಮಾತು
ಲೆಕ್ಕಚಾರ ಅಜ್ಞಾತವಾಸ
ನನ್ನೊಳಗೊಬ್ಬ ಬುದ್ಧನಿದ್ದಾನೆ ಸಾವಿಲ್ಲದ ಮನೆಯ ಸಾಸಿವೆ.

ಸ್ನೇಹಸೇತು ಪ್ರಕಾಶನದ ವೀರೇಶ ಬಳ್ಳಾರಿ ಡಾ.ಕೆ.ಎಂ.ನಾಗಲಕ್ಷ್ಮಿ ಪೇರಿಸಿ ಒಟ್ಟುಗೂಡಿಸಿದ ಕೊಲ್ಹಾಜ್ಹ್ ಕಲಾಕ್ರತಿ ನದಿ ಹರಿಯುತಿರಲಿ ಸಮಗ್ರ ಕಾವ್ಯ ಡಾ.ಎಸ್.ವಿ. ಪ್ರಭಾವತಿಯವರ ಮಂಜುಳ ರವದ ಜುಳುಜುಳು ನಾದದ ಕಲರವ. ಶಿರೋನಾಮೆಗಳನ್ನು ಜೋಡಿಸಿದರೆ ಥೇಟ್ ನವ್ಯೋತ್ತರದ ಇವತ್ತೀನ ಅರ್ಥದ ಶಿಲ್ಪರೂಪಕಗಳ ಧಾರಣೆ ತಾಜಾ ಕವಿತೆ ಬೆರಗಿನಿಂದ ಓದಿದರೆ ಸ್ಪುರಣವಾಗುತ್ತದೆ.

ಡಾ.ಎಸ್.ವಿ.ಪ್ರಭಾವತಿಯವರಿಗೆ ಕೇಳಿದ ಪ್ರಶ್ನಾವಳಿ ಕವಿತೆ

ಪೆಣ್ಬುಯಲ್

ಪ್ರಾಚೀನರಿಂದ ಅರ್ವಾಚೀನರವರೆಗೂ
ಪ್ರಭಾವಳಿಯ ಸಿಂಹಮುಖದಿಂದ
ಹೆಣ್ಣಿನ ಆತ್ಮಾವಲೋಕನ
ಪೆಣ್ಬುಯಲ್ ಕೇಳುತಲೇ ಇದೆ
ಅನವರತ ಅನಿವಾರ್ಯ ;

ಸಾಮಾಜಿಕ ಅಸಮಾನತೆಯಂತೆ
ಲಿಂಗಭೇದವಂತೆ
ದೌರ್ಜನ್ಯ ದಬ್ಬಾಳಿಕೆಯಂತೆ
ಆತ್ಯಾಚಾರಗಳಂತೆ
ವರದಕ್ಷಿಣೆ ಪಿಡುಗಂತೆ
ಗಂಡನ ಮನೆಯ ಕಿರುಕುಳಗಳಂತೆ
ಬಾಲ್ಯ ವಿವಾಹವಂತೆ
ವಿಧವೆಯರ ಸಮಸ್ಯೆಗಳಂತೆ
ಭ್ರೂಣ ಹತ್ಯೆಗಳಂತೆ
ನಿರ್ಬಂಧದ ಅಸ್ಪ್ರಶ್ಯತೆಯಂತೆ
ಈ ಬಿಕ್ಕಟ್ಟುಗಳ ನಿರ್ವಹಣೆ
ಕನ್ನಡ ಕಾವ್ಯ ಮಾಡಿದೆಯೇ ?
ಸ್ತ್ರೀ ಶಾಸ್ತ್ರವೋ
ಸಮಾಜ ಶಾಸ್ತ್ರವೋ
ಮನಶಾಸ್ತ್ರವೋ
ರಾಜಕೀಯ ಶಾಸ್ತ್ರವೋ ಮಾಡಿದೆಯೇ ?
ಎಂದು ಕೇಳಿಕೊಂಡರೆ
ಉತ್ತರ ಇಲ್ಲವೆಂದೆ ಹೊರಡುತ್ತದೆ ;

ಏಕೆ ಹೀಗೆಂದರೇ
ಸ್ತ್ರೀ ಸ್ವಾತಂತ್ಯ್ರವಿದ್ದರೂ
ಸಾಮಾಜಿಕ ಸ್ಥಿತ್ಯಂತರ ಮೌಢ್ಯಗಳ
ಬದಲಾವಣೆಯಾಗದ ಹೊರತು
ನಾವು ಏನು ಮಾಡಲಾಗದು
ಎಂದರು ;

ನಮ್ಮದೇನಿದ್ದರೂ ಪ್ರಾಥಮಿಕ
ಘಟನೆಗಳ ದ್ವಿತೀಯ ಅನುಭವಗಳಾಗಿ
ಪ್ರತಿಭೆಯಲ್ಲಿ ಮೂಡಿಸುವುದೇ ಆಗಿದೆ
ನಡೆದು ಹೋದ ಘಟನೆಗಳಿಗೆ
ಧ್ವನಿಯಾಗಿದೆವಷ್ಟೇ ಎಂದರು.!

ಚೆನ್ನಾಗಿದೆ ಎಂದರು. !

-ಸಂತೋಷ್ ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x