ಪ್ರೇಮಗಂಗೆ: ಪದ್ಮಜಾ. ಜ. ಉಮರ್ಜಿ

“ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಒಳ್ಳೆಯದನ್ನ ಬಯಸಿ, ಸಾಧ್ಯವಾದಷ್ಟು ಒಳ್ಳೆಯದನ್ನ ಮಾಡಿ, ಯಾಕೆಂದರೆ ಹೂವ ಮಾರುವವರ ಕೈಯಲ್ಲಿ ಯಾವಾಗಲೂ ಸುವಾಸನೆಯಿರುತ್ತದೆ.” ಈ ವಾಕ್ಯ ಓದುತ್ತಿರುವ ವೈಷ್ಣವಿಯ ಮನಸ್ಸು ಪಕ್ವತೆಯಿಂದ ತಲೆದೂಗಿತ್ತು. ತನ್ನ ಮತ್ತು ಪತಿ ವಿಭವರ ಬದುಕಿನ ಗುರಿಯೂ ಕೂಡಾ ಎಲ್ಲರಿಗೂ ಒಳ್ಳೆಯದನ್ನು ಬಯಸುವುದು. ಮತ್ತು ಒಳ್ಳೆಯದನ್ನು ಮಾಡುವುದು. ಆದರೂ ಬದುಕೆಂಬುದು ಒಂದು ವೈಚಿತ್ರದ ತಿರುವು. ಹಾಗೆ ನೋಡಿದರೆ ಬದುಕೇ ಬದಲಾವಣೆಗಳ ಸಂಕೋಲೆ. ಮನಸ್ಸು ಸವೆಸಿದ ಹಾದಿಯ ಕುರುಹುಗಳನ್ನು ಪರಿಶೀಲಿಸತೊಡಗಿತ್ತು.

ತಾಯಿ ಸಂಧ್ಯಾ ಮತ್ತು ತಂದೆ ಸುಂದರರಾಯರ ಸುಮಧುರ ದಾಂಪತ್ಯದ ಫಲವಾಗಿ ಅರಳಿದವಳೇ ವೈಷ್ಣವಿ. ತಾನು ಜೀವನದಲ್ಲಿ ವಿದ್ವಾನಳಾಗಬೇಕು. ಮನುಷ್ಯಜನ್ಮದಲ್ಲಿ ಹುಟ್ಟಿದ ಮೇಲೆ ಸಹಜವಾದುದನ್ನು ತೊರೆದು ಅಸಾಮಾನ್ಯವಾದ ಸಾಧನೆಯನ್ನು ಮಾಡಬೇಕು ಎಂದು ಸದಾ ಯೋಚಿಸುತ್ತಿದ್ದಳು. ಆದರೆ ಮಾನವನ ಲೆಕ್ಕಾಚಾರ ಒಂದಾದರೆ ದೈವದ ಲೆಕ್ಕಾಚಾರವೇ ಮತ್ತೊಂದು. “ಹಣೆಯಕ್ಕಿ ಕೂಡಿಬಂದರೆ ಹಡೆದವ್ವನನ್ನು ಕೇಳದು” ಎಂಬಂತೆ ವೈಷ್ಣವಿಯ ಸದ್ಗುಣಗಳ ಹತ್ತಿರದಿಂದ ನೋಡಿದವರೊಬ್ಬರು ಮದುವೆಯ ಪ್ರಸ್ತಾವನೆಯನ್ನು ತಂದೇಬಿಟ್ಟರು. ಕೇವಲ ಇನ್ನೂ ಹದಿನೆಂಟು ವರ್ಷ. ಮದುವೆಯ ಕುರಿತು ನಂತರದ ಜವಾಬ್ದಾರಿಯ ಬಗೆಗೆ ಕಿಂಚಿತ್ತೂ ಪರಿಕಲ್ಪನೆಯನ್ನೂ ಹೊಂದಿರದ ವೈಷ್ಣವಿ ವಿಜಯನೊಂದಿಗೆ ಸಪ್ತಪದಿ ತುಳಿದಳು. “ಕೂಡಿದ ವರುಷಗಳು ಎಷ್ಟಾದರೇನು, ಕೊನೆಗೂ ಮಾಸದ ಅನುಬಂಧ ಇದ್ದರೆ ಸಾಕೆನು, ಕೈಹಿಡಿದ ದಿನವ ನೆನೆಯಲು ದಿನ ಬೇಕೆನು, ಕೈಹಿಡಿದಾಗಲೆಲ್ಲ ಅದ ಕ್ಷಣವು ಸಾರ್ಥಕವೆನಿಸಿದರೆ ಸಾಕೆನು, ಕುಟುಂಬದ ಕುಶಲ ನಿಮ್ಮ ಈ ಬಂಧವು ಖುಷಿಯಾಗಿರಲಿ ಸೇರಿ ಎಲ್ಲರೊಳು ಈ ಸಂಬಂಧವು, ಕಾಲ ಒಡೆಯ ಮುಕ್ಕಣ್ಣನ ಆಶೀರ್ವಾದವಿರಲಿ, ಕಾಲ ಉರುಳಿದರೂ ಈ ಮಮತೆಯು ಇಬ್ಬರಲ್ಲೂ ಇರಲಿ” ಎಂದು ತಾಯಿ ಸಂಧ್ಯಾ ಮಗಳು ವೈಷ್ಣವಿಯನ್ನು ಅತ್ತೆಮೆನಗೆ ಕೀರ್ತಿ ತರಬೇಕೆಂದು ಹಾರೈಸಿ ಬಿಳ್ಕೊಟ್ಟರು.


ಹೆಣ್ಣು ನದಿಯಾಗಿ ಹರಿದು ಸಾಗರವನ್ನು ಸೇರಲೇಬೇಕು. ಅದೇ ರೀತಿ ವೈಷ್ಣವಿಯ ಜೀವನ ಹುಟ್ಟಿದ ತವರನ್ನು ತೊರೆದು, ನಿನ್ನೆಯತನಕ ಯಾರದೋ ಆಗಿದ್ದ ಮನೆಯನ್ನು ತನ್ನದೆಂದುಕೊಂಡು ತನ್ನ ಬದುಕಿನ ಪ್ರತಿ ಪುಟಗಳನ್ನೂ ತಿರುವುತೊಡಗಿದಳು. ಮಾವ ರಂಗರಾಯರು ಸೊಸೆಯನ್ನು ಮಗಳೆಂದು ಪರಿಗಣಿಸಿದರು. ತಂದೆ ಲಕ್ಷ್ಮಿಬಾಯಿ ಸ್ವಲ್ಪ ಜೋರಿನ ಸ್ವಭಾವದವರಾದರೂ ವೈಷ್ನವಿಯ ನಯ-ವಿನಯ, ಅಚ್ಚುಕಟ್ಟುತನದ ಕೆಲಸಗಳಿಗೆ ಒಲಿದು ಪ್ರೀತಿಸತೊಡಗಿದರು. ಇನ್ನು ಪತಿ ವಿಜಯನಂತೂ ತಾನಾಯಿತು, ತನ್ನ ಉದ್ಯೋಗವಾಯಿತು, ಹೆಂಡತಿ ಅವನ ಪಾಲಿಗೆ ತಂದೆ ತಾಯಿಯರಿಗೆ ಸೇವೆ ಮಾಡುತ್ತಾ ತಾನು ಮನೆಗೆ ಬಂದಾಗ ಹೊತ್ತು ಹೊತ್ತಿಗೆ ತನು ಮನದ ಹಸಿವ ನೀಗಿಸುವವಳು ಎಂದುಕೊಂಡು ಯಾಂತ್ರಿಕವಾಗಿ ಬದುಕಿದರೂ, ದಾಂಪತ್ಯಹಂದರದಲ್ಲಿ ಅರುಣ ಮತ್ತು ಅಂಬುಜಾ ಎಂಬ ಎರಡು ಹೂವುಗಳು ಅರಳಿದವು. ಎಲ್ಲ ಸುಖಕ್ಕಿಂತ ಮಾತೃತ್ವದ ಸುಖ ಅಪರಿಮಿತವಾದುದು ಎಂಬುದನ್ನು ಸ್ವತ: ಅನುಭವಿಸಿದಳು ವೈಷ್ಣವಿ. ಪ್ರೀತಿ ವಾತ್ಸಲ್ಯಗಳನ್ನು ಧಾರೆಯೆರೆದು, ಮಮತೆ ಸಂಸ್ಕಾರ ಸಂಸ್ಕೃತಿಗಳನ್ನು ಉಣಬಡಿಸಿ ಆದರ್ಶ ತಾಯಿಯೆನಿಸಿಕೊಂಡಳು.

ತನ್ನದೇ ಆದ ಪ್ರಪಂಚದಲ್ಲಿ ಒಳ್ಳೆಯದನ್ನು ಮಾಡುತ್ತಾ ಕಾಲಚಕ್ರದೊಂದಿಗೆ ಸಾಗಿದಳು. ಗಂಡ ವಿಜಯನ ಯಾವ ಕೆಲಸಕ್ಕೂ ಅಡ್ಡಿಯಾಗದಂತೆ ತನ್ನ ಪಾಡಿಗೆ ತಾನು ಸಂಸಾರವನ್ನು ಸಾಗಿಸಿಕೊಂಡು ಹೋಗುತ್ತಿದ್ದಳು. ಆದರೆ ನಮಗೆ ಎಲ್ಲವನ್ನು ಅರ್ಥಮಾಡಿಸುವವರು ಸಿಗುತ್ತಾರೆಯೇ ವಿನ: ನಮ್ಮನ್ನು ಅರ್ಥಮಾಡಿಕೊಳ್ಳುವವರು ಸಿಗುವುದು ವಿರಳ. ಅರುಣ ಅಂಬುಜಾರೂ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟರು. ನೋಡನೋಡುವುದರಲ್ಲೇ ಪುರುಸೊತ್ತಿಲ್ಲದಂತೆ ಓಡಿದ ದಿನಗಳು ೨೫ ವಸಂತಗಳನ್ನು ದಾಟುವಾಗ, ವೈಷ್ಣವಿ ತನ್ನ ಬದುಕು ಕೊಟ್ಟಿದ್ದರಲ್ಲಿ ಅತ್ಯಂತ ತೃಪ್ತಿಯನ್ನು ಹೊಂದಿದ್ದಳು. ಆದರೆ ವಿಜನ ತನ್ನ ಬಳಿ ಇರುವುದರಲ್ಲಿ ತೃಪ್ತಿಯನ್ನು ಕಂಡುಕೊಳ್ಳದವನಿಗೆ ತಾನೇನು ಪಡೆಯಬೇಕೆಂದು ಬಯಸುವನೋ ಅದರಲ್ಲೂ ತೃಪ್ತಿ ಸಿಗಲಾರದು ಎಂಬ ಸಾಕ್ರೆಟಿಸ್ ನುಡಿಯಂತೆ ತನ್ನ ಆಫೀಸಿನಲ್ಲಿಯೇ
ಕೆಲಸಕ್ಕೆ ಸೇರಿದ ಮಾಯಾಳಲ್ಲಿ ಅನುರಕ್ತನಾಗಿ ವೈಷ್ಣವಿಯನ್ನು ಕ್ರಮೇಣ ದೂರವಾಗಿಸತೊಡಗಿದ.


೨೫ನೇ ವಿವಾಹ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮತ್ತೊಮ್ಮೆ ಮದುವೆಯಾದಂತೆ ಹವನ ಹೋಮಗಳು ನಡೆದವು. “ನಲ್ಮೆಯ ಜೊತೆಗೆ ಸಪ್ತಪದಿ ತುಳಿದು, ಸಪ್ತವರುಷಗಳೇ ಕಳೆದ ಸಂತಸ, ಸುಖದು:ಖ ಸವಿದು ಸಾಗುತಿಹದಉ ನೌಕೆ ಸಂಸಾರಸಾಗರದಲಿ. . ಬಿರುಗಾಳಿಗೆ ಸಿಲುಕದೆ, ಹೋಯ್ದಾಡದೆ ಮುನ್ನಡೆಸು ದೇವ ಎಂದು ಪ್ರಾರ್ಥಿಸಿದ ವೈಷ್ನವಿ ವಿಜಯನೆಡೆಗೆ ತಿರುಗಿದಾಗ ಅವನ ದೃಷ್ಟಿ ಮಾಯಾಳ ಮೇಲಿರುವುದನ್ನು ಕಂಡು ಕಂಗೆಟ್ಟಳು. ಅವರಿಬ್ಬರ ಪ್ರೀತಿಯಿಂದ ಎರಡು ಕುಟುಂಬಗಳು ನಾಲ್ಕು ಜೀವಗಳು ಹಾಳಾಗುತ್ತವೆ ಎಂದು ಗೊತ್ತಾದರೂ ಮೌನವಹಿಸಿದಳು. ಮಾಯಾ ತನ್ನ ಗಂಡ ಮೋಹನನ್ನು ಬಿಟ್ಟು ವಿಜಯನೆಡೆಗೆ ಆಕರ್ಷಿತಳಾಗಿದ್ದು ಏಕೆಂಬುದೇ ಅರ್ಥವಾಗದಾಯಿತು ವೈಷ್ಣವಿಗೆ. ಜೀವನದ ಎಲ್ಲಾ ಆಸೆಗಳಿಗೆ ಮುಖ್ಯ ಕಾರಣ ಬದುಕಿನ ಕೊನೆಯ ಕ್ಷಣ ತಿಳಿಯದೇ ಇರುವುದೇ ಅಲ್ಲವೇ?”ಮನುಷ್ಯನಿಗೆ ಹೆಚ್ಚು ಅಮೂಲ್ಯವಾದುದು ಮನಸ್ಸು, ಕ್ರೋಧಕ್ಕಿಂತ ಹೆಚ್ಚು ಅಮೂಲ್ಯವಾದುದು ಚಿಂತನೆ, ಸ್ವಾರ್ಥಕ್ಕಿಂತ ಮೌಲ್ಯವಾದುದು ತ್ಯಾಗ, ಎಲ್ಲಕ್ಕಿಂತ ಅಮೂಲ್ಯವಾದುದು ನಂಬಿಕೆ. ಗಂಡ – ಹೆಂಡತಿಯ ಮಧ್ಯೆ ಸೇತುವೆಯಾಗಿರುವ ನಂಬಿಕೆಯೇ ಕಳಚಿದ ಮೇಲೇ ದಾಂಪತ್ಯಕ್ಕೆ ಅರ್ಥವಾದರೂ ಏನಿದೆ. ಮಾಯಾ ಮೋಹನನಿಂದ, ವಿಜಯ ವೈಷ್ಣವಿಯಿಂದ ವಿವಾಹ ವಿಚ್ಚೇದನ ಪಡೆದುಕೊಂಡು ಮರುಮದುವೆಯಾದರು.

ವೈಷ್ಣವಿಯ ಮಾವ ರಂಗರಾಯರು ತಮ್ಮ ಪಾಲಿನ ಆಸ್ತಿಯ ಒಂದು ಭಾಗವನ್ನು ಸೊಸೆಯ ಹೆಸರಿಗೆ ಬರೆದುಕೊಟ್ಟು ತಮ್ಮ ಮನೆಯಲ್ಲಿಯೇ ಮಗಳಾಗಿ ಇಟ್ಟುಕೊಂಡರು. ತುಂಬಾ ಸಂತೋಷದಿಂದ ಇರುವವರ ಜೀವನ ಶೈಲಿಯನ್ನು ಗಮನಿಸಿ ಅವರ ಪರಿಶ್ರಮ ಮತ್ತು ಕೆಲಸಗಳಿಂದ ಸ್ಪೂರ್ತಿಯನ್ನು ಪಡೆದುಕೊಂಡಳು ವೈಷ್ಣವಿ. ಒಂದು ಶಿಲೆ ಶಿಲ್ಪವಾಗಬೇಕಾದರೆ ಅದಕ್ಕೆ ಉಳಿಪೆಟ್ಟುಗಳು ಬೇಕೇ ಬೇಕು. ಅದೇ ರೀತಿ ಒಂದು ವ್ಯಕ್ತಿ ಶಕ್ತಿಯಾಗಬೇಕಾದರೆ ಅನೇಕ ರೀತಿಯ ಪರೀಕ್ಷೆಗಳು ಬರುತ್ತವೆ. ಸೀತಾಮಾತೆ, ದ್ರೌಪದಿಯಂತಹ ದೇವತೆಗಳಿಗೆ ವನವಾಸ, ಕಷ್ಟಗಳು ತಪ್ಪಿಲ್ಲ. ಅಂತಹದರಲ್ಲಿ ತನ್ನಂತಹ ಸಾಮಾನ್ಯಳಿಗೆ ಇದೊಂದು ದೊಡ್ಡ ಸಮಸ್ಯೆಯೇ ಅಲ್ಲ ಎಂದು ಯೋಚಿಸುತ್ತಿದ್ದಳು ಸಮಸ್ಯೆಯನ್ನು ಕೊಟ್ಟ ಪರಮಾತ್ಮನಿಗೆ ಅದನ್ನು ಸಹಿಸುವ ಶಕ್ತಿಯನ್ನು ಕೊಡು ಎಂದು ಬೇಡಿಕೊಳ್ಳುತ್ತಿದ್ದಳು.


ವೈಷ್ಣವಿ ತಾನೊಂದು ಉದ್ಯೋಗ ಮಾಡುತ್ತಾ, ಇರುವಾಗ ಬದುಕಿನಲ್ಲಿ ಮತ್ತೊಂದು ತಿರುವು ಎದುರಾಯಿತು. ವೈಷ್ಣವಿ ತನ್ನ ಉದ್ಯೋಗದ ನಿಮ್ಮಿತ್ತ ಸಭೆಯಲ್ಲಿ ಭಾಗವಹಿಸಿದ ಮುಖ್ಯಾಧಿಕಾರಿ ವಿಭವ ಅವಳ ಪಿಯುಸಿಯಲ್ಲಿ ಗೆಳೆಯ ಎಂದು ಪರಿಚಯಿಸಿಕೊಂಡು, ಅವಳ ಕಷ್ಟಸುಖಗಳಿಗೆ ನೆರವಾಗಲು ಅವಳನ್ನು ಸಂಧಿಸಿದ. ಆದರೆ ವೈಷ್ಣವಿ ಅವನು ಆಕಾಶ ತಾನು ಭೂಮಿ ತಮ್ಮಿಬ್ಬರ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದು ವಿಭವನಿಂದ ತಪ್ಪಿಕೊಂಡಷ್ಟು ಅವನು ಬಾಳಂಗಳಕ್ಕೆ ಕಾಲಿರಿಸತೊಡಗಿದ. “ಆಂತರಿಕ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುವ ಮೂಲಕ ಮಾತ್ರ ಬಾಹ್ಯ ಸವಾಲುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ” ಎಂದು ತನ್ನ ಸಮಸ್ಯೆಗಳನ್ನು ತಾನೇ ಎದುರಿಸಲು ಸಿದ್ಧಳಾದಳು ವೈಷ್ಣವಿ. ಯಾವುದನ್ನು ದೂರವಿರಿಸುತ್ತೇವೆಯೋ ಅದೇ ನಮ್ಮನ್ನು ನೆರಳಿನಂತೆ ಹಿಂಬಾಲಿಸುವುದು ಎಂಬಂತೆ ಬೇಡವೆಂದದ್ದು ಬದುಕಿಗೆ ಹತ್ತಿರವಾಗತೊಡಗಿತ್ತು. ತನ್ನೆಲ್ಲ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವುಗಳ ಪರಿಹಾರವನ್ನು ಮಾಡತೊಡಗಿದ ವಿಭವ. ಮಾವ ರಂಗರಾಯರ ಮತ್ತು ಅತ್ತೆ ಲಕ್ಷ್ಮಿಯವರ ಮತ್ತು ಮಕ್ಕಳಾದ ಅರುಣ ಅಂಬುಜಾ ಎಲ್ಲರಿಗೂ ಬೇಕಾದವನಾದ.

ವಿಭವ ಪರದೇಶದಲ್ಲಿದ್ದು ಸಾಕಷ್ಟು ಕೀರ್ತಿ ಸಂಪತ್ತುಗಳನ್ನು ಗಳಿಸಿದ್ದ. ನೋಡಲು ಒಳ್ಳೆಯ ಸೌಂದರ್ಯವೂ ಇತ್ತು. ತಾನು ಅವನೊಂದಿಗೆ ಎಲ್ಲೋ ಒಂದೆರೆಡು ವರ್ಷ ಶಿಕ್ಷಣ ಪೂರೈಸಿದ ಮಾತ್ರಕ್ಕೆ ಅವನ ಕೃಪೆ ತನ್ನ ಮೇಲಕ್ಕೆ ಹರಿಯುತ್ತಿದೆ “ಸಮಾಜದಲ್ಲಿ ನಮಗೆ ಉತ್ತಮ ಮಾರ್ಗದರ್ಶನ ಮಾಡುವವರ ಸಂಗ ಮಾಡಬೇಕು. ಅಂತಹ ಉತ್ತಮರು ಸಿಗದಿದ್ದರೆ ಒಂಟಿಯಾಗಿ ಇರಬೇಕು” ಎಂಬುದು ವೈಷ್ಣವಿಯ ಚಿಂತನೆ. ತನ್ನ ಸಮಸ್ಯೆಗಳೇ ತನಗೆ ಹಾಸು ಹೊದೆಯುವಷ್ಟಿರುವಾಗ ವಿಭವನ್ನಾಕೆ ತನ್ನನ್ನು ಹಿಂಬಾಲಿಸುತ್ತಿದ್ದಾನೆ. ತಾನು ಮದುವೆಯಾಗಿ ಮಕ್ಕಳಾಗಿ, ವಿವಾಹ ವಿಚ್ಛೇದನ ತೆಗೆದುಕೊಂಡು ಅತ್ತೆ-ಮಾವ ಮತ್ತು ಮಕ್ಕಳಿಗಾಗಿ ಬದುಕುತ್ತಿರುವವಳು. ಈಗ ತನಗೆ ಯಾವುದೂ ಪುನ: ಅಂದರೆ ಯಾರ ಪ್ರೀತಿ, ಅನುಕಂಪಗಳೂ ಬೇಕಾಗಿಲ್ಲ. ಮತ್ತೊಂದು ವಿವಾಹದ ಕಲ್ಪನೆಯೂ ತನ್ನ ಬದುಕಿನ ಪುಸ್ತಕದಲ್ಲಿ ಮುಚ್ಚಿಹೋದ ಪದ. ಅಂತಹದರಲ್ಲಿ ತನ್ನ ವಿಭವನ ಸಂಬಂಧಕ್ಕೆ ಯಾವ ಅರ್ಥ ನೀಡಬೇಕು ಎಂಬುದೇ ತಿಳಿಯದಂತಾಗಿ ಮಾನಸಿಕವಾಗಿ ಕ್ಷೋಭೆಗೊಳಗಾದಳು ವೈಷ್ಣವಿ. ಇದಕ್ಕೊಂದು ಅಂತಿಮ ಹಾಡಲೇಬೇಕೆಂದು ತೀರ್ಮಾನಿಸಿದಳು.


“ಹಣವಿದ್ದಾಗ ಆಲೋಚನೆಗಳು ಹಲವಾರು, ಬಡತನವಿದ್ದಾಗ ಕನಸುಗಳು ಸಾವಿರಾರು ಇಂತಹಾ ಕಾಲಚಕ್ರ ಮನುಷ್ಯನ ಮನಸ್ಸು ಮತ್ತು ಮನಸ್ಥಿತಿಯ ತಿರುಗುಣಿ” ಎಂದು ಯೋಚನೆಗೆ ಸೂಕ್ತ ಉತ್ತರವನ್ನು ನೀಡಲು ಗೆಳತಿ ವೈದೇಹಿ ಆಗಮಿಸಿದಳು. ವೈದೇಹಿ ಬಂದ ಮೇಲೆ ವಿಭವನ ಜೀವನದ ಹಲವಾರು ವಿಚಿತ್ರ ಸಂಗತಿಗಳು ತಿಳಿದುಬಂದವು. ವಿಭವ ಪರದೇಶಕ್ಕೆ ಹೋದಾಗಲೂ ತನ್ನ ಮೊದಲ ಪ್ರೀತಿಯನ್ನು ಮರೆಯಲೇ ಇಲ್ಲವಂತೆ. ಈ ಇಪ್ಪತ್ತೊಂದು ವರ್ಷಗಳ ಕಾಲವೂ ಅವನು ತನ್ನ ಪ್ರೇಯಸಿಯ ನೆನಪಲ್ಲೇ ಕಾಲಕಳೆಯುತ್ತಿದ್ದಾನೆ. ಅವನು ಇಷ್ಟು ವರ್ಷಗಳ ಪ್ರೀತಿಗೆ ಮೀಸಲಾದ ಹೆಣ್ಣು ಬೇರಾರೂ ಅಲ್ಲ ಅವಳು ತಾನೇ ಎಂದು ತಿಳಿದ ವೈದೇಹಿಯಿಂದ ತಿಳಿದ ವೈಷ್ಣವಿ ದಿಗ್ಭಾಂತಳಾದಳು. ಎಂದೋ ತಾನು ಹದಿನೇಳು – ಹದಿನೆಂಟು ವಯಸ್ಸಿನವಳಿದ್ದಾಗ ನೋಡಿದವನು ತಿರುಗಿ ತನ್ನನ್ನು ಇಷ್ಟುವರ್ಷಗಳ ಕಾಲ ನೋಡದೇ ಇಷ್ಟು ಆಳವಾಗಿ ಪ್ರೀತಿಸಲು ಸಾಧ್ಯವಾದುದಾರೂ ಹೇಗೆ? ವಿಭವನಂತಹ ಚೆಲುವ ಪರದೇಶದ ಹೆಣ್ಣುಗಳ ಆಕರ್ಷಣೆಯಿಂದ ಹೊರಗುಳಿಯುವಷ್ಟು ತನ್ನ ಮೇಲಿನ ಪ್ರೀತಿ ಆಳವಾಗಿದೆಯೇ? ತನ್ನಲ್ಲಿಯ “ಶೃಂಗಾರರಸ” ಪತಿ ವಿಜಯನ ನಡೆ-ನುಡಿ ದಬ್ಬಾಳಿಕೆಯಿಂದ ಮರೆತೇಹೋಗಿದೆ. ಇನ್ನು ಮತ್ತೇ ತನ್ನ ಬಾಳಲ್ಲಿ ವಸಂತ ಮೂಡುವನೇ? ಪ್ರಶ್ನೆಗಳು ಪುಂಗಾನುಪುಂಗವಾಗಿ ಪುಟಿದೇಳತೊಡಗಿದವು.

ಪ್ರಾಣಸ್ನೇಹಿತೆ ವೈದೇಹಿ ಅದರಲ್ಲೇನು ತಪ್ಪು? ಗಂಡಗೊಂದು ನ್ಯಾಯ, ಹೆಣ್ಣಿಗೊಂದು ನ್ಯಾಯವೇ? ಎರಡು ಮಕ್ಕಳಾದ ನಂತರ ನಿನ್ನ ಗಂಡ ವಿಜಯ ಮತ್ತೊಬ್ಬಳಿಗೆ ಮನಸೋತು ಮದುವೆಯಾಗಲಿಲ್ಲವೇ? ಅದೇ ನಿನ್ನನ್ನು ಇಷ್ಟು ವರ್ಷಗಳಿಂದ ಮನಸ್ಸಾರೆ ಪ್ರೀತಿಸುತ್ತಿರುವ ವಿಭವನನ್ನು ನೀನು ಮದುವೆಯಾದರೆ ತಪ್ಪೇನಿದೆ. ವಿಜಯನಿಗೆ ನೀನು ಹೆಸರಿಗೆ ಮಾತ್ರ ಹೆಂಡತಿಯಾಗಿದ್ದಿ ಎಂದಾದರೂ ಅವನು ನಿನ್ನನ್ನು ಅರ್ಥೈಯಿಸಿಕೊಳ್ಳುವಲ್ಲಿ ಸಫಲನಾದನೇ? ಕೇವಲ ತಾಳಿಕಟ್ಟಿದ ಮಾತ್ರಕ್ಕೆ ಹೆಂಡತಿಯೇ ? ಇಷ್ಟು ದಿನದ ನಿನ್ನ ಕಷ್ಟ ನೋವು ಸಂಕಟಗಳನ್ನು ನಿವಾರಿಸಲು ದೇವರು ನಿನ್ನ ಬಳಿಗೆ ವಿಭವನನ್ನು ಕಳುಹಿಸಿದ್ದಾನೆ. ಪ್ರೀತಿಯೆಂಬುದು ಜೇನಿನಂತೆ, ಸವಿಸವಿದಷ್ಟೂ ಅದರ ಸವಿ ಹೆಚ್ಚಾಗುತ್ತದೆಯೇ ವಿನ: ಕಡಿಮೆಯಾಗಲಾರದು. ಈಗ ನಿನಗೆ ವೈವಾಹಿಕ ಜೀವನದ ನಿಜಾರ್ಥ ತಿಳಿದಿದೆ ಸದವಕಾಶನೂ ಒದಗಿಬಂದಿದೆ ಇದನ್ನು ಒಪ್ಪಿಕೊ ಎಂದು ಒತ್ತಡ ಹೇರತೊಡಗಿದಳು ವೈಷ್ಣವಿಗೆ.


ವೈಷ್ಣವಿಗೆ ಮಾತ್ರ ಯಾಕೋ ಏನೋ ಮನಸ್ಸು ಸಂಪೂರ್ಣವಾಗಿ ಸಹಕರಿಸುತ್ತಿರಲಿಲ್ಲ. ತನಗೆ ಒಂದು ಮದುವೆಯಿಂದಲೇ ಸಾಕಷ್ಟು ಅನುಭವಿಸಿದಾಗಿದೆ. ಅಂತಹದರಲ್ಲಿ ಇನ್ನೊಂದು ಮದುವೆಯಿಂದ ತನಗೆ ಸುಖ ಸಿಗುತ್ತದೆಯೆಂಬ ಗ್ಯಾರಂಟಿಯಾದರ ಏನು? ಮೂರ್ತಿಯಾಗಲು ಬೇಕಾದ ಎಲ್ಲ ಪೆಟ್ಟುಗಳನ್ನು ಸಹಿಸಿಕೊಂಡಾಗಿದೆ. ಇನ್ನು ಕೇವಲ ತನ್ನ ಗುರಿ ಮಕ್ಕಳನ್ನು ಸರಿಯಾದ ಹಾದಿಯಲ್ಲಿ ನಡೆಸಲು ದಾರಿದೀಪವಾಗುವುದು ಮತ್ತು ತಂದೆ ತಾಯಿಯಂತಿರುವ ಅತ್ತೆಮಾವರ ಸೇವೆಮಾಡುವುದು. ಅದಕ್ಕಾಗಿ ತನಗೆ ಆರ್ಥಿಕ ಸಬಲತೆಯೂ ಬೇಕು. ಅದಕ್ಕೆ ಬೇಕಾದರೆ ವಿಭವನ ಸಹಾಯ ಪಡೆದುಕೊಳ್ಳಬಹುದು. ಗೆಳತಿ ವೈದೇಹಿಗೂ ಇದನ್ನೇ ಹೇಳಿದಳು. ವೈದೇಹಿಯ ಮಧ್ಯಸ್ಥಿಕೆಯಿಂದ ವಿಭವನ ಕಂಪನಿಯಲ್ಲಿ ವರ್ಕಿಂಗ್ ಪಾರ್ಟರ ಎಂದು ನಿಯತ್ತಿನಿಂದ ಕೆಲಸಮಾಡುವಾಗಿ ತೀರಾ ಹತ್ತಿರದಲ್ಲಿಯ ಅವನ ಸಜ್ಜನ ನಡವಳಿಕೆ, ಹೆಣ್ಣುಮಕ್ಕಳ ಬಗೆಗಿರುವ ಅಪಾರ ಗೌರವ, ಇಷ್ಟು ವರ್ಷಗಳ ಕಾಲವೂ ಮೀಸಿಲಿಟ್ಟ ಪ್ರೀತಿಯ ಹೆಣ್ಣಿಗಾಗಿ ಕಾಯುತ್ತಿರುವ ಸಹನೆ, ನಮ್ಮ ಹಿಂದೂ ಸಂಸ್ಕೃತಿಯ ಪರಂಪರೆಯ ಬಗೆಗಿರುವ ಆದರ ಇವುಗಳನ್ನೆಲ್ಲ ನೋಡುತ್ತ ನೋಡುತ್ತ ಮನಸ್ಸು ವಿಭವನನ್ನು ಅರಿವಿರದೇ ಮೆಚ್ಚತೊಡಗಿತ್ತು. ತನ್ನ ಆರ್ಥಿಕ ಸುಧಾರಣೆಯಿಂದ ಮನೆಯ ಹಣಕಾಸಿನ ಸ್ಥಿತಿಗತಿಯೂ ಸುಧಾರಣೆಯಾಗತೊಡಗಿ ಸಮಾಧಾನವಾಗಿ ಉಸಿರಾಡುವಂತಾಯಿತು ವೈಷ್ಣವಿಗೆ. ಆದರೆ ವಿಜಯ ಮಾಯಾ ಮದುವೆಯಾಗಿ ತನ್ನೆದುರೆ ಅವರಿಬ್ಬರೂ ಸರಸವಾಡಿದರೂ ಆ ಎಲ್ಲ ಭಾವನೆಗಳಿಂದ ದೂರಸರಿದ ಮನಸ್ಸು, ಈ ಮನೆಯಿಂದಲೇ ದೂರಸರಿಯಬೇಕೆಂದರೂ ಮಕ್ಕಳ ಹೊಣೆಗಾರಿಕೆ, ಮಾವನವರ ವಾತ್ಸಲ್ಯ ತನ್ನನ್ನು ಹೊರಹೋಗದಂತೆ ಕಟ್ಟಿಹಾಕಿವೆ. ಸಣ್ಣ ವಯಸ್ಸಿನಲ್ಲಿ ತಂದೆಯ ಪ್ರೀತಿಯಿಂದ ವಂಚಿತಳಾದ ತನಗೆ ಮಾವನವರೇ ಸ್ವಂತ ತಂದೆಯ ಸ್ಥಾನವನ್ನು ತುಂಬಿ, ಬದುಕಿನಲ್ಲಿ ಅಲ್ಪವಿರಾಮವಾಗಿದ್ದ ಬದುಕಿಗೆ ಪೂರ್ಣವಿರಾಮವನ್ನಿಟ್ಟಿದ್ದರು. ಆದರೆ ಈಗ ಅದೇ ಮಾವನವರೇ ಮಗ ಇನ್ನೊಬ್ಬಳಿಗೆ ಒಲಿದು ಮದುವೆ ಮಾಡಿಕೊಂಡು ಮನೆಗೆ ಕರೆತಂದಾಗಲೂ ತನ್ನ ಮೇಲಿನ ವಾತ್ಸಲ್ಲಯವನ್ನು ಇನ್ನೂ ಹೆಚ್ಚಿಸಿಕೊಂಡಿದ್ದರು. ಹೀಗಾಗಿ ವಿಭವ ತನ್ನನ್ನು ಪ್ರೀತಿಸುತ್ತಾನೆಂದರೆ ಅವರೆಂದೂ ತಪ್ಪು ತಿಳಿದುಕೊಳ್ಳದೇ ದೇವರು ಇಷ್ಟು ದಿನ ನೀನು ಕಷ್ಟಪಟ್ಟಿದ್ದನ್ನು ನೋಡಲಾರದೇ


ಇನ್ನಾದರೂ ಬಾಳಿನಲ್ಲಿ ನೀನು ಸುಖಪಡು ಎಂದು ವಿಭವನನ್ನು ಕಳುಹಿಸಿದ್ದಾನೆ. ಒಪ್ಪಿಕೊ ಎಂದು ಅವರು ವ್ಯತ್ಯಾಯಿಸತೊಡಗಿದರು. ಅತ್ತೆ ಲಕ್ಷ್ಮಿಯವರು ಮಾತ್ರ ಮದುವೆಯೆಂಬುದು ಜೀವನದಲ್ಲಿ ಒಂದೇ ಬಾರಿ. ಎರಡು ಮೂರು ಎಂದು ಆದರೆ ಅದಕ್ಕೆ ಅರ್ಥವಾದರೂ ಏನು ಎಂದು ಹಂಗಿಸುತ್ತಿದ್ದರು. ಅತ್ತೆಯವರ ದೃಷ್ಟಿಯಲ್ಲಿ ಗಂಡಿಗೊಂದು ನ್ಯಾಯ, ಹೆಣ್ಣಿಗೊಂದು ನ್ಯಾಯ. ತನ್ನ ಮಗ ಏನೇ ಮಾಡಿದರೂ ಅದು ಅವರ ದೃಷ್ಟಿಯಲ್ಲಿ ಸರಿ. ಅದೇ ಸೊಸೆ ಏನೇ ಮಾಡಿದರೂ ಅದು ತಪ್ಪು. ಇಂತಹ ದ್ವಂದ್ವರೀತಿಯ ವಿಚಾರಧಾರಿಗಳಿಗೆ ಕೈಮುಗಿದು ಸುಮ್ಮನಿರುವುದೇ ಸಮಂಜಸವೆಂದುಕೊಂಡಳು ಮೌನಧಾರಣಿಯಾದಳು ವೈಷ್ಣವಿ. ಮಗ ಅರುಣ ಮಾತ್ರ ಅಮ್ಮಾ ಪೇಮವೆಂಬುದು ಪವಿತ್ರವಾದುದು, ಅದು ಯಾರಿಂದಲೂ ಎನ್ನನ್ನು ಬಯಸದೇ ಪ್ರೀತಿಸುವ ಜೀವ ಸಿಗುವುದು ಅತೀ ಅಪರೂಪ. ರಾಧಾ ಕೃಷ್ಣರ ಪ್ರೀತಿಯಂತೆ ವಿಭವ ನಿಮ್ಮನ್ನು ಮನಸ್ಸಾರೆ ಪ್ರೀತಿಸಿದ್ದಾರೆ. ಅದರಲ್ಲಿ ಯಾವುದೊಂದು ಕಲ್ಮಷವೂ ಇಲ್ಲಾ. ನಾವೇನು ಈಗ ತೀರಾ ಚಿಕ್ಕಮಕ್ಕಳಲ್ಲ. ಏನಾದರೂ ಅವಶ್ಯಕತೆ ಬಿದ್ದರೆ ನಿಮ್ಮ ಮಾರ್ಗದರ್ಶನ ಇದ್ದೇ ಇದೆಯಲ್ಲಾ ! ನಿಮ್ಮ ಬಾಳ ಬೆಳಗಲು ಬಂದ ಭಾಸ್ಕರನನ್ನು ದೂರೀಕರಿಸಬೇಡಿ. ಎಲ್ಲರಿಗೂ ಇಂತಹ ಒಳ್ಳೆಯ ಅವಕಾಶ ಸಿಗುವುದಿಲ್ಲ ದಯವಿಟ್ಟು ಇಷ್ಟು ದಿನ ತುಳಿದ ಮುಳ್ಳಿನ ಹಾದಿಯನ್ನು ಮರೆತು ಹೂಹಾಸಿಗೆಯನ್ನು ಹಾಸಲು ಬಂದ ವಿಭವನನ್ನು ಮನಸ್ಸಾರೆ ಒಪ್ಪಿಕೊಂಡು ಬಿಡಿ, ತಂಗಿ ಅಂಬುಜಾಳ ಜವಾಬ್ದಾರಿ ನನಗಿರಲಿ ಎಂದು ಪ್ರಬುದ್ಧತೆಯಿಂದ ಮಾತನಾಡುವ ಅರುಣ ಕಂಡಾಗ, ಅವನು ಮಗನಾಗಿ ಕಾಣಲಿಲ್ಲ. ಬದಲಾಗಿ ಹಿತಚಿಂತಕನಂತೆ ಕಂಡ. ಇಷ್ಟೆಲ್ಲದರ ಮಧ್ಯೆಯೂ ವಿಭವನು ಕೂಡಾ ತನ್ನ ಒಪ್ಪಿಗೆಗಾಗಿ ಜಾತಕಪಕ್ಷಿಯಂತೆ ಕಾಯುತ್ತಿದ್ದ. ದೇವರ ಸಂಕಲ್ಪವೇ ತನ್ನ ಮತ್ತು ವಿಭವನ ಸಂಬಂಧವನ್ನು ಬೆಸೆಯುವುದಾಗಿರುವಾಗ ಇನ್ನು ಯೋಚಿಸಲು ಏನೂ ಉಳಿದಿಲ್ಲ. “ಪ್ರೇಮಗಂಗೆ” ಯಂತೆ ತನ್ನತ್ತ ಅನವರತವೂ ಹರಿಯುತ್ತಿರುವ ವಿಭವನ ಪ್ರೀತಿಯನ್ನು ಅಂಗೀಕರಿಸಲೇಬೇಕು. ಮೊದಲ ಮದುವೆ ತನಗೆ ಏನೂ ಅರಿವಿರದ ವಯಸ್ಸಿನಲ್ಲಿ ನಡೆದುಹೋಯಿತು. ಆದರೆ ಈ ಎರಡನೇ ಮದುವೆ ಎಲ್ಲ ಅರಿತೂ ಸಪ್ತಪದಿ ತುಳಿಯುವದಾಗಿದೆ. ದೂರದಲ್ಲೆಲ್ಲೋ “ಮದುವೆಯ ಈ ಬಂಧ, ಅನುರಾಗದ ಅನುಬಂಧ” ಹಾಡು ಕೇಳಿಬಂದು ಪ್ರೇಮಗಂಗೆ ತನ್ನ ಪಾವಿತ್ರ್ಯತೆಯಿಂದ ಜಯಿಸಿದಳು.

-ಪದ್ಮಜಾ. ಜ. ಉಮರ್ಜಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x