ಇವಳೊಂದು ರಾಕ್ಷಸಿ
೧
ಕಟ್ಟಿ ಕಾಯುವವರಿಲ್ಲವೇ ಇವಳ
ಮುರಿದ ಮೂರ್ತಿಗಳು
ಹರಿದ ಕನಸುಗಳ ತಿಂದು, ಒಡೆದ ಮನಸುಗಳ
ನಿಂದೆ ಅಪಮಾನ
ಭಯ ಶೋಕಗಳ
ಕುಡಿಕುಡಿದೂ ಎಂದೆಂದೂ ಮುಗಿದಂತಿಲ್ಲ
ಇವಳ ಹಸಿವು ದಾಹ
ಬಡವರ ಅಂಗೈ ಬೆಂಕಿಯವಳು
ಇಂದ್ರ ಸಭೆಯ ನರ್ತಕಿ ಆಹಾ!
ಕೋಮಲೆಯಂದೆವಳ ಮುಟ್ಟೀರಿ ಜೋಕೆ
ತಲ್ಗೇರಿದಂತೆ ಸುರೆ
ಮಿಂಚು ಹೊಡೆದಂತೆ ಅರೆಘಳಿಗೆ
ಮುಂದೊಂದು ವರುಷ ಕವಿ ದೇವದಾಸ
ಕ್ಷಣ ಚಿತ್ತ – ಕ್ಷಣ ಅಸ್ವಸ್ಥ!
೨
ತುಂಬಿದ ಕಣ್ ರೆಪ್ಪೆಗಳು, ಒಣಗಿ ಬಣಗುಡುವ ಭಾವದೆದೆ
ಅನ್ಯಾಯವಾಗಿ ಅಗಲಿದ ಕ್ರೌಂಚ ಪಕ್ಷಿಗಳು
ಈಗ ಹುಟ್ಟಿ ಸತ್ತ ಶಿಶುವು
ಟೀಪಾಯ್ ಮೇಲಿನ ಸಿಂಗಲ್ ಟೀ ಕಪ್ಪು
ಹೈವೇ ಮೇಲೆ ಸುಟ್ಟು ತಿಂದ ಬಣ್ಣದ ನವಿಲಿನ ರೆಕ್ಕೆ ಪುಕ್ಕಗಳ
ಒಟ್ಟೂ ಹಿಡಿದು ಚಿತ್ರ ಬರೆಯುತ್ತಾಳೆ
ಇವಳ ನೇರ ನೋಟಕ್ಕೆ ನೀರಾದ
ಓದುಗರಿಗೆ ಮಾತ್ರವೇ ಉಂಟು
ಚಳಿರಾತ್ರಿಯಲ್ಲಿ ಬೆಂಕಿ ಕಾಯಿಸುವ ಸುಖ
ಇವಳ ಕಸುವಿಗೆ ಕಲ್ಲಿದ್ದಲಾದರೆ ಮಾತ್ರವೇ
ಕವಿಗೆ ಹಾರ ಪದಕ ಪೇಟ
ಎಲ್ಲ ತೋಳು ತೆರೆದಪ್ಪಿ ವೇದಿಕೆ ಇಳಿದು ಉಳಿದ ಕವಿ
ಮನೆಗೋಗುವ ಹಾದಿಯಲ್ಲಿ
ಇನ್ನೇನು ಗೇಟು ತೆಗೆದೋಗಲು ಅನುವಾದೊಡನೆ
ಎದರು ಮನೆ ಬಾಲ್ಕನಿಯ ಪರದೇ ಹಿಂದಿನ
ಜೋಡಿಕಣ್ಣ್ ಭಾಷೆಯಾಗಿ ಉರಿಸ ತೊಡಗಿದ್ದಾಳೆ
ಕಾಡಿಗೆ-ಕಣ್ಣೇ ಕಾಳ್ಗಿಚ್ಚಾಗಿ
ಸಂತೃಪ್ತಿಯೊಂದು ಬದುಕೇ?
ನೋವೆಂಬುದು ಸಾವೇ?
ಕೇಳಿ-ಕೆಣಕುತ್ತಾಳೆ—
ಯಾರೆಂದರು ಇವಳು ಪದ್ಯವೆಂದು
ಇದೊಂದು ಬೆಂಕೀಕಲ್ಲಿನ ರಾಕ್ಷಸಿ!
-ಡಾ. ರಶ್ಮಿ ಕಬ್ಬಗಾರ (ತಲಘಟ್ಟ ಪುರ)
ಎ(ಹ)ಳೆಯ ಪ್ರೀತಿ
ವಯಸ್ಸು ಹದಿನೈದು ದಾಟಿರಲಿಲ್ಲ
ಏನೋ ಕಳಕೊಂಡವನಂತಿರುತಿದ್ದ
ಎದುರುಗೊಂಡರೆ ಏನೋ ಸಿಕ್ಕಿತೆಂಬಷ್ಟು ಖುಷಿಯಾಗುತಿದ್ದ
ತಗ್ಗಿಸಿದ ತಲೆಯ ಮರೆಯಲ್ಲಿ ಕಣ್ಣು ಮುಂದಕ್ಕೆ ಚಾಚುತಿದ್ದ
ಬೆರಗುಗಣ್ಣಿನಿಂದ ನೋಡುತಿದ್ದ
ವಯಸ್ಸು ಇಪ್ಪತ್ತು ದಾಟಿರಲಿಲ್ಲ
ಏನೋ ಚಿಂತಿಸುತ್ತಲೇ ಇರುತಿದ್ದ
ಕೂಗಿದರೆ ಕಣ್ಣೊರಳಿಸಿ ತುಟಿಯರಳಸಿ ಕಾಲು ಕೀಳುತಿದ್ದ
ಕಾರಣ ಹುಡುಕುವ ಪ್ರಯತ್ನದಲ್ಲಿ ತಿಂಗಳುಗಳನ್ನೇ ವ್ಯಯಿಸಿದ್ದೆ
ವಯಸ್ಸು ಇಪ್ಪತ್ತೈದು ದಾಟಿರಲಿಲ್ಲ
ದುತ್ತನೆ ಎದುರಾದ; ಕಣ್ಣಲ್ಲಿ ಕಣ್ಣು ನೆಟ್ಟು ಉಬ್ಬು ಹಾರಿಸಿ ಹೇಗಿದ್ದೀಯಾ? ಅಂದ
ಅವನ ಚೂಪು ನೋಟಕ್ಕೆ ಮೈಯೆಲ್ಲಾ ಕಂಪಿಸಿತು
ವರ್ಷಗಳ ಹಿಂದೆ ತಿಂಗಳುಗಳನ್ನು ವ್ಯಯಿಸಿದ್ದಕ್ಕೆ ಉತ್ತರ ಸಿಕ್ಕಿತ್ತು
ಸಮಯ ಜಾರಿತ್ತು
ನನಗಾಗಲೇ ಮದುವೆಯಾಗಿತ್ತು
–ದೇಸು ಆಲೂರು…
ಕೋಗಿಲೆ
ಓ,
ಕೋಗಿಲೆ ನೀ ಹಾಡು ಮತ್ತೆಮತ್ತೆ
ಕೇಳಲೆನ್ನ ಕಿವಿನಿಮಿರಿತು
ಕಂಗಳೆದುರು ರಂಗುಮೂಡಿತು
ಆಹಾ ಎಂತ ಮೋಡಿ
ಎಲ್ಲಿಹುದು ನಿನ್ನ ಹಾಡಿ
ಮಾಮರದ ಒಡಲಲ್ಲಿ
ಎಳೆ ಚಿಗುರ ಮೆಲ್ಲುತ್ತ
ಹಾಡುತ್ತಿರು ನೀನು
ಕೇಳುತ್ತಿರುವೆ ನಾನು
ಭಾಸ್ಕರನು ನೋಡಬಯಸಿ
ಉಷೆಯನ್ನು ನಿನ್ನತ್ತ ಚಲ್ಲಿಹನು
ಏನು ನಿನ್ನ ಶಾರೀರ
ಯಾರಿದರ ಸೂತ್ರದಾರ
ಸಂಗೀತ ಕಲಿತಿಲ್ಲ
ಸರಿಗಮಪದ ಅರಿವಿಲ್ಲ
ನಿನಗೆ ಸಾಟಿ ಯಾರಿಲ್ಲ
ನೀನೇ ಗುರು ನಮಗೆಲ್ಲ
-ಡಾ. ಶಿವಕುಮಾರ್ ಆರ್
ಪ್ರೇಮ ಪತ್ರ
ಪ್ರೇಮ ಪತ್ರವ ಬರೆಯುವುದೇ ಇಲ್ಲ ನೋಡಿ ಈ ಹುಡುಗಿ !
ಹಾಳು ಎಸ್ಸೆಮ್ಮೆಸ್ಸಿನಲ್ಲಿಯೇ ಪ್ರೀತಿಯ ಕೊರೆದು
ಸಂಕ್ಷೇಪಿಸಿ ಸಂಕುಚಿತವಾಗುತ್ತಾಳೆ
ಪ್ರೀತಿಯೆಂಬ ಅಚ್ಚರಿ ಕುತೂಹಲವಿಲ್ಲದ
ಅವಸರದ ಅಬ್ಬರ ವ್ಯಾಪಾರವಾಗಿಬಿಡುವ
ಪ್ರೇಮ, ಹಾದರವಾಗುವ ಭಯದಲಿ
ಕೊರಗುತ್ತೇನೆ
ಸುದೀರ್ಘ ಪ್ರೇಮ ಲೇಖನದ
ಸಾರಲೇಖವೆಂಬ I LOVE YOU
ನಿರೀಕ್ಷೆಯ ಕೆಣಕುತ್ತಲ್ಲೇ ಭಾರವಾಗುತ್ತದೆ
ಪ್ರೇಮ ಪತ್ರ ಬರೆಯುವಷ್ಟು ವ್ಯವಧನವೆಲ್ಲಿದೆ ?
ಆ ಪದಗಳ ಮಿದಿಯುವ ಯಾತನೆಯಾದರೂ ಏಲ್ಲಿ ?
ಕ್ಷೇಮ ಪತ್ರಗಳೇ ಇಲ್ಲ
ಪ್ರೇಮ ಪತ್ರಗಳ ಕಥೆ ಎಂತು
ಕಾಗದ ಬರೆಯುವುದು
ಉಂಗುರವಿಲ್ಲದ ಬೆರಳು ನೋಡಿ ಕೊರಗುವುದು
ಬಳೇ ಇಲ್ಲದೆ ಶಬ್ದಕೆ ನಾಚುವುದು
ಕರ್ಮಣಿ ಸರ ನೆನೆಯುವುದು
ಯಾವುದು ಇಲ್ಲ ಬಿಡಿ
ಹುಚ್ಚುಕೋಡಿ ಮನಸ್ಸಿನ ಭಾವನೆ
ಎಲ್ಲವೂ ಇಮೇಲ್ ಡ್ರಾಫ್ಟುಗಳೇ
ಪ್ರೇಮವು ಖಾಸಗಿ ಪ್ರಲಾಪವೇ
ಇರಬಹುದು ಆದರೆ ಅದು
ಭಾವುಕವಲ್ಲವೇ ?
ಕಾಫಿ ಡೇಯಲ್ಲಿ ಕುಳಿತು ಕಾಫಿ
ಹಿರಿದರೆ ಅದರ ಪರಿಮಳವೆಲ್ಲಿ ಬಂತು
ಪ್ರೀತಿಯಲಿ ! ಸುಮಧುರ ಯಾತನೆಯ ನರಳು ಚಡಪಡಿಕೆ ಗಸ್ತು
ಸಂಭ್ರಮಕ್ಕಿಂತ ಸಂಕಟದ ನಲುಮೆ
ಇದೆ ನಿಜವಾದ ಪ್ರೀತಿಯ ಒಲುಮೆ.
-ಸಂತೋಷ್ ಟಿ