ಕುಬೇರನ ಸಂಪತ್ತು ತೃಣಕ್ಕೆ ಸಮಾನ!: ಹರ್ಷವರ್ಧನ್ ಜಯಕುಮಾರ್

‘ಪ್ಲಾಟಿನಂ ಆಭರಣಗಳು ಬೇಕೆ ? ಬ್ರಹ್ಮಾಂಡದಲ್ಲೇ ಅತಿ ಕಡಿಮೆ ಬೆಲೆ!
ಸ್ಥಳ – 2011UW158 ಕ್ಷುದ್ರ ಗ್ರಹ! – ಒಮ್ಮೆ ಭೇಟಿ ಕೊಡಿ’
ಭವಿಷ್ಯದಲ್ಲಿ – ಹೀಗೊಂದು ಜಾಹೀರಾತು ಕಂಡರೆ ಅಚ್ಚರಿಪಡಬೇಕಿಲ್ಲ!

2011UW158 ಒಂದು ಕ್ಷುದ್ರಗ್ರಹ! Asteroid. ಅರ್ಧ ಕಿ.ಮೀ ಉದ್ದ – ಒಂದು ಕಿ.ಮೀ ಅಗಲ ಅಷ್ಟೇ! 2015ರಲ್ಲಿ ಭೂಮಿಗೆ ಸನಿಹ ಅಂದರೆ ಸುಮಾರು 25 ಲಕ್ಷ ಕಿ.ಮೀ ಅಂತರದಲ್ಲಿ ಸಾಗಿತ್ತು ಸಹ! Planetary Resources ಸಂಸ್ಥೆಯ ಪ್ರಕಾರ ಈ ಸಣ್ಣ ಕ್ಷುದ್ರಗ್ರಹದಲ್ಲಿ ಸುಮಾರು 90 ಮಿಲಿಯನ್ ಟನ್ ಅಂದರೆ 9000 ಕೋಟಿ ಕೆ.ಜಿ. ಯಷ್ಟು ಪ್ಲಾಟಿನಮ್ ನಿಕ್ಷೇಪವಿದೆಯಂತೆ!

162173 – Ryugu – ಮತ್ತೊಂದು ಕ್ಷುದ್ರಗ್ರಹ – NASA ವರದಿಯ ಪ್ರಕಾರ ಇಲ್ಲಿ 80 ಬಿಲಿಯನ್ ಡಾಲರ್ ಅಂದರೆ ಸುಮಾರು ಐದು ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಬ್ಬಿಣ ಮತ್ತು ನಿಕ್ಕೆಲ್ ಲೋಹಗಳ ಅದಿರು ಇದೆಯಂತೆ!

Nereus ಮುಖ್ಯವಾಗಿ ಕಬ್ಬಿಣ, ನಿಕ್ಕೆಲ್ ಮತ್ತು ಕೋಬಾಲ್ಟ್ ಲೋಹಗಳಿಂದ ಕೂಡಿರುವ ಕ್ಷುದ್ರಗ್ರಹ. ಇಲ್ಲಿನ ಸಂಪತ್ತು 25-30 ಸಾವಿರ ಕೋಟಿ!

16Psyche – ಬಹು ಚರ್ಚಿತವಾದ ಕ್ಷುದ್ರಗ್ರಹ. ಅಪಾರ ಪ್ರಮಾಣದ ಖನಿಜ ಸಂಪತ್ತಿನಿಂದ ಸಮೃದ್ಧವಾಗಿದೆ! ಇಲ್ಲಿರುವ ಸಂಪತ್ತಿನ ಮೌಲ್ಯ ಸರಿ ಸುಮಾರು – ಒಂದರ ಮುಂದೆ ಹತ್ತೊಂಬತ್ತು ಸೊನ್ನೆಗಳು! – ಇದು ಕೆಲವೇ ಕೆಲವು ಕ್ಷುದ್ರಗ್ರಹಗಳ ಕತೆ! ಇಂತಹ ಸಾವಿರಾರು ಧನಿಕ ಕ್ಷುದ್ರಗ್ರಹಗಳಿವೆ!

ಭೂಮಿಯಲ್ಲಿ ಕುಳಿತು ದೂರದ ಬೆಟ್ಟದಂತೆ ಚೆಂದ ಕಾಣುವ ಇವುಗಳನ್ನು ಕೇವಲ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಅಧ್ಯಯನ ಮಾಡಿ, ಸಂಪತ್ತನ್ನು ನಾವು ಅಂದಾಜಿಸುತ್ತಿದ್ದೇವೆ! ಸಂಪತ್ತಿನ ಮೌಲ್ಯ ಹಲವು ಬಾರಿ ಅತಿ ಅತಿ ಅತಿಶಯೋಕ್ತಿಯ ಸಂಖ್ಯೆಗಳು ಎಂದೆನಿಸುವುದು ಸಹಜ! ಆದರೆ ಸತ್ಯವೇ ಇಲ್ಲ ಎನ್ನಲು ಸಹ ಆಗದು!

ನಮ್ಮ ಭೂಮಿಯ ರಚನೆಯ ಸಂದರ್ಭದಲ್ಲಿ “ಕಬ್ಬಿಣದ ದುರಂತ” (Iron Catastrophe) ಎಂಬ ಅಧ್ಯಾಯವೊಂದು ಬರುವುದು. ಈ ಸಮಯದಲ್ಲಿಯೇ ಕಬ್ಬಿಣ, ನಿಕ್ಕೆಲ್ ಲೋಹಗಳು ಅತಿ ಹೆಚ್ಚಿನ ಉಷ್ಣಾಂಶದಲ್ಲಿ ಕರಗಿ ಭೂಗರ್ಭದ – ತಿರುಳಿನ ಭಾಗ (Core) ರಚನೆಯಾಯಿತಂತೆ!

ದೇಹ ಎರಡಾದರೂ ಜೀವವೊಂದೇ ಎನ್ನುವಂತೆ ಕಬ್ಬಿಣದ ಒಲವಿಗೆ ಮನಸೋತಂತೆ (Siderophiles) ಬಂಗಾರ, ಪ್ಲಾಟಿನಮ್ ಇನ್ನು ಹತ್ತು ಹಲವು ಬಗೆಯ ಲೋಹಗಳು ಕರಗಿದ ಕಬ್ಬಿಣದ ಭೂಗರ್ಭದತ್ತ ಸೆಳೆಯಲ್ಪಟ್ಟವಂತೆ!
ಇದನ್ನು ಒಪ್ಪಿದರೆ, ಇಂದು ಮೇಲ್ಪದರದಲ್ಲಿ ದೊರೆಯುವ ಬಂಗಾರ, ಬೆಳ್ಳಿ, ಪ್ಲಾಟಿನಮ್ ಇತ್ಯಾದಿ ಹಲವು ಲೋಹಗಳು ಯಾವುವು ಸಹ ಭೂಮಿಯದ್ದಲ್ಲ!

ಭೂಮಿಯ ಬಹುಪಾಲು ಖನಿಜ ಸಂಪತ್ತೆಲ್ಲಾ ಸುರಕ್ಷಿತವಾಗಿ ನೂರಾರು ಕಿ.ಮೀ. ಒಳಗೆ ಆಳದಲ್ಲಿ ತಿರುಳು / Core ಭಾಗದಲ್ಲಿದೆ! ಮನುಷ್ಯನಿಗೆ ಎಂದಿಗೂ ದೊರಕದು!

ಭೂಮಿಯ ಉಗಮಕಾಲದಲ್ಲಿ ಸೌರ ಮಂಡಲದಲ್ಲಿ ಬಹಳ ಪ್ರಕ್ಷುಬ್ಧ ವಾತಾವರಣವಿತ್ತು! ಒಂದು ಲೋಟ ನೀರಿಗೆ ಮಣ್ಣು ಹಾಕಿ ಕಲಕಿದಂತೆ! ಯಾವ ಮಣ್ಣ ಕಣ ಯಾವುದಕ್ಕೆ ಡಿಕ್ಕಿ ಹೊಡೆಯಿತೆಂದು ಹೇಳಲು ಸಾಧ್ಯವೇ? ಅಂತೆಯೇ ಆ ಸಮಯದಲ್ಲಿ ಧೂಮಕೇತುಗಳು, ಕ್ಷುದ್ರಗ್ರಹಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಛಿದ್ರಗೊಂಡಿವೆ! ಹತ್ತು ಹಲವು ಬಂದು ನಮ್ಮ ಭೂಮಿಯನ್ನೂ ನಿರ್ದಯವಾಗಿ ಅಪ್ಪಳಿಸಿವೆ!

ಅವು ತಮ್ಮೊಂದಿಗೆ ಅಂದು ತಂದಿದ್ದ ಬಂಗಾರ, ಪ್ಲಾಟಿನಮ್ ಮುಂತಾದ ಲೋಹಗಳನ್ನೇ ನಾವು ಇಂದು ಭೂಮಿಯ ಮೇಲ್ಪದರದಲ್ಲಿ ಕಾಣುತ್ತಿರುವುದು! ಬಳಸುತ್ತಿರುವುದು! ಎಂಬುದು ಒಂದು ತರ್ಕ.

ನಾಲ್ಕು ನೂರು ಕೋಟಿ ವರ್ಷಗಳ ನಂತರ ಸೌರಮಂಡಲದ ಇಂದಿನ ಸ್ಥಿತಿ ತಿಳಿಯಾಗಿದೆ. ಎಲ್ಲವೂ ಅತ್ಯಂತ ಸುವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ, ಶಿಸ್ತಿಗೆ ಒಳಪಟ್ಟಂತೆ ಗೋಚರಿಸುತ್ತಿದೆ ಅಷ್ಟೇ! ಅಂದಿನ ಹಲವು ಆಕಾಶಕಾಯಗಳ ತಿರುಳಿಣ ಭಾಗಕ್ಕೆ ಭೂಮಿಯಂತೆ ಹೊರಗೊಂದು ಕವಚ ಅಂದರೆ Crust, ಕವಚದ ಕೆಳಗೆ Mantleನ ರಕ್ಷಣೆ ಬಹುಕಾಲ ಸಿಗಲಿಲ್ಲ!

ಭೂಮಿಯಂತೆಯೇ ಶುದ್ಧ ರೂಪದ ಖನಿಜಗಳನ್ನು ಹೊಂದಿದ್ದ ಅವುಗಳ ತಿರುಳಿಣ ಭಾಗ ಬಹುಬೇಗ ತಣ್ಣಗಾಯಿತು! ಭೂಮಿ ಒಳಗಿರುವ ಉಷ್ಣದಿಂದಾಗಿ ಇನ್ನು ಜೀವಂತವಾಗಿದೆ ಆದರೆ ಈ ಕ್ಷುದ್ರಗ್ರಹಗಳಿಗೆ ಆ ಭಾಗ್ಯ ದೊರೆಯಲಿಲ್ಲ! ಡಿಕ್ಕಿಗಳು ಸಂಭವಿಸಿ ಮುಂದೆ ಇವೆ ವಿವಿಧ ಗಾತ್ರದ ಲೋಹದ ಕ್ಷುದ್ರಗ್ರಹಗಳಾದವು! ಅವುಗಳ ತಿರುಳಿನಲ್ಲಿದ್ದ ಪರಿಶುದ್ಧ ರೂಪದ ಖನಿಜಗಳು ಸುಲಭದಲ್ಲಿ ಎಟುಕುವಂತಾಯಿತು!

ಒಂದಂತೂ ಸತ್ಯ ಕ್ಷುದ್ರಗ್ರಹಗಳಲ್ಲಿ ಅಪಾರ ಖನಿಜ ಸಂಪತ್ತಿದೆ! ಅಂದು ಕ್ಷುದ್ರಗ್ರಹಗಳು ಭೂಮಿಗೆ ಲೋಹಗಳನ್ನು ತಂದಿದ್ದವು ಆದರೆ ಇಂದು ನಾವು ಅವುಗಳ ಬಳಿ ಸಂಪತ್ತನ್ನು ಬಯಸಿ ಹೋಗಬೇಕು! – ಇದುವೇ ಈ ಶತಮಾನದ ಅತ್ಯಾಕರ್ಷಕ ಶಬ್ದ – Asteroid Mining !

-ಹರ್ಷವರ್ಧನ್ ಜಯಕುಮಾರ್,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x