ʼಮಾಂಸದಂಗಡಿಯ ನವಿಲು’ ನೆನಪಿನಲ್ಲಿ
ನೀವು ಹೊರಟು ನಿಂತಿದ್ದು;
ನಡು ಮಧ್ಯಾಹ್ನ, ಕಡು ಬಿಸಿಲಲ್ಲಿ
ಹೊಲಗೇರಿಯ ಕಪ್ಪುಕಾವ್ಯ ಕಣಗಿಲೆಯರಳಿ
ಶತಮಾನದ ನೋವಿಗೆ ಮುದ್ದು ಅರಿಯುವ ಗಳಿಗೆಯಲ್ಲಿ
ಮುದಿ ಬೆಕ್ಕುಗಳು ಹುಲಿಯ ಗತ್ತಿನಲಿ
ಹಗಲು ಗಸ್ತು ತಿರುಗುವಾಗ ನೀವು ಹುಲಿ
ಯ ಗುಟುರು ಹಾಕಿದಿರಿ ಗುಟುರಷ್ಟೇ ಕೇಳಿಸಿತು;
ಕೇಳುತ್ತಿದೆ
ಹಿಮದ ಹೆಜ್ಜೆಯೂ ತೋರುತ್ತಿಲ್ಲ
ಚಿತ್ರದ ಬೆನ್ನು ಕಾಣುತ್ತಿಲ್ಲ
ಮಾಂಸದಂಗಡಿಯ ನವಿಲು ಹುಡುಕುತ್ತಿದ್ದೇನೆ
ನೀವು ಎಲ್ಲಿ? ಮಂಗಮಾಯ!
ಕೆಂಪು ದೀಪದ ಕೆಳಗೆ
ನನ್ನಕ್ಕ,ತಂಗಿಯರು ಎದೆ ಸುಟ್ಟುಕೊಂಡು
ನಲುಗುವಾಗ ನೀವು ತಾಯಿ
ಯಾಗಿ ಹೆಗಲ ಕೊಟ್ಟು, ನೋವು ಆಲಿಸಿದಿರಿ
ಹಗಲು ದೀವಟಿಗೆಯಾಗಿ ಉರಿದು,
ಉಳ್ಳವರ ಎದೆಗೊದ್ದು ಅಸಲು ಸಹಿತ ಲೆಕ್ಕ ಚುಕ್ತಾ ಕೇಳಿದಿರಿ
ನೀವು ಕಾಣದ ದಾರಿ ತುಳಿದಿರಿ
ಎದೆಯ ಚರುಮವ ಬಗೆದು
ಕಾವ್ಯ ದುಡಿಯ ಹೊಲೆದು
ಭೀಮ, ಚೋಮರ ಚರಿತೆ ಹೆಕ್ಕಿದಿರಿ
ಗಿಡಗಾಗಿ, ಹದ್ದಾಗಿ ಉಳ್ಳವರ ಸೋಗು, ಸೊಕ್ಕು ಉರಗದ ನೆತ್ತಿ ಕುಕ್ಕಿದಿರಿ
‘ಎದೆಯಾಗ ಕಾವ್ಯ ರತ್ನ’ರಾಗಿ ಜತನವಾಗಿ ಉಳಿದೀರಿ
***
ವಿಷಾದ ಗೀತೆ
ಎದೆಯ ನೋವು ಹೂಗಳ ಪೋಣಿಸಿ
ಮಾಲೆ ಕಟ್ಟಿದ್ದೇನೆ
ಸಂತೆ, ಪೇಟೆಯಲ್ಲಿ ಇಟ್ಟು
ಕೊಳ್ಳುವವರ ಮುಖ, ಮನ ಹೊತ್ತಿಗೆ
ಓದುತ್ತಲೇ ಇದ್ದೇನೆ
ಮುಟ್ಟುವವರಿಲ್ಲ, ಮುಡಿಯುವವರಿಲ್ಲ
ಬರೀ ವಿಷಾದ, ಲೊಚುಗುಟ್ಟುವಿಕೆಯ ಧ್ವನಿಗಳೊಂದಿಗೆ ಮುಂದೆ ಸಾಗುತ್ತಿದ್ದಾರೆ
ಕರುಳು ಹಿಂಡುತ್ತಿದ್ದಾರೆ
ಘಮ್ ಎನ್ನುವ ವಾಸನೆಯತ್ತಲೇ
ಎಲ್ಲರ ನೋಟ, ಕೂಟ
ಮೆಚ್ಚುಗೆಯ ಸ್ವರೋಚ್ಚಾರ, ಸ್ವೇಚ್ಛಾಚಾರ
ಮೈ, ಕೈ ಮುಟ್ಟುವ, ಮುಡಿಯುವ
ಕಣ್ಣಲೇ ಕುಚದ್ವಯಗಳ ಮರ್ಧಿಸುವ ತವಕ!
ಹಸಿರು ಎಲೆಗಳ ಮೇಲೆ ವೀರ್ಯ ಸ್ಖಲಿಸಿ
ಪುರುಷತ್ವ ಸಾಬೀತು ಪಡಿಸುವ ಕುಹಕ!
ಒಬ್ಬರಲ್ಲ, ಇಬ್ಬರಲ್ಲ ಸರತಿಯಲ್ಲಿ
ಸಾಲು, ಸಾಲಾಗಿ ನಿಂತಿದ್ದಾರೆ
ಮುದುಕ ಭೀಷ್ಮರ ಸೊಲ್ಲು
ಯಾರ ಕಿವಿಗೂ ಬೀಳುತ್ತಿಲ್ಲ
ಮುಗಿಬಿದ್ದು, ಹಿಗ್ಗಿನ ಸಗ್ಗದಲ್ಲಿ
ತೇಲುತ್ತ, ಬೀಗುತ್ತ ಅಗ್ಗದ ದಾರಿ
ತುಳಿಯುತ್ತಿದ್ದಾರೆ
ವಾಂಚೆಯ ಹಗ್ಗ ಕುಡಿಯುತ್ತಲೇ ಇದ್ದಾರೆ
ಎದೆಯ ನೋವು ಹೂಗಳ ಮಾಲೆ
ಮುಟ್ಟುವವರಿಲ್ಲ, ಮುಡಿಯುವವರಿಲ್ಲ
ಉರಿವ ಸೂರ್ಯನ ಉಪಟಳದ ಎದಿರು
ಎದೆಯ ನೋವು ಹೂಗಳ ನಿತ್ಯ ಸಾವು!!
ಅಳುವವರಿಲ್ಲ, ಹೊರುವವರಿಲ್ಲ!
***
ಕದವಿಲ್ಲದ ಊರ ಕಣ್ಣ ಮುಂದೆ
ಸುಳಿ ಉಳಿದಾಡುವ
ನವ ಗಾಳಿಯ ಮೈಯಲ್ಲಿ
ಎಂದೂ ಕಂಡೂ ಕಾಣದ ಭೂತಗನ್ನಡಿ
ಅದರಲ್ಲಿ ಕಂಡದ್ದು
ನನ್ನದೇ ನುಜ್ಜುನುಜ್ಜಾದ
ಬೋರಲು ಬಿದ್ದ ಮುಖ
ರಕ್ತಸಿಕ್ತ ಕವಡೆಗಣ್ಣು
ನೋಡಲೂ ಬೀಭತ್ಸ
ಅದಕ್ಕಂಟಿ ಅಲ್ಲಿಯೇ ಅದೇ ಧೂಳು
ಮೆತ್ತಿದ ಕನಸಿನ ಪಟ
ದಿಟ್ಪಿಸಿಯೇ ದಿಟ್ಟಿಸಿದೆ
ಎಲ್ಲಿಲ್ಲದ ದಿಗಿಲು!
ಮಂಜು ಕವಿದ ಗಾಜುಗಣ್ಣು ತಿಕ್ಕಿ
ಮತ್ತೆ ದಿಟ್ಟಿಸಿದೆ
ಯಾರೋ ಕೊಸಕ್ಕನೆ ನಕ್ಕಂತಾಗಿ
ಗುಂಡು ಹೊಡೆದಂತೆ ಸದ್ದು ಕಿವಿಗೆ
ಕತ್ತು ತಿರುವಿದೆ
ಬುದ್ಧನಲ್ಲ; ಕಾಳರಾತ್ರಿ
ಶಿವರಾತ್ರಿಯೂ ಅಲ್ಲ;
ಅಮಾಸ ಧಾತ್ರಿ
ಇನ್ನೂ ತುಸು ದೃಷ್ಟಿ ಮಗ್ಗಲು
ಹೊರಳಿಸಿದೆ
ಚರಿತ್ರೆ ಖಡ್ಗಕಂಟಿದ ಬಿಸಿನೆತ್ತರು
ತೊಟ್ಟಿಕ್ಕುವಂತೆ
ಆ ಪುಟದಿಂದ ಈ ಪುಟಕ್ಕೆ ಚಾಚಿದಂತೆ
ಮಾನವತೆ ಹೃದಯ
ಆಚೆ, ಅದರಾಚೆ ಎಲ್ಲೋ ದೂರದಲ್ಲಿ ಬಿದ್ದು
ಪುಟಿಪುಟಿದಾಡಿ ಮಣ್ಣು ಮಡಿಲ ಆಸರೆ ಬೇಡುತ್ತಿದೆ
ಅದಾರೋ ದುರುಳ
ಕೈಯಲ್ಲಿ ಗೀತೆ ಹಿಡಿದು ಮಾನವತೆ ಹೃದಯದ ಮೇಲೆ
ಮೆಟ್ಟುಗಾಲು ಇಡಲು
ಇನ್ನಿಲ್ಲದ ತರಾತುರಿಯಲ್ಲಿ ಇದ್ದಾನೆ
ಯಾಕೋ ಊರು-ಕೇರಿಯಿಂದ ಹೊಮ್ಮಿದ
‘ನಾಡ ನಡುವಿನಿಂದ ಸಿಡಿದ ನೋವಿನ ಕೂಗು’ ಕೇಳದಂತಾಗಿ
‘ಆಕಾಶದ ಅಗಲಕ್ಕೆ ನಿಂತ ಆಲ’ದ
ರೆಂಬೆ ಕೊಂಬೆಗಳೆಲ್ಲ
ಉದುರಿ ಬಿದ್ದಂತೆ ಭಾಸವಾಗಿ
ಕೆಂಪಂಗಿ ಚೆನ್ನಣ್ಣ ‘ನೀ ಹೋದ ಮೂರು ದಿನ’ ಅಂತ ಹಾಡಿದ್ದು, ದುಃಖಿಸಿದ್ದಂತೆ ಕೇಳಿಸಿದಂತಾಗಿ
ಕರಳು ಕಣ್ಣು ನೀರಾಡಿರಲು;
ನೂಕನಿಗೆ ಬಾಯಿ ಬಂದಾಗ
ನಾನೊಂದು ಮರವಾಗಿದ್ದರೆ
ಜಾಜಿ ಮಲ್ಲಿಗೆ
ಇರುವುದು ಒಂದೇ ರೊಟ್ಟಿ
ಎಲ್ಲವೂ ಕದವಿಲ್ಲದ ಊರ ಕಣ್ಣ ಮುಂದೆ
ಹಾದು ಹೋದವು
ಸುಳಿ ಸುಳಿದಾಡುವ
ನವ ಗಾಳಿಯ ಮೈಯಲ್ಲಿಯ
ಭೂತಗನ್ನಡಿ ಹೊಯ್ದಾಡುತ್ತಲೇ ಇತ್ತು
ನಾನು ಇನ್ನೂ ದಿಟ್ಟಿಸುತ್ತಲೇ ಇದ್ದೆ
ಕಾಳರಾತ್ರಿಯ ಮೂಡಲು ಮಾತ್ರ
ಹರಿಯಲೇ ಇಲ್ಲ
-ಡಾ. ಸದಾಶಿವ ದೊಡಮನಿ, ಇಲಕಲ್ಲ
ಎದೆಗೆ ಕೆಂಡಿಡುವ ಕವನಗಳು.