ನಾವು ಉಳಿದುಕೊಂಡಿದ್ದ ಹೋಟೆಲಲ್ಲಿ ಉಪಾಹಾರ ಮುಗಿಸಿ ಹೊರಗೆ ಬರುವಾಗ ರಾ ತಯಾರಾಗಿ ನಿಂತಿದ್ದ. ಸಮಯಕ್ಕೆ ಸರಿಯಾಗಿ ಅವನು ಬಂದಿದ್ದರಿಂದ ಖುಷಿಯಾಯಿತು. ಹಿಂದಿನ ದಿನದ ಹಣ ಪೂರ್ತಿ ತೆಗೆದುಕೊಂಡಿದ್ದರಿಂದ ಬರುತ್ತಾನೋ, ಇಲ್ಲವೋ ಎನ್ನುವ ಸಣ್ಣ ಅನುಮಾನವಿತ್ತು. ಕಾರು ಹತ್ತುವ ಮುನ್ನ, ಇತಿಹಾಸ್ ಪಕ್ಕದ ಶಾಪಿನಿಂದ ನೀರಿನ ಬಾಟಲುಗಳನ್ನು ಕೊಂಡ. ಅವನ ಹತ್ತಿರವಿದ್ದ ರಿಯಲ್‌ಗಳು ಮುಗಿದಿತ್ತು. ಅವನು ಕೊಟ್ಟ 20 ಡಾಲರ್‌ಗೆ ಅಂಗಡಿಯಾಕೆ ಚಿಲ್ಲರೆ ಕೊಟ್ಟಳು.
ಸಿಯಾಮ್ ರೀಪ್‌ನಿಂದ ಸ್ವಲ್ಪ ದೂರ ಹೋದ ಕೂಡಲೇ ಅಂಗೋರ್‌ವಾಟ್‌ನ ಗೋಪುರಗಳು ಕಾಣುತ್ತವೆ. ನಾಲ್ಕುನೂರು ಎಕರೆಯಲ್ಲಿ ಹರಡಿಕೊಂಡಿರುವ ಜಗತ್ತಿನ ಅತಿ ದೊಡ್ಡ ದೇವಸ್ಥಾನ ಸಮುಚ್ಚಯ. ದೇವಸ್ಥಾನವನ್ನು ಸುತ್ತಿ ಬರಲು ಎಷ್ಟು ಸಮಯ ಬೇಕು ಎಂದು ಕೇಳಿದೆ. ರಾ ನನ್ನ ಮುಗ್ಧತೆಗೆ ನಕ್ಕ. ಕೆಲವರಿಗೆ ಒಂದು ದಿನ, ಪಾಶ್ಚಾತ್ಯರಿಗೆ ವಾರ, ಸುಮ್ಮನೆ ವಿಹರಿಸುವವರಿಗೆ ಒಂದು ಗಂಟೆ, ಹೀಗೆ ಅವರವರ ಆಸಕ್ತಿಗೆ ತಕ್ಕಂತೆ ಎಂದ. ಅಂಗೋರವಾಟ್ ಸುತ್ತಮುತ್ತ ಬೇರೆ ದೇವಸ್ಥಾನಗಳೂ ಇವೆ. ಅವೆಲ್ಲವನ್ನೂ ಇಂದು ನೋಡಿದರೆ, ನಾಳೆ ಬೇರೆ ಜಾಗಗಳಿಗೆ ಹೋಗಬಹುದು ಎನ್ನುವ ಸೂಚನೆ ನೀಡಿದ.
ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ ಕೂಡಲೇ ಗೈಡ್‌ಗಳು ಮುತ್ತಿದರು. ರಾಜೀವ್, ಇತಿಹಾಸ್ ಗೈಡ್‌ಗಳ ಅಗತ್ಯವಿದೆಯೇ ಎಂದು ಕೇಳಿದರು. ಇಂಜಿನಿಯರಿಂಗ್ ಓದಿದ ಅವರಿಗೆ ಇತಿಹಾಸ ತಿಳಿದಿರಲಿಲ್ಲ. ಅಷ್ಟು, ಇಷ್ಟು ಓದಿಕೊಂಡಿದ್ದ ನನಗೆ ಗೈಡ್‌ಗಳ ನೆರವಿಲ್ಲದೆ ಪುರಾತನ ದೇವಾಲಯದ ದರ್ಶನ ಸಾಧ್ಯವಿಲ್ಲ ಅನ್ನಿಸಿತು. ಹಿಂದೆ ಗೈಡ್‌ಗಳಿಗೆ ಕೊಡುವ ಹಣ ಉಳಿಸಲು ಹೋಗಿ,ಹೆಚ್ಚು ಮಾಹಿತಿ ಪಡೆಯಲಾಗದ ಅನುಭವವೂ ಇತ್ತು. ಒಳ್ಳೆಯ ಗೈಡನ್ನು ಗೊತ್ತು ಪಡಿಸಲು ತಿಳಿಸಿದೆವು. ರಾ ಒಂದಷ್ಟು ದೂರ ಹೋಗಿ, ಒಬ್ಬನನ್ನು ಕರೆದುಕೊಂಡು ಬಂದ. ಕೊಡಬೇಕಾದ ಸಂಭಾವನೆಯನ್ನು ನಿಗದಿ ಮಾಡಿದ.
ಹಿಂದೂ ದೇವಾಲಯಗಳನ್ನು ಪೂರ್ವ ದಿಕ್ಕಿನಿಂದ ಪ್ರವೇಶಿಸಿದರೆ, ಕಾಂಬೋಡಿಯಾ ದೇವಸ್ಥಾನವನ್ನು ಪಶ್ಚಿಮದ ಮೂಲಕ ಪ್ರವೇಶಿಸಬೇಕಿತ್ತು. ಹೊರ ಬರುವುದು ಪೂರ್ವ ದಿಕ್ಕಿನಿಂದ. ಇದಕ್ಕೆ ಕಾರಣವೇನೆಂದು ವಿಚಾರಿಸಿದೆ. ದೇವಸ್ಥಾನವನ್ನು ನಿರ್ಮಿಸಿದ ಇಮ್ಮಡಿ ಸೂರ್ಯವರ್ಮನಿಗೆ ದೇವಸ್ಥಾನದೊಳಗೆ ತನ್ನ ದೇಹವನ್ನು ಸಮಾಧಿ ಮಾಡುವ ಉದ್ದೇಶವಿತ್ತಂತೆ. ಅದರೆ ಅದು ಸಾಧ್ಯವಾಗಲಿಲ್ಲ ಎಂದ ಕೊಸಲ್. ಯಾಕೆ ಎಂದು ನಾನು ಕುತೂಹಲದಿಂದ ಕೇಳಿದೆ.
ವಿಷ್ಣು ಲೋಕ ಅಥವಾ ಪರಮ ವಿಷ್ಣು ಲೋಕವೆಂದು ಸೂರ್ಯವರ್ಮ ಹೆಸರಿಸಿದ ಈ ಭವ್ಯ ದೇಗುಲ ನಿರ್ಮಾಣ ಮೂವತ್ತು ವರ್ಷಗಳ ಕಾಲ ನಡೆದಿದೆ. ಮೂರು ಲಕ್ಷ ಕೆಲಸಗಾರರು,ಆರು ಸಾವಿರ ಆನೆಗಳನ್ನು ನಿರ್ಮಾಣ ಕಾರ್ಯದಲ್ಲಿ ಬಳಸಿಕೊಂಡಿದ್ದರು. ಆ ಸಮಯದಲ್ಲಿ ಖ್ಮೇರ್ ಪಂಗಡದ ಖಾಯಂ ಶತ್ರುಗಳಾದ ವಿಯಟ್ನಾಮಿನ ಚ್ಯಾಮ್ ಪಂಗಡದವರು ದಾಳಿ ಮಾಡಿದರು. ಸೂರ್ಯವರ್ಮ ಸೋತ. ಅವನ ದೇಹವೂ ದೊರಕಲಿಲ್ಲ. ದೇವಸ್ಥಾನದ ಕೆಲಸವೂ ಸಂಪೂರ್ಣವಾಗಲಿಲ್ಲ.
ಅಂಗೋರ್‌ವಾಟ್ ದೇವಸ್ಥಾನದ ಸುತ್ತಲೂ ಸದಾ ನೀರು ತುಂಬಿಕೊಂಡಿರುವ ಆಳವಾದ ಕಮರಿ ಇದೆ. ಸುಮಾರು ಎಂಟುನೂರು ಅಡಿ ಉದ್ದದ, ಕಲ್ಲಿನ ಸೇತುವೆಯ ಮೂಲಕ ಅದನ್ನು ದಾಟಬೇಕು. ಕಮರಿ ಇದ್ದುದರಿಂದ, ಕಾಲಾಂತರದಲ್ಲಿ ದೇವಸ್ಥಾನ ಪಾಳು ಬಿದ್ದರೂ, ಇತರ ದೇವಸ್ಥಾನ, ಬೌದ್ಧ ವಿಹಾರಗಳಂತೆ ಮರ, ಗಿಡ, ಬಳ್ಳಿಗಳು ಬೆಳೆದು, ಪ್ರಾಣಿಗಳು, ಆಕ್ರಮಣಕಾರಿಂದ ನಾಶವಾಗದೆ ಉಳಿದುಕೊಂಡಿದೆ ಎಂದು ಗೈಡ್‌ವಿವರಿಸಿದ.
ಸೇತುವೆಯ ಕೊನೆಯಲ್ಲಿ ಏಳು ಹೆಡೆಯ ಭವ್ಯಾಕೃತಿಯ ಸರ್ಪ ನಮ್ಮನ್ನು ಎದುರುಗೊಳ್ಳುವಂತೆ ಹೆಡೆ ಬಿಚ್ಚಿ ನಿಂತಿತ್ತು. ಆಕಾರ ಬೆಚ್ಚುವಂತಿದ್ದರೂ ಸೌಂದರ್ಯ ಮನಸೋಲುವಂತಿತ್ತು. ಮಗ್ಗುಲಲ್ಲಿ ಮೃಗಾಕಾರವೊಂದಿದ್ದು, ಅದರ ಶಿರಚ್ಛೇದನವಾಗಿತ್ತು. ದ್ವಾರವನ್ನು ಕಾಯುವ ನಾಗ ಮತ್ತು ಸಿಂಹದ ಪ್ರತಿಮೆಗಳವು. ಸಿಂಹದ ತಲೆಯನ್ನು ಕತ್ತರಿಸಿದ್ದರೆ, ಪ್ರಕೃತಿಯ ದಾಳಿಯಿಂದ ಕೆಲವು ನಾಗ ಶಿಲ್ಪಗಳು ಶಿಥಿಲವಾಗಿದ್ದವು.
ನಾವು ನಿಂತಲ್ಲಿಂದ ಮೂರು ಗೋಪುರಗಳು ಕಾಣುತ್ತಿದ್ದವು. ಒಟ್ಟು ಐದು ಗೋಪುರಗಳಿದ್ದು, ಅವನ್ನು ಮೇರು ಪರ್ವತಗಳೆಂದು ಕರೆಯುತ್ತಾರೆ. ಮಧ್ಯದ ಗೋಪುರ ಅತ್ಯಂತ ಎತ್ತರವಾಗಿದೆ. ಮೇರು ಪರ್ವತ ದೇವತೆಗಳ ಆವಾಸಸ್ಥಾನ ಮಾತ್ರವಲ್ಲ, ಭೂಮಿಯ ಕೇಂದ್ರಸ್ಥಾನವೆಂದು ತಿಳಿದು ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸುತ್ತುವರಿದ ಗೋಡೆಯನ್ನು ಪರ್ವತಗಳ ಸಂಕೇತವೆಂದು, ಕಮರಿಯನ್ನು ಸಮುದ್ರವೆಂದು ಕಲ್ಪಿಸಿ ದೇವಸ್ಥಾನವನ್ನು ನಿರ್ಮಿಸಿಲಾಗಿದೆ.
ದೇವಸ್ಥಾನವನ್ನು ಸುತ್ತುವರಿದ ಗೋಡೆ ವಿಶಾಲವೂ, ಎತ್ತರವೂ ಆಗಿದ್ದು, ಶಿಲ್ಪಗಳಿಂದ ಅಲಂಕೃತವಾಗಿತ್ತು. ಕೊಸಲ್ ಮೇರು ಪರ್ವತವನ್ನು ಮಂದರ ಎಂದು, ಅದಕ್ಕೆ ಸುತ್ತಿದ ಸುತ್ತಿದ ನಾಗನನ್ನು ವಾಸುಕಿ ಎಂದು ಕರೆದ. ಸಮುದ್ರವನ್ನು ಮಥಿಸಿ, ಸಮುದ್ರದಲ್ಲಿ ಮುಳುಗಿದ್ದ ಅಮೂಲ್ಯ ವಸ್ತುಗಳನ್ನು ಪಡೆದು, ವಿಷ್ಣು ಮೋಹಿನಿ ರೂಪದಲ್ಲಿ ಅಮೃತ ಹಂಚುವ ಕಥೆ ಗೋಡೆಯ ಬಹುಭಾಗವನ್ನು ಆವರಿಸಿದ ಶಿಲ್ಪಗಳ ವಸ್ತು. ಮೇರು ಪರ್ವತದ ಮಧ್ಯಭಾಗದ ಪ್ರಸನ್ನ ರೂಪದ ಮೂರ್ತಿಯನ್ನು ವಿಷ್ಣು ಎಂದ ಕೋಸಲ್, ಬಲಭಾಗದಲ್ಲಿ ದೇವತೆಗಳು, ಎಡಭಾಗಲ್ಲಿ ಅಸುರರು ನಾಗನ ಹೆಡೆ, ಬಾಲ ಹಿಡಿದು ಸಮುದ್ರವನ್ನು ಕಡೆಯುತ್ತಿರುವುದನ್ನು ತೋರಿಸಿದ.
.
ಹೊರ ಗೋಡೆಯಲ್ಲಿ ಕುರುಕ್ಷೇತ್ರ ಯುದ್ಧ, ರಾವಣನ ಸೈನ್ಯದೊಂದಿಗೆ ಕಪಿಗಳ ಹೋರಾಟ ಮುಂತಾದ ಮಹಾಭಾರತ, ರಾಮಾಯಣದ ಚಿತ್ರಗಳನ್ನು ಕೆತ್ತಲಾಗಿತ್ತು. ಸ್ವರ್ಗ-ನರಕಗಳ ಚಿತ್ರಣವಂತೂ ಅದ್ಭುತವಾಗಿತ್ತು. ಸ್ವರ್ಗದಲ್ಲಿದ್ದವರು ವೈಭೋಗದಲ್ಲಿದ್ದು, ರಂಭೆ, ಊರ್ವಶಿಯರು ಪರಿಚಾರಿಕೆ ಮಾಡುತ್ತಿದ್ದರು. ನರಕದಲ್ಲಿದ್ದವರಿಗೆ ವಿಧ, ವಿಧವಾದ ಘೋರ ಶಿಕ್ಷೆಗಳು. ಸ್ವರ್ಗಕ್ಕೆ ಹೋಗುವವರಿಗೆ ವಿಶೇಷ ಸ್ವಾಗತವಿದ್ದರೆ, ನರಕವಾಸಿಗಳಿಗೆ ಕಾವಲು ಭಟರಿದ್ದರು. ಕರ್ಮಫಲದಲ್ಲಿ ನಂಬಿಕೆಯಿಟ್ಟಿದ್ದ ಸೂರ್ಯವರ್ಮ ಸಹಜವಾಗಿಯೇ ಮರಣಾನಂತರದ ಅವಸ್ಥೆಯನ್ನು ಶಿಲೆಯಲ್ಲಿ ಕೆತ್ತಿಸಿದ್ದ.
ಮೆಟ್ಟಲುಗಳನ್ನು ಹತ್ತಿ ದೇವಸ್ಥಾನದ ಒಳಾಂಗಣಕ್ಕೆ ಬಂದೆವು. ಗೋಪುರವನ್ನು ತಲುಪಲು ಮೂರು ಹಂತಗಳಿದ್ದವು ಪ್ರತಿ ಹಂತ, ಒಂದರಿಂದ ಒಂದು ಕಿರಿದಾಗಿದ್ದು ಗ್ಯಾಲರಿಗಳ ಮೂಲಕ ಸಾಗಬೇಕಿತ್ತು. ಭಿತ್ತಿಗಳು ಶಿಲ್ಪಾಕೃತಿಗಳಿಂದ ತುಂಬಿದ್ದವು.
ಅಂಗೋವಾಟ್ ದೇವಸ್ಥಾನದಲ್ಲಿ ಸುಮಾರು 2000 ಅಪ್ಸರೆಯರ ಶಿಲ್ಪಗಳಿವೆಯಂತೆ. ಸಣ್ಣ ಗಿಡಗಳಲ್ಲಿ ತೂಗುತ್ತಿರುವ ದೊಡ್ಡ ಫಲಗಳಂತೆ ತುಂಬಿದೆದೆಯ, ಬಡನಡುವಿನ, ಅರೆನಗ್ನ ಅಪ್ಸರೆಯರ ಶಿಲ್ಪಗಳು ಹೆಜ್ಜೆ ಹೆಜ್ಜೆಗೂ ಇತ್ತು. ಅಂಗೋರವಾಟ್ ಎಂದರೆ ಅಪ್ಸರೆಯರ ತಾಣವೆಂದರೂ ಸರಿಯೇ.
ನಮ್ಮ ಚಿತ್ತ ಅಪ್ಸರೆಯರತ್ತ ಹರಿಸಿದ್ದರೆ, ಕೊಸಲ್ ದೃಷ್ಟಿ ಎತ್ತಲೋ ಹರಿಸಿದ್ದ. ಹೆಣ್ಣು ಮಕ್ಕಳ ನಡುವೆ ಇದ್ದ ಯುವತಿಯೊಬ್ಬಳ ಮೇಲೆ ಅವನ ಕಣ್ಣು ನೆಟ್ಟಿತ್ತು. ತರುಣಿಯರ ಗುಂಪು ಹತ್ತಿರ ಬಂತು. ಬಳುಕುವ ದೇಹದ, ಉರುಟು ಮೋರೆಯ, ಸಂಪಿಗೆ ಮೂಗಿನ ಯುವತಿ ಹತ್ತಿರ ಬಂದಂತೆ ಕೊಸಲ್‌ನಲ್ಲಿ ತಳಮಳ ಕಾಣಿಸಿತು. ಆಕೆ ಕಂಡೂ ಕಾಣದಂತೆ ಮುಂದೆ ಹೋದಳು. ಕೊಸಲ್‌ಗೆ ತಡೆದುಕೊಳ್ಳಲಾಗಲಿಲ್ಲ. ಒಂದೆರಡು ನಿಮಿಷದಲ್ಲಿ ಬರುತ್ತೇನೆ ಕ್ಷಮಿಸಿ, ಎಂದು ತರುಣಿಯರ ಗುಂಪಿನತ್ತ ತೆರಳಿದ.
ನಮಗೆ ಕೊಸಲ್ ವರ್ತನೆ ಸರಿ ಕಾಣದಿದ್ದರೂ, ಆತ ಸಂಕಟದಲ್ಲಿರುವಂತೆ ತೋರಿತು. ಯುವತಿಯೊಡನೆ ಕೈಗಳನ್ನು ಮೇಲೆ, ಕೆಳಗೆ ಚಲಿಸುತ್ತಾ, ತಲೆ ಹಿಂದೆ, ಮುಂದೆ ಬಾಗಿಸುತ್ತಾ, ಓಲೈಸುವ ರೀತಿಯಲ್ಲಿ ಮಾತನಾಡುತ್ತಿದ್ದ. ಕೊಸಲ್ ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದ ಯುವತಿಯ ಮುಖಭಾವದಲ್ಲಿ ಬದಲಾವಣೆ ಇರಲಿಲ್ಲ. ಆತ ಮಾತನಾಡುತ್ತಿರುವಂತೆಯೇ ಹೊರಟು ನಿಂತಳು. ಕೊಸಲ್ ಮರಳಿ ಬಂದಾಗ ಮುಖ ಬಾಡಿತ್ತು, ಕಣ್ಣುಗಳು ಆರ್ದವಾಗಿದ್ದವು.
ಎರಡನೇ ಮಜಲಿನ ಮೆಟ್ಟಲುಗಳನ್ನು ಹತ್ತುವ ಮುನ್ನ, ʼನೂರಾರು ಮೆಟ್ಟಲುಗಳಿವೆ, ನಿಮಗೆ ಕಷ್ಟವಾಗಬಹುದುʼ ಎಂದು ರಾಜೀವ್,ಇತಿಹಾಸ್ ಎಚ್ಚರಿಸಿದ್ದರು. ಮರದ ಚಿಕ್ಕ ಚಿಕ್ಕ ಮೆಟ್ಟಿಲುಗಳಿಗೆ ಆಧರಿಸಲು ಕಂಬಿಗಳಿದ್ದರಿಂದ ಹತ್ತಲು ಅಷ್ಟೇನೂ ಕಷ್ಟವಾಗಲಿಲ್ಲ.ಆರಾಮವಾಗಿ ಹತ್ತಿದೆ. ಆ ಹಂತದಲ್ಲಿ ಶಿಲ್ಪಗಳು ಹೆಚ್ಚೇನೂ ಇರಲಿಲ್ಲ.
ಗ್ಯಾಲರಿ ಸುತ್ತಿ ಮೂರನೇ ಹಂತದ ಮೆಟ್ಟಲುಗಳು ಹತ್ತಿರ ಬಂದೆವು. ಕಡಿದಾಗಿ, ಎತ್ತರವಾಗಿದ್ದ ಅದನ್ನು ಹತ್ತಿದರೆ ಮಧ್ಯದ ಗೋಪುರವನ್ನು ತಲುಪಬಹುದು. ಏರಲು ಪ್ರಯತ್ನಿಸಿದೆ. ಮುಕ್ಕಾಲು ಭಾಗ ಪೂರೈಸಿದೆ. ವಿಶ್ರಮಿಸಿಕೊಳ್ಳಲು ಅವಕಾಶವಿತ್ತು. ಉಸಿರಿನ ವೇಗ ಹೆಚ್ಚುತ್ತಿತ್ತು. ಕಷ್ಟ ಪಟ್ಟು ಮೇಲಕ್ಕೆ ಹತ್ತಬಹುದಿತ್ತು. ಇಳಿಯುವಾಗ ಮಂಡಿಗಳು ಸಹಕರಿಸುವ ಬಗ್ಗೆ ಅನುಮಾನ ಉಂಟಾಯಿತು. ಗಂಟುಗಳಲ್ಲಿ ನೋವು ಬಂದರೆ ಮುಂದಿನ ಕಾರ್ಯಕ್ರಮಗಳಿಗೆ ತೊಂದರೆಯಾಗಬಹುದೆಂದು ತೋರಿತು.
ಯುವಕರು ಏರತೊಡಗಿದರು, ನಾನು ನನ್ನ ವಯಸ್ಸಿಗೆ ತಕ್ಕಂತೆ ಇಳಿಯತೊಡಗಿದೆ.
ನಾನು ವಿಶ್ರಮಿಸುತ್ತಿದ್ದಾಗ ಕೊಸಲ್‌ಬಂದ. ಸುಮಾರು ಐದು ಕಾಲಡಿ ಎತ್ತರದ ಗಟ್ಟಿ ಮುಟ್ಟಾದ, ತುಂಬು ಗೆನ್ನೆಯ ಯುವಕ. ಮುಖದಲ್ಲಿ ಮ್ಲಾನತೆಯಿತ್ತು. ಆತನ ದುಗುಡಕ್ಕೆ ಕಾರಣವೇನಿರಬಹುದೆಂದು ತಿಳಿಯಬಯಸಿ ಮಾತಿಗೆಳೆದೆ. ʼʼಮದುವೆಯಾಗಿದೆಯಾ?ʼʼ
“ಇಲ್ಲ” ಮುಗುಮ್ಮಾಗಿ ಉತ್ತರಿಸಿದ.
ವಯಸ್ಸು ಕೇಳಿದೆ,ಮೂವತ್ತೆರಡು ಅಂದ.
“ಇನ್ನೂ ಯಾಕೆ ಮದುವೆಯಾಗಿಲ್ಲ”
ಮುಖ ಬಾಡಿತು.ತಲೆ ತಗ್ಗಿಸಿ ಕೂತ.ಆತ ಮಾತನಾಡಿಸಿದ ಹುಡುಗಿಯನ್ನು ನೆನಪಿಸಿಕೊಂಡು,
“ಆಕೆಯನ್ನು ಪ್ರೀತಿಸುತ್ತಿದ್ದೀಯಾ?ʼ ಕೇಳಿದೆ.
“ಹು” ಎಂದವನೇ, “ಆಕೆಯೂ ಪ್ರೀತಿಸುತ್ತಿದ್ದಳು”ಎಂದ.
”ಮತ್ತೇನು ಸಮಸ್ಯೆ?”
ಕೊಸಲ್ ದುಃಖಕ್ಕೆ ಕಾರಣಗಳಿದ್ದವು.
ಬಡತನದಲ್ಲಿ ಬೆಳೆದ ಕೊಸಲ್, ಪದವಿ ಓದಿ ಸರಕಾರಿ ಕೆಲಸಕ್ಕೆ ಪ್ರಯತ್ನ ಪಟ್ಟಿದ್ದ. ಸರಕಾರಿ ಕೆಲಸ ಪಡೆಯಲಾಗದೆ ಜೀವನೋಪಾಯಕ್ಕೆ ಗೈಡ್ ಕೆಲಸಕ್ಕೆ ಪರವಾನಗಿ ಪಡೆದುಕೊಂಡ. ಆ ಸಮಯದಲ್ಲಿ ಆಕೆ ಪರಿಚಯವಾಗಿದ್ದಳು. ಖಾಸಗಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೊಸಲನ್ನು ತೀರಾ ಹಚ್ಚಿಕೊಂಡಿದ್ದಳು. ಆಗ ಅಂಗೋರ್‌ವಾಟ್‌ಗೆ ಪ್ರತಿ ದಿನ ಐದರಿಂದ ಆರು ಸಾವಿರ ಪ್ರವಾಸಿಗರು ಬರುತ್ತಿದ್ದು ಕೊಸಲ್ ಅದಾಯವೂ ಚೆನ್ನಾಗಿತ್ತು.
ಖ್ಮೇರ್ ಸಂಪ್ರದಾಯದಂತೆ ಮದುವೆಯಾಗಬೇಕಾದರೆ ವಧು ದಕ್ಷಿಣೆ ಕೊಡಬೇಕು. ಪ್ರೀತಿಸಿದವರೂ ವಧುದಕ್ಷಿಣೆ ಪಡೆಯದೆ ಮದುವೆಯಾಗುವುದಿಲ್ಲ. ಬಾಲ್ಯದಿಂದ ಸಾಕಿ, ಸಲಹಿ, ಓದಿಸಿ, ಬೆಳೆಸಿದ ತಂದೆತಾಯಿಯರ ಋಣ ತೀರಿಸಬೇಕೆನ್ನುವ ಇರಾದೆಯಲ್ಲಿ ಅತಿ ಹೆಚ್ಚು ವಧುದಕ್ಷಿಣೆ ಕೊಡುವ ಗಂಡನ್ನೇ ಹೆಣ್ಣು ಮಕ್ಕಳು ವರಿಸುತ್ತಾರೆ. ಮದುವೆಯ ಖರ್ಚು ಪೂರ್ತಿ ಗಂಡಿನದೇ. ಹಿಂದೆ ಮೂರು ದಿನಗಳ ಕಾಲ ನಡೆಯುತ್ತಿದ್ದ ಮದುವೆ ಈಗ ಒಂದೂವರೆ ದಿನದಲ್ಲಿ ಮುಗಿಯುತ್ತದೆ. ಆದರೆ ಖರ್ಚು ವಿಪರೀತ.
ಕೊಸಲ್ ತನ್ನ ಆದಾಯದಲ್ಲಿ ಇವೆಲ್ಲ ಸಾಧ್ಯ ಅಂದುಕೊಂಡಿದ್ದ. ಕೋವಿಡ್ ಆತನ ಯೋಜನೆಗಳನ್ನು ತಲೆಕೆಳಗಾಗಿಸಿತ್ತು. ಅಂಗೋರ್‌ವಾಟ್‌ಗೆ ಬರುವ ಪ್ರವಾಸಿಗರಲ್ಲಿ ಶೇಕಡಾ ತೊಂಬತ್ತರಷ್ಟು ಕಮ್ಮಿಯಾಗಿತ್ತು. ಪಾಶ್ಚಾತ್ಯರು ಬರುತ್ತಲೇ ಇರಲಿಲ್ಲ. ಏಷ್ಯಾದವರು ಬಂದರೂ ಅನುಕೂಲವಿಲ್ಲ. ಅವರೇನಿದ್ದರೂ ಸೆಲ್ಪಿ ತೆಗೆದುಕೊಂಡು, ಇನ್ಸ್ಟಾಗ್ರಾಮ್‌ಗಳಲ್ಲಿ ಫೋಟೋ ಹಾಕಿಕೊಂಡು, ಗೈಡುಗಳು ಬೇರೆಯವರಿಗೆ ವಿವರಿಸುತ್ತಿದ್ದಾಗ ಕದ್ದಾಲಿಸಿಕೊಂಡು ಸಂಭ್ರಮಿಸುವವರು.
ಕೊಸಲ್ ಮದುವೆಗೆಂದು ಕೂಡಿಟ್ಟ ಹಣ ಕರಗುತ್ತಿತ್ತು. ಪ್ರೀತಿಸಿದ ಹುಡುಗಿಗೆ ನಿರಾಶೆ ಉಂಟಾಗಿತ್ತು. ಅವಳು ಮೊದಲಿನಂತಿರಲಿಲ್ಲ. ಅವಳನ್ನು ಮತ್ತೆ ಒಲಿಸಿಕೊಳ್ಳುವ ಪ್ರಯತ್ನದಲ್ಲಿ ಅವನು ವಿಫಲನಾಗುತ್ತಿದ್ದ.
ಕೋಸಲ್‌ನ ಕತೆ ಕೇಳಿ ಬೇಸರವಾಯಿತು. ಹಿಂದಿನಂತೆ ಪ್ರವಾಸಿಗರು ಬರಲು ಎಷ್ಟು ವರ್ಷಗಳು ಬೇಕಾಗಬಹುದೋ, ಅಲ್ಲಿಯ ವರೆಗೆ ಪ್ರಿಯತಮೆ ಕಾಯವಳೋ, ಕೊಸಲ್ ಸೀತೆಗೆ ಪರಿತಪಿಸುವ ರಾಮನಾಗುವನೋ, ಅಂಗೋರವಾಟ್‌ನ ವಿಷ್ಣು ಸಹ ಹೇಳುವುದು ಕಷ್ಟ. ಕಾರಣವೆಂದರೆ ಅಂಗೋರವಾಟ್‌ನಲ್ಲಿ ವಿಷ್ಣು ಸವ್ಯಸಾಚಿ ಅಲ್ಲ. ಅಲ್ಲಿ ಬುದ್ಧನೂ ಇದ್ದಾನೆ.
ನಾವು ಮಾತು ಮುಗಿಸುವ ಹೊತ್ತಿಗೆ ರಾಜೀವ್, ಇತಿಹಾಸ್ ಬಂದರು. ತುತ್ತ ತುದಿಯ ಗೋಪುರದ ಗರ್ಭಗುಡಿಯಲ್ಲಿ ಪೋಟೋ ತೆಗೆಯಲು ಬಿಡಲಿಲ್ಲವಂತೆ. ಅಲ್ಲಿದ್ದ ಸುಂದರವಾದ ವಿಗ್ರಹವನ್ನು ಮ್ಯೂಸಿಯಂನಲ್ಲಿಡಲಾಗಿದೆಯೆಂದು ಕೊಸಲ್ ತಿಳಿಸಿದ. ಅಂಗೋರವಾಟ್‌ನಲ್ಲಿ ವಿ಼ಷ್ಣು, ಶಿವ ಮತ್ತು. ಬ್ರಹ್ಮನ ವಿಗ್ರಹಗಳಿವೆ. ನಾಲ್ಕು ದಿಕ್ಕಿಗೆ ಮುಖ ಮಾಡಿ ನಿಂತ ಬುದ್ಧನ ಪ್ರತಿಮೆಗಳೂ ಇವೆ. ಬಹುಶಃ ಎರಡು ಧರ್ಮಗಳ ದೇವರನ್ನು ಆರಾಧಿಸುವ ದೇವಸ್ಥಾನ ಅಂಗೋರ್‌ವಾಟ್ ಮಾತ್ರ.
ಕಾಂಬೋಡಿಯಾದ 1.70 ಕೋಟಿ ಜನಸಂಖ್ಯೆಯಲ್ಲಿ ಶೇಕಡಾ ತೊಂಬತ್ತರಷ್ಟು ಬೌದ್ಧ ಧರ್ಮೀಯರು. ಹಿಂದೂಗಳು ಕೇವಲ ಮೂರು ಸಾವಿರ.ಅದಕ್ಕೆ ಕಾರಣ ಏಳನೇ ಜಯವರ್ಮ.
ಇಮ್ಮಡಿ ಸೂರ್ಯವರ್ಮನ ಬಳಿಕ ರಾಜ್ಯವಾಳಿದ ಏಳನೇ ಜಯವರ್ಮನಿಗೆ ವಿಷ್ಣುವಿನ ಮೇಲೆ ಜಿಗುಪ್ಸೆ ಉಂಟಾಗಿತ್ತು. ಸೂರ್ಯವರ್ಮ, ದಿವಾಕರ ಪಂಡಿತನ ಉಪದೇಶದಂತೆ ವೈಭವೋಪೇತ ದೇವಸ್ಥಾನವನ್ನು ನಿರ್ಮಿಸಿದರೂ ಅತನನ್ನು ವಿಷ್ಣು ರಕ್ಷಿಸಲಿಲ್ಲವೆಂದು ಜಯವರ್ಮ ಬೌದ್ಧ ಧರ್ಮವನ್ನು ಸ್ವೀಕರಿಸಿದ. ಆದರೆ, ಅಂಗೋರ್‌ವಾಟ್ ದೇವಸ್ಥಾನಕ್ಕಾಗಲೀ, ವೈಷ್ಣವ ಧರ್ಮಕ್ಕಾಗಲೀ ಹಾನಿ ಮಾಡದೆ, ಅಂಗೋರ್‌ವಾಟ್ ಹೊರ ವಲಯದಲ್ಲೆ ಬೌದ್ಧ ದೇಗುಲವನ್ನು ನಿರ್ಮಿಸಿ,ಬೌದ್ಧ ಧರ್ಮ ಪ್ರಸಾರವನ್ನು ಮಾಡಿದ.
ರಾಜಧಾನಿ ದೇವಸ್ಥಾನಗಳಿಗೆ ಪ್ರಸಿದ್ಧವಾಯಿತು. ಅಂಗೋರ್ ಎಂದರೆ ನಗರ, ವಾಟ್‌ಎಂದರೆ ದೇವಸ್ಥಾನದ ಜಾಗ, ಹಾಗಾಗಿ ಅಂಗೋರ್‌ವಾಟ್ ಎನ್ನುವ ಹೆಸರು ಬಂತು.
ಏಳನೇ ಜಯವರ್ಮ ಬುದ್ಧ ದೇಗುಲವನ್ನು ನಿರ್ಮಿಸಿದ ಬಳಿಕ ತೇರವಾಡ ಬೌದ್ಧ ಪಂಥ ಕಾಂಬೋಡಿಯಾದಲ್ಲಿ ಪ್ರಸರಣಗೊಂಡಿತು. ಬೌದ್ಧ ಭಿಕ್ಷುಗಳು ಅಂಗೋರ್‌ವಾಟ್‌ನಲ್ಲಿ ನೆಲಸಿದರೂ ಪುರಾತನ ಹಿಂದೂ ಪ್ರತಿಮೆಗಳಿಗೆ ಹಾನಿ ಮಾಡದೆ, ಪ್ರತ್ಯೇಕವಾಗಿ ಬುದ್ಧನ ಮೂರ್ತಿಗಳನ್ನು ಸ್ಥಾಪಿಸಿ ಆರಾಧಿಸುತ್ತಿದ್ದರು.
ಹದಿನಾರನೇ ಶತಮಾನದಲ್ಲಿ ರಾಜಧಾನಿ ಅಂಗೋರ್‌ವಾಟ್‌ನಿಂದ ನೋಮ್‌ಪೆನ್‌ಗೆ ಸ್ಥಳಾಂತರಗೊಂಡಿತು. ಜನರು ಅಂಗೋರ್‌ವಾಟನ್ನು ತೊರೆದರು. ಕಾಲಕ್ರಮೇಣ ತೇರವಾಡ ಪಂಥದ ಬೌದ್ಧ ಭಿಕ್ಷುಗಳೂ ನೋಮ್‌ಪೆನ್‌ಗೆ ತೆರಳಿದರು.
ಆ ಸಮಯದಲ್ಲಿ ಖ್ಮೇರ್ ಸಾಮ್ರಾಜ್ಯ ಶಿಥಿಲಗೊಳ್ಳುತ್ತಿತ್ತು. ಕಾಂಬೋಡಿಯಾದ ವಿವಿಧ ಭಾಗಗಳನ್ನು ಚಾಮ್, ವಿಯಟ್ನಾಂ, ಥಾಯ್ ಪಂಗಡಗಳವರು ಆಕ್ರಮಿಸತೊಡಗಿದರು.ಹತ್ತೊಂಬತ್ತನೇ ಶತಮಾನದಲ್ಲಿ ಕಾಂಬೋಡಿಯಾ ಫ್ರೆಂಚರ ವಸಾಹತಾಗಿತ್ತು.
ಜನರಹಿತವಾದ ಅಂಗೋರವಾಟ್‌ನಲ್ಲಿ ದಟ್ಟ ಅರಣ್ಯ ಬೆಳೆದು ನಿಂತಿತು. ಅತ್ಯದ್ಭುತ ಶಿಲ್ಪಕಲೆಗೆ ಹೆಸರಾದ ದೇವಸ್ಥಾನ, ಗಿಡಗಂಟಿಗಳಿಂದ ಮುಚ್ಚಿಹೋಗಿ ಜನ ಮಾನಸದಿಂದ ದೂರವಾಯಿತು. 1860ರಲ್ಲಿ ಹೆನ್ರಿ ಮೌಹೊತ್ ಎನ್ನುವ ಫ್ರೆಂಚ್ ಸಂಶೋಧಕ ಅಂಗೋರ್‌ವಾಟ್ ದೇವಸ್ಥಾನವನ್ನು ಪತ್ತೆ ಹಚ್ಚಿದ. ʼಗ್ರೀಕರು ಅಥವಾ ರೋಮನ್ನರು ಉಳಿಸಿಹೋದುದಕ್ಕಿಂತಲೂ ಘನವಾದದ್ದುʼ ಎನ್ನುವ ಅವನ ಉದ್ಗಾರ ದೇಶವಿದೇಶಗಳ ಗಮನ ಸೆಳೆಯಿತು. ಆದರೂ ಪ್ರಕೃತಿಯ ಹೊಡೆತಕ್ಕೆ ಸಿಕ್ಕಿ ಶಿಥಿಲಗೊಂಡಿದ್ದ ದೇವಸ್ಥಾನವನ್ನು ಊರ್ಜಿತಗೊಳಿಸುವ ಕೆಲಸ ದೊಡ್ಡ ಮಟ್ಟದಲ್ಲಿ ನಡೆಯಲಿಲ್ಲ. ಕಾಂಬೋಡಿಯಾ ವಿದೇಶಿ ಆಡಳಿತದಿಂದ, ಆಂತರಿಕ ಕಲಹಗಳಿಂದ, ಖ್ಮೇರ್ ರೋಂಜ್ ಎನ್ನುವ ಬಂಡುಕೋರ ಪಡೆಗಳಿಂದ ಜರ್ಜರಿತವಾಗಿತ್ತು.
ಕಾಂಬೋಡಿಯಾ ಧ್ವಜದಲ್ಲಿ ಅಂಗೋರ್‌ವಾಟ್ ದೇವಸ್ಥಾನದ ಚಿತ್ರವಿದೆ. 1992 ರಲ್ಲಿ ಯುನೊಸ್ಕೋ ಪಾರಂಪರಿಕ ನೆಲೆಯೆಂದು ಅಂತಾರಾಷ್ಟ್ರೀಯ ಮನ್ನಣೆ ನೀಡಿತು.ಅಂಗೋರ್‌ವಾಟ್‌ದೇವಸ್ಥಾನದ ಪುನರ್‌ನಿರ್ಮಾಣಕ್ಕೆ ಕೈ ಜೋಡಿಸಿದ ಮೊದಲ ದೇಶ ನಮ್ಮದಾಗಿತ್ತು. 2004ರಲ್ಲಿ ಪುನರ್‌ಸೃಷ್ಟಿ ಮಾಡಿದ ಗುಡಿಯೊಂದರ ಮುಂದೆ ಆರ್ಕಿಯಲೋಜಿಕಲ್ ಸರ್ವೇ ಆಫ್ ಇಂಡಿಯಾದ ಫಲಕವಿದೆ. ರಾಜೀವ್ ಅದನ್ನು ನೋಡಿ ಅದ್ಭುತವಾದ ಕೆಲಸ ಮಾಡಿದ್ದಾರೆ, ಇಂಡಿಯಾದಲ್ಲಿ ಇಂತಹದ್ದು ಆಗಿದೆಯೋ ಇಲ್ಲವೋ ಎಂದು ಅಚ್ಚರಿ ವ್ಯಕ್ತ ಪಡಿಸಿದ. ASI ಈಗಲೂ ಕೆಲಸ ಮಾಡುತ್ತಿದೆಯೇ ಎಂದು ವಿಚಾರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕಂಡಂತಿಲ್ಲ ಎಂದು ಕೋಸಲ್‌ಹೇಳಿದ.
ನಾಲ್ಕು ಶತಮಾನಗಳ ಕಾಲ ಅಕ್ಷರಶಃ ಕಾಡುಪಾಲಾಗಿದ್ದರೂ, ದೇವಸ್ಥಾನಕ್ಕೆ ವಿಶೇಷ ಹಾನಿ ಒದಗಿರಲಿಲ್ಲ. ಬಿರುಬಿಸಿಲಿಗೆ, ಬಿರುಸಾದ ಮಳೆಗೆ ಕುಸಿಯದೆ ಕಟ್ಟಡ ಗಟ್ಟಿಯಾಗಿ ನಿಂತಿತ್ತು. ಕೆಲವು ಕಡೆ ಮೆಟ್ಟಲುಗಳು ಕುಸಿದಿದ್ದವು, ಮರಗಿಡಗಳು ಬೆಳೆದಿದ್ದವು, ಬಿರುಕುಗಳು ಮೂಡಿದ್ದವು,ಕಲ್ಲುಗಳು ಜರಗಿದ್ದವು. ವಿಗ್ರಹ ಚೋರರು ಅದಕ್ಕಿಂತ ಹೆಚ್ಚಿನ ಹಾನಿಯನ್ನು ಮಾಡಿದ್ದರು.
ಹಿಂದೂ,ಬೌದ್ಧ ವಿಗ್ರಹಗಳಿಗೆ ಜಾಗತಿಕ ಮಾರುಕಟ್ಟೆ ಇದೆ. ಥಾಯ್ಲೆಂಡ್, ವಿಯಟ್ನಾಮಿನ ವಿಗ್ರಹ ಕಳ್ಳರು ಶಿಲ್ಪಗಳನ್ನು ಕದ್ದೊಯ್ದರು. ಪ್ರತಿಮೆಗಳನ್ನು ಎತ್ತಲಾಗದೆ,ಕೀಳಲಾಗದೆ ಇದ್ದಾಗ ತಲೆಗಳನ್ನು ಕತ್ತರಿಸಿದರು, ಶಿಲ್ಪಗಳನ್ನು ಮುರಿದರು. ಇದರಿಂದ ಶಿರವಿಲ್ಲದ, ದೇಹವಿಲ್ಲದ ಅನೇಕ ಬುದ್ಧ, ದೇವತೆಗಳ, ಪ್ರಾಣಿಗಳ ಮೂರ್ತಿಗಳು ನೋಡಸಿಗುತ್ತವೆ.
ಬುದ್ಧನ ಶಿರವನ್ನು ಜೋಡಿಸಿದಂತಿದ್ದ, ಅಷ್ಟ ಭುಜದ, ಸುಂದರವಾದ ವಿಗ್ರಹಕ್ಕೆ ಹಳದಿ ಬಟ್ಟೆಯನ್ನು ಸುತ್ತಿ, ಹೂ, ಹಣ್ಣುಗಳನ್ನು ಅರ್ಪಿಸಿ, ದೀಪ ಬೆಳಗಿ, ಪೂಜೆ ಮಾಡಿದ್ದನ್ನು ಕಂಡೆವು. ಮೂಲತಃ ಇದು ವಿಷ್ಣುವಿನ ವಿಗ್ರಹವಾಗಿರಬಹುದು. ಭಿನ್ನವಾದ ವಿಗ್ರಹಕ್ಕೆ ಹಿಂದೂ ಪದ್ಧತಿಯಲ್ಲಿ ಪೂಜೆ ಸಲ್ಲುವುದಿಲ್ಲ. ಪಾದದ ಕೆಳಗೆ ಡೊನೇಶನ್ ಪಾರ್ ಬುದ್ಧಿಸ್ಟ್ ಎಂದು ಬರೆಯಲಾಗಿತ್ತು. ಬೌದ್ಧ ಭಿಕ್ಷುಗಳು ಮೂರ್ತಿಗಳನ್ನು ಬದಲಾಯಿಸುವುದಿಲ್ಲ. ಶಿರವಿಲ್ಲದ ವಿಷ್ಣುವಿನ ಮೂರ್ತಿಗೆ, ದೇಹವಿಲ್ಲದ ಬುದ್ಧನ ಶಿರವನ್ನು ಜೋಡಿಸಿ ಪೂಜಾರ್ಹವಾಗಿಸಿರಬಹುದೆಂದು ಕೊಸಲ್‌ಅಭಿಪ್ರಾಯ ಪಟ್ಟ.
ದೇವಸ್ಥಾನದ ಪೂರ್ವ ದಿಕ್ಕಿನಿಂದ ಹೊರ ಬರಲು ಕಂದಕವನ್ನು ದಾಟಿ ಬಹು ದೂರ ಬರಬೇಕಿತ್ತು. ರಾಗೆ ಕರೆ ಮಾಡಿ ಸಿದ್ಧವಾಗಿರುವಂತೆ ತಿಳಿಸಿದೆವು. ಕೊಸಲ್‌ನ್ನು ಬೀಳ್ಕೊಟ್ಟು, ಅವನ ಕ್ಷಮತೆಗೆ ಮೆಚ್ಚಿ, ಇತಿಹಾಸ್ 10 ಡಾಲರ್ ಹೆಚ್ಚಿಗೆ ಕೊಟ್ಟ. ಮಧ್ಯದಲ್ಲಿ ಹರಿದ ನೋಟನ್ನು ಕೊಸಲ್ ಹಿಂತಿರುಗಿಸಿದ. ಹರಿದ ನೋಟನ್ನು ಕಾಂಬೋಡಿಯಾದಲ್ಲಿ ತೆಗೆಗೆದುಕೊಳ್ಳುವುದಿಲ್ಲವಂತೆ. ಇತಿಹಾಸ್‌ಗೆ ಬೆಳಿಗ್ಗೆ ನೀರಿನ ಬಾಟಲ್ ಕೊಳ್ಳುವಾಗ ಮಹಿಳೆ ಅದನ್ನು ಕೊಟ್ಟಿದ್ದಳು. ಕೊಸಲ್‌ಗೆ ಬೇರೆ ನೋಟನ್ನು ಕೊಟ್ಟಾಗ, ಇಲ್ಲಿ ಯಾರಿಗೂ ಕೊಡಬೇಡಿ,ಬೇರೆ ದೇಶದಲ್ಲಿ ಬದಲಾಯಿಸಿಕೊಳ್ಳಿ ಎಂದ.
ಕಾರಿನ ಬಳಿ ಬಂದಾಗ ಕಾಂಬೋಡಿಯಾದ ಅಪ್ಸರೆಯರು ಹರಟುತ್ತಾ ನಿಂತಿದ್ದರು. ಇಷ್ಟು ಚಂದದ ಹುಡುಗಿಯರಿರುವಾಗ, ಕೊಸಲ್ ಏಕೆ ಅಳುತಿದ್ದಾನೆ ಎಂದು ರಾಗೆ ಕೇಳಿದೆ. ಅವನು ಹೇಳಿದ ಕಾರಣವನ್ನು ಕೇಳಿ ವಿಷಾದವಾಯಿತು………..
(ಮುಂದುವರಿಯುವುದು)
–ಎಂ ನಾಗರಾಜ ಶೆಟ್ಟಿ