ಬೇಸರವಾಗದಿರಲಿ ಬೇಸಿಗೆ ರಜೆ: ವಿಜಯ್ ಕುಮಾರ್ ಕೆ. ಎಂ.

ಅದೊಂದಿತ್ತು ಕಾಲ ಬೇಸಿಗೆ ರಜೆ ಎಂದರೆ ಭಾವನೆಗಳ ಸಮಾಗಮ, ಬಂಧುಗಳ ಸಮ್ಮಿಲನ ಇಂದಿರುವ ಈ ಕಾಲ ಬೇಸಿಗೆ ಶಿಬಿರಗಳ, ತಾಪಮಾನದ ತಾಪತ್ರಯಗಳ ಸಂಕಲನ. ಹೌದು ಮಿತ್ರರೇ, 90ರ ದಶಕದ ನಂತರ ಬೇಸಿಗೆ ರಜೆ ಎಂಬುದು ಮಕ್ಕಳ ಮತ್ತು ಪೋಷಕರ ಮನಸ್ಸಿನಲ್ಲಿ ಮಹತ್ತರ ಬದಲಾವಣೆ ತಂದಿರುವುದು ನಮಗೆಲ್ಲಾ ತಿಳಿದ ವಿಚಾರವೇ ಸರಿ. ಆದರೂ ಈ ಕಾಲಘಟ್ಟಕ್ಕೆ ಹೊಂದುಕೊಳ್ಳುವುದಕ್ಕಿಂತಲು ಅಂದಿನ ಕಾಲಘಟ್ಟದ ಸಮಯ ಸಂದರ್ಭಗಳನ್ನು ಈ ಸಮಯಕ್ಕೆ ಅರ್ಥೈಸುವುದೇ ಬಹುಮುಖ್ಯ ಕಾರ್ಯವಾಗಿದೆ.

ಅಂದೆಲ್ಲಾ ಬೇಸಿಗೆ ರಜೆ ಬಂತೆಂದರೆ ಕುಟುಂಬ ಕುಟುಂಬಗಳ ಸಮಾಗಮ ಸಂಬಂಧಗಳ ಸಾರವನ್ನು ಹೆಚ್ಚಿಸಿ ನನ್ನವರು ತನ್ನವರು ಎನ್ನುವ ಭಾವ ಮೂಡಿಸುವ ಸಕಾಲವಾಗಿತ್ತು. ಆದರೆ ಇಂದಿನ ಯಾಂತ್ರಿಕ ಬದುಕು ಅದೆಷ್ಟೇ ರಜೆಗಳ ಅವಧಿ ಇದ್ದರು ಕೆಲಸದ ಒತ್ತಡ, ಜವಾಬ್ದಾರಿಗಳ ಜಂಜಾಟ, ಕುಟುಂಬಗಳ ನಡುವಿನ ಮನಸ್ತಾಪ ಹೀಗೆ ನಾನಾ ಕಾರಣಗಳ ನಾಜೂಕಿನ ಬದುಕು ರಜೆ ದಿನಗಳ ವಿಶೇಷತೆಯನ್ನೇ ಮರೆತವೇನೋ ಎನಿಸುತ್ತದೆ ಅಲ್ಲವೇ?. ವಿಶೇಷ ಎಂದರೆ ಅಯ್ಯೋ ನಾವು ಬೇಸಿಗೆ ರಜೆಯಲ್ಲಿ ಹಾಗಿದ್ದೆವು, ಹೀಗೆದ್ದೆವು ಆಗಿನ ಕಾಲವೇ ಸರಿ ಎಂದು ಆ ಕಾಲವನ್ನು ಅನುಭವಿಸಿ ಕಳೆದ ಜೀವಗಳೇ ಇಂದು ಈ ಪರಿಸ್ಥಿತಿಯಲ್ಲಿ ಬೇಯುತ್ತಿರುವುದು. ಅವರ ಅನುಭವದಲ್ಲಿ ಕಳೆದ ಆ ದಿನದ ಬಗ್ಗೆ ಅಷ್ಟೆಲ್ಲ ಸಂತಸ, ಸಂತೃಪ್ತಿ ಇದ್ದರು ಕೂಡ ಇಂದಿನ ಪೀಳಿಗೆಗೆ ಅದರ ಪಾಲನ್ನು ಧಾರೆ ಎರೆಯುವ ಕೆಲಸ ಮಾತ್ರ ಮಾಡಲು ನೆಪ ಹೂಡುತ್ತಿದ್ದಾರೆ.

ಬೇಸಿಗೆ ರಜೆ ಎಂದ ಕೂಡಲೇ ಮುಗ್ಧ ಮನಸುಗಳಾದ ನಮ್ಮ ಮಕ್ಕಳ ಜೀವನ ಶೈಲಿಯಲ್ಲಿ ಒಂದಷ್ಟು ಬದಲಾವಣೆ ತರಬಲ್ಲ ಕಾರ್ಯಗಳಿಗೆ ಒತ್ತು ಕೊಡುವ ಕೆಲಸ ಇಂದು ಆಗಲೇಬೇಕಿದೆ. ನಮ್ಮ ಜವಾಬ್ಧಾರಿಗಳ ಮೂಟೆಯಲ್ಲಿ ನಿರ್ಮಲ ಮನಸ್ಸುಗಳ ಭವಿಷ್ಯದ ಭಾವನೆಗಳನ್ನು ಬಿಗಿದಿಟ್ಟು ಮೂಲೆಗೆಸೆಯುವ ಮನಸ್ಥಿತಿ ಬದಲಾಗಲೇಬೇಕಿದೆ. ಮಿತ್ರರೇ, ತಾಂತ್ರಿಕತೆ ಅದೆಷ್ಟೇ ಬೆಳೆದರು ನಮ್ಮ ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿ ಬದಲಾಗಿದೆಯೇ ಹೇಳಿ? ಹೀಗಿರುವಾಗ ಕಾಲಘಟ್ಟ ಬದಲಾಯಿತು ಎಂದು ಮಕ್ಕಳ ಮನಸ್ಸು ಬದಲಾಯಿಸುವ ಹುನ್ನಾರವೇಕೆ. ಹಿಂದೆಲ್ಲಾ ಇದ್ದ ಬೇಸಿಗೆ ರಜೆಯ ಕಾಲಮಾನ ಸಂಬಂಧಗಳ ಸದೃಢತೆಯ ಬಗ್ಗೆ ಯೋಚಿಸುತ್ತಿತ್ತು ಎಂದರೆ ಅದು ನಮ್ಮ ಪೂರ್ವಜರು, ಹಿರಿಯರು ನಮಗೆ ಕಲಿಸಿದ ಬದುಕಿನ ನೀತಿ ಪಾಠಗಳೇ ಹೊರತು ಬೇರೆನಲ್ಲ. ಈ ಪೀಳಿಗೆಯ ಹಿರಿಯರೆನಿಸಿದ ನಾವು ನೀವುಗಳು ಅಂತಹ ನೀತಿ ಪಾಠದ ಅರ್ಥ ತಿಳಿಸುವ ಕಾರ್ಯಕ್ಕೆ ಕೈ ಹಾಕಬೇಕಿದೆ.

ಅಂದಿನ ಬೇಸಿಗೆಯಲ್ಲಿ ನಾವು ನೀವು ಕಳೆದ ಕೆಲ ವಿಶೇಷ ಸನ್ನಿವೇಶಗಳು ಮತ್ತು ಸಂದರ್ಭಗಳ ಬಗ್ಗೆ ನೋಡುವುದಾದರೆ ಅಂದು ಬೇಸಿಗೆ ರಜೆ ನಮ್ಮ ಅಜ್ಜಿ, ತಾತ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ಹೀಗೆ ನಮ್ಮ ಕುಟುಂಬಸ್ಥರ ಮನೆಯಲ್ಲಿ ಕೆಲ ದಿನವಾದರೂ ಕಳೆದೆ ಕಳೆದಿದ್ದೇವೆ. ಕೇವಲ ನಾವಷ್ಟೇ ಅಲ್ಲ ನಮ್ಮ ರಕ್ತ ಸಂಬಂಧದ ಹಲವು ಸಹೃದಯಗಳ ಸಂಗಮದಲ್ಲಿ ಬೆರೆತ ಅಮೃತಘಳಿಗೆ ಅದು. ನಮ್ಮ ತಂದೆ ತಾಯಿ ಅವರ ಸಮಕಾಲೀನ ಮನಸುಗಳ ಜೊತೆ ಬೆರೆತರೆ ಮಕ್ಕಳ ಮನಸ್ಸುಗಳು ಮಾತ್ರ ಅವರದೇ ಆದ ಆಟಗಳಲ್ಲಿ ತೊಡಗಿ ಸಮಯ ಕಳೆಯುತ್ತಿದ್ದ ಕಾಲವದು. ಆಟಗಳಲ್ಲು ಸಹ ಒಬ್ಬಂಟಿಯಾಗಿ ಆಡಿದ ಆಟಗಳೇ ನೆನಪಿಲ್ಲ ಪ್ರತಿ ಆಟದಲ್ಲೂ ಸಂಗಡಿಗರನ್ನು ಕೂಡಿ ಆಡಿದ ಆಟಗಳೇ ಹೆಚ್ಚು ಒಂದು ವೇಳೆ ಸಂಗಡಿಗರಿಲ್ಲ ಎಂದರೆ ತಮ್ಮ ಮನೆಯವರನ್ನೇ ಬೆರೆತು ಆಡಿದ ಸಂದರ್ಭವೂ ಉಂಟು. ಅಷ್ಟಕ್ಕೂ ಅಂದಿನ ಆಟಗಳೆ ಹಾಗೆಯೇ ಬಿಸಿಲು ಎಂದು ಮನೆ ಸೇರಿದರು ಮನೆಯಲ್ಲಿಯೇ ಕುಳಿತು ಆಡಿದ ಆಟಗಳಾದ ಹಳ್ಳಿಗುಳಿ ಮಣೆ, ಆಣೆಕಲ್ಲು, ಗಟ್ಟಮನೆ, ಕಳ್ಳ ಪೊಲೀಸ್ , ಕದ್ದು ಮುಚ್ಚಿ ಹಿಡಿಯುವ ಆಟಗಳು ಕೂಡ ಒಬ್ಬರಿಂದ ಆಡಲು ಸಾಧ್ಯವಾಗುತ್ತಿರಲಿಲ್ಲ,

ಇನ್ನೂ ಮುಂಜಾನೆ, ಮುಸ್ಸಂಜೆ ಕೂಡಿ ಆಡುತ್ತಿದ ಆಟಗಳಾದ ಲಗೋರಿ, ಕಲ್ಲು ಕುಟಿ ಕುಟಿ, ಗೋಲಿ, ಓಡು ಬಂಡಿ ಆಟಗಳು ಮಿತ್ರರು ಮತ್ತು ಮನೆಯ ಅಣ್ಣ ತಮ್ಮಂದಿರನ್ನು ಬೆರೆಯಲು ಕಾರಣವಾಗುತ್ತಿತ್ತು. ಇನ್ನುಳಿದಂತೆ ಅಂದಿನ ಕಾಲದ ಆಹಾರಗಳು ಬೇಸಿಗೆಗೆ ಸರಿಯಾಗಿ ಸಿಗುತ್ತಿದ್ದ ಎಳನೀರು, ಹಲಸಿನ ಹಣ್ಣು, ಮನೆಯಲ್ಲಿಯೇ ತಯಾರಿಸುತ್ತಿದ್ದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಹೀಗೆ ಆರೋಗ್ಯಕರ ಆಹಾರಗಳು ನಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು ನಿಜ. ಕಾಲುವೆಯಲ್ಲಿ ಈಜಿ, ಮಳೆಯಲ್ಲಿ ನೆನೆದು, ಮಣ್ಣಿನಲ್ಲಿ ಮಿಂದು ದೇಹವನ್ನು ತಣಿಸಿಕೊಳ್ಳುತ್ತಿದ್ದ ರೀತಿಯೇ ವಿನೂತನ ಮಜಲು. ರಾತ್ರಿ ವೇಳೆ ಅಜ್ಜ ಅಜ್ಜಿ ಹೇಳುತ್ತಿದ ನೀತಿ ಮತ್ತು ಭೂತದ ಕಥೆಗಳು ಮನಸ್ಸಿಗೆ ನಾಟುವಂತೆ ಮಾಡಿ ನಿದ್ರೆಗೆ ಜಾರಿಸುತ್ತಿದ್ದವು. ಒಂದೇ ಊರಿನಲ್ಲಿ ಇರದ ನಮ್ಮ ರಜೆ ಯಾತ್ರೆ ಸಂಬಂಧಿಕರ ಪ್ರತಿ ಊರಿನಲ್ಲಿಯೂ ಒಂದೊಂದು ಅನುಭವ ಪಡೆದ ಅವಿಸ್ಮರಣೀಯ ಘಳಿಗೆ. ರಜೆ ಕಳೆದು ತವರೂರಿಗೆ ತೆರಳುವ ವೇಳೆ ಉಂಟಾಗುತ್ತಿದ್ದ ಆ ಯಾತನೆ ಹೇಳ ತೀರದು ಆದರೂ ಬೇಸಿಗೆ ಮತ್ತೆ ಬರುವುದು ಎಂಬ ವಿಶ್ವಾಸ ನಮ್ಮನ್ನು ಮನೆಗೆ ಕರೆತಂದು ನಮ್ಮಲ್ಲಿ ಆಗಾದ ಅನುಭವ ನೀಡುತ್ತಿದ್ದ ಸುಸಂದರ್ಭವದು.

ಇಂದಿನ ಈ ಮಾಯಾಜಗತ್ತು ಮಕ್ಕಳಲ್ಲಾಗಲಿ, ಪೋಷಕರಲ್ಲಾಗಲಿ ಈ ಅನುಭವಗಳನ್ನು ಯಾಂತ್ರಿಕ ಬದುಕಿಗೆ ಸಿಲುಕಿಸಿ ಕೇವಲ ಜವಾಬ್ದಾರಿಗೆ ಜೋತು ಬೀಳುವಂತೆ ಮಾಡಿರುವುದು ಶೋಚನೀಯ. ಬೇಸಿಗೆಗೆ ಮಕ್ಕಳನ್ನು ಹತ್ತಾರು ಕೋರ್ಸ್, ಶಿಬಿರಕ್ಕೆ ದಾಖಲಿಸಿ ಅವರು ರಜೆಯಲ್ಲಿ ಅನುಭವದಿಂದ ಕಲಿಯ ಬೇಕಾದ ಕೆಲ ಸಾಮಾನ್ಯ ಸಂಗತಿಗಳನ್ನು ಕಲಿಸಲಾಗುತ್ತಿಲ್ಲ ಎನಿಸುತ್ತದೆ. ಹಾಗೆಂದು ಮನವರಿಕೆ ಮಾಡಲು ಹೋದರೆ ಅಯ್ಯೋ, ಇಂದಿನ ಪೈಪೋಟಿಯಲ್ಲಿ ಮಗುವಿಗೆ ಕಂಪ್ಯೂಟರ್ ಜ್ಞಾನ ಬೇಕು, ವಿನೂತನ ಕಲಿಕೆ(ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿ)ಬೇಕು ಎನ್ನುತ್ತಾರೆ ಇದೆಲ್ಲವೂ ಬೇಕು ನಿಜ ಆದರೆ ಇವುಗಳು ಬೇಕು ಎಂದು ಬದುಕಿಗೆ ಪೂರಕವಾದ ಕಲೆಗಳನ್ನು ಕಲಿಸದೇ ಹಿಂದುಳಿಯುತ್ತಿರುವ ಮನಸುಗಳು ಇದರ ಬಗ್ಗೆ ಕೊಂಚ ಯೋಚಿಸಬೇಕು. ಬಿಸಿಲಿನ ಬೇಗೆ ಆಚೆ ಹೋಗಬೇಡ ಎಂದು ಬೀದಿಗೆ ಬಿಡದ ಮಗುವಿನ ಜೀವನ ಕೇವಲ ದೂರದರ್ಶನ, ಮೊಬೈಲ್ ಗಳಲ್ಲೆ ಸೀಮಿತವಾಗಿ ಉಳಿದಿದೆ ಇದರಿಂದ ನಾಲ್ಕು ಗೋಡೆಗಳಲ್ಲಿ ಬಂಧಿಯಾದ ಮಗುವಿನ ಮನಸ್ಸುಗಳು ಹತ್ತಾರು ಅನುಭವಗಳನ್ನು ಪಡೆಯುವುದಾದರೂ ಹೇಗೆ. ಹಿಂದೆ ಕೆಲ ಪ್ರಾಣಿ, ಪಕ್ಷಿಗಳನ್ನು ಹಳ್ಳಿಗಾಡಿನಲ್ಲಿ ಕಂಡು ಅವುಗಳ ಹೆಸರು ವಿಶೇಷತೆ ಅರಿಯುತ್ತಿದ್ದ ಕಾಲವನ್ನು ಮೀರಿ ಇಂದು ಸಣ್ಣ ಪುಟ್ಟ ಪ್ರಾಣಿ, ಪಕ್ಷಿಗಳನ್ನು ಮೃಗಾಲಯ, ಪುಸ್ತಕ ಅಥವಾ ಮಾಧ್ಯಮದಲ್ಲಿ ನೋಡಿ ಅವುಗಳ ಮಾಹಿತಿ ಪಡೆಯುವಂತಾಗಿರುವುದು ಇಂದಿನ ಕಾಲಘಟ್ಟ ಎತ್ತ ತಲುಪುತ್ತಿದೆ ಎನಿಸುವುದಿಲ್ಲವೇ?. ಕೇವಲ ಪ್ರಾಣಿ, ಪಕ್ಷಿಗಳಷ್ಟೇ ಅಲ್ಲ ಗಿಡ ಮರ, ಬೆಳೆಗಳು, ಆಹಾರ ಧಾನ್ಯಗಳು, ಪೂರ್ವಜರು ಬಳಸಿದ ವಸ್ತುಗಳು, ರೈತಾಪಿ ವರ್ಗದ ಕಾರ್ಯಗಳು ಹೀಗೆ ಹುಡುಕುತ್ತ ಹೊರಟರೆ ನೂರೆಂಟು ವಿಚಾರಗಳಿಂದ ನಮ್ಮ ಮಕ್ಕಳು ವಂಚಿತರಾಗಿ ಬದುಕು ನಡೆಸಲು ಮುಂದಾಗಿರುವುದು ಬೇಸರದ ಸಂಗತಿ.

ಕಾಲ ಬದಲಾದಂತೆ ಬದುಕಿನ ಬದಲಾವಣೆ ಅನಿವಾರ್ಯವಿರಬಹುದು ಆದರೆ ಹಿಂದೆ ಸಾಗಿದ ಬದುಕನ್ನು ಸಂಪೂರ್ಣ ಮರೆತು ಬದುಕುವ ಬದುಕಿಗೆ ನಿಜ ಅರ್ಥವಾದರೂ ಇದೆಯೇ ಎನಿಸುತ್ತದೆ. ಕಾಲ ಬದಲಾಗಿದೆಯೋ ಇಲ್ಲವೋ ಆದರೆ ನಮ್ಮ ಮನಸುಗಳು ಬದಲಾಗಬೇಕಿರುವುದು ಮುಖ್ಯವಾಗಿದೆ. ಬನ್ನಿ ಇಷ್ಟೆಲ್ಲಾ ಬದಲಾವಣೆಯಲ್ಲೂ ನಮ್ಮ ಮಕ್ಕಳಿಗೆ ನೈಜತೆಯ ಬದುಕಿನ ಅರ್ಥ ತಿಳಿಸುವ ಬೇಸಿಗೆಯನ್ನು ಬೇಸರಗೊಳಿಸದೆ ಸಂತಸದ ಹಾದಿಯಲ್ಲಿ ಒಂದಷ್ಟು ದಿನ ನಮ್ಮವರೊಟ್ಟಿಗೆ ಹಳ್ಳಿಯಲ್ಲಾಗಲಿ ಸಂಬಂಧಿಕರ ಮನೆಯಲ್ಲಾಗಲಿ ಅನುಭವದೊಂದಿಗೆ ಕಲೆತು ಕಳೆದು ಬರೋಣ.

-ವಿಜಯ್ ಕುಮಾರ್ ಕೆ. ಎಂ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Chaithra
Chaithra
1 year ago

Super… Neev heliddu nija sir… Ivagin makkalige Raja da anubhava kooda sigalla .. school camp anthane hogutthe

Lakshmaiah
Lakshmaiah
1 year ago

Your motivation Is Good sir

2
0
Would love your thoughts, please comment.x
()
x