ಸಂಡಿಗ್ಯೋಪಾಖ್ಯಾನ: ಡಾ.ವೃಂದಾ ಸಂಗಮ್


ಕನ್ನಡದಾಗ ಋತು ಮಾನ ಮತ್ತ ಋತು ಸಂಹಾರ ಅಂತ ಒಂದು ಶಬ್ದ ಅದ. ಅಂದರ, ಋತುಗಳನ್ನ ಮಾನಕ ಅಂದರ ಅಳತೀ ಮಾಡೋದು ಅಥವಾ ಋತುಗಳನ್ನ ಲೆಕ್ಕ ಹಾಕೋದು ಅಂತನೋ ಇರಬೇಕು. ಇನ್ನ ಕಾಳಿದಾಸ ಅಂದಕೂಡಲೇ ನೆನಪಾಗೋದು ಋತು ಸಂಹಾರ. ಎಲ್ಲಾ ಬಿಟ್ಟು ಈ ಋತುಗಳನ್ಯಾಕೆ ಸಂಹಾರ ಮಾಡಬೇಕೋ ರಾಕ್ಷಸರ ಹಂಗ ಅನ್ನಬ್ಯಾಡರೀ. ನನಗೂ ಗೊತ್ತಿಲ್ಲ. ಆದರ, ವಸಂತ ಋತು ಬಂದಾಗಲೇ ಮಾವು ಹಣ್ಣಾಗಿ, ರಸ ತುಂಬಬೇಕು, ಮಲ್ಲಿಗೆ ಹೂವರಳಿ ಘಮ ಚಲ್ಲಬೇಕು ಎಂದು ಯಾರು ತಿಳಿಸುವರೋ ತಿಳೀಲಿಲ್ಲ ಆದರ, ಒಂದು ಮಾತ್ರ ಪವಾಡ, ಶಿಶಿರ ಋತು ಬಂದ ಕೂಡಲೇ ಈ ನಮ್ಮ ಅಜ್ಜಿಗೆ ಮಾತ್ರ ಈ ಋತುಗಳ ಜ್ಞಾನ ಚಂದಾಗಿ ಆಗಿ ಬಿಡತಿತ್ತು. ಈಗ ಬಿಸಲು ಭಾಳ ಚಂದಾಗಿ ಬೀಳತದ, ವರ್ಷ ಪೂರ್ತಿ ಆಗೋ ಅಷ್ಟು ಸಂಡಿಗಿ ಮಾಡಿ ಇಟಗೋ ಬೇಕು. ಅಂತ.

ಅದರಾಗ ಮೊದನೇಯದು, ಅರಳ ಸಂಡಗಿ, ಮುಂದ, ಅವಲಕ್ಕಿ ಹಪ್ಪಳ ಆಮ್ಯಾಲ ರೆಕ್ಕಿ ಸಂಡಗಿ, ಇವಾದ ಮ್ಯಾಲ, ಮುಸುರಿ ಹಪ್ಪಳ ಅಂದರ ಉದ್ದಿನ ಹಪ್ಪಳ. ಸಾಲ್ಯಾಗ ಒಂದು ಹುಡುಗ ಹಾಲು ಹೆಂಗ ಪಡೀತೇವಿ ಅಂದರ, ನಂದಿನ ಮಿಲ್ಕ ಪಾರ್ಲರ್ ನೊಳಗ. ಅಂದನಂತ. ಹಂಗ ಈಗ ಪ್ಯಾಕೆಟ್ ಹಪ್ಪಳ, ಸಂಡಿಗಿ ಎಲ್ಲಾನೂ ಅಂಗಡೀ ಇಂದ ತರೋವರಿಗೆ ಈ ಹಪ್ಪಳ ಸಂಡಿಗೆ ಹಬ್ಬ ಗೊತ್ತೇ ಇರೋದಿಲ್ಲ ಬಿಡರೀ, ಅದಕ್ಕ, ಬಾಳಕ ಮತ್ತ ಶ್ಯಾವಗೀನೂ ಸೇರಿರತಾವ. ಇವು ವರ್ಷಪೂರ್ತಿ ಅದರಾಗೂ ಶ್ರಾವಣ ಭಾದ್ರಪದ ಆಶ್ವೀನ ಮಾಸದ ಹಬ್ಬಗಳೊಳಗ ಭಾಳ ಉಪಯೋಗಕ್ಕ ಬರತಾವ. ಮತ್ತ ಈ ಸಂಡಿಗೆ ಹಪ್ಪಳ ಮಾಡೋದಕ್ಕ ನಾನು ಬರೂದಿಲ್ಲ ಅಂದರ ಸಾಕು, ನಮ್ಮಜ್ಜಿ, ತಾನು ಓದಿದ ನಾಲ್ಕನೇ ಕ್ಲಾಸಿನ ಪಾಠ ಸೌತೇಕಾಯಿ ಯಾರಿಗೆ ಅಂತ ಶುರು ಮಾಡತಿದ್ದಳು. ನಮಗೂ ಕೇಳಿ ಕೇಳೀ ಬ್ಯಾಸರಾಗಿ, ನಾವೇ ಹಪ್ಪಳ ಸಂಡಿಗೆ ಯಾರಿಗೆ, ತಯಾರಿ ಮಾಡಿದವರಿಗೆ ಅಂತ ಕೂಗತಿದ್ದವಿ. ಆದರ, ಅಪ್ಪ-ತಮ್ಮ ಒಂದೇ ಒಂದು ಸಂಡಿಗೀನೂ ಇಡದೇ, ಒಂದೇ ಒಂದು ಮಣೀನೂ ಎತ್ತಿಡದೇ ಹಪ್ಪಳ ಸಂಡಿಗೆ ತಿಂತಿದ್ದರು.

ಇನ್ನ ಅದರ ತಯಾರಿ ಹೆಂಗಿರತದಂದರ, ಅದೊಂದು ಮನೀ ಮಂದೀ ಎಲ್ಲಾರಿಗೂ ಅವಾಂತರನ. ಇದು ನಮಗ ಪರೀಕ್ಷಾದ ಸಮಯ, ಬ್ಯಾಸಗಿ, ಎಷ್ಟು ಓದಿದರೂ ಕಡಿಮಿ, “ನಾಳೆ ಸಂಡಗೀ ಮಾಡೋದದ, ಮುಂಜಾನೆ ಏನೂ ಓದೋದು ಇಟ್ಟಕೋಬ್ಯಾಡ” ಅಂತ ಹಿಂದಿನ ದಿನಾನೇ ಒಂದು ಬಾಂಬ್ ಹಾಕತಿದ್ದಳರೀ ನಮ್ಮಜ್ಜಿ, ಇದು ನಾಳೆ ಒಂದು ದಿನದ್ದಲ್ಲ, ಈ ಕಾರ್ಯಕ್ರಮ, ಮುಂದ ಒಂದು ಸಪ್ತಾಹದ್ದು. ಅದರ ಹಿಂದಿನ ಸಪ್ತಾಹನೂ ಇರತಿತ್ತು. ಏನಂದರ, “ಹದಿನಾರ ಪಡಿ ಭತ್ತ ಅರಳು ಹುರಿಸಿಕೊಂಡು ಬಾ” ಇದು ನಮ್ಮಪ್ಪಗ ಅಜ್ಜೀ ಆಜ್ಞಾ ಆತಂದರ, ಮುಗೀತರೀ, ಅಲ್ಲೆ ಒಂದು ಪಾಕ್ಷಿಕ ಮಾಸ ನಮ್ಮ ಡಬಲ್ ಡ್ಯೂಟಿ ಅಂತನ ಹೆಸರರೀ. ಆ ಅರಳು ನಮ್ಮ ನಕ್ಷತ್ರದಾಗ ಬಂದಿರತಾವ. ಮೊದಲ, ಯಡಗಣ್ಣಿನ ಝರಡೀಯೊಳಗ ಸಾಣಸ ಬೇಕು. ಆಮ್ಯಾಲ, ಆರಸಬೇಕು. ಅಂದರ ಅರಳು ಹಾಕಿಕೊಂಡಿರೋ ಭತ್ತದ ಹೊಟ್ಟಿನ ಟೋಪಿಯನ್ನ ಬಿಡಸಬೇಕು. ಅಷ್ಟಾದ ಮ್ಯಾಲೂ ಅಲ್ಲೊಂದು ಇಲ್ಲೊಂದು ಉಳದಿದ್ದರ, ಅವು ನಮ್ಮಜ್ಜೀ ಕಣ್ಣಿಗೇ ಕಾಣೋವು. ಅದೂ ನಮ್ಮ ಬೇಜವಾಬ್ದಾರಿ ಎತ್ತಿ ತೋರಿಸಲಿಕ್ಕೆ. ಆದರ, ಕಣ್ಣು ಕಾಣೂದಿಲ್ಲ ಅನ್ನೋ ನಮ್ಮಜ್ಜಿಗೆ ಈ ಭತ್ತದ ಹೊಟ್ಟು ಹೆಂಗ ಕಾಣತಿದ್ದವು ಅದೇ ತಿಳಿಯೂದಿಲ್ಲ. ಆಮ್ಯಾಲೆ ಹಿಂದಿನ ದಿನ ರಾತ್ರಿ, ನಾಲ್ಕು ಕುಂಬಳಕಾಯಿ ಒಡೀತಾರ. ಏನೋ ಉದ್ಘಾಟನೆ ಅನಕೋಬ್ಯಾಡರಿ. ಸಂಡಿಗೆಗಾಗಿ, ಕೇವಲ ವರ್ಷದ ಸಂಡಿಗೆಗಾಗಿ ಅವುಗಳನ್ನ ನಮ್ಮಜ್ಜಿಯೇ ಕೂತು ಖುದ್ದು ದೊಡ್ಡ ದೊಡ್ಡ ಹೋಳು ಮಾಡತಿದ್ದಳು. ಈ ಹೋಳುಗಳನ್ನ ನಾವು ಆ ಭತ್ತದ ಅರಳಿನ ಆಕಾರದೊಳಗೇ ಹೆಚ್ಚಬೇಕು. ಸಣ್ಣವು ದೊಡ್ಡವು ಆಗಂಗಿಲ್ಲ ಹೋಳು. ಇವೂ ನನ್ನಜ್ಜಿಗೆ ಕಾಣತಿದ್ದವು. ಎರಡು ತಾಸು ಓದೂ ಹೋತು, ಕೈಕಾಲೂ ಹೋದವು.

ಇನ್ನಹಿಂದಿನ ಕಾಲದಾಗ ನೆಲದ ಮ್ಯಾಲೆ ಕೂತು ಊಟ ಮಾಡತಿದ್ದಿದ್ದಿಲ್ಲ. ಹಂಗಂತ, ಆಗಿನ ಕಾಲದಾಗ ನಿಮ್ಮ ಮನೀಯೊಳಗ, ಡೈನಿಂಗ್ ಟೇಬಲ್ ಇತ್ತ, ಅನ್ನಬ್ಯಾಡರೀ. ಕಟ್ಟಿಗೆಯ ಮಣೀ ಮ್ಯಾಲೆ ಕೂತು ಊಟ ಮಾಡುತಿದ್ದರು. ಈಗ ಆ ಪದ್ಧತಿ ತಪ್ಪಿ ಹೋಗಿತ್ತು. ಅದಕ್ಕೆಂದೇ, ಆ ಮಣಿಗಳೆಲ್ಲಾ ಅಟ್ಟ ಸೇರಿದ್ದವು. ಈಗ ಅವುಗಳಿಗೂ ಒಂದು ಕಾಲ ಬರುತಿತ್ತು. ಅಟ್ಟದ ಮ್ಯಾಲಿನಿಂದ ಅವುಗಳನ್ನ ಇಳಿಸಿ, ಸ್ವಚ್ಛ ತೊಳದು ಬಿಸಿಲಿಗಿಡಬೇಕು. ಮರುದಿನ ಅವುಗಳಿಗೆ ಎಣ್ಣಿ ಹಚ್ಚ ಬೇಕು. ಕೊಡೋದು ಒಂದು ಚಮಚಾ ಎಣ್ಣಿ. ಎಲ್ಲಾ ಹನ್ನೆರಡೂ ಮಣಿಗಳಿಗೂ ಹಚ್ಚಬೇಕು. ಒಂಚೂರೂ ಖರ್ಚಾಗಿರಬಾರದು. ಇದೇನೂ ಒಗಟಲ್ಲ. ನಮಗ ಕೊಟ್ಟಿರೋ ಟಾಸ್ಕ. ನಾಳೆ ಸಂಡಿಗಿ ಮಣಿಗೆ ಕಚ್ಚಿಕೊಂಡು ಕೂತಿದ್ದರ, ಖೋಡಿ, ಎಣ್ಣಿ ಹಚ್ಚಿಲ್ಲ ಸಮಾತ್ನಾಗಿ ಅಂತಿದ್ದರು. ಛಂದಾಗಿ ಎಣ್ಣಿ ಹಚ್ಚಿದರ, ಧಂಧರದಾಳಿ, ನಾಳೆ ಸಂಸಾರ ಹೆಂಗ ಮಾಡತಾಳೋ ಅಂತಿದ್ದರು. ಒಟ್ಟಿನೊಳಗ, ಅವರನ್ನ ತೃಪ್ತಿ ಮಾಡಲಿಕ್ಕೆ ನನಗ ಬರತಿದ್ದಿದ್ದಿಲ್ಲ.

ಇನ್ನ ಸಂಡಗಿ ತಯಾರಿಗೆ ಬಂದರ. ಸಣ್ಣಗೆ ಕೋತಂಬರಿಯನ್ನ ಅಜ್ಜೀನೆ ಹೆಚ್ಚತಿದ್ದಳು. ಆದರ, ನಮ್ಮವ್ವನ ಕಷ್ಟನ ದೊಡ್ಡದು. ಸುಮಾರು ಎರಡು ಮೂರು ಕೇಜಿಯಷ್ಟು, ನಮ್ಮ ಹೊಲದಿಂದ ತಂದಿರೋದರಿಂದ ನಮಗ ತೂಕ ಗೊತ್ತಿರೂದಿಲ್ಲ. ಆ ಮೆಣಸಿನ ಕಾಯಿಯನ್ನ ಒರಳು ಕಲ್ಲಲ್ಲಿ ಸಣ್ಣಗ ರುಬ್ಬಬೇಕು. ಕೈಯಲ್ಲಾ ಉರಿ ಉರಿ, ಮರುದಿನ ಅರಳಿಗೆ ಮೊದಲು, ಈ ಹೆಚ್ಚಿಟ್ಟಿದ್ದ ಕುಂಬಳಕಾಯಿಯನ್ನ ಹಿಂಡಿ ತೆಗೆದ ನೀರಿನಿಂದ ತೊಳೆದು ಇಂಗು, ಕೋತಂಬರಿ ಸೊಪ್ಪು, ರುಬ್ಬಿದ ಹಸಿ ಮೆಣಸಿನ ಕಾಯಿ, ಕುಂಬಳಕಾಯಿ ಹೋಳು ಹಾಕಿ ಕಲಿಸಿ, ಕೈಯಿಂದ ಒತ್ತಿ, ಮಣೀ ಮ್ಯಾಲೆ ಒಂದೇ ರೀತಿಯೊಳಗ ಜೋಡಿಸಬೇಕು. ಜಾಸ್ತಿ ಒತ್ತಿ ಇಟ್ಟರ ಇಡೀ ಸಂಡಿಗೆ ಬರತಾವ, ಆದರ ಕಲ್ಲಾಗತಾವ. ಒಣಗಿದ ಮ್ಯಾಲೆ ಎಣ್ಣಿಯೊಳಗ ಕರದರ ಹಗುರಾಗಿ ಅರುಳೂದಿಲ್ಲ. ಹಂಗಂತ ಜಾಸ್ತಿ ಕೈಯಲ್ಲಿ ಒತ್ತದೇ ಇಟ್ಟರೆ, ಸಂಡಗಿ ಇಡೀಯಾಗೋದಿಲ್ಲ, ಪುಡಿ ಪುಡಿ ಆಗಿರತಾವ. ಒಂಥರಾ ಹಗ್ಗದ ಮ್ಯಾಲೆ ನಡೆದಂಗ, ಎಚ್ಚರಿರಬೇಕು. ಜೀವನದ ಪಾಠ ಇದ್ದಂಗ. ಇಲ್ಲೆ ಅವ್ವನ ಕೆಲಸಾ ಅಂದರ ರುಚಿ ಕೆಡದಂಗ ಈ ಎಲ್ಲಾ ಸಾಮಗ್ರಿಗಳನ್ನೂ ಹಾಕಿ, ಹೊಂದಿಸಿ ಕೊಡೋದು. ಇವು ಮಡೀ ಸಂಡಗೀ, ಯಾಕಂದರ, ಕುಂಬಳಕಾಯಿಯ ನೀರಿನ್ಯಾಗ ಮಾಡಿದ್ವು. ಮತ್ತ ಉಳಿದ ಅರಳುಗಳನ್ನ, ತೊಳಿಲಿಕ್ಕೆ ನೀರು ಹಾಕಿದ್ದು, ಇವು ಮೈಲಿಗಿ ಸಂಡಗಿ. ಒಟ್ಟು ಒಂದು ಇಪ್ಪತ್ತ ಮಣಿ ತುಂಬಿದ ಮ್ಯಾಲೆ, ಇರೋ ಬರೋ ತಾಟುಗಳೂ ತುಂಬಬೇಕು. ಆಗ ಈ ಸಂಡಗೀ ತಯಾರೀ ಮುಗೀತಿತ್ತು.

ಈ ಮಣೀ-ತಾಟು ಎಲ್ಲಾನೂ ಬಿಸಲಿನ್ಯಾಗಿಡಬೇಕು. ಬಿಸಲು ಸರಿದಂಗ ಅವುಗಳನ್ನ ಮುಂದ ಹಿಂದ ಸರಿಸಬೇಕು. ಕಾಗಿ ಬಂದು ತಿನ್ನದಂಗ ನೋಡಿಕೊಳ್ಳಬೇಕು. ಮುಖ್ಯವಾಗಿ, ನಾಯಿ ಮುಟ್ಟದಂಗ ನೋಡಿಕೊಳ್ಳ ಬೇಕು. ನಾಯಿ ಮುಟ್ಟಿದರ, ಆ ಮಣೀ ಪೂರ್ತಿ ಹಾಳು. ಕಾಗಿ ತಿಂದರ, ಅದೊಂದೇ ಸಂಡಿಗೆ ಹಾಳು. ನಾವೆಷ್ಟೇ ಚಂದಾಗಿ ಕಾದರೂ, ಒಂದು ಮಣಿ ನೆರಳಿಗೆ ಬರತಿತ್ತು. ಅಥವಾ ಒಂಚೂರು ಬಿಸಿಲು ಕಡಿಮೆ ಆಗಿರತಿತ್ತು. ಆದರೆ, ಅದೇ ಸಮಯಕ್ಕೇ ನಮ್ಮಜ್ಜೀ ಕಣ್ಣು ಬಿದ್ದಿರತಿತ್ತು. ನಮಗ ಬೈಗಳಾ.

ಸಂಜೀ ಮುಂದ ಎಲ್ಲಾ ಸಂಡಗೀ ಒಳಗೆ ತಂದಿಡಬೇಕು. ಆಗ ಮತ್ತ, ನಮ್ಮಜ್ಜಿ ಇಕಾ ಇಲ್ಲೆ ಒಂದು ಸಂಡಗೀ ಕಾಗಿ ತಿಂದದ. ಅಂತ ಲೆಕ್ಕಾ ಹಾಕತಿದ್ದಳು. ಸಮಾ ಇದ್ದ ಮಣೀ ಒಂದೂ ಅಕೀ ಕಣ್ಣಿಗೇ ಬೀಳತಿದ್ದಿಲ್ಲ. ಇನ್ನ ಮ್ಯಾಲ, ನಮ್ಮಜ್ಜೀ ನಮಗ ಹೇಳೋದೇನು, ಇಲ್ಲೇ ಕುತಗೊಂಡು ಓದು, ಮಾಡೋದೇನದ, ಸಂಡಗೀ ಮುಂದ ಕೂಡೋದೊಂದು ಕೆಲಸನ ಅಲ್ಲ. ಅಂತ. ಹಿಂತಾದರಾಗ ನಮ್ಮ ಓದು ಮತ್ತ ಪರೀಕ್ಷಾ. ನಾವೇನಾರ ಅಂದರ, ವರ್ಷ ಪೂರ್ತಿ ಓದಿರತೀರೆಲಾ, ಈಗೊಂದು ನಾಲ್ಕು ದಿನ ಸಂಡಿಗಿ ಮಾಡಿದರ ತಪ್ಪೇನು ಅಂತನೋ, ಓದಿ ಕಲೆಕ್ಟರ್ ಆಗ ಬೇಕಿಲ್ಲ, ಪಾಸಾಗತೀಯಲ್ಲ ಸಾಕುಬಿಡು ಅಂತಿದ್ದರು. ಈ ಸಂಡಗಿ ಮೂರು ದಿನ ಛೊಲೋ ಬಿಸಿಲ್ನಾಗ ಒಣಗಿ, ಮ್ಯಾಲೊಂದಿನ ಇಟ್ಟರಾತು, ಡೆಬ್ಬಿಗೆ ಹಾಕೋದು. ಅದಕ್ಕಿಂತ ಮೊದಲ, ಅವುಗಳ ಕ್ಷಾಲಿಟ್ಟಿ ಚಕ್ ಮಾಡಬೇಕು, ಅಂದರ, ಉಪ್ಪು, ಖಾರ, ಇಂಗಿನ ರುಚಿ ಚೆಕ್ ಮಾಡತಿದ್ದರು. ಒಣಗಿದ ಹದಾ ಚೆಕ್ ಮಾಡತಿದ್ದರು. ಅಂದರ ಎಣ್ಣಿಯೊಳಗ ಕರೀತಿದ್ದರು. ಎಲ್ಲಾ ಸೈ ಅಂತ ಆಗೂ ಛಾನ್ಸಸ್ ಕಡಿಮೀನೇ, ಆದರೂ ಸರ್ಟಿಫಿಕೇಟ್ ಗೆ ಕಳಸತಿದ್ದರು. ಅಂದರ ಅಕ್ಕ ಪಕ್ಕದ ಎಲ್ಲಾ ಮನೀಗಳಿಗೂ ಹತ್ತರಿಂದ ಹದಿನೈದು ಸಂಡಿಗೆ ಕೊಟ್ಟು ಬರಬೇಕು. ಅವರ ಸರ್ಟಿಫಿಕೇಟ್ ಸಿಕ್ಕರ ಮುಗೀತು. ಇದೂ ಐಎಸ್ಐ ಸರ್ಟಿಫಿಕೇಟ್ ಗಿಂತ ಕಷ್ಟದ ಕೆಲಸ.

ಈ ಅರಳು ಸಂಡಗಿ ಮುಗಿದರ, ಮುಗೀಲಿಲ್ಲ, ಅದರ ನಂತರ ಬರುವುದು, ಅಕ್ಕಿ ಸಂಡಗಿ, ಅಥವಾ ರೆಕ್ಕಿ ಸಂಡಗಿ, ಫೇಣಿ ಸಂಡಗಿ, ಚಕ್ಕುಲಿ ಸಂಡಗಿ. ಒಂದು ವಾರ, ಐದು ದಿನ ಅಕ್ಕಿ ನೆನಸಿ, ನಂತರ ನೆರಳಿನಲ್ಲಿ ಒಣಗಿಸಿ, ಕುಟ್ಟಿ, ಮರುದಿನ, ಹಿಟ್ಟು ಉಕ್ಕರಿಸಿ, ಬಿಸಿ ಬಿಸಿ ಹಿಟ್ಟಿನ ಮುದ್ದೆಯಿಂದ ಸಂಡಿಗೆ ಇಡಬೇಕು. ನಾವು ಒಂದೊಂದೇ ಮಣಿ ಎತ್ತಿ ಬಿಸಿಲಿನಲ್ಲಿ ಒಣಗಿಸ ಬೇಕು. ಅಂದರೆ, ಒಣಗಿಸೋ ಪದ್ಧತಿಯಲ್ಲಿ ಅರಳು ಸಂಡಿಗೆಗೂ ಇದಕ್ಕೂ ಬದಲಿಲ್ಲ, ಅದು ಅಕ್ಕ ಇದು ತಂಗಿ, ಒಂದೇ ಬಳ್ಳಿಯ ಹೂಗಳು ಒಟ್ಟಿನ ಮ್ಯಾಲೆ. ಬಿಳಿ ಸಂಡಿಗೆಗೆ ಕಾಗೆಗೆ ಆಕರ್ಷಣೆ ಹೆಚ್ಚು ಕಾಯುವ ಜವಾಬ್ದಾರಿ ಜಾಸ್ತಿ.

ಹಾಗೆಯೇ ಅವಲಕ್ಕಿ ಹಪ್ಪಳ ಮಾಡುವುದು, ಇದರಲ್ಲಿ ಓಣಿಯವರೆಲ್ಲಾ ಸೇರಿ, ಒಂದೇ ದಿನ ಮಾಡಿದ ಹಪ್ಪಳಗಳನ್ನು ಒಣಗಿಸುವ ಕಾರ್ಯ, ಇದು ಮರುದಿನವೂ ಮುಂದುವರೆಯುತ್ತಿತ್ತು. ಹಾಗಯೇ ಉದ್ದಿನ ಹಪ್ಪಳ, ಈ ಹಪ್ಪಳ ಸಂಡಿಗೆಗಳ ಕಾಲದಲ್ಲಿ ಓದನ್ನು ಒಂದು ತಿಂಗಳಲ್ಲಿ ಕಟ್ಟಿಡಬೇಕಾಗಿದ್ದೇ.

ಇನ್ನು ಈ ಮೆಣಸಿನ ಕಾಯಿಯನ್ನು ಮಜ್ಜಿಗೆಯಲ್ಲಿ ನೆನಸಿ ಬಾಳಕ ಮಾಡುವುದು, ಮಾವಿನ ಕಾಯಿ, ನಿಂಬಿ ಕಾಯಿ, ಉಪ್ಪಿನ ಕಾಯಿ, ಹುಣಸೇ ಕಾಯಿ ತೊಕ್ಕು, ರಂಜಕ ಇವೆಲ್ಲಾ ಒಂದು ದಿನದ ಹಬ್ಬಗಳಿದ್ದಂತೆ. ಜೊತೀಗೆ, ಶ್ಯಾವಗೀ ಮಾಡುವುದು ಕೂಡಾ ಒಂದು ದಿನವೇ. ಆದರೆ ಹಿಟ್ಟಿನ ತಯಾರಿಗೆ ಎರಡು ದಿನ ಬೇಕು. ನಮ್ಮ ಮನೀಯೊಳಗ ಮಡೀಲೇ ಶ್ಯಾವಗೀ ಮಾಡಿದರ. ಇನ್ನುಳಿದವರು, ಶ್ಯಾವಗೀ ಮಣಿ ಅಂತ ಉದ್ದದ ಹಲಗಿಯ ಮ್ಯಾಲೆ, ಎರಡು ಕಡೆನೂ ಕಾಲು ಇಟ್ಟುಕೊಂಡು ಶ್ಯಾವಗೀ ಹೊಸದರೆ, ಕೆಳಗೆ ಒಬ್ಬ ಚಿಕ್ಕ ಹುಡುಗಿ ಆ ಎಳೆಗಳನ್ನು ಒಂದು ಕೋಲಿನ ಮೇಲೆ ಜೋಡಿಸುತ್ತಾರೆ. ಇನ್ನು ಸಣ್ಣ ಪುಟ್ಟ ತಯಾರಿಯ ಕವಳೀ ಕಾಯಿ ಉಪ್ಪಿನ ಕಾಯಿ, ಚಳ್ಳ ಕಾಯಿ ಕರಿಂಡಿ ಇವುಗಳ ಪಾಲೂ ಇದೆ. ಆದರೆ, ಒಂದು ಮುಖ್ಯ ವಿಚಾರ ಅಂದರೆ, ಈ ತೊಂದರೆಗಳು ಹುಡುಗಿಯರಿಗೆ ಮಾತ್ರವೇ. ಹುಡುಗರು ಮಾತ್ರ ಹಪ್ಪಳ ಸಂಡಿಗೆ ತಿನ್ನುವ ಅತಿಥಿಗಳು ಮಾತ್ರ.

ಪರೀಕ್ಷೆಗೆ, ಓದಿಗೆ ಏಕಾಗ್ರತೆ ಒಂದು ದೊಡ್ಡ ಸವಾಲು. ಹಾಗೆಯೆ, ಸಮಯದ ಹೊಂದಾಣಿಕೆ ಸಹ. ಅದರೊಂದಿಗೆ, ಬೇಸಿಗೆಯ ಅತಿಥಿಗಳಾದ ಹಪ್ಪಳ ಸಂಡಿಗೆಗಳೂ ಪರೀಕ್ಷೆಗೆ ಸವಾಲೇ ಆಗಿರತಿತ್ತು. ಆದರೆ, ಈ ಎಲ್ಲಾ ಸಂಕಷ್ಟಗಳನ್ನೂ ಅನುಭವಿಸಿ ಮಾಡಿದ ಹಪ್ಪಳ ಸಂಡಿಗೆ, ಶ್ಯಾವಿಗೆ ತಿನ್ನುವಾಗ ಮಾತ್ರ ರುಚಿ ಜಾಸ್ತಿ ಇರುತ್ತಿತ್ತು. ಮುಂದಿನ ವರುಷ ಮತ್ತೆ ಪರೀಕ್ಷೆ ಸಂಡಿಗೆಗಳು ಬಂಧುಗಳಂತೆ ಒಟ್ಟಿಗೇ ಬರುತ್ತಿದ್ದವು. ಅದೇ ಸಂಭ್ರಮ ಮತ್ತೆ ಮತ್ತೆ ಬರುತ್ತಿತ್ತು.

ಈಗೆಲ್ಲಿದೆ ಆ ಸಂಭ್ರಮ. ಅದರ ಕಾರಣಗಳಲ್ಲಿ ಮೊದಲಿನದು, ಆ ರೇಜಿಗೆ ಕೆಲಸಗಳನ್ನು ಮಾಡಲು ಕಷ್ಟವಾಗಿರುವುದು; ಸಮಯವಿಲ್ಲ, ಕೆಸಲದ ಗಡಿಬಿಡಿಯಲ್ಲಿ ಮೂರುದಿನ ಒಣಗಿಸುವಷ್ಟು ರಜೆ ಒಟ್ಟಾಗಿ ಸಿಗುವುದಿಲ್ಲ ಎಂಬ ಸಬೂಬು. ನಾವಿರೋದು ಅಪಾರ್ಟಮೆಂಟ್ ನಲ್ಲಿ, ಬಿಸಿಲು ಬರುವುದಿಲ್ಲ ಎಂಬುದೊಂದು ಸಬೂಬು.

ಆದರೆ, ಅಷ್ಟು ದುಡ್ಡು ಕೊಟ್ಟು, ಇಷ್ಟೇ ಇಷ್ಟು ಹಪ್ಪಳ ಸಂಡಿಗೆ ತಂದು, ಅದನ್ನು ಕರಿದಾದ ಮೇಲೆ ಅದರಲ್ಲಿ ಉಪ್ಪಿಲ್ಲ, ಖಾರವಿಲ್ಲ. ಇಂಗಿನ ಘಮವಂತೂ ಮೊದಲೇ ಇಲ್ಲ. ಇದರ ಬದಲಿಗೆ ಶುಚಿ ರುಚಿಯಾಗಿ ಮನೆಯಲ್ಲೇ ಮಾಡಿ ತಿನ್ನಬಹುದೆಂದುಕೊಂಡರೂ ಅದು ಪ್ರತೀ ಬಾರಿಯೂ ಸಾಧ್ಯವಿಲ್ಲದೇ ಹೋಗುತ್ತದೆ.

ಯಾರೇನೇ ಹೇಳಲಿ, ಯಾರೇನೇ ಹಪ್ಪಳ ಸಂಡಿಗೆ ಮಾಡಲಿ ಬಿಡಲಿ. ಪರೀಕ್ಷೆ-ಸಂಡಿಗೆಗಳು ಬಂಧುಗಳೇ, ಒಟ್ಟಿಗೆ ಬರುತ್ತವೆ. ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ ಅಂಧಂಗ, ಎತ್ತಣ ಪರೀಕ್ಷೆ, ಎತ್ತಣ ಸಂಡಿಗೆ, ಎತ್ತಣ ಮಾರ್ಕ್ಷ, ಎತ್ತಣಿಂದೆತ್ತ ಸಂಬಂಧವಯ್ಯ.

-ಡಾ.ವೃಂದಾ ಸಂಗಮ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಗೀತಾ ಬಾಯಿ
ಗೀತಾ ಬಾಯಿ
1 year ago

ಡಾ . .ವೃಂದಾ ಸಂಗಮ್ ಇವರ ಸಂಡಿಗ್ಯೋಪಾಖ್ಯಾನ ಓದಿ ಸಂಡಿಗೆ ಮಾಡಲು ಪಡುವ ಪರಿಶ್ರಮ ಇದಲ್ಲದೆ ಅಜ್ಜಿ ಯ ಪ್ರೀತಿಯ ಆದೇಶವನ್ನು ಪಾಲಿಸಲು ಮೊಮ್ಮಕ್ಕಳು ಪಡುವ ಪಾಡು, ಸಂಡಿಗೆ ರುಚಿ ನೋಡಲು ಪಕ್ಕದ ಮನೆಯವರಿಗೆ ನೀಡುವ ಪರಿ, ಇವೆಲ್ಲ ಗತ ಕಾಲದ ನೆನಪನ್ನು ಮರುಕಳಿಸಿತು. ರೆಕ್ಕೆ ಸಂಡಿಗೆ ಯಾವುದೇಂದು ತಿಳಿಯಲಿಲ್ಲ. 😊. ಇವರಿಗೆ ಭಾಷೆಯ ಮೇಲಿನ ಹಿಡಿತ ಚೆನ್ನಾಗಿದೆ
.

1
0
Would love your thoughts, please comment.x
()
x