ಕಾವ್ಯಧಾರೆ

ಮೂರು ಕವನಗಳು: ಮಮತಾ ಚಿತ್ರದುರ್ಗ

ಅವನು
ಜೇನೊಳಗಿನ ಸಿಹಿ ಅವನು
ಹೂವಳಗಿನ ಮೃದು ಅವನು
ಗಾಳಿಯೊಳಗಿನ ಗಂಧ ಅವನು
ಮೋಡದೊಳಗಿನ ಬೆಳಕು ಅವನು
ತಾರೆಯೊಳಗಿನ ಹೊಳಪು ಅವನು
ನೀರಿನೊಳಗಿನ ಅಲೆಯ ಪುಳಕ ಅವನು
ಚಿತ್ರದೊಳಗಿನ ಬಣ್ಣ ಅವನು
ಪತ್ರದೊಳಗಿನ ಭಾವ ಅವನು
ಇಬ್ಬನಿಯೊಳಗಿನ ತೇವ ಅವನು
ಕಣ್ಣೊಳಗಿನ ನೋಟ ಅವನು
ಹಬ್ಬದೊಳಗಿನ ಸಡಗರ ಅವನು
ಬೆಟ್ಟದೊಳಗಿನ ತನ್ಮಯ ಅವನು
ಎಲೆಯೊಳಗಿನ ಹಸಿರು ಅವನು
ಚೈತ್ರದೊಳಗಿನ ಚಿಗುರು ಅವನು
ಭಾವನೆಗಳ ಯಾನಕ್ಕೆ ಗಮ್ಯ ಅವನು
ಸಂಗೀತದ ನಾದದೊಳಗಿನ ಸೌಮ್ಯ ಅವನು
ನನ್ನ ಧ್ವನಿಯ ಶಬ್ದ ಅವನು
ನನ್ನ ಕಣ್ಣಲಿ ಬೆರಗು ಅವನು
ನನ್ನವನು…!


ಸುಗಂಧ ದ್ರವ್ಯವದು ಹೂಗಳ ಗೋರಿ
ಒಣಗಿದ ಹೂಗಳ ಎದೆಯ ಭಾರದ ಮಾತಿನ ಸಾರ.
ದೇವರ ಮುಡಿಯಲ್ಲಿದ್ದು
ಹೆಣದ ಅಡಿಯಲ್ಲಿದ್ದು
ಸೈನಿಕನ ಸಮಾಧಿ ಮೇಲಿದ್ದು
ಬಾವುಟದ ಒಡಲಲ್ಲಿದ್ದು
ರಾಜಕಾರಣಿಯ ಕೊರಳಲ್ಲಿದ್ದು
ಪ್ರೇಮಿಯ ಬೆರಳಲ್ಲಿದ್ದು
ಹೆಂಗಳೆಯ ಹೆರಳಲ್ಲಿದ್ದು
ದಿನವೆಲ್ಲಾ ಬಳಲುತ ತೋರಿತು ಹೂವು ತನ್ನ ಚೆಂದ.
ಗಾಳಿಯು ಕಸಿಯಿತು ಅಣು ಅಣುವಾಗಿ ಹೂವಿನ ಗಂಧ.
ತನ್ನಲ್ಲಿನ ಸಂತಸವನ್ನೆಲ್ಲಾ ದಿನಪೂರ್ತಿ ಧಾರೆ ಎರೆದು,
ಮುರುಟಿ ಬಿದ್ದಿದೆ ಹೂವೀಗ ಒಣಗಿ.
ಸತ್ತ ಹೂವು ಸಹ ವ್ಯರ್ಥವಾಗಿಲ್ಲ.
ಹೂವಿನ ಶವಯಾತ್ರೆಯು ತೂಗಿ ಸಾಗಿ ಹೋಗಿ
ಅದರ ಗೋರಿ ಎದ್ದಿದೆ ಸುಗಂಧ ದ್ರವ್ಯದ ಕೊಳದಿ.


ವೃದ್ಧಾಶ್ರಮದ ಗೋಡೆಗಳಿಗೆ ಬಾಯಿದ್ದಿದ್ದರೆ?
ಮನೆಯಂಗಳದಿ ಆಡಿಕೊಂಡಿದ್ದ ಹೂಮರಿಗಳು
ಎಂದು ತಾಯ ತೆಕ್ಕೆಯಿಂದ ರೆಕ್ಕೆ ಬಡಿದೆದ್ದು
ತಂತಮ್ಮ ದಾರಿಗೆ ಜಾರಿದವು?

ಬಿಟ್ಟೋದ ಮಕ್ಕಳ ನೆನಪ ಅಪ್ಪಿ ಹಿಡಿದು
ದುಃಖಿಸುತ್ತ ತಾಯಿಕೋಳಿಯ ಅಳಲು.
ಮತ್ತೆ ಮತ್ತೆ ನೆನೆಯುತಿಹುದು ಮರಿಗಳ.

ಕತ್ತಲಿಂದ ಬೆಳಕು ಬಯಸಲು
ಯಾರೊಂದಿಗೆ ಹಚ್ಚುವುದು ನೆನಪಿನ ದೀಪ.
ತಪ್ಪಿ ಹೋದವೆಂದು ಬಿಕ್ಕಿ ದುಃಖಿಸಲು,
ನಿನ್ನ ಹೂಮರಿಗಳಿಲ್ಲೇ ಇವೆ ಪಕ್ಕದಲ್ಲೇ
ಕರೆದಾಗ ಬರುತ್ತವೆ ಎಂದು
ಮನಸ್ಸು ಹೇಳುವ ಅರ್ಧಸತ್ಯ.

ಹಕ್ಕಿ ಮರಿಗಳು ರೆಕ್ಕೆ ಬಂದಮೇಲೆ,
ತಾನು ಈ ಹಿಂದೆ ಅತ್ತು ಬಿಕ್ಕಿದಾಗ ತೆಕ್ಕೆಯಲ್ಲಿಟ್ಟುಕೊಂಡು
ಪಕ್ಕವೇ ಕೂತು ಕಣ್ಣೊರೆಸಿ ಸಂತೈಸಿದ
ತಾಯಿ ಕೈಗಳ ಸುಕ್ಕುಗಳನೆತ್ತಿತೋರಿಸಿ ನಗುತ್ತಿವೆ.

ತಾಯಿಕೋಳಿ ತನ್ನ ಬಾಯಲ್ಲಿ ಕಡಿದು ತುಂಡು
ಮಾಡಾಕಿದ ಗುಟುಕು ತಿಂದು ಬೆಳೆದವಂದು.
ಇಂದು ಗುಟುಕಿನ ತುತ್ತನ್ನೆಂಜಲಂತೆ ಕಾಣುತಿವೆ.

ತಿಪ್ಪೆಯಲ್ಲೂ ಒಪ್ಪವಾದದ್ದನ್ನೇ
ಆರಿಸಿ ತಿನ್ನೆಂದು ಕಲಿಸಿದ ತಾಯಿಯ
ತತ್ವ ಪಾಠ ಇಂದು ನಗೆಪಾಟಲಾಗಿ
ಧಿಕ್ಕರಿತವಾಗಿದೆ.

ಬಳಲಿ ಬಣ್ಣಗೆಟ್ಟ ರೆಕ್ಕೆಗಳಿಂದ ಹಾರಲಾಗದೆ
ಹಾಸಿಗೆ ಹಿಡಿದು ಜೀವ ಬಿಟ್ಟಿದೆ ತಾಯಿಕೋಳಿ.
ಮಗನಿಗೆ ಹೇಳುವ ಮಾತೆಲ್ಲ ಒಂದೇಸಮ ಉಸುರಿ.
ದೂರದ ಮಗನಿಗೆ ಮುಟ್ಟುವುದು ಹೇಗೆ ಆಕೆಯ ಹಂಬಲ
ಹೇಳಲು ವೃದ್ಧಾಶ್ರಮದ ಗೋಡೆಗಳಿಗೆ ಬಾಯಿಲ್ಲವಲ್ಲ

ಮಮತಾ ಚಿತ್ರದುರ್ಗ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *