ನಿಂದನೆಗೆ ವಂದನ ; ಜೀವನ ಪಾವನ: ಡಾ. ಹೆಚ್ ಎನ್ ಮಂಜುರಾಜ್

ಪುಸ್ತಕದ ಹೆಸರು : ವನಸುಮ
(ಸಮಾಜ ಸೇವಕ ಶ್ರೀ ಕೆ ಆರ್ ಲಕ್ಕೇಗೌಡರ ಜೀವನ ಕಥನ)
ಸಂಪಾದಕರು: ಡಾ. ದೀಪು
ಪ್ರಕಾಶಕರು: ಶ್ರೀ ಸಾಯಿ ಸಾಹಿತ್ಯ, ಬೆಂಗಳೂರು
ಮೊದಲ ಮುದ್ರಣ: 2023
ಒಟ್ಟು ಪುಟಗಳು: 196, ಬೆಲೆ: ರೂ. 200

ಇದೊಂದು ವಿಶಿಷ್ಟ ಕಥನ. ಕೆ ಆರ್ ನಗರ ತಾಲೂಕಿನ ಕಾಟ್ನಾಳು ಗ್ರಾಮದ ಶ್ರೀ ಕೆ ಆರ್ ಲಕ್ಕೇಗೌಡರು ರೈತಾಪಿ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಶ್ರಮ ಪಟ್ಟು ವಾರಾನ್ನ ಮಾಡಿ ವಿದ್ಯಾರ್ಜನೆಯಿಂದ ಮೇಲೆ ಬಂದು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿರುವವರು. ಅದಕ್ಕಿಂತ ಮಿಗಿಲಾಗಿ ಸಮಾಜ ಸೇವೆಯನ್ನು ತಮ್ಮಾತ್ಮ ಒಪ್ಪುವಂತೆ ಮಾಡಿಕೊಂಡು ಬಂದವರು. ಅವರ ಮಾತಿನಿಂದ ಜಡವೂ ಚೇತನಗೊಳ್ಳುವುದು; ಅವರ ಕ್ರಿಯೆಯಿಂದ ಎಲ್ಲವೂ ಚೇತೋಹಾರಿಯಾಗುವುದು; ಅವರು ನಡೆದ ದಾರಿಯಲ್ಲಿ ಸಮಾನ ಮನಸ್ಕರು ಪೂರ್ಣ ನಂಬುಗೆಯಿಟ್ಟು ಸಾಗುವರು. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಜನಿಸಿ, ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಬೆಳೆದು, ನವ ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರಗಳನ್ನು ಕಂಡವರು. ಒಂದು ಕಾಲದ ಸಾಕ್ಷೀಪ್ರಜ್ಞೆಯ ರೂಪ ನಿರೂಪವಾಗಿ ಈ ಪುಸ್ತಕ ರೂಪುಗೊಂಡಿದೆ.

ಶ್ರೀಯುತ ಲಕ್ಕೇಗೌಡರು ಸ್ವಾರ್ಥ ಜೀವನ ನಡೆಸಿದವರಲ್ಲ; ಸಮಾಜಮುಖಿಯಾದವರು. ಯಾರು ಏನೇ ಅಂದರೂ ಛಲ ಬಿಡದ ತ್ರಿವಿಕ್ರಮನಂತೆ ತಮಗೆ ಸರಿ ಕಂಡ ದಾರಿಯಲ್ಲಿ ಒಬ್ಬಂಟಿಯಾಗಿ ನಡೆದವರು. ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿ, ಸತ್ಯಾಗ್ರಹ, ಧರಣಿ, ಉಪವಾಸಗಳಲ್ಲಿ ಭಾಗಿಯಾಗಿ ದೀನ ದುರ್ಬಲರ, ವಿಶೇಷ ಚೇತನರ, ನೊಂದವರ, ಅನ್ಯಾಯಕ್ಕೆ ಒಳಗಾದವರ ದನಿಯಾಗಿ ಹೋರಾಟ ಮಾಡಿ ಯಶಸ್ಸು ಕಂಡವರು. ಅವರ ಒಡನಾಡಿಗಳೆಲ್ಲರೂ ನಾಡು ಕಂಡ ಧೀಮಂತ ಚೇತನಗಳೇ! ಹಾಗಾಗಿ ಅವರ ಜೀವನ ಕಥನವು ಪರೋಕ್ಷವಾಗಿ ಕ್ರಿ ಶ 1940 ರಿಂದ ಕ್ರಿ ಶ 2020 ದ ವರೆಗಿನ ಕರ್ನಾಟಕದ ಅದರಲ್ಲೂ ಹಳೆ ಮೈಸೂರು ಪ್ರಾಂತ್ಯದ ಚಿತ್ರಣವನ್ನು ಪ್ರಾತಿನಿಧಿಕವಾಗಿ, ನಿಷ್ಕಳಂಕವಾಗಿ ಅಷ್ಟೇ ಪ್ರಾಮಾಣಿಕವಾಗಿ ಕಟ್ಟಿ ಕೊಟ್ಟಿದೆ. ಶ್ರೀಯುತ ಲಕ್ಕೇಗೌಡರ ಮೂಲಕ ನಮಗೆ ಒಂದು ಕಾಲಘಟ್ಟದ ಮುಖ್ಯ ನೆಲೆಗಳು ಪರಿಚಯವಾಗುತ್ತವೆ. ನೂರಾರು ವ್ಯಕ್ತಿತ್ವಗಳನ್ನು ಅವರು ತಮ್ಮ ಕಣ್ಣಿಂದ ಚಿತ್ರಿಸಿರುವರಾದರೂ ಅದು ನಿಷ್ಪಕ್ಷಪಾತವಾಗಿದೆ; ನಿರ್ಲಿಪ್ತವಾಗಿದೆ ಮತ್ತು ನಿರ್ದಾಕ್ಷಿಣ್ಯವಾಗಿದೆ.

ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷಾವಿಷಯಗಳಲ್ಲಿ ಪ್ರಭುತ್ವವನ್ನೂ ಪಾಂಡಿತ್ಯವನ್ನೂ ಸಂಪಾದಿಸಿರುವ ಉಪನ್ಯಾಸಕರಾಗಿ ಸಾವಿರಾರು ಶಿಷ್ಯರಿಗೆ ಮನ ಮುಟ್ಟುವಂತೆ ಪಾಠ ಮಾಡಿರುವ ಇವರು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಹಿಂದಿರುಗಿ ನೋಡುವ ಮನಸ್ಸು ಮಾಡಿದ್ದಾರೆ. ಶ್ರೀಯುತ ಲಕ್ಕೇಗೌಡರೇ ಸ್ವತಃ ತಮ್ಮ ಆತ್ಮಕಥನವನ್ನು ಬರೆಯಬಹುದಾಗಿತ್ತು. ಬಹುಶಃ ಆರೋಗ್ಯದ ಸಮಸ್ಯೆಯಿಂದಲೂ ಬರೆವಣಿಗೆಗಿಂತ ಮಾತಿನಲ್ಲಿ ಹೆಚ್ಚು ಆಸಕ್ತರಾಗಿದ್ದುದರಿಂದಲೂ ಅವರ ಮಾತುಗಳನ್ನು ದಾಖಲಿಸುವ ಶೈಲಿ ಇಲ್ಲಿದ್ದು, ಡಾ. ದೀಪು ಅವರ ಮೂಲಕ ಪುಸ್ತಕವು ಸಂಪಾದಿತವಾಗಿದೆ. ಅಸಾಮಾನ್ಯರನ್ನೂ ಶ್ರೇಷ್ಠ ಸಾಧಕರನ್ನೂ ದಿಗ್ಗಜರನ್ನೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಿದ್ಧಿ ಪಡೆದ ಮಹನೀಯರನ್ನೂ ಸ್ನೇಹಿತರನ್ನಾಗಿ ಪಡೆದ ಲಕ್ಕೇಗೌಡರು ಪರಮ ಧನ್ಯರು. ಮೈಸೂರು ಜಿಲ್ಲೆಯ ಕೆ ಆರ್ ನಗರ ಪಟ್ಟಣದಲ್ಲಿ ತಮ್ಮ ಪಾಡಿಗೆ ತಾವು ಸಮಾಜ ಸೇವೆ ಮಾಡುತ್ತಾ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾ ಸ್ವಂತ ಜೀವನವನ್ನು ಪಕ್ಕಕಿಟ್ಟು ಎಲ್ಲ ಜನರನ್ನೂ ತಮ್ಮವರೆಂದೇ ಭಾವಿಸುತ್ತಾ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಯುತರು ಅತ್ಯಂತ ಸರಳರು ಮತ್ತು ಸುಸಂಸ್ಕೃತರು. ಸಾಹಿತ್ಯದಿಂದ ಕಲಿಯಬೇಕಾದ್ದನ್ನು ಕಲಿತು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಡಾ. ಬಿ ಆರ್ ಅಂಬೇಡ್ಕರ್, ಜಯಪ್ರಕಾಶ ನಾರಾಯಣ್, ಮದರ್ ತೆರೆಸಾ, ವಿನೋಬಾ ಭಾವೆಯಂಥವರಿಂದ ಸಾಮಾಜಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ವೃತ್ತಿಯಲ್ಲಿದ್ದಾಗ ಸ್ವಲ್ಪಮಟ್ಟಿಗೆ ಆಧುನಿಕ ಪೋಷಾಕು ಧರಿಸಿದ್ದರೂ ಗಾಂಧೀಜಿಯವರಿಂದ ಪ್ರಭಾವಿತರಾಗಿ ಸರಳವಾದ ಜುಬ್ಬ, ಪೈಜಾಮ, ಖಾದಿಪಂಚೆಗೆ ಮನ ಸೋತು ಧರಿಸಿ ಅಡ್ಡಾಡಿದವರು. ಕೆ ಆರ್ ನಗರದ ಬಹುತೇಕರಿಗೆ ಮತ್ತು ಇವರನ್ನು ಹತ್ತಿರದಿಂದ ಬಲ್ಲ ಅನೇಕರಿಗೆ ಇವರ ಜೀವನಾನುಭವ ಮತ್ತು ಅವರ ಕಾಲಘಟ್ಟದ ಮಹತ್ವ ಮನವರಿಕೆಯಾಗಿಲ್ಲ! ಹಾಗಾಗಿ, ಇಂಥದೊಂದು ಜೀವನ ಕಥನ ಅವಶ್ಯವಾಗಿತ್ತು. ಆ ಮೂಲಕ ನಮಗವರು ಇನ್ನಷ್ಟು ಆಪ್ತರಾದರು ಮತ್ತು ಗಣ್ಯರಾದರು.

ತಮ್ಮ ಅಪಾರ ಮತ್ತು ಅದ್ಭುತ ನೆನಪಿನ ಶಕ್ತಿಯಿಂದ ಗೌಡರು ತಮ್ಮ ಜೀವನದ ಮಹತ್ವದ ಘಟನೆಗಳನ್ನೂ ತಿರುವುಗಳನ್ನೂ ಭೇಟಿಯಾದ ವ್ಯಕ್ತಿಗಳನ್ನೂ ಉಲ್ಲೇಖಿಸಿರುವ ಕ್ರಮ ನಿರಾಡಂಬರವಾಗಿದೆ. ಅವರೊಂದಿಗೆ ಮಾತಾಡಿದಷ್ಟೇ ನೇರ ಮತ್ತು ನಿರಂತರವಾಗಿದೆ. ಐವತ್ತು ಅರುವತ್ತು ವರುಷಗಳ ಹಿಂದಿನ ದೇಜಗೌ ಅವರ ಕಾರಿನ ನಂಬರನು ಸಹ ಅವರು ಮರೆತಿಲ್ಲ! ಅಷ್ಟೊಂದು ನಿಚ್ಚಳವಾಗಿದೆ ಅವರ ಸ್ಮರಣ ಸಾಮರ್ಥ್ಯ.

ಈ ಪುಸ್ತಕದಲ್ಲಿ ಒಟ್ಟು ಹನ್ನೆರಡು ಅಧ್ಯಾಯಗಳಿವೆ. ಲಕ್ಕೇಗೌಡರ ಬಾಲ್ಯ, ಯೌವನದ ತುಂಟಾಟಗಳು, ಶಿಕ್ಷಣ, ವೃತ್ತಿ ಬದುಕಿನ ಏಳುಬೀಳುಗಳು ಕ್ರಮೇಣ ವಿವರಿತಗೊಂಡಿದ್ದು, ಮುಂದೆ ಅವರ ಹೋರಾಟದ ಹೆಜ್ಜೆ ಗುರುತುಗಳು ದಾಖಲಾಗಿವೆ. ಆನಂತರ ಮಹಾನುಭಾವರೊಂದಿಗಿನ ಅವರ ಒಡನಾಟ, ದೊಡ್ಡವರ ಚಿಂತನೆಗಳ ಪ್ರಭಾವ ವರ್ಣಿತವಾಗಿವೆ. ತರುವಾಯ ಅವರ ಜೀವನದ ಅಪರೂಪದ ಪ್ರಸಂಗಗಳು ಸ್ವಾರಸ್ಯಕರವಾಗಿ ನಿರೂಪಿತವಾಗಿವೆ. ಕೃತಿಯ ಕೊನೆಯಲ್ಲಿ ಗೆಳೆಯರು ಕಂಡಂತೆ ಗೌಡರು ಎಂಬ ಭಾಗದಲ್ಲಿ ಅವರನ್ನು ಸಮೀಪದಿಂದ ಬಲ್ಲವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕನ್ನಡದ ಶ್ರೇಷ್ಠ ವಿದ್ವಾಂಸರೂ ಪ್ರಗಲ್ಭ ಸಾಹಿತಿಗಳೂ ಆದ ಡಾ. ಸಿಪಿಕೆಯವರ ಮುನ್ನುಡಿಯು ಕೃತಿಗೆ ದೊರಕಿರುವುದು ಸುಕೃತವೇ ಸರಿ. ಪ್ರೊ. ಸಿಪಿಕೆಯವರು ಲಕ್ಕೇಗೌಡರನ್ನು ಹತ್ತಿರದಿಂದ ಕಂಡವರು. ಒಂದು ಕಾಲದಲ್ಲಿ ಸಹಪಾಠಿಗಳಾಗಿದ್ದವರು. ಇಬ್ಬರೂ ಕವಿ ಕುವೆಂಪು ಅವರ ಶಿಷ್ಯರಾಗಿದ್ದವರು. ಕುವೆಂಪು ಅವರ ಶಿಷ್ಯರಾದ ಪ್ರೊ. ದೇಜಗೌ ಅವರಿಗೂ ವಿದ್ಯಾರ್ಥಿಗಳಾಗಿದ್ದವರು. ಸಿಪಿಕೆಯವರ ಮುನ್ನುಡಿಯೇ ಕೃತಿಯ ಪ್ರವೇಶಿಕೆಯಾಗಿದೆ. ಲಕ್ಕೇಗೌಡರ ಸ್ವಕಥನದ ನಿರೂಪಣೆಯು ನೇರವಾಗಿದೆ; ಕಲಾತ್ಮಕಗೊಳಿಸಬಹುದಾದ ಸಾಧ್ಯತೆ ಮತ್ತು ಅವಕಾಶಗಳಿದ್ದಾಗ್ಯೂ ಅದರ ಗೋಜಿಗೆ ಹೋಗಿಲ್ಲ ಎಂದೇ ಅಭಿಪ್ರಾಯಿಸಿದ್ದಾರೆ. ಗೌಡರು ತಮ್ಮ ಯೌವನದ ದಿನಗಳಲ್ಲಿ ದುರ್ಜನರ ಸಹವಾಸಕ್ಕೆ ಸಿಲುಕಿ, ಕೆಲವೊಂದು ದುಶ್ಚಟಗಳನ್ನು ಕಲಿತದ್ದು, ಅದರ ಪರಿಣಾಮದಿಂದ ವಿದ್ಯಾಭ್ಯಾಸ ಕುಂಠಿತವಾದದ್ದು, ತರುವಾಯ ತಪ್ಪುಗಳ ಮನವರಿಕೆಯಾಗಿ ತಿದ್ದಿಕೊಂಡು ವಿದ್ಯಾಭ್ಯಾಸವನ್ನು ಮುಂದುವರಿಸಿದ್ದು ಪುಸ್ತಕದಲ್ಲಿ ದೀರ್ಘವಾಗಿ ವಿಶ್ಲೇಷಿತಗೊಂಡಿದೆ. ಇದನ್ನು ಗಮನಿಸಿದ ಸಿಪಿಕೆಯವರು ಕುವೆಂಪು ಅವರು ತಮ್ಮ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ‘ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್ವ್ಯೂಹ ರಚನೆಯೊಳ್’ ಎಂದಿರುವುದನ್ನು ‘ಪೋಲಿಗುದ್ಧಾರಮಿಹುದೌ……’ ಎಂದು ಮಾರ್ಪಡಿಸಿ ಓದಿಕೊಳ್ಳಬಹುದೆಂದು ತಮಾಷೆ ಮಾಡಿದ್ದಾರೆ. ಸಹಜ ವಿನೋದ ಪ್ರಿಯರಾದ ಸಿಪಿಕೆಯವರು ತಮ್ಮ ಗೆಳೆಯರಾದ ಲಕ್ಕೇಗೌಡರನ್ನು ಕುರಿತು ಹಾಸ್ಯ ಮಾಡಿದ್ದಾರೆ!ನಮಗೆಲ್ಲ ಗೊತ್ತಿರುವಂತೆ ಇದು ಸಿಪಿಕೆಯವರಿಗೇ ವಿಶೇಷವಾಗಿ ಹೊಳೆಯುವ ಆನ್ವಯಿಕ ಸೃಷ್ಟಿಶೀಲತೆಯ ಗುಣ. ಇಂಥದೊಂದು ಚೇಷ್ಟೆ, ಕಚಗುಳಿ ಅವರ ಇಂಥ ಬರೆಹಗಳಲ್ಲಿ ಸಾಮಾನ್ಯ. ಇದು ಅವರ ಕಾಣ್ಕೆಯ ಛಾಪು. ಡಾ. ಜಿ ಎಸ್ ಶಿವರುದ್ರಪ್ಪನವರ ಪುತ್ರರಾದ ಚಾಮರಾಜನಗರದ ದೀನಬಂಧು ಟ್ರಸ್ಟ್ನ ರೂವಾರಿಗಳಾದ ಮಾನ್ಯಶ್ರೀ ಜಿ ಎಸ್ ಜಯದೇವ್ ಅವರು ಕೃತಿಗೆ ಬೆನ್ನುಡಿ ಬರೆದಿದ್ದಾರೆ. ಮಾವಿನ ಮರಕ್ಕೆ ಎಷ್ಟೇ ಬೇವಿನ ಹಿಂಡಿ ಹಾಕಿದರೂ ಅದು ಸಿಹಿ ಹಣ್ಣುಗಳನ್ನು ತಾನೇ ಕೊಡುವುದು! ಎಂದುಪಮಿಸಿ, ಲಕ್ಕೇಗೌಡರ ಮನುಷ್ಯ ಸಂಬಂಧಗಳ ನಿರ್ವಹಣೆಯನ್ನು ಶ್ಲಾಘಿಸಿದ್ದಾರೆ. ಹಾಗೂ ಲಕ್ಕೇಗೌಡರು ತಮ್ಮ ಮನೆಗೆ ವಾರಾನ್ನಕ್ಕೆ ಬರುತ್ತಿದ್ದಾಗ ನಾವು ಅವರಿಗೆ ಊಟ ಬಡಿಸುತ್ತಿದ್ದುದನ್ನು ನೆನೆದಿದ್ದಾರೆ. ಈಗಲೂ ತಮ್ಮ ತಾಯಿಯವರ ಕೈಯಡಿಗೆಯ ರುಚಿಯನ್ನು ನೆನಪಿಸಿಕೊಳ್ಳುತ್ತಾರೆ ಎಂದೇ ಜಯದೇವ್ ದಾಖಲಿಸಿದ್ದಾರೆ.

ಶ್ರೀಯುತ ಲಕ್ಕೇಗೌಡರಿಗೀಗ 89 ರ ಪ್ರಾಯ. ಕ್ರಿ ಶ 1934 ರಲ್ಲಿ ಜನಿಸಿದವರು. ಸ್ವಾತಂತ್ರ್ಯಪೂರ್ವ ಭಾರತವನ್ನು ಕಂಡವರು. ಚಲೇಜಾವ್ ಚಳವಳಿಯಲ್ಲಿ ಭಾಗಿಯಾಗಿ ಒಂದು ದಿನದ ಮಟ್ಟಿಗೆ ಕಾರಾಗೃಹದಲ್ಲಿದ್ದವರು. 1952 ರಲ್ಲೇ ಎಂಟನೇ ತರಗತಿಯಲ್ಲಿರುವಾಗ ಶಾಸನಸಭೆಯ ಚುನಾವಣೆಗೆ ನಿಂತ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದವರು. ಕಾಲೇಜು ದಿನಗಳಲ್ಲಿ ಕನ್ನಡ ನಾಡಿನ ಶ್ರೇಷ್ಠ ಸಂಶೋಧಕರಾದ ಡಾ. ಎಂ ಚಿದಾನಂದಮೂರ್ತಿ ಹಾಗೂ ಬೆಳಕಿನ ಕವಿ ಡಾ. ಜಿ ಎಸ್ ಶಿವರುದ್ರಪ್ಪನವರ ಮನೆಗಳಲ್ಲಿ ವಾರಾನ್ನ ಮಾಡಿ ಓದಿದವರು. ಬಿ ಎಸ್ಸಿ ಕಲಿಯಲು ಯುವರಾಜ ಕಾಲೇಜಿಗೆ ಸೇರಿದ್ದರೂ ಪ್ರೊ. ತೀ ನಂ ಶ್ರೀಕಂಠಯ್ಯನವರ ರನ್ನನ ಗದಾಯುದ್ಧ ಕೃತಿಯ ಉಪನ್ಯಾಸ ಕೇಳಿದ ಮೇಲೆ ಸಾಹಿತ್ಯ ಓದುವ ಮನಸ್ಸಾಗಿ, ಬಿ ಎ ಓದಲು ಮಹಾರಾಜ ಕಾಲೇಜಿಗೆ ವರ್ಗಾವಣೆಗೊಂಡರು.

ಪದವಿ ಓದುವಾಗಲೇ ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಿ, ಇಂಗ್ಲಿಷಿನಲ್ಲಿ ವಾದ ಮಂಡಿಸಿದರು. ಘಟಾನುಘಟಿ ವಿದ್ವಾಂಸರ ಪಾಠ ಕೇಳುವ ಸೌಭಾಗ್ಯ ಪಡೆದರು. ಬಿ ಎ ಮುಗಿಸಿ ಕನ್ನಡ ಎಂ ಎಗೆ ಪ್ರವೇಶ ಪಡೆದು, ಎರಡನೇ ವರ್ಷದ ವ್ಯಾಸಂಗದ ಸಮಯದಲ್ಲಿ ಕಾರಣಾಂತರಗಳಿಂದ ಅರ್ಧಕ್ಕೇ ಕೈ ಬಿಟ್ಟು ಊರಿಗೆ ಮರಳಿ ಕೆ ಆರ್ ನಗರದ ಹೈಸ್ಕೂಲಿನಲ್ಲಿ ಶಿಕ್ಷಕರಾದರು. ಅಲ್ಲಿನ ಹಲವು ಹಳ ವಂಡಗಳಿಂದ ಒದ್ದಾಡುತ್ತಿರುವಾಗಲೇ ಸರ್ಕಾರದ ಯೋಜನೆಯೊಂದರ ಆಕಸ್ಮಿಕ ಪ್ರಯೋಜನ ಪಡೆದು ಬಿ ಇಡಿ ಪದವಿ ವ್ಯಾಸಂಗಕ್ಕೆ ಮತ್ತೆ ಮೈಸೂರಿಗೆ ಬಂದರು. ಅದಾದ ಕೆಲ ವರುಷಗಳ ನಂತರ ಅಧಿಕಾರಿಗಳ ಹೃದಯ ವೈಶಾಲ್ಯದಿಂದಾಗಿ ಸೇವೆಯಲ್ಲಿರುವಾಗಲೇ ಎರಡನೇ ವರ್ಷದ ಎಂ ಎ ಅಭ್ಯಾಸ ಮಾಡಿ ಮಾಸ್ಟರ್ ಡಿಗ್ರಿ ಪಡೆದರು. ಹೀಗೆ ಲಕ್ಕೇಗೌಡರು ಎಂಎ, ಬಿಇಡಿ ಪದವೀಧರರಾದದ್ದೂ ಒಂದು ಸಾಹಸಗಾಥೆ.

ತಮ್ಮ ತಪ್ಪೇ ಇಲ್ಲದೇ ನಿರಪರಾಧಿಯಾದೂ ಜೀವನಪರ್ಯಂತ ಅಪರಾಧಿಯಂತಾಗಿ ನೋವನ್ನು ಅನುಭವಿಸಬೇಕಾಗಿ ಬಂದ ಘಟನೆಯನ್ನು ಲಕ್ಕೇಗೌಡರು ಅತ್ಯಂತ ನಿರ್ಲಿಪ್ತವಾಗಿ ಚಿತ್ರಿಸುತ್ತಾರೆ. ಜಿ ಎಸ್ ಶಿವರುದ್ರಪ್ಪನವರು ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಲಕ್ಕೇಗೌಡರು ತಮ್ಮ ಗುರುಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸುತ್ತಾರೆ. ತಮ್ಮನ್ನು ಒಂದು ಮಾತು ಕೇಳದೆ ಕಾರ್ಯಕ್ರಮ ಏರ್ಪಡಿಸಿದ ಗೌಡರನ್ನು ಮತ್ತೋರ್ವ ಗುರುಗಳಾದ ಪ್ರೊ. ದೇಜಗೌ ಅವರು ಸಹಿಸದೇ ಕೊನೆವರೆಗೂ ವೈರತ್ವ ಸಾಧಿಸುತ್ತಾರೆ. ನಿರ್ಲಕ್ಷಿಸಿ ಕ್ಷಮಿಸಬಹುದಾದ ಒಂದು ಪುಟ್ಟ ಲೋಪವನ್ನು ದೊಡ್ಡದು ಮಾಡುತ್ತಾರೆ. ಜೊತೆಗೆ ಜಿ ಎಸ್ ಶಿವರುದ್ರಪ್ಪನವರೊಂದಿಗೆ ದೇಜಗೌ ಅವರು ಸಹ ಆ ಪ್ರಾಧ್ಯಾಪಕ ಹುದ್ದೆಗೆ ಪ್ರತಿಸ್ಪರ್ಧಿಗಳಾಗಿರುತ್ತಾರೆ. ಈ ಅಸಹನೆಯು ಬಡಪಾಯಿ ವಿದ್ಯಾರ್ಥಿ ಲಕ್ಕೇಗೌಡರತ್ತ ತಿರುಗಿ, ಅವರು ಅದರ ನೇರ ಪರಿಣಾಮಕ್ಕೆ ಸಿಕ್ಕು ಜರ್ಜರಿತರಾಗುತ್ತಾರೆ. ದೇಜಗೌ ಅವರ ಮನೆಗೆ ಹೋಗಿ ಕ್ಷಮಾಪಣೆ ಕೇಳಿದರೂ ಅವರು ಕ್ಷಮಿಸದೇ ಹೋಗಿದ್ದು ಗೌಡರಿಗೆ ತುಂಬಾ ದುಗುಡ ತರುತ್ತದೆ. ಇದನ್ನು ತಮ್ಮ ಜೀವನ ಕಥನದಲ್ಲಿ ‘ಒಂದು ವಿಶೇಷ ಸಂಗತಿʼ ಎಂಬ ಉಪ ಶೀರ್ಷಿಕೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ನಿರೂಪಿಸಿದ್ದಾರೆ. ಇಂಥ ಸಂದರ್ಭದಲ್ಲೂ ಗೌಡರು ತಮ್ಮ ದುರ್ವಿಧಿಯನ್ನು ಹಳಿದುಕೊಳ್ಳುತ್ತಾರೆಯೇ ಹೊರತು ಯಾರನ್ನೂ ದೂರುವುದಿಲ್ಲ. ಇದು ಅವರ ದೊಡ್ಡ ಗುಣ. ದೊಡ್ಡವರ ಸಣ್ಣತನಗಳನ್ನು ಮರೆತು ಮುಂದಕ್ಕೆ ಹೋಗಬೇಕು; ನಾವೂ ಅದನ್ನು ದೊಡ್ಡದು ಮಾಡಬಾರದು; ಎಲ್ಲವೂ ನಮ್ಮ ದುರಾದೃಷ್ಟ ಎಂದಂದುಕೊಳ್ಳುವುದು ಗೌಡರ ಆರೋಗ್ಯಕರ ಮನೋಧರ್ಮ.

ಹದಿನೈದು ವರುಷಗಳ ಕಾಲ ಭಾರತ ಸೇವಾದಳದ ಅಧ್ಯಕ್ಷರಾಗಿದ್ದ ಗೌಡರು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರೂ ಆಗಿದ್ದರು. ಬದನವಾಳು ಸತ್ಯಾಗ್ರಹದಲ್ಲಿ ಪಾಲ್ಗೊಂಡವರು. ಹಲವು ಸಾಮಾಜಿಕ ಮತ್ತು ಶೈಕ್ಷಣಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ಹೋರಾಡಿದವರು. ಕೆ ಆರ್ ನಗರದ ಚುಂಚನಕಟ್ಟೆ ಸಕ್ಕರೆ ಕಾರ್ಖಾನೆಯ ಪುನಾರಂಭಿಸುವ ಹೋರಾಟದಲ್ಲಿ ಇವರ ಪಾತ್ರವಿದೆ. ಅಣ್ಣಾ ಹಜಾರೆಯವರಿಂದ ಸ್ಫೂರ್ತಗೊಂಡು, ಭ್ರಷ್ಟಾಚಾರ ವಿರೋಧಿ ವೇದಿಕೆಯ ಅಧ್ಯಕ್ಷರಾಗಿ ಗೌಡರು ಪರಿಣಾಮಕಾರೀ ಕೆಲಸಗಳನ್ನು ಮಾಡಿದರು. ಒಂದು ದಿವಸವೂ ತಪ್ಪಿಸದಂತೆ, ಕೆ ಆರ್ ನಗರದ ಸರ್ಕಾರಿ ಆಸ್ಪತ್ರೆಗೆ ರಾತ್ರಿ ವೇಳೆ ಭೇಟಿ ನೀಡಿ, ರೋಗಿಗಳನ್ನು ವಿಚಾರಿಸಿ, ಹಣ್ಣು ಹಂಪಲುಗಳನ್ನು ವಿತರಿಸಿ, ಅವರಿಗೆ ನೀಡಿದ ಚಿಕಿತ್ಸೆಯನ್ನು ವೈದ್ಯರೊಂದಿಗೆ ಚರ್ಚಿಸಿಯೇ ಮನೆಗೆ ಮರಳುತ್ತಿದ್ದುದು! ಇಲ್ಲದಿದ್ದರೆ ಲಕ್ಕೇಗೌಡರಿಗೆ ನಿದ್ರೆ ಹತ್ತುವುದಿಲ್ಲ! ಇಂಥ ವಿದ್ಯಮಾನವನ್ನು ಕಂಡು, ಆಸ್ಪತ್ರೆಯ ಕೆಲವು ಸಿಬ್ಬಂದಿಗಳು ತಾಲ್ಲೂಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಎಸ್ ಎಂ ಮಾಲೇಗೌಡರಿಗೆ ದೂರು ನೀಡುತ್ತಾರೆ. ಮಾಲೇಗೌಡರು ಲಕ್ಕೇಗೌಡರನ್ನು ಅತ್ಯಂತ ಹತ್ತಿರದಿಂದ ಬಲ್ಲವರು. ಅವರು ಗೌಡರ ಕೈಂಕರ್ಯವನ್ನು ಬೆಂಬಲಿಸುತ್ತಾರೆ. ಗೌಡರು ಆನಂತರ ಆಸ್ಪತ್ರೆಯ ರಕ್ಷಾ ಸಮಿತಿಯ ಸದಸ್ಯರಾದದ್ದನ್ನು ಮಾಲೇಗೌಡರು ತಮ್ಮ ಬರೆಹದಲ್ಲಿ ದಾಖಲಿಸಿದ್ದಾರೆ. ಆ ಮೂಲಕ ರೋಗಿಗಳಿಗೆ ಸರ್ಕಾರದ ಯೋಜನೆಗಳು ಸಕಾಲಕ್ಕೆ ತಲಪುವಂತಾದದ್ದು ಕೂಡ ಸಮಾಜ ಸೇವೆಯೇ ತಾನೇ! ವಿಷ ಕುಡಿದವರು, ಹಾವು ಕಚ್ಚಿದವರು, ಅಪಘಾತಗೊಂಡವರು, ಆತ್ಮಹತ್ಯೆಗೆ ಪ್ರಯತ್ನಿಸಿದವರು ಹೀಗೆ ಎಂಥದೇ ಅವಘಡಗಳು ಸಂಭವಿಸಿದರೂ ಅಲ್ಲಿಗೆ ಲಕ್ಕೇಗೌಡರು ಹಾಜರು. ಅವರಿಗೆ ಮೊದಲು ಮಾನವೀಯ ನೆಲೆಯ ಶುಶ್ರೂಷೆಯನ್ನು ನೀಡಬೇಕೆಂಬ ಹಕ್ಕೊತ್ತಾಯ. ಇವರ ಇಂಥ ಸ್ವಭಾವದಿಂದ ಕೆಲವೊಮ್ಮೆ ಅಧಿಕಾರಿಗಳು, ಸರ್ಕಾರಿ ನೌಕರರು, ಆಸ್ಪತ್ರೆಯ ಸಿಬ್ಬಂದಿ, ಪೊಲೀಸ್ ಇಲಾಖೆಯವರು ಬೇಸರಿಸಿಕೊಂಡು ಸಿಟ್ಟು ಮಾಡಿಕೊಂಡದ್ದೂ ಇದೆ. ತಮ್ಮ ಗರ್ಭಿಣಿ ಮಡದಿಯನ್ನು ಕರೆದುಕೊಂಡು ಬಸ್ಸಿನಲ್ಲಿ ಹೋಗುವಾಗ ಮಾರ್ಗ ಮಧ್ಯೆ ಅಪಘಾತಗೊಂಡು ರಕ್ತ ಮಡುವಿನಲ್ಲಿ ಬಿದ್ದಿದ್ದವನನ್ನು ಕಂಡು ಬಸ್ಸು ನಿಲ್ಲಿಸಿ, ಕೆಳಗಿಳಿದು, ಆತನನ್ನು ಬದುಕಿಸುವಲ್ಲಿ ಮಗ್ನರಾಗುತ್ತಾರೆ.

ಇತ್ತ ತಮ್ಮ ಮಡದಿ ಏಕಾಂಗಿಯಾಗಿ ಕತ್ತಲಲ್ಲಿ ಒಬ್ಬರೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಇದನ್ನೆಲ್ಲ ಕಂಡ ಅವರ ಮಾವನವರು ಲಕ್ಕೇಗೌಡರನ್ನು ಬಯ್ಯುತ್ತಾರೆ. ಅವರ ಮಡದಿ ಸಹ ತನ್ನನ್ನು ಇಂಥ ಸ್ಥಿತಿಯಲ್ಲಿ ಬಿಟ್ಟು ಹೋದ ಪತಿಯನ್ನು ಹಲವಾರು ತಿಂಗಳುಗಳ ಕಾಲ ಮಾತಾಡಿಸದೇ ತಮ್ಮ ಅಸಹನೆ ತೋರುತ್ತಾರೆ. ಸಮಾಜ ಸೇವೆಯ ಹುಚ್ಚು ಇವರ ತಲೆಗೇರಿದೆ ಎಂಬುದೇ ಕುಟುಂಬಸ್ಥರ ಅಳಲು. ಗೌಡರು ಎಲ್ಲರಲ್ಲೂ ಕ್ಷಮಾಪಣೆ ಕೇಳುತ್ತಾರೆ. ಇದೊಂದು ಪ್ರಸಂಗ ಸಾಕು; ಲಕ್ಕೇಗೌಡರು ತಮ್ಮ ಮನೆ, ಮನೆಯ ಸದಸ್ಯರು ಎಲ್ಲರನ್ನೂ ಮರೆತು ʼಪರೋಪಕಾರಾರ್ಥಂ ಇದಂ ಶರೀರಂʼ ಎಂದು ಮೂರು ಹೊತ್ತೂ ಸೇವೆಯ ನಶೆಯಲ್ಲಿ ಓಡಾಡಿ ಚಡಪಡಿಸುವ ಅವರ ಸ್ವಭಾವವನ್ನು ಅರಿಯಲು! ಯಾವುದಕ್ಕೂ ಜಗ್ಗದ ಬಗ್ಗದ ಗೌಡರದು ಒಂದೇ ರೀತಿಯ ಸಹನೆ ಕಳೆದುಕೊಳ್ಳದ ಸಹಾಯ ಹಸ್ತ. ಹಲವಾರು ಘನ ವ್ಯಕ್ತಿಗಳೊಂದಿಗೆ ನಿರಂತರ ಸ್ನೇಹೌದಾರ್ಯಗಳನ್ನು ಹೊಂದಿದ್ದ ಮಿತ್ರಭಾವ ಗೌಡರದು. ಅಪ್ಪಟ ಗಾಂಧಿವಾದಿ ತಗಡೂರಿನ ಸುಬ್ಬಣ್ಣನವರು, ಮಾಜಿ ಎಂಎಲ್ಸಿ ಟಿ ಕೆ ಚಿನ್ನಸ್ವಾಮಿಯವರು, ಮಿರ್ಲೆಯ ಪಶುವೈದ್ಯ ಇಲಾಖೆಯ ಎಂ ಟಿ ತಿಮ್ಮೇಗೌಡರು, ಮಕ್ಕಳ ತಜ್ಞರಾದ ಡಾ. ಎಸ್ ಎಂ ಮಾಲೇಗೌಡರು, ಇಎನ್ಟಿ ಸರ್ಜನ್ ಡಾ. ಮಾಧವ್, ಖ್ಯಾತ ವಿಮರ್ಶಕ ಪ್ರೊ. ಜಿ ಎಚ್ ನಾಯಕ್, ಮಿರ್ಲೆಯ ಎಂ ಟಿ ರಾಮಸ್ವಾಮಿಗೌಡರು, ಎಂಎಲ್ಸಿ ಪುಟ್ಟಸಿದ್ಧಶೆಟ್ಟರು, ಎಚ್ ಬಿ ಮಂಚಯ್ಯನವರು, ಮಾಜಿ ಸಚಿವರಾದ ಎಂ ಎಸ್ ಗುರುಪಾದಸ್ವಾಮಿಯವರು, ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು, ಇಂಗ್ಲಿಷ್ ಪ್ರಾಧ್ಯಾಪಕರಾದ ಸಿ ಡಿ ನರಸಿಂಹಯ್ಯನವರು, ಪ್ರೊ. ಎಲ್ ಸಿದ್ಧವೀರೇಗೌಡರು, ದೇ ಜವರೇಗೌಡರು, ಕುವೆಂಪು, ಪುತಿನ, ಜಿಎಸ್ಎಸ್, ಸಿಪಿಕೆ, ಹೆಚ್ ನರಸಿಂಹಯ್ಯ, ಡಾ. ಬೆಸಗರಹಳ್ಳಿ ರಾಮಣ್ಣ, ಮಾಜಿ ಸ್ಫೀಕರ್ ಕೃಷ್ಣ, ಪ್ರೊ. ನಂಜುಂಡಯ್ಯ, ಕೆ ಬಾಲಕೃಷ್ಣ, ಮಾಜಿ ಶಾಸಕರಾದ ಪಿ ಎಂ ಚಿಕ್ಕಬೋರಯ್ಯ, ಕೆ ಹೆಚ್ ರಾಮಯ್ಯನವರು, ಡಾ. ಎಸ್ ಬಿಸಲಯ್ಯನವರು, ತತ್ತ್ವಶಾಸ್ತçದ ಪ್ರಾಧ್ಯಾಪಕರಾದ ಎಂ ಯಾಮುನಾಚಾರ್ಯರು, ಪ್ರಾಂಶುಪಾಲರಾಗಿದ್ದ ವಸಂತರಾಜೇ ಅರಸ್ ಹೀಗೆ ಲಕ್ಕೇಗೌಡರ ಪರಿಚಿತ ಮತ್ತು ಆತ್ಮೀಯ ವಲಯ ದೊಡ್ಡದು ಮತ್ತು ದೊಡ್ಡವರಿಂದ ಕೂಡಿದ್ದುದು.

ಕಿಂಚಿತ್ತೂ ಆತ್ಮಪ್ರತ್ಯವಿಲ್ಲದ ನಿರಹಂನ ನಿರೂಪಣೆಯೇ ಈ ಕಥನದ ಶಕ್ತಿ. ನಾನು ಮಾಡಿದೆನೆಂಬ ಜಂಭ ಲವಲೇಶವೂ ಗೌಡರನ್ನು ಆವರಿಸಲಿಲ್ಲ. ತಮ್ಮ ಕಾಲದ ಜಗತ್ತನ್ನು ಅದರೆಲ್ಲ ಸರಿತಪ್ಪುಗಳ ಸಮೇತ ನಿರ್ವಂಚನೆಯಿಂದ ಓದುಗರ ಮುಂದೆ ತೆರೆದಿಟ್ಟಿದ್ದಾರೆ. ಇವರ ಜೀವನ ಯಶೋಗಾಥೆ ಹಲವು ಏರಿಳಿತಗಳನ್ನು ಕಂಡಂಥದು. ತಮ್ಮ ಅಧ್ಯಯನ ಮತ್ತು ಅಪಾರ ಜೀವನಾನುಭವಗಳಿಂದ ತಮ್ಮದೇ ಆದ ನಾಲ್ಕು ಅಂಶಗಳ ದರ್ಶನವನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬಂದವರು. ಔಚಿತ್ಯಪ್ರಜ್ಞೆ, ಪರೇಂಗಿತ ಜ್ಞಾನ, ಸ್ವಸ್ಥಾನ ಪರಿಚಯ, ಪರಧರ್ಮ ಸಹಿಷ್ಣುತೆ- ಈ ನಾಲ್ಕು ಅಂಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂಬುದು ಗೌಡರ ಆಶಯ. ಯಾವುದು ಉಚಿತ, ಯಾವುದು ಅನುಚಿತ ಎಂಬುದರ ಪ್ರಜ್ಞೆ ಬಹಳ ಮುಖ್ಯ. ಅದರಂತೆ, ಪರರ ಇಂಗಿತವನ್ನು ಅರಿತು ನಡೆಯುವುದು, ನಮ್ಮ ಸ್ಥಾನಮಾನಗಳನ್ನು ಮರೆತು ಮಾತಾಡಬಾರದು ಮತ್ತು ಜಾತ್ಯತೀತ ಮನೋಧರ್ಮದಿಂದ ಒಡಗೂಡಿದ ಧರ್ಮ ಸಹಿಷ್ಣುತೆ – ಇವನ್ನು ಗೌಡರು ಸ್ವತಃ ಅಳವಡಿಸಿಕೊಂಡು, ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸುತ್ತ ಬಂದವರು.
ಈ ಎಂಬತ್ತೊಂಬತ್ತರ ಇಳಿವಯಸ್ಸಿನಲ್ಲೂ ಲಕ್ಕೇಗೌಡರು ಆರೋಗ್ಯವಾಗಿದ್ದಾರೆ. ಅದಕ್ಕೆ ಅವರು ಅನುಸರಿಸುತ್ತಿರುವ ಹಿತ ಮಿತ ಆಹಾರ, ಮನಸ್ಸನ್ನು ಪ್ರಫುಲ್ಲವಾಗಿರಿಸಿ ಕೊಂಡಿರುವುದು ಮುಖ್ಯ ಕಾರಣ ಎಂದಿದ್ದಾರೆ. ಒಂದೇ ಒಂದು ಹಲ್ಲೂ ಬಿದ್ದಿರದೇ ಇರುವುದರ ಹಿನ್ನೆಲೆಯನ್ನೂ ಸೊಗಸಾಗಿ ಹೇಳಿದ್ದಾರೆ. ಏನೇ ಆಹಾರ ಸೇವನೆ ಮಾಡಿದ ಮೇಲೆ ತಪ್ಪದೇ ಮೂರ್ನಾಲ್ಕು ಬಾರಿ ಬಾಯಿ ಮುಕ್ಕಳಿಸಬೇಕು; ಜೊತೆಗೆ ಬೇವಿನಕಡ್ಡಿಯಿಂದ ಹಲ್ಲುಜ್ಜಬೇಕು. ಇದರಿಂದ ಹಲ್ಲಿನ ಸಂದುವಿನಲ್ಲಿ ನೆಲೆಯೂರಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ ಎಂಬುದಿವರ ಅನಿಸಿಕೆ.

ಪುಸ್ತಕದ ಕೊನೆಯ ಭಾಗ ಗೆಳೆಯರು ಕಂಡಂತೆ ಗೌಡರು ಎಂಬ ಭಾಗ. ಇದರಲ್ಲಿ ಲಕ್ಕೇಗೌಡರ ಸಹವರ್ತಿಯಾಗಿದ್ದ, ಅವರೊಂದಿಗೆ ದೀರ್ಘಕಾಲ ಒಡನಾಡಿದ್ದ ಗೆಳೆಯರೂ ಪರಿಚಿತರೂ ಶಿಷ್ಯರೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಮದರಾಸು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಗಳೂ ಹಿರಿಯ ವಿಜ್ಞಾನಿಗಳೂ ಆದ ಪ್ರೊ. ಎಂ ಕೆ ಸೂರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಬಿ ಕೆ ಬಸವರಾಜು , ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಎಸ್ ಎಂ ಮಾಲೇಗೌಡ, ಖ್ಯಾತ ಕುಟುಂಬ ವೈದ್ಯರಾದ ಡಾ. ಎನ್ ಡಿ ಜಗನ್ನಾಥ್, ಪಶುಪಾಲನಾ ಇಲಾಖೆಯ ನಿವೃತ್ತ ಸಹ ನಿರ್ದೇಶಕರಾದ ಡಾ. ಆರ್ ರಾಮಚಂದ್ರ, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರೊ. ಸಿಡಿಎನ್ ಅವರ ಪುತ್ರರಾದ ಪ್ರೊ. ಶ್ರೀನಾಥ್, ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಎಸ್ ಪಿ ತಮ್ಮಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶ್ರೀಮತಿ ಮಂಜುಳ, ಕೆಎಸ್ಆರ್ಟಿಸಿಯ ನಿವೃತ್ತ ಡಿಪೊ ಮ್ಯಾನೇಜರ್ ಕೆ ಚಲುವೇಗೌಡ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ಹೆಚ್ ಎನ್ ಮಂಜುರಾಜ್- ಇವರೆಲ್ಲರೂ ಲಕ್ಕೇಗೌಡರ ಗುಣ ಸ್ವಭಾವಗಳನ್ನೂ ಘನ ವ್ಯಕ್ತಿತ್ವವನ್ನೂ ಆಪ್ಯಾಯಮಾನವಾಗಿ ಚಿತ್ರಿಸಿದ್ದಾರೆ. ಕೊನೆಯಲ್ಲಿ ಲಕ್ಕೇಗೌಡರ ಜೀವನ ಸಂದರ್ಭದ ಕೆಲವೊಂದು ಬಣ್ಣದ ಚಿತ್ರಗಳು ಸಂಕಲಿತಗೊಂಡಿವೆ.

ಪುಸ್ತಕದಲ್ಲಿ ಸಾಕಷ್ಟು ಅಕ್ಷರಸ್ಖಾಲಿತ್ಯಗಳಿವೆ. ಪ್ರೂಫ್ ತಿದ್ದುಪಡಿ ಸರಿಯಾಗಿ ಆಗಿಲ್ಲ. ಆತುರದಲ್ಲಿ ಹೊರ ತಂದಂತಿದೆ. ಅಲ್ಲದೇ ಲಕ್ಕೇಗೌಡರು ತಮ್ಮ ಜೀವನ ಕಥನವನ್ನು ಹೇಳುವಾಗ ಉದ್ಧರಿಸಿದ ಕೆಲವೊಂದು ಸೂಕ್ತಿ, ಸುಭಾಷಿತ ಮತ್ತು ಕವಿನುಡಿಗಳಲ್ಲಿ ಸಹ ಇಂಥ ದೋಷ ಉಳಿದುಕೊಂಡಿದೆ. ಇದು ಬರೆದುಕೊಳ್ಳುವಾಗ ಆಗಿರುವ ಲೋಪ. ಮುಂದಿನ ಮುದ್ರಣದಲ್ಲಿ ಇವೆಲ್ಲವನ್ನೂ ಸಂಪಾದಕರಾದ ಡಾ. ದೀಪು ಅವರು ಸರಿಪಡಿಸುವರೆಂಬ ಭರವಸೆ ನನಗಿದೆ. ಸಂಪಾದಕರು ಸಾಕಷ್ಟು ಶ್ರಮವಹಿಸಿ, ಆಸ್ಥೆಯಿಂದ ಮತ್ತು ಅಷ್ಟೇ ಅಕ್ಕರೆಯಿಂದ ಕೃತಿಯನ್ನು ರೂಪಿಸಿದ್ದಾರೆ. ತನಗೆ ದೊರೆತ ಅಪೂರ್ವ ಅವಕಾಶ ಮತ್ತು ಸೌಭಾಗ್ಯ ಇದೆಂದು ತಮ್ಮ ಮುನ್ನುಡಿಯಲ್ಲಿ ಹೇಳಿದ್ದಾರೆ. ಕೃತಿಯು ಕೇವಲ ಲಕ್ಕೇಗೌಡರ ತುಂಬು ಬದುಕಿನ ಜೀವನ ಕಥನವಾಗಿಯಷ್ಟೇ ಉಳಿಯದೇ, ಆ ಕಾಲದ ಹಲವು ಮುಖ್ಯ ನಡೆನುಡಿಗಳನ್ನು ದಾಖಲಿಸಿ, ಪರಿಚಯಿಸುತ್ತದೆ. ಲಕ್ಕೇಗೌಡರ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಕ್ತಿತ್ವಗಳ ಜೊತೆಯಲ್ಲೇ ಅವರು ನಡೆದಾಡಿದ್ದ, ಒಡನಾಡಿದ್ದ ಮಂದಿಯ ಮನಸೂ ಅನಾವರಣಗೊಂಡಿದೆ. ಇದೊಂದು ಬಹು ಮುಖ್ಯ ಸಾಂಸ್ಕೃತಿಕ ದಾಖಲೆ ಎಂದೇ ನಾನು ಪರಿಗಣಿಸಿರುವೆ. ಇಂಥವುಗಳನ್ನೇ ನಾವು ಸಮಕಾಲೀನ ಚರಿತ್ರೆ ಎಂದು ಕರೆಯುವುದು. ಆಗಿ ಹೋದ ಕಾಲಮಾನದ ನಿಜಗಳನ್ನು ಕಂಡುಕೊಳ್ಳಲು ನೆರವೀಯುವುದು. ದೊಡ್ಡವರು, ಮಹತ್ವದ ಸಾಧನೆ ಮಾಡಿದವರು ಮಾತ್ರ ತಮ್ಮ ಜೀವನದ ಸ್ವಾರಸ್ಯಗಳನ್ನು ಹೇಳಬೇಕೆಂಬ ದೃಷ್ಟಿ ಹಿಂದಿನದು. ಈಗ ಹಾಗಿಲ್ಲ. ಸೆಬಾಲ್ಟ್ರನ್ ಸ್ಟಡೀಸ್ ಕಾಲಘಟ್ಟದಲ್ಲಿ ಇಂಥ ಕಥನಗಳು ಪ್ರಮುಖ ಆಕರವಾಗುತ್ತವೆ. ಸಾಮಾನ್ಯರೆನಿಸಿಕೊಂಡವರೂ ತಮ್ಮ ಜೀವನ ಕಥನವನ್ನು ಹೇಳಬಹುದೆಂಬ ಕಾಲಮಾನದಲ್ಲಿ ನಾವಿದ್ದೇವೆ. ʼಶ್ರೀ ಸಾಮಾನ್ಯವೆ ಭಗವನ್ ಮಾನ್ಯಂ; ಶ್ರೀ ಸಾಮಾನ್ಯನೆ ಭಗವದ್ ಧನ್ಯಂ; ಸಾಮಾನ್ಯತೆ ಭಗವಂತನ ರೀತಿ; ಸಾಮಾನ್ಯವೆ ದಿಟ ಭಗವತ್ ಪ್ರೀತಿ! ಸಾಮಾನ್ಯರೊ ನಾವು’ಎಂದೇ ಕವಿ ಕುವೆಂಪು ಅವರು ಹೇಳಿಲ್ಲವೇ? ಇಷ್ಟಕೂ ಕೆ ಆರ್ ಲಕ್ಕೇಗೌಡರು ಸಾಮಾನ್ಯರೇನಲ್ಲ; ಇವರ ಆತ್ಮವೃತ್ತಾಂತವನ್ನು ಓದಿದ ಮೇಲೆ ಇವರೆಂಥ ಅಸಾಮಾನ್ಯರು! ಸಾಮಾನ್ಯರಂತೆ ಓಡಾಡಿಕೊಂಡಿಹರಲ್ಲ! ಎಂದು ಅಚ್ಚರಿಯಾಗುತ್ತದೆ. ಅವರ ಸಾಧನೆಯ ಸಾಹಸ ರೋಮಾಂಚನಗೊಳಿಸುವಂಥದು. ಅವರ ಬದುಕಿನ ಪ್ರಮುಖ ಘಟ್ಟಗಳು ಸತ್ಯವಂತರಿದ್ದ ಕಾಲ. ಶ್ರೇಷ್ಠ ವಿದ್ವಾಂಸರಿದ್ದ ಯುಗ. ಸಮಾಜದಲ್ಲಿ ನೀತಿ ಮೌಲ್ಯಗಳು ಆಚರಣೆಯಲ್ಲಿದ್ದ ಸಂದರ್ಭ. ವಿದ್ಯಾಭ್ಯಾಸದಲಿದ್ದ ಮಕ್ಕಳಿಗೆ ವಾರಾನ್ನದ ವ್ಯವಸ್ಥೆಯಿದ್ದ, ಅನ್ನಛತ್ರಗಳಿದ್ದ, ದಾನ ಧರ್ಮಗಳನ್ನು ಮಾಡುತಿದ್ದ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತಿದ್ದ ದಿನಗಳು. ಮುಖ್ಯವಾಗಿ ಜಗತ್ತು ವಾಣಿಜ್ಯಾತ್ಮಕ ಲಾಭ ನಷ್ಟಗಳಲ್ಲಿ ಕಳೆದು ಹೋಗದೇ ಇದ್ದ ಮನುಷ್ಯ ಸಂಬಂಧಗಳನ್ನು ಜತನವಾಗಿ ಕಾಪಾಡಿಕೊಂಡಿದ್ದ ತಲೆಮಾರು. ಇವೆಲ್ಲ ಲಕ್ಕೇಗೌಡರ ಪ್ರಗತಿಗೆ ಪೂರಕವಾದವು. ಈ ಪುಸ್ತಕದ ಓದಿನಿಂದ ಇವೆಲ್ಲ ನಮಗೆ ನೆನಪಾಗುತ್ತವೆ, ಮನದಟ್ಟಾಗುತ್ತವೆ ಮತ್ತು ಆ ಕಾಲವನ್ನು ಸ್ಮರಿಸಿಕೊಂಡು ಕಣ್ಣಂಚು ಒದ್ದೆಯಾಗುತ್ತವೆ.

ಮಾನವತೆಯ ಘನತೆ ಮತ್ತು ಮಮತೆಗಳನ್ನು ತಮ್ಮ ಜೀವ ಜೀವನದುದ್ದಕೂ ಪ್ರತಿಪಾದಿಸಿ, ಹರಡಿ, ಬೆಳಕನುಟ್ಟು, ಬೆಳಕಾಗಿ, ಬೆಳಕನೇ ಹಂಚುವ ಸಮಾಜಮುಖೀ ಯಶೋಗಾಥೆ ಶ್ರೀಯುತ ಲಕ್ಕೇಗೌಡರದು. ಶತಾಯುಷಿಗಳಾಗಲಿ, ಹೀಗೆಯೇ ನಮಗೆಲ್ಲ ಮಾರ್ಗದರ್ಶನ ಮಾಡುತ್ತಿರಲಿ, ಇನ್ನಷ್ಟು ತುಂಬು ಬದುಕು ಅವರದಾಗಲಿ ಎಂದು ಹೆಮ್ಮೆ ಮತ್ತು ಅಭಿಮಾನಗಳಿಂದ ನನ್ನಂಥವರು ಹಾರೈಸುತ್ತೇವೆ. ಭಗವಂತನು ಅವರಿಗೆ ಆಯುರಾರೋಗ್ಯಗಳನ್ನಿತ್ತು ಕಾಪಾಡಲಿ ಎಂದು ಮೊರೆಯಿಡುತ್ತೇವೆ. ಮುಖ್ಯವಾಗಿ ನಮ್ಮ ಯುವಜನತೆಯು ಈ ಪುಸ್ತಕವನ್ನು ಓದಬೇಕು; ಬದುಕಿನ ಕಷ್ಟಗಳು, ಸಾಧನೆ, ಯಶಸ್ಸು, ವ್ಯಕ್ತಿತ್ವ ನಿರ್ಮಾಣ, ಸಮಾಜ ಸೇವೆ, ದೊಡ್ಡವರ ಸಹವಾಸ, ಸಹೃದಯತೆ ಎಂದರೇನೆಂಬುದಕ್ಕೆ ಲಕ್ಕೇಗೌಡರ ಜೀವನಾನುಭವದಿಂದ ಮನದಟ್ಟು ಮಾಡಿಕೊಳ್ಳಬೇಕು.

ಈ ಉಕ್ತ ಕಥನಕ್ಕೆ ಮಾನ್ಯ ಸಿಪಿಕೆಯವರು ‘ವನಸುಮ’ಎಂಬ ಹೆಸರನ್ನು ಸೂಚಿಸಿರುವುದು ಅರ್ಥವತ್ತಾಗಿದೆ. ಡಿವಿಜಿಯವರ ‘ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ, ಹೇ ದೇವ’ಎಂದು ಆರಂಭಗೊಳ್ಳುವ ಪದ್ಯವು ನಮಗೆಲ್ಲ ಚಿರಪರಿಚಿತವಾದುದು. ಎಲ್ಲ ಬಗೆಯ ಭ್ರಮೆಗಳಿಂದಲೂ ಅಹಮುಗಳಿಂದಲೂ ಈಚೆ ಬಂದು ನೈಜವಾಗಿ ಬಾಳುವಂತೆ ಹರಸು ಎಂಬ ಆಶಯವೇ ಶ್ರೀಯುತ ಲಕ್ಕೇಗೌಡರದು ಕೂಡ. ಇಂಥವರು ಭತ್ತದ ಕಣಜ ಕೃಷ್ಣರಾಜನಗರದಲ್ಲಿರುವುದೇ ನಮಗೆಲ್ಲ ಹೆಮ್ಮೆ ಮತ್ತು ಅಭಿಮಾನ ತರುವ ಸಂಗತಿ. ಶ್ರೀಯುತರನ್ನು ನಾನು ಸಮೀಪದಿಂದ ಬಲ್ಲೆ. ಗಂಟೆಗಟ್ಟಲೆ ಅವರೊಡನೆ ಮಾತಾಡಿದ ಅನುಭವ ನನ್ನದು. ಯಾವತ್ತೂ ಯಾವ ಕಾರಣಕೂ ವ್ಯಕ್ತಿಗಳ ವೈಯಕ್ತಿಕ ವಿಚಾರಗಳನ್ನು ಅವರು ನನ್ನೊಂದಿಗೆ ಚರ್ಚಿಸಲಿಲ್ಲ. ಭೇಟಿಯಾದಾಗಲೆಲ್ಲ ಅವರು ತಮ್ಮಿರವನ್ನು ಮರೆತು, ಮಾತು ಮಾತಿಗೆ ಮಂಜುರಾಜ್ ಎಂದು ಹತ್ತಾರು ಸಲ ಸಂಬೋಧಿಸಿ ತಮ್ಮ ಪ್ರೀತಿ ಮಮತೆಗಳಿಂದ ನನ್ನನ್ನು ಅಭಿಮಾನದಿಂದ ಕಂಡವರು. ಸಾಹಿತ್ಯ ಮತ್ತು ಸಾಹಿತಿಗಳನ್ನೂ ತಮ್ಮ ಕಾಲಮಾನದ ಉತ್ಕೃಷ್ಟ ಪ್ರೊಫೆಸರುಗಳನ್ನೂ ನಿನ್ನೆ ತಾನೇ ಭೇಟಿ ಮಾಡಿ ಮಾತಾಡಿಸಿ ಬಂದವರಂತೆ ನೆನಪಿಸಿಕೊಂಡು ಗದ್ಗದಿತರಾಗುತ್ತಿದ್ದರು. ಅವರ ಮಾತಿಗೆ ಓರ್ವ ನಿಜಸಹೃದಯ ಬೇಕು ಅಷ್ಟೇ. ಅದರಲೂ ಸಾಹಿತ್ಯಪ್ರಿಯರಾದರಂತೂ ಹೇಳತೀರದು. ಪುಟ್ಟ ಮಗುವಿನಂತೆ ಸಂಭ್ರಮಿಸಿ, ಸಂತೋಷ ಪಡುವ ಮತ್ತು ಜೊತೆಗಿರುವವರನ್ನು ಸಂತೋಷಪಡಿಸುವ ಗುಣ ಅವರದು. ಮೌಲ್ಯವಿವೇಕವನ್ನು ಮನಗಾಣಿಸುವ ವ್ಯಕ್ತಿತ್ವದವರು. ಇಂಥವರ ಆತ್ಮವೃತ್ತಾಂತವನ್ನು ಓದಿದ ಪುಣ್ಯ ಮತ್ತು ಅದನ್ನು ಕುರಿತು ಬರೆದ ಭಾಗ್ಯ ನನ್ನದು. ಕುವೆಂಪು ಅವರು ಹೇಳುವಂತೆ, ‘ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೇ ನನ್ನದು’ಎಂದು ಉದ್ಧರಿಸಿ, ಉದ್ಗರಿಸಿ ವಿರಮಿಸುತ್ತೇನೆ. ಧನ್ಯವಾದಗಳು.

-ಡಾ. ಹೆಚ್ ಎನ್ ಮಂಜುರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x