ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ತಾಯಂದಿರ ದಿನಾಚರಣೆಯನ್ನು ಆಚರಿಸಲಾಯಿತು. ಇದು ಪಾಶ್ಚಿಮಾತ್ಯಾ ಸಂಪ್ರದಾಯ ನಾವೇಕೆ ಆಚರಿಸಬೇಕು ಎನ್ನುವ ಮನೋಭಾವ ಕೆಲವರಲ್ಲಿರಬಹುದು. ಆದರೆ ನಮ್ಮ ಭಾರತೀಯ ಪರಂಪರೆಯಲ್ಲೂ ಋಷಿಮುನಿಗಳು ಮಾತೃದೇವೋಭವ ಎಂದು ಹೇಳಿ ತಾಯಿಯನ್ನು ದೇವರಿಗೆ ಹೋಲಿಸಿದ್ದಾರೆ. ಭಾರತದಲ್ಲಿಂದು ಆಧುನಿಕತೆ ಹೆಚ್ಚಾದಂತೆಲ್ಲ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ತಂತ್ರಜ್ಞಾನ ಯುಗದಲ್ಲಿ ನಾಗರಿಕ ಸಮಾಜ ಹೆಚ್ಚು ಶಿಕ್ಷತರಾದಂತೆಲ್ಲ ಭಾವನಾರಹಿತ ಜೀವಿಗಳಾಗಿ ಬದುಕುತ್ತಿದ್ದಾರೆ, ಸಂಭಂದಗಳ ಮೌಲ್ಯಗಳು ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಬೆಳೆಯುವ ಮಕ್ಕಳಿಗೆ, ಯುವ ಪೀಳಿಗೆಗೆ ಒಂದು ಆದರ್ಶಪ್ರಾಯ ಮಾರ್ಗದರ್ಶನದ ತಳಹದಿ ಒದಗಿಸುವ ಸಲುವಾಗಿ ಹಾಗೂ ಉತ್ತಮ ಸಾಮಾಜಿಕ ವೇದಿಕೆ ಒದಗಿಸುವಲ್ಲಿ ಈ ಆಚರಣೆಗಳು ಬಹು ಅವಶ್ಯಕ. ಹೆತ್ತ ತಾಯಿಯನ್ನೇ ನಿರ್ಲಕ್ಷಿಸುವ ಪರಂಪರೆ ಸದ್ದಿಲ್ಲದೇ ಬೆಳೆಯುತ್ತದೆ. ಆಧುನಿಕತೆ ಹಾಗೂ ತಂತ್ರಜ್ಞಾನದ ಭರದಲ್ಲಿ ಸಂಬಂಧಗಳು ಕೊಚ್ಚಿ ಹೋಗುತ್ತಿದ್ದರೂ ತಾಯಿ ಬದಲಾಗಲಿಲ್ಲ, ಅವಳ ಭಾವನೆಗಳು ಬದಲಾಗಲಿಲ್ಲ. ಅವಳ ಜವಾಬ್ದಾರಿ, ಪ್ರೀತಿ, ಕಾಳಜಿ, ಉದ್ದೇಶಗಳು ಬದಲಾಗಲಿಲ್ಲ.
ನಾನು ತಾಯಿಯಾಗಿ ಹತ್ತು ವರ್ಷಗಳಾಯಿತು. ಈ ಹತ್ತು ವರ್ಷಗಳಲ್ಲಿ ನನ್ನ ಮಕ್ಕಳು ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಒಬ್ಬ ತಾಯಿಯಾಗಿ ನನ್ನ ಬದುಕಿನ ಅರ್ಥ ಮತ್ತು ನೈಜ ಉದ್ದೇಶವನ್ನು ಕಂಡುಕೊಳ್ಳಲು ಕಾರಣೀಭೂತರಾಗಿದ್ದಾರೆ. ನಾನು ಏಕೆ ಬದುಕ ಬೇಕು..? ಹೇಗೆ ಬದುಕ ಬೇಕು..? ಹಾಗೆ ಹೀಗೆ ಬದುಕು ಕಟ್ಟಿಕೊಡಬೇಕು ಎನ್ನುವ ತಿಳುವಳಿಕೆ ಅವರಿಂದಲೇ ಬಂದದ್ದು. ಹಾಗಂತ ನನ್ನ ಜೀವನದಲ್ಲಿ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತವೆ ಎಂದೇನಿಲ್ಲ. ನಾನು ನನ್ನ ಮಕ್ಕಳಿಗೆ ಪಾಠ ಹೇಳಿಕೊಡುವುದರಿಂದ ಹಿಡಿದು ಸಣ್ಣ ಸಣ್ಣ ವಿಷಯಗಳು ದೊಡ್ಡ ಸಂದರ್ಭಗಳಾದಾಗ ಅವುಗಳನ್ನು ನಿಭಾಯಿಸುವುದರಲ್ಲಿ, ಮಕ್ಕಳಿಗೆ ಪರಿಸ್ಥಿತಿಯನ್ನೂ, ನನ್ನ ಉದ್ದೇಶವನ್ನೂ ಅರ್ಥಮಾಡಿಸುವುದರಲ್ಲಿ ನಿಮ್ಮಷ್ಟೇ ಹೋರಾಟ ನಾನು ಮಾಡುತ್ತಿದ್ದೇನೆ.. ವೃತ್ತಿಯಲ್ಲಿ ನಾನೊಬ್ಬ ಶಿಕ್ಷಕಿಯಾದ್ದರಿಂದ ಕೆಲವರಿಗನಿಸಿರಬಹುದು ನೀರಿನಲ್ಲಿರುವ ಮೀನಿಗೆ ಈಜು ಕಲಿಸುವ ಅಗತ್ಯವೇನಿದೆ…? ಸಹಜವಾಗಿಯೇ ತಾಯಿಯೊಂದಿಗೆ ಮರಿ ಮೀನು ಈಜಲು ಕಲಿತು ಬಿಡುತ್ತದೆ, ಹಾಗಾಗಿ ತಾಯಿಯೇ ನೂರಾರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವಾಗ ಇನ್ನು ಅವರ ಮಕ್ಕಳಿಗೆ ಕಲಿಸುವುದು ಸುಲಭದ ವಿಷಯ ಎಂದು. ಆದರೆ ನನ್ನ ಮೀನುಗಳಿಗೂ ಈಜು ಕಲಿಸಲು ನಾನು ಹೆಚ್ಚು ಶ್ರಮಪಡುತ್ತಿದ್ದೇನೆ.
ನನ್ನ ಸಾಮರ್ಥ್ಯದ ಬಗ್ಗೆ ನಂಬಿಕೆಯಿಟ್ಟು, ಎಲ್ಲವನ್ನೂ ನಿಭಾಯಿಸಬಲ್ಲೇ ಎಂಬ ಹಠಕ್ಕೆ ಬಿದ್ದು ಕೆಲವು ಸಂಧರ್ಭಗಳಲ್ಲಿ ಅಸಹಾಯಕಳಾಗುತ್ತೇನೆ. ಆದರೆ ಆ ಅಸಹಾಯಕತೆಗೆ ನನ್ನನ್ನು ನಾನು ಒಪ್ಪಿಕೊಳ್ಳದೇ, ಶಕ್ತಿಯನ್ನು ಹೆಚ್ಚಿಸಿಕೊಂಡು ಮಕ್ಕಳಿಗೆ ಸಮಯ ಕೊಡಲೇಬೇಕೆಂದು ಅವರೊಂದಿಗೆ ತೊಡಗಿಸಿಕೊಳ್ಳುತ್ತೇನೆ. ಆದರೆ ಎಷ್ಟೋ ಬಾರಿ ವಿದ್ಯೆ ಕಲಿತು ಸುಮ್ಮನೆ ಕುಳಿತುಕೊಳ್ಳಬಾರದು, ನನ್ನನ್ನು ನಾನು ಸೀಮಿತ ಪರಿಧಿಯಲ್ಲಿರಿಸಿಕೊಳ್ಳಬಾರದು ಎಂಬ ಗಾಢ ಆಲೋಚನೆಯಿಂದ, ಉದ್ಯೋಗಸ್ಥೆಯಾಗಿದ್ದರೂ, ಸಮಯಭಾವದಿಂದ, ಕುಟುಂಬದ ಹೆಚ್ಚಿನ ಜವಾಬ್ದಾರಿಯಿಂದ ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಕೆಲವೊಮ್ಮೆ ದೈಹಿಕ ಮತ್ತು ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿರುತ್ತೇನೆ. ಹಾಗಂತ ಸಾಮಾನ್ಯ ಮಹಿಳೆಯರಂತೆ ಹಿಂಜರಿಯದೇ, ಎಲ್ಲಾ ಒತ್ತಡಗಳನ್ನು ನಿರ್ವಹಿಸಿಕೊಂಡು ನನ್ನ ಶಕ್ತಿ ಮೀರಿ ಮುನ್ನಡೆಯುತ್ತಿದ್ದೇನೆ. ಸಾಕಷ್ಟು ಅವಕಾಶ, ಪ್ರತಿಭೆ, ಕೆಲಸ ಮಾಡುವ ಸಾಮರ್ಥ್ಯ, ನನ್ಮೂಲಕ ಉನ್ನತವಾದದ್ದನ್ನು ಸಾಧಿಸುವ ಬಯಕೆ ಬೆಟ್ಟದಷ್ಟಿದ್ದರೂ, ಆ ಕ್ಷಣದ ಪರಿಸ್ಥಿತಿಗಳು ಕೆಲವೊಮ್ಮೆ ನನ್ನನ್ನು ನಿಸ್ಸಾಹಾಯಕಳನ್ನಾಗಿಸುತ್ತವೆ. ಆದರೂ ನಾನ್ನೊಬ್ಬ ಗಟ್ಟಿಗಿತ್ತಿಯಾಗಿ ನನ್ನ ಪಾಲಿನ ಪೂರ್ಣ ಕರ್ತವ್ಯವನ್ನು ನಿಭಾಯಿಸಲು ಸಾಕಷ್ಟು ಸಮರ್ಥಳಾಗಿದ್ದೇನೆ.
ಆದರೆ ಎಲ್ಲಾ ಒತ್ತಡಗಳ ಮಧ್ಯೆ ಎಷ್ಟೇ ದೈಹಿಕವಾಗಿ ದಣಿದಿದ್ದರೂ ಮಕ್ಕಳ ಭವಿಷ್ಯದ ಪ್ರಶ್ನೆ ಬಂದಾಗ ಪುಟ್ಟಿದೆದ್ದು ಕಲ್ಪನಾ ಲೋಕದಲ್ಲಿ ವಿಹರಿಸುತ್ತ ಭಾವನಾ ಜೀವಿಯಾಗಿ ಅನೇಕ ಕನಸುಗಳನ್ನು ಕಟ್ಟಿಕೊಂಡು ಅವುಗಳನ್ನು ಸಾಕಾರಾಗೊಳಿಸಲು ಜೀವನವಿಡೀ ಪರಿಶ್ರಮ ಪಡುವುದೇ ನನ್ನಂತಹ ತಾಯಿಯ ನೈಜ ಬದುಕಾಗಿರುತ್ತದೆ. ನನ್ನಂತೆಯೇ ಮಕ್ಕಳ ಬಗೆಗೆ ಪ್ರೀತಿ, ಕಾಳಜಿ, ಜವಾಬ್ದಾರಿ, ನಿರೀಕ್ಷೆ ಹಾಗೂ ಕನಸುಗಳು ನಿಮ್ಮ ಮಕ್ಕಳ ಮೇಲೆ ನಿಮಗೂ ಇವೆ. ಆದರೆ ಪರಿಸ್ಥಿತಿಯನ್ನು ನಿಭಾಯಿಸಲಾಗದೇ ತಾಳ್ಮೆ ಕಳೆದುಕೊಳ್ಳುವ ಅನಿವಾರ್ಯತೆ ಬಂದೋದಗುತ್ತದೆ. ಹಾಗಾಗಿ ಮಕ್ಕಳನ್ನು ಬೆಳೆಸುವಾಗ ತಾಳ್ಮೆಯಿದ್ದರೇನೇ ಎಲ್ಲದನ್ನೂ ಸರಿಪಡಿಸಲು ಸಾಧ್ಯ. ಈ ತಂತ್ರಜ್ಞಾನ ಯುಗದಲ್ಲಿ ಮಕ್ಕಳನ್ನು ನಿಯಂತ್ರಿಸುವ ಸಾಮರ್ಥ್ಯ ನಮಗಿಲ್ಲ. ಆದರೆ ಜಾಣತನದಿಂದ ಅವರನ್ನು ನಿಭಾಯಿಸಬಹುದಷ್ಟೇ. ಮಕ್ಕಳನ್ನು ಎಷ್ಟೇ ಬೈದರೂ, ಹೊಡೆದರೂ ನಮ್ಮ ದಾರಿಗೆ ತಂದುಕೊಳ್ಳಲು ಇರುವ ಒಂದೇ ಅಸ್ತ್ರ ಎಂದರೆ ಎಮೋಷನ್ಸ್. ಮನುಷ್ಯ ಭಾವನಾಜೀವಿಯಾದ್ದರಿಂದ ಮಕ್ಕಳನ್ನು ಭಾವನಾತ್ಮಕವಾಗಿ ಸ್ಪರ್ಶಸುತ್ತಾ ಹೋಗಬೇಕು. ತಂದೆ ತಾಯಿಗಳ ಬಗ್ಗೆ ಧನಾತ್ಮಕ ಭಾವನೆಗಳನ್ನು ಬೆಳಸಿಕೊಳ್ಳಲು ಮತ್ತು ದಿನ ನಿತ್ಯ ಜೀವನದಲ್ಲಿ ಪೋಷಕರು ತಮಗಾಗಿ ಮಾಡುತ್ತಿರುವ ಎಲ್ಲವನ್ನೂ ಅವರ ಅರಿವಿಗೆ ತರಲು ಮತ್ತು ಅವರ ಸೂಪ್ತ ಮನಸ್ಸಿನಲ್ಲಿ ಅಡಗಿರುವ ಅಮ್ಮನ ಬಗೆಗಿನ ಬೆಚ್ಚನೆಯ ಪ್ರೀತಿಯನ್ನು ವ್ಯಕ್ತ ಪಡಿಸಲು ಇಂಥ ಆಚರಣೆಗಳು ತುಂಬಾ ಸಹಾಯಕಾರಿ. ಯಾವುದಾದರೂ ಸರಿಯೇ ವ್ಯಕ್ತ ವಾದಷ್ಟು ಹೆಚ್ಚಾಗುತ್ತದೆ. ಹಾಗೆ ಅಮ್ಮನ ಬಗೆಗೆ ಮಕ್ಕಳ ಪ್ರೀತಿಯೂ ವ್ಯಕ್ತವಾಗಬೇಕು. ಅಮ್ಮನ ಎಲ್ಲಾ ಆಯಾಸಗಳಿಗೆ ಇಂಥ ಆಚರಣೆಗಳು ಸಾರ್ಥಕ ಭಾವನೆಯೊಂದಿಗೆ, ಮಕ್ಕಳನ್ನು ಬೆಳೆಸುವಲ್ಲಿ ಅಮ್ಮನ ಉತ್ಸಾಹವನ್ನೂ ಇನ್ನಷ್ಟು ದುಪ್ಪಟ್ಟು ಮಾಡುತ್ತವೆ ಎನ್ನುವುದು ನನ್ನ ಅಭಿಪ್ರಾಯ.
ನನ್ನಂತಹ ಎಲ್ಲಾ ತಾಯಂದಿರಿಗೆ ತಾಯಂದಿರ ದಿನಾಚರಣೆಯ ಶುಭಾಶಯಗಳು.
-ಶಿಲ್ಪಾ ಎಂ. ಕುಕನೂರ್