ಅಮೆರಿಕವೆಂಬ ಮಾಯಾಲೋಕ: ಡಾ. ಹೆಚ್ ಎನ್ ಮಂಜುರಾಜ್

ಅಮೆರಿಕದ ಅರಿಜ಼ೊನಾ ರಾಜ್ಯದ ಒಂದು ನಗರದಲ್ಲಿರುವ ತಮ್ಮ ಮಗ ಮತ್ತು ಸೊಸೆಯನ್ನು ನೋಡಿ ಬರಲೆಂದು ಹೋದ ಲೇಖಕಿ ಅಲ್ಲಿಯ ಜನಜೀವನ ಮತ್ತು ಸಮಾಜೋ ಸಾಂಸ್ಕೃತಿಕ ಪಲ್ಲಟಗಳನ್ನು ತಮ್ಮದೇ ಆದ ವಿಶಿಷ್ಟ ರೀತಿಯಲಿ ಗುರುತಿಸಿ ಹಾಸ್ಯಮಯ ಶೈಲಿಯಲಿ ಲಲಿತ ಪ್ರಬಂಧಗಳನ್ನಾಗಿಸಿದ್ದಾರೆ. ಇಂಥ ಒಟ್ಟು ನಲವತ್ತೊಂದು ಬರೆಹಗಳು ವಿಧ ವಿಧವಾದ ವಸ್ತುವೈವಿಧ್ಯ ಮತ್ತು ಆಡುಮಾತಿನ ಲಯದಲ್ಲಿ ಅಭಿವ್ಯಕ್ತಗೊಂಡಿವೆ. ವಾಸ್ತವವಾಗಿ ಇದನ್ನು ಅವರು ಪ್ರವಾಸ ಕಥನ ಎಂದೇ ಕರೆಯಬಹುದಾಗಿತ್ತು. ಈ ಮಾತನ್ನು ಮುನ್ನುಡಿಕಾರರೂ ಹೇಳಿದ್ದಾರೆ. ಒಂದೆರಡು ಬರೆಹಗಳು ಅವರು ಅಮೆರಿಕಕ್ಕೆ ಹೋಗುವ ಮುಂಚಿನ ಸ್ವದೇಶದ ಅನುಭವಗಳು. ಇನ್ನುಳಿದಂತೆ ಬಹುತೇಕ ಎಲ್ಲವೂ ಜಗತ್ತಿನ ಮಾಯಾಲೋಕವೆನಿಸಿದ ಅಮೆರಿಕದ ಮೀಮಾಂಸೆಗಳೇ! ಈಗಾಗಲೇ ಶ್ರೀಮತಿ ರೂಪ ಅವರು ಬರೆವಣಿಗೆ ಕ್ಷೇತ್ರದಲ್ಲಿ ಮತ್ತು ಚಿತ್ರಕಲಾ ರಂಗಗಳಲ್ಲಿ ಗುರುತಿಸಿಕೊಂಡವರೇ. ಒಂದೆರಡು ಕೃತಿಗಳನ್ನು ಹೊರತಂದವರೇ. ಹತ್ತಿರ ಹತ್ತಿರ ನಾಲ್ಕುನೂರು ಪುಟಗಳ ಈ ಬೃಹತ್ ಪುಸ್ತಕದಲ್ಲಿ ಅವರ ನಿರೂಪಣೆಯ ಸೊಗಸು ಎಂಥವರನ್ನು ಮರುಳು ಮಾಡುವಂಥದು. ಮೊದಲೇ ನಮ್ಮಂಥವರಿಗೆ ಅಮೆರಿಕದ ವಿಚಿತ್ರವೂ ವಿಶಿಷ್ಟವೂ ಆದ ಕಥನಗಳು ಹೊಸವು; ಅಂತಹುದರಲ್ಲಿ ಅದನ್ನು ತಮ್ಮ ಅನುಭವವಾಗಿಸಿಕೊಂಡು, ಇಲ್ಲಿನ ಸಂಸ್ಕೃತಿಯ ಕಣ್ಣಿಂದ ನೋಡಿ, ಅಳೆದು ತೂಗಿ, ಪೀಳಿಗೆಯ ಅಂತರದಲಿಟ್ಟು ಅಚ್ಚರಿಯನೂ ಆತಂಕವನೂ ಪಟ್ಟುಕೊಂಡು ಕೊನೆಗೆ ಗುಣಗ್ರಾಹೀ ಸಹೃದಯ ನೆಲೆಯಿಂದ ವಿಚಕ್ಷಿಸಿ ವಿಶ್ಲೇಷಿಸುವ ಕ್ರಮ ನಾವೀನ್ಯದಿಂದ ಕೂಡಿದೆ. ಎಷ್ಟೇ ವಿಷಯಾಂತರಗಳಾದರೂ ಮೂಲಭಿತ್ತಿಗೆ ಮರಳಿ ಪ್ರಸ್ತಾಪಿಸಿದ ಸಂಗತಿಯನ್ನು ಮನದಟ್ಟು ಮಾಡಿಸುವ ಕ್ರಮಶ್ರಮಗಳು ಎದ್ದು ಕಾಣುತ್ತವೆ. ಇದಲ್ಲವೇ ನಿಜದ ಬರೆವಣಿಗೆಯ ಯಶಸ್ಸು; ನೆನಪಿನ ಬತ್ತಳಿಕೆಯಿಂದ ಒಂದೊಂದೇ ವಿಚಾರಗಳ ಬಾಣ ತೆಗೆದು ವಿನೋದವೆಂಬ ಬಿಲ್ಲಿನಿಂದೆಳೆದು ಬಿಟ್ಟರೆಂದರೆ ಅದುವೇ ಅಮೆರಿಕೆಯ ಒಟ್ಟೂ ಅತ್ಯಾಧುನಿಕ ಜೀವನ ಪದ್ಧತಿಯನೇ ಗುರಿಯಾಗಿಸಿ, ಗುರುತಾಗಿಸಿ, ಗಾಯಗೊಳಿಸದೇ ಅರ್ಥೈಸುವ ಕಲಾವಂತಿಕೆಯ ಶಿಕಾರಿಯಾಗಿದೆ.

ಹಾಗಾಗಿ ರೂಪ ಅವರ ಉದ್ದೇಶ ಮತ್ತು ಆಶಯಗಳು ಸ್ಪಷ್ಟ: ತಮ್ಮ ಪೀಳಿಗೆಯ ಕಣ್ಣಿಂದ ತನ್ನ ವಯೋಮಾನದ ಮನಸಿಂದ ಪಾಶ್ಚಿಮಾತ್ಯವನ್ನು ಕಂಡರಿಸುವ ಕಾಯಕ. ಜೊತೆಗೆ ಸ್ಪಷ್ಟವಾಗಿ ತನಗನಿಸಿದ ಅನಿಸಿಕೆಗಳನ್ನೂ ಆ ಸಂದರ್ಭದಲಿ ಉದ್ಭವಿಸಿದ ಸಾಧಕ-ಬಾಧಕಗಳನ್ನೂ ತಪ್ಪದೇ ದಾಖಲಿಸಿದ್ದಾರೆ. ಇಲ್ಲಿನ ಎಲ್ಲ ವಿಚಾರಲಹರಿಗಳ ಸ್ವಭಾವಚಿತ್ರಕ್ಕೆ ಹಾಸ್ಯಮಯ ಸುವರ್ಣಲೇಪನದ ಚೌಕಟ್ಟು ಲಭಿಸಿದೆ. ಇದರಿಂದಾಗಿ ಪ್ರವಾಸದಲಿ ಕಂಡುಂಡ ಸ್ವಾನುಭವಗಳ ಪ್ರಬಂಧಮಾಲೆಯಾಗಿ ಪರಿಣಮಿಸಿದೆ. ಮುಖದಲ್ಲಿ ನಗುವನ್ನರಳಿಸುವ ಕಲೆ ರೂಪಾ ಅವರಿಗೆ ಕರಗತ; ವಿಷಯಾಂತರವಾದರೂ ಅದೆಲ್ಲೂ ನಮ್ಮನುಭವಕ್ಕೆ ಬರದಂತೆ ವಿಭಿನ್ನತೆಗಳ ಮೂಲಕ ಮನದಟ್ಟು ಮಾಡಿಸುತ್ತಲೇ ತಮ್ಮದೇ ಆದ ವಿಶೇಷ ಹರಟೆಯ ಗುಣದಿಂದ ಮೂಲಸಂಗತಿಯ ದರ್ಶನ ಕೊನೆಗಾಗುವುದು ಖಂಡಿತ. ಇದಕ್ಕಾಗಿ ಅವರು ಅಣಕು, ವ್ಯಂಗ್ಯ, ಹಾಸ್ಯ, ಪರಿಹಾಸ್ಯ, ಕಮನೀಯ ಕಲ್ಪನೆ, ವಿಹರಿಸಬೇಕೆಂಬ ಕಡೆಯಲೆಲ್ಲ ಜಾಗರವಾಡಿ ದಣಿದು ಕೊನೆಗೆ ಗೂಡು ಸೇರುವ ಮನಸೆಂಬ ಹಕ್ಕಿಯ ಸ್ವಚ್ಛಂದತೆ ಇಲ್ಲಿಯ ಬರೆಹಗಳದು. ಅವರಿಗೆ ಗೊತ್ತು: ತೀರಾ ಗಂಭೀರವಾಗಿ ಬರೆದಾಗ ನಮಗೇ ಗೊತ್ತಿಲ್ಲದಂತೆ ಅನ್ಯಸಂಸ್ಕೃತಿಯನ್ನು ದೂಷಿಸುವ ಧಾಟಿ ಬಂದೀತು ಎಂದು! ಜೊತೆಗೆ ಸನ್ನಿವೇಶ ಸಂದರ್ಭಗಳು ಬದುಕಿನಲ್ಲಿ ಹೇಗೆ? ಮತ್ತು ಯಾವ ಕಡೆ? ತಿರುವು ತೆಗೆದುಕೊಳ್ಳುವುವೋ ಅತ್ತ ಸಾಗುವ ಮಾಗಿದ ಮನಸ್ಥಿತಿ ಇವರದಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧ ಪೋಷಕರಾಗಿಯೂ ಅವರ ಹೊಣೆಯಿದೆ. ಹೀಗಾಗಿಯೇ ಅವರ ಮಗ ಮತ್ತು ವಿದೇಶೀ ಸೊಸೆಯ ಸಂಸಾರದ ಸತ್ವದಲ್ಲಿ ತಮ್ಮದೇ ಆದ ಒಂದು ಸ್ವಂತ ತತ್ತ್ವವನ್ನು ಹುಡುಕಿಕೊಂಡಿದ್ದಾರೆ.

ಹಾಗಂತ ಅವರು ಪೂರ್ಣ ರಾಜಿಯಾಗಿಲ್ಲ. ಭಾರತೀಯ ಕಣ್ಣು, ಮನಸು, ಹೃದಯಗಳೇ ಅವರನ್ನು ಕೈ ಹಿಡಿದು ನಡೆಸಿವೆ. ಅವುಗಳ ಮೂಲಕವೇ ತಮ್ಮ ಹೊಸ ಅನುಭವಗಳನ್ನು ಕಂಡು ಕಾಣಿಸಲು ಹಾತೊರೆದಿದ್ದಾರೆ. ಆಗಾಗ, ಅಲ್ಲಲ್ಲಿ ಅವರ ಸ್ವಂತ ಊರು ಹೊಳೆನರಸೀಪುರದ ಅನುಭವ ವಿಶೇಷಗಳು ನುಸುಳುತ್ತವೆ. ಶ್ರೀಯುತ ನೆ. ವಿಶ್ವನಾಥ ಅವರು ಕೃತಿಯ ಮುನ್ನುಡಿಯಲ್ಲಿ ಹೇಳಿರುವಂತೆ, ಬರೆಯುವ ಆವೇಗದಲಿ ಅಮೆರಿಕೆಯಿಂದ ತಾಯ್ನಾಡಿಗೂ ತಾಯ್ನಾಡಿನಿಂದ ಅಮೆರಿಕೆಗೂ ನಯ ನಾಜೂಕಾಗಿ ಜಾರಿಕೊಳ್ಳುವರು. ಜೊತೆಗೆ ಸ್ವಲ್ಪ ಕಾಲದವರೆಗೆ ವಾಸವಿದ್ದ ತಿಪಟೂರಿನ ವಿಚಾರಗಳೂ ಬಂದಿವೆ. ಅಲ್ಲಿನ ಹಲವನ್ನು ಪ್ರಸ್ತಾಪಿಸಿ ಮನದಟ್ಟು ಮಾಡಿಸುವ ನಿಟ್ಟಿನಲ್ಲಿ ಇವು ಲೇಖಕಿಗೆ ಕಾಡಿವೆ. ತಮ್ಮ ಕಾಲಧರ್ಮದ ನೀತಿ, ನಿಯಮ, ಶುದ್ಧ ಭಾರತೀಯ ಹಿಂದೂ ಸಸ್ಯಾಹಾರೀ ಮನೋಧರ್ಮದ ಸೆಳಕುಗಳು ಮೇಲುಗೈ ಪಡೆದಿವೆ. ಇದು ಸಹಜ ಕೂಡ. ತಮ್ಮಾತ್ಮವನ್ನು ಎಲ್ಲೂ ವಂಚಿಸಿಕೊಳ್ಳದೇ, ತನಗಾಗದ್ದನ್ನೂ ಒಗ್ಗದೇ ಹೋದದ್ದನ್ನೂ ಖಡಾಖಂಡಿತವಾಗಿ ನಿರಾಕರಿಸುವ ಖಂಡಿತವಾದೀ ನಿಲುವುಗಳನ್ನೂ ಇಲ್ಲಿಯ ಹಲವು ಬರೆಹಗಳಲ್ಲಿ ಕಾಣುತ್ತೇವೆ. ಒಟ್ಟಿನಲ್ಲಿ ಭಾರತೀಯ ಕಣ್ಣಿನಲ್ಲಿ ಆಧುನಿಕ ಅಮೆರಿಕ (ಅಮೆರಿಕೆಯೇ ಆಧುನಿಕ!) ದ ಹಲವು ವಿಚಿತ್ರ ವಿಲಾಸೀ ಹವ್ಯಾಸೀ ಸಂಸ್ಕೃತಿಯನ್ನು ನೋಡಿದಾಗ ಐವತ್ತು ದಾಟಿದ ಗೃಹಿಣಿಯೊಬ್ಬಳಿಗೆ ಅನಿಸಿದ್ದು ಪ್ರಾಮಾಣಿಕವಾಗಿ ಮತ್ತು ಹೃದ್ಯವಾಗಿ ನಿರೂಪಿತವಾಗಿದೆ. ಲೇಖಕಿಯು ಬರೆದೂ ಬರೆದೂ ಕೈ ಹದ ಮಾಡಿಕೊಂಡಿದ್ದಾರೆ. ಬರೆಯಲೆಂದೇ ಗುರುತು ಹಾಕಿಕೊಂಡಿದ್ದಾರೆ. ಅಪಾರ ನೆನಪಿನ ಶಕ್ತಿಯಿಂದ ಬಹುಶಃ ಅಂದಂದೇ ಕುಳಿತು ಬರೆದು ಮುಗಿಸಿದ್ದಾರೆ. ಸಮಯ, ಸಂದರ್ಭ, ಊರುಕೇರಿ, ಪ್ರಯಾಣದ ಪುಟ್ಟ ಪುಟ್ಟ ಹಂತಗಳು ಎಲ್ಲವನೂ ಸೊಗಸಾಗಿ ಎಲ್ಲಿಯೂ ಕುಂದುಂಟಾಗದಂತೆ ಅಚ್ಚುಕಟ್ಟಾಗಿ ಬರೆದು ಸಮಾನ ಮನಸ್ಕರ ಕೈಗಿತ್ತಿದ್ದಾರೆ.

ಆ ಮೂಲಕ ಮಗನ, ಸೊಸೆಯ, ಗಂಡನ ಗುಣಧರ್ಮಗಳೂ ಸ್ವಭಾವಗಳೂ ಅನಾವರಣಗೊಂಡಿವೆ. ತಮ್ಮ ಪತಿರಾಯರ ಬಗ್ಗೆ ಹೆಚ್ಚು ಹೇಳಿಲ್ಲವಾದರೂ ಒಂದೆರಡು ಕಡೆ ಅವರ ಅಭಿಪ್ರಾಯಗಳು ದಾಖಲಾಗಿವೆ. ಸೊಸೆಯು ವಿದೇಶೀಯಳಾದರೂ ಆಕೆಯನ್ನೆಲ್ಲೂ ವಿನಾಕಾರಣ ಎಳೆದು ತಂದಿಲ್ಲ. ತಾಯಿ ಮತ್ತು ಮಗನ ಸಂಭಾಷಣೆಗಳೇ ಬಹಳಷ್ಟು ಬರೆಹಗಳ ಮುಂದುವರಿಕೆಗೆ ಪೂರಕವಾಗಿ ಬಂದಿವೆ. ಇದೂ ಸಹಜ. ಏಕೆಂದರೆ ಎಲ್ಲಿಗೆ ಹೋಗಬೇಕಾದರೂ ಮಗನ ನೆರವಿನಿಂದಲೇ ಮಗನ ಮೂಲಕವೇ ಅವರು ಹೋಗಬೇಕಾದ್ದು ಅನಿವಾರ್ಯ. ತಮಗೆ ಉದಿಸಿದ ಸಂದೇಹ, ಪ್ರಶ್ನಾವಳಿಗಳನ್ನು ಮಗನ ಸಹಾಯದಿಂದಲೇ ಬಗೆಹರಿಸಿಕೊಳ್ಳುತ್ತಾರೆ. ಏಕೆಂದರೆ ಆತ ಈ ಕಾಲದವನು. ಅಲ್ಲಿನ ಪ್ರತಿಷ್ಠಿತ ಕಂಪೆನಿಯಲ್ಲಿ ಐಟಿ ಉದ್ಯೋಗಿಯಾದವನು. ತನ್ನ ತಾಯಿಗೆ ಅಮೆರಿಕದ ಎಲ್ಲ ನೂತನ ಆವಿಷ್ಕಾರಗಳನ್ನು ಪರಿಚಯಿಸಬೇಕೆಂಬ ತುಡಿತದವನು. ಅದು ಹಲವು ತೆರನಾದ ಕಾಫಿಯೇ ಆಗಿರಲಿ, ಎಲೆಕ್ಟ್ರಿಕ್ ಟೂತ್ಬ್ರಷ್ ಆಗಿರಲಿ, ವಿಭಿನ್ನ ಬಗೆಯ ಸಸ್ಯಾಹಾರೀ ಆಹಾರ-ಪಾನೀಯಗಳನ್ನು ಪರಿಚಯಿಸುವುದೇ ಆಗಿರಲಿ, ಹಣ್ಣು ತರಕಾರಿಗಳ ವಿಶ್ವರೂಪ ಮಾರುಕಟ್ಟೆಗಳೇ ಆಗಿರಲಿ, ಹಲವು ಬಗೆಯ ಚಾರಿಟಿ ವಿಧಾನಗಳೇ ಆಗಿರಲಿ, ಜೂಜು ಮೋಜಿನ ತಾಣ ಲಾಸ್ ವೇಗಾಸ್ ದರ್ಶನವಾಗಿರಲಿ, ಗುಜರಿ ವ್ಯವಸ್ಥೆಯ ನಾವೀನ್ಯವೇ ಆಗಿರಲಿ, ಸಾನ್ ಡಿಯಾಗೋದಂಥ ಪ್ರವಾಸೀ ತಾಣಗಳೇ ಆಗಿರಲಿ ಎಲ್ಲವೂ ರೂಪಾ ಅವರಿಗೆ ಮಗನ ಮೂಲಕವೇ ಗೊತ್ತಾದಂಥದು. ಆತ ಅಮೆರಿಕದ ಅರಿಜ಼ೊನಾದಲ್ಲಿ ವಾಸವಿರುವುದರಿಂದಲೇ ಅಲ್ಲಿಗೆ ಇವರು ಹೋಗುವಂತಾದುದು. ಇವರ ಇನ್ನೊಬ್ಬ ಮಗ ಭಾರತವಾಸಿ. ಆತನ ಪ್ರಸ್ತಾಪವೂ ಒಂದು ಪ್ರಬಂಧದಲ್ಲಿ ಬಂದಿದೆ.

ಹೆಂಗಸರ ರವಿಕೆ, ಡಿಸೈನರ್ ಬ್ಲೌಸುಗಳು ಮತ್ತದರ ದುಬಾರಿ ಬೆಲೆಯ ಮಜೂರಿ, ಕಾಫಿಪ್ರಿಯರಾದ ಅಮೆರಿಕನ್ನರ ಕೋಲ್ಡ್ ಕಾಫಿ ಹುಚ್ಚು, ಕೋವಿಡ್ ಸಮಯದಲ್ಲಿ ವಿದೇಶಕ್ಕೆ ಪಯಣಿಸಿದ ಇಕ್ಕಟ್ಟು ಬಿಕ್ಕಟ್ಟುಗಳು, ಅಲ್ಲಿ ಮುಂಜಾನೆಯ ವಾಕಿಂಗು, ಅಮೆರಿಕನ್ನರ ಶಿಷ್ಟಾಚಾರ, ವೀಗನ್ ರೆಸ್ಟುರಾಂಟ್ಗಳು, ಅಲ್ಲಿನ ವಿವಿಧ ಮಾರುಕಟ್ಟೆಗಳ ಬಣ್ಣನೆ, ರೈತರಿಂದ ನೇರವಾಗಿ ಬಳಕೆದಾರರಿಗೆ ತಲಪುವ ಫಾರ್ಮರ್ಸ್ ಮಾರ್ಕೆಟ್, ಅಲ್ಲಿಯ ಜನರ ಪ್ರಾಮಾಣಿಕತೆ, ಸೆಲ್ಫ್ ಬಿಲ್ಲಿಂಗ್, ಜೊತೆಗೆ ಸಮಯ ಪರಿಪಾಲನೆ, ಅವರ ಅತಿಯೆನಿಸುವ ಪ್ರಾಣಿಪ್ರೀತಿ, ನಾಯಿ ಬೆಕ್ಕುಗಳ ಆರೈಕೆ, ಲಯನ್ಸ್ ಐ ಹಾಸ್ಪಿಟಲಲ್ಲಿ ಕಣ್ಣಿನ ತಪಾಸಣೆ ಸಂಬಂಧ ಲೇಖಕಿಯ ಸಮಾಜ ಸೇವೆ, ಮಕ್ಕಳಲ್ಲಿ ಹೆಚ್ಚಾಗುತ್ತಿರುವ ದೃಷ್ಟಿದೋಷ ಮತ್ತು ಕಣ್ಣಿನ ಸಮಸ್ಯೆಗಳು, ವಧು ಪರೀಕ್ಷೆಯಲ್ಲಿ ದೊರೆಯುವ ಉಪ್ಪಿಟ್ಟಿನ ವಿಚಾರ, ಆ ಮೂಲಕ ಹಲ ನಮೂನೆಯ ಉಪಮಾಯಣ ಪುರಾಣ, ಬರು ಬರುತ್ತಾ ತುಂಬ ಸೂಕ್ಷ್ಮವಾಗುತ್ತಿರುವ ಇಂದಿನ ಪೀಳಿಗೆ, ಟೊಮ್ಯಾಟೊ ಚರಿತ್ರೆ ಮತ್ತು ಉಪಯೋಗಗಳು, ಅದರ ಬೆಲೆಯ ಏರಿಳಿತಗಳು, ಆಂಡ್ರೆ ಹೌಸ್ ಎಂಬಲ್ಲಿ ದೊರಕುವ ನಿರಾಶ್ರಿತರು, ನಿರ್ಗತಿಕರು ಮತ್ತು ಯಾತ್ರಿಕರುಗಳಿಗೆ ಊಟ ವಸತಿ ಸೌಲಭ್ಯ, ಆನ್ಲೈನ್ ಸೇವೆಗಳ ಬಾಹುಳ್ಯ, ಮೊಬೈಲ್ ಫೋನಿನಿಂದ ಆಗಿರುವ ಅನುಕೂಲ ಮತ್ತು ಅನನಕೂಲಗಳ ಚರ್ಚೆ, ವಿಜ್ಞಾನದ ವೈಪರೀತ್ಯಕ್ಕೆ ಅಮೆರಿಕವೇ ನಿದರ್ಶನ ಎಂಬ ಭಾವ, ಬೃಹದಾಕಾರದಲ್ಲಿ ದೊರೆಯುವ ಹಣ್ಣು-ತರಕಾರಿಗಳು, ಬಯೋ ಟೆಕ್ನಾಲಜಿಯ ಕಸರತ್ತುಗಳು, ಅಡುಗೆ ಚಾನೆಲ್ಲುಗಳನ್ನು ನೋಡಿ ಮಾಡುವ ರೆಸಿಪಿಗಳ ವೈವಿಧ್ಯ, ವೈರಲ್ ನೆಗಡಿಯೆಂದೆನಿಸಿಕೊಂಡ ಕೊರೊನಾ ಕಾಟ, ಲಾಸ್ ವೆಗಾಸ್ನಲ್ಲಿರುವ ಜೂಜು ಮೋಜಿನ ತಾಣ, ಮದುವೆಗೂ ಮುನ್ನ ನಡೆಯುವ ಪ್ರಿ ವೆಡ್ಡಿಂಗ್ ಫೋಟೊ ಮತ್ತು ವಿಡಿಯೋ ಶೂಟ್, ವಿದೇಶದ ಗುಜರಿಯ ಅರ್ಥವಿಸ್ತಾರ, ಅಲ್ಲಿರುವ ಲೇಖಕಿಯ ಮಗನ ಮನೆಯ ಮಾರಾಟ ಮತ್ತದರ ಪೀಕಲಾಟ, ಮನೆ ನೋಡ ಬಂದವರಿಗೆ ವಗ್ಗರಣೆಯ ಘಮ ಹಿಡಿಸದೇ ಹೋದದ್ದು, ಸಾರ್ವಜನಿಕ ವಾಹನ ಸಂಚಾರ ವ್ಯವಸ್ಥೆ, ವಾಹನ ಚಾಲಕರ ಜಾಗರೂಕತೆಯ ಚಾಲನೆ, ದಂತ ಚಿಕಿತ್ಸೆ ಮತ್ತದರ ದುಬಾರಿ ಶುಲ್ಕ, ಇಸ್ಕಾನ್ ದೇಗುಲಕ್ಕೆ ದರ್ಶನ, ಶತಚಂಡಿಕಾಯಾಗದಲ್ಲಿ ಪಾಲ್ಗೊಂಡಿದ್ದು, ಸೊಸೆಯ ಜೊತೆಗೆ ಮಸಾಜ್ ಪಾರ್ಲರ್ಗೆ ಹೋಗಿದ್ದರ ಅನುಭವ, ಅಲ್ಲಿನ ಜನರ ವೇಷಭೂಷಣ, ಉಡುಗೆ ತೊಡುಗೆ ಅಲಂಕಾರಗಳ ಮುಚ್ಚು ಮರೆಯಿಲ್ಲದ ಬಿಂದಾಸ್ ಬದುಕಿನ ಝಲಕ್ಗಳು, ಮಕ್ಕಳ ಪಾಲನೆ, ಶಿಕ್ಷಣ ಕ್ರಮ ಹೀಗೆ ಎಲ್ಲವನ್ನೂ ಒಂದೇ ಗುಟುಕಿನಲ್ಲಿ ನೇರ ನಿಷ್ಠುರವಾಗಿ ನಿರೂಪಿಸಿದ್ದಾರೆ.

ಅಷ್ಟೇ ಕುತೂಹಲಕರ ಅಭಿವ್ಯಕ್ತಿ, ಹೇಳುವಾಗಿನ ಅವರ ಸಂಯಮ ನಮ್ಮನ್ನು ಮೆಚ್ಚುವಂತೆ ಮಾಡುತ್ತದೆ. ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀಮತಿ ಸುಧಾ ನಾರಾಯಣಮೂರ್ತಿಯವರ ಸರಳತೆಯನ್ನು ಇಷ್ಟಪಟ್ಟ ಒಂದು ಬರೆಹವಿದೆ. ಅಮೆರಿಕದ ಹೊಸ ವರ್ಷಾಚರಣೆಯನ್ನು ಕುರಿತು ಬರೆದಿದ್ದಾರೆ. ಕನ್ನಡಿಗರ ಉಗಾದಿ ಪ್ರಬಂಧವಂತೂ ಸೊಗಸಾಗಿ ಚಿತ್ರಿತವಾಗಿದೆ. ಸಾಹಿತಿಗಳ ಪ್ರಶಸ್ತಿ ಪುರಸ್ಕಾರದ ಹುಚ್ಚನ್ನು ಎನ್ಕ್ಯಾಷ್ ಮಾಡಿಕೊಳ್ಳುವ, ಒಂಥರದ ದಂಧೆಯನ್ನೇ ನಡೆಸುವ ವಿಷಚಕ್ರದಲ್ಲಿ ತಾವು ಸಿಲುಕಿಕೊಂಡು ನಾಜೂಕಾಗಿ ಹೊರಬಂದ ಸ್ವಾನುಭವವೊಂದು ಇಲ್ಲಿ ಬರೆಹವಾಗಿದೆ. ಪುರಸ್ಕಾರ ನೀಡುತ್ತೇವೆಂದು ಆಹ್ವಾನಿಸಿ, ನಂತರ ದುಡ್ಡು ಕೀಳುವ ವ್ಯವಹಾರವಿದು. ಇಂಥ ಒಂದು ಸ್ಕ್ಯಾಮ್ ಅನ್ನು ಹೊರಗೆಳೆದಿದ್ದಾರೆ. ನಡೆದ ಕಾರ್ಯಕ್ರಮದಲ್ಲಿ ನಾಲ್ಕೈದು ಜನರಿದ್ದ ಫೋಟೊ ಕಳಿಸಿ, ತಮಗೆ ಆಯ್ದಕ್ಕಿ ಲಕ್ಕಮ್ಮ ರಾಜ್ಯ ಪ್ರಶಸ್ತಿ ಕೊಡ ಮಾಡಲಾಗಿದೆ. ಪ್ರಶಸ್ತಿ ಫಲಕವನ್ನು ಕೊರಿಯರ್ ಮಾಡಲು ಅದರ ಖರ್ಚು ಭರಿಸಬೇಕು ಎಂದು ಸಂಘಟಕರು ಹೇಳಿ ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಇಂಥ ಪ್ರಸಂಗವನ್ನು ಹೇಳುವಾಗಲೂ ಲೇಖಕಿ ತಮ್ಮ ಸಂವೇದನೆಯನ್ನು ಕಳೆದುಕೊಳ್ಳದೇ ಅತ್ಯುತ್ಸಾಹ ತೋರದೇ ನಿರ್ಲಿಪ್ತವಾಗಿ ಬರೆದಿದ್ದಾರೆ. ಸಾಹಿತ್ಯವನ್ನು ಕುರಿತ ಆರೋಗ್ಯಕರ ಕಾಳಜಿ ಇವರಲ್ಲಿ ಇರುವುದರಿಂದಲೇ ದುಡ್ಡು ಕೊಟ್ಟು ಪುರಸ್ಕರಿಸಿಕೊಳ್ಳುವ ಹೀನಾಯಕ್ಕೆ ಅಸಹ್ಯಿಸಿಕೊಳ್ಳುತ್ತಾರೆ. ಬರೆಯುವವರಿಗೊಂದು ಎಚ್ಚರಿಕೆಯಾಗಿ ಇದು ರೂಪುಗೊಂಡಿದೆ. ಪರಿಚಿತರೊಬ್ಬರು ತನ್ನ ತಮ್ಮನ ಹುಟ್ಟುಹಬ್ಬಕ್ಕಾಗಿ ಇವರಿಂದ ಶುಭಾಶಯ ಪತ್ರ ಬರೆಸಿಕೊಂಡ ಘಟನೆಯನ್ನು ಉಲ್ಲೇಖಿಸುತ್ತಾ, ಪ್ರಶಂಸೆ ತರುವ ಫಜೀತಿಗಳತ್ತ ಗಮನ ಸೆಳೆಯುತ್ತಾರೆ.

ʼಸಂಬಳವಿಲ್ಲದ ನೌಕ್ರಿ; ಉಂಬಳವಿಲ್ಲದ ಚಾಕ್ರಿʼ ಎಂದು ತಮ್ಮನ್ನು ಹಾಸ್ಯ ಮಾಡಿಕೊಳ್ಳುತ್ತಾರೆ. ʼಬೆಳಗೆದ್ದು ಬೇವನ್ನು ನೆನೆದೇನುʼ ಎಂಬ ಪ್ರಬಂಧದಲ್ಲಿ ಹಲ್ಲುಜ್ಜುವ ನವೀನ ಪುರಾಣವನ್ನು ಪಾಂಗಿತವಾದ ಹರಟೆಯಾಗಿಸಿದ್ದಾರೆ. ಬೆಳಗಿನ ವಾಕಿಂಗಿನಲ್ಲಿ ಕಂಡವರ ಮನೆಯ ಹೂ ಕಿತ್ತು, ತಮ್ಮ ಮನೆಯ ದೇವರಿಗೆ ಮುಡಿಸುವ ಹಿರಿಯರ ಚಾಳಿಯೊಂದನ್ನು ಪ್ರಸ್ತಾಪಿಸುತ್ತಾ, ‘ಕೊನೆಗೆ ಯಾರು ಪೂಜಿಸಿದರೇನು? ಇವರ ಮನೆಯ ಹೂವೇ ತಾನೇ, ಅದರ ಪುಣ್ಯ ಇವರಿಗೂ ಶೇರ್ ಆಗುತ್ತದಲ್ಲʼ ಎಂದು ಸಮಾಧಾನಿಸಿಕೊಳ್ಳುತ್ತಾರೆ. ‘ನೀರೆಗೆ ಮಾತ್ರ ಸೀರೆಯೇ?’ ಎಂಬ ಪ್ರಬಂಧದಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಉತ್ಪ್ರೇಕ್ಷೆಯಿದೆ. ಗಂಡಸರದಾಗಿದ್ದ ಬಟ್ಟೆಗಳೆಲ್ಲ ಹೆಂಗಸರ ಫ್ಯಾಷನ್ ಆದಂತೆ ಹೆಂಗಸರ ಸೀರೆಯು ಇದೀಗ ಗಂಡಸರ ದಿರಿಸು ಆಗುತ್ತಿರುವುದರ ಬಗ್ಗೆ ಹೌಹಾರಿದ್ದಾರೆ. ಹೆಂಡತಿಯರ ಸೀರೆಗಳೆಲ್ಲ ಇನ್ನು ಮೇಲೆ ಗಂಡಸರದ್ದಾದರೆ ಕಷ್ಟ. ‘ಸೀರೆಗಂತೂ ಎಂಟ್ರಿ ಕೊಟ್ರಿ; ಡಿಸೈನರ್ ಬ್ಲೌಸ್ಗಳ ರಾಶಿಗೆ ಮಾತ್ರ ಕೈ ಹಾಕಬೇಡಿ ದಮ್ಮಯ್ಯ, ಇವು ನಿಮಗೆ ಒಪ್ಪುವುದಿಲ್ಲ’ ಎಂದು ವಿಡಂಬಿಸುವುದನ್ನು ಮರೆಯುವುದಿಲ್ಲ!

ಮಾವನವರ ಶ್ರಾದ್ಧ (ವೈದೀಕ)ದ ದಿನ ಅವರಿಗಿಷ್ಟ ಎಂದು ಕಾಫಿ ಎಡೆಯಿಟ್ಟ ಪ್ರಸಂಗ, ಬೂದುಗುಂಬಳದ ಮಹತ್ವ ಮತ್ತು ವಿಶೇಷತೆ, ಸದ್ಗುರು ಅವರ ವಿಡಿಯೋದ ಮಾತು ಕೇಳಿದ ಮೇಲೆ ಮಗರಾಯನು ಬೂದುಗುಂಬಳದ ಜೀನಿಯಸ್ತನವನ್ನು ಒಪ್ಪಿದ್ದು, ವಿಯಟ್ನಾಮಿನಿಂದ ದೂರದ ಅಮೆರಿಕಕ್ಕೆ ಅನ್ನ ಹುಡುಕಿಕೊಂಡು ವಲಸೆ ಬಂದು, ನಯ ನಾಜೂಕಿನ ಮಾಲೀಷು ಸೆಂಟರ್ ನಡೆಸುತ್ತಿರುವ ಮೋಹಕ ಚೆಲುವೆ, ಬಂಗಾರದ ಬೊಂಬೆಯನ್ನು ಕುರಿತು ಲೇಖಕಿ ಆಡುವ ಮಾತುಗಳು ಹೃದಯಾಂತಃಕರಣದ ದ್ಯೋತಕ. ಹಾಗೆಯೇ ಪಕ್ಕದ ದೇಶ ಮೆಕ್ಸಿಕೊದಿಂದ ಬಂದ ಮನೆಗೆಲಸದ ಮುನಿಯಮ್ಮ (ಲೇಖಕಿಯಿಟ್ಟ ಹೆಸರು). ಈಕೆ ಸಹ ಹೊಟ್ಟೆ ಹೊರೆಯಲು ಬಂದವಳೇ. ತನ್ನ ದೇಶದ ಅರಾಜಕತೆ, ಮಾದಕವಸ್ತುಗಳ ಮಾಫಿಯಾಗಳಿಂದ ವಲಸೆ ಬರುವಂತಾದದ್ದು. ಇಲ್ಲೆಲ್ಲಾ ರೂಪಾ ಅವರ ಸಂಸ್ಕಾರವಂತಿಕೆ ಎದ್ದು ತೋರುತ್ತದೆ. ಕಷ್ಟನಷ್ಟಗಳಿಗೆ ಮರುಗುವ ಮನಸ್ಸು, ಮಿಡಿಯುವ ಕರುಳ ಕೂಗನ್ನು ಸಹಾನುಭೂತಿಯಿಂದ ಚಿತ್ರಿಸುತ್ತಾರೆ; ಆ ಮುಖೇನ ನಮಗೂ ವಿಶ್ವದರ್ಶನ ಮಾಡಿಸುತ್ತಾರೆ. ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರಗಳಿಂದ ಜನಸಾಮಾನ್ಯರ ಜೀವನದ ಮೇಲಾದ ಪರಿಣಾಮಗಳೇನು? ಎಂಬುದು ಸಹ ಇಂಥ ಕಡೆ ಅಧ್ಯಯನಯೋಗ್ಯ.

ಶೌಚಾಲಯದ ಬಳಕೆಗಾಗಿ ಒಂದು ಪ್ಲಾಸ್ಟಿಕ್ ಮಗ್ (ಬೋಸಿ) ದೊರೆಯದೇ ಹೋದ ದುರಂತವನ್ನು ಲೇಖಕಿ ಉಲ್ಲೇಖಿಸಿ, ಚಿಕ್ಕ ಪುಟ್ಟ ಸಂಗತಿಗಳಲ್ಲೂ ನಮಗೆ ನಮ್ಮ ದೇಶದಲ್ಲಿ ಸಿಗುವ ಅನುಕೂಲವನ್ನು ನೆನಪಿಸಿಕೊಳ್ಳುತ್ತಾರೆ. ಅಲ್ಲಿಯ ಶೌಚಾಲಯದ ವಿನ್ಯಾಸ ಮತ್ತು ಕಾರ್ಯ ನಿರ್ವಹಣೆಯ ರೀತಿ ರಿವಾಜುಗಳೇ ಬೇರೆಯಾದ್ದರಿಂದ ಯಾರಿಗೂ ಆ ಪದಾರ್ಥದ ಅಗತ್ಯ ಕಂಡಿಲ್ಲ; ಹೀಗಾಗಿ ಅಂಥದನ್ನು ಮಾರುವುದಿಲ್ಲ ಎಂದು ಅವರ ಮಗ ಸೂಕ್ತ ಸಮಜಾಯಿಷಿ ನೀಡುತ್ತಾರೆ. ಅಂದರೆ ಪ್ರವಾಸವೆಂಬುದು ಕೇವಲ ಖುಷಿಯ ವಿಚಾರ ಮಾತ್ರವಲ್ಲ; ಸಂಸ್ಕೃತಿಯ ವ್ಯತ್ಯಾಸಗಳಿಂದ ಒದಗುವ ಇಕ್ಕಟ್ಟುಗಳನ್ನೂ ಅನುಭವಿಸಬೇಕು; ಆ ಮಟ್ಟಿಗೆ ನಮ್ಮ ಲೈಫ್ ಸ್ಟೈಲ್ ಅನ್ನು ಬದಲಿಸಿಕೊಳ್ಳಬೇಕು ಎಂಬುದು ಇಂಥಲ್ಲಿ ಅಂತರ್ಗತ. ಅಮೆರಿಕದಲ್ಲಿ ಇದೀಗ ಪರಿಸರಕ್ಕೆ ಪೂರಕವಾದ ಸಾಮಗ್ರಿಗಳ ಬಳಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ಬರೆದಿದ್ದಾರೆ. ತೆಂಗಿನನಾರಿನಿಂದ ಮಾಡಿದ ಸ್ಕ್ರಬ್ಬು, ಸೆಣಬಿನ ಸ್ಪಾಂಜು, ಕಪ್ಪು, ಸ್ಟ್ರಾ, ಕಟ್ಲರಿ, ಸಾಸ್ ಕಂಟೇನರ್ಗಳೆಲ್ಲ ಪರಿಸರಸ್ನೇಹಿಯಾದವು. ನಮ್ಮಲ್ಲಿಯೂ ಇದರ ಗಾಳಿ ಬೀಸುತ್ತಿದೆ ಎಂದು ಗುರುತಿಸುತ್ತಾ, ‘ಪ್ಲಾಸ್ಟಿಕ್ ಪದಾರ್ಥಗಳನ್ನು ಉತ್ಪಾದಿಸಿ, ಬಳಸಬೇಡಿ ಎಂದು ಬೊಬ್ಬೆ ಹೊಡೆದರೇನು ಪ್ರಯೋಜನ?’ ಎಂದು ಪ್ರಶ್ನಿಸುತ್ತಾರೆ. ನಮ್ಮಲ್ಲಿಯ ಜನಸಂಖ್ಯಾ ಸ್ಫೋಟವೇ ಎಲ್ಲದರ ಅನುಷ್ಠಾನಕ್ಕೆ ದೊಡ್ಡ ಅಡ್ಡಿ ಎಂಬ ತೀರ್ಮಾನಕ್ಕೆ ಬರುತ್ತಾರೆ.

‘ಸೂಪರ್ ಸಾಮಿಗೋಳು’ ಎಂಬ ಪ್ರಬಂಧದಲ್ಲಿ ಆನ್ಲೈನ್ ಪೂಜೆ, ಮತ್ತದರ ವಿಧಾನ ಮತ್ತು ಲೈವ್ ಅರ್ಚಕರ ವಿಚಾರ ಬಂದಿದೆ. ಕೊರೊನಾ ಸಮಯದಲ್ಲಿ ಇವು ಅಗತ್ಯವಾಗಿ, ಅನಂತರವೂ ಇದು ಮುಂದುವರಿದಿದೆ. ಇದೊಂಥರ ಚೆನ್ನಾಗಿಯೇ ಇದ್ದು, ಪೂಜಿಸುವವರ ಸ್ವಾತಂತ್ರ್ಯೆಕ್ಕೆ ಮನ್ನಣೆ ಸಿಕ್ಕಿದೆ ಎನ್ನುತ್ತಾರೆ. ಎಲ್ಲ ರೀತಿಯ ಆಹಾರ ಪದ್ಧತಿಗಳನ್ನು ವಿಮರ್ಶಿಸುತ್ತಾ, ಆಹಾರದ ಜಾಗತೀಕರಣವನ್ನು ಪ್ರಬಂಧಕಾರರು ಖಂಡಿಸುತ್ತಾರೆ; ಇದು ತಂದೊಡ್ಡುತ್ತಿರುವ ಆರೋಗ್ಯದ ಸಮಸ್ಯೆಯನ್ನೂ ಚರ್ಚಿಸುತ್ತಾರೆ. ಸಾವಿರಾರು ವರುಷಗಳಿಂದ ಒಂದೆಡೆ ನೆಲೆಸಿ, ಅಲ್ಲಿ ಬೆಳೆಯುವ ಹಣ್ಣು, ತರಕಾರಿ, ಅಹಾರಕ್ರಮಗಳಿಗೆ ನಮ್ಮ ಶರೀರ ಒಗ್ಗಿಕೊಂಡಿರುತ್ತದೆ. ಇನ್ನೆಲ್ಲಿಯೋ ಬೆಳೆದ ಬೆಳೆಯನ್ನು ನಮ್ಮ ದೇಹ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ ಎಂದೇ ಬರೆಯುತ್ತಾರೆ. ಚೈನಿಸ್ ಮಾರುಕಟ್ಟೆಯ ಒಂದು ಮೂಲಂಗಿಯು ಸುಮಾರು ನಾಲ್ಕು ಕೇಜಿ ತೂಗುವಂಥದು. ಅಲ್ಲದೇ ಹಣ್ಣು, ತರಕಾರಿಗಳ ಆಕಾರ, ವಿನ್ಯಾಸ, ಬಣ್ಣಗಳಿಗೆ ಗಮನ ಕೊಡುವ ಹಿನ್ನೆಲೆಯಲ್ಲಿ ಬಯೋಟೆಕ್ಕಿದೆ. ಹಲವು ವಿಧದ ರಾಸಾಯನಿಕಗಳ ಸಿಂಪಡಣೆಯಿದೆ. ಇದರಿಂದ ಪ್ರಕೃತಿಯ ಸಹಜತೆಯು ಮಾಯವಾಗಿ ಕೃತಕತೆಯೇ ಗೆಲುವು ಸಾಧಿಸಿದೆ. ಅವುಗಳ ಚೆಲುವಿಗೆ ಮಾರುಹೋಗಿ ಕೊಂಡು ಬಳಸಿ, ನಮ್ಮಗಳ ಆರೋಗ್ಯ ಹದಗೆಟ್ಟಿದೆಯೆಂದೇ ತೀರ್ಮಾನಿಸಿದ್ದಾರೆ. ಇಂಥ ವಿಚಾರದಲ್ಲಿ ಲೇಖಕಿಯ ನಿರ್ಣಯ ಸರ್ವಸಮ್ಮತವಾದುದು. ಉಳಿದ ವಿಚಾರಗಳ ಜಾಗತೀಕರಣ ಈಗ ಅನಿವಾರ್ಯವಾಗಿದೆ. ಆದರೆ ಆಹಾರದ ವಿಷಯದಲ್ಲಿ ಮಾತ್ರ ಇದನ್ನು ಪ್ರಬಲವಾಗಿ ವಿರೋಧಿಸಬೇಕಿದೆ. ಸ್ಥಳೀಯ ಆಹಾರ ಪದ್ಧತಿಯೇ ಶ್ರೇಷ್ಠವಾದುದು ಎಂಬುದನ್ನು ಬೆಂಬಲಿಸಬೇಕಿದೆ. ಅಷ್ಟೇ ಅಲ್ಲ, ನಿರ್ದಿಷ್ಟ ಪ್ರದೇಶದಲ್ಲಿ ಬೆಳೆದ ಸಸ್ಯ, ಗಿಡಮೂಲಿಕೆಗಳಿಗೆ ಔಷಧೀಯ ಗುಣವಿರುತ್ತದೆ.

ಅದನ್ನು ಇನ್ನೆಲ್ಲೋ ಬೆಳೆಸಿದರೆ ಅಂಥವು ಸಾಮಾನ್ಯವಾಗುತ್ತವೆಯೇ ವಿನಾ ಔಷಧೀಯ ಎನಿಸುವುದಿಲ್ಲ. ಅಲ್ಲದೇ ಆರೋಗ್ಯದ ಕಾರಣಕ್ಕಾಗಿಯೇ ಅಮೆರಿಕನ್ನರು ಈಗೀಗ ಮಾಂಸಾಹಾರ ತ್ಯಜಿಸಿ, ಸಸ್ಯಾಹಾರಿಗಳಾಗುತ್ತಿದ್ದಾರೆ. ಪ್ರಾಣಿಜನ್ಯ ಉತ್ಪನ್ನಗಳನ್ನೂ ಬಳಸದಂಥ ವೀಗನ್ಗಳಾಗುತ್ತಿದ್ದಾರೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಲೇಖಕಿಯು ಅನುಭವಿಸಿದ ತಳಮಳವನ್ನು ಪ್ರಬಂಧವೊಂದು ವಿವರಿಸಿದೆ. ಒಮ್ಮೆ ಜ್ಯೂಸ್ ಕುಡಿಯುವಾಗ ‘ಪ್ಯೂರ್ ವೆಜ್’ ಎಂದು ಹೇಳಿದ್ದರೂ ಅದಕ್ಕೆ ಒಂದು ರೀತಿಯ ಜೆಲ್ಲಿ ಹಾಕಿದ್ದು ಅನುಮಾನ ತರಿಸುವಂತಾಯಿತು. ಏಕೆಂದರೆ ಜೆಲ್ಲಿಯನ್ನು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿರುತ್ತಾರೆ ಎಂಬುದು ಲೇಖಕಿಯ ಭಾವನೆ. ಕುಡಿದ ಮೇಲೆ ಏನೋ ಒಂದು ರೀತಿಯ ಸಂಕಟ, ಹಿಂಸೆ, ಮಾನಸಿಕ ಗೊಂದಲ. ಇದನ್ನು ಮನಗಂಡ ಅವರ ಪುತ್ರ, ಅಂಗಡಿಯವನು ಮೋಸ ಮಾಡಿದನೆಂಬ ಸಿಟ್ಟಿಗೆ ಕಾರಿನಲ್ಲಿ ಹಿಂದಿರುಗಿ ಅವನನ್ನು ತರಾಟೆಗೆ ತೆಗೆದುಕೊಂಡು ಕಸದ ಬುಟ್ಟಿಗೆ ಎಸೆದು ಬರುತ್ತಾರೆ. ತರುವಾಯ ಗೂಗಲಮ್ಮನ ಮೂಲಕ ಹುಡುಕಿದ ಮೇಲೆ ವಾಸ್ತವ ಮನವರಿಕೆ ಆಗುತ್ತದೆ. ಅದು ಸಸ್ಯಜನ್ಯ ಜೆಲ್ಲಿಯಾಗಿರುತ್ತದೆ. ಸದ್ಯ, ಕೊನೆಗೂ ಜಾತಿ-ನೀತಿ-ನೇಮ ಕೆಡಲಿಲ್ಲವೆಂದು ರೂಪಾ ಅವರು ನಿಟ್ಟುಸಿರು ಬಿಡುತ್ತಾರೆ! ‘ಪಾಪ! ಅಂಗಡಿಯವನು ಏನನೋ ಹೇಳಲು ಹೊರಟರೂ ತಾನು ಕೇಳಿಸಿಕೊಳ್ಳದೇ ವಾಪಸು ಬಂದಿದ್ದನ್ನು’ ಮಗ ನೆನಪಿಸಿಕೊಳ್ಳುತ್ತಾರೆ. ಇಂಥ ಪೇಚಿನ ಪ್ರಸಂಗಗಳನ್ನು ಲೇಖಕಿ ಬಹಳ ಸಹಜವಾಗಿ ಯಾವ ಅಳುಕೂ ಇಲ್ಲದೇ ವಿಚಕ್ಷಿಸುತ್ತಾರೆ. ಹಾಗಾಗಿಯೇ ಈ ಬರೆಹಗಳಿಗೆ ಆತ್ಮಕಥನಾತ್ಮಕ ಗುಣ ಪ್ರಾಪ್ತವಾಗಿದೆ.

ಅಮೆರಿಕದಲ್ಲಿ ಗ್ರಾಹಕರೇ ದೇವರು. ಮಾರಾಟದ ರೀತಿನೀತಿಗಳು ನಮ್ಮ ದೇಶದಲ್ಲಿರುವಂಥದಲ್ಲ. ಅಲ್ಲಿ ಎಷ್ಟೇ ಪ್ರಶ್ನಿಸಿದರೂ ಮಾರುವವರು ಬೇಸರ ಮಾಡಿಕೊಳ್ಳುವುದಿಲ್ಲ. ಅವರ ನಗುಮೊಗವೇ ಎಲ್ಲದಕೂ ಉತ್ತರ. ಕಾರ್ಖಾನೆ, ಕಛೇರಿಗಳೂ ಅಷ್ಟೇ. ಕೆಲಸ ಮಾಡುವ ಕಾರ್ಮಿಕರಿಗೆ ಗರಿಷ್ಠ ಭದ್ರತೆ. ಅವರ ಕ್ಷೇಮಪಾಲನೆಗೆ ಆದ್ಯತೆ. ಜೊತೆಗೆ ಸಮಯಪ್ರಜ್ಞೆ ಮತ್ತು ಪಾರದರ್ಶಕ ಆಡಳಿತ. ಲೇಖಕಿಯ ಮಗ ಒಮ್ಮೆ ವಿದ್ಯುತ್ ಬಿಲ್ಲಿನ ಮೊತ್ತವನ್ನು ಮರೆತು ಹೆಚ್ಚುವರಿಯಾಗಿ ಪಾವತಿ ಮಾಡಿ ಬಂದ ಮೇಲೆ ‘ನೀವು ಹೆಚ್ಚು ಹಣ ಪಾವತಿ ಮಾಡಿದ್ದೀರಿ; ಮೂರು ದಿನಗಳಲ್ಲಿ ವಾಪಸ್ ಪಡೆದುಕೊಳ್ಳಿ’ ಎಂಬ ಸಂದೇಶ ಬಂದಿದ್ದನ್ನು ವಿವರಿಸುತ್ತಾ, ‘ನಿಗದಿತ ಸಮಯಕ್ಕೆ ಬರದೇ ಇದ್ದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂಬ ಎಚ್ಚರಿಕೆ ಬಂತೆಂದು ತಿಳಿಸಿದ್ದಾರೆ. ನಮ್ಮಲ್ಲಿ ಹೀಗಿಲ್ಲ! ಮುಂದಿನ ಬಿಲ್ಲಿನಲ್ಲಿ ಮೈನಸ್ ಮಾಡಿಕೊಂಡರಾಯಿತು! ಆದರೆ ಹಾಗೆಲ್ಲ ಗ್ರಾಹಕರ ಹೆಚ್ಚಿನ ಹಣದ ಬಗ್ಗೆ ಸ್ವಂತ ನಿರ್ಧಾರ ತೆಗೆದುಕೊಳ್ಳದಷ್ಟು ಅಮೆರಿಕದಲ್ಲಿ ಗ್ರಾಹಕ ಕಾನೂನು ಬಿಗಿಯಾಗಿದೆ. ಅಮೆರಿಕದವರ ಅತಿಯಾದ ಪೆಟ್ ಲವ್ವಿಗೆ ಅವರು ಅನುಭವಿಸುವ ಲೋನ್ಲಿನೆಸ್ ಕಾರಣ ಎಂದು ಸರಿಯಾಗಿ ಊಹಿಸಿದ್ದಾರೆ. ಸಂಗಾತಿಗಳೊಂದಿಗೆ ಹೊಂದಿಕೊಂಡು ಹೋಗುವ ಸೈರಣೆ ಇವರಲ್ಲಿ ಕಡಮೆ ಆಗಿರುವುದರಿಂದ ಸಹಜವಾಗಿಯೇ ರೋಬೋಗಳ ಜೊತೆಗೆ ಜೀವಿಸುವಂಥ ಕಾಲ ಬಂದಿದೆ. ರೊಬೋಟ್ಗಳಿಗೇ ತಾಳಿ ಕಟ್ಟಿ ಸಂಸಾರ ನಡೆಸುತ್ತಿದ್ದಾರೆ ಎಂದು ಗೂಗಲಪ್ಪ ವರದಿಸಿ, ಅಂಥವರ ಫೋಟೊಗಳನ್ನೂ ಕೊಟ್ಟಿತಂತೆ! ಈ ಸಂದರ್ಭದಲ್ಲೇ ಆನ್ಲೈನ್ ಮದುವೆ, ಕೆಲವು ಬುಡಕಟ್ಟು ಜನಗಳ ಮದುವೆಯ ವಿಚಿತ್ರ ಪದ್ಧತಿಗಳನ್ನು ವಿವರಿಸುತ್ತಾರೆ. ನಮ್ಮಲ್ಲಿ ಇರುವಂತೆ ಬೀದಿನಾಯಿ, ಬೀದಿಬೆಕ್ಕುಗಳಿಲ್ಲ ಎಂದು ನಿಟ್ಟುಸಿರು ಬಿಡುತ್ತಾರೆ. ಬರು ಬರುತ್ತಾ ತುಂಬಾ ಸೆನ್ಸಿಟೀವ್ ಆಗುತ್ತಿರುವ ಸಮುದಾಯವನ್ನು ಕುರಿತು ಬರೆಯುತ್ತಾ, ಬಾತುರೂಮಿನ ನಲ್ಲಿಯನ್ನು ಸ್ವಲ್ಪ ಬಲ ಕೊಟ್ಟು ತಿರುಗಿಸಿದ್ದಕ್ಕೇ ತಮ್ಮ ಸ್ನೇಹಿತರ ಬಲಮುಂಗೈಯಲ್ಲಿ ಫ್ರಾಕ್ಚರ್ ಆದದ್ದನ್ನು ಉಲ್ಲೇಖಿಸುತ್ತಾರೆ. ಅಲ್ಲಿನ ಪೋಷಕರ ಅವಸ್ಥೆಗಳು ವಿಚಿತ್ರವಾದವು ಎಂದು ಹೇಳುತ್ತಾ, ‘ನನ್ ಮಗಳಿಗೇನೋ ಸ್ಟ್ರೆಸ್ ಮ್ಯಾನೇಜ್ಮೆಂಟ್ ಕೋರ್ಸಿಗೆ ಜಾಯಿನ್ ಆಗಬೇಕಂತೆ; ಅವಳಿಗೆ ಆ ಸಬ್ಜೆಕ್ಟ್ ಬಹಳ ಇಷ್ಟ!’ ‘ನೋಡಿ, ನನ್ನ ಮಗ, ಬಿಂಗ್ಹ್ಯಾಮ್ಟನ್ ಯುನಿವರ್ಸಿಟಿಗೆ ಟ್ರೀ ಕ್ಲೈಂಬಿಂಗ್ ಕ್ಲಾಸ್ಗೆ ಹೋಗಿದಾನೆ, ಮರ ಹತ್ತುವುದನ್ನು ಕಲಿತು ಮುಂದೆ ಏನು ಮಾಡಬೇಕೂಂತಿದ್ದಾನೋʼ ಎಂದೆಲ್ಲ ಅಳಲು ಪಡುವುದನ್ನು ಉದಾಹರಿಸಿದ್ದಾರೆ. ಇನ್ನೂರು ದೇಶಗಳ ಪೈಕಿ ಮಾನಸಿಕ ಖಿನ್ನತೆ, ಒತ್ತಡ, ನಿರುತ್ಸಾಹದ ಬದುಕಲ್ಲಿ ಅಮೆರಿಕದವರದು ನಾಲ್ಕನೆಯ ಸ್ಥಾನ ಎಂದು ತಿಳಿಸಿ, ಕೊನೆಗೆ ‘ಸುಖದ ಐಷಾರಾಮ ಜೀವನ ಮುಖ್ಯವೇ; ಒತ್ತಡರಹಿತ ಜೀವನದ ನೆಮ್ಮದಿ ಮುಖ್ಯವೇ?’ ಎಂದು ಪ್ರಶ್ನಿಸುತ್ತಾರೆ. ಅವರ ಪ್ರಶ್ನೆಯಲ್ಲೇ ಉತ್ತರವೂ ಇದೆ ಎಂಬುದನ್ನು ಜಾಣ ಓದುಗರು ಗುರುತಿಸಿಕೊಳ್ಳಬಲ್ಲರು.

ಲಿಂಗ-ವಯಸ್ಸು-ಆಕಾರ-ಬಣ್ಣ ಯಾವುದನ್ನೂ ಲೆಕ್ಕಿಸದ ಅಮೆರಿಕನ್ನರ ವಸ್ತ್ರಾಲಂಕಾರವನ್ನು ನಮೂದಿಸಿ, ‘ಇರುವುದೊಂದೇ ಜೀವನ; ನಮಗೆ ಹೇಗೆ ಬೇಕೋ ಹಾಗೆ ಬದುಕೋಣ’ ಎಂಬ ದೃಷ್ಟಿ ಅವರದು ಎಂಬ ತೀರ್ಮಾನಕ್ಕೆ ಬರುತ್ತಾರೆ. ‘ಇಲ್ಲಿನವರು ಎಕ್ಸ್ಪೋಸ್ ಮಾಡುವುದರಲ್ಲಿ ನಿಷ್ಣಾತರು. ಒಂದು ಕಾಲದ ಮಲಯಾಳಂ ಮೂವಿಯನ್ನು ಲೈವ್ನಲ್ಲಿ ನೋಡಿದಂತೆʼ ಎಂಬುದು ಇಂಥಲ್ಲಿ ಲೇಖಕಿಯ ಬಣ್ಣನೆ. ‘ಏಟ್ ಕಮ್ಮಿ ಆಕೊಬೋದೋ ಆಟೂ ಕಮ್ಮಿ ಆಕ್ಕೊಂಡು ಅದ್ರ ಮದ್ಯುಕ್ಕೆ ಎಲ್ಲೆಲ್ಲಿ ಬೇಕೋ, ಎಲ್ಲಾ ಕಡೀಕೂವೇ ಪರಪರ ಹರ್ಕೊಂಡಿರ್ತಾರೋ. ಎಲ್ಲೆಲ್ಲೂ ಏಸಿನಲ್ಲಿ ಬದ್ಕ ಇವ್ರಿಗೆ ಅದ್ಯಾವ್ ಸೀಮೆ ಸೆಕೆಯಾದಾತೋ ಆ ಸೂರ್ಯದೇವನೇ ಬಲ್ಲ!’ ಇದು ಲೇಖಕಿಯ ವೈನೋದಿಕ ಭಾಷಾಶೈಲಿ. ಸತ್ಯಗಳನ್ನು ಹೀಗೆ ಹಾಸ್ಯದಲ್ಲಿಟ್ಟು ಮನವರಿಕೆ ಮಾಡಿಕೊಡುವ ಜಾಣತನ ಇವರದು. ಅಲ್ಲೇನು? ಪಾಶ್ಚಿಮಾತ್ಯರನ್ನು ಅನುಕರಿಸುವುದರಲ್ಲಿ ನಾ ಮುಂದು ತಾ ಮುಂದು ಎನ್ನುವ ಭಾರತದಲ್ಲೇ ಇಂಥ ಫ್ಯಾಷನ್ನಿನ ನೆಪದ ನಿರ್ಗತಿಕ ಹರಕು ಬಟ್ಟೆ ಕಂಡಾಬಟ್ಟೆಯಾಗಿ ಕಾಣಿಸುತ್ತಿದೆ! ಇಂಥವರೆಲ್ಲ ಸಿರಿವಂತರೇ, ಆದರೂ ಭಿಕ್ಷುಕರಂತೆ ಬಟ್ಟೆ ಧರಿಸುತ್ತಾರೆ!! ಅಂತೂ ಲೇಖಕಿಯ ವಸ್ತ್ರಮೀಮಾಂಸೆಯ ಹಿಂದೆ ವಿಷಣ್ಣತೆಯಿದೆ. ಭಾರತೀಯರಾದ ನಮಗೆ ಇರುಸುಮುರುಸಾಗುತ್ತದೆ ಎಂದು ಸೂಕ್ತವಾಗಿ ತಿಳಿಸಿದ್ದಾರೆ. ಇದನ್ನು ಓದಿದ ಮೇಲೆ ‘ಹೆಂಗಸರದು ಪ್ರದರ್ಶನಕಾಮ; ಗಂಡಸರದು ಇಣುಕುಕಾಮ’ ಎಂದ ವಾತ್ಸಾಯನನ ಮಾತು ಆಯಾಚಿತವಾಗಿ ನೆನಪಾಗುತ್ತದೆ. ಟೂಸಾನ್ ಎಂಬ ಸ್ಥಳದಲ್ಲಿ ಇಂಟರ್ನ್ಯಾಷನಲ್ ಜೆಮ್ ಮತ್ತು ಪರ್ಲ್ ಪ್ರದರ್ಶನಕ್ಕೆ ಹೋಗಿ ಬರುತ್ತಾರೆ. ಅಲ್ಲಿ ಅಸಲಿಯ ಜೊತೆಗೆ ನಕಲಿಯೂ ಮಾರಾಟಕ್ಕಿರುತ್ತದೆ. ಕಚ್ಚಾ, ನಯಗೊಳಿಸಿದ ಮಾಲುಗಳೆಲ್ಲವೂ ಪ್ರದರ್ಶನ ಮತ್ತು ಮಾರಾಟ. ಈ ಸಂದರ್ಭದಲ್ಲಿ ಹೊಳೆನರಸೀಪುರದ ತೇರೊಪ್ಪತ್ತಿನ ಸಮಯದಲ್ಲಿ ಹಾಕುವ ಜಾತ್ರೆ ಅಂಗಡಿಗಳು, ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಗಳನ್ನು ನೆನಪಿಸಿಕೊಳ್ಳುತ್ತಾರೆ.

ಪುಸ್ತಕದ ಕೊನೆಯ ಬರೆಹ: ‘ನಾವೇನು ಕಲಿಯಬೇಕಿದೆ?’ ಎಂಬುದು. ಅವರ ಸಮಯ ಪರಿಪಾಲನೆ, ಶಿಸ್ತು, ಸರದಿ ಸಾಲು, ಪಾದಚಾರಿಗಳಿಗೆ ಕೊಟ್ಟಿರುವ ಆದ್ಯತೆ, ಭ್ರಷ್ಟಾಚಾರ ರಹಿತ ವ್ಯವಸ್ಥೆ, ಯಾರು ಸಿಕ್ಕರೂ ಸಂಭಾಷಿಸುವ ಶಿಷ್ಟಾಚಾರ, ಅನತಿ ದೂರದಲ್ಲೇ ಸಿಗುವ ರೆಸ್ಟ್ ಏರಿಯಾ, ಶೌಚಾಲಯಗಳು, ವ್ಯಾಪಾರಿಗಳ ಸನ್ನಡತೆ, ಮಾಡುವ ಕೆಲಸಗಳಲ್ಲಿ ಲಿಂಗಭೇದ ಇಲ್ಲದಿರುವುದು, ಎಲ್ಲೆಡೆಯಲ್ಲೂ ಸ್ವಚ್ಛತೆಗೆ ಆದ್ಯಗಮನ ಇವೆಲ್ಲ ಅಂಶಗಳನ್ನು ಲೇಖಕಿ ಮನದುಂಬಿ ಶ್ಲಾಘನೆ ಮಾಡಿದ್ದಾರೆ. ಆ ಮೂಲಕ ಭಾರತೀಯರಾದ ನಾವು ಅವರಿಂದ ಕಲಿಯಬೇಕಾದ್ದು ಇದೆ ಎಂದಿದ್ದಾರೆ.

ಒಟ್ಟಾರೆ ಏಕಕಾಲಕ್ಕೆ ಈ ಪುಸ್ತಕವು ಹರಟೆರೂಪದ ಪ್ರಬಂಧವೂ ಪ್ರವಾಸ ಕಥನವೂ ಆತ್ಮಕತೆಯ ಪುಟಗಳೂ ಆಗಿದೆ. ಇಡೀ ಪುಸ್ತಕದಲ್ಲಿ ಲೇಖಕಿಯ ಮಗುವಿನಂಥ ಮುಗ್ಧ ಬೆರಗು ಗಮನ ಸೆಳೆಯುವಂಥದು. ಕೃತಿಯ ಹೆಸರೇ ‘ಸ್ವಲ್ಪ ನಗಿ, ಪ್ಲೀಸ್’ ಹಾಗಾಗಿ ಅವರ ಉದ್ದೇಶವೇ ಹಾಸ್ಯವಿನೋದ ಲಾಸ್ಯ. ಅದರಾಚೆಗೂ ಹರಡಿಕೊಳ್ಳುವ ಸಮಾಜೋ ಸಾಂಸ್ಕೃತಿಕ ವಿವರಗಳು ಗಂಭೀರ ಅಧ್ಯಯನಕ್ಕೆ ಪಕ್ಕಾಗಬಲ್ಲವು. ಅಮೆರಿಕವನ್ನು ಕುರಿತ ಪ್ರವಾಸ ಕಥನಗಳಿಗೇನೂ ಕನ್ನಡದಲ್ಲಿ ಕೊರತೆಯಿಲ್ಲ. ರಾಶಿ ರಾಶಿ ಬಂದಿವೆ. ಗೊರೂರರ ಅಮೆರಿಕದಲ್ಲಿ ಗೊರೂರು, ರಾ ಯ ಧಾರವಾಡಕರ ಅವರ ನಾನು ಕಂಡ ಅಮೆರಿಕ, ಡಾ. ಪ್ರಭುಶಂಕರ ಅವರ ಅಮೆರಿಕದಲ್ಲಿ ನಾನು ಶಾಂತಿ, ಸೂರ್ಯನಾಥ ಕಾಮತ್ ಅವರ ಅಮೆರಿಕ ಮುಂತಾದವು ಕಟ್ಟಿಕೊಟ್ಟ ಅಮೆರಿಕದ ಚಿತ್ರಣ ಹಳತಾದವು. ವರುಷದಿಂದ ವರುಷಕ್ಕೆ ಆ ದೇಶದಲ್ಲಿ ನಡೆಯುವ ಪಲ್ಲಟಗಳು ಅನೂಹ್ಯವಾದವು. ಹಾಗಾಗಿ ಪ್ರವಾಸದ ಕತೆಗಳು ಕಾಲ ಕಳೆದಂತೆ ಔಟ್ಡೇಟೆಡ್ಡಾಗಿ ಬಿಡುತ್ತವೆ! ಈಗಂತೂ ಇಂಟರ್ನೆಟ್ ಯುಗ. ಆನ್ಲೈನ್ ಮೆಸೇಜಿಂಗ್ ಪ್ಲಾಟ್ಫಾರ್ಮ್ನ ಇನ್ನಿಲ್ಲದ, ಎಗ್ಗಿಲ್ಲದ ಬಳಕೆ, ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ಗಳ ಕಾಲ, ಯುಟ್ಯೂಬ್ ಚಾನೆಲ್ಗಳಿಗೆ ಸಬ್ಸ್ಕ್ರೈಬ್ ಆಗಿರುವ ದಿನಮಾನಗಳು. ಇಡೀ ಜಗತ್ತಿನ ಏನೆಲ್ಲಾ ವಿದ್ಯಮಾನಗಳನ್ನು ಬೆರಳ ತುದಿಯಲ್ಲಮುಕಿ ನೋಡಿ ಬಿಡುವ ಮತ್ತು ತೀರ್ಮಾನ ಮಾಡಿ ಬಿಡುವ ಮಾಯಾ ಯುಗ! ಆದರೆ ದೃಶ್ಯವೈಭವಗಳನ್ನು ನೋಡಿ ಭ್ರಮಿಸುವ, ಸಂಭ್ರಮಿಸುವ ಕಣ್ಣುಗಳ ಕ್ರಾಂತಿಯೇ ಬೇರೆ; ಅನುಭವಗಳನ್ನು ದಾಖಲಿಸುತ್ತಾ ಅಭಿಪ್ರಾಯಿಸುತ್ತಾ ತನ್ನ ದೇಶವನ್ನು ಅನಾಯಾಸವಾಗಿ ಹೋಲಿಸುತ್ತಾ, ಗುಣದೋಷಗಳನ್ನು ಗಮನಿಸುತ್ತಾ ಸಂಸ್ಕೃತಿಯ ಕೆನೆಪದರವನ್ನು ನಿರೂಪಿಸುವ ಬರೆಹದ ಶಾಂತಿಯೇ ಬೇರೆ! ಓದಿಗಿರುವ ವ್ಯಾಪ್ತಿ ವಿನ್ಯಾಸಗಳು ಎಂದಿಗೂ ವಿಡಿಯೋಗಳಿಗೆ ದಕ್ಕವು. ಓದಿನ ಸುಖವನ್ನೂ ಸಂತಸವನ್ನೂ ಅರಿತವರಿಗೆ ಇದು ವೇದ್ಯ.

ಹೀಗಾಗಿ ರೂಪ ಮಂಜುನಾಥ್ ಅವರ ಈ ಗ್ರಂಥವು ಬಲು ಸ್ವಾರಸ್ಯಕರವಾಗಿದ್ದು, ನಿರೂಪಿಸಿದ ಧಾಟಿ ಸೊಗಸಾಗಿದೆ, ಸಲೀಸಾಗಿದೆ, ಸಂತೋಷಪಡಿಸುವ ಕಾಯಕಕ್ಕೆ ತನ್ನನ್ನು ಒಡ್ಡಿಕೊಂಡಿದೆ. ಸಹೃದಯೀ ಹೆಣ್ಣಿನ ಕಣ್ಣಿಂದ ನೋಡಿರುವುದರಿಂದ ಇದರಲ್ಲಿ ತಾಯ್ತನದ ಲಾಲಿತ್ಯವಿದೆ, ಪ್ರೇಯಸಿಯ ಪರಿಹಾಸ್ಯವಿದೆ, ಅಂಗನೆಯ ಮಾಯಾಂಗನಾ ಪ್ರಪಂಚವೂ ಅನಾವರಣವಾಗಿದೆ! ಪ್ರಮದೆಯ ಮೋದವೂ ಅಡಗಿದೆ. ಚೆಂದದ ಯುವತಿಯ ಚೆಲುವನ್ನು ನೋಡಿ ಮೈ ಮನಸು ಮರೆಯುವಂಥ ರಮಣೀಯ ಕಾಂತತ್ವ ಇಲ್ಲಿನ ಪುಟಪುಟಗಳಲ್ಲೂ ಪರಿಪರಿಯಾಗಿ ಹುದುಗಿದ್ದು, ಆಹ್ಲಾದವೇ ಆಲೋಚನೆಯಾಗಿ ಹರಳುಗಟ್ಟಿದೆ. ಮುಖ್ಯವಾಗಿ ಹಂಸಕ್ಷೀರನ್ಯಾಯ ಇಲ್ಲಿನ ಎಲ್ಲ ಬರೆಹಗಳಲ್ಲಿ ಸುಪ್ತವಾಗಿದ್ದು, ಒಂದು ಬಗೆಯ ಸೌಜನ್ಯದಭಿಮಾನ ಆಂತರ್ಯದಲ್ಲಿ ಹುದುಗಿದೆ. ಇದು ತಾನೇ ಬರೆಯುವವರಲ್ಲಿ ಇರಬೇಕಾದ ಹೃದ್ಯಗುಣ. ಮೂಲತಃ ಹೊಳೆನರಸೀಪುರದವರಾದ ಶ್ರೀಮತಿ ರೂಪಾ ಮಂಜುನಾಥ್ ಅವರು ದೂರದ ಅಮೆರಿಕವನ್ನು ತಮ್ಮ ಕಾರುಣ್ಯದ ಕರುಳಿನಿಂದ ನೇವರಿಸಿದ್ದಾರೆ. ಆ ಮಟ್ಟಿಗೆ ಅಭಿವ್ಯಕ್ತಿಗೆ ಬಳಸಿದ ಕನ್ನಡದ ಗ್ರಾಮ್ಯನುಡಿ ಸೊಗಡಿನಿಂದ ಆವರಿಸಿದ್ದಾರೆ. ಬದ್ಧತೆಯಿಂದ ಕುಳಿತು ಬರೆದು ಪ್ರಕಟಿಸಿದ್ದಾರೆ. ತಮ್ಮ ನೆನಪಿನುಯ್ಯಾಲೆಯಲಿ ತಮ್ಮ ಜೊತೆಗೆ ಓದುಗರೂ ಜೀಕುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪುಸ್ತಕದ ಶೀರ್ಷಿಕೆಯನ್ನು ಗಮನಿಸಿ, ‘ಏನಿದು? ಹೀಗಿದೆಯಲ್ಲಾ!’ ಎಂದುಕೊಂಡ ನಾನು ಓದಲು ಶುರುವಿಟ್ಟೆ.

ಕೆಲವೇ ತಿಂಗಳುಗಳ ಹಿಂದೆ ಪರಿಚಯವಾಗಿ ಆತ್ಮೀಯರಾದ, ಆರೋಗ್ಯ ಇಲಾಖೆಯಲ್ಲಿದ್ದು ನಿವೃತ್ತರಾದ, ನಿವೃತ್ತರಾದರೂ ಸದಾ ತಮ್ಮ ಸದಭಿರುಚಿಗಳ ಪ್ರವೃತ್ತಿಯಿಂದ ಗಮನ ಸೆಳೆಯುವ ಕನ್ನಡಾಭಿಮಾನಿಯಾದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀಯುತ ಪುಟ್ಟೇಗೌಡರು ನನಗೆ ಈ ಪುಸ್ತಕವನ್ನು ಓದಲು ಕೊಟ್ಟರು. ಓದಿದ ಮೇಲೆ ಬರೆದು ಪ್ರತಿಕ್ರಿಯಿಸಬೇಕೆನಿಸಿತು. ಬರೆದೆ. ಓದುವಾಗಲೂ ಬರೆಯುವಾಗಲೂ ನಾನು ಸಂತೋಷಪಟ್ಟಿದ್ದೇನೆ; ಅದರ ಸವಿಯನ್ನು ಸುಖಿಸಿದ್ದೇನೆ. ಈ ಮೂಲಕ ಸಮಾನ ಮನಸ್ಕರಾದ ನಾವೂ ಅವರೊಂದಿಗೆ ಇತ್ತೀಚಿನ ಅಮೆರಿಕದ ಪ್ರವಾಸ ಮಾಡಿದಷ್ಟೇ ಅನುಭವ ಮತ್ತು ತೃಪ್ತಿಗಳು ಉಂಟಾದದ್ದು ಉತ್ಪ್ರೇಕ್ಷೆಯಲ್ಲ! ಮುನ್ನುಡಿಕಾರರಾದ ವಿಶ್ವನಾಥ ಅವರು ಗುರುತಿಸಿರುವಂತೆ, ನಿರೂಪಿಸುವಲ್ಲಿ ಎಲ್ಲಿಯೂ ಹಮ್ಮುಬಿಮ್ಮುಗಳ ಪ್ರದರ್ಶನವಿಲ್ಲ. ಪಾಂಡಿತ್ಯದ ಪೆಡಸಿಲ್ಲ. ಬುದ್ಧಿಜೀವಿಗಳು ಬರೆಯುವಂತೆ ಉದ್ದುದ್ದನೆಯ ತೌಲನಿಕ ಉಪನ್ಯಾಸವಿಲ್ಲ. ಸುಮ್ಮನೆ ಏನನೋ ಬಡಬಡಿಸಬೇಕೆಂಬ ಗೊಡ್ಡು ಹರಟೆಯೂ ಇದಾಗಿಲ್ಲ. ತನ್ನ ಅನುಭವಗಳ ಸಾರವನ್ನು ತನ್ನಂಥ ಓರಗೆಯ ಸ್ನೇಹಿಗಳಿಗೆ ತಲಪಿಸಬೇಕೆಂಬ ತುಡಿತವಿದೆ. ಇವುಗಳಾಚೆಗೂ ಅನಾಯಾಸವಾಗಿ ಸಾಂಸ್ಕೃತಿಕ ನೋಟಗಳನ್ನು ಕಾಣಿಸಿದೆ. ಒಂದೆರಡು ಬರೆಹಗಳನ್ನು ಬಿಟ್ಟರೆ ಬಹುತೇಕ ಎಲ್ಲವೂ ರಸವತ್ತಾಗಿದೆ. ರಂಜನೀಯವಾಗಿದೆ. ಪ್ರತಿ ಬರೆವಣಿಗೆಯಲ್ಲೂ ನವಿರು ಹಾಸ್ಯ ತೊಟ್ಟಿಕ್ಕುತ್ತದೆ, ಹುಳಿ ಸಿಹಿ ಮಿಶ್ರಿತ ಮಾವಿನ ಹಣ್ಣಿನ ಸೀಕರಣೆಯನ್ನು ನಾಲಗೆ ಸ್ವಲ್ಪ ಸ್ವಲ್ಪವೇ ಸವಿಯುವಾಗ ದೇಹ, ಮನಸು, ಆತ್ಮಗಳೆಲ್ಲ ಒಂದಾಗಿ ರಸಾನಂದವನ್ನು ಅನುಭವಿಸಿ ಆಸ್ವಾದಿಸುವ ತೆರದಿ ಇವರು ಬರೆದ ಸಾಲುಗಳು. ಹಾಗಾಗಿ ಇವನ್ನು ಓದಿಯೇ ಸವಿಯಬೇಕು! ಹೀಗಾಗಿ ಈ ಕಥನಕಾರಣರಾದ ಶ್ರೀಮತಿ ರೂಪ ಅವರಿಗೂ ಓದಿಸಿದ ಶ್ರೀ ಪುಟ್ಟೇಗೌಡರಿಗೂ ಅನಂತ ಧನ್ಯವಾದಗಳು. ಇವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರ ಬರಲಿ; ತಮ್ಮ ಕಂಗಳ ಪ್ರತಿಭೆಯಿಂದಲೂ ಸೃಜನಾತ್ಮಕ ಅಂಗಳದ ಮತಿಯಿಂದಲೂ ಅವರ ಲೇಖನಿ ಕಂಗೊಳಿಸುತ್ತಾ ಕಣ್ತೆರೆಸಲಿ ಎಂದು ಹಾರೈಸುತ್ತೇನೆ.

-ಡಾ. ಹೆಚ್ ಎನ್ ಮಂಜುರಾಜ್,

ಕೃತಿ: ಸ್ವಲ್ಪ ನಗಿ ಪ್ಲೀಸ್‌ (ಚೇತೋಹಾರಿ ಪ್ರಬಂಧಗಳ ಸಂಕಲನ)
ಲೇಖಕರು: ಶ್ರೀಮತಿ ರೂಪ ಮಂಜುನಾಥ್
ಪ್ರಕಾಶಕರು: ಶ್ರೀ ಸುದರ್ಶನ ಪ್ರಕಾಶನ, ಬೆಂಗಳೂರು
ಪ್ರಥಮ ಮುದ್ರಣ: 2022,
ಬೆಲೆ: ರೂ. 440
ಒಟ್ಟು ಪುಟಗಳು: 390


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಆರ್.ಬಿ.ಪುಟ್ಟೇಗೌಡ
ಆರ್.ಬಿ.ಪುಟ್ಟೇಗೌಡ
9 months ago

ಶ್ರೀಮತಿ ರೂಪಾ ಮಂಜುನಾಥವರ ನಗಿ ಪ್ಲೀಸ್ ಸ್ವಲ್ಪ ನಗಿ ಲಲಿತಾ ಪ್ರಬಂಧಗಳವಿಮರ್ಶೆಯನ್ನು ಬಹಳ ಅಚ್ಚುಕಟ್ಟಾಗಿ ಓದುಗರ ಮನಸ್ಸಿಗೆ ಹಿತವೆನಿಸುವ ರೀತಿಯಲ್ಲಿ ತಾವು ವಿಮರ್ಶೆ ಮಾಡಿದ್ದೀರಿ. ತಮಗೆ ಹೃತ್ಪೂರ್ವಕವಾದ ಧನ್ಗವಾದಗಳನ್ನು ಅರ್ಪಿಸುತ್ತಿದ್ದೇನೆ.

ಆರ್.ಬಿ.ಪುಟ್ಟೇಗೌಡ
ಆರ್.ಬಿ.ಪುಟ್ಟೇಗೌಡ
9 months ago

ಶ್ರೀಮತಿ ರೂಪಮಂಜುನಾಥ್ ಇವರ ಸ್ವಲ್ಪ ನಗಿ ಪ್ಲೀಸ್ ಲಲಿತ ಪ್ರಬಂಧಗಳ ಗುಚ್ಚ ಪುಸ್ತಕದಲ್ಲಿ ಅವರ ಅಮೆರಿಕಾ ಪ್ರವಾಸದಲ್ಲಿ ಆದ ಅನುಭವಗಳನ್ನು ಕೃತಿ ರೂಪದಲ್ಲಿ ತಂದಿರುವುದನ್ನು ತಾವುಗಳು ಸಂಪೂರ್ಣ ಅಧ್ಯಯನ ಮಾಡಿ ಬಹಳ ಸೊಗಸಾಗಿ ವಿಮರ್ಶೆ ಮಾಡಿರುತ್ತೀರಿ. ನಿಮ್ಮ ತಾಳ್ಮೆ ಮೆಚ್ಚುಂತಹದು. ಇಂದಿನ ದಿನಗಳಲ್ಲಿ ತಮ್ಮ ಕೆಲಸ ಒತ್ತಡದ ನಡುವೆಯೂ ವಿಮರ್ಶೆಯನ್ನು ಓದುಗರ ಮನಸ್ಸಿಗೆ ಮುಟ್ಟುವಂತೆ ಮಾಡಿರುತ್ತೀರಿ. ತಮಗೆ ಹೃತ್ಫೂರ್ವಕ ಧನ್ಯವಾದಗಳು ಸರ್.

2
0
Would love your thoughts, please comment.x
()
x