ಇಂದಿನ ಯುವಕರಲ್ಲಿ ಹೆಚ್ಚಾಗುತ್ತಿರುವ ಮನೋಬಲದ ಕೊರತೆ: ವಿಜಯ್ ಕುಮಾರ್ ಕೆ.ಎಂ.

ಮನುಷ್ಯನಿಗೆ ದೈಹಿಕ ಬಲದ ಅವಶ್ಯಕತೆ ಎಷ್ಟಿದೆಯೋ ಅಷ್ಟೇ ಮಟ್ಟದ ಮನೋಬಲದ ಅತ್ಯವಶ್ಯಕತೆಯು ಬೇಕಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಈ ಮನೋಬಲದ ಅತಿಯಾದ ಕೊರತೆ ನಮ್ಮ ಯುವ ಸಮುದಾಯದಲ್ಲಿ ಹೆಚ್ಚುತ್ತಿರುವುದು ಯುವ ಪೀಳಿಗೆಯ ಭವಿಷ್ಯವನ್ನು ಚಿಂತೆಗೀಡು ಮಾಡುವಂತಿದೆ.ತಮ್ಮ ಆಯ್ಕೆಗಳಲ್ಲಾಗಲಿ, ನಿರ್ಧಾರಗಳಲ್ಲಾಗಲಿ ತೀರ್ಮಾನ ತೆಗೆದುಕೊಳ್ಳ ಬೇಕಾದ ತಮ್ಮ ಚಿತ್ತವನ್ನು ಗೊಂದಲಕ್ಕೆ ಸಿಲುಕಿಸಿ ಪೇಚಾಡುವ ಸ್ಥಿತಿಗೆ ತಲುಪಿರುವಲ್ಲಿ ಅವರ ಮನಸ್ಥಿತಿಯ ಶಕ್ತಿ ಎಷ್ಟರ ಮಟ್ಟಕ್ಕಿದೆ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕದೆ ಇರದು.

ಹಾಗಾದರೆ ಮನೋಬಲ ಎಂದರೆ ಏನು?ಅದಿಲ್ಲದೆ ಆಗಬಹುದಾದ ತೊಡಕುಗಳಾದರೂ ಏನು? ಎನುವಾಗ. ಮನೋಬಲವೆಂಬುದು ಮನುಷ್ಯನ ಮನಸ್ಸಿನ ಆಲೋಚನೆಗೆ ಬೇಕಾದ ಮನದೊಳಗೆ ಮೂಡುವ ವಿಭಿನ್ನ ಶಕ್ತಿ ಎಂದರೆ ತಪ್ಪಾಗಲಾರದು. ಪ್ರತಿ ಮನುಷ್ಯನಿಗು ತಾನು ಮಾಡುವ ಪ್ರತಿ ಆಲೋಚನೆ,ಕಾರ್ಯಗಳಲ್ಲಿ ಮನೋಬಲವು ತನ್ನದೇ ಆದ ಪಾತ್ರ ನಿರ್ವಹಿಸುತ್ತದೆ ಜೊತೆಗೆ ವಿವಿಧ ಮನಸ್ಸುಗಳಲ್ಲಿ ವಿಭಿನ್ನ ಶಕ್ತಿಯನ್ನು ಹೊಂದಿರುವ ಈ ಬಲದ ಪ್ರಾಮುಖ್ಯತೆ ಅದೆಷ್ಟಿದೆ ಎಂದರೆ ಹೇಳ ತೀರದು. ಓರ್ವ ವ್ಯಕ್ತಿಯ ಮನದಲ್ಲಿ ಅಡಗಿರುವ ಈ ಮನೋಬಲವು ತನ್ನ ಸಾಮರ್ಥ್ಯ ಕಳೆದುಕೊಂಡರೆ ಆತನ ಮನಸ್ಥಿತಿ ಮಾತ್ರವಲ್ಲದೆ ಜೀವನದ ಸ್ಥಿತಿಯನ್ನು ಅದೋಗತಿಗೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ.ಪ್ರತಿ ದಿನ ಮುಂಜಾನೆ ಏಳುವ ಪ್ರತಿ ಮನಸ್ಸಿಗು ಅದರದೇ ಆದ ಯೋಚನೆ,ಯೋಜನೆ ಇದ್ದೆ ಇರುತ್ತದೆ ಆದರೆ ಅದರ ಕಾರ್ಯರೂಪ ಮಾತ್ರ ಶೇಕಡಾ 90ರಷ್ಟು ವಿಫಲವಾಗುತ್ತಿರಲು ಕಾರಣ ಅವರವರ ಮನೋಬಲದ ಕೊರತೆ.

ಯಾವುದೇ ದಿಟ್ಟ ತೀರ್ಮಾನ,ನಿರ್ಧಾರಕ್ಕೂ ಬೇಕಿರುವುದು ಮನೋಬಲವೇ ಹೊರತು ದೈಹಿಕ ಬಲವಲ್ಲ. ದೈಹಿಕವಾಗಿ ಸದೃಢವಾಗಿರುವ ಎಷ್ಟೋ ಮನಸ್ಸುಗಳು ಮನೋಬಾಲದ ಕೊರತೆಯಿಂದ ತಮ್ಮ ನೋಟವನ್ನೆ ತಿರುವು ಮಾಡಿಬಿಡುತ್ತವೆ. ದೈಹಿಕವಾಗಿ ಬಹಳ ಬಲಿಷ್ಠನಾದ ವ್ಯಕ್ತಿಯೋರ್ವನ ಮನಸ್ಸು ಮನೋಬಲದಲ್ಲಿ ಶಕ್ತನಾಗದೇ ಇದ್ದಾಗ ಜೀವನದಲ್ಲಿ ಬರುವ ಹತ್ತಾರು ಸವಾಲುಗಳನ್ನು ನಿಭಾಯಿಸಲು ಹಿಂಜರಿಯುತ್ತಾನೆ. ಅದಕ್ಕೆ ಕಾರಣ ಈ ಮನೋಬಲದ ಕೊರತೆ. ಬಿಸಿ ರಕ್ತದ ವಯಸ್ಸಿನ ನಮ್ಮ ಯುವ ಸಮುದಾಯವು ಇದರ ಕೊರತೆಯಿಂದಾಗಿ ಇಂದು ತಮ್ಮ ಉಜ್ವಲ ಭವಿಷ್ಯವನ್ನು ಯೋಚನೆಯಲ್ಲೆ ಕೊನೆ ಕಾಣಿಸುತ್ತಿದ್ದಾರೆ. ತಾವು ತೆಗೆದು ಕೊಳ್ಳಬೇಕಾದ ನಿರ್ಧಾರವು ಹತ್ತಾರು ಭಯ,ಆತಂಕಗಳಿಂದ ಮುಚ್ಚಿ ಹೋಗಲು ಈ ಮನೋಬಲದ ನ್ಯೂನತೆಯೇ ಕಾರಣವಾಗಿದೆ.ಮನುಷ್ಯನ ಜೀವನವೇ ಹಾಗೆ ಎನಿಸುತ್ತದೆ ವಯಸ್ಸಿಗೆ ಮೀರಿದ ಕೆಲ ಆಲೋಚನೆಗಳು ಅವನನ್ನು ಅವನತಿಯತ್ತ ಕೊಂಡೊಯ್ಯುತ್ತವೆ ಈ ತರಹದ ಕಾರ್ಯಕ್ಕೆ ಕೈ ಹಾಕುವವರೇ ನಮ್ಮ ಯುವ ಸಮುದಾಯದ ಮಿತ್ರರು. ಅವರ ಬಿರುಸು ಅದೆಷ್ಟಿರುತ್ತದೆ ಎಂದರೆ ಅವರ ವಯಸ್ಸನ್ನು ದಾಟಿ ಬಂದ ಹೆತ್ತವರ ಮಾತಿಗೂ ಬೆಲೆ ಕೊಡದೆ ಹಿಂದುರುಗಿ ವರ್ತಿಸುವ ಆ ಗುಣ ಅವರ ಕೋಪವನ್ನು ಕೈಗೆ ಸಿಲುಕಿಸಿ ಮತ್ತಾವುದೋ ಪಥಕ್ಕೆ ಅವರನ್ನು ಕರೆದೊಯ್ಯುವಂತೆ ಮಾಡಿಬಿಡುತ್ತದೆ. ಮನೋಬಲದ ಶಕ್ತಿಯೇ ಅಂತಹದು ಬಾಲ್ಯದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಎದುರಿ ಬೀಳುವ ಮನಸ್ಸು ಬೆಳೆಯುತ್ತಾ ತನ್ನ ಬಲವನ್ನು ವೃದ್ಧಿಸಿ ಕೊಳ್ಳುತ್ತಾ ಸಾಗುತ್ತದೆ ಆದರೆ ಅದರ ವೃದ್ಧಿಯು ಕೂಡ ಒಂದು ಗಿಡವನ್ನು ಮರ ಮಾಡಿ ಫಲ ಪಡೆಯಲು ಬೇಕಾದ ಎಲ್ಲಾ ತರನಾದ ಹಾರೈಕೆ,ಫೋಷಣೆ ಮನಸ್ಸಿಗೂ ಮಾಡಲೇ ಬೇಕಾಗುತ್ತದೆ. ಇಂದಿನ ಯುವಕ ಮಿತ್ರರ ಕೊರತೆ ಏನೆಂದರೆ ತಾಳ್ಮೆಗೆ ತಮ್ಮನ್ನು ಸಿಲುಕಿಸದೆ ಇರುವುದು. ಅತಿಯಾದ ಅವಸರ,ತುರ್ತಾಗಿ ಆಗಬೇಕಾದ ಕಾರ್ಯದ ಫಲಾಪೇಕ್ಷೆ, ಆವೇಗದ ಅತಿರೇಕ ಎಲ್ಲವೂ ಒಟ್ಟಾಗಿ ವೃದ್ಧಿಗೊಳ್ಳಬೇಕಾದ ಮನಸ್ಸಿನ ಬಲವನ್ನು ಕುಗ್ಗಿಸಿ ಸೂತ್ರವಿಲ್ಲದ ಗಾಳಿಪಟದಂತೆ ಹರಿ ಹಾಯ್ದು ಬಿಡುತ್ತಿರುವುದು.

ಇನ್ನು ಕೆಲವರು ವಿಭಿನ್ನ, ತಮ್ಮ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳದೆ ಬೇಡದ ಆಲೋಚನೆಗಳಿಗೆ ತಮ್ಮನ್ನು ಸಿಲುಕಿಸಿ ಅಯ್ಯೋ! ನನ್ನ ಜೀವನ ಹೀಗಾಯಿತೆ, ನನ್ನ ಕನಸುಗಳೆಲ್ಲ ಕರಗಿತೇ, ನಾನಂದುಕೊಂಡ ಯಾವ ಕಾರ್ಯವೂ ನನ್ನಿಂದ ಸಫಲತೆ ಪಡೆಯದೇ ಹೋಯಿತೇ ಎನ್ನುವ ಆಂತರಿಕ ಭಯದ ಆಲೋಚನೆಗಳು ಅವರ ಅತ್ಮಬಲವನ್ನು ಹಳ್ಳಕ್ಕೆ ತಳ್ಳಿ ಕುಳಿತಿವೆ. ಜೀವನ ಎಂದ ಮೇಲೆ ಏರು ಪೇರುಗಳ ಸಮ್ಮಿಶ್ರಣ ಅದರೊಳಗೆ ಏರುವ ಮತ್ತು ಇಳಿಯುವ ಸಮಯಕ್ಕೆ ನಾವು ಸಿದ್ಧರಿರ ಬೇಕು. ಜೀವನದಲ್ಲೇ ಸ್ಥಿರತೆ ಇಲ್ಲದಿದ್ದರೂ ಸರಿಯೇ ಆದರೆ ಮನೋಬಲದ ಆಂತರಿಕ ಸ್ಥಿರತೆಯನ್ನು ಎಂದಿಗೂ ಕುಗ್ಗಿಸುವ ಕಾರ್ಯಕ್ಕೆ ನಮ್ಮ ಯುವ ಮಿತ್ರರು ತೊಡಗಿಸಿಕೊಳ್ಳಬಾರದು.

ವಿವಿಧ ವಯಸ್ಸಿನ ಮನೋಬಲವನ್ನು ತಾಳೆ ಮಾಡಿ ಮಾಡಿ ನೋಡಿದಾಗ ಅದು ನಿಜಕ್ಕೂ ವಿಭಿನ್ನವಾಗಿ ಕಾಣುವುದು ಸತ್ಯ. ಸುಮಾರು 10 ವರ್ಷದ ಬಾಲಕನಿಗೆ ತನ್ನ ಕಾರ್ಯದ ಬಗ್ಗೆ ಅಥವಾ ತಾನು ಮಾಡಬೇಕಿರುವ ಕಾರ್ಯದ ಬಗ್ಗೆ ಪ್ರಶ್ನಿಸಿದಾಗ ಆತ ನನ್ನಿಂದ ಸಾಧ್ಯವಿಲ್ಲ ಎನ್ನುವ ಉತ್ತರ ನೀಡಲಾರ ಕಾರಣ ಆತನ ಮನೋಬಲದ ಶಕ್ತಿ ಯಾವಾಗಲೂ ಪುಟಿದೇಳುತ್ತಿರುತ್ತದೆ.ಅದೇ ಪ್ರಶ್ನೆಯನ್ನು ಸುಮಾರು 70ರ ವಯಸ್ಸಿನ ವೃದ್ಧನನ್ನು ಕೇಳಿದರೆ ಅಯ್ಯೋ, ನನ್ನ ಜೀವನಕ್ಕೆ ಏನೆಲ್ಲಾ ಸಾಧ್ಯವಿದೆಯೋ ಅಷ್ಟು ಕೆಲಸ ಕಾರ್ಯಗಳನ್ನು ಮುಗಿಸಿ ಈ ವಯಸ್ಸಿಗೆ ಬಂದು ಕುಳಿತಿದ್ದೇನೆ ಇನ್ನೇನಿದ್ದರೂ ನನ್ನ ಮಕ್ಕಳ,ಮೊಮ್ಮಕ್ಕಳ ಸಾಧನೆ ಕಣ್ತುಂಬಿಕೊಂಡು ಅಂತ್ಯಗೊಂಡರೆ ಸಾಕು ಎನ್ನುವ ಅಭಿಪ್ರಾಯ ಹೊರ ಬರುತ್ತದೆ. ಇದೆರಡರ ಮಧ್ಯೆ ಬರುವ ನಮ್ಮ ಯುವ ಸಮುದಾಯವನ್ನು ಪ್ರಶ್ನಿಸಿದಾಗ ಪ್ರತಿ ಮನಸ್ಸಿಗೂ ವಿವಿಧ ಬಗೆಯ ಉತ್ತರಗಳು ಹೊರ ಹೊಮ್ಮದೆ ಇರದು.ಕಾರಣ ಪ್ರತಿ ಯುವಕನ ಆಲೋಚನೆಗೆ ಸಿಕ್ಕ ಸೋಲಿನ ಘಟನೆಗಳು,ಮಾನಸಿಕ ಒತ್ತಡಗಳು,ಕುಟುಂಬದಲ್ಲಿ ದೊರೆಯದ ಸಂತೃಪ್ತಿ,ವಿದ್ಯಾಭ್ಯಾಸದಿಂದ ಸಿಗದ ಸೂಕ್ತ ಉದ್ಯೋಗ, ಉದ್ಯೋಗ ದೊರಕಿದರು ಅದರಲ್ಲಿ ಸಿಗದ ನೆಮ್ಮದಿ ಹೀಗೆ ಹಲವು ಕಾರಣಗಳು ಅವರ ಮನೋಬಲವನ್ನು ಕುಗ್ಗಿಸಿ ಅವರಿಂದ ವಿವಿಧ ಬಗೆಯ ಉತ್ತರವನ್ನು ಹೊರ ತರುತ್ತ ಇರುತ್ತವೆ. ಜೊತೆಗೆ ಯಾವುದೇ ವಿಚಾರವನ್ನು ತುಂಬಾ ಆಳವಾಗಿ ಯೋಚಿಸುವ,ಅಗಾಧವಾಗಿ ಅರ್ಥೈಸುವ ಗುಣವೇ ಇದರ ಸತ್ವ ಎನ್ನಬಹುದು. ಹಾಗಾದರೆ ಇದು ಎಲ್ಲರಲ್ಲಿಯೂ ಇರುವ ಸಮಸ್ಯೆಯೇ?, ಖಂಡಿತ ಇಲ್ಲ ಬದುಕು ಬಂದಂತೆ ಸ್ವೀಕರಿಸುವ ಗುಣವುಳ್ಳ ಯಾವ ಯುವಕನು ಇದರ ಜಾಲಕ್ಕೆ ಸಿಲುಕಿ ನರಳುವುದಿಲ್ಲ.ಆದರೆ ಬದುಕು ಹೀಗೆ ಇರಬೇಕು ಎಂದು ಆಲೋಚಿಸಿ ಕನಸು ಕಟ್ಟಿ ಆ ಗುರಿ ಮುಟ್ಟದೆ ಅಥವಾ ಗುರಿ ತಲುಪಲು ಸಾಧ್ಯವಾಗದ ಜೀವಗಳೆ ಇದರ ಪೆಟ್ಟು ತಿನ್ನುತ್ತಿರುವುದು.

ಭಾರತದಂತಹ ಬೃಹತ ರಾಷ್ಟ್ರದಲ್ಲಿ ಸರಿ ಸುಮಾರು 1000ಕ್ಕೇ 30 ರಿಂದ 50 ವ್ಯಕ್ತಿಗಳಲ್ಲಿ ಇದು ಸಾಮಾನ್ಯವಾಗಿರುವುದು ಮುಂದೆ ಇದರಿದಂದ ಹೆಚ್ಚು ಪರಿಣಾಮ ಬೀರಿ 1000ಕ್ಕೆ 100 ವ್ಯಕ್ತಿಗಳನ್ನು ತಲುಪಿದರು ಆಶ್ಚರ್ಯವಿಲ್ಲ. ಕಾರಣ ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ ಭಾರತದಂತಹ ಹೆಚ್ಚು ಜನಸಂಖ್ಯಾವುಳ್ಳ ರಾಷ್ಟ್ರದಲ್ಲಿ ಮನೋಬಲ ವೃದ್ಧಿಗೆ ಸಂಬಂಧಿಸಿದ ವೈದ್ಯರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿರುವುದು ಇದರ ಚಿಕಿತ್ಸೆಗೆ ಕಂಟಕವಾಗಿದೆ ಎನ್ನುತ್ತಾರೆ. ಇದನ್ನೆಲ್ಲಾ ಗಮನಿಸಿದಾಗ ನಮ್ಮ ಯುವ ಸಮುದಾಯ ಆರೋಗ್ಯದಲ್ಲಿ ಇಂತಹ ಮನೋಬಲದ ಸಮಸ್ಯೆಯಿಂದ ದೂರ ಸರಿದು ಸುಂದರ ಜೀವನ ರೂಪಿಸಿಕೊಳ್ಳುವ ಅತ್ಯಗತ್ಯತೆ ಇದೆ ಎನ್ನುವುದನ್ನು ಅರಿಯಬೇಕು.

ಕೇವಲ ಮನೋಬಲ ಕುಗ್ಗಿದ ಸಂದರ್ಭದಲ್ಲಿ ಯುವಕರು ಕೇವಲ ಮಾನಸಿಕ ಸ್ಥಿತಿ ಕುಗ್ಗಿಸಿಕೊಳ್ಳುವುದಷ್ಟೆ ಅಲ್ಲದೆ ಬೇಡದ ವ್ಯಸನಗಳಿಗೆ ತಮ್ಮನ್ನು ತೊಡಗಿಸಿಕೊಂಡು ಇರುವ ಒಂದು ಸಮಸ್ಯೆಗೆ ನೂರೆಂಟು ಸಮಸ್ಯೆಗಳನ್ನು ತಂದಿಟ್ಟು ಸುಂದರ ಜೀವನವನ್ನು ಕಗ್ಗಂಟು ಮಾಡಿಕೊಂಡು ಬಿಡಿಸಿಲಾಗದ ಬಲೆಗೆ ಸಿಲುಕಿ ನರಳುವ ಸ್ಥಿತಿಗೆ ತಲುಪಬೇಕಾದ ಬಗೆಯನ್ನು ಇಲ್ಲಿ ಅವಲೋಕಿಸಿಬೇಕು. ಇನ್ನೂ ಕೆಲ ಯುವ ಸಮುದಾಯ ಇದರ ಅತಿರೇಕದಿಂದಾಗಿ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿರುವುದನ್ನು ಗಮನಿಸಿರುವ ಸಂದರ್ಭದಲ್ಲಿ ಇದರ ಪ್ರಭಾವ ಎಷ್ಟಿದೆ ಎಂದು ಅರಿಯಬೇಕು. ಯುವಕರ ಮನಸು ಖಡ್ಗದಂತೆ ಹರಿತವಾದದ್ದು ಅದರಿಂದ ವಜ್ರದಂತಹ ಕ್ಲಿಷ್ಟಕರವಾದ ಸನ್ನಿವೇಶವನ್ನು ಕತ್ತರಿಸಲೂ ಬಹುದು, ಎಚ್ಚರ ತಪ್ಪಿದರೆ ತಮ್ಮ ಜೀವನದ ಕುತ್ತಿಗೆಯನ್ನು ಕತ್ತರಿಸುವ ಕಾರ್ಯಕ್ಕೂ ಅದು ಮುಂಚೂಣಿಯಲ್ಲಿ ನಿಲ್ಲಬಹುದು ಹಾಗಾಗೀ ಹರಿತವಾದ ತೀಕ್ಷ್ಣ ಮನಸನ್ನು ಅರಿವಿನ ಕೈ ತಪ್ಪದಂತೆ ಕಾಯಬೇಕಾದ ಕೆಲಸ ಪ್ರತಿ ಯುವ ಸಮುದಾಯದಿಂದ ಮಾತ್ರ ಸಾಧ್ಯ.

ಹಾಗಾದರೇ ಇಂತಹ ಸಮಸ್ಯೆಗಳಿಗೆ ಪರಿಹಾರ?, ಖಂಡಿತ ಇದರ ಪರಿಹಾರ ಯುವ ಸಮುದಾಯದಲ್ಲಿದೆಯೇ ಹೊರತು ಮತ್ತಿನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಇದು ಮಹಾನ್ ಖಾಯಿಲೆ ಅಲ್ಲದಿದ್ದರೂ ಕಡೆಗಣಿಸುವ ವಿಚಾರವಲ್ಲದಾಗಿರುವುದರಿಂದ ಒಂದಷ್ಟು ಕ್ರಮಗಳ ಮೂಲಕ ಇದರ ಪ್ರಭಾವ ಕಡಿಮೆ ಮಾಡಿಕೊಳ್ಳಬಹುದು. ಮೊದಲನೆಯದಾಗಿ ಮನುಷ್ಯನ ಜೀವನವೆಂಬುದು ಒಂದ ಅದ್ಭುತ ಅದನ್ನು ಅನುಭವಿಸುವ ತೃಪ್ತ ಭಾವ ಪ್ರತಿ ಹೃದಯದಲ್ಲೂ ಮೂಡಬೇಕಿದೆ ನನ್ನಿಂದ ಏನೂ ಸಾಧ್ಯವಾಗದು ಎಂದು ಯೋಚಿಸುವ ಮನಸು ಸಾಧ್ಯವಿದೆ ಎಂಬ ತಾಳ್ಮೆ ಭಾವದೊಂದಿಗೆ ಪರಿಶ್ರಮ ಪಟ್ಟರೆ ನಿಜಕ್ಕೂ ನಿನ್ನ ಆತ್ಮಬಲವೇ ನಿನ್ನ ಯಶಸ್ಸಿನ ಅಸ್ತ್ರವಾಗುತ್ತದೆ.

ಇನ್ನು ಪ್ರತಿಯೋರ್ವ ವ್ಯಕ್ತಿಯ ಜೀವನವು ವಿಭಿನ್ನ ಹೀಗಿರುವಾಗ ಬೇರೊಬ್ಬರ ಜೀವನಕ್ಕೆ ತಮ್ಮ ಜೀವನವನ್ನು ಹೋಲಿಕೆ ಮಾಡಿ ಬದುಕು ನಡೆಸುವ ರೀತಿ ಬಹಳ ಕೆಟ್ಟದು ಎಂದರೆ ತಪ್ಪಾಗಲಾರದು.”ಯೋಗಿ ಪಡೆದದ್ದು ಯೋಗಿಗೆ ಜೋಗಿ ಪಡೆದದ್ದು ಜೋಗಿಗೆ” ಎನುವ ಗಾದೆಯಲ್ಲು ಜೋಗಿಗೆ ಜೋಗಿಯದೆ ಸಮಸ್ಯೆ,ಯೋಗಿಗೆ ಯೋಗಿಯದೆ ಸಮಸ್ಯೆ ಇರುವುದನ್ನು ಗಮನಿಸಬೇಕು ಅಂದಮೇಲೆ ಹೋಲಿಕೆಯಿಂದಾಗಿ ಮನೋಬಲದ ಅವನತಿಗೆ ನಮ್ಮನ್ನು ನಾವು ತಳ್ಳುವುದು ಅದೆಷ್ಟು ಸೂಕ್ತ ಎಂಬುದನ್ನು ಅರಿಯಬೇಕಿದೆ. ಮುಂದುವರೆದು ನಿಮ್ಮ ವಯಸ್ಸಿಗೆ ಮೀರಿದ ಕಾರ್ಯಗಳಿಗೆ ಕೈ ಹಾಕಿ ಅದರಿಂದ ನೋವನ್ನುಂಟು ಮಾಡಿಕೊಂಡು ಜೀವನದ ಅರ್ಥ ಕಳೆದುಕೊಂಡು ಕುಗ್ಗಿ ಕೊರಗುವ ಬದಲು ಹಿರಿಯ ಅಥವಾ ಅನುಭವಿಗಳ ಮಾರ್ಗದರ್ಶನದಲ್ಲಿ ಸಾಗಿದಾಗ ಅವರ ಅನುಭವ ಮತ್ತು ಸಕಾರ್ಯಗಳು ಇತರರನ್ನು ಪ್ರೋತ್ಸಾಹಿಸಿ ಪ್ರಭಾವ ಬೀರುವ ಕಾರ್ಯವಾಗುತ್ತದೆ. ಏಕೆಂದರೆ ಅವರು ಸಹ ಆ ವಯಸ್ಸಿನ ಕೆಲ ತಿರುವುಗಳಿಂದ ಜಯಿಸಿ, ಜಯಿಸಲಾಗದಿದ್ದರೆ ಅನುಭವಿಸಿ ಬಂದಿರುವ ಕಾರಣ ಅವರ ಮಾರ್ಗದರ್ಶನದ ಅವಶ್ಯಕ.

ಇನ್ನು ಇತ್ತೀಚಿನ ಯುವಕರಲ್ಲಿ ತಾಳ್ಮೆಯ ಕೊರತೆ, ಅದು ಓಡುತ್ತಿರುವ ಜೀವನದ ಶೈಲಿಯಿಂದಲೋ ಅಥವಾ ಅವರು ಬಳಸುವ ಆಹಾರದಿಂದಲೋ ಅವರ ತಾಳ್ಮೆಯನ್ನು ಕುಗ್ಗಿಸಿಬಿಟ್ಟಿದೆ ಇದರ ಉಳಿವಿಗೆ ಒಂದಷ್ಟು ಧ್ಯಾನದ ಅವಶ್ಯಕತೆ ಬೇಕೆ ಬೇಕು. ಅನಾದಿ ಕಾಲದಿಂದಲೂ ನಮ್ಮ ಮನಸ್ಸನ್ನು ಕೇಂದ್ರೀಕರಿಸಿಡುವ ಕಾರ್ಯಕ್ಕೆ ಬಹು ಸೂಕ್ತ ಮಾರ್ಗ ಅದು “ಧ್ಯಾನ” ಎಂದು ನಮ್ಮ ಹಿರಿಯರು ನಮಗೆ ತಿಳಿಸುರುತ್ತಾರೆ. ಆದರೆ ಅದಕ್ಕೆ ನೀಡಬೇಕಾದ ಕನಿಷ್ಠ ಸಮಯನ್ನು ನೀಡದೆ ಆ ಸಮಯದಲ್ಲೂ ಮನೋಬಲ ಕುಗ್ಗಿಸಿ ಯೋಚನೆಗೆ ಕುಳಿತಿರುವುದು ಬೇಸರದ ಸಂಗತಿ. ಹಾಗಾಗಿ ಧ್ಯಾನದಲ್ಲಿ ತಲ್ಲೀನನಾದ ವ್ಯಕ್ತಿ ತನ್ನ ತಾಳ್ಮೆ ಮತ್ತು ಮನೋಬಲ ಎರಡನ್ನೂ ವೃದ್ಧಿಸುವಲ್ಲಿ ಯಶಸ್ವಿಯಾಗುತ್ತಾನೆ.
ಮುಂದಿನದು ಇಂದಿನ ಆಧುನಿಕ ಯುಗದ ತಾಂತ್ರಿಕತೆಯ ಹೆಚ್ಚು ಬಳಕೆ, ಅದು ಮೊಬೈಲ್ ಆಗಲಿ, ಸಾಮಾಜಿಕ ಜಾಲತಾಣವಾಗಲಿ ಇದರ ಹಿಂದೆ ಬಿದ್ದಿರುವ ನಮ್ಮ ಯುವ ಸಮುದಾಯವು ಅದನ್ನೇ ಜೀವನದ ಭಾಗವಹಿಸಿ ಅದರಿಂದ ಬೇಡದ ಕೆಲ ವಿಚಾರಗಳನ್ನು ತಮ್ಮ ತಲೆಗೆ ತುಂಬಿಸಿ ಮನೋಬಲವನ್ನು ಕುಗ್ಗಿಸಿರುವಾಗ ಅದರಿಂದ ಹೊರ ಬರಲು ಮುಖ್ಯವಾಗಿ ತಮ್ಮನ್ನು ಬೇರೆ ಸನ್ಮಾರ್ಗದೆಡೆಗೆ ಕರೆದೊಯ್ಯಲು ಉತ್ತಮ ಪುಸ್ತಕಗಳ ಓದುವಿಕೆ,ತಮ್ಮ ಬಾಲ್ಯದ ಹವ್ಯಾಸಗಳಲ್ಲಿ ನಿರತರಾಗುವುದು, ಪ್ರೇರಣೆ ತುಂಬುವ ವ್ಯಕ್ತಿಗಳ ಇತಿಹಾಸ ಅರಿಯುವುದು, ಉತ್ತಮ ಚಲನಚಿತ್ರದಿಂದ ಮನಸ್ಸಿನ ಸಂತೋಷ ಕಾಣುವುದು ಹೀಗೆ ಹತ್ತಾರು ಹಾದಿಗಳಲ್ಲಿ ಅವರನ್ನು ತೊಡಗಿಸಿದರೆ ಮನೋಬಲದ ವೃದ್ಧಿಯು ತಂತಾನೇ ಮೂಡುವುದರಲ್ಲಿ ಯಾವುದೇ ಅನುಮಾನವಿಲ್ಲ.ಮುಂದುವರೆದು ತಮ್ಮ ಜೀವನದಲ್ಲಿ ಕಾಣುವ ಸೋಲು ಅದು ಉದ್ಯೋಗದಲ್ಲಿಯೋ ಅಥವಾ ಪ್ರಯತ್ನದಲ್ಲಿಯೋ ಆದರೆ ಅದನ್ನು ತಮ್ಮ ಜೀವನದ ಸೋಲೆಂದು ಕುಳಿತು ಯೋಚಿಸುವ ಬದಲು ಯಾವುದು ಒಂದು ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿ ಬೇಕಾದ ಗುರಿಯ ಪ್ರಯತ್ನ ಬಿಡದೆ ಇದ್ದಾಗ ನಿಮ್ಮ ಮನಸ್ಸು ಬೇಡದ ಆಲೋಚನೆಗೂ ಸಿಲುಕುವುದಿಲ್ಲ ಮತ್ತು ಮನೋಬಲವು ಕುಗ್ಗದು.

ಇದಿಷ್ಟು ನಮ್ಮ ಯುವ ಸಮುದಾಯವು ಕುಗ್ಗುತ್ತಿರುವ ತಮ್ಮ ಮನೋಬಲಕ್ಕೆ ಶಕ್ತಿ ತುಂಬಲು ಮಾಡಬೇಕಾದ ಕೆಲ ಸಂಗತಿಗಳು. ಮಿತ್ರರೇ ಬದುಕಿಗೆ ಬೇಡವೆಂದರೂ ಕೆಲವೊಮ್ಮೆ ಕಷ್ಟಗಳು ನಿಶ್ಚಿತ, ಹಾಗೆಯೇ ಬಯಸಿದರು ಕಾಣದ ಸುಖದ ಅನ್ವೇಷಣೆಯು ಅಗತ್ಯ ಎರಡನ್ನು ಸಮಾನವಾಗಿ ಸ್ವೀಕರಿಸಿ ಸಾಗುವ ಹಂತಕ್ಕೆ ನಮ್ಮ ಮನಸ್ಸನ್ನು ಗಟ್ಟಿಯಾಗಿಸಿ ತೆರಳಿ ಉತ್ತಮ ಪ್ರಜೆಯಾಗಿ ಬದುಕೋಣ.

-ವಿಜಯ್ ಕುಮಾರ್ ಕೆ.ಎಂ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ವಿಜಯ್ ಕುಮಾರ್
ವಿಜಯ್ ಕುಮಾರ್
1 year ago

ಪ್ರಕಾಶಕರಿಗೆ ತುಂಬು ಹೃದಯದ ಧನ್ಯವಾದಗಳು

1
0
Would love your thoughts, please comment.x
()
x