ನೆಲದ ಘಮಲಿನ ʼಸಿನಿಹಬ್ಬʼ: ಎಂ ನಾಗರಾಜ ಶೆಟ್ಟಿ

  

ʼನೆಲದ ದನಿಗಳ ಹುಡುಕಾಟʼ ಇದು ಈ ಬಾರಿಯ ʼಸಿನಿಹಬ್ಬʼದ ವಿಷಯ. ಡಾ ಬಿ ಆರ್‌ಅಂಬೇಡ್ಕರ್‌ವಿದ್ಯಾರ್ಥಿಗಳ ಕಲ್ಯಾಣ ಸಂಘ, ಕೃಷಿ ಮಹಾವಿದ್ಯಾಲಯ, ಧಾರವಾಡ ಹಾಗೂ ಮನುಜಮತ ಸಿನಿಯಾನ ಸಹಯೋಗದಲ್ಲಿ ಧಾರವಾಡದಲ್ಲಿ ಎರಡು ದಿನಗಳ ʼಸಿನಿಹಬ್ಬʼ ಮೇ 20 ಮತ್ತು 21ರಂದು ಜರಗಿತು. ನೆಲದ ದನಿಗಳ ಹುಡುಕಾಟಕ್ಕೆ 542 ಹೆಕ್ಟೇರುಗಳ ವಿಶಾಲ ಹಸಿರು ಪ್ರದೇಶದಲ್ಲಿ ಹರಡಿಕೊಂಡಿರುವ ಕೃಷಿ ಮಹಾವಿದ್ಯಾಲಯದ ಆವರಣಕ್ಕಿಂತ ಸೂಕ್ತವಾದ ಜಾಗ ಇಲ್ಲವೇನೋ ಎನ್ನುವಂತಿತ್ತು ಸಿನಿಹಬ್ಬದ ಜಾಗ.

ಮೇ 20 ರ ಮುಂಜಾನೆ ಆಹ್ಲಾದಕರ ವಾತಾವರಣದಲ್ಲಿ ʼಸಿನಿಹಬ್ಬʼ ದ ಉದ್ಘಾಟನೆ ನಡೆಯಿತು. ಕೃಷಿ ವಿದ್ಯಾಲಯದ ಗಣ್ಯರು, ಡಾ ಬಿ ಆರ್‌ಅಂಬೇಡ್ಕರ್‌ವಿದ್ಯಾರ್ಥಿಗಳ ಕಲ್ಯಾಣ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಂಚಿನ ಕಂಠದ ಭರತ್‌ ನಾಂದಿ ಹಾಡಿದರೆ, ಐವನ್‌ ಡಿಸಿಲ್ವ ಪ್ರಾಸ್ತಾಪಿಕ ಮಾತುಗಳನ್ನಾಡಿ, ಸರ್ವಾಧಿಕಾರಿಗಳು ಪ್ರಚಾರಕ್ಕಾಗಿ ಸಿನಿಮಾ ಮಾಧ್ಯಮವನ್ನು ಬಳಸಿಕೊಂಡಷ್ಟು ಉದಾರವಾದಿಗಳು ಬಳಸಿಕೊಂಡಿಲ್ಲ ಎನ್ನುವುದನ್ನು ಪ್ರಸ್ತುತ ಸನ್ನಿವೇಶವನ್ನು ಉದಾಹರಿಸಿ ಹೇಳಿದರು. ಪ್ರಾಧ್ಯಾಪಕಿ ಹಾಗೂ ಕವಯಿತ್ರಿ ವಿನಯಾ ಒಕ್ಕುಂದ ಉದ್ಘಾಟನಾ ಭಾಷಣದಲ್ಲಿ ಮಹಾಭಾರತದಲ್ಲಿ ಕರ್ಣ ದ್ರೋಣರನ್ನು ಎದುರಿಸಿದ ಎಚ್ಚರವಿರಬೇಕು ಮತ್ತು ಪುರುವಿಂದ ತಾರುಣ್ಯ ಪಡೆದಂತೆ ಹಿರಿಯರು ಕಿರಿಯರಿಂದ ಉತ್ತೇಜನ ಪಡೆದುಕೊಳ್ಳಬೇಕಿದೆ ಎಂದು ಸಿನಿಮಾದ ಸಾಧ್ಯತೆಗಳನ್ನು ವಿಸ್ತರಿಸಿ ಹೇಳಿದರು. ಕೃಷಿ ವಿದ್ಯಾಲಯದ ಗಣ್ಯರು, ಡಾ ಬಿ ಆರ್‌ ಅಂಬೇಡ್ಕರ್‌ವಿದ್ಯಾರ್ಥಿಗಳ ಕಲ್ಯಾಣ ಸಂಘದ ಪದಾಧಿಕಾರಿಗಳು ಶುಭಾಶಂಸನೆ ನೀಡಿದರು.

ಮೊದಲ ದಿನ ಮೂರು ಸಿನಿಮಾಗಳಲ್ಲಿ ನೆಲದ ದನಿಗಳ ಹುಡುಕಾಟ ನಡೆಯಿತು.

ಮೊದಲ ಸಿನಿಮಾ: ಸೆನೆಗಲ್‌ದೇಶದ 1966 ರಲ್ಲಿ ಬಿಡುಗಡೆಯಾದ ಚಿತ್ರ ʼಬ್ಲಾಕ್‌ಗರ್ಲ್‌ʼ. ನಿಜ ಘಟನೆಯನ್ನು ಆಧರಿಸಿದ ಈ ಚಿತ್ರದ ನಿರ್ದೇಶಕಿ ಒಸುಮಾನೆ ಸೆಂಬೆನೆ. ಸೆನೆಗಲ್‌ನಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಕೆಯಿಂದ ಅಡುಗೆ ಮತ್ತು ಮನೆಕೆಲಸಗಳನ್ನು ಮಾಡಿಸಲಾಗುತ್ತದೆ. ಮನೆಯೊಳಗೆ ಬಂಧಿಯಾಗಿಸಿ ಗುಲಾಮಳಂತೆ ನಡೆಸಿಕೊಳ್ಳಲಾಗುತ್ತದೆ. ಹೆಣ್ಣೊಬ್ಬಳ ಸ್ವಾತಂತ್ರ್ಯದ ಬಯಕೆಯನ್ನು, ನೆಲದ ತುಡಿತಗಳನ್ನು ರೂಪಕಗಳ ಮೂಲಕ ಕಪ್ಪು ಬಿಳುಪಿನಲ್ಲಿ ನಿರ್ದೇಶಕಿ ಒಸುಮಾನೆ ಸೆಂಬೆನೆ ಕಟ್ಟಿಕೊಡುತ್ತಾರೆ.

ಸಿನಿಹಬ್ಬದ ವಿಶೇಷವೇ ಸಂವಾದ. ಮುಖ್ಯವಾಗಿ, ಸಿನಿಹಬ್ಬದಲ್ಲಿ ವಿದ್ಯಾರ್ಥಿಗಳ, ಯುವಕರ ಮಾತುಗಳಿಗೆ ಆದ್ಯತೆ ಕೊಡಲಾಗುತ್ತದೆ. ʼಬ್ಲಾಕ್‌ಗರ್ಲ್‌ʼ ಚಿತ್ರ ಹಲವರಿಗೆ ತಟ್ಟಿತು ಎನ್ನುವುದಕ್ಕೆ ಅದಕ್ಕೆ ದೊರೆತ ಸ್ಪಂದನೆ ಸಾಕ್ಷಿಯಾಗಿತ್ತು. ಮುಖ್ಯಪಾತ್ರದ ಸಾವನ್ನು ಕೆಲವರು ಇಷ್ಟ ಪಡಲಿಲ್ಲ. ಕೆಲವರು ಮುಖವಾಡದ ವಿವರಣೆ ಬಯಸಿದರು. ಕೊನೆಯ ದೃಶ್ಯ ಸೆನೆಗಲ್‌ ವಾಸಿಗಳ ಸ್ವಾಭಿಮಾನವನ್ನು ಹೇಳುತ್ತದೆ ಎಂದು ಹೆಚ್ಚಿನವರು ಅಭಿಪ್ರಾಯ ಪಟ್ಟರು

ಪಾ ರಂಜಿತ್‌ ನಿರ್ದೇಶಿಸಿ 2014 ರಲ್ಲಿ ಬಿಡುಗಡೆಯಾಗಿ ಅಪಾರ ಯಶಸ್ಸನ್ನು ಪಡೆದ ತಮಿಳು ಚಿತ್ರ ‌ʼಮದ್ರಾಸ್ʼ. ಮದ್ರಾಸಿನ ಉತ್ತರ ಭಾಗದ ವ್ಯಾಸರ್‌ಪಾಡಿ ಎನ್ನುವ ಜಾಗದ ತಳ ವರ್ಗದ ಜನರ ಬದುಕನ್ನು ಕೇಂದ್ರೀಕರಿಸಿ ನಿರ್ಮಿಸಿದ ಚಿತ್ರವಿದು. ರಾಜಕೀಯ ಮೇಲಾಟದಲ್ಲಿ ಗೆಳೆತನ, ಪ್ರೇಮ ಮತ್ತು ಬದುಕು ಘಾಸಿಗೊಳಗಾಗುವ ಚಿತ್ರಣವನ್ನು ಪಾ ರಂಜಿತ್‌ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಆದರೆ ನಿಜವಾದ ಪ್ರೇಮ ಮತ್ತು ಗೆಳೆತನವನ್ನು ಬೇರ್ಪಡಿಸಲಾಗದು; ಬದುಕನ್ನು ಕಸಿದುಕೊಳ್ಳುವ ಹಿಂಸೆಯಲ್ಲು ಪ್ರೀತಿಯ ಬಣ್ಣಗಳಿವೆ. ಸಂಘರ್ಷಕ್ಕೆ ಕಾರಣವಾದ ಗೋಡೆಯ ಮೇಲಿನ ಚಿತ್ರದ ಬದಲಾಗಿ ಮಕ್ಕಳ ವಿದ್ಯಾಭ್ಯಾಸದ ಅರಿವನ್ನು ಹೊತ್ತ ಕಲೆ ಚಿತ್ರದ ಅರ್ಥವಂತಿಕೆಯನ್ನು ಹೆಚ್ಚಿಸುತ್ತದೆ.

ಈ ಸಿನಿಮಾದ ಮೂಲಕ ಪಾ ರಂಜಿತ್‌ ಸಿನಿಮಾ ತಯಾರಿಕೆಯಲ್ಲೆ ಗಮನಾರ್ಹ ಬದಲಾವಣೆಯನ್ನು ತಂದರು. ಆ ವರೆಗೆ ಕಾಣದ ಬದುಕು ತಮಿಳು ಚಿತ್ರಗಳಲ್ಲಿ ಅನಾವರಣಗೊಳ್ಳತೊಡಗಿತು. ಈ ಚಿತ್ರದ ಚರ್ಚೆಯಲ್ಲಿ ಎಲ್ಲರೂ ಪಾಲ್ಗೊಂಡರು. ವಿಪರೀತ ಹಿಂಸೆ, ಎಲ್ಲೂ ನಡೆಯಬಹುದಾದ ಕತೆ, ದೀರ್ಘವಾದ ಚಿತ್ರ ಎನ್ನುವ ಮಾತುಗಳು ಕೇಳಿ ಬಂದಂತೆ ಬಿಗಿಯಾದ ನಿರೂಪಣೆ, ಗೋಡೆಯನ್ನು ಕೇಂದ್ರವಾಗಿಸಿ ಕತೆ ಕಟ್ಟಿದ ವಿಧಾನ, ಸೂಚ್ಯವಾಗಿ ತಳ ವರ್ಗದ ಬದುಕನ್ನು ಹೇಳುವ ಕಲೆಗಾರಿಕೆಯನ್ನು ಪ್ರಶಂಸಿಸಲಾಯಿತು.

ಮೊದಲ ದಿನದ ಕೊನೆಯ ಸಿನಿಮಾ ಲೀನಾ ಮನಿಮೇಕಲೈ ನಿರ್ದೇಶಿಸಿದ ʼಮದಾತಿʼ. ತಲ್ಲಣಗೊಳಿಸುವ ಕಥಾ ವಸ್ತುವನ್ನು ಹೊಂದಿರುವ ಈ ಸಿನಿಮಾ ತಮಿಳುನಾಡಿನ ಅಸ್ಪರ್ಶ್ಯರಲ್ಲಿ ಅಸ್ಪರ್ಶ್ಯರಾದ ʼಮತಿರೈವಣ್ಣಾರ್‌ʼ ಸಮುದಾಯದವರು ಅನುಭವಿಸುವ ನೋವನ್ನು ಹೇಳುತ್ತದೆ. ʼಯೋಸನಾʼ ಎನ್ನುವ ಹೆಣ್ಣು ಮಗಳ ಮೂಲಕ ಹೆಣ್ಣುಮಕ್ಕಳ ಶೋಷಣೆ, ಮೇಲ್ಜಾತಿಗಳ ಅಹಂಕಾರ, ಊರ ಹಿರಿಯರನ್ನು ಎದುರು ಹಾಕಿಕೊಂಡವರೂ ಜಾತಿ ವಿಷಯ ಬಂದಾಗ ಒಂದಾಗುವುದು, ಅಕ್ರಮಕ್ಕೆ ಒಳಗಾದವರು ದೈವವಾಗಿ ಬಿಡುವುದು ಮುಂತಾದ ಸಾಮಾಜಿಕ ಕಳಂಕಗಳನ್ನು ಮನಿಮೇಕಲೈ ಮನ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

ʼಮದಾತಿʼ ಚಿತ್ರವನ್ನು ಮೊದಲೇ ನೋಡಿದ್ದೆ. ಚಿತ್ರದ ಸಂವಾದ ಚೆನ್ನಾಗಿ ನಡೆಯಿತೆಂದು ತಿಳಿಯಿತು. ಮನಕಲಕಿದ ಚಿತ್ರವೆಂದು ಕೆಲವರು ಅಭಿಪ್ರಾಯ ಪಟ್ಟರೆ ಈ ಸಲದ ಸಿನಿಹಬ್ಬದ ಅತ್ಯುತ್ತಮ ಚಿತ್ರವೆಂದು ಪರಿಗಣಿಸಿದವರೂ ಇದ್ದರು.

ಬ್ರೆಜಿಲ್‌ ದೇಶದ ʼಬಕರಾವುʼ ಚಿತ್ರದೊಂದಿಗೆ ಮಾರನೇ ದಿನದ ಸಿನಿಹಬ್ಬ ಆರಂಭಗೊಂಡಿತು. 2019 ರ ಈ ಚಿತ್ರದ ನಿರ್ದೇಶಕ ಕ್ಲೆಬರ್‌ ಮಂಡೋನ್ಸಾ. ಗೂಗಲ್‌ ಮ್ಯಾಪಲ್ಲೂ ಕಾಣದ ಪುಟ್ಟ ಊರು ಬಕರಾವಿನ ಜನ ತಮ್ಮ ಪಾಡಿಗೆ ತಾವಿರುವವರು. ಅಮೆರಿಕನ್‌ ಸಾಮ್ರಾಜ್ಯಶಾಹಿಯೆಂದು ತೋರುವ ಪ್ರಭುತ್ವ, ಮೇಯರ್‌ ಮುಖಾಂತರ ಆ ಊರನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತದೆ. ಚಿತ್ರದಲ್ಲಿ ಮ್ಯೂಸಿಯಮ್ ಗತ, ವರ್ತಮಾನ ಮತ್ತು ಭವಿಷ್ಯದ ರೂಪಕದಂತೆ ತೋರುತ್ತದೆ. ಬಕರಾವನ್ನು ಉಳಿಸಿಕೊಳ್ಳಲು ಊರ ಜನ ಹೋರಾಡುತ್ತಾರೆ. ಸಹಜವೆನ್ನಿಸುವ ಕಾಮ, ಅನಿವಾರ್ಯ ಎನ್ನಿಸುವ ಹಿಂಸೆ, ನಮಗೆ ಅಪರೂಪವಾದ ಬದುಕು ಇಲ್ಲಿದೆ.

132 ನಿಮಿಷಗಳ ಈ ಚಿತ್ರ ನೋಡುಗರನ್ನು ಆವರಿಸಿತ್ತು. ತಿಳಿಯದ ಬದುಕು ಎಂದು ಆಕ್ಷೇಪಿಸಿದವರಿದ್ದರು, ಅರ್ಥವಾಗಲಿಲ್ಲ ಎನ್ನುವ ಗೊಣಗಾಟವಿತ್ತು, ಹಿಂಸೆ ಹೆಚ್ಚು ಎಂದು ಕಳವಳಿಸಿದವರೂ ಇದ್ದರು. ಇದರಾಚೆ, ನಮ್ಮ ನೆಲ ಜಲವನ್ನು ರಾಜಕೀಕರಣಗೊಳಿಸುವುದು, ವಶಕ್ಕೆ ಪಡೆಯಲು ಹವಣಿಸುವುದು, ಸಾಮಾನ್ಯ ಜನರ ಬದುಕನ್ನು ಹದಗೆಡಿಸುವುದು ಮುಂತಾದ ಹುನ್ನಾರಗಳನ್ನು ಅರ್ಥಮಾಡಿಕೊಂಡು ಹಲವರು ಮೆಚ್ಚಿದರು. ಪೂರ್ಣಾವಧಿಯ ನಾಲ್ಕು ಸಿನಿಮಾಗಳ ಪ್ರದರ್ಶನದ ನಂತರ ಸಿನಿಹಬ್ಬದಲ್ಲಿ ಕಿರು ಚಿತ್ರಗಳ ಮಿತಾಹಾರ ಉಣ ಬಡಿಸಿಲಾಯಿತು. 

ʼಪಿಸ್ತುಲ್ಯಾʼ ನಾಗರಾಜ್‌ ಮಂಜುಳೆಯವರ 2009 ರ ಅಲ್ಪ ಕಾಲಾವಧಿಯ ಸಿನಿಮಾ. ತಂದೆ ಇಲ್ಲದ ಬಾಲಕ ಪಿಸ್ತುಲ್ಯಾ ತನಗೆ ದಕ್ಕದ ಓದು ತಂಗಿಗೆ ಸಿಗಲಿ ಎಂದು ತಪಿಸುವುದು ಚಿತ್ರದ ವಸ್ತು. ಅತ್ಯುತ್ತಮ ನಿರ್ದೇಶನಕ್ಕೆ ಮತ್ತು ಅತ್ಯುತ್ತಮ ಬಾಲ ಕಲಾವಿದನಿಗೆ ಪ್ರಶಸ್ತಿ ಪಡೆದ ಈ ಸಿನಿಮಾ, ಕಿರು ಚಿತ್ರವನ್ನು ಪರಿಣಾಮಕಾರಿಯಾಗಿ ರೂಪಿಸುವುದು ಹೇಗೆ ಎನ್ನುವುದಕ್ಕೆ ಮಾದರಿಯಾಗಿದೆ. 

ಸಿನಿಮಾದ ಕೊನೆಯಲ್ಲಿ ಪಿಸ್ತುಲ್ಯಾ ಫ್ರಾಕ್‌ ಕದಿಯುವುದನ್ನು ಕುರಿತ ಪ್ರಶ್ನೆಗಳಿಗೆ ಉತ್ತರಿಸಿಲಾಯಿತು. ಈಗ ಮರೆಯಾಗಿರುವ ಅರೆಯುವ ಕಲ್ಲುಗಳನ್ನು ತಯಾರಿಸುವವರ ಬದುಕು ಕೆಲವರಿಗೆ ನೋವು ತಂದಿತು. 25 ನಿಮಿಷ ಕಾಲಾವಧಿಯ ಕನ್ನಡ ಸಿನಿಮಾ ʼಲಚ್ಚವ್ವʼ. ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ ಸ್ಪರ್ಧೆಯಲ್ಲಿ ʼಟೋಠೋʼ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಚಿತ್ರದ ನಿರ್ದೇಶಕರು ಜಯಶಂಕರ್. 

ಮಗನೊಂದಿಗೆ ಬೆಂಗಳೂರಿಗೆ ವಾಸಿಸಲು ಬರುವ ಲಚ್ಚವ್ವ ಜನಜಂಗುಳಿಯಲ್ಲಿ ದಾರಿ ತಪ್ಪುತ್ತಾಳೆ. ಮಗನ ಗೆಳೆಯನ ಹುಟ್ಟು ಹಬ್ಬ ಆಚರಿಸಬೇಕೆನ್ನುವ ಆಕೆಯ ಬಯಕೆ, ಮಹಾನಗರದಲ್ಲಿ ದಾರಿ ಕಾಣದ ಕಳವಳ, ಹಳ್ಳಿಯ ಹೆಣ್ಣಿನ ಮುಗ್ಧ ಮನಸ್ಸು ಚಿತ್ರದಲ್ಲಿ ಅನಾವರಣಗೊಂಡಿದೆ. ಚಿತ್ರ ಮುಂದೇನಾಗುತ್ತದೆ ಎನ್ನುವ ಆತಂಕವನ್ನು ವೀಕ್ಷಕನಲ್ಲಿ ಕ್ಷಣ ಕ್ಷಣಕ್ಕೂ ಮೂಡಿಸುತ್ತದೆ.

ʼಲಚ್ಚವ್ವʼ ನಿರ್ದೇಶಕ ಜಯಶಂಕರ್‌ ನಮ್ಮೊಡನಿದ್ದರು. ಅವರಿಗೆ ಮೆಚ್ಚುಗೆಯ ಸುರಿಮಳೆಯಾಯಿತು. ನೋಡುಗರೊಂದಿಗೆ ನೇರವಾಗಿ ಸಂವಾದಿಸುವ ಖುಷಿ ಅವರದಾದರೆ, ನಿರ್ದೇಶಕನನ್ನು ಪ್ರಶ್ನಿಸುವ ಸಂಭ್ರಮ ನಮ್ಮದು! ಲಚ್ಚವ್ವನ ಪಾತ್ರಧಾರಿಯನ್ನು ಎಲ್ಲಿ ಹುಡುಕಿದಿರಿ, ಎಷ್ಟು ವೆಚ್ಚ ಮಾಡಿದಿರಿ ಎಂಬಲ್ಲಿಂದ ಚಿತ್ರಕ್ಕೆ ಪ್ರೇರಣೆ ಹೇಗೆ ಬಂತು ಎಂದೂ ಕೇಳಲಾಯಿತು. ರೈಲಿನೊಳಗಿನ ಚಿತ್ರೀಕರಣ, ಪಾತ್ರಧಾರಿಗಳ ಸಹಜ ವರ್ತನೆ, ಚಿತ್ರದುದ್ದಕ್ಕೂ ಸಿಂಕ್‌ ಸೌಂಡ್‌ ಬಳಸಿರುವುದು ಮೆಚ್ಚುಗೆಗೆ ಪಾತ್ರವಾಯಿತು.

ಈ ನಡುವೆ, ʼಸಿನಿಹಬ್ಬʼ ದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ವಿನಯ್‌ ಕುಮಾರ್‌ ಅವರ ಎಂಟು ನಿಮಿಷಗಳ ಕಿರು ಚಿತ್ರ ʼಟ್ರೈನ್‌ʼ ಹೆಚ್ಚುವರಿಯಾಗಿ ಪ್ರದರ್ಶಿತಗೊಂಡಿತು. ಪುಟಾಣಿ ರೈಲನ್ನು ಆಸೆಯಿಂದ ಹತ್ತುವ ಬಾಲಕ, ಬಲಾಢ್ಯರು ಬಂದಾಗ ಜಾಗ ತೆರವು ಮಾಡುವ ಕತೆಯನ್ನು ಹೊಂದಿದೆ. ಇದು ಕಪ್ಪು ಬಿಳುಪಿನ ಮೂಕಿ ಚಿತ್ರ.

ʼಸಿನೆಹಬ್ಬʼ ಇತರ ವೇದಿಕೆಗಳ ಸಿನಿಮಾ ಪ್ರದರ್ಶನಗಳಂತಲ್ಲ. ಇಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದನ್ನು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸಿದ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶವಿರುತ್ತದೆ. ಧಾರವಾಡದಲ್ಲೂ ವೀಕ್ಷಕರು ಪ್ರತಿ ಸಿನಿಮಾ ನಂತರದ ಸಂವಾದದಲ್ಲಿ ಆಸಕ್ತಿಯಿಂದ ಪಾಲ್ಗೊಂಡಿದ್ದರು. ಸಿನಿಮಾ ಪ್ರದರ್ಶನ ಮುಕ್ತಾಯವಾಗುತ್ತಿದ್ದಂತೆ ಎಲ್ಲರ ಅಭಿಪ್ರಾಯ ಪಡೆಯಲಾಯಿತು.

ಕತೆಗಾರ್ತಿ ಸುನಂದಾ ಕಡಮೆ ಈ ರೀತಿಯ ಸಿನಿಮಾ ಹಬ್ಬ ಎಲ್ಲ ಕಡೆಗಳಲ್ಲೂ ನಡೆಯಬೇಕು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು; ನಾಟಕ ನಿರ್ದೇಶಕ ಶಂಕರಯ್ಯ ಘಂಟಿಯವರ ಪ್ರಕಾರ ಎರಡು ದಿನ ಸಾಲದು; ಪ್ರಾಧ್ಯಾಪಕಿ ಭಾರತಿದೇವಿಗೆ ಈ ಅನುಭವ ಆದಷ್ಟು ಜನರಿಗೆ ತಲುಪಲಿ ಎಂಬ ಬಯಕೆ; ಕತೆಗಾರ ಚಂದ್ರಪ್ರಭ ಕಠಾರಿಯವರ ದೃಷ್ಟಿಯಲ್ಲಿ ಸಿನಿಹಬ್ಬ ನಿರ್ವಹಣೆ ಸೊಗಸಾಗಿದೆ; ಸಿನಿಮಾ ವಿಮರ್ಶಕ ಮುರಳಿಕೃಷ್ಣ ಪ್ರಕಾರ ಮದ್ರಾಸ್‌ ಸಿನಿಮಾಕ್ಕಿಂತ ಭಿನ್ನವಾದ ಸಿನಿಮಾ ತೋರಿಸಬಹುದಿತ್ತು; ಕೃಷ್ಣಪ್ರಸಾದ್‌ಗೆ ಸಿನಿಮಾದಲ್ಲಿ ನೆಲ ದನಿಯ ಹುಡುಕಾಟ ಕಂಡಿತ್ತು, ಊಟದಲ್ಲಿ ನೆಲದ ಸ್ವಾದ ಕಂಡಿರಲಿಲ್ಲ; ವಿನಯಕುಮಾರ್‌ಗೆ ವಾರವಾದರೂ ಈ ರೀತಿಯ ಸಿನಿಮೋತ್ಸವ ನಡೆಯುವ ಇಚ್ಚೆ; ಸಂಶೋಧನಾ ವಿದ್ಯಾರ್ಥಿ ಯೋಗೇಶ್‌ ಪಾಟೀಲ್‌ಗೆ ಮಾದಾತಿ, ಬ್ಲಾಕ್‌ ಗರ್ಲ್‌ನಂತಹ ಚಿತ್ರಗಳು ನಮ್ಮ ಜನರ ಕಷ್ಟಗಳನ್ನು ನೆನಪಿಸಿದ್ದವು; ನಟಿ ಭಾರತಿಗೆ ಹಿಂಸೆ ಅತಿ ಎನ್ನಿಸಿತ್ತು; ಪ್ರದರ್ಶನ ಕಲೆಯ ವಿದ್ಯಾರ್ಥಿ ಸೂರ್ಯಸಾಥಿ ಸಿನಿಮಾದ ವಿವಿಧ ಆಯಾಮಗಳ ಚರ್ಚೆ ಬಯಸಿದರು; ಕೆ ರಾಘವೇಂದ್ರರಿಗೆ ʼಬಕರಾವೋʼ ವಿಶೇಷ ಚಿತ್ರವೆಂದು ಕಂಡಿತ್ತು, ಈ ರೀತಿಯಲ್ಲಿ ಹಲವರು ಹಲವು ರೀತಿಯಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಸಮಾರೋಪ ಸಮಾರಂಭದಲ್ಲಿ ಪ್ರಾಧ್ಯಾಪಕ, ಚಿಂತಕ ಕೆ ಫಣಿರಾಜ್‌ ʼಸಿನೆಹಬ್ಬʼದ ಹೆಜ್ಜೆ ಗುರುತುಗಳನ್ನು ನೆನೆದರು. ʼಮದ್ರಾಸ್‌ʼ ಸಿನಿಮಾ ಆಯ್ಕೆ ಮಾಡಿದ ಕಾರಣ, ನಮ್ಮ ಬದುಕಲ್ಲೂ ಇರುವ ಹಿಂಸೆಯನ್ನು ಪ್ರಸ್ತಾಪಿಸಿದರು. ಅತಿಥಿಯಾಗಿ ಆಗಮಿಸಿದ ಧಾರವಾಡ ಕೃಷಿ ಮಹಾವಿದ್ಯಾಲಯದ ಇಂಗ್ಲಿಷ್‌ ಪ್ರಾಧ್ಯಾಪಕಿ ಯಶಸ್ವಿನಿ ಸಿನಿಮಾ ಬದುಕನ್ನು ಹೇಗೆ ಪ್ರಭಾವಿಸುತ್ತದೆ ಎಂದು ಉದಾಹರಣೆಗಳ ಮೂಲಕ ಹೇಳಿದರು. ತಾನೂ ಕಿರು ಚಿತ್ರವೊಂದರ ನಿರ್ಮಾಣದಲ್ಲಿ ಭಾಗಿಯಾಗಿದ್ದು, ಒಳ್ಳೆಯ ಸಿನಿಮಾಗಳ ಅಗತ್ಯವನ್ನು ಮನದಟ್ಟು ಮಾಡಿದರು. ಕೃಷಿ ಮಹಾವಿದ್ಯಾಲಯದ ಡಾ ಬಿ ಆರ್‌ಅಂಬೇಡ್ಕರ್‌ ವಿದ್ಯಾರ್ಥಿಗಳ ಕಲ್ಯಾಣ ಸಂಘ ಪದಾಧಿಕಾರಿ ಪುನೀತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೃಷಿ ಮಹಾವಿದ್ಯಾಲಯದಲ್ಲಿ, ಚುನಾವಣೆಯ ದೆಸೆಯಿಂದ ಮುಂದೂಡಿದ ಸೆಮೆಸ್ಟರ್‌ ಪರೀಕ್ಷೆಗಳನ್ನು ಸಿನಿಹಬ್ಬದ ದಿನಗಳಂದೇ ನಡೆಸಲಾಗಿತ್ತು. ಆದರಿಂದಾಗಿ ಸಿನಿಹಬ್ಬದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದ ವಿದ್ಯಾರ್ಥಿಗಳಿಗೆ ಬಿಡುವು ದೊರಕಿರಲಿಲ್ಲ. ಈ ಕೊರತೆಯನ್ನು ಹೊರತು ಪಡಿಸಿ ಸಿನಿಹಬ್ಬದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ನವ್ಯ ಕಡಮೆ, ಪುನೀತ್‌ಕುಮಾರ್‌, ಮಹದೇವ ನಟುವರವರ ಶ್ರಮ ಸಿನಿಹಬ್ಬದ ಯಶಸ್ಸಿಗೆ ಕಾರಣವಾಯಿತು. ಮಹದೇವ ನಟುವರ ನೇತೃತ್ವದ ಊಟೋಪಚಾರದಲ್ಲಿ ಕಾಳು ತಿನ್ನುವವರಿಗಿಂತ, ಮೂಳೆ ಕಡಿಯುವವರು ಬಹು ಸಂಖ್ಯಾತರಾಗಿದ್ದು ನೆಲದ ಘಮಕ್ಕೆ ಸಾಕ್ಷಿಯಾಗಿತ್ತು!

-ಎಂ ನಾಗರಾಜ ಶೆಟ್ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x