ದೋರುಗಾಯಿ ಹಣ್ಣಾದ ಹೊತ್ತು ಗೊತ್ತು!: ಡಾ. ಹೆಚ್‌ ಎನ್‌ ಮಂಜುರಾಜ್‌

‘ತುಂಬ ಸಿಹಿಯೂ ಅಲ್ಲದ, ತೀರ ಒಗರೂ ಅಲ್ಲದ ಪನ್ನೇರಳೆ ಹಣ್ಣಿನ ಗುಣ ಲಲಿತ ಪ್ರಬಂಧದ ಗುಣಕ್ಕೆ ಹತ್ತಿರ. ಲಲಿತ ಪ್ರಬಂಧಗಳಲ್ಲಿ ನಗು, ಅಳು, ಚಿಂತನೆ ಎಲ್ಲವೂ ಮೇಳೈಸಿರುತ್ತವೆ. ಅಲ್ಲದೆ ಪನ್ನೇರಳೆ ಗುಂಪು ಗುಂಪಾಗಿದ್ದು ಕೂಡಿ ಬಾಳುವ ಆಶಯವನ್ನು ಸಮರ್ಪಕವಾಗಿ ಸಂಕೇತಿಸುತ್ತದೆ. ಈ ಎಲ್ಲ ಕಾರಣಗಳಿಂದ ಪನ್ನೇರಳೆ ಎಂಬ ಹೆಸರು ಇಲ್ಲಿ ಸೂಕ್ತವಾಗಿ ಕಂಡಿದೆ’ ಎಂಬುದು ಪ್ರಬಂಧಕಾರರ ಮಾತು. ಇಲ್ಲಿಯ ಎಲ್ಲವನೂ ಓದಿದ ಮೇಲೆ ಅರ್ಥವಾಗುವಂಥದು.

ಇದರಲ್ಲಿರುವ ಹನ್ನೆರಡು ಪ್ರಬಂಧಗಳಲ್ಲೂ ಇಂಥ ಸಹಬಾಳ್ವೆ ಮತ್ತು ಸಾಮರಸ್ಯಗಳ ಚಿತ್ರಣ ಹೃದ್ಯವಾಗಿ ಮೂಡಿ ಬಂದಿವೆ. ನಾಡಿನ ಖ್ಯಾತ ವಿಮರ್ಶಕರೂ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಹಿರಿಯ ಉಪನ್ಯಾಸಕರಾಗಿ 2017 ರಲ್ಲಿ ಕರ್ನಾಟಕ ಸರ್ಕಾರವು ಕೊಡ ಮಾಡುವ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಯ ಪುರಸ್ಕಾರ ಪಡೆದವರೂ ತಮ್ಮ ಮಾತು, ಬರೆಹ ಮತ್ತು ಭಾಷಣೋಪನ್ಯಾಸಗಳಿಂದ ನಾಡಿನ ಸಾಂಸ್ಕೃತಿಕ ವಲಯದಲ್ಲಿ ಹೆಸರು ಮಾಡಿರುವವರೂ ಆದ ಡಾ. ಎಚ್ ಎಸ್  ಸತ್ಯನಾರಾಯಣ ಅವರ ಸೃಜನಶೀಲ ಕೃತಿಯಿದು.

ಅಪೂರ್ವರೊಡನಾಟ, ಕುವೆಂಪು-ಅಲಕ್ಷಿತರೆದೆಯ ದೀಪ, ನುಡಿಚಿತ್ರ, ಕಣ್ಣೋಟ, ನಗೆಮೊಗದ ಅಜ್ಜ ಮಾಸ್ತಿ ಮೊದಲಾದ ಕೃತಿಗಳನ್ನು ಪ್ರಕಟಿಸಿ ಹಿರಿ ಕಿರಿಯರೆನ್ನದೆ ರಾಜ್ಯಾದ್ಯಂತ ಜನಪ್ರೀತಿ ಮತ್ತು ಗೌರವಾದರಗಳನ್ನು ಸಂಪಾದಿಸಿರುವ ಇವರು ಮೂಲತಃ ಸ್ನೇಹಜೀವಿ, ಮಮತೆಯ ಬಂಧು, ಗಂಭೀರ ಸಾಹಿತ್ಯಾಧ್ಯಯನಿ, ಸಂವೇದನಾಶೀಲ ಗುಣಗ್ರಾಹೀ ವಿಮರ್ಶಕ, ತಿರುಗಾಟದ ಪ್ರವೀಣ, ಎಲ್ಲ ಮಾನವೀಯ ಮೌಲ್ಯಗಳ ಗಣಿ, ಒಮ್ಮೊಮ್ಮೆ ತುಂಟಾಟ ಮಾಡುತ್ತಾ, ನಗುತ್ತಾ, ನಗಿಸುತ್ತಾ ಯಾಂತ್ರಿಕ ಬದುಕನ್ನು ಹಗುರಗೊಳಿಸಿ, ಸಂತಸವನೇ ಸ್ಫೋಟಿಸುವ ಹಾಸ್ಯಗಾರ, ಸ್ವೋಪಜ್ಞ  ಚಿಂತನಶೀಲ ಮೃದು ಮಧುರ ಮಾತುಗಾರ, ಎಲ್ಲದರಲ್ಲೂ ಹಿತವಾದುದನ್ನು ಹುಡುಕಿ, ತಡಕಿ, ಅದಕೊಂದು ಸಾಂಸ್ಕೃತಿಕ ವಿನ್ಯಾಸವಿತ್ತು, ಕಲಿವ ಮತ್ತು ಕಲಿಸುವ ಪ್ರೀತಿಯ ಮೇಷ್ಟ್ರು. ಇಂಥ ಸತ್ಯಣ್ಣ ನನ್ನ ಮೂವತ್ತು ವರುಷಗಳಿಗೂ ಮೀರಿದ ನಿಡುಗಾಲದ ಜೀವನ್ಮಿತ್ರ, ಸಹಪಾಠಿ ಮತ್ತು ಕುಟುಂಬಸ್ನೇಹಿ.

ನಾಡಿನಲ್ಲಿ ಬರೆಯುವ ಕಲೆ, ಸಾಹಿತ್ಯ ಕ್ಷೇತ್ರಗಳ ಎಲ್ಲ ದಿಗ್ಗಜರು, ಹಿರಿಯರು ಮತ್ತು ಕಿರಿಯರ ಸ್ನೇಹದೊಡನಾಟವನ್ನಿಟ್ಟುಕೊಂಡ ಸಾಹಿತ್ಯದೂತ, ಅಂಥವರನ್ನು ನಮ್ಮಂಥ ಓದುಗರಿಗೆ ತಲಪಿಸುವ ಸಂಪರ್ಕಸೇತು, ಅಗಾಧ ನೆನಪಿನಕೋಶ, ಆಯಾ ಸಂದರ್ಭಕ್ಕೆ ತಕ್ಕಂತೆ ತಾನು ಓದಿದ, ಕೇಳಿದ, ನೋಡಿದ, ಸ್ವಾನುಭವಿಸಿದ ಅಪರೂಪದ ಘಟನೆ, ಸಂಘಟನೆ, ಸಂದರ್ಭ, ಸನ್ನಿವೇಶಗಳನ್ನು ಮನನ ಮಾಡಿಸಿ, ಪೇಲವ ಮಾತುಗಾರಿಕೆಗೊಂದು ರಸವತ್ತಾದ ಆಯಾಮ ನೀಡುವ ಸದ್ಗುಣಗಳ ಸಂತ. ಆನಂದಾಸ್ವಾದನೆಗೆ ಕಾರಣವಾಗುವ ಔಚಿತ್ಯಪೂರ್ಣ ಜೊತೆಗಾರ. ಈತನೊಂದಿಗಿನ ಮಾತು ಮಾತಲ್ಲ; ಸಹಜ ಸಂವಾದ. ಈತನೊಂದಿಗಿನ ಚರ್ಚೆ ಕೇವಲ ಪಾಂಡಿತ್ಯವಲ್ಲ; ವಿದ್ವತ್ತಿನ ಕಾಣ್ಕೆಯೆಂಬ ಕುಸುಮಗಳಿಂದ ಕಟ್ಟಿದ ರಸಿಕತೆಯ ಗಂಧ ಹೊರ ಸೂಸುವ ಚೆಲುವಿನ ಹೂ ಮಾಲೆ. ಈತನ ಸಹವಾಸ ಯಾಂತ್ರಿಕವಲ್ಲ; ಶಾಂತ-ಹಾಸ್ಯ-ಕರುಣ-ಅದ್ಭುತರಸಗಳನ್ನೀಂಟುವ ಸದಭಿರುಚಿಯ ಸನ್ನಿಧಾನ; ಮುಗ್ಧತೆಯ ಮಂತ್ರ, ವಿನೋದ ತಂತ್ರ! ಒಟ್ಟಾರೆ ಸತ್ಯನೆಂದರೆ ಎಂದೋ ಕೇಳಿದ ಹಾಡಿನ ಸವಿನುಡಿಯ ಕಾವ್ಯಮಯ ಗುನುಗು; ಮನವನಾರಿಸಿ ಪರವಶಗೊಳಿಸುವ ಗಾನೋತ್ಸವ. ವೀಣೆ-ಕೊಳಲು-ಮೃದಂಗ ಪಕ್ಕವಾದ್ಯಗಳ ಹದವಾದ ಸಂಯೋಜನೆಯಲ್ಲಿ ಕೇಳುವ ಭಾವಗೀತ! ಈತನಿದ್ದ ಕಡೆ ತುಂಬು ನಗೆ, ಎಲ್ಲರನೂ ಎಲ್ಲವನೂ ಆವರಿಸಿದ ಮಾತಿನರಮನೆ; ಅಂತೆಯೇ ವಿನಾ ಕಾರಣ ಸಂಭ್ರಮಿಸುವ ಬೆರಗು.

ಯಾವತ್ತೋ ಒಂದು ದಿನ ಧುತ್ತನೆ ಕಾಣಿಸಿ, ಎದುರುಗೊಂಡು, ಮರೆಯಾಗಿದ್ದ ಅಷ್ಟೂ ದಿನಗಳ ಮಾತಿನ ಮಹಲನ್ನು ಒಂದೇ ಸಮನೆ ಕಟ್ಟುತ, ಪಾಲ್ಗೊಳ್ಳುತ, ಖುಷಿಯ ಕೊಳದಲ್ಲಿ ಮಿಂದೇಳುತ ಸುಧಾರಿಸಿಕೊಳ್ಳುವಷ್ಟರಲಿ ಮಾಯವಾಗಿ, ಇನ್ಯಾವತ್ತೋ ತಿಂಗಳು, ವರುಷ ಕಳೆದ ಮೇಲೆ ಆಕಸ್ಮಿಕವಾಗಿ ಆಗಮಿಸಿ, ಮತ್ತಷ್ಟೂ ದಿನಮಾನಗಳ ಅನುಭವದ ಸರಕನ್ನು ಬಿಡಿಸಿ, ರುಚಿಯಾಗಿ ಬಡಿಸಿ, ಪುಷ್ಕಳ ಭೋಜನವನುಣಿಸಿ ಮರೆಯಾಗಿ ಬಿಡುವ ಮಾಯಗಾರ. ಸಾಹಿತ್ಯಲೋಕದ ಅಜಾತಶತ್ರು ಚಿಂತಕ, ಸುಪ್ತಭಾವಗಳಷ್ಟನೂ ಕೇಳುಗರಿಗೆ ಆಪ್ತವಾಗಿ ತಲಪಿಸುವ ತವಕ ತಲ್ಲಣಗಳಾವೃತ ತಂತು, ಬದುಕಿನ ಪಕ್ವತೆಯನುಂಡು ಎಲ್ಲರಿಗೂ ಅಂಥದೇ ವಾಂಛಲ್ಯವ ಧಾರೆಯೆರೆದು ಒಳಿತನ್ನು ಹಾರೈಸಿ, ಒಳಿತನ್ನು ಬಯಸಿ, ರವಷ್ಟೂ ಪ್ರತಿಫಲಾಪೇಕ್ಷೆ ಬಯಸದ ವಾತ್ಸಲ್ಯಮಯೀ ವಿಶಾಲ ಹೃದಯಿ, ಜಗದಂತಃಕರುಣಿ!

ನನ್ನೀ ಮಾತುಗಳು ಹೊಗಳಿಕೆಯಲ್ಲ; ಮುಖಸ್ತುತಿಯೂ ಅಲ್ಲ, ಕಿಂಚಿತ್ತೂ ಉತ್ಪ್ರೇಕ್ಷೆ ಇರದ ಮೇಲಿನ ಮೆಚ್ಚುಗೆಗೆ ವಾರಸುದಾರನಾದ ಸತ್ಯಣ್ಣ ಬರೆದ ಲಲಿತ ಪ್ರಬಂಧಗಳಲ್ಲಿ ಮೇಲಿನೆಲ್ಲವೂ ಕಂಡೂ ಕಾಣದಂತಿವೆ. ತಾನು ಕಂಡುಂಡ ಬದುಕಿನ ವ್ಯಾಖ್ಯಾನವಿದೆ. ಬಾಲ್ಯಕಾಲದ ಚೇಷ್ಟೆಗಳು, ಕಲ್ಪಿತಗಳು, ಮುಗ್ಧತೆಯಿಂದ ಹುಟ್ಟಿದ ಆಲೋಚನೆಗಳು, ಜೀಪಪರ ಸಂವೇದನೆಗಳು, ತವಕ ತಹತಹಗಳು, ತನ್ನ ಕಣ್ಣಿಗೆ ಕಂಡ ಒಳಿತುಗಳು ಎಲ್ಲವೂ ಸಮರಸವಾಗಿ ಅಭಿವ್ಯಕ್ತವಾಗಿವೆ. ಸ್ವಾನುಭವದ ಸಾಮಗ್ರಿ ಇಲ್ಲೆಲ್ಲ ಕೈ ಹಿಡಿದು ನಡೆಸಿವೆ. ಒಂದು ಬಗೆಯ ಲಾಲಿತ್ಯ, ವಸ್ತು ವೈವಿಧ್ಯ ಎರಡೂ ಜೊತೆಯಾಗಿ ನಡೆದು ಜೋಕಾಲಿಯಾಡಿವೆ. ಹಾಗಾಗಿಯೇ ಈ ಲಲಿತ ಪ್ರಬಂಧಗಳು ಸತ್ಯನ ವ್ಯಕ್ತಿತ್ವದಷ್ಟೇ ಸಹಜ, ಸರಳ ಹಾಗೂ ಸೃಜನಶೀಲ. ಆತ್ಮಕಥನಾತ್ಮಕ ಗುಣವಿರುವುದೇ ಈ ಪ್ರಬಂಧಗಳ ಮೇಲ್ಮೈ ಲಕ್ಷಣ; ದಟ್ಟ ನೆನಪುಗಳ ಪಾಂಗಿತ ವಿವರಗಳೇ ಪುಷ್ಟ ಅನುಭವಗಳನ್ನು ಸಿಂಗರಿಸಿದ ಪ್ರಾಂಗಣ! ತಾನು ಬೆಳೆವ ಪರಿಸರದಲ್ಲಿ ಸಿಕ್ಕ, ಎದುರಾದ, ಎದುರುಗೊಂಡ ಜನಮನವನ್ನು ಕಿಂಚಿತ್ತೂ ಲೋಪವೆನಿಸದ ರೀತಿಯಲ್ಲಿ ಕಟ್ಟಿ ಕೊಟ್ಟ ಚಿತ್ರಣ. ಹಾಗೆ ಚಿತ್ರಿಸುವಲ್ಲಿ ನಿರ್ಭಿಡೆಯಿದೆ, ನಿರ್ದಾಕ್ಷಿಣ್ಯವಿದೆ, ನಿಸ್ಸಂಕೋಚವಿದೆ, ಕೇವಲ ಕಪ್ಪು ಬಿಳುಪನ್ನಷ್ಟೇ ಕಾಣಿಸದೆ ಪ್ರಸಂಗಗಳ ಎಲ್ಲ ಆಯಾಮಗಳೂ ವರ್ಣರಂಜಿತವಾಗಿ ಎದುರುಗೊಳ್ಳುತ್ತವೆ. ಬದುಕಿನಲ್ಲಿ ಬರುವ ಎಲ್ಲ ಒಳಿತು-ಕೆಡುಕುಗಳೂ ಇವೆ. ಮನುಷ್ಯ ಸಹಜವಾದ ವಾಂಛೆ, ಕನಸು, ಕ್ಷೋಭೆ, ಭ್ರಮೆ, ಕರುಣ, ಮರಣ, ಅಲ್ಪತೆ, ಸ್ವಲ್ಪತೆ, ಸಂಭ್ರಮ, ಸಡಗರ, ಹಿರಿಯರ ಸ್ವಭಾವ, ಕಿರಿಯರ ರೋಷಾವೇಶ, ಅಕ್ಕಪಕ್ಕದವರ ಹವ್ಯಾಸ, ಸಹಾಧ್ಯಾಯಿಗಳ ಸಿಟ್ಟು, ಸೆಡವು, ನೆರೆಹೊರೆಯ ಮಧುರ ಬಾಂಧವ್ಯ, ವೃತ್ತಿ ಬದುಕಿನ ಹಾಸ್ಯ-ಲಾಸ್ಯ, ಸಹಾಯ ಮಾಡಲು ಹೋಗಿದ್ದರ ಫಜೀತಿಗಳು, ವ್ಯಕ್ತಿ ಸಂಬಂಧಗಳ ಘನತೆ, ನಾಟಕದ ಮೇಷ್ಟ್ರಿಂದ ಬಯ್ಯಿಸಿಕೊಂಡದ್ದು, ಬಡತನದಲ್ಲೂ ಒಪ್ಪ ಓರಣ ಹೀಗೆ ಈ ಪ್ರಬಂಧಗಳ ತುಂಬ ಜೀವಪರ ಕಾಳಜಿ ಮತ್ತು ಜೀವೋನ್ಮಾದಗಳು ಪುಟ ಪುಟಗಳಲ್ಲೂ ಹೃದಯ ಬಡಿತದಂತೆ ಮಿಡಿದಿವೆ. ಅಂಥದೇ ಸಹೃದಯನಿಂದ ನೇವರಿಸಿಕೊಳ್ಳಲು ಕಾಯುತ್ತಿರುವಂತಿವೆ!

ನೆನಪು, ಅನುಭವ, ಪ್ರಸ್ತಾಪಿತ ವಿಷಯಾವಲೋಕನ, ಅಪರೂಪವೆನಿಸುವ ವಿಶಿಷ್ಟ ಆಯಾಮಗಳ ಚಿತ್ರಣ, ಎಲ್ಲೆಲ್ಲೋ ಅಲೆದಾಡಿ ಮತ್ತೆ ಮುಖ್ಯ ವಿಷಯಕ್ಕೆ ದಾಪುಗಾಲಿಡುವ ಮನೋಲಹರಿ, ಹಿತಮಿತ ಮೃದು ಭಾಷಾಶೈಲಿ, ತನ್ನೊಳಗಿನೆಲ್ಲವನೂ ತೆರೆದು ತೋರುವ ಪಾರದರ್ಶಕತೆ, ಅನುಭವ ವಿಶ್ಲೇಷಣೆಯಲ್ಲಿರುವ ಪ್ರಾಮಾಣಿಕತೆ, ಪ್ರೌಢಾವಸ್ಥೆಯಲಿ ನಿಂತು ಬಾಲ್ಯ-ಯೌವನಗಳ ದಿನವನ್ನು ಹಿಂದಿರುಗಿ ನೋಡಿದ ಮುಗ್ಧ ಬೆರಗು, ಅಲ್ಲಲ್ಲಿ ಪಶ್ಚಾತ್ತಾಪ, ಆಗನಿಸಿದ್ದನ್ನು ಈಗನಿಸುತಿರುವಂತೆ ಹೇಳುವ ಆರ್ದ್ರತೆ, ಅಲ್ಲಲ್ಲಿ ಕಂಡರಿಸುವ ಗಾದೆ ಮಾತುಗಳ, ಕವಿನುಡಿಗಳ ಔಚಿತ್ಯಪೂರ್ಣ ಬಳಕೆ- ಇಲ್ಲಿನ ಪ್ರಬಂಧಗಳಲ್ಲಿ ಹಾಸು ಹೊಕ್ಕಾಗಿವೆ. ಇವೆಲ್ಲವೂ ಉತ್ತಮ ಪ್ರಬಂಧದ ಲಕ್ಷಣಗಳೇ ಆಗಿವೆ. 

ಹತ್ತಾರು ವಿಭಿನ್ನ ಮತ್ತು ವಿಚಿತ್ರ ವ್ಯಕ್ತಿತ್ವಗಳನ್ನು ಸಮೀಪದಿಂದ ಕಂಡು, ಅವರೊಡನಾಡಿದ ಅನುಭವ ವಿಶೇಷ ಇಲ್ಲಿನ ಹಲವು ಬರೆಹಗಳ ವಸ್ತು. ಯುಗಾದಿಯ ಮೂಲಕ ಕರಿಯನೆಂಬ ಕುರಿಮರಿಯ ನೆನಪು, ಸಾರಿಗೆ ಬರೆ ಹಾಕುತಿದ್ದ ಯಶೋದಕ್ಕನ ಒನಪು, ಅಮ್ಮನ ಮೂಲಕ ಪರಿಚಯವಾದ, ಬದುಕಿಗೆ ಆಸರೆಯಾದ ಸರ್ಕಾರಿ ಆಸ್ಪತ್ರೆ, ಅಪ್ಪ ಕೆಲಸ ಮಾಡಿದ ಅಂಚೆ ಕಚೇರಿ, ಪುಸ್ತಕಗಳೊಡನಾಡಿದ ಮಧುರ ಗಳಿಗೆಗಳು, ನಾನಾರ್ಥಗಳಿಂದಾದ ಅಪಾರ್ಥಗಳ ಅವಘಡ, ಮಣ್ಣನ್ನು ಕುರಿತ ಆಲೋಚನೆಗಳ ಘಮಲು, ನಾಟಕಗಳಲ್ಲಿ ಪಾತ್ರ ಮಾಡಿದ್ದರ ನೆನಪುಗಳ ಮೆರವಣಿಗೆ, ಹಾರಗಳಿಗೆ ಆಹಾರವಾದ ಪ್ರಸಂಗಗಳ ಖದರು, ಓದುವಾಗಿನ ಪಾಸು ಫೇಲುಗಳ ಸಮೃದ್ಧ ವಿವರ- ಆ ಮೂಲಕ ತನ್ನ ಅನುತ್ತೀರ್ಣತೆಯ ಪ್ರಸಂಗಗಳನ್ನು ಮುಚ್ಚುಮರೆಯಿಲ್ಲದೆಯೇ ವಿವರಿಸಿ, ಆ ಮೂಲಕ ಕಟ್ಟಿ ಕೊಡುವ ಆತ್ಮವಿಶ್ವಾಸವೆಂಬ ಹಾದಿ ಬೆಳಕು, ಪೆಪ್ಪರಮೆಂಟೆಂಬ ಸಿಹಿಯನ್ನು ಕುರಿತ ರಸವತ್ತಾದ ವರ್ಣನೆ- ಇವೆಲ್ಲ ಪನ್ನೇರಳೆಯಲ್ಲಿ ಹದಗೊಂಡ ಪಾಕವಾಗಿವೆ. ಮುಖ್ಯವಾಗಿ ಪನ್ನೇರಳೆ ಪ್ರಬಂಧವೇ ಮಾನವತಾವಾದದ ಸೃಷ್ಟಿಶೀಲ ಚೈತನ್ಯವಾಗಿದೆ. ಧಾರ್ಮಿಕ ಸಾಮರಸ್ಯ ಇಂದಿನ ತುರ್ತು ಎಂಬುದನ್ನು ಈ ಪ್ರಬಂಧ ಕಟ್ಟಿಕೊಡುವ ಮಾರ್ಗ ಕಲಾತ್ಮಕ. ಮೈಮೇಲೆ ದೇವರು ಬರಿಸಿಕೊಳ್ಳುತ್ತಿದ್ದ ನಂಜುಂಡಪ್ಪನ ವಿಚಿತ್ರ ವರ್ತನೆ, ಯಶೋದಕ್ಕ ತನ್ನಷ್ಟಕೆ ತಾನೇ ಹಾಡಿಕೊಳ್ಳುತ್ತಿದ್ದುದು, ನಾಯಿಮರಿ-ಕುರಿಮರಿಯನ್ನು ಸಾಕಲು ಹರಸಾಹಸ ಪಟ್ಟಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಇವರ ತಾಯಿಯ ನಿರ್ವಂಚನೆಯ ದುಡಿಮೆ, ಅಲ್ಲಿ ಲಭಿಸುತ್ತಿದ್ದ ಹಾಲು, ಬ್ರೆಡ್ಡುಗಳ ರುಚಿ, ಕೆನೆಮೊಸರಿನೂಟ, ಲೇಬರ್ ವಾರ್ಡಿನ ಸಂಕಟ, ಮೇಲ್ವಿಚಾರಕಿ ಮೇಟ್ರನ್ ತೋರುವ ಕ್ಷಣಚಿತ್ತ-ಕ್ಷಣಪಿತ್ತ ವರ್ತನೆ, ಅಪ್ಪನ ಅಂಚೆ ಇಲಾಖೆಯಲ್ಲಿನ ದುಡಿತ ಮತ್ತದರ ಉಪದ್ವ್ಯಾಪಗಳು, ವಾಚನಾಭಿರುಚಿ ಬೆಳೆಸಿದ ಪುಸ್ತಕ ಸಹವಾಸ, ಸರ್ಕ್ಯುಲೇಟಿಂಗ್ ಲೈಬ್ರರಿ ನಡೆಸಲು ಹೊರಟ ಸಂಕಟ, ಬೂಬಮ್ಮ ಮತ್ತವಳ ಮಕ್ಕಳಾದ ಗುಲ್ಜಾರ್, ಮಮ್ತಾಜ್‌ರ ಬಡತನ, ಆ ಬೇಗೆಯಲ್ಲೂ ಬದುಕನ್ನು ನೇರ್ಪಾಗಿಟ್ಟುಕೊಂಡಿದ್ದ ಘನತೆ, ಅಂಥ ಇಡೀ ಕುಟುಂಬದ ದಾರುಣ ಅಂತ್ಯ, ವಾಸವಿದ್ದ ಬಾಡಿಗೆ ಮನೆಗಳ ವೈವಿಧ್ಯಮಯ ವಿವರಣೆ, ಮಾಲೀಕರಾದ ಶಿವರುದ್ರಪ್ಪನ ಮನೆಯಲ್ಲಿದ್ದ ಮುದುಕಿಯ ಪ್ರಾಣತ್ಯಾಗ…….ಒಂದೇ, ಎರಡೇ, ಹಲವು ನಮೂನೆಯ ವ್ಯಕ್ತಿ ವಿಶಿಷ್ಟ ಸ್ವಭಾವ-ನಡೆವಳಿಕೆಗಳ ಚಿತ್ರಣವು ಕತೆ-ಕಾದಂಬರಿಗಳಿಗಿಂತಲೂ ಮಿಗಿಲಾಗಿ ಬಂದಿದೆ; ಕಥಾ ಪ್ರಸಂಗಗಳಾಗಿ ಕಾಡುತ್ತವೆ, ಮರು ಓದು ಕೇಳುತ್ತವೆ!

ಒಳಿತು ಕೆಡುಕುಗಳಾಚೆಗಿನ ಕಣ್ಣೋಟ ಈ ಪ್ರಬಂಧಕಾರರದ್ದು. ತಾನಂದು ಕೊಂಡದ್ದು, ತನ್ನವರು ಕಟ್ಟಿಕೊಟ್ಟದ್ದು, ತನ್ನ ಅನುಭವಗಳಿಗೆ ದಕ್ಕಿದ ವಿಶೇಷ, ಕನಸು ಕಾಮನೆಗಳು, ಭ್ರಮೆಗಳು, ತುಡಿತಗಳು, ಬಾಲ್ಯಕಾಲದ ರಂಗುರಂಗಿನ ಪ್ರಪಂಚದ ವಿಸ್ಮಯಗಳು ಎಲ್ಲವೂ ಇಲ್ಲಿ ಬಂದಿವೆ. ನಿಪುಣಶಿಲ್ಪಿಯಿಂದ ನಿರ್ಮಾಣವಾಗುವ ಅಚ್ಚುಕಟ್ಟಾದ ವಿಗ್ರಹದಂತೆ ಕಂಗೊಳಿಸಿವೆ. ಇಲ್ಲಿಯ ಪ್ರಬಂಧಗಳ ಅದ್ಭುತ ಗುಣವೆಂದರೆ ತನ್ನನುಭವಕ್ಕೆ ನಿಷ್ಠವಾದ ಆತ್ಮವಂಚನೆಯಿಲ್ಲದ ನಿರಾಲಂಕಾರ ಧಾಟಿ. ಕೆಲವಂತೂ ಸೊಗಸಾದ ಕತೆಗಳಾಗಿ ಬಿಟ್ಟಿರುವ ಪವಾಡ. ಪ್ರಬಂಧಗಳಾಚೆಗೆ ಆಯಾಚಿತವಾಗಿ ಹರಡಿಕೊಂಡ ಕಥಾಂಶಗಳಿಂದಾಗಿ ಹರಟೆಗಳಾಗದೇ ಸುಂದರ ಬರೆಹಗಳಾಗಿವೆ. ‘ಸಾರಿಗೆ ಬರೆ ಹಾಕುತ್ತಿದ್ದ ಯಶೋದಕ್ಕ’ ಎಂಬ ಪ್ರಬಂಧವೊಂದೇ ಸಾಕು, ಸತ್ಯನಾರಾಯಣರಲ್ಲೊಬ್ಬ ಕತೆಗಾರ ಜೀವಂತವಾಗಿದ್ದಾನೆಂಬುದಕ್ಕೆ. ಇಂಥ ಸುಡುವಾಸ್ತವ ಜೀವನ ಚಿತ್ರಣ ಯಾವ ಕತೆಗಿಂತ ಕಡಮೆ? ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿರುವ ಮ್ಯಾಜಿಕ್ ರಿಯಲಿಸಂ (ಮಾಂತ್ರಿಕ ವಾಸ್ತವತೆ) ಅನ್ನು ಒಳಗಣ್ಣಿಂದ ನೋಡಿ ಅರ್ಥೈಸಿಕೊಳ್ಳುವವರಿಗೆ ಬದುಕೇ ಒಂದು ನಿಗೂಢ ಎಂದರಿವಾಗುವುದು. ಇದು ಲೇಖಕರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. 

ಅನುಭವಗಳನ್ನು ಪ್ರಾಮಾಣಿಕವಾಗಿ ದಾಖಲುಗೊಳಿಸುತ್ತಾ ಹೋಗುವಾಗ ಸಹಜವಾಗಿಯೇ ಮೂಡಿ ಬರುವ ಸರಳತೆ ಓದುಗರ ಮನಸ್ಸನ್ನಾಕರ್ಷಿಸುತ್ತದೆ. ಎರಡು ಹಳಿಗಳ ನಡುವೆ ಮುನ್ನುಗ್ಗುವ ರೈಲಿನ ಬಂಡಿಗಳಂತೆ ಚಿಂತನೆ ಮತ್ತು ಭಾವನೆಗಳು ಸಮಪ್ರಮಾಣದಲ್ಲಿ ಬೆರೆತಿವೆ. ಇವೆರಡರ ಪಾಕದಿಂದ ಹೊರಬರುವ ಸಂವೇದನೆ ಇಲ್ಲಿ ಜೀವನಪ್ರೀತಿಯನಾಂತು ಬೆಳೆದ ಬಗೆ ರೋಚಕ. ಬದುಕಿನ ಅನುಭವ ವಿಶೇಷವನ್ನು ಗ್ರಹಿಸುವ ಹಂತದಲ್ಲಿ ಸೂಕ್ಷ್ಮತೆಯಿದ್ದರೆ ಅಭಿವ್ಯಕ್ತಿಯಲ್ಲಿ ನೇರವಂತಿಕೆ ತಂತಾನೇ ಪ್ರಾಪ್ತ. ಇದಕ್ಕೆ ನಿರೂಪಣೆಯ ತಿಳಿಹಾಸ್ಯ ಜೊತೆಗೂಡಿದಾಗಲೇ ಕಲೆ ಅರಳುವುದು. ಹಾಗಾಗಿ ಪನ್ನೇರಳೆಯಲ್ಲಿ ಸಮವಾಗಿ ಬೆರೆತಿರುವ ಹುಳಿ, ಸಿಹಿ ಮತ್ತು ಒಗರಿನಂತೆ ಇಲ್ಲಿಯ ಪ್ರಬಂಧಗಳ ವಸ್ತು ವೈವಿಧ್ಯ. ಬಿಡಿಯಾಗಿದ್ದೂ ಇಡಿಯಾಗಿರುವ ಸಮೃದ್ಧ ಸಾಂಗತ್ಯ. ‘ದೃಷ್ಟಿಯಂತೆ ಸೃಷ್ಟಿ’ ಎಂಬ ಮಾತಿನಂತೆ ಪ್ರಬಂಧಕಾರರ ಜೀವನ ಧೋರಣೆಯನ್ನು ಇಲ್ಲಿಯ ಬರೆಹಗಳು ಪ್ರತಿಬಿಂಬಿಸಿವೆ. ವ್ಯಕ್ತಿತ್ವ ಮತ್ತು ಬರೆಹಗಳೆರಡೂ ಒಂದಾಗಿ ಬದುಕಿನ ತಾತ್ತ್ವಿಕತೆಯನ್ನು ಕಟ್ಟಿಕೊಡುವ ಹಂತದಲ್ಲಿ ಲಲಿತ ಪ್ರಬಂಧಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿಯೇ ಇಂಥ ನಿರಾಡಂಬರ ನಿರೂಪಣೆಯು ಮತ್ತೊಂದು ಮಗ್ಗುಲಲ್ಲಿ ಆತ್ಮಕತೆಯೇ ಆಗಿರುವುದು.

ಪನ್ನೀರಿನಲ್ಲಿ ಅದ್ದಿದ ಕರವಸ್ತ್ರವೊಂದು ತಾನು ಒಣಗಿದ ಮೇಲೂ ಸುಗಂಧ ಸೂಸುವಂತೆ ಇಲ್ಲಿನ ಪ್ರಬಂಧಗಳು. ಓದಿದ ಮೇಲೂ ನಮ್ಮನ್ನು ಕಾಡುತ್ತವೆ, ಮತ್ತೆ ಮತ್ತೆ ಚಿತ್ರಿತವಾದ ನಿಜ ಪಾತ್ರಗಳತ್ತ ಮನಸು ಮೆಲುಕಾಡುತ್ತದೆ. ಒಂದು ಸುಂದರ, ಸಾಂಸ್ಕೃತಿಕ ಮನಸ್ಥಿತಿಯೊಂದು ಬದುಕನ್ನು ಆರೋಗ್ಯಕರವಾಗಿ ನೋಡಿದ ಪಕ್ವದೃಷ್ಟಿ ನಮ್ಮ ಮೆಚ್ಚುಗೆಗೆ ಪಾತ್ರವಾಗುತ್ತದೆ. ಬಿಡಿ ಬಿಡಿ ಬರೆಹಗಳು ಒಂದಾಗಿ ಕೃತಿಯ ‘ಪ್ರಬಂಧ ಧ್ವನಿ’ ಪನ್ನೇರಳೆಯ ಚೆಲುವು ರುಚಿಗಳಂತೆ ನಮ್ಮನ್ನಾಕರ್ಷಿಸುತ್ತದೆ. ಬಿಡಿ ಹೂಗಳಿಂದ ಕಟ್ಟಿದ ಹೂಮಾಲೆಯಂತೆ, ಬಿಡಿಮುತ್ತುಗಳಿಂದ ಹೊಳೆವ ಮುತ್ತಿನ ಹಾರದಂತೆ, ಹಿನ್ನೆಲೆ ವಾದ್ಯಗಳಿಂದ ಇಂಪಾಗುವ ಗಾಯನದಂತೆ ಈ ಪ್ರಬಂಧಗಳು ಸಾಮಾಜಿಕ ಸಾಮರಸ್ಯವನ್ನೂ ಮನುಷ್ಯ ಸಂಬಂಧಗಳ ಹಿರಿಮೆಯನ್ನೂ ಸಾರುತ್ತವೆ. ನಡೆನುಡಿಯೊಳೊಂದಾಗಿ ಸಾಗುವ ಸತ್ಯನ ಮಾರ್ಗ ಇಲ್ಲಿನ ಬರೆಹಗಳಲ್ಲಿ ಇನ್ನಷ್ಟು ಋಜುವಾತಿಗೆ ಸಾಕ್ಷಿಯಾಗಿದೆ. ಶ್ರೀಯುತರಿಂದ ಇನ್ನೂ ಹೆಚ್ಚಿನ ಇಂಥ ಕಮನೀಯ ಪ್ರಬಂಧಗಳು ಮೂಡಿ ಬರಲಿ ಎಂದು ಸಹೃದಯೀ ಓದುಗನಾಗಿ ನಾನು ಹಾರೈಸುವೆ. 

-ಡಾ. ಹೆಚ್‌ ಎನ್‌ ಮಂಜುರಾಜ್‌

ಪನ್ನೇರಳೆ (ಲಲಿತ ಪ್ರಬಂಧಗಳು)

ಡಾ. ಎಚ್ ಎಸ್  ಸತ್ಯನಾರಾಯಣ

ಅಲಂಪು ಪ್ರಕಾಶನ, ಮಾಲೂರು, ಕೋಲಾರ ಜಿಲ್ಲೆ         

ಮೊದಲ ಮುದ್ರಣ: 2022

ಪುಟಗಳು: 109 + 10

ಬೆಲೆ: ರೂ. 120

ಪ್ರತಿಗಳಿಗಾಗಿ ಸಂಪರ್ಕಿಸಿ:


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x