ಚುನಾವಣೆ ಬಂತು ಚುನಾವಣೆ: ಡಾ.ವೃಂದಾ ಸಂಗಮ್

“ಮೇಡಂ, ನಿಮಗೆ ಬಂತಾ” ಅನ್ನುವ ಪ್ರಶ್ನೆ ಸಹೋದ್ಯೋಗಿಗಳಿಂದ ಬಂದರೆ, “ಛೇ ಛೇ ಇದೆಂಥಾ ಅಸಹ್ಯ,” ಎಂದು ಕೊಳ್ಳಬೇಡಿ. ಇದು ಚುನಾವಣೆ ಸಮಯದಲ್ಲಿ ಸರ್ಕಾರಿ ನೌಕರರ ಅತೀ ಸಾಮಾನ್ಯ ಪ್ರಶ್ನೆ. ನಿಮ್ಮನ್ನೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದಾರೆಯೇ, ಯಾವ ಮತಕ್ಷೇತ್ರ ಎಂಬ ನಿಯೋಜನಾ ಆದೇಶ ನಿಮಗೆ ಬಂತಾ ಎಂಬ ಕುಶಲ ವಿಚಾರಣೆ ಅಷ್ಟೇ ಇದು.

 ಇನ್ನೇನು ಚುನಾವಣೆ, ಮುಂದಿನ ವರುಷ ಎಂದಾಗಲೇ, ಈ ಚುನಾವಣೆಯ ಬಿಸಿ ಸರ್ಕಾರಿ ನೌಕರರಿಗೆ ತಟ್ಟುತ್ತದೆ. ಮತದಾರರಿಗೆ ಚುನಾವಣೆ ಅಂದರೆ, ಒಂದು ದಿನ, ಅದೂ ಮತದಾನ ಮಾಡುವ ಸಮಯದಲ್ಲಿ ಮಾತ್ರ, ಸ್ವಲ್ಪ ಹೆಚ್ಚೆಂದರೆ, ಅದು, ಮತ ಎಣಿಕೆಯ ಸ್ವಲ್ಪ ಕುತೂಹಲ ಮಾತ್ರವೇ. ಅದು ಕೆಲವು ದಿನಗಳ ಕಾಲದ ಹಬ್ಬ, ಹೆಚ್ಚೆಂದರೆ ಅದು ಮತದಾನದ ದಿನದಿಂದ, ಸರ್ಕಾರ ರಚನೆಯವರೆಗಿನ ನವರಾತ್ರಿ ಹಬ್ಬ. ಆದರೆ, ಸರ್ಕಾರಿ ನೌಕರರಿಗೆ, ಅದು ಕೆಲವರಿಗೆ ವಾರ್ಷಿಕೋತ್ಸವ, ಅಥವಾ ಒಂದು ವರ್ಷದ ಕಾರ್ಯ, ಇನ್ನು ಕೆಲವರಿಗೆ ಚಾತುರ್ಮಾಸ್ಯ, ಅಂದರೆ, ನಾಲ್ಕು ತಿಂಗಳುಗಳ ಕಾರ್ಯ, ಎಲ್ಲೋ ಕೆಲವರಿಗೆ ಅದು ತ್ರಿರಾತ್ರೋತ್ಸವ, ಅಂದರೆ, ಚುನಾವಣಾ ಕಾರ್ಯದ ಮೂರು ದಿನದ ವಿಶೇಷ ಕಾರ್ಯ.

ಈ ವಾರ್ಷಿಕೋತ್ಸವ ಎಂದರೆ. ಚುನಾವಣಾ ಕಾರ್ಯ ಪ್ರಾರಂಭವಾಗುವುದು, ಮತದಾರರ ಪಟ್ಟಿಯ ಪರಿಷ್ಕರಣೆಯಿಂದ, ಸತ್ತವರ, ಸ್ಥಾನ ಪಲ್ಲಟವಾದವರ ಹೆಸರನ್ನು ಪಟ್ಟಿಯಿಂದ ಕಿತ್ತೆಸೆದು, ಹೊಸದಾಗಿ ಕೆಲವು ಹೆಸರನ್ನು ಸೇರಿಸಬೇಕು ಇದೆಲ್ಲ ವಾರ್ಷಿಕೋತ್ಸವದ ಸಂಭ್ರಮ. ನಂತರದಲ್ಲಿ, ಮತದಾರರ ಯಾದಿ ತಯಾರಿಕೆ. ಚುನಾವಣಾ ನಿಯಮಗಳು, ಚುನಾವಣಾ ಕಾರ್ಯಕ್ಕೆ ತಯಾರಿ, ಮತಗಟ್ಟೆ ಸ್ಥಳ ನಿರ್ಧಾರ, ಇವೆಲ್ಲವುಗಳು ಚಾತುರ್ಮಾಸ್ಯದ ಕೆಲಸಗಳು. ಇದೆಲ್ಲಾ ಏನಿದ್ದರೂ ಸರ್ವರಿಗೂ ಅಲ್ಲ, ಯೋಗ್ಯತಾನುಸಾರದ ಸೇವೆ. ಆದರೆ ಸರ್ವಸೇವೆಯಂದರೆ ಚುನಾವಣಾ ಕಾರ್ಯದ ಸೇವೆಯೇ. ಇದು ತ್ರಿರಾತ್ರೋತ್ಸವ.

ಸರ್ಕಾರಿ ಸೇವೆಯಂದರೆ, ಹಗಲೂ ರಾತ್ರಿಯೂ ಸರ್ಕಾರಿ ನೌಕರನೇ ಎಂಬುದನ್ನು ನಿರ್ಧಾರವಾಗಿ, ಇಪ್ಪತ್ನಾಲ್ಕು ಗಂಟೆಯೂ ಸೇವೆಯನ್ನು ಬಯಸುವ ಕಾರ್ಯವೇ ಚುನಾವಣಾ ಕಾರ್ಯ. ಇಲ್ಲಿ, ಅದ್ಯಾರು ನಿಯಮಿಸಿದ್ದಾರೋ ತಿಳಿಯದು. ಚುನಾವಣೆಯ ಕಾರ್ಯಕ್ಕೆ ನೌಕರರನ್ನು ಅವರವರ ಸ್ವಂತ ಮತ ಕ್ಷೇತ್ರದಿಂದ ದೂರದಲ್ಲಿಯೇ ಚುನಾವಣೆ ಕರ್ತವ್ಯಕ್ಕೆ ನಿಯಮಿಸಬೇಕೆಂದು. ಅತ್ಯಂತ ಕಟ್ಟುನಿಟ್ಟಾಗಿ, ಈ ನಿಯಮವನ್ನು ಪಾಲಿಸುತ್ತಾರೆ. ಇದೇ ಕಾರಣಕ್ಕಾಗಿಯೇ, ತಮ್ಮನ್ನು ಚುನಾವಣಾ ಕರ್ತವ್ಯಕ್ಕೆನಿಯೋಜಿಸಿದ್ದಾರೆಂದು ತಿಳಿದೊಡನೆಯೇ, ತಾವು ಬಿದ್ದೇವೆಂದು ತಿಳಿದು, ಬಿದ್ದ ಪೆಟ್ಟಿಗೆ ಅಳುವ ಮೊದಲು, ಇನ್ನುಳಿದವರು ಬಿದ್ದಿದ್ದಾರೋ ಇಲ್ಲವೋ ಎಂದು ತಿಳಿಯುವ ಮಕ್ಕಳಂತೆ, “ಮೇಡಂ, ನಿಮಗೆ ಬಂತಾ” ಅನ್ನುವ ಪ್ರಶ್ನೆ ಸಹೋದ್ಯೋಗಿಗಳಿಗೆ ಕೇಳುತ್ತಾರೆ. ಮುಂದಿನ ಪ್ರಶ್ನೆ “ಎಲ್ಲಿ, ಯಾವ ಭಾಗ” ಎಂಬುದು ತುಸು ಹತ್ತಿರ ಎಂದರೆ, ಓ ನಿಮಗೆ ಹತ್ತಿರವೇ ನೋಡಿ, ನನಗೆ … ಎಂಬ ಮಾತುಗಳು ಸಾಮಾನ್ಯವೇ. ನಂತರ ಅದಕ್ಕೂ ಮಾನಸಿಕವಾಗಿ ಹೊಂದಿಸಿಕೊಂಡು, ಒಂದು ದಿನದ ತರಬೇತಿ ಪಡೆದರೆ, ಅಲ್ಲಿಗೆ ಯುದ್ಧದ ತಯಾರಿ ಮುಗಿಯಿತು. ಇನ್ನೇನಿದ್ದರೂ ಎರಡು ದಿನದ ಯುದ್ಧ ಮಾತ್ರ.

ಚುನಾವಣಾ ಕರ್ತವ್ಯವೆಂದರೆ, ಸರ್ಕಾರಿ ಸೇವೆಯಲ್ಲಿನ ಒಂದು ಭಾಗ ಮಾತ್ರ. ಅದಕ್ಯಾಕೆ ಇಷ್ಟು ಅಂತೀರೋ, ಅಲ್ಲಿ ಎರಡು ದಿನಗಳಲ್ಲಿ, ಎರಡು ಜನ್ಮಕ್ಕಾಗುವಷ್ಟು ಅನುಭವವಾಗಿರುತ್ತದೆ. ಮುಂದೊಮ್ಮೆ ಅದು ಹಾಸ್ಯವಾಗಿಯೋ, ನೆನಪಾಗಿಯೋ ಉಳಿದರೂ, ಆ ಕ್ಷಣದಲ್ಲಿ ಮಾತ್ರ, ಚುನಾವಣೆಯಂಬುದು ತುಸು ಭಯಾನಕ ಅನುಭವವೇ. ನಾಲ್ಕು ಅಥವಾ ಐದು ಜನರ ತಂಡದಲ್ಲಿ ಕಡಿಮೆಯಂದರೂ ಇಬ್ಬರು ಮಹಿಳೆಯರಿರುತ್ತಾರೆ. ಈ ಮಹಿಳೆಯರು, ಹೇಗಾದರೂ ಮಾಡಿ ರಾತ್ರಿ ಮನೆಗೆ ಹೋಗಲು ಅನುಮತಿ ಕೋರುವ ವಿಚಾರದಲ್ಲಿರುತ್ತಾರೆ. ಪಿ ಆರ್ ಓ ಇವರನ್ನು ಮನೆಗೆ ಕಳಿಸಿದರೆ, ನಾಳೆ ನಿಗದಿತ ಸಮಯದೊಳಗೆ ಬರುತ್ತಾರೆಯೇ ಎಂಬ ಸಂಶಯದಲ್ಲಿರುತ್ತಾರೆ. ಹಗ್ಗ ಜಗ್ಗಾಟದಲ್ಲಿ ಯಾರು ಬಲಿಷ್ಟರು ಎಂದು ಅಂದೇ ನಿರ್ದಾರವಾಗುತ್ತದೆ. ತುಸು ಬೇಗ ಅಥವಾ ತುಸು ನಿಧಾನವಾಗಿ ಅಷ್ಟೇ ಬದಲಾವಣೆ.

ಹಾಗಾಗಿ ಮೊದಲ ತೊಂದರೆಯಂದರೆ, ಚುನಾವಣೆಯ ಹಿಂದಿನ ದಿನದ್ದು, ರಾತ್ರಿ ಕಳೆಯೋದು. ಆದರೆ, ಚುನಾವಣೆಯ ಕರ್ತವ್ಯದಲ್ಲಿ ಅನೇಕ ಅವಾಂತರಗಳಂತೂ ಆಗೇ ಆಗುತ್ತವೆ. ಪ್ರತಿ ಬಾರಿಯೂ ಒಂದೊಂದು ಹೊಸ ರೀತಿಯ ಅವಾಂತರವೇ ಆಗುತ್ತದೆ. ಚುನಾವಣೆಯ ಹಿಂದಿನ ದಿನ ಬೆಳಿಗ್ಗೆ ಮೊದಲು ಮತಗಟ್ಟೆ ಯಾವುದೆಂದು ನೋಡಿಕೊಳ್ಳಬೇಕು, ನಂತರ ಆ ಮತಗಟ್ಟೆಯಲ್ಲಿ ನಮ್ಮ ಜೊತೆಗಾರರು ಯಾರು, ತಂಡ ಯಾವುದು, ನಂತರ ರೂಟ್ ಯಾವುದು ಹುಡುಕಿಕೊಂಡು ನಂತರ ಚುನಾವಣೆಗೆ ಅವಶ್ಯವಿರುವ ಸಾಮಗ್ರಿಗಳ ಸಂಗ್ರಹ ಕಾರ್ಯ ಮಾಡಿಕೊಳ್ಳಬೇಕು. ಅಷ್ಟೊತ್ತಿಗೆ ಊಟದ ಸಿದ್ಧತೆ ಇರುತ್ತದೆ. ನಂತರ ನಮ್ಮ ನಿಜವಾದ ಕಾರ್ಯ ಶುರು.

ಹೆಚ್ಚು ಕಡಿಮೆ ಎಂಟು ಮತಗಟ್ಟೆಗಳಿಗೆ ಒಂದೊಂದು ರೂಟು, ಬಸ್ಸಿನಲ್ಲಿ ಹೊರಟಾಗ, ಒಂದೊಂದೇ ಕಥೆ ಶುರು. ನಮ್ಮ ರೂಟ್ ಆಫೀಸರ್ ನಮ್ಮನ್ನ ಒಂದು ಕಡೆ ಇಳಿಸಿ, ಮುಂದೆ ಹೊರಟರೆ, ಹೊರಲಾರದ ಭಾರ ಹೊತ್ತು, ಕನಿಷ್ಟ ಒಂದರ್ಧ ಕಿ ಮೀ ಯಾದರು ನಡೆಯಬೇಕು. ನಮ್ಮ ಮತಗಟ್ಟೆಗೆ ಸೇರಲು, ನಿಜವಾಗಿ ನೋಡಿದರೆ, ಆ ದಿನ ದೇಶದ ಭಾರ ಸೈನಿಕರು ಹೊತ್ತಿರುವುದಿಲ್ಲ, ನಮ್ಮ ತಲೆಯ ಮೇಲಿರುತ್ತದೆ. ನಮ್ಮ ಮತಗಟ್ಟೆ ಎಂದರೆ. ಸಾಮಾನ್ಯವಾಗಿ ಅದೊಂದು ಶಾಲೆಯಾಗಿರುತ್ತದಷ್ಟೆ. ಮೊನ್ನೆ ನಮ್ಮ ಚುನಾವಣೆ ಒಂದು ಲೋವರ್ ಪ್ರೈಮರಿ ಶಾಲೆಯಲ್ಲಿ, ಈಗ ಬೇಸಿಗೆ, ಶಾಲೆಗೆ ಇದ್ದ ಒಂದೇ ಕೊಠಡಿಯನ್ನು, ಎರಡೋ ಮೂರೋ ನಾಲ್ಕೋ ಬೆಳೆಸಲೆಂದು, ಇರುವ ಒಂದೇ ಕೊಠಡಿಯ ತುಂಬಾ ಸಿಮೆಂಟ್ ಚೀಲಗಳನ್ನು ತುಂಬಿದ್ದಾರೆ. ಹಿಂದಿನ ದಿನವೇ ಎಲ್ಲಾ ಮತಗಟ್ಟೆ ನೋಡಿ ಚೆಕ್ ಮಾಡಿದ ಆಫೀಸರ್, ಸಿಮೆಂಟ್ ಚೀಲಗಳನ್ನು ಕೊನೆಗೆ ಖಾಲಿ ಮಾಡಿಸೋಣ ಎಂದು ಮುಂದಿನ ಮತಗಟ್ಟೆಗೆ ಹೋಗಿದ್ದವರು, ಈ ಚೀಲಗಳನ್ನು ಖಾಲಿ ಮಾಡಿಸುವುದನ್ನೇ ಮರೆತು ಬಿಟ್ಟಿರಬೇಕು. ಚೀಲಗಳು ಹಾಗೆಯೆ ಉಳಿದಿದ್ದವು. ಇನ್ನೇನು ಮಾಡುವುದು. ಹಾಗೂ ಹೀಗೂ ಇರುವಷ್ಟು ಜಾಗದಲ್ಲಿಯೇ ಒಂದು ಮತಗಟ್ಟೆಯನ್ನು ತಯಾರು ಮಾಡಿದೆವು.

ಆಗ ಇಬ್ಬರು ಅತಿಥಿಗಳು ಬಂದರು. ತಮ್ಮ ಪುಟ್ಟ ಮೂತಿ ತೋರಿಸುತ್ತ ಎರಡು ಹಾವಿನ ಮರಿಗಳು. ಮರುದಿನ ಎಲೆಕ್ಷನ್ ಮುಗಿಯುವವರೆಗೂ, ನಾವು ಹೇಗೆ ಕಾಲಕಳೆದೆವೆಂದು ನಿಮಗೆ ಹೇಗೆ ಹೇಳಲಿ. ಇದ್ದಿರೋವು ಎರಡೇ ಹಾವಿನ ಮರಿಗಳೇ ಅಥವಾ………. ನಾವಂತೂ ಎಣಿಸಲಿಲ್ಲ.

ಹೆಚ್ಚು ಕಡಿಮೆ, ಚುನಾವಣೆ ಅಂದಾಗೆಲ್ಲಾ, ಹಿಂದಿನ ದಿನ ದೊಡ್ಡದಾದ ಮಳೆ ಬರಬೇಕು ಹಾಗೂ ಕರೆಂಟು ಹೋಗಬೇಕು ಎಂಬ ಅಲಿಖಿತ ನಿಯಮವಿದೆ. ಹಾಗೆಯೇ ಆಯಿತು. ಸಿಕ್ಕಾಪಟ್ಟೆ ಮಳೆ. ನಮ್ಮ ಮತಗಟ್ಟೆ ಯಥಾ ಪ್ರಕಾರ ಶಾಲೆಯಲ್ಲಿ. ಆ ಶಾಲೆಯಿರುವುದು ಒಂದು ಕೆರೆಯಲ್ಲಿ ಸಣ್ಣ ಮಳೆಗೂ ನೀರು ತುಂಬಿಕೊಳ್ಳುವ ಕೊಠಡಿ, ಇದೀಗ ಮೊಳಕಾಲವರೆಗೂ ನೀರು. ಬೆಳಗಿನವರೆಗೂ ಕುರ್ಚಿಯ ಮೇಲೆಯೇ ನಿಂತಿದ್ದೆವು, ಬೆಳಗಾದ ಮೇಲೆ. ನೀರನ್ನು ಹೊರಗೆ ತಳ್ಳಿ ಕೊಠಡಿಯನ್ನು ಖಾಲಿ ಮಾಡಿದ ಮೇಲೆಯೇ ಕೂಡೋದಕ್ಕಾಯ್ತು.

ಬೆಂಗಳೂರಿನ ಹೊರವಲಯದಲ್ಲಿನ ಒಂದು ಚಿಕ್ಕ ಶಾಲೆ. ಸುತ್ತ ಮುತ್ತ ಮನೆಗಳಿಗಿಂತ ರಾಗಿಯ ಹೊಲಗಳೇ ಹೆಚ್ಚು. ಊಟ ತಿಂಡಿಯಂತೂ ಇಲ್ಲವೇ ಇಲ್ಲ. ನೈಸರ್ಗಿಕ ಕರೆಗಳನ್ನು ತೀರಿಸಿಕೊಳ್ಳುವುದಕ್ಕೂ ತೊಂದರೆ, ರಾತ್ರಿಯನ್ಜು ಕೂಡಾ ನಾಲ್ವರೂ ಒಂದೊಂದು ಮೂಲೆಯಲ್ಲಿ ಕುಳಿತೇ ಕಳೆದಿದ್ದೆವು.

ಮತ್ತೊಮ್ಮೆ ಚುನಾವಣೆಯ ಕಾರ್ಯ ಬಂದಿರುವ ಮತಗಟ್ಟೆ ಬೆಂಗಳೂರಿನ ಹೃದಯ ಭಾಗದಲ್ಲಿ, ಪಿಂಕ್ ಮತಗಟ್ಟೆ. ನಡುರಾತ್ರಿ ಬಂದ ಒಬ್ಬ ಪ್ರಸಿದ್ಧ ಮಂತ್ರಿಗಳು, ಅವರು ಅಲ್ಲಿಯ ಅಭ್ಯರ್ಥಿಗಳು ಬಂದು ತಮ್ಮ ಹಿಂಬಾಲಕರೊಬ್ಬರು ನಿಮ್ಮೊಂದಿಗಿರುತ್ತಾರೆ. ಯಾಕೆಂದರೆ ನೀವೆಲ್ಲ ಮಹಿಳೆಯರೇ ಅಂದರು, ನಾವು ಬಾಯಿ ಮುಚ್ಚಿಕೊಂಡೇ ಇದ್ದೆವು. ಆ ಹಿಂಬಾಲಕರಂತು ಆಯ್ತು ಒಡೆಯಾ, ರಾತ್ರಿ ನಾನಿಲ್ಲೇ ಇರ್ತೇನೆ ಎಂದರು. ಆದರೆ ಆ ಮಂತ್ರಿಗಳು ಹೋದ ಕೂಡಲೇ, ಆ ಹಿಂಬಾಲಕರೂ ಮಾಯ, ನಾವೂ ನಿರಾಳ, ತೊಂದರೆಯಂದರೆ ಅದು ಅಷ್ಟು ಬೇಗ ನಿವಾರಣೆಯಾಗುವುದೇ. ರಾತ್ರಿ ಬಂದು ಒಕ್ಕರಿಸಿಕೊಂಡಿತು. ಹತ್ತೂವರೆಗೆ ಕಂಠಮಟ್ಟ ಕುಡಿದು, ಪ್ರಪಂಚದ ಬಗ್ಗೆ ತನಗಿರುವ ಅಭಿಪ್ರಾಯವನ್ನು ಮುಕ್ತವಾಗಿ ಕೂಗುತ್ತಾ ನಾನಿಲ್ಲೇ ಇರುತ್ತೇನೆ ಎಂದು ಬಂದ ಆ ಹಿಂಬಾಲಕ, ಇದು ಪಿಂಕ್ ಬೂತ್. ನಮ್ಮ ರಕ್ಷಣೆಗೆ ಬಂದವಳು ಒಬ್ಬ ಮಧ್ಯವಯಸ್ಸಿನ ಮಹಿಳಾ ಹೋಮ್ ಗಾರ್ಡ, ಅವಳೋ ಅದ್ಯಾವ ತರಬೇತಿ ಪಡೆದಿದ್ದಳೋ ತಿಳಿಯೆ, ನಮಗಿಂತ ಮೊದಲೇ ಕೊಠಡಿಯೊಳಗೆ ಉತ್ತಮ ಜಾಗವನ್ನು ಹುಡುಕಿ ಮಲಗಿ ಗೊರಕೆ ಹೊಡೆಯುತ್ತಿದ್ದಳು. ಇನ್ನೇನು ಮಾಡುವುದು. ಪುಣ್ಯಕ್ಕೆ ಆತ ಕೊಠಡಿಯ ಒಳಗೇ ಬರಲಿಲ್ಲ. ಹೊರಗೇ ಮಲಗಿದ್ದ. ಮಲಗಿದ್ದನೆಲ್ಲಿ. ಆತನ ಯಕ್ಷಗಾನ ಬಯಲಾಟದ ಕಂದಪದ್ಯಗಳು ಬೆಳಗಿನವರೆಗೂ ಕೇಳಿಸುತ್ತಿದ್ದವು.

ಇದು ರಾತ್ರಿಯ ಅವಸ್ಥೆಯಾದರೆ, ಮರುದಿನದ ಕಥೆಯೇ ಬೇರೇ. ಪರದೆ ಬಿದ್ದೊಡನೇ ಬೀಡಿ ಸೇದುತ್ತಿದ್ದವನು, ಪರಮ ಗುಣ ಪರಿಪೂರ್ಣ ಪರಮಾತ್ಮನೇ ಆಗಿಬಿಡುವಂತೆ, ರಂಗಸ್ಥಳವೇ ಬದಲಾಗಿ ಬಿಡುತ್ತದೆ, ಹಾಗೆಯೇ ಆಗುತ್ತದೆ ಇಲ್ಲಿ ಕೂಡಾ. ಚುನಾವಣೆಯ ದಿನ, ಅದರಲ್ಲೂ ಈ ಮೋಕ್ ಪೋಲಿಂಗ್ ಸಮಯದಲ್ಲಿ ಮುಖ್ಯವಾದವರು, ಅಭ್ಯರ್ಥಿಗಳ ಹಿಂಬಾಲಕರು ಹಾಗೂ ಏಜೆಂಟರು. ಕೆಲವರಂತೂ, “ಮೇಡಮ್ ನೋಡಿ ನಮ್ಮ ಸಾಹೇಬರು ಎರಡು ಬಾರಿ ಎಲೆಕ್ಷನ್ ನಲ್ಲಿ ಸೋತಿದ್ದಾರೆ. ದಯವಿಟ್ಟು, ಈ ಬಾರಿ ಏನಾದರೂ ಸಹಾಯ ಮಾಡಿ, ಇಲ್ಲವಾದರೆ ಇಡೀ ಮನೆಯೇ ಬೀದಿಗೆ ಬರುತ್ತದೆ. ಮಹಾಲಕ್ಷ್ಮಿಯಂತಹ ಅವರ ಮೇಡಂನವರನ್ನು ನೋಡಿದರೆ, ಸಂಕಟವಾಗುತ್ತದೆ ಮೇಡಮ್, ಈ ಬಾರಿ ತುಂಬಾ ಸಾಲ ಮಾಡಿಕೊಂಡಿದ್ದಾರೆ ಮೇಡಮ್” ಎಂದ. ಅದಕ್ಕೆ ನಾನೇನು ಮಾಡಬಹುದೋ ನನ್ನ ಪೆದ್ದು ಬುದ್ಧಿಗೆ ಇದುವರೆಗೂ ಹೊಳೆದಿಲ್ಲ, ಯಾಕೆಂದರೆ ಅವನಿಗೆ ಸಾಲ ಕೊಡುವಷ್ಟಂತೂ ನನ್ನ ಬಳಿ ಹಣವಿಲ್ಲ, ಇನ್ನೇನು ಮಾಡುವುದು, ಸುಮ್ಮನೇ ತುಟಿಯರಳಿಸಿದೆ.

ಇನ್ನು ಕೆಲವು ಏಜಂಟರಂತೂ ತುಂಬ ಸ್ಮಾರ್ಟ ಆಗಿರುತ್ತಾರೆ. ಆಗಾಗ ಹೊರಗಡೆ ಹೋಗುವುದೋ, ಯಾರ್ಯಾರನ್ನೋ ತಾನೇ ಕರೆದುಕೊಂಡು ಬರುವುದೋ, ಬಂದವರೊಂದಿಗೆ ತಾನು ಈ ದಿನ ಈ ಚುನಾವಣೆಯಲ್ಲಿ ತುಂಬಾ ಮುಖ್ಯವಾದ ವ್ಯಕ್ತಿ ಎಂದು ತೋರಿಸುವುದಕ್ಕೋ ಅಥವಾ ಈ ಚುನಾವಣಾ ಸಿಬ್ಬಂದಿಗಳೆಲ್ಲಾ ನನಗೆ ಗೊತ್ತು ಎಂದು ತಿಳಿಸುವುದಕ್ಕೋ, ತಮ್ಮ ಮನೆಯವರು ಅಕ್ಕಪಕ್ಕದವರು, ತಮ್ಮ ರಸ್ತೆಯಿಂದ ಬಂದವರೆಲ್ಲರೆದುರಿಗೆ ತಮ್ಮ ವಿಶೇಷ ಸ್ಥಾನ ತೋರಿಸುವುದಕ್ಕೋ ಒಟ್ಟಿನಲ್ಲಿ ಬಂದವರನ್ನು ನಿಲ್ಲಿಸಿಕೊಂಡು ನಾಲ್ಕು ಮಾತಾಡೋದೊಂದೇ ಅವರ ಇಚ್ಛೆ. ಆದರೆ ಇದರಿಂದ ಮತ ಹಾಕಲು ಬಂದವರ ನೂಕು ನುಗ್ಗಲು ಹೆಚ್ಚಾಗಿ ನಮಗೆ ತೊಂದರೆ ಅಷ್ಟೇ.

ಮತ್ತೆ ಕೆಲವು ಏಜಂಟರಂತೂ ಸುಮ್ಮ ಸುಮ್ಮನೇ ಆ ಮತಗಟ್ಟೆಯಲ್ಲಿ ವೋಟು ಹಾಕುವವರನ್ನು ಬಗ್ಗಿ ಬಗ್ಗಿ ನೋಡುತ್ತಾರೆ. ತಾವು ಕುಳಿತಲ್ಲಿಂದ, ಜನ ಯಾವ ಬಟನ್ ಒತ್ತಿದ್ದಾರೆಂದು ಕಾಣುವುದಿಲ್ಲ, ಅದು ಇವರಿಗೂ ತಿಳಿದಿರುತ್ತದೆ. ಆದರೂ ನಾನು ಗಮನವಿರಿಸಿದ್ದೆ. ಇದು ನನ್ನ ಡ್ಯೂಟಿ ಎಂದೆಲ್ಲಾ ವಿಚಾರ ಮಾಡುವ ದೂರಾಲೋಚನೆಯ ಮಹಾನುಭಾವರು ಅವರು.

ನನ್ನ ಪುಣ್ಯ, ಚುನಾವಣೆಯ ಕಾರ್ಯದಲ್ಲಿ ಯಾವ ಪ್ರೇಮ ಪ್ರಕರಣಗಳ ಅನುಭವವಾಗಿಲ್ಲ. ಚಲನಚಿತ್ರಗಳಲ್ಲಿ, ಎರಡು ಗಂಟೆ ಒಬ್ಬ ಡ್ರೈವರ್ ನೊಂದಿಗೆ ಪ್ರವಾಸ ಹೋದ ಯುವತಿಗೆ, ಆ ಡ್ರೈವರ್ ನೊಂದಿಗೆ ಇಡೀ ಜೀವನ ಕಳೆಯುವಷ್ಟು ನಂಬಿಕೆ ಉಂಟಾಗುತ್ತದೆಯಂತೆ. ಎರಡು ದಿನ ಒಟ್ಟಿಗಿದ್ದ ಸಿಬ್ಬಂದಿಗಳು, ಜೀವನ ಪೂರ್ತಿ ಒಟ್ಟಿಗಿರುವ ನಿರ್ಧಾರ ಯಾರೂ ಮಾಡಿದ್ದು ಕೇಳಿಲ್ಲ. ಮುಂದೆ ಒಂದು ದಿನ ಹೌದಲ್ವಾ ನಾವು ಒಟ್ಟಿಗೇ ಇಲೆಕ್ಷನ್ ಡ್ಯೂಟಿಗೆ ಹೋಗಿದ್ದಿವಿ ಎನ್ನುವಷ್ಟು ನೆನಪು ಉಳಿದಿರುತ್ತದೆಯೇನೋ ಅಷ್ಟೇ.

ನೂರೆಂಟು ಕಾಗದಗಳು, ಹರಿದ ಕಾಗದದ ಲೆಕ್ಕವನ್ನೂ ಬರೆದಿಟ್ಟುಕೊಂಡು, ಹಿಂದಿರುಗಿಸಬೇಕಾದ, ತಲೆತಿನ್ನುವ ಕೆಲಸದ ಭರಾಟೆಯಲ್ಲಿ ಪ್ರೀತಿ ಪ್ರೇಮವೆಂಬ ಮಧುರ ಭಾವಗಳು ಮನದಲ್ಲಿ ಮೂಡುವುದೇ ಇಲ್ಲವೇನೋ. ಅದಕ್ಕೇ ಯಾವ ಚಿತ್ರಗಳಲ್ಲೂ ಈ ನೀರಸ ಚುನಾವಣಾ ಕಾರ್ಯದ ವಿಷಯವೇ ಬಂದಿರುವುದಿಲ್ಲ.

ಇನ್ನು ಚುನಾವಣೆ ಒಮ್ಮೆ ಪ್ರಾರಂಭವಾಯಿತೆಂದರೆ ಮುಗಿಯಿತು, ಊಟ ತಿಂಡಿಯ ನೆನಪೂ ಇರದಷ್ಟು ಗಡಿಬಿಡಿ. ಮೊದಲೆಲ್ಲಾ ಬುರಖಾ ಹಾಕಿಕೊಂಡು ಬಂದ ಮಹಿಳೆಯರನ್ನು ಒಬ್ಬ ಸ್ತ್ರೀ ಪರಿಶೀಲನೆ ಮಾಡುತ್ತಿದ್ದುದುಂಟು. ಈಗೇನೋ ಮಕ್ಕಳು ತಮ್ಮ ಹಿಜಾಭ್ ಧರಿಸದೇ ಹೊರಗಡೆ ಬರಲ್ಲ, ಶಾಲೆಯಲ್ಲಿಯೂ ಹಿಜಾಬ್ ಧರಿಸೋದಕ್ಕೆ ಅವಕಾಶ ಕೊಡಿ ಏನೇನೋ ಕೇಳಿದವರು, ನಾನು ನೋಡಿದಂತೆ ಹೆಚ್ಚಿನ ಇಸ್ಲಾಂ ಧರ್ಮೀಯ ಹದಿಹರೆಯದ ಹೆಣ್ಣು ಮಕ್ಕಳು, ಹಿಂದೂಗಳಂತೆಯೇ ನವನವೀನ ಉಡುಗೆಗಳಲ್ಲಿ ಬಂದಿರುತ್ತಾರೆ. ಇನ್ನು ಕುಟುಂಬದೊಂದಿಗೆ ಬಂದಿರುತ್ತಾರೆ.

ಒಂದೇ ಒಂದು ನನ್ನ ಅದೃಷ್ಟ ಎಂದರೆ. ನಾನು ಚುನಾವಣಾ ಕರ್ತವ್ಯ ನಿರ್ವಹಿಸಿದ ಯಾವುದೇ ಸ್ಥಳದಲ್ಲಿ, ಮತದಾನದಲ್ಲಿ ಯಾವುದೇ ತೊಂದರೆಯಾಗಿಲ್ಲ. ಸಾಮಾನ್ಯವಾಗಿ 65% ನಿಂದ 85% ವರೆಗೆ ಮತದಾನವಾಗಿರುತ್ತದೆಯಾದರೂ, ಒಂದೇ ಒಂದು ಮತ ಹಿಂದುಮುಂದಾಗಿಲ್ಲ. ಎಲ್ಲಿಯೂ ನನ್ನ ಮತವನ್ನು ಯಾರೋ ಹಾಕಿದ್ದಾರೆಂದು ತೊಂದರೆಯಾಗಿಲ್ಲ. ಇವರೇ ಹಿಂದೊಮ್ಮೆ ಬಂದಿದ್ದರು, ಈಗ ಪುನಃ ಬೇರೆಯವರ ಹೆಸರಿನಲ್ಲಿ ಮತ ಹಾಕಲು ಬಂದಿದ್ದಾರೆ ಎಂಬ ತೊಂದರೆಯೂ ಬಂದಿಲ್ಲ.

ನಾವು ಚುನಾವಣೆಯ ಕರ್ತವ್ಯದಲ್ಲಿ ನೂರೆಂಟು ಲೆಕ್ಕ ನೀಡುವುದನ್ನೇ ಹರಡಿ ಕೊಂಡು, ಒಮ್ಮೆ ಮತದಾನದ ಅವಧಿ ಮುಗಿಯಿತೆಂದರೆ, ಅವುಗಳ ಸೀಲ್ ಮಾಡುವ ಕಾರ್ಯದಲ್ಲಿ ಮುಳುಗಿ ಬಿಡುತ್ತೇವೆ. ಆದರೆ, ಒಂದು ವಿಶೇಷವೆಂದರೆ, ನಾವು ತುಂಬ ಬೇಗನೇ ಎಲ್ಲಾ ದಾಖಲೆಗಳನ್ನು ತಯಾರಿಸಿ ಗಂಟು ಮೂಟೆ ಕಟ್ಟಿಟ್ಟುಕೊಂಡರೂ, ಅಥವಾ ತುಂಬಾ ತಡವಾಗಿ ಈ ಕೆಲಸಗಳನ್ನು ಮುಗಿಸಿದರೂ ನಮ್ಮನ್ನು ಅಲ್ಲಿಗೆ ತಂದು ಬಿಟ್ಟ ಬಸ್ಸಿಗಾಗಿ ಕಾಯಲೇ ಬೇಕು. ಹೌದಲ್ಷಾ, ಬಂದ ದಾರಿಗೆ ಸುಂಕವಿಲ್ಲ, ನಮಗೆ ಹಿಂದಿರುಗಿ ಹೋಗಲು ಅವರೇ ಬರಬೇಕು, ನಾನು ಜೀವನದ ದೊಡ್ಡ ಆದರ್ಶವನ್ನೇ ವಿವರಿಸುತ್ತಿದ್ದೇನೆಂದು ತಿಳಿಯಬೇಡಿ ಮತ್ತೆ.

ಅಂತೂ ಇಂತೂ ಪ್ರೀತಿ ಬಂತು ಅಂತ ಚುನಾವಣೆಯಲ್ಲಿ ಯಾರೂ ಹಾಡೋದಿಲ್ಲ ಎಂದು ಹೇಳಿದ್ದರೂ, ಅಂತೂ ಇಂತೂಡಿ ಮಸ್ಟರಿಂಗ್ ಸೆಂಟರ್ ಬಂತು ಅಷ್ಟೇ. ಇಲ್ಲಿ ನಮ್ಮ ಡಿ ಮಸ್ಟರಿಂಗ್ ಸೆಂಟರ್ ಗೆ ಬಂದು ನಾವು ಅಲ್ಲಿ-ನಮಗೆ ನೀಡಿದ್ದ ಸಾಮಗ್ರಿಗಳನ್ನು ಹಿಂದಿರುಗಿಸುವ ಸರದಿಯ ಸಾಲಿನಲ್ಲಿ ನಿಂತು ನೋಡಿದರೆ, ನಾವೆಲ್ಲಾ ಯಾವುದೋ ಗ್ರಹದಿಂದ ಬಂದಂತೆ ಕಾಣುತ್ತಿರುತ್ತೇವೆ. ಅಲ್ಲದೇ, ತಂದ ಸಾಮಗ್ರಿಗಳನ್ನು ಹಿಂದಿರುಗಿಸದೇ ಹೊರಬರಲು ಸಾಧ್ಯವಿಲ್ಲ, ಅದೊಂದು ಮಹಾನ್ ವರ್ತುಲವೇ, ಮತ್ತೊಂದು ವಿಶೇಷಾರ್ಥವೆಂದರೆ. ಬರುವಾಗ ನಮ್ಮೊಂದಿಗೆ ತಂದಿದ್ದನ್ನು ಮಾತ್ರವೇ ಹೊರಗೆ ಕೊಂಡೊಯ್ಯಲು ಸಾಧ್ಯ.

ಅದೇನೇ ಇರಲಿ, ನಾವು ತಂದ ಎಲ್ಲ ಚುನಾವಣಾ ಸಲಕರಣೆಗಳನ್ನು ಸೂಕ್ತ ಲೆಕ್ಕಾಚಾರದೊಂದಿಗೆ ಹಿಂದಿರುಗಿಸುವಷ್ಟರಲ್ಲಿ ರಾತ್ರಿ ಹತ್ತಂತೂ ಆಗಿರುತ್ತದೆ. ಅಲ್ಲಿಗೆ ಮುಂದಿನ ಐದು ವರ್ಷ ನಮ್ಮನ್ನು ಆಳುವವರು ಯಾರು ಎಂದು ನಿರ್ಧರಿಸಿರುತ್ತೇವೆ. ಮುಂದಿನ ನಮ್ಮ ದೇಶದ, ನಾಡಿನ ಭವಿಷ್ಯವನ್ನು, ಹಣೆ ಬರಹವನ್ನು ನಿರ್ಧರಿಸುವ ಕಾರ್ಯದಲ್ಲಿ ನಾವೂ ಭಾಗವಾಗಿರುತ್ತೇವೆ.

ಇಷ್ಟೆಲ್ಲಾ ಆದ ಮೇಲೆ, ನಾವು ನಿಜವಾಗಿಯೂ ಸರ್ವತಂತ್ರ ಸ್ವತಂತ್ರರು, ಬೇಕಿದ್ದರೆ ಮನೆಗೆ ಹೋಗಬಹುದು, ಎನ್ನುವ ಮಾತು ಕೇಳಿಬರುತ್ತದೆ. ಆದರೆ ಬೇಕಿದ್ದರೂ ಬೇಕಿಲ್ಲದಿದ್ದರೂ ನಾವು ಮಾತ್ರ ಮನೆಗೆ ಹೋಗುವುದನ್ನೇ ಕಾಯುತ್ತಿರುತ್ತೇವೆ. ಅದೃಷ್ಟವಂತರಿಗೆ, ಗಂಡನೋ ತಂದೆಯೋ ಅಲ್ಲಿಯೇ ಬಂದು ಕಾಯುತ್ತಿರುತ್ತಾರೆ. ಇನ್ನು ಕೆಲವರಿಗೆ ಇಂತಹ ಕೆಲವು ಜೊತೆಗಾರರ ಸಹಕಾರವೂ ಸಿಗುತ್ತದೆ. ಆದರೆ,ಅದೃಷ್ಟ ಹೀನರೂ ಕೆಲವರು ಇರುತ್ತಾರೆ. ಅವರಿಗೆಂದೇ ಕೆಲವೇ ಕೆಲವು ಬಸ್ಸುಗಳೂ ಇರುತ್ತವೆ. ಅಂತೂ ಇಂತೂ ಎಡಗೈಯಲ್ಲಿ ಜೀವವನ್ನು ಹಿಡಿದುಕೊಂಡು ಮನೆ ಸೇರಿದರೆ. ಸಾಕಪ್ಪಾ ಸಾಕು ಈ ಚುನಾವಣೆ ಎನಿಸಿದರೂ, ಮರುದಿನದ ಕಛೇರಿ ಕೆಲಸ ಅನುದಿನದಂತೆಯೇ ಇದ್ದರೂ ಸಹ. ನಾವು ದೇಶಸೇವೆಗೆ ಟೊಂಕಕಟ್ಟಿ ನಿಂತವರು, ವೀರಗಚ್ಚೆ ಹಾಕಿ ಸೇವೆಗೈದವರು, ಕಂಕಣ ಕಟ್ಟಿ ದುಡಿದವರು ಎಂಬೆಲ್ಲಾ ಹೊಗಳಿಕೆಯನ್ನು ನಮಗೆ ನಾವೇ ಮಾಡಿಕೊಂಡು ಸಮಾಧಾನಿಸಿಕೊಳ್ಳುತ್ತೇವೆ.

ಈ ಚುನಾವಣಾ ಕಾರ್ಯಕ್ಕೆ ಒಂದಿಷ್ಟು ಹಣವನ್ನು ಕೊಡುತ್ತಾರೆ. ಆದರೆ ಅದು ಅತ್ಯಂತ ಕಡಿಮೆ ಹಣವಾಗಿರುತ್ತದೆ. ಇದೊಂದು ಉಪಕಾರ ಸ್ಮರಣೆಯಿಲ್ಲದ ಕೆಲಸ. ನಮ್ಮನ್ನೆಲ್ಲಾ ನಮಗೆ ಹೇಳದೇ ಕರ್ತವ್ಯಕ್ಕೆ ನಿಯೋಜಿಸಿಕೊಂಡವರು, ನಮಗೆ ಒಂದು ಮಾತಾದರೂ ಹೇಳುತ್ತಾರೆಯೇ, “ನಿಮ್ಮೆಲ್ಲರ ಸಹಕಾರದಿಂದ ಈ ಚುನಾವಣಾ ಕಾರ್ಯ ಸಂಪನ್ನವಾಯಿತು, ನಿಮಗೆಲ್ಲಾ ಧನ್ಯವಾದಗಳು” ಎಂದೇನಾದರೂ ಹೇಳುತ್ತಾರೆಯೇ, ಇಲ್ಲ, ಆದರೂ, ಕೇಳಿದರೆ, ಅಯ್ಯೋ ಹೋಗಯ್ಯೋ, ಎಲ್ಲಿ ಮುಗಿದಿದೆ, ಇನ್ನೂ ಈ ಮತಗಳ ಎಣಿಕೆಯಾಗಿ, ಯಾರಾದರೂ ಒಬ್ಬರು ಗೆದ್ದರು ಎಂದು ನಿರ್ಧಾರವಾಗಿ, ಅವರಲ್ಲಿಯೇ ಯಾರಾದರೂ ಸರ್ಕಾರ ನಡೆಸುತ್ತೇವೆಂದರೆ ಈ ಕೆಲಸ ಮುಗಿಯುತ್ತದೆ. ಮತ್ತೆ ನಿಮಗ್ಯಾಕರೀ ಧನ್ಯವಾದ ಹೇಳಬೇಕು, ನಿಮಗೆ ದುಡ್ಡುಕೊಟ್ಟಿಲ್ಲವೇ, ಎನ್ನೋರೂ ಇದ್ದಾರೆ.

ಇನ್ನು ಗೆದ್ದು ಬಂದವರೇನಾದರೂ ಹೇಳುತ್ತಾರೆಯೇ, ಎಂದೆಂದೂ ಕಂಡಿಲ್ಲ. ತಪ್ಪಿದ್ದಲ್ಲಿ. ತಪ್ಪಾದಲ್ಲಿ ಶಿಕ್ಷೆಗಳನ್ನು ಮಾತ್ರ ತಪ್ಪದೇ ನೀಡುತ್ತಾರಷ್ಟೇ. ಇದೊಂದು ಹೊಳೆ ದಾಟಿದ ಮೇಲೆ, ಅಂಬಿಗನನ್ನು ನೆನೆಸಿಕೊಂಡಂತೆ ಅಷ್ಟೇ.

ಚುನಾವಣಾಧಿಕಾರಿಗಳು, ನೀವು ಚುನಾವಣಾ ಕಾರ್ಯಕ್ಕೆ ಹಾಜರಾಗದಿದ್ದರೆ, ನಿಮ್ಮ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಮಾತ್ರ ಹೇಳುತ್ತಾರೆ. ಅದಕ್ಕೆ ಹೆದರಿಕೊಂಡು, ಪಾಪ ತುಂಬಿದ ಬಸುರಿಯೂ, ಎಳೆ ಬಾಣಂತಿಯೂ, ನವ ವಧುವರರೂ, ರೋಗದಿಂದ ಬಳಲುವವರೂ ಸಹ ತಪ್ಪದೇ ಬಂದೇ ಬರುತ್ತಾರೆ.

ಆದರೂ ಸಹ ಭಾರತೀಯ ಜವಾಬ್ದಾರಿಯುತ ಪ್ರಜೆಯಾಗಿ, ದೇಶವನ್ನು ಮುನ್ನಡೆಸುವ ನಾಯಕರ ಆಯ್ಕೆಯ ಕಾರ್ಯದಲ್ಲಿ ಸ್ವತಃ ಭಾಗಿ ಆಗಿ, ಕಷ್ಟವೋ ಸುಖವೋ, ದೇಶ ಸೇವೆ ಮಾಡಿದ ಸಂತೃಪ್ತಿಯಿದೆಯಲ್ಲ, ಅದನ್ನು ಅವರು ನೀಡಿದ ಹಣದಿಂದಾಗಲೀ, ನಮಗಾದ ತೊಂದರೆಗಳಿಂದಾಗಲೀ ತೂಕ ಹಾಕಲು ಸಾಧ್ಯವಿಲ್ಲ, ಯಾಕೆಂದರೆ, ಮೇರಾ ಭಾರತ್ ಮಹಾನ್.

-ಡಾ.ವೃಂದಾ ಸಂಗಮ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x