ತೇಜಸ್ವಿ ಹೆಸರಲ್ಲಿ ʼಡೇರ್‌ ಡೆವಿಲ್‌ ಮುಸ್ತಾಫʼ: ಎಂ ನಾಗರಾಜ ಶೆಟ್ಟಿ

          

ಪೂರ್ಣಚಂದ್ರ ತೇಜಸ್ವಿಯವರ ʼಡೇರ್‌ ಡೆವಿಲ್‌ ಮುಸ್ತಾಫಾ” ಕತೆಯನ್ನು ಸಿನಿಮಾ ಮಾಡುತ್ತಾರೆಂದು ತಿಳಿದಾಗ ಆಶ್ಚರ್ಯವಾಗಿತ್ತು. ʼಡೇರ್‌ ಡೆವಿಲ್‌ ಮುಸ್ತಾಫಾ” ವ್ಯವಸ್ಥೆಯನ್ನು ಕೀಟಲೆಗಣ್ಣಿಂದ ನೋಡುವ, ಸಂಘರ್ಷಕ್ಕೆ ಅನುವಿಲ್ಲದ, ಸಾಮಾನ್ಯವೆನ್ನಿಸುವ ಕತೆ. ಇದು ಸಿನಿಮಾಕ್ಕೆ  ಹೊಂದುತ್ತದೆಂದು ಅನ್ನಿಸಿರಲಿಲ್ಲ.

ಕೊನೆಗೆ ಆಗಿದ್ದೂ ಹಾಗೆಯೇ! ನಿರ್ದೇಶಕ ಶಶಾಂಕ್‌ ಸೊಗಾಲ್‌ ಕತೆಯ ಹೆಸರನ್ನು, ಪಾತ್ರಗಳ ಹೆಸರನ್ನು, ಕತೆಯ ಕೆಲವು ಅಂಶಗಳನ್ನು ಬಳಸಿಕೊಂಡು ತನ್ನದೇ ಚಿತ್ರ ಮಾಡಿದ್ದಾರೆ. ಅವರ ಕಲ್ಪನಾ ಶಕ್ತಿ ಮೆಚ್ಚುವಂತದ್ದೇ!

ಅತ್ತ ಮುನ್ಸಿಪಾಲಿಟಿಯೂ ಅಲ್ಲದ, ಇತ್ತ ಗ್ರಾಮ ಪಂಚಾಯತಿಗೂ ಸೇರದ ಪುಟ್ಟ ಪಟ್ಟಣವೊಂದರ ಪದವಿ ಪೂರ್ವ ಕಾಲೇಜಿಗೆ ಜಮಾಲ್‌ ಅಬ್ದುಲ್‌ ಮುಸ್ತಾಫಾ ಹುಸೇನ್‌ ಪ್ರವೇಶ ಪಡೆಯುತ್ತಾನೆ. ಹಾಜರಿ ಕರೆದಾಗಲೆಲ್ಲ ಅವನ ಸುಳಿವಿಲ್ಲ. ಸೆಂಟಲ್ಲಿ ಸ್ನಾನ ಮಾಡುತ್ತಾನೆ, ಮುಂಜಿ ಮಾಡಿಕೊಂಡಿದ್ದಾನೆ, ಗಡ್ಡದಲ್ಲಿ ಮೈ ಉಜ್ಜಿಕೊಳ್ಳುತ್ತಾನೆ ಎನ್ನುವ ಉಹಾಪೋಹಗಳ ಜೊತೆಯಲ್ಲಿ ಪ್ರಿನ್ಸಿಪಾಲರು ಆತ ಬರುವುದು ಬೇಡವೆಂದರು ಎನ್ನುವ ಮಾತುಗಳೂ ಹುಟ್ಟುತ್ತವೆ. ಇಂತಹ ಸಮಯದಲ್ಲೆ ಮುಸ್ತಾಫ ಹಾಜರಾಗುತ್ತಾನೆ.

ಕಾಲೇಜು ಸೇರಿದ ಮುಸಲ್ಮಾನ ಮುಸ್ತಾಫನ ಬಗ್ಗೆ ಅಸಹನೆ ಇರುವ ಅಧ್ಯಾಪಕರಿರುವಂತೆ, ಕೌಟುಂಬಿಕ ಕಾರಣಗಳನ್ನು ತಲೆಯಲ್ಲಿ ತುಂಬಿಕೊಂಡ ರಾಮಾನುಜ ಅಯ್ಯಂಗಾರಿ ಇದ್ದಾನೆ. ಅಯ್ಯಂಗಾರಿಯೂ ಅವನ ಸ್ನೇಹಿತರೂ ಮುಸ್ತಾಫನಿಗೆ ಕಿರುಕುಳ ಕೊಡುತ್ತಲೇ ಇರುತ್ತಾರೆ. ಮುಸ್ತಾಫ ಚೆನ್ನಾಗಿ ಫುಟ್‌ಬಾಲ್‌ ಆಡುತ್ತಾನೆಂದಾಗ ಕ್ರಿಕೆಟ್‌ ಶುರುವಿಟ್ಟುಕೊಳ್ಳುತ್ತಾರೆ, ಮೂಗಿಗೆ ಚಚ್ಚಿದನೆಂದು ದೂರು ಕೊಡುತ್ತಾರೆ, ದೇಶಭಕ್ತಿ ಗೀತೆಗೆ ಹೆಸರು ಹಾಕಿಸಿ ಅವಮಾನವಾಗುವಂತೆ ಮಾಡುತ್ತಾರೆ. ಇಷ್ಟೆಲ್ಲ ಆದರೂ ಮುಸ್ತಾಫ ಡೇರ್‌ಡೆವಿಲ್‌ ಅನ್ನುವುದು ಒಂದೇ ಬಾರಿ, ಅದೂ ಫೆಜ್‌ ಟೋಪಿಯ ಕಾರಣಕ್ಕೆ.

ಫೆಜ್‌ ಟೋಪಿಯ ದೆಸೆಯಿಂದ ಮುಸ್ತಾಫ ಮತ್ತು ಅಯ್ಯಂಗಾರಿ ಹಿಂದುಗಡೆ ಬೆಂಚಲ್ಲಿ ಕೂರಬೇಕಾಗಿ ಬರುತ್ತದೆ. ಹುಡುಗರ ಜಗಳದಲ್ಲಿ ಫೆಜ್‌ ಟೋಪಿ ಕಾಲಡಿಗೆ ಸಿಕ್ಕಿ ಹಾಳಾಗುತ್ತದೆ. ಗಣಪತಿ ಉತ್ಸವದ ಸಮಯದಲ್ಲಿ ಮೆರವಣಿಗೆ ಬರುತ್ತಿದ್ದ ಬಸವನಿಗೆ ಹೊದಿಸಿದ್ದ ಥಡಿಗೆ ಬೆಂಕಿ ತಗಲಿ ಬಸವ ಜನರ ನಡುವೆ ನುಗ್ಗುತ್ತದೆ. ಜನರು ದಿಕ್ಕಾಪಾಲಾಗಿ ಓಡುತ್ತಾರೆ. ಮುಸ್ತಾಫ ಹೊದಿಸಿದ್ದ ಥಡಿಯನ್ನು ಎಳೆದು ಬಸವನನ್ನು ತಡೆದು ನಿಲ್ಲಿಸುತ್ತಾನೆ. ಈ ಘಟನೆಯಿಂದ ಗೌರವಕ್ಕೆ ಪಾತ್ರನಾಗುವ ಮುಸ್ತಾಫ ಕಾಲೇಜಿನ ಪ್ರತಿಭಾ ಪ್ರದರ್ಶನದ ದಿನ ಜಾದು ಪ್ರದರ್ಶನ ಮಾಡಿ ಅಯ್ಯಂಗಾರಿಯ ಜೇಬಲ್ಲಿ ಮೊಟ್ಟೆ ಇಟ್ಟು ಮಾಯ ಮಾಡುತ್ತೇನೆಂದು ಹೇಳುತ್ತಾನೆ. ಮೊಟ್ಟೆ ಮಾಯವಾಗದೆ ಜೇಬಲ್ಲಿ ಒಡೆದು ಹೋಗುತ್ತದೆ. ಅಯ್ಯಂಗಾರಿಯ ಮೈಗೆ ಲೋಳೆ ಅಂಟುತ್ತದೆ. ತಲಿಸ್ಮಾನ್ ಟೋಪಿ ಇಲ್ಲದ ಕಾರಣ ಹೀಗಾಯಿತೆಂದು ಮುಸ್ತಾಫ ಹೇಳುತ್ತಾನೆ. ಇದು ಪೇಜ್ ಟೋಪಿ ಹಾಳು ಮಾಡಿದ್ದಕ್ಕೆ ಪ್ರತಿಯಾಗಿ ಅವನು ಮಾಡಿದ ಕುಚೋದ್ಯ.

ಈ ಘಟನೆಗಳು ತೇಜಸ್ವಿಯವರ ಕತೆಯಲ್ಲಿವೆ. ಆದರೆ ಸಿನಿಮಾ ಇಲ್ಲಿಗೇ ನಿಲ್ಲುವುದಿಲ್ಲ.

ರಮಾಮಣಿಯ ಪಾತ್ರ, ಮುಸ್ತಾಫನ ಮೇಲೆ ಅವಳ ಒಲವು ನಿರ್ದೇಶಕರ ಸೃಷ್ಟಿ. ಇವು ಕತೆಯನ್ನು ಬೆಳೆಸಲು ಪೂರಕವಾಗುವ ಅಂಶಗಳು. ಚಿತ್ರದಲ್ಲಿ ರಮಾಮಣಿ ಮುಸ್ತಾಫನ ಕೆನ್ನೆಗೆ ಹೊಡೆಯುವ ದೃಶ್ಯವಿದೆ. ಇದು ಸಮಂಜಸವೆಂದು ತೋರದು. ಆಕೆಗೆ ಮುಸ್ತಾಫನ ಮೇಲೆ ಆಕರ್ಷಣೆ ಮೂಡುವುದಕ್ಕೂ ಸೂಕ್ತ ಕಾರಣಗಳಿಲ್ಲ. ಮುಸ್ತಾಫ ಟೋಪಿಯನ್ನು ಹಾಳು ಮಾಡಿದ್ದಕ್ಕೆ ಪೋಲೀಸ್‌ ಕಂಪ್ಲೈಂಟ್‌ ಕೊಟ್ಟಿದ್ದಾನೆಂದು ಹುಡುಗರು ಅಡಗಿ ಕೂರುವುದು ಅಸಂಬದ್ಧವೆನ್ನಿಸುತ್ತದೆ. 

ದೈಹಿಕ ಶಿಕ್ಷಕನ ಪಾತ್ರದ ಕಲ್ಪನೆ ಮತ್ತು ಆ ಪಾತ್ರದ ನಿರ್ವಹಣೆ ಸೊಗಸಾಗಿದೆ. ಅದೇ ರೀತಿ ಅಬಚೂರು ತಂಡದ ಕ್ಯಾಪ್ಟನ್ನಿನ ಪಾತ್ರಕ್ಕೂ ಜೀವ ತುಂಬಲಾಗಿದೆ. ಅನವಶ್ಯಕ ಲಂಬಿಸಿದ ಕ್ರಿಕೆಟ್‌ ಪಂದ್ಯ ಮತ್ತದರ  ಒಟ್ಟಾರೆ ಯೋಜನೆ ಕಿರಿಕಿರಿ ಉಂಟು ಮಾಡುತ್ತದೆ. ಅಬಚೂರು ತಂಡವಂತೂ ಪುಂಡು ಪೋಕರಿಗಳ ಗುಂಪಿನಂತಿದೆ.

ಕೆಲವು ಕಡೆಗಳಲ್ಲಿ ಬಜೆಟ್‌ನ ಮಿತಿಯೂ ಕಂಡು ಬರುತ್ತದೆ. ಕಾಲೇಜಲ್ಲಿ ಇರುವುದು ಒಂದು ಕ್ಲಾಸ್‌ ರೂಮ್‌ನಲ್ಲಿ ಇರುವಷ್ಟೆ ವಿದ್ಯಾರ್ಥಿಗಳು; ಗಣಪತಿ ಉತ್ಸವದಲ್ಲಿ ಬಸವನಿಗೆ ಬೆಂಕಿ ಹತ್ತುವ ದೃಶ್ಯ ಇಂತವು ಸುಧಾರಿಕೆ ಬಯಸುತ್ತದೆ. ಈ ಕೊರತೆಗಳನ್ನು ತುಂಬುವಂತೆ ʼಮೈಸೂರು ಒಡೆಯ…..” ಹಾಡಿನ ಅದ್ಭುತ ಸಂಯೋಜನೆಯಿದೆ. ಅನಿಮೇಶನ್‌ನಲ್ಲಿ ರಾಜಕುಮಾರ್‌ ಕಣ್ಣಿಗೆ ಹಬ್ಬ.

ಆಗಿನ ಕಾಲವನ್ನು ಸೂಚಿಸಲು ಬಳಸಿದ ಒಂದು ರುಪಾಯಿ, ಎರಡು ರುಪಾಯಿ ನೋಟುಗಳು, ಕಾಗದದಲ್ಲಿ ಮಡಚಿ ಬರೆದುದನ್ನು ಓದುವ ರೀತಿ ಗಮನಿಸಬೇಕಾದ ಸೂಕ್ಷ್ಮ ಅಂಶಗಳು. ಇಂತಹ ಸೂಕ್ಷ್ಮಗಳನ್ನು ಬಳಸಿಕೊಂಡ ನಿರ್ದೇಶಕರಿಗೆ ಕ್ರಿಕೆಟ್‌ ತಂಡಕ್ಕಾಗುಷ್ಟು ಮುಸಲ್ಮಾನರಿದ್ದೂ ಕಾಲೇಜಲ್ಲಿ ಒಬ್ಬನೇ ಏಕಿದ್ದಾನೆ ಎನ್ನುವುದು ಹೊಳೆಯಲಿಲ್ಲ. ಅದೇ ರೀತಿ ಮಹಾಲಕ್ಷ್ಮಿ- ರಫೀಕ್‌ ಓದು ಬರಹವಿಲ್ಲದ ಪ್ರೇಮಿಗಳೇ?

ಚಿತ್ರದ ತುಂಬ ಲವಲವಿಕೆ ಇದೆ. ಕಾಲೇಜು ವಿದ್ಯಾರ್ಥಿಗಳ ತುಂಟತನ, ಹುರುಪು, ಹುಡುಗಾಟಿಕೆಗಳನ್ನು ಕಟ್ಟಿಕೊಡಲು ಚಿತ್ರ ಸಫಲವಾಗಿದೆ. ಇದರಲ್ಲಿ ನಟರ ಪಾಲೂ ಇದೆ. ಮುಸ್ತಾಫ ಪಾತ್ರದ ಶಿಶಿರ ಬೈಕಾಡಿ, ಅಯ್ಯಂಗಾರ್‌ ಆಗಿ ಆದಿತ್ಯ ಆಶ್ರೀ, ರಮಾಮಣಿಯಾಗಿ ಪ್ರೇರಣಾ ಗೌಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿಜಯ್‌ ಶೋಭರಾಜ್‌, ಪೂರ್ಣಚಂದ್ರ, ಮಂಡ್ಯ ವೆಂಕಟೇಶ್‌, ನಾಗಭೂಷಣ, ಉಮೇಶ್‌ ಎಲ್ಲರೂ ಪಾತ್ರೋಚಿತವಾಗಿ ಅಭಿನಯಿಸಿದ್ದಾರೆ. 

ಚಿತ್ರದ ಅವಧಿ ಸ್ವಲ್ಪ ಹೆಚ್ಚೆನ್ನಿಸುತ್ತದೆ. ಸಂಕಲನಕಾರರು ಎಚ್ಚರ ವಹಿಸಿದ್ದರೆ ಇಪ್ಪತ್ತು ನಿಮಿಷಗಳಷ್ಟು ಕಡಿತ ಮಾಡಬಹುದಿತ್ತು.

ʼಡೇರ್‌ಡೆವಿಲ್‌ಮುಸ್ತಾಫಾ” ಚಿತ್ರದ ಆಶಯ ನಮ್ಮ ನಾಡು ʼಸರ್ವ ಜನಾಂಗದ ತೋಟʼ ಎನ್ನುವುದನ್ನು ತೆರೆಯ ಮೇಲೆ ಮೂಡಿಸುವುದಾಗಿದ್ದರೆ ಶಶಾಂಕ್‌ ಸೊಗಾಲ್‌ ತಕ್ಕ ಮಟ್ಟಿಗೆ ಸಫಲರಾಗಿದ್ದಾರೆಂದು ಹೇಳಬಹುದು. ಆದರೆ, ʼತೋಟʼ ಮುಸ್ತಾಫ ಮತ್ತು ಗೆಳೆಯರ ಮಟ್ಟಿಗೆ ಸೀಮಿತವಾಗದೆ ಸರ್ವರನ್ನೂ ಒಳಗೊಳ್ಳುವಂತಿದ್ದರೆ ಚೆಲುವಿರುತ್ತಿತ್ತು.

ಹೀಗೆಂದ ಕೂಡಲೇ ಶಶಾಂಕ್‌ಸೊಗಾಲ್‌ಮತ್ತವರ ಯುವ ತಂಡದ ಸಾಧನೆಯನ್ನು ಕಿರಿದಾಗಿಸಿದಂತಲ್ಲ. ಐದು ದಶಕದ ಹಿಂದಿನ ಕತೆಯನ್ನು ಈಗಿನ ಪ್ರಕ್ಷುಬ್ಧ ಸನ್ನಿವೇಶದಲ್ಲಿ ʼನೋಡುವ ಚಿತ್ರವಾಗಿʼ ಕಟ್ಟುವುದು ಸುಲಭವಲ್ಲ. ಚಿತ್ರದ ಪರಿಕಲ್ಪನೆ, ವಾಯ್ಸ್‌ ಓವರ್‌ಮತ್ತು ಕುಂಚದ ಚಿತ್ರಗಳಿಂದ ಪೀಠಿಕೆ ಒದಗಿಸುವುದು, ಅತಿರೇಕಕ್ಕೆ ಜಾರದಂತೆ ಸನ್ನಿವೇಶಗಳನ್ನು ನಿಭಾಯಿಸಿದ ರೀತಿ ಮೆಚ್ಚುಗೆ ಗಳಿಸುತ್ತದೆ. ಶಶಾಂಕ್‌ಸೊಗಾಲ್‌ಈ ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಹೊಮ್ಮಿದ್ದಾರೆ.

ಜನರೂ ಚಿತ್ರವನ್ನು ಆನಂದಿಸುತ್ತಿದ್ದಾರೆಂದು ಹೇಳಬಹುದು. ಯಶವಂತಪುರದ ವೈ಼ಷ್ಣವಿ ಟಾಕೀಸ್ ಎರಡನೇ ವಾರದ ಮಧ್ಯಾಹ್ನದ ಶೋಗೆ ಮುಕ್ಕಾಲು ಭಾಗ ತುಂಬಿತ್ತು. ಇದಕ್ಕೆ ತೇಜಸ್ವಿಯವರ ಹೆಸರೂ ಕಾರಣವಿರಬಹುದು. ಇನ್ನೊಂದು ರೀತಿಯಲ್ಲಿ ಚಿತ್ರಕ್ಕೆ ಅವರು ರಕ್ಷಣೆಯನ್ನೂ ನೀಡಿದ್ದಾರೆ!

-ಎಂ ನಾಗರಾಜ ಶೆಟ್ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x