ಜೀವನಾನುಭವದ ಕಂದೀಲು”ಬಾಳನೌಕೆಗೆ ಬೆಳಕಿನ ದೀಪ”: ಜ್ಯೋತಿ ಕುಮಾರ್. ಎಂ(ಜೆ. ಕೆ.)

ಹಡಗಿನಲ್ಲಿ ಪಯಣಿಸುವವರಿಗೆ ಬೇಕು ದಿಕ್ಸೂಚಿ. ದಡದ ಕಡೆ ಬರುವವರಿಗೆ ಬೇಕು ಲೈಟ್ ಹೌಸ್. ಜೀವನದಲ್ಲಿ ಸರಿ ದಾರಿಯಲ್ಲಿ ಹೋಗುವವರಿಗೆ ಬೇಕು ಹಿರಿಯರ ಅನುಭವ ಮತ್ತು ಅನುಭಾವದ ಹಿತ ನುಡಿಗಳು. ಕತ್ತಲೆಯನ್ನು ಓಡಿಸಲು ಬೇಕು ಕಂದೀಲು. ಅಂದರೆ ಕಂದೀಲು ಇರುವೆಡೆ ಕತ್ತಲು ಇರದು. ಆದರೆ ಜೀವನದಲ್ಲಿಯೇ ಕತ್ತಲು ಬಂದು ಬದುಕು ಪೂರ್ತಿ ಕತ್ತಲೆಯಲ್ಲಿ ಸವೆಸುವಂತಾದರೆ ಕೈ ಹಿಡಿದು ನಡೆಸುವವರು ಯಾರು? ದಾರಿ ತೋರಿಸುವವರು ಯಾರು? ದೀಪದ ಬುಡದಲ್ಲಿಯೇ ಕತ್ತಲು ಇದ್ದರೆ ಜ್ಯೋತಿ ತನ್ನನ್ನು ತಾನು ಸುಟ್ಟು ಕೊಂಡು ಜಗವನ್ನು ಬೆಳಗುವುದಿಲ್ಲವೇ?ಎಣ್ಣೆ ಖಾಲಿಯಾಗುವಾಗಲಂತೂ ನನ್ನಿಂದ ಇನ್ನು ಬೆಳಕನ್ನಿಯುವುದು ಸಾಧ್ಯವಾಗುತ್ತಿಲ್ಲ, ಕ್ಷಮೆ ಇರಲಿ, ಬೆಳಕಿಗೆ ಬೇರೆಯದೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ದಿಗ್ಗನೆ ಉರಿದು, ಎಲ್ಲರನ್ನೂ ಎಚ್ಚರಿಸಲು ಪ್ರಯತ್ನಿಸಿ, ತಾನು ಆತ್ಮಹತ್ಯೆ ಮಾಡಿ ಕೊಳ್ಳುವುದಿಲ್ಲವೇ? ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?ಯಾವುದೇ ಜಾತಿ, ಯಾವುದೇ ಮತ, ಯಾವುದೇ ಕೋಮಿನ ಮನೆಯಾಗಿರಲಿ, ಮನವಾಗಿರಲಿ, ಯಾವುದೇ ಭೇದ ಭಾವ ಮಾಡದೇ ಬೆಳಕು ಯಾವಾಗಲೂ ವಿಶ್ವ ಮಾನವ ಸಂದೇಶ ಸಾರಲು ಪ್ರಯತ್ನಿಸುವುದು. ಸರ್ವರಿಗೂ ಬೆಳಕನ್ನೀಯುವುದು.

ದೃಷ್ಟಿ ಬದಲಿಸಿ ನೋಡು, ದೃಶ್ಯವೇ ಬದಲಾದೀತು. ಹವ್ಯಾಸ ಬದಲಿಸಿ ನೋಡು, ಹಣೆಬರಹವೇ ಬದಲಾದೀತು. ವಿಚಾರ ಬದಲಿಸಿ ನೋಡು, ದೇಶವೇ ಬದಲಾದೀತು. ದೋಣಿ ಬದಲಿಸಬೇಕೆಂದಿಲ್ಲ, ದಿಕ್ಕು ಬದಲಿಸಿದರೆ ಸಾಕು, ನೀ ಸೇರುವ ದಡ ಎದುರಾದೀತು. ಹೀಗೆಯೇ ಜೀವನವನ್ನು ಒಬ್ಬೊಬ್ಬರು, ಒಂದೊಂದು ದೃಷ್ಟಿಕೋನದಿಂದ ನೋಡುತ್ತಾರೆ. ಆದರೆ ರೇವಣಸಿದ್ದಪ್ಪ. ಜಿ. ಆರ್ ಇವರು ಜೀವನವನ್ನು ತಮ್ಮದೇ ಆದ ಸಮಾಜಮುಖಿ ದೃಷ್ಟಿಕೋನದಿಂದ ನೋಡಿದವರು. ಆಗ ಕಂಡ ಲೋಕದ ಡೊಂಕುಗಳನ್ನು ತಮ್ಮದೇ ಆದ ರೀತಿಯಲ್ಲಿ ಅಭಿವ್ಯಕ್ತಿಪಡಿಸುತ್ತಾ ಹೋಗುತ್ತಾರೆ. ಮಾನವ ಸಂಬಂಧಗಳನ್ನು ಪ್ರಶ್ನಿಸುತ್ತಾರೆ. ರೈಲು ಹಳಿಗಳ ಮೇಲಿನ ಬಿಕಾರಿಯ ಜೀವನ ಕಂಡು ಹಲುಬುತ್ತಾರೆ. ಮಗುವನ್ನು ಕೊಂದ ತಾಯಿಯ ಹೀಯಾಳಿಸದೆ, ಅವಳ ಸ್ಥಾನದಲ್ಲಿ ನಿಂತು, ಒಂದು ತಾರ್ಕಿಕ ತೀರ್ಪನ್ನು ಹೇಳಲು ಪ್ರಯತ್ನಿಸುತ್ತಾರೆ. ಆಗ ಹುಟ್ಟಿದ ಕಲಾ ಪುಷ್ಪಗಳೇ “ಬಾಳನೌಕೆಗೆ ಬೆಳಕಿನ ದೀಪ”ಕವನ ಸಂಕಲನ. ಇದು ಕವಿಯ ಜೀವನದ, ಅನುಭವದ, ಅನುಭಾವದ ಕಾವ್ಯ ಧಾರೆ. ಪ್ರಾಪಂಚಿಕ ವ್ಯವಹಾರವನ್ನು ಇನ್ನೊಂದು ಮಗ್ಗುಲಿನಿಂದ ನೋಡಿದಕವಿ ಹೃದಯದ ಮಾತಗಳಾಗಿವೆ ಈ ಕವನಗಳು.

ರೇವಣಸಿದ್ದಪ್ಪ. ಜಿ. ಆರ್ ಇವರ “ಬಾಳನೌಕೆಗೆ ಬೆಳಕಿನ ದೀಪ”ಕವನ ಸಂಕಲನವು ಸಮೃದ್ಧ ಆರು ಕಮ್ಮಿ ಅರ್ಧ ಶತಕ ಕವನಗಳನ್ನು ಒಳಗೊಂಡ ಹೊತ್ತಿಗೆಯಾಗಿದೆ. ಸಮುದ್ರದ ಮಧ್ಯದಲ್ಲಿ ದಿಕ್ಕೆಟ್ಟು ನಿಂತ ಹಾಯಿದೋಣಿಯ ಮುಖಪುಟದೊಂದಿಗೆ ನೀಲಿಮಯವಾಗಿದೆ. ಕೈಯಿಟ್ಟ ತಕ್ಷಣ ಹೊತ್ತಿಗೆ ಒಂದು ಸುಮಧರ ಅನುಭೂತಿಯೊಂದಿಗೆ, ಕೈಹಿಡಿದು ಓದಿಸಿಕೊಂಡು ಹೋಗುತ್ತದೆ. ಮಾನವೀಯ ಸಂಬಂಧಗಳು ಮತ್ತು ಧಮನಿತರ ನೋವಿಗೆ ಮಿಡಿಯುವ ಕವಿತೆಗಳು ಸಮಾಜ ಮುಖಿ ಪಥದತ್ತ ಕೊಂಡೊಯ್ಯುವ ಪ್ರಯತ್ನವನ್ನು ಮಾಡಿವೆ, ಮಾಡುತ್ತಲೇ ಇವೆ. ನನ್ನದು, ನಿನ್ನದು ಎನ್ನದಿರು. . . ನಾನು, ನೀನು ಹೋಗುವುದು ಮಣ್ಣಿಗೆ ಮರೆಯದಿರು. . . . . ಅಂದರೆ ಅಂತಿಮವಾಗಿ ನಾವೆಲ್ಲರೂ ಪಂಚಭೂತಗಳಲ್ಲಿಯೇ ಲೀನವಾಗುತ್ತೇವೆಂಬ ಅರ್ಥ ಕೊಡುವ, ಆಧ್ಯಾತ್ಮದ ಕರೆಯ ಕಡೆಗೆ ಸೆಳೆಯುವ ಕವನ ಬರೆಯುತ್ತಾರೆ ಕವಿ.

ನಿಗೂಢ ಕಥೆಯೊಂದರ
ಕೊನೆಯಿರದ ಸಾಲುಗಳ
ಅನಂತ ಅಕ್ಷರಗಳಲ್ಲೆಲ್ಲೋ ಅಡಕವಾಗಿದ್ದಾನೆ.
ಭಾವುಕತೆಯ ಪರಾಕಾಷ್ಟೆಗೇರಿದವನು
ಭಾವಗಂಗೆಯೊಳಗೆ ಕೊಚ್ಚಿಹೋಗಿದ್ದಾನೆ.
ಸಿದ್ದೇಶ ಕಾಣೆಯಾಗಿದ್ದಾನೆ;ಹುಡುಕಿ ಕೊಡಿರಿ. ( ಸಿದ್ದೇಶ ಕಾಣೆಯಾಗಿದ್ದಾನೆ!)

ಮೊದಲ ಕವನದಲ್ಲಿಯೇ ಕವಿ ಕಾಣೆಯಾಗಿರುವ ನಮ್ಮತನವನ್ನು, ನಮ್ಮನ್ನು ಆಧ್ಯಾತ್ಮದ ಬುನಾದಿಯ ಮೇಲೆ ಹುಡುಕಿಸಲು ಹಚ್ಚುತ್ತಾರೆ. ಆ ಸಿದ್ದೇಶ ನಾನೇ ಆಗಿರಬಹುದು, ನೀನು ಆಗಿರಬಹುದು, ರೇವಣಸಿದ್ದಪ್ಪನೂ ಆಗಿರಬಹುದು, ಸಿದ್ದೇಶ್ವರ ಸ್ವಾಮಿಯಂತಹ ಪರಮಾತ್ಮನೇ ಆಗಿರಬಹುದು, ಅಷ್ಟೂ ಸುಲಭಕ್ಕೆ ಹಲವರಿಗೆ ಸಿಕ್ಕಿರಲಾರ ಎಂದು ಮುಗಿಸುತ್ತಾರೆ, ಕವನ.

ಆದರೂ ತನ್ನನ್ನು ತಾ ಅರಿಯದಿರೆ ಯಾವ ಪರಮಾತ್ಮ ಬಂದಾನು? ತನ್ನನ್ನು ತಾ ತಿದ್ದಿಕೊಳ್ಳದಿರೆ ಯಾವ ಬುದ್ಧ ದೇವರು ಬಂದು ತಿದ್ದಿಯಾರು? ಜೀವನದಿಂದ ಪಲಾಯನಗೈಯ್ಯಬೇಕು ಅಷ್ಟೆ!
ಪಲಾಯನಗೈಯಬಹುದು
ಸಿದ್ಧಾರ್ಥ ಮಧ್ಯರಾತ್ರಿಯಲ್ಲಿ
ಎದ್ದು ಹೋದಂತೆ
‘ಸ್ವತಃ ಬುದ್ಧನಾಗದೆ’. (ಪಲಾಯನ)

ಕವಿಯು ವಿಶ್ವ ಮಾನವತೆಯ ಸಂದೇಶವನ್ನು ಅನೇಕ ಕವನಗಳಲ್ಲಿ ಹಂಚಲು ಶ್ರಮಿಸಿದ್ದಾರೆ. ವಿಶ್ವಮಾನವರಾಗೋಣ, ಅನಿಕೇತನರಾಗಿ ಬದಲಾಗೋಣ, ವಿಶ್ವ ಶಾಂತಿಯ ನೆಲೆಗೊಳಿಸೋಣ ಎಂದು ಕೂಗಿ-ಕೂಗಿ ಹೇಳಿದ್ದಾರೆ.

ಮೂಲದಲ್ಲಿ
ಎಲ್ಲದೂ, ಎಲ್ಲರೂ ಒಂದೇ ಆದರೂ
ಮನುಷ್ಯನೆಂಬ ಮನುಷ್ಯ ಪ್ರಾಣಿ
ಒಂದಾಗಿ ಹೋಗುವುದಿಲ್ಲ.
ಜಾತಿ, ಧರ್ಮ, ಜನಾಂಗ,
ಬಣ್ಣ, ಲಿಂಗ,
ದೇಶ, ಭಾಷೆ, ಗಡಿಗಳ
ಗೋಡೆಗಳ ಕೆಡವಿ
ಸಾಗುವುದಿಲ್ಲ. (ಪರಿವಾರ)
ಹುಟ್ಟುತ್ತಾ ವಿಶ್ವ ಮಾನವ. ಬೆಳೆಯುತ್ತಾ ಸ್ವಾರ್ಥಿ ಮಾನವ ಎಂಬುದನ್ನು ತಿಳಿಸಲು ಬಯಸಿದ್ದಾರೆ,

ಮನುಷ್ಯನಾದರೆ ಸಾಲದೇ?
ಮಗುವಾದರೂ ಆಗದೇ?. ( ಮಗುವಾದರೂ ಆಗದೇ?)
ಹುಟ್ಟಿದಾ ಮಗು ಜಾತ್ಯತೀತ, ಧರ್ಮಾತೀತ. ಆದರೆ, ಭಾರತದ ಪ್ರತೀ ಗ್ರಾಮಗಳಲ್ಲಿ ಜಾತಿಗೊಂದು ದೇವಸ್ಥಾನ, ಜಾತಿಯದೊಂದು ಓಣಿ. ಜಾತಿಗೊಬ್ಬ ಲೀಡರ್ ಅಥವಾ ಪ್ರತೀ ಲೀಡರು ಆಯಾ ಜಾತಿಗೆ ಸೀಮಿತ.

ನಮ್ಮ ನಮ್ಮ
ಮೂಗಿನ ನೇರಕ್ಕೆ
ನಮ್ಮ ಬುದ್ಧ,
ನಮ್ಮ ಬಸವ,
ನಮ್ಮಅಂಬೇಡ್ಕರ್,
ನಮ್ಮ ಗಾಂಧಿ
ನಮ್ಮವರಾಗುತ್ತಾರೆ!(ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ನಾವು).
ಮುಂದುವರೆದು ಮಾನವೀಯ ಮೌಲ್ಯಗಳು ಬದಲಾಗುತ್ತಿರುವ ಈ ಸಂದರ್ಭದಲ್ಲಿ ಬರೆಯುತ್ತಾರೆ.

ಮನುಜನಾಗಿ
ಭವ ಸಂಕಷ್ಟದೊಳು ಸಿಲುಕಿ
ನಿರ್ದಯೆ, ನಿಷ್ಕರುಣೆ, ನಿಷ್ಕಾರಣಗಳ
ಜಗದಿ ಬೇರೂರದೆ,
ಮಾನವೀಯ ಔನತ್ಯಕ್ಕೆ
ಚಿಗುರಲೂ ಆಗದೆ
ತ್ರಿಶಂಕುವಾಗಿರುವೆ. (ತ್ರಿಶಂಕು)

ಕವಿಯು ವಿಶ್ವ ಶಾಂತಿಯ ಬಗ್ಗೆ ತುಂಬಾನೆ ಗಂಭೀರವಾಗಿ ಯೋಚಿಸಿದಂತಿದೆ. ಪ್ರಸ್ತುತ ನಡೆಯುತ್ತಿರುವ ಯುದ್ಧಗಳನ್ನು ಮನುಷ್ಯನ ಆಂತರಿಕ ಸಂಘರ್ಷದೊಂದಿಗೆ ಸಮೀಕರಿಸಲು ಪ್ರಯತ್ನಿಸಿದ್ದಾರೆ.

ಒಮ್ಮೊಮ್ಮೆ
ಅಂದುಕೊಳ್ಳುತ್ತೇನೆ
ರಣರಂಗದಲ್ಲಿ
ಎದುರಾಗುವ ಅಪರಿಚಿತರು
ತಮ್ಮ ತಮ್ಮ
ಬಂದೂಕು ಬದಿಗಿಟ್ಟು
ಪರಸ್ಪರ
ಸುಖದುಃಖ
ವಿಚಾರಿಸುವಂತಾದರೆ
ಪಾಪಾಸ್ ಕಳ್ಳಿಯ ಜಾಗದಲ್ಲಿ
ಗುಲಾಬಿ ನಳನಳಿಸಬಹುದು. (ಅಪರಿಚಿತರು).
ಚೇತನರು ಅನಿಕೇತನರಾಗಲು ಬಯಸಿದರೂ ನೂರಾರು ಅಡ್ಡಿ ಆತಂಕಗಳು, ತುಮುಲಗಳು, ಭವ ಬಂಧನಗಳು ಸುಮ್ಮನಿರುತ್ತವೆಯೆ?

ಆರದ ಬೆಂಕಿ
ನಿಲ್ಲದ ಹೋರಾಟ
ಕೈಬಿಸಿ ಕರೆಯುತಿಹ
ಕಾಣದ ಕೈಗೆ
ಮಣಿಯದ ಚೇತನ
ಹೂಂಕರಿಸಿದೆ. (ಸದ್ಯ)

ಮನುಷ್ಯನ ಒಳಗೂ ಬೆಂಕಿ, ಹೊರಗೂ ಬೆಂಕಿ, ಆತ್ಮದ ಸಂಗತಿ ಯಾರಿಗೆ ಬೇಕು?ವಿಶ್ವ ಶಾಂತಿ ಇಲ್ಲಿ ಯಾರಿಗೂ ಬೇಡ. ಬೆಂಕಿಗೆ, ಸಾಮ್ರಾಜ್ಯಶಾಹಿ ಧೋರಣೆಗೆ, ಲಂಚಬಾಕ ಸಂಸ್ಕೃತಿಗೆ ಇನ್ನೂ ಬೇಕೆಂಬ ಹಂಬಲ.
ತಿಂದಷ್ಟೂ ಹಸಿವು;
ಕುಡಿದಷ್ಟೂ ದಾಹ;
ಹಸಿಹಸಿ ಮಾಂಸ, ಬಿಸಿಬಿಸಿ ರಕ್ತವೇ
ಇದರ ಆಹಾರ. (ಬೆಂಕಿ).

ಇದಷ್ಟೇ ಆಗಿದ್ದರೆ, ಕವನ ಸಂಕಲನ ವಿಶೇಷ ಅನ್ನಿಸುತ್ತಿರಲಿಲ್ಲವೆನೋ!?ರೇವಣಸಿದ್ದಪ್ಪನವರು ದಮನಿತರು ಧ್ವನಿಯಾಗಲು ಅಲ್ಲಲ್ಲಿ ಯತ್ನಿಸಿದ್ದಾರೆ. ಅಲ್ಲದೆ ಸಕಲ ಜೀವಿಗಳಲ್ಲಿ ದಯೆಯ ಬಗ್ಗೆ ಕಾಳಜಿವಹಿಸಿದ್ದಾರೆ.
ದೇವರ ಕುಲುಮೆಯಲ್ಲಿ
ಸೃಜಿಸಿದ
ಅಗಣಿತ ಜೀವಿಗಳಲ್ಲಿ
ನಾಯಿಯೂ ಒಂದು;
ಮನುಷ್ಯನೂ ಹೌದು!. (ನಾಯಿ ಪಾಡು)

ಮನುಷ್ಯ ತನ್ನನ್ನು ಹೋಲುವ ಮರಿಗಳಿಗೆ ಜನ್ಮವನ್ನು ಕರುಣಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು. ಹುಟ್ಟಿಸಿ ಬೀದಿಗೆ ಬಿಸಾಕಿದರೆ, ಆ ಮಗುವಿನ ಜೀವನ?ಅವನು ಬಿಕ್ಷೆ ಎತ್ತ ಬೇಕಾ?ಹುಚ್ಚನಾಗ ಬೇಕಾ?ಅಥವಾ ರೈಲು ಹಳಿಯ ಮೇಲೆ ಜೀವನ ಸಾಗಿಸಬೇಕಾ?ಸಂಬಂಧಗಳು ಹೊರೆಯೆಂದು ಭಾವಿಸಿ, ಹರಿದುಕೊಂಡವರ ನಡುವೆ ಕಾಣುವ ಕೆಲವು ಅಪರೂಪದ ಜೀವಗಳ ಬಗ್ಗೆ ಹೀಗೆ ಹೇಳುತ್ತಾರೆ;

ಉಣಲಿದ್ದೂ ಉಣಲಾರದವರ ನಡುವೆ,
ಉಡಲಿದ್ದೂ ತೊಡಲಾರದವರ ನಡುವೆ,
ನಂಟಿದ್ದೂ ಅಂಟಿಸಿಕೊಳ್ಳದವರ ನಡುವೆ,
ಇವನಿದ್ದಾನೆ
ತಾನಿದ್ದೂ ಇಲ್ಲದಂತೆ!(ರೈಲು ಹಳಿಗಳ ನಡುವೆ)
ಮಾನವನ ಅಸ್ತಿತ್ವವನ್ನು ಪ್ರಶ್ನಿಸುವ ಈ ಕವನ ನನಗೆ ವೈಯುಕ್ತಿಕವಾಗಿ ತುಂಬ ಕಾಡಿದ್ದು ಇದೇ ಕಾರಣಕ್ಕೆ.

ಗಂಡು ಹೆಣ್ಣು ತಮ್ತಮ್ಮ ತೃಷೆ ತೀರಿಸಿಕೊಳ್ಳಲು, ಜೊತೆಯಾಗುತ್ತಾರೆ, ಸುಖಿಸುತ್ತಾರೆ ಕೂಡ. ಸುಖ ಮಾತ್ರ ಬೇಕು, ಗರ್ಭ ಬೇಡ ಅಂದರೆ, ಶಿಶು ಹತ್ಯೆ ಮಾಡಲೇಬೇಕು. ಹೀಗೆ ಮಗುವನ್ನು ಕೊಲ್ಲುವ ಹೆಣ್ಣನ್ನು ಸಮಾಜ ಘಾತುಕಿ ಎಂದು ಭಾವಿಸುತ್ತದೆ. ಆದರೆ ಕವಿ ಹೆಣ್ಣಿನ ಪರವಾಗಿ ನಿಂತು ಸಂತೈಸಲು ಪ್ರಯತ್ನಿಸುವಂತೆ ತೋರುತ್ತಾರೆ!. ಆದರೆ ಕವಿತೆಯ ಕೊನೆಯ ಸಾಲುಗಳಲ್ಲಿನ ಕವಿಯ ಧ್ವನಿಯನ್ನು ಗ್ರಹಿಸಬೇಕಾಗುತ್ತದೆ.

ಹೀಗಿರುವಾಗ
ನೀ ನಿನ್ನದೇ ಮಗುವನ್ನು ಕೊಂದು
ಒಂದೇ ಪಾಪಗೈದೆ.
ಅದನ್ನು ಬದುಕಿಸಿ ಸಾಯಿಸಲಿಲ್ಲ;
ಲೋಕಕ್ಕೆ ಮಾರಕವಾಗಿಸಲಿಲ್ಲ. (ಮಗುವನ್ನು ಕೊಂದು ತಾಯಿಗೆ).
ಹೇಳಲು ಇನ್ನೇನಿದೆ!

ಕವಿಗಳು ’ಅವಳು’ಎಂಬ ಪ್ರತಿಮೆಗಾಗಿಯೂ ಒಂದಿಷ್ಟು ಪುಟಗಳನ್ನು ಮೀಸಲಿಟ್ಟದ್ದಾರೆ. ಅವಳಿಲ್ಲದೆ ಜೀವನ ಪೂರ್ಣವಾದೀತು ಹೇಗೆ?ಅವಳಿದ್ದ ಮೇಲೆ ಪ್ರೀತಿಯೂ ಇರಲೇಬೇಕಲ್ಲವೇ?

ಬಾಳನೌಕೆಗೆ
ಬೆಳಕಿನ ದೀಪವಾಗದ
ಪ್ರೀತಿ
ಬಡಬಾಗ್ನಿಯಾಗಿ ಮುಕ್ಕುತ್ತಿದೆ.
ಒಂದೊಮ್ಮೆ,
ಸತ್ತು ಹೋದರೆ
ಬತ್ತಿ ಹೋದೀತೆ ಪ್ರೀತಿ?. (ಹೀಗೊಂದು ಪ್ರೀತಿ)

ಗೊತ್ತಾಯಿತಲ್ಲವೆ? ಬಾಳನೌಕೆಗೆ ಬೆಳಕಿನ ದೀಪವಾಗುವುದು ಯಾವುದೆಂದರೆ ಅದು “ಪ್ರೀತಿ”. ಅದರೆ ಅದು ಮಧ್ಯದಲ್ಲಿಯೆ ಎದ್ದು ಕೊಡವಿ ಕೊಂಡುಹೊರಟು ಹೋದರೆ?
ಎಷ್ಟು ಕಾಲ
ನಿನ್ನೊಳಗಿನ
ನನ್ನ ನೆನಪಿನ ಗಿಡಕ್ಕೆ
ನೀರೆರೆದು
ಹಸಿರಾಗಿಡುವೆ?
ಸತ್ತವರಿಗೆಲ್ಲಾ
ಸ್ಮಾರಕ ಕಟ್ಟಿಸುವಂತಿದ್ದರೆ
ಬದುಕುವವರಿಗೆ
ಜಾಗವೇ ಇರುತ್ತಿರಲಿಲ್ಲ. (ಇನ್ನಿಲ್ಲವಾದಾಗ)

ಭುವಿಯ ತುಂಬ ಬರೀ ಭಗ್ನ ಪ್ರೇಮಿಗಳು ನಿರ್ಮಿಸಿದ ಸ್ಮಾರಕಗಳೇ ಇರುತ್ತಿದ್ದವು. ಅಂದರೆ ಎದ್ದು ಹೋದವರನ್ನು ಎಷ್ಟು ಅಂತ ಕಾಯುವುದು?ಅದಕ್ಕೆ ಮಿತಿ ಇಲ್ಲವೇ?
ಕಾಯುತ್ತಾ. . . ಕಾಯುತ್ತಾ. . . . .
ಭಾವ ನಿರ್ವಾತದಲ್ಲಿ ಲೀನವಾಗಿ
ಜೀವ ಆವಿಯಾಗಿ
ದೇಹ ಮರೆಯಾದರೂ
ಕಾಯಾ ವಾಚಾ ಮನಸಾ
ಕಾದ ನಿರಮ್ಮಳ. ( ಕಾಯುತ್ತಾ. . . ಕಾಯುತ್ತಾ. . . . . )

ಬಿಟ್ಟು ಹೋದವರು ಮಕ್ಕಳಾಗಿ ಹುಟ್ಟಿಬರುತ್ತಾರಂತೆ!ಆದರೆ ಬಿಟ್ಟು ಹೋದವರ ನೆನಪುಗಳು?. ಕವಿ ಬಿಟ್ಟು ಹೋಗಿರುವ ವ್ಯಕ್ತಿ, ವಸ್ತು ಮತ್ತು ಸಮಸ್ತವನ್ನು ಬಿಟ್ಟುಬಂದ ಊರಿಗೆ ಹೋಲಿಕೆ ಮಾಡುತ್ತಾ ಬರೆಯುತ್ತಾರೆ. ಬರೆದು ಲೇಖನಿ ಕೆಳಗಿಡುತ್ತಾರೆ.

ಆ ಊರು, ಅಲ್ಲಿನ ಕೇರಿಗಳು,
ಗುಡಿಸಲುಗಳು, ಮನೆಗಳು,
ಮಹಡಿಗಳು,
ಗಿಡಮರಬಳ್ಳಿ, ಕೆರೆಕೊಳ್ಳ,
ಮಣ್ಣು, ಮಸಣ,
ಮಂದಿರಮಸೀದಿಗಳು,
ಶಾಲೆಗುಡಿಗಳು,
ಹರಸಿದ ಹೃದಯಗಳು,
ತಿದ್ದಿದ ಮನಸುಗಳು,
ಅನ್ನ ಬಡಿಸಿದ ಕೈಗಳು,
ಸ್ಪಂದಿಸಿದ ಜೀವಗಳ
ನೆನಪಿನ ಬುತ್ತಿಯ
ಕಟ್ಟಿಕೊಂಡು ಬಂದಿರಲು
ಅದು ಅಕ್ಷಯಪಾತ್ರೆಯಾಗಿ
ನೆನಪಿನ ಸವಿಯನುಣಿಸುತ್ತಿರಲು
ಬಿಟ್ಟು ಬಂದ ಊರು
ಬಿಟ್ಟು ಕೊಡುವುದಿಲ್ಲ. ( ಬಿಟ್ಟು ಬಂದ ಊರು)

ಸ್ವಗತದಂತೆ ಹೇಳಿಕೊಂಡ, ಬರೆಸಿಕೊಂಡ, ಈ ಕವಿತೆಗಳನ್ನು ಎಲ್ಲಾ ಸಹೃದಯ ಮನಸ್ಸುಗಳು ಓದಿ ಹರಸಲಿ, ಆರೈಸಲಿ. ನಿಮ್ಮ-ನಿಮ್ಮ ಬಾಳ ನೌಕೆಗಳು, ಅರ್ಧ ದಾರಿಯಲ್ಲಿ ನಿಂತು ಹೋಗದೆ, ಪ್ರೀತಿ ಎಂಬ ಬೆಳಕಿನ ದೀಪದೊಂದಿಗೆ ಯಶಸ್ವಿಯಾಗಿ ದಡವನ್ನು ಸೇರುವಂತಾಗಲಿ. ರೇವಣಸಿದ್ದಪ್ಪ. ಜಿ. ಆರ್ ಇವರ ಕಾವ್ಯಯಾನದ ಬೆಳಕು, ಇನ್ನಷ್ಟು ಪಸರಿಸಲಿ.

ಪುಸ್ತಕ್ಕಾಗಿ ಸಂಪರ್ಕಿಸಿ, ಯಶೋಧ ಪುಸ್ತಕ ಪ್ರಕಾಶನ, ದಾವಣಗೆರೆ. 9535850486.

-ಜ್ಯೋತಿ ಕುಮಾರ್. ಎಂ(ಜೆ. ಕೆ. ).


ಜ್ಯೋತಿ ಕುಮಾರ್. ಎಂ(ಜೆ. ಕೆ. ), ಇವರು ಓದಿದ್ದು, ಎಮ್, ಎಸ್ಸಿ. ಎಮ್, ಇಡಿ. ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟ್ರು. ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು. ಸದ್ಯ ಸಂತೆಬೆನ್ನೂರಿನಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಹವ್ಯಾಸಿ ಬರಹಗಾರರಾಗಿದ್ದು, ಪ್ರಸ್ತುತ ಇವರ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಹಾಯ್ ಬೆಂಗಳೂರು, ಮಂಗಳ, ನಿಮ್ಮೆಲ್ಲರ ಮಾನಸ ಪತ್ರಿಕೆ, ಬುಕ್ ಬ್ರಹ್ಮ, ಪಂಜು ಮ್ಯಾಗಝೀನ್, ಪ್ರತಿ ಲಿಪಿ, ಮಾಮ್ಸ್ ಪ್ರೆಸ್ಸೋ ಇವುಗಳಲ್ಲಿ ಪ್ರಕಟವಾಗಿವೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x