ಕನ್ನಡದ ಕನ್ನಡಿ: ಡಾ. ಹೆಚ್ ಎನ್ ಮಂಜುರಾಜ್

ಪ್ರತಿ ವರುಷ ನವೆಂಬರ್ ಬಂದಾಗಲೆಲ್ಲ ನಮಗೆ ಕನ್ನಡ ನೆನಪಾಗುತ್ತದೆ ಅಥವಾ ನಾಡು-ನುಡಿ-ನೆಲ-ಜಲ-ಸಂಸ್ಕೃತಿಗಳನ್ನು ಕುರಿತು ಮಾತಾಡಲು ನೆಪವಾಗುತ್ತದೆ! ಅದರಲೂ ಕನ್ನಡ ಭಾಷಾಭಿಮಾನ ಮುಗಿಲು ಮುಟ್ಟುವ ಮಾಸವಿದು. ಕನ್ನಡಾಂಬೆಯನು ಪೂಜಿಸಿ ನಮ್ಮ ಅಸ್ಮಿತೆಯನ್ನು ಸ್ಮೃತಿಗೆ ತಂದುಕೊಳ್ಳುವ ಸಂದರ್ಭವಿದು. ಉಳಿದಂತೆ ನಮ್ಮದು ನಿತ್ಯದ ಬದುಕಿನ ಪಡಿಪಾಟಲು ; ಆಗೆಲ್ಲಾ ಕನ್ನಡತನ ಹಿನ್ನೆಲೆಗೆ ಸರಿಯುತ್ತದೆ. ನವೆಂಬರ್ ನಾಯಕರಾಗದೇ ಎಲ್ಲ ಮಾಸಗಳಲ್ಲೂ ಮಾಸದಂಥ ಕನ್ನಡದ ಕಾಯಕದಲ್ಲಿ ನಿರತರಾದ ಸದ್ದು ಸುದ್ದಿಯಿಲ್ಲದ ಸಾವಿರಾರು ಮಂದಿ ನಮ್ಮೊಡನಿದ್ದಾರೆ. ವೃತ್ತಿ ಯಾವುದಾದರೇನು? ಕಲಿತದ್ದು ಏನಾದರೇನು? ಕನ್ನಡದಲ್ಲಿ ಬರೆಯುವ, ನುಡಿಯುವ ಇಂಥ ನಿಜ ಕನ್ನಡಾಂಬೆಯ ಮಕ್ಕಳು ಈಗ ಜಗತ್ತಿನೆಲ್ಲೆಡೆ ಇದ್ದಾರೆ. ಸೋಷಿಯಲ್ ಮೀಡಿಯ ಇವರಿಗೆ ನಿಜದ ಆಡುಂಬೊಲವಾಗಿದೆ. ವಿದ್ಯುನ್ಮಾನ ಮಾಧ್ಯಮಗಳಿಂದ ಕನ್ನಡ ನಶಿಸುತ್ತಿದೆ ಎಂದು ಕೂಗೆಬ್ಬಿಸುವ ವಿದ್ವಾಂಸರು ಸ್ವಲ್ಪ ಇತ್ತ ಗಮನ ಕೊಟ್ಟರೆ ಅವರಿಗೆ ಮನವರಿಕೆ ಆಗುತ್ತದೆ. ಸಾವಿರಾರು ಮಿಂಬ್ಲಾಗುಗಳಲ್ಲಿ ಲಘುವಾದದ್ದು ಮಾತ್ರವಲ್ಲ, ಸೀರಿಯಸ್ ಸಂಗತಿಗಳೂ ಚರ್ಚಿತವಾಗುತ್ತವೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಅದು ಹೇಗೋ ಸಮಯ ಮಾಡಿಕೊಂಡು ಯುವ ಮನಸ್ಸುಗಳು ಭಾಷೆ, ಸಾಹಿತ್ಯ, ಸಂಸ್ಕೃತಿ ಎಂದು ಓದುವ ಮತ್ತು ಬರೆಯುವ ಹವ್ಯಾಸವನ್ನು ಗಂಭೀರವಾಗಿಯೇ ಮಾಡುತ್ತಿದ್ದಾರೆ. ಇನ್ನು ಫೇಸ್‌ಬುಕ್, ಇ-ಮ್ಯಾಗಜೀನ್, ಇ-ಪತ್ರಿಕೆಗಳೂ ಕನ್ನಡದ ಕೆಲಸವನ್ನು ಮಾಡುತ್ತಿವೆ. ಬರೆಯುವ ಸ್ಲೇಟು ಯಾವುದಾದರೇನು? ಬರೆಯುವುದು ಮುಖ್ಯವಲ್ಲವೇ? ಹಾಗಾಗಿ ಎಲೆಕ್ಟ್ರಾನಿಕ್ ಮಿಡಿಯಾಗಳಿಂದ ಕನ್ನಡ ಮಡಿಯುತ್ತಿದೆ ಎಂದು ಆತಂಕಿತರಾಗಬೇಕಿಲ್ಲ.

ಇನ್ನು ನಮ್ಮ ಕನ್ನಡದ್ದು ಪ್ರಾಚೀನ ಪರಂಪರೆ ಎಂದು ಎಷ್ಟು ವರ್ಷ ಹೇಳಿಕೊಂಡು ತಿರುಗುವುದು? ಹಾಗೆ ನೋಡಿದರೆ ಎಲ್ಲರ ಮಾತೃಭಾಷೆಗಳಿಗೂ ಇಂಥದೇ ಸ್ಥಾನಮಾನ ಮತ್ತು ಪರಂಪರೆ ಇರುತ್ತದೆ. ಕನ್ನಡದ್ದು ದೀರ್ಘಕಾಲದ್ದು. ಈಗಿನ ಇಂಗ್ಲಿಷ್‌ಗಿಂತ ಹೆಚ್ಚು ಪ್ರಾಚೀನವಾದದ್ದು. ಕನ್ನಡ ಸಂಸ್ಕೃತಿ ಎಂದು ಹೇಳಬಹುದಾದ ಮತ್ತು ಗುರುತಿಸಬಹುದಾದ ಹಲವು ಮಹತ್ವಗಳು ಘಟಿಸಿವೆ; ದಾಖಲಾಗಿವೆ; ಅಭಿಮಾನ ಮೂಡಿಸಿವೆ. ಅಂದಮಾತ್ರಕೇ ಯಾವ ಭಾಷೆ ಹೆಚ್ಚು? ಯಾವುದು ಕಡಮೆ? ಎಂದಲ್ಲ. ಭಾಷೆಗಳ ನಡುವೆ ಯಾವ ವೈರತ್ವವೂ ಇರುವುದಿಲ್ಲ. ಇನ್ನೂ ಭಾಷಿಕರು ದ್ವೇಷಾಸೂಯೆಗಳನ್ನು ಇಟ್ಟುಕೊಂಡಿರಬಹುದು. ಆದರೆ ಭಾಷೆಗಳ ನಡುವೆ ಯಾವತ್ತೂ ಕೊಡು-ಕೊಳು ಇದ್ದೇ ಇರುತ್ತದೆ. ಭಾಷಿಕರಿಂದಲೇ ಭಾಷೆ ಬದುಕುತ್ತದಾದರೂ ಭಾಷಿಕರಾಚೆಗೂ ಇದರ ಹರವು ಮತ್ತು ಬೆಳವು ಇರುತ್ತದೆ!

ಭಾಷೆಗಳ ನಡುವೆ ಎರಡು ರೀತಿಯ ಸಂಬಂಧಗಳಿರುತ್ತವೆ: ಒಂದು ರಕ್ತ ಸಂಬಂಧ, ಇನ್ನೊಂದು ಸ್ನೇಹ ಸಂಬಂಧ. ಒಂದು ಮೂಲಭಾಷೆಯಿಂದ ವಿಕಸಿತಗೊಂಡವುಗಳ ನಡುವೆ ರಕ್ತ ಸಂಬಂಧವಿದ್ದರೆ, ಬೇರೊಂದು ಭಾಷೆಯಿಂದ ವಿಕಸಿತಗೊಂಡವುಗಳ ನಡುವೆ ಇರುವುದು ಸ್ನೇಹ ಸಂಬಂಧ. ಮೂರನೆಯದು ಇನ್ನೊಂದಿದೆ: ಅದೇ ಅಸಂಬಂಧ ಸಂಬಂಧ! ಉದಾಹರಣೆಗೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳ ಭಾಷೆಗಳ ನಡುವೆ ಇರುವುದು ರಕ್ತ ಸಂಬಂಧ. ಅದೇ ಕನ್ನಡವು ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳೊಂದಿಗೆ ಇಟ್ಟುಕೊಂಡಿರುವುದು ಸ್ನೇಹ ಸಂಬಂಧ. ಏಕೆಂದರೆ ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗಳು ಬೇರೊಂದು ಮೂಲಭಾಷೆಯಿಂದ ಉಗಮಗೊಂಡವು. ಯಾವುದೋ ದೇಶದ ಯಾವುದೋ ಭಾಷೆಯು ಕನ್ನಡದ ಮೇಲೆ ಯಾವ ಪ್ರಭಾವವನ್ನೂ ಬೀರಿಲ್ಲ, ಕೊಡು-ಕೊಳೆ ನಡೆದಿಲ್ಲ ಎನ್ನುವುದಾದರೆ ಅದು ಅಸಂಬಂಧ ಸಂಬಂಧ! ಹಾಗಾಗಿ ಭಾಷೆಗಳ ನಡುವೆ ಶತ್ರುತ್ವ ಇರುವುದಿಲ್ಲ. ಅದನ್ನು ನಾವು ನಮ್ಮ ಹಿತಾಸಕ್ತಿಗಳಿಗನುಗುಣವಾಗಿ ಮತ್ತು ಅಂಧಾಭಿಮಾನಗಳಿಂದಾಗಿ ಹುಟ್ಟಿ ಹಾಕಿಕೊಂಡಿರುವಂಥವು.

ಡಾ. ಹಾ ಮಾ ನಾಯಕರು ಹೇಳುತಿದ್ದರು: ‘ಇಂಗ್ಲಿಷ್ ನನಗೆ ಬೇಕು; ಕನ್ನಡಕ್ಕೆ ಬದಲಾಗಿ ಅಲ್ಲ!’ ಎಂದು. ಅಂದರೆ ಒಂದನ್ನು ಪ್ರೀತಿಸಲು ಇನ್ನೊಂದನ್ನು ದ್ವೇಷಿಸಬೇಕಿಲ್ಲ. ಇದುವೇ ಬದುಕಿನ ಸರಳ ಸತ್ಯ. ಇಂಗ್ಲಿಷ್ ಮಾತಾಡುವವರನ್ನು ಕನ್ನಡದ್ವೇಷಿಗಳೆಂದೂ ಕನ್ನಡ ಮಾತಾಡುವವರನ್ನು ಆಂಗ್ಲವಿರೋಧಿಗಳೆಂದೂ ಭಾವಿಸಬಾರದು. ಇಂಗ್ಲಿಷನ್ನು ಮತ್ತದರ ವಿಸ್ತಾರ ಸಾಹಿತ್ಯವನ್ನು ಸರಿಯಾಗಿ ಓದಿಕೊಂಡವರು ಕನ್ನಡದ ಅಮೂಲ್ಯನಿಧಿಯನ್ನು ಪರಾಂಬರಿಸುತ್ತಾರೆ ಮತ್ತು ಹೆಮ್ಮೆಯಿಂದ ಓದುತ್ತಾರೆ. ಹಾಗೆಯೇ ಕನ್ನಡ ಭಾಷಾಸಾಹಿತ್ಯಾಭಿಮಾನಿಗಳು ಇಂಗ್ಲಿಷಿನ ಮೂಲಕ ಕನ್ನಡ ಸಾಹಿತ್ಯವು ಸಿರಿವಂತಗೊಂಡ ಬಗೆಯನ್ನು ಅರಿಯುತ್ತಾರೆ.

ಈಗ ಕಾಲ ಬದಲಾಗಿದೆ. ಎಲ್ಲ ಭಾಷೆಗಳಲ್ಲಿ ಇರುವ ವಿಶೇಷತೆ ಮತ್ತು ಒಳ್ಳೆಯ ಅಂಶಗಳು ನಮಗೆ ಬೇಕಾಗಿವೆ. ನಮ್ಮ ಭಾಷೆ ಬೆಳೆಯುವುದೇ ಇನ್ನೊಂದು ಭಾಷೆಯೊಂದಿಗೆ ಅರ್ಥಪೂರ್ಣ ಸಂವಾದ ನಡೆಸಿದಾಗ. ‘ಬೀದಿ ಮಕ್ಕಳು ಬೆಳೆದವು; ಕೋಣೆಯ ಮಕ್ಕಳು ಕೊಳೆತವು’ ಎಂಬ ಜನಪದ ಗಾದೆಯಿದೆ. ಇದು ಮೂಲತಃ ಮಕ್ಕಳ ಇಮ್ಯುನಿಟಿಯನ್ನು ಕುರಿತು ಹೇಳಿರುವುದಾದರೂ ನಾನು ಇದನ್ನು ಭಾಷೆಗೆ ತಳುಕು ಹಾಕಿ ನೋಡಲು ಇಷ್ಟ ಪಡುತ್ತೇನೆ. ನಮ್ಮ ಭಾಷೆಯು ಹೆಚ್ಚು ಹೆಚ್ಚು ಬೀದಿಗೆ ಬಿದ್ದಂತೆ ಹೆಚ್ಚು ವಿಕಸಿತವಾಗುತ್ತದೆ; ಹೆಚ್ಚು ಜನರನ್ನು ತಲಪುತ್ತದೆ. ಬೇರೆ ಭಾಷೆಯ ಪದಗಳನ್ನು ತನ್ನ ಪದಕೋಶಕ್ಕೆ ತೆಗೆದುಕೊಂಡು ಬೆಳೆಯುತ್ತದೆ. ಇಂಗ್ಲಿಷ್ ಬೆಳೆದದ್ದೇ ಹೀಗೆ. ಕರ್ನಾಟಕದಷ್ಟು ಇರುವ ಇಂಗ್ಲೆಂಡು ಒಂದು ಕಾಲದಲ್ಲಿ ಇಡೀ ಪ್ರಪಂಚವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಆಡಳಿತ ಮಾಡಿದ್ದರ ಫಲವೇ ಇಂದು ಇಂಗ್ಲಿಷ್ ಭಾಷೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವುದು. ಅದೇ ನಮ್ಮ ಅಶೋಕ ಚಕ್ರವರ್ತಿಯು ಜಗತ್ತನ್ನು ಆಳಿದ್ದರೆ ಸಂಸ್ಕೃತವೂ ನಮ್ಮ ಪುಲಕೇಶಿಯೋ ಕೃಷ್ಣದೇವರಾಯ ದೊರೆಯೋ ಪ್ರಪಂಚವನ್ನು ಆಳಿದ್ದರೆ ನಮ್ಮ ಕನ್ನಡವೂ ವಿಶ್ವವಿಖ್ಯಾತವಾಗುತ್ತಿತ್ತು ಅಲ್ಲವೆ? ಯಾವತ್ತೂ ಆಳುವವರ ಭಾಷೆಯನ್ನು ಆಳಿಸಿಕೊಳ್ಳುವವರು ಹಿಂಬಾಲಿಸಬೇಕಾಗುತ್ತದೆ. ಇದು ಪ್ರಭುತ್ವದ ರಾಜಕಾರಣ.

ಕನ್ನಡವು ಸಾಯುತ್ತಿರುವ ಭಾಷೆಗಳಲ್ಲಿ ಒಂದು ಎಂದು ಯಾರೋ ಹಿಂದೆ ಬಡಬಡಿಸಿದರು. ಅದನ್ನು ನಾವೇ ಹೆಚ್ಚು ಹೇಳಿಕೊಳ್ಳುತ್ತಾ ಬಂದು ನಿಜ ಮಾಡಲು ಹೊರಟಿದ್ದೇವೆ. ಆದರೆ ಕನ್ನಡ ಮಾತಾಡುವವರು ಇರುವವರೆಗೂ ನಮ್ಮ ಭಾಷೆಯು ಸಾಯುವುದಿಲ್ಲ. ಸಂಸ್ಕೃತವನ್ನು ಮೃತಭಾಷೆ ಎಂದರು, ಅದನ್ನು ಕಂಡರೆ ಆಗದವರು ಮತ್ತು ಅರ್ಥ ಮಾಡಿಕೊಳ್ಳಲು ಆಗದ ಅಶಕ್ತರು! ಖಂಡಿತಾ ಯಾವ ಭಾಷೆಯೂ ಸಾಯುವುದಿಲ್ಲ. ಇನ್ನೊಂದು ಭಾಷೆಯೊಂದಿಗೆ ಒಂದಾಗಿ ಬದುಕುತ್ತಿರುತ್ತದೆ. ಭಾರತದ ಎಲ್ಲ ಭಾಷೆಗಳಲ್ಲೂ ಸಂಸ್ಕೃತವು ಉಸಿರಾಡುತ್ತಿದೆ. ಭಾಷಿಕರು ಇರುವವರೆಗೂ ಭಾಷೆಗೆ ಯಾವ ಆತಂಕವಿಲ್ಲ. ಆದರೆ ಕನ್ನಡವು ಪ್ರಾದೇಶಿಕ ಭಾಷೆ. ಇದರ ವಿಸ್ತೃತತೆ ಕಡಮೆ. ಭಾಷಿಕರೂ ಕಡಮೆ. ಆದಾಗ್ಗ್ಯೂ ನಮ್ಮ ಕನ್ನಡವು ಅಪರಿಮಿತ ಸಾಧನೆ ಮಾಡಿದೆ. ಜನಪದ ಮತ್ತು ಶಿಷ್ಟ ಎರಡೂ ರೂಪಗಳಲ್ಲಿ ಇದರ ಸಾಹಿತ್ಯ ಮತ್ತು ಸಂಸ್ಕೃತಿ ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗಿದೆ. ಪ್ರಾಚೀನ ಕಾಲದಲ್ಲಿ ಸಂಸ್ಕೃತದಿಂದಲೂ ಆಧುನಿಕ ಕಾಲದಲ್ಲಿ ಇಂಗ್ಲಿಷ್ ಭಾಷೆಯಿಂದಲೂ ನಮ್ಮ ಕನ್ನಡವು ಬೆಳೆದಿದೆ; ಅಳಿದಿಲ್ಲ! ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳು ಕನ್ನಡಕ್ಕೆ ಹೆತ್ತ ತಾಯಿ ಅಲ್ಲದಿರಬಹುದು; ಸಾಕುತಾಯಿಯಾಗಿ ಕೈ ಹಿಡಿದು ನಡೆಸಿವೆ. ಅಂದರೆ ನಾವು ಕನ್ನಡಿಗರು ಇವೆರಡೂ ಭಾಷೆಗಳಿಗೆ ಋಣಿಯಾಗಿದ್ದೇವೆ. ಹಾಗೆಯೇ ಕನ್ನಡ ಕೂಡ ಹಲವು ಭಾಷೆಗಳ ಮೇಲೆ ಪ್ರಭಾವ ಬೀರಿದೆ. ಭಾಷೆಯು ಕೇವಲ ಸಂವಹನಕಷ್ಟೇ ಎಂಬ ಆಲೋಚನೆಯಿಂದ ನಾವು ಬಲು ದೂರ ನಡೆದು ಬಂದು ಭಾಷೆಯೆಂದರೆ ಸಂಸ್ಕೃತಿ ಎಂದೂ ಅದೇ ಬದುಕಿನ ಬನಿ ಎಂದು ತಿಳಿಯುವಷ್ಟು ಪ್ರಬುದ್ಧರಾಗಿದ್ದೇವೆ.

ಈಗೀಗ ನಮ್ಮ ಕನ್ನಡದ ಅಭಿಮಾನ ಹೆಚ್ಚಾಗುತ್ತಿದೆ. ಬೇರೆ ಬೇರೆ ವೃತ್ತಿ, ಕ್ಷೇತ್ರ, ಆಸಕ್ತಿಗಳಲ್ಲಿ ತೊಡಗಿದವರೂ ಕನ್ನಡ ಭಾಷೆ, ಸಾಹಿತ್ಯ, ಲಿಪಿ, ಪರಂಪರೆಗಳಲ್ಲಿ ತಜ್ಞತೆಯನ್ನು ಪಡೆಯುತ್ತಿದ್ದಾರೆ. ಕನ್ನಡವನ್ನು ಶಾಸ್ತ್ರೋಕ್ತವಾಗಿ ಓದಿಕೊಂಡವರಿಗಿಂತಲೂ ವಿಭಿನ್ನವಾಗಿ ಆಲೋಚಿಸುತ್ತಿದ್ದಾರೆ. ಹೊಸದನ್ನು ಕಾಣುವ ಮತ್ತು ಕಟ್ಟುವ ಸೃಜನಾತ್ಮಕತೆಯಲ್ಲಿ ಅಭೂತಪೂರ್ವ ಸಾಧನೆ ಮಾಡುತ್ತಿದ್ದಾರೆ. ಕನ್ನಡ ಮಾತೃಭಾಷೆಯಾಗದವರು ಕೂಡ ಕನ್ನಡವನ್ನು ಕುರಿತ ಆಳವಾದ ತಿಳಿವಿನಿಂದ ಸಂಪನ್ನವಾಗಿಸುತ್ತಿದ್ದಾರೆ. ವಿದೇಶದಲ್ಲಿರುವ ಕನ್ನಡಿಗರು ಸಹ ಅದಕ್ಕೆ ಸರಿಸಮನಾಗಿ ಕನ್ನಡದ ಕೆಲಸವನ್ನು ಮಾಡುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ವಿದ್ಯಾವಂತ ಯುವಜನತೆಯು ಅದರಲೂ ಕಾರ್ಪೊರೇಟ್ ಜಗತ್ತಿನಲ್ಲಿ ಮಗ್ನರಾದವರು ಕನ್ನಡದ ಕಂಪು ಹರಡುವಲ್ಲಿ ಹಿಂದೆ ಬಿದ್ದಿಲ್ಲ. ಆಧುನಿಕ ಸಂವಹನ ಮತ್ತು ಸಂಪರ್ಕ ಮಾಧ್ಯಮಗಳು ಕನ್ನಡವನ್ನು ಬೆಳೆಸುತ್ತಿವೆ. ಕನ್ನಡತನವನ್ನು ಬಿತ್ತುತ್ತಿವೆ. ನಮ್ಮ ಭಾಷೆ, ನಮ್ಮ ಸಾಹಿತ್ಯ ಎಂಬ ಸದಭಿಮಾನ ಅಧಿಕವಾಗುತ್ತಿದೆ. ಅದಾಗಲೇ ಶ್ರೀಮಂತವಾಗಿರುವ ಕನ್ನಡ ಸಾಹಿತ್ಯವು ಇನ್ನಷ್ಟು ವಿನೂತನ ಆಯಾಮಗಳನ್ನು ಪಡೆದು ಜಗತ್ತಿನ ಯಾವುದೇ ಭಾಷಾ ಸಾಹಿತ್ಯಕ್ಕೆ ಸೆಡ್ಡು ಹೊಡೆದಿದೆ. ಇದಕ್ಕೆ ಬಹಳ ಮುಖ್ಯವಾಗಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಪ್ರೇರಣೆ ಮತ್ತು ಪ್ರಭಾವಗಳೇ ಕಾರಣ. ಸತ್ಯವೂ ವಾಸ್ತವವೂ ಆದ ಸಂಗತಿಯಿದು. ಇವೆರಡೂ ಭಾಷೆಗಳಿಂದ ನಮ್ಮ ಕನ್ನಡವು ನಿಚ್ಚಳವಾಗಿದೆ. ಕನ್ನಡಕ್ಕೆ ಇಂಗ್ಲಿಷ್ ವೈರಿಯಲ್ಲ; ಸಂಸ್ಕೃತವು ವಿಷವಲ್ಲ ಎಂಬುದನ್ನು ಅರಿತರೆ ನಾವು ನಿಜ ಕನ್ನಡಿಗರಾಗುತ್ತೇವೆ. ಹೆಚ್ಚು ಭಾಷೆಗಳನ್ನು ಕಲಿಯುವ ಅಥವಾ ಬೇರೆ ಭಾಷೆಗಳ ಪದಗಳನ್ನು ಬಳಸುವ ಮೂಲಕ ನಮ್ಮ ಕನ್ನಡವನ್ನು ಶ್ರೀಮಂತ ಮಾಡಲು ಸಾಧ್ಯ. ಇಂಗ್ಲಿಷು ಪಾಂಡಿತ್ಯಪೂರ್ಣವಾಗಿದ್ದೇ ಹೀಗೆ. ಭರವಸೆ ಮತ್ತು ಆಶಾವಾದಗಳಿಂದ ನೋಡುವುದಾದರೆ ಎಲೆಕ್ಟ್ರಾನಿಕ್ ಮಾಧ್ಯಮಗಳು ನುಗ್ಗಿ ಬಂದರೂ ಕನ್ನಡದ ಕೆಲಸಕ್ಕೇನು ಅಡ್ಡಿಯಾಗಿಲ್ಲ. ಬೆಳೆಸುವುದರತ್ತ ಆಸಕ್ತವಾಗಿವೆ.

ಡಿಜಿಟಲ್ ಕ್ರಾಂತಿ ಎಷ್ಟೊಂದು ತೀವ್ರವಾಗಿದೆಯೆಂದರೆ ನಾವಾಡುವ ಮಾತು ಕ್ಷಣಾರ್ಧದಲ್ಲಿ ಬೇಕಾದ ಭಾಷೆಗೆ ತರ್ಜುಮೆಯಾಗುವಷ್ಟು. ಈಗಾಗಲೇ ಕಂಪ್ಯೂಟರು ಮತ್ತು ಗೂಗಲ್‌ಗಳ ನೆರವಿನಿಂದ ನಮಗೆ ಬೇಕಾದ ಭಾಷೆಯಲ್ಲಿ ಬೇಕಾದುದನ್ನು ಪಡೆಯಬಹುದಾಗಿದೆ ಮತ್ತು ಬರೆಯಬಹುದಾಗಿದೆ. ರಾಷ್ಟ್ರನಾಯಕರುಗಳೇ ಭಾಷೆಗಳ ಮಿತಿಯನ್ನು ದಾಟಿ ಸಂವಹನ ನಡೆಸುತ್ತಿದ್ದಾರೆ. ದೇಶ ವಿದೇಶಗಳ ಜನನಾಯಕರುಗಳೊಂದಿಗೆ ಸುಲಲಿತವಾಗಿ ಸಂವಾದ ಮಾಡುತ್ತಿದ್ದಾರೆ. ಹೀಗಿರುವಾಗ ಭಾಷೆಯು ಅಡ್ಡಿಯಾಗುತ್ತದೆಂಬ ಆತಂಕ ಮರೆಯಾಗುತ್ತಿದೆ. ಆದರೆ ಒಂದು ಭಾಷೆಯ ಸಾಂಸ್ಕೃತಿಕ ಪದಕೋಶವು ಭಾಷಾಂತರವಾಗುವುದೇ? ಎಂದು ಪ್ರಶ್ನಿಸಿದರೆ ಇದಕ್ಕೆ ಉತ್ತರವಿಲ್ಲ. ಏಕೆಂದರೆ ಪ್ರತಿಯೊಂದು ಭಾಷೆಗೂ ತನ್ನದೇ ಆದ ಸ್ವಂತ ಸಾಂಸ್ಕೃತಿಕ ಪದಕೋಶವಿರುತ್ತದೆ. ದೇಶಗಳ ನಡುವೆ ಸಂಸ್ಕೃತಿ ವ್ಯತ್ಯಾಸ ಅಥವಾ ವೈವಿಧ್ಯ ಇರುವಾಗ ಇದು ಕಷ್ಟ. ಕೆ ಎಸ್ ನರಸಿಂಹಸ್ವಾಮಿಯವರ ರಾಯರು ಬಂದರು ಮಾವನ ಮನೆಗೆ ಎಂಬ ಕವಿತೆಯಲ್ಲಿ ‘ಪದುಮಳು ಒಳಗಿಲ್ಲ’ ಎಂಬ ಸಾಲಿದೆ. ಇದರರ್ಥ ಬೇರೆಯೇ. ಅಂದರೆ ಅವಳು ಮನೆಯ ಒಳಗೆ ಇಲ್ಲ ಎಂದಲ್ಲ! ಇದು ಒಂದು ಕಾಲದ ಆಚರಣೆ. ಸಂಸ್ಕೃತಿ ಸಂಬಂಧಿತ ಮತ್ತು ಪೋಷಿತ. ಇದನ್ನು ಅನುವಾದಿಸಿದರೆ ಆ ಸಾಂಸ್ಕೃತಿಕ ಚಹರೆ ಕ್ಯಾರೀ ಆಗುವುದಿಲ್ಲ! ಈ ತೊಡಕು ಯಾವತ್ತೂ ಇದ್ದೇ ಇದೆ. ವಿದ್ಯುನ್ಮಾನ ಮಾಧ್ಯಮಗಳು ಬರುವ ಮುಂಚೆಯೂ ಈ ತೊಡಕು ಇತ್ತು!! ಮುಂದೊಂದು ದಿನ ಈ ತೊಡಕಿಗೂ ಪರಿಹಾರ ಸಿಗಬಹುದು. ಗೊತ್ತಿಲ್ಲ.

ಕೊನೆಯಲ್ಲೊಂದು ಹಗುರ ಮಾತು: ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸುಂಕ ಕೊಡದೇ ಅಧಿಕೃತವಾಗಿ ಅಂದರೆ ರಾಜಾರೋಷವಾಗಿ ತರಬಹುದಾದ್ದು ಯಾವುದಾದರೂ ಇದ್ದರೆ ಅದು ಭಾಷೆ! ಫ್ರಾನ್ಸ್ ದೇಶಕ್ಕೆ ಹೋಗಿ ಬರುವಾಗ ನಾಲ್ಕೈದು ಫ್ರೆಂಚ್ ಪದಗಳನ್ನು ಕಲಿತು, ಬಳಸಿ, ಅದನ್ನು ನಾನು ಬುದ್ಧಿಮುಖೇನ ಕರ್ನಾಟಕಕ್ಕೆ ಬಂದು ಪ್ರಚುರಪಡಿಸಿದರೆ ಅದು ಕಳ್ಳತನ ಎನಿಸಿಕೊಳ್ಳುವುದಿಲ್ಲ! ಚತುರವಂತಿಕೆ ಎನಿಸಿಕೊಳ್ಳುತ್ತದೆ.
-ಡಾ. ಹೆಚ್ ಎನ್ ಮಂಜುರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ನಾಗರಾಜ್
10 months ago

ಭಾಷೆಗೆ ಸಾವಿಲ್ಲ…. ಇದನ್ನು ಹೇಳಿದ್ದವರಿಗೆ ನಿಮ್ಮ ಲೇಖನ ಸೂಕ್ತ ಉತ್ತರ ಕೊಡುತ್ತದೆ. ನಾವು ಭಾರತ ಒಕ್ಕೂಟ ವ್ಯವಸ್ಥೆ ಯನ್ನು ಒಪ್ಪಿಕೊಂಡಿರುವುದರಿಂದ ಹಲವು ಪ್ರಾಂತೀಯ ಭಾಷೆಗಳು ತಮ್ಮ ಅಸ್ಮಿತೆ ಯನ್ನು ಉಳಿಸಿಕೊಳ್ಳಲು ತೊಳಲಾಡುತ್ತಿವೆ. ಅದೇ ರೀತಿಯಲ್ಲಿ ನಮ್ಮ ಕನ್ನಡವೂ ಕೂಡ.
ಎಲೆಕ್ಟ್ರಾನಿಕ್ ಮೀಡಿಯಾದ ಬಳಕೆಯಿಂದ ಸದರಿ ಫೀಲ್ಡ್ ನಲ್ಲಿ ವರ್ಕ್ ಮಾಡುತ್ತಿರುವುದರಿಂದ ಕನ್ನಡದ ಕಂಪು ದೇಶ ವಿದೇಶಗಳಲ್ಲಿ ಹರಡುತ್ತಿದೆ. ಮಿಡ್ಲೀಷ್ಟ್ ದೇಶಗಳಲ್ಲಿ, ಅಮೆರಿಕೆಯಲ್ಲಿ ಅಕ್ಕ, ಅಲ್ಲಿಯೇ ಸಹ್ಯಾದ್ರಿ ಕನ್ನಡ ಸಂಘ, ( SKS)ಸಿಯಾಟಲ್ ಕನ್ನಡ ಸಂಘ (SKS) ನಮ್ಮ ನೆಲದ ಸೌರಭವವನ್ನು ಕಲೆ ಸಾಹಿತ್ಯ ಸಂಗೀತ ಚರ್ಚೆ ಮುಂತಾದ ನುಡಿ ಯಾತ್ರೆಯ ಕೆಲಸ ಮಾಡುತ್ತಿವೆ.
ಅಜಂತಾ ಎಲ್ಲೋರ ಗುಹಾಂತರ ದೇವಾಲಯಗಳ ನಿರ್ಮಾಣದಲ್ಲಿ ಕನ್ನಡ ಸಾಮ್ರಾಟರ ಕೊಡುಗೆ ಅಪಾರ. ಚಾಲುಕ್ಯರು ರಾಷ್ಟ್ರಕೂಟರು ಹೊಯ್ಸಳರು ವಿಜಯನಗರ ಸಾಮ್ರಾಜ್ಯ ಇವುಗಳಕೊಡುಗೆ ಅಪಾರ. ಆದರೆ ನಮ್ಮ ರಾಜ್ಯ ಹಾಗೂ ಭಾಷೆಗೆ 17 -18 ನೇ ಶತಮಾನಗಳು ಗುಲಾಮಿ ಸಂತತಿಯವರಿಂದಾಗಿ ಹಾಗೂ ಇಂಗ್ಲಿರಿಂದಾಗಿ ಬಹಳ ಹಿಂದಕ್ಕೆ ತಳ್ಳಲ್ಪಟ್ಟಿತು. ಅದಕ್ಕಾಗಿ ನಮ್ಮ ಅಚ್ಚ ಕನ್ನಡದ ನೆಲ ಜಲವನ್ನೆಲ್ಲಾ ಕಳೆದುಕೊಳ್ಳಬೇಕಾಯಿತು. ಕಾಸರಗೋಡು, ಸೊನ್ನಲಿಗೆ (ಶೋಲಾಪುರ) ಉದಕ ಮಂಡಲ ಇತ್ಯಾದಿ.
ಆದಾಗ್ಯೂ ಆಧುನಿಕ 19 -20 ನೇ ಶತಮಾನದಲ್ಲಿ ಕನ್ನಡ ಭಾಷೆ ಮತ್ತೆ ಮುನ್ನೆಲೆಗೆ ಬಂದು ಇಡೀ ಭಾರತದಲ್ಲಿ ಕನ್ನಡ ಸಮೃದ್ಧತೆಯನ್ನು ಹೆಚ್ಚಿನ ಮೊತ್ತದಲ್ಲಿ ಜ್ಞಾನ ಪೀಠ ಪ್ರಶಸ್ತಿ ಪಡೆಯುವ ಮೂಲಕ ಸಾಬೀತು ಪಡಿಸಿದೆ.

1
0
Would love your thoughts, please comment.x
()
x