ಕನ್ನಡಕ್ಕಾಗಿ ಒಂದನ್ನು ಒತ್ತಿ: ಪಿ. ಎಸ್. ಅಮರದೀಪ್

“ನೀವು ಕರೆ ಮಾಡಿದ ಚಂದಾದಾರರು ಬೇರೊಂದು ಕರೆಯಲ್ಲಿ  ಕಾರ್ಯನಿರತರಾಗಿದ್ದಾರೆ”. ಧ್ವನಿ ಕೇಳಿದಾಗೊಮ್ಮೆ ನಿಮಗೆ ಏನನ್ನಿಸುತ್ತೆ ಹೇಳಿ?!!!!  ಆ ಕಡೆಯವರು ಬಿಜಿ ಇದಾರೆ ಅಂತೆಲ್ಲಾ ನೀವು ಹೇಳಬಹುದು….. ಆದರೆ ನನಗೆ ಮಾತ್ರ  “ಅವ್ರು ಕರ್ನಾಟಕದಲ್ಲೇ ಇದ್ದಾರಪ್ಪ”. ಅಂತ.. ಹೌದಲ್ಲ?!!

ಮಾತಿಗೆ ಹೇಳಿದೆ…. 

ಪ್ರತಿ ಬಾರಿ ಏನಾದರೊಂದು ಬರಹ ಶುರು ಮಾಡುವ ಮುನ್ನ ಏನು ಬರೆಯಬೇಕು… ಯಾವುದರ ಬಗ್ಗೆ ಬರೀಬೇಕು. ಯಾಕೆ ಬರೀಬೇಕು ಅಂತೆಲ್ಲಾ ಅನ್ಸುತ್ತೆ… ಬರೆವಾಗ ನಿಜಕ್ಕೂ ಅಷ್ಟುದ್ದ ಏನಾದರೂ ಬರೆದೇನು ಎಂಬ ಖಾತರಿ ಇರುವುದಿಲ್ಲ….  ನನಗೆ ಸ್ಪಷ್ಟವಾಗಿ ಬರೀಬಲ್ಲೆ ಎನ್ನುವ ನಂಬಿಕೆ ಇರುವುದು ಕನ್ನಡ ಭಾಷೆಯಲ್ಲಿ ಮಾತ್ರ… ಇಂಗ್ಲೀಷೂ ಬರೆಯುತ್ತೇನೆ.  ಆದರೆ ಅದು ಕೇವಲ ಆಫಿಯಷಿಯಲ್ಲಾಗಿ ಅವಶ್ಯವಿದ್ದಾಗ, ಕನ್ನಡ ಗೊತ್ತಿಲ್ಲದವರ ಕಡೆ ನಾನು ವ್ಯವಹರಿಸುವಾಗ, ಮೇಲ್ ಮಾಡುವಾಗ ಬಳಸುತ್ತೇನೆ. ಅದಾದರೂ ತುಂಬಾ ಸ್ಪಷ್ಟ.  ಆದರೆ ಸೊಗಡು ಅಂತಿರೋದು ನಮ್ಮ ಭಾಷೆಯ ವಿವಿಧ ಶೈಲಿಗಳನ್ನು ಓದೋದರಲ್ಲಿ ಮತ್ತು  ನಮ್ಮ ಆಡು ಭಾಷೆಯನ್ನೇ ಬರಹದಲ್ಲೂ ಬಳಸುವ ಆಸಕ್ತಿಯಲ್ಲಿ…

ಮೊದಲೆಲ್ಲಾ ಪಾಠದ ಒಟ್ಟಾರೆ ಸಾರಂಶವನ್ನು ಪಠ್ಯದ ಶೈಲಿಯಲ್ಲಿ ಅಲ್ಲದೇ ನಾನು ಅರ್ಥ ಮಾಡಿಕೊಂಡ ಶೈಲಿಯಲ್ಲಿ ಭಾಷೆಯ ಬಳಕೆ ಮೇಲೇ ಉತ್ತರವನ್ನು ಬರೆಯಲು ಕಲಿತದ್ದು…  ಅದಕ್ಕೆ ಎಷ್ಟು ಅಂಕಗಳು ದೊರೆಯುತ್ತಿದ್ದವೋ ಇಲ್ಲವೋ ಗೊತ್ತಿಲ್ಲ… ಆದರೆ ನನಗರ್ಥವಾದಷ್ಟೇ, ನಾನು ಬರೆದದ್ದಕ್ಕೆ ನನ್ನ ನಿರೀಕ್ಷೆಯಷ್ಟು ಅಂಕ ಬರುತ್ತಿದ್ದುದು ಸಮಾಧಾನ.

ಪಠ್ಯದ ಹೊರತಾಗಿ ಏಳನೇ ತರಗತಿಯಲ್ಲಿ  ಕನ್ನಡ ಪ್ರಬಂಧ ಬರಹಕ್ಕಾಗಿ ನನಗೆ ಜಾಮಿಟ್ರಿ ಬಾಕ್ಸ್   ಮತ್ತು ರೆನಾಲ್ಡ್ಸ್ ಪೆನ್ನು ಬಹುಮಾನ ಬಂದ ನೆನಪು.. ಅದಾಗಿ ಹೈಸ್ಕೂಲ್ ನಲ್ಲಿ ನಮ್ಮ ಮೇಷ್ಟ್ರು ನಾಗರಾಜ್ ಪತ್ತಾರ್ ಅಂತ, ಅವರ ಒತ್ತಾಯಿಸಿದ್ದರು ಅನ್ನುವುದಕ್ಕಿಂತ “ಏನಾದರೂ ಸರಿ ನೀನು ಬರೀತಿಯಾ, ಭಾಗವಹಿಸು” ಅಂದ ಕಾರಣಕ್ಕೆ ಭಾಗವಹಿಸಿ ಅಲ್ಲೂ ಎರಡನೇ ಸ್ಥಾನ, ನಗದು ಹದಿನೈದು ರುಪಾಯಿ ಮತ್ತೊಂದರಲ್ಲಿ  ತೃತೀಯ ಬಹುಮಾನ ಹತ್ತು ರುಪಾಯಿ ಪಡೆದಿದ್ದೆ… ಆ ದುಡ್ಡಲ್ಲಿ ಶೆಟಲ್ ಬ್ಯಾಡ್ಮಿಂಟನ್ ಬ್ಯಾಟ್ ಖರೀದಿಸಿ ಬೈಸಿಕೊಂಡಿದ್ದೆ… ( ಕಾರಣ, ಬಹುಮಾನವಾಗಿ ಬಂದ  ಹಣ ಉಳಿಸಿಕೊಳ್ಳಬೇಕಿತ್ತು, ಬ್ಯಾಟ್ ಖರೀದಿಗೆ ನಾನೇ ದುಡ್ಡು ಕೊಡ್ತಿದ್ದೆ ಎನ್ನುವುದು ಮಾಮನ ಆಸೆಯಾಗಿತ್ತು)….

ಎಲ್ಲಕ್ಕಿಂತ ತಮಾಷೆಯೆಂದರೆ ನಾನು ಪ್ರಬಂಧ ಬರೆದು ಬಹುಮಾನ ಗಳಿಸಿದ್ದೆನೆಂಬ ಕಾರಣಕ್ಕೆ ಮೇಷ್ಟ್ರು ನನ್ನನ್ನು ಅಂತರ ಶಾಲಾ ಮಟ್ಟದ ಕನ್ನಡ ಭಾಷಣ ಸ್ಪರ್ಧೆಗೆ ಹೆಸರಿಸಿ ಕಳಿಸಿಬಿಟ್ಟಿದ್ದರು.  ಅ ದಿನ ಭಾಷಣಕ್ಕೆ ಓದಿಲ್ಲ, ತಯಾರಿಯಿಲ್ಲ.  ನೋಡಿದರೆ ಅಲ್ಲಿ  ಬರಿಗೈಲಿ ಭಾಷಣ ಮಾಡಲು ಬಂದವರನ್ನು ನೋಡಿಯೇ ಗಾಬರಿ ಬಿದ್ದಿದ್ದೆ.  ಮೊದಲ ಬಾರಿಗೆ ನಾನು ಭಾಷಣಕ್ಕೆಂದು ಮೈಕ್ ಮುಂದಿದ್ದೆ…. ಸರದಿಯಲ್ಲಿದ್ದ ನಾನು ತಡವರಿಸಿ ಮೂರು ನಿಮಿಷ ಮುಗಿಯುವುದರೊಳಗೆ  ಬೆವೆತು ವಾಪಾಸ್ ನನ್ನ ಸೀಟಿಗಾನಿ ಕೂತಿದ್ದೆ… ಅವತ್ತೇ ನನಗರ್ಥವಾಗಿತ್ತು “ಭಾಷಣ ನನ್ನ ಪಾಲಿಗೆ ದಕ್ಕುವಂಥಾದ್ದಲ್ಲ.”

ವರ್ಷಗಳು ದಾಟಿದಂತೆಲ್ಲಾ, ಹಾಳೆ, ನೋಟುಬುಕ್ಕಿನ ಕೊನೆಗೆ ಬರೆದಿಡುವ ಸರದಿ.   ಒಮ್ಮೆ “ಮೇರಾ ಭಾರತ್ ಮಹಾನ್”  ಎಂಬ ಶೀರ್ಷಿಕೆ ಕೊಟ್ಟು ಪದ್ಯ ಬರೆದು ಕಳಿಸಿದ್ದು ಹೊಸಪೇಟೆಯಿಂದ ಪ್ರಕಟವಾಗುತ್ತಿದ್ದ ನವಸಂದೇಶ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.  ಮತ್ತೆ ಎಲ್ಲೆಲ್ಲೋ ಕಳಿಸುತ್ತಿದ್ದೆ… ಪ್ರಕಟವಾಗುತ್ತಿದ್ದಿಲ್ಲ.  ಆದರೆ ಪ್ರಕಟಗೊಂಡ ಸಾಪ್ತಾಹಿಕ ಪುರವಣಿಗಳ ಲೇಖನ, ಕತೆ, ಚುಟುಕುಗಳನ್ನು ಓದುತ್ತಿದ್ದೆ… 

ಬರೆದದ್ದು ಒಂದು ಕಡೆ ದಾಖಲಿಸುತ್ತಾ ಹೋದೆ, ಓದಿದೆ…  ನಂತರ ಅನ್ಸೋದು ಚೆನ್ನಾಗಿಲ್ಲ ಅಂತ…  ಹೀಗೆ ಎಷ್ಟಾಗಿದಾವೋ ಏನೋ…  ತೀರ  ಇತ್ತೀಚಿಗೆ ಪ್ರಕಟಗೊಂಡ ಖುಷಿಗೆ ಬರೆಯಲು ಶುರು ಮಾಡಿದ್ದು ಮಾತ್ರ ನನ್ನ ಬಾಲ್ಯ, ಶಾಲೆ, ಕಾಲೇಜು, ಓಣಿ, ಊರು, ಸ್ನೇಹಿತರು, ಹಾಸ್ಟೆಲ್ಲು,  ಜರ್ನಿ,  ನೌಕರಿ, ಅವಮಾನ, ಹಾಸ್ಯ ಪ್ರಸಂಗ ಹೀಗೆ….

ಅಂತರ್ಜಾಲ ಪತ್ರಿಕೆಯಲ್ಲಿ ಕಾಲಂ ಬರೆದಿದ್ದೇನೆ, ಖಾಯಂ ಕಾಲಮಿಸ್ಟ್ ಆಗಲಿಲ್ಲ.    ಬೇರೆ ಬೇರೆ ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾದವು,  ಲೇಖಕನಾಗಿ ಗುರುತಿಸಿಕೊಳ್ಳುವಷ್ಟು ಸರಕಿದೆಯೋ ಇಲ್ಲವೋ ಗೊತ್ತಿಲ್ಲ..  ಒಂದಿಷ್ಟು ಪದ್ಯ  ಬರೆದು ಹಂಚಿಕೊಂಡಿದ್ದೇನೆ, ಕವಿ ಅಂದುಕೊಳ್ಳುವಷ್ಟು  ಗಟ್ಟಿತನವಿಲ್ಲ.  ಪುಸ್ತಕ ರೂಪದಲ್ಲಿ ಬರಹಗಳನ್ನು ತರಬೇಕೆಂಬುದು ವರ್ಷಗಳಿಂದ ಇರುವ ಅಭಿಲಾಷೆ..  ಪ್ರಶ್ನೆ  ಪುಸ್ತಕ ತರಲಾರದ್ದಲ್ಲ, ಪುಸ್ತಕ ರೂಪದಲ್ಲಿ ನನ್ನ ಬರಹಗಳು ಓದುವ ಮಟ್ಟದಲ್ಲಿರುತ್ತವಾ?!  ಎಂಬ ಜಿಜ್ಞಾಸೆ..

ಒಂದಿಷ್ಟು ಗಾದೆ ಮಾತು, ವ್ಯಾಕರಣ, ಶೈಲಿ, ತಪ್ಪಿಲ್ಲದೇ ಬರೆವ ಕಲೆ ಕಲಿಸಿದ ಕನ್ನಡ ಮೇಷ್ಟ್ರು  ಎಚ್.ಎಂ. ಚಂದ್ರಶೇಖರಯ್ಯನವರು ಮೊದಲಾಗಿ,  ಓದುವ ಗೀಳು ಅಂಟಿಸಿದ  “ಅಳಿದ ಮೇಲೆ” ಎಂಬ ಪುಸ್ತಕ, ನಂತರ ಎಷ್ಟೋ ದಿನಪತ್ರಿಕೆಗಳು, ವಾರಪತ್ರಿಕೆಗಳು, ನಿರಂತರ ಬರೆಯುವ ಲೇಖಕರು ಒಟ್ಟಾಗಿ ನನ್ನಲ್ಲಿ ಕನ್ನಡ ಭಾಷೆಯನ್ನು, ನನ್ನ  ಓದಿನ ಅಭಿರುಚಿಯನ್ನು, ಹೆಚ್ಚಿಸುವಲ್ಲಿ ಮತ್ತು ಇಷ್ಟಿಷ್ಟು ಬರೆಯುವಷ್ಟು ಆಸಕ್ತಿಯನ್ನು ಉಳಿಸಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ…

ಇಂಗ್ಲೀಷ್ ಭಾಷೆ ಬಾರದ್ದಕ್ಕೆ ಕರುಬಬೇಕಿಲ್ಲ. ಜಗತ್ತಿನ ಎಷ್ಟೋ ದೇಶಗಳಲ್ಲಿ ಅವರ ಬಾಷೆಯಲ್ಲಿಯೇ ಎಲ್ಲಾ ವ್ಯವಹಾರಗಳನ್ನು ಮಾಡೋದು, ಭಾಷೆ ಆಡೋದು.  ತೊಡಕಿರುವುದು ನಮ್ಮ ಸಂಕುಚಿತ ಭಾವನೆಯಲ್ಲಿ.  ಜ್ಞಾನಕ್ಕಾಗಿ ಎಷ್ಟೆಲ್ಲಾ ಭಾಷೆ ಕಲಿಯಬಹುದು. ಅದಕ್ಕೆ ನಮ್ಮ ಭಾಷೆಯನ್ನು ಅಡವಿಡಬೇಕಿಲ್ಲ.. ಅವಶ್ಯ ಮತ್ತು ಅನಿವಾರ್ಯ ಸಂದರ್ಭ ಬರೋದು ಬೇರೆ. ಮಾತಾಡೋಣ.  ಅಂದಹಾಗೆ ಟೋಲ್ ಫ್ರೀ ನಂಬರ್ ಡಯಲ್ ಮಾಡಿದಾಗ  ಭಾಷೆ ಆಯ್ಕೆಗಾಗಿ ಸಂಖ್ಯೆ ಒತ್ತಲು ಹೇಳುವಾಗೆಲ್ಲಾ ನನ್ನ ಆಯ್ಕೆ  ಯಾವಾಗಲೂ “ಕನ್ನಡಕ್ಕಾಗಿ ಒಂದನ್ನು ಒತ್ತಿ” ಆಗಿರುತ್ತೆ… ನಿಮ್ಮದೂ?!!!

-ಪಿ. ಎಸ್. ಅಮರದೀಪ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x