“ಪರಿಸರ”: ನಳಿನ ಬಾಲಸುಬ್ರಹ್ಮಣ್ಯ

ಈ ಪರಿಸರದ ಮಧ್ಯೆ ನಾವು ಜೀವಿಸಿ ರುವುದು, ನಮ್ಮ ಪರಿಸರ ನಮ್ಮ ಜೀವನ. ಅರಣ್ಯ ಸಂಪತ್ತು ತುಂಬ ಉಪಯುಕ್ತವಾದದ್ದು ಹಾಗೂ ಅಮೂಲ್ಯವಾದದ್ದು. ಪೀಠೋಪಕರಣಗಳಿಗೆ ಅಥವಾ ಮನೆ ಅಲಂಕಾರಕ್ಕೆಂದು ಮರಗಳನ್ನು ಕಡಿಯುತ್ತೇವೆ, ಇದರಿಂದ ಕಾಡು ನಾಶವಾಗಿ ಮಳೆ ಇಲ್ಲದಂತಾಗುತ್ತದೆ, ಅಂತರ್ಜಲ ಕಡಿಮೆಯಾಗುತ್ತದೆ. ಕಾಡು ಪ್ರಾಣಿಗಳು ನಾಡಿಗೆ ನುಗ್ಗುವ ಕಾಲ ಅದಾಗಲೇ ಬಂದಿದೆ. ಸಸಿ ನೆಡುವುದು ಆಗಲಿಲ್ಲವೆಂದರೆ ತೊಂದರೆಯಿಲ್ಲ, ಬೆಳೆಸಿದ ಮರಗಳನ್ನು ಕಡಿಯುವ ಕೆಟ್ಟ ಕೆಲಸಕ್ಕೆ ಇಳಿಯುವುದು ಬೇಡ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ಸಂರಕ್ಷಿಸುತ್ತದೆ. ಗಿಡ ಮರಗಳನ್ನು ದೂರದಿಂದಲೇ ನೋಡಿ ಆನಂದಿಸೋಣ. ನನಗೆ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

ಜೋರಾದ ಚಪ್ಪಾಳೆಗೆ ಚಂದ್ರಶೇಖರನ ಮನಸ್ಸು ಬೀಗಿತ್ತು. ಪರಿಸರ ದಿನಾಚರಣೆಯ ಅಂಗವಾಗಿ ಊರಿನವರು ಸೇರಿ ನಡೆಸುವ ಕಾರ್ಯಕ್ರಮದಲ್ಲಿ ಅಲ್ಲಿನ ಶ್ರೀಮಂತ ವ್ಯಕ್ತಿಯಾದ ಚಂದ್ರಶೇಖರನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು.

ಗಣ್ಯರು ತುರ್ತಾಗಿ ಹೊರಡಬೇಕಾಗಿ ರುವುದರಿಂದ ಅವರಿಗೆ ಈಗ ಸನ್ಮಾನ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರೆಯುವುದು. ಎಂದ ನಿರೂಪಕರ ನುಡಿಗಳಿಗೆ ಸಭಿಕರಿಂದ ಮತ್ತೊಮ್ಮೆ ಕರೆತಾಡನವಾಯಿತು. ಫಲಪುಷ್ಪಗಳ ತಟ್ಟೆಯನ್ನು ನೀಡಿ, ಗಂಧದ ಹಾರ ಹಾಕಲು ಹೋದಾಗ ನಿರಾಕರಿಸಿದ ಚಂದ್ರಶೇಖರ್ ರವರುಗಂಧದ ಮರ ಬಹಳ ಅಮೂಲ್ಯ, ಅದರ ಹಾರ ನಾನು ಧರಿಸಿದರೆ ಪರಿಸರಕ್ಕೆ ದ್ರೋಹ ಮಾಡಿದಂತಾಗುತ್ತದೆ ಆದ್ದರಿಂದ ದಯವಿಟ್ಟು ಈ ಹಾರವನ್ನು ನಾನು ಸ್ವೀಕರಿಸುವುದಿಲ್ಲ ಎಂದು ಹಿಂತಿರುಗಿಸಿದಾಗ “ಎಂಥ ಸಜ್ಜನಿಕೆ ಸರಳತೆ ನಡೆ-ನುಡಿಯಲ್ಲಿ ಒಂದೇ ಸಮನಾಗಿದ್ದಾರೆ” ಎಂದು ಎಲ್ಲರೂ ಮಾತನಾಡಿಕೊಂಡಿದ್ದು ಕೇಳಿಸಿದಾಗ ಹೆಮ್ಮೆಯ ಮುಗುಳ್ನಗುವಿನೊಂದಿಗೆ ಎಲ್ಲರತ್ತ ಕೈಬೀಸಿ ಹೊರಟೇಬಿಟ್ಟರು.

ವೇದಿಕೆ ಇಳಿಯುವುದಕ್ಕೂ, ಮೊಬೈಲ್ ಗೆ ಕರೆ ಬರುವುದಕ್ಕೂ ಸರಿಯಾಯಿತು.

ಚಂದ್ರಶೇಖರಯ್ಯ ಮೊದಲಿಗೆ ರಿಯಲ್ ಎಸ್ಟೇಟ್ ಏಜೆಂಟರಾಗಿದ್ದವರು. ಅವರ ಅದೃಷ್ಟ ವೋ ಎಂಬಂತೆ ಈ ಕೆಲಸ ಅವರ ಕೈ ಹಿಡಿಯಿತು. ಕ್ರಮೇಣ ಶ್ರೀಮಂತಿಕೆ ಅವರ ಮನೆಯನ್ನು ತುಂಬುತ್ತಾ ಹೋಯಿತು. ಅಂಬಿಕಳನ್ನು ಕೈಹಿಡಿದು ಒಬ್ಬ ಮಗನೂ ಜನಿಸಿ ಸಂಸಾರ ದೊಡ್ಡದಾಯಿತು, ಜೊತೆಗೆ ವ್ಯಾಪಾರವೂ ಬೆಳೆಯಿತು. ಇದೀಗ ಹತ್ತು ವರ್ಷದ ಮಗಳೊಬ್ಬಳಿದ್ದಾಳೆ. ಹೆಂಡತಿಯನ್ನು ಪ್ರೀತಿಯಿಂದಲೇ ನೋಡಿಕೊಂಡಿದ್ದರು. ಯಾವುದಕ್ಕೂ ಕಡಿಮೆ ಇರಲಿಲ್ಲ.

ವೇದಿಕೆ ಇಳಿಯುತ್ತಾ ಕರೆ ಸ್ವೀಕರಿಸಿದರು ಚಂದ್ರಶೇಖರ್.
ಹಾ, ಬೀಟೆಮರ ಬೇಕಿತ್ತು ನಮ್ಮ ಮನೆಗೆ ಫರ್ನಿಚರ್ಸ್ ಮಾಡಿಸಬೇಕು ಮರೆಯದೇ ಗಂಧದ ಮರವನ್ನೂ ತನ್ನಿ. ನಮ್ಮ ತಾತ, ನಮ್ಮ ತಂದೆಯ ಫೋಟೋಗಳಿಗೆ ಹಾರ ಹಾಕಬೇಕು. ಹಾಗೆಯೇ ದೇವರ ಮಂದಾಸನ ಮಂಟಪ ಮಾಡಿಸಲು ತುಂಬಾ ಅಗತ್ಯವಿದೆ. ಸರಿ ಸರಿ ಎಂದು ಮೊಬೈಲ್ ಆಫ್ ಮಾಡಿ ತನ್ನ ಮಾತನ್ನು ಯಾರೂ ಕೇಳಿಲ್ಲ ಎಂದು ಖಚಿತಪಡಿಸಿಕೊಂಡ ನಂತರ ತಮ್ಮ ಕಾರಿನತ್ತ ನಡೆದರು.

ರಿಯಲ್ ಎಸ್ಟೇಟ್ ಏಜೆಂಟರಾಗಿ ಕೆಲಸ ಮಾಡುವಾಗಲೇ ಅದುಹೇಗೋ ಕಳ್ಳ ದಂಧೆಯ ಸಂಪರ್ಕ ಸಿಕ್ಕಿ ಅದರ ರುಚಿ ಹತ್ತಿಬಿಟ್ಟಿತ್ತು. ಜೊತೆಯಲ್ಲಿ ತನ್ನ ಮನೆಗೆ ಅದರ ಉಪಯೋಗವನ್ನು ಬಹಳಷ್ಟೇ ಮಾಡಿಕೊಂಡಿದ್ದರು.
ಹಸಿರು ಪರಿಸರದಲ್ಲಿ ತಾನಿರಬೇಕೆಂಬ ಆಸೆ ಇದೆ ಎಂದು ಹೇಳಿಕೊಂಡು ಮದುವೆಯಾದಮೇಲೆ ಊರಹೊರಗೆ ಒಂಟಿಮನೆ ಕಟ್ಟಿಸಿಕೊಂಡಿದ್ದರು. ಯಾರನ್ನೂ ಮನೆಗೆ ಕರೆಯುತ್ತಿರಲಿಲ್ಲ ತೇಗ, ಬೀಟೆಗಳಿಂದ ಅಲಂಕೃತವಾದ ಬಂಗಲೆ ಎಂದೇ ಹೇಳಬಹುದಿತ್ತು. ಮನೆ ಕಟ್ಟಿಸುವಾಗಲೂ ಬೇರೆ ಊರಿನಿಂದ ಕೆಲಸಗಾರರನ್ನು ಕರೆಯಿಸಿದ್ದನು.

ಊಟದ ಮೇಜು, ಮಂಚ, ಬೀರು, ಒಡವೆಯ ಪೆಟ್ಟಿಗೆ, ಎಲ್ಲ ಕೋಣೆಗಳ ಬಾಗಿಲುಗಳು. . . . ಎಲ್ಲವೂ ಬೀಟೆ ಮರದಿಂದ ಮಾಡಲ್ಪಟ್ಟಿದ್ದವು.

ಕಾವಲಿಗೆಂದು ಎರಡು ಆಲ್ಸೇಷನ್ ನಾಯಿಗಳನ್ನು ಸಾಕಿದ್ದನು. ಇದೀಗ ಪುನಃ ಪೀಠೋಪಕರಣಗಳಿಗೆ, ಮಗಳಿಗೋಸ್ಕರ ಓದುವುದಕ್ಕೆಂದು ಕುರ್ಚಿ, ಪುಸ್ತಕಗಳನ್ನಿರಿಸಲು ಕಪಾಟು ಮಾಡಿಸುವ ಸಲುವಾಗಿ ಮರವನ್ನು ತರಿಸುತ್ತಿದ್ದನು, ಕೆಲವು ನಂಬಿಕೆಯ ಬಂಟರಿಂದ.

ಬೀಟೆ, ಗಂಧದ ಮರದ ತುಂಡುಗಳು ಯಥೇಚ್ಛವಾಗಿ ಬಂದವು. ತನಗೆ ಬೇಕಾದಷ್ಟನ್ನು ಇರಿಸಿಕೊಂಡು ಉಳಿದುದನ್ನು ಜಲಮಾರ್ಗದ ಮೂಲಕ ಬೇರೆ ಬೇರೆ ಕಡೆಗೆ ಮಾರಾಟಮಾಡಿ ಲಕ್ಷ ಲಕ್ಷ ಹಣವನ್ನು ಎಣಿಸಿಕೊಂಡನು. ಎಷ್ಟೇ ಹಣ ಒಡವೆ ಇದ್ದರೂ ಜನ ಸಂಪರ್ಕವೇ ಇಲ್ಲ ಎಂದಾದ ಮೇಲೆ ಮನಸ್ಸಿಗೆ ನೆಮ್ಮದಿ ಆದರೂ ಹೇಗೆ ಸಿಗಬೇಕು? ಮಗಳಾದರೂ ಶಾಲೆಗೆ ಹೋಗುತ್ತಿದ್ದಳು. ಆದರೆ ಅಂಬಿಕಾ ಒಂಟಿತನ ಅನುಭವಿಸುತ್ತಿದ್ದಳು. ಜೊತೆಯಲ್ಲಿ ಮಗನ ಸೇವೆ. ಗಂಡನಿಗೆ ಎಷ್ಟು ಸಾರಿ ಹೇಳಿದ್ದಳೋ, ಇರುವ ಆಸ್ತಿ ಸಾಕು. ಕಳ್ಳಸಾಗಣೆಯ ಕೆಲಸ ಬಿಡಿ ಎಂದು. ಹಣದ ದುರಾಸೆ ಅವನ ವಿವೇಕವನ್ನು ಮುಚ್ಚಿ ಹಾಕಿತ್ತು. ತಲೆಗೇರಿದ ನಶೆ ಇನ್ನಷ್ಟು ಮತ್ತಷ್ಟು ಸಿರಿವಂತಿಕೆಯನ್ನು ಬೇಡುತ್ತಿತ್ತು. ಹೆಂಡತಿಯ ಮಾತೂ ವೇದ್ಯವಾಗುತ್ತಿರಲಿಲ್ಲ.

ಚಿಕ್ಕಂದಿನಲ್ಲಿಯೇ ಹೆತ್ತವರನ್ನು ಕಳೆದುಕೊಂಡಿದ್ದವನು ಸೋದರಮಾವನ ಆಶ್ರಯದಲ್ಲಿ ಬೆಳೆಯುವಂತಾಯಿತು ಚಂದ್ರಶೇಖರ. ಸಣ್ಣ ತಪ್ಪಿಗೂ ಶಿಕ್ಷೆ ಕೊಡುತ್ತಿದ್ದ ಮಾವನನ್ನು ಕಂಡರೆ ಮೊದಮೊದಲು ಇದ್ದ ಭಯ ನಂತರದಲ್ಲಿ ದ್ವೇಷವಾಗಿ ಪರಿಣಮಿಸಿತು.

ಮಧ್ಯಮ ವರ್ಗಕ್ಕಿಂತಲೂ ತುಸು ಮೇಲುಸ್ತರದಲ್ಲಿದ್ದ ಮಾವನ ಧನಮದದಿಂದ ಆತನ ಬಗ್ಗೆ ಜಿಗುಪ್ಸೆ ಉಂಟಾಗಿದ್ದು ಸುಳ್ಳಲ್ಲ. ಇದರಿಂದ ತಾನೂ ಹಣ ಗಳಿಸಿ ಶ್ರೀಮಂತನಾಗಬೇಕೆಂಬ ಛಲ ಬಲವಾಗಿ ಬೇರೂರಿತ್ತು. ಅವರ ಮಗಳು ಅಂಬಿಕಾ ನೋಡಲು ಲಕ್ಷಣವಾಗಿದ್ದು, ಸಾಧು ಸ್ವಭಾವದವಳಾಗಿದ್ದಳು. ವಯೋಸಹಜವಾಗಿ ಆಕೆಯೆಡೆ ಚಂದ್ರಶೇಖರನ ಮನಸೆಳೆಯಿತು. ದುಡ್ಡು ಮಾಡಿಯೇ ಹೆಣ್ಣು ಕೇಳಬೇಕೆಂಬ ಸ್ವಾಭಿಮಾನಕ್ಕೆ ತಲೆಬಾಗಿ, ಪದವಿ ಮುಗಿಸಿ ಕೆಲಸ ಹುಡುಕುತ್ತಿದ್ದನು. ಮಾವನ ಹಳೆಯ ಸ್ನೇಹಿತರೊಬ್ಬರು ತಮಗೆ ಸಹಾಯಕ್ಕೆ ಎಂದು ಸೇರಿಸಿಕೊಂಡರು. ರಿಯಲ್ ಎಸ್ಟೇಟ್ ಏಜೆಂಟರಾಗಿದ್ದ ಅವರಲ್ಲಿ ಶ್ರದ್ಧೆಯಿಂದ ಅದರ ಹೊರ ಒಳಹೊರಗನ್ನು ಅರಿತುಕೊಂಡಿದ್ದೂ ಅಲ್ಲದೆ, ಸ್ವಲ್ಪ ಸಮಯದಲ್ಲಿಯೇ ಹಣಗಳಿಸಿ ಮಾವನೆದುರು ಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ಕೇಳಿದ್ದನು. ಅಂಬಿಕಳಿಗೂ ಇಷ್ಟವಿದ್ದುದರಿಂದ ಮದುವೆ ನೆರವೇರಿತು. ಆದರೆ ಅವರು ತಮ್ಮ ಮನೆಗೆ ಯಾವತ್ತೂ ಬರಬಾರದೆಂದು ಮದುವೆಯ ದಿನವೇ ತಾಕೀತು ಮಾಡಿದ್ದನು. ಹೆಂಡತಿಯನ್ನೂ ತವರುಮನೆಗೆ ಕಳಿಸಲಿಲ್ಲ . ಮದುವೆಯಾಗಿ ಎರಡು ವರ್ಷಗಳಲ್ಲಿಯೇ ಮನೆ ಕಟ್ಟಿಸಿದ್ದನು.

ಮಗ ಹುಟ್ಟಿದಾಗ ಸಂತೋಷಪಟ್ಟಿದ್ದರು ದಂಪತಿಗಳು. ಆದರೆ ಮಗು ಬುದ್ಧಿಮಾಂದ್ಯ ಎಂದು ತಿಳಿಯುತ್ತಲೇ ಭೂಮಿಗಿಳಿದು ಹೋಗಿದ್ದರು.

ಯಾವುದೋ ಕಾರ್ಯಕ್ರಮದಲ್ಲಿ ಇಬ್ಬರು ವ್ಯಕ್ತಿಗಳು ಬೆಲೆಬಾಳುವ ಮರದ ಅಗತ್ಯವಿದೆ ಕೊಡುವವರು ಯಾರು ಎಂದು ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡು, ತಾನು ಪ್ರಯತ್ನಿಸುವುದಾಗಿ ಹೇಳಿ ಅವರನ್ನು ಸಂಪರ್ಕಿಸುವ ಬಗೆಯನ್ನು ತಿಳಿದುಕೊಂಡು ಬಂದಿದ್ದನು. ತಾನೇ ಕಾಡಿಗೆ ಹೋಗಿ ರಹಸ್ಯವಾಗಿ ತಂದು ತಲುಪಿಸಿದ್ದನು. ಹೀಗೇ ಶುರುವಾಗಿತ್ತು ಅವನ ಕಳ್ಳ ಸಾಗಣೆಯ ದಂಧೆ.

ಗಂಡನ ದ್ರೋಹಚಿಂತನೆಯಿಂದ ಇಂತಹ ಮಗ ಹುಟ್ಟಿರಬಹುದೆಂಬ ಒಂದು ಯೋಚನೆ ಅಂಬಿಕಳ ಮನಸ್ಸಿಗೆ ಬರದೇ ಇರಲಿಲ್ಲ. ಒಮ್ಮೆಹೇಳಿ ನೋಡಿದಳಾದರೂ, ಏನೂ ಪ್ರಯೋಜನವಾಗಲಿಲ್ಲ. ಮೂರು ವರ್ಷಗಳ ನಂತರ ಮಗಳು ಹುಟ್ಟಿದಾಗಲೂ ಕೆಲವು ದಿನಗಳು ಭಯದಲ್ಲಿಯೇ ಇದ್ದರೂ, ಎಲ್ಲವೂ ಸರಿಯಿದೆಯೆಂದು ಅರಿವಾದಾಗ ಸಮಾಧಾನ ಹೊಂದಿದ್ದರು.

ನೋಡಿದೆಯಾ, ಮಗಳು ಚೆನ್ನಾಗಿಯೇ ಇದ್ದಾಳೆ ಅಂದ ಮೇಲೆ ನಾನು ಮಾಡುತ್ತಿರುವುದು ತಪ್ಪಲ್ಲ ಎಂದು ಆ ನಿನ್ನ ದೇವರೇ ಹೇಳಿದ್ದಾನೆ ಅಂತ ಅರ್ಥ. ಏನೂ ಚಿಂತೆ ಮಾಡಬೇಡ ಎಂದು ಪತ್ನಿಗೆ ಛೇಡಿಸುತ್ತಾ ಸಮಾಧಾನ ಹೇಳಿದ್ದನು.

ಸಾರ್ವಜನಿಕ ಸಮಾರಂಭಗಳಿಗೆ ಹೋದಾಗ ದುಡ್ಡಿದ್ದವರೆಂದು ಅಂದಾಜು ಸಿಕ್ಕ ಕೂಡಲೇ ತನ್ನ ವ್ಯವಹಾರವನ್ನು ಕುದುರಿಸುತ್ತಿದ್ದನು. ಲೇವಾದೇವಿ ವ್ಯವಹಾರದಲ್ಲಿಯೂ ಕೈಯಿಟ್ಟಿದ್ದನು. ಮೋಸವೇ ಪ್ರಮುಖವಾಗಿತ್ತು ಇದರಲ್ಲಿ.

ಸರಿ, ಈಗಲೂ ದೂರದೂರಿನಿಂದ ಬಡಗಿಯನ್ನು ಕರೆಸಿ, ಎಲ್ಲವನ್ನೂ ತಯಾರಿಸುವಂತೆ ಹೇಳಿದ್ದನು. ಇಬ್ಬರು ಕೆಲಸಗಾರರಿಂದ ಕೆಲಸ ಪ್ರಾರಂಭವಾಯಿತು. ಮೊದಲು ಸುಂದರವಾದ ದೇವರ ಮಂಟಪ ತಯಾರಾಯಿತು. ಅಲ್ಲಲ್ಲಿ ಗಂಧದ ಮರದಿಂದ ಮಾಡಿದ ಪುಟ್ಟ ಪುಟ್ಟ ಗಂಟೆಗಳು, ನಾಲ್ಕು ಕಂಬಗಳಲ್ಲಿಯೂ ಸುಂದರ ಕೆತ್ತನೆ, ಎತ್ತರವಿರುವ ಮಂಟಪ ನೋಡಲು ಅತ್ಯಾಕರ್ಷಕವಾಗಿತ್ತು. ದೊಡ್ಡ ಮಂದಾಸನ, ಕುಳಿತುಕೊಳ್ಳಲು ಮಣೆಗಳು, ದಸರಾ ಗೊಂಬೆಗಳನ್ನಿಡಲು ಮೆಟ್ಟಿಲುಗಳುಳ್ಳ ಆಸನದ ಕೆಲಸವೂ ಆಯಿತು. ಓದಲು ಒಂದು ಕುರ್ಚಿ, ಒಂದು ವೃತ್ತಾಕಾರದ ಮೇಜು, ಪುಸ್ತಕಗಳನ್ನಿಡುವ ಕಪಾಟು, ಬೀಟೆಯ ಮರದಿಂದ ಸಿದ್ಧವಾಯಿತು. ಇನ್ನೂ ಮರ ಉಳಿದಿದ್ದರಿಂದ ಈಗಾಗಲೇ ಇದ್ದರೂ ಮಗಳು ಮಲಗಲು ಏಕವ್ಯಕ್ತಿ (ಸಿಂಗಲ್ ಕಾಟ್)ಮಂಚದ ತಯಾರಿ ನಡೆದಿತ್ತು. ಮಂಚದ ಕೆಲಸ ಇನ್ನೇನು ಮುಗಿಯುವ ಹಂತಕ್ಕೆ ಬಂದಿತ್ತು.

ಅಂದು ಮನೆಯಲ್ಲಿಯೇ ಇದ್ದ ಚಂದ್ರಶೇಖರಯ್ಯ ಮಧ್ಯಾಹ್ನದ ಹೊತ್ತಿಗೆ ಕೆಲಸ ನಡೆಯುವಲ್ಲಿಗೆ(ಮನೆಯ ಪಕ್ಕದಲ್ಲಿ) ಹೋದಾಗ, ಬೀಡಿ ಸೇದುತ್ತಿದ್ದ ಇಬ್ಬರು ಬಡಗಿಯರೂ ಇದ್ದಕ್ಕಿದ್ದಂತೆ ಬಂದವನನ್ನು ಕಂಡು ಏನು ಮಾಡಲೂ ತೋಚದೆ, ಕೈಯಲ್ಲಿದ್ದ ಬೀಡಿಗಳನ್ನು ಬಾಯಿಯಿಂದ ಊದಿ, ಅತ್ತ ಎಸೆದರು. ನಂದಿಹೋಗಿರಬಹುದೆಂದುಕೊಂಡಿದ್ದ ಬೀಡಿಗಳು ಇನ್ನೂ ಕೆಂಡ ಕಾರುತ್ತಿದ್ದು , ಮರದ ತುಂಡುಗಳ ಮೇಲೆ ಬಿದ್ದಿದ್ದರಿಂದ ನಿಧಾನವಾಗಿ ಹೊತ್ತಿಕೊಂಡಿತು. ಬರಬರುತ್ತಾ ಬೆಂಕಿ ತನ್ನ ಕೆನ್ನಾಲಿಗೆಯನ್ನು ಎಲ್ಲಕಡೆಯೂ ಚಾಚಿಕೊಂಡಿತು. ಮೂವರೂ ನೋಡಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ತಡವಾಗಿತ್ತು. ಬೆಂಕಿಗೆ ಆಹುತಿಯಾದವರು ಇವರು ಮಾತ್ರವಲ್ಲದೆ, ಪಕ್ಕದಲ್ಲಿಯೇ ಇದ್ದ ಮನೆಗೂ ತಗುಲಿದ್ದ ಅಗ್ನಿಯಲ್ಲಿ ಚಂದ್ರಶೇಖರಯ್ಯನ ಇಡೀ ಕುಟುಂಬ ಉರಿದು ಹೋಗಿತ್ತು.

ಅವನದೇ ನುಡಿಗಳು, “ಮನುಷ್ಯ ಪರಿಸರವನ್ನು ರಕ್ಷಿಸಿದರೆ, ಅದೂ ಮನುಷ್ಯರನ್ನು ಸಂರಕ್ಷಿಸುತ್ತದೆ. ನಾಶ ಮಾಡಲು ಹೊರಟರೆ . . . . . . .

ನಳಿನ ಬಾಲಸುಬ್ರಹ್ಮಣ್ಯ,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x