ಮಧ್ಯಮವರ್ಗದ ಪಾಠವನ್ನು ಮತ್ತೆ ಪರಿಚಯಿಸಿಕೊಟ್ಟ ಆ ಸಂಜೆ. . .: ಡಾ. ಅಮೂಲ್ಯ ಭಾರದ್ವಾಜ್‌

ಒಮ್ಮೆ ಕಾಲೇಜಿನಿಂದ, ಮೀಟಿಂಗ್ ಮುಗಿಸಿ ಹೊರಡುವಷ್ಟರಲ್ಲಿ ತಡವಾಗಿತ್ತು. ಪರೀಕ್ಷೆಯ ಸಮಯವಾದ್ದರಿಂದ ಪ್ರಿನ್ಸಿಪಾಲರು ಎಲ್ಲಾ ಶಿಕ್ಷಕರನ್ನು ಕರೆಸಿ ತಮ್ಮ ತಮ್ಮ ಪ್ರಶ್ನೆ-ಪತ್ರಿಕೆಗಳನ್ನು ತಯಾರಿಸಿ ಕೊಡಲು ನಿರ್ದೇಶಿಸಿದ್ದರು. ಅಂತೆಯೇ ನಾನು ನಿರ್ವಹಿಸುತ್ತಿದ್ದ, ‘ಸಮಾಜಶಾಸ್ತ’್ರ ಪ್ರಶ್ನೆ-ಪತ್ರಿಕೆಯ ಮೂರು ಜೊತೆಯನ್ನು ಸಲ್ಲಿಸಿದ್ದೆ. ಶಕ್ಕುವೂ ತನ್ನ ಇಂಗ್ಲಿಷ್ ಭಾಷೆಯ ಕುರಿತು ನೀಡಿದ್ದಳು. ಎಲ್ಲಾ ಮುಗಿಸಿ ಹೊರಡುವ ಅವಸರದಲ್ಲಿ, ನನಗೆ ಅರಿವಿಲ್ಲದೆ ಪ್ರಿನ್ಸಿಪಾಲರ ಕೊಠಡಿಯಲ್ಲಿಯೇ ನನ್ನ ಪಠ್ಯಕ್ರಮ-ನಕಾಶೆಯನ್ನು ಬಿಟ್ಟು ಬಂದಿದ್ದೆ. ಕಾಲೇಜಿನಾಚೆ ಬಂದಾಗ, ನನ್ನ ಸಹೋದ್ಯೋಗಿ ಮತ್ತು ಹಿರಿಯ ಕನ್ನಡ ಉಪನ್ಯಾಸಕರಾದ ಪ್ರೊ. ಚಂದ್ರಶೇಖರ ಹೆರೂರರು ಸಿಕ್ಕು, ನಮ್ಮ ಪ್ರಶ್ನೆ-ಪತ್ರಿಕೆಗಳ ಬಗ್ಗೆ ಪ್ರಶಂಸೆಯ ಮಾತಗಳನಾಡುತ್ತಾ-” ಈ ಅಟಾನಮಸ್ ಕಾಲೇಜುಗಳ ಹಣೆಬರಹವೇ ಇಷ್ಟು. ಕೆಲಸ ಜಾಸ್ತಿ, ಆದರೆ ಮಾಡಿದ ತೃಪ್ತಿ ನೋಡಿ”, ಎಂದು ಹಾಸ್ಯಾಸ್ಪದವಾಗಿ ಹರಟೆ ಶುರು ಮಾಡಿದರು. ಅವರು ಹಾಗೆಯೇ. ಮಾತಿಗೆ ನಿಂತರೆ ಥೇಟ್ ಜಿಗಣೆಯೇ, ಬಿಡಿಸಿಕೊಳ್ಳಲು ಅರಿಶಿಣವೊಂದು ಸಿದ್ಧವಿರಬೇಕು ಅಷ್ಟೆ.

ಹೀಗೆ ಮಾತಾಡುತ್ತಾ, ಪಟ್ಟನೆ-” ಗೌರಿ, ನಿಮ್ಮ ಪಠ್ಯಕ್ರಮ-ನಕಾಶೆಯನ್ನು ಕೊಡ್ತೀರಾ?” ಎಂದು ಕೇಳಿದರು. ನಾನೂ ಸಹ, ಮಹಾ ಭದ್ರವಾಗಿ ಇಟ್ಟುಕೊಂಡಿರುವವಳಂತೆ ನನ್ನ ಚೀಲವನ್ನು ತೆಗೆದರೆ, ಆಶ್ಚರ್ಯ. ಕಾಣುತ್ತಿಲ್ಲ. ಏನನ್ನೂ ಭದ್ರವಾಗಿ ಇಟ್ಟುಕೊಳ್ಳಬೇಡ- ಎಂಬುದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿರುವವಳಂತೆ ನನ್ನನ್ನೇ ದಿಟ್ಟಿಸತೊಡಗಿದಳು ಶಕ್ಕು. ನನ್ನ ಚೀಲವೆಲ್ಲಾ ಕೂಲಂಕುಶವಾಗಿ ಹುಡುಕಿದ ಮೇಲೆ, ಊಹಿಸಿಕೊಂಡೆ. ಬಹುಷಃ ಪ್ರಿನ್ಸಿಪಾಲರ ಕೊಠಡಿಯಲ್ಲೇ ಇಟ್ಟಿರಬಹುದೆಂದು. ಪ್ರೊಫೆಸರಿಗೆ ಈ ವಿಷಯ ತಿಳಿಸಿ ಶಕ್ಕುವನ್ನು ಕರೆದುಕೊಂಡು ಹಿಂತಿರುಗುವಷ್ಟರಲ್ಲಿ, ಪ್ರೊಫೆಸರ್-“ನಾಳೆ ಇಸ್ಕೊತೀನಿ ಬಿಡಿ. ಇಟ್ಸ್ ಓಕೆ” ಎಂದು ಹೇಳಿ ಬುರ್ರಂತ ತಮ್ಮ ನೀಲಿ ವೆಸ್ಪಾದಲ್ಲಿ ಹೊರಟೇ ಬಿಟ್ಟರು. ಶಕ್ಕು ಅಲ್ಲಿಯವರೆಗು ಸುಮ್ಮನ್ನಿದ್ದವಳು-“ನಿನ್ನದು ಬರಿ ಇದೇ ಆಯಿತು” ಎಂದು ಹೇಳಿಯೇ ಬಿಟ್ಟಳು. ನನ್ನ ಮುಖವ ಆಪುತ್ತಿದ್ದ ನಗುವು ಪ್ರಾಯಷಃ ಅವಳ ಕೋಪ ಕರಗಿಸಿರಬಹುದು, ಅದು ಅಲ್ಲದೆ ನನ್ನ ಮರೆವು ಆಗ ಪ್ರೊಫೆಸರ್ನಿಂದ ಬಿಡಿಸಿಕೊಳ್ಳಲು ನೆರವಾಗಿತ್ತು. ಲಘುಬಗೆಯಿಂದ ನಡೆದೆವು.

ಸಂಜೆ ಐದೂವರೆಯಾಗುತ್ತಾ ಬಂದಿತ್ತು. ಪ್ರಿನ್ಸಿಪಾಲರು ಎಲ್ಲಾ ಪ್ರಶ್ನೆ-ಪತ್ರಿಕೆಗಳನ್ನು ಪರಿಶೀಲಿಸುತ್ತಿದ್ದರು. “ಎಕ್ಸ್ಸ್ಕ್ಯೂಸ್ಮಿ ಸರ್” ಎಂದು ನಾವು ಒಳನಡೆದೆವು. “ಏನು ಸಮಾಚಾರ? ಏನಾದರು ಹೇಳುವುದಿತ್ತೆ?” ಎಂದು ಯಾವಾಗಲೂ ಮಾತನಾಡಿಸುವಂತೆ ಸ್ಮಿತವದನರಾಗಿಯೇ ಕೇಳಿದರು. ಹೀಗೆ ನಕಾಶೆ ಬಿಟ್ಟಿರುವುದನ್ನು ಹೇಳಿ, ಅಲ್ಲೇ ಇದ್ದ ಫೈಲನ್ನು ಚೀಲದಲ್ಲಿ ಹಾಕಿಕೊಂಡೆ. “ಮಿಸ್ ಶಕುಂತಲಾ! ನಾನು ಮುಂದಿನ ಸೆಮಿಸ್ಟರ್ನಲ್ಲಿ ವಿವಿಧ ಭಾರತೀಯ ಉದಯೋನ್ಮುಖ ಕವಿಗಳ, ಇನ್ ಫ್ಯಾಕ್ಟ್ ಕವನಸಂಕಲನಗಳ ಪರ್ಶೆ ನಡೆಸಬೇಕೆಂದಿರುವೆನು. ಅದರ ಕೆಲವು ಉಸ್ತುವಾರಿಗಳ ನಿಮಗೇ ಕೊಡಬೇಕೆಂದುಕೊಂಡಿದ್ದೇನೆ”, ಎಂದರು. ಕಾಲೇಜಿನ ಕೀರ್ತಿಯನ್ನೂ ಇಮ್ಮಡಿಸಿದಂತಾಗುತ್ತದೆ, ನಮ್ಮೆಲ್ಲರಿಗು ಒಳ್ಳೆ ಅನುಭವವೂ ಆಗುತ್ತದೆ ಎಂಬುದು ಅವರ ಸದ್ದ್ವಿಚಾರ. ಬಹುಷಃ ಇಂತಹವರು ಮುಖ್ಯೋಪಾಧ್ಯಾಯರಾಗಿ ಸಿಕ್ಕರೆ, ಕೆಲಸ ಮಾಡಲು ಎಂತವರಿಗೂ ಒಂಥರಾ ಹುಮ್ಮಸ್ಸು.

ಅವರು ಕೇಳಿದೊಡನೆ, “ಸರಿ ಸರ್” ಎಂದು ಇವಳು ಒಪ್ಪಿಯೇ ಬಿಟ್ಟಳು. ಅಂದು ಅವಳಿಗಾದ ಸಂತೋಷ ಖಂಡಿತವಾಗಿಯೂ ಹೇಳತೀರದು. ಕೆಂಗುಲಾಬಿಯಂತೆ ಹೊಳೆಯುತ್ತಿದ್ದ ಅವಳ ಹಿಗ್ಗು ನನ್ನ ಚೆಹರೆಯಲ್ಲಿ ಹಿಂಪುಟಿಸಿ, ನೋಡುವವರಿಗೂ ಉತ್ಸಾಹ ಹಂಚುವಂತಿತ್ತು. “ಭಗವಂತ ಖುಷಿಗಳ ಎಲ್ಲೆಲ್ಲಿ ಅಡಗಿಸಿಟ್ಟಿರುತ್ತಾನೊ” ಎಂದು ಅನ್ನಿಸಿತು, ಆ ಕ್ಷಣ. “ಗುಡ್. ನಾಳೆ ಒಂದು ಮೀಟಿಂಗ್ ಮಾಡಿಬಿಡುತ್ತೇನೆ, ಎಂದು ತಮ್ಮ ದಿನಚರಿಯಲ್ಲಿ ಗುರುತು ಹಾಕಿಕೊಂಡರು. ಮುಂದುವರೆಸುತ್ತಾ-“ಮತ್ತೆ ಗೌರಿ, ನಿಮ್ಮನ್ನ ಬರುವ ಸೆಮಿಸ್ಟರ್ನಿಂದ ಕಲ್ಚರಲ್ ಇನ್-ಚಾರ್ಜ್ ಆಗಿ ಮಾಡಬೇಕೆಂದು, ಕೆಲವು ವಿದ್ಯಾರ್ಥಿಗಳು ಬಂದಿದ್ದರು. ಐ ಫೆಲ್ಟ್ ದೆ ವರ್ ಸಮ್ವೇರ್ ರೈಟ್” ಎಂದು ಕೊಂಚ ಅನುಮಾನದಿಂದಲೇ ಮೊರೆ ಇಟ್ಟರು. ಘಸಕ್ಕೆಂದು ಸಣ್ಣದಾಗಿ ಕಾಲು ನಡುಗಲಾರಂಭಿಸಿತು. ಈ ಸೆಮಿಸ್ಟರ್ನಲ್ಲಿಯಷ್ಟೇ ಆ ಜವಾಬ್ದಾರಿ ತೆಗೆದುಕೊಂಡಿದ್ದ ಲತಾ ಮೇಡಮ್ನನ್ನು ಆರೇ ತಿಂಗಳಲ್ಲಿ ಬದಲಾಯಿಸುವುದು ಎಷ್ಟು ಸರಿಯೆಂದು ಯೋಚಿಸಿ-” ಸರ್! ನಾನು ಸೇರಿ ಇನ್ನು ವರುಷವಾಗಿದೆಯಷ್ಟೆ. ಈಗಲೇ ಇದೆಲ್ಲಾ, ಸುಮ್ಮನೆ. . . ” ಎಂದು ಮಾತು ತೇಲಿಸುವ ಪ್ರಯತ್ನ ಮಾಡಿದೆ. “ಗೊತ್ತಿದೆ. ಲತಾ ಅವರು ನಿಮಗಿಂತ ಸೀನಿಯರ್. ಈಗಷ್ಟೇ ಈ ಹೊಣೆ ಸಿಕ್ಕಿದೆ, ಅವರಿಗೇನಾದರೂ ಬೇಜಾರಾದರೆ? ಎನ್ನುವುದು ನಮ್ಮ ಅನುಮಾನ. ಅಲ್ಲವೆ?”, ಎಂದು ಕೇಳಿದೊಡನೆ, ಏನೂ ಹೇಳಲು ತೋಚದೆ ಹೌದೆಂದು ತಲೆಯಾಡಿಸಿದೆ.

“ಇರಲಿ. ಐ ವಿಲ್ ಸ್ಪೀಕ್ ಟು ಹರ್. ನೀವೇನು ಯೋಚನೆ ಮಾಡಬೇಡಿ. ಇದು ಮಕ್ಕಳ ಕಂಪ್ಲೇಂಟ್. ಮೋರೊವರ್, ಅವರು ಮಕ್ಕಳಿಗೆ ಯಾವ ರೀತಿಯಿಂದಲೂ ಬೆಂಬಲಿಸುತ್ತಿಲ್ಲ. ನೀವಾದರೆ ಯಂಗ್, ಸಪ್ಪೊರ್ಟಿವ್. ಹಾಗೆಯೇ ಯು ಮೈಟ್ ನೊ, ನೀವಿಬ್ಬರು ಎಲ್ಲಾ ಸ್ಟೂಡೆಂಟ್ಸ್ ಮೆಚ್ಚಿಕೊಳ್ಳುವ ಶಿಕ್ಷಕಿಯರು”, ಎಂದು ಸಮಾಧಾನ ಮಾಡಲೆಂದೇ ಎನ್ನುವಂತೆ ಜೋರಾಗಿ ನಗ ತೊಡಗಿದರು. ಅವರ ಮಾತಿಗೆ “ಇಲ್ಲ” ಎನ್ನಲಾರದೆ ಒಪ್ಪಿದೆ. “ಸರಿ, ನಾವಿನ್ನು ಬರುತ್ತೇವೆ ಸರ್” ಎಂದು ಶಕ್ಕು ಹೊರಟಳು, ನಾನೂ ಮುಗುಳ್ನಕ್ಕು ಅವಳ ಹಿಂಬಾಲಿಸಿದೆ. ವಾಪಸ್ಸು ಬರುವಾಗ-“ಪ್ರಶ್ನೆ ಪತ್ರಿಕೆಗಳ ಜವಾಬ್ದಾರಿ ಮುಗಿಯಿತೆಂದು ಆರಾಮವಾಗಿದ್ದೆ. ಈಗ ಹೊಸ ತಲೆನೋವು ಬಂತಲ್ಲೆ?” ಎಂದು ಹೇಳಿದೆ. “ತಲೆ ನೋವು ಅಂದರೆ? ಕಾಲೇಜಲ್ಲಿ ಅಲ್ಲವ ನೀನ್ ಕೆಲಸ ಮಾಡ್ತಿರೋದು? ಬಿ ಪ್ರಾಕ್ಟಿಕಲ್”, ಎಂದು ವಿಷಯವನ್ನು ಸ್ವಾಭಾವಿಕ ಎನ್ನುವಂತೆ ಘೋಷಿಸಿಬಿಟ್ಟಳು, ಆದರೆ ಮುಖ ಮಾತ್ರ ಹರಳೆಣ್ಣೆ ಕುಡಿದವಳಂತೆ ಗುರ್ರ್ ಎಂದಿಟ್ಟುಕೊಂಡಿದ್ದಳು. “ಪ್ರೊಫೆಸರ್ ಲತಾ?” ಎಂದು ಮುಖದಲ್ಲಿಯೇ ಪ್ರಶ್ನಾರ್ಥಕ ಚಿನ್ಹೆ ಮೂಡಿಸಿದ್ದೆ.

ಒಂದು ನಿಮಿಷ ಸೂಕ್ಷ್ಮವಾಗಿ ನನ್ನನ್ನೇ ದಿಟ್ಟಿಸಿ, ಮತ್ತಷ್ಟು ಗಾಂಭೀರ್ಯ ಹೊತ್ತು-” ಅರೆ! ಇದ್ಯಾಕೆ. ನೆಲ ತುಳಿತಿದ್ಯ? ಅದಕ್ಕೆ ಪಾಪ ಬೇಜಾರಾದ್ರೆ?” ಎಂದು ಹೇಳಿದೊಡನೆ ಒಮ್ಮೆಲೆ ಇಂಗ್ ತಿಂದೋರ್ಹಂಗೆ ಹ್ಯಾಪಳಾಗಿಬಿಟ್ಟೆ. ಶಕ್ಕುವಿನ ಮಾತಿನ ತೀವ್ರತೆ ಅಷ್ಟಿತ್ತು. ಇಷ್ಟಕ್ಕೆ ನಿಲ್ಲಿಸಲಿಲ್ಲ ಅವಳು-“ಓಡು, ಓಡು ಭೂಮಿಯಿಂದಾಚೆ. ಇಲ್ಲ ಅಂದ್ರೆ, ಒಂದ್ ಕೆಲ್ಸ ಮಾಡು. ಗಾಳಿಲಿ ತೇಲಕ್ಕೆ ಕಲ್ತುಬಿಡು”, ಎಂದು ಮಾತಿನ ಹಾರೆಯಿಂದ ಮತ್ತಷ್ಟು ಬಲವಾಗಿ ಬೀಸಿದಳು. ಅವಳ ಕಾಳಜಿ, ನನ್ನ ನಕಾರಾತ್ಮಕ ಭಾವನೆಗಳ ಹಿಮ್ಮೆಟ್ಟಿಸಿತು. ಆ ಪ್ರೀತಿಯ ಹೊಡೆತ ನನ್ನ ನಿರ್ಲಿಪ್ತತೆಯ ಪರಿಚಯ ಮಾಡಿಸಿತು. ನನ್ನ ಗೊಂದಲಗಳಿಗೊಂದು ಉತ್ತರ ರೂಪಿಸಿಕೊಟ್ಟಿದ್ದಳು. ಧನ್ಯವಾದ ಹೇಳಿದರೆ ಮತ್ತೆ ಬೈಗುಳ. ಸುಮ್ಮನೆ ಮುಗುಳ್ನಗುತ್ತಾ, ಅವಳ ಮುಖ ನೋಡದೆ, ಹೆಜ್ಜೆ ಹಾಕಿದೆ ಹಿಂದಿಂದ ಅವಳು ಕಿಸಿಕಿಸಿ ಎಂದು ನಗುತ್ತಿದ್ದದ್ದು ಕೇಳಿಸುತ್ತಿತ್ತು. ನಿಂತು ಹಿಂದೆ ತಿರುಗಿ, “ನಾನು ಮನಸ್ಪೂರ್ವಕವಾಗಿ ಕಲ್ಚರಲ್ ಇನ್-ಚಾರ್ಜ್ ಆಗಲು ಒಪ್ಪಿದ್ದೇನೆ” ಎಂದೆ. ಅವಳು ಮತ್ತೆ ನಗು ಮುಂದುವರೆಸಿ-“ಸರಿ, ನಡಿ” ಎಂದಳು.

ಕಾಲೇಜಿನಾಚೆ ಬರುತ್ತಿದ್ದಂತೆ, ರಸ್ತೆಯಲ್ಲಿ ಇಬ್ಬರು ಮುದುಕಿಯರು ಕೈಯಲ್ಲಿ ತಟ್ಟೆಗಳನ್ನು ಹಿಡಿದು- “ಕಾಣಿಕೆ ನೀಡಿ ತಾಯಿ, ದೇವಿ ಒಳ್ಳೆದು ಮಾಡ್ತಾಳ ನಿಮಗ”, ಎಂದು ನಮ್ಮನ್ನು ಸುತ್ತುವರೆದರು. “ಅಯ್ಯೋ!” ಎಂದು ಹೆದರಿ ನನ್ನ ಚೀಲದಿಂದ ಹತ್ತು ರುಪಾಯಿ ತೆಗೆದು ಒಬ್ಬರ ತಟ್ಟೆಯಲ್ಲಿ ಹಾಕಿದೆ; ತಟ್ಟೆಯ ತುಂಬಾ ಕುಂಕುಮ, ಮಧ್ಯದಲ್ಲೊಂದು ಸಣ್ಣ ದೇವಿ ವಿಗ್ರಹ, ಅಲ್ಲೊಂದು ಇಲ್ಲೊಂದು ನಾಣ್ಯಗಳು. “ಸರಿ ಹಾಕಿದೆವಲ್ಲ, ಹೋಗಿ. ” ಎಂದು ಶಕ್ಕು ಹೇಳಿದೊಡನೆ, ಅಲ್ಲಿದ್ದ ಇನ್ನೋರ್ವ ಮುದುಕಿ-“ನೀನೂ ಹಾಕು ತಾಯಿ, ಇಂಜಿನಿಯರ್ ಗಂಡ ಸಿಕ್ತಾನ” ಎಂದು ಶಕ್ಕು ಬೆನ್ಹತ್ತಿದಳು. “ಅರೆ, ಇಂಜಿನಿಯರು ಬೇಡ, ಡಾಕ್ಟು ಬೇಡ”, ಎಂದು ಹೇಳಿ ಒಂದೆ ಘಳಿಗೆಯಲ್ಲಿ ಮಾರು ದೂರ ಓಡಿ, “ಬಾರೆ” ಎಂದು ಕೂಗುಹಾಕಿದಳು.

ತಕ್ಷಣ ಆ ಮುದುಕಿ ನನ್ನ ಬಳಿ ಬಂದು “ನೀನೆನು ನನಗೆ ಕೊಡಬೇಡ. ಪೂಜೆ ಮಾಡಿ ನಿನಗೆ ವಾಪಸ್ಸು ನೀಡುವೆನು”, ಎಂದು ಕುಂಕುಮವ ಹಣೆಗೆ ಇಡಲು ಬಂದಳು. ಅವಳ ನೇತಾಡುತ್ತಿದ್ದ ಕೆನ್ನೆ, ಕೈಯಿಗಳು, ಎಂತವರಿಗೂ ಕರುಣೆ ತರಿಸುವಂತಿತ್ತು. ಅವರಿಬ್ಬರ ಮಾತುಗಳು, ಗೈಯಾಳಿತನವನ್ನು ಪ್ರದರ್ಶಿಸುತ್ತಿದ್ದರೆ, ಅವರ ಮಾಸಿದ ಚೆಹರೆಗಳು ಹೂವಿಲ್ಲದ ಒಣಗಿಡಗಳನ್ನು ನೆನಪಿಸುತ್ತಿದ್ದವು. ಅದು ಒಂಥರ ಚೆಲುವೇ ಆದರೂ, ನೋಡುವ ನಯನಗಳಿಗೆ ಆಹ್ಲಾದಕ್ಕಿಂತ, ವಿಷಾದ ಹುಟ್ಟಿಸುತ್ತಿತ್ತು. ಏನೂ ಮಾಡಲು ತೋಚದೆ ಸುಮ್ಮನೆ ನಿಂತೆ. ಶಕ್ಕು ಆ ಬದಿಯಿಂದ ಕುಂಕುಮ ಹಚ್ಚಿಸಿಕೊಳ್ಳಬೇಡ, ಎಂದು ಒಂದೇ ಸಮನೆ ಸನ್ನೆ ಮಾಡುತ್ತಿದ್ದಳು. ಇನ್ನೇನು ಆ ಮುದುಕಿ ಹಚ್ಚಿಯೇ ಬಿಟ್ಟಳು ಎನ್ನುವಷ್ಟರಲ್ಲಿ ನಾನು ಒಂದು ಹೆಜ್ಜೆ ಹಿಂದೆ ಇಟ್ಟು, ಚಿಲ್ಲರೆ ಇರದ ಕಾರಣ ಮತ್ತೆ ಹತ್ತು ರುಪಾಯಿ ಹಾಕಿ-” ಇದೆಲ್ಲ ಬೇಡ, ಅದೆನು ಮಾಡಿಕೊಡುತ್ತೀರೊ ಕೊಡಿ”, ಎಂದೆ.
ಅತ್ತ ಶಕ್ಕುವಿನ ಬಳಿ ಹೀಗೇ ಇನೊಬ್ಬಳು ಮುದುಕಿ ಹತ್ತು ತಟ್ಟೆಗೆ ಹಾಕಿಸಿಕೊಂಡಿದ್ದಳು. ಇಬ್ಬರೂ ಪೂಜೆ ಏನೊ ಮಾಡಿದರು, ಆದರೆ ದುಡ್ಡನ್ನು ಮಾತ್ರ ಊಹುಂ! ಮರಳಿಸುವ ಗೋಜಿಗೇ ಹೋಗಲಿಲ್ಲ. ಕಾದು ನಿಂತಿದ್ದ ನಮ್ಮನ್ನು ಒಮ್ಮೆಯೂ ತಿರುಗಿ ನೋಡದೆ, ಕಾಲ್ಕಿತ್ತರು.

ನಾವು ಕೂಗಿ ಜಗಳವಾಡುವ ಸ್ವಭಾವದವರಲ್ಲದ್ದರಿಂದ ಹೆಡ್ಡರಂತೆ ಮಿಕ-ಮಿಕ ನೋಡುತ್ತಾ ನಿಂತಿದ್ದೆವು. ಎಷ್ಟೇ ಆದರೂ, ಮಧ್ಯಮವರ್ಗದ ಮನಃಸ್ಥಿತಿ. ರಾಜಿಯ ಹೊರತು ಜೀವನ ಅಸಾಧ್ಯವೆಂದು ನಂಬಿರುವ ಮನಸ್ಸುಗಳು, ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿಯಿದೆ ಎಂದು ನಂಬಿರುವ ಅಂತಃಕರಣಗಳು. ಪುಟಿದು ತಿರುಗಿ ಬಿದ್ದರೂ; ನ್ಯಾಯಕ್ಕಾಗಿ ಹೋರಾಡುವ ಯುಕ್ತಿಯಿದ್ದರೂ, ಆ ಹೆಂಗಸರತ್ತ ಕನಿಕರದ ತುಡಿತ. ಒಂದು ಚಿಕ್ಕ ಸಂದರ್ಭಕ್ಕೆ ಅದೆಂತಾ ಮಹಾನ್ಶಕ್ತಿ? ನಾವಾರೆಂದು ತೋರಿಸುವುದಕ್ಕೆ ಹೆಚ್ಚು ಸಮಯ ಅಪೇಕ್ಷಿಸದು. ವಿಚಿತ್ರ ಜೀವನ. ಈ ನಡುವೆ ಇಬ್ಬರಿಗೂ ಮಾತು ಹೊರಡದು. “ಥತ್ತೇರಿಕೆ. ಇನ್ನೇನು ಮಾಡೋದು. ನಡಿ, ಇವತ್ತೆಲ್ಲ ಬರಿ ಗ್ರಹಚಾರವೇ. ” ಎಂದು ನಾನು ಹೆಜ್ಜೆ ಇಟ್ಟೆ; ಅಂತೆಯೇ ಶಕ್ಕುವೂ. ಇಬ್ಬರು ಮನೆಗೆ ತಲುಪಿ, “ತಲುಪಿದೆ” ಎಂದು ಎಸ್. ಎಂ. ಎಸ್ ಸಂದೇಶ ಕಳುಹಿಸುವಷ್ಟರಲ್ಲಿ ಏಳಾಗಿತ್ತು.

-ಡಾ. ಅಮೂಲ್ಯ ಭಾರದ್ವಾಜ್‌


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x