“ದೇಶ ದೇಶದಾರತಿ ಬಂದೋ”: ಗೋಳೂರ ನಾರಾಯಣಸ್ವಾಮಿ

ಅಕ್ಕ ಮಾರಮ್ಮ ಗುಡಿಗಾ ಚಿಕ್ಕವೆರೆಡು ಗಿಳಿಬಂದೋ….
ಕಪ್ಪು ತುಂಬಿವೋ ಗುಡಿಗೆಲ್ಲಾ
ಕಪ್ಪು ತುಂಬಿವೋ ಗುಡಿಗೆಲ್ಲಾ ಮಾರಮ್ಮ-
ಬಣ್ಣ ಬಳದಾವೋ ಗುಡಿಗೆಲ್ಲ
ದೇಶ ದೇಶದಾರತಿ ಬಂದೋ||

ಹಟ್ಟಿ ಮುಂದ ಹರಡಿಕೊಂಡಿದ್ದ ಸೂಜಿ ಮಲ್ಲುಗ ಚಪ್ಪರದ ಕೆಳಗೆ ಕುಳಿತು ಇದುವರೆಗೂ ನಾನು ನಮ್ಮ ಸೀಮೆಯೊಳಗೆ ಎಲ್ಲೂ ಕ್ಯೋಳದೇ ಇರುವ ಈ ಅಪರೂಪದ ಸಾಲುಗಳನ್ನು ಹಾಡುತ್ತಿದ್ದ ನಮ್ಮಜ್ಜಿ ಪುಟ್ಟಸಿದ್ದಮ್ಮನ ಈ ಹಾಡು, ಈ ಹಾಡಿನ ಮೇಲು ಸ್ವರವ ಕೇಳಿ ನನ್ನೆದೆಯೊಳಗಿಂದೆದ್ದ ಸಂಕಟಕ್ಕೆ ಕೊನೆಯಿಲ್ಲದಾಯಿತು.

ಆಗ ತಾನೇ ಗದ್ದ ಕೆಲಸದಿಂದ ಬಂದ ನನ್ನ ನೋಡಿದ ಅಜ್ಜಿ ತಾನು ಹಾಡುತ್ತಿದ್ದ ಹಾಡು ನಿಲ್ಲಿಸಿದವಳೆ
ಈಗ್ಬಂದ್ಯ ಕೂಸು, ಕೈ ಕಾಲ್ ತೊಳ್ಕಂಡ್ ಅನ್ನ ಉಣ್ಣು ಹೋಗು ಅಂದ್ಳು.

ನಂಗ ಹಸಿವಿರಲಿಲ್ಲ. ಮಾತಿಗಿಳಿದೆ. ಒಂದೇ ಬಾರಿಗೆ ಎದೆಯಲ್ಲಿ ಉಳಿದ ಆ ಹಾಡು ಆ ಹಾಡಿನ ಹಿಂದಿನ ಮರ್ಮವ ಕ್ಯೊಳಲಾಗಿ,

ಅಜ್ಜಿಯಾದರೂವೆ ಯ್ಯೋಳುತ್ತಿದ್ದಾಳೆ…
ಅಯ್ಯೋ ಕಂದಾ ಆ ಕಾಲುದ್ ಮಾತ್ ಯಾಕ್ ಹಾಡ್ದಯಪ್ಪ. ಹಟ್ಟಿ ತುಂಬಾ ಜನ ಮಕ್ಕಮರಿ ನೇಗ್ಲು ಒಣ್ಕ ಹೊಲ ಮನ ಚೆನ್ನಾಗ್ ಗೆಯ್ಯರು. ಈಗ್ಯಾರಪ್ಪ ಅವರವರ ಅಂಕುಕ್ಕ ಅವರವರು ಅವರೆ. ಕಷ್ಟ‌.

ಹಂಗಲ್ಲಕಮೈ ಹಿಂದ್ಕ ನಮ್ಮೂರ್ ಹೆಂಗಿತ್ತು ಅಂತ.
ಊರ! ಊರೇನೊ ಯಾವಾಗ್ಲೂ ದೊಡ್ಡದುಕಪ. ಮನ್ಸ ಸಣ್ಣವ ಆಗ್ಬುಟ್ಟ ಅಷ್ಟಿಯ!

ನಮ್ಮೂರಲ್ಲಿ ಒಂದ್ ಹತ್ ಹನ್ನೆರಡು ಮನ ಅಂತಿನಿ: ದಿಗ್ಗಯ್ಯನ್ಹಟ್ಟಿ, ಕೊನೆಯನ್ಹಟ್ಟಿ, ಗೌಡಯ್ಯನ್ಹಟ್ಟಿ, ಹೊಂಗಯ್ಯನ್ಹಟ್ಟಿ, ಹಳಕೋಟಯ್ಯನ್ಹಟ್ಟಿ, ಪಟೇಲಯ್ಯನ್ಹಟ್ಟಿ, ಚಕ್ರದ್ಹಟ್ಟಿ, ಕೆಂಪಗಯ್ಯನ್ಹಟ್ಟಿ, ಭದ್ರಮ್ಮನ್ಹಟ್ಟಿ, ಮೂಗಿಮಾದಯ್ಯನ್ಹಟ್ಟಿ ಇವು ಮಾತ್ರ ಸಣ್ಣ ಹಂಚುನ್ ಮನಗಳು. ಉಳ್ದವೆಲ್ಲ ಮುಕ್ಕಾಲ್ ಭಾಗ ಗುಳ್ಳುಗಳು. ಹಲ್ಲುನ್ ಮನಗಳು, ವಡ್ಕ ಮನಗಳು. ಈಗ್ಯಾನ ಅಂದ್ಕೊಂದ್ ಚಂದ್ಕೊಂದ್ ಮನ ಕಟ್ಟರ. ಬರೀ ಮಾಗಡಿ ಮನಗಳಿಯ. ನಮ್ಮೂರ ಸುತ್ತ ಗದ್ದ ಇತ್ತು. ಹೀಗೆಲ್ಲಿದ್ದು ಮೇಗುಲ್ ಕಾವ್ಲಿಗಂಟ ಬರೀ ಮನ್ಗಳೆ ಆದ್ವು.

ಅಮ್ಮೋ ನಿಮ್ ಕಾಲ್ದಲಿ ಇಸ್ಕೂಲ್ ಇರ್ಲಿಲ್ವ.

ಇರ್ಲಿಲ್ಲ. ನಂಜಗೂಡಲ್ಲಿ ಇತ್ತು. ನಮ್ಮ ಊರ್ಗ ಗಾಂಧಿಮಾತ್ಮ ಬಂದಿದಾಗ್ಲು ಇಸ್ಕೂಲ್ ಇರ್ಲಿಲ್ವಂತ. ನಮ್ಮ ಅಪ್ಪ ಕೆಂಚಪ್ಪ ಯ್ಯೋಳ್ತಿದ್ನ. ಅಪೈ ಅಂತ ಅಪ್ಪ ಎಲ್ ಸಿಕ್ದನ್ನಪ್ಪ ಈಗ. ಅವ್ನೆ ಅವುನ್ನ ನೋಡಕ ಬಂದ ಜನ್ಗಳ್ಗ ಅಷ್ಟು ಇಷ್ಟು ಯ್ಯೋಳ್ ಕೊಡ್ತಿದ್ನ.

ಏನ್ ಯ್ಯೋಳ್ತಿದ್ನಮ್ಮ:
ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದರಿಲ್ಲ ಕಂಡಯಾ..

ಒಲೆ ಹೊತ್ತಿ ಉರಿದರೆ ನಿಲಬಹುದಲ್ಲದೆ
ಧರೆ ಹೊತ್ತಿ ಉರಿದರೆ ನಿಲಲು ಬಹುದೆ..

ತಾಯಿಯ ಮೊಲೆಯಾಲು ನಂಜಾಗಿ ಕೊಲುವೊಡೆ
ಇನ್ನಾರಿಗೆ ದೂರುವೆನಯ್ಯಾ ಲಿಂಗದೇವಾ..

ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ..

ಇಂತವು ಬಸವಣ್ಣನ ಪದಗಳ ಹಾಡ್ತಿದ್ನ ನಮ್ಮಪ್ಪ. ಜನ ಹೊಲದ ಕೆಲಸ ಮುಗಿದ್ ಮ್ಯಾಲ ಹೊಪ್ಪತ್ನಾಗ ಮಣಿಯಮ್ಮಗುಡಿ ಹಜಾರಲಿ ಕೂತ್ಕಂಡು ಒಳ್ಳೆದು ಕೆಟ್ಟದು ಮಾತಾಡರು. ನಮ್ಮಪ್ಪ ಅಂದ್ರ ಮುಂದ್ ಬರದ್ನು ಯ್ಯೋಳ್ತಿದ್ನಕಪ ” ಮುಂದುನ್ ದಿನಲಿ ಮರ ಮರ ಮಾತಾಡ್ತವ” ಅಂತ ಹೇಳ್ತಿದ್ನ. ಹಂಗಂದ್ರೇನಪ್ಪ ಅಂತ ಅರ್ಥ ಆಗ್ದೆ ನಾವು ಕ್ಯೋಳುದ್ರ ಜನ ಅವರ ಪಾಡ್ಗ ಅವರು ಒಬ್ ಒಬ್ರೆ ತಮುಗ್ ಪಾಡ್ಗ ತಾವು ಮಾತಾಡ್ಕ ಹೊಯ್ತರಕವ ಅಂತಿದ್ನ. ನೋಡು ಈಗ ಅಂವ ಯ್ಯೋಳಿ ನಲವತ್ತು ವರ್ಷೂ ಆಗಿಲ್ಲ ನನ್ ಕಣ್ಣಲ್ಲೇ ನೋಡ್ಬುಟ್ಟಿ.

ಯಾನಮ್ಮ ಅದು!

ಮೊಬೇಲುಕಪೈ. ನೀವು ಮಾತಾಡಲ್ವ ಅದು!

ಹೋ, ಅಮ್ಮೈ ದಿಟ್ವಮ್ಮ!

ಹೂಂಕಪೈ ದಿಟ. ಇನ್ನು ಏನೇನೋ ಯ್ಯೋಳನೂ ನಂಗ ಅರ್ಥ ಆಯ್ತ ಇರಲಿಲ್ಲ. ಬುಡು ನಮ್ಮಪ್ಪುನ್ ಕತಿಯ. ಈಗ್ಯಾರಿದರು ಅಂತವ್ರು ಕಂಡದ್ನ ಕಂಡಂಗೆ ಹೇಳವ್ರು.

ಆಗ ಅಂದ್ರ ಯಂಡ ಕುಡಿತಿದ್ದವರು ಕಮ್ಮಿ, ದೊಡ್ಡವರು ಚಿಕ್ಕವರು ಅಂತ ಗೌರವ ಕೊಡ್ತಿದ್ರು. ಯಾರಾದ್ರು ತಲ ಬಲ್ತಿರೋರು ಹೇಳದ್ನ ಕ್ಯೋಳರು. ಈಗ ಇಷ್ಟುದ್ದ ಐಕ್ಳು ಎಷ್ಟೊತ್ತು ಯಂಡ ಕುಡ್ಕ ನಿಂತವ. ಸತ್ವ ಇಲ್ಲ. ಊರ್ಲಿ ತುಂಡೈಕ ಅಂದ್ರ ಇಷ್ಟ್ ಇಷ್ಟ್ ಉದ್ದುಕ್ಕ ಒಳ್ಳೆ ಪೈಲ್ವಾನ್ ಥರ ಇರ್ತಿದ್ರು. ಈ ಕಾಲುದ್ ಐಕ್ಳುಗ ಸೊಂಟ್ವೇ ಇಲ್ಲ. ಅವರು ಹಾಕ ಷರಾಯಿ ತಿಕದ ಕೆಳಗೆ ನೇತಾಡ್ತಿರುತ್ತ ಅದ್ನ ಎಡಗೈಲಿ ಯಳ್ಕಂಡ್ ಯಳ್ಕಂಡ್ ಹೊಯ್ತವ.

ಇನ್ನು ಹೆಣ್ಣೈಕ್ಳ! ಹೊಲಮನ ಕೆಲ್ಸನೇ ಮರ್ತುಬುಟ್ಟವ‌‌. ಇಸ್ಕೂಲ್ಗ ಬ್ಯಾಗ್ ನ್ಯಾತಕ ಹೋಗಿದ್ಬರದೇ ದೊಡ್ಡದು, ಸುಸ್ತಾಗಿರ್ತವ. ನನ್ ತಂಗಿ ಮೂಳಮಕ್ಕ ಹೊಯ್ತವಲ್ಲ ಇಸ್ಕೂಲ್ಗ ನೋಡ್ತಿನಿ ಬೆಳಗಾನೂ ಓದ್ತವ.‌ ಬೆಳ್ಗಾಗದೇ ತಡ ಎದ್ನೋ ಬಿದ್ನೋ ಅಂತ ಓಡ್ತವ ಹೊಟ್ಗೂ ನ್ಯಾಯ್ವಾಗಿ ತಿನ್ನಲ್ಲ! ತಿನ್ನ ವಯಸಲ್ಲಿ ತಿನ್ನಲ್ಲ ಆಡ ವಯಸ್ಸಲ್ಲಿ ಆಡಲ್ಲ. ಮದ್ವ ಆದ್ಮೇಲ‌ ಹೆರ್ಗ ಹೊತ್ತಲ್ಲಿ ಹೊಟ್ಟ ಕೂಯಿಸ್ಕ ಮಲಿಕಳದು. ಈವಾಗ ಅಯ್ಯೋ ಸಿವಾ ಬಸ್ರಿ ಆದ ಅಂತ ಗೊತ್ತಾಯ್ತಿದ್ದಂಗೆ ಹಾಸ್ಗ ಮ್ಯಾಲ ಮಲುಗುಸ್ಬುಡ್ತರ. ಅದ್ಕೆ ಈಗ ಎಲ್ಲರಿಗುನು ಆಸ್ಪತ್ರಲಿ ಕೂದು ಕೂದು ಮಲುಗ್ಸದು‌! ಆಗಿಲ್ಲಿತ್ತಪ್ಪ ಆಪ್ರೇಸನು. ಮನೇಲೆ ಆಗೋಗದು. ಎಷ್ಟೊತ್ತುನ್ ರಾತ್ರಿ ಆದ್ರು ಸರಿ ಹೊಟ್ಟ ನೋವು ಕಾಣಿಸ್ಕಂಡ್ರ ಸೂಲುಗಿತ್ತಿ ಬಂದು ಹತ್ತು ನಿನಿಷುಕ್ಕ ಬಾಂತಿ ಕೈಗ ಕೂಸು ಕೊಟ್ಟು ಹೋಗಳು. ಚೊಚ್ಲು ವಸೀ ಕಷ್ಟಿಯ ನೋವು ಜಾಸ್ತಿ ಇರುತ್ತ. ಆದ್ರ ಹೆರ್ಗ ಅಂದ್ರ ಈಗ್ಲಂಗ ಕಷ್ಟ ಇರ್ಲಿಲ್ಲ ಬುಡು.

ಅಂದ್ರ ಅಂಬಳಿ, ತುಗ್ರಿ ಚೀಕು, ರಸಬಾಳ ಹಣ್ಣು, ನವಣ, ತಗಡೋಣಿ, ಜೋಳ ಮುದ್ದ, ರಾಗಿ ಮುದ್ದ ತಿಂತಿದ್ನು. ಈಗ್ಲಂಗ ಕುರುಕ್ಲು ಪರುಕ್ಲು ಯಾನು ಇರಲಿಲ್ಲ. ಒಬ್ರಾದ್ರುವಿ ಹಟ್ಟಿಲಿ ಕೂತ್ಕತ ಇರಲಿಲ್ಲ. ವತ್ತಾರ ಎದ್ದು ಹಸಪಸ ನೋಡಿ, ಬುತ್ತಿ ಕಟ್ಕಂಡು ಹೊಲದಿಕ್ಕ ಹೊಂಟ ಅಂದ್ರ ಇನ್ ಬತ್ತಿದ್ದು ಸಂದ್ಗಿಯ! ಮೈಕೈ ಮುರೆಗಂಟ ಕೆಲಸ ಮಾಡ್ತಿದ್ನು. ರೋಗಪಾಗ ಕಮ್ಮಿ. ಐದೊರ್ಷಕ್ಕೊ ಆರ್ ವರ್ಷಕ್ಕೊಂದ್ಸಾರಿ ಮಳಪಳಲಿ ನೆನುದ್ಬುಟ್ರ ಜ್ವರಪರ ಬರದು. ಬಿಸಿ ಅಂಬ್ಳಿ ಕುಡುದ್ಬುಟ್ಟು ಗೊಪ್ರ ಹಾಕಂಡ್ ಮನಿಕಬುಟ್ರ. ಬೆವ್ರು ಕಿತ್ಕಂಡ್ ಹರ್ದು ಜ್ವರಪರೆಲ್ಲವಿ ಓಡ್ಹೋಗದು. ಈಗ ವಸಿ ನಗ್ಡಿ ಆದ್ರುವಿ ಸಾಕು ಆಸ್ಪತ್ರುಗ ಓಡ್ಹೋಯ್ತವ. ನನ್ ಮೊಮ್ಮಗ್ಳು ತ್ರಿವೇಣಿ ಮಗಳು ಎಂಥದ ಅವಳ ಹೆಸರು.

ವೇದಾ ಶ್ರೀ ಅಂತಕಮ್ಮೊ.

ಹೂಂ ಅದೇನೊ ನಂಗ ಕರೆಯಕ ಬರ್ದು. ಒಂದ್ಸಲ ಹೊಟ್ಟ ನೋವು ಅಂತು. ಅಂಬುನ್ ಯಲ ಕಟ್ಟಿಕೊಡ್ತಿನಿ ಬವ್ವ. ಹೊಟ್ಟನೋವು ವಾಸಿ ಆಯ್ತುದ ಅಂದುದ್ಕ. ಬ್ಯಾಡ ನಾನು ಡಾಕುಟುರ್ಗೆ ತೋರಿಸ್ಬೇಕು ಅಂತ ಅವರ ಅವ್ವುನ ಕರ್ಕ ಹೊಂಟೇ ಹೊಯ್ತು. ನೋಡು ನಾಕ್ ವರ್ಷೂ ಆಗಿಲ್ಲ ಅದ್ಕ. ಎಂಥಾ ಬುದ್ದಿ ಇದ್ದು! ಹಿಂಗ ಈಗುಲ್ ಕಾಲುದ್ ಐಕ್ಳು.

ಆಗ ಎತ್ತುನ್ ಗಾಡಿ ಈಗ ಕಾರು ಬೈಕಂತ ಬಸ್ಸಂತ ಅದೇನೇನೋ ಬಂದವ. ನಾವು ಜಾಸ್ತಿ ನಡ್ಕಂಡೆ ಹೊಯ್ತಿದ್ದು. ತಟ್ಟ ಎಲ್ಲಿತ್ತು ಆಗ. ಹೊಲುದ್ ಕೆಲ್ಸ ಮುಗುದ್ಮೇಲ ಬೂತಳ ಮುರ್ಕಳದು ಅಚೊರ್ಕು ಇಚೊರ್ಕು ಹಿಟ್ಟು ಮಡುಗ್ಬುಟ್ಟು ಮದ್ಯ ಹಳ್ಳುಕ್ಕ ಉದ್ಕ ಬುಟ್ಕಂಡು ಅಜ್ಕ ಅಜ್ಕಂಡು ಮುದ್ದನ ನುಂಗದು. ಅಯ್ ಅದ್ಯಾತಿಕ್ ಯ್ಯೋಳ್ದಯ್ ತಕ ಆ ಕತ್ವಾ!

ಹೊಟ್ಗ ಇಲ್ಲದವರು ಹುಣ್ಸ ಪಿಚ್ಚಿನ ಉರಿದು ಕುಮ್ಮಿ, ಬೇಯಿಸ್ಕಂಡು ತಿನ್ನದು. ಬ್ಯಾಲುದ್ ಕಾಯಿ, ನಲ್ಲಿಕಾಯಿ, ನೇರಳ ಹಣ್ಣು, ಗೆಣಸು ಒಂದ ಎರಡ ತಕ.

ಅಮ್ಯಾಲ ಅರಸುನ್ ಕೆರದಿಕ್ಕ ಕೊಡಬ ತಕಂಡ್ ಹೊಂಟೋದ್ರ ಗಂಡುಸ್ರು ಕೊಡಬ ತುಂಬಾ ಮೀನ್ಗಳು. ಬೆಳ್ಚಿ, ಐಲ, ಕೊರಮ, ಕೊಚ್ಚಲು, ಗೆಂಡ, ಹಾವುಬತ್ತಿ ಮೀನು, ಆಮೇಲ ನಳ್ಳಿ. ನಳ್ಳಿ ಅಂದ್ರ ಈಪೀಪಾಟಿ ಇದ್ದು. ಸುಟ್ಕ ತಿನ್ನದು. ನಳ್ಳಿ ಉದ್ಕನೂ ಮಾಡ್ತಿದ್ನು. ಅವತ್ತು ನಿನ್ ಗೆಣ್ಕಾತಿ ಬಂದಿದ್ರಲ್ಲ ಯಂಥವಳ ಗೌಡ್ತಿ!

ಬೆಂಗಳೂರಿನಿಂದ ಬಂದಿದ್ಳಲ್ಲ ಅವಳ. ಅವಳು ರೇಖಾಗೌಡ ಅಂತ.

ಹೂಂ ಏನಂದ ಅವ ಒಂದ್ ನಳ್ಳಿಗೆ ಮುನ್ನೂರು ರೂಪಾಯಿ ಅಂದ್ಳಲ್ವ. ನಾನು ಅವತ್ತು ಅವುಳ್ಗ ಯ್ಯೋಳ್ನಿಲ್ಲ. ನಾವು ವಾರುಕ್ಕ ಮೂರು ಸಾರಿ ಸೊಗಡು ಮಾಡ್ಕಂಡ್ ತಿಂತಿದ್ನು. ಎಷ್ಟು ಬೇಕು ಅಷ್ಟು ನಮ್ ಅರಸುನ್ ಕೆರೆಲಿ ಹಿಡ್ಕ ಬತ್ತಿದ್ನು. ಆಗ್ಗೂ ಈಗ್ಗೂ ನೋಡು ಎಷ್ಟು ಯತ್ಯಾಸ ಅದ. ಮುನ್ನೂರು ರೂಪಾಯ್ ಅಂತ ಸಿವಾ! ಆಗ ಒಂದು ರೂಪಾಯ್ಗೂ ತಕಳವ್ರೆ ಇಲ್ಲ.

ಅದ್ಸರಿ ಸಿನಿಮಾ ನೋಡಕ ಹೊಯ್ತಿದ್ರೆ ನೀವು?

ಹೂಂ ಅದ್ಯಾಕ ಎಂಜಿಆರ್ ರು, ರಾಜ್ ಕುಮಾರು, ಲೀಲಾವತಿ, ಪಂಡರೀಬಾಯಿ ಪಿಚ್ಚರುಗಳು ಬತ್ತಿದು ನೋಡ್ತಿದ್ನು. ಇದ್ಕು ಮೊದ್ಲು ಮೂಗ್ ಸಿನ್ಮಾಗಳು. ಅದ್ಯಾಕ ರಾಜ್ ಕುಮಾರು ನಂಜಗೂಡ್ಗೆ ಬತ್ತಿದ್ನ ಕಪ ನಾಟಕ ಮಾಡಕ. ಅವರ ಅಪ್ಪ ಗುಬ್ಬಿವೀರಣ್ಣ ಕಂಪ್ನಿಲಿ ಇದ್ನಲ್ಲ. ಅವರ ಜೊತ್ಗ ಬತ್ತಿದ್ನ. ನಂಜಗೂಡ್ಲಿ ನಾಗಪ್ಪ ಅಂತ ಇದ್ದ. ಅವ್ನೇ ಬ್ಯಾಡರ ಕಣ್ಣಪ್ಪನ ಪಾತ್ರ ಮಾಡ್ಬೇಕಿತ್ತಂತ. ಅದ್ಯಾನೋ ಕಾಣಿ ಅದು ರಾಜ್ ಕುಮಾರ್ಗ ಸಿಕ್ತು. ಅಲ್ಲಿಂದ ರಾಜ್ ಕುಮಾರ್ಗ ಗ್ರೇಡ್ ತಿರಿಕತ್ತು. ನಮ್ಮೂರಲಿ ಕ್ಯಾತನ ಮಸಣಯ್ಯ ಅಂತ ಇದ್ನ ಅಂವ ರಾಜಕುಮಾರ್ ಗ ನಾಟಕ ಆಡಕ ಬಣ್ಣ ಬಳೆಕ ಹೊಯ್ತಿದ್ನಂತ. ಗುಂಡ್ಲ ಅರುಗುಂಟ ಎಮ್ಮ, ಹಸನೆಲ್ಲ ಮೇಯಿಸಿದಂತ ರಾಜ್ ಕುಮಾರು. ಹಂಗತಿದ್ರು. ಗಾಜನೂರಿನಿಂದ ಬಂದ್ರ ನಮ್ಮೂರ್ಗನೇ ಹೊಯ್ತಿದ್ದು.

ರಾಜ್ ಕುಮಾರ್ನ ನೀನು ನೋಡಿದ್ಯ.

ಹೂಂ ನಮ್ಮ ನಂಜನಗೂಡ ಅಯ್ಯಪ್ಪಸ್ವಾಮಿ ದೇವಸ್ಥಾನವ ಅವರ ಕೈಲೇ ಅಲ್ವ ಮೊದ್ಲು ಬಾಗ್ಲು ತಗಿಸಿದ್ದು. ಆಗ ನೋಡಿನಿ. ಏನ್ ಜನ್ವ ಅವತ್ತು. ಅಂಥ ಮನ್ಸ ಸಿಕ್ಕಲ್ಲ ಬುಡು ಕೂಸು. ವೀರಪ್ಪನ್ ಮುಂಡಮಗ ಎತ್ಕಹೋಗಿದ್ದಾಗ ವಸೀ ಅತ್ತಿಲ್ಲ ನಾನು.

ಯಾವ್ಯಾವ ಜಾತ್ರೆಗಳ್ಗ ನೀವು ಹೊಯ್ತಿದ್ರಮ್ಮ.

ನಾವು ಕೂಗುವ ಕೂಗು ನಿಮ್ಮ ಪಾದಕ್ಕರುವಾಗಲ್ಲಪ್ಪ ಸಿದ್ದಯ್ಯ ಸ್ವಾಮಿ ಬನ್ಯೋ..
ಪವಾಡ ಲಿಂಗಯ್ಯೋ ನೀವೇ ಬನ್ಯೋ…
ಆದಿ ಒಳಗಲ ಜ್ಯೋತಿ, ಬೀದಿವೊಳಗಲ ಜ್ಯೋತಿ, ಬಡವರ ಮನೇಲೂ ಜ್ಯೋತಿ, ಬಲ್ಲಿಗರ ಮನಲೂ ಜ್ಯೋತಿ:
“ತಿಪ್ಪ ಮ್ಯಾಲ ಕಸ್ಸಿ ಮಡುಗಿದರೂ ಉರಿವಂತ ಪರಂಜ್ಯೋತಿ”
ಸಿದ್ದಯ್ಯ ಸ್ವಾಮಿ ಬನ್ನಿ, ಪವಾಡ ಲಿಂಗಯ್ಯೋ ನೀವೆ ಬನ್ನಿ..
ಆ ನಮ್ಮಪ್ಪ ಧರಗ ದೊಡ್ಡವರು ಈ ಭೂಮಿಗ ಇರೊಂಬೊತ್ತು ಕೋಟಿ ಜೀವರಾಶಿಗಳ್ನ ತಂದು ಬುಟ್ಟೋರ ಬೊಪ್ಪೇಗೌಡನ ಜಾತ್ರೆ ಶುರುವಾದ್ರ ಅಲ್ಲಿಂದ ಬೆಟ್ಟದು ಮ್ಯಾಲಿನ ರಂಗಯ್ಯನ ಜಾತ್ರಗಂಟೂ ಹೊಯ್ತಿದ್ನುಕಪ. ನಂಜನಗೂಡು ದೊಡ್ಡ ಜಾತ್ರೆ, ಚಿಕ್ಕಜಾತ್ರೆ, ತಿರುಪತಿ, ಮಾದಪ್ಪನ ಬೆಟ್ಟ, ರಂಗಪ್ಪನ ಬೆಟ್ಟ, ಚಿಕ್ಕಲ್ಲೂರು ಜಾತ್ರ, ಬೊಪ್ಪನಪುರ ಮಂಟೇಸ್ವಾಮಿ, ಕಪ್ಪಡಿ ರಾಚಪ್ಪಾಜಿ ಜಾತ್ರ ಎಲ್ಲಕ್ಕು ಹೊಯ್ತಿದ್ನು. ದೀವಳಿಗೆ ಹೊತ್ಗ ಮಾದಪ್ಪುನ ಬೆಟ್ಟನ ನೋಡಕೆ ಒಂದ್ ಚೆಂದಲ್ವ. ತಿಂಗಳು ಅಂತನೇ ರಜಾ ಹೊಡೆಯಕ ಅಂತ ಹೊಂಟೋಯ್ತಿದ್ನು. ಅಲ್ಲೆ ಇರ್ತಿದ್ನು. ದೀಪಾವಳಿ ಹಬ್ಬುಕ್ಕ ಊರಿಗ ಬತಿದ್ನು. ಈಗ್ಲೂ ಹೊಯ್ತರ ಆದ್ರ ಕಮ್ಮಿ. ಐಕುಳ್ಗ ಇಸ್ಕೂಲು ಇರುತ್ತಲ್ಲ ಅದ್ಕ. ಅದ್ಬುಟ್ರ ದಸರಾ!

ಹೋ, ದಸರಾ ನೋಡು ಈಗ ದಸರಾ ಬಂದುದ, ಹಿಂದ್ಕ ಯಂಗ್ ನೆಡಿತಿತಮ್ಮ ದಸರಾ.

ಹಿಂದ್ಕ ಅಂದ್ರ ಅಂಬಾರಿ ಮ್ಯಾಲ ರಾಜ್ರು ಕೂತ್ಕ ಹೊಯ್ತಿದ್ರು. ನಾವು ಎತ್ತುನ್ ಗಾಡಿ ಕಟ್ಕಂಡ್ ಹೊತ್ತುಗ್ ಮುಂಚೆ ಊರ್ಬುಡ್ತಿದ್ನು ಮೈಸೂರ್ಗ ಹೋಗಿ ದಸರಾ ನೋಡಕ. ಈಗ ಹಂಗಿದ್ದ ಚಾಮುಂಡಿ ದೇವಿನ ಕೂರುಸ್ತರ. ನೀವು ಬಸ್ ಮ್ಯಾಲ ಹತ್ನಿಮ್ಸುಕ್ ಹೊಯ್ತಿದರಿ.

ನೋಡು ನೀನು ದಸರಾ ಅಂತಿದಂಗೆ ನಂಗೊಂದ್ ಕತ ಹೊಳಿತು. ಚಾಮುಂಡಮ್ಮುನ್ಗುವಿ, ನಂಜುಂಡಪ್ಪುನ್ಗು ಮದ್ವ ಆಗದ ಅಂತನೇ ಯಾರ್ಗೂ ಗೊತ್ತಿಲ್ಲ. ನಂಜುಂಡನ ಕಪನಯ್ಯ ಅಂತಿವಿ. ಅದ್ಕೆ ಕ್ಯಾರಳಯಿಂದ ಬರುವ ಹೊಳಗ ಕಪನಿ ಅಂತ ಕರೇದು. ಅದ್ಯಾಕ ಈಗ್ಲೂ ಹಂಗೆ ಕರ್ದರ. ಯಾರ್ಯರೋ ಬಂದ್ರು ಏನೇನೋ ಮಾಡುದ್ರು. ಕಾಲ ಬದ್ಲಾದಂಗ ಹೆಸ್ರು ಕುಲ ಊರು ಕೇರಿಯೆಲ್ಲ ಬದಲಾಯ್ತುದ. ಅಷ್ಟುಕ್ಕುವಿ ಈಗ ನಂಜಗೂಡದಲ್ಲ ಅದು ಹಿಂದ್ಕ ಊರೇ ಅಲ್ಲ.

ಹಂಗಂದ್ರೇನಮ್ಮ!

ಹೂಂಕ ಕೂಸು ಅದೊಂದ್ ನಡುಗಾಡು. ಸುತ್ಲೂ ನೀರು. ಬಲುಕ್ಕ ಭಾರೀ ಗುಂಡ್ಲ, ಎಡುಕ್ಕ ಕಪನಿ ಹೊಳ, ಮುಂದುಕ್ಕ ಅಡ್ಡಾಳ, (ಮುಳ್ಳೂರ ಹಾದಿ, ಗೋಳೂರ ತೋಟ) ಹಿಂದುಕ್ಕ ಚಾಮಾಲಪುರ(ಕಾರುಗಳ್ಳಿ) ಇದರ ಮದ್ಯ ಒಂದ್ ನಡುಗಾಡಲ್ಲಿ ಸಣ್ಗುಡಿ ಒಳ್ಗ ನಂಜುಂಡಪ್ಪ ಇದ್ದದ್ದು. ನೂರಾರು ಶರಣರು ಇದ್ದ ಜಾಗ ಅದು. ನಮ್ಮ ಕಪನಯ್ಯ ಅಲ್ಲಿಗ್ ಬಂದು ಶರಣ ಆದ್ಮೇಲ ಮಂತ ನಂಜುಂಡ ಆಗದು. ಸುಮ್ ಸುಮ್ನೆ ಯಾವ್ದೂ ಆಗಲಕಪ. ಈಗ ನಂಜಗೂಡು ಹಂಗೆ ಇದ್ದ ಎಷ್ಟ್ ದೊಡ್ಡದಾಗಿ ಬೆಳ್ದದ. ಕಣ್ಣುಕಾಣಗಂಟೂ ಬರೀ ಮನೆ ಕಾಣ್ತವ.

ಹಂಗರ ಈ ನಂಜುಂಡ ಚಾಮಾಯಿಗ ಮದ್ವ ಆದ್ದು ಯಂಗ್ಯೆ.

ಈ ನಂಜುಂಡ ಅಂದ್ರ ಯಾರ ಅನ್ಕಂಡಿದಯ್. ಅವ್ನೇನ್ ಕಾಡಲ್ಲ. ನಮ್ಮವ್ನಿಯ ಅಂತಳ ಚಾಮಾಯಿ!
ಅದ್ಕೆ ಅಲ್ವ ಚಾಮಾಯಿ ತನ್ನ ತಂಗಿ ಉರುಕಾತಿಗೆ ಮೂರು ದಿನಕ್ಕೆ ಬತ್ತಿನಿ ಅಂತ ಯ್ಯೋಳಿ ಹೋದವ ಆರು ತಿಂಗಳಾದ್ರುವಿ ನಿಮ್ ಭಾವ ನಂಜುಂಡ ಬೆಟ್ಟದರಮನಗ ಯಾಕೋ ಬಂದಿಲ್ಲ. ಹೋಗಿ ಕರತಾರವ್ವ ನಿಮ್ಮ ಭಾವ ನಂಜುಂಡಲಿಂಗುನಾ ಅಂತ ಉರುಕಾತಿಗ ಹೇಳ್ದಾಗ: ಅಕ್ಕ ಭಾವ ಅಂದರೆ ಏನೂ ನಾದಿನಿ ಅಂದರೇ ಏನು. ಮಾಂವ್ಸ ತಿನ್ನರೋ ನಾವು ಕುರಿ ಕೋಳಿ ಕೋಣ ತಿನ್ನೋರು ನಾವು. ನಂಜುಂಡ ನೋಡಿದ್ರೆ ಚೊಕ್ಕ ಭೋಜನದೊಡೆಯ. ನಿನ್ ಎಲ್ಲಿ ಮದ್ವೆ ಆದ. ನೀನ್ ಯಾವಾಗ ಹೆಂಡ್ತಿ ಆದೆ. ಅವನೆಂಗೆ ನಮ್ ಭಾವ ಆದನು ಅಂತ ಕ್ಯೋಳ್ತಳ.

ಅದ್ಕೆ ಅವಳು ನಂಜುಂಡ ತನಗ ಹೇಳಿದ ಮಾತ ಹೇಳ್ತಾಳೆ:
ಅವತ್ತು ನಾನು ಮಹಿಷಾಸುರನ ಕೊಂದ ದಿನ. ಕಪನಿ ಹೊಳ ಒಳಗ ಸ್ನಾನ ಮಾಡುವಾಗ ನಡುನೀರಲ್ಲಿ ಬಂದು ಮುಂಗೈನಾರೆ ಹಿಡಿದು ನನ್ನ ಬರಸೆಳೆದು ತಬ್ಬಿಕೊಂಡಾಗ, ನಾನಾದರೂವಿ ಗಾಬರಿಯಾಗಿ ಯಾರಯ್ಯ ನೀನು ಅಂತ ಕ್ಯೋಳಲಾಗಿ, ಹೇ ಹೆಣ್ಣೆ ಮಾವನೂರ ಮಗಳು ನೀನು. ನನಗ ನಿಮ್ಮಪ್ಪ ಮಾವನಾಗಬೇಕು. ನನಗೆ ನೀನು ಮಾವನ ಮಗಳಾಗಬೇಕು, ನನಗೆ ನೀನು ಸಲ್ಲಬೇಕು. ಬಾ ಮದುವೆ ಮಾಡ್ಕಳವ ಅಂತ, ಅವನ ಕೈಲಿ ಇರ ಇಳ್ಯಾನ ನನ್ನ ಕೈಲಿ ಮಡುಗ್ದ. ನನ್ನ ಕೈನ ಇಳ್ಯಾನ ಅವನ ಕೈಗ ಮಡಿಕಂಡ. ಅವತ್ತಿಂದ ನಾನು ಅವನು ಗಂಡಹೆಂಡಿರಾದ್ನು ಅಂತ ಉರುಕಾತಿಗೆ ಹೇಳ್ತಾಳ. ಅಂದ್ರ ಹಿಂದ್ಕ ನಂಜುಂಡ ಏನಾಗಿದ್ನ ಶರಣ ಆಗಕು ಮುಂಚಿಯ ಚಾಮುಂಡಿಗ ಮಾವುನ್ ಮಗ್ನೆ ಆಗಿದ್ನ. ಅವುಳು ತಿನ್ನದ್ನೆ ತಿಂತಿದ್ನ ಅಂತ. ಅದ್ರಲ್ಲೇನ್ ಬೇದಭಾವ ಇದ್ದು ತಂಗಿ. ಅದ್ಕೆ ನಾನೇಳಿದ್ದು ನಾವೇನು ಕಾಡಲ್ಲ ನಾವೆಲ್ಲ ಒಂದೇ ಜನ. ಮೊದ್ಲು ನೀನು ಹೋಗಿ ನಿನ್ ಭಾವುನ್ ಭಾವುನ್ಸಿ ಕರ್ಕ ಬಾ ಹೋಗು ಅಂತ ಕಳುಸ್ತಳ. ಈಗ ಈ ಕತೆಯ ಹೇಳುದ್ರ ಒಂದಷ್ಟು ಜನುಕ್ಕ ಕ್ಯಾನ ಬತ್ತುದ.

ಅಲ್ಲಿಂಗಟ ಹೋಗ್ಬೇಡ ನೀನು ನಮ್ಮೂರ್ಗ ಬದನಾಳದಿಕ್ಕ ಕಾಣ್ತುದಲ್ಲ ಗುಡ್ಡ. ಆ ಗುಡ್ಡ ಉತ್ತರಕ್ಕ ಮುಳ್ಳೂರಿನವುರ್ಗ ಸೇರಿದ್ದು ದಕ್ಕಿಣಕ್ಕ ವೀರದೇವನಪುರದವರ್ಗ ಸೇರುದ್ದು. ಮುಳ್ಳೂರು ಗುಡ್ಡ ಅದ್ನ ನಮ್ಗ ಬುದ್ದಿಬಂದಕಾಲ್ಕೆ ಮುಳ್ಳೂರು ಗುಡ್ಡ ಕರಿತಿದ್ನು. ಆಮೇಲ ಮುಳ್ಳ ಗುಡ್ಡ ಅಂತ ಆಯ್ತು. ಆಮ್ಯಾಕ ಸುಮಾರ್ ವರ್ಷ ಹಿಂದಿಯ ಅದೆಲ್ಲಿಂದ್ಲೊ ಸಾಬ್ರು ಬಂದು ಸೇರ್ಕಂಡ್ರು. ಅದ್ಕ ಸಾಬ್ರು ಮಾಳ ಅಂತ ಕರೆಕ ಶುರು ಮಾಡುದ್ನು. ಬೆಂಕಿ ಮಾದೇವಪ್ಪ ಅಂತ ಎಂಎಲ್ಎ ಇದ್ನಲ್ಲ ಹೆಮ್ಮರಗಾಲದಂವ ಅಂವ ಗೆದ್ದಿದಾಗ ಬಡಬಗ್ಗರುಗ ಅಂತ ಅಲ್ಲಿ ಮನ ಕಟ್ಕಳಕ ಜಾಗ ಕೊಟ್ನ. ಅವತ್ತಿಂದ ಮಹದೇವನಗರ ಅಂತ ಹೆಸರು ಆಯ್ತು. ಈಗ ಯಾವೊ ಐಕ್ಳು ಗುಡ್ಡ ಮೇಲೊಂದು ಆಂಜುನೇಯುನ್ ಗುಡಿಕಟ್ಟಿ ಮಾರುತಿ ಗುಡ್ಡ ಅಂತ ಬೋರ್ಡ್ ಹಾಕವ. ಆದ್ರ ಆ ಗುಡ್ಡ ಯಾವ್ದ “ಮುಳ್ಳೂರು ಗುಡ್ಡ” ತಾನಿಯ!

ಹೂಂಕನ ತಕ. ನಮ್ಮೂರ ಮಾರಿಹಬ್ಬುದ್ ಬಗ್ಗ ಅದ್ಯಾನೋ ಹೇಳ್ತಿನಿ ಅಂದ.

ನಮ್ಮೂರ ಮಾರಿ ಹಬ್ಬ ಅದು, ಆರು ಮೂರು ಒಂಬತ್ತು ತಲದಿಂದ ನೆಡ್ಕ ಬಂದುದ. ಇನ್ನೊಂದಿನ ಯ್ಯೋಳ್ಕೊಟ್ಟನು.

ಈಗ ನೀನೆನೋ ಇದ್ನೆಲ್ಲ ಕ್ಯೋಳ್ತಿದಯ್ ಇದೆಲ್ಲ ಹೊಟ್ಟ ತುಂಬುದ್ದ ಯಾವ್ದಾರ ಕೆಲ್ಸ ಮಾಡು ಹೋಗು ಕೂಸು. ನಮ್ಮಪ್ಪ ಹೇಳ್ತಿದ್ನ ಬರೆವ್ರು ಓದವ್ರು ಕೊನ್ಗ ಹೊಟ್ಟ ಹಸ್ಕ ಸಾಯ್ತರ ಅಂತ. ಅನ್ನುಕ್ಕ ಯಾವ್ದಾರ ದಾರಿ ನೋಡ್ಕ ಕಂದಾ.

ಯಾಕಂದ್ರ ಮಂದಿ ಕಣ್ಣು ಸರಿಯಿಲ್ಲ. ಮನಲ್ ಕೂತಿದ್ರ ಅದ್ಯಾನೋ ಬರ್ಕ ಗಿರ್ಕ ಕೂತದ ಮುದೇವಿ. ಅದ್ಕೇನ್ ಕೆಲ್ಸ ತಕ ಅಂತರ.

ನೋಡು ನಿಂಗ ಯ್ಯಾಳದ್ನೆ ಮರ್ತಿದ್ದಿ. ಎಂಥಾ ಜನ ಅವ್ರ ಅಂದ್ರ. ಮೊನ್ನ ನಿಮ್ ಮಂಜಕ್ಕ ಎರಡು ಹುಂಜಗಳು ಅವ ಹಟ್ಟಿ ಮಾರವ್ವ ದೇವುಸ್ಥಾನುಕ್ಕ ತಕ ಹೋಗಿ ಒಪ್ಪುಸ್ಬುಟ್ಟು ಬಾ. ಉದ್ಕ ಮಾಡ್ಕಳಂವು ಅಂದ್ಳ. ಸರಿ ಅಂದ್ಬುಟ್ಟು ಮಾರವ್ವ ಗುಡಿಗೆ ಹೋಗಿ ಪೂಜಾರಿಗ ಪೂಜಾ ಮಾಡಯ್ಯ ಅಂದ್ರ. ಅಂವ ನನ್ನ ನೋಡ್ಬುಟ್ಟು ಅಮ್ಮೋ ನಿನ್ ಗಂಡ ಇನ್ನೂ ಇದ್ದಾನಾ ಅಂದ್ನ. ನಾನು ಹೂಂ ಅಂದಿ. ಯಾಕ ಅಂತ ಕ್ಯೋಳುದ್ರ. ಅಲ್ಲ ಇನ್ನೂ ಬದ್ಕಿದಿರಲ್ಲ ನೀವು ಅದ್ಕೆ ಕೇಳ್ದಿ. ಸ್ಯಾನೆ ದಿನ ಆಗಿತ್ಯಲ್ಲ ಬಂದು ಅದ್ಕೆ ಕೇಳ್ದಿ ಅಂತವ್ನ. ನಂಗ ನಗಾಡಿ ನಗಾಡಿ ಸಾಕಾಯ್ತು. ಇನ್ನು ಬದ್ಕಿದರ್ಯ ಅಂತನಲ್ಲ ಮುರ್ಮಃಗ ಸರಿಯ! ಹಿಂಗಾಗದ ಕತ. ಹೋಗು ಕ್ಯಾಮಿ ನೋಡು ಹೋಗು. ರಕ್ತ ಇದ್ದಾಗ ದುಡ್ಕ ಬೇಕು ಕಪೈ.

ಬುಡು ಕೂಸು ಈಗ ಯಾನೇ ಆದ್ರುವಿ ಜನ ಭಾವ್ಕ ಕಮ್ಮಿ ಆಗೋಯ್ತುಕನ!

-ಗೋಳೂರ ನಾರಾಯಣಸ್ವಾಮಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x