ಶಿಸ್ತು ಮತ್ತು ನಾವು: ಪರಮೇಶ್ವರಿ ಭಟ್

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಸುಭಾಷಿತಗಳು, ನೀತಿ ವಾಕ್ಯಗಳು ಇರುವುದು ಎಲ್ಲಿ ಅಂತ ಕೇಳಿದರೆ ಭಾರತದಲ್ಲಿ ಅಂತ ಸುಲಭವಾಗಿ ಹೇಳಿಬಿಡಬಹುದು. ಬೇರೆ ದೇಶಗಳಲ್ಲಿಯೂ ಇರಬಹುದು, ಆದರೆ ನಮ್ಮಲ್ಲಿ ಇರುವಂತಹ ನೀತಿಕಥೆಗಳು ವಿಶ್ವದಾದ್ಯಂತ ಹೆಸರು ಪಡೆದಿವೆ. ಕೆಲವು ವರ್ಷಗಳ ಹಿಂದೆ ನೋಬೆಲ್ ಪುರಸ್ಕಾರ ಪಡೆದ ಯುಗೋಸ್ಲಾವೀಯಾದ ಸಾಹಿತಿಯೊಬ್ಬ “ನಾನು ಭಾರತದ ಜಾತಕದ ಕಥೆಗಳನ್ನು, ಪಂಚತಂತ್ರದ ಕಥೆಗಳನ್ನು ಓದಿ ಬೆಳೆದವನು” ಅಂತ ಹೇಳಿದಾಗ ನನಗೆ ನಿಜಕ್ಕೂ ಆಶ್ಚರ್ಯ ಮತ್ತು ಹೆಮ್ಮೆಯೂ ಆಯಿತು. ಹಿಂದಿನ ಕಾಲದಲ್ಲಿ ಅನುವಾದಿತ ಪುಸ್ತಕಗಳ ಮುಖಾಂತರವೇ ಇತರ ಭಾಷೆಗಳ ಕಥೆ ಕಾದಂಬರಿಗಳನ್ನು ಓದಬೇಕಾಗಿತ್ತು. ಹಾಗಾಗಿ ಅಂತಹ ಕಾಲದಲ್ಲಿ ನಮ್ಮ ಭಾರತದ ಕಥೆಗಳು ವಿಶ್ವದಾದ್ಯಂತ ಮಕ್ಕಳು ಓದುತ್ತಾರೆಂದರೆ ಅದು ನಮಗೆ ಸಂತಸದ ವಿಷಯವೇ ಹೌದು. ಈಗಿನ ಕಾಲದಲ್ಲಿ, ಜಾಗತೀಕರಣವಾಗಿರುವುದರಿಂದ ಹಾಗೂ ಅಂತರ್ಜಾಲದ ದೆಸೆಯಿಂದ ಯಾವುದೇ ವಿಷಯಗಳೂ ಒಂದು ದೇಶಕ್ಕೆ ಸೀಮಿತವಾಗಿಲ್ಲ. ದುರಾದೃಷ್ಟ ಎಂದರೆ ನಮ್ಮ ಕಥೆಗಳು ಹೊಸ ರೀತಿಯ ಕಾರ್ಟೂನ್ಗಳಿಂದಾಗಿ ಸೊರಗಿದೆ ಅಂತ ನನ್ನ ಅನಿಸಿಕೆ. ಯಾಕೆಂದರೆ ಮಕ್ಕಳು ಕಲಿಯುವುದು ಇಂಗ್ಲಿಷ್ ಮಾಧ್ಯಮದಲ್ಲಿ. ಅವರನ್ನು ಇಂಗ್ಲಿಷ್ ಕಾರ್ಟೂನುಗಳೇ ಆಕರ್ಷಿಸುವುದು.

ಇರಲಿ, ವಿಷಯಾಂತರವಾಯಿತು. ಈ ಬರಹದ ಉದ್ದೇಶ ನೀತಿ ವಾಕ್ಯಗಳಾಗಲೀ ಮಕ್ಕಳ ಕಥೆಗಳಾಗಲೀ ಅಲ್ಲ, ಬದಲಾಗಿ ಅದನ್ನು ಜೀವನದಲ್ಲಿ ನಾವು ಎಷ್ಟು ಅಳವಡಿಸಿಕೊಂಡಿದ್ದೇವೆ ಎಂಬುದು. ನಾವೆಷ್ಟು ಶಿಸ್ತನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದೇವೆ? ಸ್ಶಚ್ಛತೆಯೂ ಶಿಸ್ತಿನ ಒಂದು ಭಾಗ. ನಮ್ಮಲ್ಲಿ ಎಷ್ಟು ಸ್ವಚ್ಛತೆಯಿದೆ? ನಾವು ವಿದೇಶಗಳಿಗೆ ಹೋದಾಗ ” ಆಹಾ, ಏನು ಚಂದ, ಎಷ್ಟು ಸ್ವಚ್ಜತೆ ! ಎನ್ನುತ್ತೇವೆ. !” ಅದೇ ತರಹ ನಮ್ಮ ದೇಶವನ್ನು ಮಾಡಲಿಕ್ಕಾಗುವುದಿಲ್ಲವೇ? ” ಎಲ್ಲಿ ಸ್ವಚ್ಛತೆಯಿದೆಯೋ ಅಲ್ಲಿ ಲಕ್ಷ್ಮಿ ನೆಲೆಸುತ್ತಾಳೆ” ಅಂತ ಗಾದೆಯಿದೆ. ಹಾಗಾದರೆ ನಾವೇಕೆ ಸ್ವಚ್ಜತೆಯನ್ನು ಕಾಪಾಡಿಕೊಳ್ಳುವುದಿಲ್ಲ?ಅದಕ್ಕೆ ಕಾರಣ ಅಸಡ್ಡೆಯಷ್ಟೇ..  ಕೆಲವರೆನ್ನಬಹುದು ಬಡತನ ಕಾರಣ ಅಂತ. ಖಂಡಿತಾ ಅಲ್ಲ, ದೊಡ್ಡ ಕಾರಿನಲ್ಲಿ ಕುಳಿತು ಖಾಲಿ ಬಾಟ್ಲಿಯನ್ನೋ, ಬಿಸ್ಕಿಟಿನ ಖಾಲಿ ಪ್ಯಾಕೆಟ್ಟನ್ನೋ ರಸ್ತೆ ಮಧ್ಯದಲ್ಲಿ ಚಲಿಸುವ ಕಾರಿನಿಂದ ಬಿಸಾಡುವುದನ್ನು ಕಂಡಿದ್ದೇನೆ. ಹಾಗಾದರೆ ಶಿಕ್ಷಣದ ಕೊರತೆಯೇ? ಅದೂ ಅಲ್ಲ, ಯಾಕೆಂದರೆ ಶಿಕ್ಷಕಿಯೇ ಮಾತ್ರೆ ತಿಂದು ಅದರ ಬೇಗಡೆಯನ್ನು ಕುಳಿತಲ್ಲೇ ಬಿಸಾಡುವುದನ್ನು ನೋಡಿದ್ದೇನೆ.

ಹಾಗಾದರೆ ಇದಕ್ಕೇನು ಪರಿಹಾರ?

ಸಿಂಗಾಪುರದಲ್ಲಿದ್ದಂತೆ ಉಗುಳಿದರೂ ದಂಡ ಹಾಕಬೇಕೇ? ಆದು ನಮ್ಮ ಭಾರತತದಲ್ಲಿ ಸಾಧ್ಯವೇ? ಮೊದಲನೆಯದಾಗಿ ನಮ್ಮಲ್ಲಿ ಸಂಸ್ಕಾರದ ಕೊರತೆ. “ಮೂರು ವರ್ಷದಲ್ಲಿ ಕಲಿತುದು ನೂರು ವರ್ಷಗಳ ವರೆಗೆ ಅಂತ ಗಾದೆಯಿದೆ. ಅದು ಅವರ ಮನಸಿನಲ್ಲಿ ಅಳಿಸಲಾಗದ ಪ್ರಿಂಟಿನಂತಿರುತ್ತದೆ. ” ಹಾಗಾಗಿ ಬಾಲ್ಯದಲ್ಲೇ ಕಸವನ್ನು ಕಸದ ಬುಟ್ಟಿಗೆ ಹಾಕಬೇಕು ಅಂತ ಹೇಳಿಕೊಟ್ಟರೆ ಅವರ ಜೀವನ ಪರ್ಯಂತ ಅವರು ಅದನ್ನು ಅನುಕರಿಸುತ್ತಾರೆ. ಅಷ್ಟೇ ಅಲ್ಲ ಮನೆಯವರಾಗಲೀ ಇತರರಾಗಲೀ ಕಸವನ್ನು ಕಸದ ಬುಟ್ಟಿಗೇ ಹಾಕಬೇಕು. ಮಕ್ಕಳು ಕೇಳಿ ಕಲಿಯುವುದರಿಂದ ಹೆಚ್ಚು ನೋಡಿ ಕಲಿಯುತ್ತಾರೆ. ಆದರೆ ನಮ್ಮಲ್ಲಿ ಹೇಗೆ ಅಂದರೆ, “ಮಗು ಇನ್ನೂ ಚಿಕ್ಕದು, ಅದಕ್ಕೇನು ಗೊತ್ತಾಗುತ್ತದೆ? ದೊಡ್ಡವನಾದಾಗ ಎಲ್ಲಾ ಕಲಿತುಕೊಳ್ತಾನೆ” ಎಂಬ ಅಭಿಪ್ರಾಯ. ಹಾಗೆ ಹೇಳುವುದನ್ನು ನಾನು ಕೇಳಿದ್ದೇನೆ. ಅದುವೇ ನಾನು ಭಾರತೀಯರು ಮಾಡುವ ತಪ್ಪು. ಹಾಗಾಗಿ ನಮ್ಮ ಮಕ್ಕಳ ಪಾಠದ ಹೊರತಾಗಿ ಬೇರೆ ವಿಷಯಗಳಲ್ಲಿ ಪರಾವಲಂಬಿಗಳಾಗಿರುವುದು. ಹೆತ್ತವರು ಎಚ್ಚೆತ್ತುಕೊಳ್ಳಬೇಕು.

ಶಿಸ್ತು ಎಂದರೆ ನಿಯಮ ಪಾಲನೆ ಮಾಡಲೇಬೇಕು. ಅದು ಮನೆಯಲ್ಲಾಗಿರಬಹುದು, ಹೊರಗಡೆಯಾಗಿರಬಹುದು. ಅದಕ್ಕೆ ಹಿರಿಯರು ಮಕ್ಕಳಿಗೆ ಮಾದರಿಯಾಗಿರಬೇಕು. ಮಕ್ಕಳನ್ನು ಇನ್ನೂ ಚಿಕ್ಕವರು ಅಂತ ಅವರ ಮುಂದೆ ಜಗಳಾಡುವುದಾಗಲೀ, ಸುಳ್ಳು ಹೇಳುವುದಾಗಲೀ ಮಾಡಬಾರದು. ಯಾಕೆಂದರೆ ಮಕ್ಕಳು ನೋಡಿದ್ದನ್ನು ನಂಬುತ್ತಾರೆ. ನಾನು ಹೇಳುನುದು Treat kids as mini adults. ಅಂತ. ವಿದೇಶಗಳಲ್ಲಿ ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೋಡುತ್ತಾರೆ. ಉದಾಹರಣೆಗೆ ರಸ್ತೆ ನಿಯಮಗಳು ಎಲ್ಲಾ ದೇಶಗಳಲ್ಲೂ ಇದೆ. ನಮ್ಮ ದೇಶದ ಹೊರತಾಗಿ ಬೇರೆ ದೇಶಗಳಲ್ಲಿ ವಾಹನ ಚಾಲಕರು ಪಾದಾಚಾರಿಗಳಿಗೆ ಗೌರವ ಕೊಡುತ್ತಾರೆ. ಅವರು ರಸ್ತೆ ದಾಟಲು ಅನುವು ಮಾಡಿಕೊಡ್ತಾರೆ. ನಮ್ಮಲ್ಲಿ ಪಾದಾಚಾರಿಗಳು ಬಯ್ಗುಳ ತಿಂದುಕೊಂಡು ಹೋಗಬೇಕು!

ಚಾಲಕರು ರಸ್ತೆ ನಿಯಮ ಪಾಲಿಸುತ್ತಾರೆ. ಸ್ಪೀಡಿನ ವಿಷಯದಲ್ಲಿ ಉಲ್ಲಂಘನೆ ಮಾಡಬಹುದು. ಆದರೆ ಅದಕ್ಕೆ ಸಿಗುವ ದಂಡ ಎಂಥದ್ದು ಗೊತ್ತೇ. ಪುನಃ ಪರೀಕ್ಷೆಗೆ ಬರೆಯುವುದು. ಓದಲು ಒಂದಷ್ಟು ವಿಷಯ ಕೊಟ್ಟಿರುತ್ತಾರೆ. ಅದನ್ನು ಓದಿ ಪರೀಕ್ಷೆ ಬರೆಯಬೇಕು ಅದಕ್ಕಿಂತಲೂ ಮುಖ್ಯವಾಗಿ ಪರೀಕ್ಷೆಯಲ್ಲಿ ಪಾಸಾಗದಿದ್ದರೆ ವಾಹನದ ವಿಮೆ ಜಾಸ್ತಿ ಕೊಡಬೇಕು!! ನೇರವಾಗಿ ಬ್ಯಾಂಕ್ ಬ್ಯಾಲೆನ್ಸಿಗೆ ಕತ್ತರಿ. ಅದು ಒಳ್ಳೆಯದೇ ಅಲ್ಲವೇ. ನಮ್ಮಲ್ಲಿಯಾದರೆ ರಸ್ತೆ ನಿಯಮ ಉಲ್ಲಂಘಿಸುವವರು ಅನೇಕ. ಒಂದಷ್ಟು ದಂಡ ಕಟ್ಟಿದರೆ ಆಯಿತು ಪುನಃ ಅದೇ ತಪ್ಪು ಮಾಡಲು ಅಡ್ಡಿಯಿಲ್ಲ. ಅಮೆರಿಕದಲ್ಲಿಯಾದರೆ ಅಲ್ಲಿಯ ಕ್ರಮದಲ್ಲಿ ತಪ್ಪು ಮಾಡಿದವರು ಬುದ್ಧಿ ಕಲಿಯುತ್ತಾರೆ. ಶಿಕ್ಷೆ ಎಂಬುದು ಉತ್ತಮ ಬದಲಾವಣೆ ತರುವಂತಿರಬೇಕಲ್ಲವೇ.

ಸಿಗ್ನಲ್ನಲ್ಲಿ ವಾಹನ ನಿಲ್ಲಿಸುವಾಗ ಇಂತಿಷ್ಟು. ಅಡಿ ದೂರದಲ್ಲಿ ನಿಲ್ಲಿಸಬೇಕು ಅಂತ ನಿಯಮವಿದೆ. ಆದರೆ ಅದನ್ನು ಪಾಲಿಸುವವರೆಷ್ಟು ಮಂದಿ? ಅಕಸ್ಮಾತ್ ಜಾಗ ಬಿಟ್ಟಿದ್ದರೆ ಹಿಂದಿನವರು ಹಾರ್ನ್ ಹಾಕುತ್ತಾರೆ. ಅಷ್ಟು ಜಾಗ ಬಿಟ್ಟದ್ದಕ್ಕೆ ಅಸಹನೆ. ಇಲ್ಲವೇ ತಕ್ಷಣ ಹಿಂದಿನಿಂದ ರಿಕ್ಷವೋ ಬೈಕೋ ಬಂದು ಸೇರಿಕೊಳ್ಳುತ್ತವೆ. ಇಲ್ಲಿ ವಾಹನಗಳ ಜನಸಂಖ್ಯೆ ಅಧಿಕ ಅಂತ ಕಾರಣ ಹೇಳಬಹುದು. ಖಂಡಿತಾ ಸರಿಯಲ್ಲ. ಯಾಕೆಂದರೆ ಎಲ್ಲರೂ ನಿಯಮ ಪಾಲಿಸಿದರೆ ಸರಾಗವಾಗಿ ವಾಹನಗಳು ಚಲಿಸಬಹುದು. ಸಿಗ್ನಲ್ ತೆರವಾದಾಗ ತಕ್ಷಣ ಹೊರಡಬಹುದು. ಮಧ್ಯದಲ್ಲಿ ಯಾವುದೋ ಬಂದು ಸೇರಿಕೊಂಡಾಗ ಹೊರಡುವುದು ನಿಧಾನವಾಗುತ್ತದೆ. ವಿದೇಶದಲ್ಲಿ ಹಾರ್ನ್ ಹಾಕುವುದು ಅಪರೂಪ. ಅದು ಯಾರಾದರೂ ನಿಯಮ ಉಲ್ಲಂಘಿಸಿದಾಗ ಮಾತ್ರ. ಇನ್ನೊಂದು ಬೇಸರದ ಸಂಗತಿಯೆಂದರೆ ರಸ್ತೆಗಳ ಗುಣಮಟ್ಟ. ಅದರಿಂದಾಗಿಯೇ ಜೀವ ಕಳಕೊಂಡವರಿದ್ದಾರೆ ಇದು ಸಂಬಂಧ ಪಟ್ಟವರ ನಿರ್ಲಕ್ಷ್ಯ. ಅವರು ಕೊಲೆಗಡುಕರೇ. ಹೈವೈಗಳಲ್ಲಿ ಆಪಘಾತಗಳಾಗಿ ಜೀವ ಕಳಕೊಂಡ ಸುದ್ದಿ ಆಗಾಗ್ಗೆ ಬರುತ್ತಲೇ ಇದೆ. ಬೇಸರದ ಸಂಗತಿಯೆಂದರೆ ಅದಕ್ಕೆ ಕಾರಣ ಪಾರ್ಕ್ ಮಾಡಿದ ಟ್ರಕ್ಕುಗಳು, ಟ್ರಾಕ್ಟರುಗಳು ಅಥವಾ ಬಸ್ ಮುಂತಾದ ವಾಹನಗಳು.

ಅವುಗಳು, ಪಾರ್ಕಿಂಗ್ ಲೈಟ್ ಆಗಲಿ, ರಿಫ್ಲೆಕ್ಟರುಗಳಾಗಲೀ ಇರುವುದಿಲ್ಲ. ರಾತ್ರಿ ಅವುಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದಾಗ ವೇಗವಾಗಿ ಬರುವ ವಾಹನಗಳ ಚಾಲಕರಿಗೆ ಅವುಗಳನ್ನು ಕಾಣುವುದೇ ಇಲ್ಲ. ಶಂಕರನಾಗ್ ಸತ್ತದ್ದೂ ಇದೇ ಕಾರಣಕ್ಕೆ. ಅನ್ಯಾಯವಾಗಿ ಜೀವ ಕಳಕೊಂಡಾಗ ಸಂಕಟವಾಗುತ್ತದೆ. ಹೈವೇ ಪ್ಯಾಟ್ರೋಲಿಂಗ್ ಮಾಡುವವರು ಇಂಥದ್ದನ್ನು ಯಾಕೆ ಗಮನಿಸುವುದಿಲ್ಲವೋ ತಿಳಿಯದು. ಇನ್ನು ಮನೆ ವಿಷಯಕ್ಕೆ ಬಂದಾಗ ಮನೆಕೆಲಸದ ಸಿಂಹ ಪಾಲು ಗೃಹಿಣಿಗೆ. ಕೆಲವು ವಿಷಯಗಳಲ್ಲಿ ಆಕೆ ತನ್ನ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಹೇಗೆಂದರೆ ಮಕ್ಕಳು, ಗಂಡಸರಿಗೆ ಅವರವರ ಕೆಲಸವನ್ನು ಅವರೇ ಮಾಡಿಕೊಂಡರೆ ಗೃಹಿಣಿಗೆ ಅಡಿಗೆ ಕೆಲಸದೊಂದಿಗೆ ಮಕ್ಕಳ ಶಾಲಾ ಚೀಲ ಹೊಂದಿಸುವುದು, ಗಂಡನ ಕರ್ಚೀಫ್, ಸಾಕ್ಸ್ ಮುಂತಾದವುಗಳನ್ನು ಅವರ ಕೈಗೆ ತಂದುಕೊಡುವುದು ಮುಂತಾದ ಕೆಲಸಗಳು ಗೃಹಿಣಿಗೆ ತಪ್ಪುತ್ತವೆ. ಮನೆಯಲ್ಲೂ ಶಿಸ್ತನ್ನು ಮಕ್ಕಳಿಗೆ ಹೊರೆಯಾಗದಂತೆ, ಅವರು ಅದನ್ನು ಖುಶಿಯಿಂದಲೇ ಪಾಲಿಸುವುದನ್ನು ಕಲಿಸಿದಾಗ ಶಿಸ್ತಿನ ಜೀವನ ಅವರದಾಗುತ್ತದೆ. ಹಾಗಾಗಿ ನಮ್ಮ ಕೆಲಸ ಕಾರ್ಯಗಳನ್ನು ನಿಯಮದ ಪ್ರಕಾರ ಶಿಸ್ತಿನಿಂದ  ಪಾಲಿಸಿದರೆ ಬದುಕು ಸುಗಮವಾಗುವುದರಲ್ಲಿ ಸಂಶಯವಿಲ್ಲ.

-ಪರಮೇಶ್ವರಿ ಭಟ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x