ಗಜಲ್ ಜುಗಲ್ ಬಂದಿ

1) ಹೈ.ತೋ ಅವರ ಗಜಲ್ ;

ದಿಂಬಿನೊಳಗೆ ನಲುಗಿಹೋದ ನೋವುಗಳೆಷ್ಟೋ..
ಎದೆಯೊಳಗೆ ಕಮರಿಹೋದ ಕನಸುಗಳೆಷ್ಟೋ.

ಎಷ್ಟೊಂದು ಚೀತ್ಕಾರಗಳು ನಿಟ್ಟುಸಿರು ನುಂಗಿದೆ
ಮನದೊಳಗೆ ಹಿಡಿದಿಟ್ಟ ಕಹಿ ವೇದನೆಗಳೆಷ್ಟೋ

ನೋವುಂಡ ಹೃದಯ ಒಡೆದು ಹೋಗಿದೆ ಗೆಳೆಯಾ
ಬಾಧೆ ಹೆತ್ತು ಎದೆಯ ಆವರಿಸಿದ ವಿರಹಗಳೆಷ್ಟೋ

ಕತ್ತಲೆ ಚಿಮ್ಮಿ ತತ್ತರಿಸುವ ತಾರೆಗಳಿಗೆ ಕಡಿವಾಣವಿಲ್ಲ
ಸಾವ ನೋವಿನ ಕಡು ಸಂಕಟಗಳ ಭಾವಗಳೆಷ್ಟೋ

ನನ್ನದೆಯಾಳದಲ್ಲಿ ಚಿತೆಗಳ ಚಿತ್ತಾರˌ ವಿವಿಧ ಆಕಾರ
ಹೃದಯದಲಿ ಹೆಪ್ಪಾದ ನಿಕೃಷ್ಟ ಆ ನಿಂದನೆಗಳೆಷ್ಟೋ

ನಿತ್ಯ ಸೃಂಗಾರ ಚೆಲುವ ಅಲಂಕಾರ ಎಲ್ಲವೂ ಅವನಿಗಾಗಿ
ನಿರೀಕ್ಷೆಯ ನಿರಾಶೆಯಲ್ಲಿ ಬದಲಿಸಿದ ಮಗ್ಗಲುಗಳೆಷ್ಟೋ

ನನ್ನೊಳಗೆ ನನ್ನನ್ನು ಕಂಡುಕೊಳ್ಳುವ ಜರೂರತ್ತಿದೆ ಹೈ.ತೋ
ಪ್ರೀತಿಗಾಗಿ ಹಂಬಲಿಸಿದ ನಿವೇದನೆಯ ತಿರಸ್ಕಾರಗಳೆಷ್ಟೋ

-ಹೈ.ತೋ

2)ಅಶ್ಫಾಕ್ ಪೀರಜಾದೆ ಅವರ ತರಹಿ ಗಜಲ್;

(ಹೈ. ತೋ ಅವರ ಸಾನಿ ಮಿಸ್ರಾ)

ದಿಂಬಿನೊಳಗೆ ನಲುಗಿ ಹೋದ ನೋವಗಳೆಷ್ಟೋ..
ಮನಸಿನಲಿ ಮಡಿದು ಹೋದ ಬಯಕೆಗಳೆಷ್ಟೋ

ಪ್ರೇಮ ನೌಕೆಯನು ಏರಿ ಪಯಣ ಹೊರಟ್ಟಿದ್ದೆ
ಅಂತರಂಗದಲಿ ಕರಗಿ ಹೋದ ನಕ್ಷತ್ರಗಳೆಷ್ಟೋ

ವಿರಹದ ಹಾಡು ಸದಾ ನನ್ನ ಪಾಡಾಯಿತೇ ಸಖೀ
ಎದೆಯಂಗಳದಿ ನೀ ಬಿತ್ತಿ ಹೋದ ನೆನಪಗಳೆಷ್ಟೋ

ನನ್ನ ನಿನ್ನ ಸಂಬಂಧ ಜನ್ಮ ಜನ್ಮಾಂತರ ಅನುಬಂಧ
ಮಣ್ಣಿಗೆ ಬಂದವರು ಆಡಿ ಹೋದ ಮಾತುಗಳೆಷ್ಟೋ

ಒಲವ ಗೀತೆ ಎಂಬುದು ಮುಕ್ತಾಯವಿರದ ಮಹಾಕಾವ್ಯ
ಭಗ್ನ ಹೃದಯಗಳು ಗೋರಿ ಸೇರಿ ಹೋದ ಕತೆಗಳೆಷ್ಟೋ

-ಅಶ್ಫಾಕ್ ಪೀರಜಾದೆ

3) ಆಸೀಫಾ ಅವರ ತರಹಿ ಗಜಲ್;

ವಿರಹದ ಸುಡುವಗ್ನಿಯಲ್ಲಿ ಬೆಂದು ಕರಕಲಾದ ರಾತ್ರಿಗಳೆಷ್ಟೋ
ದಿಂಬಿನ ಅಂಚಿನಲ್ಲಿ ಹರಿದು ಇಂಗಿಹೋದ ಕಣ್ಣ ಹನಿಗಳೆಷ್ಟೋ

ಮುರುಟಿದ ಮನದ ವೇದನೆ ಯಾತನೆಗಳು ಮನಸಿಗೇ ಗೊತ್ತು
ಚಿವುಟಿ ಚೆಲ್ಲಿದ ಮಹದಾಸೆಗಳ ಆರ್ತನಾದ ಚೀತ್ಕಾರಗಳೆಷ್ಟೋ

ಪ್ರತಿ ನೋವಿಗೂ ನಗುವಿನ ಕಹಿ ಲೇಪನ ಹಚ್ಚಿ
ಹಚ್ಚಿ,ಸಾಕಾಗಿದೆ
ಈಟಿಯಿಂದ ತಿವಿದಂತೆ ಚುಚ್ಚಿಚುಚ್ಚಿ ಆಡಿದ ಮಾತುಗಳೆಷ್ಟೋ

ಹುಟ್ಟು ಶಾಪವಾಗಿ ಬದುಕು ಮುಳ್ಳಿನ ಹಾದಿ, ಎಷ್ಟು ದೂರ ಸಾಗಲಿ
ಹಗಲಿರುಳೆನ್ನದೆ ಬಿಕ್ಕುವ ಪರಿತಪಿಸುವ ಆತ್ಮದ ನೋವುಗಳೆಷ್ಟೋ

ಬೊಗಸೆಯೊಡ್ಡಿ ಬೇಡಿದರೂ ಸಿಗದಾಯಿತು ಈ ಜೀವಕೆ ಹಿಡಿಪ್ರೀತಿ
ಭೀತಿಯಲ್ಲಿ ಬಿದ್ದು ಎದ್ದು ಬಳಲಿದ ಬದುಕಿನ ಏಳುಬೀಳುಗಳೆಷ್ಟೋ

ಅಂತರಂಗದಲಿ ಮೀಟಿದ ಭಾವಗಳೆಲ್ಲ ಮಸಣದ ಹಾದಿ ಹಿಡಿದಿವೆ
ನನ್ನೊಳಗಿನ ನಾನು ಸತ್ತು ಬೂದಿಯಾಗಿ ಹೋದ ದಿನಮಾಸಗಳೆಷ್ಟೋ

ರಾತ್ರಿಗಳಲಿ ಹರಾಜಾಗುವ ಆಸೀಯ ಆತ್ಮ ಚಿತೆಯೇರಿದಂತಿದೆ
ಹೃದಯದಲ್ಲಿ ಹೆಪ್ಪಾಗಿ ಕಪ್ಪಾಗಿ ನೆಲೆನಿಂತ ದುಃಖದ ಮೋಡಗಳೆಷ್ಟೋ

-ಆಸೀಫಾ ಬೇಗಂ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x