“ಹೀಗೊಂದು ಪ್ರೇಮ ಕಥೆ. . !” : ಅರವಿಂದ. ಜಿ. ಜೋಷಿ.

ಹುಡುಗ:-“I, love you, . . ನೀನು ನನ್ನನ್ನು ಪ್ರೀತಿಸುವೆಯಾ?. . ಹಾಗಿದ್ದರೆ ನಾ ಹೆಳಿದ ಹಾಗೆ “ಏ ಲವ್ ಯು”ಅಂತ ಹೇಳು.
ಹುಡುಗಿ:-” ನಿನ್ನ ಪ್ರಶ್ನೆಗೆ ಉತ್ತರೀಸುವೆ. . . ಆದರೆ ಒಂದು ಕಂಡೀಷನ್ ಮೇರೆಗೆ”
ಹುಡುಗ, :-“ಆಯ್ತು. . ಅದೇನು ಕಂಡೀಷನ್ , ಹೇಳು”
ಹುಡುಗಿ:-“ನೀನು ಬದುಕಿನುದ್ದಕ್ಕೂ ನನ್ನ ಜೊತೆ ಇರುವುದಾದರೆ ಮಾತ್ರ ಉತ್ತರಿಸುವೆ.
ಹುಡುಗ:-(ಮುಗುಳು ನಗೆ ನಗುತ್ತ) “ಅಯ್ಯೋ. . ಪೆದ್ದೇ ಇದೂ ಒಂದು ಕಂಡೀಷನ್ನಾ? ನಾನಂತೂ ತನು-ಮನದಿಂದ ನಿನ್ನವನಾಗಿದ್ದೇನೆ, ಇಂತಹುದರಲ್ಲಿ ನಿನ್ನ ಬಿಟ್ಟು ನಾ ಎಲ್ಲಿ ಹೋಗಲಿ?”
ಹುಡುಗಿಗೆ, ತನಗೆ ಇಷ್ಟೊಂದು ಆಳವಾಗಿ ಯಾರೂ ಪ್ರೀತಿಸಿದ್ದು ಎಂದು ಗೊತ್ತಾಯಿತು. ಆಗ ಆಕೆ ಮರುಕ್ಷಣವೇ”ಆಯ್ತು “ಎಂದು ಹೇಳಿದಳು. ಅದಾದನಂತರ ಮುಂದಿನ ದಿನಗಳಲ್ಲಿ ಪ್ರಪಂಚದ ಎಲ್ಲ ಪ್ರೇಮಿಗಳು ಮಾಡುವಂತೆ
ಕದ್ದು ಮುಚ್ಚಿ ಭೇಟಿ, ಗಂಟೆಗಟ್ಟಲೆ ಮಾತು, ಗಳ ನಡುವೆ ಸಿಟ್ಟು, ಸೆಡುವು
ಸಮಾಧಾನ, ನಗು ಎಲ್ಲವೂ ನಡೆಯಿತು. ಇಷ್ಟಾದರೂ ಹುಡುಗಿಯ ಮನದಾಳದಲ್ಲಿ
ಯಾವುದೋ ಒಂದು ಪ್ರಶ್ನೆ ಉಧ್ಭವಿಸಿ ಅವಳ ತಲೆ ತಿನ್ನತೊಡಗಿತು. ಹುಡುಗ ತನ್ನ ಪ್ರೇಯಸಿಯ ಈ ಪರಿಸ್ಥಿತಿ ಗಮನಿಸಿದವ ಆಕೆಗೆ”, ಯಾಕೆ ಮತ್ತೇನಾಯ್ತು? ನನ್ನಕಡೆಯಿಂದ ತಪ್ಪೇನಾದರೂ ಆಗಿದೆಯಾ?”ಎಂದು ಕೇಳಿದಾಗ
ಹುಡುಗಿ:-“ಇಲ್ಲಾ. . . ಅಂತಹದ್ದೇನಿಲ್ಲಾ. . “
ಹುಡುಗ:-“ಮತ್ತೆ ನಾನು ನೋಡ್ತಿದ್ದಾಂಗೆ ಎರಡು ಮೂರು ದಿನ ಗಳಿಂದ ಉದಾಸೀನವಾಗಿದ್ದಿ, ಯಾವುದಾದರೂ ಚಿಂತೆ ಮಾಡ್ತಿದ್ದಿಯಾ? ಹೇಳು ” ಎನ್ನುವ ಕಾಳಜಿಯ ಮಾತು ಆಲಿಸಿದ ಹುಡುಗಿಗೆ ಕಣ್ಣು ತುಂಬಿ ಬಂದವು.

ಆಗ ಆಕೆ
“ಏನಿಲ್ಲಾ ನಮ್ಮ ಈಗಿನ ಪ್ರಪಂಚ ತುಂಬಾ ಸುಂದರವಾಗಿದೆ ಅದರಲ್ಲಿ ಎರಡನೆಯ ಮಾತಿಲ್ಲ, . . . ಆದರೆ ನಮ್ಮ ಮನೆಗಳಲ್ಲಿ ನಮ್ಮ ಮದುವೆಗೆ ಒಪ್ತಾರಾ? ಎನ್ನೋ ಭಯ ಕಾಡ್ತಿದೆ. ನನ್ನನ್ನು ನಿಮ್ಮ ಮನೆಯವರು accept ಮಾಡ್ತಾರೋ ಇಲ್ಲವೋ”
ಎನ್ನುತ್ತಾಳೆ.
ಆಗ ಹುಡುಗ -“ಇಷ್ಟೇನಾ ವಿಷಯಾ. . ?, ಅಲ್ಲಾ ಇಷ್ಟು ಸಣ್ಣ ವಿಷಯಾನಾ ತಲೆ ಒಳಗೆ ತುಂಬ್ಕೋಂಡು ಚಿಂತೆ ಮಾಡುವ ಅಗತ್ಯತೆ ಇದೆಯಾ? ಇಂದೇ ಈ ವಿಷಯದ ಬಗ್ಗೆ ನನ್ನ ತಂದೆ ತಾಯಿ ಯೊಂದಿಗೆ ಮಾತಾಡ್ತೇನೆ “ಎಂದು ಹೇಳಿ ಅಲ್ಲಿಂದ ಹೊರಟು ಹೋದ. ಆತ ಮರೆಯಾಗುವ ವರೆಗೂ ಈ ಹುಡುಗಿ ಆತನನ್ನು ಆಶಾಭಾವದಿಂದ ಹಿಂದಿನಿಂದ ನೋಡುತ್ತಲೇ ಇದ್ದಳು.
ಹುಡುಗ ಅಲ್ಲಿಂದ ಮನೆಗೆ ಬಂದವ”ಅಪ್ಪಾ. . ಅಮ್ಮಾ. . , ನಾನು ನಿಮ್ಮಿಬ್ಬರೆದುರು
ಒಂದು ಮುಖ್ಯವಾದ ವಿಷಯ ಮಾತಾಡ್ಬೇಕು “ಎಂದ.
ಅವನ ಅಪ್ಪ -“ಏನಪ್ಪಾ ಅಂಥಾ ಮುಖ್ಯ ವಿಷಯ? ಎಂದಾಗ ಆತನ ತಾಯಿ
“ಹೇಳು ಮಗನೆ, ಅಂಥಾ ಮುಖ್ಯ ವಿಷಯ ಇದ್ರೆ ನಾವೂ ಕೇಳಿ ತಿಳಿದುಕೊಳ್ಳೋಣ, ಹೇಳು”ಎಂದಳು . ಮುಂದುವರೆದ ಹುಡಗ -“ಅಮ್ಮಾ. . ಅಪ್ಪಾ, ನಾನೊಂದು ಹುಡ್ಗೀನ್ ಪ್ರೀತಿಸ್ತಾ ಇದ್ದೇನೆ, ಆಕೆ ತುಂಬಾ ಚೆನ್ನಾಗಿದ್ದಾಳೆ, ಆಕೆಯನ್ನೇ ಮದುವೆ
ಆಗಬೇಕು ಅಂದುಕೊಂಡಿದ್ದೇನೆ. “ಎಂದು ಹೇಳಿ ಮುಗಿಸುವಷ್ಟರಲ್ಲಿ ಆತನ ಅಪ್ಪನಿಗೆ ಎಲ್ಲಿಲ್ಲದ ಕೋಪ ಉಕ್ಕಿಬಂದು, ಮಗನ ಕೆನ್ನೆಗೆ ಛಿಟಿರ್ ಎಂದು ಬಾರಿಸಿದ.

ಆಗ ಆತನ ತಾಯಿ “ಏಯ್. . ಎಷ್ಟೋ ನನಿಗೆ ಧೈರ್ಯಾ?, ನಿನ್ನ ಮದುವೆ ಬಗ್ಗೆ ನಮ್ಮೆದುರು ನಿಂತು ಮಾತಾಡ್ತಾ ಇದ್ದೀ ಆನ್ನೋ ಯೋಚನೆನಾದ್ರೂ ಇದೆಯಾ?
ಇದೇನಾ ನಾವು ನಿನಗೆ ಕೊಟ್ಟಿರೋ ಸಂಸ್ಕಾರ? ಎಲ್ಲಿಯವಳೋ ಏನೋ, ಹಿಂದೆ ಗೊತ್ತಿಲ್ಲ ಮುಂದೆ ಗೊತ್ತಿಲ್ಲ. . ಮದುವೆ ಆಗುತ್ತಾನೆ”ಎಂದು ಗೊಣಗಲಾರಂಭಿಸಿದರು.

ತಾಯಿಯ ಮಾತು ಕೇಳುತ್ತಿದ್ದಂತೆಯೇ ಹುಡುಗನಿಗೆ ವಿಪರೀತ ಕೋಪ ಉಕ್ಕಿ ಬಂದಿತು. ಆಗ ಆತ “ಅಮ್ಮಾ. . ನೀನು ನನಗೆ ಏನು ಬೇಕಾದರೂ ಅನ್ನು ಆದರೆ ಆ ಹುಡುಗಿಗೆ ಮಾತ್ರ ಏನೂ ಅನ್ಬೇಡಾ. . , ನಾನು ಆಕೆಯನ್ನ ತುಂಬಾ ಪ್ರೀತಿಸ್ತಾ ಇದ್ದೇನೆ. ನನಗೂ ಒಳ್ಳೆಯದು ಕೆಟ್ಟದ್ದು ತಿಳಿಯತ್ತೆ”ಎಂದ. ಮಗನ ಮಾತು ಆಲಿಸುತ್ತಿದ್ದಂತೆ ಆತನ ತಾಯಿ ಕೊಂಚ ವಿಚಲಿತಳಾದಂತಾಗಿ, ಮನದಲ್ಲಿ “ಛೇ ಪಾಪ ನನ್ನ ಮಗನಾಗಿ ಆಕೆಯನ್ನು ದೂಷಿಸಿದೆನಲ್ಲ”ಎಂದು ಹಳವಿಸಿಕೊಂಡರೂ ಮಗನಿಗೆ “ಇನ್ನು ಮುಂದೆ ಈ ವಿಷಯದ ಬಗ್ಗೆ ಮಾತನಾಡಿದೆ ಇರುವುದು ಉತ್ತಮ” ಎಂದು ಹೇಳಿದಳು. ಅಷ್ಟಾದರೂ ಪುನಃ ಹುಡುಗ ಅಪ್ಪನತ್ತ ತಿರುಗಿ -“ಅಪ್ಪಾ. . ನೀವು ಒಂದು ಬಾರಿ ಯೋಚಿಸಿ ನೋಡಿ, ಈ ಒಂದು ಸಂದರ್ಭದಲ್ಲಿ ನನಗೇನಾದರೂ ತಂಗಿ ಇದ್ದಿದ್ದರೆ, ಆಕೆ ಬಂದು ನಿಮ್ಮೆದುರು ತಾನು ಪ್ರೀತಿಸುವ ಹುಡುಗನ ಬಗ್ಗೆ ಹೇಳಿದ್ದಿದ್ದರೆ ನಿಮಗೆ ಹೇಗಾಗುತ್ತಿತ್ತು?”ಎಂದ. ಮಗನಿಂದ ಬಂದ ಈ ಅನಿರೀಕ್ಷಿತ ಪ್ರಶ್ನೆ ಗೆ ಅಪ್ಪ, ಅಮ್ಮ ಇಬ್ಬರೂ ದಂಗಾಗಿ ಬಿಟ್ಟರು. ವಾಸ್ತವದಲ್ಲಿ ಅವರಲ್ಲಿ ಈ ಪ್ರಶ್ನೆಗೆ ಉತ್ತರ ಇರಲಿಲ್ಲ. ಹೀಗಾಗಿ ಇಬ್ಬರೂ ಮಗನ ಕಡೆ ಸೌಮ್ಯ ದೃಷ್ಟಿಯಿಂದ ಒಮ್ಮೆ ನೋಡಿದರು. ಮಗ ಯುದ್ಧದಲ್ಲಿ ಗೆದ್ದಿದ್ದ. ಈ ಒಂದು ಪ್ರಶ್ನೆ ಯಿಂದಾಗಿ, ಅವರು ಆತನ ಮಾತು ನಂಬಿ, ಹುಡುಗಿಯನ್ನು ಪ್ರತ್ಯಕ್ಷವಾಗಿ ನೋಡದಿದ್ದರೂ ಆತನ ಮದುವೆ ಗೆ ಒಪ್ಪಿಗೆ ಕೊಟ್ಟರು.

ಈಗ ತನ್ನ ಮನೆಯಲ್ಲಿ ಈ ವಿಚಾರ ಪ್ರಸ್ತಾಪಿಸುವ ಸರದಿ ಹುಡುಗಿಯದಾಗಿತ್ತು.
ಒಂದು ದಿನ , ಹುಡುಗ ಹುಡುಗಿ ಭೇಟಿ ಆದಾಗ ಹುಡುಗಿ, ಹುಡುಗನಿಗೆ -“ನನಗೆ
ತುಂಬಾನೇ ಭಯ ಆಗ್ತಿದೆ, ಏಕೆಂದರೆ ನಮ್ಮ ಅಪ್ಪ ಮಹಾ ಕೋಪಿಷ್ಠ. ನಾನೇನಾದರೂ ಈ ವಿಷಯ ಮನೆಯಲ್ಲಿ ಎತ್ತಿದರೆ ಸಾಕು, ಮುಖ ಮೂತಿ ನೋಡದೆ ನನ್ನನ್ನು ಚಚ್ಚಿ ಹಾಕ್ತಾರೆ “ಎಂದಳು.
ಹುಡುಗ -“ಹೀಗಾದ್ರೆ ಹೇಗೆ ನಡೆಯುತ್ತೆ? ಇದಕ್ಕೇನಾದ್ರೂ ಮಾಡಲೇಬೇಕಲ್ವಾ?”
ಹುಡುಗಿ -“ನೋಡು. . ನೀನು ನಮ್ಮ ಮನೆಗೆ ಬಂದು ವಿಷಯ ಪ್ರಸ್ತಾಪ ಮಾಡು ಸಾಕು. . ಮುಂದಿನದ್ದೆಲ್ಲಾ ನಾನು ಸಂಭಾಳಿಸುತ್ತೇನೆ”
ಹುಡುಗ -“ಹೌದಾ. . ಪಕ್ಕಾನಾ? ನೀನು ಸಂಭಾಳಿಸುವೆಯಾ?”
ಹುಡುಗಿ -“ಖಂಡೀತ ಸಂಭಾಳಿಸುವೆ. . ಪ್ರಾಮಿಸ್ “
ಹುಡುಗ-“ಸರಿ ಹಾಗಿದ್ದರೆ ನಾಳೇನ ನಿನ್ನ ಮನೆಗೆ ಬರುವೆ “
ಹುಡುಗಿ -“ಓ. ಕೆ. . . . “ಎಂದು ಹೊರಟು ಹೋದಳು.

ಇಬ್ಬರೂ ಮೊದಲು ಯೋಚಿಸಿದಂತೆ, ಹುಡುಗ ಹುಡಗಿಯ ಮನೆಗೆ ಬಂದು ಆಕೆಯ ತಂದೆಯ ಎದುರು ಎಲ್ಲ ವಿಷಯ ಪ್ರಸ್ತಾಪಿಸಿದ. ಅದನ್ನು ಕೇಳಿಸಿಕೊಂಡಿದ್ದೇ ತಡ ಆಕೆಯ ಅಪ್ಪ ವಿಪರೀತ ಕೋಪಗೊಂಡವ ನಿಂತಲ್ಲಿಂದಲೇ ಮಗಳನ್ನು ಜೋರಾಗಿ ಕೂಗಿ ಕರೆದ. ಹುಡುಗಿ ಬಂದು ಎಲ್ಲರೆದುರು ನಿಂತಿದ್ದಳಾದರೂ ಗಡಗಡನೆ ನಡುಗುತ್ತಿದ್ದಳು ಮೈ ಕೈ ಎಲ್ಲ ಬೆವರಾಡತೊಡಗಿತು. ಆಕೆಗೆ ಇದು ಒಂದು ರೀತಿಯ ಅಗ್ನಿ ಪರೀಕ್ಷೆ ಎಂಬಂತೆ ಭಾಸ ವಾಗತೊಡಗಿತು. ಆಕೆಯ ಅಪ್ಪ ತನ್ನ ಗಡಸು ಧ್ವನಿ ಯಲ್ಲಿ -“ಹೇಳು ಈ ಹುಡುಗ ಹೇಳಿದ್ದೆಲ್ಲಾ ಸತ್ಯವೂ ಸುಳ್ಳೋ ಎನ್ನುವುದನ್ನು ಹೌದು ಅಥವಾ ಇಲ್ಲ ಎಂದಷ್ಟರಲ್ಲೇ ಹೇಳು”ಎಂದು ಗದರಿದ. ಹುಡುಗನಿನೆ ತನ್ನ ಪ್ರೇಯಸಿ ತುಂಬಾ ಹೆದರಿದ್ದಾಳೆ ಎನ್ನುವುದು ಅರಿವಾಯಿತು. ಹುಡುಗಿ ಅಂಥ ಸಂದರ್ಭದಲ್ಲೂ ಹುಡುಗನತ್ತ ಪ್ರೀತಿ ತುಂಬಿದ ದೃಷ್ಟಿ ಹಾಯಿಸಿದಳು. ಆಗ ಆತ ಆಶಾ ಭಾವನೆಯಿದ ಅವಳತ್ತ ನೋಡುತ್ತ ಕಣ್ಣಲೇ “ನಾನಿದ್ದೇನೆ ಹೆದರ ಬೇಡ” ಎಂದು ಹೇಳಿದ.

ಈಗ ಹುಡುಗಿಯ ಬಾಯಿಯಿಂದ ಏನು ಬಂದೀತು ಎಂದು ಎಲ್ಲರೂ ಕಾತುರದಿಂದ ಕುಳಿತಿದ್ದರು. ಹುಡುಗಿ ಮತ್ತೊಮ್ಮೆ ಹುಡುಗನತ್ತ ನೋಡಿ, ತನಲ್ಲಿದ್ದ ಧೈರ್ಯ ಒಗ್ಗೂಡಿಸಿ -“ಅಪ್ಪಾ. . . . ನೀವು ಈ ನಿಮ್ಮ ಮಗಳ ಮೇಲೆ ತುಂಬಾ ವಿಶ್ವಾಸ ಇಟ್ಟಿರುವಿರಿ ಅಲ್ಲವಾ ? ಅಂತೆಯೇ ನಾನು ಸಹ ನಿಮ್ಮನ್ನು ನಂಬಿ ನನ್ನ ಕರ್ತವ್ಯ ಹಾಗೂ ಭಾವಿ ಭವಿಷ್ಯದ ದೃಷ್ಟಿಯಿಂದ. . ಒಂದು ಮಾತು ಹೇಳುವೆ ಕೇಳಿಸಿ ಕೊಳ್ಳಿ ಒಂದು ವೇಳೆ ನಾನು ಈ ಮಾತನ್ನು ನಿಮ್ಮಿಂದ ಮುಚ್ಚಿಟ್ಟು ಕೊಂಡು ಸುಮ್ಮನೆ ಇದ್ದಿದ್ದರೆ ಅದು ವಿಶ್ವಾಸ ಘಾತ ಆಗುತ್ತಿತ್ತು ಅಲ್ಲವಾ? ಹೌದು ನಾನು ಈ ಹುಡುಗನನ್ನು ಪ್ರೀತಿಸುತ್ತಿರುವುದಾಗಿ ಸತ್ಯ. . ಸತ್ಯ. ಇಷ್ಟೇ ಅಲ್ಲ ನಾನು ಮದುವೆ ಆದರೆ ಈತನೊಂದಿಗೇ ಆಗುವೆ ಅದೂ ನಿಮ್ಮ ಸಮ್ಮತಿ ಹಾಗೂ ಆಶೀರ್ವಾದ ಪಡೆದು. . . . ಅಪ್ಪಾ ಒಂದು ಬಾರಿ ನೀವು ಈ ವಿಚಾರವನ್ನು ಸಕಾರಾತ್ಮಕ ದೃಷ್ಟಿಯಿಂದ ಯೋಚನೆ ಮಾಡಿ ನೋಡಿ. . . ಬೇಕಿದ್ದರೆ ಆತನ ಪರೀಕ್ಷೆಯೂ ಮಾಡಿ ನೋಡಿ. . ನಾನು ಬೇಡ ಅನ್ನಲ್ಲ, ನಮ್ಮೀಬ್ಬರದ್ದೂ ಪವಿತ್ರ ಪ್ರೇಮ ಅದು ಬಿಟ್ಟರೆ ಮತ್ತೇನಿಲ್ಲ. . . “ಹುಡುಗಿಯ ಮನದಾಳದ ಮಾತುಗಳನ್ನು ಆಲಿಸಿದ ಅಲ್ಲಿ ಕುಳಿತಿದ್ದ ಅವರ ಮನೆಯವರು ಆಶ್ಚರ್ಯ ಚಿಕಿತರಾಗಿ ನೋಡಿದರು. ಆಕೆಯ ನುಡಿಗಳು ಅಪ್ಪಟ ಸತ್ಯ ಎಂದರಿತರು. ಈ ಮಧ್ಯೆ ಆ ಹುಡುಗ , ಹುಡುಗಿ ಯತ್ತ ನೋಡಿದವ ಮನದಲ್ಲೇ”ಪರವಾಗಿಲ್ಲ ತಾನು ಜವಾಬ್ದಾರಿ ಅರಿತ ಹುಡುಗಿಯನ್ನೇ ಪ್ರೀತಿಸಿದೆ”ಎಂದು ಅಂದು ಕೊಂಡ.

ಇಷ್ಟೇಲ್ಲ ನಡೆದ ನಂತರ ಹುಡುಗಿಯ ಅಪ್ಪ ಸದ್ದಿಲ್ಲದೇ ಒಳಗೆ ಹೋದವ ಬರುವಾಗ ಕೈಯಲ್ಲಿ ಸಕ್ಕರೆ ತುಂಬಿದ ಬಟ್ಟಲು ಹಿಡಿದು ತಂದು ಪ್ರಪ್ರಥಮವಾಗಿ ಹುಡುಗನಿಗೆ ಕೊಟ್ಟು ಆನಂತರ ಮಗಳಿಗೂ ಕೊಟ್ಟು ಅವಳನ್ನು ಪ್ರೀತಿಯಿಂದ ಆಲಂಗಿಸಿ, ತಲೆ ಸವರುತ್ತ ಎಲ್ಲಾ ಒಳ್ಳೆಯದಾಗಲಿ ನೀನೇನು ಚಿಂತಿಸಬೇಡ ಎಂದು ಭರವಸೆ ನೀಡಿದಾಗ ಹುಡುಗ ಹಾಗೂ ಹುಡುಗಿ ಯ ಕಣ್ಣಲ್ಲಿ ಆನಂದ ಭಾಷ್ಪ ಉಕ್ಕಿ ಬಂದವು.
. . . . . . . . . . . . . . . .
-ಅರವಿಂದ. ಜಿ. ಜೋಷಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x