-೪-
ಮದ್ಯಾಹ್ನದ ಚುರುಚುರು ಬಿಸಿಲು. ಊರಿನ ಮುಂಬೀದಿ ಹಳ್ಳ ಕೊಳ್ಳ ಕಲ್ಲು ಮಣ್ಣಿಂದ ಗಿಂಜಿಕೊಂಡು ಕಾಲಿಟ್ಟರೆ ಪಾದ ಮುಳುಗಿ ಧೂಳೇಳುತ್ತಿತ್ತು. ಮಲ್ಲ ಮೇಷ್ಟ್ರು ಮನೆಯ ಎರಡು ಬ್ಯಾಂಡಿನ ರೇಡಿಯೋದಲ್ಲಿ ಪ್ರದೇಶ ಸಮಾಚಾರ ಬಿತ್ತರವಾಗುತ್ತಿತ್ತು. ಆಗ ಬಿಸಿಲ ಝಳಕ್ಕೆ ತಲೆ ಮೇಲೆ ಟವೆಲ್ ಇಳಿಬಿಟ್ಟು ಲಳಲಳ ಲಳಗುಟ್ಟುವ ಕ್ಯಾರಿಯರ್ ಇಲ್ಲದ ಅಟ್ಲಾಸ್ ಸೈಕಲ್ಲಿ ಭರ್ರಂತ ಬಂದ ಮಂಜ ಉಸ್ಸಂತ ಸೈಕಲ್ ಇಳಿದು ತಲೇಲಿದ್ದ ಟವೆಲ್ ಎಳೆದು ಬೆವರು ಒರೆಸಿಕೊಂಡು ತೆಂಗಿನ ಮರ ಒರಗಿ ನಿಂತಿದ್ದ ನೀಲಳನ್ನು ಒಂಥರಾ ನೋಡಿ ಉಸ್ಸನ್ನೊ ಆ ಬಿಸಿಲ ಬೇಗೆಯಲ್ಲೂ ಫಳಾರನೆ ನಕ್ಕು ಕೈಯಲ್ಲಿದ್ದ ಬ್ರೆಡ್ಡು ಬಾಳೆಹಣ್ಣು ಗ್ಲೂಕೂಸ್ ಬಿಸ್ಕಟ್ ಕವರನ್ನು ಕೊಟ್ಟು ‘ತಿನ್ನು.. ಅವ್ವಿದ್ದಳ ಅವ್ವ..’ ಅಂತ ಕೇಳಿದ. ನೀಲ ‘ಅದೆಲ್ಲಿಗೋಗಿದ್ದಳ ಮುಂಡ.. ನೋಡು ಹೋಗು’ ಅಂತ ಅವನನ್ನು ಕಳಿಸಿದಳು. ಮಂಜ ಗೊಣಗುತ್ತಲೇ ಸಂದಿ ಮನೆ ದಾರಿ ಹಿಡಿದ.
ಶಿವಯ್ಯ ಆಗ ತಾನೇ ಮರಳು ಮಣ್ಣು ಹೂಡಿ ಬಂದು ಹಸುಗಳನ್ನು ಗೂಟಕ್ಕೆ ಕಟ್ಟಿ ನೀರು ಕುಡಿಸಿ ಹುಲ್ಲು ಹಾಕಿ ಬೆನ್ನು ಸವರಿ ತಾನೂ ಕೈಕಾಲು ಮುಖ ತೊಳೆದುಕೊಂಡು ನೀರು ಕುಡಿದು ದಾವಾರಿಸಿಕೊಂಡು ಉಸ್ಸಂತ ಜಗುಲಿ ಮೇಲೆ ಅಂಗಲಾಚಿ ಟವೆಲ್ಲಿಗೆ ತಲೆಯೊಡ್ಡಿದ್ದ. ಸಂದಿಗುಂಟ ಹೋಗುತ್ತಿದ್ದ ಮಂಜ ಶಿವಯ್ಯನನ್ನು ನೋಡಿ ‘ಮಾವ.. ಮಾವವ್’ ಅಂತ ಕೂಗಿದ. ಶಿವಯ್ಯ ಅರೆಗಣ್ಣು ಬಿಟ್ಟು ನೋಡಿ ‘ಮಂಜ.. ಬಂದ್ಯಾ ಇದೇನ ಈಗ ಈ ಬಿಸುಲ್ಲಿ..’ ಅಂತ ಎದ್ದು ಟವಲ್ ಬಡಿದು ‘ಬಾ ಕುಂತ್ಗ..’ ಅಂತ ಕರೆದ. ‘ಇರು ಮಾವ ಬತ್ತಿನಿ ಅಕ್ಕುನ್ ನೋಡ್ಕ ಬತ್ತಿನಿ. ಇದ್ದಳ ಏನ…’ ಅಂತ ಅತ್ತ ಸರಿದ.
ಅಕ್ಕ ಚೆನ್ನಬಸವಿ ವಾಸ್ಗಲ್ಲಿಗೆ ತಲೆಯಿಟ್ಟು ಮಲಗಿದ್ದಳು. ಮಂಜ ಟವಲ್ ಬಡಿದು ಕುಂತು ‘ಏನ ಹೇಳು ಈ ಸಲ ನಾಟಿ ಹಾಕದ ಬ್ಯಾಡ್ವ..’ ಅಂದ. ಅದಕ್ಕೆ ಚೆನ್ನಬಸವಿ ‘ಬ್ಯಾಡ ಹೋಗು ನಾನೇ ಹಾಕ್ತಿನಿ. ನೀ ನೆಟ್ಗ ಮೂರ್ ಪಲ್ಲ ಕೊಟ್ಟಿದ್ರ ಕೊಡಿನು. ನೀ ಯೆಡ್ತಿ ಮಾತ್ ಕೇಳ್ಕಂಡು ಕೊಳಗ ಲೆಕ್ದಲ್ಲಿ ಮುಕ್ಕರಿಕಂಡು ಕೊಟ್ಯಲ್ಲ ಯಾತಿಕಾದ್ದು..ಹೋಗು ಹೋಗು’ ಅಂತ ಕೈಯಾಡಿಸಿ ‘ನೋಡು ಮರ ಒರಿಕಂಡು ನಿಂತಿರ ನನ್ನೆಣ್ಣ… ಅವ ಹಂಗಾದ ಅಂತ ನೀ ಇನ್ನೊಂದ್ ಕೂಡಾವಳಿ ಮಾಡ್ಕಂಡ.. ಗಾಚಾರ.. ಗಾಚಾರ.. ಅವ ಹಂಗಾದಾಗ್ಲೆ ಅಲ್ಲಿ ಇಲ್ಲಿ ತೋರ‌್ಸಿ ತೋರ‌್ಸಿ ಅಂತ ಬಡ್ಕ ಸಾಕಾದಿ.. ನೀ ಕೇಳ್ದ್ಯಾ.. ಇಲ್ಲ. ಅವ್ವ ಏನಂದಾ..ಅವ್ಳೂ ನಿನ್ ತಾಳುಕ್ಕೇ ಕುಣ್ದು ಬೆಳಕರಿಯೊದ್ರೊಳ್ಗ ನಿಂಗೊಂದ್ ಗಂಟಾಕ್ದ. ಅಪ್ಪನು ತಲ ಸವುರಿ ಯೇಳ್ದ ಅವ್ನ್ ಮಾತ್ಗೂ ಬ್ಯಲ ಕೊಡ್ನಿಲ್ಲ. ಸರಿ ಏನಾ ಆಯ್ತು.. ನಾನು ಹೇಳ್ದಂಗಿ ಅಲ್ಲಿ ಇಲ್ಲಿ ತೋರ‌್ಸಿದ್ರ ಸರಿಯಾಗಳಾ ಏನಾ.. ನೀ ಹಾಗಾದ್ರು ಮಾಡ್ದ್ಯಾ.. ಇಲ್ಲ. ನನ್ನೆಣ್ಣು ಆ ಚೆಂದುಳ್ಳಿ ಕೂಸ ಕಳ್ಕಂಡು ಗ್ಯಾನ್ಗೆಟ್ಟು ನಿಂತಿದ್ರ ನಿಂಗ ಅದ್ರ ಗ್ಯಾನನೂ ಇಲ್ದೆ ಕಟ್ಗಂಡವ್ಳ ಮಗ್ಲೇ…ಅವ್ಳ ಸೀರ ಸೆರ‌್ಗೇ ಹೆಚ್ಚಾಯ್ತು. ಅದು.. ಇಲ್ಲಿ ಅನ್ನವ್ರ ಆಡ್ದವ್ರ ಬಾಯಿಗ ಬಾಯಾಗಿ ನರಕ ಪಡ್ತ ಅದ.. ಇದು ನಿಂಗೊತ್ತಾ..’ ಅಂತ ಸೆರಗ ಕಣ್ಣಿಗೊತ್ತಿ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದಳು.
ಈ ಮಂಜ ಚೆನ್ನಬಸವಿಯ ತಮ್ಮ. ಹಠಕ್ಕೆ ಬಿದ್ದು ನೀಲಳನ್ನು ಅವನಿಗೆ ಕೊಟ್ಟು ಮದುವೆ ಮಾಡಿದ್ದಳು. ಗಂಡ ನಿಂಗಯ್ಯನಿಗಾಗಲಿ ಅತ್ತೆ ಅಡಿನಿಂಗಿಗಾಗಲಿ ಮೈದ್ದಿರಿಗಾಗಲಿ ವಾರ‌್ಗಿತ್ತಿಯರಿಗಾಗಲಿ ಸುತಾರಾಂ ಇಷ್ಟ ಇಲ್ಲ. ಇದು ಕಂಡೇ ಯಂಕ್ಟಪ್ಪ ಚೆನ್ನಬಸವಿಗೆ ಕುಮ್ಮಕ್ಕು ಕೊಟ್ಟು ಅಡಿನಿಂಗಿಗೆ ಸೆಡ್ಡು ಹೊಡೆದಿದ್ದ.
ನೀಲ ಎಂದರೆ ಇಡೀ ಊರೇ ದಂಗಾಗ ತರ ಇದ್ಲು. ಚೆನ್ನಬಸವಿಯ ವಯ್ಯಾರದ ಗುಣ ಇದ್ದರು ಅವಳಂಗೆ ಆಡಿಕೊಳ್ಳುವಂಗಿರಲಿಲ್ಲ. ಅವಳನ್ನು ಬಯಸಿ ಬಯಸಿ ನೋಡಿ ಉಗಿಸಿಕೊಂಡವರೇ ಹೆಚ್ಚು. ಮಂಜ ಯಾವುದರಲ್ಲು ನೀಲಳಿಗೆ ಸಮವೇ ಇಲ್ಲ. ನಾಜೂಕಿಲ್ಲದ ಮಂಜನಿಗೆ ಪುಸಲಾಯಿಸಿದ್ದೇ ಯಂಕ್ಟಪ್ಪ. ಈ ಮಂಜ ಯಂಕ್ಟಪ್ಪನ ಮಾತು ಕೇಳಿ ಶಿವಯ್ಯನ ಜಗುಲಿಯ ರೂಮಿನಲ್ಲಿ ಮಲಗಿದ್ದ ಅಡಿನಿಂಗಿಗೆ ಒಂದು ಬಾಟಲಿ ಹೆಂಡ ಚಾಕಣ ತಂದು ಕೊಟ್ಟು ಕುಡಿಸಿ ಲೋಕಾಭಿರಾಮ ಮಾತಾಡ್ತ ‘ನೀಲನ್ನ ನಂಗೆ ಕೊಟ್ಟು ಮದ್ವ ಮಾಡಿಯ.. ನಿನ್ ಸೊಸ್ಗು ಯೇಳಿಯ.. ಮಗುನ್ಗು ಒಂದ್ ಮಾತು ಹೇಳಿಯ.. ಅಕ್ಕುನ್ನ ಬಾವುನ್ನ ನಾ ಒಪ್ಪುಸ್ತಿನಿ’ ಅಂದ.
ಈಗಾಗಲೇ ಹೆಂಡದ ಬಾಟಲಿ ಖಾಲಿಯಾಗಿತ್ತು. ಅಡಿನಿಂಗಿ ಚಾಕಣ ಚೀಪುತ್ತಿದ್ದಳು. ಕುಡಿದ ಮತ್ತು ಏರಿತ್ತು. ಮಂಜನ ಮಾತಿಗೆ ‘ಏಯ್ ಬಾಗುಲ್ ಸಂದಿಲಿ ಯಕ್ಡ ಬುಟ್ಟವ ನೋಡಿದಯ… ನನ್ ಮಗ ಒಪ್ಪಬೇಯ್ದು ನಿಮ್ಮಕ್ಕ ಒಪ್ಪಬೇಯ್ದು ಕಡ್ಗ ನಾನೂ ಒಪ್ಪಬೇಯ್ದು ಅನ್ಕಾ. ಆದ್ರ..ಆದ್ರ ನನ್ ಮೊಮ್ಮೆಣ್ಣು ಆ ನೀಲ ಒಪ್ಪಿಳಾ… ಕನ್ನಡಿಲಿ ನಿನ್ ಮುಸ್ಡಿ ನೋಡ್ಕಂಡಿದ್ದಯ.. ಹೋಗಲೆಯ್ ಎದ್ದು..’ ಎಂದು ಗದರಿಕೊಂಡಳು. ಅವಳ ಗದರಿಕೆಗೆ ಬೆಚ್ಚಿ ಬೆರಗಾದ ಮಂಜ ರೂಮಿಂದ ಹೊರ ಬಂದ.
ಇದನ್ನ ಕೇಳಿಸಿಕೊಂಡೊ ಏನೋ ಸರಕ್ಕನೆ ಬಂದ ಚೆನ್ನಬಸವಿ ‘ಏಯ್ ಏನಾ.. ಅದೇನ ಅವ್ಳೊಂದ್ಗ ಮಾತಾಡದು.. ಅವ್ಯಾರ ಮಾಡಲ್ಲ ಅನ್ನಕ.. ಯಾವತ್ತಿದ್ರು ನೀಲ ನಿನ್ನೆಡ್ತಿನೆ ಬಾ ಇತ್ತಗ..’ ಅಂತ ಕರೆದಳು.
ಶಿವಯ್ಯನು ಅವನ ಹೆಂಡತಿಯೂ ಒಳಗಿದ್ದು ಎಲ್ಲವನ್ನು ಕೇಳಿಸಿಕೊಂಡೂ ಏನೊಂದೂ ಮಾತಾಡದೆ ಸುಮ್ಮನಿದ್ದರು. ಆದರೆ ಚೆನ್ನಬಸವಿಯ ಮಾತುಗಳು ಒಳಗಿದ್ದವರನ್ನು ಬಿಡದೆ ಯಾವುದ್ಯಾವುದೊ ಪುರಾಣ ತೆಗೆದು ಶಾಪ ಹಾಕತೊಡಗಿದಳು.
ಅಡಿನಿಂಗಿ ಕೇಳಬೇಕಾ.. ಕುಡಿದ ಮತ್ತು ಅವಳನ್ನು ಬಿಟ್ಟಿತಾ.. ಬೀದಿಗೆ ಬಂದಳು. ಸವಾಲು ಹಾಕಿದಳು. ಕತ್ತಲು ಕವುಸಿಕೊಳ್ಳುವ ಹೊತ್ತಿಗೆ ಎಲ್ಲರು ಒಟ್ಟಿಗೆ ಬೀದಿಯಲ್ಲಿ ನಿಲ್ಲುವಂತಾಗಿ ಕುಲಕ್ಕು ಹೋಯ್ತು. ಕುಲದ ತೀರ್ಮಾನ ಚೆನ್ನಬಸವಿ ಪರವಾಯ್ತು. ಅವಳ ಮಗಳು ಅವಳಿಷ್ಟ. ಇದರೊಳಗೆ ನಿಂಗಯ್ಯನದು ಏನೂ ಇಲ್ಲ. ಅಡಿನಿಂಗಿ ಎಲ್ಲರೆದುರು ಮಗನ ಮುಸುಡಿ ತಿವಿದು ‘ನೀನು ಗಂಡುಸ್ತರ ಇದ್ದಿದ್ರ ಹಿಂಗಾಗದ.. ಹೋಗು ಹೋಗು ನಿನ್ನಣಲಿ ಆ ಬ್ರಹ್ಮ ಬರ‌್ದಿರದೆ ಹಿಂಗಿದ್ರ ಯಾರೇನ್ ಮಾಡಕಾದ್ದು’ ಅಂತ ಬೀಸುಗಾಲು ಹಾಕೊಂಡು ನಡ್ದಿದ್ದು ಆಯ್ತು.
------
ಬಿಸಿಲು ಮತ್ತಷ್ಟು ಏರಿ ಮಂಜನ ಮೈ ಬೆವರಿತ್ತು. ಅಕ್ಕ ಚೆನ್ನಬಸವಿಯ ಮಾತು, ಅವಳೀಗ ಬಿಕ್ಕಳಿಸಿ ಬಿಕ್ಕಳಿಸಿ ಅಳುವ ರೀತಿ ಮಂಜನ ಎದೆಗೆ ನಾಟಿ ಅಲ್ಲಿಂದ ಮೇಲೆದ್ದು ಶಿವಯ್ಯನ ಮುಂದೆ ಸುಮ್ಮನೆ ಕುಂತ. ಒಂಭತ್ತನೇ ಕೂಸು ಹೆರಲು ನಾಲ್ಕು ತಿಂಗಳು ಬಾಕಿ ಇದ್ದ ಸಿದ್ದಿ ಒಳಗಿಂದ ನೀರು ತಂದು ಕೊಟ್ಟು ‘ಚೆನ್ನಾಗಿದ್ದಯಪ್ಪ ಯೆಡ್ತಿ ಮಕ್ಕ ಚೆನ್ನಾಗಿದ್ದರ ಎಷ್ಟ್ ಮಕ್ಳ’ ಅಂತ ಅದೂ ಇದು ಮಾತಾಡಿದಳು.
ಈಗ ಅಡಿನಿಂಗಿಗೆ ಕಣ್ಣು ಕಾಣುತ್ತಿಲ್ಲ. ಮಂಪರು. ಒಂದು ಕಣ್ಣು ಆಪರೇಷನ್ ಆಗಿ ಪರವಾಗಿಲ್ಲ. ಇನ್ನೊಂದು ಕ್ಯಾಂಪ್ ಬಂದರೆ ಅದನ್ನು ಮಾಡಿಸಿದರೆ ಹೇಗೊ ಸರಿ ಹೋಗಬಹುದು. ಈ ಬಗ್ಗೆ ಆಗಾಗ ಶಿಶುವಾರದ ಮೇಡಮ್ಮನ್ನ ಕೇಳೋದೆ ಆಯ್ತು. ಎಲ್ಲೊ ಹೋಗಿದ್ದವಳು ಕೋಲೂರಿಕೊಂಡು ಬಂದು ಜಗುಲಿ ಒರಗಿ ನಿಂತು ‘ಕುಸೈ ಹೆಂಗಿದೈ’ ಅಂದಳು.’ಬಮ್ಮ ನೀ ಚೆನ್ನಗಿದ್ದಯ’ ಅಂತ ಮಂಜ ಹಲ್ಲು ಕಿರಿದ. ಹ್ಞೂ.. ಅಂತ ಅವನನ್ನೇ ನೋಡುತ್ತಾ ನೀಲ ಮದುವೆ ಆದ ದಿನವ ನೆನೆಸಿಕೊಂಡಳು. ಅದಕ್ಕು ಮುನ್ನ ಆದ ಘಟನೆಗಳೂ ನೆಪ್ಪಿಗೆ ಬಂದವು. ಆ ನೆಪ್ಪಿನಲ್ಲಿ ಯಂಕ್ಟಪ್ಪನ ಮಗ ಶಿವನಂಜನಿದ್ದ.
ಶಿವನಂಜ ಪೈಜಾಮ ಧರಿಸಿ ಕ್ರಾಪು ತೆಗೆದುಕೊಂಡು ಶಿಸ್ತಾಗಿದ್ದ. ನೀಲಳನ್ನು ಕಂಡು ಹುಬ್ಬು ಹಾರಿಸಿದ್ದ. ನೀಲ ಮುಖ ತಿರುಗಿಸಿ ಗುರುಗುಟ್ಟಿದ್ದಳು. ಶಿವನಂಜ ಹುಬ್ಬು ಹಾರಿಸಿದ್ದು ಕೆಲವರ ಕಣ್ಣು ಕೆಂಪಗಾಗಿಸಿತ್ತು. ಅವರೂ ಇವಳಿಗೆ ಹುಬ್ಬು ಹಾರಿಸಿದ್ದರು. ಅದೆಲ್ಲವೂ ಊರಲ್ಲಿ ಸದ್ದಾಗಿತ್ತು. ಅಡಿನಿಂಗಿ ಅವರವರ ಮನೆ ಬಾಗಿಲಿಗೇ ಹೋಗಿ ಅವರಿಗೆಲ್ಲ ಭೂತ ಬಿಡಿಸಿದ್ದಳು. ಇಷ್ಟಾದರು ಅವರು ಸರಿ ಹೋಗದೆ ಅವಳ ಹಿಂದೆ ಬೀಳುವುದ ಬಿಟ್ಟಿರದೆ ಚೆನ್ನಬಸವಿ ಅತ್ತೆ ಅಡಿನಿಂಗಿ ಜೊತೆ ರಂಪ ಮಾಡಿ ‘ಇವ..ಇವಿದ್ದಳಲ್ಲ ಇವ.. ಕುಪ್ರುಮುಂಡ ಅದೇನ ಆಗದ ಅಂತ ನನ್ನೆಣ್ ಮಾನನ ಊರ‌್ಗೆಲ್ಲ ಚೆಲ್ದ.. ಈಗ ಅದೆ ಸುದ್ದಿ ಆಗದ..’ ಅಂತ ನಟಿಕೆ ಮುರಿದಿದ್ದಳು.
ಸರೊತ್ತು. ಚೆನ್ನಬಸವಿಯ ಮಾತು ಚುಚ್ಚುತ್ತಿತ್ತು. ನಿದ್ದೆ ಹತ್ತದೆ ಏನೇನೊ ಗೊಣಗುತ್ತಿದ್ದ ಅಡಿನಿಂಗಿ ಅದನ್ನು ಮರೆಯಲೊ ಏನೊ ‘ಅಲಸಂದ ಹಂಬು ಜೋಳ್ಯಾಗಿದ್ ಜೋಳುದ್ ಗಿಡನೆಲ್ಲ ಹಬ್ಬುದ್ರ ತೆನ ಉಳುದ್ದ’ ಅಂದದ್ದು ಶಿವಯ್ಯನ ತಲೆಗೋಯ್ರು. ಆಗ ಶಿವಯ್ಯನಿಗೆ ಮಂಪರು. ಮಕ್ಕಳೆಲ್ಲ ಒದ್ದಾಡುತ್ತಾ ತಿಗಣೆಯ ಕಾಟಕ್ಕೆ ಪರ‌್ರ ಪರ‌್ರ ಕೆರೆದುಕೊಳ್ಳುತ್ತಾ ಮಲಗಿದ್ದವು. ಸೂರಿ ಚೆನೈನ್ ದೇವಸ್ತಾಕ್ಕೋಗಿ ಮಲಗುವುದು ರೂಢಿ. ಶಿವಯ್ಯನ ಹಿರಿ ಮಗ ಜಗುಲಿ ಮೇಲೆ ಮಲಗಿದ್ದ. ಮೊಬ್ಬಿಗೆ ಎದ್ದು ಒಂದಾ ಮಾಡಿ ಬಂದ ಅಡಿನಿಂಗಿ ಸರೊತ್ತಲ್ಲಿ ಗೊಣಗಿದ್ದನ್ನೆ ಮತ್ತೆ ಗೊಣಗಿ ಶಿವಯ್ಯನನ್ನ ಎಬ್ಬಿಸಿ ‘ನಡಿ ನಾನೂ ಬತ್ತಿನಿ ಹಂಬ್ ಕಿತ್ಕ ಬಂದ್ರ ಮೇವ್ಗಾದ್ರು ಆಯ್ತುದ’ ಅಂದಳು.
ಶಿವಯ್ಯ ಎದ್ದಾಗ ಮಂಜು ಕವಿದಿತ್ತು. ಅದು ಹೆಂಗೆ ಕವಿದಿತ್ತು ಅಂದರೆ ಒಬ್ಬರ ಮುಖ ಒಬ್ಬರಿಗೆ ಕಾಣದು. ಪರ್ಲಾಂಗ್ ದೂರದವರಗೆ ಏನೂ ಕಾಣದೆ ಕತ್ತಲು ಕವಿಕಂಡ ತರ ಇತ್ತು. ಶಿವಯ್ಯ ಕುಡುಗ್ಲು ತಗಂಡ. ಗೋಣಿಚೀಲ ತಗಂಡ. ಗೊಪ್ಪ ಮಾಡ್ಕಂಡ. ತಲೆ ಮೇಲೆ ಹಾಕಂಡ. ಹೊಲದ ಕಡೆ ನಡೆದ.
ಎರಡಾಳುದ್ದ ಜೋಳದ ಗಿಡ ಬೆಳೆದು ರಟ್ಟೆ ಗಾತ್ರದ ತೆನೆ ತೊನೆದು ಓಲಾಡುತ್ತಿತ್ತು. ಜೋಳದ ಗಿಡದ ಸಾಲಲ್ಲಿ ಬೆಳೆದಿದ್ದ ಅಲಸಂದೆ ಹಂಬು ಹೂವು ಬಿಟ್ಟು ಉದುರಿ ಕಾಯಿ ಬಿಡದೆ ಜೋಳದ ಗಿಡವನ್ನೆಲ್ಲ ಆವರಿಸಿಕೊಂಡು ಕಾಲಾಕುವುದಕ್ಕು ಜಾಗವಿರದ ರೀತಿ ಹಬ್ಬಿತ್ತು. ಅದರ ಸಮೇತ ಸೊಪ್ಪು ಸದೆ ಹುಲ್ಲು ಬೇರೆ ತಾವಿಲದ ತರ ಬೆಳೆದಿತ್ತು. ಶಿವಯ್ಯ ಶಿವಾ ಅಂತ ಕುಡುಗ್ಲು ತಗ್ದು ಒಂದ್ಕಡೆಯಿಂದ ಕುಯ್ದು ಕುಯ್ದು ಎಲ್ಲವನ್ನು ತಂದು ಗುಡ್ಡೆ ಹಾಕುವಷ್ಟರಲ್ಲಿ ಅವನ ಮೈಕೈ ಗೋಣಿಚೀಲದಗೊಪ್ಪ ಮಂಜಿಗೆ ಒದ್ದೆಯಾಗಿ ಹನಿ ಹನಿ ತೊಟ್ಟಿಕ್ಕುತ್ತಿತ್ತು. ಗೋಣಿಚೀಲದ ಗೊಪ್ಪೆಯನ್ನು ಬಿಗಿ ಹಿಡಿದು ಹುಣಸೇಮರದಡಿ ಕುಂತು ಗಡಗಡ ನಡುಗುತ್ತ ಜೋಳದ ಸೆದೆ ತಂದು ಮುಂದಿಟ್ಟು ಕಡ್ಡಿಗೀರಿದ. ಬೆಂಕಿ ಧಗಧಗ ಉರಿಯುತ್ತ ಅದರಲ್ಲೆ ಬೀಡಿ ಹಸ್ಸಿ ಸೇದುತ್ತಾ ಕೈ ಮುಂದು ಮಾಡಿ ಬೆಚ್ಚಗೆ ಮಾಡಿಕೊಳ್ಳುತ್ತಿದ್ದ. ಅಷ್ಟೊತ್ತಿಗೆ ಅವನ ಅವ್ವ ಅಡಿನಿಂಗಿ ಬಂದಳು. ಮಂಜು ಮತ್ತೂ ದಟ್ಟವಾಯ್ರು. ಮೈ ಒದರುತ್ತಿತ್ತು. ಇನ್ನಷ್ಟು ಸೆದೆ ತಂದು ಉರಿ ಹಾಕಿದರು. ಉರಿವ ಬೆಂಕಿಗೆ ಕೈ ಕಾಯಿಸತೊಡಗಿದರು.
ಆಗ ಮಲ್ಲನ ಕೆರೆ ಮೂಲೆಯಿಂದ ಯಾರೊ ಕೂಗಿಕೊಂಡ ಹಾಗಾಯ್ತು. ಶಿವಯ್ಯ ಎದ್ದು ನಿಂತ. ಅಡಿನಿಂಗಿಯೂ ಎದ್ದು ನಿಂತಳು. ‘ಯಾರಲ ಅದು ಮೊಬ್ಗೆ ಇಂಗ ಕೂಗದು..’ ಅಂತದಳು. ಇಬ್ಬರೂ ಬೆಂಕಿ ಉರಿಯಿಂದ ಕಾಲ್ದೆಗೆದು ಕಲ್ಬುಟ್ರ ಓಣಿ ಕಡೆ ನೋಡಿದರು. ಕವಿದುಕೊಂಡಿದ್ದ ಮಂಜಿನಿಂದ ಏನೂ ಕಾಣದೆ ಸುಮ್ಮನೆ ನೋಡುತ್ತಿದ್ದಂತೆ ಮತ್ತೆ ಕೂಗು ಕೇಳಿತು. ಮತ್ತಿಬ್ಬರು ಅರಚುವ ಸದ್ದು. ಅಡಿನಿಂಗಿಗೆ ಜೀವ ಅಳುಕಿ ‘ಬಲಲೌ ಇತ್ತಗ..’ ಅಂತ ಅವನನ್ನು ಅಲ್ಲಿಂದ ಹೊಂಟಿಸಿಕೊಂಡು ಬಂದಳು.
-------
ಪೊಲೀಸ್ ಸ್ಟೇಷನ್ ಗೆ ಹೋದ ಶಿವಯ್ಯ ಮದ್ಯಾಹ್ನ ಮೂರಾದರು ಬಂದಿರಲಿಲ್ಲ. ಶಿವಯ್ಯನ ಹೆಂಡತಿ ಸಿದ್ದಿ ಯೋಚನೆಗೆ ಬಿದ್ದಿದ್ದಳು. ಕಾಯಿಸಿದ್ದ ರಾಗಿ ಅಂಬಲಿ, ಬೇಯಿಸಿದ್ದ ಉಳ್ಳಿ ಒಲೆ ಮೇಲಿನ ಪಾತ್ರೆಯಲ್ಲಿ ಹಂಗೇ ಇತ್ತು. ಚೆನ್ನಬಸವಿ ತಲೆಗೆ ಸೆರಗ ಹಾಕಿಕೊಂಡು ಬರಬರುತ್ತಲೇ ಶಾಪಾಕುತ್ತಾ ಬಂದಳು. ಅವಳು ಯಾರಿಗೆ ಶಾಪಾಕುತ್ತಿದ್ದಾಳೆ ಎಂಬುದು ಗೊತ್ತಿಲ್ಲ. ಅಂತೂ ಶಾಪಾಕುತ್ತಾ ಜಗುಲಿ ಮೇಲೆ ಉಸ್ ಅಂತ ಕುಂತಳು.
ಬೆಳಗ್ಗೆ ಮಂಜು ಕವಿದಿರ ಹೊತ್ತಲ್ಲಿ ಮಲ್ಲನ ಕೆರೆ ಮೂಲೆಯ ಕಾಲುವೆ ಏರಿ ಮೇಲೆ ನೀರ‌್ಕಡೆಗೆ ಹೋಗಿದ್ದ ಯಂಕ್ಟಪ್ಪನ ಮಗ ಶಿವನಂಜನಿಗೆ ಯಾರೊ ಹೊಡೆದಿದ್ದರು. ತಲೆಗೆ ಏಟಾಗಿ ರಕ್ತ ಸೋರಿ ಚೆಲ್ಲಿಕೊಂಡು ಅರಚುತ್ತಿದ್ದ. ಗದ್ದೆಗೆ ನೀರು ಕಟ್ಟಲು ಬಂದಿದ್ದ ತಿರುಮಕೂಡಲಿನ ಗೌಡರವನು ಅವನನ್ನು ಎತ್ತಿಕೊಂಡು ಬಂದು ಯಂಕ್ಟಪ್ಪನಿಗೆ ಹೇಳಿ ಮುಂದೆ ಬ್ಯಾಟರಿ ಲೈಟು ಹಿಂದೆ ಕ್ಯಾರಿಯರ್ ಇದ್ದ ಹೀರೋ ಸೈಕಲ್ಲಿ ಕೂರಿಸಿಕೊಂಡು ನರಸೀಪುರ ಲಿಂಕ್ ರಸ್ತೇಲಿದ್ದ ಚಾರಂಬಳ್ಳಿ ಡಾಕ್ಟರಿಗೆ ತೋರಿಸಿ ಬ್ಯಾಂಡೇಜ್ ಹಾಕಿಸಿ ಪೋಲಿಸ್ ಕಂಪ್ಲೆಂಟ್ ಕೊಟ್ಟು ಮನೆಯಲ್ಲಿ ಮಲಗಿದ್ದು ಊರಿಗೇ ತಿಳಿದು ಹೋಗಿ ಶಿವಯ್ಯನ ಕೈವಾಡದ ಶಂಕೆ ಚೆಲ್ಲಿಕೊಂಡಿತ್ತು.
ಈ ಶಂಕೆಯ ಬೆನ್ನಲ್ಲೆ ಅಡಿನಿಂಗಿ ಬೆಳಗ್ಗೆ ಹೊಲದಲ್ಲಿ ಆದದ್ದನ್ನು ಮನಸ್ಸಿಗೆ ತಂದುಕೊಂಡು ಇದ್ಯಾಕಿಂಗಾಯ್ತು ಅಂತ ಯೋಚನೆಗೆ ಬಿದ್ದು ಏನೇನೊ ಕಲ್ಪಿಸಿಕೊಂಡಳು. ಅಷ್ಟೊತ್ತಿಗೆ ತನ್ನ ಹಿರಿಮಗನ ಜೊತೆ ಬಂದ ಶಿವಯ್ಯ ಕಳ್ಳೆಪುರಿ ಕಾರಸ್ಯವ್ಗದ ಪೊಟ್ಟಣವನ್ನು ಸಪ್ಪಗೆ ಕುಂತಿದ್ದ ಹೈಕಳ ಕೈಯಲ್ಲಿ ಕೊಟ್ಟು ಉಸ್ಸಂತ ಕುಂತ. ಹೈಕಳು ಕಳ್ಳೆ ಪುರಿ ಕಾರಸ್ಯಾವ್ಗ ತಿನ್ನುತ್ತ ಮಾತಾಡದೆ ಕುಂತಿದ್ದ ಅವ್ವನಿಗೂ ಕೊಡಲು ಹೋದವು. ಅವ್ವ ಬ್ಯಾಡ ಅಂದಳು.
ಅಡಿನಿಂಗಿ ಹಬ್ಬಿರುವ ಸುದ್ದಿ ಹೇಳಿದಳು. ಶಿವಯ್ಯ ಸಣ್ಣಗೆ ನಕ್ಕ. ಅಪ್ಪನ ಜೊತೆಗೆ ಹೋಗಿದ್ದ ಹಿರಿಮಗನೂ ಹಲ್ಲುಗಿಂಜಿ ನಕ್ಕು ಬಿತ್ತರಿಸಿದ.
ತಿಂಗಳ ಹಿಂದೆ ಶಿವಯ್ಯ ಮಣ್ಣು ಹೂಡಿ ಬರುವಾಗ ಬೈಲಿಗರವನಿಂದ ದುಡ್ಡು ಕೊಟ್ಟು ಒಂದು ವಾಸ್ಗಲ್ ತಂದು ಜಗುಲಿ ರೂಮಿಗೆ ನಿಲ್ಲಿಸಿ ಅವ್ವ ಅಡಿನಿಂಗಿಗೆ ಮಲಗಲು ತಾವು ಮಾಡಿದ್ದ. ಒಂದು ವಾಸ್ಗಲ್ ಬೇಕು ಅಂತ ಸುಮಾರು ದಿನದಿಂದನೇ ಕೇಳಿದ್ದ ಶಿವಯ್ಯನಿಗೆ ಬೈಲಿಗರವನು ಹೇಗೋ ಈಡೇರಿಸಿದ್ದ. ಅದಾದ ಬಳಿಕ ಗರ್ಗೇಶ್ವರಿ ಸಾಬರು ತನ್ನ ವಾಸ್ಗಲ್ ಕಳುವಾಗಿರುವ ಬಗ್ಗೆ ಕಂಪ್ಲೆಂಟ್ ಕೊಟ್ಟು ತನಗೆ ಅನುಮಾನ ಬಂದ ಹೆಸರನ್ನು ಅಲ್ಲಿ ನಮೂದಿಸಿದ್ದ. ಪೋಲಿಸರು ಬೈಲಿಗರವನನ್ನು ಕರೆದೊಯ್ದಿದ್ದರು. ಅದಕ್ಕು ಮೊದಲು ವಾಸಗಲ್ಲನ್ನು ಶಿವಯ್ಯ ತನ್ನ ಗಾಡಿಯಲ್ಲಿ ಹಾಕಿಕೊಂಡು ಹೋಗುತ್ತಿದ್ದುದನ್ನು ಆ ಸಾಬರು ನೋಡಿ ಇದು ನನ್ನ ವಾಸ್ಗಲ್ ಇದ್ದಂಗಿದೆಯಲ್ಲ ಅಂತ ಅನುಮಾನಿಸಿ ಶಿವಯ್ಯನನ್ನು ಕೇಳಿದಾಗ ಬೈಲಿಗರವನ ಹೆಸರು ಹೇಳಿ ಇಷ್ಟು ದುಡ್ಡಾಯ್ತು ಅಂತಾನೂ ಹೇಳಿದ್ದ. ಇದರ ಆಧಾರದ ಮೇಲೆ ವಿಚಾರಣೆಗೊಳಪಡಿಸಿದಾಗ ಶಿವಯ್ಯನ ಹೆಸರೂ ಬಂದು ಕರೆದುಕೊಂಡು ಹೋಗಿದ್ದರು.
ಇದಿಷ್ಟೂ ಶಿವಯ್ಯ ಮತ್ತು ಅವನ ಹಿರಿಮಗನಿಗಲ್ಲದೆ ಯಾರಿಗೂ ಗೊತ್ತಿಲ್ಲ. ಇದೇ ವೇಳೆ ಯಂಕ್ಟಪ್ಪನ ಮಗನಿಗೆ ಯಾರೊ ಹೊಡೆದಿದ್ದಕ್ಕು ಶಿವಯ್ಯನನ್ನು ಪೋಲಿಸರು ಕರೆದುಕೊಂಡು ಹೋಗಿದ್ದಕ್ಕು ರೆಕ್ಕೆಪುಕ್ಕ ಬಂದಿತ್ತು. ಇದನ್ನೆಲ್ಲ ಕೇಳಿ ಶಿವಯ್ಯ ನಕ್ಕಿದ್ದ.
ಇದಾಗಿ ಮಾರನೆ ದಿನ ಶಿವನಂಜ ಒಂದಷ್ಟು ಹುಡುಗರನ್ನು ಕರೆದುಕೊಂಡು ಮಾದಿಗೇರಿಗೆ ನುಗ್ಗಿ ತನಗೆ ಹೊಡೆದಿದ್ದವನನ್ನು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದು ಊರಲ್ಲಿ ರಂಪವಾಗಿ ಒಂದಷ್ಟು ಜನಕ್ಕೆ ರಕ್ತ ಬಂದಿತ್ತು. ಇದರಿಂದ ಒಕ್ಕಗೇರಿ ಮಾದಿಗೇರಿ ದುಮುಗುಡುತ್ತ ಚೆನೈನ್ ದೇವಾಸ್ತಾನದ ಒಳಗೆ ಕುಲ ಸೇರಿತ್ತು. ಯಂಕ್ಟಪ್ಪ ಅಸೀನನಾಗಿದ್ದ. ಶಿವನಂಜ ಗತ್ತಿನಲ್ಲಿ ತನ್ನ ಪಟಾಲಂ ಜೊತೆ ನಿಂತಿದ್ದ. ಹೊಡೆಸಿಕೊಂಡವನು ಹಲ್ಲು ಕಡಿಯುತ್ತಿದ್ದ. ಅಲ್ಲಿ ಸೇರಿದ್ದ ಎಲ್ಲರ ಬಾಯಾಲ್ಲಿ ನೀಲಳ ಹೆಸರೇ ಇತ್ತು. ಯಂಕ್ಟಪ್ಪನಿಗೆ ಎಲ್ಲರೂ ನಮಸ್ಕರಿಸುತ್ತ ಗೌರವ ಕೊಡುತ್ತಿದ್ದರು. ಶಿವನಂಜನಿಗೆ ಹೊಡೆದಿದ್ದವನು ‘ನಾನು ನೀಲನ್ನ ಇಷ್ಟ ಪಟ್ಟಿನಿ. ಮದ್ವೆನು ಆಯ್ತಿನಿ. ಈ ಶಿವ್ನಂಜ ನೀಲುನ್ಗ ಹೋಗ ಬರ ಹುಬ್ಬಾರ‌್ಸಿ ರೇಗುಸ್ತಿದ್ದ’ ಅಂದ. ಚೆನ್ನಬಸವಿ ರಂಗಾದಳು. ಯಂಕ್ಟಪ್ಪ ತಲೆ ತಗ್ಗಿಸಿ ‘ಇದು ಕುಲ. ಜಾತಿ ಯಾವ್ದಾದ್ರೇನಾ.. ಕಾಲ್ದಿಂದ ಈ ಊರ‌್ಲಿ ನಾವೆಲ್ಲ ಅಣ್ಣತಮ್ಮಂದಿರ ತರ ಅಂವಿ. ಕುಲ್ಕ ಮರ‌್ಯಾದಿ ಕೊಡ್ತಿನಿ. ಆದ್ರ ಇಲ್ದೆ ಇರ ಸುದ್ದಿ ತರದು ಯಾಕಾ.. ನಿಮ್ಗು ನಮ್ಗು ಎಲ್ಯಾ.. ನಿಮ್ನೆಣ್ಣ ನಾ ತಕ್ಕ ಹೋಗಿ ಮನ ತುಂಬುಸ್ಕಳಕಾದ್ದ. ನನ್ ಮಗ ಇಂತ ಕೆಲ್ಸ ಮಾಡಿರದು ನಿಜನಾ.. ಇದ ಒಪ್ಪಿರ‌್ಯಾ..’ ಅಂದ.
ಎಲ್ಲ ತಲಾಗೊಂದೊಂದು ಮಾತಾಡಿ ನೀಲನ್ನ ಕರೆಸಿ ಅಂದ್ರು. ಅಡಿನಿಂಗಿ ಓಡೋಡಿ ಬಂದು ‘ಏಯ್ ಜೋಡ ತಕ್ಕ ಹೊಡಿತಿನಿ ಕರಸು ಗಿರಸು ಅಂದ್ರ’ ಅಂತಂದು ನಡು ಕಟ್ಟಾಕೊ ನಿಂತಳು. ಹಾಗೆ ಚೆನ್ನಬಸವಿ ಕಡೆ ತಿರುಗಿ ‘ಇವ..ಇವಿದ್ದಳಲ್ಲ ನಲ್ಕ ನಲ್ಕ ನುಲಿದಿದ್ದೆಲ್ಲ.. ಗೊತ್ತಾಯ್ತ ನಾ ಯಾತಿಕ್ ಉಗಿತಿದ್ದಿ ಅಂತ’ ಅಂತಂತ ಯಂಕ್ಟಪ್ಪನ್ನ ಕೆಕ್ಕಳಿಸಿ ನೋಡಿ ‘ದೊಡ್ ಮುಸ್ಡಿಗೂ ಅಸ್ಟೆ ಚಿಕ್ ಮುಸ್ಡಿಗೂ ಅಸ್ಟೆ ನ್ಯಾಯ ನ್ಯಾಯನೆ’ ಅಂತಂದು ಶಿವನಂಜನ ಕಡೆಗೂ ತಿರುಗಿ ನಟಿಕೆ ಮುರಿದಳು. ಶಿವನಂಜ ದುರುಗುಟ್ಟಿದ. ನೀಲನ್ನ ಮದುವೆ ಆಯ್ತಿನಿ ಇಷ್ಟ ಪಟ್ಟಿನಿ ಅಂದೋನಿಗೆ ಕುಲ ತಪ್ಪು ಕಾಣಿಕೆ ಹಾಕಿ ತಿಂಗಳ ಮಟ್ಟಿಗೆ ಊರಿಂದ ಹೊರ ಹಾಕಿತು. ಚೆನ್ನಬಸವಿ ಕರೆದು ಈಗಾಗಲೇ ಕುಲದ ಕೆಲವರಿಗೆ ಇಳ್ಯ ಕೊಡದೆ ಬಾಯಿ ಮಾತಲ್ಲಿ ಹೇಳಿರೋದೆ ನಿಜ ಆದ್ರೆ ನಿನ್ನ ತಮ್ಮ ಮಂಜನಿಗೆ ನೀಲಳನ್ನು ಮದುವೆ ಮಾಡುವುದು ನಿನ್ನ ಜವಾಬ್ದಾರಿ. ಅದೂ ತಿಂಗ್ಳೊಳಗೆ ಮದ್ವ ಮಾಡಿ ಮುಗಿಸುವಂತೆ ತಾಕೀತು ಮಾಡಿತು.
----
ಮಂಜ ನೀರು ಕುಡಿದು ‘ತಕಕ್ಕ ಚೆಂಬ..ಸ್ಯಾನೆ ದಾವಿತ್ತು..’ ಅಂತಂದು ಸಿದ್ದಿ ಕೈಗೆ ಚೆಂಬು ಕೊಟ್ಟನು. ಶಿವಯ್ಯನೊಂದಿಗೆ ಮಾತಾಡುತ್ತಿರುವಾಗಲೆ ಜಗುಲಿ ಒರಗಿಕೊಂಡೇ ನೆಪ್ಪಿಗೆ ಜಾರಿ ಲೊಚಗುಟ್ಟುತ್ತ ಮಾತು ಕೇಳುತ್ತ ನಿಂತಿದ್ದ ಅಡಿನಿಂಗಿ ಕೋಲೂರಿಕೊಂಡು ಬಾಗಿಲ ಹತ್ತಿರ ಬಂದು ಕಿರು ಜಗುಲಿಯಲ್ಲಿ ತಿಕ ಊರಿದಳು. ಶಿವಯ್ಯನ ಹೆಂಡತಿ ಚೆಂಬು ಇಡಲು ಸೊಂಟ ಹಿಡಿದುಕೊಂಡು ಒಳ ನಡೆದಳು. ಮಂಜ ಅಡಿನಿಂಗಿ ಕೈಗೆ ಕಾಸು ಕೊಟ್ಟು ‘ಒಂದಾಕಂಡು ಎಲಡ್ಕ ತಕ್ಕ ಬತ್ತಿನಿ’ ಅಂತ ಎದ್ದ. ಅಡಿನಿಂಗಿ ಕೊಟ್ಟ ಕಾಸನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಮುಖದಲ್ಲೆ ನಗು ಬೀರಿದಳು.
ಅಲ್ಲಿ ನೀಲ ತೆಂಗಿನ ಮರ ಒರಗಿಕೊಂಡೇ ಮಂಜ ಕೊಟ್ಟಿದ್ದ ಬಾಳೆ ಹಣ್ಣು ಬ್ರೆಡ್ಡು ಬಿಸ್ಕಟ್ ತಿಂದು ಮುಗಿಸಿದ್ದಳು. ಸುಮ್ಮನಿರದ ಅವಳು ಅವನು ನಿಲ್ಲಿಸಿದ್ದ ಅಟ್ಲಾಸ್ ಸೈಕಲ್ ಬೆಲ್ಲನ್ನು ಒತ್ತಿ ಒತ್ತಿ ಟ್ರಿಣ್ ಟ್ರಿಣ್ ಅನ್ನಿಸಿ ಸದ್ದು ಮಾಡುತ್ತ ಅದನ್ನು ಹಿಂದಕ್ಕು ಮುಂದಕ್ಕು ಆಡಿಸಿ ಅಲ್ಲಾಡತರ ಮಾಡಿದ್ದಳು. ಸೀಟಿನ ಮೇಲಕ್ಕೆ ಮಣ್ಣು ಗುಪ್ಪೆ ಹಾಕಿದ್ದಳು. ಕ್ಯಾರಿಯರ್ ಮೇಲೆ ದಪ್ಪದಪ್ಪ ಕಲ್ಲು ಜೋಡಿಸಿದ್ದಳು. ಜೊತೆಗೊಂದಿಷ್ಟು ಅಕ್ಕಪಕ್ಕದ ಹೈಕಳು ನೋಡ್ತಾ ನಗಾಡ್ತ ಇದ್ದವು. ಮಂಜ ಇದನ್ನ ನೋಡಿ ರೇಗ್ತ ರೇಗ್ತ ಓಡಿ ಬಂದ. ನೀಲ ನನಗಲ್ಲ ಅನ್ನೊತರ ತೆಂಗಿನ ಮರ ಒರಗಿ ‘ಏ.. ರಾಜ್ಕುಮಾರುಂದು ಹಾಲುಜೇನು ಪಿಚ್ಚರಾಕಿದ್ದಾರಂತ ನನ್ನೂ ಕರ‌್ಕ ಹೋದಯ.. ಚೆನ್ನಗಿದ್ದಂತ.. ಅವ ರತ್ತ ಕಕ್ಕಂಡು ಸತ್ತೊದಳಂತ… ರಾಜ್ಕುಮಾರು ಗೋಳೋ ಅಂತ ಅತ್ತನಂತ.. ನೀ ಯಾವತ್ಯಾರ ನನ್ ನೆನ್ಕಂಡು ಅತ್ತಿದಯ.. ನನ್ಯಾವತ್ಯಾರ ಎಲ್ಲಿಗ್ಯಾರ ಕರ‌್ಕ ಹೋಗಿದಯ.. ನಾಯಿ ಮುದೇವಿ ಕಣ ಹೋಗು..’ ಅಂದಳು. ಮಂಜ ‘ನಿನ್ನ.. ನಿನ್ನಮಿ ಕರ‌್ಕ ಹೋಗದು.. ಥೂ ಲೋಪರ್ ಮುದೇವಿ.. ಹಲ್ ನೋಡು ಹಲ್ಲಾ.. ಹಲ್ತೀಡು ಹೋಗಿ ಸಟ್ಗ.. ಎಲ್ಲ ಪಾಚ್ಗಂಡವ..’ ಅಂತ ನಗ್ತಾನೇ ರೇಗಿಸಿದ. ನಿಂತಿದ್ದ ಹೈಕ ಗೊಳ್ಳಂತ ನಕ್ಕವು. ಅವಳು ‘ನೀ ತೀಡ್ಕ ಹೋಗು..’ ಅಂತ ಕಿಸಕ್ಕನೆ ನಕ್ಕಳು. ಅವನು ಸೈಕಲ್ ಹತ್ತಿ ಬೆಲ್ ಮಾಡ್ತಾ ಹೋದನು.
-ಎಂ.ಜವರಾಜ್
(ಮುಂದುವರಿಯುವುದು)
ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.