ಚಲಿಸುವ ಪಾತ್ರಗಳ ಮಾಸ್‌ ಕತೆಗಳ “ತಿರಾಮಿಸು”: ಡಾ. ನಟರಾಜು ಎಸ್‌ ಎಂ

ಶಶಿ ತರೀಕೆರೆ ಕನ್ನಡದ ಭರವಸೆಯ ಯುವ ಕತೆಗಾರ. ಈಗಾಗಲೇ ಯುವ ಬರಹಗಾರರ ಸೃಜನಶೀಲ ಬರಹಗಳಿಗೆ ನೀಡುವ ಟೋಟೋ ಪುರಸ್ಕಾರ, ಹಾಗು ಅವರ ಚೊಚ್ಚಲ ಪುಸ್ತಕ “ಡುಮಿಂಗ”ಕ್ಕೆ ಛಂದ ಪುಸ್ತಕ ಬಹುಮಾನ ಸೇರಿದಂತೆ ಇತರ ಬಹುಮಾನಗಳು ಕೂಡ ಲಭಿಸಿದೆ. ತಮ್ಮ ಮೊದಲ ಪುಸ್ತಕ “ಡುಮಿಂಗ” ಪ್ರಕಟವಾದ ನಾಲ್ಕು ವರ್ಷಗಳ ನಂತರ ಶಶಿಯವರು ತಮ್ಮ ಎರಡನೇ ಕಥಾ ಸಂಕಲನ “ತಿರಾಮಿಸು” ವನ್ನು ಹೊರತಂದಿದ್ದಾರೆ. ತಮ್ಮ ಸಾಹಿತ್ಯ ಪಯಣದ ಜೊತೆಜೊತೆಗೆ, ತಮ್ಮ ಪ್ರಕಾಶನದ ಮೂಲಕ ಕನ್ನಡದ ಯುವ ಬರಹಗಾರರನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿರುವ ವಸುಧೇಂದ್ರರವರು ಈ ಪುಸ್ತಕವನ್ನು ತಮ್ಮ ಛಂದ ಪುಸ್ತಕದ ಮೂಲಕ ಪ್ರಕಟಿಸಿದ್ದಾರೆ. ಇಬ್ಬರು ವ್ಯಕ್ತಿಗಳ ಚಿತ್ರಗಳನ್ನು ಚಿತ್ರಿಸಿ ಕಿರಣ್‌ ಮಾಡಾಳು ಪುಸ್ತಕದ ಮುಖಪುಟ ರಚಿಸಿದ್ದಾರೆ. ಈ ಎರಡು ವ್ಯಕ್ತಿಗಳ ಚಿತ್ರಗಳಲ್ಲಿ ಪುಸ್ತಕದಲ್ಲಿರುವ ಪುರುಷ ಕೇಂದ್ರಿತ ಕತೆಗಳ ಪಾತ್ರಗಳನ್ನು ನಾವು ಕಲ್ಪಿಸಿಕೊಳ್ಳಬಹುದು. ಈ ಪುಸ್ತಕದ ಮುದ್ರಣದ ಜವಾಬ್ದಾರಿಯನ್ನು ಟ್ರಿನಿಟಿ ಅಕಾಡೆಮಿ ಬೆಂಗಳೂರು ನಿರ್ವಹಿಸಿದ್ದರೆ, ಕರಡುಪ್ರತಿ ತಿದ್ದುವ ಕೆಲಸವನ್ನು ಪುನರ್ವಸು ಮಾಡಿದ್ದಾರೆ. ಈ ಪುಸ್ತಕದ ಬೆನ್ನುಡಿಯಲ್ಲಿ ಶಶಿಯವರ ಕಥನ ಕಲೆ ಕನ್ನಡದ ಗದ್ಯದ ಭರವಸೆಯೂ ಹೌದು ಎಂದು ವಿಕ್ರಮ ವಿಸಾಜಿ ಅಭಿಪ್ರಾಯಪಟ್ಟಿದ್ದಾರೆ.

ಶಶಿ ತರೀಕೆರೆಯವರ ” ತಿರಾಮಿಸು” ಪುಸ್ತಕವನ್ನು ಖರೀದಿಸಿ ಅನೇಕ ತಿಂಗಳುಗಳೇ ಆಗಿತ್ತು. ಒಂದೆರಡು ಬಾರಿ ಕೆಲವು ಪುಟಗಳನ್ನು ತಿರುವು ಹಾಕುವ ಪ್ರಯತ್ನ ಮಾಡಿದ್ದೇನಾದರೂ ಕತೆಗಳ ಕ್ಲಿಷ್ಟವಾದ ನಿರೂಪಣೆಯ ಕಾರಣಕ್ಕೆ ಪುಸ್ತಕದ ಯಾವ ಕತೆಯನ್ನು ಪೂರ್ತಿಯಾಗಿ ಓದಲು ಸಾಧ್ಯವಾಗಿರಲಿಲ್ಲ. ಕೆಲವು ಕತೆಗಳು ಸರಾಗವಾಗಿ ಓದಲು ಸಾಧ್ಯವಾಗದ, ಒಂದು ಓದಿಗೆ ಸುಲಭವಾಗಿ ದಕ್ಕದ ವಿಭಾಗಕ್ಕೆ ಸೇರುವ ಈ ಪುಸ್ತಕದ ಕತೆಗಳನ್ನು ಲೇಖಕ ಹಠ ಹಿಡಿದು ಬರೆದಿರುವಂತೆ ಕಂಡಿದ್ದ ಕಾರಣಕ್ಕೆ ಒಬ್ಬ ಓದುಗನಾಗಿ ನಾನೂ ಕೂಡ ಹಠಹಿಡಿದು ಒಂದೊಂದೇ ಕತೆಗಳನ್ನು ಕಳೆದ ವಾರದಿಂದ ಮತ್ತೆ ಓದುತ್ತಾ ಓದೆ. ಅಚ್ಚರಿ ಎಂದರೆ ಮೇಲು ನೋಟಕ್ಕೆ ತುಂಬಾ ಕ್ಲಿಷ್ಟವಾಗಿ ಕಾಣುವ ಗುಣವುಳ್ಳ ಕತೆಗಳನ್ನು ಓದುತ್ತಾ ಓದಂತೆ ಕತೆಗಾರನ ಕಥನ ಶೈಲಿ ದಕ್ಕುತ್ತಾ ಹೋಗುತ್ತದೆ. ಕತೆಗಾರನ ಕಥನ ಶೈಲಿ ದಕ್ಕಿದ ಮೇಲೆ ಓದುಗನ ಓದು ಕೂಡ ಸರಾಗವಾಗುತ್ತದೆ.

ಓದು ಸರಾಗವಾಗಬೇಕಾಗಿರುವಾಗ, ಈ ಕತೆಗಾರ ತನ್ನ ಶೈಲಿಯನ್ನು ಮೂಡಿಸಲು ಪಟ್ಟಿರುವ ಶ್ರಮ ಪ್ರತಿ ಪುಟದ ಪ್ರತಿ ಪದಗಳಲ್ಲೂ ನಾವು ಕಾಣಬಹುದು. ಒಂದು ಕತೆಯನ್ನು ಓದುಗನಿಗೆ ದಾಟಿಸಲು ಇಷ್ಟೆಲ್ಲಾ ಕಷ್ಟಪಡಬೇಕಿತ್ತೇ ಅಂತ ಅನಿಸಿದರೂ ಅದು ತನಗೆ ತೋಚಿದ ಕಥನ ಕಲೆ ಎನ್ನುವುದನ್ನು ಕತೆಗಾರ ಪ್ರತಿ ಕತೆಗಳಲ್ಲೂ ಹೇಳುತ್ತಾ ಬಂದಿದ್ದಾರೆ. ಸ್ವಾರಸ್ಯಕರ ಸಂಗತಿ ಎಂದರೆ ಪ್ರತಿ ಲೇಖಕರದು ಒಂದು ಸಿಗ್ನೇಚರ್ ಸ್ಟೈಲ್ ಅಥವಾ ಅವರದೇ ಸಿದ್ದ ಮಾದರಿ ಇರುತ್ತದೆ. ಅಂತಹುದೊಂದು ಸಿದ್ದ ಮಾದರಿಯನ್ನು ಶಶಿಯವರು ತಮ್ಮ ಕಥನ ಶೈಲಿಯಲ್ಲಿ ನಿರೂಪಣೆಯ ಮೂಲಕ ಓದುಗರ ಮುಂದೆ ತೆರೆದಿಡುತ್ತಾ ಹೋಗುತ್ತಾರೆ. ಇನ್ನು ಇವರ ಸಿದ್ದ ಮಾದರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ಆಸಕ್ತಿದಾಯಕ ಅಂಶಗಳು ನಮಗೆ ಕಾಣಸಿಗುತ್ತವೆ.

ಭೂತ, ಭವಿಷ್ಯ, ವರ್ತಮಾನದ ಘಟನೆಗಳು

ಶಶಿಯವರ ಈ ಪುಸ್ತಕದ ಎಲ್ಲಾ ಕತೆಗಳಲ್ಲೂ ಮೊದಲಿಗೆ ಒಂದು ಘಟನೆ ಸಂಭವಿಸುತ್ತದೆ. ಆ ಘಟನೆಗೆ ತಳುಕು ಹಾಕಿಕೊಂಡು ಪಾತ್ರಗಳು ನಮ್ಮೆದುರು ಚಲನಚಿತ್ರದಂತೆ ನಡೆದಾಡಲು ಶುರು ಮಾಡುತ್ತವೆ. ಆ ನಡೆದಾಡುವ ಪ್ರಕ್ರಿಯೆಯಲ್ಲಿ ಕಥಾಪರಿಸರ ಗೋಚರಿಸುತ್ತಾ ಹೋಗುತ್ತದೆ. ನಡೆದ ಘಟನೆಗೆ ಪೂರಕವಾಗಿ ಚೈನ್ ಲಿಂಕಿನ ಹಾಗೆ ಮತ್ತೊಂದಷ್ಟು ಘಟನೆಗಳು ವಾಸ್ತವದಲ್ಲಿ ಅಥವಾ ಫ್ಲಾಸ್ ಬ್ಯಾಕ್ ನಲ್ಲಿ ನಡೆಯುತ್ತಾ ಇನ್ನೊಂದಷ್ಟು ಪಾತ್ರಗಳು ಮತ್ತು ಕಥಾಪರಿಸರ ನಮಗೆ ದಕ್ಕುತ್ತಾ ಹೋಗುತ್ತವೆ. ಈ ಎಲ್ಲಾ ಘಟನೆಗಳು ಕತೆಯಲ್ಲಿ ಭೂತದಲ್ಲಿ ಸಂಭವಿಸಿರಬಹುದು, ವರ್ತಮಾನದಲ್ಲಿ ಸಂಭವಿಸುತ್ತಿರುತ್ತದೆ, ಅಥವಾ ಭವಿಷ್ಯದಲ್ಲಿ ಸಂಭವಿಸುತ್ತವೆ. ಪಾತ್ರಗಳು ಸಹ ಆಯಾ ಕಾಲಕ್ಕೆ ತಕ್ಕಂತೆ ತಮ್ಮ ವಯೋಧರ್ಮಕ್ಕೆ ಅನುಗುಣವಾಗಿ ಸ್ಥಾನ ಪಲ್ಲಟ ಮಾಡಿಕೊಂಡು ಪಾತ್ರಗಳಲ್ಲಿ ಜೀವಿಸತೊಡಗುತ್ತವೆ.

ಪುಸ್ತಕದ ಕೆಲವು ಕತೆಗಳ ಶುರುವಿನಲ್ಲಿ ಕಾಣುವ ಘಟನೆಗಳಿಗೆ ಒಂದಷ್ಟು ಉದಾಹರಣೆಗಳು ಹೀಗಿವೆ:
೧. “ಉಷ್ಣೆ ಕಾಣೆಯಾಗಿ ಮೂರು ದಿನವಾಗಿತ್ತು” (ಕತೆ: ದೇವದಾಸನ ಮಿಸ್ಟೇಕು) ಭೂತ ಕಾಲ;
೨. “ಹೀಗೆ ಎಲ್ಲವೂ ಒಂದು ರಾತ್ರಿಯ ಅಂತರದಲ್ಲಿ ಮುಗಿಯುತ್ತದೆ ಎಂದು ಬೋರ್ಡು ನೋಡದೆ ಬಸ್ಸು ಹತ್ತಿದೆ” (ಕತೆ: ಸುನಯನ) ಭವಿಷ್ಯ ಕಾಲ;
೩. ಅದೊಂದು ನಿರ್ಜನ ರಾತ್ರಿ ಮರದ ಕೊರಡೊಂದು ದೊಪ್ಪನೆ ನೆಲಕ್ಕೆ ಬಿತ್ತು (ಕತೆ: ಅರ್ಧ ಹೆಂಡತಿ) ವರ್ತಮಾನ ಕಾಲ.

ಘಟನೆಗಳ ಶುರುವಾತು ಒಂದು ಸಾಲಿನಿಂದ ಪ್ರಾರಂಭವಾದರೂ ಅವು ಮುಂದೆ ದೊಡ್ಡ ಘಟನೆಯ ಸ್ವರೂಪವನ್ನು ಪಡೆಯುತ್ತಾ ಹೋಗುತ್ತವೆ. ಯಾವುದೇ ಘಟನೆ ಘಟಿಸಿದಾಗ ಅದು ವೈಯಕ್ತಿಕ ಘಟನೆ ಆಗಿದ್ದರೂ ಹೆಚ್ಚಿನ ಸಂರ್ಭದಲ್ಲಿ ಒಂದು ಸಮೂಹವು ಸಹ ಆ ಘಟನೆಯ ಭಾಗವಾಗುವ ಕಾರಣಕ್ಕೆ “ಕಂಟ್ರಿ ಪಿಸ್ತೂಲು”, “ಪಕಡು”, ” ತಿರಾಮಿಸು”, ಮತ್ತು “ಸಂತೆ ಮೈದಾನ” ಕತೆಗಳಲ್ಲಿ ಘಟನೆಗಳು ಮಾಸ್‌ ಸ್ವರೂಪ ಪಡೆಯುತ್ತವೆ. ಮಾಸ್‌ ಸ್ವರೂಪ ಪಡೆದ ಘಟನೆ ಅಂದ ಮೇಲೆ ಹೆಚ್ಚು ಹೆಚ್ಚು ಪಾತ್ರಧಾರಿಗಳು ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಕಾರಣಕ್ಕೆ ಈ ಪುಸ್ತಕದಲ್ಲಿನ ಐದು ಕತೆಗಳು ಸಣ್ಣ ಕತೆಗಳಾಗದೆ ನೀಳ್ಗತೆಗಳಾಗಿವೆ. ಘಟನೆಗಳು ಕತೆಗಳಿಗೆ ಮುಖ್ಯ ಎನ್ನುವುದನ್ನು ಲೇಖಕರು “ದಿನವೂ ಅನಿಶ್ಚಿತವಾದದ್ದು ಏನಾದರು ಒಂದು ಘಟಿಸುತ್ತಿರಬೇಕು, ಘಟಿಸಿದಾಗಲೇ ನಾನು ಇನ್ನಷ್ಟು ಚಂದವಾಗಿ ಬದುಕಲು ಸಾಧ್ಯ” ಎನ್ನುವ ಸಾಲನ್ನು ಪಾತ್ರವೊಂದರ ಮೂಲಕ “ಸುನಯನ” ಕತೆಯಲ್ಲಿ ಹೇಳಿಸಿದ್ದಾರೆ.

ಚಲಿಸುವ ಪಾತ್ರಗಳು

ಶಶಿ ಅವರ ಸೃಷ್ಟಿಸಿರುವ ಮುಖ್ಯ ಪಾತ್ರಗಳು ಚಲನೆಯುಳ್ಳ ಪಾತ್ರಗಳು. ಅವರ ಯಾವ ಪಾತ್ರಗಳು ಕೂಡ ಸುಮ್ಮನೆ ಒಂದು ಕಡೆ ಕೂರುವುದಿಲ್ಲ. ದೈಹಿಕವಾಗಿ ಅಥವಾ ಮಾನಸಿಕವಾಗಿ ಚಲಿಸುತ್ತಲೇ ಇರುತ್ತವೆ. ಪಾತ್ರಗಳು ಚಲಿಸಿದಾಗಲೇ ಕಥಾ ಪರಿಸರದ ಮತ್ತು ಪಾತ್ರದ ಮನಸ್ಥಿತಿಯ ವಿವಿಧ ಮಜಲುಗಳು ಓದುಗನಿಗೆ ಗೋಚರವಾಗುವುದು. ಕೆಲವು ಕತೆಗಳಲ್ಲಿ ಲೇಖಕರು ಕಥಾಪಾತ್ರಗಳನ್ನು ಬಸ್ಸಿನಲ್ಲಿ, ಇಲ್ಲ ರೈಲಿನಲ್ಲಿ, ಇಲ್ಲ ನಡೆಸುತ್ತಲೇ ಕರೆದೊಯ್ಯುತ್ತಾರೆ. ಹಾಗೆ ಕರೆದೊಯ್ಯುವಾಗ ಆ ವ್ಯಕ್ತಿಯ ಚಿತ್ರಣದ ಜೊತೆಗೆ ಅಲ್ಲಿನ ಪರಿಸರದ ಚಿತ್ರಣವನ್ನು ಇಂಚು ಇಂಚು ವಿವರಣೆಯೊಂದಿಗೆ ತೆರೆದಿಡುತ್ತಾರೆ. ಇಷ್ಟೆಲ್ಲಾ ಸೂಕ್ಷ್ಮ ವಿವರಣೆಗಳು ಕತೆಗಳಿಗೆ ಅವಶ್ಯಕತೆ ಇದೆಯ ಎನ್ನುವ ಮಟ್ಟಿಗೆ ಲೇಖಕರು ವಿವರಣೆ ನೀಡುತ್ತಾರೆ. ಹಾಗೆಯೇ ಪಾತ್ರಗಳನ್ನು ಒಮ್ಮೊಮ್ಮೆ ಒಂದು ಊರಿನಿಂದ ಮತ್ತೊಂದು ಊರಿಗೆ ಕರೆದೊಯ್ಯುತ್ತಾರಾದರೂ ಅಲ್ಲಿ ತಲುಪಿದ ಊರಿನ ಹೆಸರು ಹೇಳುತ್ತಾರ ಹೊರತು ಕಥಾಪಾತ್ರಗಳು ಯಾವ ಊರಿನಿಂದ ಪಯಣ ಮಾಡಿದವು ಎನ್ನುವ ಮಾಹಿತಿ ಇರುವುದಿಲ್ಲ. ಉದಾಹರಣೆಗೆ ಖಾದೀಮ ಮತ್ತು ಬಾವ್ಲಾಳನ್ನು “ಕಂಟ್ರಿ ಪಿಸ್ತೂಲ್” ಕತೆಯಲ್ಲಿ ಕತೆಗಾರ ಗೋವಾಕ್ಕೆ ಬಸ್ಸಿನಲ್ಲಿ ತಂದು ನಿಲ್ಲಿಸುತ್ತಾರೆ. ಆದರೆ ಅವರಿಬ್ಬರು ಎಲ್ಲಿಂದ ಪಯಣ ಶುರು ಮಾಡಿದರು ಎನ್ನುವ ಮಾಹಿತಿ ಸರಿಯಾಗಿ ಇರುವುದಿಲ್ಲ. ಆ ಕತೆಯಲ್ಲಿ ಹಲವು ಸ್ಥಳಗಳ ಉಲ್ಲೇಖ ಇದೆಯಾದರೂ ಮತ್ತೆ ಮತ್ತೆ ಓದಿದರೂ ಅವರ ಪಯಣದ ಶುರು ಎಲ್ಲಿಯದು ಎನ್ನುವುದು ತಿಳಿಯದಾಗುತ್ತದೆ. “ಸುನಯನ” ಕತೆಯಲ್ಲಿಯೂ “ಸುರೇಶ” ಹೈದರಾಬಾದ್‌ ತಲುಪುತ್ತಾನಾದರೂ ಅವನು ಎಲ್ಲಿಂದ ಬಸ್ಸು ಹತ್ತಿದ ಎನ್ನುವ ವಿವರಣೆ ಸಿಗುವುದಿಲ್ಲ. ಪಾತ್ರಗಳು ಎಲ್ಲಿಂದ ಎಲ್ಲಿಗೆ ಯಾಕೆ ಹೋದರು, ಅಲ್ಲಿ ಹೋಗಿ ಏನು ಮಾಡಿದರು, ಹಾಗೆ ಅವರು ಮಾಡಲು ಕಾರಣವೇನು ಎನ್ನುವುದನ್ನು ಕಂಡುಕೊಳ್ಳಲು ಅನೇಕ ಕತೆಗಳಲ್ಲಿ ಓದುಗರು ತಿಣುಕಬೇಕಾಗುತ್ತದೆ. ಅನೇಕ ಪಾತ್ರಗಳು ಚಲಿಸುವುದ ಗಮನಿಸಿದಾಗ ಮುಖ್ಯ ಪಾತ್ರಗಳೆಲ್ಲವೂ “ಕೂತುಕೊಂಡರೆ ಹೊಟ್ಟೆ ತುಂಬಲ್ಲ. ದುಡಿದಾದರೂ ತಿನ್ನಬೇಕು, ಇಲ್ಲ ಕದ್ದಾದರೂ ತಿನ್ನಬೇಕು” ಎನ್ನುವ ಕಾರಣಕ್ಕಾಗಿಯೇ ಚಲಿಸುವಂತವು ಎನ್ನಬಹುದು. ಇನ್ನೂ ಕಾಮಕ್ಕಾಗಿ, ದೇಹಗಳ ಚಲನೆ ಹಸಿಬಿಸಿಯಾಗಿ ಅಲ್ಲದಿದ್ದರೂ ಅನೇಕ ಕತೆಗಳಲ್ಲಿ ಚಲಿಸಬೇಕಂತಲೇ ಚಲಿಸುತ್ತವೆ.

ಸ್ತ್ರೀ ಮತ್ತು ಪುರುಷ ಪಾತ್ರಗಳ ವೃತ್ತಿಗಳು

ಶಶಿಯವರ ಕತೆಗಳಲ್ಲಿನ ಹಲವು ಪಾತ್ರಗಳು ಹೊಟ್ಟೆಪಾಡಿಗಾಗಿ ಕಂಡುಕೊಂಡ ದಾರಿಗಳು ಸಾಧಾರಣವಾಗಿ ಕೆಲವೇ ಮಂದಿ ಮಾಡುವ ವೃತ್ತಿಗಳಾಗಿರುತ್ತವೆ. ಈ ಕತೆಗಳಲ್ಲಿ ಕೆಲವರು ದುಡಿದು ತಿಂದರೆ ಇನ್ನು ಕೆಲವರು ಕಳ್ಳತನ ಮಾಡಿಯೋ, ಜೂಜಾಡಿಯೋ, ಜನರನ್ನು ಮರಳು ಮಾಡಿಯೋ ಹಣ ಮಾಡುತ್ತಾರೆ ಅಥವಾ ಜೀವನದೂಗಿಸುತ್ತಾರೆ. ಪುರುಷ ಪಾತ್ರಗಳ ಕೆಲವು ವೃತ್ತಿಗಳ ಕುರಿತು ನೋಡಿದರೆ ಮಿಕ್ಸಿ ರಿಪೇರಿಯ ಅಲೀಲಿ, ಹಾವಾಡಿಗ ವೃತ್ತಿಯ ತಿರಾಮಿಸು, ಉರಗ ಸಂರಕ್ಷಕ ವೃತ್ತಿಯ ಜೀವದಾನಿ, ಚಪ್ಪಲಿ ಹೊಲೆಯುವ ರಮಾಕಾಂತ, ಕ್ಷೌರದ ಕೆಲಸ ಮಾಡುವ ಉಷ್ಣ, ಅಪಘಾತವಾದ ಸ್ಥಳಗಳಲ್ಲಿ ಆಭರಣ ದುಡ್ಡು ಕದಿಯುವ ಚಾಮರ, ಕಬಡ್ಡಿ ಚೆಡ್ಡಿ ಮಾರುವ ತಾಮ್ರ, ಕೋತಿಯಾಡಿಸುವ ಅಮೇರಿಕಾ ಹೀಗೆ ತರಾವರಿ ವೃತ್ತಿಯ ಪಾತ್ರಗಳು ಶಶಿಯವರ ಈ ಪುಸ್ತಕದ ಉದ್ದಕ್ಕೂ ಸಿಗುತ್ತಾರೆ. ಎಷ್ಟೋ ಸಲ ಒಂದು ಪಾತ್ರ ಒಂದೇ ಕೆಲಸವನ್ನು ಮಾಡದೆ ಸಿಕ್ಕ ಸಿಕ್ಕ ಹಲವು ಕೆಲಸಗಳನ್ನು ಮಾಡುವುದೂ ಉಂಟು.. ಉದಾಹರಣೆಗೆ “ಪಕಡು” ಕತೆಯಲ್ಲಿ ಪಕಡು ಮೊದಲಿಗೆ ಗಿಡ ಮೂಲಿಕೆಗಳನ್ನು ಮಾರುವ ವೃತ್ತಿ ಮಾಡಿದರೆ, ನಂತರ ಎಣ್ಣೆ ಮಾಲೀಸು ಮಾಡುವ ಕೆಲಸ ಮಾಡುತ್ತಾನೆ, ಮಧ್ಯೆ ಮಧ್ಯೆ ಬಸ್ ಡ್ರೈವರ್ ಕೆಲಸ ಕೂಡ ಮಾಡುತ್ತಾನೆ, ಕೊನೆಗೆ ದೇವರನ್ನು ಅವಗಾನಿಸಿಕೊಂಡ ಹೆಣ್ಣೊಬ್ಬಳಿಗೆ ಸಹಾಯಕನಾಗಿ ನಿಲ್ಲುತ್ತಾನೆ. ಇನ್ನು ಸ್ತ್ರೀ ಪಾತ್ರಗಳ ವೃತ್ತಿಗಳ ಮೇಲೆ ಕಣ್ಣಾಡಿಸಿದರೆ ಸಂತೆಯಲ್ಲಿ ಕೋಳಿ ಮಾರುವ ಗಿರಿಜಾ, ಬುಗುಡಿಯಮ್ಮನ ಅವಗಾಹನೆ ಮಾಡಿಕೊಂಡು ಜನರ ಪಾಲಿಗೆ ದೇವರಾಗುವ ಕಾಂತಾಬಾಯಿ, ಹವೇಲಿ ಮಾಲೀಕರಾದ ಲಂಬಾ, ಬಾವ್ಲಾ, ಕಾಫಿ ಎಸ್ಟೇಟಿನಲ್ಲಿ ರೈಟರ್‌ ಕೆಲಸ ಮಾಡುವ ಜೋಗುಳ ಕಡಮೆ, ಶನಿ ಮಹಾತ್ಮನ ಫೋಟೋ ಕತ್ತಿಗೆ ನೇತುಹಾಕಿಕೊಂಡು ಬಿಕ್ಷೆ ಬೇಡುವ ಪೂಂಕುಡಿ, ಬೇರೆಯವರ ತೋಟದಲ್ಲಿ ಹಣ್ನು ಹಂಪಲು ಕದಿಯುವ ಕಿಶೋರಿ, ಹೀಗೆ ಸ್ತ್ರೀ ಪಾತ್ರಗಳ ವೃತ್ತಿಯೂ ಬೇರೆ ಬೇರೆಯದೇ ಲೋಕಗಳನ್ನು ಓದುಗರಿಗೆ ಪರಿಚಯ ಮಾಡಿಸುತ್ತವೆ. “ಸಂತೆ ಮೈದಾನ” ಕತೆಯಲ್ಲಂತೂ ಸಂತೆ ಮೈದಾನ ಎಂಬ ಏರಿಯಾದ ಕತೆ ಹೇಳುವ ಕಾರಣಕ್ಕೆ ಹತ್ತು ಹಲವು ಬಗೆಯ ವೃತ್ತಿಯ ಜನಗಳನ್ನು ನಾವು ಏಕಕಾಲಕ್ಕೆ ಒಂದೇ ಜಾಗದಲ್ಲಿ ನೋಡಬಹುದು. ಇವರೆಲ್ಲರದೂ ಉದರನಿಮಿತ್ತಂ ನಾನಾ ವೇಷ ಎನ್ನಬಹುದು.

ಸಂತ್ರಸ್ತ ಹೆಣ್ಣು ಗಂಡು
ತಿರಾಮಿಸು ಪುಸ್ತಕದಲ್ಲಿ ಸೂಕ್ಷ್ಮವಾಗಿ ಹುಡುಕಿದರೆ ಅನೇಕ ಸಂತ್ರಸ್ತರು ಸಿಗುತ್ತಾರೆ. ಬೇರೆಯವರ ಕಾರಣಕ್ಕೆ ನೋವು ತಿನ್ನುತ್ತಿರುವವರನ್ನು, ಬದುಕು ಕಳೆದುಕೊಂಡವರನ್ನು ನಾವಿಲ್ಲಿ ಸಂತ್ರಸ್ತರು ಎನ್ನಬಹುದು. ಅದರಲ್ಲೂ ಸ್ತ್ರೀ ಪಾತ್ರದ ಸಂತ್ರಸ್ತರು ಪುಸ್ತಕದ ಉದ್ದಕ್ಕೂ ಸಿಗುತ್ತಾರೆ. ಒಂದೆರಡು ಕತೆ ಬಿಟ್ಟರೆ ಪ್ರತಿ ಕತೆಗಳಲ್ಲಿನ ಹೆಣ್ಣು ಪಾತ್ರಗಳಿಗೆ ಸಂಸಾರ ಅನ್ನುವುದು ಹಣೆಯಲ್ಲಿ ಬರೆದಿಲ್ಲ ಅನ್ನುವುದನ್ನು ಕತೆಗಾರ ಪರೋಕ್ಷವಾಗಿ ಹೇಳುತ್ತಾ ಹೋಗುತ್ತಾರೆ., ಒಂದು ಕತೆಯಲ್ಲಂತೂ “ತಮಾಷೆಯೆಂದರೆ ರೇಷನ್ನು ಕಾರ್ಡಿನಲ್ಲಿ ಮಾತ್ರ ಗಂಡ ಹೆಂಡತಿಯರ ಫೋಟೋ ನೋಡಲು ಸಿಗುತ್ತಿತ್ತೇ ಹೊರತು ಇನ್ನುಳಿದ ಯಾವುದರಲ್ಲೂ ಇವರಿಬ್ಬರು ಗಂಡ ಹೆಂಡತಿ ಎಂದು ಹೇಳುವುದಿರಲಿ ಊಹಿಸಿಕೊಳ್ಳುವುದು ಆಶ್ಚರ್ಯಕರ” ಎನ್ನುವ ಸಾಲನ್ನು ಬರೆದಿದ್ದಾರೆ. ಹಾಗೆಯೇ ಗಂಡು ಪಾತ್ರಗಳನ್ನು ಸೃಷ್ಟಿಸುವಾಗ ಉಡಾಫೆಯಿಂದ ಕೂಡಿದ ವ್ಯಕ್ತಿತ್ವದ, ಕಚ್ಚೆಹರುಕುತನವಿರುವ, ಪಾತ್ರಗಳ ಹಾಗೆ ಸಂತ್ರಸ್ತ ಪಾತ್ರಗಳನ್ನು ಸಹ ಸೃಷ್ಟಿಸಿದ್ದಾರೆ.

ಪ್ರತಿ ಕತೆಗಾರನಿಗೆ ತನ್ನದೇ ಶೈಲಿಯಲ್ಲಿ ಕತೆಯನ್ನು ಓದುಗರ ಮುಂದಿಡುವ ಹಪಾಹಪಿ ಇರುತ್ತದೆ. ಕೆಲವರು ಅಚ್ವುಕಟ್ಟಾಗಿ ಕತೆ ಕಟ್ಟಿ ಓದುಗರನ್ನು ಹಿಡಿದಿಡಲು ಸಫಲರಾದರೆ ಇನ್ನೂ ಕೆಲವು ಲೇಖಕರು ಸಂಕೀರ್ಣ ಕಥಾಹಂದರ ಮಾಡಿ ಓದುಗರನ್ನು ತಲುಪಲು ವಿಫಲರಾಗಿಬಿಡುವ ಅಪಾಯವಿದೆ. ಅಂತಹ ಅಪಾಯದ ಲಕ್ಷಣಗಳನ್ನು ಶಶಿಯವರ ಈ ಪುಸ್ತಕದ ಅನೇಕ ಕತೆಗಳಲ್ಲಿ ಕಾಣಬಹುದು. ಕಥಾಹಂದರವನ್ನು ಕ್ರೋನಾಲಜಿಕಲ್ಲಿ ಲಾಜಿಕಲ್‌ ಆಗಿ ಎಣೆದರೆ ಶಶಿಯವರ ಕತೆಗಳು ಇನ್ನೂ ಹೆಚ್ಚು ಓದುಗರನ್ನು ತಲುಪಲು ಸಫಲವಾಗಬಹುದು. ಈಗಾಗಲೆ ಅವರ ಕತೆಗಳ ಪಾತ್ರಗಳ ಹೆಸರುಗಳ ಬಗ್ಗೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೇಖಕರು ಕೂಡ “ಸಂತೆ ಮೈದಾನ” ಕತೆಯಲ್ಲಿ ಇವರ ಕತೆಗಳ ಪಾತ್ರಗಳ ಹೆಸರುಗಳ ವೈವಿಧ್ಯತೆಯ ಬಗ್ಗೆ ಬರೆದಿದ್ದಾರೆ ಕೂಡ. ಆದರೂ ಪಾತ್ರಗಳ ಹೆಸರುಗಳನ್ನೇ ಪುಸ್ತಕದ ಶೀರ್ಷಿಕೆಗೆ ಮತ್ತು ಕತೆಗಳ ಶೀರ್ಷಿಕೆಗಳಿಗೆ ಬಳಸಿಕೊಳ್ಳುವ ಹಠಕ್ಕೆ ಬಿದ್ದ ಕಾರಣ ಕೆಲವು ಕತೆಗಳ ಶೀರ್ಷಿಕೆಗೂ ಕತೆಗೂ ಸಂಬಂಧವೇ ಇಲ್ಲ ಅನಿಸುತ್ತದೆ. ಹಾಗೆಯೇ “ಅರ್ಧ ಹೆಂಡತಿ” ಎಂಬ ಕತೆ ಬರೆಯುವಾಗ ತೋಳದಿಂದ ದಾಳಿಗೊಳಗಾದ ವ್ಯಕ್ತಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸದೇ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಮತ್ತು ಪಶುವೈದ್ಯರನ್ನು ಚಿತ್ರಿಸಿರುವ ರೀತಿ ನಿಜಕ್ಕೂ ತಪ್ಪು. ಕೇವಲ ಟೆಕ್ನಿಕಲ್‌ ವಿಷಯಗಳನ್ನು ಕಲೆ ಹಾಕಿ ಕತೆ ಬರೆದರೆ ಆಗುವ ಅನಾಹುತಗಳಿಗೆ ಈ ಕತೆ ಒಂದು ಉದಾಹರಣೆ.

ಒಟ್ಟಾಗಿ ಈ ಪುಸ್ತಕದ ಮೂಲಕ ಕನ್ನಡಕ್ಕೆ ದೀರ್ಘವಾದ ಕತೆಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಶಶಿಯವರು ತುಂಬಾ ಶ್ರಮಿಸಿದ್ದಾರೆ. ಘಟನೆ, ಕಥಾ ಪರಿಸರ, ಕಥಾ ಪಾತ್ರಗಳು, ಸಂಭಾಷಣೆಯ ಶೈಲಿ ಇವುಗಳನ್ನು ನಾವೇ ನಮ್ಮ ಮನಸಿನಲ್ಲಿ ಕಲ್ಪಿಸಿಕೊಂಡು ಶಶಿಯವರ ಸಿದ್ದ ಮಾದರಿ ಕತೆಗಳನ್ನು ಓದಿದರೆ ಖಂಡಿತಾ ಈ ಪುಸ್ತಕವನ್ನು ಶ್ರಮಪಟ್ಟು ಸರಾಗವಾಗಿ ಓದಬಹುದು. ಶಶಿಯವರು ಯಾವ ಕತೆಗಳಿಗೂ ಯಾವುದೇ ತಾರ್ಕಿಕ ಅಂತ್ಯ ನೀಡದ ಕಾರಣ ಆ ಅಂತ್ಯಗಳನ್ನು ಓದುಗರೇ ಕಲ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇವರ ಕತೆಗಳನ್ನು ಓದುತ್ತಿದ್ದರೆ ಇವುಗಳು ಚಿತ್ರಕತೆಗೆ ತುಂಬಾ ಸೂಕ್ತವಾದ ಬರಹಗಳು ಅಂತ ಯಾಕೋ ಪದೇ ಪದೇ ಅನಿಸುತ್ತದೆ. ಚೂರು ತಿದ್ದಿ ತೀಡಿದರೆ ಚಲನಚಿತ್ರಗಳಿಗೆ ಇವರ ಕತೆಗಳು ಒಳ್ಳೆಯ ಕತೆಗಳಾಗುವ ಸಾಧ್ಯತೆಗಳಿವೆ. ಶಶಿ ತರೀಕೆರೆಯವರು “ತಿರಾಮಿಸು” ಎಂಬ ತಮ್ಮ ಎರಡನೇ ಪುಸ್ತಕದ ಮೂಲಕ ಕನ್ನಡದ ಓದುಗರಿಗೆ ಒಂದಷ್ಟು ಚಾಲೆಂಜಿಂಗ್‌ ಕತೆಗಳನ್ನು ನೀಡಿರುವುದಕ್ಕೆ ಅಭಿನಂದಿಸುತ್ತೇನೆ. ಅವರ ಲೇಖನಿಯಿಂದ ಇನ್ನಷ್ಟು ಒಳ್ಳೆಯ ಕತೆಗಳು ಮೂಡಲಿ ಎಂದು ಈ ಮೂಲಕ ಹಾರೈಸುತ್ತೇನೆ.

ಡಾ. ನಟರಾಜು ಎಸ್‌ ಎಂ

ಕೃತಿ: ತಿರಾಮಿಸು

ಪ್ರಕಾರ: ಕಥಾಸಂಕಲನ

ಲೇಖಕರು: ಶಶಿ ತರೀಕೆರೆ

ಬೆಲೆ: ರೂ. 210/-

ಪ್ರತಿಗಳಿಗಾಗಿ ಸಂಪರ್ಕಿಸಿ: 9945939436

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Ashfaq Peerzade
Ashfaq Peerzade
10 months ago

ತುಂಬಾ ಆಳದ ವಸ್ತು ನಿಷ್ಠ ವಿಮರ್ಶೆ..
ಕಥೆಗಾರ ಮತ್ತು ವಿಮರ್ಶಕ ಇಬ್ಬರಿಗೂ ಅಭಿನಂದನೆಗಳು.

ಎ.ಜವರಾಜ್
ಎ.ಜವರಾಜ್
10 months ago

ರಿವ್ಯೂ ಮಾರ್ಮಿಕವಾಗಿದೆ. ತೀಕ್ಷ್ಣವಾಗಿದೆ. ಹೇಳಬೇಕಾದುದನ್ನು ಸಂಕ್ಷಿಪ್ತವಾಗಿ ಹೇಳಿದ್ದೀರಿ.

MANJURAJ
MANJURAJ
10 months ago

ಕೆಲಸದ ಬಾಹುಳ್ಯ ಮತ್ತು ಲೌಕಿಕ ಜಂಜಡಗಳಿಂದ ಕಳೆದ ಕೆಲವು ಸಲದ ಪಂಜುವನ್ನು ಗಮನಿಸಲು ಆಗಿರಲಿಲ್ಲ. ನೀವು ಕಳಿಸಿದ ನಿಮ್ಮ ಬರೆಹದ ಲಿಂಕನ್ನು ಈಗ ಓಪನಿಸಿ ಓದಿದೆ. ನೀವೇಕೆ ಈ ಸಂಕಲನವನ್ನು ಕುರಿತು ಬರೆದಿರಿ ಎಂಬುದನ್ನು ಮನದಟ್ಟು ಮಾಡಿಕೊಂಡೆ. ಇದರಲ್ಲಿ ಬರುವ ಶ್ರಮಿಕ ಪಾತ್ರಗಳೂ ಪ್ರಧಾನ ವಾಹಿನಿಯಲ್ಲಿ ಕಾಣಿಸಿಕೊಳ್ಳದ ಆದರೆ ಬದುಕಿನ ಹಲವು ಮಗ್ಗಲುಗಳಿಗೆ ಆಸರೆಯಾಗುವಂಥ ಜನಜೀವನ ಚಿತ್ರಣ ನಿಮ್ಮನ್ನು ಸೆಳೆದಿದೆ. ಪಶುವೈದ್ಯರನ್ನು ಚಿತ್ರಿಸಿರುವ ರೀತಿ ನಿಮಗೆ ಸಿಟ್ಟು ಸಹ ತರಿಸಿದೆ. ಆದರೆ ನಿಮ್ಮ ಬರೆಹವು ಕಥಾ ಸಂಕಲನವನ್ನು ಓದಲೇ ಬೇಕೆಂಬ ತಹತಹವನ್ನು ಹುಟ್ಟಿಸುವಂಥದು. ಇದಕ್ಕಾಗಿ ಅಭಿನಂದನೆ ಮತ್ತು ಧನ್ಯವಾದಗಳು ಸರ್.‌

ಈ ಮೂಲಕ ನೀವು ಇನ್ನಷ್ಟು ಹತ್ತಿರವಾಗುತ್ತೀರಿ. ನಿಮ್ಮ ಕನ್ನಡ ಸಾಹಿತ್ಯ ಸೇವೆ ಶ್ಲಾಘನೀಯ. ಇದು ಹೊಗಳಿಕೆ ಮಾತಲ್ಲ. ನಿಮ್ಮನ್ನು ಖುಷಿ ಪಡಿಸಬೇಕೆಂಬುದೂ ಅಲ್ಲ. ನಾವಿಬ್ಬರು ಇಂಥ ಉಮೇದುಗಳನ್ನು ದಾಟಿದವರು ಎಂದು ಅಂದುಕೊಂಡಿರುವೆ. ಸೆಬಾಲ್ಟ್ರನ್‌ ಅಧ್ಯಯನ ನಿಮ್ಮ ಕ್ಷೇತ್ರ. ಇದು ಈ ಕಾಲಕ್ಕೆ ಆಗಬೇಕಾದುದು. ಪುಸ್ತಕವನ್ನು ಪರಿಚಯಿಸುವ ಮೂಲಕವೇ ಅದರ ಅಂತರಂಗದಲ್ಲಿ ವಿಮರ್ಶೆಯನ್ನು ಹುದುಗಿಸಿಟ್ಟಿದ್ದೀರಿ. ಇದು ನನಗೆ ಮೆಚ್ಚಾಯಿತು. ಓದಿದ ತಕ್ಷಣ ಪ್ರತಿಕ್ರಿಯಿಸಿದೆ. ಇಲ್ಲದಿದ್ದರೆ ಸಹಜತೆ ಮಾಯವಾಗುವುದೆಂಬ ಆತಂಕ ಅಷ್ಟೇ. ವಂದನೆಗಳು ಗುರುಗಳೇ. 🙋🏻‍♂️👏🏻🤝🏻🙏🪻

Vranda Sangam
Vranda Sangam
10 months ago

ಒಂದು ಕೃತಿಯ ಪರಿಚಯವನ್ನು, ಕೃತಿಕಾರರ ಬರಹದ ಶೈಲಿಯೊಂದಿಗೆ, ಕತೆ ಚಲಿಸುವ ಕಾಲಘಟ್ಟದ ವಿವರಗಳೊಂದಿಗೆ ತಿಳಿಸಿದ್ದು ಚಂದವೆನಿಸಿದೆ.

4
0
Would love your thoughts, please comment.x
()
x