ಬಿಲಕ್ಕೆ ನೀರು ಬಿಟ್ಟಿದ್ದೇ ತಡ ಬುಳ, ಬುಳ, ಬುಳಾಂತ ನೀರಲ್ಲಿ ಗುಳ್ಳೆ ಬಂದ ತಕ್ಷಣವೇ ಪಂಚೇಂದ್ರಿಯಗಳೆಲ್ಲ ಎಚ್ಚರವಾಗಿ ಕೈಲಿದ್ದ ಗುದ್ದಲಿಯನ್ನು ಒನಕೆ ಓಬವ್ವನ ಭಂಗಿಯಲ್ಲಿ ಎತ್ತಿ ನಿಂತು ಕಾಯುತ್ತಾ, “ಈ ಬಿಲದಲ್ಲಿ ಪಕ್ಕಾ ತ್ವಾಡ ಐತೆ ಕಣೋ ಅಂದ” ನಟಿ ಅಣ್ಣ. ಉಪ್ಪು ಖಾರ ಹಚ್ಚಿ ಬೆಂಕಿಲಿ ಸುಟ್ಟ ತ್ವಾಡದ ಬಾಡಿನ ರುಚಿ ನೆನೆಯುತ್ತಾ ಬಾಯಲ್ಲಿ ಉದ್ಭವಿಸಿದ ಜೊಲ್ಲನ್ನು ನುಂಗಿ ತದೇಕ ಚಿತ್ತದಿಂದ ಬಿಲದ ಕಡೆ ನೋಡುತ್ತಾ ತೊಡ ಹೊರಬರುವುದನ್ನೇ ಕಾಯುತ್ತಾ ನಿಂತೆ.
ಹಿಂದೆಲ್ಲ ಬಯಲುಸೀಮೆಯ ರೈತ ಕುಟುಂಬದ ಮಕ್ಕಳು ಶಾಲೆಗೆ ಹೋಗುವ ಮುನ್ನ ಬೆಳಗಿನ ಜಾವ 6 ಗಂಟೆಗೇ ಎದ್ದು ದನ ಕರುಗಳಿಗೆ ಹುಲ್ಲು ಕೊಯ್ದು ತರುವುದು ಅಥವಾ ತೋಟದಲ್ಲಿ ನೀರು ಕಟ್ಟುವುದು, ಕೊಟ್ಟಿಗೆ ಸ್ವಚ್ಛಗೊಳಿಸುವುದು ಮುಂತಾದ ಕೆಲಸಗಳನ್ನು ಮುಗಿಸಿ ತಿಂಡಿ ತಿಂದು ಶಾಲೆಗೆ ಹೋಗುವುದು ವಾಡಿಕೆ. ರಜಾ ದಿನಗಳಲ್ಲಾದರೆ ಇವುಗಳ ಜೊತೆಗೆ ದನ ಎಮ್ಮೆಗಳನ್ನು ಕಾಯುವ ಸಂಪೂರ್ಣ ಜವಾಬ್ದಾರಿ ನಮ್ಮದಾಗುತ್ತು. ಆಗೆಲ್ಲ ದನ ಕಾಯುವ ಮಕ್ಕಳೆಲ್ಲ ಒಂದೆಡೆ ಸೇರಿ ಮರಕೋತಿ ಆಟ, ಜೂಟಾಟ ಆಡುವ ದೃಶ್ಯಗಳು ಹೊಲಗಳಲ್ಲಿ ಸಾಮಾನ್ಯವಾಗಿದ್ದವು. ಆದರೆ ಈಗ ಹಳ್ಳಿಗಳಲ್ಲೂ ಕಾನ್ವೆಂಟ್ ಶಾಲೆಗಳು ತಲೆಯೆತ್ತಿದ್ದು ಅವರುಗಳು ಕೊಡುವ ಹೋಮ್ ವರ್ಕ್ ಮುಗಿಸುವುದು ಶಾಲೆಗೆ ಅವರನ್ನು ರೆಡಿಮಾಡುವುದರಲ್ಲೇ ಮಕ್ಕಳ ಮತ್ತು ಪೋಷಕರ ಸಮಯ ಸಮಾಪ್ತಿಯಾಗುತ್ತದೆ.
ನೀರು ಕಟ್ಟಲು ಮಕ್ಕಳನ್ನು ಬಿಟ್ಟರೆ ಅದರ ಜೊತೆಗೆ ನಾವು ಮಾಡುತಿದ್ದ ಕಿತಾಪತಿಗಳಲ್ಲೊಂದು ಇಲಿ, ತ್ವಾಡ ಹಿಡಿಯೋದು. ತ್ವಾಡ ಹಿಡಿದು ಅದರ ಕರಳು ಪಚ್ಚಿಗಳನ್ನೆಲ್ಲ ತೆಗೆದು ಉಪ್ಪು ಕಾರ ಹಚ್ಚಿ ಬೆಂಕಿಯಲ್ಲಿ ಸುಟ್ಟು ಅದರ ತೊಡೆ ಮಾಂಸ ತಿನ್ನುತ್ತಿದ್ದರೆ… ( ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತೆ ) ಅದರ ಮುಂದೆ ಯಾವ ಸ್ಟಾರ್ ಹೋಟೆಲ್ನ ತಂದೂರಿ ಚಿಕನ್ನೂ ಏನೂ ಅಲ್ಲ ಅನಿಸುತ್ತದೆ. ಆ ಕಾಲದಲ್ಲಿ ಸಸ್ಯಾಹಾರಿಯಾಗಿದ್ದ ಮನೆಯಲ್ಲಿ ಮಾಂಸದಡುಗೆ ಮಾಡಿದರೆ ಪ್ರತ್ಯೇಕ ಸಾರು ಕೇಳುತ್ತಿದ್ದ ನಾನೂ ಕೂಡ ತ್ವಾಡ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದೇನೆಂದರೆ ಎಷ್ಟಿರಬೇಡ ಅದರ ರುಚಿ?
ಈ ರುಚಿಯ ಸವಿನೆನಪೇ ಅಂದು ಮುಂಜಾನೆ ಬಾಳೆ ತೋಟಕ್ಕೆ ನೀರು ಹಾಯಿಸಲು ಹೋದ ನನ್ನ ಹಾಗೂ ನಟಿ ಅಣ್ಣನ ಮನಸೆಳೆದು ಇಲಿ ಬಿಲಕ್ಕೆ ನೀರು ಬಿಡಲು ಪ್ರೇರೇಪಿಸಿದ್ದು.
ಬಿಲಕ್ಕೆ ನೀರು ಬಿಟ್ಟು ಐದು ನಿಮಿಷ ಕಳೆದಿರಬಹುದು, ಇವತ್ತು ಶಿಕಾರಿ ಆಗೇ ಆಗುತ್ತೆ ಅಂತ ಆಸೆಯಿಂದ ಎತ್ತಿದ ಗುದ್ದಲಿಯನ್ನು ಕೆಲಗಿಳಿಸದೇ ಕಾಯುತಿದ್ದೆವು, ನೋಡು ನೋಡುತ್ತಿದ್ದಂತೆಯೇ ನೀರ್ಗುಳ್ಳೆಗಳ ನಡುವಿಂದ ಎರಡು ಪಿಳಿ ಪೀಳಿಗುಟ್ಟುವ ಕಣ್ಣುಗಳನ್ನು ಮಿಣುಕಿಸುತ್ತಾ ತ್ರಿಕೋನಾಕಾರದ ಆಕೃತಿಯೊಂದು ಬಿಲದಿಂದ ಇಣುಕಿತು, ಇನ್ನೇನು ಗುದ್ದಲಿಯಿಂದ ಬಡಿಯಬೇಕೆನ್ನುವಷ್ಟರಲ್ಲಿ ಪಾಪ ಕಪ್ಪೆ ಬಿಡೋ ಎಂದು ಅವನನ್ನು ತಡೆದು ಬಿಲದ ಕಡೆಗೆ ಎರಡೆಜ್ಜೆ ಇಟ್ಟು ಹಿಂದಿರುಗಿ ನೋಡಿದರೆ ನಮ್ಮಣ್ಣ ಅಲ್ಲಿಲ್ಲ. ಆಗಲೇ ಸುಮಾರು ನೂರು ಮೀಟರ್ ದೂರದಲ್ಲಿ ದೌಡಾಯಿಸುತ್ತಿದ್ದಾನೆ, ಮತ್ತೊಮ್ಮೆ ಬಿಲದಕಡೆ ನೋಡಿದೆ ಆಕೃತಿ ಇನ್ನೂ ಸ್ವಲ್ಪ ಮುಂದೆ ಬಂದಿತ್ತು ಕಪ್ಪೆಯ ಕಾಲುಗಳೇಕೋ ಕಾಣುತಿಲ್ಲವಲ್ಲ ಅಂತ ಗಮನವಿಟ್ಟು ನೋಡಿದ್ರೆ ರೆಟ್ಟೆ ಗಾತ್ರದ ನಾಗರಹಾವು ದರ್ಶನ ಕೊಟ್ಟಿತು ನನ್ನ ಜಂಘಾಬಲವೇ ಹುಡುಗಿ ಹೋಯ್ತು. ಅಣ್ಣನೇ ಓಡಿಹೋಗುತ್ತಿದ್ದಾನೆ ಅಂದರೆ ಒಂದೋ ಅಥವಾ ಎರಡನೇ ತರಗತಿಯ ಹಸುಗೂಸು ನಾನೇನು ಮಾಡಲಿ. ಕ್ಷಣ ಮಾತ್ರವೂ ತಡಮಾಡದೆ ಶರವೇಗದಲ್ಲಿ ಮನೆಕಡೆ ಪೇರಿಕಿತ್ತೆ. ಸ್ವಲ್ಪ ಹೊತ್ತಿನ ಹಿಂದಷ್ಟೇ ಉಚ್ಚೆ ಮಾಡಿದ್ದರಿಂದ ಚಡ್ಡಿಯೇನು ಒದ್ದೆಯಾಗಲಿಲ್ಲ.
-ಡಾ. ದೋ. ನಾ. ಲೋಕೇಶ್
Hi Dona,
Good one to go back to the golden days.
Happy to read….