“ಕಿಂಚಿತ್ತೇ ಸಹಾಯ!”: ರೂಪ ಮಂಜುನಾಥ

ಈ ಕತೆಯ ನಾಯಕಿ ಸುಮ ಆ ದಿನ ಕೂಡಾ ಪಕ್ಕದ ಮನೆಯ ಆ ಹೆಂಗಸು ತನ್ನ ಗಂಡನ ಆಟೋನಲ್ಲಿ ಕೂತು ಕೆಲಸಕ್ಕೆ ಹೋಗುವುದನ್ನ ಕಂಡು”ಅಬ್ಬಾ, ಅದೇನು ಪುಣ್ಯ ಮಾಡಿದಾಳಪ್ಪಾ. ಅವರ ಮನೆಯವರು ಏನೇ ಕೆಲಸವಿದ್ದರೂ ಸರಿಯೆ, ಸಮಯಕ್ಕೆ ಸರಿಯಾಗಿ ಬಂದು ಹೆಂಡತಿಯನ್ನ ಆಟೋನಲ್ಲಿ ಕೂರಿಸಿಕೊಂಡು ಕೆಲಸಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರ್ತಾರೆ. ಅಯ್ಯೋ, ನಮ್ ಮನೇಲೂ ಇದಾರೇ ದಂಡಕ್ಕೆ!ಏನೇ ಕಷ್ಟ ಪಡ್ತಿದ್ರೂ ಕ್ಯಾರೇ ಅನ್ನೋಲ್ಲ. ಇತ್ತೀಚೆಗಂತೂ ಬಲ್ ಮೋಸ ಆಗೋಗಿದಾರೆ! ನಾನು ಗಾಡಿ ಕಲಿತಿದ್ದೇ ತಪ್ಪಾಯಿತೇನೋ! ಏನ್ ಕೇಳಿದ್ರೂ ನೀನೇ ತಗೊಂಡ್ ಬಾ, ಹೇಗೂ ಗಾಡಿ ಇದೆಯಲ್ಲಾ, ಅಂತ ಹೊರ್ಗಡೆ ಕೆಲ್ಸ ಕೂಡಾ ನನ್ಗೇ ತಗಲಾಕಿಬಿಡ್ತಾರೆ ನಿಸೂರಾಗಿ ಕೂತ್ಬಿಡ್ತಾರೆ!

ಆಕೆ, ಅದ್ಯಾವ್ ದೇವ್ರಿಗೆ ಪೂಜೆ ಮಾಡಿದ್ಳೋ . ”, ಎಂದು ಅವಳ ಮುಂದೆ ಡುರ್ ಎಂದು ಸದ್ದು ಮಾಡುತ್ತಾ ಹೋದ ಆಟೋ ನೋಡುತ್ತಾ ಮನಸ್ಸಿನಲ್ಲೇ ಗಂಡನನ್ನ ಬೈದುಕೊಂಡಳು. ”jealousy, thy name is women “, ಎಂದೊಬ್ಬ ಮಹಾನುಭಾವ ಹೇಳಿದಂತೆ ಸಣ್ಣದಾಗಿ ಆ ಹೆಂಗಸಿನ ಮೇಲೆ ಇವಳಿಗೆ ಸ್ವಲ್ಪ ಕಿಚ್ಚೂ ಅಗಿದ್ದು ನಿಜವೇ!

ನಂತರದ ದಿನಗಳಲ್ಲಿ ಗೊತ್ತಾದದ್ದು, ಇತ್ತೀಚೆಗೆ ಬಂದ ಆ ಪಕ್ಕದ ಮನೆಯಾಕೆ ಸುಜಾತ ಎಂದು. ಆಕೆ ಒಂದು ಸರಕಾರಿ ಪ್ರೈಮರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಳೆಂದು. ಎಲ್ಲಕ್ಕಿಂತ ಮುಖ್ಯವಾಗಿ ಆಕೆಯ ಒಂದು ಕಾಲಿನಲ್ಲಿ ಬಲವಿಲ್ಲದ ಇಲ್ಲದ ಕಾರಣ ಆಕೆ ಕಾಲು ಎಳೆದು ಹಾಕುತ್ತಿದ್ದಳೆಂದು. ವಿಷಯ ತಿಳಿದ ಸುಮ, ”ಅಯ್ಯೋ ಪಾಪದ ಹೆಣ್ಣು. ಸುಮ್ಮನೆ ಇವರನ್ನ ನಾನು ಹೋಲಿಕೆ ಮಾಡಿಕೊಂಡೆನಲ್ಲಾ”, ಎಂದು ಚಡಪಡಿಸಿದಳು. ಸ್ವಲ್ಪ ದಡೂತಿ ಹೆಂಗಸಾದರೂ ಲಕ್ಷಣವಾಗಿದ್ದರು. ಸುಮ ಅವರನ್ನು ಕಂಡಾಗಲೆಲ್ಲಾ , ಉಭಯಕುಶಲೋಪರಿ, ನಗು ವಿನಿಮಯವಾಗುತ್ತಿತ್ತೇ ವಿನಃ ಅಷ್ಟಾಗಿ ಇಬ್ಬರೂ ಮಾತಿಗೆ ನಿಂತವರೇನಲ್ಲ.

ಆದರೂ ಟೀಚರ್ ಮನೆಯ ಕೆಲವು ವಿಚಾರಗಳು ಸುಮ ಮಾತನಾಡುವಾಗ ತಿಳಿದುಕೊಂಡಿದ್ದಳು. ಆದರೆ ಸುಮ ಎಂದೂ ಸುಜಾತಾರ ಕಾಲಿನ ವಿಚಾರ ಎತ್ತಿದರೆ, ಎಲ್ಲಿ ಆಕೆಗೆ ಬೇಸರವಾಗುವುದೋ ಎಂದು ಕೇಳಿರಲಿಲ್ಲ.

ಸುಜಾತ ಟೀಚರ್ಗೆ ಮಕ್ಕಳಿಲ್ಲದ ಕಾರಣ ಆಕೆಯ ಸೋದರಿಯ ಮಗಳನ್ನು ಜೊತೆಯಲ್ಲಿಟ್ಟುಕೊಂಡಿದ್ದರು. ಟೀಚರ್ ಕೆಲಸಕ್ಕೆ ಹೋದರೆ, ಆಕೆಯ ಗಂಡ ಆಟೋ ಓಡಿಸುತ್ತಿದ್ದರು. ಮಧ್ಯಮ ವರ್ಗದ ಕುಟುಂಬದ ಟೀಚರ್ ಬಲು ಮೃದುವಾಗಿ ಮಾತನಾಡುತ್ತಿದ್ದರು. ಅವರ ಮನೆಯಿಂದ ಎಂದೂ ಸದ್ದು ಕೇಳಿದ್ದೇ ಇಲ್ಲ. ಅವರ ಜೊತೆಯಲ್ಲಿದ್ದ ಆ ಹುಡುಗಿಯೂ ಕೂಡಾ ತಾನಾಯಿತು ತನ್ನ ಶಾಲೆಯಾಯಿತು ಎಂದು ಇರುತ್ತಿದ್ದಳೇ ವಿನಃ, ಎಂದೂ ಯಾರ ಸುದ್ದಿಗೂ ಹೋದವಳಲ್ಲ. ಸುಮ ತಿಳಿದಂತೆ ಅದು ಒಳ್ಳೆಯ ಸಜ್ಜನರ ಕುಟುಂಬವಾಗಿತ್ತು.

ಎಲ್ಲ ಸಮಯದಲ್ಲೂ ಗಂಡನ ಸಹಾಯ ಕೇಳಲಾಗುವುದೂ ಇಲ್ಲ. ಹಾಗೇ ಬಾಡಿಗೆಯ ಗಾಡಿಗಳಿಗೆ ದುಡ್ಡು ಹೊಂಚಲಾಗುವುದಿಲ್ಲವೆಂಬ ಕಾರಣಕ್ಕೆ, ಸುಮ ತನ್ನ ಕೆಲಸ ಕಾರ್ಯಗಳಿಗೆ ಸಹಾಯವಾಗಲೆಂದು ಒಂದು ಸ್ಕೂಟಿ ಪೆಪ್ ಪ್ಲಸ್ ಗಾಡಿಯನ್ನಿಟ್ಟುಕೊಂಡಿದ್ದಳು. ಮನೆಗೆ ಬೇಕಾದ ತರಕಾರಿ, ದಿನಸಿ, ಇನ್ನೊಂದು ಮತ್ತೊಂದು ಎಂದು ಏನೇ ಬೇಕಾದರೂ ಸುಮ ಯಾರನ್ನೂ ಕಾಯದೆ ತನ್ನ ಪಾಡಿಗೆ ತಾನು ಗಾಡಿಯಲ್ಲಿ ಹೋಗಿ ತರುತ್ತಿದ್ದಳು.

ಹೀಗೆ ಗಾಡಿಯಲ್ಲಿ ಸುಮ ಕೂತು ಹೊರಟಾಗಲೆಲ್ಲಾ ಸುಜಾತಾ ಟೀಚರ್ ಅವಳನ್ನೇ ನೋಡುತ್ತಿದ್ದರು. ಸುಮಾ ಕೂಡಾ ಅವರು ನೋಡಿದಾಗ ಸ್ಮೈಲ್ ಮಾಡಿ ಹೊರಡುತ್ತಿದ್ದಳು.

ಹೀಗೇ ಒಂದು ಶನಿವಾರ ಸುಮ ತರಕಾರಿಗೆಂದು ಮಾರುಕಟ್ಟೆಗೆ ಹೋದವಳು ಮನೆಯ ಮುಂದೊ ಗಾಡಿ ನಿಲ್ಲಿಸುತ್ತಿದ್ದುದನ್ನ ಕಂಡ ಸುಜಾತಾ ಟೀಚರ್, ”ಸುಮಾ, ಯಾರನ್ನೂ ನೆಚ್ಚಿಕೊಳ್ದೆ ಸ್ವತಂತ್ರವಾಗಿ ನಿಮ್ ಪಾಡಿಗ್ ನೀವು ಗಾಡಿಯಲ್ಲಿ ಹೋಗಿ ಎಲ್ಲ ಕೆಲ್ಸ ಮಾಡ್ಕೊಂಡ್ ಬರೋದು ನೋಡಿದ್ರೆ ಖುಷಿಯಾಗುತ್ತೆ”, ಅಂದ್ರು. ಅದಕ್ಕೆ ಸುಮಾ, ”ಹೌದಲ್ವಾ ಟೀಚರ್, ಏನೋ ಮನೆಯವರಿದ್ದಾಗ ಅವರನ್ನ ಕೇಳಿದರೆ ಬೇಕಾದ್ದು ತಂದುಕೊಡ್ತಾರೆ. ಅವರು ಆಫೀಸಿಗೆ ಹೋದಾಗ ನಮಗೇನಾದ್ರೂ ಎಮರ್ಜೆನ್ಸಿ ಬಿದ್ದರೆ ಯಾರ್ನ ಕೇಳೋದ್ ಹೇಳಿ? ಈಗ್ ನೋಡಿ ಗಾಡಿ ಕಲ್ತಿರೋದಕ್ಕೆ ಯಾರ್ ಮೇಲೂ ಡಿಪೆಂಡ್ ಆಗ್ದೆ, ನಮ್ ಕೆಲ್ಸ ನಾವ್ ಮಾಡ್ಕೋಬೋದು”, ಅಂದಳು. ಇದಕ್ಕೆ ಸುಜಾತಾ ಟೀಚರ್, ”ನಿಜ ಸುಮ, ಪರಾವಲಂಬಿಗಳಾಗಿರದೆ, ಸ್ವತಂತ್ರವಾಗಿ ಜೀವನ ಮಾಡೋ ಖುಷಿಯೇ ಬೇರೆ. ಆದರೆ…. . ”, ಅಂದು ಮುಖ ಸಪ್ಪೆ ಮಾಡಿಕೊಂಡರು. ಸುಮ, ಅರ್ಥವಾಗದಂತೆ, ”ಆದ್ರೆ ಏನ್ ಟೀಚರ್?”ಎಂದು ಪ್ರಶ್ನಾರ್ಥಕವಾಗಿ ನೋಡದಳು. ಅದಕ್ಕೆ ಸುಜಾತಾ ಟೀಚರ್, ”ಹೌದು ಸುಮ, ನನಗೂ ನಿಮ್ಮಂತೆ ಸ್ವತಂತ್ರವಾಗಿರೋಕೆ ಇಷ್ಟವೇ. ಆದ್ರೆ ಏನ್ಮಾಡೋದು ಸುಮ. ನನಗಾ ಯೋಗ ಇಲ್ಲವಲ್ಲಾ!ಪಾಪ, ನಮ್ಮೆಜಮಾನ್ರು ಎಷ್ಟೇ ದೂರದಲ್ಲಿದ್ರು, ನನ್ನನ್ನ ಶಾಲೆಗೆ ಬಿಡೋಕೆ, ವಾಪಸ್ಸು ಕರೆದುಕೊಂಡು ಬರೋಕೇಂತ ಒಂದೇ ಉಸಿರಿಗೆ ದಿನವೂ ಬರ್ತಾರೆ. ಅವರಿಗೆಷ್ಟು ತೊಂದರೆ ಕೊಡ್ತೀನಲ್ಲಾಂತ ನನ್ಗೂ ಬಾಳಾ ನೋವಾಗತ್ತೆ. ಆದ್ರೆ ಏನ್ಮಾಡಲೀ? ನನಗೂ ಗಾಡಿ ಕಲಿಯೋ ಇಷ್ಟಾನೇ. ಆದರೆ?”, ಎಂದು ಅಸಹಾಯಕರಂತೆ ನುಡಿದು ನಿಟ್ಟುಸಿರುಬಿಟ್ಟರು.

ಅದಕ್ಕೆ ಸುಮಾ, ”ಆದರೆ ಏನೂ? ಗಾಡಿ ಓಡಿಸೋದು ತಾನೇ? ನೀವೂ ಕಲೀಬೋದು. ಯಾಕ್ ಕಲ್ಯೋಕಾಗಲ್ಲಾ? ಅದೇನ್ ಬ್ರಹ್ಮ ವಿದ್ಯೆಯೇ?”, ಅಂದಳು. ಸುಮಳ ಮಾತು ಕೇಳು ಸುಜಾತ ಟೀಚರ್ ನ ಮುಖದಲ್ಲಿ ಬೆಳಕು ಕಂಡಂತಾಯ್ತು. ”ಹೌದಾ ಸುಮಾ? ನೀವು ಹೇಳಿಕೊಡ್ತೀರಾ?ತಮಾಷೆ ಅಲ್ಲ ತಾನೇ”, ಎಂದು ಕಣ್ಣರಳಿಸಿ ಕೇಳಿದರು. ಸುಮ, ”ಅರೇ ಟೀಚರ್, ಸೀರಿಯಸ್ಲೀ, ನೋ ಡೌಟ್, ನಿಮಗೆ ಕಲಿಯೋ ಆಸೆ ಇದ್ರೆ, ಶೂರ್, ನನ್ ಗಾಡೀಲೇ ಕಲಿಸಿಕೊಡ್ತೀನಿ. ”, ಅಂದ್ಳು. ಅದಕ್ಕೆ ಸುಜಾತಾ ಟೀಚರ್, ”ಸುಮಾ ನಾಳೆ ಹೇಗೂ ಭಾನುವಾರ. ನಾನೂ ಫ್ರೀಯಾಗಿರ್ತೀನಿ. ನೀವು ಸ್ವಲ್ಪ ಸಮಯ ಮಾಡಿಕೊಂಡು ಹೇಳಿಕೊಡ್ತೀರಾ?”, ಎಂದು ರಿಕ್ವೆಸ್ಟ್ ಮಾಡಿಕೊಳ್ಳುವಂತೆ ಕೇಳಿದಳು. ಅದಕ್ಕೆ ಸುಮಾ, ”ಓಕೆ ಟೀಚರ್ ಡನ್. ನಾಳೆ ಬೆಳಗ್ಗೆ ಹನ್ನೊಂದರ ಹೊತ್ತಿಗೆ ರೆಡಿ ಇರಿ. ಬೈ…ಆದ್ರೆಒಂದು ಕಂಡಿಷನ್”, ಅಂದಾಗ, ಗೊಂದಲಕ್ಕೆ ಬಿದ್ದ ಟೀಚರ್, ”ಏನಪ್ಪಾ ಅದೂ…. ?”, ಎಂದು ಗಾಬರಿಯಾದಾಗ, ಪಕಪಕನೆ ನಕ್ಕ ಸುಮ, ”ಟೀಚರ್ ನಾನು ಹೇಳಿ ಕೊಡೋ ಪಾಠಕ್ಕೆ ಗುರುದಕ್ಷಿಣೆ ಕೊಡ್ಬೇಕು. ಅಷ್ಟೇ”, ಎಂದು ಕೀಟಲೆಯ ದನಿಯಲ್ಲಿ ಅಂದಾಗ, ”ಸುಮ, ಮೊದ್ಲೇ ನಿಮ್ ಫೀಸು ಎಷ್ಟೂಂತ ಹೇಳ್ಹಿಡಿ. ಆದ್ರೆ ಕಲೀತೀನಿ”, ಅಂದ ಟೀಚರ್ ಗೆ, ”ಟೀಚರ್, ನಾನು ಕುಕ್ಕು ಮಾಡಿ ಕುಕ್ಕುವುದರಲ್ಲಿ ಸ್ವಲ್ಪ ಸೋಂಭೇರಿ. ಹೇಗೂ ನಾಳೆ ನಮ್ಮ ಮನೆಯವರು ಊರಿನಲ್ಲಿರೋಲ್ಲ. ಅಡಿಗೆ ಮಾಡೋಕೂ ಬೋರು, ಸೋ…. ನಿಮ್ಮ ಮನೇಲಿ ಅಚ್ಕಟ್ಟಾಗಿ ಕಂಠದ ಮಟ್ಟಿಗೆ ಊಟ ಮಾಡೋಣಾಂತ. ತಮಗೆ ಗುರುದಕ್ಷಿಣೆ ಕೊಡಲಾಗುವುದೇ?”, ಎಂದ ಸುಮಳಿಗೆ, ”ಏನಮ್ಮಾ ನೀನು ಇಷ್ಟು ಕೀಟಲೇಂತ ಗೊತ್ತಾಗಲಿಲ್ಲ. ಅಲ್ಲಾ, ಇಷ್ಟೊಂದಾ ಕಾಲೆಳೆಯೋದೂ? ಮೊದ್ಲೇ ನಂಗೆ ಕಾಲು ಸರಿ ಇಲ್ಲ”, ಅಂತ ಹುಸಿ ಮುನಿಸಿನಿಂದ ಹೇಳಿ, ”ಆಯಿತು. ನಾಳೆ ಗುರುಗಳಿಗೆ ವಿಶೇಷ ಅಡುಗೆಯನ್ನ ಮಾಡಿಸಿಯೇ ದಕ್ಷಿಣೆ ನೀಡೋಣ”ಎಂದ ಟೀಚರನ್ನು ನೋಡಿ ನಗುತ್ತಾ ವಿದಾಯ ಹೇಳಿ ತರಕಾರಿ ಚೀಲ ಹಿಡಿದು ಮನೆಯೊಳಗೆ ಹೋದಳು.

ಮಾರನೆಯ ದಿನ ಭಾನುವಾರ ಸುಜಾತಾ ಟೀಚರ್ ಚೂಡಿದಾರವನ್ನು ಧರಿಸಿಕೊಂಡು ಗಾಡಿ ಕಲಿಯೋಕೆ ಹನ್ನೊಂದರ ಹೊತ್ತಿಗೆ ಸಿದ್ದವಾಗಿದ್ದರು. ಸುಮಾ ಗೇಟಿನ ಒಳಗೆ ನಿಲ್ಲಿಸಿದ್ದ ಗಾಡಿಯನ್ನ ಆಚೆಗೆ ತೆಗೆದಳು. ಇವರಿಬ್ಬರ ಮನೆಗೂ ಮೂರ್ನಾಕು ಮನೆಗಳ ಆಚೆಗೆ ಒಂದು ದೊಡ್ಡ ಮೈದಾನವಿತ್ತು. ಸುಮಾ ಅಲ್ಲೇ ಗಾಡಿ ಕಲಿಸಿದರಾಯ್ತೆಂದು ಹೇಳಿದಾಗ, ಇಬ್ಬರೂ ಅಲ್ಲಿಗೇ ಹೊರಟರು. ಗಾಡಿಯ ಅಂಗಗಳನ್ನ ಮತ್ತು ಅದರ ಕೆಲಸಗಳನ್ನ ಮೊದಲು ಸುಮಾ ಸುಜಾತಾ ಟೀಚರ್ ಗೆ ಪರಿಚಯ ಮಾಡಿಕೊಟ್ಟಳು. ” ನೋಡಿ ಟೀಚರ್ ನನ್ ಲಕ್ ಹೆಂಗಿದೇ? ದಿನಾ ನೂರಾರು ಮಕ್ಕಳಿಗೆ ಪಾಠ ಹೇಳಿಕೊಡೋ ನಿಮಗೆ ಪಾಠ ಹೇಳಿಕೊಡೋ ಸೌಭಾಗ್ಯ ಯಾರಿಗುಂಟು ಯಾರಿಗಿಲ್ಲ?”, ಎಂದು ಹಾಸ್ಯ ಮಾಡಿದಳು. ಅದಕ್ಕೆ ಸುಜಾತಾ ಟೀಚರ್ ಜೋರಾಗಿ ನಗುತ್ತಾ, ”ಸುಮಾ ನಾನು ಏನೇ ಟೀಚರ್ ಎನಿಸಿಕೊಂಡರೂ ನಾನು ಕೂಡಾ ಪ್ರತಿ ದಿನ ಒಂದಲ್ಲಾ ಒಂದು ವಿಚಾರ ಎಲ್ಲರಿಂದಲೂ ಕಲಿಯುವ ವಿದ್ಯಾರ್ಥಿನಿಯೇ. ಇವತ್ತು ಈ ಟೀಚರ್ ಗೆ ನೀವು ಟೀಚರ್. ನಮಸ್ತೆ ಟೀಚರ್”, ಎಂದು ವಿಧೇಯ ವಿದ್ಯಾರ್ಥಿಯಂತೆ, ಕೈ ಮುಗಿದರು. ಸುಮ ಪ್ರತಿವಂದಿಸಿ, ”ಟೀಚರ್, ನೋಡಿ ಇದು ಎಕ್ಸಲೇಟರ್, ಇದು ಕ್ಲಚ್ಚೂ, ಇದು ಬ್ರೇಕೂ, ಇದು ಸ್ಟಾರ್ಟ್ ಬಟನ್”, ಎಂದು ಎಲ್ಲವನ್ನೂ ತೋರಿಸಿ ಹಾಗೇ ಗಾಡಿಯನ್ನು ಹೇಗೆ ಬಳಸಬೇಕು, ಯಾವ ಪಾರ್ಟುಗಳನ್ನ ಯಾವಾಗ ಉಪಯೋಗಿಸಬೇಕು ಎಂದು ಎಲ್ಲವನ್ನೂ ವಿವರಿಸಿದಳು. ಆದರೆ ಸುಮಾಳಿಗೆ ಗೊತ್ತಿಲ್ಲ ಸುಜಾತಾ ಟೀಚರಿಗೆ ಯಾವ ಕಾಲಿನಲ್ಲಿ ಎಷ್ಟು ಬಲವಿದೆ ಎಂದು. ಚಿಕ್ಕ ಗಾಡಿಯಾದುದರಿಂದ ಟೀಚರ್ ಸಲೀಸಾಗಿ ಕಲಿಯಬಹುದೆಂದುಕೊಂಡಳು.

ಟೀಚರ್ ಓಮ್ ಪ್ರಥಮ ಗಾಡಿಲ್ಲಿ ಕೂತು ಗಡಿಬಿಡಿಯಲ್ಲಿ ಸ್ಟಾರ್ಟ್ ಸ್ವಿಚ್ ಅದುಮಿ ಎಕ್ಸಲೇಟರ್ ಕೊಟ್ಟೇ ಬಿಟ್ಟರು. ಗಾಡಿ ಹಿಡಿತವಿಲ್ಲದೆ ನುಗ್ಗುತ್ತಾ ಹೋಗಿ ಕೊನೆಗೆ ಗಾಡಿಯ ಜೊತೆ ಟೀಚರ್ ಕೂಡಾ ಬಿದ್ದೇಬಿಟ್ಟರು. ಇದನ್ನ ಕಂಡ ಸುಮಾಗೆ ಟೀಚರ್ ಗೆ ಏನಾಯಿತೋ ಏನೋ ಎಂದು ಭಯವಾಗಿ ಒಂದೇ ಉಸಿರಿಗೊ ಓಡೇ ಬಂದಳು. ಮೊದಲೇ ಟೀಚರ್ ದಪ್ಪ ಹೆಂಗಸು. ಟೀಚರ್ನ ಭುಜ ಹಿಡಿದು, ಮೇಲಕ್ಕೆತ್ತುತ್ತ, ”ಟೀಚರ್, ಆರಾಮಾಗಿದೀರಾ? ಏನೂ ಪೆಟ್ಟಾಗಿಲ್ಲ ತಾನೇ?ನಿಮಗೆ ಗಾಡಿ ಓಡಿಸೋಕೆ ಯಾವ ತೊಂದರೆಯೂ ಇಲ್ಲ ತಾನೇ? ನಾನು ಮೊದಲೇ ಈ ವಿಚಾರ ನಿಮ್ಮಲ್ಲಿ ಕೇಳ್ಕೋಬೇಕಿತ್ತು. ನೀವು ಇದರ ವಿಚಾರವಾಗಿ ಏನೂ ಹೇಳಲಿಲ್ವಲ್ಲಾ”, ಎಂದು ಕಳಕಳಿಯಿಂದ ಕೇಳಿದಳು. ಅದಕ್ಕೆ ಸುಜಾತ್ ಟೀಚರ್, ಸುಧಾರಿಸಿಕೊಂಡು ಮೇಲೇಳುತ್ತಾ, ”ಇಲ್ಲ ಸುಮಾ, ಹಾಗೇನಿಲ್ಲ. ಗಾಡಿ ಓಡಿಸೋಕೆ ತೊಂದರೆ ಏನಿಲ್ಲ. ಆದರೆ ಮೊದಲ ಪ್ರಯತ್ನ ಸ್ವಲ್ಪ ಗಡಿಬಿಡಿಯಾಯ್ತು. ಸ್ವಲ್ಪ ಇಲ್ಲಿ ಹಸಿಹುಲ್ಲು ಬೇರೆ ಇದ್ದಿದ್ರಿಂದ, ಅಂಥದ್ದೇನೂ ಆಗ್ಲಿಲ್ಲ. ಇವತ್ತು ಬಲಗಡೇನೇ ಎದ್ದಿದ್ದೇಂತ ಅನ್ಸುತ್ತೆ. ಆದ್ರೂ ಸಾರಿ ಸುಮಾ ನಿಮ್ ಗಾಡೀನೂ ಎತ್ ಹಾಕ್ಬಿಟ್ಟೆ. ನಿಮ್ ಗಾಡೀಗೆ ಏನಾಗ್ಲಿಲ್ಲ ತಾನೇ? ”, ಅಂತ ಪೆಚ್ಚು ಮೋರೆ ಹಾಕಿಕೊಂಡರು. ಅದಕ್ಕೆ ಸುಮಾ, ”ಅಯ್ಯೋ ದೇವ್ರೇ……ಸಧ್ಯ ನನ್ ಗಾಡಿ ಯೋಚ್ನೆ ಬಿಟ್ಹಾಕಿ. ಹೆಂಗೋ ಆಗುತ್ತೆ. ಸಧ್ಯ ನಿಮ್ಗೇನೂ ಆಗ್ಲಿಲ್ವಲ್ಲಾ. ಬದುಕ್ಕೊಂಡೆ. ಇಲ್ದಿದ್ರೆ ನನ್ ಗಂಡನ್ನ ಹತ್ರ ಮುಖಕ್ಕೆ ಸರ್ಯಾಗಿ ಮಂಗಳಾರತಿ ಆಗಿ, ಸಹಸ್ರನಾಮ ಕೇಳ್ಬೇಕಿರ್ತಿತ್ತು. ಇನ್ನು ನಿಮ್ ಯಜಮಾನ್ರು ನನ್ನ ಖಳನಾಯಕಿಯಂತೆ ನೋಡ್ತಿದ್ರು. ಅದ್ ಹೆಂಗಾದ್ರಾಗ್ಲೀ, ನನ್ಗೂ ನಾನು ಬದ್ಕಿರೋವರ್ಗೂ ಗಿಲ್ಟ್ ಕಾಡ್ತಿತ್ತು”, ಅಂದು ಆತ್ಮೀಯತೆಯಿಂದ ಸುಜಾತಾ ಟೀಚರ್ನ ಬೆನ್ನು ತಟ್ಟಿದಳು.

ನಂತರ ಮಾರನೆಯ ದಿನ ಮುಂಜಾನೆ ಸುಜಾತಾ ಟೀಚರ್ ಸಿಕ್ಕಾಗ, ”ಟೀಚರ್, ನಿಮಗೆ ನೆನ್ನೆ ಗಾಡಿ ಕಲಿಯೋ ವಿಚಾರದಲ್ಲಿ ತುಂಬ ನೋವಾಯ್ತೂಂತ ಅನ್ಸುತ್ತೆ. ಐ ಆಮ್ ರಿಯಲಿ ಸಾರಿ. ನಿಮ್ ಕಾಲಿಗೆ ಗ್ರಿಪ್ ಇದೆಯೋ ಇಲ್ವೋ ತಿಳೀಲಿಲ್ಲ. ನಾನು ಈ ವಿಚಾರ ಮೊದ್ಲೇ ಕೇಳ್ಕೋಬೇಕಿತ್ತು”, ಅಂದಳು ಸುಮಾ. ಅದಕ್ಕೆ ಸುಜಾತ ಟೀಚರ್, ”ಛೇಛೇ ಸುಮಾ, ನೀವ್ಯಾಕೆ ಕ್ಷಮೆ ಕೇಳ್ತಿದ್ದೀರಿ. ಏನಾದರೂ ವಿದ್ಯೆ ಕಲೀಬೇಕಾದ್ರೆ ಇಂಥದ್ದೆಲ್ಲಾ ಸಹಜ. ನೆಡೆಯುವ ಕಾಲೇ ತಾನೇ ಎಡವೋದೂ?ಆದ್ರೆ ಮೊದ್ಲನೇ ದಿನವೇ ಹೀಗಾಯ್ತೂಂತ ನಿಮಗೆ ನನಗೆ ಗಾಡಿ ಹೇಳಿಕೊಡೋಕೆ ಏನ್ ಬೇಜಾರಿಲ್ಲ ತಾನೇ? ”, ಅಂದರು. ಅದಕ್ಕೆ ಸಮಾಧಾನ ಕಂಡಂತೆ ಸುಮಾ, ”ನೋ ಟೀಚರ್. ನೀವು ಇಷ್ಟು ಹುಮ್ಮಸ್ಸಿನಲ್ಲಿದ್ರೆ, ಕಲ್ಸೋಕೆ ನನ್ಗೇನೂ? ಸರಿ ಟೀಚರ್, ಹಾಗಾದ್ರೆ ಈವತ್ತು ನೀವು ಸ್ವಲ್ಪ ಗಮನವಹಿಸಿ ಗಾಡಿ ಕಲೀರಿ. ಗಾಬರಿ ಬೇಡವೇ ಬೇಡ. ಮೊದಲು ಬ್ರೇಕಿನ ಮೇಲೆ ಗಮನವಿರಲಿ. ಆದಷ್ಟೂ ಅಲಗಾಡದೆ ಸಮತೋಲನ ಕಾಪಾಡಿಕೊಳ್ಳಿ. ಆಗ ಏನೂ ಕಷ್ಟವಾಗೋಲ್ಲ. ಆದಷ್ಟೂ ನಿಧಾನವಾಗಿಯೇ ಓಡಿಸಿ. ಏನೂ ಗಾಬರಿ ಬೇಡ. ಆಲ್ ದಿ ಬೆಸ್ಟ್”, ಎಂದು ಥಮ್ಸಪ್ ಮಾಡಿದಳು. ಸುಜಾತಾ ಟೀಚರ್ ಕೂಡಾ ಥಮ್ಸಪ್ ಮಾಡಿ, ಗಾಡಿಗೆ ನಮಿಸಿ, ಗಾಡಿ ಏರಿದರು.

ಸುಮಾ ಮತ್ತೊಮ್ಮೆ ಟೀಚರ್ ನ ತಡೆದು , ಗಾಡಿ ಓಡಿಸುವ ನಿಯಮಗಳೆಲ್ಲಾ ಹೇಳಿಕೊಡುತ್ತಾ, ”ಟೀಚರ್, ನಿಮ್ಮ ಯಾವ ಕಾಲಿನಲ್ಲಿ ಬಲವಿದೆಯೋ ಆ ಕಡೆಗೆ ಗಾಡಿಯ ಬ್ಯಾಲೆನ್ಸ್ ಇಟ್ಕೊಳಿ. ಯಾವ ಕಾಲು ನಿಮಗೆ ತೊಂದರೆ ಇದೆಯೋ ಆ ಕಡೆ ಸ್ವಲ್ಪ ನಿಮ್ಮ ಕೈಯಲ್ಲಿ ಗಾಡೀನ ಗ್ರಿಪ್ನಲ್ಲಿಟ್ಟುಕೊಳ್ಳಿ”, ಅಂತ ಆಕೆಗೆ ಬೇಕಾದ ಸಲಹೆಸೂಚನೆಗಳನ್ನೆಲ್ಲ ಕೊಟ್ಟಳು. ಟೀಚರ್ ಕೂಡಾ ಸಾವಧಾನವಾಗಿ ತಮಗಿದ್ದ ಗೊಂದಲಗಳನ್ನೆಲ್ಲಾ ಕೇಳಿಕೊಂಡು ಕಲಿಯೋಕೆ ಸಿದ್ದವಾದರು. ಹೀಗೆ ನಾಲ್ಕಾರು ದಿನಗಳಲ್ಲಿ ಹಾಗೂ ಹೀಗೂ ಸುಮಾ ಸುಜಾತಾ ಟೀಚರಿಗೆ ಗಾಡಿ ನಡೆಸುವುದನ್ನ ಕಲಿಸಿಯೇ ಬಿಟ್ಟಳು. ವಿದ್ಯಾರ್ಥಿ ಸುಜಾತಾ ಮೇಡಮ್ ತಾವೇ ಸ್ವತಃ ಗಾಡಿ ಓಡಿಸಲು ಸಫಲರಾದರು. “ಥ್ಯಾಂಕ್ಸ್ ಸುಮಾ. ನಿಮಗೆಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮ ಗಾಡೀನೇ ತಂದು ಓಡಿಸೋಕೆ ಧೈರ್ಯ ಕೊಟ್ಟು, ಹೇಳಿಯೂ ಕೊಟ್ಟಿರಿ. ನಾನದನ್ನ ಎತ್ತಿ ಹಾಕಿದರೂ ನೀವು ತಪ್ಪು ತಿಳಿಯದೆ, ಮತ್ತೂ ಹೇಳಿಕೊಡುವ ಮನಸ್ಸು ಮಾಡಿದಿರಿ. ನಿಮ್ ಋಣ ಹೇಗೆ ತೀರಿಸೋದೋ”, ಎಂದು ತಮ್ಮ ಮನಃಪೂರ್ವಕವಾದ ಧನ್ಯವಾದ ತಿಳಿಸಿದರು. ಅದಕ್ಕೆ ಸುಮಾ, ”ಇರ್ಲಿ ಬಿಡಿ ಟೀಚರ್, ಟೀಚರ್ಗೆ ಟೀಚ್ ಮಾಡೋಕ್ ನನಗೊಂದು ಅವ್ಕಾಶ ಸಿಕ್ತು. ಇದ್ರಲ್ಲಿ ನನ್ ದೊಡ್ತನ ಏನಿಲ್ಲ. ನಿಮಗೆ ಕಲಿಯೋ ಆಸೆ ಇತ್ತು ಹಾಗಾಗಿ ಕಲಿತುಕೊಂಡ್ರಿ. ನೀವು ಗಾಡಿ ಕಲಿತದ್ದು ನನಗೂ ಕೂಡಾ ಬಲು ಸಂತೋಷ ಆಗ್ತಿದೆ. ”ಎಂದು ಸುಜಾತಾ ಟೀಚರ್ನ ಚಿಯರ್ ಅಪ್ ಮಾಡಿದಳು.

ನಂತರದ ದಿನಗಳಲ್ಲಿ ಅವರವರ ಮನೆ, ಸಂಸಾರ, ಕೆಲಸದ ಬಿಸಿಯಲ್ಲಿ ಇಬ್ಬರೂ ಇದ್ದರು. ಸುಜಾತಾ ಟೀಚರ್ ತಮಗಾಗಿ ಒಂದು ಗಾಡಿಯನ್ನೂ ಕೊಂಡುಕೊಂಡು ಅದನ್ನು ಸುಮಳಿಗೆ ತೋರಿಸಿ ಅವರ ಮನೆಗೊಂದು ಸಿಹಿತಿಂಡಿಯ ಡಬ್ಬಿಯನ್ನೂ ಕೊಟ್ಟು ಬಂದರು. ಈ ನಡುವೆ, ತಮ್ಮ ಗಂಡನನ್ನು ಕಾಯದೆ ಸುಜಾತಾ ಟೀಚರ್ ತಾವೇ ಗಾಡಿಯಲ್ಲಿ ಶಾಲೆಗೆ ಹೋಗುತ್ತಿದ್ದುದನ್ನ ಕಾಣುತ್ತಿದ್ದ ಸುಮಾಳಿಗೆ ಟೀಚರ್ ಬಗ್ಗೆ ಹೆಮ್ಮೆ ಎನಿಸುತ್ತಿತ್ತು. ಇದರಲ್ಲಿ ತನ್ನ ಪಾತ್ರವೂ ಇದ್ದುದರಿಂದ ಏನೋ ಆನಂದ ಮನಸ್ಸಿಗಾಗುತ್ತಿತ್ತು. ಕಾಲ ಯಾರ ಮೇಲೆ ಯಾವಾಗ ಮುನಿಸಿಕೊಳ್ಳುತ್ತದೆಯೋ ಭಗವಂತನೇ ಬಲ್ಲ. ಒಂದು ದುರ್ದಿನ, ಕೆಟ್ಟ ಗಳಿಗೆಯಲ್ಲಿ ಸುಜಾತಾ ಟೀಚರ್ ಗಂಡ ಆಟೋ ಓಡಿಸುವಾಗ ಲಾರಿಯೊಂದು ಹಿಂದಿನಿಂದ ಆಟೋಗೆ ಗುದ್ದಿದ ಪರಿಣಾಮ ಡ್ರೈವರ್ ಸೀಟಿನಲ್ಲಿ ಕೂತ ಸುಜಾತಾ ಟೀಚರ್ ಗಂಡ, ಹಿಡಿತ ತಪ್ಪಿ ರೋಡಿಗೆ ಬಿದ್ದು ಲೈಟು ಕಂಬಕ್ಕೆ ಬಲವಾಗಿ ತಲೆ ಹೊಡೆದುಕೊಂಡು ಅಲ್ಲೇ ಪ್ರಾಣ ಬಿಟ್ಟರು. ಟೀಚರ್ ಸಂಸಾರ ನೋಡುನೋಡುತ್ತಲೇ ಅತಂತ್ರವಾಯಿತು.

ಸುಮಾ ಈ ವಿಷಯ ತಿಳಿದು ಬಹಳ ನೊಂದುಕೊಂಡರೂ, ಟೀಚರ್ ಗೆ ಹೇಗೆ ಸಮಾಧಾನ ಪಡಿಸುವುದೂ? ಅವರಿಗೆ ಮುಖ ಕೊಟ್ಟು ಹೇಗೆ ಮಾತನಾಡುವುದು ಎಂದು ಅವರನ್ನು ಭೇಟಿ ಮಾಡಲು ಹಿಂಜರಿದೇ ಹೋದಳು. ಟೀಚರ್ ಮನೆಯಲ್ಲಿ ಅವರ ಗಂಡನ ಎಲ್ಲ ಕಾರ್ಯಗಳು ಮುಗಿಯುವವರೆಗೂ ಮನೆ ತುಂಬಾ ನೆಂಟರು, ಇಷ್ಟರು ಇದ್ದುದರಿಂದ ಸುಮ ಟೀಚರ್ ಅನ್ನು ಭೇಟಿಯಾಗಲೇ ಇಲ್ಲ. ಇದೆಲ್ಲ ಮುಗಿದ ನಂತರದ ಒಂದು ದಿನ, ಸುಮಾ ಟೀಚರ್ ಅನ್ನ ಭೇಟಿಯಾದಳು. ಟೀಚರ್ ಕಣ್ಣಿಂದ ದಳದಳನೆ ನೀರು ಸುರಿಯಿತು. ಸುಮಾ ಳಿಗೆ ಹೇಗೆ ಸಮಾಧಾನ ಮಾಡುವುದೆಂತಲೇ ತೋಚದಾಯಿತು. ತಮ್ಮ ದಾರ್ಭಾಗ್ಯವನ್ನು ನೆನೆಸಿಕೊಂಡು ಟೀಚರ್ ಅಳುತ್ತಿರಬೇಕು ಎಂದುಕೊಂಡು ತಾನೂ ಬಲು ಸಪ್ಪಗಾದಳು. ಇಬ್ಬರಲ್ಲೂ ಇದ್ದ ಮೌನಕ್ಕೆ ಟೀಚರೇ ವಿರಾಮ ಹಾಕಿದರು. ”ಸುಮಾ, ನೋಡಿದ್ರಾ ನನ್ನ ಬಾಳಿನಲ್ಲಿ ಎಂಥ ಸಿಡಿಲು ಬಂದು ಬಡೀತೂಂತಾ!ಎಲ್ಲಾ ಚೆನ್ನಾಗಿದೀವಿ ಅಂತ ನೆಮ್ಮದಿಯಾಗುವಷ್ಟರಲ್ಲಿ ಇಂಥ ದೊಡ್ಡ ಆಪತ್ತು ಬಂದೆರಗಿತಲ್ಲಾ! ನನ್ ಗಂಡ ಪ್ರತಿ ದಿನ ಶಾಲೆಗೆ ಬಿಟ್ ಬರ್ತಿದ್ರು ನೋಡಿ, ನಾನೂ ಯಾವ ಚಿಂತೆ ಇಲ್ಲದೆ, ಜೊತೆಗೆ ಹೋಗಿ ಬಂದಿರುತ್ತಿದ್ದೆ. ಅದ್ಯಾವ ಶುಭಘಳಿಗೆಯೋ ನಿಮ್ಮ ಪರಿಚಯವಾಗಿ, ನೀವೂ ಸ್ವಂತವಾಗಿ ಗಾಡಿ ಓಡಿಸೋದು ನೋಡಿ ಕಲಿಯಬೇಕೆನಿಸಿ ಕೇಳಿಕೊಂಡಾಗ, ನೀವೂ ಮನಸ್ಸು ಮಾಡಿ ಹೇಳಿಕೊಟ್ಟಿರಿ. ನೀವು ಆ ದಿನ ಹೇಳಿಕೊಟ್ಟ ವಿದ್ಯೆ, ನನಗೀವತ್ತು ನನ್ನ ಜೀವನಕ್ಕೆ ಆಸರೆಯಾಗಿ ನಿಂತಿದೆ. “, ಎಂದು ಗದ್ಗದಕಂಠದಲ್ಲಿ ಹೇಳಿದರು. ಅದಕ್ಕೆ ಸುಮಾ, ಟೀಚರ್ ಭುಜದ ಮೇಲೆ ಕೈಯಿಟ್ಟು, ”ನಿಮ್ಮನ್ನ ಇಷ್ಟು ದಿನ ಮಾತನಾಡಿಸೋಕೆ ಬರದಿದ್ದಕ್ಕೆ ಕ್ಷಮಿಸಿ ಟೀಚರ್. ನನಗೆ ನಿಮ್ಮ ಈ ಬಾಡಿದ ಮುಖ ನೋಡಲು ಕಷ್ಟವೆನಿಸಿತು. ಹಾಗೇ ನಿಮ್ಮನ್ನ ಹೇಗೆ ಸಮಾಧಾನ ಮಾಡಬೇಕೆಂಬುದೇ ತಿಳಿಯದೆ ಹೇಡಿಯ ಥರ ಹಿಂಜರಿದೆ. ದಯವಿಟ್ಟು ಅಳಬೇಡಿ ಟೀಚರ್. ಈ ವಿಚಾರದಲ್ಲಿ ನನ್ನ ದೊಡ್ಡತನ ಏನಿಲ್ಲ . ಕಲಿಯುವ ಮನಸ್ಸಿಗೆ ವಯಸ್ಸಿನ ಅಡ್ಡಿ ಬರುವುದಿಲ್ಲವೆನ್ನುವಂತೆ, ನೀವೇ ಮನಸ್ಸು ಮಾಡಿ ಕಲಿತುಕೊಂಡ್ರಿ. ಹಾಗೇ ನಿಮ್ ದುಡ್ಡನ್ನ ಹೊಂದಿಸಿಕೊಂಡು ಗಾಡಿ ತಗೊಂಡ್ರಿ. ನೀವು ಈಗ ನಿಮ್ಮ ಪ್ರಯತ್ನದಲ್ಲಿ ಗಾಡಿ ಓಡಿಸೋದು ನೋಡಿ ನನಗಂತೂ ಬಾಳಾ ಖುಷಿಯಾಗುತ್ತದೆ.

ಆದರೂ ಭಗವಂತನ ಲೀಲೆಯೇ ವಿಚಿತ್ರ ಟೀಚರ್. ಒಳ್ಳೆಯವರನ್ನೆಲ್ಲಾ ಬೇಗನೆ ತನ್ನ ಬಳಿಗೆ ಕರೆಸಿಕೊಳ್ತಾನೆ. ನಿಮ್ ಮನೆಯವ್ರು ಎಷ್ಟು ಸಾಧುಪ್ರಾಣಿಯಂತಿದ್ದರು. ಪಕ್ಕದ ಮನೆಯಲ್ಲೇ ಇದ್ದರೂ ಕೂಡಾ ಅವರ ದನಿ ಹೇಗಿದೆ ಎಂದು ನಾನೆಂದೂ ಕೇಳಿರಲಿಲ್ಲ. ಇನ್ನು ಪುಣ್ಯಾತ್ಮರು, ಯಾರನ್ನೂ ಕತ್ತೆತ್ತಿಯೂ ನೋಡುತ್ತಿರಲಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಮನೆ ಸೇರಿಕೊಳ್ಳುತ್ತಿದ್ದರು. ಇಂಥವರಿಗೆ ಎಂಥ ಸಾವು ಬಂದ್ಬಿಡ್ತು. ಛೇಛೇ!

ಪ್ರಪಂಚದ ನೀತಿಯೇ ಹೀಗೆ ಅಲ್ವಾ ಟೀಚರ್! ಎಲ್ಲರೂ ಸರತಿಯಲ್ಲಿರುವವರೇ ಒಬ್ಬರು ಮುಂದೆಯಾದರೆ ಒಬ್ಬರು ಹಿಂದೆ. ಆದರೂ ಹುಟ್ಟಿಸಿದ ಎಲ್ಲರಿಗೂ ಭಗವಂತನು ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ಬಾಗಿಲು ಖಂಡಿತ ತೆರೆದಿರುತ್ತಾನೆ. ಹುಡುಕುವ ಕಣ್ಣುಗಳು ನಮಗಿರಬೇಕು ಅಷ್ಟೇ! ಬದುಕಿನಲ್ಲಿ ಏನೇ ಕಷ್ಟ ಬರಲಿ ಎದುರಿಸಿಯೇ ತೀರಬೇಕು.

ಕಲಿಯುವ ಅವಶ್ಯಕತೆ ಇಲ್ಲವೆಂದು ನೀವು ಹಾಗೇ ಇರಬಹುದಿತ್ತು. ಆದರೂ ಈ ವಯಸ್ಸಿನಲ್ಲೂ ಮನಸ್ಸು ಮಾಡಿ ನನ್ನನ್ನ ಕೇಳಿ ವಿದ್ಯೆ ಕಲಿತುಕೊಂಡಿರಿ. ನಾನು ನಿಮಗೆ ಕಲಿಸಿದ್ದಕ್ಕೂ ಸಾರ್ಥಕವಾಯಿತು”, ಎಂದಳು.

ಸುಮಾಳ ಈ ವಿಶಾಲ ಮನೋಭಾವ ಕಂಡ ಸುಜಾತ ಟೀಚರ್ ಮೂಕವಾದರು. ತುಟಿಗಳು ಏನೂ ಹೇಳದಿದ್ದರೂ ಅವರ ಕಣ್ಣುಗಳು ಸುಮಳೆಡೆಗೆ ಕೃತಜ್ಞತಾ ಭಾವದಲ್ಲಿ ತುಂಬಿ ನೋಡುತ್ತಿದ್ದವು. ಸುಮ ಮಾಡಿದ್ದ ಸಣ್ಣ ಸಹಾಯ ಅವರ ಬಾಳಿನಲ್ಲಿ ದೊಡ್ಡ ಬದಲಾವಣೆ!

ಅಳಿಲು ಮಾಡಿದ್ದು ಚಿಕ್ಕ ಸೇವೆಯಾದರೂ ಶ್ರೀರಾಮನಿಗೆ ಆದೆಷ್ಟೋ ಸಹಾಯಕ್ಕೆ ಬರಲಿಲ್ಲವೇ?ಹಾಗೇ ನಾವು ಮಾಡುವ ಚಿಕ್ಕ ಸಹಾಯ ಒಮ್ಮೊಮ್ಮೆ ಬೇರೆಯವರ ಜೀವನಕ್ಕೆ ದೊಡ್ಡ ಊರುಗೋಲಾಗುವುದಾದರೆ, ಆ ಸಹಾಯ ಮಾಡಿದ ಜೀವಗಳು ಸಂತೃಪ್ತಿಯಲ್ಲಿ ಮಿಂದು ಧನ್ಯವಾಗುವಂತೆ ಸುಮಾಳು ಟೀಚರ್ ಗೆ ಮಾಡಿದ್ದು ಕಿಂಚಿತ್ತು ಸೇವೆಯಾದರೂ, ಎಂದೆಂದಿಗೂ ಅವರ ಮಾನಸಪಟದಲ್ಲಿ ಅಳಿಸಲಾರದೆ ಉಳಿದುಬಿಟ್ಟಿತ್ತು.

-ರೂಪ ಮಂಜುನಾಥ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
MANJURAJ
MANJURAJ
6 months ago

ರೂಪಾ ಮೇಡಂ, ಸರಳ ಮತ್ತು ಸಹಜವಾಗಿ ಮೂಡಿ ಬಂದಿದೆ. ಪ್ರಬಂಧದ ಲಕ್ಷಣಗಳನ್ನು ಒಳಗೊಂಡ ಈ ಕತೆ ಹೃದಯ ಮುಟ್ಟುವುದು. ಪ್ರಸಂಗವೊಂದನ್ನು ಹೇಗೆ ಬರೆಹ ಮಾಡಬಹುದೆಂಬುದಕ್ಕೆ ಇದು ನಿದರ್ಶನ. ವಸ್ತು ಪುಟ್ಟದಾದರೇನು? ಆಶಯ ದೊಡ್ಡದು. ಇದುವೇ ಸಾಹಿತ್ಯದ ಸಂಸರ್ಗ.

ಅಭಿನಂದನೆ ಮತ್ತು ಧನ್ಯವಾದ

1
0
Would love your thoughts, please comment.x
()
x