“ಕತ್ತಲ ಹೂವು” ನೀಳ್ಗತೆ (ಭಾಗ ೩): ಎಂ.ಜವರಾಜ್

-೩-

ಅವತ್ತು ಮಳೆ ಜೋರಿತ್ತು. ಬಿರುಗಾಳಿ. ಶಿವಯ್ಯನ ಮನೆಯ ಮಗ್ಗುಲಿಗಿದ್ದ ದೊಡ್ಡ ವಯನುಗ್ಗೆ ಮರ ಬೇರು ಸಮೇತ ಉರುಳಿತು. ಮರದ ರೆಂಬೆ ಕೊಂಬೆಗಳು ಮನೆಯ ಮೇಲೂ ಬಿದ್ದು ಕೈಯಂಚು ನುಚ್ಚಾಗಿದ್ದವು. ಮಳೆಯಿಂದ ಮನೆಯೆಲ್ಲ ನೀರು ತುಂಬಿತ್ತು. ಶಿವಯ್ಯ, ಅವನ ಹೆಂಡತಿ ಸಿದ್ದಿ ಮಕ್ಕಳನ್ನು ತಬ್ಬಿಕೊಂಡು ಕೊಟ್ಟಿಗೆ ಮೂಲೇಲಿ ನಿಂತು ಸೂರು ನೋಡುವುದೇ ಆಯ್ತು. ಪಕ್ಕದ ಗೋಡೆಯಾಚೆ ಅಣ್ಣ ನಿಂಗಯ್ಯನ ಮನೆಯಲ್ಲಿ ಆರು ತಿಂಗಳ ಹೆಣ್ಗೂಸು ಕರ್ರೊ ಪರ್ರೊ ಅಂತ ಒಂದೇ ಸಮ ಅರಚುತ್ತಿತ್ತು. ಶಿವಯ್ಯ ‘ಅಣ್ಣ.. ಅಣೈ ಮನ ಸುರಿತಿದ್ದಾ.. ಏನ್ ಮಾಡ್ತಿದ್ದರಿ.. ಕೂಸು ಅಳ್ತ ಅದಲ್ಲ’ ಅಂತ ಕೂಗಿದ. ಆ ಮಳೆ ಆ ಗಾಳಿ ಆ ಗುಡುಗು ಸಿಡಿಲಿನ ಸದ್ದಿಗೆ ಶಿವಯ್ಯನ ಮಾತು ಕೇಳಿಸಿತೊ ಏನೊ.. ಅಂತೂ ಆ ಕಡೆ ತಣ್ಣಗೆ ‘ಜೋ..ಅಜ್ಜಜ್ಜೊ.. ಜೋಜೋ.. ಳುಳುಳುಳುಳಾಯೀ.. ಅಜ್ಜಮ್ಮಾ.. ಅಜ್ಹೊ ಅಜ್ಜೊ ಅಜ್ಜಮ್ಮೊ.. ಳುಳುಳುಳಾಯೀ…’ ಅಂತ ಚೆನ್ನಬಸವಿಯ ಜೋಗುಳ ಕೇಳ್ತಿತ್ತು. ಜೋಗುಳದ ನಡುವೆ ಅಳುತ್ತಿದ್ದ ಕೂಸು ಸುಮ್ಮನಾದಂತಿತ್ತು.

ಚೆನ್ನಬಸವಿ, ಮಗಳು ನೀಲಳನ್ನು ತಮ್ಮನಿಗೆ ಕೊಟ್ಟು ಮದುವೆ ಮಾಡಿದ್ದಳು. ಇದು ಗಂಡ ನಿಂಗಯ್ಯನಿಗೆ ಇಷ್ಟವಿರಲಿಲ್ಲ. ಆದರೆ ಚನ್ನಬಸವಿಗೆ ಹಠ. ಆ ಹಠದ ಹಿಂದ ಹಿಂದೆ ಯಂಕ್ಟಪ್ಪನೂ ಇದ್ದ. ಇದು ನಿಂಗಯ್ಯನಿಗೂ ಗೊತ್ತು. ಹೀಗಾಗಿ ಅವಳ ಹಠದ ಮುಂದೆ ನಿಂಗಯ್ಯ ಏನೂ ಮಾಡುವಂತಿರಲಿಲ್ಲ.

                      ----

ಮದುವೆಯಾದ ಹೊಸದರಲ್ಲಿ ನುಲೀತಿದ್ದ ಚೆನ್ನಬಸವಿ ಊರಲ್ಲಿ ರಂಗಾಗಿ ಕಂಡಿದ್ದಳು. ಸೌದೆ ಹೊಡೆಯಲು ಹೋಗಿ ಕತ್ತಲಾದ ಮೇಲೆ ಮನೆ ಸೇರುತ್ತಿದ್ದ ನಿಂಗಯ್ಯ ಬರುವಾಗ ಹೆಂಡತಿಗಾಗಿ ಅಯ್ಯರ್ಸ್ ಹೋಟೆಲಿಂದ ಬಾಯಲ್ಲಿ ನೀರೂರಿಸುವ ಸೆಟ್ ದೋಸೆ ತಂದು ಕೊಟ್ಟು ಮುದ್ದು ಮಾಡುತ್ತಿದ್ದ. ಚೆನ್ನಬಸವಿ ದೋಸೆ ಪೊಟ್ಟಣ ಮುಖದ ಮುಂದೆ ತಂದು ವಾಸನೆ ಹೀರಿ ಸರಸರನೆ ಬಿಚ್ಚಿ ತಿಂದು ತೇಗುತ್ತಿದ್ದಳು. ಅವಳು ತಿಂದು ತೃಪ್ತಿಯಾಗಿ ತೇಗಿದ್ದು ನಿಂಗಯ್ಯನಿಗೆ ಸ್ವರ್ಗದಲ್ಲಿ ತೇಲಿದಷ್ಟೇ ತೃಪ್ತಿ. ಇದೇ ತೃಪ್ತಿ ಅವಳು ನಿದ್ರೆಗೆ ಜಾರಿ ಗೊರಕೆ ಹೊಡೆಯುತ್ತಿದ್ದಂತೆ ಜರ‌್ರನೆ ಇಳಿಯುತ್ತಿತ್ತು.

ಈತರ ಮಾಮೂಲಾಗಿ ದಿನ ತಿಂಗಳು ವರ್ಷ ಕಳೆಯುತ್ತ ಮೂರು ನಾಲ್ಕು ವರ್ಷವಾದರು ಚೆನ್ನಬಸವಿ ಹೊಟ್ಟೇಲಿ ಒಂದು ಹುಳುವೂ ಹುಟ್ಟಲಿಲ್ಲ. ಹೀಗಂತ ಅವಳ ಅತ್ತೆ ಅಡಿನಿಂಗಿ ಹೋದಲ್ಲಿ ಬಂದಲ್ಲಿ ಅವರಿವರಿಗೆ ಒಪ್ಪಿಸಿ ಜಗಜ್ಜಾಹೀರು ಮಾಡಿದ್ದಳು. ಅಡಿನಿಂಗಿಯ ಈ ವರಾತ ನಿಂಗಯ್ಯನಿಗೆ ನೆಮ್ಮದಿ ಕೆಟ್ಟು ಸಿಡಿಸಿಡಿ ಸಿಡಿಯ ತೊಡಗಿದ. ಈ ಸಿಟ್ಟಿಗೊ ಸಿಡುಕಿಗೊ ಹಾಗೂ ಹೀಗೂ ಈ ಜಂಜಾಟದೊಳಗೆ ಹುಟ್ಟಿದ್ದ ನೀಲ ಚಂದುಳ್ಳಿ ಚೆಲುವೆ.

ಚೆಂದುಳ್ಳಿ ಚೆಲುವಿ ನೀಲ ಆಡಾಡುತ ಬೆಳೆದ ರೀತಿಯನ್ನು ಊರು ನೋಡಿತ್ತು. ನೀಲ ಯಾರಿಗೆ ತಾನೆ ಇಷ್ಟ ಇಲ್ಲ. ಅವರಿವರ ಮನೆಗೆ ಹೆಣ್ಣು ನೋಡಲು ಬಂದವರು ನೀಲಳನ್ನು ನೋಡದೆ ಹೋದದ್ದಿಲ್ಲ. ‘ಚೆಲುವಿ ಅಂತ ನೋಡುದ್ರ ಒಪ್ಪುದ್ರ ಆ ಚಿಕ್ಕೆಣ್ಣ ಮದ್ವ ಮಾಡಿ ಕಳಿಸಕಾದ್ದ’ ಅಂತ ಜವಾಬು ಇತ್ತು. ಇದಾಗಿ ಚೆನ್ನಬಸವಿಗೆ ಒಂದಾದ ಮೇಲೆ ಒಂದರಂತೆ ಒಂದು ಹೆಣ್ಣು ಒಂದು ಗಂಡಾದವು. ಹೆಣ್ಣಿಗೆ ಶಿವಿ ಅಂತಿಟ್ಟು ಖಾಯಿಲೆ ಕಸಾಯಿ ಅಂತಾಗಿ ಸುಶೀಲಳಾದರೆ ಗಂಡು ಸಿದ್ದೇಶನಾಯ್ತು. ಅವೂ ಬೇಳಿತಾ ಬೆಳಿತಾ ನಿಂಗಯ್ಯನೂ ಕುಂತಲ್ಲಿ ಕೂರದೆ ನಿಂತಲ್ಲಿ ನಿಲ್ಲದೆ ಸಂಸಾರದ ಪಡಿಪಾಟಲು ಮೈಯೊದ್ದು ಎಡಬಿಡದೆ ಸೌದೆ ಒಡೆದು ಒಡೆದು ಸಾಕು ಸಾಕಾಗಿತ್ತು. ಎಷ್ಟು ಹೊಡೆದರು ಕೈತುಂಬ ಕಾಸು ಗಿಟ್ಟದೆ ಚೆನ್ನಬಸವಿಯ ಮುನಿಸು ದುಪ್ಪಟ್ಟಾಗಿ ಸಿಟ್ಟು ಸಿಡುಕಿನೊಂದಿಗೆ ಅವಳ ಅಹಂಕಾರ ಅಲಂಕಾರವೂ ಜೋರಾಗಿತ್ತು. ಈ ಅಲಂಕಾರಕ್ಕೆ ಒಂದು ಚಿಕ್ಕ ಕನ್ನಡಿ, ಪಾಂಡ್ಸ್ ಪೌಡರ್, ಸ್ನೊ ಡಬ್ಬಗಳು ದೇವರ ಫೋಟೋ ಕೆಳಕ್ಕೆ ಗೋಡೆಗೆ ಮೊಳೆ ಹೊಡೆದು ಹಾಕಿದ್ದ ಮರದ ಸ್ಟ್ಯಾಂಡಲ್ಲಿ ಭದ್ರ ಸ್ಥಾನ ಪಡೆಯುತ್ತಾ ಹೋದವು.

‘ಇದೇನ ಇದು ಈ ಮನ ಪಾಡು.. ಹಿಂದಿಲ್ಲ ಮುಂದಿಲ್ಲ ವಯ್ಯಾರ ನೋಡು ಇವ್ಳ್ ವಯ್ಯಾರವ’ ಅಂತ ಗೊಣಗಿ ನಟಿಕೆ ಮುರಿಯುತ್ತ ‘ಹೊಟ್ಗ ಹಿಟ್ಟಿಲ್ಲ ಜುಟ್ಗ ಮಲ್ಗ ಹೂವಂತ.. ಕ್ಯಾವಣಿ ಇದ್ರ ಹಿಂಗೆಲ್ಲ ಆಯ್ತಿತ್ತಾ..’ ಅನ್ನೊ ಅಡಿನಿಂಗಿಯ ಒಗಟಿನ ಮಾತು ಶಿವಯ್ಯ ಸಿದ್ದಿಯ ಮುಂದೆ ಬಿತ್ತರವಾದವು. ಅವ್ವನ ಮಾತು ಕೇಳಿದ ಶಿವಯ್ಯ ಚಿಂತೆಗೆ ಬಿದ್ದ. ಸಿದ್ದಿಯೂ ಗೊಣಗುಟ್ಟಿದಳು. ಹೀಗಾದರೆ ಸರಿಯಾಗಲ್ಲ ಅಂತ ಕುಂತಲ್ಲಿ ನಿಂತಲ್ಲಿ ಯೋಚಿಸಿ ಕಿರಿಮಗ ಸಿದ್ದಯ್ಯನಿಗೂ ಒಂದು ಜೋಡಿ ಮಾಡಲು ಅಣಿಯಾದಳು. ಇದು ಹಿರಿಸೊಸೆ ಚೆನ್ನಬಸವಿಗೆ ಗಂಟಲು ಕಟ್ಟಿದಂಗಾಗಿ ನಡುಕಟ್ಟಿ ನಿಂತಂತೆ ಕಂಡಿತು. ತಿಂಗಳು ಒಪ್ಪತ್ತು ಕಳೆಯುವುದರಲ್ಲೆ ಸಿದ್ದಯ್ಯನಿಗೆ ಕೊಳೇಗಾದತ್ರ ಮುಳ್ಳೂರಿನಿಂದ ಹೆಣ್ಣು ತಂದು ಮದುವೆ ಮಾಡಿದ್ದಾಯ್ತು. ಕಿರಿಸೊಸೆ ದುಂಡಿ ಕುಳ್ಳಗೆ ಬೆಳ್ಳಗೆ ಉದ್ದಜಡೆ ಹಾಕಿಕೊಂಡು ಹೂವ ಮುಡಿದು ನಡುಮನೆಯಲ್ಲಿ ಕುಂತರೆ ಮುಗಿತು. ಕಿರಿಮಗ ಸಿದ್ದಯ್ಯ ಹಲ್ಲು ಕಿರಿಯುವುದು ಬಿಟ್ಟರೆ ಮಾತಿನ ಮಲ್ಲನಂತು ಅಲ್ಲ. ಇದು ಅಡಿನಿಂಗಿಗೆ ಅರಿವಾಗಿ ಬೆರಗಾಗಿ ‘ಇದೇನ ಇದು ಎತ್ತು ಏರ‌್ಗೆಳುದ್ರ ಕ್ವಾಣ ನೀರ‌್ಗೆಳಿತಿತ್ತಂತ’ ಅಂತ ಶಿವಯ್ಯನೊಂದಿಗೆ ಸರೊತ್ತಲ್ಲಿ ಎದ್ದು ಗುಸುಗುಸು ಮಾತಾಡಿ ಹೊಲಗದ್ದೆ ಹೊರತಾಗಿ ಇರೊ ಮನೇನ ಮೂರುಭಾಗ ಮಾಡಿ ಕೈಬಡಿದು ‘ಹೋಗಿ ಸಾಯ್ಲಿ ಅತ್ತಗಿ… ನನ್ ಜಬದಾರಿ ನಾ ಮುಗಿಸಿನಿ’ ಅಂತ ನಡುಕಲವನು ಶಿವಯ್ಯ ಸಿದ್ದಿಯೊಂದಿಗೆ ಇದ್ದುಕೊಂಡಳು.

ಶಿವಯ್ಯನಿಗೆ ವರ್ಷಕ್ಕೆ ಒಂದರಂತೆ ಹೆಣ್ಣು ಗಂಡು ಎನ್ನದೆ ಎಂಟೊಬತ್ತು ಮಕ್ಕಳಾಗಿ ಮನೆ ಗಲಗಲ ಸದ್ದು ಮಾಡುತ್ತ ತುಂಬಿ ತುಳುಕತೊಡಗಿತು. ಈ ತುಳುಕಾಟದಲ್ಲೆ ಹೊಲಗದ್ದೆ ನೋಡಿಕೊಂಡು ಅಕ್ಕತಂಗಿರ ಕರೆದು ನಂಟುಸ್ತನ ಮಾಡುತ್ತಿದ್ದರೆ, ನಿಂಗಯ್ಯ ಚೆನ್ನಬಸವಿಯ ತಾಳದಲ್ಲಿ ಮೆತ್ತಗಾಗಿದ್ದ. ಕಿರಿಯವನು ನೀಟಾಗಿ ತಲೆ ಬಾಚಿಕೊಂಡು ಇಸ್ತ್ರಿ ಮಾಡಿದ ಬಟ್ಟೆ ಹಾಕಿಕೊಂಡು ನಾಜೂಕಿನಿಂದ ಬರೀ ಹಲ್ಲು ಕಿರಿಯುವುದೇ ಆಯ್ತು. ದುಂಡಿ ತನ್ನವ್ವನ ಜೊತೆ ಕೊಳ್ಳೆಗಾಲ ಮುಳ್ಳೂರು ಸೈಡಿನ ಆಸುಪಾಸಿನ ಊರೂರು ತಿರುಗಿ ಆ ದೇವರು ಈ ದೇವರು ಮಾಡಿದ್ದಾಯ್ತು. ಎಷ್ಟು ದೇವರು ದಿಂಡರು ಮಾಡಿದರು ದುಂಡಿಯ ಹೊಟ್ಟೆಯಲ್ಲಿ ಒಂದು ಹುಳುವೂ ಹುಟ್ಟಲಿಲ್ಲ.

ಇದೆಲ್ಲವನ್ನು ಅಡಿನಿಂಗಿ ನೋಡ್ತನೆ ಇದ್ದಳು. ನೋಡ್ತ ನೋಡ್ತನೆ ವರಸೆ ಶುರು ಮಾಡಿದಳು. ಚೆನ್ನಬಸವಿಗೆ ಮಾಡಿದಂತೆ ಅವಳ ವರಾತ ಕಿರಿಸೊಸೆ ಕಡೆ ತಿರುಗಿ ಬೀದಿಬೀದಿಯಲಿ ಕೇರಿಕೇರಿಯಲಿ ದುಂಡಿಯ ಹೊಟ್ಟೇಲಿ ಒಂದೂ ಹುಳು ಹುಟ್ಟದ್ದ ಜಗಜ್ಜಾಹೀರು ಮಾಡುತ್ತಾ ಹೋದಳು. ಅವಳು ಎಷ್ಟು ಜಗಜ್ಜಾಹೀರು ಮಾಡಿದರು ಯಾಕೊ ಏನೊ ನಿಂಗಯ್ಯ ಚೆನ್ನಬಸವಿಗಾದ ಅನುಕೂಲ ಸಿದ್ದಯ್ಯ ದುಂಡಿಗ್ಯಾಕೆ ಆಗಲಿಲ್ಲ…ಅಂತ ಎಷ್ಟೊ ಸಲ ಅಂದುಕೊಂಡು ಸುಮ್ಮನಾಗಿ ಈ ನೋವು ಸಂಕಟ ಅಡಿನಿಂಗಿಯ ಎದೇಲಿ ಉಳಿತು. ಅವ್ವನ ಈ ಜಾಹೀರು ನಿಂಗಯ್ಯನಿಗೆ ತಟ್ಟಿದಂತೆ ಸಿದ್ದಯ್ಯನಿಗೆ ತಟ್ಟಿದಂತೆ ಕಾಣಲಿಲ್ಲ. ಅವನು ಸಿಕ್ಕಸಿಕ್ಕಲ್ಲಿ ಹಲ್ಲು ಕಿರಿಯುವುದನ್ನು ನೋಡಲಾರದ ಅಡಿನಿಂಗಿ ತನ್ನ ಜಾಹೀರಿಗೆ ಕಡಿವಾಣ ಹಾಕಿಕೊಂಡು ತನ್ನ ಮಾಮೂಲಿ ಕೆಲಸಕ್ಕೆ ಒಕ್ಕಲಗೇರಿ ಕಡೆ ನಡೆದಳು.

                     -----

ಯಂಕ್ಟಪ್ಪ ಒಕ್ಕಲಗೇರಿಗೆ ದೊಡ್ಡವನು. ತಳುಕು ಬಳುಕಿನವನು. ಆ ತಳುಕು ಬಳುಕು ಮೇಲ್ನೋಟದಲ್ಲಿ ಕಂಡ ಉದಾಹರಣೆ ಇಲ್ಲ. ಒಂದು ಬಿಳೀ ಪಂಜೆ ಬಿಳೀ ಶರ್ಟು ಬೀಳೀ ಟವಲ್ ಹಣೆ ಮೇಲೆ ಒಂದು ಕೆಂಪು ನಾಮ ಹಾಕಿಕೊಂಡು ಗಂಭೀರವಾಗಿ ನಡೆಯುತ್ತಿದ್ದ.

ಅವನಿಗೆ ಎಲ್ಲರು ಕೈಮುಗಿದು ಗೌರವ ಕೊಡುತ್ತಿದ್ದರು. ಮಾದಿಗೇರಿಲಿ ಯಾವ್ದೆ ಹಬ್ಬ ಹರಿದಿನ ನಡೆದರು ಯಂಕ್ಟಪ್ಪನಿಗೆ ಒಂದು ಇಳ್ಯ ಇರುತ್ತಿತ್ತು. ಬೈರಾಪುರ ಮಾದಿಗೇರಿ ಅಂತಾನೇ ಫೇಮಸ್. ಅಲ್ಲಿ ಆಗುವಷ್ಟು ಹಬ್ಬ ಬೇರೆಲ್ಲು ಆಗಲ್ಲವೇನೊ ಎಂಬಂತೆ ಸುತ್ಮುತ್ತ ಊರು ಮಾತಾಡುತ್ತಿತ್ತು. ಒಗ್ಗಟ್ಟಿಗೂ ಊರು ಹೆಸರುವಾಸಿಯಾಗಿತ್ತು. ದಂಡಿನಮಾರಿ ಹಬ್ಬವೆಂದರೆ ಸಂಭ್ರಮ. ಕುಲ ಅಂತ ಇತ್ತು. ಕುಲೊಸ್ತರು ಅಂತಾನೂ ಇದ್ದರು. ಕುಲದಿಂದ ಒಂದು ಎಮ್ಮೆ ಕೋಣವನ್ನು ಬಲಿಗಾಗಿ ತರುತ್ತಿದ್ದರು. ಇನ್ನು ಹತ್ತಾರು ಕೋಣಗಳು ಬೈರಾಪುರದ ಪೂರ್ವ ದಿಕ್ಕಿಗಿದ್ದ ತಿರುಮಕೂಡಲು ಒಕ್ಕಲಿಗ ಗೌಡರು ಹರಕೆಗೆ ಅಂತ ಒಪ್ಪಿಸಿ ಕುಲಕ್ಕೆ ನೀಡುತ್ತಿದ್ದರು. ಇದು ವಾಡಿಕೆ ಎಂಬಂತೆ ವರ್ಷಾವರ್ಷ ಹರಕೆ ಕೋಣಗಳು ದುಪ್ಪಟ್ಟಾಗುತ್ರಿದ್ದವು.

ತಿರುಮಕೂಡಲು ಅಂದರೆ ಒಕ್ಕಲಿಗರು, ನಾಯಕರದ್ದೇ ಪಾರುಪತ್ಯ. ಪಂಚಾಯ್ತಿ ಮೆಂಬರು ಅಧ್ಯಕ್ಷ ಸ್ಥಾನ, ರಾಜಕೀಯ ನಿರ್ಧಾರಗಳ ವಿಚಾರ ಬಂದರೆ ನಾಯಕ, ಲಿಂಗಾಯಿತ, ಮಾದಿಗರನ್ನು ಹೊರತುಪಡಿಸಿ ಒಕ್ಕಲಿಗರ ಸುಪರ್ದಿಯಲ್ಲಿತ್ತು. ಇವರ ಹಬ್ಬಗಳಲ್ಲು ಅವರ ನೆರಳಿತ್ತು. ಅವರು ಕೊಟ್ಟ ಆ ಎಲ್ಲ ಬಲಿ ಕೋಣಗಳನ್ನು ತರಿದು ಕತ್ತರಿಸಿ ಚೆನೈನ್ ದೇವಸ್ತಾನದ ಮಗ್ಗುಲಿಗಿದ್ದ ದೊಡ್ಡಬಸವಯ್ಯನ ಎರಡು ಹುಣಸೇಮರದ ಅಂಗಳದಲ್ಲೊ ಅಥವಾ ದಂಡಿನಮಾರಮ್ಮನ ಕಳಸ ಹೊತ್ತು ಎಡೆಪೂಜೆಗೆ ಮೀಸಲಾಗಿದ್ದ ಮನೆಯ ಮುಂದೋ ಪಾಲಾಕಿ ಎಲ್ಲ ರೆಡಿ ಆದ ಮೇಲೆ ಒಂದಾಳು ಹೋಗಿ ಬೀದಿಬೀದಿಲಿ ಸಾರಿ ವರಿದಾರರಿಗೆ ಒಂದೊಂದು ಪಾಲು ಕೊಡುತ್ತಿದ್ದರು. ಈತರ ಊರಿತ್ತು.

ಬೈರಾಪುರ ಮಾದಿಗೇರಿಗೆ ಹೊಂದಿಕೊಂಡಂತೆ ಒಕ್ಕಲಗೇರಿ ಅಂತ ಇತ್ತು. ಆ ಒಕ್ಕಲಗೇರಿಯಲ್ಲಿ ಒಕ್ಕಲಿಗ ಗೌಡ ಅಂತ ಇದ್ದಿದ್ದು ನಾಲ್ಕೇ ಕುಳ. ಉಳಿದಂತೆ ಲಿಂಗಾಯಿತರು ಮಡಿವಾಳ ಶೆಟ್ಟರು ಕುರುಬರು ತಲಾ ಐದೈದು ಕುಳವಿದ್ದರು. ಅವರೆಲ್ಲ ಮಾದಿಗೇರಿ ಹಬ್ಬಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ತೀರ್ಥ, ಪೂಜೆ, ಕಳಸ ಹೊರುವ ಊರಿನ ಸಂಪ್ರದಾಯದ ಒಂದು ಪ್ರಮುಖ ಪಾಲುದಾರರಾಗಿದ್ದರು.

ಅವತ್ತು ಸೋಮವಾರ. ಸಂತೆ ಕಟ್ಟುವ ದಿನ. ಎಲ್ಲರ ದಿಗಿಲು ಅತ್ತಲೇ ಇತ್ತು. ಯಂಕ್ಟಪ್ಪನೂ ಅತ್ತಲೇ ಹೋಗ್ತಿದ್ದ. ಅದೆ ಹೊತ್ತಲ್ಲಿ ಒಕ್ಕಲಗೇರಿ ಕಡೆಗೆ ನಡೆದಿದ್ದ ಅಡಿನಿಂಗಿಯ ಬಿರುಸು ನೋಡಿದ ಯಂಕ್ಟಪ್ಪ ‘ಇದೇನಮ್ಮೀ ನಿಂಗಿ ಇಂಗ ಬಿರಬಿರ ಅಂತ ಓಡ್ತಿದೈ’ ಅಂದವನ ಮಾತು ಲೆಕ್ಕಕ್ಕಿಡದೆ ತನ್ನ ಬಿರುಸು ನಡಿಗೆಯನ್ನು ದುಪ್ಪಟ್ಟು ಮಾಡಿ ಸೆಡ್ಡು ಹೊಡೆದಿದ್ದು ಅಲ್ಲೆ ನಿಂತಿದ್ದ ಸುತ್ತಮುತ್ತಲಿನ ಜನರ ಎದುರು ಯಂಕ್ಟಪ್ಪನಿಗೆ ಆದ ಅವಮಾನವಾಗಿತ್ತು.

ಯಾರೇ ಆಗಲಿ ಯಂಕ್ಟಪ್ಪನಿಗೆ ಎದುರು ಮಾತಾಡುವುದಿರಲಿ ಅವರ ಹತ್ತಿರ ಸುಳಿದು ಧೈರ್ಯದಿಂದ ತಲೆ ಎತ್ತಿ ನೋಡಿದವರಿಲ್ಲ. ಮಾತಾಡಿದವರಿಲ್ಲ. ಅಂಥ ಗತ್ತು. ಎಲ್ಲರು ತಲೆತಗ್ಗಿಸಿಯೇ ನಡೆಯುತ್ತಿದ್ದರು. ಇಷ್ಟಾಗಿ ತಾವಾಗಿ ಕರೆದರೂ ಮಾತಾಡಿಸಿದರೂ ಮಾತಾಡುವುದಿರಲಿ ತಿರುಗಿಯೂ ನೋಡದೆ ಬಿರುಸು ನಡಿಗೆಯಲ್ಲಿ ನಡೆದ ಅಡಿನಿಂಗಿಯ ಆ ಅಪಮಾನದ ಕಿಡಿ ಎದೆಗೆ ನಾಟಿ ಇರಿಯುತ್ತಿದ್ದರು ಅದನ್ನು ತೋರಗೊಡದೆ ಯಂಕ್ಟಪ್ಪ ತನ್ನ ಗಂಭೀರ ನಡಿಗೆಯಲ್ಲೆ ಮುಂದೆ ನಡೆದರು.

ಒಕ್ಕಲಗೇರಿ ಕಡೆ ನಡೆಯುತ್ತಿದ್ದ ಅಡಿನಿಂಗಿಗೆ ಯಂಕ್ಟಪ್ಪನ ಬಗ್ಗೆ ಗೊತ್ತಿತ್ತು. ಏನು ಗೊತ್ತಿತ್ತು ಅನ್ನೋದು ಸಿದ್ದಶೆಟ್ಟಿ ಜಗುಲಿಯಲ್ಲಿ ಜಾಹೀರಾಗುತ್ತಿತ್ತು. ಸಿದ್ದಶೆಟ್ಟಿ ಏನು ಅಡಿನಿಂಗಿಯ ಬಗ್ಗೆ ಹೆಚ್ಚುಗಾರಿಕೆ ಇರಲಿಲ್ಲ. ಈ ಯಂಕ್ಟಪ್ಪ ಸಿದ್ದಶೆಟ್ಟರ ಹಿತ್ತಲು ಜಾಗ ಒತ್ತರಿಸಿಕೊಂಡಿದ್ದ. ಗೇದರೆ ಉಂಟು ಇಲ್ಲದಿದ್ದರೆ ಎನ್ನುವಂತಿದ್ದ. ಮನೆತುಂಬ ಮಕ್ಕಳು. ಈ ಮಕ್ಕಳೊಂದಿಗ ಸಿದ್ದಶೆಟ್ಟಿಗೆ ಸಿಟ್ಟಿದ್ದರು ಯಂಕ್ಟಪ್ಪನ ವಿರುದ್ದ ಏನೂ ಮಾಡಲಾಗದೆ ಕೊರಗುತ್ತಿದ್ದ. ಇಲ್ಲಿ ಅಡಿನಿಂಗಿಗೆ ತಿಳಿತುತ್ತಿದ್ದುದು ಸೊಸೆ ಚೆನ್ನಬಸವಿ ಆಗಾಗ ಇತ್ತ ಬರುತ್ತಿದ್ದುದು. ಯಂಕ್ಟಪ್ಪನ ಜೊತೆ ಕಂಬ ಒರಗಿ ಗಂಟೆಗಟ್ಟಲೆ ಮಾತಾಡುತ್ತಿದ್ದದ್ದು. ಅದಕ್ಕೆ ಅಡಿನಿಂಗಿಯ ಮನೆಯಲ್ಲಿ ದೇವರ ಫೋಟೋದ ಕೆಳಗೆ ಹೊಡೆದಿದ್ದ ಸ್ಟ್ಯಾಡಿನ ಮೇಲಿದ್ದ ಚಿಕ್ಕ ಕನ್ನಡಿ, ಪಾಂಡ್ಸ್ ಪೌಡರ್, ಸ್ನೋ ಡಬ್ಬಗಳು ಸಾಕ್ಷಿ ನುಡಿಯುತ್ತಿದ್ದವು.

ಒಂದು ಸಂಜೆ ಮಬ್ಬುಗತ್ತಲಲ್ಲಿ ಸೌದೆ ಸೀಳಿ ಸಾಕಾಗಿ ಕೊಳ್ಳಿ ಹೆಗಲಿಗೇರಿಸಿಕೊಂಡು ಸಿಲ್ಕ್ ಫ್ಯಾಕ್ಟರಿ ಹಿಂಭಾಗದ ಕಾಂಪೌಂಡ್ ಮಗ್ಗುಲಿನ ದಾರಿಯಲ್ಲಿ ಬರುತ್ತಿದ್ದ ಚೆನ್ನಬಸವಿ ಗಂಡ ನಿಂಗಯ್ಯನನ್ನು ಯಂಕ್ಟಪ್ಪ ನಿಲ್ಲಿಸಿ ಮಾತಾಡುತ್ತಿದ್ದ. ಯಂಕ್ಟಪ್ಪ ಯಾರನ್ನು ಈತರ ತನ್ನ ಸಮನಾಗಿ ನಿಲ್ಲಿಸಿಕೊಂಡು ಮಾತಾಡಿದ್ದಿಲ್ಲ. ನೋಡಿದ್ದವರಿಗೆ ಇದು ಗೊತ್ತಿತ್ತು. ಮಾತಾಡುತ್ತ ಅದೆಲ್ಲಿದ್ದವೊ ಏನೊ ಒಂದೆರಡು ಸಾರಾಯಿ ಪ್ಯಾಕೆಟ್ಟು, ಒಂದು ಮಂಗಳೂರು ಗಣೇಶ ಬೀಡಿ ಕಟ್ಟು, ಒಂದು ಚಾವಿ ಕಡ್ಡಿಪೆಟ್ಟಿ ಕೊಟ್ಟಿದ್ದನ್ನು ಸಿದ್ದಶೆಟ್ಟಿ ನೋಡಿದ್ದ. ನಿಂಗಯ್ಯ ಸೌದೆ ಹೊಡೆದು ಸುಸ್ತಾದ ದೇಹವ ಬಾಗಿಸಿ ನಮಿಸಿ ಮುಖದಲ್ಲೆ ನಕ್ಕಿದ್ದು ಕತ್ತಲಲ್ಲಿ ಕರಗಿತ್ತು. ಇದು ಅಡಿನಿಂಗಿಯ ಅಂಗಳದಲ್ಲಿ ಕಾಳು ಚೆಲ್ಲಿದಂಗೆ ಚೆಲ್ಲಿಕೊಂಡು ಅದು ಎದೆಯಲ್ಲಿ ಬೇರುಬಿಟ್ಟು ಯಂಕ್ಟಪ್ಪನಿಗೆ ಸೆಡ್ಡು ಹೊಡೆದಿತ್ತು.

                        -----

ಯಂಕ್ಟಪ್ಪನ ಸಂತೆಯ ವ್ಯವಹಾರ ಜೋರಿತ್ತು. ಸೋಮವಾರ ಬಂತೆಂದರೆ ಸಿಗದವರೂ ಸಿಗುವ ಜಾಗವೆಂದರೆ ಅದು ಸಂತೆ. ಮಂಜ ದನದ ವ್ಯವಹಾರದಲ್ಲಿ ನಿಸ್ಸೀಮ. ಚೆನ್ನಬಸವಿ ತಮ್ಮ. ಯಂಕ್ಟಪ್ಪನೊಂದಿಗೆ ಹಲವು ಸಲ ಜಗಳವಾಡಿದ್ದ. ಅದೂ ವ್ಯವಹಾರದ ಜಗಳ. ಯಂಕ್ಟಪ್ಪನ ಮನೇಲಿದ್ದ ಎರಡು ಎತ್ತುಗಳು ಮಂಜನ ಸುಪರ್ದಿಯಲ್ಲೆ ವ್ಯಾಪಾರವಾಗಿ ಕೊಟ್ಟಿಗೆ ಸೇರಿದ್ದವು. ಮಂಜ ಹೆಗಲ ಮೇಲಿನ ಟವಲ್ಲು ಎತ್ತಿ ಬಡಿದು ‘ಏನ್ ಬುದ್ದಿ’ ಅಂದ. ಯಂಕ್ಟಪ್ಪ ಸಡನ್ನಾಗಿ ‘ಮದ್ವಗಿದ್ವ ಆಗಿ ಬಳ ಸದ್ದು ಆಡುದ್ರ ನಿನ್ ಅದೃಷ್ಟ ಖುಲಾಯಿಸುತ್ತ ನೋಡು.. ಮನ್ಸ್ ಮಾಡ್ಲ..’ ಅಂದ ಮಾತಿಗೆ ‘ಬುದೈ ಸುಮ್ನಿರಿ.. ನೀವು ಸರಿಕಣಾಕಿ ಚನ್ನಾಗ್ ಮಾತಾಡ್ತಿದ್ದರಿ.. ದನಗಿನ ಸಂತಗಿಂತ ಅಂತ ನಿಂತಿನಿ ನಂಗ್ಯಾಕ್ ಬುಡಿ ಬುದ್ದಿ.. ತಗಳಿ.. ಹಂಗೂ ನನ್ ಹಣಲಿ ಮದ್ವ ಅಂತ ಬರ‌ದಿದ್ರ ಮಾಡ್ಕಳಂವ್ ‘ ಅಂದ. ಯಂಕ್ಟಪ್ಪ ‘ಅದ್ಯಾಕ್ಲ ಹಂಗಂದೈ ಸನ್ಯಾಸಿತರ..’ ಅಂತಂದು ಸುಮ್ಮನಾಗಿ ಎಡಗೈಲಿ ಒಂದು ಸೈಡು ಪಂಚೆ ಅಂಚು ಎತ್ತಿಡಿದು ಮಾತಾಡುವವರನ್ನು ಮಾತಾಡಿಸುತ್ತ.. ನಮಸ್ಕಾರ ಮಾಡುವವರಿಗೆ ನಮಸ್ಕರಿಸುತ್ತ.. ಸಂತೆಯೊಳಗಿಂದ ಈಚೆ ಬಂದು ಯಾರಿಗೊ ಕಾಯುವವರಂತೆ ಸೊಂಟಕ್ಕೆ ಕೈಯಿಟ್ಟು ನಿಂತ.

ಸುಡುಸುಡು ಬಿಸಿಲು ನಿಧಾನಕೆ ತಂಪಾಗಿ ಸಂತೆ ಅಳಿಯುವ ಹೊತ್ತು. ಬಹು ದೂರದಿಂದಲೆ ಯಂಕ್ಟಪ್ಪನ ಕಣ್ಣಿಗೆ ಕಂಡವಳು ಚೆನ್ನಬಸವಿ. ಕೈಯಲ್ಲೊಂದು ವೈರ್ ಬ್ಯಾಗಿತ್ತು. ಹತ್ತಿರತ್ತಿರ ಸುಳಿದಂತೆ ಅವಳ ಮುಖಕ್ಕೆ ಹಾಕಿದ್ದ ಪಾಂಡ್ಸ್ ಪೌಡರ್ ಬಿಸಿಲಿನ ಧಗೆಗೆ ಕಮರಿ ಕೆಂಪು ಮುಖ ಬೂದು ಬೂದಾಗಿರುವ ಹಾಗೆ ಕಾಣುತ್ತಿತ್ತು. ಸಣ್ಣ ಸಣ್ಣ ಬೆವರ ಹನಿ ಅವಳ ಎಡ ಬಲ ಕಣ್ಣುಬ್ಬಿನ ಸೈಡಿಂದ ಕೆನ್ನೆಯ ಮಾರ್ಗವಾಗಿ ಇಳಿತಿತ್ತು. ಬಂದವಳು ಸಣ್ಣಗೆ ನಕ್ಕಳು. ಯಂಕ್ಟಪ್ಪ ಗತ್ತಾಗೆ ನಿಂತು ‘ನೀಲ ಬರ‌್ನಿಲ್ವಮ್ಮಿ ಒಬ್ಳೆ ಬಂದಿದೈ’ ಅಂದ. ‘ಅವ್ಳು ಬಂದ್ರ ಮನಲಿರ ಹೈಕ್ಳ ನೋಡೋರ‌್ಯಾರಳಿ’ ಅಂತ ಅರಳೀ ಮರದ ಬುಡಕ್ಕೆ ಬಂದು ನಿಂತಳು. ‘ನಿಮ್ಮತ್ತಗ ಆಂಕಾರ ಅದ.. ಅಂತಿಂತ ಆಂಕಾರ ಅಲ್ಲ ದುರಂಕಾರ’ ಅಂತ ಸಿಟ್ಟಾದ. ‘ನಾನೇಳ್ತಿನಿ ಬುಡಿ..ಅಳಿ’ ಅಂತಂದು ‘ಸಂತ ಅಳಿತದ ಅಳಿ. ಸಂದವತ್ಗ ಬತ್ತಿನಿ’ ಸರಿದಳು ಆಗ ಒಂದು ದೊಡ್ಡ ಲಾರಿ ಸಂತೆಯೊಗಿಂದ ಬೊರ‌್ರಂತ ಅಂತ ಸದ್ದು ಮಾಡುತ್ತ ಧೂಳೆಬ್ಬಿಸಿತು.ಆ ಧೂಳು ಸುತ್ಮುತ್ತ ಕವುಸಿಕೊಂಡು ಕೆಮ್ನುತ್ತಾ ಕಣ್ಮುಂದೆ ಆವರಿಸಿದ ಧೂಳನ್ನು ಆರಿಸಲು ಕೈಯಾಡಿಸುತ್ತಾ ಆಡಿಸುತ್ತಾ ಅವಳ ಕೈಲಿದ್ದ ವೈರ್ ಬ್ಯಾಗನ್ನು ಕಣ್ಣು ಮುಚ್ಚಿ ಬಿಡೊ ಅಷ್ಟರಲ್ಲಿ ಅದ್ಯಾವ ಮಾಯದಲ್ಲಿ ಕಸಿದು ಕೆಳಗಿಟ್ಟು ಮತ್ತೆ ಮೇಲೆತ್ತಿ ಅವಳಿಗೇ ಕೊಟ್ಟು ‘ಸರಿ ನಡಿ’ ಅಂತ ಪಂಚೆ ಮೊನೆ ಹಿಡಿದು ನಡೆವಾಗ ಶಿವಯ್ಯ ಅಲ್ಲೆ ಸಂತೆ ಒಳಕ್ಕೆ ಸೇರಿಕೊಂಡಂತೆ ಹರಿಯುತ್ತಿದ್ದ ಕಿರುಗಾಲುವೆ ಸೈಡಿನಲ್ಲಿದ್ದ ಅತ್ತೀಮರದ ಬುಡದಲ್ಲಿ ಕುಂತು ನೀರಿಗೆ ಕಾಲು ಇಳಿಬಿಟ್ಟು ಹಲಸಿನ ಹಣ್ಣು ತಗಂಡು ತೊಳೆ ಬಿಡಿಸಿ ತಿನ್ನುತ್ತ ಇದ್ದದ್ದು ಯಂಕ್ಟಪ್ಪನಿಗೆ ಗೊತ್ತಾಯ್ತೊ ಏನೊ.. ಅಂತೂ ಈಗವನು ಬಹುದೂರ ನಡೆದು ದಾರಿ ಸವೆಸಿದ್ದ.

ಇತ್ತ ಚೆನ್ನಬಸವಿ ವೈರ್ ಬ್ಯಾಗ್ ಹಿಡಿದು ಸೀಗಡಿ ಕರ‌್ಮೀನು ಇರುವ ಜಾಗಕ್ಕೆ ಹೋಗಿ ಎರಡೆರಡು ಪಾವು ಸೀಗಡಿ ಕರ‌್ಮೀನು ಕಟ್ಟಿಸಿಕೊಂಡು ಮುಂದ್ಮುಂದೆ ಹೋಗುತ್ತ ಆ ವೈರ್ ಬ್ಯಾಗೂ ತುಂಬುತ್ತಾ ಕತ್ತಲು ಮಾತಾಡತೊಡಗಿದ್ದು ಚಂದ್ರನಿಗೆ ಅದೆಷ್ಟು ಅರ್ಥವಾಯ್ತೊ ಬಿಡ್ತೊ ಅವ್ವನ ತೊಡೆ ಏರಿ ದೊಡ್ಡವ್ವ ಕೊಟ್ಟಿದ್ದ ಗ್ಲೂಕೂಸ್ ಬಿಸ್ಕಟ್ ಪ್ಯಾಕೆಟ್ ಹರಿದು ಒಂದು ಬಿಸ್ಕಟ್ ಎತ್ತಿಕೊಂಡು ತಿನ್ನುತ್ತ ದೊಡ್ಡವ್ವನ ಮನೆ ಬಾಗಿಲ ಕಡೆಗೇ ನೋಡುವಾಗ ಅವ್ವನ ಹ್ಞೂಂಗುಟ್ಟುವ ದನಿ ಮಾತ್ರ ಕೇಳ್ತಿತ್ತು.

ಈಗ ದೊಡ್ಡವ್ವನ ಮನೆಯಿಂದ ಒಬ್ಬೊಬ್ಬರೇ ಹೊರ ಬಂದು ಈಚೆ ನಿಂತರು. ಒಳಗಿಂದ ಬಾಗಿಲು ದಡ್ ಅಂತು. ಬಾಗಿಲು ಸದ್ದಿನ ಜೊತೆಗೆ ಗಬ್ಬು ವಾಸನೆ ಮುತ್ತಿಕೊಂಡು ಹೊರಗೆ ನಿಂತಿದ್ದವರು ಮೂಗಿಗೆ ಕೈಬೆರಳಿಟ್ಟು ಸೈಡಿಗೆ ಸರಿದಂತೆ ಕಂಡಿತು. ನೀಲ ಬೀಸುಗಾಲು ಹಾಕೊಂಡು ಕ್ಯಾಕರಿಸಿ ಉಗಿಯುತ್ತ ಈಚೆ ಬಂದವಳು ಅವ್ವನ ತೊಡೆ ಮೇಲೆ ಗ್ಲೂಕೂಸ್ ಬಿಸ್ಕಟ್ ತಿಂತಾ ಕುಂತಿದ್ದ ಚಂದ್ರನ ಮುಂದಲೆ ಹಿಡಿದು ಜಾಡಿಸಿ ‘ಕೊಡಲೆಯ್ ನಿಮ್ಮೊವ್ ಮಿಂಡ್ ತಂದಿದ್ನ’ ಅಂತ ಅವನ ಕೈಲಿದ್ದ ಗ್ಲೂಕೂಸ್ ಬಿಸ್ಕಟ್ ಕಿತ್ತುಕೊಂಡು ದಿದಿ ದಿದಿಗುಟ್ಟಿ ಓಡ್ತ ತೆಂಗಿನ ಮರದತ್ರ ನಿಂತು ಬಿಸ್ಕಟನ್ನು ದಾವಣಿ ಲಂಗಕ್ಕೆ ಕಟ್ಟಕೊಂಡಳು. ಅದೇನಾಯ್ತೊ ಏನೊ ಸಿಡಿಗುಟ್ಟುತ್ತ ಅತ್ತ ಸರಿದು ಬೀದಿಲಿದ್ದ ಧೂಳನ್ನು ಒಂದು ಸೆರಾ ಕೈಲಿಡಿದು ಮರದ ಬುಡಕ್ಕೆ ಹಾಕಿದಳು. ಧೂಳು ಮೆತ್ತಿದ್ದ ಕೈಯನ್ನು ಪಟಪಟ್ ತಟ್ಟಿ ಒದರಿದಳು. ಇದೆಲ್ಲ ಕರಾರುವಾಕ್ಕು ಮುಗಿಸಿ ಮರಕ್ಕೆ ಒರಗಿ ನಿಂತು ದಾವಣಿಗೆ ಕಟ್ಟಿಕೊಂಡಿದ್ದ ಗ್ಲೂಕೂಸ್ ಬಿಸ್ಕಟನ್ನು ಎತ್ತಿಕೊಂಡು ಬಾಯಿಗೆಸೆದು ತಿನ್ನುತ್ತ ಅವರ ಮನೆಗೆ ಬಂದಿದ್ದ ಒಕ್ಕಲಗೇರಿಯವರನ್ನು ‘ಹೋಗ್ಬಂದರ‌್ಯಾ.. ಹುಷಾರು.. ಎಮ್ಮ ದನ ಬತ್ತವ..’ ಅಂತ ಕಿಸಿಕಿಸಿ ನಕ್ಕಳು.

-ಎಂ.ಜವರಾಜ್

( ಮುಂದುವರಿಯುವುದು..)


ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ  ಪ್ರಕಟಗೊಂಡಿವೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x