ಅವಳು
ಅಂಧಕಾರದಿ
ಅನುದಿನವ ದೂಡಿದಳು
ಒಂದೇ ತೆರದಿ
ತನ್ನ ಪಯಣವ ನಡೆಸಿದಳು
ಬಾಳಿನಲ್ಲಿ ಸುಖ ದುಃಖ ಏನೆಂದರೆ
ಮುಗುಳ್ನಗುವಳು
ಎಲ್ಲವೂ ಇದ್ದು ಇಲ್ಲವೆಂಬಂತೆ…..
ತನ್ನೆಲ್ಲಾ ನೋವ ಮರೆತಳು
ಆಸೆ ಕನಸುಗಳ ಬಚ್ಚಿಟ್ಟಳು
ಕಂಬನಿಯ ಹೊರಸೂಸದಂತೆ
ಕಣ್ಣಂಚಿನಲ್ಲಿ ಇಟ್ಟವಳು…..
ಮನದಲ್ಲಿ ನೂರು ವೇದನೆ
ಮುಖದಲ್ಲಿ ಒಂದು ತೋರದೆ
ಸಹನೆಯ ಮೂರುತಿ
ಸದಾ ಹಸನ್ಮುಖಿಯಂತೆ…..
ಆದರವಳ ಕಣ್ಣೋಟವು
ಸಾವಿರ ಕಥೆಗಳ ಹೇಳುತಿಹವು…..
ಆಕಾಶದೆತ್ತರದ ಗುಣದವಳು
ಪಾತಾಳಕ್ಕದುಮಿದರು ಮುಳುಗಲಿಲ್ಲ
ಬೆಳಗಿದಳು ತಾನಿರುವಲೆಲ್ಲ…..
*
ಮತ್ತೆ ಮುಂಜಾವು
ತುಸು ನಸುಕಿನಲ್ಲಿ ಕೂಗುತ್ತಿದೆ ಕೋಳಿ
ಎದ್ದೇಳಿ ಬೆಳಗಾಯಿತ್ತೆಂದು…
ಹಕ್ಕಿಗಳ ಕಲರವ…
ಅಂಬಾ ಎನ್ನುವ ಕೂಗು…
ಕರ್ಣಗಳ ಸೆಳೆಯುತ್ತಿವೆ…
ದಟ್ಟರಣ್ಯವ ಸೀಳಿ
ತೆಂಗು ಮಾಮರಗಳ
ನಡುವೆ ಭೂಮಿಗಿಳಿದಾಯಿತು ರವಿಕಿರಣ…
ನಿನ್ನೆಯ ಕೆಲಸಕ್ಕೆ ಜೋತುಬಿದ್ದ
ನರನಾಡಿಗಳ ಪುನಶ್ಚೇತನಗೊಳಿಸೆ
ಮತ್ತೆ ಬಂದಿದೆ ಮುಂಜಾವು…
ಘಮ ಘಮಿಸುವ ಸುಮದ ಕಂಪನಕ್ಕೆ
ನಾಸಿಕವರಳಿ ಕಣ್ಣು ಬಿಟ್ಟಿಹೆ…
ಪಡುವಣದ ಕಿರುರಸ್ತೆಯ ಹಕ್ಕಲಿನಲ್ಲಿ
ಹಂದಿಗಳಿಂಡು ಓಡುತ್ತಿವೆ…
ನಾಯಿಯ ಬೊಗಳಾಟಕ್ಕೆ
ಕದ್ದು ಕಾಯಿ ತಿಂದ ತಪ್ಪಿಗೆ…
ಹಸಿರೆಲೆಗಳ ಹನಿ ಉದುರಿಸಲು
ನಾಟ್ಯ ಮಯೂರಿ ನರ್ತಿಸುತಿಹುದು..
ಕೋಗಿಲೆಗಳ ಇಂಚರಕ್ಕೆ…
ದುಂಬಿಗಳೀರುವ ಮಕರಂದಕ್ಕೆ…
ಮತ್ತೆ ಬಂದಿದೆ ಮುಂಜಾವು…
ಹಳ್ಳಿ ಮನೆಯ ಹೆಂಚುಗಳ ಸಂದಿಯಲ್ಲಿ
ಸೌದಿ ಒಲೆಯ ಹೊಗೆ ಆವಿಯಾಗಿ ಹೊರಟಿವೆ
ಬೆಳಗಿನ ತಿಂಡಿಗೆ…….
-ರೋಹಿಣಿ ಪೂಜಾರಿ
ಮತ್ತೆ ಬಾರದು….
ಮರುಗಿದರೂ
ನೆನೆದರೂ
ಮುನಿಸಿಕೊಂಡರೂ
ಮತ್ತೆ ಬಾರದು ಆ ಘಳಿಗೆ!
ಒಪ್ಪುವ ಮನಸ್ಸಿಲ್ಲ
ಅಪ್ಪಲಾರದೆ ಬಿಡುವಂತಿಲ್ಲ
ಇದ್ದರೂ ಇರಲಾರದಂತ
ಬೆಂದರೂ ಬೇಯಲಾರದಂತ
ಶೋಚನೀಯ ಸ್ಥಿತಿ.
ಇಂದು ಕೂಡ
ಅದೇ ನೀರವತೆ ಕಾಡುತಿದೆ
ಮೌನದ ಗೀತೆ
ಮನ ಹಾಡ ಬಯಸಿದೆ.
ಚದುರಿದ ನೆನ್ನೆಗಳಲಿ
ಏಕೆ ನಡೆಸಿಹೆ ಹುಡುಕಾಟ
ಪ್ರತಿ ದಿನವೂ ಜೀವಿಸಲು
ನಡೆಸು ಹೋರಾಟ.
-ಅರ್ಪಿತಾ ಯಮನೂರ
ರಾಧಾಕೃಷ್ಣ
ರಾಧೆಯ ಮನವ ಗೆದ್ದೇ,
ಅವಳ ಪ್ರತಿ ನಿನಾದ ನೀನೇ ಆದೆ..
ಪ್ರತಿ ಉಸಿರು ನಿನ್ನೆಸರ ನೆನಪು
ಎದೆಯಂಗಳದಲ್ಲಿ ಅಡಗಿ ಕುಳಿತಿದೆ..
ಜೀವ ಕೊಟ್ಟು ಉಸಿರು ತೆಗೆದೆ..
ರುಕ್ಮಿಣಿಯ ಪತಿಯಾದೆ..
ರಾಧೆಯ ಸಖನಾದೆ..
ಕಣ್ಣೀರು ಉಡುಗೊರೆಯಾಗಿ ನೀಡಿದೆ..
ಮಾತೇ ಮರೆತು ಮೂಕಳಾದಳು ರಾಧೆ..
ನೀನ್ಯಾಕೆ ಸುಮ್ಮನಿರುವೆ?
ರಾಧೆ ಬೇಡವಾದಳೇ?
ಅವಳ ಪ್ರೀತಿ ಸುಳ್ಳಾಯಿತೇ..?
ಅವಳ ಭಾವನೆ ಹುಸಿಯಾಯಿತೇ?
ಅವಳ ನೆನಪು ಮಾಸಿಹೋಯಿತೇ?
*
ಅಪ್ಪ
ಹೆತ್ತದು ಅಮ್ಮನಾದರೂ
ಒಳಗೊಳಗೆ ಅತ್ತಿದ್ದು ಅಪ್ಪ.
ನಾ ಜಿಗಿಯುವಾಗ ತಾನೇ
ಜಿಗಿಯುತ್ತಿರುವೆನೆಂದು
ಸಂತಸ ಪಟ್ಟಿದ್ದು ಅಪ್ಪ..
ನಾ ಅಳುವಾಗ ಸಾಂತ್ವನ ಹೇಳಿ
ಒಳಗೊಳಗೆ ಸಂಕಟ ಪಟ್ಟಿದ್ದು ಅಪ್ಪ..
ಆಸೆ ಪಟ್ಟಿದನ್ನು ಇಲ್ಲ ಎನ್ನದೇ
ಕೊಡಿಸಿದ್ದು ಅಪ್ಪ..
ನೀನೊಂದು ಸಾಹುಕಾರ ಅಪ್ಪ,
ನನ್ನ ಜೀವನದ ದಾರಿ ದೀಪ ನೀನು,
ಸಮಾಜದಲ್ಲಿ ತಲೆ ಎತ್ತಿ
ನೆಡೆಯಲು ಕಳಿಸಿರುವೆ ನೀ
ಸರಿ ತಪ್ಪುಗಳನ್ನು ತಿಳಿಸುತ್ತಾ ಮುನ್ನೆಡೆಸಿದೆ..
ನನ್ನ ಖುಷಿಯಲ್ಲೇ ನೀ ಖುಷಿಪಟ್ಟೆ,
ಸಾಗರದಷ್ಟು ಪ್ರೀತಿಯನ್ನು
ವ್ಯಕ್ತಪಡಿಸದೆ ಮೂಕನಾಗಿದ್ದೇ..
ನಿನಗಾಗಿ ಏನನ್ನು ಕೂಡಿಡದೆ
ಬೆವರಿನ ಹನಿಯನ್ನು ಲೆಕ್ಕಿಸದೆ
ಪ್ರತಿಕ್ಷಣ ಮಕ್ಕಳಿಗಾಗಿ
ಮಿಡಿಯುತ್ತಿರುವ ಹೃದಯ ನಿನ್ನದು..
ಅಪ್ಪ ನಿನ್ನ ಪ್ರೀತಿಗೆ ಸರಿ ಸಾಟಿ ಇಲ್ಲ
-ಪವಿತ್ರ. ಎನ್. ಮೊಗೇರಿ
ಅನುರಾಗ
ನನ್ನೆದೆಯ ಬಾಂದಳದಿ
ಕಡುಕಪ್ಪು ಮೋಡಗಳು
ನೀ ಉಲಿದ ಅನುರಾಗ ಅಲೆಗೆ
ಉದುರಿದವು ಸ್ವಾತಿ ಮುತ್ತುಗಳು
ನನ್ನಂತರಂಗದ ಅಂಗಳವು
ಪೈರಿಲ್ಲದ ಬರಡು ಭೂಮಿ
ನೀ ಬಿತ್ತಿದ ಒಲವ ಬೀಜಕೆ
ಚಿಗುರಿದವು ಪ್ರೀತಿಯ ಮೊಳಕೆಗಳು
ನನ್ನ ಕಣ್ಣ ಬಿಂಬದಲಿ
ಮಸುಕಾದ ಚಿತ್ರಗಳು
ನಿನ್ನ ಕಣ್ರೆಪ್ಪೆಯ ಹೊಡೆತಕ್ಕೆ
ಮೂಡಿದವು ಚೆಲುವ ಚಿತ್ತಾರಗಳು
ನನ್ನ ನೂಪುರದ ನಾದದಲಿ
ಇಂದೇಕೋ ಮುರಿದ ಮೌನ
ನಿನ್ನ ಮಧುರ ಸರಿಗಮಕೆ
ಸದ್ದಾದವು ಮೈ ಮನಗಳು
ಅರಳಿತು ಮನದ ಮಂದಾರ
ಸ್ನೇಹ ಸುಮದ ಹಂದರ
ಬೆಳಕಾಗು ನೀ ಭರವಸೆಯ ಚಂದಿರ
ಕಾಯುತಿದೆ ಈ ಪುಟ್ಟ ಹೃದಯ ಮಂದಿರ
–ಗಾಯತ್ರಿ ನಾರಾಯಣ ಅಡಿಗ