“ಕರುಳಿನ ಕರೆ”: ರೂಪ ಮಂಜುನಾಥ

ಆ ದಿನ ಮನೆಯ ಒಡತಿ ಪ್ರೇಮ, ನಾಟಿಕೋಳಿ ಸಾರಿನ ಜೊತೆಗೆ ಬಿಸಿಬಿಸಿ ಮುದ್ದೆ ಮಾಡಿದ್ದಳು. ಆದಾಗಲೇ ರಾತ್ರೆ ಎಂಟೂವರೆ ಆಗಿತ್ತು. “ಅಮ್ಮಾವ್ರೇ ನಾನು ಮನೆಗೆ ಹೊಂಡ್ಲಾ?ವಾರದಿಂದ್ಲೂವ ಒಟ್ಟಿರ ಬಟ್ಟೆ ಸೆಣಿಯಕೇಂತ ವತ್ತಾರೇನೇ ನೆನೆಯಾಕಿ ಬಂದೀವ್ನಿ. ಈಗ್ ಓಗಿ ಒಗ್ದು ಒಣಾಕಬೇಕು”, ಎಂದು ಮನೆಯೊಡತಿಯ ಅಪ್ಪಣೆಗಾಗಿ ಕಾಯುತ್ತಾ ಅಡುಗೆ ಕೋಣೆಯ ಮುಂದೆ ನಿಂತಳು ಶಿವಮ್ಮ. ಅದಕ್ಕೆ ಪ್ರೇಮ, ”ಚಿನ್ಮಯ್ ಗೆ ತಿನ್ನಿಸಿ ಆಯ್ತಾ ಶಿವಮ್ಮಾ?”, ಅಂದ್ಲು. ಅದಕ್ಕೆ ಶಿವಮ್ಮ, ಕಂಕುಳಲ್ಲಿ ಎತ್ತಿಕೊಂಡ ಕೂಸನ್ನೇ ವಾತ್ಸಲ್ಯಪೂರಿತಳಾಗಿ ನೋಡುತ್ತಾ, ”ಊ ಕಣ್‌ ಅಮ್ಮಾರೇ. ತಿನ್ನಾಕೆ ವಸಿ ಕಟ್ಪಟೆ ಮಾಡುದ್ರು ಚಿಕ್ ಸೇಯೇಬ್ರು. ನಾನ್ ಆಚೀಕಡೀಕ್ ಕರ್ಕಂಡೋಗಿ ಉಪಾಯ್ ಏಳ್ತಾ ಬೀದೀಲ್ ಆಡ್ತಿರಾ ಉಡುಗುಳ್ನ ತೋರ್ತಾ ತಿನ್ಸಿದ್ದಾತು. ಏ……ಬಿಡ್ತು ಬಿಡ್ತು. ಆಮೇಕ್ ಇಂಗದಿದ್ಕೆ ದೃಷ್ಟಿ ಆದಾತು ನಮ್ ಚಿನ್ನು ಗೌಡ್ರುಗೆ”, ಅಂತ ಮಗುವನ್ನ ನೀವಾಳಿಸಿ ನಿಟಿಕೆ ಮುರಿದಳು. ಪ್ರೇಮ ನಗುತ್ತಾ, ”ಸರಿ ಬಿಡಿ, ನಿಮ್ ಕೈಯಲ್ಲಿ ಹೇಗೋ ತಿಂತಾನೇ. ನನ್ ಹತ್ರ ಬಲೇ ಆಟ ಆಡ್ತಾ ನನ್ ಸತಾಯಿಸ್ತಾನೆ ಕಳ್ಳಕೊರಮ. ಸರಿ, ಶಿವಮ್ಮಾ ಅವನನ್ನ ಜೋಲಿಗೆ ಹಾಕಿ ತೂಗ್ತಾ ಇರಿ. ಚಿನ್ನು ಮಲಗ್ಲಿ. ನಿಮ್ಗೆ ಊಟ ಕೊಡ್ತೀನಿ. ಮಾಡ್ಬಿಟ್ಟು ಹೋಗಿ”, ಅಂದಳು ಪ್ರೇಮ. ಸಂಜೆ ನಾಟಿ ಕೋಳಿ ಸಾರಿಗೆಂದು ಮಸಾಲೆ ಎಲ್ಲವನ್ನೂ ಅರೆದುಕೊಟ್ಟಿದ್ದಳು ಶಿವಮ್ಮ. ಸಾರಿನ ಘಮ ಮನೆಯ ತುಂಬಾ ಹರಡಿ ಎಂಥವರಿಗೂ ಪಟ್ಟಾಗಿ ಕೂತು ಗಡದ್ದಾಗಿ ಹೊಡೆಯಬೇಕೆಂಬ ಬಯಕೆಯಾಗುತ್ತಿತ್ತು. ಶಿವಮ್ಮನಿಗೂ ಕೋಳಿಸಾರು ಬಲು ಇಷ್ಟ. ಸಾಮಾನ್ಯ ಮಧ್ಯಾನ್ಹದ ಊಟ ಪ್ರೇಮಳ ಮನೆಯಲ್ಲೇ ಶಿವಮ್ಮನಿಗೆ ಆಗಿಹೋಗುತ್ತಿತ್ತು.

ರಾತ್ರೆಗೆ ಮನೆಗೆ ಹೋಗಿ ಏನಾದರದು ಮಾಡಿ ತಿನ್ನುತ್ತಿದ್ದಳು. ಪ್ರೇಮ ಏನಾದರೂ ವಿಶೇಷ ಮಾಡಿದಾಗ ಶಿವಮ್ಮನಿಗೆ ತಿಂದು ಹೋಗಲು ಹೇಳುತ್ತಿದ್ದಳು. ಆಕೆ ಪ್ರೀತಿಯಿಂದ ಹೇಳಿದರೂ, ಶಿವಮ್ಮನಿಗೇನೋ ಮುಜುಗರ. ಪ್ರೇಮಳ ಮಾತಿಗೆ ಶಿವಮ್ಮ, ”ಅಯ್ಯಾ ಯಾಕೊ ಅವ್ವ ಸಂಜೀಕೆ ನೀವ್ ಕೊಟ್ಟ್ ಕಾಪಿ, ಕರಾಸೇವಾನೇ ಇನ್ನು ಒಟ್ಯಾಗೆ ಬದ್ರುವಾಗಿ ಕುಂತ್ಕೊಂಡದೆ ಅಂತೀವ್ನಿ……. . ಈಗ್ಲೇ ವಟ್ಟೆ ಅಸಿವಲ್ದು. ಅವ್ವ ಊಟ ಡಬ್ಬಿಗ್ ಆಕ್ ಕೊಟ್ರೆ ನಾನು ವಸಿ ವತ್ ಬುಟ್ಟು ಮೇಕ್ ಉಂಡ್ ಮನಿಕೊಂತೀನಿ”, ಅಂತ ಹಲ್ಲು ಗಿಂಜಿದಳು. ಅದಕ್ಕೆ ಪ್ರೇಮ, ”ಸುಮ್ನಿರಿ ಶಿವಮ್ಮ ನಿಮ್ ನಾಟ್ಕ ನನಗೊತ್ತಿಲ್ವಾ? ನಾಲ್ಕ್ ಗಂಟೇಲ್ ಕುಡ್ದ್ ಕಾಫಿ, ಒಂದಿಷ್ಟು ಮಿಕ್‌ಸ್‌ಚರ್ ತಿಂದ್ರೆ ಮೈ ಬಗ್ಗಿಸಿ ಕೆಲ್ಸ ಮಾಡೋ ನಿಮ್ಗೆ ಇಷ್ಟೊತ್ತಾದ್ರೂ ಅಲ್ಲೇ ಕೂತಿರುತ್ತಾ? ಕೋಳಿಸಾರು ನಿಮ್ ವಸಂತುಂಗೆ ಇಷ್ಟಾಂತ ಮನೆಗ್ ಹೋಗ್ತಾ ಅವ್ನಿಗೆ ಕೊಟ್ ಹೋಗ್ತೀರ ತಾನೇ?ಸುಮ್ನೆ ಸುಳ್ ಯಾಕ್ ಹೇಳ್ತೀರೀ”, ಅಂತ ಶಿವಮ್ಮ ತೊಳೆದು ಒರೆಸಿದ ಪಾತ್ರೆಗಳನ್ನ ಶೆಲ್ಫುಗಳಲ್ಲಿ ಜೋಡಿಸುತ್ತಾ ಕೇಳಿದಳು ಪ್ರೇಮ. ಅದಕ್ಕೆ ಶಿವಮ್ಮ ಸಿಕ್ಕಿ ಬಿದ್ದ ಕಳ್ಳಿಯಂತೆ, ”ಹೀಹೀಹೀ, ಅವ್ನಿಗೆ ನಾಟಿಕೋಳಿ ಸಾರು ಅಂದ್ರೆ ಪ್ರಾಣ ಕಣವ್ವಾ. ತಿನ್ನಕ್ಕೇಂತ ಏನಾರ್ ಕುಂತೇಂತ ಇಟ್ಕಳಿ, ಅವ್ನ ಮಕಾ ಕಣ್ ಮುಂದ್ಕೆ ಬಂದು ನಂಗೊಂದ್ ತುತ್ತೂವಾ ಗಂಟ್ಲೊಳಿಕ್ ಇಳಿವಲ್ದು. ಈ ಸಾರು, ಮುದ್ದೇನ ಅವ್ನಿಗ್ ಕೊಟ್ಟು, ಅಲ್ಲೇನಾರಾ ಸೊಸೆ ಮಾಡಿದ್ದಿದ್ರೆ ತಕೊಂಡು ಮನಿಗೋಗಿ ತನ್ಕತೀನಿ”, ಅನ್ನುತ್ತಾ ಅಡಿಗೆ ಮನೆಯ ಬಾಗಿಲಿಗೆ ಬಂದಳು. ಮಗು ಅಷ್ಟೊತ್ತಿಗಾಗಲೇ ನಿದ್ರಿಸಿತ್ತು.

ಅದಕ್ಕಷ್ಟು ಕೈಯಲ್ಲೇ ದೃಷ್ಟಿ ತೆಗೆದು ಹೊದಿಕೆ ಹೊದಿಸಿ, ಪರದೆ ಮುಚ್ಚಿ ಬಂದಳು ಶಿವಮ್ಮ. ಪ್ರೇಮ, ”ಏನೋ ಶಿವಮ್ಮ, ನಿಮ್ಮ ತಾಯಿ ಪ್ರೀತೀಗೆ ನಾನೇನು ಹೇಳ್ಲೀ? ಈಗೇನು ಅವ್ನಿಗೆ ಕಮ್ಮಿಯಾಗಿರೋದೂ? ಒಂದು ಆಟೋ ಓಡುಸ್ತಾನೆ. ಎರಡ್ ಬಾಡಿಗೆಗೆ ಬಿಟ್ಟಿದ್ದಾನೆ. ಎಂಥ ಚೆಂದದ ಮನೆ ಕಟ್ಟಿದಾನೆ. ಒಳ್ಳೆ ಸ್ಕೂಲಲ್ಲಿ ಮಗನ್ನ ಓದುಸ್ತಿದಾನೆ. ಅವನಿಷ್ಟ ಆಗಿರೋದು ಅವನ್ ಹೆಂಡ್ತಿ ಮಾಡ್ಕೊಡ್ತಾಳೆ ತಗೊಳೀ. ನೀ……. ವೊಂದು. ಏನೇ ಕೊಟ್ರು ಮಗನಿಗೆ, ಮೊಮ್ಮಗನಿಗೆ ಅಂತ ತಗೊಂಡ್ತಗೊಂಡ್ ಹೋಗ್ತೀರ. ಅವ್ರು ನಿಮ್ಗೆ ಮಣೆ ಹಾಕೋದು ಅಷ್ಟರಲ್ಲೇ ಇದೆ. ಈಗ್ಲೂ ನಿಮ್ ಕೈಗೆ ಕಷ್ಟಾಂದ್ರೂ ನಾಕ್ ಕಾಸು ಯಾರೂ ಕೊಡಲ್ಲ. ಇಷ್ಟಾದ್ರೂ ಹೊಟ್ಟೆಬಟ್ಟೆ ಕಟ್ಟಿ ಮಕ್ಳೂ ಮಕ್ಳೂಂತ ಜೀವ ತೇಯ್ತೀರ”, ಅಂತ ಹುಸಿಕೋಪ ತೋರುತ್ತಾ ಹೇಳಿದಳಾದರೂ, ಆ ಮಾತಿನ ಹಿಂದೆ ಶಿವಮ್ಮನ ಬಗ್ಗೆ ಅಪಾರವಾದ ಮರುಕವಿತ್ತು. ಯಾರೇನೇ ಹೇಳಿದರೂ ತಾಯಿಯ ಕರುಳು ಮಕ್ಕಳ ವಿಚಾರವಾಗಿ ಅಲ್ಲಾಡುವುದಿಲ್ಲ. ಈ ವಿಷಯ ಪ್ರೇಮಳಿಗೂ ಗೊತ್ತು. ನಿಜ ಕಣ್ರೀ ಈ ತಾಯಿಯ ಕರುಳಿಗೆ ನಾಚಿಕೆಯೂ ಇರೋದಿಲ್ಲ, ಹೇಸಿಗೆಯೂ ಇರೋದಿಲ್ಲ. ಹೌದು ತಾನೇ? ಹೆಣ್ಣು ಎಂಥ ಸ್ವಾಭಿಮಾನಿಯಾಗ್ಲೀ, ಹಠಮಾರಿಯಾಗ್ಲೀ, ಲೋಕದ ಎಲ್ಲರ ಜೊತೆಗಿನ ವ್ಯವಹಾರ ಒಂದು ರೀತಿಯಾದರೆ, ತನ್ನ ಕರುಳ ಬಳ್ಳಿಗಳ ಜೊತೆಗೆ ವ್ಯವಹರಿಸುವ ರೀತಿಯೇ ಬೇರೆ. ಅಲ್ಲಿ ಯಾವ ನೇಮ ನಿಯಗಳಿರುವುದಿಲ್ಲ. ಕಟ್ಟುಪಾಡು, ನಿಬಂಧನೆಗಳಿರುವುದಿಲ್ಲ. ತಾಯಿಯ ಕರುಳಲ್ಲಿ ಇರುವುದು ಒಂದೇ , ”ಬೇಷರತ್ತಾದ ಪ್ರೀತಿ”! ಗಂಡನ ವಿಚಾರದಲ್ಲಾದರೂ ಮುನಿಸಿಕೊಂಡಾಳು, ಮಕ್ಕಳ ವಿಚಾರದಲ್ಲಿ ಎಲ್ಲಕ್ಕೂ ಮಾಫಿ. ಮನಸ್ಸು ತನಗೆ ತಿಳಿಯದಂತೆಯೇ ಕೋಮಲವಾಗಿಬಿಡುತ್ತದೆ. ಹೃದಯ ಅವರಿಗಾಗಿ ಮಿಡಿಯುತ್ತದೆ. ಕರುಳು ವಿಲವಿಲ ಒದ್ದಾಡುತ್ತದೆ. ಬಾಹುಗಳು ಅಪ್ಪಿ ಮುದ್ದಾಡಲು ಹಾತೊರೆಯುತ್ತದೆ. ತಾಯಿಯಾದ ಶಿವಮ್ಮನಿಗೂ ಈ ಎಲ್ಲ ಭಾವನೆಗಳೂ ಬರುವುದು ಸಹಜ ತಾನೇ?ಪ್ರೇಮ,

ಶಿವಮ್ಮಳ ಆಸೆಯಂತೆ ಹಾಗೇ ಡಬ್ಬಿಗಳಿಗೆ ಊಟ ಹಾಕಿ ಒಂದು ಪ್ಲಾಸ್ಟಿಕ್ ಬುಟ್ಟಿಯಲಿ ಜೋಡಿಸಿ ಕೊಟ್ಟಳು. ”ಬತ್ತೀನ್ ಕನವ್ವಾ. ನಾಳೆ ಡಬ್ಬೀಗುಳ್ನೂವ, ಬುಟ್ಟೀಯ ಬತ್ತಾ ತಕಂಬತ್ತೀನಿ”, ಅಂತ ಹೇಳಿ ದುಡುದುಡನೆ ಪಕ್ಕದ ಬೀದಿಯಲ್ಲಿದ್ದ ಚಿಕ್ಕ ಮಗ ವಸಂತನ ಮನೆಯತ್ತ ಹೆಜ್ಜೆ ಹಾಕಿದಳು.

ಮನೆಯ ಗೇಟನ್ನ ತೆಗೆಯುವ ಸದ್ದಿಗೆ ಸೊಸೆ ಕಾವ್ಯ ತಲೆಬಾಗಿಲು ತೆಗೆದು ಆಚೆಗೆ ಬಂದಳು. ಶಿವಮ್ಮನನ್ನು ಕಂಡರೆ ಆಕೆಗೆ ಅಷ್ಟಕಷ್ಟೇ. ಎಷ್ಟು ಬೇಕೋ ಅಷ್ಟು ಮಾತಾಡುತ್ತಿದ್ದಳು. ಅತ್ತೆಯನ್ನ ನೋಡಿ, ”ಏನವ್ವಾ ಈಟೊತ್ತಲ್ಲೀ?”, ಅಂದ್ಲು. ಅದಕ್ಕೆ ಶಿವಮ್ಮ, ”ಏನಿಲ್ಲ ಕನವ್ವಾ, ಮಗೀನ ನೋಡ್ಕಳ ಕೆಲ್ಸ ಮುಗ್ಸಿ ಈಗ್ ಮನೆಗೊಂಟೆ. ಅವ್ವಾರು ಇಟ್ ಮಾಡಿ, ಬಿಸಿಬಿಸಿ ಕೋಳಿ ಸಾರ್ ಮಾಡಿದ್ರು. ನಂಗ್ ಉಣ್ಣಕ್ಕೆ ಕೊಟ್ರಾ, ನಂಗೆ ವಸಂತುನ್ ನೆನ್ಪಾತು. ಅವ್ನಿಗೆ ಇಷ್ಟವಲ್ಲಾಂತ ಡಬ್ಬೀಗೆ ಆಕುಸ್ಕೊಂಡ್ ಬಂದೆ”, ಅಂದುಕೊಳ್ತಾ ಮನೆಯೊಳಗೆ ಸೊಸೆಯನ್ನನುಸರಿಸುತ ಹಿಂದೆಯೇ ಹೋದಳು. ಅದಕ್ಕೆ ಕಾವ್ಯ, ”ಅಯ್ಯೋ, ನಾನು ಮೊನ್ನೆ ಬಾನ್ವಾರ ಕೋಳಿಸರ್ನೇ ಮಾಡಿದ್ನಪ್ಪಾ. ಸ…. . ರಿ, ನಿಮ್ ಮಗ ಯಾವ್ದೋ ಬಾಡ್ಗೆ ಬಂತೂಂತ ಈಗೇ ಆಚಿಗೋದ್ರು. ಅಲ್ಲಿಟ್ ಹೋಗಿ, ಬಂದ್ ಮೇಲೆ ತಿನ್ನೋಕ್ ಹೇಳ್ತೀನಿ”, ಅಂದ್ಲೇ ವಿನಃ, ಅತ್ತೆಗೆ ಊಟ ಮಾಡಲೇನೂ ಹೇಳಲಿಲ್ಲ. ಶಿವಮ್ಮ , ”ಹುಡುಗ್ಳು ಎಲ್ಲವ್ವಾ? “, ಅಂದ್ಲು. ಅದಕ್ಕೆ ಕಾವ್ಯ, ”ಅವ್ರಿಗೆ ನಾಳೆ ಟೆಸ್ಟಿದೆ. ಅದಕ್ಕೆ ರೂಮಲ್ಲಿ ಕೂತ್ಕೊಂಡು ಓದ್ಕೋತಿದಾರೆ. ಆಗ್ಲೇ ಹೊತ್ತಾಗಿದೆ. ಜೋಪಾನ. ಮನೆಗ್ ಹೋಗಿ. ನೀವೇನೀಗ ಅವ್ರ ಹತ್ರ ಮಾತಾಡೋಕೆ ಹೋಗಿ ಡಿಸ್ಟರ್ಬ್ ಮಾಡ್ಬೇಡಿ. ಇನ್ನೇನು ಆಗಾಗ ಈ ಕಡೆ ಬರ್ತಾನೇ ಇರ್ತೀರಲ್ಲಾ, ಆಗ ಮಾತಾಡ್ತೀರಂತೆ. ”, ಅಂದ್ಲು. ಜೋರಾಗಿ ಒಂದು ನಿಟ್ಟುಸಿರನ್ನ ಬಿಟ್ಟ ಶಿವಮ್ಮ, ”ಆಲಿ ಕನವ್ವಾ. ಅವು ಚಂದಾಗ್ ಓದ್ಕಳ್ಳಿ ನಾನೇನ್ ತೊಂದ್ರೆ ಕೊಡಕಿಲ್ಲ. ಒಳ್ಳೆದಾಗ್ಲಿ. ವಸಂತುಂಗೆ ನಾನ್ ಬಂದೋದೇಂತ ಯೋಳು. ಸಾರು ತಣ್ಣಗಾಗೋದ್ರೆ ವಸಿ ಬಿಸಿ ಮಾಡಿ ಉಣ್ಣಕ್ಕಿಕ್ಕವ್ವ ಕಾವ್ಯ. ಅಂಗೆ ಎಲ್ರೂ ವಸಿ ರುಚಿ ನೋಡಿ. ಒತ್ತಾತು ನಾನೊಂಟೆ”, ಅಂದ್ಳು. ಅದಕ್ಕೆ ಕಾವ್ಯ, ”ಆಗ್ಲೇ ನಮ್ದೆಲ್ಲಾ ಊಟ್ವಾಯ್ತು. ನಿಮ್ ಮಗ ಒಬ್ರೇ ಬಾಕಿ. ನೀವು ಬಂದೋದ್ರೀಂತ ನಾನ್ ಹೇಳೋದೇನ್ ನಿಮ್ ಮುದ್ದೆ ಚಿಕನ್ ಸಾರೇ ನೀವು ಬಂದಿರೋದ್ನ ಸಾಕ್ಷಿ ಹೇಳ್ತವೆ ಬಿಡಿ”, ಅಂತ ಸೊಟ್ಟ ಮೂತಿ ಮಾಡಿದಳು. ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಶಿವಮ್ಮ ಮನೆಯ ಗೇಟು ಹಾಕಿ ತನ್ನ ಮನೆಯ ದಾರಿ ಹಿಡಿದಳು.

ನವೆಂಬರ್ ತಿಂಗಳ ಚಳಿ ಬೇರೆ. ಆದಾಗಲೇ ಶಿವಮ್ಮನ ಹೊಟ್ಟೆ ಹಸಿವಿನಿಂದ ಲಾವ್ ಲಾವ್ ಎನ್ನುತ್ತಿತ್ತು. ಮನೆಯಿಂದ ಬೆಳಗ್ಗೆ ಹೊರಟಾಗ ಎಂಟು ಗಂಟೆಯಲ್ಲಿ ಒಂದು ಲೋಟ ರಾಗಿ ಗಂಜಿ ಕಾಯಿಸಿಕೊಂಡು ಮಜ್ಜಿಗೆ ಜೊತೆ ಕುಡಿದದ್ದು ಬಿಟ್ಟರೆ, ಮನೆಯಲ್ಲಿ ಮಾಡಿದ್ದೇನೂ ಮಿಕ್ಕಿರಲಿಲ್ಲ. ಜಡಿದ ಬೀಗ ತೆಗೆದು ಮನೆಯೊಳಗೆ ಹೆಜ್ಜೆ ಇಟ್ಟಳು. ಮಗ ಏನಾದರೂ ಒಂದು ಪಕ್ಷ ಮನೆಯಲ್ಲಿದ್ದಿದ್ದರೆ, ”ಮನ್ಗೋಗಿ ಒಬ್ಬಾಕೀನೇ ಏನ್ ಮಾಡ್ಕೊಂಡ್ ತಿಂತೀಯವ್ವಾ, ಇಲ್ಲೇ ಒಂದಿಷ್ಟು ಉಂಡ್ ಹೋಗು”, ಅಂತಲಾದರೂ ಅಂತಿದ್ದನೇನೋ, ಅಂತ ಅನಿಸಿತು. ಯಾಕೋ ಹೊಟ್ಟೆಯಲ್ಲಿ ಸಂಕಟವಾದಂತಾಯಿತು. ಮಗ ನನ್ನವನಾದರೂ ಸೊಸೆ ನನ್ನವಳೇ ಎಂದು ಮನಸ್ಸು ಪಿಸುಗುಟ್ಟಿತು. ಹಬ್ಬಹರಿದಿನಗಳಾದರೆ, ಮಗನ ಮನೆಯಲ್ಲಿ ವಿಶೇಷ ಮಾಡಿ ಕರೆಯುತ್ತಿದ್ದರಾದರೂ, ಶಿವಮ್ಮ ಬರಿಗೈಲಿ ಎಂದೂ ಹೋದವಳಲ್ಲ. ಸೊಸೆಗೋ ಮೊಮ್ಮಕ್ಕಳಿಗೋ ಕೈಲಿ ಏನಾದರೂ ಹಿಡಿದೇ ಹೋಗುತ್ತಿದ್ದಳು. ಮಗನ ಮನೆಗೆ ಬಂದಾಗ ಸೊಸೆ ಮಾಡುವುದೆಲ್ಲ ಮಾಡಿದರೂ, ಯಾಂತ್ರಿಕವಾಗಿ ಮಾಡುತ್ತಾಳೆ ಎನಿಸುತ್ತಿತ್ತೇ ವಿನಃ, ಆ ಕ್ರಿಯೆಯಲ್ಲಿ ಪ್ರೀತಿ, ಗೌರವಗಳೇನೂ ಕಾಣುತ್ತಿರಲಿಲ್ಲ. “ಏ ಕಾವ್ಯ ಅವ್ವ ಬಂದೌಳೆ. ಊಟಕ್ಕಿಕ್ಕೇ”, ಅಂತೇನಾದರೂ ವಸಂತ ಹೇಳಿದರೆ, ”ಆ…. . ಈಗ್ ಇಕ್ತೀನಿ ತಗಳಿ. ನೀವೇಳ್ಳೀ ಅಂತ್ಲೇ ಕಾಯ್ತಾ ಇದ್ದೆ. ”ಅಂತಲೋ, ”ಊಕಣಪ್ಪಾ, ನೀವೇಳ್ದೆ ಓಗಿದ್ರೆ ನಿಮ್ಮಮ್ಮನ್ನ ಉಪಾಸಾನೇ ಕಳುಸ್ತಿದ್ದೆ”, ಹೀಗೆ ಏನೋ ಒಂದು ಕೊಂಕಾಡುತ್ತಿದ್ದಳು. ಆಗೆಲ್ಲಾ, ಶಿವಮ್ಮನಿಗೆ ಗಂಟಲೊಳಗೆ ಅನ್ನ ಇಳಿಯುತ್ತಿರಲಿಲ್ಲ. ಮಗ ಯಾರನ್ನೂ ವಹಿಸಿಕೊಳ್ಳಲಾಗದೆ ಕಂಡೂ ಕಾಣದಂತೆ ಸುಮ್ಮನಿರುತ್ತಿದ್ದ. ಹೋಗಲಿ ಮೊಮ್ಮಕ್ಕಳನ್ನು ಪ್ರೀತಿಯಿಂದ ತೊಡೆಯ ಮೇಲೆ ಕೂರಿಸಿಕೊಂಡು ತುತ್ತಿಡಲು ಹೋದರೆ, ಕಾವ್ಯ, ”ಅವ್ವ ನೀವು ಇದೆಲ್ಲ ಪಾಟ ಮಾಡ್ಬೇಡಿ. ಇವತ್ತೇನೋ ನೀವ್ ತಿನ್ಸ್‌ತೀರಾ. ನಾಳೆಯಿಂದ ಆಮೇಲ್ ಇವು ನನ್‌ ಗೋಳೊಯ್ತಾವೆ. ” ಅನ್ನೋಳು. ಇನ್ನು ಅವುಗಳ ಜೊತೆ ಆಟವಾಡಿಕೊಂಡು, ಕತೆ ಹೇಳಿಕೊಂಡಿರೋಣವೆಂದರೆ, “ಏ ಹೋಗ್ರೋ, ಹೋಮ್ ವರ್ಕು ಮಾಡ್ ಹೋಗಿ. ಇನ್ನು ಓದ್ಕೊಳಕೂ ಕುಂತಿಲ್ಲ ನೀವು. ಹೋಗಿ ಸುಮ್ನೆ ಟೈಮ್ ವೇಸ್ಟ್ ಮಾಡ್ಬೇಡಿ. ”ಅಂತ ಮಕ್ಕಳನ್ನು ಏನೋ ನೆಪಹಾಕಿ ದೂರವಿಡುತ್ತಿದ್ದಳು.

ಆದರೂ ಈ ನಡುವೆ ಹೆತ್ತ ಮಕ್ಕಳೂ ತಮ್ಮ ಸಂಸಾರ, ತಮ್ಮ ಹೆಂಡತಿ ಮಕ್ಕಳು ಮರಿ ಎಂದು ತಮ್ಮೊಳಗೇ ಬೇಲಿ ಹಾಕಿಕೊಂಡು ಈ ಅವ್ವನನ್ನು ಹೊರಗಿಡುತ್ತಿದ್ದಾರೆಂಬ ಅನಾಥ ಭಾವ ಕಾಡತೊಡಗಿತು ಶಿವಮ್ಮನಿಗೆ. ಆದರೇನೂ?ಅವರೊಟ್ಟಿಗೆ ಇದ್ದರೆ, ತಮ್ಮ ಕರ್ತವ್ಯ ಎಂದು ಈ ತಾಯಿಗೆ ಎರಡು ಹೊತ್ತು ಹೊಟ್ಟೆಗೆ ಹಾಕುತ್ತಿದ್ದರೋ ಏನೋ? ಆದರೆ, ಪ್ರೀತಿ, ಮಮತೆ ಇಲ್ಲದ ಕಡೆ ಬಲವಂತವಾಗಿ ಹೋಗಿ ತೂರಿಕೊಳ್ಳೋದಾದರೂ ಹೇಗೇ?ಬೇರೆ ಮನೆ ಮಾಡಿ ಹೋಗುವಾಗ ಮಗ, ”ಅಲ್ಲ ಕಣವ್ವಾ, ಅಣ್ಣನ್ ತಾವ ಹೋಗಿ ನೆಮ್ದಿಯಾಗಿರು ಅಂದ್ರೆ, ಅಲ್ಲೂ ಓಗಲ್ಲಾಂತೀಯಾ. ನಮ್ ಮನೆಗಾದ್ರೂ ಬಾವ್ವಾ ಅಂದ್ರೆ, ಅದೂ ಮನ್ಸ್ ಮಾಡಕಿಲ್ಲ”, ಅಂತ ಅಂದಿದ್ದ. ಅದಕ್ಕೆ ಸೊಸೆ, ”ಅಲ್ಲಾ ಅವ್ರು ಮಾವ ಬದ್ಕಿ ಬಾಳ್ದ ಈ ಮುರ್ಕಲು ಮನೆ ಬಿಟ್ಟು ಎಲ್ಲೂ ಬರಲ್ಲಾಂದ್ರೆ, ನೀವ್ಯಾಕೆ ಬಲ್ವಂತ ಮಾಡ್ತೀರಾ? ಗಟ್ಮುಟ್ಟಾಗಿ ಇದ್ದಷ್ಟ್ ದಿನ ಅವರಿಗೆಂಗ್ ಬೇಕೋ ಅಂಗೇ ಇರ್ಲಿ ಬಿಡಿ. ಆಮೇಲೆ ಇನ್ನೆಲ್ಲಿ ಹೋಗ್ತಾರೇ? ಬರ್ಲೇಬೇಕಲ್ಲಾ”, ಅಂತ ಒಂದು ತೀರ್ಮಾನ ಕೊಟ್ಟಿದ್ದಳು. ಮಗ, ಗೋಣು ತಗ್ಗಿಸಿಕೊಂಡು ಹೆಂಡತಿಯೊಡನೆ ಆಚೆ ನಡೆದಿದ್ದ. ಮಕ್ಕಳು ತೋರುವ ಕಾಳಜಿಯಲ್ಲೂ ಏನೋ ಕೃತ್ರಿಮತೆ ತುಂಬಿಕೊಂಡಿದೆಯೇನೋ ಎನಿಸುತ್ತಿತ್ತು.

ಹಸಿವು ತಡೆಯಲಾರದೆ ಶಿವಮ್ಮ ಅಡುಗೆ ಕೋಣೆಗೆ ಹೋದಳು. ಪಾತ್ರೆಗಳೆಲ್ಲ ಬೋರಲಾಗಿದ್ದು ಮಾಡಿರುವುದೇನೂ ಇಲ್ಲವೆಂದು ಸಾರಿ ಹೇಳುತ್ತಿದ್ದವು. ದೇಹ ಅದಾಗಲೇ ಆಯಾಸಗೊಂಡಿತ್ತು. ಏನೂ ಮಾಡುವ ತ್ರಾಣವಿರಲಿಲ್ಲ. ಹಾಗೆಂದ ಮಾತ್ರಕ್ಕೆ ಹೊಟ್ಟೆ ಸುಮ್ಮನಿರಬೇಕಲ್ಲಾ? ಒಲೆಯಮೇಲಷ್ಟು ನೀರು ಪಾತ್ರೆಯಲ್ಲಿ ಕಾಯಲು ಇಟ್ಟು ನಾಲ್ಕು ಚಮಚೆ ಅಕ್ಕಿ ತರಿಯನ್ನು ಸುರುವಿ, ಅದಕ್ಕೆ ಒಂದು ಒಣ ಮೆಣಸಿನ ಕಾಯಿ ಮುರಿದು ಹಾಕಿದಳು. ಅಷ್ಟು ಉಪ್ಪು, ಜೀರಿಗೆ ಹಾಗಿ ಅಂಬಲಿ ಕಾಯಿಸಿಕೊಂಡು ಕುಡಿಯುತ್ತಾ ಕೂತಳು.

ಟಿವಿ ಇದ್ದರೂ ಹಾಕಿಕೊಳ್ಳುವ ಮನಸಾಗಲಿಲ್ಲ. ಏಕಾಂತ ಜೀವನ ಅವಳನ್ನ ಆಗಾಗ ಹೆದರಿಸುತ್ತಿತ್ತು. ಹಾಗಂತ, ಮಕ್ಕಳ ಜೊತೆ ಹೋಗಿ ಬದುಕುವ ಭೀತಿ ಮತ್ತೊಂದು ರೀತಿ ಕಾಡುತ್ತಿತ್ತು. ಯಾವ ವಿಚಾರಗಳಿಗಾದರೂ ಕೂಡು ಕುಟುಂಬಗಳಲ್ಲಿ ಭಿನ್ನಾಭಿಪ್ರಾಯ ಬಂದರೂ, ಕೊನೆಗೆ ಆರೋಪಿಗಳಾಗುವುದು ಮನೆಯಲ್ಲಿರುವ ಮುದುಕರೇ. ಅದರ ಜೊತೆಗೆ ಅಪ್ಪಿತಪ್ಪಿ ಮಕ್ಕಳು ತಮ್ಮನ್ನ ವಹಿಸಿ ಮಾತಾಡಿದರೆ, ಕಲಹ ಇನ್ನೊಂದು ರೀತಿಗೆ ತಿರುಗಿ, ಪರಿಸ್ಥಿತಿ ವಿಪರೀತಕ್ಕೇರುತ್ತಿತ್ತು. ವಹಿಸಿಕೊಳ್ಳದೆ ಮೌನ ವಹಿಸಿದರೆ, ಮನಸ್ಸು ತನ್ನೊಳಗೇ ರೋಧಿಸುತ್ತಿತ್ತು. ಈ ಮುದಿಜೀವಕ್ಕೆ ಹೇಗಿದ್ದರೂ ಬಾಧೆ ತಪ್ಪಿದ್ದಲ್ಲ.

ಹಾಗಾಗಿ, ತನ್ನಿಂದ ಗಂಡಹೆಂಡಿರ ಮಧ್ಯೆ ವೈಮನಸ್ಯ ಬರಬಾರದೆಂದು, ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು ಎನ್ನುವಂತೆ ತನ್ನ ೧೦*೨೦ರ ಗಂಡ ಕಟ್ಟಿದ ಅರಮನೆಯಲ್ಲೇ ದಿನ ಕಳೆಯುವ ನಿಶ್ಚಯ ಮಾಡಿದ್ದಳು. ಮೇಲಾಗಿ, ಅಪರೂಪಕ್ಕೆ ಸಿಕ್ಕರೂ

ಸೊಸೆಯರು ಅಪ್ಪಿತಪ್ಪಿ ಆಡುವ ಕೊಂಕು ಮಾತಿನ ಚಾಟಿ ಏಟನ್ನ ತಡೆಯಲಾರದ ಸ್ವಭಾವದ ಶಿವಮ್ಮ, ಯಾವ ಕಾರಣಕ್ಕೂ ಅವರ ಹಂಗಿಗೆ ಬೀಳುವುದು ಬೇಡವೇ ಬೇಡಪ್ಪಾ ಎಂದು ತೀರ್ಮಾನಿಸಿ, ತನ್ನ ಒಂಟಿಜೀವನವನ್ನ ತಾನೇ ಆ ಮುರುಕಲು ಮನೆಯಲ್ಲಿ ಕಂಡುಕೊಂಡಿದ್ದಳು.

ಶಿವಮ್ಮನಿಗೀಗ ಸುಮಾರು ಅರವತ್ತರ ಆಸುಪಾಸು. ಗಾರೆಕೆಲಸ ಮಾಡಿಕೊಂಡಿದ್ದ ನಂಜಪ್ಪನನ್ನ ಹದಿನಾರನೆಯ ವಯಸ್ಸಿಗೇ ಕಟ್ಟಿಕೊಂಡು ಗಂಡನ ಸಂಸಾರದ ಹೊರೆ ಹೊತ್ತಿದ್ದಳು. ಕೂಡು ಕುಟುಂಬ ಹಿರಿಯ ಸೊಸೆಯಾಗಿ ಬೇಕಾದಷ್ಟು ಸಂಸಾರದ ಜವಾಬ್ದಾರಿಯನ್ನ ಹೆಗಲ ಮೇಲೆ ಹೊತ್ತು ಎಲ್ಲರನ್ನೂ ನಿಭಾಯಿಸಿದ್ದಳು. ಹಳ್ಳಿಯಲ್ಲಿ ಕೆಲವರುಷಗಳ ವಾಸ ಇದ್ದು, ಅಪ್ಪನ ಒಂದೆಕರೆ ಭೂಮಿ ಹಂಚಿಕೊಂಡರೆ ಯಾರಿಗೂ ಸಾಲುವುದಿಲ್ಲವೆಂದರಿತ ನಂಜಪ್ಣ, ಶಿವಮ್ಮ ದಂಪತಿಗಳು ಯಾವ ಆಸ್ತಿಯನ್ನೂ ತೆಗೆದುಕೊಕೊಳ್ಳದೆ ಜೀವನ ಕಂಡುಕೊಳ್ಳಲು ಪೇಟೆಗೆ ಬಂದಿದ್ದರು.

ಎರಡು ಗಂಡು ಮಕ್ಕಳಾದ ಮೇಲೆ ಅವರೂರಿನ ಗೋಡೆಗಳ ಮೇಲೆ ಬರೆದ ಕುಟುಂಬ ಕಲ್ಯಾಣ ಇಲಾಖೆಯ ಜಾಹೀರಾತುಗಳನ್ನು ಕಂಡು ಸರಕಾರಿ ಆಸ್ಪತ್ರೆಯಲ್ಲಿ ಉತಿತವಾಗಿ ಮಾಡುತ್ತಿದ್ದ ಸಂತಾನಹರಣ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದಳು. ನಂಜಪ್ಪ, ”ಈಗ್ಲೇಯ ಆಪ್ಲೇಸನ್ನು ಮಾಡ್ಸಿಕೊಳ್ಳ ಆತ್ರ ಏನಮ್ಮೀ? ಒಂದು ನಾಕ್ ವರಸ್ ಓಕಳಿ ಬುಡು. ಉಡುಗ್ಳು ಇನ್ನೂ ಚಿಕ್ಕವು”, ಅಂದಿದ್ದ. ಅದಕ್ಕೆ ಶಿವಮ್ಮ, ”ಊ……ಯಾಕೇಳೂ?ನಿನ್ ಮಾತ್ ಕೇಳ್ಕಂಡು ನಾಕೋರ್ಸ ಸುಮ್ಕಾದೆ ಅಂದ್ಕಾ? ಮತ್ ಎಲ್ಡ್ ಮಕ್ಳು ಉಟ್ಕೊಂತಾವೆ. ನಿನ್ಗೆ ಇರ ಆದಾಯ್ಕೆ ಎಲ್ಡೇ ಎಚ್ಚು. ಅವುನ್ನೇ ಚಂದಾಗ್ ಓದ್ಸಿ, ಒಳ್ಳೆ ಇಟ್ಟು ಬಟ್ಟೆ ಕೊಟ್ ಸಾಕನ್ ಬುಡು”, ಅಂತ ಗಂಡನ ಬಾಯಿ ಮುಚ್ಚಿಸಿ ಮೂತಿ ಊದಿಸಿಕೊಂಡಿದ್ದಳು. ನಂಜಪ್ಪ ಅನಕ್ಷರಸ್ಥನಾದರೂ ಪಾಪದ ಸಂಸ್ಕಾರವಂತ. ಹೆಂಡತಿಯ ಮಾತಲ್ಲೂ ಹುರುಳಿದೆಯೆಂದು ತೆಪ್ಪಗೆ ಒಪ್ಪಿಕೊಂಡಿದ್ದ. ನಾಲ್ಕು ವರ್ಷದ ಅಂತರದಲ್ಲಿ ಹುಟ್ಟಿದ್ದ ಎರಡೂ ಮಕ್ಕಳನ್ನ ಅಂಗೈಯಲ್ಲಿಟ್ಟು ಸಾಕಿದ್ದಳು ಶಿವಮ್ಮ. ನಮ್ಮ ಸಂಸಾರ ಆನಂದ ಸಾಗರ ಎಂದು ಹಾಸಿಗೆ ಇದ್ದಷ್ಟರಲ್ಲೇ ಕಾಲು ಚಾಚುತ್ತಾ ಸ್ವರ್ಗವನ್ನೇ ಕಂಡಿದ್ದಳು.

ಪ್ರೀತಿಗಾಗಲೀ, ಅಕ್ಕರೆಗಾಗಲೀ, ಕಾಳಜಿಗಾಗಲೀ, ಕೊಡುವ ಸಂಸ್ಕಾರಕ್ಕಾಗಲೀ ಹಣದ ಅವಶ್ಯಕತೆ ಇಲ್ಲ ಎಂಬುದನ್ನ ಅರಿತಿದ್ದ ಶಿವಮ್ಮ ಉಚಿತವಾಗಿ ಕೊಡುವುದನ್ನೆಲ್ಲಾ ಧಾರಾಳವಾಗಿ ಕೊಟ್ಟು ತನ್ನ ಎರಡೂ ಮಕ್ಕಳಿಗೆ ತಮ್ಮ ಕೈಲಾಗುವವರೆಗೂ ಓದಿಸಿ, ಬೆಳೆಸಿದ್ದಳು. ಗಂಡ ಬೆಳಗ್ಗೆ ಮಾರಿ ತೊಳೆದು ಕೆಲಸಕ್ಕೇಂತ ಹೋದರೆ ಬರುತ್ತಿದ್ದುದೇ ಸಂಜೆ ಏಳರ ಸಮಯಕ್ಕೆ. ”ಸಿವಮ್ಮ, ನಾನ್ ಕೆಲ್ಸುಸ್ ಮ್ಯಾಗೆ ಒಂಟೇಂದ್ರೇ, ಮನೆ ಕಡ್ಯಾಗೆ ಯಾವ ಇಸ್ಯಾನೂ ಗಮನಿಸ್ಕಳಕೆ ಆಗಕಿಲ್ಲ. ನಾನು ದುಡ್ದಿದ್ದ್ನೆಲ್ಲಾ ತಂದ್ ನಿನ್ ಕೈಗ್ ಆಕ್ತೀನಿ. ಮಿಕ್ಕಿದ್ ಜವಾಬ್ದಾರಿ ಎಲ್ಲ ನಿಂದೇ ಕಣಮ್ಮೀ”, ಅಂತ ತನ್ನ ಸಾಮರ್ಥ್ಯವನ್ನ ಒಪ್ಪಿಕೊಂಡಿದ್ದ. ಗಂಡನೂ ನ್ಯಾಯವಾಗಿ ಹೇಳಿದ್ದನ್ನು ಮನಗಂಡ ಶಿವಮ್ಮ, ಎಲ್ಲ ಜವಾಬ್ದಾರಿಯನ್ನೂ ಮೊದಲುಗೊಂಡು ತಾನೇ ವಹಿಸಿಕೊಂಡು ಮಕ್ಕಳನ್ನ ಎತ್ತರಕ್ಕೆ ಬೆಳೆಸಿದ್ದಳು. ಓದುವ ಮಕ್ಕಳಿಗೆ ಯಾವ ಕೊರತೆಯೂ ಆಗಬಾರದೆಂದು ತಾವಿಬ್ಬರೂ ತಂಗಳುಂಡರು ಸರಿಯೆ, ಮಕ್ಕಳಿಗೆ ಹೊತ್ತುಹೊತ್ತಿಗೆ ಬಿಸಿ ಅಡುಗೆ ಮಾಡಿ ತುತ್ತಿಡುತ್ತಿದ್ದಳು. ಯಾವತ್ತೂ ತನಗೇನೂ ಕೊಳ್ಳಬೇಕೆಂಬ ಬಯಕೆಯೂ ತೋರುತ್ತಿರಲಿಲ್ಲ. ಉಗಾದಿ, ಪಕ್ಷಗಳಿಗೆ ಮಕ್ಕಳಿಗೆ ಹೇಗಾದರೂ ಸರಿ ಹೊಸ ಬಟ್ಟೆ ಹಾಕಿ ನೋಡಿ ಸಂಭ್ರಮಿಸುತ್ತಿದ್ದಳು. ಹೀಗೇ ಇರುವುದರಲ್ಲೇ ತೃಪ್ತಿ ಕಂಡಿದ್ದ ಈ ಪುಟ್ಟಸಂಸಾರಕ್ಕೆ ಏನು ಗ್ರಹಚಾರ ಬಂದಿತೋ, ಯಾರ ದೃಷ್ಟಿ ತಾಕಿತೋ , ಎಂಬಂತೆ,

ಗಾರೆ ಕೆಲಸ ಮಾಡುವ ಜಾಗದಲ್ಲಿ ತಾರಸಿಗೆ ಹಾಕಿದ್ದ ಆರ್ ಸಿ ಸಿ ಬಿಚ್ಚುವಾಗ ಕಾಲು ಜಾರಿ ಬಿದ್ದಿದ್ದೇ ಕಾರಣ ಎನ್ನುವಂತೆ ನಲವತ್ತೈದರ ವಯಸ್ಸಿನ ನಂಜಪ್ಪ ಮೂವತ್ತೈದರ ಶಿವಮ್ಮನನ್ನೂ, ಇನ್ನೂ ಓದುತ್ತಿದ್ದ ಮಕ್ಕಳನ್ನೂ ನಡುನೀರಿನಲ್ಲಿ ಕೈಬಿಟ್ಟು ಪರಲೋಕ ಸೇರಿಕೊಂಡಿದ್ದ. ಆಗಿನಿಂದ ಶಿವಮ್ಮ ಮಕ್ಕಳನ್ನು ಮಡಿಲಿಗೆ ಹಾಕೊಂಡು, ”ನಾನೇ ತಾಯಿ ನಾನೆ ತಂದೆ ನಿಮ್ಮ ಪಾಲಿಗೇ. ನಾಳೆ ನೀವೆ ನಂದಾದೀಪ ನನ್ನ ಪಾಲಿಗೆ, ಆಸರೇ ನೀವೆನಗೆ”, ಎಂದು ಕಣ್ಣಿನ ರೆಪ್ಪೆಯಂತೆ ತನ್ನ ಮಕ್ಕಳನ್ನ ಕಾಪಾಡಿಕೊಂಡಿದ್ದಳು. ಹಸಿದಾಗ ತುತ್ತಿಟ್ಟಳು, ಅತ್ತಾಗ ಕಣ್ಣೀರು ಒರೆಸಿದಳು. ಬಿದ್ದಾಗ ಎದ್ದು ನಿಲ್ಲಿಸಿದಳು. ಗೆದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವಳು ಶಿವಮ್ಮ.

ಓದು ಕಾಣದ ಹೆಂಗಸು. ಮೇಲಾಗಿ ಇಬ್ಬರು ಮಕ್ಕಳನ್ನ ದಡ ಸೇರಿಸಬೇಕು. ಅವರ ಪುಸ್ತಕ, ಫೀಜು, ಕಾಲೇಜು, ಬಟ್ಟೆಬರೆ………ಸಂಸಾರವೆಂಬ ಸಾಗರವ ದಾಟೋಕೆ ಬೇಕಾದ ದೋಣಿಗಳು ಒಂದೇ ಎರಡೇ? ಹೇಗೂ ಮಕ್ಕಳು ದೊಡ್ಡವರಾಗಿದ್ದಾರೆ. ಅವರನ್ನೇನೂ ಕಾಯುವ ಕೆಲಸ ಇಲ್ಲವೆಂದು ಮನಗಂಡ ಶಿವಮ್ಮ, ಮಕ್ಕಳಿಗಷ್ಟು ಅಡಿಗೆ ಮಾಡಿಟ್ಟು, ಆಗಿನಿಂದ ಮೂರ್ನಾಕು ಮನೆಗಳಿಗೆ ಕಸಮುಸುರೆ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದಳು. ಗಂಡ ಕೊಡುತ್ತಿದ್ದ ದುಡ್ಡಿನಲ್ಲಿ ಅಷ್ಟೋ ಇಷ್ಟೋ ಉಳಿಸಿದ್ದು ಈಗ ಸಮಯಕ್ಕೆ ಬಂದು ನೆರವಾಗುತ್ತಿತ್ತು. ನಿರಂತರ ಹೋರಾಟ ಮಾಡುತ್ತಾ ತನ್ನ ಮಕ್ಕಳ ಮುಂದೆ ನೋವನ್ನೂ ತೋರಗೊಡದಲೆ ಸಮಾಧಾನವಾಗಿಯೇ ಬದುಕಿನ ಬಂಡಿಯ ಎಳೆದಿದ್ದಳು ಶಿವಮ್ಮ. ತನಗೇನಾದರೂ ಮೈಕೈ ನೋವಾದರೂ ಮಕ್ಕಳಿಲ್ಲದ ಸಮಯದಲ್ಲಿ ಎಣ್ಣೆ ಹಚ್ಚಿಕೊಳ್ಳುವುದೋ, ನೀವಿಕೊಳ್ಳುವುದೋ ಮಾಡುತ್ತಿದ್ದಳೇ ಹೊರತು, ಅವರ ಮುಂದೆ ಯಾವತ್ತೂ ತನ್ನ ನೋವನ್ನ ತೋಡಿಕೊಂಡವಳಲ್ಲ. ತಂದೆಯಿಲ್ಲದಿದ್ದರೂ ತಂದೆ ತಾಯಿ ಎರಡೂ ಆಗಿ ನಿಭಾಯಿಸಿದ ಶಿವಮ್ಮನನ್ನು ಕಂಡರೆ ಮಕ್ಕಳಿಗೂ ಸಹಜವಾಗಿಯೇ ಅಭಿಮಾನ. ದೊಡ್ಡವ ಹೇಮಂತ ಆಗಾಗ ಹೇಳುತ್ತಲೇ ಇದ್ದ. ”ಅಮ್ಮ ಇನ್ ಸ್ವಲ್ಪ ವರ್ಷಾನೇ ಕಣಮ್ಮಾ. ನಾನು ಕೆಲಸಕ್ಕೆ ಸೇರಿದ ಮೇಲೆ, ನೀನೆಲ್ಲೂ ದುಡಿಯೋಕೆ ಹೋಗಬೇಡ. ನಾನು ನಿನ್ನನ್ನ ಸಾಕ್ತೀನಿ”, ಅಂತ. ಆ ಮಾತ ಕೇಳಿ ಹಿಗ್ಗಿಹೀರೇಕಾಯಾಗಿ ಹೋಗುತ್ತಿದ್ದಳು. ತನ್ನ ಮಕ್ಕಳು ಪುಟಕ್ಕಿಟ್ಟ ಚಿನ್ನವೆಂದು ಬೀಗಿದಳು. ಮುಂದೊಂದು ದಿನ ತನಗೂ ಒಳ್ಳೆಯ ದಿನಗಳು ಕಾದಿವೆ ಎಂಬ ಕಲ್ಪನೆಯಲ್ಲೇ ಸುಖ ಕಾಣುತ್ತಿದ್ದಳು. ಶಿವಮ್ಮ ಮನೆಯಲ್ಲಿ ಆರಾಮವಾಗಿ ಸೋಫಾದ ಮೇಲೆ ಕುಳಿತು ಮೊಮ್ಮಕ್ಕಳ ಜೊತೆಯಲ್ಲಿ ಆಟವಾಡುತ್ತಿರುವಂತೆ ಕನಸು ಕಾಣುತ್ತಿದ್ದಳು. ನಿಜ, ಬದುಕಿನಲ್ಲಿ ವಾಸ್ತವಕ್ಕಿಂತಲೂ ಕನಸಿನಲ್ಲೇ ಸುಖ ಹೆಚ್ಚು. ಅಲ್ವೇ? ವಾಸ್ತವ ನಮ್ಮ ಎಣಿಕೆಗೆ ಮೀರಿದ್ದು. ಕನಸು ನಮ್ಮಿಷ್ಟದಂತೇ ಕಾಣಬಹುದು. ಬೇಕಾದ್ದನ್ನೇ ಕಲ್ಪಿಸಿಕೊಳ್ಳಬಹುದು. ಹಗಲುಗನಸಾದರೆ ಇನ್ನೂ ಸಲೀಸು. ತಿರುಕ ಅರಸನಾಗಬಹುದು. ಮುರುಕಲು ಮನೆ ಮಹಲಾಗಬಹುದು. ಹೌದಲ್ವೇ? ಕನಸಿನ ಬದುಕು ಬಣ್ಣಬಣ್ಣವಾದರೆ ನಿಜದ ಬದುಕು?

ಹಾಗೂಹೀಗೂ ದೊಡ್ಡವನು ಹೇಮಂತ ಬುದ್ದಿವಂತ. ಬಿಎ ಬಿಎಡ್ ಪಾಸು ಮಾಡಿಕೊಂಡು ಸರ್ಕಾರಿ ನೌಕರಿ ಹಿಡಿದ. ಸರಕಾರಿ ನೌಕರರಿಗೆ ಹೆಣ್ಣುಕೊಡಲೇನು ಬರವೇ? ಅನುಕೂಲವಾಗಿರುವ ಸಂಬಂಧ ಕೂಡಿಯೂ ಬಂದಿತು. ಕನಕ ಹೇಮಂತನ ಜೊತೆಯಾದಳು. ನೌಕರಿ ಸಿಕ್ಕಿದ ಊರಿನ ಕಡೆಗೆ ಹೊರಟಿತು ಮಗನ ಹೊಸ ಸಂಸಾರ. ನವದಂಪತಿಗಳು ಹೊರಟು ನಿಂತಾಗ, ”ಅಮ್ಮ, ನಮ್ಮ ಜೊತೆ ನೀವು ಬಂದುಬಿಡಿ”, ಅಂತೇನೋ ಮಗ ಅಂದ. ಆದರೆ, ವಸಂತ ಇನ್ನೂ ಓದುತ್ತಿದ್ದ. ಹಾಗಾಗಿ, ”ನಿನ್ ತಮ್ಮಂದು ಇನ್ನೂ ಓದ್ ಮುಗ್ದಿಲ್ವಲ್ಲಪ್ಪಾ. ಅವ್ನ್ ಕಾಲೇಜು ಮುಗಿದ್ ಮೇಕೆ ನೋಡಾನ ಬುಡು. ಈಗಿನ್ನೂ ಲಗ್ನ ಆಗೀದೀರ. ನಾಕೊರ್ಸ ಆರಾಮಾಗಿರಿ”, ಅಂತ ಹೇಳಿ ಕಳಿಸಿದ್ದಳು. ವಸಂತ ಓದಿನಲ್ಲಿ ಸುಮಾರು. ಪದವಿಯಲ್ಲೂ ಪಾಸಾಗುವಷ್ಟು ಮಾತ್ರವೇ ಅಂಕಿಗಳನ್ನ ತೆಗೆದುಕೊಂಡಿದ್ದ. ಹಾಗಾಗಿ ಅವನಿಗೆ ಕೆಲಸ ಸಿಗುವುದೂ ಕಷ್ಟವೇ ಆಯಿತು. ಕೊನೆಗೆ, ಸ್ತ್ರೀ ಶಕ್ತಿ ಸಂಘದಲ್ಲಿ ಸಾಲ ತೆಗೆದುಕೊಂಡು ಒಂದು ಹಳೆಯ ಆಟೋ ಬಾಡಿಗೆ ಓಡಿಸಲು ಕೊಡಿಸಿದ್ದಳು ಶಿವಮ್ಮ. ಪುಣ್ಯಕ್ಕೆ ವಸಂತ ಕಷ್ಟಪಟ್ಟು ದುಡಿಯತೊಡಗಿದ. ಆಗೀಗಲೊಮ್ಮೆ ಹಿರಿಯ ಮಗನ ಮನೆಗೆ ಹೋದರೂ ಶಿವಮ್ಮನಿಗೆ, ಯಾಕೋ, ಅದು ತನ್ನ ಮನೆ ಎನಿಸುತ್ತಿರಲಿಲ್ಲ. ತನಗೆ ಬೇಕಾದ ಹಾಗೆ ನಡೆದುಕೊಳ್ಳುವುದಕ್ಕೆ ಏನೋ ಹಿಡಿತವೇನೋ ಎಂಬ ಭಾವ. ಮಗ ಬಲವಂತ ಮಾಡಿದರೂ ಎರಡೇ ದಿನಕ್ಕೆ ಊರಿಗೆ ಓಡಿ ಬರುತ್ತಿದ್ದಳು.

ಕೆಲವೇ ವರುಷಗಳಲ್ಲಿ ವಸಂತನಿಗೂ ಮದುವೆಯಾಯಿತು. ಸಾಧಾರಣ ಮನೆತನದ, ಅಷ್ಟಾಗಿ ಓದದ, ಪಾವನ ಅವನ ಹೆಂಡತಿ. ಸ್ವಲ್ಪ ಒರಟು ಸ್ವಭಾವದವಳು. ಏನೆನಿಸಿದರೆ ಅದನ್ನ ಯಾರಿಗಾದರೂ ಸರಿ ನೇರವಾಗಿ ಹೇಳಿಬಿಡುವುದೇ, ಅವಳ ಸ್ವಭಾವ.

ವಸಂತ, ”ಅಮ್ಮಾ, ಇನ್ನೇನು ನಾನು ಈಗ ದುಡೀತಿದೀನಲ್ಲಾ. ನೀನು ಆಚೆ ಕೂಲಿ ಕೆಲಸಕ್ಕೇನೂ ಹೋಗಬೇಡ. ಹೇಗೋ ಆಗುತ್ತೆ ಮನೇಲಿ ಆರಾಮಾಗಿರು”, ಅಂದ. ಅದಕ್ಕೆ ಶಿವಮ್ಮ, ”ಊ ಕಣ್ ಮಾಗಾ . ನೀನೂವ ಈಗಿನ್ನ ಮದ್ವೇಂತ ಆಗಿದೀಯ. ಮಕ್ಳುಮರೀಂತ ಆದ್ರೆ ಸುಮಾರು ಕಾಸು ಬೇಕು. ನಿನ್ ದುಡ್ಮೆನ ಆಳ್ ಮಾಡ್ದೇ ಜೋಪಾನ್ವಾಗಿ ಮಡಿಕ್ಕ. ನಾನ್ ಮಾತ್ರ ಮನ್ಯಾಗ್ ಸುಮ್ನೆ ಕೂತೇನ್ ಮಾಡ್ಬೇಕೂ?

ಇರ್ಲಿ ಬುಡು ರಟ್ಟೆ ಗಟ್ಟಿಯಾಗಿರಗಂಟ್ಲೂವೇ ಕೆಲ್ಸ ಮಾಡ್ತೀನಿ. ಆಮೇಕೆ ನೋಡಿಕೊಣಾನ”, ಅಂದ್ಲು. ಅದಕ್ಕೆ ಪಾವನ, ”ಹೂ ಮತ್ತೆ ನಿಮ್ಮವ್ವ ಹೇಳ್ತಿರದ್ ಸರೀ ಐತೆ. ನಾನು ಮನೇ ಕೆಲ್ಸ, ಅಡಿಗೆಪಡಿಗೆ ನೋಡ್ಕಂಡ್ ಮೇಲೆ ಅವ್ರ್ ಬೆಳಗಿಂದ್ಲೂ ರಾತ್ರಿವರ್ಗೂ ಸುಮ್ನೆ ಕೂತ್ ಏನ್ಮಾಡ್ಬೇಕು. ಹೋಗ್ಬರ್ಲಿ ತಗಳಿ. ನೀವ್ ಓಗಿ ಅವ್ವ”ಅಂತ ಹೇಳಿದ್ಳು. ಹಾಗಾಗಿ ಶಿವಮ್ಮನ ಹಣೆಬರಹ ಇಬ್ಬರು ಮಕ್ಕಳು ದುಡಿಯೋಕೆ ಶುರು ಮಾಡಿದರೂ ಏನೂ ಬದಲಾಗಲಿಲ್ಲ.

ವಸಂತ ಒಂದೆರೆಡು ವರ್ಷಗಳಲ್ಲೇ ಮತ್ತೆರೆಡು ಆಟೋಗಳನ್ನ ಕೊಂಡು ಬಾಡಿಗೆಗೆ ಬಿಟ್ಟಿದ್ದ. ಶಿವಮ್ಮನ ಮನೆ ಮಳೆಗಾಲದಲ್ಲಿ ಮಳೆ ಸುರಿದರೆ ಹೆಂಚಿನ ಸಂದಿಗಳಲ್ಲಿ, ಗೋಡೆಯ ಬದಿಗಳಲ್ಲಿ , ನೀರು ಸೋರುತ್ತಿತ್ತು. ಆಗೆಲ್ಲಾ ಪಾತ್ರೆ ಪರಡಿ ಇಟ್ಟು ಸಂಭಾಳಿಸಬೇಕಾಗುತ್ತಿತ್ತು. ಹೀಗೆ ಒಂದು ದಿನ ವಿಪರೀತ ಮಳೆ ಸುರಿದು ಹೋಯಿತು. ಶಿವಮ್ಮ ಮನೆ ಕೆಲಸಕ್ಕೆ ಹೋದವಳು ಅಲ್ಲೇ ಸಿಕ್ಕಿಹಾಕಿಕೊಂಡಿದ್ದಳು. ಪಾವನೊಬ್ಬಳಿಗೇ ಆ ದಿನ ಹುಚ್ಚಾಪಟ್ಟೆ ಕೆಲಸವಾಗಿ ರುದ್ರಿಯವತಾರ ತಾಳಿಬಿಟ್ಟಳು. ಗಂಡನನ್ನ, ”ಈ ಹಾಳು ಮುರುಕಲು ಮನೇಲಿ ನಂಗಿರೋಕೆ ಆಗಲ್ಲ. ಸಾಮಾನ್ ತೆಗ್ದೂ ಪಾತ್ರೆ ಇಟ್ಟು ಎಲ್ಲಾ ನೇರ್ಪು ಮಾಡೋ ಹೊತ್ಗೆ ನನ್ ಹೆಣ ಬಿದ್ದೋಗಿದೆ. ನಾನ್ ನಿಮ್ ಜೊತೇಗ್ ಇರ್ಬೇಕೂಂದ್ರೆ

ಸಧ್ಯಕ್ಕೆ ಯಾವ್ದಾದ್ರೂ ಆರ್ ಸಿ ಸಿ ಮನೆ ಬಾಡಿಗೆಗೆ ಮಾಡಿ. ಇಲ್ದೋದ್ರೆ ನಾನ್ ನಮ್ಮಪ್ಪನ ಮನೆಗೆ ಹೊಂಟೋಗ್ತೀನಿ”, ಅಂತ ರಚ್ಚೆ ಹಿಡಿದು ಕೂತುಬಿಟ್ಟಳು. ವಸಂತ ಪಟ್ಟು ಹಿಡಿದು ಕೂತ ಹೆಂಡತಿಗಾಗಿ ಬೇರೆ ಮನೆ ಮಾಡಿದ. ಹೋಗುವಾಗ ಶಿವಮ್ಮನನ್ನು, ”ನೀನು ನಮ್ ಜೊತೇಗೇ ಬಂದ್ಬಿಡವ್ವಾ”, ಅಂದ. ಅದಕ್ಕೆ ಶಿವಮ್ಮ, ”ಆಗ್ಲಿ ಮಗಾ, ಇದೇ ಊರ್ನಾಗೆ ನಾಕ್ ಬೀದಿ ಆಚೆಗೇ ಇರ್ತೀಯಲ್ಲಾ. ನೋಡ್ಬೇಕೂ ಅಂದಾಗೆಲ್ಲಾ ಓಡ್ ಬಂದೇನ್ ತಕಾ. ನನ್ ಕೈನಾಗ್ ಬಲ ಇರಗಂಟ್ಲೂವೇ ನಿಮ್ ಅಪ್ಪಯ್ಯ ಕಟ್ಟಿದ್ ಈ ಮನ್ಯಾಗೇ ದಿನ ಕಳೀತೀವ್ನಿ. ಆಮೇಕೆ ನೀವೆ ತಾನೇ ನಂಗ್ ದಿಕ್ಕು”, ಅಂತ ನಗುನಗುತ್ತಲೇ ತನ್ನ ಬಳಿ ಇರುವ ಪಾತ್ರೆಪಗಡೆಯಲ್ಲೇ ಅವನಿಗೂ ಬೇಕಾದ್ದೆಲ್ಲ ಕೊಟ್ಟು ಮಗನನ್ನ ಬೇರೆ ಮನೆಗೆ ಕಳಿಸಿಕೊಟ್ಟಳು. ಆಗಿನಿಂದಲೂ ಶಿವಮ್ಮ ಏಕಾಂಗಿ. ಕೆಲಸ ಮಾಡುತ್ತಾ ಅದರಲ್ಲಿನ ಆದಾಯದಲ್ಲೇ ಜೀವನ ಮಾಡುತ್ತಿದ್ದ ಸ್ವಾಭಿಮಾನಿ. ದೊಡ್ಡ ಮಗ ಸಿಕ್ಕಾಗಲೆಲ್ಲಾ , ”ದುಡ್ಡು ಬೇಕಾದ್ರೆ ಕೇಳಮ್ಮಾ ಕೊಡ್ತೀನಿ”, ಅನ್ನುತ್ತಿದ್ದ. ಆಕೆಯಾದರೂ ಕೇಳಬೇಕೇ?ಮಗ ಅಷ್ಟು ಮಾತ್ರ ತಿಳಿವಳಿಕೆ ಇಲ್ಲದವನೇ?ಅದಕ್ಕೆ ಸೊಸೆ, ”ಅಯ್ಯೋ, ನಿಮ್ಮಮ್ಮನಿಗಾದ್ರೂ ಏನ್ ಖರ್ಚೂ? ಕೆಲ್ಸ ಮಾಡೋ ಮನೇಲೇ ಉಂಡು ಬಂದ್ ಮನೇಲ್ ಮಲ್ಗಿದ್ರಾಯ್ತು. ಬಂದ ಸಂಬ್ಳ ಎಲ್ಲಾ ಉಳಿತಾಯವೇ”, ಅಂದಿದ್ದಳು. ಶಿವಮ್ಮ ಇದನ್ನ ಕೇಳಿ ನಕ್ಕು ಸುಮ್ಮನಾಗಿದ್ದಳು.

ಅಕಸ್ಮಾತಾಗಿ ಮಕ್ಕಳು ಹಬ್ಬಹರಿದಿನಾಂತ ಅಪ್ಪಿತಪ್ಪಿ ದುಡ್ಡು ಕೊಟ್ಟರೂ ಅದೇ ದುಡ್ಡಿಗೆ ತನ್ನದು ಇಷ್ಟೋ ಅಷ್ಟೋ ಸೇರಿಸಿ ಮೊಮ್ಮಕ್ಕಳಿಗೇನಾದರೂ ಕೊಡಿಸಿಯೇ ಬರುತ್ತಿದ್ದಳು. ಅಂಥಾ ಸ್ವಭಾವದ ಸ್ವಾಭಿಮಾನಿ ಗರತಿ ಶಿವಮ್ಮ.

ಹೀಗೆ ಕರುಳ ಬಳ್ಳಿಗಳು ಇದ್ದರೂ ದೂರವಾಗಿ, ತಾನಿದ್ದ ಮನೆಯಲ್ಲೇ ಶಿವಮ್ಮ ತನ್ನ ಬದುಕನ್ನ ಕಳೆಯುತ್ತಿದ್ದಳು. ಅಷ್ಟು ಕೆಲಸ ಮಾಡಿ ಬಂದರೂ, ರಾತ್ರೆ ಆದರೆ ಕಣ್ಣಿಗೆ ನಿದ್ದೆ ಹತ್ತುತ್ತಲೇ ಇರಲಿಲ್ಲ. ಇಬ್ಬರ ಮಕ್ಕಳ ವಿಚಾರದಲ್ಲಿ ಏನೆಲ್ಲಾ ಕನಸು ಕಂಡಿದ್ದಳು ಶಿವಮ್ಮ. ಮಕ್ಕಳೂ ಕೂಡಾ ಪುಟ್ಟವಾಗಿದ್ದಾಗ ಆಕೆಯ ತೊಡೆಯ ಮೇಲೆ ಕೂತು, ಎಂಥ ಭರವಸೆಯ ಮಾತುಗಳನ್ನಾಡಿದ್ದರು. ಈಗಲೂ ಆಕೆಗೇನು ಅವರ ಕೈಯಲ್ಲಿ ಮಾಡಿಸಿಕೊಂಡು ತಿನ್ನುವ ಹಂಬಲವೇನೂ ಆಕೆಗಿರಲಿಲ್ಲ. ಆಕೆ ಬಯಸುತ್ತಿದ್ದುದು ಮಕ್ಕಳು, ಸೊಸೆಯರು, ಮೊಮ್ಮಕ್ಕಳ ಪ್ರೀತಿಯ ಸಾಂಗತ್ಯ ಮಾತ್ರ. ಹುಡುಗರು ಚಿಕ್ಕವರಿದ್ದಾಗ ಆಡುತ್ತಿದ್ದ ಮುದ್ದುಮುದ್ದಾಗಿನ ಮಾತುಗಳು, ಕಕ್ಕುಲಾತಿ ತುಂಬಿದ ಅಕ್ಕರೆಯ ನುಡಿಗಳು, ಸೆರಗನ್ನು ಹಿಡಿದೇ ಓಡಾಡುತ್ತಿದ್ದ ನೆನಪುಗಳು, ಇಬ್ಬರೂ ತೊಡೆಯ ಮೇಲೆ ಮಲಗಿ ಕತೆ ಕೇಳುತ್ತಿದ್ದ ರಾತ್ರಿಗಳು, ಅದೆಲ್ಲಾ ತನ್ನ ಭ್ರಮೆಯೋ ಏನೋ ಎಂದು ಒಬ್ಬಂಟಿ ಕುಳಿತು ಯೋಚಿಸಿ, ತನ್ನ ಮೇಲೆ ತಾನೇ ಅನುಮಾನ ಪಟ್ಟುಕೊಳ್ಳುತ್ತಿದ್ದಳು. ಒಂದು ದಿನ ಶಿವಮ್ಮ ಪ್ರತಿ ದಿನದ ಕೆಲಸದ ಒತ್ತಡದಲ್ಲಿ ಹುಷಾರಿಲ್ಲದೆಯೇ ಜ್ವರ ಬಂದು ಮಲಗಿದಳು. ಹಾಸಿಗೆಯಿಂದ ಮೇಲೇಳಲೂ ತಲೆಸಿಡಿತ, ತಲೆಭಾರ. ಒಂದಿಷ್ಟು ಗಂಜಿ ಕಾಯಿಸಿ ಕೊಡಲೂ ಯಾರೂ ಇಲ್ಲವಲ್ಲಾ ಎಂದು ಚಿಂತಿಸುತ್ತಾ ನಿಡುಸುಯ್ದದಳು. ಎದುರುಮನೆಯ ಟಿವಿಯಿಂದ ಬರುತ್ತಿದ್ದ ಹಾಡು ನನ್ನವರು ಯಾರೂ ಇಲ್ಲ , ಯಾರಿಗೆ ಯಾರೂ ಇಲ್ಲ. ಪ್ರೀತಿ ವಾತ್ಸಲ್ಯಕೆ ಅರ್ಥವೆ ಇಲ್ಲ……ಹಾಡು ಕೇಳ್ತಾ ಕೇಳ್ತಾ ಕಣ್ಣಲ್ಲಿ ನೀರು ದಳದಳನೆ ಇಳಿಯಿತು. ಹಿಂದಿಯೇ, ಶಿವಮ್ಮನ ಆತ್ಮಾಭಿಮಾನ ಎಚ್ಚರಿಸಿತು. “ಶಿವಮ್ಮಾ, ಏನಿದೂ? ನೀನು ಹೀಗೆ ಕುಗ್ಗಿ ಹೋದರೆ ಹೇಗೇ? ಕೊರಗಿ ಆರೋಗ್ಯ ಕೆಡಿಸಿಕೊಂಡು ಪರಾವಲಂಬಿ ಆಗೋದು ನಿನಗಿಷ್ಟವೇ?ಏಳು, ಮೇಲೇಳು. ”, ಎಂದು ತನ್ನನ್ನ ಜಾಗೃತಗೊಳಿಸಿದ ಆತ್ಮದ ಮಾತಿಗೆ ಎದ್ದು, ಬೇಕಾದ ಕಷಾಯ ಕಾಸಿಕೊಂಡು, ಸುಧಾರಿಸಿಕೊಂಡು ಮಾತ್ರೆಯ ಅಂಗಡಿಗೆ ಹೋಗಿ ಔಷಧ ತೆಗೆದುಕೊಂಡು ಫೀನಿಕ್ಸ್ ಪಕ್ಷಿಯಂತೆ ಎದ್ದು ಕೂತಳು.

ಇತ್ತೀಚಿಗೆ ಆರು ತಿಂಗಳ ಹಿಂದೆ ಮಗುವನ್ನು ನೋಡಿಕೊಳ್ಳಲು ಒಂದೊಳ್ಳೆ ನಂಬಿಕೆಯ ಹೆಂಗಸು ಬೇಕೆಂದು ತಾನು ಮಾತ್ರೆ ಹೋಗುವ ಔಷಧಿ ಅಂಗಡಿಯ ಮಾಲೀಕ ಹೇಳಿದಾಗ, ಎಲ್ಲ ಮನೆಗಳ ಕೆಲಸವನ್ನೂ ಬಿಟ್ಟು ಅಲ್ಲಿ ಮಗುವಿನ ಆರೈಕೆ ಮಾಡಲು ಸೇರಿಕೊಂಡಿದ್ದಳು. ಮನೆಯೊಡತಿ ಪ್ರೇಮ ಕೂಡಾ ಶಿವಮ್ಮಳನ್ನು ಬಲು ಗೌರವದಿಂದಲೇ ಕಾಣುತ್ತಿದ್ದಳು. ಬೆಳಗ್ಗೆ ಅಷ್ಟು ಗಂಜಿ ಕಾಯಿಸಿಕೊಂಡು ಕುಡಿದು ಹೋಗಿ ಅವರ ಮನೆ ಸೇರಿದಳೆಂದರೆ, ಇನ್ನು ಮನೆಗೆ ಬರುತ್ತಿದ್ದುದು ರಾತ್ರೆಯೇ. ಹತ್ತು ತಿಂಗಳ ಪುಟಾಣಿ ಚಿನ್ಮಯ್ ಅವನಮ್ಮನಿಂತಲೂ ಶಿವಮ್ಮನನ್ನು ಹಚ್ಚಿಕೊಂಡಿದ್ದೇ ಹೆಚ್ಚು. ತ್ರಾಸಾದರೂ ಸರಿಯೆ ಎಂದು ವಿಧಿ ಇಲ್ಲದೆ ಎಲ್ಲರ ಮನೆಗಳಿಗೆ ಮುಸುರೆ ತಿಕ್ಕಲು ಹೋಗುತ್ತಿದ್ದ ಶಿವಮನಿಗೀಗ ಮಗುವನ್ನು ನೋಡಿಕೊಳ್ಳುವ ಕೆಲಸ ಬಲು ಅಚ್ಚುಮೆಚ್ಚು. ತನ್ನ ಮೊಮ್ಮಕ್ಕಳನ್ನು ಎದೆಗವಚಿಕೊಂಡು ಮುದ್ದು ಮಾಡುವ ಯೋಗದಿಂದ ವಂಚಿತಳಾದರೂ, ಚಿನ್ಮಯ್ ನನ್ನು ತನ್ನ ವಾತ್ಸಲ್ಯದಿಂದ ತೋಯಿಸಲು ದೇವರು ಅನುವು ಮಾಡಿಕೊಟ್ಟಿದ್ದ. ಯಾರ ಜೊತೆಗೆ ಯಾರ ಸಂಬಂಧ, ಬಾಂಧವ್ಯವನ್ನ ಬೆಸೆಯುತ್ತಾನೋ, ಆ ಜಗನ್ನಿಯಾಮಕನೇ ಬಲ್ಲ.

ನಿಜ ಅಲ್ವೇನ್ರೀ ಭಗವಂತನ ಲೀಲೆಯೇ ಅಂಥದ್ದು. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಎಲ್ಲರಿಗೂ ಅವರವರ ಕರ್ಮಕ್ಕೆ ತಕ್ಕಂತೆ, ಯೋಗ್ಯತೆಗನುಸಾರವಾಗಿ ಫಲ ಕೊಟ್ಟೇ ತೀರುತ್ತಾನೆ. ಆದರೆ ಸೈರಣಿಗೆಯಿಂದ ಕಾಯುವ ಸಂಯಮ ನಮಗಿರಬೇಕಷ್ಟೇ.

ಮಗು ಹುಟ್ಟುವಾಗ ತಾಯಿ ಎಷ್ಟೊಂದು ನೋವನ್ನು ಅನುಭವಿಸುತ್ತಾಳೆ. ಆದರೆ, ಮಗುವಿನ ನಗು ನೋಡಿದ ತಕ್ಷಣ ತನ್ನ ನೋವನ್ನೇ ಮರೆಯುತ್ತಾಳೆ. ಕೈ ತುತ್ತು ನೀಡಿ, ಅಂಬೆಗಾಲಿಡಿಸಿ ಬದುಕಿನುದ್ದಕ್ಕೂ ಮಗುವಿನ ಏಳಿಗೆಗಾಗಿ ಶ್ರಮಿಸುತ್ತಾಳೆ. ಒಮ್ಮೊಮ್ಮೆ ಬೈಯುತ್ತಾಳೆ ತಕ್ಷಣ ಮುದ್ದು ಮಾಡುತ್ತಾಳೆ. ಅಮ್ಮ ಅಂದರೆ ಹಾಗೇ ತಾನೆ ಪದಗಳಿಗೆ ಸಿಗದ ಮಮತೆಯ ಕಡಲು.

ತ್ಯಾಗ ಎನ್ನುವ ಪದಕ್ಕೆ ಪರ್ಯಾಯ ಪದವೆಂದರೆ ತಾಯಿ. ಬಡತನವಾದರೇನೂ? ಸ್ವಾಭಿಮಾನದ ಗುಣಕ್ಕೇನೂ ಬಡತನವಿರದ ಹೆಣ್ಣು ಶಿವಮ್ಮ. ಗಂಡ ಸತ್ತಾಗಲೂ ಕೂಡಾ ತನ್ನ ಹಳ್ಳಿಗೆ ಹಿಂದಿರುಗಿ ತನ್ನ ಆಸ್ತಿಯಲ್ಲಿ ಪಾಲು ಕೇಳಲಿಲ್ಲ. ಈಗಲೂ, ತಾಯಿಯಾಗಿ, ಅತ್ತೆಯಾಗಿ ತನ್ನ ಮಕ್ಕಳ ಮನೆಯಲ್ಲಿ ಇದ್ದು ಅಧಿಕಾರ ನಡೆಸುವ ಯಾವ ಹಂಬಲವೂ ಆಕೆಗಿರಲಿಲ್ಲ. ತನಗೇನೇ ತೊಂದರೆಯಾಗಲೀ, ತನ್ನ ಮಕ್ಕಳು ಸೊಸೆಯಂದಿರ ಜೊತೆ ಅನ್ಯೋನ್ಯವಾಗಿದ್ದು ಚೆನ್ನಾಗಿ ಬದುಕಿದರೆ ಸಾಕು ಎಂದೇ ಹಂಬಲಿಸುತ್ತಿತ್ತು ಆ ಅಮ್ಮನೆಂಬ ಜೀವ. ಗಂಡನಿಲ್ಲದ ಸಮಯದಲ್ಲೂ ಗಂಡಾಗಿ ನಿಂತು ಸಂಸಾರಕ್ಕೆ ಊರುಗೋಲಾದ ಜೀವಕ್ಕೆ ಈಗ ಆಸರೆಗಾಗಿ ಯಾವ ಊರುಗೋಲೂ ಇಲ್ಲ. ಇರುವುದೆಲ್ಲಾ ತನ್ನೊಳಗಿರುವ ಕಸುವು ಅಷ್ಟೇ! ದೇಹ ಬಾಗಿ ಭೂಮಿ ಸೇರುವವರೆಗೂ ಯಾರ ಹಂಗಿಗೂ ಬೀಳಬಾರದೆನ್ನುವ ಮೌಲ್ಯವನ್ನು ಇಟ್ಟುಕೊಂಡ ಹೆಣ್ಣು. ಹುಟ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳಾಗುವಂತೆಯೇ, ಹುಟ್ತಾ ನಮ್ಮ ಮಕ್ಕಳು ಬೆಳೆಯುತ್ತಾ ಹೆಂಡತಿಯ ಸೆರಗ ಹಿಡಿದು ಆಚೆಗೆ ನಡೆಯುವ ಮಕ್ಕಳಾದರೆ, ಎಲ್ಲರ ಜೀವನವೂ ಶಿವಮ್ಮಳ ಜೀವನವೇ ತಾನೇ! ಶಿವಮ್ಮ ಲೋಕದ ಎಲ್ಲ ಮಾತೃದೇವರುಗಳಿಗೆ ದೃಷ್ಟಾಂತವಾಗಿ ಇಲ್ಲಿ ನಿಂತಿದ್ದಾಳೆ.

ಒಂದು ರೀತಿಯಾಗಿ ಆಸರೆಯಿಂದ ವಂಚಿತರಾದ ಎಲ್ಲ ತಾಯಂದಿರ ಪ್ರತಿನಿಧಿಯಾಗಿದ್ದಾಳೆ.

ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ ಆದರೆ ಕೆಟ್ಟ ತಾಯಿ ಇರಲೂ ಸಾಧ್ಯವಿಲ್ಲ ಎಂಬುದಾಗಿ ಶಾಸ್ತ್ರಜ್ಞರು ಹೇಳುತ್ತಾರೆ. ಅದುವೇ ತಾಯಿಯ ಶ್ರೇಷ್ಠತೆ. ತನ್ನ ಕನಸುಗಳನ್ನು ಮರೆತು ಸುಖವನ್ನು ತ್ಯಾಗ ಮಾಡಿ ಆಕೆ ಮಕ್ಕಳ ಸಂತೋಷವನ್ನೇ ತನ್ನದಾಗಿ ಆನಂದಿಸುತ್ತಾಳೆ.

ತಾಯಿ ತನ್ನ ಮಕ್ಕಳ ಕೈಯನ್ನು ಕೆಲವು ವರ್ಷ ಮಾತ್ರ ಹಿಡಿದುಕೊಳ್ಳುತ್ತಾಳೆ ಆದರೆ ಅವರ ಹೃದಯವನ್ನು ಸದಾಕಾಲ ಹಿಡಿದುಕೊಂಡಿರುತ್ತಾಳೆ. ಮಕ್ಕಳ ಯೋಗಕ್ಷೇಮವನ್ನೇ ಆಕೆ ಸದಾ ಕಾಲ ಬಯಸುತ್ತಾಳೆ ಎಂಬ ಅಜ್ಞಾತ ಮೂಲದ ವಾಕ್ಯವನ್ನು ಅಲ್ಲಗಳೆಯುವವರಾರಿದ್ದಾರೆ?

ಮಕ್ಕಳೇನೋ ದುಡಿಮೆ, ಮಕ್ಕಳು, ಸಂಸಾರ, ಹೀಗೆ ಸಮಯ ಕಳೆದು ಬಿಡುತ್ತಾರೆಯೇ ಹೊರತು ದೂರದಲ್ಲೊಂದು ಜೀವ ತಮಗಾಗಿ ಮಿಡಿಯುತ್ತಿದೆ. ಅದನ್ನು ಒಂದೆರೆಡು ದಿನಕ್ಕೊಮ್ಮೆಯಾದರೂ ಹೋಗಿ ಆಪ್ಯಾಯತೆಯಿಂದ ಅಪ್ಪಿ, ಕುಶಲ ಮಾತಾಡಿ, ಆಕೆಯ ಕೈಯಿಂದ ಒಂದೆರೆಡು ತುತ್ತು ತಿಂದು, ಆಕೆಗೇನು ಅವಸರವೋ ಅದನ್ನು ಒದಗಿಸಿ, ಮೊಮ್ಮಕ್ಕಳನ್ನ ಆಕೆಯ ತೊಡೆಯ ಮೇಲೆ ಕೂರಿಸಿ ಒಂದು ಪಪ್ಪಿ ಕೊಡಿಸಿದರೆ, ನೋಡ್ರೀ ಆ ಚೈತನ್ಯಕ್ಕೆ ಮತ್ತಷ್ಟು ಚೈತನ್ಯ ಸೇರಿ, ಆ ಅಂತರಂಗದ ಆನಂದ ಆಕೆಯ ವದನದಲ್ಲಿ ಮಿಂಚಿನಂತೆ ಹೊಳೆಯುತ್ತದೆ! ಅಷ್ಟು ಮಾಡಲಾರದ ಮಕ್ಕಳಿಗೆ ಬುದ್ದಿ ಹೇಳುವುದಾದರೂ ಏನಿದೇ?ಆದರೂ ಹೇಳಬೇಕಿದೆ. ಏಕಾಂತದಲ್ಲಿ ಕೂತು ಕನಸು ಕಾಣುವ ಮುದಿಜೀವಗಳ ನಿಸ್ತೇಜವಾದ ವಾಸ್ತವ ಬದುಕಿಗೆ ಬಣ್ಣ ತುಂಬುವ ಕೆಲಸ ಆಗಬೇಕಿದೆ. ಮಕ್ಕಳು ಮನಸು ಮಾಡಬೇಕಿದೆ. ತಮ್ಮ ಅಸ್ತಿತ್ವಕ್ಕೆ ಕಾರಣವಾದ ಕರುಳ ಬಳ್ಳಿಯ ಕೂಗಿಗೆ ತಿರುಗಿ ನೋಡಬೇಕಿದೆ.

-ರೂಪ ಮಂಜುನಾಥ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
H N MANJURAJ
H N MANJURAJ
6 months ago

ಪೂರ್ತ ಓದಿದೆ. ಮನ ಕಲಕಿತು. ವಾತ್ಸಲ್ಯದ ಹಲವು ಮಾದರಿಗಳು ಮತ್ತು ಅದುವೇ ಬದುಕಿನ ಕೂರಂಬುಗಳು.

ಕತೆಯೂ ಪ್ರಬಂಧವೂ ಆಗಿರುವ ಈ ಹೊಸ ಮಾದರಿ. ಕಥಾಪ್ರಬಂಧ ಎನ್ನಬಹುದೇನೋ. ಕೊನೆಯಲ್ಲಿ ಲೇಖಕಿಯ ವ್ಯಾಖ್ಯಾನ!
ಸೂಚ್ಯವು ವಾಚ್ಯವಾಯಿತು. ಯಾಕೆ ಹೀಗಾಗಬಹುದು? ತನ್ನ ಸೃಜನಶೀಲ ಬರೆಹವನ್ನು ತಾನೇ ನಿರ್ವಚಿಸುವ ವಿಧಾನ!
ಇದು ತಪ್ಪೆಂದು ಹೇಳುತಿಲ್ಲ. ಏಕೆಂದರೆ ನಾನು ಬರೆಹದ ಒಳಗೇ ಅರ್ಥ ಹುಡುಕುವವ. ಕ್ಯಾತೆ ತೆಗೆಯುವವನಲ್ಲ!!

ಹಾಗೆ ನೋಡಿದರೆ ಕುವೆಂಪು ಅವರಂಥವರೇ ತಮ್ಮ ಕಾದಂಬರಿಗಳಲ್ಲಿ ಹೀಗೆ ವ್ಯಾಖ್ಯಾನ ಮಾಡಲು ಮುಂದಾಗುವರು.
ಅಂದರ ಇದೂ ಒಂದು ಶೈಲಿ

ಇಂಥ ಮಾದರಿ ರೂಪ ಅವರ ಕೈಲಿ ಸರಾಗವಾಗಿ ಮತ್ತು ಸವಿಸ್ತಾರವಾಗಿ ಬಂದಿದೆ. ಸಂತೋಷ.

ಅವರ ಕೈ ಪಳಗಿದೆ. ಬರೆದೂ ಬರೆದೂ ಅವರು ಏನ ಮುಟ್ಟಿದರೂ ಸುವರ್ಣ ಸನ್ನಿಧಾನ. ಪ್ರಕಟಿಸಿದ ಪಂಜುವಿಗೆ ಧನ್ಯವಾದ

1
0
Would love your thoughts, please comment.x
()
x