-೨-
ಸಂಜೆ ನಾಲ್ಕರ ಹೊತ್ತು. ಚುರುಗುಟ್ಟುತ್ತಿದ್ದ ಬಿಸಿಲು ಸ್ವಲ್ಪ ತಂಪಾದಂತೆ ಕಂಡಿತು. ಕಾಡಿಗೆ ಹೋಗಿದ್ದ ಹಸು ಕರು ಕುರಿ ಆಡುಗಳು ಊರನ್ನು ಪ್ರವೇಶ ಮಾಡುತ್ತಿದ್ದವು. ಅದೇ ಹೊತ್ತಲ್ಲಿ ಉದ್ದದ ಬ್ಯಾಗು ನೇತಾಕಿಕೊಂಡು ಕೈಯಲ್ಲಿ ಕಡ್ಲೇಕಾಯಿ ಪೊಟ್ಟಣ ಹಿಡಿದು ಒಂದೊಂದಾಗಿ ಬಿಡಿಸಿ ಬಿಡಿಸಿ ಮೇಲೆ ಆಂತುಕೊಂಡು ಕಡ್ಲೇಬೀಜ ಬಾಯಿಗಾಕಿ ತಿನ್ನುತ್ತಾ ಸ್ಕೂಲಿಂದ ಬರುತ್ತಿದ್ದ ಚಂದ್ರನಿಗೆ, ಹಸು ಕರು ಕುರಿ ಆಡುಗಳ ಸರದಿಯ ನಂತರ ಮೇವು ಮೇಯ್ಕೊಂಡು ಮಲಕಾಕುತ್ತ ಹೊಳೆ ಕಡೆಯಿಂದ ಒಕ್ಕಲಗೇರಿಯ ಕಡೆ ಹೋಗುತ್ತಿದ್ದ ಲಿಂಗಾಯಿತರ ಹಾಲು ಮಾರುವ ಅಮ್ಮಣಪ್ಪನ ಎಮ್ಮೆಗಳು ‘ವ್ಹಾಂಯ್ಞ್.. ವ್ಹಾಂಯ್ಞ್..’ ಅಂತ ಎದುರಾದವು. ಬೆಚ್ಚಿ ಬಿದ್ದವನಂತೆ ದಿಗಿಲುಗೊಂಡ ಚಂದ್ರ ಬಾಯೊಳಗಾಕಿ ಅಗಿಯುತ್ತಿದ್ದ ಕಡ್ಲೇಬೀಜವೂ ಅರ್ಧಂಬರ್ಧವಾಗಿ ಗಕ್ಕನೆ ನಿಂತ. ಅದರಲ್ಲಿ ಒಂದು ಎಮ್ಮೆ ಹತ್ತಿರ ಬಂದು ವಾಂಯ್ಞ್ ಅಂತ ಜೊಲ್ಲು ಸುರಿಸುತ್ತ ಈತನ ಕೈಲಿದ್ದ ಕಡ್ಲೇಕಾಯಿ ನೋಡಿ ನಾಲಿಗೆ ಚಾಚಿತು. ಇವನು ಹಿಂದೆ ಜಾರಿ ಮಗ್ಗುಲಿಗೆ ಬಂದು ಕೊಸರಾಡಿ ತಿರುಗಿದ. ಎಮ್ಮೆ ಮೊಸಗರಿಯುತ್ತ ಒತ್ತರಿಸಿತು. ಇವನು ಅರಚಿಕೊಂಡ. ಎಮ್ಮೆ ಮತ್ತೂ ಜೋರು ಮಾಡಿತು. ಇವನು ಕಡ್ಲೇಕಾಯಿ ಪೊಟ್ಟಣ ಬಿಗಿಯಾಗಿ ಹಿಡಿದು ಕಿಟಾರನೆ ಕಿರುಚಿಕೊಂಡ. ಚಂದ್ರ ಕಿರುಚುವುದನ್ನು ತೆಂಗಿನ ಮರದಡಿ ಒರಗಿ ನಿಂತೇ ಹೇಗೋ ಕೇಳಿಸಿಕೊಂಡವಳಂತೆ ಕಂಡ ನೀಲ ‘ಉಡೋ ಚಂದ್ರೋ..ಏನಾಯ್ತಪ್ಪೋ.. ಬನ್ರಪ್ಪೋ ‘ ಅಂತ ಅರಚುತ್ತಾ ಓಡೋಡಿ ಬರುವ ಅವಳ ದನಿಯ ಕೇಳಿ ಆ ಬೀದಿಯ ಮನೆಯೊಳಗಿದ್ದ ಜನವೆಲ್ಲ ಎದ್ದೊ ಬಿದ್ದೊ ಅಂತ ದಡಗುಟ್ಟುತ್ತ ಈಚೆ ಬಂದು ಬೀದಿಯಲ್ಲಿ ನಿಂತರು.
ಅಲ್ಲೆ ಶನಿಮಹಾತ್ಮನ ಗುಡಿಸಲಿನ ಹಿಂದಿದ್ದ ತಾರಾ ಮರ ಅರಳೀಮರದ ಕೆಳಗೆ ಗೋಲಿಪಚ್ಚಿ ಆಡುತ್ತಿದ್ದ ಪಳೈಕಳು ಹೊಯ್ ಅಂತ ಕೂಗುತ್ತಾ ಬಂದರು. ಚೆನೈನ್ ದೇವಸ್ತಾನದೊಳಗೆ ಇಸ್ಪೀಟು ಆಡುತ್ತಿದ್ದ ಅಪಾಪೋಲಿಗಳು ಎಡಗೈಯಲ್ಲಿ ಇಸ್ಪೀಟು ಎಲೆ ಜೋಡಿಸಿಕೊಂಡಿದ್ದು ಜೋಡಿಸಿಕೊಂಡಂಗೇ ಈಚೆದ್ದು ಬಂದು ದಿಟ್ಟಿಸಿ ನೋಡ ತೊಡಗಿದರು. ಅವರಲ್ಲೊಬ್ಬ ನೀಲಳನ್ನು ನೋಡಿ, ಹಾಗೆ ಕೈಯಲ್ಲಿ ಜೋಡಿಸಿಟ್ಟುಕೊಂಡಿದ್ದ ಇಸ್ಪೀಟು ಎಲೆ ನೋಡಿ ‘ಅಯ್ಯೊ ಈ.. ಹುಚ್ಮುಂಡೆತದ ಅರ‌್ಚುದ್ದು..ಥತ್… ಇದೇನಾಗೋಯ್ತು ಅಂತಿನಿ. ಇದ್ಕೇನು ಮಾಡಕ ಕೆಲ್ಸ ಇಲ್ಲ. ಬಾರೊ ಲೆಯ್.. ಇಲ್ಲಿ ನನ್ ಆಟನೇ ಹೋಯ್ತು. ಆಡ್ಕಳಿ ನೀವೆ’ ಅಂತ ಇಸ್ಪೀಟ್ ಎಲೆ ಮಡಚಿ ಮೋಟು ಬೀಡಿ ಹಚ್ಚಿ ಬಾಯಿಗಿಟ್ಟು ಮೂಗಿನಲ್ಲಿ ತೆಳುವಾಗಿ ಹೊಗೆ ಬಿಡುತ್ತಾ ಒಳ ಕರೆದುಕೊಂಡು ಹೋದ.
ಅತ್ತ ಬೀದಿಲಿದ್ದ ಜನಾನೂ ಲೊಚಗುಟ್ಟಿ ‘ಅವ ನೀಲಕಣ. ನೀಲ.. ಹುಚ್ನೀಲ. ಅದೆ ಚೆನ್ನಬಸಕ್ಕನ ಮಗ. ಅವ್ರ್ ಚಿಕ್ಕಪ್ಪನ್ಗಂಡ್ಗ ಎಮ್ಮ ಅಡ್ಡ ಬಂತು ಅಂತ ಓಡ್ ಬಂದ. ನೋಡು.. ಹುಚ್ಚಿ ಅಂತರ.. ಗ್ಯಾನ್ಗೆಟ್ಟವ ಅಂತರಾ.. ಬೌಲ ಅಂತರ..ಅವ್ರಟ್ಟಿ ಗಂಡು ಅರುಚ್ಕತ್ತು ಅಂತ ಓಡ್ಬಂದ್ಲಲ್ಲ.. ಅವ್ಳ ಹುಚ್ಚಿ ಅನ್ನಗಿದ್ದಾ..’ ಅಂತ ಒಬ್ಬೊಬ್ಬರು ಒಂದೊಂದು ತರ ಮಾತಾಡ್ತ ಅವರವರ ಮನೆ ಕಡೆ ನಡೆದರು.
ಇತ್ತ ನೀಲ ಕೂಗುತ ಅರಚುತ್ತಾ ಓಡಿ ಬಂದವಳು ಎಮ್ಮೆಗೆ ಕಲ್ಲು ಬೀರಿ ಅದರಿಸಿ ಚಂದ್ರನನ್ನು ಎಳೆದು ಅವನ ನೆತ್ತಿ ಮೇಲೆ ಕೈಯಾಕಿ ಕೈ ಬೆರಳಲ್ಲಿ ಪಟಕ ಪಟಕನೆ ನಿಧಾನಕೆ ತಳ್ಳುತ್ತ ‘ನ್ಯಡಿ ನ್ಯಡಿ ನ್ಯಡಿಡಾ ಅದೇನು ಮಾಡಲ್ಲ ಕಣ.. ಬೇವರ್ಸಿ ಮುದೇವಿದು ನೋಡು ಹೆಂಗ್ ಜೊಲ್ ಸುರಿಸ್ತಾ ಮೊಸ್ಗರಿತ ಬತ್ತುದಾ.. ಆ ಗಂಡು ಒಂದೆ ಬತ್ತುದ ಅಂತ ಗೊತ್ತಿಲ್ವ ಇವ್ಕ.. ಆ ನಾಯ್ಗಳು ಬೀದ್ಗ ಬುಟ್ಟಿ ಬುಟ್ಟಿ ಊರ‌್ನೆ ಹಾಳ್ ಮಾಡ್ತವ. ನ್ಯಡಿ.. ನ್ಯಡಿ.. ನಾ ಬರ‌್ದೆ ಇದ್ರ ಏನ ಮಾಡದು..’ ಅಂತಂತಲೇ ಚಂದ್ರನ ಕೈಲಿದ್ದ ಕಡ್ಲೇಕಾಯಿ ಪೊಟ್ಟಣ ನೋಡಿ ‘ನಂಗೊಂದು ಕೊಡುಡಾ’ ಅಂತ ಗೋಗರೆದಳು. ಚಂದ್ರ ಕೊಡದೆ ಕೈ ಹಿಂದೆ ಸರಿಸಿದ. ನೀಲ ‘ಕೊಡುಡಾ.. ನಂಗೊಂದ’ ಅಂತಲೇ ಮತ್ತೂ ಗೋಗರೆಯುತ್ತಲೇ ಇದ್ದಳು. ಅವನು ‘ಹ್ಞಾ… ಹೋಗು ನಂತವ್ ಇಲ್ಲ.. ‘ ಅಂತ ಓಡಲು ಯತ್ನಿಸಿದ.
ಈಗ ನೀಲ ‘ಕೊಡುಡಾ… ಕೊಡುಡಾ.. ಕೊಡ್ಡಾ ನಂಗೊಂದಾ.. ನಾಯಿ ಮುದೇವಿ ಕೊಡು ನಂಗೊಂದಾ..’ ಅಂತಂತ ಇನ್ನಷ್ಟು ಜೋರು ಮಾಡಿದಳು. ಅವನು ಇವಳ ಜೋರಿಗೆ ಹೆದರಿದವನಂತೆ ಕಣ್ಣನ್ನು ಆಕಡೆ ಈಕಡೆ ಬಿಟ್ಟು ಮೆಲ್ಲಗೆ ಹೆಜ್ಜೆ ಎತ್ತಿಟ್ಟು ತಪ್ಪಿಸಿಕೊಂಡು ಓಡ್ತಾ.. ಅವನ ಓಟ ನೋಡ್ತಾ ಇವಳೂ ಅವನ ಹಿಂದೆ ಓಡ್ತಾ ‘ಕೊಡುಡ ಲೇಯ್.. ಲೇಯ್ ಕೊಡ್ಡಾ..ನಿನ್ನ ಆ ಎಮ್ಮ ತಿಮ್ದು ಸಾಯ್ಸ.. ಥೂ ನನೈದುನ್ ಕೂಸೆ… ನೋಡ್ಕ ಆ ಎಮ್ಮ ತಕ್ಕ ಬಂದು ತಿಮಿಸ್ತಿನಿ… ನಿಂತ್ಕಲ’ ಅಂತಲೇ ಓಡ್ದಾ ಓಡ್ದಾ ….
ಕೊನೆಗೆ ಚಂದ್ರನ್ನ ಹಿಡ್ದೆ ಬಿಟ್ಟಳು. ಅವನ ಕೈಲಿದ್ದ ಕಡ್ಲೇಕಾಯಿ ಕಿತ್ತುಕೊಂಡೇ ಬಿಟ್ಟಳು.
ಚಂದ್ರ ಅಳುತ್ತಾ ಅರಚುತ್ತಾ ಅವಳತ್ತ ಕೆಳಗೆ ಬಿದ್ದಿದ್ದ ಕಲ್ಲುಗಳನ್ನು ಎತ್ತಿ ಎತ್ತಿ ಬೀರಿದ. ಅವಳು ಅವನು ಬೀರಿದ ಕಲ್ಲಿನಿಂದ ತಪ್ಪಿಸಿಕೊಳ್ಳುತ್ತಲೇ ಅವನತ್ತಲೇ ನುಗ್ಗಿ ನುಗ್ಗಿ ಅವನ ಮುಂದಲೆ ಹಿಡಿದೇ ಬಿಟ್ಟಳು. ಅವನು ಚೀರಿಕೊಂಡ. ‘ಹೊಡ್ದಯ… ನಂಗೇ ಕಲ್ತಕ್ಕ ಹೊಡ್ದಯ.. ನನ್ ಮಗುನ್ ಕೂಸೇ…’ ಅಂತ ಹಿಡಿದ ಜುಟ್ಟ ಬಿಡದೆ ಎಳೆದಾಡಿ ಜಾಡಿಸಿ ಒದ್ದೇ ಬಿಟ್ಟಳು. ಅಷ್ಟೊತ್ತಿಗೆ ಚಂದ್ರನ ಅವ್ವ ಓಡಿ ಬಂದು ‘ಏಯ್ ನಿಂಗೇನ್ ಬಂದಿದ್ದು. ಆ ಗಂಡ ಜುಟ್ಟಿಡ್ಕ ಹೊಡಿತಿದ್ದಯಲ್ಲ. ಅದೇನ್ ಮಾಡ್ತು ನಿಂಗ..’ ಅಂತ ಚಂದ್ರನ್ನ ಹಿಡಿದೆತ್ತಿ ಕರೆದುಕೊಂಡು ಹೋಗ್ತಾ ‘ಸೂರಿ ಬಂತನ ಇರು ಮಾಡ್ತನ ನಿಂಗ’ ಅಂತ ಅಂದಳು. ‘ನಾನೇನ್ ಮಾಡ್ದಿ ಚಿಕ್ಕಿ.. ಕಳ್ಳಕಾಯಿ ಕೇಳುದ್ರ ಕೊಡ್ದೆ ಓಡ್ತನ.. ಕೇಳು ಸಟ್ಗ ನೀನೆ..ಬಂದ್ಬುಟ್ಟ ಸುನಾತಿ..’ ಅಂತ ಗುಡುಗುಡನೆ ಓಡಿ ತೆಂಗಿನ ಮರದಡಿ ನಿಂತು ಕಿಸಕ್ಕನೆ ನಗ್ತಾ ಕಡ್ಲೆಕಾಯಿ ಬಿಡಿಸಿ ಬಿಡಿಸಿ ತಿನ್ನತೊಡಗಿದಳು.
**
ಅವತ್ತು ಭಾನುವಾರ. ಬೆಳಗಿನ ಒಂಭತ್ತು ಗಂಟೆ. ದೊಡ್ಡವ್ವ ಚನ್ನಬಸವಿಯ ಮನೆಯೀಗ ಗುಡಿಸಿ ತಾರ‌್ಸಿ ರಂಗೋಲಿ ಬಿಟ್ಟುಕೊಂಡು ನೀಟಾಗಿತ್ತು. ಮೂರನೇ ಕ್ಲಾಸಿನ ಚಂದ್ರ ತನ್ನ ಅವ್ವನ ತೊಡೆ ಏರಿ ಜಗುಲಿಯಲ್ಲಿ ಕುಂತು ದೊಡ್ಡವ್ವನ ಮನೆ ಬಾಗಿಲ ಮುಂದೆ ಬಿಟ್ಟಿದ್ದ ರಂಗೋಲಿಯ ಚಿತ್ತಾರವನ್ನು ನೋಡುತ್ತ ತನ್ನವ್ವನಿಗೆ ತೋರಿಸುತ್ತ ಆಡಾಡುತ್ತಿದ್ದ. ಆಗ ಒಕ್ಕಲಗೇರಿಯಿಂದ ಐದಾರು ಮಂದಿ ಚಂದ್ರನನ್ನು, ಚಂದ್ರನ ಅವ್ವ ಸಿದ್ದಿಯನ್ನು ನೋಡುತ್ತ ಮಾತಾಡಿಸಿ ನಗಾಡುತ್ತ ಹೋದರು. ಹೋದವರು ಚಪ್ಪಲಿ ಹೊರಗೆ ಬಿಟ್ಟು ಒಳಗೆ ಕಾಲಿಟ್ಟರು. ಅದರಲ್ಲಿ ಮೂವರು ಹೆಂಗಸರು ಇಬ್ಬರು ಗಂಡಸರು. ಜೊತೆಗೆ ಒಂದೆರಡು ಕೈಗೂಸುಗಳೂ ಇದ್ದವು. ಚಂದ್ರನ ಅಪ್ಪ ಶಿವಯ್ಯ ಹೆಂಡತಿ ಸಿದ್ದಿಗೆ ರಾತ್ರಿ ಸೆಕೆಂಡ್ ಷೋಗೆ ಹೋಗಿ ತಾನು ನೋಡಿ ಬಂದಿದ್ದ ಮೂರೂವರೆ ವಜ್ರಗಳು ಪಿಚ್ಛರ್ ಸ್ಟೋರಿ ಹೇಳಲು ತೊಡಗಿದ. ಅವನಪ್ಪ ಹೇಳುತ್ತಿದ್ದ ಪಿಚ್ಛರ್ ಸ್ಟೋರಿ ಚಂದ್ರನಲ್ಲಿ ರೋಮಾಂಚನ ಉಕ್ಕಿಸುತ್ತಿದ್ದರೆ ಅವ್ವ ತಲೆದೂಗುತ್ತಿದ್ದಳು.
ಈಗ ಇನ್ನಿಬ್ಬರು ಹೆಂಗಸರು ಬಂದು ದೊಡ್ಡವ್ವನ ಮನೆಗೆ ಹೊಕ್ಕರು. ಇವತ್ತು ಸಂಜೆಯ ತನಕ ನೀಲ ಮನೆ ಒಳಗೆ ಹೋಗುವಂತಿಲ್ಲ. ಹಾಗಂತ ಯಾರು ಏನೇ ಹೇಳಿದರು ಅವಳು ಬಿಡುತ್ತಾಳ.. ಬಿಡುವ ಮಾತೇ ಇಲ್ಲ. ತೆಂಗಿನ ಮರ ಒರಗಿ ನಿಂತಿದ್ದ ನೀಲ ಸಂದಿ ಗೋಡೆಗೆ ಕೈ ತಾಕಿಸುತ್ತಾ ಮನೆ ಕಡೆ ನಡೆಯುತ್ತಿದ್ದಳು. ಸ್ಟೋರಿ ಕೇಳುತ್ತಿದ್ದ ಚಂದ್ರ ಗೋಡೆಗೆ ತಾಕಿಸಿ ಬರುತ್ತಿದ್ದ ನೀಲಳ ಕಡೆ ತಿರುಗಿ ‘ನೀಲಕ್ಕ ಎಲ್ಲಿಗೋಯ್ತಿದ್ದಯ್.. ಅಲ್ಲಿ ನಿಮ್ಮಟ್ಟಿಗ ಯಾರ‌್ಯಾರ ಬಂದರ ಅತ್ತಗೆ ಹೋಗು ‘ ಅಂದ. ಅದಕ್ಕೆ ನೀಲ ‘ಏಯ್ ನಾಯಿ ತಿಕ ಮುಚ್ಗ ಕೂತ್ಗ ಲೌಡಿ ಮಗನೆ.. ನಾನೆಲ್ಲಿಗ್ಯಾರ ಹೋಯ್ತಿನಿ ನೀನ್ಯಾರಲೆ ಕೇಳಕ..’ ಅಂತ ಕೆಕ್ಕಳಿಸಿ ನೋಡಿದಳು. ಅವ್ವ ಅವಳನ್ನು ತಡೆದು ‘ಏ… ಆಯ್ತು ಹೋಗು..’ ಅಂದಳು. ಅವಳು ಮರು ಮಾತಾಡದೆ ಹೋಗಿ ಅವರ ಮನೆ ಬಾಗಿಲಲ್ಲಿ ನಿಂತಳು. ಶಿವಯ್ಯ ಇದೆಲ್ಲಿ ಇದು ಹೋಗಿ ರಂಪ ಮಾಡ್ದಾಳೊ ಅನ್ನೊದಕ್ಕು ನೀಲಳ ತಮ್ಮ ಸಿದ್ದೇಶ ಅವಳನ್ನು ಬೈಯೊದಕ್ಕು ಸರಿಯಾಯ್ತು. ಸಿದ್ದೇಶ ಹುಟ್ಟಾ ಕುಡುಕ. ಅಪಾಪೋಲಿ. ಕುಡಿಯೋದು ಬೀಡಿ ಸೇದೋದು ಇಸ್ಪೀಟ್ ಆಡೋದು. ಚೆನೈನ್ ದೇವಸ್ತಾನದಲ್ಲಿ ಕೂತ್ಕೊಂಡು ರಾಮಂದ್ರದಲ್ಲಿ ಹಾರ‌್ಮೋನಿ ಬಾಕ್ಸ್ ಎತ್ಕೊಂಡು ಹಾಡು ಹೇಳುವ ಐಕಳನ್ನು ಕೂಡಿಸಿಕೊಂಡು ಬಾರಿಸುವುದು. ಹಾಗೆ ಅವನ ಕೈಗೆ ಒಂದು ಪ್ಯಾಕೆಟ್ ಸಾರಾಯಿ ಐದತ್ತು ರೂಪಾಯಿ ಸಿಕ್ಕರೆ ಫಿನೀಶ್. ಅವನ ಬಿಟ್ಟರೆ ನೀಲಳಿಗೆ ಇನ್ನೊಬ್ಬಳು ತಂಗಿ ಸುಶೀಲ. ಅವಳು ಅವ್ವ ಚನ್ನಬಸವಿಗೆ ಮನೆ ಕೆಲಸ ಅದೂ ಇದು ಮಾಡಿಕೊಂಡಿರೋಳು. ಈಗ ಮನೆಗಿನೆ ಕ್ಲೀನ್ ಮಾಡಿ ರಂಗೋಲಿ ಹಾಕಿರೋಳೆ ಅವಳು. ಇನ್ನೊಂದು ಚಿಕ್ಕ ತಮ್ಮ ಸ್ವಾಮಿ. ಚಂದ್ರನಿಗಿಂತ ಚಿಕ್ಕವನು ಕೈಗೂಸಿನ ತರ. ಈಗದು ಅವರವ್ವನನ್ನೇ ನೋಡ್ತಾ ಅಕ್ಕ ಸುಶೀಲಳ ತೊಡೆ ಮೇಲೆ ಆಡ್ತಾ ಇದೆ.
ಈಗ ನೀಲ ಬಾಗಿಲಲ್ಲೇ ನಿಂತು ನಿಂತು ಸಾಕಾಗಿ ಮುಖ ಸಿಂಡರಿಸಿಕೊಂಡು ಒಳ ಹೋಗಲು ಹವಣಿಸುತ್ತಿದ್ದಳು. ಸಿದ್ದೇಶ ಸಿಟ್ಟಾಗಿ ‘ಏಯ್ ಹೋಗು. ಅಲ್ಲಿ ಯಾರಿದ್ದರು ಅಂತ ಗೊತ್ತಿಲ್ವ.. ಹೋಗು’ ಅಂತ ಅವಳ ರಟ್ಟೆ ಹಿಡಿದು ಎಳೆದ. ಅವಳು ಕೊಸರಿ ಕೊಸರಿ ಸಿದ್ದೇಶನ ಮುಂದಲೆ ಹಿಡಿದು ಕೆಳಕ್ಕೆ ಬೀಳಿಸಿದ. ಒಳಗೆ ಹೋಗಿದ್ದ ಅಷ್ಟೂ ಜನ ಇವಳ ಆಟ ನೋಡಿದ್ದವರೆ. ಅವರು ಅವರ ಪಾಡಿಗೆ ಒಳಗೇ ಇದ್ದರು. ಚಂದ್ರ ಪಿಚ್ಛರ್ ಸ್ಟೋರಿ ಕೇಳುತ್ತಿದ್ದವನು ಅತ್ತ ಅರ್ಧ ಮನಸ್ಸಿಟ್ಟು ನೋಡುತ್ತಿದ್ದ.
ಪ್ರತಿವಾರ ದೊಡ್ಡವ್ವನ ಮನೆ ಒಕ್ಕಲಗೇರಿಯವರಿಂದ ತುಂಬುತ್ತದೆ. ರಂಗೋಲೆ ಬಿಟ್ಟುಕೊಂಡು ಬೆಳಗುತ್ತದೆ. ಇದನ್ನೆಲ್ಲ ನೋಡ್ತಾ ನೋಡ್ತಾ ಅವನು ಅಲ್ಲಿಗೆ ಹೋಗಬೇಕು ಅಂದುಕೊಂಡರು ಯಾವತ್ತೂ ಹೋಗಿದ್ದು ಇಲ್ಲ. ಅವರ ಅವ್ವ ಅಪ್ಪ ಇಬ್ಬರೂ ಅದಕ್ಕೆ ತಡೆ ಒಡ್ಡಿದ್ದರು. ಅದಕ್ಕೆ ಕಾರಣವೂ ಇದೆ ಅದು ಅವನ ಅವ್ವ ಅಪ್ಪನಿಗೆ ಗೊತ್ತು ಚಿಕ್ಕವ್ವ ಚಿಕ್ಕಪ್ಪನಿಗೂ ಗೊತ್ತು. ಅವರ ಮನೆಯ ಉಳಿದ ದೊಡ್ಡವರಿಗೂ ಗೊತ್ತು. ಆಸುಪಾಸಿನ ಮನೆಯವರಿಗೂ ಗೊತ್ತು. ಅಕ್ಕಪಕ್ಕದ ಬೀದಿ ಜನಕ್ಕೆ ಚೂರುಚೂರು ಗೊತ್ತು. ಆದರೆ ಚಂದ್ರನಿಗೆ ಗೊತ್ತಿಲ್ಲ.
ವಾರ ವಾರ ದೊಡ್ಡವ್ವನ ಮನೆಗೆ ಇವರೆಲ್ಲ ಯಾಕೆ ಬರ‌್ತಾರೆ ಎಂಬುದು ಅವನ ಪ್ರಶ್ನೆ. ಇವನು ಒಕ್ಕಲಗೇರಿಗೆ ಹಾಲು ತರಲು ಹೋದರೆ ಇವರ‌್ಯಾರೂ ಮುಖಕೊಟ್ಟೂ ನೋಡಲ್ಲ. ಮುಟ್ಟಿಸಿಕೊಳ್ಳದೆ ದೂರನೇ ಸರಿತಿದ್ರು. ಅವರೆಲ್ಲ ಇಲ್ಲಿಗೆ ಬಂದರೆ ದೊಡ್ಡವ್ವನ ಮನೆಯೊಳಗೆ ಕೂರ‌್ತಾರೆ. ಅವರೆಲ್ಲರನ್ನು ಮುಟ್ಟಿಸಿಕೊಳ್ತಾರೆ. ಮಾತಾಡ್ತಾರೆ. ಇವರೆಲ್ಲ ದೊಡ್ಡವ್ವನ ಮನೆಗೆ ಬರೋದ್ಯಾಕೆ. ಈತರ ಅವನಲ್ಲಿ ಪ್ರಶ್ನೆಗಳು ಹುಟ್ಟಿ ಬೆಳೆಯುತ್ತಿದ್ದವು.
ಈಗಾಗಲೇ ಅವರು ಬಂದು ಗಂಟೆಗೂ ಹೆಚ್ಚು ಕಾಲವಾಗಿತ್ತು. ಶಿವಯ್ಯ ಹೇಳುತ್ತಿದ್ದ ಮೂರೂವರೆ ವಜ್ರಗಳು ಸ್ಟೋರಿ ಮುಗಿದಿರಬಹುದು. ಚಂದ್ರ ಅಲ್ಲಿಂದ ಪಣ್ಣನೆ ರಸ್ತೆ ಕಡೆ ಹಾರಿದ. ಅಲ್ಲಿ ಹೊಸಿಲ ಮೇಲೆ ನಿಂತ ನೀಲಳ ರಗಳೆ ಮುಗಿದಿರಲಿಲ್ಲ. ಬಂದಿದ್ದ ಒಂದಿಬ್ಬರು ಹೊರ ಬಂದು ಕೈ ಮುಗೀತಿದ್ದರು. ಚಂದ್ರ ಅಡ್ಡದಾರಿ ಹಿಡಿದು ಪಕ್ಕದ ಬೀದಿ ಸುತ್ತಾಕೊಂಡು ಆ ಕಡೆಯಿಂದ ಸಂದಿಗೆ ನುಗ್ಗಿ ದೊಡ್ಡವ್ವನ ಮನೆಯ ಹೊಸಿಲಿಗೆ ಕಾಲಾಕಿ ನಿಂತು ಇಣುಕಿದ. ಮನೆ ನಿಶ್ಯಬ್ಧವಾಗಿತ್ತು. ಬಂದಿದ್ದವರು ನಡುಮನೆಯಲ್ಲಿ ಕೈ ಮುಗಿದು ಕುಂತಿದ್ದರು. ಎದುರಿಗೆ ಗೋಡೆ ಒರಗಿ ತೊಡೆ ಮಡಸಿಕೊಂಡು ದೊಡ್ಡವ್ವ ಕುಂತಿದ್ದಳು. ಅವಳ ಮುಖ ಮಾಮೂಲಿ ತರ ಇರಲಿಲ್ಲ. ದೊಡ್ಡವ್ವ ಹಣೆಗೆ ಅಗಲವಾದ ಕುಂಕುಮ ಇಟ್ಟುಕೊಂಡಿದ್ದಳು. ಅವಳ ತೊಡೆಯ ಪಕ್ಕ ಗ್ಲೂಕೂಸ್ ಬಿಸ್ಕಟ್, ಐದಾರು ಕಟ್ಟು ಮಂಗಳೂರು ಗಣೇಶ ಬೀಡಿ, ಬೀಗದೆಸಳಿನ ಚಾವಿ ಕಡ್ಡಿಪೆಟ್ಟಿ ಇತ್ತು. ದೊಡ್ಡವ್ವ ಅದರಲ್ಲಿ ಒಂದು ಬೀಡಿಕಟ್ಟು ಎತ್ತಿಕೊಂಡು ಅದರ ಹಿಂಭಾಗವನ್ನು ಎರಡು ಬೆರಳಲ್ಲಿ ಕುಟ್ಟಿ ತೂತು ಮಾಡಿ ಒಂದು ಬೀಡಿ ಎಳೆದು ಬಾಯಿಗಿಟ್ಟುಕೊಂಡಳು. ಆ ಬೀಡಿಯನ್ನು ತುಟಿಯ ಮೇಲೆ ಅತ್ತಿತ್ತ ಆಡಿಸುತ್ತ ಕಡ್ಡಿಪೆಟ್ಟಿ ಎತ್ತಿಕೊಂಡು ಗೀರಿ ಹಚ್ಚಿ ಸೇದುತ್ತಾ ಹೊಗೆ ಬಿಡುತ್ತಾ ಇದ್ದರೆ ಅಲ್ಲಿ ಕುಂತಿದ್ದವರು ‘ಯಂಕ್ಟಪ್ಪನೆ.. ನಮ್ ಯಂಕ್ಟಪ್ಪನೆ.. ಯಾರ‌್ಗಿದ್ದು ಈ ಗತ್ತು..’ ಅಂತ ಪಿಸುಗುಟ್ಟಿದ್ದು ಕೇಳ್ತಿತ್ತು. ದೊಡ್ಡವ್ವ ಮೆಲ್ಲಗೆ ಇನ್ನೂ ಮೆಲ್ಲಗೆ ‘ಏಯ್…ನೀನು ನನ್ನ ಸಾಕು ಮಾಡಬೇಡ.. ನಿನಗೆ ನಾನೇನು ಹೇಳಲ್ಲ.. ಏಳು ಮ್ಯಾಕ್ಕೆ’ ಅಂತ ಕುಂತಿದ್ದ ಒಬ್ಬರಿಗೆ ತಾಕೀತಿನ ದನಿಯಲ್ಲಿ ಹೇಳುತ್ತಿದ್ದಳು.
ಈಗವಳು ಬೀಡಿಯನ್ನು ಕೆಳಗಿಟ್ಟು ಬೀಡಿ ಮೊನೆಯ ಕಿಡಿಯನ್ನು ನೆಲಕ್ಕೆ ಉಜ್ಜಿ ಚಂದ್ರನತ್ತ ಕೈ ತೋರಿ ಬಾ ಎನ್ನುವಂತೆ ಕಣ್ಣಲ್ಲೇ ಸನ್ನೆ ಮಾಡಿದಳು. ಚಂದ್ರನಿಗೆ ದಿಗಿಲು. ಅವನ ಕಣ್ಣಿಗೆ ದೊಡ್ಡವ್ವ ಮಾಮೂಲಿ ದೊಡ್ಡವ್ವನಾಗಿ ಕಾಣದೆ ಬೇರೆ ರೀತಿ ಕಾಣುತ್ತಿದ್ದಂತೆ ಭಾಸವಾಯ್ತು. ಏಕೋ ಅಂಜಿಕೆ. ಈ ಅಂಜಿಕೆ ಹೊತ್ತೇ ಅವನು ಒಂದೊಂದೇ ಹೆಜ್ಜೆ ಇಡುತ್ತಾ ದೊಡ್ಡವ್ವನ ಹತ್ತಿರ ಹೋದ. ದೊಡ್ಡವ್ವ ಅಲ್ಲೆ ಇದ್ದ ಗ್ಲೂಕೂಸ್ ಪ್ಯಾಕೆಟ್ ಬಿಚ್ಚಿ ಎರಡು ಬಿಸ್ಕಟ್ ಕೊಟ್ಟು ಕೈ ಬೆರಳು ಮುಂದುಮಾಡಿ ಹೋಗು ಎನ್ನುವಂತೆ ಕಣ್ಸನ್ನೆ ಮಾಡಿದಳು. ಅವಳ ಕಣ್ಸನ್ನೆಗೆ ಚಂದ್ರ ಹೊರಗೆ ಬರುವಾಗ ನೀಲ ಎದುರಾಗಿ ಎಲ್ಲರನ್ನು ತಳ್ಳಿಕೊಂಡು ಒಳ ಹೋಗಿ ಮುಂಬಾಗಿಲ ಗೋಡೆ ಸಂದಿಲಿ ಅವಳು ಮಲಗುತ್ತಿದ್ದ ರೂಮಿನ ಬಾಗಿಲಿತ್ತು. ಆ ಬಾಗಿಲ ಚಿಲಕ ತೆಗೆದು ಜಾಡಿಸಿ ಒದ್ದಳು. ಅವಳು ಒದ್ದ ರಭಸಕ್ಕೆ ಆ ಬಾಗಿಲು ದಡಾರೆಂದು ತೆರೆದುಕೊಂಡು ಗಬ್ಬು ವಾಸನೆ ಮುತ್ತಿಕೊಂಡಿತು. ಆ ಗಬ್ಬು ವಾಸನೆಗೆ ವಾಕರಿಕೆ ಬಂದವರಂತೆ ಎಲ್ಲರು ಮೂಗು ಮುಚ್ಚಿಕೊಂಡರು. ಅಂಥ ಗಬ್ಬು ವಾಸನೆ ಬೀರುವ ಆ ರೂಮಿಗೆ ಕಿಟಕಿಯೂ ಇಲ್ಲದೆ, ಗಾಳಿಯೂ ಇಲ್ಲದೆ, ಬೆಳಕೂ ಇಲ್ಲದೆ ಗವ್ವೆನ್ನುತ್ತಿತ್ತು. ಆ ಗವ್ಗತ್ತಲ ರೂಮಿಗೆ ತೂರಿಕೊಂಡ ನೀಲ ದಡಾರೆಂದು ಬಾಗಿಲು ಮುಚ್ಚಿಕೊಂಡ ಮೇಲೆ ನಿಧಾನಕೆ ವಾಸನೆ ಕಮ್ಮಿಯಾಗುತ್ತಿತ್ತು. ಕೈಗೂಸು ಸ್ವಾಮಿಯನ್ನು ತೊಡೆ ಮೇಲೆ ಹಾಕಿಕೊಂಡು ಕುಂತಿದ್ದ ಸುಶೀಲ ಕೂಸನ್ನು ಹೆಗಲ ಮೇಲೆ ಹಾಕಿಕೊಂಡು ಈಚೆ ಜಗುಲಿಯ ಮನೆ ಸೂರಿನಲ್ಲಿ ಒಂದು ಕೈಯಂಚು ಎತ್ತಿಕೊಂಡಳು. ನೀರು ಕಾಯಿಸಲೆಂದು ಬೆಳಗ್ಗೆ ಸೂರ್ಯ ಏಳುವ ಮುನ್ನವೇ ದೊಡ್ಡಳಗ ಹೊತ್ತ ಹಳೇ ನೀರೊಲೆಗೆ ಗೊಬ್ಬಳಿ ಸೀಳಿಗೆ ಹಾಕಿದ್ದ ಬೆಂಕಿ ಇನ್ನೂ ಆರಿರದೆ ಬೂದಿ ಮುಚ್ಚಿ ಅದರೊಳಗೆ ನಿಗಿನಿಗಿ ಬೆಂಕಿಕೆಂಡವಿತ್ತು. ಆ ಬೂದಿಯೊಳಗಿಂದ ಸಣ್ಣಗೆ ಹೊಗೆಯಾಡುತ್ತಿತ್ತು. ಆ ಹೊಗೆಯಾಡುತ್ತಿದ್ದ ಬೂದಿ ಸರಿಸಿ ನಿಗಿನಿಗಿ ಬೆಂಕಿಕೆಂಡವನ್ನು ಬೂರಣಿಗೆಯಿಂದ ಕೈಯಂಚಿಗೆ ತಳ್ಳಿಕೊಂಡು ನಡಮನೆಯಲ್ಲಿಟ್ಟು ಸಾಂಬ್ರಾಣಿ ಹಾಕಿದಳು. ಈಗ ಸಾಂಬ್ರಾಣಿ ಹೊಗೆ ಇಡೀ ಮನೆಯನ್ನೆ ಮುತ್ತಿ ಗಬ್ಬು ವಾಸನೆ ಹೊಡೀತಿದ್ದ ಮನೆಯೀಗ ಗಮ್ಮೆನ್ನತೊಡಗಿತು.
ಚಂದ್ರ ಹೊಸಿಲು ದಾಟಿ ಹೊರ ಬರುವಾಗ ರೂಮೊಳಗಿಂದ ನೀಲ ಕಿಟಾರನೆ ಕಿರುಚಿದ್ದು ಹೊಸಿಲು ದಾಟಿ ಸಂದಿಯುದ್ದಕ್ಕು ಕೇಳಿತು. ಬಿಸ್ಕಟ್ ಬಾಯಿಗಾಕಿಕೊಂಡು ತಿನ್ನುತ್ತಿದ್ದ ಚಂದ್ರ ದಂಗು ಬಡಿದು ಓಡಿ ಬಂದ. ಜಗುಲಿಯಲ್ಲಿ ಕುಂತಿದ್ದ ಅವನ ಅವ್ವ ಅಪ್ಪ ಸರಕ್ಕನೆ ಮೇಲೆದ್ದು ‘ಏಯ್ ಎಲ್ಲಿಗೋಗಿದ್ದ.. ಬ್ಯಾಡ ಬ್ಯಾಡ ಅಂದ್ರು ಹೋಯ್ತನ’ ಅಂತ ಬೈದು ಕೈಹಿಡಿದೆಳೆದು ಜಗುಲಿಗೆ ಹತ್ತಿಸಿಕೊಂಡು ಅವಳು ಕಿರುಚುವುದರ ಕಡೆ ಕಿವಿಗೊಟ್ಟು ಲೊಚಗುಟ್ಟಿದರು.
(ಮುಂದುವರಿಯುವುದು..)
-ಎಂ. ಜವರಾಜ್
ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.