ʼಕುಲುಮೆʼ ಬೆಳಗಿದ ಬಾಳು: ಎಂ ನಾಗರಾಜಶೆಟ್ಟಿ

ʼಕುಲುಮೆʼ ದಸ್ತಗಿರ್ ಸಾಬ್, ಕೋಡಿಕ್ಯಾಂಪ್ ತರೀಕೆರೆ ಇವರ ಜೀವನ ವೃತ್ತಾಂತ- ಬಿಕ್ಕಲಂ ರಹಮತ್ ತರೀಕೆರೆ. ಹೀಗೆಂದರೆ ಪ್ರಾಧ್ಯಾಪಕ, ವಿಮರ್ಶಕ, ಸಂಶೋಧಕ, ಪ್ರಬಂಧಕಾರ ರಹಮತ್ ತರೀಕೆರೆ ಅವರ ಬಾಳಚಿತ್ರಗಳ ʼಕುಲುಮೆʼಗೆ ಕಿಂಚಿತ್ತೂ ಊನವಾಗುವುದಿಲ್ಲ; ಬದಲು ಹೆಚ್ಚು ಅರ್ಥಪೂರ್ಣವಾಗುತ್ತದೆ. ಕಾರಣ: ರಹಮತ್ ತರೀಕೆರೆಯವರ ಆತ್ಮಕಥನ ʼಕುಲುಮೆʼಯ ಪ್ರತಿ ಅಧ್ಯಾಯದಲ್ಲೂ ದಸ್ತಗಿರ್ ಸಾಬರಿದ್ದಾರೆ.

ಕುಲುಮೆ ದತ್ತಣ್ಣ ಎನ್ನುವ ಖ್ಯಾತಿಯ, ಸಾವ್ಕಾರ್ರೆ ಎಂದರೆ ಬೀಗುವ ದಸ್ತಗಿರ್ ಸಾಬ್, ಕುಲುಮೆ ಮತ್ತು ಬೇಸಾಯವನ್ನುಮೂಲ ವೃತ್ತಿ ಮಾಡಿಕೊಂಡಿದ್ದರೂ ಹೊಟ್ಟೆಪಾಡಿಗಾಗಿನೂರೆಂಟು ವೇಷ ತೊಡಲು ಹಿಂಜರಿಯದವರು. ಸರ್ಕಸ್ ಕಂಪೆನಿ ಬಂದರೆ ಕೂಲಿಕಾರರನ್ನು, ಕಿರಾಣಿ ಸಾಮಾನುಗಳನ್ನು, ಪ್ರಾಣಿಗಳಿಗೆ ಆಹಾರವನ್ನು ಒದಗಿಸುವ;ವ್ಯವಹಾರ, ಶಿಕಾರಿ, ಕೆರೆ ಕಂಟ್ರಾಕ್ಟ್ ಹೀಗೆ ಸಂದರ್ಭಾನುಸಾರ ಹಲವು ಹತ್ತು ಕೆಲಸಗಳಲ್ಲಿ ತೊಡಗಿಕೊಳ್ಳುವ ಗಟ್ಟಿಗ;ಸುತ್ತಲ ಇಪ್ಪತ್ತು ಹಳ್ಳಿಯ ಎಲ್ಲಾ ಜಾತಿ-ಧರ್ಮಗಳ, ಕಸುಬುಗಳ ಜನರು ಅವರ ದೋಸ್ತರು.

ʼಬೇಸಾಯ ಮನೆ ಮಂದಿ ಸಾಯ, ಕುಲುಮೆ ಕೆಲಸ ನನ್ನ ನಂತರ ನಿಂತು ಹೋಗಲಿʼ ಎಂದು ಬಯಸಿದ್ದ, ಬಳೆ ಚೂರು ಜೋಡಿಸಿದಂತೆ ಉರ್ದು ಸಹಿ ಹಾಕುತ್ತಿದ್ದ ಅಪ್ಪ ರಹಮತ್ ತರಿಕೆರೆಯವರನ್ನು, ಅವರ ಅಣ್ಣನನ್ನು ಉರ್ದು ಶಾಲೆಗೆ ಸೇರಿಸದೆ ಕನ್ನಡ ಶಾಲೆಗೆ ಸೇರಿಸುತ್ತಾರೆ. “ ಉರ್ದು ಓದಿದವರು ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವುದು, ಸರ್ಕಾರಿ ನೌಕರಿ ಪಡೆಯುವುದು ಕಷ್ಟ, ಕನ್ನಡಕ್ಕೊ ಅಂಗ್ರೇಜಿಗೋ ಹಾಕು. . . ” ಎಂದುಹೊಸಪೇಟೆಯಲ್ಲಿ ಮನೆ ಕಟ್ಟುವವವರ ಮಕ್ಕಳಿಗೆರಹಮತ್ ತರಿಕೆರೆ ಹೇಳುವುದಕ್ಕೂ ಅವರ ಅಪ್ಪ ಆ ಕಾಲದಲ್ಲಿ ಮುಂದಾಲೋಚನೆಯಿಂದ ಕನ್ನಡ ಶಾಲೆಗೆ ಸೇರಿಸುವುದಕ್ಕೂ ಬಹಳ ಫರಾಕಿದೆ. ಅಪ್ಪನ ನಿರ್ಧಾರವಲ್ಲದಿದ್ದರೆ ರಹಮತ್ ತರಿಕೆರೆಯವರೇ ಹೇಳುವಂತೆ, ಕುಲುಮೆ ಕೆಲಸವನ್ನೋ, ಬೇಸಾಯವನ್ನೋ ಮಾಡಬೇಕಿತ್ತೇನೋ!

ಕೂಸಿದ್ದಾಗಿನ ಕಾಯಿಲೆಯಿಂದ ರಹಮತ್ ತರಿಕೆರೆ ನಿತ್ರಾಣಿಯಾಗಿದ್ದರು. ಕುಲುಮೆ ಕೆಲಸ ಅವರಿಂದ ಶಕ್ಯವಿಲ್ಲದಿದ್ದರೂ ಪದವಿ, ಬಳಿಕ ಮೈಸೂರಲ್ಲಿ ಸ್ನಾತಕೋತ್ತರ ಓದಿಸುವುದು ಅಪ್ಪನಿಗೆ ಸುಲಭದ ವಿಷಯವಾಗಿರಲಿಲ್ಲ. ರೈಲ್ವೆ ಪಾಸು ನವೀಕರಿಸಲೂ ಐದು ರುಪಾಯಿ ಇಲ್ಲದ ಪ್ರಸಂಗ ಒದಗುತ್ತದೆ. ಹೇಗೋ ಹಣ ಸಂಪಾದಿಸಿ, ಮಳೆಯಲ್ಲಿ ಒದ್ದೆ ಮುದ್ದೆಯಾಗಿ ನಿಲ್ದಾಣದಲ್ಲಿ ಮಗನಿಗೆ ಕಾಯುತ್ತಾರೆ.

ಆಮಶಂಕೆಯಾಗಿ ಕಾಲೇಜಿಗೆ ಹೋಗದೆ ಹಾಸ್ಟೆಲಲ್ಲಿ ಉಳಿದುಕೊಂಡಿದ್ದಾಗ ವ್ಯಕ್ತಿಯೊಬ್ಬರು ಗೋಣಿಚೀಲದಲ್ಲಿ ಏನನ್ನೊ ಹೊತ್ತು ತರುವುದು ರಹಮತ್ ಕಣ್ಣಿಗೆ ಬೀಳುತ್ತದೆ. ಬೀದಿ ವ್ಯಾಪಾರಿ ಇರಬಹುದೆಂದು ಹಾಸ್ಟೆಲ್ ಸಿಪಾಯಿ ತಡೆಯುತ್ತಾನೆ. ಪರಾಂಬರಿಸಿನೋಡಿದರೆ, ಆಮಶಂಕೆಗೆ ತೋಟದ ಕೆಂದಾಳೆ ಎಳನೀರು ಒಳ್ಳೆಯದೆಂದು ತರೀಕೆರೆಯಿಂದ ಹೊತ್ತು ತಂದ ಅಪ್ಪ!

ಪದವಿ ಪರೀಕ್ಷೆಯಲ್ಲಿ ರಹಮತ್ ತರೀಕೆರೆಯವರು ತೀನಂಶ್ರೀ ಪದಕಕ್ಕೆ ಭಾಜನರಾದಾಗ ಅಪ್ಪ ಸಂಭ್ರಮ ಪಡುತ್ತಾರೆ. ಎಂಎಯಲ್ಲಿ ಏಳು ಪದಕಗಳು ಬಂದಾಗ ಘಟಿಕೋತ್ಸವದಲ್ಲಿ ಭಾಗಿಯಾಗಿ ಖುಷಿ ಪಡುತ್ತಾರೆ. ಈ ಸಂದರ್ಭದಲ್ಲಿ ನಡೆದ ವಿಷಾದದ ಘಟನೆ ಅಪ್ಪನನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಬದುಕಿನ ಕೊನೆಗಾಲದಲ್ಲಿ “ ನನ್ನನ್ನು ಉಳಿಸಿಕೊಳ್ಳಿರೋ” ಎಂದು ಆರ್ತವಾಗಿ ಹೇಳುವ, ಹುಲಿಯಂತೆ ಬದುಕಿದ ಅಪ್ಪ, ತೀರಿಸಲಾರದ ಋಣವನ್ನು ಹೊರಿಸಿದ್ದಾರೆ ಎಂದೇ ರಹಮತ್ ತರಿಕೆರೆ ನಂಬುತ್ತಾರೆ.

ಝುಲೆಕಾ ಎಂದರೆ ಪ್ರತಿಭಾವಂತೆ ಎನ್ನುವ ಅರ್ಥವಂತೆ. ಸ್ವಾರಸ್ಯಕರವಾಗಿ ಕತೆ ಹೇಳುವ, ಕತೆಯಲ್ಲಿ ನೀತಿಯನ್ನೂ ಕಲ್ಪನೆಯನ್ನೂ ಬೆರೆಸುವ, ಚಂದದ ಕಸೂತಿ ಹಾಕುವ, ಕೋಳಿ-ದನ ಸಾಕಿ ಮನೆಯ ಖರ್ಚಿಗೆ ನೆರವಾಗುವ ಅಮ್ಮ ನ್ಯಾಯ ನಿಷ್ಠುರಿ. ಕುರಿಗಾಹಿಗಳಿಂದ ತಪ್ಪಿಸಿಕೊಂಡಿದ್ದ ಕುರಿಯನ್ನು ಹಸಿಗೆ ಮಾಡುವುದನ್ನು ಒಪ್ಪಲಾರರು. ಮರಣ ಶಯ್ಯೆಯಲ್ಲಿದ್ದಾಗಲೂ ʼನೀನು ಓದಿಕೋ ಹೋಗಪ್ಪʼ ಎನ್ನುವ ಕಕ್ಕುಲಾತಿ. ಪ್ರೇಮಿಸಿ ಮದುವೆಯಾದವನ ಬಂಡವಾಳ ಬಯಲಾದಾಗ ಸಂಸಾರವನ್ನುಕಟ್ಟಿ ನಿಲ್ಲಿಸಿದ ಧೈರ್ಯವಂತೆ. ಕುಟುಂಬದ ಬೆನ್ನೆಲುಬಾದ ಅಮ್ಮ ಅಕಾಲ ಮರಣಕ್ಕೆ ತುತ್ತಾಗುತ್ತಾರೆ. ಸಂಸಾರ ʼಇರುವೆ ಗೂಡಿಗೆ ಬೆಂಕಿ ಕೊಟ್ಟಂಗೆ”ಕುಸಿಯುವ ಪ್ರಮೇಯ ಬರುತ್ತದೆ.

ʼಕುಲುಮೆʼಯಲ್ಲಿ ಆರದಿರುವ ಕಾವು ಇವರಿಬ್ಬರದು. ಅಪ್ಪ, ಅಮ್ಮ ಪಟ್ಟ ಶ್ರಮ, ಎಂಥಾ ಪ್ರಸಂಗದಲ್ಲೂ ಸೋಲದ ದಿಟ್ಟತನ, ಎಲ್ಲರೊಂದಿಗೆ ಒಂದಾಗಿ ಬದುಕು ಕಟ್ಟುವ ಛಲ ಕಣ್ಣಿಗೆ ಕಟ್ಟುತ್ತದೆ. ʼ ಕುಲುಮೆʼ ತಮ್ಮ ಮನಸ್ಸಲ್ಲಿ ಸ್ಥಾಯಿಯಾದ ಅಪ್ಪ, ಅಮ್ಮನ ಋಣ ತೀರಿಸುವ ಸಣ್ಣ ಪ್ರಯತ್ನ. ಇದನ್ನು ಬಡ ಮುಸ್ಲಿಂ ಕುಟುಂಬವೊಂದರ ಕತೆಯೆಂದು ಎನ್ನಲಾಗದು. ಧರ್ಮಕ್ಕೆ ಸಂಬಂಧಪಟ್ಟ ಒಂದೆರಡು ಸಣ್ಣ ಆಚರಣೆಗಳನ್ನು ಬಿಟ್ಟರೆ, ಆ ಕಾಲದಬಡ ಕುಟುಂಬಗಳ ಬದುಕಿನ ವಿಧಾನ ಇಲ್ಲಿದೆ.

ಹನ್ನೆರಡು ಅಧ್ಯಾಯಗಳ ʼಕುಲುಮೆʼ ಕಾಲಗತಿಯನ್ನು ಅನುಸರಿಸಿಲ್ಲ. ಸಂದರ್ಭಕ್ಕೆ ಅನುಸಾರವಾಗಿ ಪ್ರತ್ಯೇಕ ಅಧ್ಯಾಯಗಳಲ್ಲಿ ನೆನಪುಗಳನ್ನು ಜೋಡಿಸಲಾಗಿದೆ. ರಹಮತ್ ತರೀಕೆರೆಯವರು ಒಳ್ಳೆಯ ಪ್ರಬಂಧಕಾರರೂ ಆಗಿರುವುದರಿಂದ ಬಾಳ ಚಿತ್ರಗಳು ಪ್ರಬಂಧದ ಮಾದರಿಯಲ್ಲಿವೆ. ಪತ್ರಿಕೆಯೊಂದರಲ್ಲಿ ಪ್ರಕಟವಾಗುತಿದ್ದ ಕಾರಣಕ್ಕೋ ಏನೋ ರಮ್ಯವಾಗಿ, ರಂಜಕವಾಗಿ ಬರೆದಂತಿದೆ. ನೋವಿನ ಘಟನೆಗಳು ನಲಿವಿಗೆ ಸಮೀಪ;ಜಗಳದಲ್ಲಿ ವಿನೋದ. ಅಕ್ಕ- ತಂಗಿಯರ ಕಲಹ, ಗಂಡ-ಹೆಂಡತಿಯ ಕೋಳಿ ಜಗಳಗಳಲ್ಲಿ ಉತ್ಪ್ರೇಕ್ಷೆಯಿದೆ. ತಮ್ಮನ ಮೇಲಿನ ಒಲವಿನಲ್ಲೂ ಉದ್ದೇಶಿತ ಹಾಸ್ಯ ಎದ್ದು ಕಾಣುತ್ತದೆ.

ʼಕುಲುಮೆʼಯ ಉತ್ತರಾರ್ಧದಲ್ಲಿ ರಹಮತ್ ತರಿಕೆರೆ ತನ್ನನ್ನು ತಾನು ಕಂಡುಕೊಳ್ಳಲು, ಪರಿಶೀಲಿಸಲು ಬಯಸುತ್ತಾರೆ. ಈ ಅಧ್ಯಾಯಗಳು ಆಪ್ತತೆ, ಸಹಜತೆಗಳಿಂದ ಮೂಡಿ ಬಂದಿವೆ. ʼಸಹವಾಸʼ, ʼಚಹರೆʼ ʼಅಲ್ಬಿದಾʼ ಆತ್ಮಕತೆಯ ಹೊರತಾಗಿಯೂ ಪರಿಪೂರ್ಣ ಬರಹಗಳು. ಟಾಲ್ಸ್ಟಾಯ್ರವರ ʼಇವಾನ್ ಇಲ್ಯಿಚರ ಸಾವುʼ ಕತೆಯ ನೋಟ ಬದುಕಿನ ಅರ್ಥ- ನಿರರ್ಥಕತೆಗಳ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.

ʼಕುಲುಮೆʼ ಯ ಓದಿನಲ್ಲಿ ಬಡತನ, ಶ್ರಮಗಳ ಹೊರತಾಗಿಯೂ ರಹಮತ್ ತರೀಕೆರೆ ಭಾಗ್ಯಶಾಲಿ ಎಂದನ್ನಿಸುತ್ತದೆ. ತಿದಿಯೊತ್ತಿದರೂ ಝಳ ತಾಕಿದ್ದು ಕಡಿಮೆ. ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡರು. ಪದವಿ, ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಪದಕಗಳನ್ನು ಪಡೆದರು; ಕನ್ನಡ ವಿಶ್ವವಿದ್ಯಾಲಯದಲ್ಲಿ ದೊರೆತ ಅವಕಾಶವನ್ನು ಉಪಯೋಗಿಸಿ ಕ್ಷೇತ್ರಕಾರ್ಯ, ಅಮೂಲ್ಯ ಸಂಶೋಧನೆಗಳನ್ನು ಮಾಡಿದರು; ಅಪರೂಪದ ಕೃತಿಗಳನ್ನು ಬರೆದರು. ಅವರೇ ಹೇಳುವ ಹೆಕ್ಕುವ, ಸೂಕ್ಷ್ಮವಾಗಿ ಅವಲೋಕಿಸುವ ಗುಣಗಳು ಆತ್ಮಕತೆಯಲ್ಲೂ ಇದೆ. ಮೀನಿನ ಪ್ರಸಂಗ, ರಕ್ತ ಪರೀಕ್ಷೆ, ಹೇನು ಬಾಚುವುದು ಇಂತಹ ಸ್ವಾರಸ್ಯಕರ ಪ್ರಸಂಗಗಳೂ, ದುರಂತದ ಘಟನೆಗಳೂ ಹಲವಾರಿವೆ. ʼಕುಲುಮೆʼ ಅವರೊಬ್ಬರದೇ ಕತೆಯಾಗದೆ, ಹಲವು ವ್ಯಕ್ತಿಗಳ, ದಿನಮಾನದ ಸಂಗ್ರಹವಾಗಿದೆ.

ಹಂಪಿ ವಿಶ್ವವಿದ್ಯಾಲಯದ ಕೆಲಸಕ್ಕೆ ತೊಡಗಿದ ಮೊದಲ ದಿನಗಳಲ್ಲಿ ರಹಮತ್ ತರಿಕೆರೆ ಕುರ್ತಕೋಟಿಯವರ ʼಬಯಲು ಆಲಯʼದ ಮೇಲೆ ಪ್ರಜಾವಾಣಿಯಲ್ಲಿ ವಿಮರ್ಶೆ ಬರೆಯುತ್ತಾರೆ. ಕುರ್ತಕೋಟಿಯವರು ತಮ್ಮ ಪುಸ್ತಕದಲ್ಲಿ ಚರ್ಚೆಗೆ ಆಯ್ಕೆ ಮಾಡಿದ್ದವರು ಒಂದೇ ಜಾತಿಗೆ ಸೇರಿದವರು. ಈ ಅಯ್ಕೆಯ ತರ್ಕವನ್ನು ತಮ್ಮ ವಿಮರ್ಶೆಯಲ್ಲಿ ಪ್ರಶ್ನಿಸುತ್ತಾರೆ. ನಂತರದ ಬರಹಗಳಲ್ಲಿ ರಹಮತ್ ತರಿಕೆರೆಯವರ ಈ ಹರಿತ ಕಾಣುವುದಿಲ್ಲ. ಅವರೇ ಹೇಳುವ ಹಿಂಜರಿಕೆ, ದ್ವಂದ್ವಗಳುಇದಕ್ಕೆ ಕಾರಣವೇ? ಕುಲುಮೆ ಅದನ್ನು ಹೇಳುವುದಿಲ್ಲ.

ಸುದೀರ್ಘ ಕಾಲ ಹಂಪಿಯ ಕನ್ನಡ ವಿಶ್ವವಿದಾಲಯದಲ್ಲಿ ಕೆಲಸ ಮಾಡಿದ ರಹಮತ್ ತರಿಕೆರೆ ತಮ್ಮ ಅವಧಿಯ ಬಗ್ಗೆ ಹೆಚ್ಚು ಬರೆಯುವುದಿಲ್ಲ. ಕಂಬಾರರ ಸಮಯದಲ್ಲಿ ನಡೆದ ಪ್ರತಿಭಟನೆಯನ್ನು ಬಿಟ್ಟರೆ ಕನ್ನಡ ವಿಶ್ವವಿದ್ಯಾಲಯದ ಕಾರ್ಯವಿಧಾನ, ಅಧ್ಯಾಪನ, ಸಂಶೋಧನೆ ಇವೆಲ್ಲವುಗಳ ಬಗ್ಗೆ ಮೌನ ವಹಿಸುತ್ತಾರೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಇತರ ವಿಶ್ವವಿದ್ಯಾಲಯಗಳಂತಲ್ಲ. ಅದನ್ನೊಂದು ವಿಶಿಷ್ಟವಾದ, ಮಾದರಿ ವಿಶ್ವವಿದ್ಯಾಲಯವಾಗಿ ರೂಪಿಸುವ ಉದ್ದೇಶವಿತ್ತು. ಅದು ಸಫಲವಾಗಿದೆಯೇ, ಅಲ್ಲಿ ನಡೆಯುತ್ತಿರುವುದೇನು ಎಂದು ತಿಳಿಯುವ ಆಸಕ್ತಿ ಎಲ್ಲರಲ್ಲೂ ಇದೆ. ಈ ಕುರಿತು ರಹಮತ್ ತರಿಕೆರೆ ಮುಂದೆಂದಾದರೂ ಬರೆಯುತ್ತಾರೆನ್ನುವ ನಿರೀಕ್ಷೆ ಇಟ್ಟುಕೊಳ್ಳಬಹುದು.

ಇಲ್ಲಿಯ ಅಧ್ಯಾಯಗಳನ್ನು ಅನುಕ್ರಮಣಿಕೆಯಂತೆ ಓದಬೇಕಿಲ್ಲ. ಕನ್ನಡ, ಉರ್ದು, ಆಡುನುಡಿಗಳನ್ನು ಬಳಸಿ ರಹಮತ್ ತರಿಕೆರೆ ಚಂದವಾಗಿ ಬರೆಯುತ್ತಾರೆ. ಬರೆಯದಿದ್ದು ಕೂಡಾ ಮಸ್ತಾಗಿರಬಹುದು. ʼಹೆಕ್ಕುತಜ್ಞʼನಾದ ಅವರ ಜೋಳಿಗೆಯಲ್ಲಿ ಇನ್ನಷ್ಟು ಅಮೂಲ್ಯ ವಸ್ತುಗಳಿರಬಹುದು. ಸಣ್ಣದು, ದೊಡ್ಡದು ಎಂದುಕೊಳ್ಳದೆ ಹಲವು ಹತ್ತು ಕೆಲಸಗಳಲ್ಲಿ ನಿರಂತರ ತೊಡಗಿಕೊಳ್ಳುವ ರಹಮತ್ ತರಿಕೆರೆಯವರಲ್ಲಿ ಹುರುಪು, ಭರವಸೆ ಇದೆ. ʼ ಕುಲುಮೆʼ ನಮ್ಮಲ್ಲೂ ಆ ಭರವಸೆಯನ್ನು ಮಾಡಿಸಲು ಶಕ್ತವಾಗಿದೆ.

ʼಕುಲುಮೆʼಯನ್ನು ಅಹರ್ನಿಶಿ ಅಂದವಾಗಿ ಪ್ರಕಟಿಸಿದೆ. ಬಾನುರವರ ಮುಖಪುಟದ ಚಿತ್ರದಿಂದ ಪುಸ್ತಕದ ಸೊಗಸು ಹೆಚ್ಚಿದೆ.

-ಎಂ ನಾಗರಾಜಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x