ಅಂದಾಜು ಮೂರು ದಿನಗಳಾಗಿರಬಹುದು, ಬಾಳಕೃಷ್ಣ ಮಾಮಾ ತಮ್ಮ ಊರುಗೋಲಿಗಾಗಿ ತಡಕಾಡಲು ಪ್ರಾರಂಭಿಸಿ. ಯಾವ ಸುತ್ತಿನಲ್ಲಿ ತಡಕಾಡಿದರೂ ಕೈಗೆ ಸಿಗೂದೇ ಇಲ್ಲ ಅದು! ತಡಕಾಡುವ ಐಚ್ಛಿಕ ಕ್ರಿಯೆಯೊಂದಿಗೆ ‘ಪಾರತೀ, ನನ್ ದೊಣ್ಣೆ ಎಲ್ಲಿ…?’ ಎಂಬ ಅನೈಚ್ಛಿಕ ಕರೆಯೂ ಬೆರೆತಿದೆ. ಪಿತುಗುಡುವ ವೃದ್ಧಾಪ್ಯದ ಸಿನುಗು ನಾತದೊಂದಿಗೆ ಮೂರು ದಿನಗಳ ಅವರ ಮಲಮೂತ್ರಾದಿ ಸಕಲ ವಿಸರ್ಜನೆಗಳೂ ಒಂದರೊಳಗೊಂದು ಬೆರೆತು ಮನುಷ್ಯ ಮಾತ್ರರು ಕಾಲಿಡಲಾಗದಂತಹ ದುರ್ನಾತ ಆ ಕೋಣೇಲಿ ಇಡುಕಿರಿದಿದೆ. ಬಾಳಕೃಷ್ಣ ಮಾಮನ ಗೋಳನ್ನು ಕೇಳಿ ಅವನನ್ನು ಆ ಉಚ್ಚಿಷ್ಟಗಳ ತಿಪ್ಪೆಯಿಂದ ಕೈಹಿಡಿದು ಕರೆತರುವ ಕರುಣಾಳು ಒಬ್ಬರೂ ಇಲ್ಲವೆ? ಮೂರು ದಿನಗಳ ಹಿಂದಿನವರೆಗೆ ಇದ್ದರು, ಈಗ ಇಲ್ಲ!
ಮೂರು ದಿನಗಳ ಹಿಂದಿನವರೆಗೆ ಕಣ್ಣು ಕಾಣದ, ಕಿವಿ ಕೇಳದ ಸ್ವತಂತ್ರವಾಗಿ ನಡೆಯಬಲ್ಲಷ್ಟು ಸದೃಢವಾದ ಕಾಲಿಲ್ಲದ ಬಾಳಕೃಷ್ಣ ಮಾಮಾನಿಗೆ ಕಣ್ಣಾಗಿ, ಕಿವಿಯಾಗಿ, ಊರುಗೋಲಾಗಿ…. ಅವರದೆಲ್ಲವನ್ನೂ- ಹೊಡೆತಬಡಿತ ಬೈಗುಳಗಳನ್ನೂ ಸಹಿಸಿಕೊಂಡೂ ಮೂಕವಾಗಿ ಬದುಕುತ್ತಿದ್ದ ಜೀವವೊಂದು ಆ ಮನೆಯಲ್ಲಿತ್ತು. ಬಾಳಕೃಷ್ಣ ಮಾಮಾನ ಹೆಂಡತಿ ಪಾರತಿ ಮಾಮಿ ಎಂಬ ಮೂಕಪಶುವೊಂದು ಕಷ್ಟಕೋಟಲೆಗಳನ್ನು ಸಹಿಸಿ ಸಹಿಸಿ ಸವೆಯಲೆಂದೇ ಈ ಅಖಿಲಾಂಡಕೋಟಿ ಬ್ರಹ್ಮಾಂಡದಲ್ಲಿ ಅವತಾರವನ್ನು ತಾಳಿತ್ತು, ಆದರೆ ಆ ಮೂಕಜೀವ ಮೂರು ದಿನಗಳ ಹಿಂದಷ್ಟೇ ತನ್ನ ವ್ಯಾಪಾರ ವಹಿವಾಟುಗಳನ್ನೆಲ್ಲ ಚುಕ್ತಾ ಮಾಡಿ ಪರಂಧಾಮವನ್ನೈದಿತ್ತು; ಅದಕ್ಕೆ ಸಾಕ್ಷಿಯಾಗಿ ಪ್ರಧಾನ ಬಾಗಿಲಿನ ನಟ್ಟ ನಡುವೆ ಅನಾಥ ಹೆಣವಾಗಿ ಬಿದ್ದಿತ್ತು! ಹೇಳುವ ಕೇಳುವ ದಾತಿಕರಿಲ್ಲದೆ, ನೊಣಗಳು ಮುತ್ತಿ ಹೆಣವು ದುರ್ನಾತ ಬೀರುತ್ತಿತ್ತು!
ಬಾಳಕೃಷ್ಣ ಮಾಮಾ ಮತ್ತು ಪಾರತಿ ಮಾಮಿ ಅನಾಥರಲ್ಲವೆಂದರೆ ಅಲ್ಲ, ಹೌದೆಂದರೆ ಹೌದು. ಅವರಿಗೆ ಒಬ್ಬಿಬ್ಬರಲ್ಲ, ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಇದ್ದಾರೆ. ಹಾಗಾಗಿ ಅವರು ಅನಾಥರಲ್ಲ; ಆದರೆ ಅವರಲ್ಲೊಬ್ಬರೂ ಈ ದಂಪತಿಯ ವೃದ್ಧಾಪ್ಯದ ಅಸಹಾಯಕ ಪರಿಸ್ಥಿತಿಯಲ್ಲಿ ಇವರ ಜೊತೆಯಲ್ಲಿಲ್ಲ, ಇವರ ಯೋಗಕ್ಷೇಮ ನೋಡಿಕೊಳ್ಳುವಂತಹ ಚಿಲ್ಲರೆ ಕೆಲಸ ಮಾಡಲು ಅವರಿಗೆ ಪುರಸತ್ತಿಲ್ಲ, ಹಾಗಾಗಿ ಅನಾಥರು! ಹಿರಿಮಗ ಮನ್ನಾತ ತನ್ನ ಸಂಸಾರದೊಂದಿಗೆ ಮುಂಬಯಿಯಲ್ಲಿದ್ದಾನೆ, ಕಿರಿಯವ ಪುಂಡಿ ಮಂಗಳೂರಲ್ಲಿದ್ದಾನೆ. ಮಗಳು ಚಂದ್ರಭಾಗಿ ತನ್ನ ಗಂಡ-ಮಕ್ಕಳೊಂದಿಗೆ ವಾಪಿಯಲ್ಲಿ ಸೆಟ್ಲ್ ಆಗಿದ್ದಾಳೆ.
ಮಕ್ಕಳ ವಾದದ ಪ್ರಕಾರ ಮೂರು ಮೂರು ಮಕ್ಕಳಿದ್ದೂ ತಂದೆ-ತಾಯಿ ವೃದ್ಧಾಪ್ಯದಲ್ಲಿ ಬಳ್ಕೂರಿನ ಭೂತದಂತಹ ಮನೆಯಲ್ಲಿ ಇಬ್ಬರೇ ಇರುವಂತಾದುದರಲ್ಲಿ ಮಕ್ಕಳ ತಪ್ಪು ಏನೂ ಇಲ್ಲ. ಮೂವರಿಗೂ ತಮ್ಮ ತಮ್ಮ ಜೀವನೋಪಾಯಕ್ಕಾಗಿ ಹೊರ ಊರುಗಳಲ್ಲಿ ಇರುವುದು ಅನಿವಾರ್ಯ. ಅವರ ಮೂಗಿನ ನೇರಕ್ಕೇ ವಿಚಾರ ಮಾಡಿದರೆ ತಂದೆ-ತಾಯಿಯ ಯೋಗಕ್ಷೇಮದ ವಿಚಾರದಲ್ಲಿಯೂ ಅನಾಸಕ್ತಿ ತೋರಿದವರಲ್ಲ. ಐದಾರು ವರ್ಷಗಳ ಹಿಂದೆ ಬಾಳಕೃಷ್ಣ ಮಾಮಾ ದೇವರಿಗೆ ಹೂ ಕೊಯ್ಯಲು ಹೋದಾಗ ಕಾಲು ಜಾರಿದ್ದೇ ನೆಪವಾಗಿ ಹಾಸಿಗೆ ಹಿಡಿದಾಗ ಮೂವರೂ ತಮ್ಮ ತಮ್ಮ ಸಂಸಾರ ಸಮೇತರಾಗಿ ಬಂದಿದ್ದರು. ಮನೆಯ ಒಳಗೆ ಹೊರಗೆ, ಮಾಳಿಗೆಯ ಮೇಲೆ ಕೆಳಗೆ, ತೆಣೆಯ ಮೇಲೆ, ಬಾಗಾಯ್ತಿನ ಮೂಲೆಯಲ್ಲಿ…. ಹೀಗೆ ಎಷ್ಟು ಕಡೆ ಕುಳಿತು-ನಿಂತು ಕಡೆದದ್ದನ್ನೇ ಕಡೆದರೂ ಅಂತಿಮವಾಗಿ ಬಂದ ನವನೀತ ಮಾತ್ರ ಒಂದೇ ಆಗಿತ್ತು. ‘ಪಪ್ಪ-ಆಯಿ ಇಲ್ಲೇ ಇರುತ್ತೇವೆ ಎನ್ನುತ್ತಾರೆಯೇ ಶಿವಾಯ್ ನಮ್ಮ ಯಾರೊಂದಿಗೂ ಬರಲು ತಯಾರಿಲ್ಲ.
ಅವರಿಗೆ ಸ್ವಂತ ಮಕ್ಕಳಿಗಿಂತಲೂ ಲಾಗಾಯ್ತಿನಿಂದಲೂ ಪೂಜಿಸಿಕೊಂಡು ಬಂದಿರುವ ಮನೆದೇವರೇ ಮುಖ್ಯ! ತಲೆ ಕೆಳಗಾಗಿ ತಪಸ್ಸು ಮಾಡಿದರೂ ಅವರು ಈ ಭೂತದಂತಹ ಮನೆಯನ್ನು ಬಿಟ್ಟು ನಮ್ಮಲ್ಲಿ ಯಾರೊಬ್ಬರೊಂದಿಗೂ ಬರಲಾರರು. ಆದರೆ ಮನೆಯಲ್ಲಿರುವ ಸೇರುಗಟ್ಟಲೆ ಬೆಳ್ಳಿಬಂಗಾರದ ಆಭರಣ ಮತ್ತು ಬ್ಯಾಂಕಿನಲ್ಲಿರುವ ಠೇವಣಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಮೂವರೂ ಸಮನಾಗಿ ಹಂಚಿಕೊಳ್ಳತಕ್ಕದ್ದು! ಮನೆ ಮತ್ತು ಬಾಗಾಯ್ತಿನ ವಿಭಾಗಣೆಯನ್ನು ಪಪ್ಪ-ಆಯಿ ಮೈತಾದ ನಂತರವಷ್ಟೇ ಈಗಿನಂತೆಯೇ ಮೂವರೂ ತಮ್ಮ ತಮ್ಮಲ್ಲಿಯೇ ಸಮನಾಗಿ ಹಂಚಿಕೊಳ್ಳತಕ್ಕದ್ದು! ಎಲ್ಲಕ್ಕಿಂತ ಮುಖ್ಯವಾಗಿ ಪಪ್ಪ ಮತ್ತು ಆಯಿಗೆ ಮಕ್ಕಳಿಲ್ಲದವರೆಂದು, ದಾತಿಕರಿಲ್ಲದವರೆಂದು ಸರ್ಟಿಫಿಕೇಟ್ ಮಾಡಿಸಿ ವೃದ್ಧಾಪ್ಯ ವೇತನ ಮಂಜೂರಿ ಮಾಡಿಸಿಕೊಡುವಂತೆ ಉಗ್ರಾಣಿ ಬಾಬು ಮೂಲಕ ವ್ಯವಸ್ಥೆ ಮಾಡಿಸಿ ಹೋಗುವುದು!’
ಇಷ್ಟು ಲೈಕಾಗಿ ಹೆತ್ತವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಇನ್ನಾವ ಮಕ್ಕಳಿಂದ ತಾನೇ ಸಾಧ್ಯ?! ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ, ಪ್ರತಿಷ್ಠಿತ ಕಾಲೇಜೊಂದರ ಪ್ರಾಂಶುಪಾಲ, ದೊಡ್ಡ ಕಾರ್ಖಾನೆಯ ಮಾಲೀಕನ ಪತ್ನಿ ತಮ್ಮ ವೃದ್ಧ ತಂದೆ-ತಾಯಿಯ ಹೇಲುಚ್ಚೆ ಬಳಿಯುವುದು ಅವರ ಸ್ಥಾನಮಾನಕ್ಕೆ ಕುಂದುಂಟು ಮಾಡುವುದಿಲ್ಲವೆ?! ಆಗ ಅಷ್ಟು ಲೈಕಾಗಿ ಯೋಗಕ್ಷೇಮ ನೋಡಿಕೊಂಡು ಹೋದವರು ಅಲ್ಲಿಗೇ ಬಿಟ್ಟರೆಂದುಕೊಳ್ಳಬೇಡಿ. ಮೂವರೂ ವರ್ಷಂಪ್ರತಿ ಮಠದ ವರ್ಧಂತಿ ಉತ್ಸವಕ್ಕೆ ಬರುವುದನ್ನು ತಪ್ಪಿಸುವುದಿಲ್ಲ. ಬಂದಾಗ ಕಣ್ಣುದೃಷ್ಟಿ ಸಮಾ ಹಾಯದಿದ್ದರೂ ಅಂದಾಜಿನ ಮೇಲೆ ತಡವರಿಸುತ್ತಲೇ ಆಯಿ ಹೆರಕಿ ಇಡುವ ಬಾಗಾಯ್ತಿನಲ್ಲಿ ಬಿದ್ದಿದ್ದ ತೆಂಗಿನ ಕಾಯಿ, ಅಡಕೆ ಇತ್ಯಾದಿಗಳನ್ನು ಆಳಿಗೆ ಒಂದೊಂದು ಹೊರೆಯಂತೆ ಹೊತ್ತುಕೊಂಡು ಹೋಗುವ ರೂಢಿಯನ್ನು ಅವರು ಮರೆತವರಲ್ಲ! ತಮ್ಮಿಂದ ಕೊಯ್ಯಲಾಗದ ಮಾವಿನಕಾಯಿ, ಹಲಸಿನ ಕಾಯಿಗಳನ್ನು ಪಪ್ಪ-ಆಯಿಗೇ ಬಿಟ್ಟು ಹೋಗುತ್ತಾರೆ! ಅವರ ಪ್ರಕಾರ ಇದೇ ಹೆತ್ತವರಿಗೆ ಮಕ್ಕಳು ಮಾಡಬಹುದಾದ, ಮಾಡುವ ಆರೈಕೆ; ಬರಿಗೈಯಿಂದ ಹೋದರೆ ಹಿರಿಜೀವಗಳಿಗೆ ಬೇಜಾರಾಗುವುದಿಲ್ಲವೆ?!
ಮುಗ್ಧ ವೃದ್ಧಜೀವಗಳು ಮಕ್ಕಳೊಂದಿಗೆ ಅವರು ಇರುವಲ್ಲಿ ಕಾಯಂ ಆಗಿ ಹೋಗಿ ನೆಲೆಸಲು ಒಡಂಬಡದಿದ್ದದ್ದು ಹೌದು.
ಆದರೆ ವರ್ಷದಲ್ಲಿ ಎಲ್ಲೋ ಒಂದೆರಡು ತಿಂಗಳ ಮಟ್ಟಿಗೆ ಬಂದಿರಿ ಎಂದರೆ ಹೋಗುವ ಆಸೆಯನ್ನು ಮನದ ಮೂಲೆಯಲ್ಲಿ ಬಚ್ಚಿಟ್ಟುಕೊಂಡಿದ್ದದ್ದೂ ಹೌದು. ಅಥವಾ ಒಬ್ಬೊಬ್ಬ ಮಕ್ಕಳೂ ಒಂದೆರಡು ತಿಂಗಳು ಇಲ್ಲಿಗೇ ಬಂದು ತಮ್ಮ ಆರೈಕೆ ಮಾಡಲೆಂಬ ಬಯಕೆಯೂ ಇಲ್ಲದಿರಲಿಲ್ಲ. ಆದರೆ ಹೇಗಾದರೂ ಮಾಡಿ ದೂರದಿಂದಲೇ ಕೈ ತೊಳೆದುಕೊಳ್ಳಬೇಕೆಂಬ ಸಂಕಲ್ಪದಿಂದಲೇ ಬಂದವರಲ್ಲಿ ತಮ್ಮ ಮನದ ಬೇಕು-ಬೇಡಗಳನ್ನು ಹಂಚಿಕೊಳ್ಳಲು ಆಸ್ಪದವೇ ಆಗದಿದ್ದಾಗ ಮೌನವಾಗಿಯೇ ಇರಬೇಕಾದ ಅಸಹಾಯಕತೆಯ ವಿನಾ ಬೇರೆ ದಾರಿ ಅವರಿಗಿರಲಿಲ್ಲ. ಹಾಸಿಗೆ ಹಿಡಿದಿದ್ದ ಬಾಲಕೃಷ್ಣ ಮಾಮಾನಿಗೆ ಮಕ್ಕಳು ನಗನಾಣ್ಯದ ಹಂಚಿಕೆಯ ವಿಚಾರವನ್ನು ಅರುಹಿದಾಗಲೇ ಪಾರತಿ ಮಾಮಿಗೆ ಹೇಳಿದ್ದರು,
‘ಮುಚ್ಚಿಹೋಗಲಿದ್ದ ಅಪ್ಪನ ಕಾಲದ ಅಂಗಡಿಯನ್ನು ಉಳಿಸಿಕೊಂಡು ಪೈಸಾ ಪೈಸಾ ಕೂಡಿಟ್ಟು ಈ ಮಕ್ಕಳನ್ನು ಓದಿಸಿ ನೌಕರಿಗೆ ಹತ್ತಿಸುವಾಗ ತಂದೆ-ತಾಯಿಗಳಾದ ನಾವಿಬ್ಬರೂ ಪಟ್ಟ ಪಡಿಪಾಟಲು ಈ ಮಕ್ಕಳಿಗೆ ಗೊತ್ತೇ ಇಲ್ಲವೆ? ಅಥವಾ ಗೊತ್ತಿಲ್ಲದವರಂತೆ ನಟಿಸುತ್ತಿದ್ದಾರೆಯೇ? ಎಂಥಾ ವಿಚಿತ್ರ ನೋಡು, ಅವರಿಗೆ ನಾವು ಕೂಡಿಟ್ಟ ಆಸ್ತಿ ಬೇಕು, ಆದರೆ ನಾವು ಬೇಡದ ಗುಜರಿ ವಸ್ತುಗಳಾಗಿದ್ದೇವೆ! ಇಂಥ ಮಕ್ಕಳು ಹುಟ್ಟದಿದ್ದರೇ ಒಳ್ಳೆಯದಿತ್ತು. ಆಸ್ತಿಯೆಲ್ಲವನ್ನೂ ಮಠಕ್ಕೆ ಬರೆದರೆ ಅವರಾದರೂ ನಮ್ಮ ಯೋಗಕ್ಷೇಮವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರು’
ಪಾರತಿ ಮಾಮಿ ಮಾತ್ರ ತನ್ನ ತಾಯಿಕರುಳ ಕಕ್ಕುಲಾತಿಯಿಂದ, ‘ನಾವು ಪಡಕೊಂಡು ಬಂದ್ದಿದ್ದೇ ಇಷ್ಟು, ದಸ್ಕತ್ತು ಹಾಕಿ ಕೊಟ್ಟುಬಿಡಿ. ಅದರಿಂದ ಅವರಿಗೆ ಸಂತೋಷವಾಗುವುದಾದರೆ ಆಗಲಿ. ನಮಗಾದರೂ ಅವರನ್ನು ಬಿಟ್ಟು ಇನ್ಯಾರಿದ್ದಾರೆ? ನೀವು ಹಾಸಿಗೆ ಹಿಡಿದ್ದೀರಿ, ನನಗೂ ಬೆನ್ನು ಬಾಗಿದೆ, ಕಣ್ಣು ಸಮಾ ಕಾಣುವುದಿಲ್ಲ, ಸರಿಯಿದ್ದರೂ ಮಕ್ಕಳ ಕಣ್ಣಿಗೆ ಹೆತ್ತವರ ಸಂಕಟ ಕಾಣುವುದಿಲ್ಲ! ನಿಮಗೆ ನಾನು, ನನಗೆ ನೀವು ಇದಿಷ್ಟೇ ಸದ್ಯಕ್ಕೆ ನಮ್ಮ ಮುಂದಿರುವ ಸತ್ಯ’ ಎಂದು ಮಕ್ಕಳ ಆಸೆಗೆ ರಹದಾರಿ ಒದಗಿಸಿದ್ದಳು.
ಮಕ್ಕಳನ್ನು ಸಂತುಷ್ಟಗೊಳಿಸಿ ಕಳುಹಿಸಿದ ವೃದ್ಧಜೀವಗಳು ಸತ್ತಿಲ್ಲ, ಅದಕ್ಕಾಗಿ ಬದುಕಿವೆ ಎಂಬ ರೀತಿಯಲ್ಲಿ ಕಾಲಯಾಪನೆ ಮಾಡುತ್ತಿದ್ದವು. ಅದರಲ್ಲಿಯೂ ಮಾಮಿಯ ಗೋಳು ಯಾರಿಗೂ ಬೇಡ. ಹಾಸಿಗೆಯಲ್ಲಿಯೇ ವಿಸರ್ಜನೆ ಮಾಡಿಕೊಳ್ಳುವ ಮಾಮಾನ ಉಚ್ಚಿಷ್ಟಗಳನ್ನೆಲ್ಲ ತೊಳೆದು ಬಳಿದು ಆ ಮುದಿಜೀವ ಹಣ್ಣುಹಣ್ಣಾಗಿ ಹೋಯಿತು. ಜೊತೆಗೆ ಸ್ವಭಾತಃ ಕೋಪಿಷ್ಟನಾದ ಮಾಮ ಕೈಗೆ ಸಿಕ್ಕಿದ್ದರಲ್ಲಿ ಹೊಡೆಯುತ್ತಿದ್ದರು. ಆ ಮೂಕ ಜೀವ ಅವೆಲ್ಲವನ್ನೂ ಸಹಿಸಿಕೊಂಡು ಪತಿಸೇವೆಯಲ್ಲಿಯೇ ಪರಮಾತ್ಮನನ್ನು ಕಾಣುತ್ತ ಒಂದು ದಿನ ಪ್ರಧಾನ ಬಾಗಿಲು ದಾಟುವಾಗ ದೃಷ್ಟಿ ಹಾಯದೆ ಎಡವಿಬಿದ್ದದ್ದೇ ನೆಪವಾಗಿ ಅಲ್ಲಿಯೇ ಪ್ರಾಣ ಕಳೆದುಕೊಂಡಿತು! ಅದನ್ನು ತಿಳಿಯದ ಬಾಳಕೃಷ್ಣ ಮಾಮಾ ತನ್ನ ಊರುಗೋಲಿಗಾಗಿ ಹುಡುಕಾಡುತ್ತಲೇ ಇದ್ದ. ನಡುಮನೆಯಲ್ಲಿ ಬಿದ್ದುಹೋಗಿದ್ದ ಅದು ಸಿಗುವುದಾದರೂ ಹೇಗೆ?
ಐದಾರು ದಿನಗಳ ಬಳಿಕ ಅಕ್ಕಪಕ್ಕದಲ್ಲಿದ್ದ ಮನೆಯವರಿಗೆ ತಡೆದುಕೊಳ್ಳಲಾಗದಷ್ಟು ದುರ್ವಾಸನೆ ಮೂಗಿಗಡರಿತು. ಅದು ಬಾಳಕೃಷ್ಣ ಮಾಮಾನ ಮನೆಯಿಂದಲೇ ಬರುತ್ತಿರುವುದೂ ಖಾತ್ರಿಯಾಯಿತು. ಅವರ ಮನೆಯ ಬಾಗಿಲು ಬಡಿದರೆ ನಿರುತ್ತರ, ನೂಕಿದರೂ ತೆಗೆಯಲಾಗಲಿಲ್ಲ. ಮಾಮಾನ ಹಿರಿಮಗ ಮನ್ನಾತನಿಗೆ ಫೋನು ಮಾಡಿದರೆ ನನಗೆ ವರ್ಷಾಂತ್ಯ ಬರಲಾಗುವುದಿಲ್ಲ, ಪುಂಡೀಗೆ ಫೋನು ಮಾಡಿ ಎಂದ. ಪುಂಡಿ ಫೋನಿಗೆ ಸಿಗಲಿಲ್ಲ. ಬೇರೆ ದಾರಿಗಾಣದೆ ಪೊಲೀಸ್ ಕಂಪ್ಲೆಂಟ್ ಕೊಟ್ಟರು. ಪೊಲೀಸರು ತಹಶೀಲ್ದಾರರ ಸಮಕ್ಷಮದಲ್ಲಿ ಬಾಗಿಲು ಮುರಿದು ತೆರೆಯುತ್ತಿದ್ದಂತೆಯೇ ವಾಂತಿ ಬಂದಂತಾಯಿತು! ಹೇಗೋ ಸಹಿಸಿಕೊಂಡು ಒಳಗೆ ಹೋಗಿ ನೋಡಿದರೆ, ಪ್ರಧಾನ ಬಾಗಿಲ ನಟ್ಟನಡುವೆಯೇ ಹೆಣವೊಂದು, ಹೆಣವೇನು? ಕೇವಲ ಜಂಗು (ಅಸ್ಥಿಪಂಜರ) ಬಿದ್ದುಕೊಂಡಿದೆ. ನೊಣಗಳು ‘ಬೊಂಯ್..’ಗುಡುತ್ತಿವೆ! ಸೀರೆ ಇತ್ಯಾದಿ ಆಬೂಷಣಗಳಿಂದ ಮಾತ್ರವೇ ಅದು ಪಾರತಿ ಮಾಮಿ ಎಂದು ಗುರುತು ಹಿಡಿಯಲಾಯಿತು. ಯಾರೋ ‘ಬಾಳಕೃಷ್ಣ ಮಾಮಾ…?’ ಎಂದರು. ಎಲ್ಲ ಕಡೆ ಹುಡುಕಿ ಕೊನೆಗೆ ಕೋಣೆಯೊಳಗೆ ಹೊಕ್ಕಾಗ ವಿಸರ್ಜನೆಗಳ ಮಹಾಕೂಪದೊಳಗೆ ಮಂಚದ ಮೇಲೆ ಪವಡಿಸಿದ ಬಡಕಲು ಶರೀರವೊಂದು ಗೋಚರವಾಯಿತು. ಕಣ್ಣುಬಾಯಿಗಳಿಗೆ ಮುತ್ತಿಕೊಂಡಿದ್ದ ನೊಣಗಳನ್ನು ನೋಡಿಯೇ ‘ಇದೂ ಮುಗಿದ ಕಥೆಯೇ…!’ ಎಂದು ತೀರ್ಮಾನಿಸಿದ ಪೊಲೀಸರು ಮಕ್ಕಳಿಗೆ ಸುದ್ದಿ ಮುಟ್ಟಿಸಿದರು.
-ಹುಳಗೋಳ ನಾಗಪತಿ ಹೆಗಡೆ