ಕನ್ನಡ ಮುತ್ತು: ಶ್ರೀನಿವಾಸ

ಶಂಕರಯ್ಯ ರೂಮು ಬಿಟ್ಟು ಹೊರಟ.

ಅವನು ಗೋಕಾಕ್ ವರದಿ ಜಾರಿಗೆ ತರಲೇಬೇಕೆಂಬ ಪಣ ಮನದಲ್ಲಿ ತೊಟ್ಟು ಹೊರಟಿದ್ದ. ರಾಷ್ಟ್ರ ಕವಿ ಕುವೆಂಪು ಅವರ ” ಬಾರಿಸು ಕನ್ನಡ ಡಿಂಡಿಮವ… ” ಗೀತೆ ಅವನ ಕಿವಿಯಲ್ಲಿ ಮೊಳಗುತ್ತಿತ್ತು.

” ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ” ಎಂಬ ಉದ್ಘೋಷ ಅವನ ಮನದಲ್ಲಿ ಮೊಳುಗುತ್ತಿತ್ತು.

ಶಂಕರಯ್ಯ ಮೈಸೂರಿನ ಕಡೆಯವನು. ಇದ್ದುದರಲ್ಲಿ ಹೇಗೋ ಒಂದಿಷ್ಟು ಓದಿಕೊಂಡು ಬೆಂಗಳೂರು ಸೇರಿದ್ದ. ಅವನ ಹಳ್ಳಿಯ ಹತ್ತಿರದ ತಾಲೂಕಿನಲ್ಲಿ ತನ್ನ ಪದವಿ ಮುಗಿಸಿ ಕೆಲಸ ಹುಡುಕಿ ನಗರಕ್ಕೆ ಬಂದಿದ್ದ.

ಇಸವಿ ೧೯೮೦. ಗೋಕಾಕ್ ವರದಿ ಜಾರಿಗೆ ತರಲೇಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಕನ್ನಡ ನಾಡಿನಲ್ಲಿ ಹರತಾಳಗಳು ಪ್ರಾರಂಭ ಆಗಿದ್ದವು. ಬೆಂಗಳೂರಿನ ಚಿಕ್ಕ ಲಾಲ್ಬಾಗ್, ಮೈಸೂರು ಬ್ಯಾಂಕ್ ವೃತ್ತ, ವಿಧಾನ ಸೌಧದ ಮುಂಭಾಗ, ಕಾರ್ಪೊರೇಷನ್ ವೃತ್ತ, ಟೌನ್ ಹಾಲ್, ಕಬ್ಬನ್ ಪಾರ್ಕ್ ಮತ್ತು ಮುಂತಾದ ಕಡೆಗಳಲ್ಲಿ ಚಳುವಳಿಯ ಗುಂಪು ಕಂಡು ಬರುತ್ತಿತ್ತು. ಮೈಸೂರು, ಮಂಗಳೂರು, ಹಾವೇರಿ, ಬಳ್ಳಾರಿ, ಬೆಳಗಾವಿ, ಗುಲ್ಬರ್ಗ, ರಾಯಚೂರ, ಬೀದರ, ಹುಬ್ಬಳ್ಳಿ, ಗದಗ ಮತ್ತು ಧಾರವಾಡ ಪಟ್ಟಣಗಳನ್ನು ಮೆಲ್ಲನೆ ಮುಟ್ಟಿತ್ತು ಆ ಚಳುವಳಿ. ಇನ್ನೂ ಪ್ರಾರಂಭಿಕ ಹಂತದಲ್ಲಿಯೇ ಇತ್ತು. ಸಾಹಿತಿಗಳು, ಕನ್ನಡ ಪರ ಚಿಂತಕರು, ಬೋಧಕ ವೃತ್ತಿಯವರು ಮತ್ತಿತರರು ಆ ಚಳುವಳಿಯನ್ನು ಕೈಗೆತ್ತಿಕೊಂಡು ತಮ್ಮ ಪ್ರಾಂತ್ಯಗಳಲ್ಲಿ ಚಳುವಳಿಯ ಮಂಚೂಣಿಯಲ್ಲಿ ನಿಂತು ಮುಂದುವರೆದಿದ್ದರು.

” ಬೇಕೇ ಬೇಕು ನ್ಯಾಯ ಬೇಕು. ಡೌನ್ ಡೌನ್ ಸರ್ಕಾರ…ಗೋಕಾಕ್ ವರದಿ ಜಾರಿಗೆ ಬರಲಿ, ಕನ್ನಡ ಭಾಷೆಗೆ ಪ್ರಥಮ ಸ್ಥಾನ ಸಿಗಲಿ, ಕರ್ನಾಟಕ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಲಿ, ಕನ್ನಡ ಆಡಳಿತ ಭಾಷೆ ಆಗಲಿ. ಸಿರಿಗನ್ನಡಂ ಗೆಲ್ಗೆ. ಬೇಕೇ ಬೇಕು ನ್ಯಾಯ ಬೇಕು, ಗೋಕಾಕ್ ವರದಿ ಜಾರಿಗೆ ಬರಲಿ, ಕನ್ನಡ ಉಳಿಯಲಿ…”

ಶಂಕರಯ್ಯ ನ ಕಿವಿಯಲ್ಲಿ ಚಳುವಳಿಯ ಕೂಗು ಮಾರ್ದನಿಸುತ್ತಿತ್ತು.

ಶಂಕರಯ್ಯ ತನ್ನ ಹೊಟ್ಟೆ ಪಾಡಿಗಾಗಿ ವಾರದ ಎಲ್ಲಾ ಏಳು ದಿನಗಳು ಕಂಪನಿಗೆ ಹೋಗಿ ದುಡಿದು ಬರುತ್ತಿದ್ದ. ಕನ್ನಡದ ಕೆಲಸವೆಂದರೆ ಅವನಿಗೆ ಅಚ್ಚು ಮೆಚ್ಚು. ಅಂತಹುದರಲ್ಲಿ ಈ ಚಳುವಳಿಯಲ್ಲಿ ಭಾಗವಹಿಸಬೇಕೆಂದು ಅವನ ಒಳತೋಟಿ ಹೇಳುತ್ತಲೇ ಇತ್ತು. ಅವನಿಗೆ ಗೋಕಾಕ್ ಚಳುವಳಿಯ ಮೂಲ ಸ್ವರೂಪ ಏನೆಂಬುದು ಬಹಳ ಚೆನ್ನಾಗಿ ಮನದಟ್ಟಾಗಿತ್ತು.

ಆದರೆ ಅವನು ಅನಿವಾರ್ಯವಾಗಿ ಕೆಲಸಕ್ಕೆ ಹೋಗಲೇ ಬೇಕಿತ್ತು. ಕೆಲಸ ಮುಗಿಸಿ ಮನೆಗೆ ಬರುವಾಗ ಎಲ್ಲವೂ ಸ್ತಬ್ಧ ಆಗಿ ಬಿಡುತ್ತಿತ್ತು. ಅವನ

ಚಳುವಳಿಯಲ್ಲಿ ಭಾಗವಹಿಸುವ ಆಸೆ ಕಮರುತ್ತಿತ್ತು.

ಅವನ ಊರಾದ ಕೌಡರಹಳ್ಳಿಯಲ್ಲಿ ಅವನ ಅಪ್ಪ ಉಳಿಸಿಕೊಂಡಿದ್ದ ಒಂದಿಷ್ಟು ಭೂಮಿಯನ್ನು ಶಂಕರಯ್ಯ ನ ಅಣ್ಣಂದಿರು ಮತ್ತು ಅವನ ತಮ್ಮ ಸಾಗುವಳಿ ಮಾಡಿಕೊಂಡು ಊರಿನಲ್ಲಿಯೇ ಉಳಿದರು. ಅದು ಅವರ ಜೀವನಕ್ಕೆ ಸಾಕಾಗುತ್ತಿತ್ತು. ತನ್ನ ಜೀವನ ನಿರ್ವಹಿಸಲು ಶಂಕರಯ್ಯ ಪದವಿ ಪಡೆದು ಕೆಲಸ ಹುಡುಕಿಕೊಂಡಿದ್ದ.

ಬೆಂಗಳೂರಿಗೆ ಹಳ್ಳಿಯಿಂದ ಬಂದವನಿಗೆ ಹೇಗೋ ಕೆಲಸ ಸಿಕ್ಕಿತು ಎಂದು ಹೇಳಿದರೆ ತಪ್ಪಾದೀತು. ಕೆಲಸ ಗಿಟ್ಟಿಸಿಕೊಂಡ ಎಂಬುದೇ ನಿಜವಾದ ಮಾತು. ಆದರೆ ಒಂದು ಕಡೆ ಕೆಲಸಕ್ಕೆ ನಿಲ್ಲದ ಅತಂತ್ರನೂ ಆಗಿದ್ದ! ಅದಕ್ಕೆ ಕಾರಣ ಒಂದೇ. ಕನ್ನಡ.
ಕೆಲಸಕ್ಕೆ ಸೇರಿದ ಕಂಪನಿಗಳು ಕನಡೇತರ ಜನರನ್ನೇ ಹೆಚ್ಚಾಗಿ ಕೆಲಸಗಳಿಗೆ ನೇಮಕಾತಿ ಮಾಡಿಕೊಳ್ಳುವುದನ್ನು ಅವನು ತೀವ್ರವಾಗಿ ವಿರೋಧಿಸುತ್ತಿದ್ದ. ಅದಕ್ಕಾಗಿ ಕಂಪನಿಯ ಮಾಲೀಕರೊಡನೆ ವಾದಕ್ಕೂ ಇಳಿಯುತ್ತಿದ್ದ. ಮಾಲೀಕರ ಕೆಂಗಣ್ಣಿಗೆ ಗುರಿಯಾಗಿ ಕ್ರಮೇಣ ಯಾವುದೋ ಕ್ಷುಲ್ಲಕ ಕಾರಣ ಕೊಟ್ಟು ಕಂಪನಿ ಅವನನ್ನು ಕೆಲಸದಿಂದ ವಜಾ ಮಾಡುತ್ತಿತ್ತು. ಅವನ ಕನ್ನಡ ಪ್ರೇಮ ಅವನಿಗೆ ಕೆಲವೊಮ್ಮೆ ಮುಳುವಾಗುತ್ತಿತ್ತು. ಆದರೂ ಕನ್ನಡವೇ ತನ್ನ ಉಸಿರು ಎಂದು ಪರಿಗಣಿಸಿ ಹೋರಾಟವನ್ನು ಮುಂದುವರೆಸಿದ್ದ. ತನ್ನ ಹೋರಾಟದ ದಿಕ್ಕಿನಲ್ಲಿ ತನ್ನ ಜನರಿಂದ ಹೇಳಿಕೊಳ್ಳುವ ಮಟ್ಟಿಗೆ ಬೆಂಬಲ ಸಿಗದುದ್ದಕ್ಕೆ ಅವನಿಗೆ ಬೇಸರವೂ ಇತ್ತು. ಆದರೂ ತನ್ನ ಹೋರಾಟವನ್ನು ಮುಂದುವರೆಸಿದ್ದ.

ಅವನು ಬಳೇಪೇಟೆಯ ಒಂದು ಗಲ್ಲಿಯಲ್ಲಿದ್ದ ಹಳೇ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಒಂದು ಸಣ್ಣ ರೂಮನ್ನು ಬಾಡಿಗೆಗೆ ಪಡೆದಿದ್ದ. ಮಲಗಲು ಚಾಪೆ, ದಿಂಬು, ಬಕೇಟು, ಮಗ್ಗು, ಪಾತ್ರೆ ಮತ್ತು ಒಂದು ಪಂಪ್ ಸ್ಟೌವ್ ಅವನ ಜೊತೆಗಿದ್ದ ಆಸ್ತಿ. ಹೊದೆಯಲು ಮತ್ತು ಉಡಲು ಒಂದು ಪಂಚೆ. ಕೆಲಸದ ಜಾಗ ಇದ್ದುದ್ದು ವೈಟ್ಫೀಲ್ಡ್ ನಲ್ಲಿ. ಪ್ರತಿ ದಿನವೂ ಅಲ್ಲಿಗೆ ಹೋಗಿ ಕೆಲಸ ಮುಗಿಸಿ ವಾಪಸ್ಸು ಬರುವಷ್ಟರಲ್ಲಿ ಸೂರ್ಯ ಮುಳುಗಿ ಎರಡು ಗಂಟೆಗಳು ಕಳೆದು, ಶಹರಿನ ಜನ ತಮ್ಮದೇ ಗುಂಗಿನಲ್ಲಿ ಮೆಜೆಸ್ಟಿಕ ನ ಸುತ್ತು ಮುತ್ತು ಗಸ್ತು ಹೊಡೆಯುತ್ತಾರೆ.

ಬಸ್ಸು ಸ್ಟಾಂಡಿನಿಂದ ಸೀದಾ ರೂಮು ಸೇರಿ ಅನ್ನ ಬೇಯಿಸಿ ಪಕ್ಕದಲ್ಲಿದ್ದ ಹೋಟೆಲಿನಿಂದ ಎರಡು ರೂಪಾಯಿ ಸಾಂಬಾರ್ ತಂದು ಊಟ ಮಾಡಿದರೆ ಅಂದಿನ ದಿನ ಕಳೆಯಿತು ಎಂದು ನಿಟ್ಟುಸಿರು ಬಿಡುತ್ತಿದ್ದ ಶಂಕರಯ್ಯ. ಆಗಿನ ಆ ದಿನಗಳಲ್ಲಿ ಹೋಟೆಲ್ಲಿನ ಒಂದು ಊಟ ಹನ್ನೆರಡು ರೂಪಾಯಿಗೆ ಕಮ್ಮಿ ಇರಲಿಲ್ಲ.

ತನ್ನ ಕೆಲವೇ ಸ್ನೇಹಿತರ ಜೊತೆಗೂಡಿ ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ಎರಡನೇ ಆಟದ ಪ್ರದರ್ಶನದ ಚಿತ್ರವನ್ನು ವಾರಕ್ಕೊಮ್ಮೆ ತಪ್ಪದೇ ನೋಡುತ್ತಿದ್ದ.

ಶಂಕರಯ್ಯ ನ ಕನ್ನಡ ಪ್ರೇಮ ಮೊದಲಿನಿಂದಲೂ ಅವನನ್ನು ಅಂಟಿಯೇ ಇತ್ತು. ಅದರಲ್ಲೂ ನಟ ಸಾರ್ವಬೌಮ ರಾಜ್ ಕುಮಾರ್ ಎಂದರೆ ಎಲ್ಲಿಲ್ಲದ ಪ್ರೀತಿ ಮತ್ತು ಗೌರವ ಅವನಿಗೆ. ಪ್ರತಿ ವರುಷ ಕನ್ನಡ ನಟತಿಲಕನ ಹುಟ್ಟು ಹಬ್ಬಕ್ಕೆ ತನ್ನ ಹಣದಿಂದ ಸ್ನೇಹಿತರಿಗೆ ಚಾಕೊಲೇಟ್ ಹಂಚಿ ಖುಷಿ ಪಡುತ್ತಿದ್ದ. ಹಾಗೆಯೇ ಕನ್ನಡದ ಎಲ್ಲ ಸಿನಿಮಾಗಳನ್ನು ನೋಡುತ್ತಿದ್ದ.

ಒಮ್ಮೆ ಅವನು ಹೋಗುತ್ತಿದ್ದ ಆ ಚಿತ್ರಮಂದಿರದಲ್ಲಿ ಆ ಶುಕ್ರವಾರ ಬಿಡುಗಡೆಯಾದ ಕನ್ನಡ ಚಿತ್ರದ ಬದುಲು ಕನ್ನಡೇತರ ಚಿತ್ರವನ್ನು ಪ್ರದರ್ಶನ ಮಾಡಿದ್ದರು. ವಿಷಯ ತಿಳಿದ ಶಂಕರಯ್ಯ ಸೀದಾ ಚಿತ್ರಮಂದಿರದ ಮಾಲೀಕರ ಬಳಿ ತಗಾದೆ ತೆಗೆದ. ಅವನು ಮತ್ತು ಅವನ ಸ್ನೇಹಿತರನ್ನು ಆ ಚಿತ್ರಮಂದಿರದ ಮಾಲೀಕ ತನ್ನ ಚೇಲಾಗಳಿಂದ ಅವರೆಲ್ಲರಿಗೂ ಗೂಸಾ ಕೊಡಿಸಿ ಕಳುಹಿಸಿದ್ದ. ಆ ಘಟನೆಯಿಂದ ಶಂಕರಯ್ಯ ಬಹಳ ಕೆರಳಿದ್ದ.

ಮರು ದಿನ ಶಂಕರಯ್ಯ ತನ್ನ ಕೆಲಸಕ್ಕೂ ಹೋಗದೆ ಸೀದಾ ಕನ್ನಡ ಚಳುವಳಿ ನಾಯಕರ ಮನೆಗೆ ನಡೆದು ಚಿತ್ರಮಂದಿರದ ಮಾಲೀಕರ ಅನ್ಯಾಯವನ್ನು ಬಯಲಿಗೆಳೆದನು. ಅಂದಿನ ಮದ್ಯಾಹ್ನ ಕನ್ನಡ ಚಳುವಳಿಗಾರರು ಮತ್ತು ಶಂಕರಯ್ಯ ಆ ಚಿತ್ರಮಂದಿರದ ಬಳಿ ಘೇರಾವು ಮಾಡಿದ್ದರು. ಅಂದಿನ ಸಿನಿಮಾ ಶೋ ರದ್ದಾಯಿತು. ಮಾಲೀಕ ಕಂಗಾಲಾಗಿಬಿಟ್ಟ. ಕನ್ನಡ ಚಿತ್ರೋದ್ಯಮ ಪರೋಕ್ಷವಾಗಿ ಚಳುವಳಿಗೆ ಬೆಂಬಲ ಸೂಚಿಸಿತು. ಪೊಲೀಸರು ಮಾಲೀಕನ ದೂರಿನ ಮೇರೆಗೆ ಚಳುವಳಿಯಲ್ಲಿ ತೊಡಗಿದ್ದ ಶಂಕರಯ್ಯ ಮತ್ತು ಎಲ್ಲ ಹುಡುಗರನ್ನು ಠಾಣೆಗೆ ಕರೆದೊಯ್ದರು. ಎಂಟನೇ ದಿನ ಮಾಲೀಕ ಚಳುವಳಿಯ ಒತ್ತಡಕ್ಕೆ ಮಣಿದು ಕನ್ನಡ ಚಿತ್ರ ಪ್ರದರ್ಶನ ಮಾಡಿದ್ದ. ಮಾಲೀಕ ಕೇಸು ವಾಪಸ್ಸು ತೆಗೆದುಕೊಂಡ. ಶಂಕರಯ್ಯ ಮತ್ತು ಹುಡುಗರ ಮೇಲೆ ಹಾಕಿದ್ದ ಕೇಸು ಖುಲಾಸೆ ಆಗಿತ್ತು. ಶಂಕರಯ್ಯ ‘ ಕನ್ನಡದ ಪರ ‘ ಪಡೆದ ಪ್ರಥಮ ಜಯ ಅದಾಗಿತ್ತು.
ಆದರೆ ಅವನ ಹೊಟ್ಟೆ ಪಾಡು ದೇವರಿಗೇ ದಿಕ್ಕಾಯಿತು.

ಶಂಕರಯ್ಯ ನ ಮೇಲೆ ಪೊಲೀಸ್ ಕೇಸ್ ದಾಖಲಾದುದ್ದರಿಂದ ಅವನ ಕಂಪನಿ ಅವನನ್ನು ಕೆಲಸದಿಂದ ವಜಾ ಮಾಡಿದ್ದರು.

ಶಂಕರಯ್ಯ ಅದರಿಂದ ಎದೆಗುಂದಲಿಲ್ಲ. ಅವನನ್ನು ಕನ್ನಡಮ್ಮನ ಕೆಲಸ ಕೈ ಬೀಸಿ ಕರೆದಿತ್ತು. ಅವನು ಮರು ದಿನದಿಂದ ಗೋಕಾಕ್ ಚಳುವಳಿಗಾರರೊಡನೆ ಹರತಾಳದಲ್ಲಿ ಭಾಗವಹಿಸತೊಡಗಿದ.

ಬೆಳಗಿನ ಹತ್ತು ಗಂಟೆಗೆ ಘೋಷಣೆ ಕೂಗಿ ಫಲಕಗಳನ್ನು ಹಿಡಿದು ದಾರಿಯುದ್ದಕ್ಕೂ ಸಾಗಿ ವಿಧಾನಸೌಧದ ಎದುರು ಕೂರುವುದು. ವಾರದಲ್ಲಿ ಒಂದು ದಿನ ಅಂದರೆ ಶುಕ್ರವಾರದಂದು ಎಲ್ಲಾ ಮುಖ್ಯ ರಸ್ತೆಗಳಲ್ಲಿ ಘೋಷಣೆ ಕೂಗುತ್ತ ಜನರನ್ನು ಆಕರ್ಷಿಸುವ ಕಾಯಕ ಮಾಡುತ್ತಾ ವಿಧಾನ ಸೌಧದ ಎದುರು ಘೋಷಣೆ ಹಾಕುವುದು ಮತ್ತು ಕಬ್ಬನ್ ಪಾರ್ಕಿನ ಆ ಮರಗಳ ಅಡಿಯಲ್ಲಿ ಕಟ್ಟಿದ್ದ ಶಿಬಿರದಲ್ಲಿ ಗುಂಪಾಗಿ ಕೂತು ಚಳುವಳಿಯನ್ನು ಸಾಂಕೇತಿಕ ಗೊಳಿಸುವುದು. ಅಂದು ಪ್ರಮುಖ ಸಾಹಿತಿಯೊಬ್ಬರು ಬಂದು ಅಂದಿನ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕನ್ನಡದ ಬಳಕೆ, ಪ್ರಾಮುಖ್ಯತೆ ಮತ್ತು ಕನ್ನಡಕ್ಕೆ ಕರ್ನಾಟಕದಲ್ಲಿ ಸಲ್ಲಬೇಕಾದ ಗೌರವದ ಬಗ್ಗೆ ಮಾತನಾಡಿ ತ್ರಿಭಾಷಾ ಸೂತ್ರವನ್ನು ಹೇಗೆ ಸರ್ಕಾರ ಅಳವಡಿಸಬೇಕು ಎಂಬುದನ್ನು ತಿಳಿಸುತ್ತಿದ್ದರು.

ಪ್ರತಿ ದಿನವೂ ಒಂದೇ ತೆರನಾದ ಭಾಷಣ ತನ್ನ ಆಸಕ್ತಿಯನ್ನು ಅಳಿಸುತ್ತಾ ಬಂದಿತ್ತು. ಸಾಹಿತಿಗಳ, ಬೋಧಕರ ಕೂಗು ಸರ್ಕಾರಕ್ಕೆ ಕೇಳುತ್ತಲೇ ಇರಲಿಲ್ಲ ಎನ್ನುವಷ್ಟು ಬೇಜವಾಬ್ದಾರಿ ಆಗಿತ್ತು ಸರ್ಕಾರ. ಕೇಂದ್ರದ ನೀತಿಯನ್ನೇ ರಾಜ್ಯದಲ್ಲಿ ಹೇರುವ ಹುನ್ನಾರ ನಡೆಸಿದಂತೆ ವರ್ತಿಸುತ್ತಿತ್ತು ಸರ್ಕಾರ.

ಸರ್ಕಾರದ ಉದಾಸೀನ ನಡತೆಗೆ ಕೊನೆಯೇ ಇಲ್ಲವೇನೋ ಎಂದು ಚಳುವಳಿಗೆ ನಿಂತ ಜನರಿಗೆ ಎನಿಸಿತ್ತು. ಶಂಕರಯ್ಯ ನಿಗೆ ಈ ಚಳುವಳಿ ಫಲ ಕೊಡುತ್ತದೆಯೇ ಎಂಬ ಗುಮಾನಿ ಕಾಡುತ್ತಿತ್ತು.

ಶಂಕರಯ್ಯ ಕೆಲಸ ಬಿಟ್ಟು ಚಳುವಳಿ ಸೇರಿದ ಮೇಲೆ ಅವನ ಹಣಕಾಸಿನ ಸ್ಥಿರತೆ ಕುಸಿಯತೊಡಗಿತ್ತು. ಬೆಳಗಿನ ತಿಂಡಿ ಮತ್ತು ಮದ್ಯಾಹ್ನದ ಊಟ ಚಳುವಳಿಯ ದೆಸೆಯಿಂದ ದೊರೆಯುತ್ತಿತ್ತು. ಆದರೆ ರಾತ್ರಿಯ ಊಟದ ಚಿಂತೆ ಕಾಡಿತ್ತು. ಕೈಯಲ್ಲಿದ್ದ ಹಣ ರೂಮಿನ ಬಾಡಿಗೆಗೆ ಸರಿಯಾಗಿತ್ತು. ಆ ಒಂದು ತಿಂಗಳು ಹೇಗೋ ಕಳೆಯುತ್ತಿತ್ತು. ಆದರೆ ಮುಂದಿನ ತಿಂಗಳ ಬಾಬತ್ತಿಗೆ ಏನು ಮಾಡುವುದು ಎಂಬುದೇ ಮುಗಿಯದ ಯೋಚನೆಯಾಗಿತ್ತು.

ಊರಿನಿಂದ ಪತ್ರ ಬಂದಿತ್ತು. ಅಪ್ಪನಿಗೆ ಲಕ್ವಾ ಹೊಡೆದು ಮೈಸೂರಿನ ಆಸ್ಪತ್ರೆಗೆ ಸೇರಿಸಬೇಕು, ಕೂಡಲೇ ಬರುವುದು ಮತ್ತೂ ಒಂದಷ್ಟು ಹಣ ಜೋಡಿಸಿಕೊಂಡು ಬರುವುದು ಎಂದಿತ್ತು ಪತ್ರದ ವಿಷಯ.

ಈ ವಿಷಯ ತಿಳಿದೊಡನೆ ಶಂಕರಯ್ಯ ಭಾವುಕನಾದ. ಯಾರಲ್ಲಿ ಹಣ ಬೇಡುವುದು, ಹೇಗೆ ಹಣ ಹೊಂದಿಸಿ ಊರಿಗೆ ಹೋಗುವುದು ಎಂದು ಅವನು ಚಿಂತಾಕ್ರಾಂತನಾದ. ಕಂಪನಿಯಲ್ಲಿ ಕೆಲಸ ಇದ್ದಿದ್ದರೆ ಹೇಗೋ ಸಂಬಳವನ್ನು ಮುಂಗಡವಾಗಿ ಪಡೆದು ಊರಿಗೆ ಕಳುಹಿಸಬಹುದಿತ್ತು. ಆದರೆ ಇಂದಿನ ಈ ಪರಿಸ್ಥಿತಿಯಲ್ಲಿ ಹಣ ಒದಗಿಸುವುದು ಒಂದು ಸವಾಲಾಗಿ ಉಳಿಯಿತು.

ಒಂದೆಡೆ ತನ್ನ ವೈಯುಕ್ತಿಕ ಸಮಸ್ಯೆಗಳು ಇನ್ನೊಂದೆಡೆ ಕನ್ನಡಮ್ಮನ ಕೆಲಸ. ಶಂಕರಯ್ಯ ತನ್ನಲ್ಲೇ ತುಲನೆ ಮಾಡತೊಡಗಿದ. ಅವನ ಯೋಚನೆಗೆ ಒಂದು ಇತಿಶ್ರೀ ಹಾಡುವಂತೆ ಅಂದಿನ ಸಂಜೆಯ ಸುದ್ದಿ ಅವನನ್ನು ಚಳುವಳಿಯ ಕಡೆಗೆ ತುಯ್ದಿತ್ತು.

ಇದುವರೆವಿಗೂ ಸಾಹಿತಿಗಳು, ಬೋಧಕರು ಮತ್ತು ಚಿಂತಕರು ಚಳುವಳಿಯಲ್ಲಿ ಭಾಗವಹಿಸಿ ಸರ್ಕಾರವನ್ನು ಭಾಷಾ ಸೂತ್ರದ ಒಡಂಬಡಿಕೆಗೆ ಒಪ್ಪಿಸುವಲ್ಲಿ ವಿಫಲ ಆದುದ್ದರಿಂದ ಈ ಚಳುವಳಿಯನ್ನು ಇಡೀ ಜನತೆಗೆ ತಲುಪಿಸಿ, ಅದರ ಮೂಲ ಸ್ವರೂಪವನ್ನು ಜನರಿಗೆ ತಿಳಿಸಿ ಅವರು ಸರ್ಕಾರದ ವಿರುದ್ಧ ಕೂಗು ಹಾಕುವಂತೆ ಮಾಡುವ ತೀರ್ಮಾನವನ್ನು ಎಲ್ಲರೂ ಒಮ್ಮತದಿಂದ ಒಪ್ಪಿದರು. ಕನ್ನಡಮ್ಮನ ಸೇವೆಗೆ ಜನರನ್ನು ಅಣಿ ಮಾಡಲು ಯೋಜನೆ ಹಾಕಿಕೊಂಡರು.

ಯಾವುದೇ ಚಳುವಳಿ ಅಥವಾ ಕ್ರಾಂತಿ ಶಕ್ತಿಯುತವಾಗಬೇಕಾದರೆ ಜನ ಬೆಂಬಲ ಅತ್ಯಗತ್ಯ. ಮೊದಲು ಕ್ರಾಂತಿಯ ಧ್ಯೇಯ, ಧೋರಣೆಗಳು ಜನರಿಗೆ ಮನವರಿಕೆ ಆಗಬೇಕು. ಜನರು ಕ್ರಾಂತಿಯ ಅಗತ್ಯವನ್ನು ಅರ್ಥ ಮಾಡಿಕೊಂಡರೆ ಅವರ ಒಳ ದನಿ ಎಚ್ಚೆತ್ತು ಅವರೂ ಮುಖ್ಯ ವಾಹಿನಿಗೆ ಬರುತ್ತಾರೆ. ಎಲ್ಲರೂ ಚಳುವಳಿಯಲ್ಲಿ ಭಾಗಿಗಳಾಗುತ್ತಾರೆ. ಹಾಗೆ ಮಾಡಿಯೇ ತಾನೇ ಸ್ವತಂತ್ರ ಹೋರಾಟ ತನ್ನ ಬಿಸಿಯನ್ನು ಪಡೆದುಕೊಂಡಿದ್ದು; ಬ್ರಿಟಿಷರು ಭಾರತ ಬಿಟ್ಟು ಹೊರಟಿದ್ದು, ನಮಗೆ ಸ್ವತಂತ್ರ ಸಿಕ್ಕಿದ್ದು.

ಆದರೆ ಜನತೆಯನ್ನು ಯಾರು ಪರಿಣಾಮಕಾರಿಯಾಗಿ ತಲುಪಬಲ್ಲರು ಎಂಬುದೇ ಒಂದು ಪ್ರಶ್ನೆಯಾಗಿ ಕಾಡಿತ್ತು ಎಲ್ಲರಿಗೂ.

ಆ ಪ್ರಶ್ನೆಗೆ ಉತ್ತರವಾಗಿ ದೊರಕಿದ್ದು ನಟಸಾರ್ವಬೌಮ, ಕನ್ನಡದ ಕಣ್ಮಣಿ, ಅಣ್ಣಾವ್ರು ಎಂದೇ ತಮ್ಮ ಅಭಿಮಾನಿ ದೇವರುಗಳಿಂದ ಪ್ರೀತಿಯಿಂದ ಕರೆಯಲ್ಪಡುವ ಡಾ. ರಾಜ್ ಕುಮಾರ್ !

ಕನ್ನಡ ಚಿತ್ರರಂಗ ಜನಮಾನಸವನ್ನು ತಲುಪುವ ಏಕೈಕ ಮಾರ್ಗವಾಗಿ ಕಂಡಿತು ಎಲ್ಲರಿಗೂ.

ಸುದ್ದಿ ಬಂದ ಒಡನೆ ಎಲ್ಲ ಚಳುವಳಿಗಾರರ ಲ್ಲಿ ಮತ್ತು ಎಲ್ಲಾ ಸಾಹಿತಿಗಳು, ಬೋಧಕರು ಮತ್ತು ಚಿಂತಕರಲ್ಲಿ ಒಂದು ರೀತಿಯ ಚಟುವಟಿಕೆಯ ಸಂಚಲನ ಭುಗಿಲೆದ್ದಿತು. ರಾಜ್ ಕುಮಾರ್ ಎಂಬ ಶಕ್ತಿ ಎಲ್ಲರಲ್ಲೂ ಸಂಚರಿಸತೊಡಗಿತು. ಆ ಶಕ್ತಿಯನ್ನು ಮುಂದಿಟ್ಟು ಹೇಗಾದರೂ ಈ ಚಳುವಳಿಯನ್ನು ಜನರಿಗೆ ತಲುಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರದ ಅನೀತಿಯನ್ನು ಖಂಡಿಸುವುದು ಎಲ್ಲರ ಉದ್ದೇಶವಾಗಿತ್ತು. ಎಲ್ಲರಿಗಿಂತಲೂ ಅಧಿಕ ಸಂತಸಗೊಂಡು ಶಂಕರಯ್ಯ ತನ್ನ ರಾತ್ರಿಯ ಊಟದ ಖರ್ಚಿನಲ್ಲಿ ಎಲ್ಲರಿಗೂ ಸಿಹಿ ಹಂಚಿ ಖುಷಿಪಟ್ಟ!

ಮರು ದಿನ ರಾಜ್ ಕುಮಾರ್ ಅವರು ಅಂದಿನ ಮದ್ರಾಸ್ ಮತ್ತು ಇಂದಿನ ಚೆನ್ನೈ ಯಿಂದ ಬರುವವರಿದ್ದರು. ಮೈಸೂರು ಬ್ಯಾಂಕಿನ ವೃತ್ತದಲ್ಲಿ ಅಂದಿನ ಸಭೆಯ ಏರ್ಪಾಡು ನಡೆದಿತ್ತು. ಪೊಲೀಸರ ಬಂದೋಬಸ್ತ್ ಬಹಳ ಜೋರಾಗಿಯೇ ನಡೆದಿತ್ತು. ಅದಾಗಲೇ ಪ್ರಸಿದ್ಧಿಯ ಉತ್ತುಂಗದ ಶಿಖರಕ್ಕೆ ಏರಿದ್ದರು ರಾಜ್ ಕುಮಾರ್. ಅವರಿಗೆ ಒಂದು ದೊಡ್ಡ ಅಭಿಮಾನಿಗಳ ಗುಂಪೇ ಬೆಳೆದಿತ್ತು.

ಶಂಕರಯ್ಯ ನಿಗೆ ಹೇಳ ತೀರದ ಹರ್ಷ. ಅವನು ಒಂದೆಡೆ ಕುಳಿತುಕೊಳ್ಳಲಾರದೆ ಚಡಪಡಿಸತೊಡಗಿದ್ದ. ಅವನು ರಾಜ್ ಕುಮಾರ್ ಅವರ ಪ್ರತಿ ಚಿತ್ರಗಳನ್ನು ಒಂದೂ ಬಿಡದೆ ನೋಡಿ ಆನಂದಿಸಿದ್ದ. ಎಲ್ಲ ಕನ್ನಡಿಗರೂ ಅವನಂತೆಯೇ ನಟ ಸಾರ್ವಭೌಮರ ಚಿತ್ರಗಳನ್ನು ಕಂಡು ಆನಂದಿಸಿದ್ದರು. ಆದರೂ ಶಂಕರಯ್ಯ ನ ರೀತಿ, ಪ್ರತಿ ಸಂಭಾಷಣೆ ಯನ್ನು ನೆನಪಿನಲ್ಲಿ ಇಟ್ಟಿದ್ದವರು ಬಹಳ ವಿರಳ.

ಅಂದಿನ ಸಭೆ ಕಳೆಗಟ್ಟಿತ್ತು. ಚಳುವಳಿಯ ಎಲ್ಲ ಪದಾಧಿಕಾರಿಗಳಿಗೆ ಪಾಸನ್ನು ವಿತರಿಸಲಾಗಿತ್ತು. ಸಭೆಯ ರಂಗ ಸ್ಥಳದಲ್ಲಿ ಸುಳಿಯಲು ಯಾರಿಗೂ ಅನುಮತಿ ಇರಲಿಲ್ಲ.

ಸಭೆಗೆ ಅಂದಿನ ಕನ್ನಡ ಕಲಾವಿದರ ದಂಡೇ ಆಗಮಿಸಿತ್ತು. ಅದರಲ್ಲಿ ನಿರ್ಮಾಪಕರು, ನಿರ್ದೇಶಕರು, ಚಿತ್ರದ ಶೂಟಿಂಗ್ ತಂಡದ ಕಲಾವಿದರು, ನಟರು, ನಟಿಯರು, ಹಿನ್ನೆಲೆ ಗಾಯಕರು, ಸಂಗೀತಗಾರರು ಮುಂತಾದ ಸಕಲ ಕಲಾವಿದರು ನೆರೆದಿದ್ದರು.

ರಾಜ್ ಕುಮಾರ್ ರವರು ಸಭೆಗೆ ಸರಿಯಾದ ಸಮಯಕ್ಕೆ ಆಗಮಿಸಿ ನಾಡ ಗೀತೆಯೊಂದಿಗೆ ಸಭೆ ಪ್ರಾರಂಭವಾಯ್ತು. ಎಲ್ಲರೂ ಕೌತುಕದಿಂದ ಕನ್ನಡದ ಕಣ್ಮಣಿ ಯ ಭಾಷಣಕ್ಕೆ ಕಾಯುತ್ತಿದ್ದರು. ಭಾಷಣ ಸಭೆಯ ಎಲ್ಲ ದಿಕ್ಕಿಗೂ ಮೊಳಗಿತು. ತಮ್ಮ ಭಾಷಣದಲ್ಲಿ ಕನ್ನಡದ ಭಾಷೆಯ ಬಗೆಗೆ ಯಾವ ಸಾಹಿತಿಗೂ ಕಮ್ಮಿ ಇಲ್ಲದೆ ಕನ್ನಡದ ಚರಿತ್ರೆಯನ್ನು ಹಾಡಿ ಹೊಗಳಿ ” ಕನ್ನಡಕ್ಕೆ ಕನ್ನಡ ಮಣ್ಣಿನಲ್ಲಿ ದೊರಕಬೇಕಾದ ಸ್ಥಾನ ಮಾನಗಳನ್ನು ಅತ್ತೂ ಕರೆದು, ಹೊಡೆದಾಡಿ ಪಡೆಯುವ ಸ್ಥಿತಿ ಬಂದಿರುವುದು ಒಂದು ದೊಡ್ಡ. ವಿಪರ್ಯಾಸವೇ ಸರಿ. ಕನ್ನಡ ಮಣ್ಣು, ಭಾಷೆ ಮತ್ತು ನೆಲ ದ ಉಳಿವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ” ಎಂದು ತಮ್ಮ ನುಡಿ ಮುತ್ತುಗಳನ್ನು ಮುಗಿಸಿದ್ದರು. ಸಭೆಯಲ್ಲಿ ಸುಮಾರು ನಿಮಿಷಗಳು ಕರತಾಡನ ನಿಲ್ಲದೆ ಹರಿಯಿತು. ಅದು ಇಲ್ಲಿಂದ ಕರುನಾಡ ಎಲ್ಲ ಜಿಲ್ಲೆಗಳಲ್ಲೂ ಪ್ರತಿಧ್ವನಿಸಿತು. ಬಾಷಣದ ಕೊನೆಯಲ್ಲಿ

ಮರು ದಿನದಿಂದ ಇಡೀ ರಾಜ್ಯದ ಪ್ರತಿ ಜಿಲ್ಲೆಗೂ, ಪ್ರತಿ ತಾಲೂಕು ಪ್ರದೇಶಗಳಿಗೆ ಭೇಟಿ ಕೊಟ್ಟು ಜನರಲ್ಲಿ ಕನ್ನಡದ ಜಾಗೃತಿ ಮೂಡಿಸಿ ಸರ್ಕಾರದ ಧೋರಣೆಯನ್ನು ಖಂಡಿಸುವ ಕಾರ್ಯಕ್ರಮವನ್ನು ಮಾಡುವುದಾಗಿ ವಾದವಿತ್ತರು.

ಸಭೆಯಲ್ಲಿದ್ದ ಜನರು ರೋಮಾಂಚಿತರಾದರು.

ಶಂಕರಯ್ಯ ಹುಚ್ಚೆದ್ದು ಕುಣಿದ. ಅವನಿಗೆ ದೇವರು ಮೈ ಮೇಲೆ ಬಂದಂತಾಯ್ತು. ರಂಗಸ್ಥಳದ ಪಕ್ಕದಲ್ಲಿಯೇ ಇದ್ದು ತನ್ನ ನೆಚ್ಚಿನ ಹೀರೋವನ್ನು ಕಣ್ ತುಂಬಿಸಿಕೊಂಡಿದ್ದ. ಸಭೆ ಮುಗಿದು ರಾಜ್ ಕುಮಾರ್ ಅವರು ಕೆಳಗೆ ಇಳಿಯುತ್ತಿದ್ದಂತೆ ಅವನು ಯಾರ ಕೈಗೂ ಸಿಗದೇ ಚಂಗನೆ ರಂಗಸ್ಥಳಕ್ಕೆ ಜಿಗಿದೇ ಬಿಟ್ಟ. ಅಲ್ಲಿ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಮಯೂರ ಚಿತ್ರದ ಅಣ್ಣಾವರ ಪ್ರಸಿದ್ದ ಸಂಭಾಷಣೆಯನ್ನು ಅವರದೇ ದನಿಯಲ್ಲಿ ಪಟಪಟನೆ ಉದುರಿಸಿದ. ಸಭೆ ಒಂದರೆಕ್ಷಣ ಸ್ತಬ್ಧವಾಯಿತು. ರಂಗದ ಮೆಟ್ಟಿಲು ಇಳಿಯುತ್ತಿದ್ದ ರಾಜ್ ಅವನತ್ತ ಒಂದು ಕಿರು ನಗೆ ನಕ್ಕು ಮುಂದೆ ಸಾಗಿದರು. ಅದೇ ಅಲ್ಲವೇ ಒಬ್ಬ ಹಿರಿಯ ಕಲಾವಿದ ತನಗಿಂತ ಕಿರಿಯ ನಟನಿಗೆ ಕೊಡುವ ಪ್ರೋತ್ಸಾಹ! ಅಣ್ಣಾವ್ರು ಕಲಾ ರಸಿಕರಲ್ಲವೇ. ಅವರ ಹೃದಯ ಎಂದೂ ಕಲೆಗಾರರಿಗೆ ತೆರದೇ ಇತ್ತು.

ತಮ್ಮ ಕರ್ತವ್ಯದಂತೆ ಪೊಲೀಸರು ರಂಗದ ಮೇಲೆ ಬಂದು ಶಂಕರಯ್ಯ ನನ್ನು ಕೆಳಕ್ಕೆ ದೂಕಿದ್ದರು.

ಅಣ್ಣಾವ್ರು ಇತ್ತ ಆ ಕಿರು ನಗೆ ಶಂಕರಯ್ಯ ನಿಗೆ ದೇವರು ಕೊಟ್ಟ ವರದಂತೆ ಎನಿಸಿತ್ತು. ಅವನು ತನ್ನ ಜೀವನ ಸಾರ್ಥಕವಾಯಿತು ಎಂದು ಬೀಗಿದ.

ಮರು ದಿನದ ಕಾರ್ಯಕ್ರಮವನ್ನು ತಿಳಿದುಕೊಂಡು ತಾನೂ ಅಲ್ಲಿಗೆ ಹೊರಡುವ ಸಿದ್ಧತೆಯನ್ನು ಮಾಡಿಕೊಂಡ.

ಮೊದಲ ದಿನಗಳು ಮಂಡ್ಯ, ಮದ್ದೂರು. ಮೈಸೂರು, ಚಾಮರಾಜನಗರ, ಕೊಳ್ಳೇಗಾಲ ಹಾಗೂ ಕಾಸರಗೋಡು. ಹೀಗೆ ಮೈಸೂರು ಪ್ರಾಂತ್ಯದ ಸುತ್ತೆಲ್ಲ ಪ್ರಚಾರ ನಡೆಯಿತು. ಕನ್ನಡ ಕಣ್ಮಣಿಯನ್ನು ಕಾಣಲು ಜನ ಸಾಗರದಂತೆ ಹರಿದು ಬಂದು ಅಣ್ಣಾವ್ರ ಮಾತುಗಳಿಂದ ಉತ್ತೇಜಿತಗೊಳ್ಳುತ್ತಿದ್ದರು.

ಬೆಂಗಳೂರಿನ ಚಳುವಳಿ ಆಯೋಜಿತ ಸಂಘದ ವತಿಯಿಂದ ಹೋಗಿದ್ದ ಕಾರ್ಯಕರ್ತರಿಗೆ ಊಟ ಮತ್ತು ವಸತಿಯನ್ನು ಆಯಾ ಊರಿನ ಕನ್ನಡ ಸಂಘದ ಸದಸ್ಯರು ಒದಗಿಸುತ್ತಿದ್ದರು. ಮೊದಲಿನಿಂದಲೂ ಶಂಕರಯ್ಯ ಮತ್ತು ಚಳುವಳಿಯ ಮುಖ್ಯಸ್ಥ ಲಿಂಗ ಮೂರ್ತಿ ಬಹಳ ಗಳಸ್ಯ ಕಂಟಸ್ಯ ಆಗಿದ್ದರು. ಲಿಂಗ ಮೂರ್ತಿ ಶಂಕರಯನಿಗಿಂತ ಎರಡು ವರ್ಷ ದೊಡ್ಡವನಾಗಿದ್ದ. ಶಂಕರಯ್ಯ ಪ್ರತಿ ಸ್ಥಳದಲ್ಲೂ ತನ್ನ ಶಕ್ತಿ ಮೀರಿ ಚಳುವಳಿಯಲ್ಲಿ ಭಾಗಿಯಾಗುತ್ತಿದ್ದ. ಮುಖ್ಯಸ್ಥನಾದ ಲಿಂಗ ಮೂರ್ತಿ ಮೇಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಬೆಳಗಿನ ದುಡಿತ ಮುಗಿಸಿ ಅಂದಿನ ಚಳುವಳಿಯ ಆಗು ಹೋಗುಗಳನ್ನು ಚರ್ಚಿಸುತ್ತಾ ರಾತ್ರಿ ಕಳೆಯುತ್ತಿದ್ದರು. ಕೆಲವೊಮ್ಮೆ ಆ ಊರಿನ ನಾಟಕ ಕಂಪನಿ ನಡೆಸುತ್ತಿದ್ದ ನಾಟಕ ನೋಡಿ ಬರುತ್ತಿದ್ದರು.

ಅಂದು ಕೂಡಾ ಇಬ್ಬರೂ ಸೇರಿ ನಾಟಕ ನೋಡಿ ತಂಗಿದ್ದ ಛತ್ರದ ಕಡೆಗೆ ಹೊರಟಿದ್ದರು. ತುಂತುರು ಮಳೆ ಹನಿಯುತ್ತಿತ್ತು. ಛತ್ರದ ರಸ್ತೆ ಬಿಟ್ಟು ಬೇರೆ ಗಲ್ಲಿಯ ಕಡೆ ಹೊರಳಿದ್ದ ಲಿಂಗ ಮೂರ್ತಿಯ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದ್ದ ಶಂಕರಯ್ಯ. ಲಿಂಗ ಮೂರ್ತಿ ಮುಗುಳ್ನಕ್ಕು ಮುಂದುವರೆದ. ಗಲ್ಲಿಯ ಯಾವುದೋ ಮನೆಯ ಬಾಗಿಲನ್ನು ಬಡಿದ. ಬಾಗಿಲು ತೆರೆಯಿತು. ಶಂಕರಯ್ಯ ನನ್ನು ಒಳ ಕರೆದುಕೊಂಡು ಲಿಂಗ ಮೂರ್ತಿ ಆ ಮನೆಯೊಳಗೆ ಬಂದ. ಶಂಕರಯ್ಯ ನಿಗೆ ಇದು ಯಾರ ಮನೆ ಎಂದು ಮೊದಲು ಅರ್ಥವೇ ಆಗಲಿಲ್ಲ. ಹೆಂಗಸೊಬ್ಬಳು ಬಂದು ಶಂಕರಯ್ಯ ನನ್ನು ಅಲ್ಲಿಯೇ ಇದ್ದ ಒಂದು ರೂಮಿಗೆ ಕರೆದೊಯ್ದಳು. ಅಷ್ಟರಲ್ಲಾಗಲೇ ಲಿಂಗ ಮೂರ್ತಿ ಪಕ್ಕದ ರೂಮಿಗೆ ಹೋಗಿಯಾಗಿತ್ತು.

ಮಂದ ಬೆಳಕಿನ ಆ ರೂಮಿನಲ್ಲಿ ಮಬ್ಬಾಗಿ ಕಂಡ ಒಂದು ಮೂಲೆಯಲ್ಲಿ ಹಾಸಿದ್ದ ಹಾಸಿಗೆಯ ಮೇಲೆ ಶಂಕರಯ್ಯ ಮೈ ಊರಿದ. ರೂಮಿನ ತುಂಬಾ ಬಾಡಿದ ಮಲ್ಲಿಗೆ ಹೂವಿನ ಕಂದು ವಾಸನೆಯ ಜೊತೆ ಬೆರೆತ ಮೈ ಬೆವರಿನ ವಾಸನೆ ದೇಹದ ಕಾಮನೆಗಳನ್ನು ಬಡಿದೆಬ್ಬಿಸಿತು. ಒಂದರೆಕ್ಷಣ ಕಣ್ಣು, ರೂಮಿನ ಬೆಳಕಿಗೆ ಹೊಂದಿಕೊಂಡು ಅಸ್ಪಷ್ಟ ಮೃದುತನ ಅವನ ದೇಹವನ್ನು ಆಕ್ರಮಿಸಿ ಅವನಿಗೆ ಬೇರೊಂದು ಲೋಕವನ್ನು ತೆರೆಯಿತು. ಅವನು ಜೀವನದ ಪ್ರಥಮ ಮಧುರ ಸುಖವನ್ನು ಹೊಂದಿ ಹೊಸ ಅನುಭವವನ್ನು ಪಡೆದ. ಬೆಚ್ಚನೆ ದೇಹಗಳ ಉಸಿರಾಟ, ಕೊಸರಾಟಗಳ ನಡುವೆ ಬದುಕಿನ ಒರಟಾದ ಬಾಗವನ್ನೇ ಪ್ರತಿ ದಿನ ಉಂಡವನಿಗೆ ಮೃದುತನದ ಈ ಆಳವನ್ನು ಸುಖಿಸಿ, ಬದುಕಿನ ತೃಪ್ತಿ ಇದೇ ಇರಬಹುದೇ ಎನಿಸಿತು. ದೇಹ ಸಡಿಲಗೊಂಡು ಮನಸ್ಸು ಹರ್ಷದಿಂದ ಮುದಗೊಂಡಿತ್ತು. ಅದೆಷ್ಟೋ ದಿನಗಳ ದೇಹದ ಆಯಾಸ ಕಮ್ಮಿ ಆದಂತೆ ಎನಿಸಿತ್ತು.

ಲಿಂಗ ಮೂರ್ತಿ ಮತ್ತು ಶಂಕರಯ್ಯ ತಾವು ತಂಗಿದ್ದ ರೂಮಿಗೆ ಬಂದಾಗ ಬೆಳಗಿನ ನಾಲ್ಕರ ಸಮಯ ಬಾರಿಸಿತ್ತು.

ಶಂಕರಯ್ಯ ಹಾಸಿಗೆಯಲ್ಲಿ ಮಲಗಿ ತಾನು ಅನುಭವಿಸಿದ ಆ ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಬಣ್ಣ ಬಣ್ಣದ ಕನಸುಗಳನ್ನು ಕಂಡ. ಆ ಕನಸಿಗೆ ಭಂಗ ತಂದಂತೆ ಅವನ ತಂದೆಯ ಮುಖ ಅವನ ಮುಚ್ಚಿದ್ದ ಕಣ್ಣುಗಳಲ್ಲಿ ತೇಲಿ ಬಂತು. ಅವನು ದಿಗ್ಗನೆ ಎದ್ದು ಕಣ್ಣು ತೆರೆದ.

ಲಿಂಗ ಮೂರ್ತಿ ಅದಾಗಲೇ ಎದ್ದು ಪಯಣಕ್ಕೆ ಸಿದ್ದವಾಗುತಿದ್ದ. ಶಂಕರಯ್ಯ ನನ್ನು ಕಂಡು ಒಂದು ರೀತಿಯಲ್ಲಿ ಕಣ್ಣು ಮಿಟುಕಿಸಿ ನಕ್ಕ. ಶಂಕರಯ್ಯ ನಿಗೆ ನಿನ್ನೆಯ ನೆನಪು ಬಂದು ಅವನು ಆ ಸವಿ ಕ್ಷಣಗಳನ್ನು ನೆನೆದು ಪುಳಕಗೊಂಡ.

ಬೆಳಗಿನ ಸಮಯ ಅದಾಗಲೇ ಒಂಬತ್ತಾಗಿತ್ತು. ಇಂದು ಎಲ್ಲರೂ ತಮ್ಮ ಲಗೆಜುಗಳನ್ನು ಕಟ್ಟಿ ಮುಂದಿನ ಚಳುವಳಿ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ನಾಡುಗಳ ಕಡೆಗೆ ಹೊರಡುವ ಯೋಜನೆ ಹಾಕಿಕೊಂಡಿದ್ದರು.

ದಕ್ಷಿಣ ಕನ್ನಡದ ಎಲ್ಲ ಬಾಗಗಳನ್ನು ಸುತ್ತಿ ಜನರನ್ನು ಸೇರಿಸಿ ಚಳುವಳಿಯ ಉದ್ದೇಶವನ್ನು ಎಲ್ಲ ಜನರಿಗೂ ಮನದಟ್ಟು ಮಾಡಿದರು. ಸಭೆಗೆ ಎಲ್ಲ ಸಾಹಿತಿಗಳು, ಬೋಧಕರು, ಚಿಂತಕರು ಬಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಂದಿನಂತೆ ಎಲ್ಲ ಪ್ರದೇಶದಲ್ಲೂ ಸಭೆ ಅಣ್ಣಾವ್ರ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು.
ಮಲೆನಾಡು, ಕೊಡಗು ಜಿಲ್ಲೆಗಳ ಜನರನ್ನು ಒಗ್ಗೂಡಿಸಿ ಚಳುವಳಿಗಾರರು ಉತ್ತರ ಕರ್ನಾಟಕದತ್ತ ತಮ್ಮ ಸವಾರಿ ಕೈಗೊಂಡರು.

ಉತ್ತರ ಕರ್ನಾಟಕ ತಲುಪಿದ ಚಳುವಳಿ ಗುಂಪು ಅಲ್ಲಿಯ ಯಾವ್ಯಾವ ಬಾಗಗಳಲ್ಲಿ ಹರತಾಳ ಹಚ್ಚಿಕೊಳ್ಳಬೇಕು ಎಂಬುದನ್ನು ಅಲ್ಲಿಯ ಸ್ಥಳೀಯ ಕನ್ನಡ ಸಂಘಗಳನ್ನು ಸಂಪರ್ಕಿಸಿ ಗೊತ್ತು ಮಾಡಿಕೊಂಡರು.

ಬೆಳಗಾವಿ, ಗುಲ್ಬರ್ಗ, ರಾಯಚೂರು ಮತ್ತು ಸುತ್ತಲಿನ ಪ್ರದೇಶಗಳನ್ನು ಮೊದಲು ಮುಗಿಸಿ ಕೊನೆಯದಾಗಿ ಧಾರವಾಡ, ಗದಗ ಮತ್ತು ಹುಬ್ಬಳ್ಳಿಯ ಪ್ರದೇಶಗಳಿಗೆ ಬರುವುದೆಂದು ತೀರ್ಮಾನಿಸಿದರು.

ಅಂತೆಯೇ ಎಲ್ಲ ಪ್ರದೇಶಗಳಲ್ಲಿಯೂ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ರಾಜ್ಯದ ಪ್ರವಾಸ ಶಂಕರಯ್ಯ ನಿಗೆ ಜೀವನದ ಹಲವು ಮಜಲುಗಳನ್ನು ತೆರೆಯುತ್ತಾ ಹೋಯಿತು. ಅವನು ಜೀವನದಲ್ಲಿ ಅದುವರೇವಿಗೂ ಕಾಣದ ಅದೆಷ್ಟೋ ಕೌತುಕಗಳನ್ನು, ಜನ, ಮನ, ಮನಸ್ಸು, ಹೃದಯ ಮುಂತಾದ ಬದುಕಿನ ಅದೆಷ್ಟೋ ವೈವಿಧ್ಯತೆಯನ್ನು ಕಂಡ. ಊರಿನ ನೆನಪೂ ಅವನನ್ನು ಕಾಡಿತ್ತು. ತಂದೆಯ ಅನಾರೋಗ್ಯದ ಚಿಂತೆಗಿಂತ ‘ ತಾನು ಕರ್ತವ್ಯ ವಿಮುಖನಾದೆನೆ’ ಎಂಬ ಅಳುಕು ಅವನನ್ನು ಕಾಡುತ್ತಿತ್ತು. ಸ್ವಾರ್ಥಕ್ಕಿಂತ ನಾಡು ದೊಡ್ಡದು ಎಂಬ ಸಮಜಾಯಿಷಿ ಮನದಲ್ಲಿ ಬಂದು, ತಾನು ಮಾಡುತ್ತಿರುವುದು ಸರಿ ಎಂದೂ ಎನಿಸುತ್ತಿತ್ತು.

ಹೋದ ಕಡೆಯೆಲ್ಲಾ ನಟ ಸಾರ್ವಭೌಮ ನಿಗೆ ಸಿಗುವ ಅಭೂತಪೂರ್ವ ಸ್ವಾಗತವನ್ನು ಕಂಡು – ಮನುಷ್ಯ ಇದ್ದರೆ ಹೀಗೆ ಇದ್ದು ಬಾಳಬೇಕು, ಬದುಕಬೇಕು ಎಂದು ಶಂಕರಯ್ಯ ಅದೆಷ್ಟೋ ಬಾರಿ ಎಂದುಕೊಂಡ. ಚಳುವಳಿ ತನ್ನದೇ ಆದ ಬಿಸಿಯನ್ನು, ವೇಗವನ್ನು ಪಡೆಯುತ್ತಿತ್ತು. ಕನ್ನಡ ಚಿತ್ರ ರಂಗದ ಎಲ್ಲ ಕಲಾವಿದರೂ ಶಕ್ತಿ ಮೀರಿ ಚಳುವಳಿಯಲ್ಲಿ ಭಾಗಿಗಳಾಗಿ ಕನ್ನಡತನವನ್ನು ತೋರಿದರು. ಶಂಕರಯ್ಯ ಪ್ರತಿ ಸಭೆಯಲ್ಲೂ ಹೇಗಾದರೂ ಸಮಯ ಗಿಟ್ಟಿಸಿ ತಾನು ಕಲಿತಿದ್ದ ಅಣ್ಣಾವ್ರ ಚಿತ್ರಗಳ ಸಂಭಾಷಣೆಯನ್ನು ಸಭಿಕರಿಗೆ ಮುಟ್ಟಿಸುತ್ತಿದ್ದ. ನಿಧಾನವಾಗಿ ಅವನ ಹೆಸರು ಸುಮಾರು ಜನರಲ್ಲಿ ಪ್ರಸಿದ್ದಿಯಾಗತೊಡಗಿತ್ತು. ಸಭೆಗೆ ಅತಿಥಿಗಳು ಬರುವುದು ತಡವಾದರೆ ಸಭಿಕರೆ ಶಂಕರಯ್ಯ ನನ್ನು ರಂಗಮಂಟಪಕ್ಕೆ ಕಳುಹಿಸಿ ಅವನು ಹೇಳುವ ಸಂಭಾಷಣೆ ಗಳನ್ನು ಆಲಿಸಿ ಚಪ್ಪಾಳೆ ಹೊಡೆಯುತ್ತಿದ್ದರು.

ಒಂದೆರಡು ಬಾರಿ ಸಭೆಗೆ ಶೀಘ್ರದಲ್ಲಿ ಆಗಮಿಸಿದ್ದ ಅಣ್ಣಾವ್ರು ಶಂಕರಯ್ಯ ನ ಸಂಬಾಷಣೆಯನ್ನು ಕೇಳಿ ಮೆಚ್ಚಿದ್ದರು.

ಜಿಲ್ಲಾವಾರು ಚಳುವಳಿಯಿಂದ ಜನರು ಕನ್ನಡದ ಅನುಷ್ಠಾನದ ಬಗ್ಗೆ ಜಾಗೃತರಾದರು, ಎಚ್ಚೆತ್ತರು. ಕೆಲವೆಡೆ ದಂಗೆಯೂ ಎದ್ದರೂ. ಸರ್ಕಾರದ ಆದೇಶದಂತೆ ಲಾಠಿ ಪ್ರಹಾರ, ಅಶ್ರು ವಾಯು ಮತ್ತು ಗೋಲಿಬಾರ್ ಕೂಡಾ ಚಳುವಳಿಗಾರರ ಮೇಲೆ ಪ್ರಯೋಗ ಮಾಡಿದ್ದರು ಪೊಲೀಸಿನವರು. ಯಾವುದಕ್ಕೂ ಜಗ್ಗದ ಜನ ಅಣ್ಣಾವ್ರ ನೇತೃತ್ವದಲ್ಲಿ ಚಳುವಳಿ ಮುಂದುವರೆಸಿದರು. ಲೆಕ್ಕವಿಲ್ಲದಷ್ಟು ಬಾರಿ ಶಂಕರಯ್ಯ ಮತ್ತು ಇತರೆ ಚಳುವಳಿಗಾರರು ದಸ್ತಗಿರಿ ಆದರು. ಯಾವುದನ್ನೂ ಲೆಕ್ಕಿಸದೆ ಆಂದೋಲನವನ್ನು ಮುಂದುವರೆಸಿದರು.

ಜೈಲಿನ ಒಳಗಡೆ ಚಳುವಳಿಗಾರರು ಮಾಮೂಲಿ ಕೈದಿಗಳ ಸವಲತ್ತನ್ನು ಅನುಭವಿಸಿ ಇರಬೇಕಾಯಿತು. ಕೆಲವು ಮುಖ್ಯ ಕೈದಿಗಳಿಗೆ ಜೈಲಿನ ಒಳಗಡೆ ಒಳ್ಳೆಯ ಸವಲತ್ತು ದೊರಕಿದವು. ಶಂಕರಯ್ಯ ಮತ್ತು ಇತರೆ ಮಂದಿಗೆ ಸಾಮಾನ್ಯ ಕೈದಿಗಳ ದಿನಚರಿಯೇ ಗತಿಯಾಯ್ತು.

ಚಳುವಳಿ, ಉಪವಾಸ ಸತ್ಯಾಗ್ರಹದ ಮೂಲಕ ತನ್ನ ಉಗ್ರ ರೂಪವನ್ನು ಪಡೆದುಕೊಂಡಿತು. ಕನ್ನಡದ ಲೇಖಕರು, ಚಿಂತಕರು ಮತ್ತು ಬೋಧಕರು ಉಪವಾಸ ಕೂತರು. ಸರ್ಕಾರ ಆಗ ಎಚ್ಚೆತ್ತುಕೊಂಡಿತು. ಜನರ ಕೂಗಿಗೆ ಸರ್ಕಾರ ಸ್ಪಂದಿಸಿತು. ಗೋಕಾಕ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ತಾಖೀತು ಮಾಡಿತು. ಚಳುವಳಿ ಮೆಲ್ಲನೆ ಕರಗಿತು. ಕನ್ನಡ ಜನತೆ ಕನ್ನಡದ ಕಣ್ಮಣಿ ಅಣ್ಣಾವ್ರು ಅವರನ್ನು ಮನಸಾರೆ ವಂದಿಸಿತು.

*

ಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ಸುಮಾರು ದಿನಗಳಾದ ಮೇಲೆ ಶಂಕರಯ್ಯ ಬೆಂಗಳೂರಿಗೆ ಮರಳಿದ.

ಅವನು ಚಳುವಳಿಯ ಸಮಯದಲ್ಲಿ ಖಾಲಿ ಮಾಡಿದ್ದ ರೂಮು ಅವನಿಗೆ ದಕ್ಕುವಂತಿರಲಿಲ್ಲ.

ಚಳುವಳಿಗೆ ದುಡಿದ ಅವನು ತನಗಾಗಿ ಏನನ್ನೂ ಮಾಡಿಕೊಳ್ಳಲು ಆಗಲೇ ಇಲ್ಲ. ಚಳುವಳಿಯ ಸಮಯದಲ್ಲಿ ಪರಿಚಿತರಾದ ಒಂದಿಬ್ಬರು ಚಿತ್ರತಂಡದ ಜನರ ಬಳಿ ಏನಾದರೂ ಕೆಲಸಕ್ಕಾಗಿ ಅಲೆದು ಬೇಸತ್ತ.

ಕನ್ನಡದ ದ್ವಜ ತಲೆಯೆತ್ತಿ ಹಾರಾಡುವುದನ್ನು ಕಂಡು ತನ್ನ ಬೇಸರ ನೀಗಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಹೊಟ್ಟೆ ಪಾಡು ಬಿಡುತ್ತದೆಯೇ?

ಊರಿಗೆ ಹೋಗೋಣವೆಂದರೆ ಕೈಯಲ್ಲಿ ಬಿಡಿಗಾಸಿಲ್ಲ. ತಂದೆಯ ಆರೋಗ್ಯದ ವಿಚಾರವಂತೂ ತಿಳಿಯಲೇ ಇಲ್ಲ. ತಾನು ತಪ್ಪು ಮಾಡಿದೆನೆ? ಎಂದು ತನ್ನನ್ನು ತಾನೇ ಪ್ರಶ್ನಿಸಿ ಸೋತಿದ್ದ ಅವನು. ಗೆಳೆಯ ಲಿಂಗಮೂರ್ತಿ ಅವನ ಮನೆಯಲ್ಲೇ ತಂಗಲು ಹೇಳಿದ್ದರೂ, ಅದೆಷ್ಟು ದಿನ ಅಲ್ಲಿ ತಂಗಲು ಸಾಧ್ಯ?

ಅವನು ನಿಲ್ಲಲು ನೆಲೆ ಇಲ್ಲದೆ ಮುಂದೇನು ಮಾಡುವುದೆಂದು ಚಿಂತೆಗೆ ಬಿದ್ದ. ಹಿಂದೆ ಚಳುವಳಿಯ ಸಮಯದಲ್ಲಿ ಸಭೆಗಳು ನಡೆಯುತ್ತಿದ್ದ ಮೈಸೂರು ಬ್ಯಾಂಕ್ ವೃತ್ತ, ಟೌನ್ ಹಾಲ್, ವಿಧಾನಸೌಧ ಮತ್ತಿತರ ಜಾಗಗಳಿಗೆ ಹೋಗಿ ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತು ಕಾಲ ಕಳೆಯತೊಡಗಿದ.

ಹಾಗೆಯೇ ಒಂದು ಬೆಳಗಿನ ಹೊತ್ತು ಮೈಸೂರು ಬ್ಯಾಂಕ್ ವೃತ್ತದಲ್ಲಿ ಕುಳಿತವನ ಭುಜದ ಮೇಲೆ ಯಾರೋ ಕೈ ಹಾಕಿದರು.

ಅರೆ! ಕನ್ನಡ ಚಿತ್ರ ತಂಡದ ಗುರುಮೂರ್ತಿ. ಅವನಿಗೆ ಅತೀವ ಸಂತಸವಾಯಿತು ಗುರುಮೂರ್ತಿಯನ್ನು ಕಂಡು. ಇಬ್ಬರೂ ಕುಶಲೋಪರಿ ನಡೆಸಿದ ನಂತರ ಗುರುಮೂರ್ತಿ ಶಂಕರಯ್ಯ ನಿಗೆ ಒಂದು ಸಿಹಿ ಸುದ್ದಿ ತಂದಿದ್ದ. ಆ ಸುದ್ದಿಯನ್ನು ಕೇಳಿ ಶಂಕರಯ್ಯ ಅಲ್ಲಿಯೇ ಕುಣಿದಾಡಿದ.

” ಅಣ್ಣಾವ್ರು ಅವನನ್ನು ಭೇಟಿ ಮಾಡಲು ಕರೆ ಕಳುಹಿಸಿದ್ದರು! “

ಪಕ್ಕದ ಸರ್ಕಾರಿ ಶಾಲೆಯಲ್ಲಿ ” ಸ್ವಾಮಿ ದೇವನೆ, ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ… ” ಪ್ರಾರ್ಥನೆ ಕೇಳಿ ಬರುತ್ತಿತ್ತು.

ಶಂಕರಯ್ಯ, ಪ್ರತಿ ಸಭೆಯಲ್ಲೂ ಕೇಳಿ ಬರುತ್ತಿದ್ದ ‘ ಕನ್ನಡದ ಕಣ್ವ ‘ ನಾಮಾಂಕಿತ ಬಿ. ಎಂ. ಶ್ರೀ ಅವರ ” ಕರುಣಾಳು ಬಾ ಬೆಳಕೆ… ” ಗೀತೆಯನ್ನು ಗುನುಗುತ್ತಾ ಮೇಲೆ ಎದ್ದ.

–ಶ್ರೀನಿವಾಸ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x